ಗದ್ದರ್: ಒಡಲಾಳದ ಹಾಡು..

ಗದ್ದರ್: ಒಡಲಾಳದ ಹಾಡು..

ಸಿ.ಎಸ್.ದ್ವಾರಕಾನಾಥ್

“ಆಗದು ಆಗದು ಆಗದು.. ಈ ಆಕಲಿ ಪೋರು ಆಗದು.. ದುಖ್ಖನು ದುನ್ನಿನ ನಾಗಲಿ ಈ ದುಖ್ಖೇ ನಾದಂಟುನ್ನದೋಯ್..” ಎಂದು ಆಕ್ರೋಷಭರಿತವಾಗಿ ಹಾಡುತ್ತಾ ಚಿರತೆಯಂತೆ ಆಕಾಶಕ್ಕೆ ನೆಗೆದು, ಕೆಂಪು ಬಾವುಟ ಚಳುಪಿಸಿದಾಗ ನಮ್ಮಂಥ ಹದಿಹರೆಯದವರ ರಕ್ತದೊತ್ತಡ ದುಪ್ಪಟ್ಟಾಗುತಿತ್ತು..! ಈ ತೆಲುಗು ಹಾಡಿನ ಅರ್ಥ “ಈ ಹಸಿವಿನ ಹೋರಾಟ ನಿಲ್ಲುವುದಿಲ್ಲ.. ಈ ನೆಲವನ್ನು ಉತ್ತುವ ನೇಗಿಲು.. ಈ ನೆಲವೇ ನನ್ನದು ಅನ್ನುತಿದೆ..” ಎನ್ನುವ ಗದ್ದರ್ ಬರೆದ ಈ ಹಾಡನ್ನು ಮೊದಲು ಗದ್ದರ್ ಬಾಯಲ್ಲಿ ಕೇಳಿದ್ದು, ಗದ್ದರ್ ರನ್ನು ನೋಡಿದ್ದು ಅದೇ ಮೊದಲು.

 

ಎಪ್ಪತ್ತರ ದಶಕದ ಮದ್ಯಭಾಗ.. ವರ್ಷ, ತಿಂಗಳು, ದಿನಾಂಖಗಳ ನೆನಪಿಲ್ಲ. ಕೋಲಾರದ ಕೆಳಗಿನಪೇಟೆ(ಈಗ ಗಾಂಧಿನಗರ) ಯಲ್ಲಿ ಪುಟ್ಟ ಗದ್ದರ್ ಕಾರ್ಯಕ್ರಮ, ಗದ್ದರ್ ರವರ ಹಾಡು, ನೃತ್ಯ, ಜಿಗಿತ ಹದಿಹರೆಯದ ನಮ್ಮನ್ನು ಅಚ್ಚರಿಗೊಳಿಸುತಿದ್ದರೆ, ಅವರೊಂದಿಗೆ ಬಂದಿದ್ದ ಕಪ್ಪು ಕಬ್ಬಿಣದ ಕೋಲಿನಂತಿದ್ದ ಹುಡುಗ ಸಂಜೀವ್ ಇನ್ನಷ್ಟು ಏರುದ್ವನಿಯಲ್ಲಿ ಚಿರತೆಯಂತೆ ನೆಗೆದು ಹಾಡುತಿದ್ದದ್ದು ನಮ್ಮನ್ನು ಸ್ಥಂಭೀಭೂತರನ್ನಾಗಿಸಿತು! ಅವರ ಹಾಡಲ್ಲಿ ಮತ್ತು ದೇಹಗಳಲ್ಲಿದ್ದ ಫೋರ್ಸ್ ಮತ್ತು ಎನರ್ಜಿ ನಮ್ಮನ್ನು ದಂಗುಬಡಿಸಿತ್ತು! ಇದಾದ ಕೆಲವೇ ತಿಂಗಳಲ್ಲಿ ಸಂಜೀವ್ ಪೋಲಿಸ್ ಎನ್ಕೌಂಟರ್ ನಲ್ಲಿ ಪೋಲಿಸರ ಗುಂಡಿಗೆ ಬಲಿಯಾಗಿದ್ದ ವಿಷಯ ತಿಳಿದು ನಾವು ಭೂಮಿಗಿಳಿದು ಹೋದೆವು! ಆದಾಗತಾನೇ ಆರೆಸೆಸ್ ನಿಂದ ಹೊರಬಂದಿದ್ದ ನನಗೆ ಅರಿವಿಲ್ಲದೆಯೇ ವಯೋಸಹಜವಾಗಿ ನಕ್ಸಲೀಯ ಚಳುವಳಿ ನನ್ನ ಹೃದಯಕ್ಕೆ ಹತ್ತಿರವಾಗತೊಡಗಿತ್ತು. ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಸೋಮಶೇಖರ ಗೌಡ, ಎನ್. ಮುನಿಸ್ವಾಮಿ ಮುಂತಾದ ಗೆಳೆಯರೆಲ್ಲ ಜತೆಯಲ್ಲಿದ್ದ ನೆನಪು. ಕ್ರಮೇಣ ಗದ್ದರ್, ಆಂಧ್ರದ ವಿಪ್ಲವ ಸಾಹಿತ್ಯ, ‘ಸೃಜನ’ ಪತ್ರಿಕೆ, ದಿಗಂಬರ ಕವಿಗಳು, ಪಕ್ಕದ ಆಂಧ್ರದಲ್ಲಿನ ನಕ್ಸಲ್ ಸುದ್ದಿಗಳು ಆ ಸಂಧರ್ಭದಲ್ಲಿ ನಮ್ಮೊಳಕ್ಕೆ ನಿಧಾನಕ್ಕೆ ಇಳಿದು ಆವರಿಸತೊಡಗಿದವು. ಆಂದ್ರಕ್ಕೆ ಅಂಟಿಕೊಂಡಿದ್ದ ಕೋಲಾರದ ದಲಿತ ಸಂಘರ್ಷ ಸಮಿತಿಯಲ್ಲಿ ಆಗ ಬಹುತೇಕ ಇದ್ದದ್ದು ಗದ್ದರ್ ಹಾಡು ಮತ್ತು ವಿಪ್ಲವ ಸಾಹಿತ್ಯವಷ್ಟೆ.

ಬೆಂಗಳೂರಿಗೆ ಗದ್ದರ್ ಆಗಾಗ ಬರಲಾರಂಬಿಸಿದರು. ಕನ್ನಡ ಪತ್ರಿಕೋದ್ಯಮದಲ್ಲಿ ಮೊಟ್ಟ ಮೊದಲ ಬಾರಿಗೆ “ಲಂಕೇಶ್ ಪತ್ರಿಕೆ” ಯಲ್ಲಿ ಗದ್ದರ್ ಕುರಿತ ಲೇಖನ ಬರೆದೆ. ಆಗ ಗದ್ದರ್ ಯಾವುದೋ ಕೇಸಿನಲ್ಲಿ ಭೂಗತರಾಗಿದ್ದ ನೆನಪು. ನನ್ನ ಲೇಖನ ನೋಡಿ ಅನೇಕರು “ಪೋಲೀಸರು ನಿಮ್ಮನ್ನು ನೋಟ್ ಮಾಡಿಕೊಂಡಿರ್ತಾರೆ ಹುಶಾರು..” ಎಂದು ಎಚ್ಚರಿಸುತಿದ್ದರು. ಅಲ್ಲಿಂದ ಆಚೆ ಗದ್ದರ್ ಹೆಚ್ಚು ಹತ್ತಿರವಾಗತೊಡಗಿದರು.

 

ಒಮ್ಮೆ ಕರ್ನಾಟಕದಲ್ಲಿ ಮೂರು ಮಂದಿ ನಕ್ಸಲೀಯರನ್ನು ಎನ್ಕೌಂಟರ್ ಮಾಡಿದ್ದರು. ಆ ಸಂಧರ್ಭದಲ್ಲಿ ಬೆಂಗಳೂರಿಗೆ ಬಂದ ಗದ್ದರ್ ಪ್ರೆಸ್ ಕ್ಲಬ್ ನಲ್ಲಿ ಪ್ರೆಸ್ ಮೀಟ್ ಮಾಡಿ ತಮ್ಮ ಭುಜದ ಮೇಲೆ ಕಪ್ಪು ಕಂಬಳಿ ಮತ್ತು ಕೆಂಪು ಶಾಲು ಹಾಕಿಕೊಂಡು, ಕೈಯಲ್ಲಿ ಕೋಲು ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡೇ ಹೈಕೋರ್ಟ್ ಕಡೆ ನಡೆದರು. ನಾನು ನನ್ನ ವಕೀಲಿಯ ಕಪ್ಪು ಕೋಟು, ಗೌನಿನಲ್ಲೇ ಗದ್ದರ್ ಜತೆಗೆ ನಡೆದೆ. ಆಗ ಊಟದ ಸಮಯ, ಇಡೀ ಹೈಕೋರ್ಟ್ ನಮ್ಮತ್ತ ನೋಡತೊಡಗಿತು! ಆಗ ಆಂದ್ರದ ಭಾಸ್ಕರ್ ರಾವ್ ಮುಖ್ಯ ನ್ಯಾಯಮೂರ್ತಿ ಯಾಗಿದ್ದರು. ಅವರ ಚೇಂಬರ್ ಒಳಕ್ಕೆ ನಡೆದೆವು. ಬಾಸ್ಕರ್ ರಾವ್ “ರಂಡೀ ಗದ್ದರ್ ಗಾರು” ಎಂದು ತೆಲುಗಿನಲ್ಲಿ ಸ್ವಾಗತಿಸಿದರು. “ತಮ್ಮ ರಾಜ್ಯದಲ್ಲಿ ಈ ರೀತಿಯ ಅನ್ಯಾಯದ ಎನ್ಕೌಂಟರ್ ಗಳು ನಡೆಯುವುದು ಸರಿಯೇ..?” ಎಂದು ಗದ್ದರ್ ಸತತವಾಗಿ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಬಳಿ ವಾದಿಸಿದರು. ನ್ಯಾಯಮೂರ್ತಿ ಬಾಸ್ಕರ್ ರಾವ್ ಅವರ ಅಸಹಾಯಕ ಮೌನವಷ್ಟೇ ಗದ್ದರ್ ಪ್ರಶ್ನೆಗಳಿಗೆ ಉತ್ತರವಾಗಿತ್ತು.

 

ಮತ್ತೊಂದು ಘಟನೆ.. ಪ್ರೊ.ನಂಜುಂಡಸ್ವಾಮಿ ಯವರು ಆಗ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲು ಅವರ ಪತ್ನಿ ಗಂಭೀರ ಪ್ರಯತ್ನ ಪಡುತಿದ್ದರು. ಪ್ರೊಫೆಸರ್ ಅಡ್ಮಿಟ್ ಆಗಲಿಕ್ಕೆ ಒಪ್ಪದೇ ಹಠ ಮಾಡಿ ಕುಂತಿದ್ದರು! ಅವರ ಮನೆಗೆ ಹೋದ ನನಗೆ ಮೇಡಂ “ನೀವಾದರೂ ಹೇಳಿ” ಎಂದರು. ನಾನು ಪ್ರೊಫೆಸರ್ ಅವರನ್ನು ಕೇಳಿಕೊಂಡಾಗ “ಗದ್ದರ್ ನನ್ನನ್ನು ನೋಡಲು ಬರ್ತೀನಿ ಅಂದಿದಾರೆ.. ಅವರು ಬಂದು ಹೋದ ಮೇಲೆ ಅಡ್ಮಿಟ್ ಆಗ್ತೀನಿ..” ಅಂದರು. “ನಾನು ಗದ್ದರ್ ಅವರನ್ನು ಆಸ್ಪತ್ರೆಗೇ ಕರೆದುಕೊಂಡು ಬರುತ್ತೇನೆ..” ಎಂದ ಮೇಲೆ ನನ್ನ ಮಾತಿನ ಮೇಲೆ ಭರವಸೆ ಇಟ್ಟು ಪ್ರೊಫೆಸರ್ ಅಡ್ಮಿಟ್‌ ಆದರು. ನಾನು ಪ್ರೆಸ್ ಕ್ಲಬ್ ಬಳಿ ಇದ್ದ ಗದ್ದರ್ ಅವರನ್ನು ಕರೆತರಲು ಹೊರಟೆ.

ಆಗ ನನ್ನ ಬಳಿ ಹಳೇ ಮಾರುತಿ ಕಾರ್ ಇತ್ತು, ಅದರಲ್ಲೇ ಗದ್ದರ್ ಮತ್ತು ಬಾಬಯ್ಯ ನವರನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟೆ. ಗದ್ದರ್ ರವರನ್ನು ನೋಡಿ ಪ್ರೊಫೆಸರ್ ಬಹಳ ಖುಷಿಯಾದರು. ಅದಾಗ ತಾನೇ ಹತ್ತಿ ಬೆಳೆಯುವ ರೈತನ ಬದುಕು ಮತ್ತು ಅಸಹಾಯಕ ಸಾವಿನ ಬಗ್ಗೆ ಬರೆದಿದ್ದ ತೆಲುಗು ಹಾಡನ್ನು ಪ್ರೊಫೆಸರ್ ಅವರ ಕೋರಿಕೆಯಂತೆ ಗದ್ದರ್ ಹಾಡಿದರು. ಇಡೀ ಆಸ್ಪತ್ರೆಯಲ್ಲಿ ಈ ಹಾಡು ಮಾರ್ದನಿಸಿತು. ಎಲ್ಲಾ ವಾರ್ಡ್ ಗಳಿಂದಲೂ ಜನ ಪ್ರೊಫೆಸರ್ ವಾರ್ಡ್ ಕಡೆ ಬರತೊಡಗಿದರು. ನಾನು ಗದ್ದರ್ ಹಾಡನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಪ್ರೊಫೆಸರ್ ಅವರಿಗೆ ಅರ್ಥ ಮಾಡಿಸಿದೆ. ಪ್ರೊಫೆಸರ್ ಕಣ್ಣಲ್ಲಿ ಹನಿಯಾಡಿತು. “ಗದ್ದರ್ ಅವರ ಎಲ್ಲಾ ಹಾಡುಗಳನ್ನು ಕನ್ನಡಕ್ಕೆ ಅನುವಾದ ಮಾಡು” ಎಂದರು. ನಾನು ಒಪ್ಪಿಕೊಂಡೆ, ಆದರೆ ಪ್ರೊಫೆಸರ್ ಮಾತನ್ನು ನಡೆಸಿಕೊಡಲಿಲ್ಲ ಎಂಬ ಕೊರಗು ಈಗಲೂ ಇದೆ. ಬಹಳ ಕಾಲ ಪ್ರೊಫೆಸರ್ ರೊಂದಿಗೆ ಹರಟುತ್ತಾ ಆಸ್ಪತ್ರೆಯಲ್ಲೇ ಇದ್ದ ನಾವು ಹೊರಟೆವು. ಮೂವರಿಗೂ ಹಸಿವಾಗುತಿತ್ತು, ವಿಲ್ಸನ್ ಗಾರ್ಡನ್ ನಲ್ಲಿ ನನಗೆ ಪರಿಚಿತರಾದ “ರೆಡ್ಡಿ ಮಿಲಿಟರಿ ಹೋಟೆಲ್” ಗೆ ಹೋದೆವು. ಗದ್ದರ್ ರನ್ನು ನೋಡಿ ಥ್ರಿಲ್ ಆದ ಹೋಟೆಲ್ ಮಾಲಿಕ ಸತ್ಯನಾರಾಯಣ ರೆಡ್ಡಿ ಓಡಿ ಹೋಗಿ ಫೋಟೋಗ್ರಾಫರ್ ರನ್ನು ಕರೆತಂದು ಗದ್ದರ್ ರೊಂದಿಗೆ ಪೋಟೋ ತೆಗೆಸಿಕೊಂಡು, ಹೊಟ್ಟೆ ತುಂಬ ಬಾಡೂಟ ಬಡಿಸಿ ಅಭಿಮಾನ ತೋರಿ ಕಳಿಸಿದರು. ಗದ್ದರ್ ಊಟ ಮಾಡಿದ ತಟ್ಟೆಯನ್ನು ತೊಳೆದು ನೀರು ಕುಡಿದರು! ನನಗೆ ಆಶ್ಚರ್ಯವಾಯಿತು! “ನನಗೆ ಮುರುಘಾಮಠದಲ್ಲಿ ಬಸವ ಪ್ರಶಸ್ತಿ ಕೊಟ್ಟಾಗ ಶರಣರು ಊಟದ ತಟ್ಟೆ ತೊಳೆದು ನೀರು ಕುಡಿದರು, ನಾನು ಅಚ್ಚರಿಗೊಂಡು ಕಾರಣ ಕೇಳಿದಾಗ ಅನ್ನದ ಒಂದು ಅಗಳೂ ಪೋಲಾಗಬಾರದು ಎಂದು ಶರಣರು ಉತ್ತರಿಸಿದರು ನನಗೆ ಈ ಕಾನ್ಸೆಪ್ಟ್ ಇಷ್ಟವಾಯಿತು.. ಆದ್ದರಿಂದ ಸದಾ ಅನುಸರಿಸುತಿದ್ದೇನೆ..” ಎಂದು ಗದ್ದರ್ ವಿವರಣೆ ಕೊಟ್ಟರು.

 

ಈ ನಾಲ್ಕೈದು ದಶಕಗಳಲ್ಲಿ ಗದ್ದರ್ ರೊಂದಿಗೆ ಒಡನಾಟದ ಇಂತಹ ಅನೇಕ ನೆನಪುಗಳಿವೆ.

ಗದ್ದರ್ ತಮ್ಮ ಜೀವನದ ಕಡೆಕಡೆಯಲ್ಲಿ ಶೋಷಕ ರೊಂದಿಗೆ ರಾಜಿ ಆದರು ಎಂದು ಅನೇಕರು ಹೇಳುತ್ತಾರೆ. ನನಗೂ ಗದ್ದರ್ ಅವರ ಈ ನಡುವಳಿಕೆ ಕೊಂಚ ಅಚ್ಚರಿ ಅನಿಸಿದೆ. ಗದ್ದರ್ ರವರಿಗೆ ಇದ್ದ ಅನಿವಾರ್ಯ ಒತ್ತಡಗಳ ಬಗ್ಗೆ ನನಗೆ ಅರಿವಿಲ್ಲ. ತನ್ನ ಜೀವನವನ್ನೇ ತಾನು ನಂಬಿದ ಸಿದ್ದಾಂತಕ್ಕಾಗಿ ಮುಡಿಪಿಟ್ಟು, ಸಾವಿಗೆ ಅನೇಕ ಸಲ ಎದೆಯೊಡ್ಡಿ, ತುಪಾಕಿಯ ಗುಂಡೊಂದನ್ನು ದೇಹದಲ್ಲೇ ಇಟ್ಟುಕೊಂಡು ಬದುಕಿದ ಗದ್ದರ್ ಅವರ ಇಂತಹ ಸಣ್ಣಪುಟ್ಟ ‘ತಪ್ಪು’ಗಳ ಬಗ್ಗೆ ನಮ್ಮಂತವರು ಕ್ರೂರರಾಗಬಾರದು ಅನಿಸುತ್ತೆ.

 

ತಮ್ಮ ಜೀವನಪೂರ್ತಿ ಕೆಂಬಾವುಟ ಹಿಡಿದೇ ಬದುಕಿದ ಗದ್ದರ್ ಕಡೆಕಡೆಗೆ ಬುದ್ದಬಾವುಟದೊಂದಿಗೆ ಕೊನೆಯುಸಿರೆಳೆದದ್ದು ಅವರ ಜೀವನದ ರೂಪಾಂತರ(transformation) ನನಗೆ ಮುಖ್ಯವಾಗಿ ಕಾಣಿಸತೊಡಗಿತು. ಬಾಬಾಸಾಹೇಬರ ಮಾತಿನಂತೆ “ಹಿಂದೂ ಧರ್ಮದ ಯಾವುದೋ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ ಗದ್ದರ್ ಕಡೆಗೆ ಹಿಂದುವಾಗಿ ಸಾಯಲಿಲ್ಲ..! ಬೌದ್ದ ಧರ್ಮೀಯರಾಗಿ ಪರಿನಿಬ್ಬಾಣ ಹೊಂದಿದರು…

 

ಸಿ.ಎಸ್.ದ್ವಾರಕಾನಾಥ್

ಡಾ ಸಿ ಎಸ್ ದ್ವಾರಕಾನಾಥ್ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು