ದಲಿತ –  ಸರಕು ಅಥವಾ ಚಹರೆ?

ದಲಿತ –  ಸರಕು ಅಥವಾ ಚಹರೆ? ಭಾಗ – ೧ 

ಗೌರವ್ ಸೋಮ್ ವಂಶಿ ( Gaurav Somwanshi )

ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya)

ನಾನೀಗ ಹೇಳಲು ಹೊರಟಿರುವುದು 2016 ರಲ್ಲಿ ನಾನು ಬರೆದ ಲೇಖನಗಳನ್ನು ಆಧರಿಸಿಕಟ್ಟಿರುವುದು. ಅಲ್ಲದೇ ಇನ್ನಿತರ ವಿಚಾರಗಳ ಮೇಲೂ ನಿರ್ಮಿಸಿದ್ದೇನೆ, ಆದರೆ ಇದರ ಸಾರ ಮುಂಚಿನಂತೆಯೇ ಇದೆ ಹಾಗು ನಾನು ಅವುಗಳಲ್ಲಿ ಹೆಚ್ಚಿನದನ್ನು ಇಲ್ಲಿ ನೇರವಾಗಿ ಉಲ್ಲೇಖಿಸುತ್ತೇನೆ.

 

ಈ ಲೇಖನಗಳನ್ನು ರೋಹಿತ್ ವೇಮುಲ ಸಾಂಸ್ಥಿಕ ಕೊಲೆಯ ನಂತರ ನಡೆದ ಘಟನೆಗಳನ್ನು ಆದ್ಧರಿಸಿ ಬರೆಯಲಾಗಿತ್ತು. ಆಗ ಹಲವಾರು ರೀತಿಯ ಪ್ರತಿಕ್ರಿಯೆಗಳು ಹೊರ ಹಮ್ಮಿದ್ದವು  ಹಾಗು ಅವುಗಳಲ್ಲಿ ಒಂದು ರೀತಿಯ ನಿರ್ಧಿಷ್ಟ ಪ್ರವೃತ್ತಿ ಇತ್ತು. ಇದು ನನಗೆ ಪ್ರಚೋದನೆಯಾಗಿತ್ತು, ಅಲ್ಲದೆ ಮುಖ್ಯವಾಹಿನಿ ದಲಿತ ಪದ ಮತ್ತು ಜಾತಿಯ  ಬಗ್ಗೆ ಪ್ರಶ್ನೆಗಳಿಗೆ ಸ್ವಾಗತಕ್ಕೆ ಸಿದ್ದವಾಗಿತ್ತು.  ನನ್ನ ಬಾಲ್ಯದಲ್ಲಿ  ಈ ಪದವನ್ನು ನನ್ನ ಕುಟುಂಬದಲ್ಲಿ ಆತ್ಮ ಚರಿತ್ರೆಯ ಬಗ್ಗೆ ಮಾತನಾಡುತ್ತಿದಾಗ  ಮಾತ್ರ ಕೇಳಿದ್ದೆ ಆದರೆ ಹೊರಗೆಲ್ಲೂ ಕೇಳಿರಲಿಲ್ಲ. ಆದರೆ ನಂತರ ಇದು ಸಾರ್ವತ್ರಿಕವಾಯಿತು.

 

ನಾನು ಈ ಪದವನ್ನು ಹೊರಗಡೆ ಕೇಳಿದಷ್ಟು ನನ್ನ ಮನೆಯಲ್ಲಾಗಲಿ ಅಥವಾ ಸಮುದಾಯದಲ್ಲಾಗಲಿ ಕೇಳಿಲ್ಲ. ಇದು  ನಾವು ಎದುರುಗೊಂಡಾಗ ಹೇಳುವ ಪದವಲ್ಲ.  ನಾವು ಎದುರುಗೊಂಡಾಗ ಹೇಳುವ ಪದ ಜೈ ಭೀಮ್. ಸಾಧಾರಣ ಮನುಷ್ಯರು ಅಂಬೇಡ್ಕರೈಟ್ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು. ಹೊರಗಡೆ ದಲಿತ ಎಂದು ಕರೆಯುವುದು ಹೆಚ್ಚಾಗುತ್ತಿತ್ತು. ಹೀಗೆ ಹೊರಹಮ್ಮುತ್ತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಲೇಖನಗಳನ್ನು ಬರೆಯಲಾಗಿತ್ತು.  ಹಿಂದೆ ಮಾಡುತ್ತಿದ್ದ ವಾದಗಳನ್ನು ಹೆಚ್ಚಾಗಿ ಸಾರಂಶದೊಂದಿಗೆ ಮುಂದಿಡುತ್ತಿದ್ದೇನೆ.

 

ನಾವೆಲ್ಲರೂ ನೆನಪಿಸಿಕೊಳ್ಳಬೇಕಿದ್ದು ತನಿಖಾ  ಆಯೋಗಕ್ಕೆ ನೇಮಕವಾಗಿದ್ದ  ಅಲಹಾಬಾದ್ ನ್ಯಾಯಾಲಯದ ನ್ಯಾಯಾಧೀಶರು ರೋಹಿತ್ ವೇಮುಲ ದಲಿತ ಅಲ್ಲ ಎಂದು ಘೋಷಿಸಿದ್ದು. ಇದು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ  ಸಮೂಹದಿಂದಲೇ ನೈಜವಾಗಿ  ಭುಗಿಲೆದ್ದಿದ್ದ ಸಾಮೂಹಿಕ ಚಳವಳಿಗೆ ಅವರ ಪ್ರತಿಕ್ರಿಯೆಯಾಗಿತ್ತು. ಸಹಜವಾಗಿಯೇ ಅದನ್ನು ನಂತರ ತಮ್ಮದೇ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಯಿತು (Appropriation). ಆದರೆ ಅದು ಜೀವಂತವಿದ್ದಾಗ ಈ ರೀತಿಯ ತಂತ್ರಗಾರಿಕೆ ಅಳವಡಿಸಿಕೊಂಡಿದ್ದರು. ರೋಹಿತ್ ದಲಿತನಲ್ಲ  ಎಂದು ಹೇಳಬೇಕಿತ್ತು.

 

ಅದೇನು ಮಾಡಬೇಕಿತ್ತು? ಸಾಂಸ್ಥಿಕ ಹತ್ಯೆಯ ತಂತ್ರದ ಅಸಹ್ಯಕರ ಅಂಶವನ್ನು ಬದಿಗಿಟ್ಟು, ಮುಖ್ಯವಾಗಿ ಈ ಸವರ್ಣೀಯ ತಂತ್ರಗಾರಿಕೆಗೆ ಸ್ಥಳಾವಕಾಶವನ್ನು ಯಾವ ಕಾರಣಕ್ಕೆ ಹುಟ್ಟು ಹಾಕಲಾಯಿತು ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ಇದು ಯಾವ ನಿರೂಪಣೆಗಳನ್ನು ಉಪಯೋಗಿಸಿಕೊಳ್ಳುತ್ತಿದೆ? ಏಕೆಂದರೆ

ಶಸ್ತ್ರಾಸ್ತ್ರ ಮತ್ತು ಉಪಕರಣಗಳು  ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ನಿರೂಪಣೆಗಳನ್ನು ಬದಲಾಯಿಸುವ ಅವಶ್ಯಕತೆಯಿದ್ದಾಗ , ತಮ್ಮದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕಾದಾಗ ಮರು ಹುಟ್ಟು ಪಡೆದುಕೊಳ್ಳುತ್ತವೆ ಹಾಗು ಹೀಗೆ ಈ  ಪ್ರಕ್ರಿಯೆಗಳು   ಮುಂದುವರಿಯುತ್ತವೆ. ಹಾಗಾದರೆ, ರೋಹಿತ್ ವೇಮುಲ ದಲಿತನಲ್ಲ ಎಂದು ಹೇಳಿದಾಗ ಅವರು ಯಾವ ನಿರೂಪಣೆಗಳನ್ನು ಅವಲಂಬಿಸಿದ್ದರು ? ಈ ತಂತ್ರವು ಕೆಲಸ ಮಾಡುತ್ತದೆ ಎಂದು ಅವರು ನಂಬಿದ್ದರೇಕೆ ?

 

ಎರಡನೆಯದು ನಾನು ಹೇಳಿದ್ದು: ದಲಿತ ಪದವನ್ನು ಎಲ್ಲೆಡೆ ಅನಾಯಾಸವಾಗಿ ಸೇರಿಸಲು ಹೆಚ್ಚಿದ  ಆಸಕ್ತಿ , ಉತ್ಸಾಹ, ಮತ್ತು ಒಪ್ಪಿಗೆ – ಇದು ಪಠ್ಯಕ್ರಮವಾಗಲಿ ಅಥವಾ ಅಂಕಣವಾಗಲಿ ಅಥವಾ ನೀವು ಬರೆಯಲು ಹೊರಟಿರುವ ಪುಸ್ತಕದಲ್ಲಿ ಒಂದು ನಿರ್ದಿಷ್ಟ ವಿಭಾಗವಿದ್ದರಾಯಿತು ಅಥವಾ ಹೊಸ ಕೋರ್ಸ್.   ದಲಿತ ಪದವು ದೊಡ್ಡ ಪ್ರಮಾಣದಲ್ಲಿ ಪ್ರಸರಣಗೊಳ್ಳುತ್ತಿತ್ತು – ಪ್ರತಿಯೊಂದು ಪ್ರಮುಖ ಮುಖ್ಯವಾಹಿನಿಯ ಮಾಧ್ಯಮಗಳು,  ದೂರದರ್ಶನ ಚಾನೆಲ್, ನಿಯತಕಾಲಿಕೆ ಅಥವಾ ಸಾಮಾಜಿಕ ಮಾಧ್ಯಮ ಪುಟವಾಗಿರಬಹುದು, ದಲಿತ ಪದವನ್ನು ಒಳಗೊಂಡಿರುವ ಏನಾದರೂ ಇರುತ್ತಿತ್ತು.

 

ಆದ್ದರಿಂದ, ನಿಜವಾಗಿಯೂ ಏನು ಬದಲಾಗಿದೆ? ಪ್ರತಿಪಾದನೆಯು ಈಗ  ಬಹಳಷ್ಟು ಪ್ರಬಲವಾಗಿದ್ದು  ಮುಖ್ಯವಾಹಿನಿಗೆ ದಾರಿ ಮಾಡಿಕೊಡುತ್ತಿದೆಯೇ ಅಥವಾ ಪ್ರಾಬಲ್ಯದ ಕಲ್ಪನೆಯೇ? ಅಥವಾ ಸವರ್ಣೀಯರು  ಅದೇ ಪ್ರತಿಪಾದನೆಯನ್ನು ವಿಕೃತಿಗೊಳಿಸಿ   ಆ ಚಹರೆಯನ್ನು ಸರಕಾಗಿಸಲು ಪ್ರಯತ್ನಿಸುತ್ತಿದ್ದಾರೆಯೇ? ಏಕೆಂದರೆ ಶೋಷಣೆ  ಮಾಡುವವರು ಯಾವುದೋ ಕಾರಣಕ್ಕಾಗಿ  ನಿಮ್ಮನ್ನು ಸಂಭ್ರಮಿಸುತ್ತಿದ್ದರೆ, ಅದನ್ನು ಎಚ್ಚರಿಕೆಯಿಂದ ನೋಡುವುದು ಸಾಮಾನ್ಯ ತಿಳುವಳಿಕೆಯಲ್ಲವೇ  ?

 

ನಾವು ನಮ್ಮ ಬಾಲ್ಯವನ್ನು ಸವರ್ಣೀಯರೊಂದಿಗೆ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಲೇ ಹೋರಾಡುತ್ತಾ ಕಳೆದೆವು. ಅದು ಆಗ ಚಾಲ್ತಿಯಲ್ಲಿತ್ತು. ಈಗಿಲ್ಲ. ಆಗ, ಜಾತಿ ವ್ಯವಸ್ಥೆಯ ವಿಚಾರ ಮತ್ತೆಲ್ಲವನ್ನು ಬಿಟ್ಟು ಮೀಸಲಾತಿ ಬಗ್ಗೆ ಮಾತ್ರ ಚರ್ಚಿಸಬೇಕಿತ್ತು. ಮೀಸಲಾತಿ ಜಾತಿ ವ್ಯವಸ್ಥೆಗೆ ಸಮೀಕರಣವಾಗಿತ್ತು. ಈಗ ದಲಿತ ಎನ್ನುವುದು ಜಾತಿ ವ್ಯವಸ್ಥೆಗೆ ಸಮವಾಗಿದೆ. ಆದ್ದರಿಂದ ಇದು ಎಲ್ಲೆಡೆ ಮೇಲೆ ಬರುತ್ತಿದೆ. ಇದು ಪ್ರಾತಿನಿಧ್ಯವಲ್ಲ.

ಇದು ಮೊದಲು ಬ್ರಾಹ್ಮಣ- ವರ್ಣೀಯರು  ಮಾತ್ರ ಇದ್ದ ಅಧಿಕಾರದ ವಲಯಗಳಲ್ಲಿ ದಲಿತರಿಗೆ ಸಮಾನವಾಗಿ ಅಸ್ತಿತ್ವದಲ್ಲಿರಲು ಅವಕಾಶ ನೀಡುವ ಪ್ರಾತಿನಿಧ್ಯವಲ್ಲ. ಅಲ್ಲ. ಇದು – ಟೋಕನಿಸಂ ಕೂಡ ತುಂಬಾ ಸೌಮ್ಯವಾದ ಪದವಾಗಿದೆ – ಇದು ಅತ್ಯಂತ ಅಮಾನವೀಯ ಟೋಕನಿಸಂ ಆಗಿದೆ, ಅಲ್ಲಿ ನೀವು ದಲಿತ ಮನುಷ್ಯನಾಗಿ ಅಸ್ತಿತ್ವದಲ್ಲಿರಬೇಕು, ದಲಿತ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಬೇಕು ಮತ್ತು ನಿಮ್ಮ ಸುತ್ತಲಿರುವ ಪ್ರತಿಯೊಬ್ಬರಿಗಿಂತ ನೀವು ಇದನ್ನು ಸಂಪೂರ್ಣವಾಗಿ ವ್ಯತಿರಿಕ್ತವಾಗಿ ಮಾಡಬೇಕು. ಆದ್ದರಿಂದಲೇ ಲಗಾನ್‌ನಲ್ಲಿರುವ ಕಚ್ರಾ ದೈಹಿಕ ನ್ಯೂನತೆಯನ್ನು ಹೊಂದಿದ್ದಾನೆ . ಮತ್ತು ಅದು ಅಲ್ಲಿಗೆ ನಿಲ್ಲುವುದಿಲ್ಲ. 1983 ರಲ್ಲಿ, ವಿಜಯ್ ತೆಂಡೂಲ್ಕರ್,  ಮಹಾರ್ ಪುರುಷನು ತನ್ನ ಬ್ರಾಹ್ಮಣ ಹೆಂಡತಿಯನ್ನು ಹೇಗೆ ಹೊಡೆಯುತ್ತಾನೆ ಎಂಬುದರ ಬಗ್ಗೆ ‘ಕನ್ಯಾದಾನ’ ನಾಟಕವನ್ನು ಬರೆದರು , ಮತ್ತು ಇದು  ಅವನು ಮೂಲತಹ ಮಹಾರ್ ಆಗಿರುವುದರಿಂದ   ಹೀಗಿದ್ದು ಮತ್ತು   ಅದೇ  ನಾಟಕದ   ಸಂಪೂರ್ಣ ಅಂತ್ಯವಾಗಿದೆ . ಆದರೆ ಇಷ್ಟು ಮಾತ್ರ ಅಲ್ಲ.  ಮರಾಠಿಯಲ್ಲಿನ ಮೂಲ ನಾಟಕದಲ್ಲಿ, ಮಹಾರ್ ಮನುಷ್ಯ ಕೇವಲ ಸಾಮಾನ್ಯ ಮನುಷ್ಯ , ಸರಾಸರಿ ದಲಿತ, ಅವರ ಗ್ರಹಿಕೆಯಲ್ಲಿ ಸರಾಸರಿ ಮಹಾರ್ ಎಂದು ನಾನು ಹೇಳಬಹುದು, ಅದರ ಅರ್ಥವೇನಿದ್ದರೂ . ಆದರೆ ಈ ನಾಟಕವನ್ನು ಬಂಗಾಳಿ ಭಾಷೆಗೆ ಅನುವಾದಿಸಿ ಅಲ್ಲಿ ಪ್ರದರ್ಶನವಾದಾಗ , ಅವರು ಅವನಿಗೆ ದೈಹಿಕ ವಿರೂಪತೆಯನ್ನು ಸೇರಿಸಬೇಕಾಯಿತು.

 

ಈ ಅಮಾನವೀಯ ಟೊಕೆನಿಸಮ್ ಅನ್ನು ಕೆಳಮಟ್ಟಕ್ಕೆ ಇಳಿಸಲಾಗುತ್ತದೆ. ಅಲ್ಲದೆ ದಲಿತ ಅನುಭವಗಳ ಬಗ್ಗೆ ಜಗತ್ತಿಗೆ ಪ್ರಸ್ತುತ ಪಡಿಸಲು ಉಪಯೋಗಿಸುವ ಉತ್ಸವಮೂರ್ತಿಗಳಾಗಬೇಕಿದೆ .   ಇದು ಕಾರ್ಯಕ್ರಮಗಳ ಮೊದಲು ಎಲ್ಲರೂ ಮಾಡುವ ಸರಸ್ವತಿ, ಗಣೇಶ, ಸತ್ಯ  ನಾರಾಯಣ ಪೂಜೆ ಮಾಡುವುದಕ್ಕಿಂತ ಹೇಗೆ ಭಿನ್ನವಾಗಿದೆ? ಈಗ ಆ   ಪೂಜೆಯ ಬದಲು ದಲಿತ, ದಲಿತ, ದಲಿತ ಎನ್ನುವ ಹೋಮ ಹವನಗಳನ್ನು ಮಾಡಬೇಕಿದೆ, ನಾವು ಜಾತಿಯ ಬಗ್ಗೆ ಎಚ್ಚರವಿದೆ  ಎಂದು ತೋರಿಸಿಕೊಳ್ಳಲು.

 

ನನ್ನ ಅನುಭವ ಮತ್ತು ಗಮನಕ್ಕೆ ಬಂದಿರುವಂತೆ ಭಾರತದ ಬಹುತೇಕ ಉದಾರವಾದಿ ಮನಸ್ಥಿತಿಯಲ್ಲಿರುವ ಅಥವಾ ಹಾಗಿದ್ದೇವೆ ಎಂದುಕೊಳ್ಳುವ ಸವರ್ಣೀಯರು ಸಮಾನತೆಗಾಗಿ ಹೋರಾಡುತ್ತಿರುವ ದಲಿತರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವೇ ಇಲ್ಲ. ತಮ್ಮ ಅನುಕೂಲಕ್ಕೆ ದಲಿತರೆಂದೆರೆ ಹೇಗೆ ಎನ್ನುವ ವ್ಯಾಖ್ಯಾನ ಮಾಡಿ ತಾವು  ಬಿಡಿಸಿರುವ ಅಣಕದ ಚಿತ್ರಕ್ಕೆ, ತಮ್ಮನ್ನು ತಿರುಚಿಕೊಂಡಿರುವ ಅಥವಾ ಬದಲಾಯಿಸಿಕೊಂಡಿರುವ ದಲಿತರನ್ನು ಈ ಸವರ್ಣೀಯರು ತೆರೆದ ತೋಳಿನಿಂದ ಅಪ್ಪಿಕೊಳ್ಳುತ್ತಾರೆ.  ನೀವು ಆ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದರೆ, ಅವರು ನಿಮಗೆ ಬರೆಯಲು ಅಂಕಣಗಳು,  ಅವರ ನೋಟದ ಅಡಿಯಲ್ಲಿ ಅಂತರರಾಷ್ಟ್ರೀಯ ಶೈಕ್ಷಣಿಕ ಅವಕಾಶಗಳು , ಅಲಂಕಾರಿಕ ಸಮ್ಮೇಳನದ ಆಹ್ವಾನಗಳು, ಸಾಮಾಜಿಕ ಮಾಧ್ಯಮದಾದ್ಯಂತ ಹೃದಯದ ಎಮೋಟಿಕಾನ್‌ಗಳ ಸುರಿಮಳೆಗಳು    ಮತ್ತು ನಂತರ ಯಾವುದೇ ರಾಕ್‌ಸ್ಟಾರ್ ನಾಚಿಸುವ ಚಪ್ಪಾಳೆ ಯನ್ನು ಕೊಡುತ್ತಾರೆ.

 

ಮೈಕ್ ಪಾಸ್ ಮಾಡಿ ಎಂದು ಅವರೇಳುವ ಅರ್ಥವೂ ಇದೆ. ಮೈಕ್ ಪಾಸ್ ಮಾಡಿ ಎನ್ನುವುದರ ನಿಜವಾದ ಅರ್ಥವೇನು? ಪಾಸ್ ದಿ ಮೈಕ್ ಎನ್ನುವುದು ನನಗೆ ವೇದಿಕೆಯನ್ನು ಕೆಡವಲು ಸಿಕ್ಕ ಅವಕಾಶವಲ್ಲ, ಕೇವಲ ಅವರ ವೇದಿಕೆಯಲ್ಲಿ ಮಾತನಾಡಲು ಸಿಕ್ಕ ಅವಕಾಶವಷ್ಟೇ. ಜಾತಿ ವಿನಾಶದ ಮಹತ್ವ ಗೊತ್ತಿರುವವರಿಗೆ ಈ ಅವಕಾಶದ ಬಗ್ಗೆ ಆಸಕ್ತಿಇರುವುದಿಲ್ಲ ಅಲ್ಲವೇ? ಹಾಗಿದ್ದರೆ ಇದೇಕೆ ಆಗುತ್ತದೆ? ಮೈಕ್ ಪಾಸ್ ಮಾಡಿ, ದಲಿತ ಅನುಭವ ಹೇಳಿ, ಒಳಗೊಳ್ಳುವಿಕೆ, ವೈವಿಧ್ಯತೆ,   ಎಲ್ಲಾ ಆಧುನಿಕ ತಂತ್ರ-ಮಂತ್ರಗಳ ನಿರೂಪಣೆಯೇ ಯಾಕಾಗುತ್ತದೆ? ಮತ್ತೆ ಮತ್ತೆ ಏಕೆ ಹೀಗಾಗುತ್ತದೆ?

 

ನಾನು ಮುಂದುವರಿಯುವ ಮೊದಲು ಇದು ನನ್ನ ಡಿಸ್ ಕ್ಲೇಮರ್. ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ನನ್ನನ್ನು ತಪ್ಪಾಗಿ ಗ್ರಹಿಸದೇ  ಇರುವುದು ನನಗೆ ಮುಖ್ಯ.

 

ಆದ್ದರಿಂದ, ಆತ್ಮವಿಶ್ವಾಸದ ಪ್ರತಿಪಾದನೆ ಏನೆಂದು ನಾನು ಮೊದಲು ವಿವರಿಸಬೇಕಾಗಿದೆ, ಮತ್ತು ಭಾಷಣದಲ್ಲಿ ಎಲ್ಲರಿಗೂ ತಿಳಿದಿದೆ ಎಂದು ನನಗೆ ಖಾತ್ರಿಯಿದೆ, ಆದರೆ ನಾನು ಪುನರಾವರ್ತಿಸಲು ಹೋಗುತ್ತೇನೆ. ಹಾಗಾಗಿ, ನಾನು ಯಾರೆಂಬುದರ ಬಗ್ಗೆ ನನ್ನ ಸ್ವಂತ ಪ್ರತಿಪಾದನೆ, ಮತ್ತು ನಾನು ಯಾರು ಅಲ್ಲ ಎಂಬ ನಿರಾಕರಣೆ, ಇದು ನನ್ನ ಸುತ್ತ ಇರುವ ಜಾತಿವಾದದ ಕೆಲವು ತಳಿಗಳಿಗೆ ಪ್ರತಿಕ್ರಿಯೆಯಾಗಿ ನಡೆಯುತ್ತದೆ. ಆದ್ದರಿಂದ, ಜಾತಿವಾದದ ಎರಡು ವಿಭಿನ್ನ ತಳಿಗಳನ್ನು ನೋಡೋಣ.

 

ಮೊದಲ ಪ್ರಕರಣದಲ್ಲಿ  – ಯಾರು ಎಸ್ ಸಿ, ಎಸ್ ಟಿ ಮತ್ತು ಬ್ರಾಹ್ಮಣ – ಸವರ್ಣೀಯರಲ್ಲದವರೆಲ್ಲರೂ ಇದನ್ನು ಅನುಭವಿಸಿರುತ್ತಾರೆ. ಜಾತೀಯ ಸಮಾಜ ಎಸ್ ಸಿ. ಗಳಲ್ಲಿ  ಮೆರಿಟ್ ಇಲ್ಲ  ಎಂದು ಹೇಳುವ ಮೂಲಕ  ನಿರಂತರ ಆಕ್ರಮಣ ಮಾಡುತ್ತಾ ನಾನೇನು ಎಂದು ಹೇಳ ಬಯಸುತ್ತಾರೆ.   ನಿಮ್ಮ ಸುತ್ತ ಇರುವ ಸಮಾಜ ಬಲ ಪಂಥೀಯ ಸವರ್ಣೀಯರಾಗಿದ್ದಾಗ ಇದು ಸಾಮಾನ್ಯ.  ಅಂತಹ ಸಮಯದಲ್ಲಿ ನಾನೇನು ಎಂದು ಅವರೇಳುವುದನ್ನು ತಿರಸ್ಕರಿಸುವುದು ನನ್ನ ಆತ್ಮ ವಿಶ್ವಾಸದ ಪ್ರತಿಪಾದನೆಯಾಗುತ್ತದೆ.

 

ಜಾತಿವಾದದ ಎರಡನೇ ತಳಿಯಲ್ಲಿ, ಒಂದು ಉದಾಹರಣೆಯನ್ನು ಕೊಡುತ್ತೇನೆ, ನಾನು ಜಾತಿಯ ವಿಚಾರದಲ್ಲಿ ಹೆಚ್ಚು   ಧ್ವನಿಯಾಗುತ್ತಿದ್ದಂತೆ  ”ಇಲ್ಲ, ಇಲ್ಲ, ಇಲ್ಲ, ಆದರೆ ನಾವೆಲ್ಲರೂ ಮನುಷ್ಯರು” ಎಂಬ ನಿರಂತರ ಸುರಿಮಳೆಯಾಗುತ್ತದೆ. ಅಲ್ಲದೆ , ಇದ್ದಕ್ಕಿದ್ದಂತೆ ನಾವೆಲ್ಲರೂ ಮನುಷ್ಯರು ಮತ್ತು ನಾನು ಪರಿಶಿಷ್ಟ ಜಾತಿಯಲ್ಲ ಎಂದು ಅವರು  ನೆನಪಿಸಿಕೊಳ್ಳುತ್ತಾರೆ. ಅವರು ಆಕ್ರಮಿಸಿರುವ ವಲಯಕ್ಕೆ ಬೆದರಿಕೆ ತರುತ್ತಿದ್ದೇನೆಂದು ಹಿಂದಿನದು ಹಿಂದಿನದು ಎಂದು ಹೇಳುತ್ತಾರೆ.

 

ಮತ್ತು ಇದು ಏಕೆ ಸಂಭವಿಸುತ್ತದೆ ಅಂದರೆ  ವೈದಿಕ  ಕುತಂತ್ರದ ಪ್ರಮುಖ ಭಾಗವೆಂದರೆ ಇರುವ ಸವಲೆತ್ತನ್ನೆಲ್ಲ    ಹಾಗೇ ಉಳಿಸಿಕೊಂಡು ಇತಿಹಾಸವನ್ನು ಅಳಿಸಿಹಾಕುವುದು. ಮತ್ತು ಕುಫಿರ್ ಅವರು ಹೇಳಿದಂತೆ, ಭಾರತೀಯ ಇತಿಹಾಸವು ಒಂದು ಘೋರ  ಅಪರಾಧವಾಗಿದೆ ಏಕೆಂದರೆ   ದಲಿತ-ಬಹುಜನರ ಇತಿಹಾಸವನ್ನು ಕಸಿದುಕೊಳ್ಳುವ ಮೂಲಕ  ಅವರ ಭವಿಷ್ಯವನ್ನೂ ಕದಿಯುತ್ತಿದೆ . ಬಾಬಾಸಾಹೇಬರು ಹೇಳಿದಂತೆ ಎಷ್ಟೋ ಬಾರಿ ನಾವು ನಮ್ಮನ್ನು   ನಮ್ಮದೇ ದೇಶದಲ್ಲಿ ಪರಕೀಯರಾಗಿ ಕಂಡುಕೊಳ್ಳುತ್ತೇವೆ.

 

ಆದರೆ ಮತ್ತೊಮ್ಮೆ, ಆ ಎರಡು ವಿಭಿನ್ನ ರೀತಿಯ ಆತ್ಮ ವಿಶ್ವಾಸದ ಪ್ರತಿಪಾದನೆಗಳನ್ನು ನೋಡಿದಾಗ ಮೇಲ್ನೋಟದಲ್ಲಿ ಮಾತ್ರ ವಿಭಿನ್ನವಾಗಿದೆ. ಮೊದಲನೇ ಉದಾಹರಣೆಯಲ್ಲಿ ನಾಗೇಶಬಾಬು ಅವರ ‘ಜಾತಿ ಪ್ರಮಾಣಪತ್ರ’ ಎಂಬ ಕವಿತೆಯ ಮೂರು ಸಾಲುಗಳನ್ನು ನೋಡೋಣ.  ಅವರು ಕವಿತೆಯನ್ನು ಹೀಗೆ  ಕೊನೆಗೊಳಿಸುತ್ತಾರೆ:

ನನ್ನ ಜಾತಿ ಪ್ರಮಾಣ ಪತ್ರ
ನಾನು ಬರೆಯಲಿರುವ ಹೊಸ ಇತಿಹಾಸದ
ಮುನ್ನುಡಿಯಾಗಬೇಕು

ಆದ್ದರಿಂದ, ಇಲ್ಲಿ ಅವರು  ತನ್ನದೇ ಆದ ಜಾತಿ ಪ್ರಮಾಣಪತ್ರವನ್ನು ಪ್ರತಿಪಾದಿಸುತ್ತಾ  ಒಬ್ಬರ ಸ್ವಂತ ಸಾಮಾಜಿಕ ಮತ್ತು ಐತಿಹಾಸಿಕ ಜಾಗವನ್ನು, ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಮತ್ತು ವೈದಿಕ  ಯಂತ್ರದ ಹೊರೆಯನ್ನು ಹಿಂದೆ ಸರಿಯಲು ಪ್ರತಿಪಾದಿಸುತ್ತಿದ್ದಾರೆ.

 

ಇದನ್ನೇ ಲೇಖಕ ಶಂಕರರಾವ್ ಖಾರಟ್ ಮತ್ತೊಮ್ಮೆ ವಿಭಿನ್ನ ಅರ್ಥದಲ್ಲಿ ಪ್ರತಿಧ್ವನಿಸಿದ್ದಾರೆ.  ಮತಾಂತರದ ನಂತರ, ನಾನು ಮಹಾರ್ ಅಲ್ಲ, ನಾನು ಅಸ್ಪೃಶ್ಯನಲ್ಲ, ನಾನು ದಲಿತನಲ್ಲ, ನಾನು ಹಿಂದೂ ಅಲ್ಲ ಎಂದು ಹೇಳುತ್ತಾರೆ . ನಾನು ಬೌದ್ಧ, ಮತ್ತು ನಾನು ಈಗ ಮನುಷ್ಯನಾಗಿದ್ದೇನೆ. ನಾನು ಕೀಳು ಅಥವಾ ತಳಸ್ತರದವನಲ್ಲ . ಮತ್ತು ಈಗ ನಾನು ಎಲ್ಲರಂತೆ ಮನುಷ್ಯ.

 

ಹಾಗಾದರೆ, ಈಗ ನನ್ನ ಜಾತಿ ಪ್ರಮಾಣ ಪತ್ರವೇ ನನ್ನ ಮುನ್ನುಡಿ ಎಂಬ ನಾಗೇಶಬಾಬು ಅವರ ಪ್ರತಿಪಾದನೆ, ಹಾಗೆಯೇ ಶ್ರೀ ಶಂಕರರಾವ್  ಖಾರಟ್ ಅವರ ಸಮರ್ಥನೆ, ಇವೆರಡೂ ನಿಜವಾಗಿಯೂ ವಿರುದ್ಧವಾಗಿವೆ ಎನ್ನುತ್ತೀರಾ? ಏಕೆಂದರೆ ಅವು ವಿರುದ್ದವಾಗಿಲ್ಲ. ಅವುಗಳು   ಒಂದು ನಿರ್ದಿಷ್ಟ ಸನ್ನಿವೇಶದ ಪ್ರತಿಪಾದನೆಗಳು. ನಾಗೇಶಬಾಬು ಒಂದು ನಿರ್ದಿಷ್ಟ ಸಂದರ್ಭವನ್ನು ಎದುರಿಸುತ್ತಿದ್ದರು. ಶಂಕರರಾವ್ ಖಾರಟ್ ಒಂದು ನಿರ್ದಿಷ್ಟ ಸಂದರ್ಭವನ್ನು ಎದುರಿಸುತ್ತಿದ್ದರು. ಒಂದು ಸಂದರ್ಭದಲ್ಲಿ, ಅವರು ತಮ್ಮ ಮಾನವೀಯತೆಗೆ ಧಕ್ಕೆಯಾಗದಂತೆ ತಮ್ಮ ಐತಿಹಾಸಿಕ ಮತ್ತು ಸಾಮಾಜಿಕ ಹಕ್ಕೊತ್ತಾಯ ಮಾಡಿದ್ದರು.  ಎರಡನೆಯ ಪ್ರಕರಣದಲ್ಲಿ, ಅವರು ಮಾನವೀಯತೆಯ ಅಮಾನವೀಯ ವ್ಯಾಖ್ಯಾನಗಳನ್ನು ತಿರಸ್ಕರಿಸಿದರು ಮತ್ತು ಈಗ ನಾನು ಸಂಪೂರ್ಣ ಮನುಷ್ಯನಾಗಿದ್ದೇನೆ ಮತ್ತು ನಾನು ಅದನ್ನು ಒಪ್ಪಿಕೊಳ್ಳುತ್ತೇನೆ – ನೀವು ನನ್ನನ್ನು ಹೇಗೆ ನೋಡುತ್ತೀರಿ ಎಂಬುದು ನನಗೆ   ಮುಖ್ಯವಲ್ಲ.

 

ಆದ್ದರಿಂದ, ನೀವು ನೋಡುವಂತೆ, ಸಂದರ್ಭಗಳನ್ನು ಪರಿಗಣಿಸಿ, ಒಬ್ಬರ ಸಾಮಾಜಿಕ ಅಥವಾ ಐತಿಹಾಸಿಕ ಸ್ಥಳವನ್ನು ತಿರಸ್ಕರಿಸುವುದು ಅಥವಾ ಸಮರ್ಥಿಸುವುದು  , ವಾಸ್ತವವಾಗಿ, ಆಳದಲ್ಲಿ, ಒಂದೇ  ಭಾವನೆಯಾಗಿದೆ.

 

ಆದ್ದರಿಂದ, ಇವು ಒಂದೇ ಆಗಿದೆ  ಏಕೆಂದರೆ ಅವು ಆತ್ಮದ ಪ್ರತಿರಕ್ಷಣಾ ಪ್ರತಿಕ್ರಿಯೆಯಾಗಿ ಉದ್ಭವಿಸುತ್ತವೆ. ಮತ್ತು ವೈದಿಕ  ತಂತ್ರದ ವಿರುದ್ಧ ನಾವು ನಿರಂತರವಾಗಿ ಹೋರಾಡಬೇಕು ಅಥವಾ ಫುಲೆಯವರು ಹೇಳುವಂತೆ  ಬ್ರಾಹ್ಮಣಿ  ಕವಾ ದ ವಿರುದ್ಧ.  ಹಾಗಾದರೆ ಬ್ರಾಹ್ಮಣಿ  ಕವಾ ಎಂದರೇನು? ಆದ್ದರಿಂದ, ಜಾತಿ ಸಮಾಜವು ಎರಡರಲ್ಲಿ ಒಂದನ್ನು ಮಾಡುತ್ತದೆ:

 

ಅದು ನಿಮ್ಮನ್ನು ಹತಾಶಗೊಳಿಸಬೇಕಾದಾಗ ಅಥವಾ ಅಮಾನವೀಯಗೊಳಿಸಬೇಕಾದಾಗ,  ನಿಮ್ಮ ಆತ್ಮದಲ್ಲಿ ನಿಮ್ಮ ಕೀಳರಿಮೆಯನ್ನು ಕೆತ್ತಿಸಲು ಜಾತಿ ಆಧಾರಿತ ನಿಂದನೆಗಳು ಮತ್ತು ಅವಮಾನಗಳಿಂದ ನಿಮ್ಮ ಮೇಲೆ ನಿರಂತರವಾಗಿ ಧಾಳಿ ಮಾಡುತ್ತಾರೆ , ಅಥವಾ ತನ್ನದೇ ಆದ ದೈತ್ಯತನವನ್ನು ಒಪ್ಪಿಕೊಳ್ಳುವ ಅಪಾಯವನ್ನು  ಅದು ಎಂದಾದರೂ ಎದುರಿಸಿದರೆ., ಏಕೆಂದರೆ ಈಗ ಬೆದರಿಕೆ ನಿಜವಾಗಿದೆ ಮತ್ತು ತುಳಿತಕ್ಕೊಳಗಾದವರು ಹಿಂದಕ್ಕೆ ತಳ್ಳುತ್ತಿದ್ದಾರೆ, ಆ ಸಂದರ್ಭದಲ್ಲಿ, ಅವರು ಇಡೀ ಸಂದರ್ಭ ಮತ್ತು ಹಿನ್ನೆಲೆಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಾರೆ ಮತ್ತು ಜಾಣ ಕುರುಡನ್ನು ತೋರಿಸುತ್ತಾರೆ ಮತ್ತು ದುಸ್ಥಿತಿಗೆ  ಕಾರಣವೇನಿದ್ದರೂ  ಜಾತಿಯಲ್ಲ ಎಂದು ಅವರು ಹೇಳುತ್ತಾರೆ. ಮತ್ತು ಇತ್ಯಾದಿ. ಆದ್ದರಿಂದ, ಜಾತಿವಾದಿ ನಿಂದನೆಗಳನ್ನು ಹೇಳುತ್ತಿರುವುದು , ಹಾಗೆಯೇ ನಾವೆಲ್ಲರೂ ಮನುಷ್ಯರಲ್ಲವೇ ಎಂಬ ಉದಾರವಾದಿ ಪ್ರತಿಕ್ರಿಯೆಗಳು ಒಂದೇ ನಾಣ್ಯದ ಎರಡು ಮುಖಗಳು.

 

ಮತ್ತು ಅವರ ವಿರುದ್ಧ ನೀಡಲಾದ ಸಮರ್ಥನೆಯು ವಿರುದ್ಧವಾಗಿ ಬರಬಹುದು, ಆದರೆ ಅದು ವಿರುದ್ಧವಾಗಿಲ್ಲ. ಮತ್ತು ಅದು ಹೇಗೆ ಎಂಬುದರ ಕುರಿತು ಹಂಚಿಕೊಳ್ಳಲು ನನ್ನ ಬಳಿ ಒಂದು ಉದಾಹರಣೆ ಇದೆ. ಮತ್ತು ಅದಕ್ಕಾಗಿಯೇ ನಾನು ಅದರ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ನಿಜವಾದ ಪ್ರಶ್ನೆಯೆಂದರೆ ನಾನು ನನ್ನನ್ನು ಹೇಗೆ ಚಿತ್ರಿಸುತ್ತಿದ್ದೇನೆ ಅಥವಾ ಎಲ್ಲದರ ಬಗ್ಗೆ ನನ್ನ ವ್ಯಾಖ್ಯಾನ ಏನು ಎಂಬುದು ಅಲ್ಲ, ಏಕೆಂದರೆ ಹೆಚ್ಚಾಗಿ ಆ ವ್ಯಾಖ್ಯಾನಗಳನ್ನು ಬಹಳ ಹಿಂದೆಯೇ ಹೈಜಾಕ್ ಮಾಡಲಾಗಿದೆ ಮತ್ತು ಅವರು ಈಗ ಈ ಸಂಪೂರ್ಣ ವಿಷಯವನ್ನು ಹೇಗೆ ಕುಶಲತೆಯಿಂದ ನಿರ್ವಹಿಸುತ್ತಿದ್ದಾರೆ ಎಂಬುದು ಮುಖ್ಯವಾಗಿದೆ.

 

ನಾನು ಶ್ರೀ ರಾಜಾ ಧಾಲೆ ಅವರ ಒಂದು ಸಣ್ಣ ವೀಡಿಯೊವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ಮರಾಠಿಯಲ್ಲಿದೆ, ಆದರೆ ನಾನು ಅನುವಾದಿಸುತ್ತೇನೆ. ಇದು ಒಂದು ನಿಮಿಷಕ್ಕಿಂತ ಕಡಿಮೆ. ನಿಮಗೆ ಮರಾಠಿ ಅರ್ಥವಾಗದಿದ್ದರೂ, ಮೊದಲ ಎರಡು ಸಾಲುಗಳು ತುಂಬಾ ಶಕ್ತಿಯುತವಾಗಿದೆ,.

 https://www.youtube.com/watch?v=4t5IrRj2Crc

 

ದಲಿತ ಪ್ಯಾಂಥರ್‌ನ ಸಂಸ್ಥಾಪಕ  ಸದಸ್ಯ, ಶ್ರೀ ರಾಜ ಧಾಲೆ ಅವರನ್ನು ನೀವು ಈಗ ನೋಡಿದ್ದು.  ಚಳವಳಿಯಲ್ಲಿ ರಾಜಾ ಧಾಲೆಯವರ ಕೊಡುಗೆಯು ಅಪ್ರತಿಮವಾಗಿದೆ ಮತ್ತು ಅವರು ದಲಿತ ಪ್ಯಾಂಥರ್‌ನ ಸಂಸ್ಥಾಪಕ ಎಂದು ನಾನು ಈಗಾಗಲೇ ಹೇಳಿದಾಗ ಅವರು ಯಾರೆಂದು ನಾನು ವಿವರಿಸಬೇಕಾಗಿಲ್ಲ. ಮತ್ತು ಅವರು  ಇದೀಗ ಏನು ಹೇಳುತ್ತಿದ್ದಾರೆ ? ದಲಿತ ಹಿ ಮಾಹಿ  ಐಡೆಂಟಿಟಿ ನಹೀ, ಮಿ ದಲಿತ ನಹೀ ಎಂದು ಹೇಳುತ್ತಿದ್ದಾರೆ. ಅರ್ಥಮಾಡಿಕೊಳ್ಳುವುದು ತುಂಬಾ ಸುಲಭ. ದಲಿತ ಎಂಬುದು ನನ್ನ ಅಸ್ಮಿತೆಯಲ್ಲ  ಎಂದು ಅವರು ಹೇಳಿದ್ದಾರೆ. ನಾನು ದಲಿತನಲ್ಲ. ಆದ್ದರಿಂದ, ಅವರು ದಲಿತ ಪ್ಯಾಂಥರ್‌ನ ಯಾವುದೇ ರೀತಿಯ ಇತಿಹಾಸವನ್ನು ಅಥವಾ ಯಾವುದನ್ನಾದರೂ ನಿರಾಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನೀವು ನಿಜವಾಗಿಯೂ ಭಾವಿಸುತ್ತೀರಾ? ಖಂಡಿತ ಇಲ್ಲ. ದಲಿತ ಪ್ಯಾಂಥರ್ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಹುಟ್ಟಿಕೊಂಡಿತು, ಅದು ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿತ್ತು ಮತ್ತು ಅದು ಕೆಲವು ತಂತ್ರಗಳನ್ನು ಎದುರಿಸುತ್ತಿತ್ತು

 

ಈಗ ಬ್ರಾಹ್ಮಣ್ಯವೆಂದರೆ ಏನು ಎಂಬುದನ್ನು  ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣ್ಯವು ಒಂದು ನಿರ್ದಿಷ್ಟ ಕಟ್ಟುನಿಟ್ಟಿನ ಸಿದ್ಧಾಂತಗಳಲ್ಲ. ಭೌತಿಕ ಜಗತ್ತಿನಲ್ಲಿ ಯಥಾಸ್ಥಿತಿ ಸವಲತ್ತುಗಳನ್ನು ಕಾಯ್ದುಕೊಳ್ಳುವ ಬಗ್ಗೆ ಇದು ಕಠಿಣವಾಗಿದೆ. ಅದಕ್ಕಾಗಿ ಅವರು ಯಾವುದೇ ರೀತಿಯ ಸಿದ್ಧಾಂತವನ್ನು ಬದಲಾಯಿಸಬಹುದು  ಅವರು ಯಾವುದೇ ರೀತಿಯ ಕೆಲಸವನ್ನು ಮಾಡುತ್ತಾರೆ. ಎಲ್ಲಾ ರೂಪಾಂತರಗಳು ಸಾಧ್ಯವಿದೆ . ಒಂದು ಉದಾಹರಣೆಯನ್ನು ನೀಡುವುದಾದರೆ, ಅಕ್ಬರ್  ಬಂದು  ಎಲ್ಲೆಡೆ ಆಳುತ್ತಿದ್ದಾಗ, ಬ್ರಾಹ್ಮಣರು ಅವರಿಗೆ ಗೌರವಾರ್ಥವಾಗಿ ಹೆಚ್ಚುವರಿ ಉಪನಿಷತ್ತನ್ನು ಬರೆದರು ಮತ್ತು ಅದಕ್ಕೆ ಅಲ್ಲಾ ಉಪನಿಷದ್ ಎಂದು ಹೆಸರಿಟ್ಟರು.

ಆದ್ದರಿಂದ, ಮೇಲರಿಮೆಯ  ಪ್ರಾಬಲ್ಯದ  ಚಿಂತನೆ ಮತ್ತು ಅದನ್ನು ಹೇಗೆ ನಿರ್ವಹಿಸುವುದು ಎಂಬುದರ ಹೊರತಾಗಿ  ಕಟ್ಟು ನಿಟ್ಟಿನ  ಸಿದ್ಧಾಂತ ಅಥವಾ ತತ್ವಗಳಿಲ್ಲ, ಕೆಟ್ಟದ್ದೂ ಸೇರಿಕೊಂಡು. ಜಾತಿ ವ್ಯವಸ್ಥೆಯು ಮೂಲಭೂತವಾಗಿ ಜಾತಿ ಉತ್ಪಾದನಾ ವಿಧಾನವು ಒಂದು ಪೀಳಿಗೆಯ ನಂತರ ಮತ್ತೊಂದು ಪೀಳಿಗೆಗೆ ನಿರಂತರವಾಗಿ ಮುಂದುವರಿಯುವುದನ್ನು ಖಾತ್ರಿಮಾಡುತ್ತಿದೆ.  ಮತ್ತು ಇದನ್ನು ಮಾಡಲು, ಅವರು ಯಾವ ಸಿದ್ಧಾಂತ ಅಥವಾ ಪದವನ್ನು ಆರಿಸಿಕೊಳ್ಳಬೇಕು ಎಂಬುದು ಮುಖ್ಯವಲ್ಲ, ಅವರು ಯಾವ ಜಾತಿಯನ್ನು ಕ್ಷತ್ರಿಯ ಎಂದು ನಾಮಕರಣ ಮಾಡಬೇಕು, ಯಾವ ಜಾತಿಗೆ ಅವರು ಕಂಚಿನ ಲೇಬಲ್ ಅನ್ನು ನೀಡಬೇಕು, ಬೇರೆಯವರಿಗೆ ಬೆಳ್ಳಿ ಲೇಬಲ್ ಹಾಕಬೇಕು, ಎಲ್ಲವೂ ಸಾಧ್ಯ . ,ಮೇಲರಿಮೆಯ  ಪ್ರಾಬಲ್ಯ ವನ್ನು  ಕಾಯ್ದುಕೊಳ್ಳುವವರೆಗೆ. ಯಾರ ಮೇಲರಿಮೆಯ  ಪ್ರಾಬಲ್ಯ ? ಮೊದಲಿಗೆ  ಬ್ರಾಹ್ಮಣರು, ನಂತರ ಅವರಿಗೆ ಅನುಕೂಲವಾಗುವ  ಸುತ್ತುವರೆದಿರುವ  ಸವರ್ಣೀಯರು.

 

ಮತ್ತು ಅದಕ್ಕಾಗಿಯೇ ಆ ಸನ್ನಿವೇಶದಲ್ಲಿ  ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗಿದೆ. ಅದಕ್ಕಾಗಿಯೇ ರಾಜಾ ಧಾಲೆ ಅವರ ಈ ವೀಡಿಯೊವನ್ನು ಯಾರಾದರೂ “ನೋಡಿ, ಅವರು ದಲಿತ ಪ್ಯಾಂಥರ್ ಅನ್ನು ವಿರೋಧಿಸುತ್ತಿದ್ದಾರೆ” ಎಂದು ಹೇಳಲು ಬಳಸುತ್ತಿದ್ದರೆ, ಅದು ನಿಸ್ಸಂಶಯವಾಗಿ ಮೂರ್ಖತನವಾಗಿದೆ, ಸರಿ? ದಲಿತ ಪ್ಯಾಂಥರ್  ಮುಖ್ಯ ಮತ್ತು ಅದರೊಂದಿಗೆ ನೀವು ಏನನ್ನು ಸಾಧಿಸಲು ಬಯಸಿದ್ದೀರಿ, ಅದು ಕೂಡ ಇದೆ, ಮತ್ತು ನೀವು ಇದೀಗ ಏನು ಹೇಳುತ್ತಿದ್ದೀರೋ ಅದು ಕೂಡ ಇದೆ. ಅವು ಒಂದಕ್ಕೊಂದು ವಿರೋಧಿಸುತ್ತಿಲ್ಲ. . ದಯವಿಟ್ಟು ಅದನ್ನು ಅರ್ಥಮಾಡಿಕೊಳ್ಳಿ. ದಲಿತ, ಹಿ  ಲಾಡ್ಲೆಲಿ ಐಡೆಂಟಿಟಿ ಅಹೇ ಎಂದು ಕೊನೆಗೆ ಹೇಳುತ್ತಾರೆ. ಲಾಡ್ಲೆಲಿ ಐಡೆಂಟಿಟಿ ಎಂದರೆ ಅದು ಹೇರಿದ ಗುರುತು. ನಾನು ದಲಿತನಾಗಿ ಹುಟ್ಟಿಲ್ಲ. ಸಮಾಜ ನನ್ನನ್ನು  ದಲಿತನಾಗಿ ಕಾಣುತ್ತದೆ .

…………

ಮುಂದುವರಿಯಲಿದೆ