Prof Mahesh Chandra Guru
ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಶ್ರೀ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಭಾರತದ ಶೋಷಿತರ ಪಾಲಿಗೆ ನರಕದ ಕೂಪವಾಗಿದೆ. 2014ರಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಇರುವ ಬಹುಜನ ಭಾರತೀಯರು ಯುಪಿಎ ಸರ್ಕಾರದ ನಿಷ್ಕ್ರಿಯತೆಯಿಂದ ಬೇಸತ್ತು ಹೊಸ ಭರವಸೆಯೊಂದಿಗೆ ಎನ್ಡಿಎ ಮೈತ್ರಿಕೂಟಕ್ಕೆ ಅತ್ಯಧಿಕ ಬಹುಮತವನ್ನು ನೀಡಿದರು. ಆದರೆ ಬಹುಜನರ ಆಹಾರ ಸ್ವಾತಂತ್ರ್ಯ ಮತ್ತು ಬದುಕುವ ಸ್ವಾತಂತ್ರ್ಯಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರ್ದೇಶನದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ಸರ್ಕಾರ ಕಸಿದುಕೊಂಡು ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಮೂಲಭೂತ ಮಾನವ ಹಕ್ಕುಗಳನ್ನು ಹರಣ ಮಾಡುತ್ತಿರುವುದಕ್ಕೆ ಬಹಳಷ್ಟು ನಿದರ್ಶನಗಳಿವೆ. ತಮ್ಮನ್ನು ನಂಬಿ ರಾಜ್ಯಾಧಿಕಾರ ನೀಡಿದ ಭಾರತದ ಬಹುಜನ ಬಂಧುಗಳನ್ನು ಪ್ರಧಾನಿ ಮೋದಿ ಅತ್ಯುಗ್ರ ಶೋಷಣೆಗೆ ಗುರಿಪಡಿಸಿದ್ದಾರೆ.
ಇತ್ತೀಚೆಗೆ ಗುಜರಾತಿನ ಊನಾ ಎಂಬ ಊರಿನಲ್ಲಿ ಸತ್ತ ದನವೊಂದರ ಚರ್ಮವನ್ನು ಹೊಟ್ಟೆಪಾಡಿಗಾಗಿ ಸುಲಿಯುತ್ತಿದ್ದ ಬಡದಲಿತರನ್ನು ಕೋಮುವಾದಿಗಳು ಅಮಾನುಷವಾಗಿ ಥಳಿಸಿರುವುದು ಮೋದಿ ಸರ್ಕಾರದಲ್ಲಿ ಸತ್ತ ದನಗಳಿಗಿರುವ ಬೆಲೆ ಜೀವಂತ ದಲಿತರಿಗೆ ಇಲ್ಲವೆಂಬುದನ್ನು ಸಾಬೀತುಪಡಿಸುತ್ತದೆ. ಕೆಲವು ವರ್ಷಗಳ ಹಿಂದೆ ಹರಿಯಾಣ ರಾಜ್ಯದ ಅಂಬಾಲ ನಗರದಲ್ಲಿ ಇದೇ ಕಾರಣಕ್ಕೆ ನಾಲ್ವರು ದಲಿತರ ಮಾರಣಹೋಮ ನಡೆಯಲು ಕೋಮುವಾದಿಗಳ ಪ್ರೇರಣೆ ಬಹುಮುಖ್ಯ ಕಾರಣವಾಗಿತ್ತು. ಗುಜರಾತನ್ನು ಮಾದರಿ ರಾಜ್ಯವೆಂದು ಪ್ರತಿಬಿಂಬಿಸುವ ಮೋದಿ ಸಾಹೇಬರ ಮೂಗಿನಡಿ ಕ್ಷುಲ್ಲಕ ಕಾರಣಕ್ಕೆ ಅಮಾಯಕ ದಲಿತರನ್ನು ದೌರ್ಜನ್ಯಕ್ಕೆ ಗುರಿಮಾಡಿರುವುದು ಪ್ರಜಾಸತ್ತೆಯ ಕಗ್ಗೊಲೆಯಾಗಿದೆ.
ಕೆಲವು ದಿನಗಳ ಹಿಂದೆ ದೇಶದ ಗೌರವಾನ್ವಿತ ಬಹುಜನರ ನಾಯಕಿಯಾದ ಮಾಯಾವತಿ ಅವರನ್ನು ಭಾರತೀಯ ಜನತಾಪಕ್ಷದ ಪದಾಧಿಕಾರಿಯೊಬ್ಬರು ‘ರಾಜಕೀಯ ವೇಶ್ಯೆ’ ಎಂದು ಜರಿದಿರುವುದು ಕೋಮುವಾದಿಗಳು ಮಹಿಳೆಯರು ಮತ್ತು ದಲಿತರನ್ನು ಎಷ್ಟು ಕೀಳಾಗಿ ಕಾಣುವಂತಹ ಮನುಷ್ಯ ರೂಪದ ಮೃಗಗಳು ಎಂಬುದಕ್ಕೆ ಪುರಾವೆಯಾಗಿದೆ. ಭೂರಹಿತರಿಗೆ ಭೂಮಿ ಕೊಟ್ಟ, ಖಾಸಗಿ ವಲಯದಲ್ಲಿ ಶೋಷಿತರಿಗೆ ಉದ್ಯೋಗದಲ್ಲಿ ಮೀಸಲಾತಿ ಬೇಕೆಂದು ವಾದಿಸಿದ, ಬಡವರಿಗೆ ತಲೆ ಮೇಲೆ ಸೂರು ನೀಡಿದ ಮತ್ತು ಬಹುಜನರಿಗೆ ಸಾಮಾಜಿಕ ಸುರಕ್ಷತೆಯನ್ನು ನೀಡಿದ ಮಾಯಾವತಿಯವರ ಸಾಮಾಜಿಕ ಬದ್ಧತೆ ಮತ್ತು ಜನಪರ ಕಾಳಜಿಗಳ ಮುಂದೆ ಮೋದಿ ಮತ್ತು ಬಳಗ ಅತ್ಯಂತ ಕುಬ್ಜರಾಗಿದ್ದಾರೆ. ಮಾಯಾವತಿಯವರನ್ನು ನಿಂದಿಸಿದ ರಾಜಕಾರಣಿಯನ್ನು ಪಕ್ಷದಿಂದ ಉಚ್ಛಾಟಿಸಿರುವುದು ಒಂದು ರಾಜಕೀಯ ನಾಟಕವೇ ಆಗಿದೆ. ಕೇಂದ್ರ ಸರ್ಕಾರಕ್ಕೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದ ಪಕ್ಷದಲ್ಲಿ ಆ ದುರುಳನನ್ನು ಸೆರೆಮನೆಗೆ ತಳ್ಳಬೇಕಿತ್ತು.
ಇತ್ತೀಚೆಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿದೇಶಿ ಅರ್ಥಶಾಸ್ತ್ರಜ್ಞರು ಮೋದಿ ನೇತೃತ್ವದ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಿಂಚಿತ್ತೂ ಕಿಮ್ಮತ್ತು ಉಳಿದಿಲ್ಲವೆಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರೈತರ ಆತ್ಮಹತ್ಯೆ, ಕಾರ್ಮಿಕರ ಶೋಷಣೆ, ಮಹಿಳೆಯರ ಮೇಲೆ ದೌರ್ಜನ್ಯ, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ, ದಲಿತರ ಮಾರಣಹೋಮ ಮೊದಲಾದವುಗಳು ಜರುಗಿಲ್ಲ. ದೇಶದ ಬಹುಜನರು ಸಾಮಾಜಿಕ ಸುರಕ್ಷತೆಯಿಂದ ವಂಚಿತರಾಗಿದ್ದಾರೆ. ದೇಶದ ಸಂಪತ್ತನ್ನು ಸೃಷ್ಟಿ ಮಾಡುವ ಮೂಲನಿವಾಸಿಗಳಿಗೆ ಆಹಾರ ಸ್ವಾತಂತ್ರ್ಯ, ಆರೋಗ್ಯ ಸ್ವಾತಂತ್ರ್ಯ, ಶಿಕ್ಷಣ ಸ್ವಾತಂತ್ರ್ಯ, ಉದ್ಯೋಗ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸುರಕ್ಷತೆ ಸ್ವಾತಂತ್ರ್ಯಗಳನ್ನು ನಿರಾಕರಿಸಿರುವ ಕೋಮುವಾದಿಗಳ ಕಪಿಮುಷ್ಟಿಯಲ್ಲಿರುವ ದೇಶದ ಪ್ರಧಾನಿ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ.
ದೇಶವು ಇಂತಹ ಹೀನಾಯ ಸ್ಥಿತಿಯನ್ನು ತಲುಪಿರಲು ಬಹುಜನರ ಐಕ್ಯತೆಯ ಕೊರತೆ, ಹೋರಾಟದ ಕೊರತೆ ಮತ್ತು ಪ್ರಜ್ಞಾವಂತಿಕೆಯ ಕೊರತೆ ಬಹುಮುಖ್ಯ ಕಾರಣಗಳಾಗಿವೆ. ಅಂಬೇಡ್ಕರ್ ಹೆಸರನ್ನು ಹೇಳಿಕೊಂಡು ರಾಜಕೀಯವಾಗಿ ಮುಂದೆ ಬಂದ ರಾಮದಾಸ್ ಅತಾವಳೆ, ರಾಮವಿಲಾಸ್ ಪಾಸ್ವಾನ್, ಉದಿತ್ರಾಜ್, ರಮೇಶ ಜಿಗಜಿಣಗಿ ಮೊದಲಾದವರು ರಾಜಕೀಯ ಅಧಿಕಾರಕ್ಕೋಸ್ಕರ ತಮ್ಮ ಬಹುಜನ ಬಂಧುಗಳನ್ನು ನಿರ್ಲಕ್ಷಿಸಿ ಕುಖ್ಯಾತ ಅಂಬೇಡ್ಕರ್ ದ್ರೋಹಿಗಳಾಗಿ ಭಾರತದ ಇತಿಹಾಸದ ಕಸದ ಬುಟ್ಟಿಗೆ ಸೇರಲು ಹೊರಟಿರುವುದು ವಿಷಾದನೀಯ ಸಂಗತಿ. ಇಂದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮೊದಲಾದ ಮಹಾತ್ಮರ ಸಿದ್ಧಾಂತಗಳ ಅಡಿಯಲ್ಲಿ ಒಗ್ಗೂಡಿ ತಾವು ಕಳೆದುಕೊಂಡಿರುವ ರಾಜ್ಯಾಧಿಕಾರವನ್ನು ಮರಳಿ ಪಡೆಯುವುದು ಅನಿವಾರ್ಯವಾಗಿದೆ. ಬಿಹಾರದ ಪ್ರಜ್ಞಾವಂತ ಬಹುಜನರು ಕೋಮುವಾದಿಗಳಿಗೆ ಕಲಿಸಿರುವಂತಹ ಐತಿಹಾಸಿಕ ಪಾಠವನ್ನು ದೇಶದ ಎಲ್ಲ ರಾಜ್ಯಗಳಲ್ಲಿಯೂ ಮುಂದಿನ ಚುನಾವಣೆಗಳಲ್ಲಿ ಕಲಿಸಬೇಕು. ಬಹುಜನ ಚಿಂತಕರು, ಸಂಘಟಕರು ಮತ್ತು ಚಳುವಳಿಗಾರರು ಇಂದಿಗೂ ಕೂಡ ತಮ್ಮ ಪ್ರಜ್ಞಾವಂತಿಕೆ ಮತ್ತು ಹೃದಯವಂತಿಕೆಗಳನ್ನು ಉಳಿಸಿಕೊಂಡು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಆದರೆ, ನಾಯಕರೆನಿಸಿಕೊಂಡವರು ತಮ್ಮ ಸ್ವಾರ್ಥಪರತೆ ಮತ್ತು ಅಧಿಕಾರ ಲಾಲಸೆಗಳಿಂದಾಗಿ ಸಾಮಾಜಿಕ ನ್ಯಾಯಕ್ಕೆ ದ್ರೋಹ ಬಗೆದಿದ್ದಾರೆ. ಇಂತಹ ರೋಲ್ಕಾಲ್ ಮತ್ತು ಲೆಟರ್ಹೆಡ್ ನಾಯಕರನ್ನು ಬದಿಗೊತ್ತಿ ಪ್ರಗತಿಪರ ಸಿದ್ಧಾಂತ ಮತ್ತು ಸಾಮೂಹಿಕ ನಾಯಕತ್ವದಡಿ ಬಹುಜನರು ಒಂದಾಗಿ ಇಂಡಿಯಾ ದೇಶವನ್ನು ಆಳಬೇಕೆಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ.
~~~
ಡಾ. ಮಹೇಶ್ ಚಂದ್ರ ಗುರು ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಮತ್ತು ಕುವೆಂಪು ಅವರ ಸಿದ್ದಾಂತವನ್ನು ಅನುಸರಿಸಿ ಒಬ್ಬ ನಿಷ್ಠುರ ಬರಹಗಾರರಾಗಿ, ಬಾಷಣಕಾರಾಗಿ ತಮ್ಮ ವಿದ್ವತ್ತಿನಿಂದ ಪ್ರೊ. ಗುರು ಮಾಧ್ಯಮ ಶಿಕ್ಷಣಕ್ಕೆ ಕೊಡುಗೆ ನೀಡಿದ್ದಾರೆ.