Round Table India
You Are Reading
ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ
0
Features

ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ

Ravindra book

 

ಹಾರೋಹಳ್ಳಿರವೀಂದ್ರ (Harohalli Ravindra)

Ravindra bookಉಗ್ರ ಹಿಂದುತ್ವವಾದಿ ವಿ.ಡಿ. ಸಾವರ್ಕರ್ “ಯಾರಿಗೆ ಭಾರತ ದೇಶ ಪಿತೃಭೂಮಿಯಷ್ಟೇ ಅಲ್ಲ, ಪುಣ್ಯ ಭೂಮಿಯು ಆಗಿದಿಯೊ ಆತನೇ ಹಿಂದೂ” ಎಂದು ಹೇಳುತ್ತಾರೆ. ಪ್ರಮುಖವಾಗಿ ಮುಸ್ಲಿಮರನ್ನು, ಕ್ರೈಸ್ತರನ್ನು, ಪಾರಸಿ ಹಾಗೂ ಯಹೂದ್ಯರನ್ನು ಹೊರಗಿಡುವುದು ಮತ್ತು ಬೌದ್ಧ, ಜೈನ, ಸಿಖ್ಖರನ್ನು ಒಳತೆಗೆದುಕೊಳ್ಳುವ ಉದ್ದೇಶಗಳು ಇದ್ದವು ಎಂದು ಸುರೇಶ್ ಭಟ್ ಬಾಕ್ರಬೈಲು ಅವರ ‘ಕೇಸರಿ ಭಯೋತ್ಪಾದನೆ’ ಕೃತಿಯಲ್ಲಿ ಸಾಕ್ಷೀಕರಿಸಿದ್ದಾರೆ.

ಕರ್ಮ ಸಿದ್ಧಾಂತ, ಜಾತಿ ಪದ್ದತಿ ಮತ್ತು ವರ್ಣವ್ಯವಸ್ಥೆಯ ಸಾಮಾಜಿಕ ಸಂರಚನೆಯನ್ನೇ ಹೊಂದಿರುವ ಹಿಂದೂಧರ್ಮ ಸಾವರ್ಕರ್ ಅಂತವರ ಪ್ರತಿಪಾದನೆಗಳಿಂದ ರಾಷ್ಟ್ರೀಯ ಪರಿಕಲ್ಪನೆಗೆ ತೆವಳಿಕೊಂಡಿತು. ಅದು ನ್ಯಾಶನಲಿಟಿ ಎಂದರೆ ಹಿಂದೂ, ಹಿಂದೂ ಎಂದರೆ ನ್ಯಾಶನಲಿಟಿ ಎನ್ನುವ ಹಂತಕ್ಕೆ ತಲುಪಿದೆ. ಭಾರತದ ಬಹುಪಾಲು ಜನರನ್ನು ದೇಶಪ್ರೇಮ ಎಂದರೆ ಹಿಂದೂಧರ್ಮವನ್ನು ರಕ್ಷಿಸುವುದು ಎಂಬಂತೆ ಹಲವರನ್ನು ಮ್ಯಾನುಪುಲೇಟ್ ಮಾಡಲಾಗಿದೆ. ಇಂದಿಗೂ ಕೋಟ್ಯಾಂತರ ಮಂದಿ ಹಿಂದೂ ಧರ್ಮ ರಕ್ಷಿಸಿದರೆ ದೇಶ ರಕ್ಷಿಸಿದಂತೆ ಎಂದು, ರಾಷ್ಟ್ರೀಯತೆ ಪರಿಕಲ್ಪನೆಯ ಅರಿವಿಲ್ಲದೆ ಮಾತನಾಡುತ್ತಾರೆ. ಮುಖ್ಯವಾಗಿ ಇಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ರಾಷ್ಟ್ರೀಯತೆ ಎಂದರೆ ಏನು? ರಾಷ್ಟ್ರೀಯತೆಯನ್ನು ಹೇಗೆ ಪ್ರತಿಪಾಧನೆ ಮಾಡಬೇಕು? ಭಾರತದಂತಹ ಬಹುಸಂಸ್ಕೃತಿ, ಬಹುಧರ್ಮಗಳ ಭೂ ಪ್ರದೇಶದಲ್ಲಿ ಅದರ ಪರಿಕಲ್ಪನೆಯನ್ನು ವಿಸ್ತರಿಸಿಕೊಳ್ಳವುದಾದರು ಹೇಗೆ? ಎಂಬುದನ್ನು ತಿಳಿಯಬೇಕಿದೆ. ಸಂಘ ಪರಿವಾರದ ಹಿಡಿತದಲ್ಲಿ ಕಾರ್ಯನಿರ್ವಹಿಸುವ ಕೋಟ್ಯಾಂತರ ಅಮಾಯಕರಿಗೆ ಇಂತಹ ಪರಿಕಲ್ಪನೆಗಳ ಅರಿವಿಲ್ಲ. ರಾಷ್ಟ್ರೀಯತೆ ಎಂದರೆ ಒಬ್ಬ ಮನುಷ್ಯ ತಾನು ಹುಟ್ಟಿದ ನೆಲದ ಮೇಲಿನ ಆತ್ಮಗೌರವ. ಆದರೆ ಇಲ್ಲಿ ತಾನು ಜನಿಸಿದ ನೆಲದ ಮೇಲಿನ ಆತ್ಮಗೌರವದ ಪರಿಕಲ್ಪನೆಗಿಂತ, ಧಾರ್ಮಿಕ ಅಜೆಂಡಾವನ್ನೆ ರಾಷ್ಟ್ರೀಯತೆ ಎಂದು ಕರೆಯಲಾಗುತ್ತಿದೆ. ತಾನುಟ್ಟಿದ ಸಮಾಜದಲ್ಲಿ ವ್ಯಕ್ತಿಯ ಚಿಂತನೆಗಳ ವಿರುದ್ಧ ನೆಲೆಯಲ್ಲಿ ಮತ್ತೊಂದು ಸಮೂಹ ಚಲಿಸಿದಾಗ, ಆತ ಅವರ ವಿರುದ್ಧ ಸೆಣಸಾಡಬೇಕಾಗುತ್ತದೆ. ಇಂತಹ ಬಿಕ್ಕಟ್ಟು ಎಲ್ಲಾ ಕಾಲಘಟ್ಟದಲ್ಲೂ ಹಾದು ಹೋಗಿದೆ. ಹಿಂದೆ ಅವುಗಳನ್ನು ಸೈದ್ಧಾಂತಿಕ ವೈರುಧ್ಯಗಳು, ಹೊಸ ಮಾದರಿಯ ಆಲೋಚನಾ ಕ್ರಮ ಎಂದು ಕರೆಯುತ್ತಿದ್ದರು. ಆದರೆ ಇಂದು ಆ ನಿಲುವುಗಳನ್ನೆ ದೇಶದ್ರೋಹ ಎಂದು ಕರೆಯಲಾಗುತ್ತಿದೆ.

ರಾಷ್ಟ್ರಕವಿ ಕುವೆಂಪು ಅವರು ಹೇಳುವ ಸರ್ವಜನಾಂಗದ ಶಾಂತಿಯ ತೋಟದಂತೆ, ರಾಷ್ಟ್ರೀಯತೆಯ ತಾತ್ವಿಕತೆ ಉದಯವಾಗಬೇಕಿತ್ತು. ಆದರೆ ಜನ ವಿರೋಧಿ ನೆಲೆಯಲ್ಲಿ ಚಾಲನೆಯಾಗುತ್ತಿರುವುದು ದಿವಾಳಿಯಂಚಿನ ಸೂಚನೆಗಳಾಗಿವೆ. ಹಿಂದುತ್ವ ನಿಂತಿರುವುದೆ ಭಾರತದ ಮಿಲಿಟರಿ ಮೇಲೆ. ಗಡಿಯಲ್ಲಿನ ಪ್ರಲೋಭಗಳನ್ನು ಬೆರಳು ಮಾಡುತ್ತ, ದೇಶಪ್ರೇಮ ಎಂಬ ಪದ ಬಳಕೆಯನ್ನು ಬಂಡವಾಳ ಮಾಡಿಕೊಂಡು, ಇಡೀ ಭಾರತದ ಪರಂಪರೆಗೆ ಕೋಮುವಾದದ ಬಣ್ಣ ಹಚ್ಚಲಾಗಿದೆ. ದೇಶಪ್ರೇಮ ಎಂದರೆ ಒಂದು ಭೌಗೋಳಿಕ ಭೂಪ್ರದೇಶದ ಜನರನ್ನು ಪ್ರೀತಿಸುವುದು. ಆದರೆ ಇಲ್ಲಿ ಏಕ ಸಂಸ್ಕೃತಿ ಜನರನ್ನು ಮಾತ್ರ ಪ್ರೀತಿಸಿ, ಉಳಿದವರನ್ನು ನಿರಾಕರಣೆ ಮಾಡುವುದು ದೇಶಪ್ರೇಮವಾಗಿದೆ. ಇಲ್ಲಿ ಎಲ್ಲವು ತದ್ವಿರುದ್ಧ. ದೇಶದ್ರೋಹಿಗಳು ದೇಶಪ್ರೇಮಿಗಳಾಗುತ್ತಿದ್ದಾರೆ. ದೇಶಪ್ರೇಮಿಗಳು ದೇಶದ್ರೋಹಿಗಳಾಗುತ್ತಿದ್ದಾರೆ!!

Ravindra bookcover

ಭಾರತದ ಮೇಲೆ ಹಲವಾರು ಬಾರಿ ಆಕ್ರಮಣದ ಮೇಲೆ ಆಕ್ರಮಣಗಳು ನಡೆದಿವೆ. ಎಲ್ಲಾ ಆಕ್ರಮಣಕಾರಿಗಳಿಗೂ ದೇಶವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟು, ಅವರ ಬಳಿಯೇ ಕೈಕಟ್ಟಿಕೊಂಡು ಗುಲಾಮರಾಗಿ ಕಾರ್ಯನಿರ್ವಹಿಸುತ್ತ ಆರ್ಥಿಕ ಭದ್ರತೆ ಮಾಡಿಕೊಂಡ ಹಿಂದೂಗಳು ದೇಶಪ್ರೇಮದ ಶಿಕ್ಷಕರಾಗಿದ್ದಾರೆ. ಸಂಪತ್ತಿಗಾಗಿ ಬ್ರಿಟೀಷರಿಗೆ ಟಿಪ್ಪು ಸುಲ್ತಾನ್ ಸೈನ್ಯದ ರಹಸ್ಯ ಬಿಟ್ಟುಕೊಟ್ಟ ದಿವಾನ್ ಪುರ್ಣಯ್ಯನವರಿಗಿಂತಲೂ ದೇಶದ್ರೋಹಿಗಳುಂಟೆ? ವಸಾಹತುಶಾಯಿ ದಾಸ್ಯದ ಮುಕ್ತಿಗಾಗಿ ಹಂಬಲಿಸಿದ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರರೆಂದರೆ ಅದು ಟಿಪ್ಪು ಸುಲ್ತಾನ್ ಮಾತ್ರ. ಅಂತಹ ಹೋರಾಟಗಾರರಿಗೆ ಇಲ್ಲಿ ದೇಶದ್ರೋಹಿಪಟ್ಟ ಕಟ್ಟಲಾಗುತ್ತಿದೆ. ಅವಕಾಶವಾದದ ಗೀಳಿಗಿಳಿದು ಬ್ರಿಟೀಷರಿಗೆ ತಪ್ಪೊಪ್ಪಿಗೆಯ ಪತ್ರ ಬರೆದವರ ಸಂತಾನಗಳೆ ಇಲ್ಲಿ ದೇಶಪ್ರೇಮಿಗಳಾಗಿದ್ದಾರೆ. ಇಂಥ ಜನರಿಂದ ದೇಶಪ್ರೇಮದ ಪಾಠ ಕಲಿಯುವ ಅಗತ್ಯವಿಲ್ಲ. ನಾವು ದೇಶಪ್ರೇಮವನ್ನು ಟಿಪ್ಪು ಸುಲ್ತಾನ್ ಹೋರಾಟ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಕಲಿಯಬೇಕಿದಿಯೆ ಹೊರತು, ಇನ್ಯಾರದೋ ಜನಸಂಸ್ಕೃತಿ ವಿರೋಧಿ ಫ್ಯಾಸಿಸಂನಿಂದಲ್ಲ.

ಸಂಘ ಪರಿವಾರ ಮತ್ತು ಅದರ ಅಂಗ ಸಂಸ್ಥೆಗಳು ಫ್ಯಾಸಿಸ್ಟ್ ಹಾಗೂ ನಾಜಿ಼ ಸಿದ್ಧಾಂತಗಳನ್ನು ಬಲವಾಗಿ ನಂಬಿಕೊಂಡಿವೆ. ಇವರಿಗೆ ಅವರದೇ ಆದ ಸೈದ್ಧಾಂತಿಕ ನೆಲೆಯಿಲ್ಲದ ಕಾರಣ, ಬೇರೊಂದು ವಾದಕ್ಕೆ ಮಗ್ಗಲಾಗಿದ್ದಾರೆ. ನಾಜಿ಼ಸಂ ಒಂದು ಜನ, ಒಂದು ಸಾಮ್ರಾಜ್ಯ, ಒಬ್ಬ ನಾಯಕನ ಕೇಂದ್ರವಾಗಿದೆ. ಫ್ಯಾಸಿಸಂ ಕೂಡ ಇದರಿಂದ ಹೊರತಾಗಿಲ್ಲ. ಫ್ಯಾಸಿಸಂ ಅಧಿಕಾರದಲ್ಲಿದ್ದಾಗ ಶಿಕ್ಷಕರೂ ಸಹ ಆಡಳಿತವನ್ನು ಬೆಂಬಲಿಸುವ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಇಂತಹ ಅಸಹ್ಯಕರವಾದ ನಡೆ ಇಟಲಿಯ ಮುಸಲೋನಿ ಹಾಗೂ ಜರ್ಮನಿಯ ಹಿಟ್ಲರ್ ಪ್ರತಿಪಾದಿಸಿದ ಸರ್ವಾಧಿಕಾರ ಸಿದ್ಧಾಂತಗಳು ಭಾರತದಲ್ಲಿ ದೊಡ್ಡ ಅಲೆಗಳಾಗಿ ಎಲ್ಲರನ್ನೂ ಆವರಿಸುತ್ತ ನುಂಗಲಾರಂಭಿಸಿದೆ.

ಸಂಘಪರಿವಾರದ ವಕ್ತಾರರಾಗಿದ್ದ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಪುನ: ಹಿಟ್ಲರ್ ಮತ್ತು ಮುಸಲೋನಿಯರ್ನು ನೆನಪಿಸಿಕೊಳ್ಳುವಂತಾಯಿತು. ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ವರಾಜ್ ಅವರು ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥ ಮಾಡಬೇಕು ಎಂಬ ಹೇಳಿಕೆ, ವೈವಿಧ್ಯಮಯ ನಾಡು ಉಳಿಯಿತೆ ಎಂಬಂತಾಯಿತು. ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡಲು ಮುಂದಾಗಿ ರೋಹಿತ್ ವೇಮುಲ ಪ್ರಾಣವನ್ನೆ ಕೊಡಬೇಕಾಯಿತು. ಕನ್ಹಯ್ಯ ಮತ್ತು ರೋಹಿತ್ ಪ್ರಕರಣದಲ್ಲಿ ಮಾನವ ಸಂಪನ್ಮೂಲ ಸಚಿವಾಲಯವನ್ನು ಬಚ್ಚಲಂತೆ ಬಳಸಿಕೊಂಡರು. ಅವರದೇ ಅಂಗ ಸಂಸ್ಥೆಯಾಗಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಂತಹ ವಿದ್ಯಾರ್ಥಿ ಮೂಲಭೂತವಾದ ಸಂಘಟನೆಗಳನ್ನು ಬಳಸಿಕೊಂಡು ಶೈಕ್ಷಣಿಕ ಗೂಂಡಾಗಿರಿ ನಡೆಸಲಾಯಿತು. ಆ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಭಯೋತ್ಪಾದನೆ ಉಂಟುಮಾಡಿ ಇಡೀ ಶೈಕ್ಷಣಿಕ ವಾತಾವರಣವನ್ನೆ ಕೇಸರಿಕರಣಗೊಳಿಸುವ ಹುನ್ನಾರ ನಡೆಸಿದ ನರೇಂದ್ರ ಮೋದಿ ಅವರು ಯಾವ ಹಿಟ್ಲರ್, ಮುಸಲೋನಿಗು ಕಡಿಮೆಯೇನಿಲ್ಲ.

ಭಾರತೀಯ ಜನತಾ ಪಕ್ಷದ ಕಾಲಾಳಿನಂತಿರುವ ಎಬಿವಿಪಿಯು ಮೊದಲು ಅಟ್ಯಾಕ್ ಮಾಡಿದ್ದು ಚೆನ್ನೈನಲ್ಲಿರುವ ಐಐಟಿಎಂ. ಆ ಶಿಕ್ಷಣ ಸಂಸ್ಥೆ ಮೊದಲೇ ಕೇಸರೀಕರಣಗೊಂಡಿರುವ ಸಂಸ್ಥೆ. ಅಂತಹ ಸ್ಥಳದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅಂಬೇಡ್ಕರ್, ಪೆರಿಯಾರ್ ಸ್ಟಡಿ ಸರ್ಕಲ್ ಎಂಬ ವಿದ್ಯಾರ್ಥಿ ಸಂಘಟನೆ ಓಬಿಸಿ/ಎಸ್ಸಿ/ಎಸ್ಟಿ/ ವಿದ್ಯಾರ್ಥಿಗಳಿಂದ 2014ರಲ್ಲಿ ರಚಿಸಲ್ಪಟ್ಟಿತು. ಪ್ರಜಾಪ್ರಭುತ್ವವನ್ನೆ ಸಹಿಸಿಕೊಳ್ಳದ ಅರೆಪ್ರಜ್ಞಾವಸ್ಥೆಯಲ್ಲಿರುವ ಎಬಿವಿಪಿಯು ಅಂಬೇಡ್ಕರ್ ಮತ್ತು ಪೆರಿಯಾರ್ ಅವರನ್ನು ಸಹಿಸಿಕೊಳ್ಳುವುದುಂಟೆ?. ಆ ಸಂಘಟನೆಯನ್ನು ಹೇಗಾದರೂ ರದ್ದುಪಡಿಸಬೇಕೆಂದು ಮಾನವ ಸಂಪನ್ಮೂಲ ಸಚಿವಾಲಯವನ್ನು ಬಳಸಿಕೊಂಡು ಅದರ ರದ್ದತಿಗೆ ಪ್ರಯತ್ನ ನಡೆಸಿದರು. ಅಲ್ಲಿ ಅಂಬೇಡ್ಕರ್ ವಾದಿಗಳು ಗಟ್ಟಿಯಾಗಿದ್ದ ಕಾರಣ ಕೋಮುವಾದಿಗಳ ಆಟ ಏನು ನಡೆಯಲಿಲ್ಲ. ಚೆನ್ನೈನಲ್ಲಿ ಇವರ ಪ್ರಯತ್ನ ಫಲಿಸದೆ, 2015ರಲ್ಲಿ ಹೈದ್ರಾಬಾದ್ನ ಕೇಂದ್ರಿಯ ವಿಶ್ವವಿದ್ಯಾನಿಲಯಕ್ಕೆ ಕೈ ಹಾಕಿದರು. ರೋಹಿತ್ ವೇಮುಲ ಮತ್ತು ತರುಣ ಅಂಬೇಡ್ಕರ್ವಾದಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ಹೊರಹಾಕುವಂತೆ ಮಾಡಲಾಯಿತು. ಅಂತಿಮವಾಗಿ ರೋಹಿತ್ ಸಾವಿಗೂ ಕಾರಣರಾದರು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ದೆಹಲಿಯ ಜವಾಹಾರಲಾಲ್ ವಿಶ್ವವಿದ್ಯಾನಿಲಯದಲ್ಲಿ ಕನ್ಹಯ್ಯ ಕುಮಾರ್ ಎಂಬಾತನ ಮೇಲೆ ದೇಶದ್ರೋಹದ ಪಟ್ಟಕಟ್ಟಿ ಜೈಲಿಗೆ ಕಳುಹಿಸಿದರು. ಬಿಜೆಪಿಯ ಕೆಲ ಕಾರ್ಯಕರ್ತರನ್ನು ಛೂಬಿಟ್ಟು ಕರ್ನಾಟಕದ ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕೆಲ ಪ್ರೋಫೆಸರ್ಗಳನ್ನು ದೇಶದ್ರೋಹದ ಆರೋಪಕ್ಕೆ ಗುರಿಪಡಿಸಲಾಯಿತು. ಇಷ್ಟೆಲ್ಲಾ ಬೆಳವಣಿಗೆಯ ನಂತರ ತುಮಕೂರು ಎಬಿವಿಪಿ ಅವರಿಂದ ಗಬ್ಬುನಾರುವಂತಾಯಿತು. ಭಾರತದಲ್ಲಿ ಏಕಸಂಸ್ಕೃತಿ, ಏಕಜನಾಂಗಿಯವಾದಿಗಳಿಗೆ ಅಧಿಕಾರ ಕೊಟ್ಟರೆ ಹೇಗೆ ಕೋಮುವಾದಕ್ಕೆ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ ಎಂಬುದು ಬಿಜೆಪಿಯಿಂದ ಖಾತ್ರಿಯಾಯಿತು.

ಏಕಧರ್ಮ ಪ್ರತಿಪಾದನೆಯ ಪಕ್ಷದ ಅಧಿಕಾರವೂ ಒಂದೆ. ಸರ್ವಾಧಿಕಾರದ ಆಡಳಿತವೂ ಒಂದೇ. ಈ ಬಗೆಯ ಜನರಿಗೆ ಅಧಿಕಾರ ಕೊಟ್ಟರೆ ಎಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಇವೆಲ್ಲಾ ಬೆಳವಣಿಗೆಗಳು ಉದಾಹರಣೆಗಳಾಗಿವೆ. ದೇಶದ ಸಮಸ್ಯೆಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದ್ದ ಶಾಸಕಾಂಗ, ಕಾರ್ಯಾಂಗಗಳೇ ಇಂದು ಬಹುದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಜನ ಸಾಮಾನ್ಯರು ಇಂತದ್ದೆ ಆಹಾರ ತಿನ್ನಬೇಕು, ಇಂತಹ ಬಟ್ಟೆಯನ್ನೆ ಧರಿಸಬೇಕು, ಇಂತಹ ಧರ್ಮವನ್ನೆ ಅನುಸರಿಸಬೇಕು, ಇಂತದ್ದೆ ಸಂಸ್ಕೃತಿ ಒಳಗೊಳ್ಳಬೇಕು, ಹೀಗೆ ತಿನ್ನುವ ಆಹಾರದಿಂದ ಓದುವ, ಬರೆಯುವ, ಧರಿಸುವ ಹಾಗೂ ನೋಡುವ ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರೆವಿಗೂ ಎಲ್ಲಾ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳುವಂತಾಗಿದೆ. ಇಂಥಹ ಸರ್ಕಾರವನ್ನು ಜನವಿರೊಧಿ ಸರ್ಕಾರವೆನ್ನದೆ, ಜನಪರ ಸರ್ಕಾರ ಎಂದು ಯಾರಾದರು ಕರೆಯುವುದುಂಟೆ?

ಮಲೆಯಾಳಂ ಖಾಸಗಿ ಟಿವಿ ವಾಹಿನಿಯೊಂದರಲ್ಲಿ 2015 ಮಾರ್ಚ್ ತಿಂಗಳಲ್ಲಿ ಮಹಿಷಾಸುರನ ಕುರಿತು ಚರ್ಚೆ ಮಾಡಿಸಲಾಗಿದೆ. ಆ ಪ್ಯಾನಲ್ ಚರ್ಚೆ ಕಾರ್ಯಕ್ರಮವನ್ನು ವಿರೋಧಿಸಿ ಅಲ್ಲಿನ ಟಿವಿ ನಿರೂಪಕಿಯಾದ ಸಿಂಧೂ ಅವರಿಗೆ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು 2000ಕ್ಕೂ ಮೇಲ್ಪಟ್ಟು ಕೊಲೆ ಬೆದರಿಕೆ ಹಾಗೂ ಅವ್ಯಾಚ್ಚ ಶಬ್ದಗಳ ನಿಂದನೆ ಕರೆಗಳನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಕೆ ದೂರು ದಾಖಲಿಸಿದರು. ಅದೇ ರೀತಿ ಜೆಎನ್ಯುನಲ್ಲಿ ನಡೆದ ದೇಶದ್ರೋಹದ ಕನ್ಹಯ್ಯ ಪ್ರಕರಣವನ್ನು ವರದಿ ಮಾಡುತ್ತಿದ್ದ ಬರ್ಖಾ ದತ್ ಎಂಬ ಹಿರಿಯ ಮಹಿಳಾ ಪತ್ರಕರ್ತೆಯು ಕೊಲೆ ಬೆದರಿಕೆ ಹಾಗೂ ಅವ್ಯಾಚ್ಚ ಶಬ್ದಗಳನ್ನು ಕೇಳಬೇಕಾಯಿತು. ಮಾರ್ಚ್ 4ರ ನಂತರ ಜೆಎನ್ಯು ಪ್ರಕರಣವನ್ನು ವರದಿ ಮಾಡಿದ್ದಕ್ಕೆ, ಫೋನ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಗೂ ಅವ್ಯಾಚ್ಚ ಶಬ್ದಗಳಿಂದ ತೇಜೋವಧೆ ಮಾಡಲಾಗುತ್ತಿದೆ ಎಂದು ಪತ್ರಕರ್ತೆ ಬರ್ಖಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ತಮ್ಮ ಹೇಳಿಕೆಯನ್ನು ಸಲ್ಲಿಸಿದರು. ಇಂತಹ ಪ್ರಕರಣಗಳು ಭಾರತದಲ್ಲಿ ದಿನನಿತ್ಯ ಜರುಗುತ್ತಿವೆ. ಅದರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಯಾವುದಕ್ಕು ಸ್ವತಂತ್ರ್ಯವಿಲ್ಲ ಎನ್ನುವಂತಾಗಿರುವುದು ನಾವು ಕಾಣುತ್ತಿರುವ ಸತ್ಯವೇ ಆಗಿದೆ.

ದೇಶದ್ರೋಹದ ಆರೋಪದ ಮೇಲೆ ಜೈಲು ಪಾಲಾಗಿದ್ದ ಕನ್ಹಯ್ಯ ಕುಮಾರ್ ಎಂಬ ಜೆಎನ್ಯು ವಿದ್ಯಾರ್ಥಿ, ಜೈಲಿನಿಂದ ಹೊರಬಂದ ಮೇಲೆ, ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರಿಂದ ಉದ್ಭವಿಸಿದ ವೈರುಧ್ಯಗಳು ಅಪಾರ. ವಿದ್ಯಾರ್ಥಿ ಸಂಘಟನೆಗಳು ಒಂದು ಸಿದ್ಧಾಂತವನ್ನು ವಿರೋಧಿಸಿದರೆ, ಭಯೋತ್ಪಾದನೆಯನ್ನು ಸೃಷ್ಟಿಸುತ್ತಿರುವ ಕೇಸರಿ ಪಡೆಗಳ ಬಗ್ಗೆ ಮಾತನಾಡಿದರೆ, ಎಂಥಹಾ ಕರಾಳ ದಿನಗಳು ಎದುರಾಗುತ್ತವೆ ಎಂಬುದನ್ನು ಕೇಸರಿ ವ್ಯಾಘ್ರ ಜೀವಿಗಳು ಸಾಬೀತು ಮಾಡಿದರು. ಕನ್ಹಯ್ಯ ಕುಮಾರ್ ಬಿಡುಗಡೆಗೊಂಡ ನಂತರ ಉತ್ತರ ಪ್ರದೇಶದ ಬದೌನ್ ಜಿಲ್ಲಾ ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಕುಲದೀಪ್ ಎಂಬಾತ ಕನ್ಹಯ್ಯ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಅವಮಾನ ಮಾಡಿದ್ದಾನೆ. ಆತನ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷದ ಬಹುಮಾನ ಎಂದು ಘೋಷಿಸಿದ. ಅದರೊಂದಿಗೆ ಸಂಘ ಪರಿವಾರದ ಬೆಂಬಲದಲ್ಲಿರುವ ಪುರ್ವಾಂಚಲ್ ಸೇನೆಯ ಅಮಿತ್ ಕುಮಾರ್ ಎಂಬಾತ ಕನ್ಹಯ್ಯನನ್ನು ಹತ್ಯೆ ಮಾಡಿದವರಿಗೆ 11 ಲಕ್ಷದ ಬೃಹತ್ ಮೊತ್ತದ ಬಹುಮಾನ ಎಂದು ದೆಹಲಿಯ ಬೀದಿ ಬೀದಿಗಳಲ್ಲಿ ಪೋಸ್ಟರ್ ಅಂಟಿಸಿದವರಿಗೆ ಬೆನ್ನೆಲುಬಾಗಿದ್ದ. ಇಂಥಹ ವಿಷಕಾರಕ ಮನಸ್ಥಿತಿಗಳ ಫ್ಯಾಸಿಸ್ಟ್ ವರ್ತನೆಯ ನಡುವೆ ಸಾಮಾನ್ಯ ಜನರು ಬದುಕುವುದಾದರು ಹೇಗೆ? ಆಳುವ ವರ್ಗ ಮತ್ತು ಹೊಂದಿಕೆಯಾಗದ ಸಿದ್ಧಾಂತಗಳನ್ನು ಪ್ರಶ್ನಿಸುವುದಾದರು ಹೇಗೆ?

ಈ ದೇಶದಲ್ಲಿ ಕೋಮುವಾದವನ್ನು ಎದುರಿಸುವುದು ಒಂದು ದೊಡ್ಡ ಸವಾಲಾಗಿದೆ. ಶೈಕ್ಷಣಿಕ ವಲಯದಲ್ಲಿ ಮತ್ತು ಇತರ ಎಲ್ಲಾ ವಲಯಗಳಲ್ಲಿಯೂ ದಲಿತರು, ಮುಸಲ್ಮಾನರು, ಕ್ರೈಸ್ತರು ಹಾಗೂ ಇನ್ನಿತರ ಸಣ್ಣಪುಟ್ಟ ಜನಾಂಗಗಳು ಉಸಿರು ಬಿಗಿಹಿಡಿದು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಬಿಜೆಪಿ ತನ್ನ ವಿಷಕಾರಕ ಸಿದ್ಧಾಂತಗಳನ್ನು ದೇಶದ ಬಹುತ್ವದ ಮೇಲೆ ಹೇರಲ್ಪಡುತ್ತಿದೆ. ಒಟ್ಟಾರೆಯಾಗಿ ಇವರನ್ನು ಪ್ರಜಾಪ್ರಭುತ್ವ ವಿರೋಧಿಗಳು ಎಂಬುದು ಸಾಬೀತಾಗಿದೆ. ದಿನಾಂಕ 21-02-2016 ರಂದು ಮಹಾರಾಷ್ಟ್ರದ ಪನ್ಗಾಂವ್ನಲ್ಲಿ ಒಂದು ಘಟನೆ ನಡೆಯಿತು. ಪನ್ಗಾಂವ್ ನಲ್ಲಿ ಶಿವಾಜಿ ಜನ್ಮದಿನಾಚರಣೆಯ ಪ್ರಯುಕ್ತ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಠಾಣೆಯ ಎಎಸ್ಐ ಆಗಿದ್ದ ಶೇಖ್ ಯೂನಸ್ ಪಾಶಮಿಯ ಎಂಬ ಮುಸ್ಲಿಂ ಜನಾಂಗಕ್ಕೆ ಸೇರಿದ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಅಲ್ಲಿನ ಸಂಪುರ್ಣ ಭದ್ರತೆಯ ಸಿದ್ಧತೆಗಳನ್ನು ನಡೆಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬಿಜೆಪಿ ಮತ್ತು ಶಿವಸೇನೆಯ 20 ರಿಂದ 25 ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಆ ಮುಸ್ಲಿಂ ಎಎಸ್ಐನ ಪೊಲೀಸ್ ಗಡ್ಡ ಬೋಳಿಸುವಂತೆ ಧಮ್ಕಿ ಹಾಕಿದರು. ಆ ಕೇಸರಿ ಗುಂಪು ಅಂಬೇಡ್ಕರ್ ಚೌಕ್ಗೆ ಅಮಾನವೀಯವಾಗಿ ಅಧಿಕಾರಿಯನ್ನು ಎಳೆದೊಯ್ದು ಆತನ ಮೇಲೆ ಹಲ್ಲೆ ಮಾಡಿದರು. ಈ ಘಟನೆಯಿಂದ ಯೂನಸ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೇಸರಿ ಭಯೋತ್ಪಾದಕರು ಮಾಡಿದ ಹಲ್ಲೆಗೆ ಅವರ ತಲೆಗೆ 25 ಹೊಲಿಗೆಗಳನ್ನು ಹಾಕಲಾಗಿದೆ ಎಂದು ನ್ಯೂಸ್ ಕನ್ನಡ ಆನ್ಲೈನ್ ಸುದ್ದಿ ಮಾಧ್ಯಮ ಅದೇದಿನ ವರದಿ ಮಾಡಿದೆ. ಪ್ರಭುತ್ವವೆಂಬುದು ಹೇಗೆ ಸರ್ವಾಧಿಕಾರ ರೂಪ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ನಡೆಯುತ್ತಿರುವ ಈ ನಿದರ್ಶನಗಳೇ ಸಾಕ್ಷಿ.

ಭಾರತದ ಪುರಾತನ ಗ್ರಂಥಗಳಾದ ಮನುಸ್ಮೃತಿ, ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತದಂತಹ ಗ್ರಂಥಗಳು ಹಿಂದೂಧರ್ಮದ ಮುಖವಾಣಿ ಆಗುತ್ತಿವೆ. ಹಿಂದೂಧರ್ಮದಂತಹ ಜಾತಿ ಪೋಷಕ ಧರ್ಮ ದೇಶದ ನಾನಾವಲಯದಲ್ಲಿ ವ್ಯಾಪಿಸಿ ಕೋಮುವಾದವನ್ನು ದಿನೇ ದಿನೇ ಹೆಚ್ಚಳಗೊಳಿಸಲು ಕಾರಣವಾಗಿದೆ. ಕೋಮುವಾದದ ಸಿದ್ಧಾಂತಗಳಿಗೆ ಅಸಂಖ್ಯಾ ವಿದ್ಯಾವಂತರು ಮತ್ತು ಅವಿದ್ಯಾವಂತರು ಬಲಿಯಾಗುತ್ತಿದ್ದಾರೆ. ಇಂಥಹ ರೋಗಗ್ರಸ್ತ ಆಲೋಚನಾ ಸಿದ್ಧಾಂತಗಳಿಂದ ಅವರನ್ನೆಲ್ಲಾ ಹೊರತರುವ ಪ್ರಯತ್ನವನ್ನು ಮಾಡದೆ ಈ ದೇಶವನ್ನು ಪ್ರಜಾಪ್ರಭುತ್ವ ದೇಶವನ್ನಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜೆಎನ್ಯು ಪ್ರಕರಣದ ನಂತರದಲ್ಲಿ ಸ್ವತ ಎಬಿವಿಪಿ ಮುಖಂಡರೆ ಆತ್ಮಾವಲೋಕನ ಮಾಡಿಕೊಂಡರು. ಅಲ್ಲಿನ ವಿದ್ಯಾರ್ಥಿ ಮುಖಂಡರೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ದೇಶದ್ರೋಹಿಗಳೆಂದು ಕರೆದು ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಜೆಎನ್ಯು ಪ್ರಕರಣದಲ್ಲಿಯೆ ತಿಳಿದಿದ್ದು ಇವರ ನಿಜ ರೂಪ. ಹಾಗಾಗಿ ಬಿಜೆಪಿ, ಸಂಘ ಪರಿವಾರ ಮತ್ತು ಎಬಿವಿಪಿ ಮುಂತಾದ ಕೇಸರಿ ಭಯೋತ್ಪಾದನಾ ಸಂಘಟನೆಗಳ ಉಗ್ರ ಮುಖಗಳನ್ನು ವಿದ್ಯಾರ್ಥಿಗಳೇ ಬಂiÀÄಲು ಮಾಡಬೇಕಿದೆ. ಸಾಮಾನ್ಯ ಜನರು ತಮಗರಿವಿಲ್ಲದೆ ಒಪ್ಪಿಕೊಂಡು ನಡೆಯುತ್ತಿರುವ ಫ್ಯಾಸಿಸ್ಟ್ ಸಿದ್ದಾಂತವನ್ನು ಜನರೇ ಸುಡುವಂತೆ ಮಾಡುವ ಮೂಲಕ ಕೋಮುವಾದಿಗಳ ಕಣ್ಣು ತೆರೆಸಿ, ಪ್ರಜಾಪ್ರಭುತ್ವದ ವಾಹಿನಿಗೆ ಕರೆತರಬೇಕಿದೆ. ಎಲ್ಲರೂ ಜೀವಪರಧನಿಗೆ ಧನಿಗೂಡುತ್ತಲೇ ಪ್ರಜಾತಂತ್ರ ರಾಷ್ಟ್ರವನ್ನು ಸಾಮಾನ್ಯ ಪ್ರಜೆಗಳದಾಗಿಸುವ ಕಡೆಗೆ ಎಲ್ಲರೂ ಹೆಜ್ಜೆ ಇಡಬೇಕಿದೆ.

ಈ ಹೊತ್ತಿನ ಹೊಸ ತಲೆಮಾರು ಯಾವುದೇ ಭಾಷಣವಾಗಲಿ, ಹೇಳಿಕೆಯಾಗಲಿ ಅಥವಾ ಚರಿತ್ರೆ ಕಥನವೇ ಆಗಲಿ ಅವುಗಳನ್ನು ಮುಖಾಮುಖಿಗೊಳಿಸದೆ, ಚರ್ಚಿಸದೆ, ಸಂವಾದಿಸದೆ, ಪರಸ್ಪರ ಆತ್ಮಾವಲೋಕನ ಮತ್ತು ವಿಮರ್ಶೆ ಮುಂತಾದ ಹಾದಿಯಲ್ಲಿ ತೆರೆದುಕೊಂಡು ಒಳ-ಹೊರ ಹುಡುಕುತ್ತಾ ಸತ್ಯಾಸತ್ಯತೆಗಳ ಮಾರ್ಗವನ್ನು ಕಂಡುಕೊಳ್ಳುತ್ತಲೆ ನಡೆಯಬೇಕು. ಅಂತಹ ಮುಕ್ತ ವಾತಾವರಣವನ್ನು ನಾವೆ ಸೃಷ್ಟಿಮಾಡಿಕೊಳ್ಳಬೇಕಿದೆ. ಏಕ ಮುಖ ಚಿಂತನೆಯನ್ನು ವರ್ಗೀಕರಿಸದೆ ಏನನ್ನು ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕಿದೆ.

~~~

 

ಹಾರೋಹಳ್ಳಿ ರವೀಂದ್ರ

ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಹಾರೋಹಳ್ಳಿ ರವೀಂದ್ರ ಅವರ ಎಬಿವಿಪಿ ಭಯೋತ್ಪಾದನೆ ಕೃತಿಯಿಂದ ಆಯ್ದುಕೊಂಡ ಪ್ರಸ್ತಾವನೆ.