ಆರ್ಥಿಕ ಸ್ಥಿತಿಯಾಧಾರಿತ ಮೀಸಲಾತಿ ಸಾಮಾಜಿಕ ನ್ಯಾಯದ ವಿನಾಶವೇ ಸರಿ – ಡಾ. ತೋಳ್ ತಿರುಮಾವಲವನ್

ಆರ್ಥಿಕ ಸ್ಥಿತಿಯಾಧಾರಿತ ಮೀಸಲಾತಿ ಸಾಮಾಜಿಕ ನ್ಯಾಯದ ವಿನಾಶವೇ ಸರಿ

ಡಾ. ತೋಳ್ ತಿರುಮಾವಲವನ್ ಸಂದರ್ಶನ

ಸಂದರ್ಶಕ:  ಸುರೇಶ್ ಆರ್ ವಿ 

[ಪ್ರಶ್ನೆಗಳನ್ನು ಸಿದ್ಧಪಡಿಸಿದವರು: ಸುರೇಶ್ ಆರ್.ವಿ ಮತ್ತು ರಾಧಿಕಾ ಸುಧಾಕರ್]

ಕನ್ನಡ  ಅನುವಾದ – ಶಶಾಂಕ್.ಎಸ್. ಆರ್. 

ಈ ಸಂದರ್ಶನ ನಡೆದದ್ದು ಮೇ 3, 2019 ರಂದು. ಆಗಿನ್ನೂ ಡಾ. ತೋಳ್ ತಿರುಮಾವಲವನ್ ಅವರು ಸಂಸತ್ ಸದಸ್ಯರಾಗಿ ಚುನಾಯಿತರಾಗಿರಲಿಲ್ಲ. ಅವರನ್ನು ಸಂದರ್ಶಿಸಲು  ಅವಕಾಶ ಒದಗಿಸಿದ್ದಕ್ಕೆ ಅವರನ್ನು ವಂದಿಸುತ್ತೇವೆ ಹಾಗೂ ಅವರ ಚುನಾವಣಾ ಗೆಲುವಿಗೆ ಅಭಿನಂದಿಸುತ್ತೇವೆ. ಮೇಲ್ಜಾತಿಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯು ಈ ಚರ್ಚೆಯ ಮುಖ್ಯ ವಸ್ತು.

ಮೊದಲನೆಯದಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ನೀಡಲು ಅನುವು ಮಾಡಿಕೊಡುವ ಸಲುವಾಗಿ ಸಂವಿಧಾನಕ್ಕೆ ತರಲಾಗಿರುವ 103ನೇ ತಿದ್ದುಪಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

೧೦% ಮೀಸಲಾತಿಯನ್ನು ಮೇಲ್ಜಾತಿಗಳಿಗೆ ನೀಡಲಾಗಿದೆ ಎಂದು ಬಹಳಷ್ಟು ಮಂದಿ ಚರ್ಚಿಸುತ್ತಿದ್ದಾರೆ. ಇದು ಸತ್ಯವೇ ಆದರೂ, ಆರ್ಥಿಕ ಸ್ಥಿತಿಗತಿಯೇ ಈಗ ನೀಡಲಾಗುತ್ತಿರುವ ಮೀಸಲಾತಿಗೆ ಆಧಾರವೆಂದು ಗುರುತಿಸುವುದು ಮುಖ್ಯ. ಮೀಸಲಾತಿಯನ್ನು ಮೇಲ್ಜಾತಿಗಳಿಗೆ ನೀಡಲಾಗುತ್ತಿದೆ ಎನ್ನುವ ಬದಲಿಗೆ ಇದು ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿದೆ ಎಂಬುದು ಚರ್ಚೆಯ ಮುಖ್ಯ ವಿಷಯವಾಗಬೇಕು. ಇಂದಿನವರೆಗೂ ಮೀಸಲಾತಿಯು ಸಾಮಾಜಿಕ ನ್ಯಾಯವೊಂದನ್ನೇ ಆಧರಿಸಿತ್ತು. ಆರ್ಥಿಕ ಸ್ಥಿತಿಗತಿಯನ್ನು ಈವರೆಗೂ ಆಧಾರವಾಗಿಸಿಕೊಂಡಿರಲಿಲ್ಲ. ಸಾಮಾಜಕ ಸ್ಥಾನಮಾನ ಮತ್ತು ತಾರತಮ್ಯವು ಎಲ್ಲಾ ವಲಯಗಳಲ್ಲೂ; ಅದು ಸಮಾಜಿಕ, ರಾಜಕೀಯ, ಆರ್ಥಿಕತೆ, ಅಥವಾ ಸಂಸ್ಕೃತಿ ಸೇರಿದಂತೆ ಎಲ್ಲಾ ವಲಯಗಳಲ್ಲಿ ತನ್ನ ಪ್ರಭಾವ ಬೀರಿವೆ. ಇದರ ಪರಿಣಾಮವನ್ನು ಬಹಳಷ್ಟು ಸಮುದಾಯಗಳು ಉಂಡಿರುವ ಕಾರಣ ಅವನ್ನು ಗುರುತಿಸಲಾಗಿದೆ. ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ಆಶಯವೇ ಈ ಸಮುದಾಯಗಳಿಗೆ ನ್ಯಾಯ ಒದಗಿಸುವುದಾಗಿದೆ. ಮೀಸಲಾತಿಯು ಈ ಸಮುದಾಯಗಳನ್ನು ಶಿಕ್ಷಣ, ನೌಕರಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಶಕ್ತವಾಗಿಸುವ ಮೂಲಕ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಸಶಕ್ತವಾಗಲು ಅನುವು ಮಾಡಿಕೊಡಬೇಕು ಎಂಬುದು ಸಮಾಜಿಕ ನ್ಯಾಯದ ಹಿಂದಿರುವ ಸಿದ್ಧಾಂತ.

ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀಡಬೇಕೆಂಬುದು ಬಹಳ ವರ್ಷಗಳ ಬೇಡಿಕೆಯೇ ಆಗಿದೆ. ಈ ವಿಚಾರವಾಗಿ ಚರ್ಚೆಗಳು ಜವಾಹರಲಾಲ್ ನೆಹರೂ ಅವರು ಪ್ರಧಾನಮಂತ್ರಿ ಆಗಿದ್ದ ಕಾಲದಿಂದಲೂ ಚಾಲ್ತಿಯಲ್ಲಿದೆ. ಇದೇ ಸಂದರ್ಭದಲ್ಲಿ, ಕ್ರಾಂತಿಕಾರಿಯಾಗಿದ್ದ ಅಂಬೇಡ್ಕರರು ಸಚಿವ ಸಂಪುಟದ ಸದಸ್ಯರಾಗಿದ್ದರು. ಆಗ ಮೀಸಲಾತಿ ನೀಡಲು ಆರ್ಥಿಕ ಸ್ಥಿತಿಗತಿಯನ್ನು ಆಧಾರವಾಗಿ ಬಳಸಿಕೊಳ್ಳಬೇಕೆ ಎಂಬ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿದ್ದವು. ತಮ್ಮ ರಾಜಕೀಯ ನಿಲುವುಗಳಾತೀತವಾಗಿ ಜವಾಹರಲಾಲ್ ನೆಹರೂ, ಅಂಬೇಡ್ಕರ್ ಸೇರಿದಂತೆ  ಅವರೊಟ್ಟಿಗಿದ್ದ ಹಲವು ಜನ ನಾಯಕರುಗಳು, ಹೋರಾಟಗಾರರು ಮತ್ತು ಚಿಂತಕರು ಈ ಬಗ್ಗೆ ಬಹಳ ಗಂಭೀರವಾದ ಚರ್ಚೆಗಳನ್ನು ನಡೆಸಿದ್ದರು. ಆದರೂ, ಚರ್ಚೆಯಲ್ಲಿ ಅಂತಿಮವಾಗಿ ಆರ್ಥಿಕ ಸ್ಥಿತಿಗತಿಯನ್ನು ಮೀಸಲಾತಿ ನೀಡಲು ಒಂದು ಮಾನದಂಡವಾಗಿ ಬಳಸಬಾರದು ಎಂದೂ,  ಸಾಮಾಜಿಕ ಸ್ಥಿತಿಗತಿಯೊಂದನ್ನೇ ಮಾನದಂಡವಾಸಿಕೊಂಡರೆ ಮಾತ್ರವೇ ಈ ಪ್ರಕ್ರಿಯೆಯು ಪ್ರಜಾಸತ್ತಾತ್ಮಕ ಆಗುವುದೆಂದು ನಿರ್ಧರಿಸಿದರು. ಸಂವಿಧಾನದಲ್ಲಿ ಮೀಸಲಾತಿಯನ್ನು ಖಾತ್ರಿ ಪಡಿಸಿದ್ದು ಈ ರೀತಿಯಲ್ಲಿ.

ಆದರೆ, ಮೋದಿ ಸರ್ಕಾರವು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ೧೦% ಮೀಸಲಾತಿಯನ್ನು ನೀಡುವ ಕಾನೂನನ್ನು ಜಾರಿಗೆ ತಂದಿದೆ. ನಮ್ಮನ್ನುದಾರಿತಪ್ಪಿಸಲುಈ ಮೀಸಲಾತಿಯನ್ನು ಮೇಲ್ಜಾತಿಗಳಿಗೆ ನೀಡಲಾಗಿದೆ ಎಂದೂ, ಇದನ್ನು ವಿರೋಧಿಸುತ್ತಿರುವವರು ಮೇಲ್ಜಾತಿಯವರನ್ನೂ, ಅವರ ಹಕ್ಕುಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಕಥನವನ್ನೂ ಸೃಷ್ಟಿಸಿದ್ದಾರೆ. ಮೇಲ್ಜಾತಿ ಸಮುದಾಯದವರು ಸಮಾಜದಲ್ಲಿ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಆರ್ಥಿಕವಾಗಿ ಹಿಂದುಳಿದಿರಬಹುದು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಅವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದಿರುವ ಸಾಧ್ಯತೆಗಳೂ ಹೆಚ್ಚಿವೆ. ಅವರು ಕೂಡ ಹಿಂದುಳಿದಿದ್ದಾರೆ ಎಂಬುದು ವಾಸ್ತವವೇ ಆಗಿದೆ. ಆದರೆ ಅವರ ಸಾಮಾಜಿಕ ಸ್ಥಾನಮಾನವು ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ. ಆದ್ದರಿಂದ, ಅವರು ನೆನೆಸಿದ್ದನ್ನು ಸಾಧಿಸಲು ಯಾವುದೇ ಅಡೆತಡೆಗಳಾಗಲಿ, ಬಿಕ್ಕಟ್ಟುಗಳಾಗಲಿ ಇರುವುದಿಲ್ಲ. ಆದ್ದರಿಂದ, ಆಗಿನ ನಾಯಕರು ಭಾರತೀಯ ಸಮಾಜವನ್ನು ಸಮುದಾಯಗಳುಹೊಂದಿದ್ದಸಾಮಾಜಿಕಸ್ಥಾನಮಾನದಆಧಾರದಮೇಲೆ, ಸಾಮಾಜಿಕವಾಗಿ ಅನುಕೂಲಸ್ಥರು ಮತ್ತು ಸಾಮಾಜಿಕವಾಗಿ ಹಿಂದುಳಿದವರು ಎಂಬ ಎರಡು ಪಂಗಡಗಳಾಗಿ ವಿಭಾಗಿಸಿದರು. ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳಂತಹ ಸಮುದಾಯಗಳ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅಧಿಕಾರದ ಪ್ರವೇಶವನ್ನುನಿರ್ಧರಿಸುವುದು ಸಾಮಾಜಿಕ ಸ್ಥಾನಮಾನ ಮಾತ್ರವೇ. ಇದನ್ನುಸರಿದೂಗಿಸಲೆಂದೇ ಸಾಮಾಜಿಕ ನ್ಯಾಯದ ತತ್ವವನ್ನು ರೂಪಿಸಲಾಗಿದೆ ಮತ್ತು ಹಿಂದುಳಿದಿರುವ ಜನರಿಗೆ ನಿರಾಕರಿಸಲಾದ ಎಲ್ಲಾ ಹಕ್ಕುಗಳನ್ನು ಪುನರ್ ಸ್ಥಾಪಿಸಲು ಸಾಮಾಜಿಕ ಸ್ಥಾನಮಾನವನ್ನು ಏಕೈಕ ಮಾನದಂಡವಾಗಿ ಆಯ್ಕೆ ಮಾಡಲಾಯಿತು. ಅವರಲ್ಲಿ ಕೆಲವರು ಆರ್ಥಿಕವಾಗಿ ಸಧೃಡರಾಗಿದ್ದರೂ, ಅವರು ದಲಿತರಾಗಿರುವ, ಬುಡಕಟ್ಟು ಜನಾಂಗಕ್ಕೆ ಸೇರಿರುವ ಕಾರಣಕ್ಕೆ ಅಥವಾ ಹಿಂದುಳಿದವರ್ಗಗಳಿಗೆ ಸೇರಿರುವ ಕಾರಣಕ್ಕೆ ಅವರು ಇಂದಿಗೂ ನಿರಂತರವಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ. ಆದರೆ, ಆರ್ಥಿಕವಾಗಿ ಹಿಂದುಳಿದಿದ್ದರೂ, ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿರುವ ಮೇಲ್ಜಾತಿ ಸಮುದಾಯಗಳಿಗೆ ಸೇರಿರುವರು ಹೆಚ್ಚಿನ ಗೌರವವನ್ನುಪಡೆದುಕೊಳ್ಳುತ್ತಾರೆ.

ಆದ್ದರಿಂದ, ಈ ವ್ಯತ್ಯಾಸ ಮತ್ತು ವಿರೋಧಾಭಾಸವನ್ನು ಗಮನದಲ್ಲಿರಿಸಿಕೊಂಡು ಪರಿಶೀಲಿಸಿದಾಗನಾವು ಆರ್ಥಿಕ ಸ್ಥಿತಿಯನ್ನು ಮಾನದಂಡವನ್ನಾಗಿ ಬಳಸಲು ಸಾಧ್ಯವಿಲ್ಲ ಎಂಬುದು ಮಾತ್ರವಲ್ಲ ಸಾಮಾಜಿಕ ಸ್ಥಾನಮಾನ ಮಾತ್ರವೇ ಪ್ರಸ್ತುತವಾಗಿದೆ ಎಂಬುದು ಗೋಚರವಾಗುತ್ತದೆ. ಇದು ಸಾಮಾಜಿಕ ನ್ಯಾಯ. ಹಾಗಾಗಿ, ಸಾಮಾಜಿಕ ನ್ಯಾಯವನ್ನುಆಧಾರಿಸಿರುವ ಮೀಸಲಾತಿಯನ್ನು ಇಲ್ಲವಾಗಿಸಲುಅವರು ಆರ್ಥಿಕ ಸ್ಥಾನಮಾನದ ಆಧಾರದ ಮೇಲೆ ಮೀಸಲಾತಿಯನ್ನು ನೀಡುವ ಕಾನೂನನ್ನು ಜಾರಿಗೆ ತಂದಿದ್ದಾರೆ. ಅವರ ಉದ್ದೇಶ ಮುಖ್ಯವಾಗಿ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವುದಲ್ಲ. ಬದಲಿಗೆ, ಹಿಂದುಳಿದವರ್ಗಗಳಿಗೆ (BC),ಅತೀ ಹಿಂದುಳಿದವರ್ಗಗಳು(MBC), ಪರಿಶಿಷ್ಟಜಾತಿ (SC)ಮತ್ತು ಪರಿಶಿಷ್ಟಪಂಗಡ (ST)ಗಳಿಗೆ ನೀಡಿರುವ ಮೀಸಲಾತಿಯನ್ನು ಪರೋಕ್ಷವಾಗಿ ವಿರೋಧಿಸುವುದು ಮತ್ತು ತಡೆಯುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ಪದ್ಧತಿಗೆ ನಿಧಾನವಾಗಿಯಾದರೂತೆರೆಯೆಳೆಯಲೆಂದೇ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವ ಹೆಸರಿನಲ್ಲಿ ಆರ್ಥಿಕ ಸ್ಥಿತಿಗತಿ ಆಧರಿಸಿದ ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಹಾಗಾಗಿ, ಸಾಮಾಜಿಕ ನ್ಯಾಯವನ್ನು ಮೊಟಕುಗೊಳಿಸುವುದೇ ಅವರ ಮುಖ್ಯ ಉದ್ದೇಶವಾಗಿದೆ. ನಾವು ಮೀಸಲಾತಿ ನೀಡಲು ಆರ್ಥಿಕ ಸ್ಥಿತಿಯನ್ನು ಮಾನದಂಡವೆಂದು ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಬಗೆಗಿನ ಚರ್ಚೆಗಳು ನಿಧಾನವಾಗಿ ಇಲ್ಲವಾಗುತ್ತವೆ. ಹಾಗಾಗಿಯೇ ಇಲ್ಲಿಯವರೆಗೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ತುಳಿತಕ್ಕೊಳಗಾದ ಮತ್ತು ಹಿಂದುಳಿದವರೆಲ್ಲರಿಗೂ ನೀಡಲಾಗಿದ್ದ ಹಕ್ಕುಗಳನ್ನು ನಿಧಾನವಾಗಿ ನಾಶಪಡಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ೧೦% ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಮೇಲ್ಜಾತಿಗಳಿಗೆ ಸಹಾಯ ಮಾಡುವುದಕ್ಕಿಂತಲೂ ಮಿಗಿಲಾಗಿ, ಅವರ ನೈಜ ಉದ್ದೇಶವಿರುವುದುSC, ST, BC ಮತ್ತು MBC ಗಳಿಗೆ ನೀಡಲಾಗಿರುವ ಸಾಮಾಜಿಕ ನ್ಯಾಯ ಆಧಾರಿತ ಮೀಸಲಾತಿಯನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿದೆ. ಹಾಗಾಗಿ ಮೀಸಲಾತಿ ನೀಡಲು ಆರ್ಥಿಕ ಸ್ಥಿತಿಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂಬ ವಿಚಾರವನ್ನು ನಾವು ವಿರೋಧಿಸುತ್ತಿದ್ದೇವೆ.

ಮೇಲ್ಜಾತಿಯವರ ಏಳಿಗೆಗೆ ನೀತಿಗಳನ್ನು ರೂಪಿಸಿಬಾರದು ಎಂದು ಹೇಳುತ್ತಿದ್ದೇವೆ ಎಂದು ಇದನ್ನು ಗ್ರಹಿಸಬಾರದು. ಪ್ರಭುತ್ವವು ಅವರಿಗೆ ಇನ್ನಾವುದೇ ರೀತಿಯಲ್ಲಿ ಸಹಾಯ ಮಾಡಬಹುದು. ಅವರಿಗೆ ಸಾಲವನ್ನು ನೀಡಬಹುದು ಅಥವಾ ಇನ್ನಾವುದೇ ವಿಧದಲ್ಲಿ ಅವರಿಗೆ ಅವಕಾಶಗಳನ್ನು ಒದಗಿಸಬಹುದು. ಆದರೆ, ಸಾಮಾಜಿಕ ನ್ಯಾಯಾಧಾರಿತ ಮೀಸಲಾತಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ಆರ್ಥಿಕ ಸ್ಥಿತಿಯಧಾರಿತ ಮೀಸಲಾತಿ ಕಾನೂನನ್ನು ಜಾರಿಗೊಳಿಸಿರುವುದು ಅತ್ಯಂತ ಖಂಡನೀಯ. ಸಾಮಾಜಿಕ ನ್ಯಾಯವನ್ನು ನಿರ್ನಾಮ ಮಾಡುವ ನಿಟ್ಟಿನಲ್ಲಿ ಇರಿಸಲಾಗಿರುವ ಹೆಜ್ಜೆ ಇದು ಎಂಬ ಕಾರಣಕ್ಕೆ ನಾವು ಇದನ್ನು ವಿರೋಧಿಸುತ್ತಿದ್ದೇವೆ.

OBC ಮೀಸಲಾತಿಯಲ್ಲಿನ ಕೆನೆ ಪದರ (Creamy Layer)ವನ್ನು ನೀವು ಹೇಗೆ ಅರ್ಥೈಸುತ್ತೀರಿ?
ಅಲ್ಲದೆ, ಈ ತಿದ್ದುಪಡಿಯು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿನ ಮೀಸಲಾತಿಯಲ್ಲಿ ಕೆನೆ ಪದರವನ್ನು ಅನುಷ್ಠಾನಗೊಳಿಸುನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ಅನೇಕ ಅಂಬೇಡ್ಕರ್‌ವಾದಿಗಳು ತಿಳಿದಿದ್ದಾರೆ. ಅವರ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕೆನೆಪದರವೆಂಬುದು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿಯನ್ನು ಜಾರಿಗೆ ತರಲು ಬಳಸಲಾದ ಮೊದಲ ತಂತ್ರ. ಈ ಹಿಂದೆ ಕೆನೆಪದರಕ್ಕೆ ಅವಕಾಶ ನೀಡಿದ್ದು ಶೇ.೧೦ ಮೀಸಲಾತಿ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಅನುವು ಮಾಡಿಕೊಟ್ಟಿತು. ಇದು ಒಬಿಸಿ (OBC) ಮೀಸಲಾತಿಗೆ ಮಾತ್ರವೇ ಅನ್ವಯಿಸುತ್ತದೆಯಾದ್ದರಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬುದು ತಪ್ಪು ಗ್ರಹಿಕೆಯಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ನೀಡಲಾದ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಲು OBC ಗಳಿಗೆ ನೀಡಲಾದ ಸಾಮಾಜಿಕ ಭದ್ರತೆಯನ್ನುರಕ್ಷಿಸುವ ಮೂಲಕ ಮಾತ್ರ ಸಾಧ್ಯ ಎಂಬ ಸ್ಥಿತಿಯಿದೆ. ಆದ್ದರಿಂದ, OBC ಗಳಿಗೆ ನೀಡಲಾದ ಮೀಸಲಾತಿಗೆ ಯಾವುದೇ ತೊಂದರೆ ಉಂಟಾದರೆ ಅದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೂ ಪರಿಣಾಮ ಬೀರುತ್ತದೆ. ಮೇಲುನೋಟಕ್ಕೆ ಕೆನೆಪದರದ
ಕ್ರಮವು ಸರಿಯಾಗಿಯೇ ಇದೆ ಎಂದೆನಿಸಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ನಾವು ಅವರ ವಂಚನೆಯ ಹಿಂದಿನ ತಂತ್ರವನ್ನುಅರಿಯಬಹುದು. ಹಲವು ತಲೆಮಾರುಗಳಿಂದಲೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುತ್ತಿರುವವರು ಮೀಸಲಾತಿಯನ್ನು ಪಡೆಯಬಹುದೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿರುವ ಸ್ಥಾನಗಳಿಗೆ  ಆಯಾ ಸಮುದಾಯದ ವಿದ್ಯಾರ್ಥಿಗಳು ಮಾತ್ರವೇ ಸ್ಪರ್ಧಿಸುತ್ತಾರೆ. ಆದ್ದರಿಂದ, ಇದು ಇತರ ಸಮುದಾಯದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅವರಲ್ಲಿ, ನಿಜವಾಗಿಯೂ ಹೇಳುವುದಾದರೆ, ಅನೇಕರು ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಮೊದಲ ತಲೆಮಾರಿನ ಪದವೀಧರರೊಟ್ಟಿಗೆಯೇ ಎರಡನೇ ಮತ್ತು ಮೂರನೇ ತಲೆಮಾರಿನ ಪದವೀಧರರೂ   ಕೂಡ ಹೊರಹೊಮ್ಮಿದ್ದಾರೆ. ತಂದೆ-ತಾಯಂದಿರುನ್ಯಾಯಾಧೀಶ ಮತ್ತು ಪ್ರಾಧ್ಯಾಪಕರಂತಹ ಹುದ್ದೆಗಳನ್ನು ಹೊಂದಿದ್ದಾಗ, ಅವರು   ಮತ್ತೆ ಮೀಸಲಾತಿಯನ್ನು ಪಡೆಯಬೇಕೇ ಎಂಬಂಹ ಪ್ರಶ್ನೆಗಳಿಗೆ ಅವಕಾಶವೇ ನೀಡದೆಅವರು ಸ್ವಯಂ ಪ್ರೇರಣೆಯಿಂದ ಮುಕ್ತ (ಸಾಮಾನ್ಯ) ವರ್ಗದಲ್ಲಿ ಸ್ಪರ್ಧಿಸಲು ಮುಂದಾಗಬೇಕು.

ಅವರು ಹಾಗೆ ಮಾಡಿದರೆ ಕೆನೆಪದರವನ್ನು ಚರ್ಚಿಸುವ ಅಗತ್ಯವೇಇರುವುದಿಲ್ಲ.

ಹಿಂದುಳಿದವರ್ಗ,ಅತೀಹಿಂದುಳಿದವರ್ಗ, ಪರಿಶಿಷ್ಟಜಾತಿಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಎರಡನೇ ಮತ್ತು ಮೂರನೇ ತಲೆಮಾರಿನ ಪದವೀಧರರನ್ನುಹೊಂದಿರುವ ಅಥವಾ ಉತ್ತಮ ಆರ್ಥಿಕ ಸ್ಥಿತಿಹೊಂದಿರುವ ಕಾರಣದಿಂದಾಗಿ ಚೆನ್ನಾಗಿ ಅಧ್ಯಯನ ಮಾಡುವಷ್ಟು ಸಾಮರ್ಥ್ಯವಿರುವ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮುಕ್ತ (ಸಾಮಾನ್ಯ) ವರ್ಗದಲ್ಲಿ ಸ್ಪರ್ಧಿಸಬೇಕು. ತಾವು ಮುಕ್ತ (ಸಾಮಾನ್ಯ) ವರ್ಗದಡಿ =ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಮತ್ತು ಅತೀ ಹಿಂದುಳಿದವರ್ಗಗಳಡಿಯೇ ಸ್ಪರ್ಧಿಸುತ್ತೇವೆ ಎಂದು  ಅವರು ಹೇಳುತ್ತಿರುವುದೇ ಕೆನೆಪದರದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತರುವುದಕ್ಕೆ ಪ್ರಮುಖ ಕಾರಣವಾಗಿದೆ.

ಒಟ್ಟಿನಲ್ಲಿ,ಮೀಸಲಾತಿ ನೀತಿಯಿಂದಾಗಿ ಒಂದು ಸಮುದಾಯದಲ್ಲಿನ ಕೆಲವರು ಮಾತ್ರ ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂಬ ವಾದವಿದು. ಈಗಾಗಲೇ ಸುಶಿಕ್ಷಿತರು ಮತ್ತು ಆರ್ಥಿಕವಾಗಿ ಸದೃಢವಾಗಿರುವವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಪರ್ಧಿಸುವುದಿದ್ದರೆ ಅವರು ಸ್ವಯಂ ಪ್ರೇರಣೆಯಿಂದ ಮುಕ್ತ (ಸಾಮಾನ್ಯ) ವರ್ಗದಲ್ಲಿ ಸ್ಪರ್ಧಿಸಬೇಕು.ಹೀಗಾದಲ್ಲಿ, ಕೆನೆ ಪದರದ ಬಗ್ಗೆ ಯಾವುದೇ ಚರ್ಚೆಗೆ ಅವಕಾಶವೇ ಇರುವುದಿಲ್ಲ. ಪರಿಶಿಷ್ಟಜಾತಿ, ಹಿಂದುಳಿದವರ್ಗಗಳು
ಮತ್ತುಅತೀಹಿಂದುಳಿದವರ್ಗಗಳಿಗೆಸೇರಿದ,ಮೀಸಲಾತಿಯಫಲಾನುಭವಪಡೆದಮೂರನೇ ಮತ್ತು ನಾಲ್ಕನೇ ತಲೆಮಾರಿನ ವಿದ್ಯಾರ್ಥಿಗಳು ಸಾಮಾನ್ಯವರ್ಗದಡಿ ಸ್ಪರ್ಧಿಸಿದರೆ ತಮ್ಮದೇ ಸಮುದಾಯದ ಬಡ ವಿದ್ಯಾರ್ಥಿಗಳ ಅವಕಾಶಗಳನ್ನು ಕಸಿದಂತಾಗುವುದಿಲ್ಲ. ಆದ್ದರಿಂದ, ಕೆನೆಪದರ ನೀತಿಯನ್ನು ನಾವು ಹೇಗೆ ಕಾಣುತ್ತೇವೆ ಎಂಬುದರಲ್ಲಿ ಸಮಸ್ಯೆ ಅಡಗಿದೆ. ಆದರೆ, ಇದನ್ನೇ ನೆಪವಾಗಿರಿಸಿ, ಆಳುವವರ್ಗವು ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿಯನ್ನು ನಿಧಾನವಾಗಿ ಕೊನೆಗೊಳಿಸುವ ಸಲುವಾಗಿ ಆರ್ಥಿಕ ಮಾನದಂಡವನ್ನುಆಧರಿಸಿದ ಮೀಸಲಾತಿಯನ್ನು ಜಾರಿಗೆತರುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ಮರಣಶಾಸನವಾಗಿದೆ. ಒಂದು ಬಹುದೊಡ್ಡಅಪಾಯವಾಗಿದೆ. ಕೆನೆಪದರ
ನೀತಿಯು ಆರ್ಥಿಕ ಸ್ಥಿತಿ ಆಧಾರಿತ ಮಾನದಂಡಗಳನ್ನು ತರಲು ಕಾರಣವಾಗಬಹುದು ಅಥವಾ ಕಾರಣವಾಗಿರುವುದರಿಂದ ವಿದುತಲೈ ಚಿರುತೈಗಲ್ಕಚ್ಚಿ (VCK)ಕೆನೆ ಪದರವನ್ನುಒಪ್ಪುವುದಿಲ್ಲ.

ಕೇಂದ್ರದ ಮಟ್ಟದಲ್ಲಿ, ಮೀಸಲಾತಿಗೆಶೇ. ೫೦ ರ ಮಿತಿಯಿದ್ದು ಈಗ ಆರ್ಥಿಕವಾಗಿ  ದುರ್ಬಲವಾಗಿರುವ ವರ್ಗಗಳಿಗೆ ೧೦%ಮೀಸಲಾತಿಗಳನ್ನು ಸೇರಿಸಿದ ಕಾರಣ ಕೇಂದ್ರ ಸಾರ್ಕರದ ಸಂಸ್ಥೆಗಳಲ್ಲಿನ ಮೀಸಲಾತಿಯು ೬೦% ಮಿತಿಯನ್ನು ಹೊಂದಿದೆ. ರಾಜ್ಯ ಸಂಸ್ಥೆಗಳಲ್ಲಿ, ಉದಾಹರಣೆಗೆ ತಮಿಳುನಾಡಿನಲ್ಲಿ ಮೀಸಲಾತಿಯುಶೇ. ೬೯% ರಷ್ಟಿದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಕೂಡ ತಮಿಳುನಾಡಿನ ರೀತಿಯನ್ನುಅನುಸರಿಸಬೇಕು ಎಂದು ನೀವು ಭಾವಿಸುತ್ತೀರಾ?

ತಮಿಳುನಾಡು ನೀಡುವ ಶೇ.೬೯% ಮೀಸಲಾತಿಯು ಕೇಂದ್ರದಲ್ಲಿ   ನೀಡಲಾಗುವ ಮೀಸಲಾತಿಗಿಂತ ಭಿನ್ನವಾಗಿದೆ. ಇವೆರಡನ್ನೂ ನಾವುಒಂದೇಎಂದು ಬಗೆಯಬಾರದು. ರಾಜ್ಯ ಸರ್ಕಾರವು ರಾಜ್ಯದೊಳಗಿನ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ನೀಡುತ್ತದೆ. ಇಡೀ ರಾಷ್ಟ್ರದ ಜನಸಂಖ್ಯೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮೀಸಲಾತಿ ಒದಗಿಸುತ್ತದೆ. ಕೇಂದ್ರದ ಮಟ್ಟದಲ್ಲಿ, ಪರಿಶಿಷ್ಟಜಾತಿಗಳಿಗೆ ೧೫% ಮತ್ತು ಪರಿಶಿಷ್ಟ ಪಂಗಡಗಳಿಗೆ ೭.೫% ಮೀಸಲಾತಿ ನೀಡಲಾಗಿದೆ ಮತ್ತು ಒಟ್ಟಾರೆಯಾಗಿ, ೨೨.೫%ಅನ್ನು ಪರಿಶಿಷ್ಟಜಾತಿ ಮತ್ತುಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಇತರೆ ಹಿಂದುಳಿದ ವರ್ಗಗಳಿಗೆ (OBC) ಶೇ.೨೭ರಷ್ಟು ಮೀಸಲಾತಿ ನೀಡಲಾಗಿದೆ. ಮೀಸಲಾತಿಯ ಮೇಲೆ ಶೇ. ೫೦% ನ ಮಿತಿ ಇರುವುದರಿಂದ ಮತ್ತು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಾಲು ೨೨.೫% ಆಗಿರುವುದರಿಂದ ಇತರೆ ಹಿಂದುಳಿದ ವರ್ಗಗಳಿಗೆ  ಶೇ. ೨೭% ಮಾತ್ರ ನೀಡಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಜನಸಂಖ್ಯೆಯು ಇದಕ್ಕಿಂತಲೂ ಹೆಚ್ಚಾಗಿದೆ.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳು ೨೨.೫% ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿಗಳ ಜನಸಂಖ್ಯೆಯು ೧೫% ಕ್ಕಿಂತ ಹೆಚ್ಚಾಗಿದೆ. ಆದರೆ ಇಂದಿಗೂ ಅವರು ಹಳೆಯ ಪದ್ಧತಿಯನ್ನೇ ಪಾಲಿಸುತ್ತಿದ್ದಾರೆ. ಇದು ಆಕ್ಷೇಪಾರ್ಹ. ಇದು ವಂಚನೆಯೇ ಆಗಿದೆ. ಹೀಗಿರುವಾಗ, ಶೇ ೫೦ರಷ್ಟಿದ್ದ ಮೀಸಲಾತಿಯನ್ನು ಹೆಚ್ಚಿಸದಿದ್ದರೂ ತಮಿಳುನಾಡಿಗೆ ಸಂಬಂಧಿಸಿದಂತೆ ೬೯%  ಮೀಸಲಾತಿಯಯನ್ನು ಜಾರಿಗೊಳಿಸಬೇಕಾದ ಪರಿಸ್ಥಿತಿಯಿತ್ತು. ಆದ್ದರಿಂದ, ಭಾರತದಾದ್ಯಂತ ಸಾಕಷ್ಟು ಪ್ರತಿಭಟನೆಗಳು ನಡೆದು, ಅಂತಿಮವಾಗಿ,ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ೨೨.೫% ಮೀಸಲಾತಿಗೆ ಧಕ್ಕೆಯಾಗದಂತೆ ಸಾಂದರ್ಭಿಕವಾಗಿ ಕೆಲವು ಕ್ರಮಗಳನ್ನುಜಾರಿಗೊಳಿಸಲು ಒಪ್ಪಿಕೊಳ್ಳಬೇಕಾಯಿತು.

ರಾಜ್ಯ ಸರ್ಕಾರಗಳು ಶೇ ೫೦% ರಷ್ಟುಮೀಸಲಾತಿಯನ್ನುಮೀರಬಾರದೆಂದರೂ ಶೇ.೧೯% ಅನ್ನು ಸೇರಿಸಿಅದನ್ನುಶೇ. ೬೯%ಕ್ಕೆಏರಿಸಿದರು. ಇದನ್ನುಮತ್ತೊಮ್ಮೆಶೇ. ೫೦% ಗೆಇಳಿಸಲು ಸಾಧ್ಯವಿರಲಿಲ್ಲ. ಅಲ್ಲದೆ, ಪರಿಶಿಷ್ಟಜಾತಿ ಮತ್ತು
ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಬದಲಿಸಲು ಸಾಧ್ಯವಾಗಲಿಲ್ಲ. ೫೦%ರಷ್ಟಿದ್ದ ಮೀಸಲಾತಿಗಳನ್ನು ಕೂಡ ಬದಲಿಸುವುದು ಕಠಿಣವಾಗಿತ್ತು. ಆದ್ದರಿಂದ, ಎಂಟನೇ ಶೆಡ್ಯೂಲ್‌ನಲ್ಲಿ ನಿಬಂಧನೆಯೊಂದನ್ನು ಸೇರಿಸಲಾಗಿದೆ ಮತ್ತು ಅದನ್ನೇ ಇಲ್ಲಿಯ ವರೆಗೂ ಪಾಲಿಸಿ, ರಕ್ಷಿಸಲಾಗುತ್ತಿದೆ. ಆದ್ದರಿಂದ, ಕೇಂದ್ರದ ಮತ್ತು ರಾಜ್ಯದ ಮಟ್ಟದಲ್ಲಿ ಮೀಸಲಾತಿಗೆ  ಬೇರೆಬರೆ ಮಿತಿಯಿದೆ. ಈ ಎರಡೂ ಹಕ್ಕುಗಳನ್ನು ಸಂರಕ್ಷಿಸುವ ಜೊತೆಯಲ್ಲೇ ಅದಕ್ಕಿರುವ ಮಿತಿಯನ್ನು ಏರಸಿ ಹಿಂದುಳಿದ ವರ್ಗಗಳು, ಅತೀ ಹಿಂದುಳಿದವರ್ಗಗಳಯ, ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ  ಅವರ ಜನಸಂಖ್ಯಾ
ಪ್ರಮಾಣದಷ್ಟು ಮೀಸಲಾತಿ ನೀಡುವತ್ತ ಸಾಗಬೇಕಿದೆ. ಇದು ವಿದುತಲೈ ಚಿರುತೈ ಗಲ್ಕಚ್ಚಿ(VCK)ನಿಲುವು. ಆದ್ದರಿಂದ, ಸುಪ್ರೀಂ ಕೋರ್ಟ್ ಮೀಸಲಾತಿಗೆ ಮಿತಿಯನ್ನು ನಿರ್ಧರಿಸಿದ್ದರೂ ಸಹ,ಬದಲಾಗುತ್ತಿರು ವಸನ್ನಿವೇಶಗಳನ್ನು ಗಮನದಲ್ಲಿರಿಸಿಕೊಂಡು ಇದನ್ನು ಬದಲಿಸಬೇಕಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯಲ್ಲಿ ಅನುಪಾತದಲ್ಲಿಯೇ ಸರ್ಕಾರವು ಮೀಸಲಾತಿ ನೀಡಬೇಕು ಎಂಬುದು ವಿದುತಲೈ ಚಿರುತೈ ಗಲ್ಕಚ್ಚಿ ಯಬೇಡಿಕೆ.

ಮೀಸಲಾತಿಯ ಅನುಷ್ಠಾನವು ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬುದನ್ನು ಅನೇಕ ಅಂಬೇಡ್ಕರ್‌ವಾದಿಗಳು ಮತ್ತು ಚಿಂತಕರು ಗಮನಿಸಿದ್ದಾರೆ. ಕೇಂದ್ರದ ಮತ್ತು ರಾಜ್ಯದ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಯಾವ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ನೀವು ಭಾವಿಸುತ್ತೀರಿ? ದಲಿತ-ಬಹುಜನರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆಯೇ?

ಮೀಸಲಾತಿ ನೀತಿಯು ಎಂದೂ ಸರಿಯಾಗಿ ಜಾರಿಯಾಗಿಲ್ಲ. ಇದು ವಂಚನೆಯೆಂದೇ ನಾನು ಬಗೆಯುತ್ತೇನೆ.

ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಹಾಗೂ ಹಿಂದುಳಿದ ಅಥವಾ ಅತೀ ಹಿಂದುಳಿದವರ್ಗಗಳ ಮೀಸಲಾತಿಯನ್ನು ಎಂದಿಗೂ ಶೇ. ೧೦೦ ರಷ್ಟು ಪರಿಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ. ಪರಿಶಿಷ್ಟಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅರ್ಹ ಅಭ್ಯರ್ಥಿಗಳಿಲ್ಲ ಎಂದು ಪದೇ ಪದೇ ಹೇಳಲಾಗುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕೇವಲ ೫% ರಿಂದ ೬%ರಷ್ಟು ಮಾತ್ರವೇ ಮೀಸಲಾತಿಯು ಅನುಷ್ಠಾನಗೊಂಡಿದೆ. ಅದರಲ್ಲೂ ಹಚ್ಚಾಗಿ ಅಧಿಕಾರವಿಲ್ಲದ, ಕೆಳಹಂತದ ಹುದ್ದೆಗಳಿಗೆ ನೇಮಕಮಾಡಿಕೊಳ್ಳಲು ಮಾತ್ರವೇ ಅದನ್ನು ಬಳಸಲಾಗುತ್ತದೆ. ವಾಸ್ತವ ಹೀಗಿರುವಾಗ, ಹಾಗಾಗಿ, ವಾಸ್ತವದಲ್ಲಿ ಕೇವಲಶೇ.೫-೬ರಷ್ಟು ಮಾತ್ರವೇ  ಮೀಸಲಾತಿ ಜಾರಿಯಾಗಿರುವುದರಿಂದ,ಎಲ್ಲಾ ಕ್ಷೇತ್ರಗಳಲ್ಲೂ ಶೇ. ೧೦೦ ರಷ್ಟು ಮೀಸಲಾತಿ ಜಾರಿಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಅಂದರೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಶೇ.೨೨.೫% ಮತ್ತು ಇತರೆಹಿಂದುಳಿದವರ್ಗ (OBC)ಗಳಿಗೆ ನೀಡಲಾಗಿರುವ ಶೇ.೨೭ರಷ್ಟು ಮೀಸಲಾತಿಯು ಸಂಪೂರ್ಣವಾಗಿ ಜಾರಿಯಾಗಬೇಕು. ಇದು ಸಂಪೂರ್ಣವಾಗಿ ಜಾರಿಯಾದಾಗ ಮಾತ್ರವೇ ಈ ಜನರ ಉನ್ನತಿ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಇದನ್ನು ಆಗ್ರಹಿಸುತ್ತಿಲ್ಲ. ಆಡಳಿತ ವರ್ಗಗಳು, ವಿಶೇಷವಾಗಿ ಸಂಘ ಪರಿವಾರವು, ಜಾರಿಯಲ್ಲಿರುವ ಈ ಮೀಸಲಾತಿಗೂ ಅಂತ್ಯ ಹಾಡಲು ಉತ್ಸುಕರಾಗಿದ್ದಾರೆ ಮತ್ತು ಅವರು ಯಾವುದೇ ಮೀಸಲಾತಿ ಇರಬಾರದೆಂದು ಬಯಸುತ್ತಾರೆ. ಸಾಮಾಜಿಕ ನ್ಯಾಯವನ್ನು ರಕ್ಷಿಸಲು ನಾವು ನಿರಂತರವಾಗಿ ಹೋರಾಡಬೇಕು ಎಂಬುದು ದಿನನಿತ್ಯದ ವಾಸ್ತವ.

ಇತ್ತೀಚಿಗೆ, ಇದು ವಾಸ್ತವವಲ್ಲದಿದ್ದರೂ, ಬ್ರಾಹ್ಮಣ್ಯ ಪ್ರಭಾವದಿಂದಾಗಿ,ಮುಕ್ತ (ಸಾಮಾನ್ಯ) ಪ್ರವರ್ಗವನ್ನು ಮೇಲ್ಜಾತಿಗಳಿಗೆ ಮೀಸಲಿರಿಸಲಾಗಿದೆ ಎಂದು ಭಾವಿಸಲಾಗುತ್ತಿದೆ. ಮುಕ್ತ ಪ್ರವರ್ಗದಡಿಯ ಶೇ. ೫೦% ಹುದ್ದೆಗಳನ್ನು ಮೇಲ್ಜಾತಿಗಳಿಗೆ ಸೀಮಿತಗೊಳಿಸುವುದು ದೊಡ್ಡ ಪಿತೂರಿಯೊಂದರ ಭಾಗವೆಂದು ನೀವು ಭಾವಿಸುತ್ತೀರಾ?

ಇದರಲ್ಲಿ ಗುಪ್ತವಾಗಿರುವಂತಹ ಯಾವುದೇ ಪಿತೂರಿಗಳಿಲ್ಲ. ಅವರು ಅದನ್ನು ಬಹಿರಂಗವಾಗಿ ಕಾರ್ಯಗತಗೊಳಿಸುತ್ತಿದ್ದಾರೆ. ಇಂದಿಗೂ ಸಹ, ಇನ್ನುಳಿದ ಶೇ.೫೦% ಹುದ್ದೆಗಳಿರುವುದು ಮೇಲ್ಜಾತಿಗಳಿಗೆ ಮಾತ್ರ ಎಂಬ ರೀತಿಯಲ್ಲೇ ಮೀಸಲಾತಿಯು ಜಾರಿಯಾಗುತ್ತಿದೆ. ಮೀಸಲಾತಿಯನ್ನು ಪಡೆದ ಸಮುದಾಯಗಳು ಅವರಿಗೆ ಹಂಚಿಕೆಯಾದ ಯಾವುದೇ ಹುದ್ದೆಗಳನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ನಮ್ಮಲ್ಲಿ ಸಾಕಷ್ಟು ಅರ್ಹ ಅಭ್ಯರ್ಥಿಗಳಿಲ್ಲ ಎನ್ನುತ್ತಾರೆ. ಮುಂಬಡ್ತಿಗಳಿಗೆ ಮೀಸಲಾತಿ ಅನ್ವಯಿಸುವುದಿಲ್ಲ. ಈ ಕಾರಣದಿಂದಾಗಿ, ಎಲ್ಲಾ ಉನ್ನತ ಹುದ್ದೆಗಳನ್ನು ಕೇವಲ ಮೇಲ್ಜಾತಿಗಳ, ಸಾಮಾನ್ಯ ವರ್ಗದ ಉನ್ನತ ಜಾತಿಗಳ ಜನರು ಆಕ್ರಮಿಸಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಅವರ ಜನಸಂಖ್ಯೆಯಿರುವುದು ಅತ್ಯಲ್ಪ. ಆದರೆ, ಅಧಿಕಾರದಲ್ಲಿಅವರು ೫೦%ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದ್ದಾರೆ.  ಸಾಮಾನ್ಯ ವರ್ಗದ ಜನರು ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೇಲ್ಜಾತಿಗಳು ಮೀಸಲಾತಿ ಪಡೆಯುವ ವರ್ಗಗಳ ಹಕ್ಕುಗಳು ಮತ್ತು ಅವಕಾಶಗಳನ್ನು ಬಾಚಿದ್ದಾರೆ. ಸಾಮಾಜಿಕ ನ್ಯಾಯವನ್ನು ರಕ್ಷಿಸಲು ಬಯಸುವವರು ಇದನ್ನು ಅರ್ಥಮಾಡಿಕೊಂಡು ಅರ್ಹ ಅಭ್ಯರ್ಥಿಗಳನ್ನು ಹಿಂದುಳಿದವರ್ಗಗಳ  ಅತೀ ಹಿಂದುಳಿದವರ್ಗಗಳ, ಪರಿಶಿಷ್ಟಜಾತಿ ಮತ್ತು ಪಂಗಡಗಳಿಂದ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲು ತೊಡಗಬೇಕು. ಇದು ಮುಖ್ಯವಾಗಿದೆ. ಈ ವರ್ಗಗಳಲ್ಲಿರುವ, ಮುಕ್ತ (ಸಾಮಾನ್ಯ) ವರ್ಗದಲ್ಲಿ ಸ್ಪರ್ಧಸಲು ಸಾಕಷ್ಟು ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳೆಂದು ಪರಿಗಣಿಸಬೇಕು. ಆಗ ಮಾತ್ರವೇ ಕೇವಲ ಒಂದು ಸಮುದಾಯ ೫೦% ರಷ್ಟು ಹುದ್ದೆಗಳನ್ನು ಬಾಚುತ್ತಿರುವುದನ್ನು ತಡೆಯಲು ಮತ್ತು ಸಾಮಾಜಿಕ ನ್ಯಾಯನ್ನು ಕಾಪಾಡಲುಸಾಧ್ಯ.

ಕೇಂದ್ರ ಸರ್ಕಾರವು NEET ಮತ್ತು GST ತೆರೆನಾದ ಬಹುಜನ ವಿರೋಧಿ ಮತ್ತು ರಾಜ್ಯ ವಿರೋಧಿ ನೀತಿಗಳನ್ನುನಿರಂತರವಾಗಿ ಜಾರಿಗೆತಂದಿದೆ. ಈ ತಿದ್ದುಪಡಿಗಳು ರಾಜ್ಯಗಳ ಧ್ವನಿಯನ್ನು ಅಡಗಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಗಳೆ? ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಟಾಪಟಿಯೆಂದು ನೀವು ಭಾವಿಸುತ್ತೀರಾ?

ಈ ವಿಷಯಗಳು ಮೇಲ್ಜಾತಿಗಳು-ಇತರ ಜಾತಿಗಳ ನಡುವಿನ ಜಟಾಪಟಿಯೆಂಬುದು ಎಷ್ಟು ಸತ್ಯವೋ, ಕೇಂದ್ರದಲ್ಲಿ ಆಡಳಿತನಡೆಸುವು ಪಕ್ಷಗಳು ಇವನ್ನುಕೇಂದ್ರ ಸರ್ಕಾರ – ಪ್ರಾದೇಶಿಕ ಸರ್ಕಾರದ ದೃಷ್ಟಿಯಿಂದ ಕಾಣುತ್ತಿರುವುದೂ ಅಷ್ಟೇ ಸತ್ಯ. ರಾಜ್ಯಗಳಲ್ಲಿ ಸರ್ಕಾರ ರಚಿಸುವ ರಾಜ್ಯ ಪಕ್ಷಗಳು ಕೇಂದ್ರ ಸರ್ಕಾರವನ್ನು ದುರ್ಬಲಗೊಳಿಸುವುದರಿಂದ, ಪ್ರಾದೇಶಿಕ ಮತ್ತು ರಾಜ್ಯ ಪಕ್ಷಗಳು ಬಲಗೊಳ್ಳಬಾರದು ಎಂದು ಅವರು ಬಯಸುತ್ತಾರೆ. ಆದ್ದರಿಂದ, ಪ್ರಬಲವಾದ ಕೇಂದ್ರ ಸರ್ಕಾರವನ್ನು ಸ್ಥಾಪಿಸುವುದು ಅವರ ಮುಖ್ಯ ಉದ್ದೇಶವಾಗಿದೆ. ಒಂದು ರಾಷ್ಟ್ರ, ಓಂದು ಸಂಸ್ಕೃತಿ ಮತ್ತು ಒಂದೇ ನಿಯಮವನ್ನು ಸ್ಥಾಪಿಸುವ ಸರ್ಕಾರವೇ ಪ್ರಬಲ ಕೇಂದ್ರ ಸರ್ಕಾರವೆಂದು ಅವರು ಬಗೆಯುತ್ತಾರೆ. ಆದ್ದರಿಂದ, ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕುವುದು, ಪ್ರದೇಶಗಳ ಆಕಾಂಕ್ಷೆಗಳನ್ನು ತುಳಿಯುವುದು ಮತ್ತು ರಾಜಕೀಯ ವಲಯದಲ್ಲಿ ಯಾವುದೇ ರಾಜ್ಯ ಪಕ್ಷ ಅಸ್ತಿತ್ವದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳುವುದೇ ಅವರ ಯೋಜನೆಯಾಗಿದೆ. ಮೇಲ್ಜಾತಿಗಳು ಮತ್ತು ಇತರ ಜಾತಿಗಳ ನಡುವಿನ ಅಂತರವನ್ನು ತೀಕ್ಷ್ಣಗೊಳಿಸುವಂತೆಯೇ, ಪ್ರಬಲವಾದ ಕೇಂದ್ರ ಸರ್ಕಾರವನ್ನು ಮತ್ತು ದುರ್ಬಲ ರಾಜ್ಯ ಸರ್ಕಾರಗಳನ್ನು ಸ್ಥಾಪಿಸುವುದು; ನಿಧಾನವಾಗಿ ರಾಜ್ಯ ಸರ್ಕಾರಗಳನ್ನು ನಾಶಮಾಡುವುದು ಅಥವಾ ರಾಷ್ಟ್ರೀಯ / ಕೇಂದ್ರ ಪಕ್ಷಗಳ ರಾಜ್ಯ ಸರ್ಕಾರಗಳನ್ನು ಸ್ಥಾಪಿಸುವುದೇ ಅವರ ಉದ್ದೇಶವಾಗಿದೆ. ಇದನ್ನು ಸಾಧಿಸಲುಅವರು ಹಲವಾರು ರಾಜ್ಯ ವಿರೋಧಿ ಕಾನೂನುಗಳನ್ನು ತರುತ್ತಾರೆ. ಇದನ್ನು ರಾಜ್ಯ-ವಿರೋಧಿ ಕ್ರಮವೆಂದು ಪರಿಗಣಿಸುವುದಕಕ್ಕಿಂತಲೂಹೆಚ್ಚಾಗಿ ಇದು ಪ್ರಾದೇಶಿಕ ಅಸ್ಮತೆ ಮತ್ತು ಆಕಾಂಕ್ಷೆಗಳ ದಮನ ಎಂದು ಪರಿಗಣಿಸಬೇಕು. ಕಾಲಾನಂತರದಲ್ಲಿ ಯಾವುದೇ ರಾಜ್ಯ ಪಕ್ಷಗಳು ಅಸ್ತಿತ್ವದಲ್ಲಿರಬಾರದು ಎಂಬುದು ಅವರ ಆಶಯವಾಗಿದೆ.

ಆರ್ಥಿಕವಾಗಿ ದುರ್ಬಲವರ್ಗಗಳಿಗೆ ಮೀಸಲಾತಿಯನ್ನು ನೀಡಬೇಕೇ ಎಂಬುದನ್ನು ಅಧ್ಯಯನ ಮಾಡಲು ಆಯೋಗವನ್ನು ೨೦೦೬ ರಲ್ಲಿಕಾಂಗ್ರೆಸ್ ಸರ್ಕಾರ ರಚಿಸಿತು. ಈಗ, ಸಂಸತ್ತಿನಲ್ಲೂ ೧೦% ಮೀಸಲಾತಿಯ ಪರ ಕಾಂಗ್ರೆಸ್ ಮತ ಚಲಾಯಿಸಿದ್ದಾರೆ. ಎ.ಡಿ.ಎಂ.ಕೆ (ADMK)ಪಕ್ಷವು ಮಸೂದೆಯನ್ನು ವಿರೋಧಿಸಿತಾದರೂ ಅಂತಿಮವಾಗಿ ಮತದಾನದ ಮುನ್ನವೇ ಅವರು ಹೊರನಡೆದರು. ಬಹುಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪಕ್ಷವಾದ ಬಿ.ಎಸ್‌.ಪಿ (BSP) ಕೂಡ ಮಸೂದೆಯನ್ನು ಬೆಂಬಲಿಸಿತು ಮತ್ತು ಅದರ ಪರವಾಗಿ ಮತಚಲಾಯಿಸಿತು. ಸಿ.ಪಿ.ಐ.ಎಂ (CPIM)ಇದನ್ನು ವಿರೋಧಿಸಿತಾದರೂ ಅದರ ಪರವಾಗಿಯೇ ಮತ ಚಲಾಯಿಸಿತು. ಇದೆಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಹಾಗೆ ನೋಡಿದರೆ, ಇದು ಕಹಿ ಸತ್ಯ. ಪ್ರಜಾಸತ್ತಾತ್ಮಕ ಶಕ್ತಿಗಳ ನಡುವೆ ಸಮಾನ, ಸರ್ವಸಮ್ಮತವಾದ ಚಿಂತನೆಯ ಪ್ರಕ್ರಿಯೆ ಇನ್ನೂ ವಿಕಸನಗೊಂಡಿಲ್ಲ. ಅದು ಆಗಬೇಕು. ಆ ನಿಟ್ಟಿನಲ್ಲಿ ನಮ್ಮಂತಹವರು ಒಟ್ಟಾಗಿ ಕೆಲಸ ಮಾಡಬೇಕು. ಆದ್ದರಿಂದ, ಈ ಎಲ್ಲಾ ಕಹಿ ಘಟನೆಗಳ ಹೊರತಾಗಿಯೂ, ನಾವು ಪ್ರಜಾಪ್ರಭುತ್ವದ ಗೆಲುವಿಗೆ ಶ್ರಮಿಸಬೇಕು.
ಜಾತಿ ಗಣತಿಯಬಗ್ಗೆ ನಿಮ್ಮ ಅಭಿಪ್ರಾಯವೇನು? ಈಗಿರುವ ಸಮಸ್ಯೆಗಳಿಗೆ ಇದು ಪ್ರಸ್ತುತವಾಗಿದೆ ಎನಿಸುತ್ತದೆಯೇ? ತಮಿಳುನಾಡಿನಲ್ಲಿ ಇದರ ಬಗ್ಗೆ ಯಾವುದೇ ಪ್ರಮುಖ ಚರ್ಚೆಗಳುನಡೆಯುತ್ತಿಲ್ಲವೇಕೆ?

ಸಾಮಾಜಿಕ ನ್ಯಾಯವನ್ನು ಪರಿಪೂರ್ಣವಾಗಿ ಜಾರಿಗೊಳಿಸಲು ಜಾತಿ ಗಣತಿಯು ಅತ್ಯಾವಶ್ಯಕವಾಗಿದೆ. ಸಾಮಾಜಿಕ ನ್ಯಾಯ ಸ್ಥಾಪಿತವಾಗದೆ ಜಾತಿವಿನಾಶ ಸಾಧ್ಯವಿಲ್ಲ. ಸಾಮಾಜಿಕ ನ್ಯಾಯವನ್ನು ಸೂಕ್ತ ರೀತಿಯಲ್ಲಿ ಜಾರಿಗೆತರಲು ಜನಗಣತಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಜಾತಿ ಗಣತಿ ಬಹಳ ಮುಖ್ಯವೆಂದು ಎಂದು ವಿದುತಲೈ ಚಿರುತೈ ಗಲ್ಕಚ್ಚಿ(VCK) ಆಗ್ರಹಿಸುತ್ತದೆ. ತಮಿಳುನಾಡಿನಲ್ಲಿ ಇದರ ಬಗ್ಗೆ ವ್ಯಾಪಕಾವದ ಪ್ರಮುಖ ಚರ್ಚೆ ನಡೆದಿಲ್ಲ. ಅದು ನಡೆಯಬೇಕಿದೆ ಮತ್ತು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಇದಕ್ಕೆಮುಂದಾಗಬೇಕು.

ಸುಪ್ರೀಂ ಕೋರ್ಟಿನಲ್ಲಿ ಬ್ರಾಹ್ಮಣ-ಸವರ್ಣರ ಏಕಸ್ವಾಮ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನ್ಯಾಯಾಧೀಶರನ್ನುಆಯ್ಕೆ ಪ್ರಕ್ರಿಯೆಯಾದ ಕೊಲಿಜಿಯಂ(collegium) ವ್ಯವಸ್ಥೆಯಲ್ಲಿ ಮೀಸಲಾತಿ ನೀಡಬೇಕೆ?

ಖಂಡಿತವಾಗಿ ನೀಡಬೇಕು. ನ್ಯಾಯಾಂಗ, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಸೈನ್ಯ ಮತ್ತು ಪೊಲೀಸ್ ಇಲಾಖೆಯಂತಹ ಭದ್ರತಾ ವಿಭಾಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸುಲೇಬೇಕು. ಹೀಗಾಗಿಯೇ ಮುಂಬಡ್ತಿಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುತ್ತಿರುವುದು. ಅದು ಜಾರಿಗೆ ಬಂದರೆ, ಸೈನ್ಯ ಮತ್ತು ನ್ಯಾಯಾಂಗದಂತಹ ಎಲ್ಲಾ ಸಂಸ್ಥೆಗಳಲ್ಲಿ ಮೀಸಲಾತಿಯು ಸ್ವಯಂ ಚಾಲಿತವಾಗಿ ಆಚರಣೆಗೆ ಬರುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬಹುದು.

ವಿದುತಲೈ ಚಿರುತೈ ಗಲ್ಕಚ್ಚಿ (VCK) ಯುಈ ತಿದ್ದುಪಡಿ ಕಾಯ್ದೆ ವಿರುದ್ಧ ಮೊಕದ್ದಮೆ ಹೂಡಿದೆ. ಮೇಲ್ಜಾತಿಗಳ ಹಿಡಿತದಲ್ಲಿರುವ ನ್ಯಾಯಾಲಯಗಳಿಂದ ಸೂಕ್ತ ತೀರ್ಪು ಪಡೆಯಬಹುದು ಎಂದು ನೀವು ಭಾವಿಸುತ್ತೀರಾ?

ನ್ಯಾಯಾಲಯಗಳ ಮೊರೆಹೋಗುವುದು ಪ್ರತಿರೋಧದ ಸಂಕೇತವಾಗಿದೆ. ಅವರು ಎಲ್ಲಾ ಸಂದರ್ಭಗಳಲ್ಲೂ ನಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾದ ತೀರ್ಪನ್ನೇ ನೀಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ನಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾದ ತೀರ್ಪುಗಳನ್ನೇ ನಾವು ಪಡೆದಿರಬಹುದು. ಆದರೆ ಕೆಲವೊಮ್ಮೆ, ನ್ಯಾಯಾಧೀಶರ ರೂಪದಲ್ಲಿರುವ ಕೆಲವು ಪ್ರಜಾಸತ್ತಾತ್ಮಕ ಶಕ್ತಿಗಳು ನಮ್ಮ ನಿರೀಕ್ಷೆಗಳಿಗೆ ತಕ್ಕುದಾದ ತೀರ್ಪುಗಳನ್ನು ನೀಡಿವೆ. ಹಾಗಾಗಿ, ಈ ಪ್ರಕರಣದಲ್ಲೂ ಪವಾಡ ನಡೆದರೆ ಅಚ್ಚರಿಯಿಲ್ಲ. ಪ್ರಾಮಾಣಿಕ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಒಪ್ಪಿಅನುಕೂಲಕರ ತೀರ್ಪು ನೀಡುತ್ತವೆ ಎಂದು ನಾನು ನಂಬುತ್ತೇನೆ.
ಆದ್ದರಿಂದ, ಒಂದು ಪವಾಡ ಮಾತ್ರ ಸಂಭವಿಸಬಹುದೆಂದು ನೀವು ಪರಿಗಣಿಸುತ್ತೀರಾ?
ಏನಾದರೂ ಘಟನೆ ಅಪರೂಪಕಕ್ಕೊಮ್ಮೆ ಸಂಭವಿಸಿದರೆನಾವದನ್ನು ಪವಾಡ ಎಂದು ಕರೆಯುತ್ತೇವೆ.ಇದು ಅನೇಕಬಾರಿ ಸಂಭವಿಸಿದೆ. ಎಲ್ಲಾ ನ್ಯಾಯಾಧೀಶರು ನಮ್ಮ ವಿರುದ್ಧವಾಗಿದ್ದಾರೆ ಅಥವಾ ಎಲ್ಲಾ ಅಧಿಕಾರಿಗಳು ಎಲ್ಲಾ ಸಂದರ್ಭಗಳಲ್ಲೂ ನಮ್ಮ ವಿರುದ್ಧ ನಿಂತಿದ್ದಾರೆ ಎಂದು ನಾವು ಹೇಳಲಾಗುವುದಿಲ್ಲ. ಪ್ರಜಾಪ್ರಭುತ್ವವಾದಿಗಳೂ ಅನೇಕರಿದ್ದಾರೆ. ಸ್ವತಃ ಅಯ್ಯರ್ ಆಗಿದ್ದರೂ ಸಹ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ಪ್ರಜಾಪ್ರಭುತ್ವದ ಪರವಾಗಿ ನಿಂತು ಅನೇಕ ತೀರ್ಪುಗಳನ್ನು ನೀಡಿದ್ದಾರೆ. ಹಾಗೆಯೇ ನ್ಯಾಯಮೂರ್ತಿ ಚಂದ್ರು ಅವರು ಪ್ರಜಾಪ್ರಭುತ್ವದ ಪರವಾಗಿ ನಿಂತು ನಮಗೆ ಹಲವು ತೀರ್ಪುಗಳನ್ನು ನೀಡಿದ್ದಾರೆ. ಇವತ್ತಿಗೂ, ನಾವು ನಿರೀಕ್ಷಿಸದ ಸಮಯಗಳಲ್ಲಿ, ಸುಪ್ರೀಂ ಕೋರ್ಟ್ ಅನೇಕ ಉತ್ತಮ ತೀರ್ಪುಗಳನ್ನು ನೀಡುವ ಮೂಲಕ ನಮ್ಮನ್ನು ಅಚ್ಚರಿಗೊಳಿಸಿದೆ. ಅಂತಹ ಫಲಿತಾಂಶದ ಸಂಭವನೀಯತೆಯನ್ನು ನಿರೀಕ್ಷಿಸಿ ನಾವು ದಾವೆಹೂಡಿದ್ದೇವೆ.

ವಿದುತಲೈ ಚಿರುತೈ ಗಲ್ಕಚ್ಚಿ (VCK)ಯು ಈ ವಿಚಾರವನ್ನುಕೇವಲ ಕಾನೂನು ರೀತ್ಯ ಕೈಗೆತ್ತುಕೊಳ್ಳಲಿದೆಯೇ ಅಥವಾ ಸಾಮಾಜಿಕ-ರಾಜಕೀಯವಾಗಿಯೂ ಇದನ್ನು ವಿರೋಧಿಸುತ್ತದೆಯೇ?

ಈ ವಿಚಾರವುಎಲ್ಲಾ ವೇದಿಕೆಗಳಲ್ಲಿ ಚರ್ಚೆಯಾಗಬೇಕಿದೆ. ಮೇಲ್ಜಾತಿಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದೆನಿಸದಂತೆ ಎಚ್ಚರವಹಿಸಬೇಕು. ಮೇಲ್ಜಾತಿಗಳಿಗೆ ಈ ಮೀಸಲಾತಿಯನ್ನು ನೀಡಲಾಗಿದರೆಯಾದರೂ, ಅದನ್ನು ತರಲಾಗಿರುವುದು ಕೇವಲ ಅವರ ಲಾಭಕ್ಕಾಗಿಯಲ್ಲಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದಲಿಗೆ, ದೀನದಲಿತ ವರ್ಗಗಳಿಗೆ ನೀಡಲಾಗಿರುವಮೀಸಲಾತಿ ನೀತಿಯನ್ನು ಕೊನೆಗಾಣಿಸಲೆಂದೇ ಇದನ್ನು ಮುಖ್ಯವಾಗಿ ಜಾರಿಗೆತರಲಾಗಿದೆ. ಹಾಗಾಗಿ, ಸಾಮಾಜಿಕ ನ್ಯಾಯವನ್ನು ರಕ್ಷಿಸಬೇಕಾದರೆ ಈ ೧೦% ಮೀಸಲಾತಿ ಕಾಯಿದೆಯನ್ನು ರದ್ದುಗೊಳಿಸಬೇಕು. ಕಾನೂನುರೀತಿಯಲ್ಲಿ ಇದನ್ನು ವಿರೋಧಿಸಬೇಕಿದೆ. ಅದರೊಟ್ಟಿಗೆ, ಸಮಾಜ, ಆರ್ಥಿಕತೆ, ಸಂಸ್ಕೃತಿ ಮುಂತಾದ ಎಲ್ಲಾ ವೇದಿಕೆಗಳಲ್ಲಿಯೂ ಸಹ ಇದನ್ನು ಚರ್ಚಿಸಬೇಕಾದ ಅವಶ್ಯಕತೆಯೂ ಇದೆ. ವಿದುತಲೈ ಚಿರುತೈ ಗಲ್ಕಚ್ಚಿ (VCK)ಯು ಇದೇ ರೀತಯಲ್ಲಿ ಈ ಸಮಸ್ಯೆಯ ಬಗ್ಗೆ ಕಾರ್ಯಪ್ರವೃತ್ತವಾಗುವ ಉದ್ದೇಶವನ್ನು ಹೊಂದಿದೆ.

ವಿದುತಲೈ ಚಿರುತೈ ಗಲ್ಕಚ್ಚಿ (VCK)ಯು ಇತ್ತೀಚೆಗೆ ನಡೆಸಿದ ಸೇವ್ ನೇಷನ್ ಸಮಾವೇಶದಲ್ಲಿ ೧೦% ಮೀಸಲಾತಿಯನ್ನು ವಿರೋಧಿಸಿತೆ? ನಾವು ರಾಷ್ಟ್ರವನ್ನು ಉಳಿಸಬೇಕು ಎಂದು ನೀವು ಹೇಳಿರುವುದರಿಂದ, ಈ ಆರ್ಥಿಕವಾಗಿ ದುರ್ಬಲವರ್ಗಗಳಿಗೆ ನೀಡಲಾಗಿರುವ ಮೀಸಲಾತಿ ಮಸೂದೆಯು ರಾಷ್ಟ್ರದ ಇಚ್ಛೆಯನ್ನು ಪ್ರತಿನಿಧಿಸುತ್ತದೆ ಎಂದೆನಿಸುತ್ತದೆಯೇ?

ಸೇವ್ ನೇಷನ್ ಸಮಾವೇಶದಲ್ಲಿ ಈ ೧೦% ಅರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯು ಸಾಮಾಜಿಕ ನ್ಯಾಯವನ್ನು ಮುಗಿಸುವ ಪ್ರಯತ್ನವಾಗಿದೆ ಮತ್ತು ಈ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಅಲ್ಲದೆ, ಈ ವಿಚಾರವನ್ನು ಜನರ ಮಧ್ಯೆ ಕೊಂಡೊಯ್ಯಲು ಯೋಜನೆ ರೂಪಿಸಿದ್ದೇವೆ. ಇದೇ ಸ್ಥಿತಿ ಮುಂದುವರಿದರೆ, ಕಾಲಾನಂತರದಲ್ಲಿ, ಸಾಮಾಜಿಕ ನ್ಯಾಯದ ತತ್ವವು ಸಂಪೂರ್ಣವಾಗಿ ನಾಶವಾಗುತ್ತದೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಕಾಯ್ದೆಯನ್ನು ರದ್ದುಪಡಿಸಬೇಕು ಮತ್ತು ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬುದು ವಿದುತಲೈ ಚಿರುತೈ ಗಲ್ಕಚ್ಚಿ (VCK)ಪಕ್ಷದ ಪ್ರಮುಖ ನಿಲುವಾಗಿದೆ.

ಆದರೂ, ತಮಿಳುನಾಡಿನಲ್ಲಿ ಈ ಮೀಸಲಾತಿಗೆ ಸಂಬಂಧಿಸಿದಂತೆ ಮೌನ ಮನೆಮಾಡಿದೆ – ಈ ಮೌನವು ಸಾರ್ವಜನಿಕರಿಂದ ಹಿಡಿದು ಬಹುತೇಕ ರಾಜಕೀಯ ಪಕ್ಷಗಳವರೆಗೆ ವ್ಯಾಪಿಸಿದೆ. ನೀಟ್ಸಮಸ್ಯೆ-ಅನಿತಾ ಸಾವು, ಜಲ್ಲಿಕಟ್ಟು, ಸ್ಟೆರ್ಲೈಟ್ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದ ಜನರು ಈಗ ಬೀದಿಗಿಳಿಯುತ್ತಿಲ್ಲ.?

ಕನಿಷ್ಠ, ತಮಿಳುನಾಡಿನಲ್ಲಿಕೆಲವು ಭಿನ್ನಮತ ವ್ಯಕ್ತಪಡಿಸುವದನಿಗಳಿವೆ. ಇತರ ರಾಜ್ಯಗಳಲ್ಲಿ ಅದುಕೂಡ ಕಾಣಸಿಗುವುದಿಲ್ಲ. ಕಾರಣ, ಅವರು ಸಂಸ್ಕೃತೀಕರಣಕ್ಕೆ ಒಳಗಾಗಿದ್ದಾರೆ ಮತ್ತು ಹಿಂದೂಕರಣಗೊಂಡಿದ್ದಾರೆ. ಅನೇಕ ರಾಜ್ಯಗಳು ಮತ್ತು ಅನೇಕ ರಾಜ್ಯ ಪಕ್ಷಗಳು ಕೂಡಸಂಘ ಪರಿವಾರದ ನಿಯಂತ್ರಣದಲ್ಲಿವೆ. ಆದ್ದರಿಂದ, ಈ ೧೦% ಮೀಸಲಾತಿಗೆ ಸಂಬಂಧಿಸಿದ ಸೂಕ್ಷ್ಮತೆಗಳನ್ನು ಗುರುತಿಸಲು ತೊಡಕುಗಳನ್ನು ಎದುರಿಸುತ್ತಾರೆ. ಈ ಮೀಸಲಾತಿಯನ್ನು ಮೇಲ್ಜಾತಿಗಳಿಗೆ ನೀಡಲಾಗಿದೆ ಎಂಬ ದೃಷ್ಟಿಕೋನವನ್ನು ನಾವು ಬದಿಗೊತ್ತಿದರೆ ಮಾತ್ರ ಈ ಸಮಸ್ಯೆಯ ಆಳದಲ್ಲಿಅಡಗಿರುವ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬಹುದು. ಸಾಮಾಜಿಕ ನ್ಯಾಯಕ್ಕೆ ಇದು ವಿರುದ್ಧವಾಗಿದೆ ಎಂಬುದನ್ನು ಮನಗಾಣಬೇಕಿದೆ. ಹಾಗಾದಾಗ ಮಾತ್ರ ಈ ಮೀಸಲಾತಿಯನ್ನುಯಾರಿಗೆ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಮುಖ್ಯವಾಗಿಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಗ್ರಹಿಸಲು ಕೆಲವರಿಗೆ ಕಷ್ಟವಾಗುತ್ತದೆ. ಅವರು ಸಂಘಪರಿವಾರದೊಂದಿಗೆನಿಕಟವಾಗಿ ಸಂಬಂಧ ಹೊಂದಿರುವುದರಿಂದ ಹೀಗಾಗುತ್ತದೆ. ಆದರೆ ತಮಿಳುನಾಡಿನಲ್ಲಿ ಅಂಬೇಡ್ಕರ್ವಾದಿ ಮತ್ತು ಪೆರಿಯಾರ್ವಾದಿ ಚಳುವಳಿಯಿಂದ ಪ್ರಭಾವಿತರಾಗಿರುವವರು ಮತ್ತು ಎಡಪಂಥೀಯರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಮರ್ಥರಾಗಿರುವುದರಿಂದ, ಅದನ್ನು ಕಟುವಾಗಿ ವಿರೋಧಿಸಲಾಗುತ್ತಿದೆ.

ಈ ಹಿಂದೆ ಪ್ರಾತಿನಿಧಿಕ ಹಕ್ಕುಗಳಿಗೆ ಸವಾಲು ಎದುರಾದಾಗಲೆಲ್ಲ ತಮಿಳುನಾಡು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಕಂಡಿತ್ತು. ಆದರೆ ಈಗ, ನ್ಯಾಯಾಲಯದ ಮೆಟ್ಟಿಲೇರಿದ್ದು ಬಿಟ್ಟರೆ ದ್ರಾವಿಡಮುನ್ನೇತ್ರಕಳಗಂ (DMK) ಯಂತಹ ದೊಡ್ಡ ಪಕ್ಷಗಳಿನ್ನೂ ಬೀದಿಗೆ ಇಳಿದಿಲ್ಲ. ಪೆರಿಯಾರ್ ತಿಡಲ್ ನಲ್ಲಿ ನಡೆದವಿರೋಧ ಪಕ್ಷಗಳ ಸಭೆಯಲ್ಲಿ ವಿದುತಲೈ ಚಿರುತೈ ಗಲ್ಕಚ್ಚಿ (VCK)ಕೂಡ ಭಾಗವಹಿಸಿತು. ನಮ್ಮ ಪ್ರತಿಭಟನೆಗಳ ಸ್ವರೂಪ ಬದಲಾಗಿದೆಯೇ?

ಇದರ ವ್ಯಾಪ್ತಿಯನ್ನು ಕ್ಷೀಣಗೊಳಿಸಿಅದನ್ನುಅಳೆಯಲು ಸಾಧ್ಯವಿಲ್ಲ. ಈ ಹಿಂದೆ ಮಾಧ್ಯಮಗಳ ಬೆಳವಣಿಗೆ ಮತ್ತು ಪ್ರಭಾವಗಳೆರಡೂ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಿ, ಯಾರೇ ಆಗಲಿ ಉಪವಾಸ ಸತ್ಯಾಗ್ರಹ ಕೈಗೊಂಡರೆ, ಅದರ ಸುದ್ದಿ ಪ್ರಪಂಚದಾದ್ಯಂತ, ಮೂಲೆ ಮೂಲೆಗಳಿಗೆ ತಲುಪುತ್ತವೆ. ಆದ್ದರಿಂದ, ಲಕ್ಷಗಟ್ಟಲೆ ಜನರು ಜಮಾಯಿಸಿದರೆ ಮಾತ್ರ ಅದನ್ನು ಪ್ರತಿಭಟನೆ ಎಂದು ಪರಿಗಣಿಸಬೇಕು ಇಲ್ಲದಿದ್ದರೆ ಅದು ದಿಟ್ಟ ಹೋರಾಟವಲ್ಲ ಎಂಬ ತೀರ್ಮಾನಕ್ಕೆ ನಾವುಬರಲಾಗದು. ಆದರೆ, ವಿರೋಧಿಸಬೇಕಾದುದನ್ನು ಸೂಕ್ತ ಸಮಯದಲ್ಲಿ ವಿರೋಧಿಸುವುದು ಪ್ರತಿಭಟನೆಯ ಮುಖ್ಯ ಲಕ್ಷಣವಾಗಿದೆ. ಪ್ರತಿಭಟನೆಗಳು ವಿವಿಧ ರೂಪಗಳನ್ನು ಪಡೆದುಕೊಳ್ಳಬಹುದು – ಹಲವು ಪಕ್ಷಗಳು ಸೇರಿ ಪ್ರತಿಭಟನೆ ನಡೆಸಬಹುದು, ಇಲ್ಲವೇ ಒಂದೇ ಪಕ್ಷ ಪ್ರತಿಭಟನೆ ನಡೆಸಬಹುದು; ಹತ್ತುಸಾವಿರ ಜನ ಸೇರುವ ಪ್ರತಿಭಟನೆಯಾಗಿರಬಹುದು ಇಲ್ಲವೇಕೇವಲ ೧೦ ಜನ ಸೇರುವ ಪ್ರತಿಭಟನೆಗಳಿರಬಹುದು. ಅದು ಯಾವುದೇ ಸ್ವರೂಪದಲ್ಲಿದ್ದರೂ; ಎಷ್ಟೇ ಜನರು ಸೇರಿದರೂ ಪ್ರತಿಭಟನೆಯೊಂದು ಪ್ರತಿಭಟನೆಯೇ. ಅದು ನಮ್ಮ ಪ್ರತಿರೋಧವನ್ನು ಪ್ರಕಟಪಡಿಸಲೊಂದು ಅವಕಾಶ. ಆದ್ದರಿಂದ, ನಾವು ಹಿಂದಿನ ಮತ್ತು ಇಂದಿನ ಹೋರಾಟಗಳನ್ನು ಹೋಲಿಸುವ ನೋಡುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ.

ಕೊನೆಯದಾಗಿ, ನಮ್ಮ ಪರಿಶಿಷ್ಟ ಜಾತಿಗಳು,ಪರಿಶಿಷ್ಟಪಂಗಡಗಳು, ಇತರೆ ಹಿಂದುಳಿದ ವರ್ಗಗಳು, ಯುವಕರು ಮತ್ತು ನಮ್ಮ ಬಹುಜನ ನಾಗರಿಕ ಸಮಾಜವು ಈ ಸಮಸ್ಯೆಯನ್ನು ಹೇಗೆ ಎದುರುಗೊಳ್ಳಬೇಕು?

ಮೊದಲನೆಯದಾಗಿ, ಈ ಬಗ್ಗೆ ವ್ಯಾಪಕವಾದ ಚರ್ಚೆಯೊಂದನ್ನುಪ್ರಾರಂಭಿಸಬೇಕು. ಇದರಲ್ಲಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಾಮಾಜಿಕ ನ್ಯಾಯವನ್ನು ʼಸಹಾನುಭೂತಿಯʼಆಧಾರದ ಮೇಲೆ ಕೆಲವು ನಿರ್ದಿಷ್ಟ ಸಮುದಾಯಗಳಿಗೆ ನೀಡಲಾಗಿರುವ ಸವಲತ್ತು ಎಂದು ಭಾವಿಸಬಾರದು. ಯಾವ ಸಮುದಾಯಗಳಿಗೆ ಹಲವು ಶತಮಾನಗಳಿಂದ ಹಕ್ಕುಗಳನ್ನು ನಿರಾಕರಿಸಲಾಗಿತ್ತೋ ಆ ಸಮುದಾಯಗಳಿಗೆ ನೀಡಲಾಗಿರುವ ಕಾನೂನುಬದ್ಧ ಹಕ್ಕು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಸಾಮಾಜಿಕ ನ್ಯಾಯದ ಬಗ್ಗೆ ವ್ಯಾಪಕ ಚರ್ಚೆಗಳುನಡೆದು ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಬೇಕಿದೆ. ಇದರ ಪ್ರಾಮುಖ್ಯತೆಯನ್ನು ಯುವಕರಿಗೆ ಒತ್ತಿ ಹೇಳಬಯಸುತ್ತೇನೆ. ನಾವು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದರೆ ಮಾತ್ರವೇ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯ. ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಹೆಬ್ಬಾಗಿಲು, ಇಲ್ಲವೇ ಪ್ರವೇಶ ದ್ವಾರವಾಗಿದೆ. ಅದು ನಾಶವಾದರೆ ಸನಾತನಧರ್ಮ ಮತ್ತೊಮ್ಮೆ ಇಲ್ಲಿ ಜಯಗೊಳಿಸುತ್ತದೆ. ಯುವಕರು ಮತ್ತು ನಾಗರಿಕ ಸಮಾಜವು ರಾಜಕೀಯೇತರ ಸಮೂಹವಾಗಿದೆ. ಸಮಾಜದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ ಮೂಡಿಸುವುದು, ವ್ಯಾಪಕ ಚರ್ಚೆಗಳನ್ನು ನಡೆಸುವುದು ಮತ್ತು ಅದರ ಆಧಾರದ ಮೇಲೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವರುಮುಂದಾಗಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳು ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ ಎಂದು ಭಾವಿಸುವ ಬದಲು, ಬಹುಜನ ನಾಗರಿಕ ಸಮಾಜವು ರಾಜಕೀಯ ಪಕ್ಷಗಳ ಜೊತೆಗೂಡಿ ಸಮಸ್ಯೆಗಳನ್ನುಜನರ ನಡುವೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಮೇಲ್ಜಾತಿಗಳ ವಿರುದ್ಧದ ಹೋರಾಟವೆಂದು ಪರಿಗಣಿಸದೆ, ಸಾಮಾಜಿಕ ನ್ಯಾಯವನ್ನು ಕಾಪಿಡಲು ನಡೆಸುತ್ತಿರುವ ಹೋರಾಟವೆಂದು ಬಗೆದು, ಆರ್ಥಿಕ ಸ್ಥಿತಿಗತಿ ಆಧಾರಿತ ಮೀಸಲಾತಿಗೆ ಅವಕಾಶ ನೀಡದೆ ಸಾಮಾಜಿಕ ನ್ಯಾಯವೊಂದನ್ನೇ ಆಧರಿಸಿ ಮೀಸಲಾತಿ ನೀಡಬೇಕೆಂದು ಆಗ್ರಹಿಸುವ ಹೋರಾಟ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಾನು ಅವರಿಂದ ನಿರೀಕ್ಷಿಸುವುದು ಇದನ್ನೇ.

ರೌಂಡ್ ಟೇಬಲ್ ಇಂಡಿಯಾ ಪರವಾಗಿ ನಾವು ನಿಮ್ಮನ್ನು ಮೊದಲಬಾರಿ ಭೇಟಿಯಾಗುತ್ತಿದ್ದೇವೆ. ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ರೌಂಡ್ ಟೇಬಲ್ ಇಂಡಿಯಾಗೆ ನಿಮ್ಮಸಂದೇಶ/ಸಲಹೆಯನ್ನೇನಾದರೂನೀಡುವಿರ?

ರೌಂಡ್ ಟೇಬಲ್ ಇಂಡಿಯಾಗೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ. ರೌಂಡ್ ಟೇಬಲ್ ಇಂಡಿಯಾ ಪ್ರಜಾಸತ್ತಾತ್ಮಕ ವೆಬ್‌ಸೈಟ್ ಎಂದೂ, ಅದು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸರಿಯಾಗಿ ಗುರುತಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸುತ್ತದೆ ಎಂದು ನನಗೆ ತಿಳಿದಿದೆ. ಕ್ರಾಂತಿಕಾರಿಯಾದ ಡಾ. ಅಂಬೇಡ್ಕರ್ ಮತ್ತು ತಂಥೈ (ತಂದೆ) ಪೆರಿಯಾರ್ ಅವರಂತಹ ಪ್ರಜಾಪ್ರಭುತ್ವ ನಾಯಕರ ಮತ್ತವರ ತತ್ವ-ಸಿದ್ಧಾಂತಗಳ ಬಗ್ಗೆಗಿನ ಚರ್ಚೆಗಳು ನಡೆಸಲು ರೌಂಡ್ ಟೇಬಲ್ ಇಂಡಿಯಾ ಸೂಕ್ತ ವೇದಿಕೆಯೊಂದನ್ನು ನಿರ್ಮಿಸಿದೆ. ರೌಂಡ್ ಟೇಬಲ್ ಇಂಡಿಯಾದಲ್ಲಿ ಈಗಾಗಲೇ ಪ್ರಕಟವಾದ ಕೆಲವು ಲೇಖನಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಸಂಪಾದಿಸಿ ಪುಸ್ತಕಗಳಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ನಾವು ಸುತ್ತಲೂ ಕಾಣುವ ಮಾಧ್ಯಮ ಸಂಸ್ಥೆಗಳು ಮತ್ತು ವೆಬ್‌ಸೈಟ್‌ಗಳ ನಡುವೆ, ರೌಂಡ್ ಟೇಬಲ್ ಇಂಡಿಯಾನ ಕೈಗೆತ್ತಿಕೊಂಡಿರು ವಕಾರ್ಯ, ಸಾಧಿಸಲು ತನ್ನನ್ನು ತಾನು ತೊಡಗಿಸಿಕೊಂಡಿರುವ ರೀತಿ ಮತ್ತು ಯುವಕರಿಗೆ ಹೆಚ್ಚು ಅವಕಾಶಗಳನ್ನುಒದಗಿಸಿರುವುದು ಶ್ಲಾಘನೀಯ. ನನಗೆ ಈ ಅವಕಾಶ ನೀಡಿದ ರೌಂಡ್ ಟೇಬಲ್ ಇಂಡಿಯಾಗೆ ನನ್ನ ವಂದನೆಗಳನ್ನು ತಿಳಿಸುತ್ತೇನೆ.