ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ

ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ

ವಿಎಲ್ನರಸಿಂಹಮೂರ್ತಿ

ಇಂದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್ ಅನುವಾದ ಕೃತಿ ‘Bride in the Hills’ ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಡಾ. ವನಮಾಲ ವಿಶ್ವನಾಥ್ ಅವರು ಅನುವಾದಿಸಿರುವ ಈ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಹೊರತಂದಿದೆ. ‘ಮಲೆಗಳಲ್ಲಿ ಮದುಮಗಳು’ ಕೃತಿಯ ಇಂಗ್ಲೀಷ್ ಅನುವಾದವೊಂದು ಈಗಾಗಲೇ ಕುವೆಂಪು ಪ್ರತಿಷ್ಠಾನ ಹೊರತಂದಿದೆ. ಒಂದು, ಎರಡಲ್ಲ ಹತ್ತು ಅನುವಾದಗಳಾದರೂ ಮದುಮಗಳನ್ನು ಕನ್ನಡದಿಂದ ಬೇರೆ ಭಾಷೆಗೆ ಸಮರ್ಪಕವಾಗಿ ಅನುವಾದಿಸುವುದು ಕಷ್ಟವೇ. ಹಾಗಾಗಿ ಹಲವು ಅನುವಾದಗಳು ಇರುವುದು ಒಳ್ಳೆಯದು.

ಪ್ರತಿ ಓದಿನಲ್ಲಿಯೂ ಕೃತಿ ನಮ್ಮ ಆಳಕ್ಕೆ ಇಳಿಯುತ್ತಾ ಹೋದಂತೆಲ್ಲ ನಮ್ಮನ್ನು ಹೊಸ ಮನುಷ್ಯರಾಗುವಂತೆ ಒತ್ತಾಯಿಸುವ ಕನ್ನಡದ ಎರಡು ಕೃತಿಗಳು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ದೇವನೂರರ ‘ಕುಸುಮಬಾಲೆ’. ಆದರೆ ಕನ್ನಡ ಸಾಹಿತ್ಯದ ಮೇರು ಪ್ರತಿಭೆಗಳಾದ ಕುವೆಂಪು ಮತ್ತು ದೇವನೂರು ಕರ್ನಾಟಕದ ಆಚೆಗೆ ತಲುಪಬೇಕಾದಷ್ಟು ತಲುಪಿಯೇ ಇಲ್ಲ. ಬಹುಶಃ ಭಾರತದ ಯಾವ ಭಾಷೆಗಳಲ್ಲಿಯೂ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕುಸುಮಬಾಲೆ’ ಕಾದಂಬರಿಗಳಲ್ಲಿ ಸೃಷ್ಟಿಯಾಗಿರುವ
Cosmos ಸೃಷ್ಟಿಯಾಗಿಲ್ಲ.

ಅನುವಾದಗಳ ಹಿಂದಿರುವ ರಾಜಕಾರಣದಿಂದಾಗಿ ಭಾರತದ ಮಟ್ಟದಲ್ಲಷ್ಟೇ ಅಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಓದು, ಚರ್ಚೆಗೆ ಒಳಪಡಬೇಕಿದ್ದ ಕುವೆಂಪು, ದೇವನೂರು ತರದ ಗದ್ಯ ಲೇಖಕರು ಕನ್ನಡಕ್ಕಷ್ಟೇ ಸೀಮಿತಗೊಂಡಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಭಾರತ ಮತ್ತು ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಒಳಪಟ್ಟಿರುವ ಭಾರತೀಯ ಸಾಹಿತ್ಯದ ಕೃತಿಗಳು ಇಂಗ್ಲಿಷಿಗೆ ಅನುವಾದಗೊಂಡಿರುವ ಲೇಖಕರವು ಮಾತ್ರ. ರವಿಂದ್ರನಾಥ ಟ್ಯಾಗೋರ್, ಮುಲ್ಕರಾಜ್ ಆನಂದ್, ರಾಜಾರಾವ್, ಆರ್.ಕೆ. ನಾರಾಯಣ್, ಬಂಕಿಮಚಂದ್ರ ಚಟರ್ಜಿ ತರದ ಲೇಖಕರು‌ ಭಾರತೀಯ ಇಂಗ್ಲೀಷ್ ಸಾಹಿತ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಓದಿಗೆ ಒಳಪಟ್ಟಿದ್ದಾರೆ.‌‌

ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ಬದಲಾವಣೆಗಳಿಂದಾಗಿ ವಿಶ್ವವಿದ್ಯಾಲಯಗಳ Curriculumಗಳ‌ಲ್ಲಿ ಬೇರೆ ಬೇರೆ ಬಾಷೆಯ ಲೇಖಕರು ಸ್ಥಾನ ಪಡೆಯುತ್ತಿದ್ದಾರೆ.

ಇನ್ನು ಕನ್ನಡದ ಯು. ಆರ್‌‌. ಅನಂತಮೂರ್ತಿ, ಎ.ಕೆ. ರಾಮಾನುಜನ್, ಗಿರೀಶ್ ಕಾರ್ನಾಡ್, ಎಸ್. ಎಲ್. ಭೈರಪ್ಪ, ಕೆ. ವಿ. ಸುಬ್ಬಣ್ಣ, ವಿವೇಶ ಶಾನುಭಾಗ, ಜಯಂತ್ ಕಾಯ್ಕಿಣಿ, ವೈದೇಹಿ ತರದ ವೈದಿಕರಿಗೆ ಸಿಕ್ಕಿರುವ ಅಂತರಾಷ್ಟ್ರೀಯ ಮಾನ್ಯತೆ ಕುವೆಂಪು, ಲಂಕೇಶ್‌, ತೇಜಸ್ವಿ, ಆಲನಹಳ್ಳಿ, ದೇವನೂರ ಕೃತಿಗಳಿಗೆ ಸಿಕ್ಕಿಯೇ ಇಲ್ಲ. ಹಾಗಾಗಿಯೇ ಕನ್ನಡ ಸಾಹಿತ್ಯದ ಗಟ್ಟಿದನಿಗಳು ಕನ್ನಡದಾಚೆಗೆ ತಲುಪಿಯೇ ಇಲ್ಲ.

ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಅನುವಾದಗಳ ರಾಜಕಾರಣವನ್ನು ಗಂಭೀರ ಗಮನಿಸಿದರೆ ಕುವೆಂಪು ಕಾದಂಬರಿಗಳ ಹತ್ತಿರದಲ್ಲೂ ನಿಲ್ಲುವುದಕ್ಕೆ ಯೋಗ್ಯವಲ್ಲದ ಕೃತಿಗಳಿಗೆ ಸಿಕ್ಕಿರುವ ಮಹತ್ವ ಎಂತಹುದು ಎಂದು ಅರ್ಥವಾಗುತ್ತದೆ,

ಹಾಗಾಗಿಯೇ ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ವೈದಿಕರ ಗೋಳು, ವ್ಯಸನಗಳ ಕುರಿತ ಕೃತಿಗಳೇ ಎಲ್ಲ ಕಡೆ ಪೂರೈಸಲ್ಪಡುತ್ತಿವೆ. ಕನ್ನಡದ ಶ್ರೇಷ್ಠ ಕೃತಿಗಳೆಂದರೆ‌ ಕೇವಲ ಅನಂತಮೂರ್ತಿ, ‌ಕಾರ್ನಾಡ್, ರಾಮಾನುಜನ್, ವಿವೇಕ‌‌ ಶಾನುಭಾಗ, ವಸುಧೇಂದ್ರ‌ರ‌ ಕೃತಿಗಳು ಎಂದು ಬಿಂಬಿತವಾಗಿವೆ.

ಇಡೀ ನವ್ಯ ಸಾಹಿತ್ಯ ‘ವ್ಯಕ್ತಿ ವಿಶಿಷ್ಟತೆ’ಯ ಹೆಸರಿನಲ್ಲಿ ಎರಡು ದಶಕಗಳ ಕಾಲ‌ ಕನ್ನಡದಲ್ಲಿ ಸೃಷ್ಟಿ ಮಾಡಿದ್ದು ಯುರೋಪಿನ ಆಧುನಿಕ ಸಾಹಿತ್ಯದ ಶಿಥಿಲವಾದ ಅನುಕರಣೆಯನ್ನು. ‘ಮಣ್ಣಿನ ವಾಸನೆ’ ಹೆಸರಿನಲ್ಲಿ ಸೃಷ್ಟಿಯಾದ ಸಾಹಿತ್ಯದಲ್ಲಿ ಮಣ್ಣಿನ ವಾಸನೆ ಕೊಡಬಲ್ಲ ದಲಿತ,‌ ಶೂದ್ರ ಸಂವೇದನೆಗಿಂತ ಇಂಗಿನ ವಾಸನೆಯೆ ತುಂಬಿ ತುಳುಕಾಡಿದೆ. ಯುರೋಪಿಯನ್ ಸಮಾಜ ಕಳೆದ ಶತಮಾನದಲ್ಲಿ ಎದುರಿಸಿದ ಯಾವ ತಲ್ಲಣ, ಬದಲಾವಣೆಗಳನ್ನೂ ಅನುಭವಿಸದ ಭಾರತದ ವೈದಿಕರು ತಾವು ಅನುಭವಿಸಿಯೇ ಇಲ್ಲದ ಒಂಟಿತನ, ತಬ್ಬಲಿತನಗಳನ್ನು ಆವಾಹಿಸಿಕೊಂಡು Individualityಗೆ ಇನ್ನಿಲ್ಲದ ಮಹತ್ವ ಕೊಟ್ಟರು.‌ ವಾಸ್ತವದಲ್ಲಿ ವರ್ಣ ವ್ಯವಸ್ಥೆಯ ನೆಪದಲ್ಲಿ‌ ಜಾತಿ, ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮುಟ್ಟುವುದು ಮೈಲಿಗೆ ಎಂದು ಕತೆ ಕಟ್ಟಿ ಮನುಷ್ಯರ ನಡುವೆ Social interaction ನಡೆಯದಂತೆ ತಡೆದಿದ್ದು ಇದೇ ವೈದಿಕರು.

ಇಪ್ಪತ್ತನೆಯ ಶತಮಾನದಲ್ಲಿ ವಸಾಹತುಶಾಹಿ ಸೃಷ್ಟಿಮಾಡಿದ ಅವಕಾಶಗಳು ಮತ್ತು ಹಲವು ಶೂದ್ರ ರಾಜರುಗಳು ತರಲು ಪ್ರಯತ್ನಿಸಿದ ಸಮಾಜ ಸುಧಾರಣೆಯಿಂದಾಗಿ ಆಧುನಿಕತೆ ಕಾಲಿಟ್ಟು ಸಮಾಜದಲ್ಲಿ ಸ್ವಲ್ಪ ಚಲನೆ ಉಂಟಾಯಿತು. ಈ ಆಧುನಿಕತೆ ಉಂಟು ಮಾಡಿದ ಬದಲಾವಣೆ, ಸ್ಥಿತ್ಯಂತರಗಳ‌ನ್ನು ದಾಖಲು ಮಾಡುತ್ತಿದ್ದೇವೆ, ಜಾತಿ ಕಾರಣಕ್ಕೆ ಕೊಳೆತು ನಾರುತ್ತಿರುವ ಹಿಂದೂ ಸಮಾಜವನ್ನು ‘Critical insider’ ಗಳಾಗಿ ನೋಡುತ್ತೇವೆ ಎಂದು ಹೇಳಿಕೊಂಡು ನವ್ಯರು ಮಾಡಿದ್ದು ತಮ್ಮ Sexual obsession ಗಳ ಶೋಧವನ್ನೆ ಹೊರತು ಮನುಷ್ಯತ್ವದ ಶೋಧವನ್ನಲ್ಲ.

ನವ್ಯ ಸಾಹಿತ್ಯದ ಮೇರು ಕೃತಿಯೆಂಬ ಪಟ್ಟ ಪಡೆದಿರುವ ಕ್ರಾಂತಿಕಾರಿ ‘ಸಂಸ್ಕಾರ’, ‘ಭಾರತೀಪುರ’ ದಿಂದ ಹಿಡಿದು ಪ್ರತಿಗಾಮಿ ಭೈರಪ್ಪನ ‘ದಾಟು’ ಸೇರಿದಂತೆ ಅರವತ್ತು, ಎಪ್ಪತ್ತರ ದಶಕದಲ್ಲಿ ವೈದಿಕರು ಬರೆದಿದ್ದೆಲ್ಲ ಯಾರು ಯಾರ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿದರು, ಯಾರು ಯಾರಿಗೆ ಹುಟ್ಟಿದರು, ವರ್ಣ ಸಂಕರ ಒಳ್ಳೆಯದೊ ಕೆಟ್ಟದ್ದೊ, ಅದರಿಂದ ಭಾರತೀಯ ಸಂಸ್ಕೃತಿ ಉಳಿಯುತ್ತದೆಯೋ ಇಲ್ಲವೋ ಎನ್ನುವುದನ್ನು. ನವ್ಯರ ಈ Sexual obsession ಅನ್ನು ಒಡೆದು ಉರುಳಿಸಿ ಈ ಜಗತ್ತಿನಲ್ಲಿ ಮನುಷ್ಯ ಮಾತ್ರ ಮುಖ್ಯವಲ್ಲ ಮನುಷ್ಯನು ಪ್ರಕೃತಿಯ ಒಂದು ತೃಣ ಮಾತ್ರ, ಲೈಂಗಿಕತೆ ಎನ್ನುವುದು ಮನುಷ್ಯನ ಮೂಲಭೂತ ಪ್ರವೃತ್ತಿಯೇ ಹೊರತು ಅದು ನೈತಿಕತೆಯ ಹೆಸರಲ್ಲಿ ಗೋಳಾಡಬೇಕಾದ ವ್ಯಸನವಲ್ಲ ಎಂದು ತೋರಿಸಿದ್ದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’. ಅದನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಿದ್ದು ‘ಕುಸುಮಬಾಲೆ’.

ವಾಸ್ತವವಾಗಿ ನವ್ಯದ ಹೆಸರಿನಲ್ಲಿ ಬಂದ ಬಹಳಷ್ಟು ಕೃತಿಗಳು ಆಧುನಿಕವಲ್ಲವೇ ಅಲ್ಲ. ಆಳದಲ್ಲಿ ಭೈರಪ್ಪನ ಕೃತಿಗಳಷ್ಟೆ ಸಂಪ್ರದಾಯವಾದಿ ಗುಣ ಹೊಂದಿರುವ ಪ್ರತಿಗಾಮಿ ಕೃತಿಗಳು.

ನವ್ಯದ ಹೊಲಸನ್ನು ಅಸನು ಮಾಡಲೆಂದ ಬರೆದಂತಿರುವ ‘ಮಲೆಗಳಲ್ಲಿ ಮದುಮಗಳು’,‌ ಅದನ್ನು ಇನ್ನಷ್ಟು ವಿಸ್ತರಿಸಿದ ‘ಕುಸುಮಬಾಲೆ’ ಈಗ ಇಂಗ್ಲೀಷಿಗೆ ಅನುವಾದವಾಗಿರುವುದು ಸಂತೋಷದ ವಿಷಯ.

ನವ್ಯ‌ ಸಾಹಿತ್ಯದ ಕತೆ, ಕಾವ್ಯ, ಕಾದಂಬರಿಗಳಲ್ಲಿ ಕಾಮ ಸಂಬಂಧಗಳ ಕುರಿತು ಇರುವ ಗೀಳು ಮತ್ತು ಮದುಮಗಳು,‌ ಕುಸುಮಬಾಲೆ ಅದನ್ನು ಒಡೆದು ಹಾಕಿರುವ‌ ರೀತಿಯನ್ನು ಅರ್ಥಮಾಡಿಕೊಂಡರೆ ಯಾವುದು ನಿಜವಾಗಿಯೂ ಅರ್ಥಪೂರ್ಣವಾದ ಸಾಹಿತ್ಯ ಎನ್ನುವುದು ಗೊತ್ತಾಗುತ್ತದೆ.

 

ವಿಎಲ್ನರಸಿಂಹಮೂರ್ತಿ

ಚಿಂತಕರು ಮತ್ತು ಇಂಗ್ಲಿಷ್ ಅಧ್ಯಾಪಕರು