ರಘೋತ್ತಮ ಹೊಬ (Raghothama Hoba)
ಕಳೆದ ಏಪ್ರಿಲ್ ತಿಂಗಳಲ್ಲಿ ಬಿಹಾರದ ಸಾರನಾಥದಿಂದ ಬಿಜೆಪಿ ವತಿಯಿಂದ ಯಾತ್ರೆಯೊಂದು ಉದ್ಘಾಟನೆ ಆಗಿತ್ತು. ಹೆಸರು “ಧಮ್ಮ ಚೇತನಾ ಯಾತ್ರೆ”. ಖಂಡಿತ ಅದು ಬೌದ್ಧ ಧರ್ಮದ ಯಾತ್ರೆಯಾಗಿತ್ತು. “ಮೋದಿ ಮಾಂಕ್ಸ್” ಅಥವಾ “ಮೋದಿ ಭಿಕ್ಕುಗಳು” ಎಂದು ಕರೆಯಲ್ಪಡುತ್ತಿದ್ದ ಹಿರಿಯ ಭಿಕ್ಕು ಧಮ್ಮ ವಿರಿಯೊ ಮುಂದಾಳತ್ವ ದ ಭಿಕ್ಕುಗಳ ಗುಂಪು ಈ ಯಾತ್ರೆಯ ನೇತೃತ್ವ ವಹಿಸಿತ್ತು. ಮೋದಿ ಸಾಧನೆಗಳನ್ನು ಹೊಗಳುವುದು, ಅಂಬೇಡ್ಕರ್ ಬಗ್ಗೆ ಮೋದಿಯ ಮಾತುಗಳನ್ನು ಪ್ರಚುರಪಡಿಸುವುದು ಉತ್ತರಪ್ರದೇಶದ ಉದ್ದಗಲಕ್ಕೂ ಹಾದುಹೋಗುತ್ತಿದ್ದ ಈ ಯಾತ್ರೆಯ ಉದ್ದೇಶ ವಾಗಿತ್ತು. ಅಂದರೆ ಹೆಸರು ಬೌದ್ಧ ಧರ್ಮ ಆದರೆ ಉದ್ದೇಶ ಬಿಜೆಪಿ ರಾಜಕೀಯ ಅಂದರೆ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ದಲಿತರ ಓಟಗಳನ್ನು ಸೆಳೆಯುವ ಬಿಜೆಪಿಯ ಚುನಾವಣಾ ರಾಜಕೀಯವದು!
ಇದಕ್ಕೆ ಕಾರಣ “ಹೇಗಿದ್ದರು ಬೌದ್ಧ ಧರ್ಮದ ಬಹುತೇಕ ಅನುಯಾಯಿಗಳು ಅಥವಾ ಅದರತ್ತ ಒಲವುಳ್ಳವರು ದಲಿತರು. ಆದ್ದರಿಂದ ಅವರ ನಡುವೆ ಧಮ್ಮ ಯಾತ್ರೆಯೆಂದರೆ, ಅದರಲ್ಲೂ ಬೌದ್ಧ ಭಿಕ್ಕುಗಳೇ ಅಂತಹ ಯಾತ್ರೆಯ ನೇತೃತ್ವ ವಹಿಸುತ್ತಾರೆಂದರೆ… ಆ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಅಂತಹ ಯಾತ್ರೆಯಲ್ಲಿ ಪಾಲ್ಗೊಂಡರೆ ದಲಿತರ ಓಟುಗಳನ್ನು ಬೌದ್ಧ ಧರ್ಮದ ಹೆಸರಲ್ಲಿ ಒಂದಷ್ಟಾದರೂ ಕೀಳಬಹುದು…!”
ಖಂಡಿತ, ಇಂತಹ ಉದ್ದೇಶ ಮತ್ತು ಈ “ಉದ್ದೇಶ” ದ ಬೌದ್ಧ ಯಾತ್ರೆ, ಮತ್ತು ಅದನ್ನು ಡಿಸೈನ್ ಮಾಡಿದ ಸಂಘಪರಿವಾರದ ಅಪಾಯಕಾರಿ ತಲೆ ಎಲ್ಲವನ್ನೂ ನೆನೆಸಿಕೊಂಡರೆ ಕೇವಲ ಕ್ರಿಮಿನಲ್ ಗಳು ಮಾತ್ರ ಇಂತಹದ್ದನ್ನು ಮಾಡಲು ಸಾಧ್ಯ ಎಂದು ಯಾರಿಗಾದರೂ ಅನಿಸದಿರದು. ಯಾಕೆಂದರೆ ಶಾಂತಿ ಧೂತ ಬುದ್ದನನ್ನೂ ಹಿಂದುತ್ವ ತನ್ನ ಅಪಾಯಕಾರಿ ರಾಜಕೀಯ ಕುಟಿಲತೆಗೆ ಬಳಸಿಕೊಳ್ಳುತ್ತದೆಂದರೆ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ಅದರ ನೀತಿ ಮೇರೆ ಮೀರಿರುವುದು ಎಂಥವರಿಗಾದರೂ ಸ್ಪಷ್ಟವಾಗುತ್ತದೆ. ಅಂದರೆ ಹೇಗಿದ್ದರೂ ಬುದ್ಧ ಎಂದರೆ ದಲಿತರಿಗೆ ಭಾವನಾತ್ಮಕ ನಂಟು. ಅಂತಹ ನಂಟನ್ನು ಹಿಂದುತ್ವದ ನೇತೃತ್ವದಲ್ಲಿ ಧಮ್ಮ ಯಾತ್ರೆಯೊಂದರ ಮೂಲಕ ಬೆಸೆದರೆ? ದಲಿತರ ಧಾರ್ಮಿಕ ಭಾವನೆಗಳನ್ನು ಹಿಂದುತ್ವದ ರಾಜಕೀಯಕ್ಕೆ ಬಳಸಿಕೊಂಡರೆ? ಹಿಂದುತ್ವವೂ ಭದ್ರವಾದಂಗಾಯ್ತು ದಲಿತರನ್ನೂ ಹಳ್ಳಕ್ಕೆ ಕೆಡವಿದಂಗಾಯ್ತು!
ಏಕೆಂದರೆ ಈಗಾಗಲೇ ಅಡ್ಚಾಣಿಯವರ ಅಯೋಧ್ಯೆ ಯ ರಾಮಮಂದಿರ ರಥಯಾತ್ರೆಯ ಮೂಲಕ ಹಿಂದೂಗಳನ್ನು ಭಾವನಾತ್ಮಕವಾಗಿ ಮುಸ್ಲಿಮರ ವಿರುದ್ದ ಕೆರಳಿಸಿ ದೇಶಾದ್ಯಂತ ಬಿಜೆಪಿ ತನ್ನ ಮರದ ಬೇರನ್ನು ಭದ್ರಪಡಿಸಿಕೊಂಡಿದೆ. ಎಟುಕದ್ದೆಂದರೆ “ದಲಿತ” ಎಂಬ ಆ ಗುಂಪಷ್ಟೆ. ಅಂದಹಾಗೆ ಅಂತಹ ಗುಂಪನ್ನು ಬೌದ್ಧ ಧಮ್ಮ ಚೇತನ ಯಾತ್ರೆಯ ಮೂಲಕ ಬೆಸೆದರೆ? ಮುಗಿದುಹೋಯಿತು! ಹಿಂದುತ್ವಕ್ಕೆ ಇನ್ನು ತಡೆ ಎನ್ನುವುದೇ ಇರುವುದಿಲ್ಲ. ಅದಕ್ಕೇ ಹೇಳಿದ್ದು ಇದು ಕ್ರಿಮಿನಲ್ ಐಡಿಯಾ ಎಂದು. ಯಾಕೆಂದರೆ ಒಮ್ಮೆ ಬೌದ್ಧ ಧರ್ಮದ ಹೆಸರಲ್ಲಿ ದಲಿತರು ಬಿಜೆಪಿಗೆ ಓಟು ಹಾಕಲು ಪ್ರಾರಂಭಿಸಿದರೆ ಮುಗಿದುಹೋಯಿತು ಬಿಜೆಪಿಯನ್ನು ಇನ್ನು ತಡೆಯುವವರು ಯಾರೂ ಇರುವುದಿಲ್ಲ. ಅಧಿಕಾರ ಅವರಿಗೆ ಪರ್ಮನೆಂಟ್ ಆಗಿ ಬರೆದುಕೊಟ್ಟಂತೆಯೇ.
ಈ ಸಂದರ್ಭದಲ್ಲಿ ಹಿಂದೂ ಧರ್ಮ ಬೇರೆ ಬೌದ್ಧ ಧರ್ಮ ಬೇರೆ, ಹಾಗೆಯೇ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುವುದನ್ನು ಹಿಂದುತ್ವ ವಿರೋಧಿಸುತ್ತದಲ್ಲ ಎಂಬ ಜಿಜ್ಞಾಸೆ ಅಥವಾ ಚಿಂತನೆ ಶೋಷಿತ ಬಂಧುಗಳಲ್ಲಿ ಮೂಡಬಹುದು. ಇದಕ್ಕೆ ಉತ್ತರ ಒಂದು ಪ್ರಶ್ನೆ ಆಗುತ್ತದೆ. ಅಂದರೆ ಯಾವುದು ಗ್ರೇಟ್ ಧರ್ಮ ಯಾ ರಾಜಕಾರಣ? ಎಂಬುದೇ ಆ ಪ್ರಶ್ನೆ. ಖಂಡಿತ ಸಂಘಪರಿವಾರಕ್ಕೆ ತಿಳಿದಿದೆ “ಗ್ರೇಟ್ ರಾಜಕಾರಣ” ಎಂದು. ಯಾಕೆಂದರೆ ಒಮ್ಮೆ ರಾಜಕೀಯ ಅಧಿಕಾರ ಪಡೆದರೆ ಅದರಲ್ಲಿ ತಮ್ಮ ಸ್ವಂತ ಧರ್ಮವನ್ನು ಪೋಷಿಸಬಹುದು , ಬೇರೆಯವರ ಧರ್ಮವನ್ನು ಹದ್ದುಬಸ್ತಿನಲ್ಲೂ ಇಡಬಹುದು ಎಂಬುದು. ಆ ಕಾರಣಕ್ಕೆ ಈಗಾಗಲೇ ಮುಸ್ಲಿಮರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಭಯೋತ್ಪಾದನೆಯ ಭೂತದ ಮೂಲಕ ನಿಯಂತ್ರಿಸುವಲ್ಲಿ ಹಿಂದುತ್ವ ತನ್ನ ಅಭಿಯಾನ ಚಾಲೂ ಇಟ್ಟಿದೆ. ಆದರೆ ನಿಯಂತ್ರಣಕ್ಕೆ ಸಿಗದದ್ದವರೆಂದರೆ ದಲಿತರು ಮತ್ತವರ ಅಂಬೇಡ್ಕರ್ ವಾದಿ ರಾಜಕಾರಣ. ಆ ಕಾರಣಕ್ಕೆ ಅಂಬೇಡ್ಕರ್ ವಾದವನ್ನು ಕಂಟ್ರೋಲ್ ಮಾಡಬೇಕೆಂದರೆ ಬೌದ್ಧ ಧರ್ಮವನ್ನು ಬಳಸಿಕೊಂಡರೆ ಹೇಗೆ? ಆಶ್ಚರ್ಯವೆಂದರೆ ಹಿಂದುತ್ವ ಈಗಾಗಲೇ ಅದರಲ್ಲಿ ಭಾಗಶಃ ಯಶಸ್ಸು ಕಂಡಿದೆ. ಉದಾಹರಣೆಗೆ ಹೇಳುವುದಾದರೆ ಮಹಾರಾಷ್ಟ್ರದ ಆರ್ ಪಿಐ ನಾಯಕ ಬೌದ್ಧ ಧರ್ಮಕ್ಕೆ ಸೇರಿದ ರಾಮದಾಸ್ ಅಥವಾಲೆ ರಾಜ್ಯಸಭಾ ಸದಸ್ಯನಾಗಿ ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿಯೂ ಆಗಿದ್ದಾನೆ. ಈ ನಿಟ್ಟಿನಲ್ಲಿ ಈ ಅಥವಾಲೆ ಹೇಳುವುದು ಮಾಯಾವತಿ ಯಾಕೆ ಇನ್ನೂ ಬೌದ್ದ ಧರ್ಮಕ್ಕೆ ಮತಾಂತರವಾಗಿಲ್ಲ? ಎಂದು! ಆದರೆ ವಾಸ್ತವವೆಂದರೆ ಮಾಯಾವತಿಯವರು ಈಗಾಗಲೇ ಬೌದ್ಧ ಧರ್ಮದ ಅನುಯಾಯಿ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಬೌದ್ಧ ಅನುಯಾಯಿ ಆಗಿರುವುದರಿಂದಲೇ ಉತ್ತರ ಪ್ರದೇಶದ ದಲಿತರು ಆ ಪರಿ ಬೌದ್ಧ ಧರ್ಮದೆಡೆ ಒಲವು ಹೊಂದಿರುವುದು ಮತ್ತು ಬಿಜೆಪಿ ಅದನ್ನು ಬಳಸಿಕೊಳ್ಳಲು ಹೊರಟಿರಯವುದು. ಒಟ್ಟಾರೆ ಅರ್ಥವಾಗುವುದು ರಾಮದಾಸ್ ಅಥವಾಲೆಯೂ ಕೂಡ ಬಿಜೆಪಿಯ ಇಂತಹ ಸಂಚಿನ ಅಂದರೆ ದಲಿತರನ್ನು ಸೆಳೆಯಲು ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿನ ಭಾಗವಾಗಿದ್ದಾರೆ ಎಂಬುದು.
ಆದರೆ ಸ್ವಾಗತಾರ್ಹವೆಂದರೆ ಹಿಂದುತ್ವದ ಈ ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿಗೆ ಉತ್ತರಪ್ರದೇಶದಲ್ಲಿ ಭಾರೀ ಹೊಡೆತ ಬಿದ್ದಿದೆ. ಯಾಕೆಂದರೆ ತನ್ನ ಧಮ್ಮ ಚೇತನಾ ಯಾತ್ರೆಯ ಸಮಾರೋಪವನ್ನು ಇದೇ ಜುಲೈ 31 ರಂದು ಆಗ್ರಾದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಆ ಸಮಾವೇಶದಲ್ಲಿ 50,000 ದಲಿತರನ್ನು ಸೇರಿಸುವ ಉದ್ದೇಶ ಹೊಂದಿತ್ತು ಮತ್ತು ಆ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ ಆ ಸಮಾವೇಶಕ್ಕೆ ಯಾವೊಬ್ಬ ದಲಿತನೂ ಬರುವ ಸಂಭವ ಕಾಣದೆ ಬಿಜೆಪಿ ಆ ಸಮಾವೇಶವನ್ನೆ ರದ್ದುಮಾಡಿದೆ. ಆ ಮೂಲಕ ತನ್ನ ಕೋಮುವಾದಿ ರಾಜಕಾರಣಕ್ಕೆ ಬೌದ್ಧ ಧರ್ಮ ಬಳಸಿಕೊಳ್ಳುವ ಅದರ ತಂತ್ರಕ್ಕೆ ಅದು ಭಾರೀ ಮುಖಭಂಗ ಅನುಭವಿಸಿದೆ! ಈ ದಿಸೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶದ ದಲಿತರು ಬಿಜೆಪಿಗೆ ಮುಟ್ಟಿನೋಡಿಕೊಳ್ಳುವ ಪೆಟ್ಟನ್ನೇ ಕೊಟ್ಟಿದ್ದಾರೆ. ಯಾಕೆಂದರೆ ಒಮ್ಮೆ ಬಿಜೆಪಿಯ ಈ ತಂತ್ರ ಯಶಸ್ಸು ಕಂಡಿದ್ದರೆ ದೇಶಾದ್ಯಂತ ಅದು ಇದನ್ನು ಅನ್ವಯಿಸುತ್ತಿತ್ತು ಮತ್ತು ಅದಕ್ಕೆ ಕನಿಷ್ಠ ಪಕ್ಷ ದಲಿತರಲ್ಲಿ ಶೇ.50 ಅಥವಾ ಒಟ್ಟು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡರೆ ಶೇ.10 ವೋಟ್ ಬ್ಯಾಂಕ್ ಪರ್ಮನೆಂಟಾಗಿ ಸಿಗುತ್ತಿತ್ತು! ಆದರೆ ಈಗ ಬಿಜೆಪಿಯ ಆ ತಂತ್ರವನ್ನು ಉತ್ತರ ಪ್ರದೇಶದ ದಲಿತರು ವಿಫಲಗೊಳಿಸಿರುವುದರಿಂದ ಒಟ್ಟಾರೆ ದಲಿತ ರಾಜಕಾರಣಕ್ಕೂ ಒಂದು ಬೆಲೆ ಸಿಕ್ಕಿದೆ ಹಾಗೆ ಭವಿಷ್ಯದ ದೃಷ್ಟಿಯಿಂದ ತನ್ನನ್ನು ತಾತ್ಕಾಲಿಕವಾಗಿ ಬೆಂಬಲಿಸಿ ಭವಿಷ್ಯದಲ್ಲಿ ತನ್ನನ್ನು ಆಪೋಶನ ತೆಗೆದುಕೊಳ್ಳಬಹುದಾದ ಹಿಂದುತ್ವದಿಂದ ತಪ್ಪಿಸಿಕೊಂಡ ಶ್ರೇಯವೂ ಬೌದ್ಧ ಧರ್ಮಕ್ಕೆ ಸಿಕ್ಕಿದೆ.
ದಲಿತರು ಇಂದು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ತುರ್ತಿದೆ . ನಮ್ಮ ಸದ್ಯದ ಅಗತ್ಯ ಬೌದ್ಧ ಧರ್ಮವೋ ಯಾ ಸ್ವಾಭಿಮಾನಿ ಅಂಬೇಡ್ಕರ್-ಕಾನ್ಷೀರಾಂ-ಮಾಯಾವತಿ ಪ್ರಣೀತ ರಾಜಕಾರಣವೋ ಎಂಬುದನ್ನು ಅರಿಯಬೇಕಿದೆ. ದಲಿತರು ತಕ್ಷಣಕ್ಕೆ ಬೌದ್ಧ ಧರ್ಮ ಅಂದರೆ ಬಿಜೆಪಿ ಬಲೆ ಹಿಡಿದು ಕಾದು ಕುಳಿತಿದೆ ನುಂಗಲು! ಅಂಬೇಡ್ಕರ್ ವಾದಿ ರಾಜಕಾರಣ ಎಂದರೆ ಅಲ್ಲಿ ರಾಜಕಾರಣವೂ ಉಳಿಯುತ್ತದೆ ಹಾಗೆಯೇ ಆ ರಾಜಕೀಯ ಅಧಿಕಾರದಿಂದ ಉಳಿಸಕೊಳ್ಳಬಹುದಾದ ನಮ್ಮ ಸ್ವಧರ್ಮ ಅಂದರೆ ಬೌದ್ಧ ಧರ್ಮ ಕೂಡ ಉಳಿಯುತ್ತದೆ.
ಎಲ್ಲರಿಗೂ ಇತಿಹಾಸ ತಿಳಿದಂತೆ ಬೌದ್ಧ ಧರ್ಮ ನಾಶವಾದದ್ದೆ ರಾಜಾಶ್ರಯ ಅಥವಾ ರಾಜಕೀಯ ಆಶ್ರಯ ತಪ್ಪಿದ್ದರಿಂದ. ಅಂದಹಾಗೆ ಹಿಂದುತ್ವ ಬೋಧಿಸುವ ರಾಜಕೀಯ ಪಕ್ಷ ಬಿಜೆಪಿ ಬೌದ್ಧ ಧರ್ಮ ಬೆಳೆಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಬೆಳೆಸುವುದಿರಲಿ ನಾವು ಬೌದ್ಧಧರ್ಮವನ್ನು ಶಾಶ್ವತವಾಗಿ ಹಿಂದುತ್ವಕ್ಕೆ ಕಳೆದುಕೊಳ್ಳಬೇಕಾದ ಅಪಾಯವಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಇಂತಹ ಷಡ್ಯಂತ್ರವನ್ನು ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು ಸ್ತುತ್ಯರ್ಹರು . ಇಡೀ ದೇಶದ ದಲಿತರೆಲ್ಲರೂ ಅವರ ಈ ಕಾರ್ಯವನ್ನು ಶ್ಲಾಘಿಸಿಬೇಕಿದೆ. ತನ್ಮೂಲಕ ಹಿಂದುತ್ವದ ಅಪಾಯದಿಂದ ತಮ್ಮನ್ನು ತಾವು ದಲಿತರು ಕಾಪಾಡಿಕೊಳ್ಳಬೇಕಿದೆ
~~~
ರಘೋತ್ತಮ ಹೊಬ ಪರಿಚಯ
ಪ್ರಕಟಿತ ಕೃತಿಗಳು:1. ಗಾಂಧಿ ಹೊರಾಟ ಯಾರ ವಿರುದ್ಧ? (2010) 2. ಅಂಬೇಡ್ಕರ್ ಎಂಬ ಕರಗದ ಬಂಡೆ (2012) 3. ಎದೆಗೆ ಬಿದ್ದ ಗಾಂಧಿ (2014).
ಬರವಣಿಗೆಯ ಇತಿಹಾಸ: ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧಭಾರತ ಮಾಸ ಪತ್ರಿಕೆಗಳು, ಗೌರಿಲಂಕೇಶ್, ಅಗ್ನಿ ವಾರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ನಿರಂತರ ಲೇಖನಗಳ ಪ್ರಕಟ.
ಪ್ರಶಸ್ತಿಗಳು: ‘ಅಂಬೇಡ್ಕರ್ ಎಂಬ ಕರಗದ ಬಂಡೆ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ’ (2013).