Round Table India
You Are Reading
ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ
1
Features

ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ

shankar ns

 

ಶಂಕರ್ ಎನ್ ಎಸ್

shankar nsದೇವರಾಜ ಅರಸು ಮೊದಲ ಬಾರಿಗೆ 1972 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. 77ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ 78ರಲ್ಲಿ ಎರಡನೇ ಬಾರಿ ಅದೇ ಹುದ್ದೆಗೇರಿದರು. 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.
ಅಂತೂ ಈ ನಾಡಿನ ಸೌಭಾಗ್ಯ- ಎಂಟು ವರ್ಷ ಕಾಲ ಸತತವಾಗಿ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಅವಕಾಶ ಅರಸರಿಗೆ ಸಿಕ್ಕಿತು. ಯಾಕೆಂದರೆ ಅಂಥ ದೂರದೃಷ್ಟಿ, ದಕ್ಷತೆ, ಸಂಕಲ್ಪ ಶಕ್ತಿಗಳೊಂದಿಗೆ ಒಟ್ಟು ಜನಸ್ತೋಮದ ಪಾಡನ್ನೇ ಬದಲಿಸಿದ ದ್ರಷ್ಟಾರ ಕರ್ನಾಟಕಕ್ಕೆ ದಕ್ಕಿದಂತೆ ಭಾರತದಲ್ಲಿ ಇನ್ನಾವ ರಾಜ್ಯಕ್ಕೂ ಸಿಕ್ಕಲಿಲ್ಲ. ಆದರೇನು ಮಾಡುವುದು? ಸ್ವತಃ ಅರಸು ಅದೃಷ್ಟವಂತರಲ್ಲ! ಯಾಕೆಂದರೆ ಅವರು ಇಟ್ಟ ಐತಿಹಾಸಿಕ ಹೆಜ್ಜೆಗಳ ವಸ್ತುನಿಷ್ಠ ಮೌಲ್ಯಮಾಪನ ಎಂದೂ ನಡೆಯಲಿಲ್ಲ. ಅವರ ಕಾಲದಲ್ಲೂ ನಡೆಯಲಿಲ್ಲ, ಆಮೇಲೂ ಇಲ್ಲ. ಯಾವ ಸಮಾಜವಿಜ್ಞಾನಿಯೂ ಅವರ ಕಾಲಮಾನದ ಮೂಲ ಸಂಘರ್ಷಗಳನ್ನು ಅರಿಯುವ ಹಾಗೂ ಅರ್ಥೈಸುವ ಪ್ರಯತ್ನವನ್ನೂ ಮಾಡಲಿಲ್ಲ. ಅವರ ರಾಜ್ಯಭಾರದ ಬಗ್ಗೆ ಇಂದಿಗೂ ಎಣೆಯಿಲ್ಲದಷ್ಟು ಅಪಕಲ್ಪನೆಗಳೇ ಚಾಲ್ತಿಯಲ್ಲಿವೆ. ಇನ್ನೊಂದು ಕಡೆ ಅವರ ಪ್ರಗತಿಪರ ನೀತಿಗಳಿಂದಾಗಿಯೇ ಅವರ ಬಗ್ಗೆ ಮೇಲ್ವರ್ಗಗಳು ಬೆಳೆಸಿಕೊಂಡ ಅಸೀಮ ಅಸಹನೆಯೂ ಹಾಗೇ ಮುಂದುವರೆದಿದೆ!…

1972ರ ಚುನಾವಣೆಯಲ್ಲಿ ಮೊದಲ ಬಾರಿ ಸದನದಲ್ಲಿ ಶೇಕಡಾ 70ಕ್ಕಿಂತಲೂ ಹೆಚ್ಚು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಪ್ರಾತಿನಿಧ್ಯ ಇರುವಂತೆ ನೋಡಿಕೊಂಡಿದ್ದ ಅರಸು, ತಮ್ಮ ಸಕ್ರಿಯ ಬದುಕಿನುದ್ದಕ್ಕೂ ಆ ವರ್ಗಗಳ ಯುವಕರನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಲೇ ಇದ್ದರು. ಹೀಗೆ ಯುವಪೀಳಿಗೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದಲೇ ಅರಸು ಮುಖ್ಯಮಂತ್ರಿಯಾದ ಆರು ತಿಂಗಳಿಗೇ ಸರ್ಕಾರಿ ನೌಕರಿ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ತಂದರು. ಮುಂಚಿನ ನಿಯಮಾವಳಿಯಂತೆ ನಾಲ್ಕನೇ ದರ್ಜೆ ನೌಕರರ ಹೊರತು ಮಿಕ್ಕೆಲ್ಲರ ನೇಮಕಾತಿ ರಾಜ್ಯಮಟ್ಟದ ಸಾರ್ವಜನಿಕ ಸೇವಾ ಆಯೋಗದಿಂದ ನಡೆಯಬೇಕಿತ್ತು. ಅರಸು ಈಗ ಆ ನಿಯಮಾವಳಿಗೆ ಬದಲಾವಣೆ ತಂದು, ಮೊದಲ ಹಾಗೂ ಎರಡನೇ ದರ್ಜೆ ಗೆಜೆ಼ಟೆಡ್ ಅಧಿಕಾರಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ನೌಕರರ ನೇಮಕಾತಿಯೂ ಸ್ಥಳೀಯವಾಗಿ ನಡೆಯುವಂತೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳನ್ನು ರಚಿಸಿದರು. ಈ ಸಮಿತಿಗಳಲ್ಲಿ ಸ್ಥಳೀಯ ಶಾಸಕರು, ದುರ್ಬಲ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ರಾಜಕೀಯ ಕಾರ್ಯಕರ್ತರು ಇದ್ದುದು ಅರಸರ ಆಶಯಕ್ಕೆ ಅನುಗುಣವಾಗಿಯೇ ಇತ್ತು.

ಈ ವರ್ಗಗಳು ಸಣ್ಣ ಮಟ್ಟದಲ್ಲೇ ಆದರೂ ಅಧಿಕಾರದ ಕದ ತಟ್ಟಿದ್ದು ಇದೇ ಮೊದಲು. ತಮಗೆ ದೊರೆತದ್ದು ಅಭಿವೃದ್ಧಿ ಪಥವನ್ನು ಮತ್ತು ಸಾಮಾಜಿಕ ನಕಾಶೆಯನ್ನು ಬದಲಿಸಲು ದೊರೆತ ಸುವರ್ಣಾವಕಾಶ ಎಂದು ಅರಿಯುವ ಪ್ರಬುದ್ಧತೆ ಅವರಲ್ಲಿರಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಎಲ್ಲಕ್ಕೂ ಮೊದಲು ಹೊಸ ಅಧಿಕಾರದ ದರ್ಪ ದರ್ಬಾರು ತೋರುತ್ತ ಅಡ್ಡಾಡತೊಡಗಿದರು. ಹಿಂದುಳಿದ ವರ್ಗಗಳ ಬಗ್ಗೆ ಮೊದಲೇ ಅಸಹನೆಯಿದ್ದ ಮೇಲ್ವರ್ಗಗಳಿಗೆ ಈ ಹೊಸ ‘ಕೊಬ್ಬಿನ ನಡತೆ’ ಅಧಿಕಪ್ರಸಂಗವಾಗಿ ಕಂಡು ಅವರ ಹೊಟ್ಟೆಯುರಿಗೆ ಕಾರಣವಾಗಿದ್ದರೆ ಅದು ಸಹಜವೇ.

urs book cover

ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಸಮಿತಿಯ ಬಹುತೇಕ ಸದಸ್ಯರು ಕೆಲಸಗಳಿಗೆ ದರಪಟ್ಟಿಯನ್ನೇ ನಿಗದಿಪಡಿಸಿಬಿಟ್ಟರು! ಈ ವಸೂಲಿ ಕೈಂಕರ್ಯದಿಂದ ‘ಮಾಮೂಲಿ’ಗಳ ಅಳತೆಗೋಲೇ ಜಾರಿಗೆ ಬಂದಿತು. ಈ ಬೆಳವಣಿಗೆಯಿಂದಾಗಿ ತಳಮಟ್ಟದಲ್ಲಿ ಭ್ರಷ್ಟಾಚಾರ ಬೇರೂರಲೂ ಅನುವಾಯಿತು. ಮತ್ತು ಅದರಿಂದಾಗಿಯೇ ಅರಸರ ಹೆಸರಿಗೆ ಸಾಕಷ್ಟು ಕಳಂಕ ಅಂಟಿಕೊಂಡಿತು.

ಅದೇ ವೇಳೆಗೆ ಈ ನೇಮಕಾತಿಗಳು ಅಸಂಖ್ಯಾತ ಅವಕಾಶವಂಚಿತರಿಗೆ ಬದುಕಿನ ಬಾಗಿಲು ತೆರೆದಿದ್ದೂ ನಿಜ. ಅದು ಅರಸರಿಗೆ ರಾಜಕೀಯ ಲಾಭ ತಂದುಕೊಟ್ಟಿದ್ದೂ ನಿಜ.

ಈ ಸಮಿತಿಗಳಿಂದ ಒಂದೇ ವರ್ಷದಲ್ಲಿ ಎರಡು ಸುತ್ತು ನೇಮಕಾತಿಗಳು ನಡೆದು ಅರಸು ಮೂರನೇ ಸುತ್ತಿಗೂ ಅವಕಾಶ ಮಾಡಿಕೊಟ್ಟರು.

ಆಗ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿದ್ದ ಎಚ್.ಡಿ. ದೇವೇಗೌಡರು ಈ ಸಮಿತಿಗಳನ್ನು ‘ಭ್ರಷ್ಟಾಚಾರದ ವೇದಿಕೆ’ಗಳೆಂದು ಬಣ್ಣಿಸಿದರು. ಆಗಿನ ವಿಶಿಷ್ಟ ರಾಜಕೀಯ ಸನ್ನಿವೇಶದಿಂದಾಗಿ ದೇವೇಗೌಡರಿಗೆ ತಮ್ಮೆಲ್ಲ ಮಾತುಗಳಿಗೂ ಸಾಕ್ಷ್ಯಾಧಾರ ಒದಗಿಸುವುದು ಸುಲಭದ ವಿಷಯವಾಗಿತ್ತು. (ಏನಿದು ‘ವಿಶಿಷ್ಟ ರಾಜಕೀಯ ಸನ್ನಿವೇಶ’? ಮುಂದೆ ನೋಡೋಣ). ಪತ್ರಿಕೆಗಳಲ್ಲೂ ಈ ಸರಣಿ ‘ಭ್ರಷ್ಟಾಚಾರ’ಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತು. ಅರಸು ಆಡಳಿತದ ಬುನಾದಿಯೇ ಭ್ರಷ್ಟಾಚಾರ ಎಂಬ ಭಾವನೆ ಮೂಡಲು ಮುಖ್ಯವಾಗಿ ಇದೇ ಕಾರಣವಾಯಿತು. ಎಷ್ಟರ ಮಟ್ಟಿಗೆಂದರೆ 1973ರ ಮಳೆಗಾಲದ ಆಧಿವೇಶನದಲ್ಲಿ ಬಂದ ವಾಗ್ಬಾಣಗಳಿಗೆ ಸ್ವತಃ ಅರಸು ಕಂಪಿಸುವಂತಾಯಿತು. ಮುಂದಿನ ಎರಡು ತಿಂಗಳಲ್ಲಿ ಅರಸು ಈ ನೇಮಕಾತಿ ಸಮಿತಿಗಳನ್ನೇ ರದ್ದು ಮಾಡಿಬಿಟ್ಟರು! ಆದರೆ ಅಷ್ಟರಲ್ಲಿ ಅಂದರೆ ಒಂದೂವರೆ ವರ್ಷದಲ್ಲಿ ಸರ್ಕಾರಿ ನೌಕರಿಯ ಕನಸು ಕಾಣುವುದೂ ದುಸ್ತರವಾಗಿದ್ದ ವರ್ಗಗಳು ಒಳಗೆ ಪ್ರವೇಶ ಪಡೆದಾಗಿತ್ತು. ಮೊದಲೇ ಹೇಳಿದಂತೆ, ಹೊರಗೆ ಇಂಥ ಭ್ರಷ್ಟಾಚಾರದ ಗದ್ದಲವೆದ್ದರೂ ಒಳಗಿಂದೊಳಗೇ ಅರಸರಿಗೆ ರಾಜಕೀಯ ಲಾಭವೂ ಆಗಿತ್ತು….

ಇಲ್ಲಿ ಅರಸು ಹಿಂದುಳಿದ ವರ್ಗಗಳ ಯುವಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದ ರೀತಿಗೆ ಮಾಜಿ ಸಚಿವ, ಮಾಜಿ ಸಂಸದ ಎಚ್. ವಿಶ್ವನಾಥ್ರ ನಿದರ್ಶನವನ್ನೇ ನೋಡಬಹುದು.

1973 ರಲ್ಲಿ ವಿಶ್ವನಾಥ್ರ ಅಪ್ಪ ಮಗನಿಗೊಂದು ಸರ್ಕಾರಿ ನೌಕರಿ ಕೊಡಿಸಲು ದೇವರಾಜ ಅರಸರಿಗೆ ಆತ್ಮೀಯರಾಗಿದ್ದ ಅವರ ಸಂಬಂಧಿಕರನ್ನು ಜೊತೆ ಮಾಡಿ ಕಳಿಸಿಕೊಟ್ಟಿದ್ದರು. ವಿಶ್ವನಾಥ್ ಆಗ ಎಲ್ಎಲ್ಬಿ ಕೊನೆಯ ವರ್ಷದ ವಿದ್ಯಾರ್ಥಿ.

ಅರಸರನ್ನು ಭೇಟಿಯಾದಾಗ ವಿಶ್ವನಾಥ್ ತಮಗೆ ಸರ್ಕಾರಿ ನೌಕರಿಯಲ್ಲಿ ಆಸಕ್ತಿಯಿಲ್ಲವೆಂದು ಹೇಳಿಬಿಟ್ಟರು. ಆಗ ಅರಸು, ವಿಶ್ವನಾಥರ ಹಿನ್ನೆಲೆ ವಿಚಾರಿಸಿಕೊಂಡರು. ಆತ ಕಾನೂನು ಪದವಿಗಾಗಿ ಓದುತ್ತಿರುವ ಕುರುಬರ ಹುಡುಗ ಎಂದು ಗೊತ್ತಾದಾಗ ಅರಸು, ‘ನೀವು ವಕೀಲರಾಗಿ, ಮುಂದೆ ರಾಜಕಾರಣಕ್ಕೂ ಬನ್ನಿ, ನನ್ನ ಪ್ರೋತ್ಸಾಹವಿದೆ’ ಎಂದರು. ವಿಶ್ವನಾಥ್ರನ್ನು ಕರೆದುಕೊಂಡು ಬಂದಿದ್ದವರ ಕಡೆ ನೋಡಿ, ‘ಅಲ್ರಪ್ಪಾ ನಿಮ್ಮ ಪೈಕಿ ಹುಡುಗ ಲಾಯರ್ ಆಗಿ ರಾಜಕೀಯಕ್ಕೆ ಬರ್ತಾನೆ ಅಂದರೆ ಅವನನ್ನು ಸರಕಾರಿ ಜೀತಕ್ಕಿಡಲು ಬಂದಿದ್ದೀರಲ್ಲ, ದಡ್ಡರು, ಹೋಗಿ ಹೋಗಿ’ ಎಂದುಬಿಟ್ಟರು. ಇದು ವಿಶ್ವನಾಥ್ರಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿತು.

1975-76 ರಲ್ಲಿ ನಾನು ಕೆ.ಆರ್.ನಗರದಲ್ಲಿ ಗೇಣಿದಾರರ ಪರವಾಗಿ ಉಚಿತವಾಗಿ ವಕಾಲತ್ತು ವಹಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಕೆ.ಆರ್. ನಗರಕ್ಕೆ ಸರಕಾರಿ ಆಸ್ಪತ್ರೆ ಉದ್ಘಾಟನೆಗೆ ಬರುವವರಿದ್ದರು. ಆ ಸಂದರ್ಭ ನೋಡಿಕೊಂಡು ನಾನು ಸಮಸ್ಯೆಯಲ್ಲಿದ್ದ ಒಂದಷ್ಟು ಗೇಣಿದಾರರನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿಗಳ ಮುಂದೆ ನಿಲ್ಲಿಸಿ, ಮನವಿ ಕೊಡಿಸಿ ವಿನಂತಿಸಿಕೊಳ್ಳುವಂತೆ ಸೂಚಿಸಿದೆ. ಕುರುಬರ ಹುಡುಗನೊಬ್ಬ ಅಡ್ವೊಕೇಟ್ ಆಗಿ, ನಗರ ಮತ್ತು ದುಡ್ಡಿನ ಹಿಂದೆ ಬೀಳಬೇಕಾದವನು ಊರಿಗೆ ವಾಪಸ್ ಬಂದು ಬಡವರ ಪರ ನಿಂತು ಹೋರಾಟ ಮಾಡ್ತಿದ್ದಾನಲ್ಲ… ಅರಸು ಅವರಿಗೆ ಏನನ್ನಿಸಿತೋ, ಆಗ ಗೊತ್ತಾಗಲಿಲ್ಲ. ಆದರೆ ಆನಂತರದ ಬೆಳವಣಿಗೆಗಳೇ ಅದಕ್ಕೆ ಉತ್ತರ ಕೊಟ್ಟವು. ನಮ್ಮೂರಿನಲ್ಲಿ ನಮ್ಮ ಚಿಕ್ಕಪ್ಪ ಲ್ಯಾಂಡ್ ಟ್ರಿಬ್ಯೂನಲ್ ಮೆಂಬರ್ ಆಗಿದ್ರು. ಕೇವಲ ಹದಿನೈದೇ ದಿನದಲ್ಲಿ ನಮ್ಮ ಚಿಕ್ಕಪ್ಪನನ್ನು ಸ್ಥಾನಪಲ್ಲಟಗೊಳಿಸಿ, ಆ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿದ್ದರು ಅರಸು. ನನಗದು ಮೊದಲ ಅಧಿಕಾರದ ಸ್ಥಾನ….

ಆ ಸ್ಥಾನದ ಬಲದಿಂದ ವಿಶ್ವನಾಥ್ ಹಳ್ಳಿಯ ಬಡ ಗೇಣಿದಾರರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದರು. 1977ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತುಳಸಿದಾಸ್ ದಾಸಪ್ಪನವರ ಪರ ದುಡಿದರು. ದಾಸಪ್ಪ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಮತ್ತೆ 1978ರಲ್ಲಿ ಕೆ.ಆರ್. ನಗರ ಕ್ಷೇತ್ರದಿಂದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಶ್ವನಾಥ್ ಹತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕರೂ ಆದರು. ಅರಸು ಹಿಂದುಳಿದ ವರ್ಗಗಳ ಯುವಕರನ್ನು ಹುರಿದುಂಬಿಸುತ್ತಿದ್ದ ರೀತಿಗೆ ಇಂಥ ಎಷ್ಟೋ ಉದಾಹರಣೆಗಳಿವೆ. ಡಿ.ಬಿ. ಚಂದ್ರೇಗೌಡರು ಇದೇ ಬಗೆಯ ಇನ್ನೊಂದು ಉದಾಹರಣೆ ನೀಡುತ್ತಾರೆ:

ಅರಸು ಮತ್ತು ನಾನು ಕಾರ್ಕಳಕ್ಕೆ ಹೋದಾಗ, ಸೈಕಲ್ ಹೊಡೆಯುತ್ತಿದ್ದ ಹುಡುಗನೊಬ್ಬ ಅರಸು ಅವರ ಕಣ್ಣಿಗೆ ಬಿದ್ದ. ಆ ತಕ್ಷಣವೇ ಅರಸು, ‘ಈ ಹುಡುಗನ್ನ ಗಮನದಲ್ಲಿಟ್ಟುಕೊಳ್ಳಿ ಗೌಡ್ರೆ’ ಎಂದರು. ಅವರು ಹಾಗೆನ್ನುವುದು ಸಾಮಾನ್ಯ ಸಂಗತಿಯಲ್ಲ ಎನ್ನುವುದು ನನಗೆ ಗೊತ್ತಿತ್ತು. ಹಾಗೆಂದವರೇ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಿ, ‘ನಿಮ್ಮ ಭಾಗದಲ್ಲಿ ಗೇಣಿದಾರರು ಹೆಚ್ಚಾಗಿದ್ದಾರೆ, ಅವರನ್ನೆಲ್ಲ ಒಟ್ಟಿಗೆ ಸೇರಿಸಿ, ಒಂದು ಸಮಾವೇಶ ಏರ್ಪಡಿಸಬಹುದಾ?’ ಎಂದು ಕೇಳಿದರು. ಅದಾದ ಸ್ವಲ್ಪ ದಿನಕ್ಕೆ ಕಾರ್ಕಳದಲ್ಲಿ ನಾಲ್ಕೈದು ಸಾವಿರ ಜನ ಸೇರಿದ್ದ ದೊಡ್ಡ ಮಟ್ಟದ ಸಮಾವೇಶ. ಆ ಸಮಾವೇಶ ಮುಗಿಯುವಷ್ಟರಲ್ಲಿ, ಅರಸು ಆ ಸಮಾವೇಶವನ್ನು ವ್ಯವಸ್ಥೆ ಮಾಡಿದ್ದ ಸೈಕಲ್ ಹುಡುಗನನ್ನು ಕಾರ್ಕಳದ ಅಭ್ಯರ್ಥಿಯನ್ನಾಗಿಸಿದ್ದರು. ಆ ಸೈಕಲ್ ಹುಡುಗ ನಿಜಕ್ಕೂ ಶಾಕ್ಗೊಳಗಾಗಿದ್ದ. ದುಡ್ಡಿಲ್ಲ, ಜಾತಿಯಿಲ್ಲ, ಪೂರ್ವಸಿದ್ಧತೆಗಳಿಲ್ಲ. ಆದರೆ ಅರಸು ಮಾತ್ರ ಅದೃಶ್ಯ ಮತದಾರರಿದ್ದಾರೆ, ನಮ್ಮನ್ನು ಗೆಲ್ಲಿಸುತ್ತಾರೆ ಎಂದು ನಂಬಿದ್ದರು. ಅರಸು ನಂಬಿಕೆಯನ್ನು ಹುಸಿಗೊಳಿಸದ ಕಾರ್ಕಳದ ಜನ, ಆಶ್ಚರ್ಯದಾಯಕ ಫಲಿತಾಂಶವನ್ನು ನೀಡಿ, ಆ ಸೈಕಲ್ ಹುಡುಗನನ್ನು ಗೆಲ್ಲಿಸಿದ್ದರು.

Urs moily                                                 (Devaraj Urs with Former CM Veerappa Moily)

ಆ ಹುಡುಗ ಮುಂದೆ ಕಾರ್ಕಳದಲ್ಲಿ ಸೋಲರಿಯದ ಸರದಾರ ಎನಿಸಿಕೊಂಡ, ಈ ರಾಜ್ಯದ ಮುಖ್ಯಮಂತ್ರಿಯಾದ, ಕೇಂದ್ರದಲ್ಲಿ ಹಲವು ಖಾತೆಗಳ ಮಂತ್ರಿಯಾದ, ಪಕ್ಷದ ಪ್ರಭಾವಿ ನಾಯಕನಾಗಿ ಬೆಳೆದು ನಿಂತ. ಅವರೇ ಎಂ. ವೀರಪ್ಪ ಮೊಯ್ಲಿ.

ಅರಸರಿಗೆ ಯುವಕರು ಅಂದರೆ ಯಾಕಿಷ್ಟು ಪ್ರೇಮ? ಅದಕ್ಕೆ, ಅರಸರು ನೀಡಿದ ಉತ್ತೇಜನದಿಂದಲೇ ಯುವ ಮುಖಂಡರಾಗಿ ಬೆಳೆದ ಶ್ರೀಕಂಠಮೂರ್ತಿಯವರು ಹೇಳುವುದು ಹೀಗೆ:

ಈ ದೇಶ ಉದ್ಧಾರ ಆಗಬೇಕಾದ್ರೆ, ಅದು ಯುವಜನತೆಯಿಂದಲೇ ಎಂಬುದು ಅರಸು ಅವರ ಬಲವಾದ ನಂಬಿಕೆಯಾಗಿತ್ತು. ಆ ಕಾರಣಕ್ಕಾಗಿಯೇ ಯುವಜನರನ್ನು ಅತಿಯಾಗಿಯೇ ಪ್ರೋತ್ಸಾಹಿಸುತ್ತಿದ್ದರು. ಅದು ಬರಿ ಮಾತಲ್ಲ, ತೋರಿಕೆಯಲ್ಲ, ಪ್ರಚಾರಕ್ಕಾಗಿಯಂತೂ ಅಲ್ಲವೇ ಅಲ್ಲ.

ಅಲ್ಲಿ ಅವರಿಗೆ ಅಧಿಕಾರದ ಸ್ಥಾನÀಗಳನ್ನು ನೀಡಿ, ಸಮಾಜಮುಖಿ ಕೆಲಸಗಳಿಗೆ ಒಡ್ಡುತ್ತಿದ್ದರು. ಅವರಲ್ಲಿ ತಾನೇ ತಾನಾಗಿ ನಾಯಕತ್ವದ ಗುಣಗಳು ಬೆಳೆಯುವಂತೆ ಮಾಡುತ್ತಿದ್ದರು. ಉದಾಹರಣೆಗೆ ರಘುಪತಿ, ಡಿ.ಬಿ. ಚಂದ್ರೇಗೌಡ, ಮೊಯಿದ್ದೀನ್, ಸುಬ್ಬಯ್ಯ ಶೆಟ್ಟಿ, ಮನೋರಮಾ, ವೀರಪ್ಪ ಮೊಯ್ಲಿ, ಜಾಫರ್ ಶರೀಫ್, ರಮೇಶ್ ಕುಮಾರ್, ಎಂ.ಸಿ. ನಾಣಯ್ಯ, ಮಾರ್ಗರೆಟ್ ಆಳ್ವ, ಕೆ. ಲಕ್ಕಣ್ಣ, ಕೋಳಿವಾಡ, ದೇವೇಂದ್ರಪ್ಪ ಘಾಳಪ್ಪ, ಬಿ. ಶಿವಣ್ಣ, ಜಯಚಂದ್ರ, ವಿಶ್ವನಾಥ್… ಒಬ್ಬರೇ ಇಬ್ಬರೇ?

ಈ ಶ್ರೀಕಂಠಮೂರ್ತಿ ಅರಸರ ಆಪ್ತ ಸಹಾಯಕ ಗೋಪಾಲ ಶಾಸ್ತ್ರಿಯವರ ತಮ್ಮ. ಅರಸರ ಪ್ರೋತ್ಸಾಹದಿಂದಲೇ ಬೆಳೆದು ಮುಂದಕ್ಕೆ ಜನತಾ ಪರಿವಾರ ಸೇರಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದವರು.

ಇನ್ನು ಮುಖ್ಯಮಂತ್ರಿ ಅರಸು ಮೇಲೆ ಬಂದ ಆರೋಪಗಳ ಚರ್ಚೆಯನ್ನು ಮುಂದಕ್ಕೆ ಕೈಗೆತ್ತಿಕೊಳ್ಳೋಣ.

ಮಹಾ ಮೇಧಾವಿ ಸಮಾಜವಾದಿ ನೇತಾರ ಮತ್ತು ಚಿಂತಕ ಡಾ. ರಾಮಮನೋಹರ ಲೋಹಿಯಾ ಅವರು ಸರಿಯಾಗಿಯೇ ಗುರುತಿಸಿರುವಂತೆ, ಜಾತಿ ನಮ್ಮ ದೇಶದ ಅತ್ಯಂತ ಮೂಲಭೂತವಾದ ವಾಸ್ತವ. ಶತಮಾನಗಳ ಕಾಲ ಇಲ್ಲಿನ ಜನಜೀವನವನ್ನು ನಿರ್ದೇಶಿಸುತ್ತ, ಜನರ ಸ್ವಭಾವವೇ ಆಗಿಹೋಗಿರುವ ದಾರುಣ ವಾಸ್ತವ. ಲೋಹಿಯಾ ಬರೆಯುತ್ತಾರೆ-

ತಾತ್ವಿಕವಾಗಿ ಜಾತಿಯನ್ನು ತಿರಸ್ಕರಿಸುವವರೂ, ಆಚರಣೆಯಲ್ಲಿ ಅದನ್ನೇ ಪಾಲಿಸುತ್ತಾರೆ. ಇಡೀ ಬದುಕು, ಇಲ್ಲಿ ಜಾತಿಯ ಸರಹದ್ದಿನೊಳಗೇ ಚಲಿಸುತ್ತದೆ. ಸುಸಂಸ್ಕೃತರು ಜಾತಿವ್ಯವಸ್ಥೆಯ ವಿರುದ್ಧ ಮೆಲುದನಿಯಲ್ಲಿ ಮಾತಾಡುತ್ತಾರಾದರೂ, ಆಚರಣೆಯಲ್ಲಿ ಅದನ್ನು ತಿರಸ್ಕರಿಸಬೇಕೆಂದು ಅವರಿಗೆ ಹೊಳೆಯುವುದಿಲ್ಲ. ಅವರ ಕೃತ್ಯಗಳು ನಂಬಲಸಾಧ್ಯವಾದ ಮಟ್ಟಿಗೆ ಜಾತಿನಿಷ್ಠವಾಗಿರುವುದನ್ನು ಯಾರಾದರೂ ಎತ್ತಿ ತೋರಿಸಿದರೆ, ಹಾಗೆ ನೆನಪಿಸಿದವರೇ ಅವರ ಕಣ್ಣಿಗೆ ಜಾತಿವಾದಿಗಳಾಗಿ ಕಾಣುತ್ತಾರೆ…. ಯಾರು ಅವರ ನಡವಳಿಕೆಯನ್ನು ವಿಮರ್ಶೆ ಮಾಡುತ್ತಾರೋ ಅವರೇ ಜಾತೀಯ ವಾತಾವರಣದ ಸೃಷ್ಟಿಕರ್ತರು ಎಂಬ ಆರೋಪ ಹೊರೆಸಿಬಿಡುತ್ತಾರೆ….

ಮಾನವ ಚೈತನ್ಯ ಹೀಗೆ ಕುಸಿದುಹೋಗಲು ಜಾತಿ ಹಾಗೂ ಲಿಂಗ ತಾರತಮ್ಯಗಳೇ ಕಾರಣವೆಂದು ನನಗೆ ಮನವರಿಕೆಯಾಗಿದೆ. ಸಾಹಸ ಮತ್ತು ಉಲ್ಲಾಸದ ಸರ್ವ ಸಾಮಥರ್ಯ್ವನ್ನೂ ನಾಶ ಮಾಡಬಲ್ಲ ಶಕ್ತಿ ಈ ತಾರತಮ್ಯಗಳಿಗಿದೆ. ಆಧುನಿಕ ಅರ್ಥವ್ಯವಸ್ಥೆಯ ಮೂಲಕ ಬಡತನವನ್ನು ಓಡಿಸಿಬಿಟ್ಟರೆ ಸಾಕು, ಈ ತರತಮಗಳು ತಂತಾನೇ ಮಾಯವಾಗುವುದೆಂದು ಯೋಚಿಸುವವರು ಇಲ್ಲಿ ದೊಡ್ಡ ತಪ್ಪು ಮಾಡುತ್ತಾರೆ. ಬಡತನ ಮತ್ತು ಈ ತಾರತಮ್ಯಗಳು- ಪರಸ್ಪರ- ಅದರ ಹೊಟ್ಟೆಯೊಳಗಿನ ಕ್ರಿಮಿಗಳನ್ನು ಇದು, ಇದರ ಕ್ರಿಮಿಗಳನ್ನು ಅದು ತಿಂದು ಬೆಳೆಯುವ ಅನಿಷ್ಟಗಳು. ಬಡತನದ ವಿರುದ್ಧ ನಡೆಯುವ ಹೋರಾಟ, ಅದೇ ಸಮಯದಲ್ಲಿ ಈ ಎರಡು ತಾರತಮ್ಯಗಳ ವಿರುದ್ಧವೂ ಏಕಕಾಲದಲ್ಲಿ ಹೂಡಿದ ಯುದ್ಧವಾಗದಿದ್ದರೆ, ಅಂಥ ಹೋರಾಟವೂ ಕೇವಲ ಸೋಗು.

ಅಂಬೇಡ್ಕರ್ ಹೇಳುವಂತೆ ಜಾತಿಯೆಂಬುದು ಶ್ರೇಣೀಕೃತ ಅಸಮಾನತೆ; ಭಾರತೀಯರ ಕರ್ತೃತ್ವ, ಉಲ್ಲಾಸ, ಸೋದರಭಾವಗಳನ್ನೇ ಕೊಂದುಹಾಕಿರುವ ಪಿಡುಗು. ಭಾರತೀಯ ಸಮಾಜದ ಅಸಮಾನತೆಯ ಮೂಲ ಬೀಜ ಈ ಜಾತಿವ್ಯವಸ್ಥೆ.

ಅರಸು ಮೊದಲಿನಿಂದಲೂ ತಮ್ಮ ಅಧ್ಯಯನ, ವಿವೇಕಗಳ ಮೂಲಕ, ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಗಾಡಿನ ಬದುಕಿನಲ್ಲಿ ಬೇರಿಳಿಸಿ ಕಂಡುಕೊಂಡ ಸಂಗತಿಯಿದು: ಈ ಸಮಾಜದಲ್ಲಿ ಜಾತಿಮೂಲ ಅಸಮಾನತೆಯನ್ನು ಅಲುಗಿಸದೆ, ಯಾವ ಚಲನೆಯೂ, ಯಾವ ಪರಿವರ್ತನೆಯೂ ಸಾಧ್ಯವಿಲ್ಲ; ಸಮಾಜದ ಅಸಮತೋಲವನ್ನು ನಿವಾರಿಸಲೂ ಸಾಧ್ಯವಿಲ್ಲ. ಈ ವಿಷಯದಲ್ಲಿ ಅವರಿಗೆ ಯಾವ ಗೊಂದಲವೂ ಇರಲಿಲ್ಲ. ಹಿಂದುಳಿದವರು ಯಾರು ಅಂದರೆ ಆರೋಗ್ಯ, ಆಶ್ರಯ, ಶಿಕ್ಷಣಗಳಿಂದ ವಂಚಿತರಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ಅರಸು ವ್ಯಾಖ್ಯಾನಿಸುತ್ತಿದ್ದರು… ಮಾನ ಕಾಪಾಡಿಕೊಳ್ಳುವಷ್ಟಾದರೂ ಹಣ ಇರಬೇಕು… ಮುಂದುವರೆದವರು ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಾರೆ. ಆದರೆ ಹಿಂದುಳಿದವರಿಗೆ ಪ್ಲಾನ್ ಇರಲಿ, ಟೂಲ್ಸೇ ಇಲ್ಲ. ನಾನು ಆ ಟೂಲ್ಸ್ ಕೊಡಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದರು.
ಇಲ್ಲಿ ಈ ಸ್ಪಷ್ಟನೆ ಯಾಕೆಂದರೆ, ಹಿಂದುಳಿದವರನ್ನು ಗುರುತಿಸಲು ಜಾತಿ ಮಾನದಂಡವನ್ನು ಬಳಸುವುದು ತಪ್ಪು, ಅದರ ಬದಲು ಬಡತನವನ್ನು ಅಳತೆಗೋಲಾಗಿ ಬಳಸಬೇಕು ಎಂದು ಆಗಲೂ ವಾದ ಹೂಡುವವರಿದ್ದರು, ಈಗಲೂ ಇದ್ದಾರೆ. ಮೇಲ್ಜಾತಿಯಲ್ಲಿ ಬಡವರಿಲ್ಲವೇ? ಎನ್ನುವ ಪ್ರಶ್ನೆಯೆತ್ತಿ ಜಾತಿ ಅಸಮಾನತೆಗೂ, ಬಡತನಕ್ಕೂ ಗಂಟು ಹಾಕಲು ಯತ್ನಿಸುವವರಿದ್ದಾರೆ.

ಅರಸು ಇಂಥ ವಾದಗಳನ್ನು ಕಿವಿಗೆ ಹಾಕಿಕೊಳ್ಳದೆ, ಅವಕಾಶ ಸಿಕ್ಕಿದೊಡನೆಯೇ ತಮ್ಮ ‘ದರ್ಶನ’ವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಕಾರ್ಯೋನ್ಮುಖರಾದರು. ಆ ದಿಕ್ಕಿನಲ್ಲಿ ಅವರ ಎರಡು ಮುಖ್ಯ ಸಾಧನೆಗಳು ಅವರಿಗೆ ‘ಪರಿವರ್ತನೆಯ ಹರಿಕಾರ’ ಎಂಬ ಬಿರುದು ತಂದುಕೊಟ್ಟವು:

1. ಹಾವನೂರ್ ಆಯೋಗ ರಚಿಸಿ ‘ಇತರೆ ಹಿಂದುಳಿದ ವರ್ಗಗಳ’ ಸ್ಥಾನಮಾನ ಸಮೀಕ್ಷೆ ಮಾಡಿ ಕಡೆಗೆ ಆ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದ್ದು.

2. ಭೂಸುಧಾರಣೆ ಮೂಲಕ ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತಂದಿದ್ದು.

ಅರಸು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಐದೇ ತಿಂಗಳಲ್ಲಿ ಹಿಂದುಳಿದ ವರ್ಗಗಳ ಆಯೋಗ ಅಸ್ತಿತ್ವಕ್ಕೆ ಬಂತು (8 ಆಗಸ್ಟ್ 1972). ಬೇಡ ಸಮುದಾಯದ ಮೇಧಾವಿ ವಕೀಲ ಎಲ್.ಜಿ. ಹಾವನೂರ್ ಇದರ ಅಧ್ಯಕ್ಷರು. ಕರ್ನಾಟಕದಲ್ಲಿ ಜಾತಿವಾರು ಮೀಸಲಾತಿ ಹೊಸದೇನಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ದಲಿತರು ಹಾಗೂ ದುರ್ಬಲರಿಗೆ ಮೀಸಲಾತಿ ಕಲ್ಪಿಸುವ ಪರಿಪಾಠವಿದ್ದೇ ಇದೆ. ಏಕೀಕರಣಕ್ಕೆ (ಅಂದರೆ 1956ರ ನವೆಂಬರ್ 1ಕ್ಕೆ) ಮುನ್ನ ರಾಜ್ಯದಲ್ಲಿ ಬಾಹ್ಮಣರು, ಐರೋಪ್ಯರು ಮತ್ತು ಆಂಗ್ಲೊ ಇಂಡಿಯನ್ನರ ಹೊರತಾಗಿ ಮಿಕ್ಕೆಲ್ಲರನ್ನೂ ಹಿಂದುಳಿದವರೆಂದು ಪರಿಗಣಿಸಲಾಗುತ್ತಿತ್ತು.

ಕೇಂದ್ರದಲ್ಲಿ ಕಾಕಾ ಕಾಲೇಲ್ಕರ್ ಸಮಿತಿ ಮೂಲಕ, ರಾಜ್ಯದಲ್ಲೇ ನಾಗನಗೌಡ ಸಮಿತಿ ಮೂಲಕ ಹಿಂದುಳಿದವರನ್ನು ಗುರುತಿಸಲು ನಡೆದಿದ್ದ ಪ್ರಯತ್ನಗಳು ನಿರ್ದಿಷ್ಟ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗುವ ಹಂತದವರೆಗೆ ಹೋಗಲೇ ಇಲ್ಲ. ಈಗ ಹಾವನೂರ್ ಆಯೋಗದ ಮೂಲಕ ಸಾಮಾಜಿಕ ಅಸಮತೋಲನವನ್ನು ಸರಿದೂಗಿಸುವ ವೈಜ್ಞಾನಿಕ ಪ್ರಯಾಸ ಮತ್ತೊಮ್ಮೆ ಆರಂಭವಾಯಿತು. ಆಯೋಗದ ಸದಸ್ಯರಾಗಿದ್ದವರು: ವೈ. ರಾಮಚಂದ್ರ, ಕೆ.ಆರ್.ಎಸ್. ನಾಯ್ಡು, ಕೆ.ಎಂ. ನಾಗಣ್ಣ, ಎಸ್.ಆರ್. ಮಾನಶೆಟ್ಟಿ, ಎನ್. ಧರಂಸಿಂಗ್ ಮತ್ತು ಪಿ.ಜಿ. ಹಬೀಬ್.

ಪರಿಶಿಷ್ಟ ಜಾತಿ/ ಪಂಗಡಗಳನ್ನು ಹೊರತುಪಡಿಸಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ನಿರ್ಣಾಯಕ ಮಾನದಂಡಗಳನ್ನು ರೂಪಿಸುವುದು, ಆ ವರ್ಗಗಳ ಸ್ಥಿತಿಗತಿ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಅವರ ಉನ್ನತಿಗಾಗಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರ್ಸು ಮಾಡುವುದೇ ಮುಂತಾದ ಕಾರ್ಯಸೂಚಿಯನ್ನು ಈ ಆಯೋಗದ ಮುಂದಿಡಲಾಗಿತ್ತು.

ಇದು ಹೇಳಿದಷ್ಟು ಸುಲಭದ ಕೆಲಸವಾಗಿರಲಿಲ್ಲ! ಮೀಸಲಾತಿ ಎಂಬುದು ನಮ್ಮ ಸಮಾಜದಲ್ಲಿ ಯಾವಾಗಲೂ ಮೇಲ್ವರ್ಗಗಳಿಗೆ ಮಗ್ಗುಲ ಮುಳ್ಳೇ! ಸಹಸ್ರಾರು ವರ್ಷಗಳ ಕಾಲ ವರ್ಣಾಧಾರಿತ ಮೀಸಲಾತಿಯಲ್ಲಿ ಬದುಕಿದ ಈ ಸಮಾಜ (ಸನಾತನ ಮೀಸಲಾತಿ ವ್ಯವಸ್ಥೆಯಲ್ಲಿ- ಬಾಹ್ಮಣನಿಗೆ ವಿದ್ಯೆ, ಕ್ಷತ್ರಿಯನಿಗೆ ಯುದ್ಧ, ವೈಶ್ಯನಿಗೆ ವ್ಯಾಪಾರ ಮತ್ತು ಶೂದ್ರನಿಗೆ ಸೇವೆ ಮಾತ್ರ ಮೀಸಲು) ಮೊದಲಿನಿಂದಲೂ ಬಹುಸಂಖ್ಯಾತ ಸಮುದಾಯಗಳಿಗೆ ವಿದ್ಯೆಯನ್ನು ನಿರಾಕರಿಸಿಕೊಂಡು ಬಂದಿತ್ತು. ದೊಡ್ಡ ಜನವರ್ಗವೇ ಇಲ್ಲಿ ಅಸ್ಪೃಶ್ಯತೆಗೆ ತುತ್ತಾಗಿ, ಮನುಷ್ಯರು ಎಂದು ಹೇಳುವುದೇ ಕಠಿಣವಾದ ಸ್ಥಿತಿಯಲ್ಲಿ ಬದುಕಿಕೊಂಡು ಬಂದಿತ್ತು.

ಇಷ್ಟಾದರೂ, ಜಾತಿ ಅನ್ಯಾಯದ ಪ್ರಶ್ನೆ ಎತ್ತಿದ ಕೂಡಲೇ ಅದನ್ನು ಚಾಪೆ ಕೆಳಗೆ ತೂರಿಸುತ್ತ, ‘ಎಲ್ಲಿದೆ ಜಾತಿ?’ ಎಂದು ಕೇಳುತ್ತ, ಕಣ್ಣು ಮುಚ್ಚಿಕೊಂಡು ಕೂತಿರುವುದು ನಮ್ಮ ಬುದ್ಧಿವಂತ ವರ್ಗದ ಜಾಯಮಾನ. ಇಲ್ಲಿ, ಅರ್ಜಿಗಳಲ್ಲಿ ‘ಜಾತಿ’ ಕಾಲಂ ತೆಗೆದುಹಾಕಿಬಿಟ್ಟರೆ ಸಾಕು, ಜಾತಿವ್ಯವಸ್ಥೆ ಮಾಯವಾಗಿಬಿಡುವುದೆಂಬ ವಕ್ರ ಮುಗ್ಧತೆ ಪ್ರದರ್ಶಿಸುವವರಿದ್ದಾರೆ! ಪೂರ್ಣಚಂದ್ರ ತೇಜಸ್ವಿ ಹೇಳುವಂತೆ ಜಾತಿ ಹೆಸರೆತ್ತಿದ ಕೂಡಲೇ ವಿದ್ಯುತ್ ತಂತಿ ಮುಟ್ಟಿದಂತೆ ಆಡುವುದು ನಮ್ಮಲ್ಲಿ ಸಾಮಾನ್ಯ. ಹಾಗಾಗಿ ಈವರೆಗೆ ತಾವು ಅನುಭವಿಸುತ್ತ ಬಂದ ಸವಲತ್ತುಗಳನ್ನು ಈಗ ಇತರರೊಂದಿಗೆ ಹಂಚಿಕೊಳ್ಳುವ ಪ್ರಸಂಗ ಬಂದ ಕೂಡಲೇ ಮುಂದುವರೆದ ವರ್ಗಗಳು ಅದನ್ನು ಶತಾಯಗತಾಯ ವಿರೋಧಿಸಲು ಮುಂದಾಗುವುದು ಸಹಜವೇ. ಅದರಲ್ಲೂ ಅವಕಾಶಗಳೇ ಸೀಮಿತವಾಗಿರುವ ನಮ್ಮ ಬಡ ಸಮಾಜದಲ್ಲಿ ಹಂಚುಣ್ಣಲು ಯಾರು ತಾನೇ ತಯಾರಿರುತ್ತಾರೆ?

ಹಾಗಾಗಿ ಹಾವನೂರ್ ತಮ್ಮ ಕೆಲಸ ಆರಂಭಿಸುತ್ತಿದ್ದಂತೆಯೇ ಮೊದಲಿಗೇ ಅಧಿಕಾರಿ ವರ್ಗದ ‘ಮನಃಪೂರ್ವಕ ಅಸಹಕಾರ’ವನ್ನು ಎದುರಿಸಬೇಕಾಗಿ ಬಂತು! ಹಾವನೂರ್ ಕೇಳಿದ ಯಾವ ಮಾಹಿತಿಯನ್ನೂ ಸರಿಯಾಗಿ ನೀಡದೆ ಅಧಿಕಾರಿಗಳು ಸತಾಯಿಸತೊಡಗಿದರು. ಏನು ಕೇಳಿದರೂ ಕುಂಟುನೆಪಗಳು ಎದುರಾಗತೊಡಗಿದವು.

ಹೀಗಾಗಿ ಆಯೋಗ ಕಾರ್ಯಾರಂಭ ಮಾಡಿ ನಾಲ್ಕು ತಿಂಗಳಾದರೂ ಒಂದು ಹೆಜ್ಜೆ ಮುಂದಿಡಲಾಗದೆ ರೋಸಿ ಹೋದ ಹಾವನೂರರು, ಮುಖ್ಯಮಂತ್ರಿ ಅರಸರ ಮುಂದೆ ಅಧಿಕಾರಿಗಳ ಅಸಹಕಾರದ ವೈಖರಿ ವಿವರಿಸಿ, ಆಯೋಗಕ್ಕೆ ತನಿಖಾ ಕಾನೂನಿನ್ವಯ ನ್ಯಾಯಾಂಗ ಅಧಿಕಾರ ನೀಡಬೇಕೆಂದು ಕೋರಿದರು.

ಅರಸರ ಜಾತ್ಯತೀತ ಆಶಯ ಎಂದೂ ಕೇವಲ ಸರ್ಕಾರಿ ಕಾರ್ಯಕ್ರಮದ ಮಟ್ಟದಲ್ಲಿ ಉಳಿಯುವ ಕಾಟಾಚಾರದ ಆದರ್ಶವಾಗಿರಲಿಲ್ಲ. ಜಾತ್ಯತೀತತೆ ಅವರ ವೈಯಕ್ತಿಕ ಕಾಳಜಿಯಾಗಿತ್ತು. ಈ ಮಾತಿಗೆ ನಿದರ್ಶನವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ರಾಜ್ಯದ ಬೇರೆ ಯಾವುದೇ ನಗರದಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚುವಾಗ ಒಂದೇ ಜಾತಿಯವರು ಒಂದು ಕಡೆ ಒಟ್ಟಾಗದಂತೆ ಎಚ್ಚರ ವಹಿಸಬೇಕೆಂದು ಅರಸು ನೀಡಿದ ಕಟ್ಟಾಜ್ಞೆಯನ್ನೇ ಗಮನಿಸಬಹುದು.

ಈಗ ಸಮಸ್ಯೆಯ ಸ್ವರೂಪವನ್ನು ಕೂಡಲೇ ಗ್ರಹಿಸಿದ ಅರಸು ತಕ್ಷಣವೇ ಹಾವನೂರರ ಬೇಡಿಕೆ ಅಂಗೀಕರಿಸಿದರು. ಜೊತೆಗೇ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಕಳಿಸಿ, ಆಯೋಗ ಕೇಳುವ ಮಾಹಿತಿಗಳನ್ನು ಒಡನೆಯೇ ಒದಗಿಸಬೇಕೆಂದೂ ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುವುದೆಂದೂ ಎಚ್ಚರಿಸಿದರು. ಅಷ್ಟೇ ಅಲ್ಲ, ಪ್ರವಾಸ ಕಾಲದಲ್ಲೂ ಹಾವನೂರರಿಗೆ ಸಕಲ ಸೌಕರ್ಯ ಒದಗಿಸುವಂತೆ ತಾಕೀತು ಮಾಡಿದರು.

ಹೀಗೆ ತಮಗೆ ಬೇಕಾದ ಕಾನೂನು ಬಲ ಗಳಿಸಿದ ಹಾವನೂರ್ 1973ರ ಆರಂಭದಿಂದ ಸಮರೋಪಾದಿಯಲ್ಲಿ ಕಾರ್ಯಾರಂಭ ಮಾಡಿದರು. ಮೊದಲಿಗೆ, ಜಿಲ್ಲಾ ನೇಮಕಾತಿ ಸಮಿತಿಗಳಲ್ಲಿ ಹಿಂದುಳಿದ ವರ್ಗಗಳ ಜನರನ್ನು ತುಂಬಿ ಮಾಡಿದ ಅವಾಂತರದ ಇನ್ನೊಂದು ರೂಪ ಇದೆಂದು ಹೀಗಳೆಯುತ್ತಿದ್ದ ನಾಡಿನ ಬುದ್ಧಿವಂತರು ಮತ್ತು ಪತ್ರಕರ್ತರು, ಈಗ ಹಾವನೂರ್ ಅಯೋಗದಿಂದಲೂ ಇನ್ನೇನೋ ಅನಾಹುತ ಸಂಭವಿಸಲಿದೆ ಎಂಬ ಅಪಪ್ರಚಾರ ಮಾಡತೊಡಗಿದರು. ಇದರಿಂದಾಗಿ ಒಂದು ಕಡೆ ಮೇಲ್ವರ್ಗಗಳ ಅಸಹನೆ, ಮತ್ತೊಂದು ಕಡೆ ದುರ್ಬಲರಲ್ಲಿ ಚಿಗುರಿದ ಆಶಾಭಾವನೆ- ಒಟ್ಟು ಸಾಮಾಜಿಕ ವಾತಾವರಣವೇ ಕಾವೇರಿತು.

ಈಗ ವಿವಿಧ ಜನವರ್ಗಗಳು ಸಂಘಟಿತರಾಗಿ ಆಯೋಗದ ಮುಂದೆ ಹಾಜರಾಗಿ ತಮ್ಮ ಸ್ಥಿತಿಗತಿಗಳ ಚಿತ್ರಣ ನೀಡಬೇಕಾಗಿತ್ತು. ಹಾಗಾಗಿ ಹಾವನೂರ್ ಆಯೋಗದ ಸಮೀಕ್ಷಾ ಕಾರ್ಯವೇ, ಹಿಂದುಳಿದ ವರ್ಗಗಳ ಜಾಗೃತಿ ಆಂದೋಲನದ ರೂಪ ತಾಳಿತು. ಆಯೋಗ ಮೂರು ವರುಷಗಳ ಅವಧಿಯಲ್ಲಿ 193 ಗ್ರಾಮಗಳು ಮತ್ತು 185 ನಗರ ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡು ಅಧ್ಯಯನ ನಡೆಸಿ 1975ರ ನವೆಂಬರ್ನಲ್ಲಿ ತನ್ನ ವರದಿ ಸಲ್ಲಿಸಿತು. ಆ ಕೂಡಲೇ ರಾಜ್ಯಾದ್ಯಂತ ಕೋಲಾಹಲವೆದ್ದಿತು! ಅದುವರೆಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ತಮ್ಮ ಪಾಲು ಪಡೆದಿದ್ದ ವೀರಶೈವರು ಈಗ ತಮ್ಮನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಟ್ಟಿದ್ದಕ್ಕೆ ಸಿಡಿದೆದ್ದರು. ವರದಿ ಸಲ್ಲಿಸಿದ ಎರಡು ವರ್ಷಗಳವರೆಗೂ ಏನೂ ಕ್ರಮ ಕೈಗೊಳ್ಳಲಾಗದೆ ಕಡೆಗೆ 77ರ ಫೆಬ್ರವರಿಯಲ್ಲಿ ಹಾವನೂರ್ ಆಯೋಗದ ಶಿಫಾರ್ಸುಗಳನ್ನು ಸಾರಾಸಗಟಾಗಿ ಒಪ್ಪಿ ಮೀಸಲಾತಿ ಆಜ್ಞೆಯನ್ನು ಹೊರಡಿಸಲಾಯಿತು.

ಡಿ.ಬಿ. ಚಂದ್ರೇಗೌಡರು ಹೇಳುವಂತೆ ಭಾರತದಲ್ಲಿ ಆವರೆಗೆ ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ಕೆಲಸ ಮಾಡಿದ್ದವು. ಆದರೆ ಅವು ಯಾವುವೂ ತಮ್ಮ ಶಿಫಾರ್ಸುಗಳನ್ನು ಮೀಸಲಾತಿಯಾಗಿ ಪರಿವರ್ತಿಸಿದ ಶಾಸನಗಳಾಗಿರಲಿಲ್ಲ. ಅದನ್ನು ಮೊದಲು ಮಾಡಿದ ರಾಜ್ಯ ಕರ್ನಾಟಕ…

ಹಾವನೂರ್ ಆಯೋಗವು ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿತ್ತು:

1. ಹಿಂದುಳಿದ ಸಮುದಾಯಗಳು
2. ಹಿಂದುಳಿದ ಜಾತಿಗಳು
3. ಹಿಂದುಳಿದ ಬುಡಕಟ್ಟುಗಳು

ಮುಂದಕ್ಕೆ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಕೆಲವೊಂದು ತಿದ್ದುಪಡಿ ಮಾಡಿ ಮುಸ್ಲಿಮರು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ ಶೇಕಡಾ 16ರಂತೆ ನಿಗದಿಪಡಿಸಿದ್ದ ಆ ವರ್ಗಗಳಿಗೆ ಶೇಕಡಾ 20ರ ಮೀಸಲಾತಿ ಕಲ್ಪಿಸಲಾಯಿತು. ಒಕ್ಕಲಿಗರನ್ನೂ ಹಿಂದುಳಿದ ವರ್ಗಕ್ಕೆ ಸೇರಿಸಿ ವಿಶೇಷ ವರ್ಗ ಅಂತ ಮಾಡಿದರು. ವೀರಶೈವರಲ್ಲಿಯೂ ಹಿಂದುಳಿದ ಪಂಗಡಗಳಿಗೆ ವಿಶೇಷ ವರ್ಗವೆಂದು ಶೇಕಡಾ ಐದರ ಮೀಸಲಾತಿ ಕೊಟ್ಟರು. ಹೀಗೆ ಅಂತಿಮವಾಗಿ ನಿಗದಿಯಾದ ಮೀಸಲಾತಿ ಪ್ರಮಾಣ:

1. ಹಿಂದುಳಿದ ಸಮುದಾಯಗಳು ಶೇಕಡಾ 20
2. ಹಿಂದುಳಿದ ಜಾತಿ ಶೇಕಡಾ 10
3. ಹಿಂದುಳಿದ ಬುಡಕಟ್ಟು ಶೇಕಡಾ 5
4. ವಿಶೇಷ ವರ್ಗ ಶೇಕಡಾ 5

ಇದರ ಜೊತೆಗೆ ಹಾವನೂರ್ ಆಯೋಗವು ಹಿಂದುಳಿದ ವರ್ಗಗಳ ಏಳಿಗೆಗಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಪ್ರತ್ಯೇಕವಾದ ಹಣಕಾಸು ನೆರವು ಸಂಸ್ಥೆ, ರಾಜ್ಯಾದ್ಯಂತ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ, ಶಿಷ್ಯವೇತನ, ಶುಲ್ಕ ರಿಯಾಯ್ತಿಗಳು ಮುಂತಾದ ಹಲವಾರು ಕ್ರಮಗಳ ಶಿಫಾರ್ಸು ಮಾಡಿತು.

ಅರಸು ಸರ್ಕಾರ ಈ ಎಲ್ಲ ಶಿಫಾರ್ಸುಗಳನ್ನೂ ಒಪ್ಪಿ ಜಾರಿಗೆ ತಂದಿದ್ದೇ ವಿಶೇಷ. ಈ ವರದಿ ಆಗಲೇ ಹೇಳಿದಂತೆ ರಾಜ್ಯಾದ್ಯಂತ ಅಲ್ಲೋಲಕಲ್ಲೋಲವನ್ನೇ ಉಂಟು ಮಾಡಿತು. ಅರಸು ಲಿಂಗಾಯಿತರು ಮತ್ತು ಒಕ್ಕಲಿಗರನ್ನು ಒಡೆಯಲೆತ್ನಿಸಿದ್ದಾರೆ ಎಂಬ ದೂರುಗಳು ಕೇಳಿಬಂದವು. ಹಾವನೂರ್ ವರದಿ ವಿರುದ್ಧವೇ ಸುಪ್ರೀಂ ಕೋರ್ಟ್ವರೆಗೆ ಕಾನೂನು ಸಮರವನ್ನೂ ನಡೆಸಿದರು. ಆದರೆ ಖುದ್ದು ಸುಪ್ರೀಂ ಕೋರ್ಟ್- ಹಾವನೂರ್ ವರದಿ ಅತ್ಯಂತ ವೈಜ್ಞಾನಿಕವಾಗಿದೆಯೆಂಬ ಮೆಚ್ಚುಗೆಯ ಮಾತುಗಳನ್ನಾಡಿತು.

72ರ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಬಿ.ಎ. ಮೊಯಿದ್ದೀನ್ರಿಗೆ ಅರಸು ನೀಡಿದ ವಿವರಣೆ ಈ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಗೂ ಅನ್ವಯವಾಗುವಂತಿದೆ. ಅದನ್ನೇ ಇನ್ನೊಮ್ಮೆ ಉಲ್ಲೇಖಿಸುವುದಾದರೆ-

ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಕಾಣದಂತಹ ಸಾಮಾಜಿಕ ನ್ಯಾಯ ಮೊದಲ ಬಾರಿಗೆ ಚಾಲ್ತಿಗೆ ಬಂದಿತ್ತು. ಆಗ ಅವರು ಹೇಳಿದ ಮಾತು ನನ್ನ ಕಿವಿಯಲ್ಲಿನ್ನೂ ಇದೆ: ‘ನಾವು ಬಹುಸಂಖ್ಯಾತ ಜಾತಿಗಳ ವಿರುದ್ಧ ಅಲ್ಲ. ಆದರೆ ದೊಡ್ಡ ವರ್ಗ, ತುಳಿತಕ್ಕೆ ಒಳಗಾದ ವರ್ಗ, ಅಧಿಕಾರದ ಹತ್ತಿರಕ್ಕೂ ಬರದ ವರ್ಗ, ಇದಕ್ಕೆ ಅಧಿಕಾರ ಕೊಡುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟಂತೆ’ ಎಂದಿದ್ದರು.

ಅರಸು ಒಮ್ಮೆ ಮಾಜಿ ಸ್ಪೀಕರ್ (ಹಾಲಿ ಶಾಸಕ) ರಮೇಶ್ ಕುಮಾರ್ ಬಳಿ ತಮ್ಮ ಈ ಸಾಹಸಕ್ಕೆ ಸಂವಾದಿಯಾಗಿ ಮಹಾಭಾರತವನ್ನು ಉಲ್ಲೇಖಿಸಿದ್ದರು:

ಮಹಾಭಾರತದಲ್ಲಿ ದುರ್ಯೋಧನ ಕೂಡ ಒಬ್ಬ ಮಹಾನ್ ವ್ಯಕ್ತಿ. ಅವನ ಹೆಸರೂ ನನ್ನ ಥರಾನೇ ‘ಡಿ’ಯಿಂದಲೇ ಆರಂಭವಾಗುತ್ತೆ! ದುರ್ಯೋಧನನಿಗೂ ಕರ್ಣನಿಗೂ ಅತ್ಯಂತ ಆತ್ಮೀಯ ಸ್ನೇಹ. ಪಾಂಡವರೊಂದಿಗೇ ಹುಟ್ಟಿದರೂ, ಪಾಪ ಕರ್ಣನಿಗೆ ‘ಸೂತಪುತ್ರ’ ಅಂತ ಅನ್ಯಾಯವಾಗಿ ಗೂಬೆ ಕೂಡಿಸಿದ್ರು. ಆಗ ಕರ್ಣನಿಗೂ ಒಂದು ರಾಜ್ಯ ಕೊಟ್ಟು ಪಟ್ಟಾಭಿಷೇಕ ಮಾಡಿಸಿ ರಾಜನನ್ನಾಗಿ ಮಾಡಿದ ದುರ್ಯೋಧನ. ಶಾಪಗ್ರಸ್ತನಾಗಿದ್ದ ಕರ್ಣನಿಗೆ ಆ ಕ್ಷಣದಿಂದಲೇ ಸಕಲ ಸಾಮಾಜಿಕ ಗೌರವಗಳೆಲ್ಲ ಸಿಕ್ಕೋದಕ್ಕೆ ಶುರುವಾಯ್ತು. ಹಾಗೇನೇ ನಮ್ಮಲ್ಲಿ ಸಹಸ್ರಾರು ಜನ ಅಗಸರೂ, ಕುಂಬಾರರೂ, ಹಜಾಮರೂ, ಮುಂತಾದ ಜನಗಳೆಲ್ಲ ಆಧುನಿಕ ಭಾರತದ ಕರ್ಣರಿದ್ದಂತೆ. ಅವರಿಗೆಲ್ಲ ನಾನು ಶಾಸಕ, ಮಂತ್ರಿ ಇತ್ಯಾದಿ ಸ್ಥಾನ ಕೊಟ್ಟ ಮೇಲೆ ಈಗೇನಾಗಿದೆ ನೋಡು! ಬ್ರಾಹ್ಮಣರಾದಿಯಾಗಿ, ಲಿಂಗಾಯಿತರೂ ಒಕ್ಕಲಿಗರೂ ಹೀಗೆ ‘ಮೇಲ್ಜಾತಿ ಪಾಂಡವರೆಲ್ಲ’ ಇವರೆದುರು ಸಲಾಮು ಹಾಕಿ ಬಂದು ಕೂಡೋ ಹಾಗಾಗಿದೆ…

ಇದೇ ಕಾರಣಕ್ಕೆ ಅರಸರನ್ನು ಮೇಲ್ಜಾತಿ, ವರ್ಗಗಳ ವಿರೋಧಿ ಎಂದು ಬಣ್ಣಿಸುವವರೂ ಕಡಿಮೆಯಿಲ್ಲ. ಆದರೆ ಅವರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಸಾಧ್ಯವಾಗದೆ ಇದ್ದ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದರಷ್ಟೇ. ದೇವರಾಜ ಅರಸು ಮೂಲತಃ ಎಲ್ಲ ಜನವರ್ಗಗಳನ್ನೂ ಒಟ್ಟಿಗೇ ಕರೆದೊಯ್ಯಬಯಸಿದ್ದರು. ಡಿ.ಬಿ. ಚಂದ್ರೇಗೌಡರು ಅರಸರ ಈ ಜಾತ್ಯತೀತ ಅಂತಃಕರಣಕ್ಕೆ ಸಂವಾದಿಯಾದ ಘಟನೆಯೊಂದನ್ನು ನೆನಪು ಮಾಡಿಕೊಳ್ಳುತ್ತಾರೆ:

ಭೂ ಸುಧಾರಣೆಯ ನಂತರ, ಮೇಲ್ವರ್ಗದ ಶಾನುಭೋಗರು, ಪಟೇಲರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಅದೇ ಸಂದರ್ಭದಲ್ಲಿ ಕೊಪ್ಪದಲ್ಲಿ ನಡೆದ ಸಮಾವೇಶದಲ್ಲಿ ಇಸ್ತ್ರಿ ಬಟ್ಟೆ, ಕೋಟು, ಕಚ್ಚೆ ಪಂಚೆ, ಟೋಪಿ ಹಾಕಿಕೊಂಡು ಐದು ಸಾವಿರ ಮಂದಿ ಪಾಲ್ಗೊಂಡಿದ್ದರು. ನೀಟಾಗಿದ್ದ ಕೋಟು ಅಲ್ಲಲ್ಲಿ ಹರಿದಿದ್ದರಿಂದ ತೇಪೆ ಹಚ್ಚಿಕೊಂಡಿದ್ದರು. ಹರಿದಿದ್ದರೂ ಅದನ್ನು ಬದಲಿಸಲಾಗದ ಬಡತನ ಕಂಡ ಅರಸು ಅವರು, ಸಚಿವ ಸಂಪುಟದಲ್ಲಿನ ವಿರೋಧ ಲೆಕ್ಕಿಸದೆ ಶಾನುಭೋಗ, ಪಟೇಲರಿಗೆ ಮಾಸಾಶನ ನೀಡುವ ನಿರ್ಣಯ ಕೈಗೊಂಡರು. ಬಡತನದ ಸೂಕ್ಷ್ಮತೆಯನ್ನು ಅರಸು ಅರಿತಿದ್ದರು.

ಏನಾದರಾಗಲಿ, ಹಿಂದುಳಿದ ವರ್ಗಗಳ ‘ಮ್ಯಾಗ್ನಾ ಕಾರ್ಟಾ’, ಹಿಂದುಳಿದವರ ‘ಬೈಬಲ್’ ಎಂದೆಲ್ಲ ಕರೆಸಿಕೊಂಡ ಹಾವನೂರ್ ಆಯೋಗದ ಜಾರಿಯಿಂದಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮುನ್ನಡೆಯ ಹೆಬ್ಬಾಗಿಲೇ ತೆರೆಯಿತು. ಇದು ಕೇವಲ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ದೊರೆತ ಪ್ರಾತಿನಿಧ್ಯದ ಮಾತಲ್ಲ. ತಲೆಮಾರುಗಳ ಕಾಲ ಅವಕಾಶಗಳಿಂದ ವಂಚಿತವಾಗಿದ್ದ ಒಂದು ದೊಡ್ಡ ಜನವರ್ಗ ಹೊಸದೊಂದು ಲೋಕಕ್ಕೆ ಮುಕ್ತ ಪ್ರವೇಶ ಪಡೆದ ಹೊಸ ಅರುಣೋದಯದ ಕಥೆ. ಈ ಹೆಜ್ಜೆ ಆ ವರ್ಗಗಳಲ್ಲಿ ಹೊಸ ವಿಶ್ವಾಸ ತರುತ್ತದೆ, ಸುಪ್ತವಾಗಿದ್ದ ಅವರ ಪ್ರತಿಭೆ ಹತ್ತಾರು ದಿಕ್ಕುಗಳಲ್ಲಿ ಅರಳುವ ಅವಕಾಶ ಪಡೆಯುತ್ತದೆ. ಇಲ್ಲಿ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೊಳಿಸಿದ್ದಷ್ಟೇ ಅಲ್ಲ, ಅರಸು ಉದ್ಯೋಗದಲ್ಲಿ ಮುಂಬಡ್ತಿಗಳಿಗೂ, ಯಾರೂ ಆವರೆಗೆ ಊಹೆಯೂ ಮಾಡಿರದಿದ್ದ ರೋಸ್ಟರ್ ಪದ್ಧತಿ ತಂದರು. ಅಂದರೆ ಮೇಲಿನ ಹುದ್ದೆಗೆ ಬಡ್ತಿ ಇರುವುದಿದ್ದರೆ, ಮೊದಲ ಆದ್ಯತೆಯ ಸ್ಥಾನ ದಲಿತರಿಗೆ, ಎರಡನೇ ಸ್ಥಾನ ಹಿಂದುಳಿದ ವರ್ಗದ ಅಭ್ಯರ್ಥಿಗೆ… ಹೀಗೆ. ಇದು ಕಾಲಾಂತರದಿಂದ ಉದ್ಯೋಗದ ಮತ್ತು ಬಡ್ತಿಯ ಅವಕಾಶವೇ ಇರದಿದ್ದ ವರ್ಗಗಳಿಗೆ ಸರದಿ ತಪ್ಪಿಸಿ ಆದ್ಯತೆಯ ಮೇಲೆ ಅವಕಾಶ ನೀಡಿ ಅಷ್ಟೂ ಕಾಲದ ಅನ್ಯಾಯವನ್ನು ಸರಿಪಡಿಸಲು ಉಧ್ಯುಕ್ತವಾಗುತ್ತಿತ್ತು. ಈ ಎಲ್ಲ ಕ್ರಮಗಳ ಮುಂದಿನ ಪರಿಣಾಮಗಳನ್ನು ಕರ್ನಾಟಕ ಕಾಣುತ್ತಲೇ ಬಂದಿದೆ. ಕಲೆ ಸಂಸ್ಕೃತಿಗಳ ಕ್ಷೇತ್ರದಲ್ಲಂತೂ ಶೂದ್ರ ಕ್ರಾಂತಿಯೇ ಸಂಭವಿಸಿದೆ. ಹಾವನೂರ್ ಆಯೋಗ ಸಂಭವಿಸಿದ ಕಾರಣಕ್ಕೇ ರಾಜಕೀಯದಲ್ಲೂ ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂ ಸಿಂಗ್… ಇದೀಗ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಹುದ್ದೆಗೇರಲು ಸಾಧ್ಯವಾಯಿತು ಎಂಬುದನ್ನು ಮರೆಯಬಾರದು. (ಆದರೆ ಕರ್ನಾಟಕದಲ್ಲಿ ದಲಿತನೊಬ್ಬ ಮುಖ್ಯಮಂತ್ರಿ ಆಗುವ ಸ್ಥಿತಿ ಮಾತ್ರ ಇನ್ನೂ ಬರಲಿಲ್ಲ!…)

ಹಾವನೂರ್ ಆಯೋಗದ ವಿಚಾರದಲ್ಲಿ ಅರಸು ಚದುರಂಗರ ಬಳಿ ಹಂಚಿಕೊಂಡ ಮಾತುಗಳಲ್ಲೇ ಅವರು ಅನುಭವಿಸಿದ ಸಾರ್ಥಕ ಭಾವ ಮನದಟ್ಟಾಗುತ್ತದೆ:

ನಾನು ಅಧಿಕಾರದಲ್ಲಿದ್ದು ಬೇರೇನು ಮಾಡಿದೆನೋ ಬಿಟ್ಟೆನೋ ಅದು ಮುಖ್ಯವಲ್ಲ. ಒಂದು ಮಾತಂತೂ ಸತ್ಯ. ಹಾವನೂರ್ ಕಮಿಷನ್ ನೇಮಿಸಿ ಮಾತು ಹೋಗಿದ್ದ ಜನರಿಗೆ ಮಾತು ಬರುವಂತೆ ಮಾಡಿದ್ದೇನೆ. ಇನ್ನು ಮುಂದೆ ಮೇಲ್ಜಾತಿಯವರು ಎಂದೆಂದಿಗೂ ಈ ಹಿಂದುಳಿದ ಜನಾಂಗಗಳನ್ನು ಮೆಟ್ಟಿ ಹಾಕಲು ಸಾಧ್ಯವೇ ಇಲ್ಲ. ಅವರೀಗ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತಿದ್ದಾರೆ. ಎದ್ದು ಬೆನ್ನು ಸೆಟೆಸಿ ನಿಂತಿದ್ದಾರೆ. ಈಗ ಅವರನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಅಧಿಕಾರ ಹೋಗಬಹುದು. ನಾನು ಸಾಯಲೂಬಹುದು. ಆದರೆ ಈ ಒಂದು ಸಣ್ಣ ಕೆಲಸ ನನಗೆ ಅಪಾರ ನೆಮ್ಮದಿಯನ್ನು ತೃಪ್ತಿಯನ್ನು ತಂದುಕೊಟ್ಟಿದೆ…

ಈಗ ಯೋಚಿಸಿದರೆ, ಅರಸು ತಮ್ಮ ಕನಸನ್ನು ನನಸು ಮಾಡುವ ಸಂಕಲ್ಪಕ್ಕೆ ಇಡೀ ಸಮಾಜವನ್ನು ಹೇಗೆ ಒಗ್ಗಿಸಿದರು ಎಂಬುದೇ ಆಶ್ಚರ್ಯಕರ ಸಾಧನೆಯಾಗಿ ಕಾಣುತ್ತದೆ. ಇಂಥ ದೊಡ್ಡ ಸುಧಾರಣೆಗೆ ಸಮಾಜದ ವಿವಿಧ ವರ್ಗಗಳ ಸಮ್ಮತಿ ಪಡೆಯುವುದೇ ಒಂದು ವಿರಾಟ್ ಸವಾಲು. ಅದರ ಮೇಲೆ ಕಾನೂನು ಹೋರಾಟದಲ್ಲೂ ಗೆದ್ದು ಬರುವ ಸವಾಲು.

ಅರಸರ ನಂತರದ ವರ್ಷಗಳಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಶ್ನೆ ಪರಾಮರ್ಶೆಗಾಗಿಯೇ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗಗಳೂ ರಚನೆಯಾಗಿ ಅವೂ ಅತ್ಯಂತ ವೈಜ್ಞಾನಿಕ ಅಧ್ಯಯನ ನಡೆಸಿ ತಮ್ಮ ವರದಿ ಸಲ್ಲಿಸಿದವು. ಆದರೆ ಆ ವರದಿಗಳ ಅನುಷ್ಠಾನದ ದಿಕ್ಕಿನಲ್ಲಿ ಇಲ್ಲಿ ಒಂದೇ ಒಂದು ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ!

ಅತ್ತ ಬಿಹಾರದಲ್ಲಿ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಸಹ ಅರಸು ಮೇಲ್ಪಂಕ್ತಿ ಅನುಸರಿಸಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಹೋಗಿ ಅಧಿಕಾರವನ್ನೇ ಕಳೆದುಕೊಂಡರು. ಇವನ್ನೆಲ್ಲ ನೋಡಿದಾಗ ಅರಸರ ದೂರದೃಷ್ಟಿಯ ಮರ್ಮ ತಿಳಿಯುತ್ತದೆ. ಅವರಿಗೆಂಥ ಛಲವಿತ್ತು ಎಂಬುದು ಮನದಟ್ಟಾಗುತ್ತದೆ. ಹಟ ಬಿಡದೆ ಸಾಧಿಸುವ, ಎಲ್ಲರನ್ನೂ ಒಟ್ಟಿಗೇ ಮುಂದಕ್ಕೆ ಒಯ್ಯುವ ಅವರ ಮುತ್ಸದ್ದಿತನ, ಚಾಣಾಕ್ಷತೆಗಳು ಅರಿವಿಗೆ ಬರುತ್ತವೆ.

ಮುಂದಕ್ಕೆ ಕೇಂದ್ರದಲ್ಲಿಯೂ ಹಿಂದುಳಿದ ವರ್ಗಗಳ ಪ್ರಾತಿನಿಧ್ಯಕ್ಕಾಗಿ ರಚನೆಯಾದ ಮಂಡಲ್ ಆಯೋಗದ ವರದಿಗೆ ಹಾವನೂರ್ ವರದಿಯೇ ಪ್ರೇರಣೆಯಾಯಿತು, ಮಾದರಿಯಾಯಿತು ಎಂಬುದನ್ನೂ ನಾವು ನೆನೆಸಿಕೊಳ್ಳಬೇಕು. ಅಂದರೆ ಅರಸರ ನಡೆ ಇಡೀ ದೇಶದಲ್ಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸಿಕೊಡುವುದಕ್ಕೆ ಮೇಲ್ಪಂಕ್ತಿಯಾದುದನ್ನು, ಪ್ರೇರಣೆಯಾದುದನ್ನು ಗುರುತಿಸಲೇಬೇಕು.

ಅರಸು ಸರ್ಕಾರದ- ಇಷ್ಟೇ ಮಹತ್ವದ ಮತ್ತೊಂದು ಕ್ರಾಂತಿಕಾರಿ ಸಾಧನೆಯೆಂದರೆ ಭೂಸುಧಾರಣೆ. ಇದರ ದರ್ಶನವನ್ನು ಮುಂದಿನ ಅಧ್ಯಾಯಗಳಲ್ಲಿ ಮಾಡೋಣ.

ಎಚ್.ಡಿ. ದೇವೇಗೌಡರು 1962ರಿಂದಲೇ ರಾಜ್ಯ ವಿಧಾನಸಭೆಯ ಸದಸ್ಯರಾಗಿದ್ದರೂ, ಅವರು ಸಮರ್ಥ ವಿರೋಧಿ ನಾಯಕನಾಗಿ ಬಿಂಬಿತವಾಗಿದ್ದು ದೇವರಾಜ ಅರಸು ಮುಖ್ಯಮಂತ್ರಿತ್ವದ ಕಾಲದಲ್ಲೇ. ಆರಂಭದಲ್ಲಿ ಅಷ್ಟೇನೂ ರಾಜಕೀಯ ವರ್ಚಸ್ಸಿರದ ಅರಸು ಹೇಗೆ ಮುಖ್ಯಮಂತ್ರಿ ಹುದ್ದೆಗೇರಿದರೋ, ಅದೇ ರೀತಿ ಸಂಸ್ಥಾ ಕಾಂಗ್ರೆಸ್ಸಿಗರೆಲ್ಲ ಇಂದಿರಾ ಕಾಂಗ್ರೆಸ್ಸಿಗೆ ವಲಸೆ ಹೋದ ಮೇಲೆ ಗೌಡರೇ ವಿರೋಧಿ ನಾಯಕನ ಸ್ಥಾನಕ್ಕೇರುವುದು ಅನಿವಾರ್ಯವಾಗಿತ್ತು. ಹೊಳೆನರಸೀಪುರದ ಸ್ವತಂತ್ರ ಶಾಸಕರಾಗಿದ್ದ ದೇವೇಗೌಡರನ್ನು 1969ರಲ್ಲಿ ಪಕ್ಷ ವಿಭಜನೆಯಾದಾಗ ವೀರೇಂದ್ರ ಪಾಟೀಲರೇ ಸಂಸ್ಥಾ ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಂಡಿದ್ದರು. ತಮ್ಮ ಆಯ್ಕೆ ಬಗ್ಗೆ ದೇವೇಗೌಡರು ಈಗ ನೆನೆಸಿಕೊಂಡಿದ್ದು:

ಆಗಿನ ಸ್ಥಿತಿ ಹೇಗಿತ್ತು ಅಂದರೆ, ನಮ್ಮ ಪಕ್ಷಕ್ಕೆ ನಾಯಕರೇ ಇಲ್ಲದಂತಾಗಿತ್ತು. ಆಗ ನಮ್ಮ ಪಕ್ಷದ ಅಧ್ಯಕ್ಷರಾದ ವೀರೇಂದ್ರ ಪಾಟೀಲರು ನನ್ನನ್ನು ಕರೆಸಿದರು. ಸೋತು ಸುಸ್ತಾಗಿದ್ದರು. ಉತ್ಸಾಹ ಬತ್ತಿಹೋಗಿತ್ತು. ಆ ಸಭೆಯಲ್ಲಿ ಮಂಡ್ಯದ ಶಂಕರಗೌಡ, ಹಾಸನದ ಸಿದ್ದನಂಜಪ್ಪರಂತಹ ಹಿರಿಯರಿದ್ದರೂ, ಯಾರೂ ಸಿದ್ಧರಿಲ್ಲ. ಕೊನೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ನನ್ನ ಹೆಗಲಿಗೆ ಬಿತ್ತು. ನಾನು ಹೊಣೆಗಾರಿಕೆ ಹೊರಲು ಸಿದ್ಧ ಎಂದೆ. ಕಾಸಿಲ್ಲ, ಕರಿಮಣಿ ಇಲ್ಲ, ವಿರೋಧ ಪಕ್ಷದ ನಾಯಕ! ನನಗೆ ನಾನೇ ಗೇಲಿ ಮಾಡಿಕೊಳ್ಳುವಂತಹ ಸ್ಥಿತಿ ಅದು.

ಇದೇ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡರು ಅರಸು ಸರ್ಕಾರದ ಅಕೃತ್ಯಗಳ ಫೈಲ್ಗಳನ್ನು ಸದನದಲ್ಲಿ ಒಂದೊಂದಾಗಿ ಬಯಲಿಗೆಳೆಯತೊಡಗಿದರು. ಸಮಾಜವಾದಿ ಸಿಡಿಲಮರಿಗಳಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಕೋಣಂದೂರು ಲಿಂಗಪ್ಪ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಸದಾ ಗದಾಪ್ರಹಾರದಲ್ಲಿ ನಿರತರಾಗಿರುತ್ತಿದ್ದರು. ಅತ್ತ ಪರಿಷತ್ತಿನಲ್ಲೂ ರಾಮಕೃಷ್ಣ ಹೆಗಡೆ ಸರ್ಕಾರದ ಹುಳುಕನ್ನು ಎತ್ತಿ ಎತ್ತಿ ಹಿಡಿಯುತ್ತಿದ್ದರು. ಆಗ ಹೆಗಡೆಯವರೊಂದಿಗೆ ಭಾರತೀಯ ಜನಸಂಘದಲ್ಲಿದ್ದ ಎ.ಕೆ. ಸುಬ್ಬಯ್ಯ ಕೂಡ ತಮ್ಮ ವಾಗ್ದಾಳಿಗೆ ಹೆಸರಾಗಿದ್ದರು. ಅಂತೂ ಎರಡೂ ಸದನಗಳಲ್ಲಿ ಸಮರ್ಥ ವಿರೋಧಿಗಳು ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು; ಪತ್ರಿಕೆಗಳೂ ಅರಸು ವಿರುದ್ಧವೇ ಟೊಂಕ ಕಟ್ಟಿ ನಿಂತಿದ್ದವು. ಅರಸು ಶೈಲಿಯ ರಾಜಕಾರಣ ಎಲ್ಲೆಡೆ ಶತ್ರುಗಳನ್ನು ಸೃಷ್ಟಿಸಿಕೊಳ್ಳುವುದು ಸಹಜವಾಗಿತ್ತು.

ಅರಸರ ಮಹತ್ಸಾಧನೆಗಳೆಲ್ಲವೂ ನಿಂತ ನೀರಾಗಿದ್ದ ಸಮಾಜವನ್ನು ಕಲಕಿ, ಜಡತೆಯನ್ನು ತೊಡೆದು ಹೊಸ ಸಾಮರಸ್ಯ, ಹೊಸ ಸಮತೋಲನ ರೂಢಿಸುವ ಕ್ರಮಗಳಾಗಿದ್ದವು. ಇದು ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ಗುತ್ತಿಗೆ ಹಿಡಿದಿದ್ದ ವರ್ಗಗಳನ್ನು ವಿಚಲಿತಗೊಳಿಸಿದ್ದು ಸಹಜವಾಗಿತ್ತು. ಹಾಗಾಗಿ ಅವರೆಲ್ಲ ಅರಸರ ವಿರುದ್ಧ ಸಿಡಿದೆದ್ದರು ಮತ್ತು ತಮ್ಮ ಬಂಡಾಯದಲ್ಲಿ ಒಗ್ಗಟ್ಟಾದರು. ಪರಿಣಾಮ ‘ಪರಿವರ್ತನೆಯ ಹರಿಕಾರ’ ಅರಸು ಒಟ್ಟಿಗೇ ಸಮಾಜದ ಪ್ರಬಲ ಕೋಮುಗಳು, ಅಧಿಕಾರಶಾಹಿ, ಪತ್ರಿಕೆಗಳು- ಇವರೆಲ್ಲರನ್ನೂ ಸಾರಾಸಗಟಾಗಿ ಎದುರು ಹಾಕಿಕೊಳ್ಳಬೇಕಾಯಿತು. ಅತ್ತ ಅಧಿಕಾರಿಗಳು ಅರಸರ ಹುಳುಕುಗಳನ್ನು ಬಯಲು ಮಾಡುವ ಫೈಲುಗಳನ್ನು ಒಳಗಿಂದೊಳಗೇ ವಿರೋಧಿ ನಾಯಕ ದೇವೇಗೌಡರಿಗೆ ಒದಗಿಸುವುದು; ತಿಳಿದೋ ತಿಳಿಯದೆಯೋ ತಮ್ಮ ವರ್ಗ ಹಿತಾಸಕ್ತಿಗೆ ಬದ್ಧರಾದ ದೇವೇಗೌಡರು ಅವನ್ನೆತ್ತಿಕೊಂಡು ಸದನದಲ್ಲಿ ಗುಡುಗುವುದು, ಇತ್ತ ‘ಕೆಳ ಜಾತಿಗಳನ್ನು ಎತ್ತಿ ಕಟ್ಟುತ್ತಿದ್ದ’ ಅರಸರನ್ನು ಹಣಿಯಲು ಸಜ್ಜಾದ ಪತ್ರಿಕೆಗಳು ಆ ಹಗರಣಗಳಷ್ಟನ್ನೇ ಎತ್ತಿ ಎತ್ತಿ ಬಿಂಬಿಸುವುದು- ಈ ಪ್ರತಿಕ್ರಿಯಾ ಚಕ್ರವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಅದಕ್ಕೇ ದೇವೇಗೌಡರು ಒಮ್ಮಿಂದೊಮ್ಮೆಲೇ ‘ಉಜ್ವಲ’ ವಿರೋಧಿ ನಾಯಕರಾಗಿ ಮಿಂಚಲು ಸಾಧ್ಯವಾದದ್ದು. ಅವರಿಗೆ ತಾರಾಪಟ್ಟ ತಂದು ಕೊಟ್ಟ ‘ವಿಶಿಷ್ಟ ರಾಜಕೀಯ ಸನ್ನಿವೇಶ’ ಇದೇ. ಅರಸರ ನಂತರ ಬಂದ ಗುಂಡೂರಾಯರು ತಮ್ಮ ದುರಾಡಳಿತದಿಂದಲೇ ಖ್ಯಾತರಾದವರು. ಅವರೇ ಹೇಳಿಕೊಂಡಂತೆ ‘ಇಂದಿರಾ ಕೃಪಾಪೋಷಿತ ನಾಟಕ ಮಂಡಳಿ’ಯ ಸದಸ್ಯರು! ನಾಡಿನ ಜನತೆ ಕಾಂಗ್ರೆಸ್ಸನ್ನು ಒಂದೇ ಏಟಿಗೆ ತಿರಸ್ಕರಿಸಲು ಕಾರಣರಾದವರು. ಅವರ ಆಡಳಿತ ಕಾಲದಲ್ಲೂ ದೇವೇಗೌಡರೇ ಸದನದಲ್ಲಿ ವಿರೋಧಿ ನಾಯಕರು. ಮತ್ತೆ ಆಗೇಕೆ ಗೌಡರ ಪ್ರತಾಪ ಉಡುಗಿಹೋಗಿತ್ತು? ಆಗೇಕೆ ಅವರ ಸೊಲ್ಲು ಹೊರಡಲಿಲ್ಲ?!…

ಇರಲಿ. ಇದೇ ಅವಧಿಯಲ್ಲಿ ಅರಸರ ಸಂಪುಟದಲ್ಲಿ ಸಚಿವರಾಗಿದ್ದ ಬಿ. ಬಸವಲಿಂಗಪ್ಪ, ವ್ಯಕ್ತಿಗಳ ಯಜಮಾನಿಕೆಯಲ್ಲಿದ್ದ ಕೆಲವು ಪ್ರಮುಖ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುವ ಮಾತನಾಡಿ ‘ಧರ್ಮವಿರೋಧಿ’ ಎಂಬ ಹಣೆಪಟ್ಟಿ ಪಡೆದರು. ಈ ಕ್ರಮಕ್ಕೆ ಎಲ್ಲ ಕಡೆ ವ್ಯಾಪಕ ವಿರೋಧ ಎದುರಾದಾಗ ಚನ್ನಬಸಪ್ಪನವರಂಥ ಸಚಿವರು ‘ಇದು ಬಸವಲಿಂಗಪ್ಪನವರ ವೈಯಕ್ತಿಕ ಅಭಿಪ್ರಾಯ’ ಎಂದು ಆತುರದ ಸ್ಪಷ್ಟೀಕರಣ ಕೊಟ್ಟರು. ಸ್ವತಃ ದೇವರಾಜ ಅರಸು ‘ಅದೊಂದು ಯೋಚಿಸಬೇಕಾದ ವಿಚಾರ’ ಎಂಬ ಅಸ್ಪಷ್ಟ ಉತ್ತರ ಕೊಟ್ಟು ಜಾರಿಕೊಂಡರು.

ಅಧಿಕಾರದ ಮೊದಲ ವರ್ಷ ಹೀಗೆ ಯಾವ ಎದ್ದು ಕಾಣುವ ಸಾಧನೆ ಮಾಡದೆ ಹಗರಣಗಳ ಗದ್ದಲದಲ್ಲೇ ಕಳೆದುಹೋದರೂ ಅರಸು ಸರ್ಕಾರ ಸದ್ದಿಲ್ಲದೆ ಯಾರ ಕಣ್ಣಿಗೂ ಬೀಳದ ಒಂದು ಮಹತ್ಸಾಧನೆ ಮಾಡಿತ್ತು. (ಅದೇ ಸಮಯದಲ್ಲಿ ಹಾವನೂರ್ ಆಯೋಗ ರಚನೆಯಾಗಿದ್ದರೂ ಪತ್ರಕರ್ತರ ದೃಷ್ಟಿಯಲ್ಲಿ ಅದು ವಿವಾದಾಸ್ಪದ ಸಂಗತಿಯಾಗಿತ್ತು!)

ಅರಸು ಸರ್ಕಾರ ಆ ವರ್ಷ ಮೌನವಾಗಿ 73 ಕೋಟಿ ರೂಪಾಯಿಗಳ ಓವರ್ಡ್ರಾಫ್ಟ್ ಮರುಪಾವತಿ ಮಾಡಿತ್ತು!

ಹಿಂದಿನ ವರ್ಷ ವೀರೇಂದ್ರ ಪಾಟೀಲರ ಸರ್ಕಾರ ಪತನವಾಗುವ ಸಮಯದಲ್ಲಿ ಈ ಓವರ್ಡ್ರಾಫ್ಟ್ ಪ್ರಮಾಣ 62 ಕೋಟಿ ರೂಪಾಯಿಗಳಷ್ಟಿತ್ತು. ಈ ಹೊರೆ ಹೊರೆಸಿದ್ದವರು- ‘ಚತುರ’ ಹಣಕಾಸು ಮಂತ್ರಿ ರಾಮಕೃಷ್ಣ ಹೆಗಡೆ. ನಂತರದ ರಾಜ್ಯಪಾಲ ಧರ್ಮವೀರರ ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಓವರ್ಡ್ರಾಫ್ಟ್ 73 ಕೋಟಿಗೇರಿತ್ತು.
ಅರಸು ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಎಂ.ವೈ. ಘೋರ್ಪಡೆ ಅಸಾಧಾರಣ ಆರ್ಥಿಕ ಶಿಸ್ತು ತಂದು ಒಂದೇ ವರ್ಷದಲ್ಲಿ- ಮತ್ತೆ ಬಜೆಟ್ ಮಂಡನೆಯಾಗುವಷ್ಟರಲ್ಲಿ- ಅಷ್ಟೂ ಓವರ್ಡ್ರಾಫ್ಟ್ ತೀರಿಸಿದ್ದರು. ಆಶ್ಚರ್ಯವೆಂದರೆ ಈ ಸಾಧನೆ ಪತ್ರಿಕೆಗಳೂ ಸೇರಿದಂತೆ ಯಾರ ಗಮನವನ್ನೂ ಸೆಳೆಯಲಿಲ್ಲ!

ಮುಂದಿನ ವರ್ಷ 1973- ಒಂದು ಬಗೆಯಲ್ಲಿ ಮುಖ್ಯಮಂತ್ರಿಯಾಗಿ ಅರಸು ವ್ಯಕ್ತಿತ್ವ ವಿಕಸನಗೊಂಡ ವರ್ಷವೆನ್ನಬಹುದು. ಕಳೆದ ವರ್ಷವಿಡೀ ವಿರೋಧಿಗಳ ವಾಗ್ದಾಳಿಯಿಂದ ಹಣ್ಣ್ಣಾಗಿದ್ದ ಅರಸು ಈಗ ಹೆಚ್ಚು ಪ್ರಬುದ್ಧವಾಗಿ ತಾಳ್ಮೆಯಿಂದ ಎಲ್ಲರನ್ನೂ ಎದುರಿಸುವಂತೆ ಕಂಡರು. ಸದನದಲ್ಲಿ ವಿರೋಧಿ ಟೀಕೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳತೊಡಗಿದರು.

73ರ ಬಜೆಟ್ನಲ್ಲಿ ಅರಸು ಸರ್ಕಾರ ಸ್ವಂತ ಜಾಗವಾಗಲೀ, ಮನೆಯಾಗಲೀ ಇರದ ಕೃಷಿ ಕೂಲಿಕಾರರು ಮತ್ತು ಕುಶಲಕರ್ಮಿಗಳಿಗೆ ಹಳ್ಳಿಗಾಡಿನಲ್ಲಿ ಉಚಿತವಾಗಿ ಐದು ಸೆಂಟುಗಳ ನಿವೇಶನ ಹಂಚುವ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಪ್ರಕಟಿಸಿತು. 1972ರಲ್ಲಿ ಕೇಂದ್ರ ಸಚಿವರಾಗಿದ್ದ ಐ.ಕೆ. ಗುಜ್ರಾಲ್ ರೂಪಿಸಿದ್ದ ಈ ಯೋಜನೆಯನ್ನು ಅದುವರೆಗೆ ಯಾರೂ ಎಲ್ಲೂ ಜಾರಿಗೆ ತರುವ ಗೋಜಿಗೆ ಹೋಗಿರಲಿಲ್ಲ. ಮೂಲತಃ ಸಮಾಜವಾದಿ ಚಿಂತನೆಯ ಈ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಗೊಳ್ಳತೊಡಗಿದ್ದು 1974ರ ಮಳೆಗಾಲದಲ್ಲಿ. ಅಲ್ಲಿಂದ ಎರಡೇ ವರ್ಷಗಳಲ್ಲಿ ಹತ್ತು ಲಕ್ಷ ವಸತಿಹೀನ ಕುಟುಂಬಗಳಿಗೆ ನಿವೇಶನ ಹಂಚಲಾಯಿತು. ಮತ್ತು ಈ ಯೋಜನೆಯ ಯಶಸ್ಸು, ಅರಸು ತಮ್ಮ ಆಡಳಿತ ಯಂತ್ರಕ್ಕೆ ಸಾಣೆ ಹಿಡಿದು ಚುರುಕುಗೊಳಿಸಿದ ಪರಿಗೂ ನಿದರ್ಶನವಾಯಿತು.

73ರ ಬಜೆಟ್ ಅಧಿವೇಶನದ ಕೊನೆಯಲ್ಲಿ ಅರಸು ಒಂದು ಐತಿಹಾಸಿಕ ನಿರ್ಧಾರ ಕೈಗೊಂಡರು. ಏಕೀಕರಣವಾದ ಮೇಲೂ ವಿಶಾಲ ಮೈಸೂರು ಎಂದು ಕರೆಸಿಕೊಳ್ಳುತ್ತಿದ್ದ ರಾಜ್ಯಕ್ಕೆ ದೇವರಾಜ ಅರಸು ‘ಕರ್ನಾಟಕ’ ಎಂದು ನಾಮಕರಣ ಮಾಡುವ ಅಧಿಕೃತ ನಿರ್ಣಯವನ್ನು ವಿಧಾನಮಂಡಲದಲ್ಲಿ ಮಂಡಿಸಿದರು.

ಹಾಗೆ ನೋಡಿದರೆ ಅರಸು- ರಾಜ್ಯಕ್ಕೆ ಮೈಸೂರು ಎಂಬ ಹೆಸರೇ ಇರಲಿ ಎಂದು ಆಸೆಪಟ್ಟವರು. ಕರ್ನಾಟಕ ಎಂಬ ಹೆಸರಿನ ಬಗ್ಗೆ ಅವರಿಗೇನೂ ಅಂಥ ಒಲವಿರಲಿಲ್ಲ. ಅರಸು ಮನೆತನಕ್ಕೆ ಸೇರಿದ ಮುಖ್ಯಮಂತ್ರಿಗಳು ಮೈಸೂರು ಎಂಬ ಹೆಸರಿನ ಬಗ್ಗೆಯೇ ಒಲವು ತೋರುವುದು ಸಹಜ ಎಂದು ಎಲ್ಲರ ಭಾವನೆಯಾಗಿತ್ತು. ಆದರೆ ಬಹುಜನರ ಆಶಯವನ್ನು ಮನ್ನಿಸಿ ಅರಸು ಈ ಐತಿಹಾಸಿಕ ಕ್ರಮಕ್ಕೆ ಮುಂದಾದರು. ರಾಜ್ಯದ ಜನಕ್ಕೆ ಭಾವನಾತ್ಮಕವಾಗಿ ಮುಖ್ಯವಾಗಿದ್ದ ಈ ನಿರ್ಧಾರದ ಮೂಲಕ ಅರಸು ನಾಡಿನ ಜನಸ್ತೋಮದ ಒಲವು ಗೆದ್ದುಕೊಂಡು ಜನಪ್ರಿಯತೆಯ ಅಲೆ ಮೇಲೆ ತೇಲಿದರು. ಮಹಾಮುತ್ಸದ್ದಿ ಎಂಬ ಮೆಚ್ಚುಗೆಗೆ ಪಾತ್ರರಾದರು. ಇದು ಅವರ ನಡೆನುಡಿಗಳಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.

ಈ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಅರಸು ದೊಡ್ಡ ಸವಾಲೊಂದನ್ನು ಎದುರಿಸಬೇಕಾಯಿತು.

ಆ ವರ್ಷದ ಮಳೆಗಾಲದಲ್ಲಿ ಕರಾವಳಿ ಕರ್ನಾಟಕ ಶತಮಾನದ ಎರಡನೇ ದೊಡ್ಡ ನೆರೆ ಹಾವಳಿಗೀಡಾದರೆ ಬಯಲುಸೀಮೆ ಭೀಕರ ಬರಗಾಲ ಎದುರಿಸಿತು. ಕರಾವಳಿಯಲ್ಲಿ ನದಿ ದಂಡೆಯಲ್ಲಿ ವಾಸವಾಗಿದ್ದ ಸಾವಿರಾರು ಕುಟುಂಬಗಳು ನಿರ್ವಸಿತವಾದರೆ, ರಾಜ್ಯದ 19 ಜಿಲ್ಲೆಗಳ ಪೈಕಿ 14 ಜಿಲ್ಲೆಗಳು ಹನಿ ಮಳೆ ಕಾಣದೆ ಕ್ಷಾಮಪೀಡಿತವಾದವು. ಅದರಲ್ಲೂ ಹಳೇ ಮೈಸೂರು ಪ್ರಾಂತ್ಯದ ಕೋಲಾರ, ತುಮಕೂರು, ಚಿತ್ರದುರ್ಗಗಳೂ ಸೇರಿದಂತೆ ಉತ್ತರ ಕರ್ನಾಟಕದ ಯಾವ ಜಿಲ್ಲೆಯಲ್ಲೂ ಖಾರಿಫ್ ಬೆಳೆ ಕೈ ಹತ್ತಲಿಲ್ಲ. ಬಿಜಾಪುರ, ಗುಲ್ಬರ್ಗ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಜನ ಕೈಗೆ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ಕಂಗಾಲಾಗಿ ಗುಳೆ ಹೋಗಲಾರಂಭಿಸಿದರು.

ಸೆಪ್ಟೆಂಬರ್ ಅಕ್ಟೋಬರ್ ಹೊತ್ತಿಗೆ ಹಿಂಗಾರು ಮಳೆಯೂ ಸಂಪೂರ್ಣ ಕೈ ಕೊಟ್ಟು ಪರಿಸ್ಥಿತಿ ಇನ್ನೂ ಬಿಗಡಾಯಿಸಿತು.

ಸರ್ಕಾರ ತಡ ಮಾಡದೆ ಬರ ಪರಿಹಾರ ಕಾರ್ಯಗಳನ್ನು ಕೈಗೊಂಡಿತು. ವರ್ಷಕ್ಕೆ ಎಲ್ಲ ದುಡಿಯುವ ಕೈಗಳಿಗೂ ಕನಿಷ್ಠ ನೂರು ದಿನಗಳ ಉದ್ಯೋಗ ಕಲ್ಪಿಸುವ ‘ಕೂಲಿಗಾಗಿ ಕಾಳು’ ಯೋಜನೆ ತ್ವರಿತವಾಗಿ ಜಾರಿಯಾಯಿತು. ಆ ಕಾರ್ಯಗಳ ಉಸ್ತುವಾರಿ ವಹಿಸಿದವರು ಅರ್ಥ ಮಂತ್ರಿ ಎಂ.ವೈ. ಘೋರ್ಪಡೆ. ನಮ್ಮ ದುರದೃಷ್ಟ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪದವೀಧರರಾದ ಘೋರ್ಪಡೆಯವರ ಪಾಂಡಿತ್ಯವಾಗಲೀ, ಅವರ ದಕ್ಷ ಆಡಳಿತದ ವೈಖರಿಯಾಗಲೀ ಇಲ್ಲಿ ಎಂದೂ ಸರಿಯಾಗಿ ಬೆಳಕಿಗೆ ಬರಲೇ ಇಲ್ಲ. ಅವರ ರಾಜಮನೆತನದ ಕಡೆಗಷ್ಟೇ ಮಾಧ್ಯಮಗಳ ಗಮನವಿತ್ತೇ ಹೊರತು ಅವರೊಬ್ಬ ಪುರೋಗಾಮಿ ಅರ್ಥಶಾಸ್ತ್ರಜ್ಞ ಎಂಬ ಕಡೆಗಲ್ಲ. ಅರಸು ಆಡಳಿತದ ಎಲ್ಲ ಯಶಸ್ಸಿನ ಹಿಂದೆ ಘೋರ್ಪಡೆಯವರಿದ್ದರು, ಅರಸು ಕನಸುಗಳಿಗೆ ಆರ್ಥಿಕ ಚಾಲನೆ ಕೊಟ್ಟವರೇ ಇವರು ಎಂಬುದನ್ನು ಪತ್ರಿಕೆಗಳು ಗಮನಿಸಲೇ ಇಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭಾರತದ ಅಭಿವೃದ್ಧಿ ಭೂಪಟದಲ್ಲಿ ಹನ್ನೊಂದನೆಯ ಸ್ಥಾನದಲ್ಲಿದ್ದ ಕರ್ನಾಟಕವನ್ನು ಐದನೇ ಸ್ಥಾನಕ್ಕೆ ತಂದು ನಿಲ್ಲಿಸಿದವರು ಘೋರ್ಪಡೆ…

ಅಂತೂ ಹಸಿದ ಹೊಟ್ಟೆಗಳಿಗೆ ಅನ್ನ ಮತ್ತು ಅಸಹಾಯಕ ಕೈಗಳಿಗೆ ದುಡಿಮೆಯ ಅವಕಾಶ ಕಲ್ಪಿಸುವುದು ಆ ದಿನಗಳಲ್ಲಿ ಅರಸು ಸರ್ಕಾರದ ಧ್ಯೇಯವಾಗಿತ್ತು. ಬರ ಪರಿಹಾರವೆಂಬುದು ಸಾಮಾನ್ಯವಾಗಿ ಆರ್ಥಿಕ ಸ್ವೇಚ್ಛಾಚಾರಕ್ಕೆ ವಿಪುಲ ಅವಕಾಶ ಒದಗಿಸುವ ಒಂದು ಸಂದರ್ಭ. ಘೋರ್ಪಡೆ ಅಲ್ಲಿಯೂ ಕಠಿಣ ಆರ್ಥಿಕ ಶಿಸ್ತು ಸಾಧಿಸಿದರು. ಅರಸು ಸ್ವತಃ ಬರಪೀಡಿತ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ವ್ಯಾಪಕ ಪ್ರವಾಸ ಕೈಗೊಂಡು ನೇರವಾಗಿ ಜನಸಂಪರ್ಕ ಸಾಧಿಸಿದರು. ಪರಿಹಾರ ಕಾಮಗಾರಿಗಳು ನಡೆಯುವ ತಾಣಗಳನ್ನು ಖುದ್ದು ಕಂಡ ಅರಸು ಕೂಲಿಯೊಂದಿಗೆ ಜೋಳ ಮತ್ತು ಗೋಧಿ ಕೂಡ ಕೊಡಬೇಕೆಂದು ಸ್ಥಳದಲ್ಲೇ ಆಜ್ಞೆ ಮಾಡಿzರು. ಬರಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಎಲ್ಲ ಕೈಗಳಿಗೂ ಉದ್ಯೋಗ ಸಿಗಬೇಕೆಂದು ಕಟ್ಟಾಜ್ಞೆ ಮಾಡಿದರು. ಎಲ್ಲರಿಗೂ ತಿನ್ನಲು ಕಾಳು, ಕೈಯಲ್ಲಿ ನಾಲ್ಕು ಕಾಸು ಸಿಕ್ಕುವಂತಾಗಿ ಪರಿಸ್ಥಿತಿ ನಿಧಾನವಾಗಿ ತಹಬಂದಿಗೆ ಬರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಯಾರೂ ಕಂಡು ಕೇಳರಿಯದ ‘ಆಹಾರ ದಂಗೆ’ ಸಂಭವಿಸಿತು.

ಅಥಣಿ ತಾಲೂಕಿನ ಉಗರ್ಬುರ್ದ್ನಲ್ಲಿ 73ರ ಮೇ 7ರ ರಾತ್ರಿ ವಿದ್ಯಾವಂತ ನಿರುದ್ಯೋಗಿಗಳು ಅಂಗಡಿಗಳ ಬೀಗ ಒಡೆದು 125 ಮೂಟೆ ಅಕ್ಕಿ, 62 ಮೂಟೆ ಜೋಳ ಮತ್ತು ಆರು ಮೂಟೆ ಮೆಕ್ಕೆ ಜೋಳ ಲೂಟಿ ಮಾಡಿದರು.

ಇದನ್ನು ಅರಸು ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ಮಾತ್ರ ನೋಡಿ ತಳ್ಳಿ ಹಾಕಲಿಲ್ಲ, ಸಮಸ್ಯೆಯ ಆಳದ ಗಂಭೀರತೆಯನ್ನು ಮನಗಂಡು ಕಾರ್ಯೋನ್ಮುಖರಾದರು. ಮೊದಲಿಗೆ ಅಧಿಕಾರದ ದಂಡವನ್ನು ಅಡ್ಡಾದಿಡ್ಡಿ ಬಳಸದೆ, ಇನ್ನೊಮ್ಮೆ ಇಂಥ ಘಟನೆ ಸಂಭವಿಸಿದರೆ ಕಂಡಲ್ಲಿ ಗುಂಡು ಆಜ್ಞೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಮತ್ತೆ ಮನೆ ಮನೆಗೆ ಬೇಳೆ ಕಾಳು ಆಹಾರ ಧಾನ್ಯ ಪೂರೈಸಲು ಕ್ರಮ ಕೈಗೊಂಡರು.

ಈ ದಂಗೆಗಿಂತ ಹೆಚ್ಚಾಗಿ, ಇದರಲ್ಲಿ ಪಾಲ್ಗೊಂಡಿದ್ದವರು ವಿದ್ಯಾವಂತ ಯುವಕರು ಎಂಬುದು ಅರಸು ಅವರನ್ನು ಕಳವಳಕ್ಕೀಡು ಮಾಡಿತು. ಈ ಬಗ್ಗೆ ಅವರು ನಡೆಸಿದ ಚಿಂತನೆಯೇ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ 50 ರೂಪಾಯಿ ಸ್ಟೈಪೆಂಡ್ ನೀಡುವ ಯೋಜನೆ ಜಾರಿಗೆ ತರಲು ಕಾರಣವಾಯಿತು. ಈ ಯೋಜನೆ ಎಷ್ಟು ವ್ಯಾಪಕವಾಗಿ ಜಾರಿಗೆ ಬಂತೆಂದರೆ 1975- 76ರ ವೇಳೆಗೆ ರಾಜ್ಯದಲ್ಲಿ ಸುಮಾರು ಐವತ್ತು ಸಾವಿರ ಯುವಕ ಯುವತಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ಅಷ್ಟೇ ಅಲ್ಲ, ಅರಸು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 55 ವರ್ಷಕ್ಕಿಳಿಸಿ, ಲಕ್ಷಾಂತರ ಸರ್ಕಾರಿ ಉದ್ಯೋಗಗಳು ಬೇಗ ಬೇಗ ಸೃಷ್ಟಿಯಾಗುವಂತೆಯೂ ಕ್ರಮ ಕೈಗೊಂಡರು.
ಉರಿವ ಮನೆಯಲ್ಲಿ ಗಳು ಹಿರಿಯವ ದುರ್ಬುದ್ಧಿ ಎಲ್ಲ ಕಾಲದಲ್ಲೂ ಇದ್ದಿದ್ದೇ. ಅದಕ್ಕೇ ಸರ್ಕಾರ ಅಂಥ ಸಮಯಸಾಧಕರ ವಿರುದ್ಧ ಹೆಚ್ಚಿನ ಎಚ್ಚರ ವಹಿಸಿತು. ಆಗಲೂ ಲಾಭಬಡುಕ ವರ್ತಕರು ಆಹಾರ ಕಳ್ಳ ದಾಸ್ತಾನು ಮಾಡುವುದನ್ನು ಅಥವಾ ಪಡಿತರ ಧಾನ್ಯದ ದುರುಪಯೋಗ ಮಾಡುವುದನ್ನು ತಪ್ಪಿಸಲು ಮೊದಲಿಗೆ ಹಲವಾರು ವರ್ತಕರನ್ನು ಬಂಧಿಸಲಾಯಿತು. ಸರ್ಕಾರ ಒದಗಿಸುವ ಧಾನ್ಯ ಮತ್ತು ಸೀಮೆಣ್ಣೆ ಪ್ರಮಾಣವನ್ನು ಪಡಿತರ ಅಂಗಡಿಗಳಲ್ಲಿ ಆಗಿಂದಾಗಲೇ ಬಹಿರಂಗವಾಗಿ ಪ್ರಕಟಿಸಬೇಕೆಂಬ ಕಟ್ಟುನಿಟ್ಟು ನಿಯಮ ಬಂತು. ಮೇಲುಸ್ತುವಾರಿಗಾಗಿ ಶಾಸಕರು ಮತ್ತು ಸ್ಥಳೀಯ ಪ್ರಮುಖರ ಸಮಿತಿಗಳು ಅಸ್ತಿತ್ವಕ್ಕೆ ಬಂದವು.

ಬೆಳಗಾವಿಯ ಬೈಲಹೊಂಗಲದಲ್ಲಿ ಅಧಿಕಾರಿಗಳ ಸಭೆಯಲ್ಲಿ ಅರಸು ಹೇಳಿದ್ದು:

‘ನಮ್ಮ ಜನ ಮುಗ್ಧರು. ಅಧಿಕಾರಿಗಳನ್ನು ಕಂಡು ಮಾತನಾಡುವ ಧೈರ್ಯ ಅವರಿಗಿರುವುದಿಲ್ಲ. ಆಗ ಆಡಳಿತ ಯಂತ್ರವೇ ಜನರ ಮನೆ ಮನೆಗೆ ಹೋಗಬೇಕು. ಯಾರ ಸ್ಥಿತಿ ಏನು? ಅವರಿಗೇನು ಬೇಕು? ಇವನ್ನು ಪಟ್ಟಿ ಮಾಡಿ ಒದಗಿಸಬೇಕು. ವೃದ್ಧಾಪ್ಯ ವೇತನಕ್ಕೆ ಆ ಬಡಪಾಯಿಗಳು ತಾಲೂಕು ಕಚೇರಿಗೆ ಬರಲಾರರು. ತಹಸೀಲ್ದಾರರು ಅಂಥವರನ್ನು ಹುಡುಕಿ ಹೋಗಿ ಅರ್ಜಿ ಭರ್ತಿ ಮಾಡಿಕೊಂಡು ವೃದ್ಧಾಪ್ಯ ವೇತನ ತಾವೇ ಅವರ ಮನೆಗೆ ಮುಟ್ಟಿಸಬೇಕು…’

ಈ ಸಭೆಯಲ್ಲಿ ಅರಸು ಆಡಿದ ಮಾತು ಹತ್ತೇ ದಿನಗಳಲ್ಲಿ ಸರ್ಕಾರಿ ಆಜ್ಞೆಯಾಗಿ ಹೊರಬಿತ್ತು.
ಹಾಗಾಗಿ ಸಮಗ್ರ ರಾಜ್ಯದಲ್ಲಿ ಆಡಳಿತ ಯಂತ್ರ ದುರ್ಬಲರ ಮನೆ ಬಾಗಿಲಿಗೆ ಚಲಿಸಲಾರಂಭಿಸಿತು. ತಮ್ಮ ಕಷ್ಟ ಸುಖಗಳ ಬಗ್ಗೆ ವಿಚಾರ ಮಾಡುವ ಸರ್ಕಾರವಿದೆ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಮೂಡಿಸಿದವರೇ ಅರಸು.

ಅರವತ್ತು ಮತ್ತು ಎಪ್ಪತ್ತರ ದಶಕಗಳು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶವೇ ಆಹಾರ ಅಭಾವ ಮತ್ತು ಬೆಲೆ ಏರಿಕೆಗಳನ್ನು ಎದುರಿಸಿತು. ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಕೃತಕ ಅಭಾವದಿಂದಾಗಿ ಮತ್ತು ದುಡಿವ ಕೈಗಳಿಗೆ ಕೆಲಸವಿಲ್ಲದೆ ನೂರಾರು ಜನ ಹಸಿವಿನಿಂದ ಸತ್ತರು.

ರಾಜ್ಯದಲ್ಲಿ ಅಂಥ ಪರಿಸ್ಥಿತಿ ತಲೆದೋರಲಿಲ್ಲವೆಂದರೆ ಅದಕ್ಕೆ ನಿಸ್ಸಂದೇಹವಾಗಿ ಅರಸು ಸನ್ನಿವೇಶವನ್ನು ನಿಭಾಯಿಸಿದ ರೀತಿಯೇ ಕಾರಣ.

ಅರಸರಲ್ಲಿ ಬಹುಶಃ ದೊರೆತನವೆಂಬುದು ರಕ್ತಗತವಾಗಿತ್ತು. ‘ಸರ್ಕಾರವೂ ನಾನೇ, ಕಾನೂನೂ ನಾನೇ’ ಎಂಬ ಅವರ ಅದಮ್ಯ ಆತ್ಮವಿಶ್ವಾಸದಲ್ಲಿ ಅದು ವ್ಯಕ್ತವಾಗುತ್ತಿತ್ತು. ಆದರೆ ಅಧಿಕಾರ ಇರುವುದು ಜನರ ಸೇವೆಗೆ ಎಂಬ ಎಚ್ಚರವೂ ಇತ್ತು. ಅಷ್ಟೇ ಅಲ್ಲ, ಹಿಂದಿನ ಕಾಲದ ರಾಜರಂತೆಯೇ ಮಾರುವೇಷದಲ್ಲಿ ಜನರ ನಡುವೆ ಸಂಚರಿಸುವ ಅಭ್ಯಾಸ ದೇವರಾಜ ಅರಸರಿಗೂ ಇತ್ತು! ಅಂಥದೊಂದು ಪ್ರಸಂಗವನ್ನು ಹಿರಿಯ ಪತ್ರಕರ್ತ- ಅರಸರ ಆಪ್ತ- ಗರುಡನಗಿರಿ ನಾಗರಾಜ ಬಣ್ಣಿಸುತ್ತಾರೆ.

ಬೆಳಗಿನ ವಾಕಿಂಗಿಗೆ ಬರಕ್ಕೆ ಹೇಳ್ತಿದ್ರು. ನಾನು ಯಾರಾದರೂ ನೋಡಿದರೆ ಏನು ತಿಳಕೋತಾರೆ ಅಂತ ಜಯನಗರದಿಂದ ಖಾಸಗಿ ಕಾರಿನಲ್ಲಿ ಹೋಗ್ತಿದ್ದೆ. ವಿಧಾನಸೌಧ, ಕೆ.ಆರ್. ಸರ್ಕಲ್- ಹೀಗೆ ರೌಂಡ್ ಹಾಕ್ತಿದ್ವಿ. ತಲೆಗೊಂದು ದಪ್ಪನೆ ಟರ್ಕಿ ಟವೆಲ್ ಕಟ್ಟಿಕೊಳ್ತಿದ್ರು. ದೊಡ್ಡ ದೊಗಳೆ ಚಡ್ಡಿ ಹಾಕ್ತಿದ್ರು. ಯಾರಿಗೂ ಗೊತ್ತಾಗ್ತಿರಲಿಲ್ಲ…!

ಅರಸರ ಇನ್ನೂ ಒಂದು ಅಸಾಧಾರಣ ಅಭ್ಯಾಸದ ಬಗ್ಗೆ ಶ್ರೀಹರಿ ಖೋಡೆ ಹೇಳಿದ್ದಾರೆ:

ಅರಸು ಯಾವುದಾದರೂ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೆ ಎದೆಗುಂದುತ್ತಿರಲಿಲ್ಲ. ಮತ್ತೊಬ್ಬರನ್ನು ಆಶ್ರಯಿಸುತ್ತಿರಲಿಲ್ಲ. ಅಥವಾ ಇನ್ನಾರನ್ನೋ ಮುಂದೆ ಮಾಡುತ್ತಿರಲಿಲ್ಲ. ನನಗೆ ಫೋನ್ ಮಾಡಿ ‘ಬಾರಪ್ಪ ಒಂಚೂರು ಕಾಡು ನೋಡಿ ಬರೋಣ’ ಎನ್ನುತ್ತಿದ್ದರು. ನನಗೆ ಈ ಕಾಡು ನೋಡುವುದು ವಿಚಿತ್ರವಾಗಿ ಕಾಣುತ್ತಿತ್ತು. ಒಬ್ಬರೇ ಮೂರ್ನಾಲ್ಕು ಕಿಲೋಮೀಟರ್ ನಡಕೊಂಡು ಕಾಡಿನೊಳಕ್ಕೆ ಹೋಗಿಬಿಡುತ್ತಿದ್ದರು. ಜೊತೆಗೆ ಯಾರೂ ಹೋಗುವಂತಿಲ್ಲ. ಎರಡು ಮೂರು ಗಂಟೆಗಳ ಕಾಲ ಒಬ್ಬರೇ ಕಾಡೊಳಗೆ ಏನು ಮಾಡುತ್ತಾರೆ ಎಂದು ಪ್ರಶ್ನಾರ್ಥಕವಾಗಿ ನೋಡಿದರೆ ‘ಜನ ನನ್ನನ್ನು ಆರಿಸಿ ಕಳಿಸಿರುವುದು ನನ್ನ ಬುದ್ಧಿ ಖರ್ಚು ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಅಂತ. ನಾನ್ಯಾಕೆ ಯಾರ್ಯಾರದೋ ಬುದ್ಧಿಯನ್ನು ಸಿದ್ಧಾಂತವನ್ನು ಆಲೋಚನೆಗಳನ್ನು ಅವಲಂಬಿಸಬೇಕು? ನನಗೆ ಯೋಚಿಸಲು ಸಮಯ ಬೇಕು. ಪ್ರಶಾಂತ ವಾತಾವರಣ ಇರಬೇಕು, ಅದು ಈ ಕಾಡಿನಲ್ಲಿ ಸಿಗುತ್ತದೆ, ಬಂದೆ’ ಎನ್ನುತ್ತಿದ್ದರು.

ಇನ್ನು ಅವರ ಆಡಳಿತ ವೈಖರಿಯ ಪರಿಚಯ ಮಾಡಿಸಲು ಗರುಡನಗಿರಿ ಎರಡು ನಿದರ್ಶನಗಳನ್ನು ನೀಡುತ್ತಾರೆ. ಮೊದಲನೆಯದು ಗರುಡನಗಿರಿಯವರು ತಮ್ಮೂರಿನ ಕುಂದು ಕೊರತೆಗಳನ್ನು ನಿವಾರಣೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳನ್ನು ಕರೆದೊಯ್ದಾಗಿನ ಪ್ರಸಂಗ:

ಅವರ ಶೈಲಿಯೇ ಬೇರೆ. ನಿಂತ ನಿಲುವಿನಲ್ಲಿಯೇ ಕ್ರಮ. ಐಎಎಸ್, ಐಪಿಎಸ್ ಅಧಿಕಾರಿಗಳು ಗಡಗಡ ನಡುಗೋರು. ‘ನಾನೇ ಕಾನೂನು, ನಾನೇ ಸರ್ಕಾರ, ಬಾಯಿ ಮುಚ್ಚಿಕೊಂಡು ಮೊದಲು ಜನರ ಕೆಲಸ ಮಾಡಿ. ನಂತರದ್ದು ನಾನು ನೋಡ್ಕೋತೀನಿ’ ಎನ್ನುತ್ತಿದ್ದರು. ಹೀಗೆ ಹೇಳುವ ಸಂದರ್ಭಗಳು ನಮ್ಮ ಕಣ್ಣ ಮುಂದೆಯೇ ನಡೆದಿದ್ದಕ್ಕೆ ಬೇಕಾದಷ್ಟು ಉದಾಹರಣೆ ಕೊಡಬಹುದು. ನಮ್ಮೂರು ಗರುಡನಗಿರಿ ಬಯಲುಸೀಮೆ. ಕುಡಿಯೋ ನೀರಿಲ್ಲ, ಕರೆಂಟಿಲ್ಲ, ಆಸ್ಪತ್ರೆ, ರಸ್ತೆ, ಊರಿಗೆ ಬಸ್ಸು ಯಾವುದೂ ಇರಲಿಲ್ಲ. ನಮ್ಮೂರಿನ ಜನ ಬಂದು, ‘ನೀನು ಅರಸುಗೆ ಹತ್ತಿರವಂತೆ, ಏನಾದ್ರೂ ಮಾಡು’ ಎಂದರು. ನಾನು ಹೋಗಿ ಅರಸರಿಗೆ ‘ನಮ್ಮೂರಿಗೆ ಒಂದು ಸಲ ನೀವು ಬರಬೇಕಲ್ಲ’ ಅಂದೆ. ‘ಆಗಲಿ’ ಎಂದರು. ಆದರೆ ನಮ್ಮ ಕ್ಷೇತ್ರದ ಶಾಸಕ, ಗರುಡನಗಿರಿ ಜನ ನಮಗೆ ವೋಟು ಹಾಕಿಲ್ಲ ಅಂದು ಅರಸು ಹತ್ರ ದೂರು ಹೇಳಿ ಬರಬೇಡಿ ಎಂದ. ಆಗ ಅರಸು ‘ಬರಬೇಡ ಎನ್ನಲು ನೀನ್ಯಾರು? ನಾನು ಕಾಂಗ್ರೆಸ್ ಸಿಎಂ ಅಲ್ಲ, ಇಡೀ ರಾಜ್ಯದ ಜನತೆಯ ಸಿಎಂ’ ಎಂದು ಬೈದು, ಅದನ್ನು ನನಗೂ ಹೇಳಿ ಊರಿಗೆ ಬಂದೇಬಿಟ್ಟರು. ಊರಿನ ಜನ ಸ್ವಾಗತ ಕೋರಿದ ಜಾಗದಲ್ಲಿಯೇ ನಿಂತು ಏನೇನಾಗ್ಬೇಕು ಹೇಳ್ರಪ್ಪ ಎಂದರು. ಜನ ಕರೆಂಟಿಲ್ಲ ಅಂದ್ರು. ಅಲ್ಲೇ ಇದ್ದ ಇಂಜಿನಿಯರ್ನ ಕರೆದ ಅರಸು ‘ನೋಡ್ರೀ, ಮುಂದಿನ ತಿಂಗಳು 25ನೇ ತಾರೀಕು ಸ್ವಿಚ್ ಆನ್ ಮಾಡಲು ನಾನು ಬರ್ತಿದ್ದೇನೆ, ಗೊತ್ತಾಯ್ತಲ್ಲ’ ಎಂದರು. ಆ ಅಧಿಕಾರಿ ಸಾರ್ ಅದು… ಎಂದ. ‘ಅದು ಇದು ಏನಿಲ್ಲ, ಏನು ಮಾಡ್ತೀಯೋ ಗೊತ್ತಿಲ್ಲ, ನಾನು ಬರುವ ವೇಳೆಗೆ ರೆಡಿಯಾಗಿರಬೇಕು’ ಅಂದರು.

ಸ್ವಾಮಿ ನಮ್ಮೂರಿಗೆ ಬಸ್ಸು ಬರೋದಿಲ್ಲ ಅಂದ್ರು. ಅಲ್ಲೇ ಇದ್ದ ಡಿಪೋ ಮ್ಯಾನೇಜರ್ ಕರೆದು, ನಾಳೆಯಿಂದ ಊರಿಗೆ ಬಸ್ ಬರಬೇಕು ಅಂದರು. ಆತ, ಸಾರ್ ರಸ್ತೆ ಸರಿಯಿಲ್ಲ ಅಂದ. ಅದಕ್ಕೊಬ್ಬ ಇಂಜಿನಿಯರ್ ಕರೆದು ಅದೂ ಆಗಬೇಕು ಅಂದರು. ಇನ್ನೇನ್ರಪ್ಪ ಎಂದರು. ಸ್ವಾಮಿ ಕುಡಿಯೋ ನೀರಿಲ್ಲ ಅಂದರು. ಇಂಜಿನಿಯರ್ ಕರೆದು ‘ನೋಡ್ರೀ, ನಾನು ಊಟ ಮಾಡಲಿಕ್ಕೆ ಹೋಗ್ತಿದೀನಿ. ಊಟ ಮುಗಿಸಿ ಬರೋದರೊಳಗೆ ಗಂಗೆಪೂಜೆಗೆ ಸಿದ್ಧ ಮಾಡಿರಬೇಕು’ ಅಂದರು. ಅಧಿಕಾರಿ ಉಸಿರೆತ್ತಲಿಲ್ಲ. ಅರ್ಧ ಊಟ ಆಗಿತ್ತು, ಜನ ಓಡಿ ಬಂದು ‘ಸ್ವಾಮಿ, ನೀರು ಬಿತ್ತು’ ಅಂದರು. ಅರಸು ಹೇಳಿದಂತೆ ಗಂಗೆ ಪೂಜೆ ಮುಗಿಸಿಯೇ ಹೊರಟರು. ಇದು ಅವರ ವರ್ಕಿಂಗ್ ಸ್ಟೈಲ್. ಜನರಿಂದ ಆರಿಸಿ ಬಂದಿದ್ದೀವಿ, ಜನರ ಸೇವೆ ಮಾಡಬೇಕು ಅನ್ನುವುದಷ್ಟೇ ಅವರ ಗುರಿಯಾಗಿತ್ತು.

ಇನ್ನು ಎರಡನೇ ಪ್ರಸಂಗ, ಅರಸು ಉತ್ತರ ಕರ್ನಾಟಕ ಪ್ರವಾಸ ಹೊರಟಾಗ ಗರುಡನಗಿರಿ ಖುದ್ದು ಕಂಡದ್ದು. 1975ರ ಡಿಸೆಂಬರ್. ಬಿಜಾಪುರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅರಸರಿಂದ 12 ದಿನಗಳ ಜನಸಂಪರ್ಕ ಪ್ರವಾಸ. ಆ ಪ್ರವಾಸದಲ್ಲಿ ಅರಸರಿಗೆ ಬಿಜಾಪುರದಲ್ಲಿ ಕುಷ್ಠರೋಗಕ್ಕೆ ತುತ್ತಾದ ದಲಿತರ ಬಗ್ಗೆ ಮತ್ತು ಆ ರೋಗ ತಗುಲಿದ ನೂರು ಬಡ ಕುಟುಂಬಗಳನ್ನು ಊರಿಂದಾಚೆ ತಳ್ಳಿರುವ ಬಗ್ಗೆ ಮಾಹಿತಿ ಸಿಕ್ಕುತ್ತದೆ.

ಮಾರನೇ ಬೆಳಗ್ಗೆ 6 ಗಂಟೆಗೆ ಆಪ್ತ ಕಾರ್ಯದರ್ಶಿಯನ್ನು ಕರೆದು ‘ಇಂದಿನ ಎಲ್ಲ ಕಾರ್ಯಕ್ರಮ ರದ್ದು ಮಾಡಿದ್ದೇನೆ. ಈಗಿಂದೀಗಲೇ ಕುಷ್ಠ ರೋಗಿಗಳನ್ನು ನೋಡಲು ಹೊರಟಿದ್ದೇನೆ. ಬೇರೆ ಯಾರೂ ಬೇಡ, ಜಿಲ್ಲಾಧಿಕಾರಿಯೊಬ್ಬರು ಬಂದರೆ ಸಾಕು’ ಎಂದು ಹೊರಟರು.

ಊರಾಚೆ ಹರುಕು ಮುರುಕಲು ಗುಡಿಸಲು ಹಾಕಿಕೊಂಡು ಬವಣೆಯ ಬೇಗೆಯಲ್ಲಿ ಬೇಯುತ್ತಿದ್ದ ಕುಷ್ಠ ರೋಗಿಗಳ ಬಿಡಾರಕ್ಕೆ ಬಂದರು. ನೇರವಾಗಿ ಒಬ್ಬ ರೋಗಿಯ ಗುಡಿಸಲಿಗೆ ಹೋಗಿ ಎಲ್ಲರನ್ನೂ ಕರೆಯಲು ಹೇಳಿದರು. ಕುಷ್ಠ ರೋಗಿಗಳು ಬಂದು ಅರಸರನ್ನು ಸುತ್ತುವರೆದು ರೋದಿಸತೊಡಗಿದರು. ಅರಸು 15 ನಿಮಿಷ ತಲೆ ತಗ್ಗಿಸಿಕೊಂಡು ನಿಂತಿದ್ದು ಮತ್ತೆ ‘ಈ ನೂರು ಕುಷ್ಠ ರೋಗಿ ಕುಟುಂಬಗಳಿಗೆ ತಕ್ಷಣ ಒಳ್ಳೆ ಜೋಪಡಿ, ಅಗತ್ಯ ಔಷಧೋಪಚಾರ ಮತ್ತು ಊಟದ ವ್ಯವಸ್ಥೆಗಾಗಿ 75 ಸಾವಿರ ಬಿಡುಗಡೆ ಮಾಡಿದ್ದೇನೆ’ ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ‘ಸಾರ್ ಇದರಲ್ಲಿ ಕಾನೂನು ತೊಡಕಿದೆ, ಹಾಗೆ 75 ಸಾವಿರ ಕೊಡಲು ಸಾಧ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ರಾಗವೆಳೆದಾಗ ಅರಸು ಕೆರಳಿ ಕೆಂಡವಾದರು. ‘ಜನಹಿತಕ್ಕಿಲ್ಲದ ಕಾನೂನು ಬೆಂಕಿಗೆ ಹಾಕ್ರೀ. ನಿಮಗೆ ಬುದ್ಧಿ ಇದೆಯೇ? ಸರ್ಕಾರ ಯಾರು? ಕಾನೂನು ಮಾಡೋರ್ಯಾರು? ನಾನೇ! ನಾನು ಹೇಳಿದ್ದನ್ನು ತುಟಿ ಪಿಟಕ್ ಅನ್ನದೆ ಮಾಡೋದಷ್ಟೇ ನಿಮ್ಮ ಕೆಲಸ’ ಎಂದು ತಾಕೀತು ಮಾಡಿದರು. ಅಷ್ಟೇ ಅಲ್ಲ, ‘ನೋಡಿ, ಈ ಜನರ ಕಾಯಂ ವ್ಯವಸ್ಥೆ, ಔಷಧೋಪಚಾರ, ಊಟದ ವ್ಯವಸ್ಥೆ ಬಗ್ಗೆ ಒಂದು ಯೋಜನೆ ತಯಾರಿಸಿ, ನಾನು ಬೆಂಗಳೂರು ತಲುಪೋದರೊಳಗೆ ನನ್ನ ಕೈ ಸೇರಬೇಕು. ಇದು ಅತಿ ಜರೂರಿನ ಕೆಲಸ’ ಎಂದು ಹೇಳಿ ಕಾರು ಹತ್ತಿದರು.

ಈ ವೈಖರಿಯ ಅರಸರ ಆಡಳಿತ ಸೃಷ್ಟಿಸಿದ ವಾತಾವರಣವನ್ನು ಎ.ಕೆ. ಸುಬ್ಬಯ್ಯ ಬಣ್ಣಿಸುವುದು ಹೀಗೆ:

ಅಲ್ಲಿಯವರೆಗೆ ಯಾರೂ ಕಂಡಿಲ್ಲದ ದೃಶ್ಯಗಳು ಅರಸರ ಕಾಲದಲ್ಲಿ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಂಡವು. ಹರಿದ ಬಟ್ಟ್ಟೆಯ ಬಡವರು, ಬೀಡಿ ಸೇದುವವರು, ಕಾಲಿಗೆ ಚಪ್ಪಲಿ ಇಲ್ಲದ ಹಳ್ಳಿಯ ರೈತರು, ಕೂಲಿ ಕಾರ್ಮಿಕರು, ಅನಕ್ಷರಸ್ಥರು ವಿಧಾನಸೌಧದ ಮೂರನೇ ಮಹಡಿಯಲ್ಲಿ ತಮ್ಮದೇ ಮನೆಯಲ್ಲಿ ಓಡಾಡುವಂತೆ ಓಡಾಡಿಕೊಂಡಿದ್ದರು. ಆ ದೃಶ್ಯವನ್ನು ನಾನು ನನ್ನ ಅನುಭವದಲ್ಲಿ ಮತ್ತೆ ಕಾಣಲಾಗಲಿಲ್ಲ. ಅದು ನಿಜವಾದ ಪ್ರಜಾಪ್ರಭುತ್ವ. ಅದನ್ನು ಆಗುಮಾಡಿದವರು ಅರಸು. ಇದನ್ನು ನಾನು ಹಲವಾರು ಸಭೆಗಳಲ್ಲಿ ಹೇಳಿದ್ದೇನೆ…

ಎಚ್. ವಿಶ್ವನಾಥ್ ಕೂಡ ಈ ವಿದ್ಯಮಾನವನ್ನು ದಾಖಲಿಸುತ್ತಾರೆ:

ಹೆಣ ಹೂಳುವುದಕ್ಕೂ ಜಾಗವಿಲ್ಲದ ಜನಕ್ಕೆ, ಅಳಿಯ ಬಂದರೆ ಅತ್ತೆ ಮಾವ ಮನೆಯಿಂದ ಹೊರಗೆ ಮಲಗುವ ಸ್ಥಿತಿಯಿದ್ದ ಮನೆ ಇಲ್ಲದ ಬಡವರಿಗೆ, ಹೆಂಡತಿಯ ತಾಳಿಯನ್ನು ಅಡವಿಟ್ಟಿದ್ದ ರೈತನಿಗೆ, ದನಿ ಕಳೆದುಕೊಂಡಿದ್ದ ಅಸಹಾಯಕರಿಗೆ, ಶೋಷಣೆಗೊಳಗಾಗಿದ್ದ ಮಹಿಳೆಯರಿಗೆ, ಪುಡಿ ಸಾಲಕ್ಕೆ ಭೂ ಮಾಲೀಕರ ಮನೆಯಲ್ಲಿ ಜೀತಕ್ಕಿದ್ದವರಿಗೆ ಸ್ವಾಭಿಮಾನದಿಂದ ಬದುಕುವಂತಹ ಸ್ಥಿತಿ ನಿರ್ಮಿಸಿಕೊಟ್ಟವರು ಅರಸು.

ಇನ್ನು ಕಾಗೋಡು ತಿಮ್ಮಪ್ಪನವರು ಹೇಳುವುದೂ ಅದೇ:

ಬಡವರನ್ನು ಕಂಡರೆ ಅಯ್ಯೋ ಅನ್ನುವುದಲ್ಲ, ಅವರಿದ್ದಲ್ಲಿಗೇ ಹೋಗಿ ಧೈರ್ಯ, ಸ್ಥೆರ್ಯ ತುಂಬಿ ಬದುಕುವ ಭರವಸೆ ನೀಡುವುದಿತ್ತಲ್ಲ, ಅದು ಅರಸರ ವಿಶಿಷ್ಟ ಗುಣ.
ಅಧಿಕಾರಾರೂಢರು ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ ದೇವರಾಜ ಅರಸರಿಗೆ ತಮ್ಮದೇ ನೀತಿ ಸಂಹಿತೆಯಿತ್ತು. ವಿಶ್ವನಾಥ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಾಗ ಅರಸರು ಶಾಸಕಾಂಗ ಸಭೆಯಲ್ಲಿ ಹೇಳಿದ ಹಿತವಚನವನ್ನು ಇನ್ನೂ ಮರೆತಿಲ್ಲ:

ಮೊದಲ ಶಾಸಕಾಂಗ ಸಭೆಯ ಅರಸರ ಭಾಷಣ ನಮ್ಮ ಚಿಂತನಾಕ್ರಮವನ್ನೇ ಬದಲಿಸಿಬಿಟ್ಟಿತು. ಗೆದ್ದಿದ್ದೇ ಸಾಧನೆ ಎಂದು ಭ್ರಮಿಸಿದ್ದ ನಮಗೆ ನಮ್ಮ ಜವಾಬ್ದಾರಿ ಏನು ಎನ್ನುವುದನ್ನು ಆ ಭಾಷಣ ಮನವರಿಕೆ ಮಾಡಿಕೊಟ್ಟಿತ್ತು. ‘ನಿಮ್ಮಲ್ಲಿ ಅನೇಕರು ಹೊಸಬರಿದ್ದೀರಿ, ಚಿಕ್ಕವರಿದ್ದೀರಿ. ಆಡಳಿತದ ಅನುಭವದ ಬಯಕೆಗಳನ್ನು ಆಶಿಸುವವರಿದ್ದೀರಿ. ಆದರೆ ಒಂದನ್ನು ತಿಳಿಯಿರಿ, ನೀವೀಗ ನಿಮ್ಮ ಪಕ್ಷದ ಶಾಸಕರಲ್ಲ, ಕ್ಷೇತ್ರದ ಎಲ್ಲ ಜನರ ಪ್ರತಿನಿಧಿ. ನಿಮಗೆ ವಿರೋಧಿಗಳಿಲ್ಲ. ನೀವು ರಾಜಕಾರಣದಲ್ಲಿ ಬಹು ಕಾಲ ಉಳಿಯಬೇಕಾದರೆ ಕ್ಷಮಾಗುಣ ಮುಖ್ಯ, ರೂಢಿಸಿಕೊಳ್ಳಿ. ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ. ಜವಾಬ್ದಾರಿಯ ಜೊತೆಗೆ ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದೊಡನೆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿ ಅನುಷ್ಠಾನಗೊಳಿಸುವ ಹರಿಕಾರರು ನೀವಾಗಬೇಕು. ನೀವೇ ಸರಕಾರ ಹಾಗೂ ಜನರ ನಡುವಿನ ಬೆಸುಗೆ’ ಎಂದರು.
ಟೇಬಲ್ ಮೇಲೆ ನೀರಿನ ಲೋಟವಿತ್ತು. ಅದನ್ನು ಎತ್ತಿ ಹಿಡಿದ ಅರಸು ಅವರು, ‘ಇದು ಸರಕಾರದ ಕಾರ್ಯಕ್ರಮ. ದಾಹವಿರುವವನಿಗೆ ಕೊಟ್ಟು ಬಾ ಎಂದರೆ, ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ, ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದರು.

ಅರಸರ ಇನ್ನೊಂದು ಗುಣವೆಂದರೆ ಬೇರೆಯವರ ಮಾತುಗಳನ್ನು- ಅವರೆಷ್ಟೇ ಚಿಕ್ಕವರಿರಲಿ, ದೊಡ್ಡವರಿರಲಿ- ತಾಳ್ಮೆಯಿಂದ ಪರಿಪೂರ್ಣವಾಗಿ ಕೇಳಿಸಿಕೊಳ್ಳುವುದು. ಇದಕ್ಕೆ ನಿದರ್ಶನವಾಗಿ ಕಾಗೋಡು ತಿಮ್ಮಪ್ಪ ತಾವು ಹೊಸದಾಗಿ ವಿಧಾನಸಭೆಗೆ ಆರಿಸಿ ಬಂದಾಗಿನ ಅನುಭವ ಹೇಳಿಕೊಳ್ಳುತ್ತಾರೆ:

ಒಂದು ಸಲ ನಾನು ಶಾಸನ ಸಭೆಯಲ್ಲಿ ರೈತರಿಗೆ ಪಾಣಿ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಗಂಟೆಗಳ ಕಾಲ ನಿರಂತರವಾಗಿ ಮಾತನಾಡಿದೆ. ನೀವು ನಂಬಲ್ಲ, ಮುಖ್ಯಮಂತ್ರಿ ದೇವರಾಜ ಅರಸು ಮೂರು ಗಂಟೆಗಳ ಕಾಲ ಕೂತು ನನ್ನ ಮಾತನ್ನು ಕಿವಿಗೊಟ್ಟು ಕೇಳಿದರು. ನನ್ನಂತಹ ಹೊಸ ಶಾಸಕನಿಗೆ ಅಷ್ಟು ಸಮಯ ಕೊಡುವುದು, ನಮ್ಮಂತಹವರ ಮಾತನ್ನು ಮನಸ್ಸಿಟ್ಟು ಕೇಳುವುದು ಸಾಮಾನ್ಯವಾದ ಸಂಗತಿಯಲ್ಲ.

1973ರ ಆರಂಭದಲ್ಲಿಯೇ ಅರಸು ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಯಿತು. ಹಾಗೆ ನೋಡಿದರೆ ಈ ಘಟನೆ ಇಡೀ ನಾಡಿನ ಸಾಮಾಜಿಕ ಸಾಂಸ್ಕೃತಿಕ ಇತಿಹಾಸದ ದಿಕ್ಕನ್ನೇ ಅನಾಮತ್ತು ಬದಲಿಸಿದ ವಿದ್ಯಮಾನ. ಆಗ ತಕ್ಷಣಕ್ಕಲ್ಲದಿದ್ದರೂ ಕ್ರಮೇಣ ಕನ್ನಡ ಜನಸಮೂಹದ ಆತ್ಮಸಾಕ್ಷಿಯನ್ನು ಕಲಕಿ, ಕಣ್ಣು ತೆರೆಸಿದ ಘಟನೆ ಎಂದರೂ ತಪ್ಪಲ್ಲ.

ಸಚಿವರಾಗಿದ್ದ ದಲಿತ ಬಿ. ಬಸವಲಿಂಗಪ್ಪ ಕನ್ನಡ ಸಾಹಿತ್ಯದ ಬಗ್ಗೆ ಆಡಿದ ಒಂದು ಮಾತು ಅರಸು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿತು. ಮೈಸೂರು ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿಗಳ ‘ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್’ ಎಂಬ ಸಂಘಟನೆ 73ರ ನವೆಂಬರ್ 19ರಂದು ಒಂದು ವಿಚಾರ ಸಂಕಿರಣ ಏರ್ಪಡಿಸಿತ್ತು. ಆ ಸಭೆಯಲ್ಲಿ ಮೊದಲು ಒಂದಿಬ್ಬರು ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕೆ ಅಶೋಕಪುರಂನ ಕನ್ನಡ ಅಭಿಮಾನಿಗಳು ನಡುನಡುವೆ ಕನ್ನಡದ ಪರವಾಗಿ ಘೋಷಣೆ ಕೂಗಿದರು. ಇದರಿಂದ ಸಿಡಿಮಿಡಿಗೊಂಡ ಬಸವಲಿಂಗಪ್ಪ,

‘ಏನು ಕನ್ನಡ ಕನ್ನಡಾಂತ ಬಡಕೋತಿರಿ? ಕನ್ನಡ ಸಾಹಿತ್ಯದಲ್ಲಿ ಇವರ (ವೈದಿಕರ) ಬರಹಗಳೇನಿದ್ದರೂ ದನ ತಿನ್ನೋಕೆ ಲಾಯಕ್ಕು’ ಅನ್ನುವ ಪ್ರತಿಕ್ರಿಯೆ ಕೊಟ್ಟರು. ‘ದಲಿತರ ದೃಷ್ಟಿಕೋನದಿಂದ ನೋಡಿದರೆ ಬಹುತೇಕ ಕನ್ನಡ ಸಾಹಿತ್ಯ ಬೂಸಾ’ ಎಂಬ ಇಂಗಿತದೊಂದಿಗೆ ‘ನೀವೆಲ್ಲ ಪ್ರೌಢ ಇಂಗ್ಲಿಷ್ ಸಾಹಿತ್ಯ ಓದಿ’ ಎಂದು ಕರೆ ಕೊಟ್ಟರು.
ಈ ಘಟನೆ ಬಗ್ಗೆ ಡೆಕ್ಕನ್ ಹೆರಾಲ್ಡ್ ಬಿಟ್ಟು ಉಳಿದ ಬಹುತೇಕ ಪತ್ರಿಕೆಗಳ ವರದಿ ಏಕಮುಖವಾಗಿ ಪ್ರಚೋದನಕಾರಿಯಾಗಿತ್ತು, ನಾಡಿಗೆ ಕಿಚ್ಚು ಹೊತ್ತಿಸುವಂತಿತ್ತು. ‘ಅವರ (ವೈದಿಕರ)’ ಸಾಹಿತ್ಯ ಎಂಬುದು ಮರೆಯಾಗಿ ಬಸವಲಿಂಗಪ್ಪ ಕನ್ನಡ ಸಾಹಿತ್ಯವನ್ನೇ ಬೂಸಾ ಎಂದು ಕರೆದರು; ಸಚಿವರು ಕನ್ನಡದ ಸಾಹಿತ್ಯದ ಎಲ್ಲ ಮಹಾಮಹಿಮರನ್ನು ಜರೆದರು ಎಂಬ ಧಾಟಿಯಲ್ಲಿ ವರದಿಯಾಗಿತ್ತು. ಬಸವಲಿಂಗಪ್ಪನವರು ಮೊದಲೇ ದಿಟ್ಟ ಪ್ರಚೋದಕ ಹೇಳಿಕೆಗಳ ಮೂಲಕ ಮೇಲ್ವರ್ಗದ ಅಸಹನೆ ಸಂಪಾದಿಸಿದ್ದವರು. ಈಗ ಆ ಅಸಹನೆ ಕಟ್ಟೆಯೊಡೆಯಿತು. ಇದು ಬಲು ಬೇಗನೆ ಕನ್ನಡ, ಸಾಹಿತ್ಯ ಮುಂತಾದ ಪ್ರಶ್ನೆಗಳನ್ನು ಮರೆಗೆ ತಳ್ಳಿ ದಲಿತರು- ಸವರ್ಣೀಯರ ಸಂಘರ್ಷವಾಗಿ ಭುಗಿಲೆದ್ದಿತು. ನಾಡಿನಾದ್ಯಂತ, ವಿಶೇಷವಾಗಿ ಬೆಂಗಳೂರು ಮೈಸೂರುಗಳಲ್ಲಿ ಬಸವಲಿಂಗಪ್ಪನವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಚಳವಳಿಯೇ ಮೊದಲಾಯಿತು.
ಕುವೆಂಪು ಮತ್ತು ಯು.ಆರ್. ಅನಂತಮೂರ್ತಿ ಬಸವಲಿಂಗಪ್ಪನವರನ್ನು ಬೆಂಬಲಿಸಿ ಹೇಳಿಕೆ ಕೊಟ್ಟರೂ, ನಾಡಿನ ಬಹುತೇಕ ಮೇಲ್ಜಾತಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹೋರಾಡತೊಡಗಿದರು. ಆಗಿನ್ನೂ ವಿದ್ಯಾರ್ಥಿಗಳಾಗಿದ್ದ ಕವಿ ಸಿದ್ದಲಿಂಗಯ್ಯ, ಗೆಳೆಯರಾದ ಅಗ್ರಹಾರ ಕೃಷ್ಣಮೂರ್ತಿ, ಡಿ.ಆರ್. ನಾಗರಾಜ್ ಮುಂತಾದವರು ಬಸವಲಿಂಗಪ್ಪನವರ ಪರ ಬೀದಿಗಿಳಿದು ವದೆ ತಿಂದರು.

ಅರಸು ಸಂಪುಟದಲ್ಲಿದ್ದ ಹುಚ್ಚಮಾಸ್ತಿಗೌಡ, ಕೆ.ಎಚ್. ಪಾಟೀಲ್ ಮತ್ತು ಎಚ್.ಎನ್. ನಂಜೇಗೌಡ ಗುಪ್ತವಾಗಿ ಬಸವಲಿಂಗಪ್ಪ ವಿರೋಧಿ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿದರು ಎಂಬ ಸುದ್ದಿಯೂ ಇತ್ತು. ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದ ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಬಸವಲಿಂಗಪ್ಪ ‘ನಾನೆಂದೂ ಕನ್ನಡದ ವಿರುದ್ಧ ಮಾತನಾಡಿಲ್ಲ’ ಎಂದು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದರೂ ಆ ವೇಳೆಗಾಗಲೇ ಆಂದೋಲನ ಕೈಮೀರಿ ಹೋಗಿತ್ತು. ಶಿವಮೊಗ್ಗ, ಧಾರವಾಡ, ಗುಲ್ಬರ್ಗ, ಬೆಳಗಾವಿ, ಮಂಡ್ಯ ಮುಂತಾದ ಕಡೆಗಳಲ್ಲೆಲ್ಲ ಹೋರಾಟ ಉಗ್ರ ರೂಪ ತಾಳಿತು. ರಾಜ್ಯದ ಎಲ್ಲ ಕಾಲೇಜುಗಳಲ್ಲಿ ತಾತ್ಕಾಲಿಕ ಹೋರಾಟ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂತು. ಇದರ ಜೊತೆಗೆ ವಾಟಾಳ್ ನಾಗರಾಜ್, ಜಿ. ನಾರಾಯಣ ಕುಮಾರ್ ಮತ್ತು ನಾಡಿಗೇರ ಕೃಷ್ಣರಾಯರಂಥ ಕನ್ನಡಪರ ಹೋರಾಟಗಾರರು ಬಸವಲಿಂಗಪ್ಪನವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಸುಮ್ಮನಿರುವುದಿಲ್ಲವೆಂದು ಘೋಷಿಸಿ ಬೀದಿಗಿಳಿದರು. ‘ಸಚಿವರನ್ನು ಹತೋಟಿಯಲ್ಲಿ ಇಡಲಾಗದಿದ್ದರೆ, ಮುಖ್ಯಮಂತ್ರಿ ದೇವರಾಜ ಅರಸರೇ ರಾಜೀನಾಮೆ ನೀಡಬೇಕು’ ಎಂದು ವಿರೋಧಿ ನಾಯಕ ಎಚ್.ಡಿ. ದೇವೇಗೌಡ ಒತ್ತಾಯಿಸಿದರು! ಈ ಹಂತದಲ್ಲಿ ಬಸವಲಿಂಗಪ್ಪ ವಿರೋಧಿಗಳ ನಡವಳಿಕೆ ಹೇಗಿತ್ತೆಂಬ ಚಿತ್ರಣ ಪಿ. ಲಂಕೇಶರ ಆತ್ಮಕಥೆ ‘ಹುಳಿಮಾವಿನ ಮರ’ದಲ್ಲಿ ಸಿಕ್ಕುತ್ತದೆ:

ಒಂದು ಸಂಜೆ ವಿಶ್ವೇಶ್ವರಪುರ ಕಾಲೇಜಿನಲ್ಲಿ ನನ್ನ ಭಾಷಣ ಇತ್ತು. ನನ್ನ ವಿರೋಧಿಗಳು ಎಲ್ಲದಕ್ಕೂ ಸಿದ್ಧರಾಗಿಯೇ ಬಂದಂತಿತ್ತು. ನಾನು ಭಾಷಣ ಶುರು ಮಾಡಿದೊಡನೆ ಪ್ರಶ್ನೆಗಳ ಮಳೆ ಶುರುವಾಯಿತು. ‘ಕನ್ನಡ ಸಾಹಿತ್ಯದಲ್ಲಿರುವುದು ಬಹುಪಾಲು ಬೂಸಾ’ ಎನ್ನುವುದು ಈಗ ದೊಡ್ಡದಾಗಿ ಬೆಳೆದು ರಾಮಾಯಣ, ಮಹಾಭಾರತ, ಗೀತೆ, ಉಪನಿಷತ್ತುಗಳನ್ನೆಲ್ಲ ಒಳಗೊಂಡಿತ್ತು. ‘ನೀನು ಗೀತೆಯನ್ನು ಇಷ್ಟಪಡುತ್ತೀಯೋ ಇಲ್ಲವೋ?’ ಎನ್ನುವುದರಿಂದ ಹಿಡಿದು ಕುಮಾರವ್ಯಾಸನ ಸಾಹಿತ್ಯ, ಪಂಪನ ಕಾವ್ಯ- ಎಲ್ಲವನ್ನೂ ಒಳಗೊಂಡು ಪ್ರಶ್ನೆ ಕೇಳುತ್ತಿದ್ದರು. ಅವರಿಗೆ ಪ್ರಶ್ನೆಯಾಗಲಿ ಉತ್ತರವಾಗಲಿ ಮುಖ್ಯವಾಗಿರಲಿಲ್ಲ; ದಲಿತರು ಮತ್ತು ಬಸವಲಿಂಗಪ್ಪನವರ ಪರವಾಗಿ ಮಾತಾಡುವವರನ್ನು ಅವಮಾನ ಮಾಡಿ ಥಳಿಸುವುದು ಅವರ ಉದ್ದೇಶವಾಗಿತ್ತು. ಸಭೆ ದೊಡ್ಡ ಗದ್ದಲದಲ್ಲಿ ಮುಳುಗಿತು. ಬಸವರಾಜ ಚೀರಿಕೊಂಡು ಎಲ್ಲರನ್ನೂ ಸುಮ್ಮನಿರಿಸಲು ಪ್ರಯತ್ನಿಸಿದ. ಅವನಿಗೆ ಗೂಸಾ ಬಿತ್ತು. ಇನ್ನೇನು ಹಿಂಸೆ, ರಕ್ತಪಾತ ಆಗಬೇಕೆನ್ನುವಷ್ಟರಲ್ಲಿ ಬಸವರಾಜನನ್ನು ಎಳೆದುಕೊಂಡು ಹೋದರು; ನಾನು ಅಲ್ಲಿದ್ದ ಪೊಲೀಸರಿಗೆ ಅವನಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರೂ ಪೊಲೀಸರು ಕಿವುಡಾಗಿದ್ದರು. ಅಷ್ಟರಲ್ಲಿ ನನ್ನ ಮೇಲೆ ಹಲ್ಲೆ ನಡೆಯುವುದಾಗಿ ಬೆದರಿದ ನಮ್ಮ ಸಮಾಜವಾದಿ ತರುಣರು ನನ್ನನ್ನು ಸುತ್ತುವರಿದು ವಿಶ್ವೇಶ್ವರಪುರ ಕಾಲೇಜಿನೊಳಕ್ಕೆ ಕರೆದುಕೊಂಡು ಹೋದರು. ಬಸವರಾಜನಿಗೆ ಏನಾಯಿತೋ ಗೊತ್ತಾಗಲಿಲ್ಲ.

ಹೀಗೆ ಆ ಸಂಜೆ ಹಲ್ಲೆ ನಡೆಸಲು ಯತ್ನಿಸಿದಾಗ ಹಾಜರಿದ್ದ ಬಸವರಾಜ ಒಂದೆರಡು ದಿನದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ವಿರೋಧಿಗಳು ನನಗಾಗಿ ಕಾದು ಕೂತಿದ್ದಾಗ ಇರಲಿಲ್ಲ. ಅವರಲ್ಲಿ ಯಾವ ವಿವೇಕವೂ ಸಹನೆಯೂ ಮಾನವೀಯತೆಯೂ ಇರಲಿಲ್ಲ. ನನ್ನ ವಿದ್ಯಾರ್ಥಿಗಳು ನನ್ನ ಕ್ಲಾಸ್ ಬಿಟ್ಟೊಡನೆ ಹೊರಟುಹೋದರು. ಸುತ್ತುವರಿದ ಹುಡುಗರು “ನೀನೇ ಏನೋ ಲಂಕೇಶ?” ಅಂದರು.

“ಹೌದು” ಅಂದೆ.

“ಸೂಳೇಮಗನೆ, ಇಕ್ರೋ ಅವನಿಗೆ”

“ನಾನು ಹೇಳೋದನ್ನ ಕೇಳಿ, ಬಸವಲಿಂಗಪ್ಪ….”

“ಅವನೇನು ನಿಮ್ಮಪ್ಪನೇನೋ? ಅವನ್ಯಾಕೆ ಸಪೋರ್ಟ್ ಮಾಡ್ತೀಯೋ? ನೀನ್ ಬರೆಯೋದು ಬೂಸಾ ಏನೋ?”

“ಹಾಗಲ್ಲ. ನಾನ್ ಹೇಳೋದು ಕೇಳಿ”

“ಏನೋ ಕತ್ತೇಬಾಲ ನೀನ್ ಹೇಳೋದು. ಇಕ್ರೋ” ಎಂದು ಒಬ್ಬ ಹಿಂದಿನಿಂದ ತಳ್ಳಿದ. ಮುಂದಿದ್ದವನು ಕತ್ತುಪಟ್ಟಿ ಹಿಡಿದುಕೊಂಡು “ನೀನು ಹೇಳಿದ್ದೆಲ್ಲ ತಪ್ಪಾತು ಅಂತ ಬರೆದು ಸೈನ್ ಹಾಕದಿದ್ರೆ ನಿನ್ನನ್ನ ಇಲ್ಲೇ ಹೂತುಬಿಡ್ತೇವೆ” ಅಂದ.

ಅವರ ಕೂಗಾಟ ಜೋರಾಗಿ, ತಳ್ಳುವುದು ಚುಚ್ಚುವುದು ಶುರುವಾಗಿ ‘ಬೇಕಾದ್ರೆ ಏನಾದ್ರೂ ಬರೆಸಿಕೊಳ್ಳಿ’ ಅಂದುಬಿಟ್ಟೆ.

ಅವರಲ್ಲೊಬ್ಬ ಎಕ್ಸರ್ಸೈಜ್ ಹಾಳೆ ತೆಗೆದು ನನ್ನೆದುರು ಹಿಡಿದ; ಇನ್ನೊಬ್ಬ ಪೆನ್ನು ಕೊಟ್ಟ. ಅಲ್ಲಿ ಅದೇನೇನೋ ಬರೆದು ನನ್ನ ಹೆಸರು ಗೀಚಿಕೊಟ್ಟೆ. ‘ಅಪಾಲಜಿ! ಅಪಾಲಜಿ!’ ಎಂದು ಕೂಗತೊಡಗಿದರು. ಗುಂಪೊಂದು ಎಷ್ಟು ಕ್ರೂರ ಮತ್ತು ಅಂಧ ಎನ್ನುವುದು ಅವತ್ತು ನನಗೆ ಗೊತ್ತಾಯಿತು…

ಈ ಕ್ರೌರ್ಯ ಮತ್ತು ಅಂಧತ್ವ ಇಡೀ ಬೂಸಾ ಚಳವಳಿಯನ್ನೇ ಆವರಿಸಿಕೊಂಡಿತ್ತು. ಅದರ ಕಾವಿನಲ್ಲಿ ಕವಿ ಸಿದ್ದಲಿಂಗಯ್ಯನವರನ್ನು ಮುಗಿಸಿಯೇಬಿಡುವ ಪ್ರಯತ್ನ ನಡೆಯಿತೆಂದು ಅವರ ಒಡನಾಡಿಗಳು ದಾಖಲಿಸಿದ್ದಾರೆ. ಅಷ್ಟಾದರೂ ಈ ಗದ್ದಲ ಒಮ್ಮುಖವಾಗಿ ಉಳಿಯಲಿಲ್ಲ. ನಾಡಿನಾದ್ಯಂತ ಬಸವಲಿಂಗಪ್ಪನವರ ಪರವೂ ಪ್ರತಿ ಚಳವಳಿ ಅಷ್ಟೇ ತೀವ್ರವಾಗಿ ಆರಂಭವಾಯಿತು. ಹಾಗಾಗಿ ಹೊಸ ತಲೆಮಾರಿನ ದಲಿತರ ಜಾಗೃತಿಗೆ ಈ ಬೂಸಾ ಪ್ರಕರಣವೇ ನಿಮಿತ್ತವಾಯಿತು ಎಂದೂ ಹೇಳಬಹುದು….

ಇಷ್ಟೆಲ್ಲ ನಡೆದರೂ ಅರಸು ‘ಇದೊಂದು ಅಮುಖ್ಯ ಪ್ರಕರಣವಾದ್ದರಿಂದ ಜನತೆ ನಿರ್ಲಕ್ಷಿಸಬೇಕು’ ಎಂದು ಹೇಳಿಕೆ ನೀಡಿ ಸುಮ್ಮನಾದರು. ಅವರಿಗೆ ಬಸವಲಿಂಗಪ್ಪನವರ ರಾಜೀನಾಮೆ ಪಡೆಯುವ ಉದ್ದೇಶವಿರಲಿಲ್ಲ. ಅತ್ತ ಬಸವಲಿಂಗಪ್ಪನವರೂ ಸ್ವತಃ ರಾಜೀನಾಮೆ ನೀಡಲು ಮುಂದಾಗಲಿಲ್ಲ. ಕೊನೆಗೆ ಅರಸು ಸಂಪುಟ ಸಹೋದ್ಯೋಗಿಗಳೇ ಈ ಸಚಿವರನ್ನು ಕೈ ಬಿಡದಿದ್ದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಅರಸು ಮೇಲೆ ಒತ್ತಡ ಹೇರತೊಡಗಿದರು.

ಡಿಸೆಂಬರ್ 5ರಂದು ಇಬ್ಬರನ್ನುಳಿದು ಕೆ.ಎಚ್. ರಂಗನಾಥ್, ಎಂ. ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಆರಸು ಸಂಪುಟದ ಎಲ್ಲ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದರು. ಅಂತಿಮವಾಗಿ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ 6ರಂದು ಬಸವಲಿಂಗಪ್ಪನವರೂ ರಾಜೀನಾಮೆ ಕೊಟ್ಟರು. ಅರಸು ಈ ಎಲ್ಲ ರಾಜೀನಾಮೆ ಪತ್ರಗಳನ್ನು ಹಿಡಿದು ದೆಹಲಿಗೆ ತೆರಳಿ ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಪರಿಸ್ಥಿತಿಯ ವಿವರಣೆ ನೀಡಿದರು. ಕೊನೆಗೆ ಬಸವಲಿಂಗಪ್ಪ ಮತ್ತು ಎಚ್.ಎನ್. ನಂಜೇಗೌಡ ಇವರಿಬ್ಬರನ್ನು ಕೈಬಿಟ್ಟು ಹೊಸದಾಗಿ ಸಂಪುಟ ರಚಿಸಿದರು.

ಬಸವಲಿಂಗಪ್ಪ ಅಧಿಕಾರ ಕಳೆದುಕೊಂಡಿದ್ದರ ಈ ಪ್ರಸಂಗದ ಜೊತೆಗೆ ಇಲ್ಲಿಯೇ ಇನ್ನೊಂದು ಸೋಜಿಗವನ್ನು ದಾಖಲಿಸಬೇಕು. ಬಸವಲಿಂಗಪ್ಪನವರೂ ಸೇರಿದಂತೆ ಅರಸು ಸಂಪುಟದ ಒಟ್ಟು ನಾಲ್ವರು ಸಚಿವರು ವಿವಿಧ ಹಗರಣಗಳಲ್ಲಿ ಸಿಲುಕಿ ತಮ್ಮ ಮಂತ್ರಿ ಸ್ಥಾನ ಕಳೆದುಕೊಂಡರು. ಆ ಹಗರಣಗಳಲ್ಲಿ ಎಷ್ಟು ಹುರುಳಿತ್ತು, ಅವರ ಮೇಲೆ ಬಂದ ಆರೋಪ ನಿಜಕ್ಕೂ ಮಂತ್ರಿ ಸ್ಥಾನವನ್ನು ಬಲಿ ಪಡೆಯುವಷ್ಟು ಗುರುತರವಾಗಿತ್ತೇ- ಇವೆಲ್ಲ ಚರ್ಚಾಸ್ಪದ ಪ್ರಶ್ನೆಗಳು. ಅಂತೂ ಅಧಿಕಾರ ಹೋಯಿತು. ಹಾಗೆ ಅಧಿಕಾರ ಕಳೆದುಕೊಂಡವರಾದರೂ ಯಾರು? ಬಸವಲಿಂಗಪ್ಪ, ರೇಣುಕಾ ರಾಜೇಂದ್ರನ್, ಆರ್.ಡಿ. ಕಿತ್ತೂರ್ ಮತ್ತು ಸಿ.ಎಂ. ಇಬ್ರಾಹಿಂ. ಅಂದರೆ ಒಟ್ಟು ಮೂವರು ದಲಿತರು, ಒಬ್ಬ ಅಲ್ಪಸಂಖ್ಯಾತರು!… ಯಾವ ಸೀಮೆ ರಾಜಕಾರಣವಿದು?…

ಇರಲಿ. ಅಂತೂ ಬೂಸಾ ಪ್ರಕರಣ ಎಬ್ಬಿಸಿದ ಸಂಚಲನ ಇಷ್ಟಕ್ಕೇ ನಿಲ್ಲುವಂತಿರಲಿಲ್ಲ.

ಮೊದಲನೆಯದಾಗಿ ನಾಡಿನಾದ್ಯಂತ ಮೂಡಿದ ದಲಿತರ ಜಾಗೃತಿಯ ಕಾವು ಸ್ವತಃ ದೇವರಾಜ ಅರಸರಿಗೇ ತಟ್ಟಿತು. ಗುಲ್ಬರ್ಗದಲ್ಲಿ ಅವರ ಸಭೆಯಲ್ಲಿ ಗದ್ದಲವೆದ್ದು ಭಾಷಣ ಮಾಡುವುದೇ ಕಷ್ಟವಾಯಿತು. ಮತ್ತೆ ಅವರ ಜಿಲ್ಲೆಯಲ್ಲೇ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನಪ್ಪುವಂತಾಯಿತು! ಆಗ ಎಚ್ಚೆತ್ತ ಅರಸು ಬಸವಲಿಂಗಪ್ಪನವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾದರು. ಮುಂದಕ್ಕೆ 1978ರಲ್ಲಿ ವಿಧಾನಸಭೆಗೆ ಬಸವಲಿಂಗಪ್ಪ ಮತ್ತೆ ಆಯ್ಕೆಯಾಗಿ ಬಂದ ಮೇಲೆ ಮಹತ್ವದ ಕಂದಾಯ ಖಾತೆಗೆ ಅವರನ್ನು ಮಂತ್ರಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಈ ನಡುವೆ 74ರಿಂದ 77ರವರೆಗೆ ಬಸವಲಿಂಗಪ್ಪ ದಲಿತರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನಕ್ಕೆ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ನೇಮಿಸಿದ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು…

ಬಸವಲಿಂಗಪ್ಪ ಸಂಪುಟಕ್ಕೆ ರಾಜೀನಾಮೆ ನೀಡಿದ ಮೇಲೆ ಮೈಸೂರಿನಲ್ಲಿ ಸಭೆ ಸೇರಿದ ದೇವನೂರ ಮಹಾದೇವ, ಎಚ್. ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಮುಂತಾದ ದಲಿತ ಚಿಂತಕರು, ಬೂಸಾ ಪ್ರಕರಣಕ್ಕೆ ತಲೆದಂಡ ನೀಡಿದ್ದ ಬಸವಲಿಂಗಪ್ಪನವರು ರಾಜಕೀಯ ಬಿಟ್ಟು ಬಂದು ದಲಿತ ಹೋರಾಟ ರೂಪಿಸಬೇಕೆಂದು ಮನವಿ ಮಾಡಿದರು. ಆದರೆ ಅವರೆಲ್ಲರಿಗಿಂತ ಹೆಚ್ಚು ವ್ಯವಹಾರ ಜ್ಞಾನವಿದ್ದ ಬಸವಲಿಂಗಪ್ಪ ‘ನೀವು ಹೋರಾಟ ಮಾಡಿ, ನಾನು ನಿಮ್ಮ ಬೆನ್ನ ಹಿಂದಿರುತ್ತೇನೆ. ರಾಜಕೀಯ ಬಿಟ್ಟರೆ ನಮ್ಮನ್ನು ಕೇಳುವವರಿರುವುದಿಲ್ಲ’ ಎಂದು ಹಿಂದೆ ಸರಿದರು.

ಆಗಿನ ಚಿಂತನ ಮಂಥನದ ಫಲವಾಗಿ ಹುಟ್ಟಿದ ದಲಿತ ಚಳವಳಿ, ಅದಕ್ಕೆ ಮುಂಚಿನ ಸಮಾಜವಾದಿ ಯುವಜನ ಸಭಾ, ಜಾತಿವಿನಾಶ ಸಮ್ಮೇಳನ, 74ರ ಬ್ರಾಹ್ಮಣೇತರ ಬರಹಗಾರರ ಒಕ್ಕೂಟ, ಮುಂದಕ್ಕೆ ಮೈ ತಳೆದ ರೈತ ಚಳವಳಿ- ಈ ಎಲ್ಲ ಕಲಮಲದ ಬೇರು ಇದ್ದಿದ್ದೂ ಈ ಬೂಸಾ ಚಳವಳಿಯಲ್ಲೇ. ಹೀಗೆ ಅದೊಂದೇ ವಿದ್ಯಮಾನ ಇಡೀ ನಾಡಿನ ಸಾಂಸ್ಕೃತಿಕ ಚಹರೆಯನ್ನೇ ಬದಲಾಯಿಸಿತೆಂದು ಧಾರಾಳವಾಗಿ ಹೇಳಬಹುದು. ಒಟ್ಟಾರೆ ಆ ದಶಕಗಳ ಚೈತನ್ಯ ಸ್ಫೋಟವನ್ನು ಸಮಗ್ರವಾಗಿ ಪ್ರತಿನಿಧಿಸಿದ ಘಟನೆ- ಈ ಬೂಸಾ ಚಳವಳಿ.

ಪ್ರತಿಭಟನೆ, ಚಳವಳಿಗಳ ಆಗಿನ ವಾತಾವರಣದಲ್ಲಿದ್ದ ಈ ಜೀವಂತಿಕೆ, ಈ ಆವೇಶ, ಈ ಹುಮ್ಮಸ್ಸುಗಳ ಹಿಂದಿನ ಬೌದ್ಧಿಕ ಎಚ್ಚರವೊಂದು ಕಡೆ; ಅರಸು ಶೈಲಿಯ ಪುರೋಗಾಮಿ ರಾಜಕಾರಣ ಇನ್ನೊಂದು ಕಡೆ. ಇವೆರಡಕ್ಕೂ ಏನು ಸಂಬಂಧವಿರಬಹುದು, ಒಂದನ್ನೊಂದು ಹೇಗೆ ಪ್ರಭಾವಿಸಿರಬಹುದು ಎಂಬ ಅಧ್ಯಯನ ನಡೆದರೆ ಕುತೂಹಲಕಾರಿ ಅಂಶಗಳು ಬೆಳಕಿಗೆ ಬರಬಹುದು. ಯಾಕೆಂದರೆ, ಈಗ ಯೋಚಿಸಿದರೆ ಆಗಿನ ವಾತಾವರಣದಲ್ಲೇ ಜನತಂತ್ರದ ಒಳಚಿಲುಮೆ ಎಷ್ಟು ಜೀವಂತವಾಗಿತ್ತೆಂಬ ಸೋಜಿಗ ಹುಟ್ಟುತ್ತದೆ…

ಭೂ ಸುಧಾರಣೆ ಮೂಲಕ ಭೂಹೀನರಿಗೆ ಭೂಮಿ, ಜೀತವಿಮುಕ್ತಿ, ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ- ಇವೆಲ್ಲವೂ ಅರಸು ಸರ್ಕಾರ ಜಾರಿಗೆ ತಂದ ಕೆಲವು ಮಹತ್ವದ ಕ್ರಮಗಳಲ್ಲವೇ? ಆದರೆ ಅವೆಲ್ಲ ದಲಿತ ಹೋರಾಟ, ತನ್ನ ಹೋರಾಟದ ತೆಕ್ಕೆಗೆ ತೆಗೆದುಕೊಂಡ ವಿಷಯಗಳೂ ಹೌದು! ಅಂದರೆ ಈ ಕ್ರಮಗಳು ಸರ್ಕಾರಿ ಕ್ರಮಗಳೂ ಆಗಿದ್ದರಿಂದಲೇ ದಲಿತ ಚಳವಳಿಗೆ ಸರ್ಕಾರ ಪರೋಕ್ಷ ಬೆಂಬಲ ನೀಡಿದಂತಾಯಿತು, ಅದಕ್ಕೇ ದಲಿತ ಚಳವಳಿ ಅಷ್ಟೊಂದು ಪ್ರಖರವಾಗಿ ಬೆಳೆಯಲು ಸಾಧ್ಯವಾಯಿತು ಎನ್ನಬಹುದೇ? ಆದರೆ ದಲಿತ ಚಳವಳಿ ತಾತ್ವಿಕವಾಗಿ ಕಾಂಗ್ರೆಸ್ ಆಡಳಿತದ ಕಡು ವಿರೋಧಿಯಾಗಿತ್ತಲ್ಲ…!

ಅಥವಾ ಇದು ಆ ಕಾಲಘಟ್ಟದಲ್ಲೇ ಅಂತರ್ಗತವಾಗಿದ್ದ ವಿರೋಧಾಭಾಸವೇ?
~
ದೇವರಾಜ ಅರಸು ಜನ್ಮ ಶತಮಾನೋತ್ಸವದ ಅಂಗವಾಗಿ ಶತಮಾನೋತ್ಸವ ಸಮಿತಿ ಹೊರತಂದ ಶಂಕರ್ ಎನ್ ಎಸ್ ಬರೆದ ಕಿರು ಹೊತ್ತಿಗೆಯಿಂದ ಆಯ್ದ ಭಾಗ. ಆಗಸ್ಟ್ 20ರಂದು ಬಿಡುಗಡೆಯಾದ ಈ ಪುಟ್ಟ ಪುಸ್ತಕವನ್ನು ಆಸಕ್ತರು ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾದ ದೇವರಾಜ ಅರಸು ಭವನದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿಯಲ್ಲಿ ಪಡೆದುಕೊಳ್ಳಬಹುದು.

 ~~~

 

 ಶಂಕರ್ ಎನ್ ಎಸ್: ಪ್ರಶಸ್ತಿ ವಿಜೇತ ಬರಹಗಾರ, ಪತ್ರಕರ್ತ, ಚಿಂತಕ ಮತ್ತು ನಿರ್ದೇಶಕ.