Round Table India
You Are Reading
ಗುಜರಾತ್: ಕುದಿಯುತ್ತಿರುವ ದಲಿತರ ಧಂಗೆ
0
Features

ಗುಜರಾತ್: ಕುದಿಯುತ್ತಿರುವ ದಲಿತರ ಧಂಗೆ

horahalli ravindra

 

ಹಾರೋಹಳ್ಳಿ ರವೀಂದ್ರ (Harohalli Ravindra)

horahalli ravindraಗೋ ಹತ್ಯೆ ಎಂಬ ಹೆಸರಿನಲ್ಲಿ ಅಥವಾ ಗೋ ಮಾತೆ ಎಂಬ ಪೂಜ್ಯಾ ಮನೋಭಾವನೆಯ ಹೆಸರಿನಲ್ಲಿ ದಲಿತರನ್ನು ಹತ್ತಿಕ್ಕಲು ಏನೆಲ್ಲಾ ರಣತಂತ್ರಗಳನ್ನು ಉಪಯೋಗಿಸಬೇಕಿತ್ತೋ? ಅದನ್ನು ಮೋದಿ ಸಕರ್ಾರ ಬರುತ್ತಿದೆ. ಗೋ ಮಾಂಸವು ಇಡೀ ಜಗತ್ತಿನಲ್ಲಿ ಸಾರ್ವತ್ರಿಕ ಆಹಾರವಾಗಿದ್ದರು ಕೂಡ ಭಾರತದಲ್ಲಿ ಅದನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಆ ಮೂಲಕ ಆಹಾರ ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸಲು ಸಂಘ ಪರಿವಾರ ಬಹಿರಂಗವಾಗಿಯೇ ತನ್ನೆಲ್ಲಾ ದಬ್ಬಾಳಿಕೆ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ. ಇಂದಿಗೂ ಅದನ್ನು ಮುಂದುವರಿಸುತ್ತಿದೆ.

 

 ದಿನಾಂಕ 11-07-2016 ರಂದು ಗುಜರಾತ್ ನಲ್ಲಿ ಸೋಮನಾಥಪುರ ಜಿಲ್ಲೆಯ ಉನಾ ಎಂಬಲ್ಲಿ ನಡೆದ ಘಟನೆ, ನಮಗೆ ಹಿಂದೂ ಮತೀಯವಾದಿಗಳ ವರ್ತನೆ ಏನೆಂದ ಸಾಭಿತಾಯಿತು. ಉನಾ ತಾಲ್ಲೂಕಿಗೆ ಹೊಂದಿಕೊಂಡಿರುವ ಮೋಟಾ ಸಮಾದಿಯಾಲ ಗ್ರಾಮದ ನಾಲ್ಕು ದಲಿತ ಹುಡುಗರನ್ನು ಉನಾ ಪಟ್ಟಣದ ಹೃದಯ ಭಾಗದಲ್ಲಿ ವಿಚಿತ್ರವಾಗಿ ತಳಿಸಲಾಗಿದೆ. ನಾಲ್ಕು ಜನ ದಲಿತ ಹುಡುಗರು ಮೂಲತಹ ಚರ್ಮಗಾರಿಕೆಯ ಕಾರ್ಮಿಕರು. ಯಾವುದಾದರೊಂದು ದನ ಸತ್ತರೆ ಅದರ ಚರ್ಮ ತೆಗೆದು ಕಾರ್ಖಾನೆಗೆ ಸಾಗಿಸುವುದೇ ಅವರ ಕಾಯಕವಾಗಿದೆ. ಆದರೆ ದನದ ಚರ್ಮವನ್ನು ಸುಲಿದು ಸಾಗಿಸುತ್ತಿದ್ದಾಗ ಸಂಘ ಪರಿವಾರ ಕೇಂದ್ರಿತ ಗೋ ರಕ್ಷಕಾ ದಳ ಅವರನ್ನು ಅಡ್ಡಗಟ್ಟಿ ನಡುಬೀದಿಯಲ್ಲಿ ಅರೆಬೆತ್ತಲೆಯಾಗಿ ಕಬ್ಬಿಣದ ಮತ್ತು ಮರದ ವಸ್ತುಗಳಿಂದ ಹೊಡಯಲಾಗಿದೆ. ಅದಲ್ಲದೆ ಅವರ ಕೈಗೆಗಳನ್ನು ಕಟ್ಟಿಹಾಕಿ ಪಟ್ಟಣದ ತುಂಬೆಲ್ಲಾ 20 ಮೈಲಿ ಅರೆಬೆತ್ತಲೆ ನಡೆಸಲಾಗಿದೆ. ಈ ಸುದ್ದಿಯು ವಿಡಿಯೊ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತು. ಅಷ್ಟರಲ್ಲಿಯೇ ಇನ್ನೆರಡು ದಿನ ಕಳೆಯುತ್ತಿದ್ದಂತೆಯೆ ಚರ್ಮ ಸುಲಿವ 12 ಕಾರ್ಮಿಕರನ್ನು ಅದೇ ಉನಾ ಎಂಬಲ್ಲಿ ಗೋ ರಕ್ಷಕಾ ದಳದವರು ಜನನಿ ಬೀಡ ಸ್ಥಳದಲ್ಲಿ ಕಬ್ಬಿಣದ ಹತಾರಗಳಿಂದ ಹೊಡೆಯಲಾಗಿದೆ. ಈ ಎರಡು ಘಟನೆಗಳು ಭಾರತದ ಒಂದು ಬಹುತ್ವದ ಪರಂಪರೆಯನ್ನೆ ನಾಚಿಸುತ್ತಿದೆ. ಚರ್ಮ ಸುಲಿಯುವುದೇ ಇಲ್ಲಿ ಅಪರಾಧವಾಗಿದೆ. ಹಾಗೆ ತೆಗೆದುಕೊಂಡರೆ ಇಂದಿಗೂ ಕೂಡ ಭಾರತದ ಬಹುಪಾಲು ಹಳ್ಳಿಗಳಲ್ಲಿ ದಲಿತರೆ ಚರ್ಮ ಸುಲಿಯುವವರಾಗಿದ್ದಾರೆ. ಆದರೆ ಹಿಂದುತ್ವದ ಉಮೇದುವಾರಿಕೆಯಲ್ಲಿ ಅವರ ಮೇಲೆ ನಿಯಂತ್ರಣ ಸಾಧಿಸಲು ಸಂಘ ಪರಿವಾರ ಸಜ್ಜಾಗಿದೆ.

 

ಗುಜರಾತ್ ನಲ್ಲಿ ಈ ಘಟನೆ ನಡೆದು ರಾಷ್ಟ್ರದಾದ್ಯಂತ ವೈರಲ್ ಆದಮೇಲೆ ಎಲ್ಲಾ ಕಡೆಗೂ ಬಿಜೆಪಿಯ ಅಜೆಂಡಾ ಬಹಿರಂಗವಾಗಿಯೇ ಸಾಬೀತಾಯಿತು. ಆದರೂ ನರೇಂದ್ರ ಮೋದಿ ಅವರು ಯಾವುದೋ ಒಂದು ದೇಶದಲ್ಲಿ ನಡೆವ ಅಮಾನುಷ ಘಟನೆಯನ್ನು ಕುರಿತು ಕಣ್ಣಿರು ಹಾಕುವ ಮೂಲಕ ಮಾನವೀಯತೆ ಮೆರೆವ ಮೋದಿಜಿ, ತಮ್ಮ ತವರು ರಾಜ್ಯದಲ್ಲಿ ಹೀಗಾದರೂ ನನಗೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ ಎನ್ನುವ ಅಂಗವಿಕಲರಂತೆ ಸುಮ್ಮನಿದ್ದಾರೆ. ಈ ಘಟನೆಯಿಂದ ಬೇಸತ್ತ ದಲಿತ ಹುಡುಗರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಉಂಟು. ಆದರೆ ಅಚಾನಕ ಬದುಕುಳಿದಿದ್ದಾರೆ. ಗುಜರಾತ್ ನಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿ ಗುಜರಾತ್ ನ ಎಲ್ಲಾ ದಲಿತರಿಗೂ ಈ ವಿಷಯ ಮುಟ್ಟಿದ ಪರಿಣಾಮವಾಗಿ ಆ ರಾಜ್ಯದ ಎಲ್ಲಾ ದಲಿತರು ಧಂಗೆ ಎದ್ದು ಕೂತಿದ್ದಾರೆ.

Una women protest

ದಿನಾಂಕ-18-07-2016 ರಿಂದ ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ಪ್ರಾರಂಭವಾಗಿ ಭಾರಿ ಜನಸ್ತೋಮದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಘಟನೆಯಿಂದ ಹಲವು ಕಡೆ ಖಿನ್ನತೆಗೆ ಒಳಗಾದ ದಲಿತರು 13 ಮಂದಿ ವಿಷಸೇವಿಸಿದ್ದಾರೆ. ಅದರಲ್ಲಿ 11 ಮಂದಿ ಬದುಕುಳಿದಿದ್ದು ಇಬ್ಬರು ಗತಿಸಿದ್ದಾರೆ. ಇಂತಹ ದೌರ್ಜನ್ಯಕೋರರ ದೇಶದಲ್ಲಿ ಬದುಕುವ ಬದಲು ಸಾಯುವುದೇ ಲೇಸೆಂಬ ಮಟ್ಟಕ್ಕೆ ದಲಿತ ಮಕ್ಕಳು ರೋಸಿ ಹೋಗಿದ್ದಾರೆ. ಇದರಿಂದ ಗುಜರಾತ್ ಹಿಂಸಾಚಾರಕ್ಕೆ ತಿರುಗಿದೆ. ಇಡೀ ರಾಜ್ಯದ್ಯಾಂತ ಎಲ್ಲಾ ದಲಿತ ಸಂಘಟನೆಗಳು ಒಕ್ಕೂರಿ ನಡೆಸಿದ ಪ್ರತಿಭಟನೆ ದಿನೇ ದಿನೇ ಹಿಂಸಾಚಾರಕ್ಕೆ ತಿರುಗುತ್ತಿದೆ. 12ಕ್ಕು ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರೊಂದಿಗೆ ನಡೆದ ಸಂಘರ್ಷದಿಂದ ಒಬ್ಬ ಪೊಲೀಸ್ ಪೇದೆ ಸಾವನ್ನಪ್ಪಿದ್ದಾನೆ. ಇಷ್ಟಲ್ಲದೆ ಗುಜರಾತ್ ಬಂದ್ ಗೆ ಅಲ್ಲಿನ ದಲಿತ ಸಂಘಟನೆಗಳು ಕರೆ ನೀಡಿವೆ. ಇಂತಹ ಗಂಬೀರ ಪರಿಸ್ಥಿತಿಯನ್ನು ಕಂಡ ಗುಜರಾತ್ ಡಿಜಿಪಿ ಪಿ.ಪಿ. ಪಾಂಡೆ ತನಿಖೆಗೆ ಆದೇಶ ಮಾಡಿದ್ದು 9 ಜನರನ್ನು ಜನರನ್ನು ಈಗಾಗಲೇ ಬಂಧಿಸಲಾಗಿದೆ.

ಗೋ ರಕ್ಷಕಾ ದಳದವರು ದಲಿತರು ಸಿಕ್ಕರೆಂದು ಹೊಡೆದು ಹೋಗಿ ಅವಿತುಕೊಂಡರು ಆದರೆ ಇಂದು ನಡೆಯುತ್ತಿರುವ ಹಿಂಸಾಚಾರಕ್ಕೆ ಅವರು ಹೊಣೆಯೆ? ಅಥವಾ ಮೋದಿ ಹೊಣೆಯೆ? ಭಾರತದಲ್ಲಿ ಗೋವನ್ನು ತಿನ್ನುವುದೇ ಅಪರಾಧವಾದರೆ ಗೋ ಹತ್ಯೆಯನ್ನು ನಡೆಸುತ್ತಿರುವ ಕಂಪನಿಗಳು ಯಾರವು? ಅವುಗಲೆಲ್ಲಾ ದಲಿತರವೇ? ಅಥವಾ ಮುಸಲ್ಮಾನರವೇ? ಗೋವು ತಾಯಿಯೇ ಎಂದಾದರೆ, ನಿಮ್ಮ ಪೂಜ್ಯ ಪ್ರಾಣಿಯೇ ಎಂದಾದರೆ, ದನದ ಮಾಂಸವನ್ನು ರಫ್ತು ಮಾಡುತ್ತಿರುವ ಹಿಂದೂ ಜನರಿಗೆ ಸೇರಿದ ಕಂಪನಿಗಳ ಮೇಲೆ ಈ ಗೋರಕ್ಷಕ ದಳವಾಗಲಿ, ಸಂಘಪರಿವಾರವೇ ಆಗಲಿ ಯಾಕೆ ದಾಳಿ ಮಾಡಿಲ್ಲ? ಗೋ ಹತ್ಯೆ ಮಾಡಿ ಅದರ ಮಾಂಸವನ್ನು ಹೊರದೇಶಗಳಿಗೆ ರಫ್ತು ಮಾಡುವ ಕಂಪನಿಗಳು ಹಿಂದೂಗಳೆ ಆಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಜನತಾ ಪಕ್ಷದ ರಾಜಕಾರಣಿಗಳ ಆಪ್ತರೇ ಆಗಿದ್ದಾರೆ. u.s. department of agriculture ನ ವರದಿಯ ಪ್ರಕಾರ ಪ್ರಪಂಚದ ಹಲವು ಕಡೆ ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ಪ್ರಥಮಸ್ಥಾನವನ್ನು ಅಲಂಕರಿಸಿಕೊಂಡಿದೆ. ಬ್ರೆಜಿಲ್ 2 ಮಿಲಿಯನ್ ಟನ್ ರಫ್ತು ಮಾಡಿದರೆ, ಆಸ್ಟ್ರೇಲಿಯಾ 1 ಮಿಲಿಯನ್ ಟನ್ ರಫ್ತು ಮಾಡುತ್ತದೆ ಆದರೆ ಭಾರತ ಇವೆರಡಕ್ಕಿಂತ ಹೆಚ್ಚಾಗಿ ಭಾರತ 2.4 ಮಿಲಿಯನ್ ಟನ್ ಭಾರತದಿಂದ ಹೊರದೇಶಗಳಿಗೆ ಮಾಂಸ ರಪ್ತು ಮಾಡುತ್ತದೆ. center of monitoring indian economy (CIME) ವರದಿಯ ಪ್ರಕಾರ ಏಷ್ಯಾದೇಶಗಳಿಗೆ ಭಾರತ 80% ಮಾಂಸವನ್ನು ರಪ್ತು ಮಾಡುವ ದೇಶವಾಗಿದೆ. ಆಫ್ರಿಕನ್ ದೇಶಗಳಿಗೆ 15% ಮಾಂಸವನ್ನು ರಫ್ತು ಮಾಡಿದರೆ, ವಿಯಟ್ನಾಂ 45% ರಫ್ತಾಗುತ್ತದೆ. ಹಾಗೆಯೆ ಇನ್ನುಳಿದ ಕಡೆಯೂ ಮಾಂಸವು ರಫ್ತಾಗುತ್ತದೆ. ಇಂತಹ ದನದ ಮಾಂಸದ ವ್ಯಾಪಾರ ವಹಿವಾಟುಗಳನ್ನು ಹಿಂದೂ ಜನಾಂಗಿಯ ಕಂಪನಿಗಳೆ ನಡೆಸುತ್ತವೆ.
ಅವು ಯಾವುವೆಂದರೆ.

1. Al-kabeer export pvt.ltd, ಕಂಪನಿಯು ಮುಂಬೈನಲ್ಲಿದ್ದು, ಇದರ ಮಾಲೀಕರು ಸತಿಶ್ ಮತ್ತು ಅತುಲ್ ಸಬರ್ವಾಲ್ ಎನ್ನುವವರಾಗಿದ್ದಾರೆ.
2. Arabian Export pvt.ltd, ಕಂಪನಿಯು ಮುಂಬೈನಲ್ಲಿದ್ದು, ಇದರ ಮಾಲೀಕರು ಸುನೀಲ್ ಕಪೂರ್ ಎನ್ನುವವರಾಗಿದ್ದಾರೆ.
3. MKR frozen food export pvt.ltd ಕಂಪನಿಯು ನ್ಯೂ ಡೆಲ್ಲಿಯಲ್ಲಿದ್ದು, ಇದರ ಮಾಲೀಕರು ಮದನ್ ಅಬೋಟ್ ಎನ್ನುವವರಾಗಿದ್ದಾರೆ.
4. PML industries pvt.ltd, ಕಂಪನಿಯು ಚಂಢಿಗಢದಲ್ಲಿದ್ದು, ಇದರ ಮಾಲೀಕರು ಎ.ಎಸ್.ಬಿಂದ್ರಾ ಎನ್ನುವವರಾಗಿದ್ದಾರೆ.

ಸ್ನೇಹಿತರೆ, ನಾವು ಈ ಮೇಲಿದ್ದನ್ನು ಪರಿಶೀಲಿಸಿದರೆ ಭಾರತದಲ್ಲಿ ಗೋವನ್ನು, ಸ್ವತಹ ಮಾತೆ ಎಂದು ಕರೆಯುವವರೇ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಮನಗಾಣಬಹುದು. ಚರ್ಮವನ್ನು ಸುಲಿಯುವ ಅಮಾಯಕರಿಗೆ ತಳಿಸಿದ ಗೋ ರಕ್ಷಕಾ ದಳದವರಿಗೆ ಕಂಪನಿಯವರನ್ನು ಹೊರಗೆಳೆದು ಬೀದಿಯಲ್ಲಿ ತಳಿಸುವ ತಾಕತ್ತಿದೆಯೆ? ಗುಟ್ಟಾಗಿಯೇ ದನವನ್ನು ಕಡಿಯಲು ಅನುಮತಿ ಕೊಟ್ಟು, ಇತ್ತ ಮುಸಲ್ಮಾನರು ಮತ್ತು ದಲಿತರು ದನ ತಿಂದರು, ಚರ್ಮ ಸುಲಿದರು ಎಂದು ಬೀದಿ ರಂಪ ಮಾಡುವ ಇಂತಹ ವಿಷಕಾರಕ ಸಂಘಟನೆಗಳನ್ನು ಏನು ಮಾಡಬೇಕು?

ಇವೆಲ್ಲಕ್ಕಿಂತ ಹೆಚ್ಚಾಗಿ ಈ ಮೂಲಕ ಇವರ ಮಾನಸಿಕ ಅಜೆಂಡಾವನ್ನು ನಾವು ಮನಗಾಣಬೇಕಿದೆ. ದಲಿತರು ಮತ್ತು ಮುಸಲ್ಮಾನರು ಮೂಲತಹ ದನದ ಮಾಂಸಹಾರಿಗಳಾಗಿರುವುದರಿಂದ. ಮಾಂಸವನ್ನು ರಪ್ತು ಮಾಡುವ ಕಂಪನಿಗಳಿಗೆ ತೊಡಕಾಗಿದೆ. ಸಂಪೂರ್ಣವಾಗಿ ಭಾರತದಲ್ಲಿ ಮಾತೆ ಎಂಬ ಅಕ್ಷರವನ್ನಿಟ್ಟುಕೊಂಡು ಗೋ ಹತ್ಯೆಯನ್ನು ನಿಷೇಧಿಸಿಬಿಟ್ಟರೆ ಭಾರತದ ಎಲ್ಲಾ ಹಸುಗಳ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಬಹುದು ಎಂಬ ದೂರಾಲೋಚನೆಯಿಂದ ಆಹಾರವನ್ನು ಸಂಸ್ಕೃತಿಯ ಹೆಸರಿನಲ್ಲಿ ಸಂಘಪರಿವಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಆ ಕಾರಣದಿಂದಲೇ ಮಾಂಸದ ಹೆಸರಿನಲ್ಲಿ ಮುಸಲ್ಮಾನರು ಮತ್ತು ದಲಿತರ ಮೇಲೆ ಹಿಂದುತ್ವವಾದಿಗಳು ಹಲ್ಲೆ ನಡೆಸುತ್ತಿರುವುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಿದೆ. ಇಂತಹ ಷಡ್ಯಂತ್ರದಿಂದ ನಾವು ಹೊರಬರದೇ ಹೊದಲ್ಲಿ, ಭಾರತೀಯ ಜನತಾ ಪಕ್ಷವು ಗೋ ಮಾಂಸವನ್ನು ರಫ್ತು ಮಾಡಲು ಅನುಮತಿ ನಿಡಿದೆ. ನಾಳೆ ದಲಿತರನ್ನು ಕೂಡ ಗುಲಾಮರು ಎಂಬಂತೆ ವಿದೇಶಗಳಿಗೆ ಮಾರುವುದಕ್ಕು ಹೇಸುವವರಲ್ಲ.

ಗುಜರಾತ್ನಲ್ಲಿ ಈಗಾಗಲೇ ಹಿಂಸಾಚಾರಕ್ಕೆ ಭುಗಿಲೆದಿದೆ. ಅಲ್ಲಿನ ಸಂಘಟನೆಗಳು ಬಂದ್ ಘೊಷಿಸಿವೆ. ದಿನಾಂಕ 20-07-2016 ರಂದು ಗುಜರಾತ್ ರಾಜ್ಯದ ಹಲವೆಡೆ ಬಂದ್ ಹಾಗಿದೆ. ಜತೆಗೆ ಬಂದ್ ಮಾಡದ ಕೆಲವು ಕಡೆ ಕಲ್ಲು ತೂರಾಟ ಹಿಂಸಾಚಾರ ನಡೆದಿದೆ. ಜುನಾಗಢದಲ್ಲಿ ಸಂಪೂರ್ಣವಾಗಿ ಸಾರಿಗೆ ಸಂಪರ್ಕ ಅಸ್ಥವ್ಯಸ್ಥವಾಗಿದ್ದು. ಪ್ರತಿಭಟನಾ ನಿರತ ದಲಿತರಲ್ಲಿ 50 ಜನರನ್ನು ಬಂಧಿಸಲಾಗಿದೆ. ಇದಲ್ಲದೆ ತಪ್ಪಿತಸ್ಥರಲ್ಲಿ 9 ಜನರನ್ನು ಬಂಧಿಸಿದ್ದಾರೆ. ಆರೋಪಿ ವ್ಯಕ್ತಿಗಳ ತಂದೆಯೊಬ್ಬರು ನಮ್ಮ ಮಕ್ಕಳು ದಲಿತರ ಮೇಲೆ ಬೇಕೆಂದು ಹಲ್ಲೆ ಮಾಡಿಲ್ಲ. ಅವರನ್ನು ಹಲ್ಲೆ ಮಾಡುವಂತೆ ಪ್ರೇರೇಪಿಸಿ ಬಲ ಪ್ರಯೋಗ ನಡೆಸಲಾಗಿದೆ. ದಲಿತರ ಜತೆ ನಾನು ಕೂಡ ಅವರ ವಿರುದ್ದ ಹೋರಾಟ ಮಾಡುವೆ ಎಂದು ಹೇಳಿದ ಅಂಶವು ಕೂಡ ಬೆಳಕಿಗೆ ಬಂತು. ಆ ಮೂಲಕ ನಾವು ಗ್ರಹಿಸಬೇಕಿರುವುದು ಸಂಘಪರಿವಾರದ ಗುಪ್ತ ದೌರ್ಜನ್ಯಕೋರ ಪಡೆಗಳು ದಲಿತರನ್ನು ಹತ್ತಿಕ್ಕಲು ಇನ್ನೊಬ್ಬರ ಮೇಲೆ ಬಲಪ್ರಯೋಗವನ್ನು ಉಪಯೋಗಿಸುತ್ತವೆ ಎಂಬುದನ್ನು ಕೂಡ ಅರ್ಥಸಿಕೊಳ್ಳಬೇಕಿದೆ. ಇಂತಹ ಬಹುದೊಡ್ಡ ಹೋರಾಟ ಪ್ರಾರಂಭವಾದ ತಕ್ಷಣ ಸತ್ತ ದನ ಸುಲಿಯುತ್ತಿದ್ದ ಅನೇಕ ಮಂದಿ ದಲಿತರು ಸೋಮನಾಥಪುರ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಗೆ ಲಾರಿಯ ಮೂಲಕ ಸತ್ತ ದನಗಳನ್ನು ಹೊತ್ತು ತಂದು ಕಚೇರಿಯ ಒಳಗೆ ಹೊರಗೆ ಬಿಸಾಡಿದ್ದಾರೆ. ನೀವು ಚರ್ಮ ಸುಲಿಯುವುದನ್ನು ಅಪರಾಧ ಎಂದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವಿರಿ, ಇನ್ನು ಮುಂದೆ ನಾವು ಯಾವ ಸತ್ತ ದನವನ್ನು ಎತ್ತುವುದಿಲ್ಲ, ಅದನ್ನು ಸುಲಿಯುವುದಿಲ್ಲ, ನಿಮ್ಮ ತಾಯಿಯನ್ನು ನೀವೆ ಸಮಾಧಿ ಮಾಡಿ ಎಂದು ಅಸ್ಥಿಪಂಜರದ ಸಮೇತ ಬಿಸಾಡುವ ಮೂಲಕ ಪ್ರತಿರೋಧ ಹೊಡ್ಡಿದ್ದು ಗುಜರಾತ್ ಸರ್ಕಾರವನ್ನೆ ಅಲುಗಾಡಿಸಿದೆ.

ಗುಜರಾತ್ ನಲ್ಲಿ ನಡೆಯುತ್ತಿರುವ ಪ್ರತಿಭನಟೆಯನ್ನು ಬೆಂಬಲಿಸಿ ದೆಹಲಿ ಮುಖ್ಯಂತ್ರಿಯಾದ ಅರವಿಂದ ಕೇಜ್ರಿವಾಲ್ ಅವರು ಬೇಟಿ ನೀಡಿದ್ದರು ಹಾಗೂ ಕಾಂಗ್ರೇಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಅವರು ಹಲ್ಲೆಗೊಳಗಾದ ದಲಿತರ ಸ್ಥಳವಾದ ಉನಾದ ಮೋಟಾ ಎಂಬಲ್ಲಿಗೆ ಬೇಟಿ ನೀಡಿ ಆ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪರಿಸ್ಥಿತಿಯ ಒತ್ತಡಕ್ಕೆ ಮಣಿದ ಗುಜರಾತ್ ನ ಬಿಜೆಪಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಕೂಡ ಹುಡುಗರ ಕುಟುಂಬಕ್ಕೆ ಬೇಟಿ ನೀಡಿದರು. ಆದರೆ ಆನಂದಿಬೆನ್ ಪಟೇಲರ ಬೇಟಿ ಅತ್ಯಂತ ನಾಟಕೀಯವೆಂದು ಎಲ್ಲರಿಗೂ ತಿಳಿಯುತ್ತದೆ. ಯಾಕೆಂದರೆ ಪ್ರಧಾನಿ ಅವರ ತವರು ರಾಜ್ಯದಲ್ಲಿ ರಾಷ್ಟ್ರೀಯ ಮಟ್ಟದ ಚರ್ಚೆಯಾಗಿರುವ ಈ ಪ್ರಕರಣವನ್ನು ಮೋದಿ ಅವರೇ ಶಮನ ಮಾಡಬೇಕಿತ್ತು. ತಪ್ಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬಹುದಿತ್ತು. ಆದರೆ ಮೊದಿಜಿ ಅವರು ಇದರ ಬಗ್ಗೆ ಎಲ್ಲು ಮಾತನಾಡದೆ ಆನಂದಿಬೆನ್ ಅವರನ್ನು ಕಳುಹಿಸಿರುವುದನ್ನು ನೊಡಿದರೆ ಇದೊಂದು ಪೂರ್ವ ನಿಯೋಜಿತ ಬೇಟಿ. ಅಲ್ಲಿನ ವಿರೊಧ ಪಕ್ಷಗಳು ಗೋ ರಕ್ಷಕಾ ದಳವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಪಟ್ಟು ಹಿಡಿದಿವೆ. ಆದರೆ ಇದರ ಬಗ್ಗೆ ನರೇಂದ್ರ ಮೋದಿಯಾಗಲಿ ಅಥವಾ ಆನಂದಿಬೆನ್ ಅವರೇ ಹಾಗಲಿ ತುಟಿ ಬಿಚ್ಚುತ್ತಿಲ್ಲ ಯಾಕೆ? ಹಿಂದುತ್ವ ದೌರ್ಜನ್ಯಕೋರರನ್ನು ಪೋಷಿಸುವ ಕೆಲಸವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಗುಜರಾತ್ ರಾಜ್ಯವೂ ಸಂಘಪರಿವಾರದ ತೆಕ್ಕೆಗೆ ಸಿಲುಕಿದ ಮೇಲೆ ಸಂಪೂರ್ಣವಾಗಿ ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉನಾದಲ್ಲಿ ದಲಿತರ ಮೇಲೆ ನಡೆದ ದಾಳಿಗೆ ನೇರವಾಗಿ ಪೊಲೀಸರೇ ಕಾರಣಕರ್ತರಾಗಿದ್ದಾರೆ. ನಿರಂತರವಾಗಿ 2 ಗಂಟೆಗಳ ಕಾಲ ಹೆಚ್ಚು ಹಲ್ಲೆ ಮತ್ತು ಅರೆಬೆತ್ತಲೇ ಮೆರವಣಿಗೆಗೆ ಪೊಲೀಸರು ಕೂಡ ಕುಮ್ಮಕ್ಕು ನೀಡಿರುವುದು ಸತ್ಯ ಶೋಧನಾ ಸಮಿತಿಯಿಂದ ದೃಢಪಟ್ಟಿದೆ. ಸ್ವತಂತ್ರ ದಲಿತ ಹಕ್ಕುಗಳ ಕಾರ್ಯಕರ್ತರು ಎಂಬ ಒಂದು ಕಮಿಟಿಯು ಅದನ್ನು ಶೋಧಿಸಿದ್ದು. ಆ ಸಮಿತಿಯು ಹೇಳುವ ಪ್ರಕಾರ 35 ಜನರು ರಾಡು ಮತ್ತು ಪೈಪುಗಳನ್ನು ಹಿಡಿದು ಹೊಡೆದಿದ್ದಾರೆ. ಕಾರಿನಲ್ಲಿ ಕೂರಿಸಿಕೊಂಡು ನಾಲ್ಕು ಜನರನ್ನು ಕರೆದುಕೊಂಡು ಹೋಗುವಾಗ ಪೊಲೀಸರು ಅದನ್ನು ತಡೆದು ಮತ್ತೆ ಅನುಮತಿ ನೀಡಿ ಕಳುಹಿಸಿದ್ದಾರೆ. ಈ ಮೂಲಕ ಪೊಲೀಸರು ದುಷ್ಕರ್ಮಿಗಳಿಗೆ ನೀಡಿದ್ದಾರೆ ಎಂದು ವರದಿಯು ಹೇಳುತ್ತಿದೆ. ಇಷ್ಟಲ್ಲದೇ ಪೊಲಿಸರು ಇದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಹೋದಾಗ ನಿರಂತರವಾಗಿ 6 ಗಂಟೆಗಳ ಕಾಲ ಸತಾಯಿಸಿದ್ದಾರೆ ಎಂಬ ಅಂಶವನ್ನು ಕೂಡ ವರದಿ ಬಹಿರಂಗಪಡಿಸಿತು. ಈ ದಾಳಿಗೆ ಪೊಲೀಸರು ಕೂಡ ಹೊಣೆಗಾರರು ಎಂಬುದನ್ನು ವರದಿ ದೃಢಪಡಿಸಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ನಾಲ್ಕು ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಆದರೂ ಕೂಡ ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಕ್ಕಿದೆಯೆ? ರಾಜ್ಯ ಸರ್ಕಾರ ಕಾನೂನು ಪಾಲಿಸುತ್ತಿದೆಯೆ? ಯಾವುದುಇಲ್ಲ? ಇದರ ಬಗ್ಗೆ ಯಾರು ಕೂಡ ನ್ಯಾಯ ದೊರಕಿಸಲು ಚಕಾರವೆತ್ತುತ್ತಿಲ್ಲ.

ಗುಜರಾತ್ ನಲಿ ನಡೆದ ಈ ಅಮಾನುಷ ಘಟನೆಯ ವಿರುದ್ಧ ಬಿಜೆಪಿಯನ್ನು ಸಂಸತ್ ನಲ್ಲಿ ತರಾಟೆಗೆ ತೆಗೆದುಕೊಂಡವರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾದ ಹಾಗೂ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ಕುಮಾರಿ ಮಾಯಾವತಿ ಅವರು. ಬಿಜೆಪಿ ಮುಸಲ್ಮಾನರನ್ನು ಗುರಿಯಾಗಿಸಿಕೊಂಡಿತ್ತು. ಇಂದು ದಲಿತರನ್ನು ಗುರಿಯಾಗಿಸಿಕೊಂಡಿದೆ. ಭಾರತೀಯ ಜನತಾಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮುಸಲ್ಮಾನರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಂಸತ್ ನಲ್ಲಿ ಕೂಗು ಹಾಕುವ ಮೂಲಕ ಬಾರಿ ಗದ್ದಲ ಉಂಟು ಮಾಡಿದರು. ಮಾಯಾವತಿಯು ದಲಿತರ ಪರ ಸಂಸತ್ ನಲ್ಲಿ ನಿಂತ ಕಾರಣ, ಉತ್ತರ ಪ್ರದೇಶದ ಬಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದಯಾಶಂಕರ್ ಸಿಂಗ್ ಎಂಬುವವ, ಮಾಯಾವತಿ ಅವರನ್ನು ಸೂಳೆಗಿಂತ ಕಡೆ ಎಂದು ಅವಮಾನಿಸಿ ಬಿಟ್ಟ. ಈ ಹೇಳೆಕೆಯು ಸಹ ಭಾರತದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ. ಗುಜರಾತ್ನಲ್ಲಿ ದಲಿತರ ಮೇಲಾದ ದೌರ್ಜನ್ಯ ಮತ್ತು ಮಾಯಾವತಿ ಅವರನ್ನು ವೇಶ್ಯೆ ಎಂಬ ಪದಬಳಕೆ. ಈ ಎರಡು ಕಾರಣಗಳಿಗೆ ಭಾರತದಲ್ಲಿ ದಲಿತರು ಪ್ರತಿರಾಜ್ಯದಲ್ಲು ಪ್ರತಿಭಟಿಸುವ ಮೂಲಕ ಭಾಜಪದ ವಿರುದ್ಧ ತಿರುಗಿಬಿದ್ದಿದ್ದಾರೆ. ಚರ್ಮ ಸುಲಿದ ದಲಿತರ ಪರವಾಗಿ ಮಾತನಾಡಿದ ಪರಿಣಾಮವಾಗಿ ಆಕೆಯನ್ನು ವೇಶ್ಯೆ ಎಂದು ಕರೆಯುವ ಹಿಂದುತ್ವದ ಪ್ರತಿಪಾದಕರು ತಮ್ಮ ಸಂಸ್ಕೃತಿಯನ್ನು ತಾವೇ ಅನಾವರಣಗೊಳಿಸಿಕೊಂಡಿದ್ದಾರೆ. 

ಗೋ ಸಮಸ್ಯೆ ಗುಜರಾತ್ ನ ಸಮಸ್ಯೆ ಅಷ್ಟೆ ಅಲ್ಲ. ಇದು ರಾಷ್ಟ್ರದ ಸಮಸ್ಯೆಯಾಗಿದೆ. ಹಾಗಾಗಿ ಈ ಘಟನೆ ಎಲ್ಲೆ ನಡೆದರೂ ಕೂಡ ಅದು ರಾಷ್ಟ್ರದ ಸಮಸ್ಯೆಯೆ. ಗುಜರಾತ್ ನಲ್ಲಿ ದಲಿತರಿಗಾದ ಅನ್ಯಾಯವನ್ನು ಎಲ್ಲಾ ರಾಜ್ಯದಿಂದಲೂ ಖಂಡನೆ ಪ್ರಾರಂಭವಾಯಿತು. ಆದರೆ ಖಂಡಿಸಿದರಷ್ಟೆ ಸಾಲದು, ಕಾನೂನಿನ ಪರಿಧಿಯಲ್ಲಿ ಅದನ್ನು ವಿಸ್ತರಿಸುವ ಅಗತ್ಯವಿದೆ. ಇಂದಿಗೂ ಕೂಡ ಭಾರತದಲ್ಲಿ ದಲಿತರು ದೂರು ದಾಖಲಿಸಲು ಹೋದರೆ ದೂರನ್ನೆ ತೆಗೆದುಕೊಳ್ಳುವುದಿಲ್ಲ. ಎಷ್ಟೊ ಕಡೆ ದೂರು ದಾಖಲಾದರು ಕೂಡ ಕ್ರಮ ಕೈಗೊಳ್ಳುವುದಿಲ್ಲ. ಸ್ವತಹ ಪೊಲೀಸರೇ ಅಪರಾಧಿಗಳಿಗೆ ಬೆಂಗಾವಲಾಗಿ ನಿಂತಿರುತ್ತಾರೆ. ಕೊನೆಗೆ ಇಡೀ ಪ್ರಕರಣವನ್ನೆ ಗೆದ್ದಲು ಹಿಡಿಯುವಂತೆ ಮಾಡುವ ದೌರ್ಜನ್ಯಕೋರರಿಗೆ ಕಾನೂನಿನ ಅಡಿಯಲ್ಲಿಯೇ ರಕ್ಷಣೆ ಒದಗಿಸಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಅರಿತು, ಜಾಗೃತರಾಗುವ ಮೂಲಕ ಹೋರಾಟ ರೂಪಿಸಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕಿದೆ. ಇಲ್ಲವಾದರೆ ಈ ಹಿಂದುತ್ವವಾದಿಗಳ ಸರ್ವಾಧಿಕಾರ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ನಡೆಸುತ್ತಿರುವ ದಾಳಿ, ಈ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗೆ ನಿಲ್ಲುವಷ್ಟರ ಮಟ್ಟಿಗೆ ಹೇಸಿಗೆಯುಟ್ಟಿಸುತ್ತದೆ.

~~~

 

ಹಾರೋಹಳ್ಳಿ ರವೀಂದ್ರ: ಹಾರೋಹಳ್ಳಿ ಅವರು ತಾಯಿ ಮಹದೇವಮ್ಮ, ತಂದೆ ಅಂದಾನಿ ಅವರ ಮಗನಾಗಿ 27 ಜನವರಿ 1986 ರಲ್ಲಿ ಮೈಸೂರು ತಾಲ್ಲೂಕು, ವರುಣಾ ಹೋಬಳ್ಳಿಗೆ ಹೊಂದಿಕೊಂಡಿರುವ ಹಾರೋಹಳ್ಳಿ ಗ್ರಾಮದದಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನಲ್ಲೆ ಮುಗಿದಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ (ಎಂ.ಎ ಪತ್ರಿಕೋದ್ಯಮ). ಇವರು ಮೂಲತಹ ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, 2012ರಲ್ಲಿ ಮನದ ಚೆಲುವು ಮುದುಡಿದಾಗ(ಕವನ ಸಂಕಲನ). 2014ರಲ್ಲಿ ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). 2015ರಲ್ಲಿ ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ). ಇವರ ನಾಲ್ಕನೇ ಕೃತಿ ಎಬಿವಿಪಿ ಭಯೋತ್ಪಾದನೆ ಎಂಬ ಕೃತಿಯು ಹಚ್ಚಿನಲ್ಲಿದೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ.

Photo courtesy: Satyendra Satyarthi