ಪ್ರಗತಿಪರ ಲಿಬರಲ್ ಗಳ ಸಮಸ್ಯೆ

ಪ್ರಗತಿಪರ ಲಿಬರಲ್ ಗಳ ಸಮಸ್ಯೆ

ವಿಎಲ್ನರಸಿಂಹಮೂರ್ತಿ

ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಎದ್ದಾಗ ಜಾತಿ ಪ್ರಾತಿನಿಧ್ಯ ಮತ್ತು ಜಾತಿ ಸೂಕ್ಷ್ಮತೆಯ ಪ್ರಶ್ನೆಗಳನ್ನು ದಲಿತ ಸಮುದಾಯದಿಂದ ಬಂದವರು ಎತ್ತುವುದು ಸಹಜ. ಏಕೆಂದರೆ ರಾಜಕೀಯ ಅಧಿಕಾರವಾಗಲಿ, ಸಾಮಾಜಿಕ ಸ್ಥಾನಮಾನವಾಗಲೀ ಸಾಂಸ್ಕೃತಿಕ ಮಹತ್ವವಾಗಲಿ ದಲಿತರಿಗೆ ನ್ಯಾಯಯುತವಾಗಿ ಸಿಗದೇ ಜಾತಿಯ ಕಾರಣಕ್ಕೆ. ಆದರೆ ಜಾತಿಯ ಕಾರಣಕ್ಕಾಗಿಯೇ ಹಲವು ಬಗೆಗಳಲ್ಲಿ ವಂಚನೆಗೊಳಗಾದ ಸಮುದಾಯಗಳಿಂದ ಬಂದವರು ಜಾತಿಯ ಕುರಿತು ಮಾತನಾಡಬಾರದು ಎಂದೇ ಸಮಾಜ ಬಯಸುತ್ತದೆ.

ಇಲ್ಲಿ ಜಾತಿವಾದಿ ಸಂಪ್ರದಾಯಸ್ಥರು ತಳಸಮುದಾಯಗಳು ಎಲ್ಲಿರುತ್ತಾರೋ ಅಲ್ಲೇ ಇರಲಿ ಅಂತ ಬಯಸಿದರೆ ತಾವು ಪ್ರಗತಿಪರರು, ಲಿಬರಲ್‌ಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರು ತಮ್ಮ caste privilege, leadershipಗೆ ಧಕ್ಕೆ ಆಗದ ರೀತಿ ದಲಿತರು ಮಾತನಾಡಬೇಕು ಎಂದು ಬಯಸುತ್ತಾರೆ.

 

ಈ ಲಿಬರಲ್‌ಗಳು ತಾವು ವೈಯುಕ್ತಿಕವಾಗಿ ಜಾತಿಯನ್ನು ಆಚರಿಸುವುದಿಲ್ಲ ಎನ್ನುವುದನ್ನೆ ನಾವು ದಲಿತರಿಗೆ ಮಾಡುತ್ತಿರುವ ದೊಡ್ಡ ಉಪಕಾರ ಅಂದಕೊಂಡು ದಲಿತರನ್ನು ತಮ್ಮ ಆಲೋಚನೆಗೆ ಬಗ್ಗಿಸುವುದಕ್ಕೆ ಪ್ರಯತ್ನಿಸುತ್ತಾರೆ. Caste privilege ಬಗ್ಗೆ ಪ್ರಶ್ನೆ ಮಾಡುವ ದಲಿತೇತರರನ್ನು ಅನುಮಾನಿಸಿದಾಗ ಅಸಹನೆ ವ್ಯಕ್ತಪಡಿಸುತ್ತಾರೆ.

 

ಮೊನ್ನೆ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರಶಸ್ತಿ ಕೊಟ್ಟಿರುವುದಕ್ಕೆ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಕೃಷ್ಣ ಕರ್ನಾಟಕ ಸಂಗೀತ ಬ್ರಾಹ್ಮಣರ ಅಧಿಪತ್ಯದಲ್ಲಿರುವುದನ್ನು ಪ್ರಶ್ನೆ ಮಾಡುವುದು ದಲಿತರಿಗೆ ಯಾವ ಅನುಕೂಲವನ್ನು ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಕೃಷ್ಣ ಅಂತಹ ಬ್ರೇಮಿನ್ ಲಿಬರಲ್‌ಗಳು ಎತ್ತುವ ಪ್ರಶ್ನೆಗಳಿಂದಾಗಿ ಅಲ್ಲಿ ಯಾವುದೇ structural changes ಆಗಿಲ್ಲ. ಬದಲಾಗಿ ಕೃಷ್ಣ ದೊಡ್ಡ ಜಾತಿವಿನಾಶ ಹೋರಾಟಗಾರ ಅಂತ ಹೆಸರು ಮಾಡಿದರು ಎನ್ನುವುದು ನನ್ನ ನಿಲುವು ಆಗಿತ್ತು. ಆದರೆ ಇದು ಕೆಲವರಿಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವ ಮೇಲುಜಾತಿಗಳನ್ನು ಅನುಮಾನಿಸುವುದು ಅಪಾಯಕಾರಿ ಬೆಳವಣಿಗೆ ಆಗಿ ಕಂಡಿದೆ. ಮುಂದುವರೆದು ದಲಿತರನ್ನು ಹೀಗೆ ಬಿಟ್ಟರೆ ನಾಳೆ ಬಸವಣ್ಣ, ಗಾಂಧಿ, ಕುವೆಂಪು ಅವರನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಮಾತು ಬಂದಿದೆ. ಜಾತಿ ವ್ಯವಸ್ಥೆಯ ವಿರುದ್ಧ ಇವರೆಲ್ಲ ಮಾಡಿದ ಹೋರಾಟದ ಬಗ್ಗೆ ದಲಿತರಿಗೆ ಎಲ್ಲರಿಗಿಂತಲೂ ಹೆಚ್ಚು ಗೌರವ ಇದೆ. ಆದರೆ ಗೌರವದ ಜೊತೆಗೆ ಪ್ರಶ್ನೆಗಳೂ ಇವೆ.

 

ಬಸವಣ್ಣನ ಕ್ರಾಂತಿ ಪರಿಪೂರ್ಣವಾಗಿದಿದ್ದರೆ ಮಂಟೇಸ್ವಾಮಿಯಂತಹ ‘ಆಧ್ಯಾತ್ಮಿಕ ದಂಗೆಕೋರ’ ಕಲ್ಯಾಣ ಪಟ್ಟಣದ ಬಾಗಿಲಲ್ಲಿ ನಿಂತು ಬಸವಣ್ಣನನ್ನು‌ ಪರೀಕ್ಷೆ ಮಾಡುತ್ತಿರಲಿಲ್ಲ, ಗಾಂಧಿಯ ಹರಿಜನನೋದ್ಧಾರ ಪರಿಪೂರ್ಣವಾಗಿದ್ದಿದ್ದರೆ ಬಾಬಾಸಾಹೇಬರು ‘ಗಾಂಧಿಯುಗ’ದಲ್ಲೆ ಗಾಂಧಿಯ ವಿರುದ್ಧ ದಲಿತ ಪ್ರತಿರೋಧ ಒಡ್ಡುತ್ತಿರಲಿಲ್ಲ, ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಒಪ್ಪಿಕೊಂಡೇ ಪ್ರೊ. ಬಿ. ಕೃಷ್ಣಪ್ಪನವರು ಕುವೆಂಪು ಕಾದಂಬರಿಗಳ ದಲಿತ ಪಾತ್ರಗಳ ಚಿತ್ರಣದ ನೈಜತೆಯ ಪ್ರಶ್ನೆಗಳನ್ನು ಎತ್ತುತ್ತಿರಲಿಲ್ಲ. ಕರ್ನಾಟಕದಲ್ಲಿ ಎಪ್ಪತ್ತರ‌ ದಶಕದಲ್ಲಿ ದಸಂಸ ಹುಟ್ಟುತ್ತಲೂ ಇರಲಿಲ್ಲ. ತಳಸಮುದಾಯಗಳ ಈ ಸಾಂಸ್ಕೃತಿಕ ನಾಯಕರ ಬಗ್ಗೆಯೂ ಅವರು ಮಾತನಾಡಿದ ಕಾಲದಲ್ಲಿ ಇವರು ‘ತಂಟೆಕೋರರು’ ಎನ್ನುವ ಅಭಿಪ್ರಾಯವನ್ನು ಕಟ್ಟುವುದಕ್ಕೆ ಲಿಬರಲ್ ವಲಯ ಬಹಳ ಕಷ್ಟಪಟ್ಟಿತ್ತು.

 

ಜಾತಿಯ ವಿರುದ್ಧ ದೊಡ್ಡದನಿಯಲ್ಲಿ ಮಾತನಾಡಿದ

ಬಸವಣ್ಣ, ಗಾಂಧಿ, ಕುವೆಂಪು ಅವರ ಕಾಲಮಾನದಲ್ಲೆ ಮಂಟೇಸ್ವಾಮಿ, ಬಾಬಾಸಾಹೇಬ್ ಅಂಬೇಡ್ಕರ್, ಬಿಕೆಯಂತವರು ಹುಟ್ಟಿದರು ಮತ್ತು ತಳಸಮುದಾಯಗಳ ಐಕಾನ‌್‌ಗಳಾದರು ಎನ್ನುವುದರಲ್ಲೆ ಜಾತಿಯ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವ ವಿಧಾನ ಇದೆ.

ನಮ್ಮ ಪ್ರಗತಿಪರರು ಸಾಮಾಜಿಕ ಹೋರಾಟಗಳಲ್ಲಿ ದಲಿತರು ಜಾತಿಯ ಪ್ರಶ್ನೆಯನ್ನು ಕೇವಲ ‘ಕ್ಯಾತೆ’ ಅಂತ ಅಂದುಕೊಳ್ಳದೆ ‘ಕನ್ನಡಿ’ ಅಂತ ಅಂದುಕೊಂಡರೆ ತಮ್ಮ ಮಿತಿಗಳು ಗೊತ್ತಾಗಬಹುದು. ಇದಕ್ಕಿಂತ ಮೊದಲು ದಲಿತರು ಜಾತಿಯನ್ನು ಪ್ರಶ್ನೆ ಮಾಡಿದಾಗಲೆಲ್ಲ ಅದು ದಲಿತರ ದೊಡ್ಡ ಸಮಸ್ಯೆ ಅಂತ ಭಾವಿಸದೆ ಜಾತಿ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲಿರುವವರ ಸಮಸ್ಯೆ ಅಂತ ಅರ್ಥಮಾಡಿಕೊಳ್ಳಬೇಕು.

 

ಟಿ. ಎಂ. ಕೃಷ್ಣ ಕರ್ನಾಟಕ ಸಂಗೀತವನ್ನು ಬ್ರಾಹ್ಮಣ ಜಾತಿಯ ಅಧಿಪತ್ಯದಿಂದ ಬಿಡಿಸುವುದಕ್ಕೆ ಪ್ರಯತ್ನ ಪಟ್ಟ ಕಾರಣಕ್ಕೆ ಮ್ಯಾಗ್ಸಸ್ಸೆ ಪ್ರಶಸ್ತಿ ಬಂತು. ಆಗ ಕೃಷ್ಣ ಜೊತೆ ಮಲಹೊರುವ ಪದ್ಧತಿಯ ವಿರುದ್ಧ ಜೀವಮಾನವಿಡೀ ಹೋರಾಟ ಮಾಡಿಕೊಂಡು ಬಂದಿರುವ ಬೆಜವಾಡ ವಿಲ್ಸನ್ ಅವರಿಗೂ ಮ್ಯಾಗ್ಸಸ್ಸೆ ಪ್ರಶಸ್ತಿ ಬಂತು. ಆದರೆ ಟಿ.ಎಂ. ಕೃಷ್ಣನಿಗೆ ಸಿಕ್ಕ ಪ್ರಶಂಸೆ, ಪಬ್ಲಿಸಿಟಿ, ಗೌರವದ ಕಾಲುಭಾಗ ಬೆಜವಾಡ ವಿಲ್ಸನ್‌ಗೆ ಸಿಗಲಿಲ್ಲ. ಯಾಕೆಂದರೆ ಜೀವಮಾನವಿಡೀ ಜಾತಿಯ ವಿರುದ್ದ ಹೋರಾಟ ಮಾಡುವ ಬೆಜವಾಡ ವಿಲ್ಸನ್‌ಗಿಂತಲೂ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವ ಟಿ.ಎಂ. ಕೃಷ್ಣ ಬ್ರಾಹ್ಮಣರನ್ನು ಪ್ರಶ್ನೆ ಮಾಡುವುದು ನಮ್ಮ ದೇಶದಲ್ಲಿ ‘ದೊಡ್ಡ ಕ್ರಾಂತಿ’.

ದಲಿತರಿಗೆ ಮಾಡುವ ದೊಡ್ಡ ಉಪಕಾರ!

 

ದಲಿತರು ಜಾತಿ ವ್ಯವಸ್ಥೆಯ ವಿರುದ್ಧ ಮಾಡುವ ಹೋರಾಟ, ಎತ್ತುವ ಪ್ರಶ್ನೆಗಳು ಸರಿಯಾಗಿ ಅರ್ಥವಾಗುವುದು ಜಾತಿವಾದಿಗಳಿಗೆ ಹೊರತು ಲಿಬರಲ್‌ಗಳಿಗಲ್ಲ. ಹಾಗಾಗಿಯೇ ದಲಿತರಿಗೆ ಹೆಚ್ಚು ಸವಾಲಾಗಿ ಕಾಡುವುದು ಲಿಬರಲ್‌ಗಳು.

 

ಈ ಕ್ಷಣದಲ್ಲಿ ನಮ್ಮ‌ ಪ್ರಗತಿಪರ ಲಿಬರಲ್‌ಗಳ ನಂಬಿಕೆ ಏನೆಂದರೆ ಮೋದಿಯನ್ನು ಸೋಲಿಸಿದ ಮರುಗಳಿಗೆ ಜಾತಿ, ಲಿಂಗ, ಸಾಮಾಜಿಕ, ಆರ್ಥಿಕ ತಾರತಮ್ಯ ಸೇರಿದಂತೆ ದೇಶದ ಎಲ್ಲ ಸಮಸ್ಯೆಗಳು ಮಂಗರಮಾಯ ಆಗಿಬಿಡುತ್ತವೆ ಅನ್ನುವುದು.

 

……………………………………….

 

21st March

 

ಕರ್ನಾಟಕ ಸಂಗೀತದ ಹಾಡುಗಾರ ಟಿ. ಎಂ. ಕೃಷ್ಣ ಅವರಿಗೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪುರಸ್ಕಾರ ಕೊಟ್ಟಿರುವುದನ್ನು ಕರ್ನಾಟಕ ಸಂಗೀತ ಗಾಯಕರಾದ ಗಾಯತ್ರಿ-ರಂಜನಿ ಮತ್ತು ಹಲವರು ವಿರೋಧಿಸಿದ್ದಾರೆ. ಕಾರಣ ಟಿ. ಎಂ.‌ ಕೃಷ್ಣ ಕರ್ನಾಟಕ ಸಂಗೀತವನ್ನು ಸಂಗೀತದ ಆಚೆಗಿನ ವಿಷಯಗಳಿಗೆ ಬಳಸಿಕೊಂಡು ಕಲುಷಿತಗೊಳಿಸಿದ್ದಾರೆ ಎನ್ನುವುದು.

 

ಒಂದು ಕಾಲದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ‘ಸಿಂಧು ಬೈರವಿ’ ಸಿನಿಮಾದಲ್ಲಿ ಕರ್ನಾಟಕ ಸಂಗೀತವನ್ನು ಜನಪ್ರಿಯ ಪ್ರಕಾರಕ್ಕೆ ಅಳವಡಿಸಿದ್ದಕ್ಕೆ ಸಿಡಿಮಿಡಿಗೊಂಡು ಕರ್ನಾಟಕ‌ ಸಂಗೀತದ ಪಾವಿತ್ರ್ಯತೆಯನ್ನು ಕೆಡಿಸಿದರು ಎನ್ನುವ ಮಾತು ಆಡಿದ್ದ ಇದೇ ಟಿ. ಎಂ. ಕೃಷ್ಣ ಕಾಲಾನಂತರದಲ್ಲಿ ತಮ್ಮ‌ caste privilege ಕುರಿತು ಜ್ಞಾನೋದಯವಾಗಿ ಜಾತ್ಯಾತೀತ- ಉದಾರವಾದಿಯಾಗಿ ಬದಲಾದರು. ಕರ್ನಾಟಕ ಸಂಗೀತ ಬ್ರಾಹ್ಮಣರ ಹಿಡಿತದಲ್ಲಿದೆ ಅದು ಎಲ್ಲರಿಗೂ ದಕ್ಕುವಂತವಾಗಬೇಕು ಎಂದು ರೊಚ್ಚಿಗೆದ್ದರು. ತಳಸಮುದಾಯಗಳ ಕೇರಿಗಳಿಗೆ ಕರ್ನಾಟಕ ಸಂಗೀತವನ್ನು ತೆಗೆದುಕೊಂಡು ಹೋಗುತ್ತೇನೆ ಎಂದರು. ಅನೇಕ ತಳಸಮುದಾಯದ ಕಲಾವಿದರನ್ನು ಬಳಸಿಕೊಂಡು ಕಛೇರಿಗಳನ್ನು ನಡೆಸಿ ಕರ್ನಾಟಕ ಸಂಗೀತವನ್ನು ಅಬ್ರಾಹ್ಮಣಗೊಳಿಸುವುದಕ್ಕೆ ಪ್ರಯತ್ನಿಸಿದರು.

 

ಅಸಲಿಗೆ ಕರ್ನಾಟಕ ಸಂಗೀತವನ್ನು ದಲಿತ ಕೇರಿಗಳಿಗೆ ತಲುಪಿಸುವ ಮೂಲಕ ಕ್ರಾಂತಿಕಾರಿ ಪಟ್ಟ ದಕ್ಕಿಸಿಕೊಂಡ ಕೃಷ್ಣರಂತಹ ಕಲಾವಿದರ ಪೂರ್ವಿಕರು ತಳಸಮುದಾಯಗಳ ಕಲೆಗಳನ್ನು ಕಸಿದುಕೊಂಡು ತಮ್ಮ‌ಹಿಡಿತದಲ್ಲಿಟ್ಟುಕೊಂಡರು. ಸಂಗೀತ, ನಾಟ್ಯದಂತಹ ಕಲೆಗಳನ್ನು Practice ಮಾಡುತ್ತಿದ್ದ ತಳಸಮುದಾಯಗಳಿಗೆ ವಂಚಿಸಿದ ಬ್ರಾಹ್ಮಣರು ತಳಸಮುದಾಯಗಳು ಈ ಕಲಾಪ್ರಕಾರಗಳನ್ನು ಕಲಿಯುವುದೇ ನಿಶಿದ್ಧವಾಗಿಸಿದರು. ಈಗ ಮತ್ತೆ ಈ ಕಲಾಪ್ರಕಾರಗಳನ್ನು ತಳಸಮುದಾಯಗಳಿಗೆ ಮುಟ್ಟಿಸುತ್ತೇನೆ‌, ಈ ಕಲಾಪ್ರಕಾರಗಳ‌ ಮೂಲಕ ಜಾತಿವಿನಾಶ ಚಳುವಳಿ ಮಾಡುತ್ತೇನೆ ಎನ್ನುವ ಮೂಲಕ ಚಾಲ್ತಿಯಲ್ಲಿದ್ದಾರೆ.

 

ನೆನ್ನೆ ಮೊನ್ನೆ ಬಂದ ಕೃಷ್ಣ ತರದ ಲಿಬರಲ್ ಬ್ರಾಹ್ಮಣರಿಗಿಂತ ಮುಂಚೆ ದಶಕಗಟ್ಟಲೆ ತಮ್ಮ ಹಾಡು,‌ನಾಟಕ, ಕಲೆಯ ಮೂಲಕ ಜಾತಿವಿನಾಶ ಚಳುವಳಿ ಮಾಡುತ್ತಿರುವ ನೂರಾರು ತಳಸಮುದಾಯಗಳ ಕಲಾವಿದರು ದೇಶದಲ್ಲಿದ್ದಾರೆ ಆದರೆ ಅವರಿಗ್ಯಾರಿಗೂ ಸಿಗದ ಕ್ರಾಂತಿಕಾರಿ ಪಟ್ಟ, ಮ್ಯಾಗ್ಸಸ್ಸೆ ಪ್ರಶಸ್ತಿ ಟಿ. ಎಂ. ಕೃಷ್ಣ ಅವರ ‘ಜಾತಿವಿನಾಶ’ದ ಹೋರಾಟಕ್ಕೆ ಸಿಗುತ್ತದೆ.

ಬ್ರಾಹ್ಮಣ ಹಿನ್ನಲೆಯಿಂದ ಬಂದ ಕೃಷ್ಣ ತಮ್ಮ ಸಂಗೀತವನ್ನ ದಲಿತ ಕೇರಿಗಳಿಗೆ ತಲುಪಿಸಿದರೆ ಅದರಿಂದ ಅವರಿಗೆ ಹೆಸರು, ಪ್ರಶಸ್ತಿ ಸಿಗುತ್ತದೆ ಹೊರತು ದಲಿತರಿಗೆ ಏನು ಲಾಭ ಇದೆ?

ಇವರು ಕೆಲಸ ಮಾಡಿರುವ ತಳಸಮುದಾಯಗಳ ಕಲಾವಿದರಿಗೆ ಇವರಿಗೆ ಸಿಕ್ಕಷ್ಟು ಖ್ಯಾತಿ, ಹಣ, ಪ್ರಶಸ್ತಿ ಸಿಗುತ್ತದೆಯೇ?

 

ಟಿ. ಎಂ. ಕೃಷ್ಣ ತರದ ಬ್ರಾಹ್ಮಣ ಲಿಬರಲ್‌ಗಳು ತಳಸಮುದಾಯಗಳ ಕಲಾವಿದರನ್ನು appropriate ಮಾಡಿಕೊಂಡು ತಮ್ಮ ಹುಟ್ಟಿನ ಕಾರಣಕ್ಕೆ ಸಿಕ್ಕಿರುವ ಪುಗಸಟ್ಟೆ privilege ಜೊತೆಗೆ ಈ ಸೋ‌ ಕಾಲ್ಡ್ ಕ್ರಾಂತಿಕಾರಕ ಗುಣದ ಕಾರಣಕ್ಕೆ ಇನ್ನಷ್ಟು privilege ಗಳಿಸುತ್ತಾರೆಯೇ ಹೊರತು ತಮ್ಮ privilege ಬಿಟ್ಟುಕೊಡುವುದಿಲ್ಲ.

 

ಈಗ ಈ ಪ್ರಶಸ್ತಿ ಕೊಡುತ್ತಿರುವ ಸಂಸ್ಥೆ ಬ್ರಾಹ್ಮಣರ ಹಿಡಿತದಲ್ಲಿರುವ ಸಂಸ್ಥೆ. ಬ್ರಾಹ್ಮಣರ ಸಂಸ್ಥೆಯೊಂದು ಬ್ರಾಹ್ಮಣ ‌ಮೊನೊಪಲಿಯನ್ನು ಪ್ರಶ್ನೆ ಮಾಡಿದ ಬ್ರಾಹ್ಮಣ ಕಲಾವಿದನಿಗೆ ಪ್ರಶಸ್ತಿ ಕೊಟ್ಟರೆ ಅದನ್ನು ಮಿಕ್ಕ ಬ್ರಾಹ್ಮಣರು ವಿರೋಧಿಸುತ್ತಾರೆ!

ಈ ಬ್ರಾಹ್ಮಣರ ಜಗಳದಲ್ಲಿ ದಲಿತ-ಶೂದ್ರರಿಗೇನು ಕೆಲಸ?

ನೋಡಿ ಸುಮ್ಮನಾಗುವುದು..

 

ತಮ್ಮ ಮನೆಗಳಲ್ಲಿ, ಕೆಲಸ ಮಾಡುವ ಜಾಗಗಳಲ್ಲಿ ಸಣ್ಣ structural ಬದಲಾವಣೆ ತರದ ಯಾವುದೇ ಬ್ರಾಹ್ಮಣ ಕ್ರಾಂತಿಕಾರಕತನದಿಂದ ಸಾಮಾಜಿಕ ಬದಲಾವಣೆಗೆ ನಯಾಪೈಸೆ ಪ್ರಯೋಜನವಾಗುವುದಿಲ್ಲ.

 

ದಲಿತ-ಶೂದ್ರರ ಕಲಾಪ್ರಕಾರಗಳನ್ನು, ಕಲಾವಿದರನ್ನು ಬಳಸಿಕೊಂಡು ತನ್ನ privilege ಹೆಚ್ಚು ಮಾಡಿಕೊಂಡಿರುವುದು ಬಿಟ್ಟರೆ ಅದನ್ನು ಕಳೆದುಕೊಂಡಿರುವ ಸಣ್ಣ ಕುರುಹು ಕೂಡ ಟಿ.‌ಎಂ. ಕೃಷ್ಣ ಇಲ್ಲಿವರೆಗೂ ತೋರಿಸಿಲ್ಲ.

 

ಇಂತಹ seasonal ಕ್ರಾಂತಿಕಾರಿಗಳಿಗಾಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ನಮ್ಮ ಸಮುದಾಯಗಳ‌ ಕಲಾವಿದರನ್ನು ಮುನ್ನಲೆಗೆ ತರಲು ಬೇಕಾದ ಪ್ರಯತ್ನ ಮಾಡಬೇಕಿದೆ.

ಬ್ರಾಹ್ಮಣರು ಕಂದಾಚಾರಿಗಳಾಗಿದ್ದರೂ ಸರಿ ಕ್ರಾಂತಿಕಾರಿಗಳಾದರೂ ಸರಿ ಅವರ ಜಾತಿಯ ಕಾರಣಕ್ಕೆ ಎಲ್ಲ ರೀತಿಯ ಅವಕಾಶಗಳು ಅವರಿಗೆ ಸುಲಭವಾಗಿ ಸಿಗುತ್ತವೆ.

 

ಕೊನೆಯ ಮಾತು: ಟಿ.ಎಂ. ಕೃಷ್ಣ ತರದ ಬ್ರಾಹ್ಮಣರು ತಮ್ಮ ಕಲೆಯ ಮೂಲಕ ಜಾತಿಯನ್ನು ಪ್ರಶ್ನೆ ಮಾಡಿದರೆ ಅದು ಸಮಾಜ ಸುಧಾರಣೆ. ಅದೇ ಕೆಲಸವನ್ನು ತಳಸಮುದಾಯಗಳಿಂದ ಬಂದ ಕಲಾವಿದರು ಮಾಡಿದರೆ ಅದು ಜಾತಿವಾದ, ಜಾತಿ ವ್ಯಸನ!

ಇದು ನಮ್ಮ ದೇಶದ ಸಾಂಸ್ಕೃತಿಕ ದಿವಾಳಿತನ.

…………………………………

ವಿಎಲ್ನರಸಿಂಹಮೂರ್ತಿ

ಚಿಂತಕರು , ನ್ಯಾಷನಲ್ ಕಾಲೇಜು ಅಧ್ಯಾಪಕರು.