Round Table India
You Are Reading
ಹಿಂದುತ್ವ ಮತ್ತು ಅದರ ರಾಷ್ಟ್ರೀಯತೆಯ ಮಿಥ್ಯಗಳು
0
Features

ಹಿಂದುತ್ವ ಮತ್ತು ಅದರ ರಾಷ್ಟ್ರೀಯತೆಯ ಮಿಥ್ಯಗಳು

manjunath nar

 

ಮಂಜುನಾಥ ನರಗುಂದ (Manjunath Naragund)

manjunath narಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ರಾಷ್ಟ್ರೀಯತೆಯ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಇದಕ್ಕೆ ಹಿನ್ನಲೆಯಾಗಿರುವ ಹಲವು ಘಟನಾ ಗುಚ್ಚಗಳ ಸರಣಿಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಈ ಮೂಲಕ ಹಿಂದುತ್ವ ಒಂದು ಸಿದ್ಧಾಂತವಾಗಿ ಬೆಳೆದು ಬಂದ ಬಗೆ, ಪ್ರಸಕ್ತ ಸಮಾಜದಲ್ಲಿ ಅದು ವ್ಯಾಪಿಸಿರುವ ರೀತಿ ಹಾಗೂ ಅದರ ಎಲ್ಲೆಗಳನ್ನು ಸತ್ಯದ ನೆಲೆಗಟ್ಟಿನಲ್ಲಿ ನಾವು ಈಗ ಚರ್ಚಿಸಬೇಕಾಗಿದೆ.

ಇಂದಿನ ಸ್ವಾತಂತ್ರೋತ್ತರ ಭಾರತದ ರಾಜಕೀಯ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಬಲಪಂಥೀಯ ಶಕ್ತಿಗಳು ಪ್ರಜಾಪ್ರಭುತ್ವವೆಂಬ ರಾಜಕೀಯ ಮೇರುಪರ್ವತವನ್ನೇರಿರುವುದು ಸಾಂಸ್ಕೃತಿಕತೆಯ ಬಹುತ್ವ ಸಾರುವಂತಹ ಈ ದೇಶಕ್ಕೆ ಒಂದು ರೀತಿಯಲ್ಲಿ ಆತಂಕವನ್ನು ಸೃಷ್ಟಿಸಿದೆ .ಕಾರಣವಿಷ್ಟೆ ಇದಕ್ಕೆ ಪುಷ್ಟಿಕೊಡುವಂತೆ ಸುಮಾರು ಕಳೆದೆರಡು ವರ್ಷಗಳಲ್ಲಿ ನಡೆದ ಕೆಲವು ಘಟನೆಗಳನ್ನು ಉದಾಹರಣೆಯನ್ನಾಗಿ ತೆಗೆದುಕೊಂಡಾಗ ಈ ಅಂಶ ನಮಗೆ ಸ್ಪಷ್ಟವಾಗುತ್ತದೆ. ಅದು ಉತ್ತರಪ್ರದೇಶದಲ್ಲಿನ ದಾದ್ರಿ ಪ್ರಕರಣವಾಗಿರಬಹುದು, ಅಥವಾ ಕಲ್ಬುರ್ಗಿ, ದಾಬೊಲ್ಕರ್, ಪನ್ಸಾರೆಯಂತಹ ವಿಚಾರವಾದಿಗಳ ಹತ್ಯೆಯಿರಬಹುದು, ಜೆಎನ್ ಯು, ರೋಹಿತ್ ವೇಮುಲ,ಅಮ್ನೆಸ್ಟೀ ಇಂಟರ್‌ನ್ಯಾಶನಲ್, ಉನಾದಂತಹ ದಲಿತರ ಮೇಲಿನ ಹಲ್ಲೆ, ಘರ್ ವಾಪಸಿ ಹಾಗೂ ಇತ್ತೀಚಿನ ರಮ್ಯಾ ನಂತಹ ಪ್ರಕರಣಗಳನ್ನು ಸಮಷ್ಟಿ ಗುಚ್ಛವಾಗಿ ನೋಡಿದಾಗ ಬಹುಶಃ ಸಂಘ ಪರಿವಾರ ಪ್ರತಿಪಾದಿಸುವ ರಾಷ್ಟ್ರೀಯತೆ ಎಂತಹ ಆಯಾಮಗಳನ್ನು ಹೊಂದಿದೆ ಎನ್ನುವುದಕ್ಕೆ ಒಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ.

ಈ ಬಲಪಂಥೀಯ ರಾಷ್ಟ್ರೀಯತೆಯ ಪರಿಭಾಷೆಯು ಏಕಮೇವ ಸಾಂಸ್ಕೃತಿಕ ನೆಲೆಗಟ್ಟಿನ ಮೂಲಕ ನಿರ್ಧಾರಿತವಾಗಿರುವುದಲ್ಲದೆ, ದೇಶಪ್ರೇಮ ಅಥವಾ ರಾಷ್ಟ್ರಭಕ್ತಿಯನ್ನು ನಾವು ಹುಟ್ಟಿರುವ ಧರ್ಮಗಳ ಆಧಾರದ ಮೇಲೆ ಪರಿಮಾಣಿಸಿ ನೋಡುವ ಈ ವಿಧಾನ, ಮೂಲ ಅರ್ಥದಲ್ಲಿ ಜನರನ್ನು ಕೋಮುಗಳ ಮೂಲಕ ವಿಘಟಿಸುವ ಮತ್ತು ಸಂಘಟಿಸುವ ರಾಜಕೀಯ ಉದ್ದೇಶಗಳನ್ನು ಹೊಂದಿದೆ. ಆ ಮೂಲಕ ಉನ್ನತ ವರ್ಗಗಳು ಒಪ್ಪಿರುವ ಸಾಮಾಜಿಕ ಮೌಲ್ಯಗಳನ್ನು ‘ಹಿಂದೂ’ ಎಂಬ ವಿಸ್ತೃತ ಪರಿಕಲ್ಪನೆಯ ಮೂಲಕ ಈ ದೇಶದಲ್ಲಿರುವ ಹಲವು ಸಂಸ್ಕೃತಿಗಳು, ಜಾತಿಗಳು, ಜಾನಪದೀಯ ಅಂಶಗಳು, ಬುಡಕಟ್ಟು ಸಂಸ್ಕೃತಿಗಳನ್ನೂ ಒಟ್ಟಿಗೆ ತೆಕ್ಕೆಗೆ ತೆಗೆದುಕೊಳ್ಳುವುದರ ಜೊತೆಗೆ ಇಸ್ಲಾಂ ಮತ್ತು ಕ್ರೈಸ್ತ ಮತಗಳನ್ನು ವಿರೋಧಿಗಳನ್ನಾಗಿ ನಿಲ್ಲಿಸುವ ಒಂದು ನೇರ ಹುನ್ನಾರವನ್ನು ಇಂತಹ ‘ಹಿಂದುತ್ವದ ಸಾಂಸ್ಕೃತಿಕ ರಾಷ್ಟ್ರೀಯತೆ’ಯಲ್ಲಿ (Cultural Nationalism) ಕಾಣಬಹುದು. ಇದರ ಜೊತೆಗೆ ಅದರ ಇನ್ನೊಂದು ಚರ್ಚೆಯ ವಿಷಯವೇನೆಂದರೆ ಇಹ ಮತ್ತು ಪರಕೀಯ ಎನ್ನುವ ಪರಿಕಲ್ಪನೆ. ಇದರ ಮೂಲಕ ಆರ್ಯರ ಸಂಸ್ಕ್ರತಿಯನ್ನು ಸ್ವದೇಶಿಯರನ್ನಾಗಿ ಬಿಂಬಿಸುವುದರ ಜೊತೆಗೆ ಪರಂಪರಾಗತವಾಗಿ ಬೆಳೆದುಬ೦ದಿರುವ ಇಲ್ಲಿನ ಮೂಲನಿವಾಸಿಗಳಾದ ಬುಡಕಟ್ಟು ಜನರನ್ನು ಹಾಗೂ ದ್ರಾವಿಡ ಪರಂಪರೆಗಳ ಮೇಲೆ ಸಾರ್ವಭೌಮತ್ವವನ್ನು ಸಾಧಿಸುವ ಮೂಲ ಉದ್ದೇಶವೂ ಇದಾಗಿದೆ. ಇಲ್ಲಿರುವ ಸಾಂಖ್ಯ, ಯೋಗ, ಸ್ರಮಾನ, ಆಜೀವಕ ಪದ್ಧತಿಗಳಂಥಹ ದೇಶಿಯ ಪರಂಪರೆಯನ್ನು ಮೂಲ ಅರ್ಥದಲ್ಲಿ ಕಾಪಾಡಿಕೊಂಡು ಬಂದತಹವರು ದ್ರಾವಿಡರಾಗಿದ್ದನ್ನು ನಾವು ಹರಪ್ಪ ಮತ್ತು ಮೊಹೆಂಜುದಾರೋ ನಾಗರಿಕತೆಯಿಂದ ತಿಳಿಯಬಹುದಾಗಿದೆ. ಅಲ್ಲದೆ ಇನ್ನು ಧಾರ್ಮಿಕತೆಯ ಭಾಗವಾದ ಪುರಾಣದ ಕಥೆಗಳಿಗೆ ಬರುವುದಾದರೆ ಅಲ್ಲಿ ಬರುವ ಇಂದ್ರ, ವರುಣ, ವಾಯು ಇವರ್ಯಾರೂ ಕೂಡ ದೇಶಿಯ ಅಂದರೆ ಈ ನೆಲದ ಮೂಲ ಆರಾಧ್ಯ ದೈವರಲ್ಲ ಮತ್ತು ಆ ಪುರಾಣಗಳಲ್ಲಿ ಬರುವ ಅಸುರಿ ಪಾತ್ರಗಳನ್ನು ಶತ್ರುಗಳನ್ನಾಗಿ ಬಿಂಬಿಸುವುದು ಕೂಡ ಒಂದು ರೀತಿಯಲ್ಲಿ ತಮ್ಮ ಯಜಮಾನಿಕೆಯನ್ನು ದೇಶಿಯ ಜನರ ಮೇಲೆ ಪ್ರತಿಪಾದಿಸುವುದು ಮೂಲ ಉದ್ದೇಶವಿದ್ದಂತೆ ಕಾಣುತ್ತದೆ.

ಇನ್ನು ಮಧ್ಯ ಕಾಲಿನ ಘಟ್ಟಕ್ಕೆ ಬರುವುದಾದರೆ ಯುದ್ಧಗಳ ಸಂದರ್ಭದಲ್ಲಾದ ವಿಗ್ರಹ ಭಂಜನೆಯನ್ನು ಧಾರ್ಮಿಕ ವಿಷಯಗಳಿಗೆ ತೊಡಕು ಹಾಕಿ ಆ ಮೂಲಕ ಮುಸ್ಲಿಮರನ್ನು ವಿರೋಧಿಸುವ ಅಂಶವನ್ನು ಸಾಮಾನ್ಯವಾಗಿ ಬಲಪಂಥೀಯರ ನಿಲುವುಗಳಲ್ಲಿ ನಾವು ಕಾಣಬಹುದು ಮತ್ತು ಮುಖ್ಯವಾಗಿ ಆ ಕಾಲಘಟ್ಟದಲ್ಲಿ ವಿಗ್ರಹ ಭಂಜನೆ ಎನ್ನುವುದನ್ನು ನಾವು ರಾಜಕೀಯ ಕ್ರಿಯೆಯಾಗಿ ನೋಡಬೇಕೆ ವಿನಹ ಧಾರ್ಮಿಕ ವಿಚಾರವಾಗಿಯಲ್ಲ. ಏಕೆಂದರೆ ಕಾರಣವಿಷ್ಟೇ ಆ ಸಂಧರ್ಭದಲ್ಲಿ ಹಿಂದೂ ಸಾಮ್ರಾಜ್ಯಗಳ ರಾಜರು ಕೂಡ ರಾಜಕೀಯ ಉದ್ದೇಶಕ್ಕಾಗಿ ವಿಗ್ರಹ ಭಂಜನೆ ಮಾಡಿರುವ ಅಂಶವನ್ನು ನಾವು ರಿಚರ್ಡ್ ಈಟನ್ ರಂತಹ ಇತಿಹಾಸಕಾರರ ಮೂಲಕ ತಿಳಿಯಬಹುದಾಗಿದೆ.

ಇನ್ನು ಆಧುನಿಕ ಕಾಲಘಟ್ಟಕ್ಕೆ ಬಂದಾಗ ಪ್ರಸ್ತುತ ಪ್ರಚಲಿತದಲ್ಲಿರುವ ಈ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಈ ನೆಲದ್ದೆ (Native Project) ಎನ್ನುವಂತೆ ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಇಂದು ಸಂಘ ಪರಿವಾರವು ಪ್ರತಿಪಾದಿಸುವ ರಾಷ್ಟ್ರೀಯತೆಯ ಈ ಪರಿಕಲ್ಪನೆ ಪಾಶ್ಚಾತ್ಯರ ರಾಷ್ಟ್ರ –ರಾಜ್ಯ (Nation-State) ಪ್ರಕ್ರಿಯೆ ಮೂಲಕ ಹುಟ್ಟಿಕೊಂಡು ಮುಂದೆ ಜರ್ಮನಿಯಲ್ಲಿ ಹಿಟ್ಲರನ ಮೂಲಕ ನಾಜಿವಾದವಾಗಿ ಹಾಗೂ ಇಟಲಿಯ ಮುಸ್ಸಲೋನಿಯ ಮುಖಾಂತರ ಅದು ಫ್ಯಾಸಿಸಸಂ ನಂತಹ ಸಿದ್ಧಾಂತಗಳಾಗಿ ಆರ್ ಎಸ್ ಎಸ್ ಗೆ ರಫ್ತಾಗಿರುವುದನ್ನು ನಾವು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ. ಇನ್ನು ದೇಶಿಯ ಮಟ್ಟದಲ್ಲಿ ಬ್ರಿಟಿಷರ ವಸಾಹತುಶಾಹಿಯ ನೆರಳಡಿಯಲ್ಲಿ ಇದ್ದು ಇಂದು ಇಡಿ ದೇಶಕ್ಕೆ ದೇಶಪ್ರೇಮದ ಪಾಠಬೋಧಿಸುತ್ತಿರುವ ಆರ್ ಎಸ್ ಎಸ್ ನ ಯಾವ ಮಹಾತ್ಮರೂ ಕೂಡ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ ಇರುವುದು ಅವರ ಅಸಲಿ ಮುಖದ ರಾಷ್ಟ್ರಭಕ್ತಿಯನ್ನು ಬಯಲಿಗೆಳೆಯುತ್ತದೆ. ಇಂದು ಧರ್ಮದ ಆಧಾರದ ಮೇಲೆ ಇಹ ಮತ್ತು ಪರಕೀಯತೆ (Self and Other) ಎನ್ನುವ ವಿಘಟನಾತ್ಮಕ ಪರಿಕಲ್ಪನೆಯ ಮೂಲಕ ಈ ದೇಶದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು ಉಳಿದವರೆಲ್ಲ ಹೊರಗಿನಿಂದ ಬಂದವರು. ಒಂದು ವೇಳೆ ಮುಸ್ಲಿಂ ಮತ್ತು ಕ್ರೈಸ್ತರು ಈ ದೇಶದಲ್ಲಿ ನೆಲೆಯೂರಬೇಕಾದರೆ ಇಲ್ಲಿರುವ ಸಂಸ್ಕ್ರತಿ ಮತ್ತು ಪರಂಪರೆಗಳನ್ನು ಒಪ್ಪಬೇಕೆನ್ನುವುದು. ಆದರೆ, ಇಲ್ಲಿ ಮೂಲಭೂತವಾದ ಪ್ರಶ್ನೆಯೆಂದರೆ ಸಂಸ್ಕ್ರತಿ ಅಥವಾ ಪರಂಪರೆಗಳ ಮಾತುಗಳು ಬಂದಾಗ ಅವರು ವಕಾಲತ್ತು ವಹಿಸುತ್ತಿರುವುದು ಇಲ್ಲಿನ ವೈದಿಕ ಸಂಸ್ಕೃತಿಯ ಪರವೇ ಹೊರತು ಇಲ್ಲಿನ ಜನಪದೀಯ, ಬುಡಕಟ್ಟು,ಮತ್ತು ಬಹುಭಾಷಿಕ ಸಂಸ್ಕ್ರತಿಗಳನ್ನಲ್ಲ. ಆದ್ದರಿಂದಾಗಿ ಅವರ ಪರಿಕಲ್ಪನೆಯ ಪರಕೀಯತೆಯಲ್ಲಿ(Otherness) ಬರುವ ಮುಸ್ಲಿಂ ಹಾಗೂ ಕ್ರೈಸ್ತರಿತ್ಯಾದಿಯಾಗಿ ಒಳಗೊಂಡವರನ್ನು ಮ್ಲೇಚ, ತಜಿಕ, ಗರ್ಜನ, ಯವನ ಎನ್ನುವ ವಿವಿಧ ನಮೂನೆಯ ಹೆಸರುಗಳಿಂದ ಕರೆಯಲಾಗುತ್ತದೆ. ಇಂತಹ ವರ್ಗೀಕರಣಗಳ ಮೂಲಕ ವೈದಿಕ ಪರಂಪರೆಯ ಶ್ರೇ‍ಷ್ಠ ಹಾಗೂ ಕನಿಷ್ಟತೆಗಳ ಲೆಕ್ಕಾಚಾರಗಳ ಮೂಲಕ ಸಾಂಸ್ಕೃತಿಕ ಯಜಮಾನಿಕೆಯನ್ನು (Cultural Hegemony)ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾ, ಈ ಮೂಲಕವಾಗಿ ಭಾರತೀಯ ಸಂಸ್ಕ್ರತಿ ಎನ್ನುವ ಏಕಸ್ವಾಮ್ಯದ ವೈದಿಕತೆಯ ನೇತೃತ್ವದ ಪರಿಕಲ್ಪನೆಯು ಇನ್ನಿತರ ಚಿಕ್ಕ ಪುಟ್ಟ ಸಮುದಾಯ, ಭಾಷೆ, ಜಾತಿ, ಪಂಗಡಗಳನ್ನು ಹೊಂದಿದ ಬಹು-ಸಂಸ್ಕ್ರತಿ ಹಾಗೂ ಉಪ-ಸಂಸ್ಕ್ರತಿಗಳಂತಹ ಅನನ್ಯತೆಗಳನ್ನು ತಿರಸ್ಕರಿಸುತ್ತದೆ.

ಈ ಸಾಂಸ್ಕೃತಿಕ-ಯಜಮಾನಿಕೆಯು (Cultural Hegemony) ಇಟಲಿಯ ಮಾರ್ಕ್ಸ್ ವಾದಿ ರಾಜಕೀಯ ಚಿಂತಕ ಆಂಟೋನಿಯೊ ಗ್ರಾಮ್ಸ್ಕಿ ಅವರ ಸಾಮಾನ್ಯ ತಿಳುವಳಿಕೆಯ ತತ್ವದ (Notion of Common Sense)ಮೂಲಕ ಪ್ರಭಾವಿತಗೊಂಡು ಇಂದಿನ ಜನಪ್ರಿಯ-ಸಂಸ್ಕೃತಿಯ(Popular-Culture) ಅಡಿಯಲ್ಲಿ ಇಂದು ಸಂಘಪರಿವಾರ ತನ್ನ ರಾಜಕೀಯ ಎಲ್ಲೆಗಳನ್ನು ಈಗ ವಿಸ್ತರಿಸಿಕೊಂಡಿದ್ದು ಮತ್ತು ಅದರ ಮೂಲಕ ರಾಜಕೀಯ ಅಧಿಕಾರ ಹಿಡಿದಿರುವುದು ಕೂಡ ಈಗ ಇತಿಹಾಸ.

ಕಾರಣವಿಷ್ಟೆ ಭಾರತ ದೇಶವು ಬಹು ಸಂಸ್ಕ್ರತಿಯ ದೇಶವೆನ್ನುವ ಅಂಶ ಅವರಿಗೆ ಅರಿವಿದ್ದರೂ ಸಹಿತ ‘ಹಿಂದಿ-ಹಿಂದೂ –ಹಿಂದುಸ್ತಾನ’ ಎನ್ನುವ ಈ ತ್ರಿಕೋನ ವರ್ತುಲದ ರಚನೆ. ಒಂದು ಭಾಷೆ, ಒಂದು ಧರ್ಮ, ಒಂದು ದೇಶ ಎನ್ನುವಂತೆ ಈ ರೀತಿಯ ಏಕಸ್ವಾಮ್ಯದ ನೀತಿ ಸ್ಪಷ್ಟವಾಗಿ ಭಾಷೆ, ಧರ್ಮ, ಮತ್ತು ಪ್ರದೇಶದ ಆಧಾರಗಳ, ಮೇಲೆ ಒಡೆದು ಆಳುವ ರಾಜಕೀಯ ದುರುದ್ದೇಶದಿಂದ ಹೊಂದಿದೆ ಎಂದರೆ ಅದು ಉತ್ಪ್ರೇಕ್ಷೆಯಾಗಲಾರದು. ಇಂತಹ ವಿಭಜಿತ ಪರಿಕಲ್ಪನೆಗಳೆ 1990ರ ದಶಕದ ನಂತರ ಕೋಮುವಾದ ಮತ್ತು ಮೂಲಭೂತವಾದದ ತೀವ್ರ ಬೆಳವಣಿಗೆಗೆ ಕಾರಣವಾದವು. ಅಲ್ಲದೆ ಅಂದಿನ ಕಾಲಘಟ್ಟದಲ್ಲಾದ ಕೆಲವು ರಾಜಕೀಯ ಬದಲಾವಣೆಗಳು ಸಹಿತ ಮಿಲಿಟಂಟ್ ಮಾದರಿಯ ಹಿಂದುತ್ವಕ್ಕೆ ಅಡಿಪಾಯವನ್ನು ಹಾಕಿದವು. ಅಂತಹ ಬದಲಾವಣೆಗಳಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿನ ಧರ್ಮದ ಆಧಾರಿತ ದೇಶ ವಿಭಜನೆ ಮತ್ತು ಭೂ-ಸುಧಾರಣೆಯಂತಹ ಕಾಯ್ದೆಗಳ ಮೂಲಕ ಮೇಲುಸ್ತರಕ್ಕೆ ಬಡ್ತಿ ಪಡೆದಂತಹ ಹಿಂದುಳಿದ ವರ್ಗಗಳು ರಾಜಕೀಯ ಪ್ರಾತಿನಿಧ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಇದರ ಪರಿಣಾಮ ಮಂಡಲ್ ಸಮಿತಿಯ ವರದಿಯ ಜಾರಿಯಿಂದಾಗಿ ಅವು ಮೀಸಲಾತಿಯ ಪಾಲನ್ನು ಪಡೆಯುವಂತಾದವು. ಇನ್ನೊಂದೆಡೆಗೆ ಎಲ್ಲ ಸ್ಥರಗಳಿಂದಲೂ ಶೋಷಣೆಯನ್ನುಂಡು ಸಮಾಜದಿಂದ ವಿಮುಖಗೊಂಡಿದ್ದ ದಲಿತ ವರ್ಗಗಳು ಬ್ಯಾಮಸೆಫ್ (The All India Backward and Minority Employees Federation) ಅಡಿಯಲ್ಲಿ ಸಂಘಟಿತರಾಗಿ ಮುಂದೆ ಅದು ಬಿಎಸ್ ಪಿ ಮೂಲಕ ರಾಜಕೀಯ ಶಕ್ತಿಯಾಗಿ 90 ರ ದಶಕದಲ್ಲಿ ಬೆಳೆಯುತಿದ್ದಂತಹ ಆ ಸಂದರ್ಭಗಳು ಸಂಘ ಪರಿವಾರಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಒಂದು ಕಡೆ ಮಂಡಲ್ ಸಮಿತಿಯ ವರದಿಯಿಂದಾಗಿ ಹಂಚಿ ಹೋಗುತ್ತಿರುವ ಹಿಂದುಳಿದ ವರ್ಗಗಳು ಒಂದೆಡೆಯಾದರೆ ಇನ್ನೊಂದೆಡೆಗೆ ದಲಿತ ವರ್ಗಗಳು ರಾಜಕೀಯ ಶಕ್ತಿಯಾಗಿ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವಂತಹ ಅನಿವಾರ್ಯತೆ, ಇವುಗಳೆಲ್ಲವುದರೊಟ್ಟಿಗೆ ದೇಶದ ಆರ್ಥಿಕತೆ ಕೂಡ ಸುಧಾರಣೆಗೆ ಒಗ್ಗಿಕೊಳ್ಳುವ ಸಂಕ್ರಮಣ ಕಾಲದಲ್ಲಿ ಇದ್ದಂತಹ ಆ ಅವಧಿ. ಇವೆಲ್ಲ ಅಂಶಗಳು ಒಮ್ಮೆಗೆ ಮೇಳೈಸಿದವು. ಅಂದರೆ ತಪ್ಪಾಗಲಾರದು. ಆದ್ದರಿಂದ ಈ 90ರ ದಶಕದ ‘ಮಂಡಲ್-ಮಂದಿರ –ಮಸೀದ್-ಮಾರ್ಕೆಟ್’ ಅಂಶಗಳ ಈ ಚತುರ್ಕೋನದ ಸಮ್ಮಿಲನ ಮುಂದೆ ಭಾರತದಲ್ಲಿ ವಿಭಜಿತ ಪರಿಕಲ್ಪನೆಯ ಹಿಂದುತ್ವ ಮಾದರಿಯ ಸಾಂಸ್ಕೃತಿಕ-ರಾಷ್ಟ್ರೀಯತೆಗೆ ಕಾಲಾಂತರದಲ್ಲಿ ಉಗ್ರ ಸ್ವರೂಪವನ್ನು ಪಡೆದುಕೊಳ್ಳಲು ಪ್ರೇರಣೆ ನೀಡಿತು. ಆದ್ದರಿಂದ ಅವರಿಗೆ ಈ ರೀತಿ ಹರಿದು ಹಂಚಿ ಹೋಗುತ್ತಿರುವ ಹಿಂದೂ ಧರ್ಮವನ್ನು ಒಗ್ಗೊಡಿಸಿ ಆ ಮೂಲಕ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳುವುದು ಅವರು ಪ್ರತಿಪಾದಿಸುತಿದ್ದ ದೇಶಪ್ರೇಮದ ಮತ್ತು ರಾಷ್ಟ್ರಿಯತೆಯ ಪ್ರಮುಖ ಉದ್ದೇಶವಾಗಿತ್ತು. ಆದ್ದರಿಂದ ಅಂತಹ ಪ್ರಕ್ರಿಯೆಗಳ ಭಾಗವಾಗಿ ನಾವು ಅಯೋಧ್ಯೆಯ ರಾಮಜನ್ಮ ಭೂಮಿ ಚಳವಳಿ, ಬಾಬ್ರಿ ಮಸೀದಿ ಧ್ವಂಸ ಮತ್ತು ಗುಜರಾತಿನ ಗೋದ್ರಾ ಹತ್ಯಾಕಾ೦ಡಗಳನ್ನು ಈ ಎಲ್ಲ ಹಿನ್ನಲೆಗಳಿಂದ ನೋಡಬೇಕಾಗುತ್ತದೆ.

ಇನ್ನು ರಾಜಕೀಯ ಚಿಂತಕರಾದ ಜ್ಯೋತಿರ್ಮಯ ಶರ್ಮಾ ತಮ್ಮ ‘Hindutva- Exploring the Idea of Hindu Nationalism’ ಎನ್ನುವ ಕೃತಿಯಲ್ಲಿ ‘ಹಿಂದುತ್ವದ ಸಾಂಸ್ಕೃತಿಕ-ರಾಷ್ಟ್ರೀಯತೆ’ಯ ವ್ಯಾಖ್ಯಾನಗಳ ಕುರಿತಾಗಿ ಹಲವು ನಿಖರ ಅಂಶಗಳನ್ನು ನಮ್ಮ ಮುಂದಿಡುತ್ತಾರೆ. ಅದರಲ್ಲಿ ಮುಖ್ಯವಾಗಿ ‘ಹಿಂದೂ ಧರ್ಮ ಎನ್ನುವುದು ಒಂದು ಜೀವನ ಮಾರ್ಗ’ ಎನ್ನುವ ಅಂಶವನ್ನು ಕೆದಕುತ್ತಾ ಅದು ನಿಜವಾಗಿಯೂ ಯಾರ ಮಾರ್ಗ? ಬ್ರಾಹ್ಮಣ ಮಾರ್ಗವೋ? ಅಥವಾ ಶೂದ್ರನ ಮಾರ್ಗವೋ ? ಎನ್ನುವುದನ್ನ್ನು ಪ್ರಶ್ನಿಸುತ್ತಾರೆ. ಹಿಂದುತ್ವದ ಈ ರಾಷ್ಟ್ರೀಯತೆಯ ಪರಿಕಲ್ಪನೆಯು ಏಕವರ್ಣದಿಂದ ಕ್ರೂಢೀಕರಿಸಿದ ವ್ಯಾಪ್ತಿಯಾಗಿ ಮಾತ್ರ ನಿಂತಿರುವಂತಹದ್ದು. ಇದರಿಂದಾಗಿ ವೈವಿಧ್ಯಮಯ ಅಭಿಪ್ರಾಯಗಳಿಗೆ ಮತ್ತು ಸಂವಾದಗಳಿಗೆ ಈ ಕಲ್ಪನೆ ನಿರ್ಬಂಧ ಹೇರುತ್ತದೆ. ಪ್ರೊ.ಶರ್ಮಾ ಅವರು ಮುಂದುವರೆದು ಹೇಳುತ್ತಾ ಬೌದ್ಧ ಮತ್ತು ಜೈನ ಧರ್ಮಗಳ ಅಹಿಂಸೆಯ ತತ್ವಗಳಿಂದಾಗಿಯೇ ಅದು ತನ್ನಲ್ಲಿರುವ ಪೌರಷತ್ವ(Masculanity) ಕಳೆದುಕೊಂಡಿತ್ತು. ಆದ್ದರಿಂದಾಗಿ ಈ ಆಧುನಿಕ ಮಾದರಿಯ ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳನ್ನು ಸೆದೆಬಡಿಯಲು ಮಿಲಿಟಂಟ್ ರೀತಿಯ ಅಂಶಗಳನ್ನು ತನ್ನಲ್ಲಿ ಅಳವಡಿಸಿಕೊಂಡಿತು. ಅಲ್ಲದೆ ಇನ್ನು ಒಪ್ಪಿತ ಸಂಪ್ರದಾಯಗಳನ್ನು ತಿರಸ್ಕರಿಸುವ ವಿಚಾರಗಳು, ಹೊಸ ಪಂಗಡಗಳು, ಧರ್ಮಗ್ರಂಥಗಳ ಮರುವ್ಯಾಖ್ಯಾನ ಹಾಗೂ ಹೊಸ ಕಾವ್ಯ ಮತ್ತು ಸಾಹಿತ್ಯಿಕ ಪರಂಪರೆಗಳು, ಜನಪದೀಯ ಮತ್ತು ಬುಡಕಟ್ಟು ಸಂಸ್ಕ್ರತಿಯ ದೈವಗಳು. ಈ ಎಲ್ಲ ಅಂಶಗಳು ಸಂಸ್ಕೃತ ಮತ್ತು ಬ್ರಾಹ್ಮಣಿಕತೆಯ ಸಂಪ್ರದಾಯ ಪ್ರತಿಪಾದಿಸುವ ಏಕೀಕೃತ ಹಿಂದೂ ಧರ್ಮದ ಅಸ್ತಿತ್ವವನ್ನು ಅಲುಗಾಡಿಸುತ್ತವೆ. ಇನ್ನು ಪೌರಾಣಿಕ ಅಂಶಗಳು ಇಂದಿನ ಆಧುನಿಕ ಜೀವನ ವಿಧಾನದಿಂದಾಗಿ ಜನರಲ್ಲಿ ಒಂದು ರೀತಿಯ ಸಾಮೂಹಿಕ ಮೂಢನಂಬಿಕೆಗಳಾಗಿ ಪರಿಗಣಿಸಲ್ಪಡುತ್ತಿವೆ, ಆ ಮೂಲಕ ನವೋದಯದ ವಿಚಾರಗಳಿಂದಾಗಿ ಹುಟ್ಟುವ ಪ್ರಶ್ನೆಗಳಿಗೆ ಬಹುತೇಕ ಈ ಪೌರಾಣಿಕದ ಅಂಶಗಳು ಉತ್ತರ ಕೊಡುವಲ್ಲಿ ವಿಫಲವಾಗಿರುವಂತದ್ದು. ಇನ್ನು ಒಟ್ಟಾಗಿ ದೇಶದ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅದು ಒಂದು ರೀತಿಯ ಅನನ್ಯತೆಯನ್ನು ಹಾಗೂ ಬಹುತ್ವದ ಚಿತ್ರಣವನ್ನು ಬಿಂಬಿಸುವುದಲ್ಲದೇ ಅದರ ಮೂಲಕ ಹೊರಹೊಮ್ಮುವ ಹಲವು ಅರ್ಥಗಳು ಕೂಡ ಏಕಮೇವ ಸಂಸ್ಕ್ರತಿಯ ವಿರೋಧಿ ಅಂಶಗಳಾಗಿ ಕಾಣುತ್ತವೆ. ಆದ್ದರಿಂದ ನಮಗೆ ಸಾವರ್ಕರ, ಗೊಲ್ವಾಲ್ಕರ್, ಹೆಗ್ಗಡೆವಾರ, ಎಸ್.ಪಿ.ಮುಖರ್ಜಿ ರಂತಹ ವಿಚಾರಗಳಿಂದ ಪ್ರೇರಿತವಾದ ಈ ‘ಹಿಂದುತ್ವದ ಸಾಂಸ್ಕೃತಿಕ-ರಾಷ್ಟ್ರೀಯತೆ’ಯು ಏಕಮುಖಿಯವಾದಗಳಿಂದಾಗಿ ಅದು ತನ್ನ ಧಾರ್ಮಿಕ ವಿಚಾರಗಳ ಮೂಲಕ ಸಮಾಜದ ಎಲ್ಲ ವರ್ಗ, ಮತ, ಪಂಗಡ, ಭಾಷೆಗಳ ಮೇಲೆ ಪ್ರಭುತ್ವವನ್ನು ಸಾರುವುದಾಗಿದೆ. ಅಲ್ಲದೆ ಇಲ್ಲಿ ಚರ್ಚೆಗಳಿಗೆ ಮತ್ತು ಸಂವಾದಗಳಿಗೆ ಜಾಗವಿಲ್ಲ ಕಾರಣ ಇಲ್ಲಿರುವ ಎಲ್ಲ ಅಂಶಗಳು ಪೂರ್ವ ನಿರ್ಧಾರಿತವಾದಂತಹುಗಳು.

ಆದ್ದರಿಂದ ಗಾಂಧೀ, ಅಂಬೇಡ್ಕರ, ಟ್ಯಾಗೋರ್, ಪೆರಿಯಾರ್ ರಂತಹ ಮಹಾತ್ಮರು ಇಂತಹ ಏಕಮೇವ ಸಾಂಸ್ಕೃತಿಕ ರಾಷ್ಟ್ರೀಯತೆಯ ಯಜಮಾನಿಕೆಯನ್ನು ವಿರೋಧಿಸಿದರು. ಮತ್ತು ಇವರೆಲ್ಲರ ಪ್ರಕಾರ ರಾಷ್ಟ್ರೀಯತೆಯ ಪರಿಕಲ್ಪನೆಯು ತಾವು ಬೆಳೆದು ಬಂದ ಬೇರುಗಳ ಮೂಲಕ ವಿಸ್ತರಿಸಿರುವುದಲ್ಲದೆ ಮತ್ತು ಅಂತಹ ವಿಸ್ತೃತ ಪರಿಕಲ್ಪನೆಗಳಲ್ಲಿ ವಿರೋಧಕ್ಕೆ, ವಾದಕ್ಕೆ ಹಾಗೂ ಸಂವಾದಗಳಿಗೆ ಅವಕಾಶಗಳುಂಟು, ಮತ್ತು ಅವರು ಪ್ರತಿಪಾದಿಸುವ ರಾಷ್ಟ್ರೀಯತೆಯ ಪರಿಭಾಷೆಯು ಕೂಡಾ ಭಾರತ ಎಂಬ ಬಹುತ್ವದ ಸಂಕೇತಗಳ ಪರಿಕಲ್ಪನೆಗಳಿಗೆ. ಅವರ ಪ್ರತಿಯೊಂದು ವಿಚಾರಗಳು ದೇಶದ ವೈವಿಧ್ಯತೆಯನ್ನು ಎತ್ತಿಹಿಡಿಯಲು ಸಹಕರಿಸುತ್ತವೆ.

ಆದ್ದರಿಂದ ಇಂದು ದೇಶಪ್ರೇಮದ ಪರಕಾಷ್ಠೆಯನ್ನು ತೋರಿಸುತ್ತಿರುವ ಈ ಹಿಂದುತ್ವದ ರಾಷ್ಟ್ರೀಯತೆಯು ಸಂವಿಧಾನ ಆಶಯಗಳಿಗೆ ವಿರೋಧವಾದದ್ದು. ಆದ್ದರಿಂದ ನಾವು ಇಂತಹ ದೇಶಭಕ್ತಿಯನ್ನು ತೋರಿಸುವ ಮೊದಲು ನಾವು ಈ ದೇಶದ ಅನನ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ಮೂಲಕ ಎಲ್ಲರೂ ಜೊತೆಯಾಗಿ ಸಹಜೀವನ ನಡೆಸಲು ಅವಕಾಶವನ್ನು ನೀಡುವ ನಿಜವಾದ ರಾಷ್ಟ್ರೀಯತೆಯನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮತ್ತೆ ಮತ್ತೆ ಪ್ರತಿಪಾದಿಸಬೇಕಾಗಿರುವುದು ಈ ಕಾಲದ ಅತ್ಯಂತ ತುರ್ತು ಎನ್ನುವುದು ಗಮನಾರ್ಹ ವಿಚಾರವಾಗಿದೆ.

~~
ಮಂಜುನಾಥ ನರಗುಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿಯನ್ನು ಪೂರೈಸಿ ಸದ್ಯ ಹೈದ್ರಾಬಾದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿಯ ವ್ಯಾಸಂಗ ಮುಗಿಸಿದ್ದಾರೆ.