ಕೋಮುವಾದಿಗಳ ಯಾವ ನೆಲವೂ ಮಹಿಳೆಗೆ ಸುರಕ್ಷಿತವಲ್ಲ

ಕೋಮುವಾದಿಗಳ ಯಾವ ನೆಲವೂ ಮಹಿಳೆಗೆ ಸುರಕ್ಷಿತವಲ್ಲ

ಹಾರೋಹಳ್ಳಿ ರವೀಂದ್ರ

21ನೇ ಶತಮಾನದ ಪೂರ್ವದಲ್ಲಿನ ಮಹಿಳಾ ಸ್ಥಿತಿಗತಿಗಳು ಮತ್ತು ಹೋರಾಟಕ್ಕೂ, ಪ್ರಸ್ತುತ ಮಹಿಳಾ ಸ್ಥಿತಿಗತಿಗಳು ಮತ್ತು ಹೋರಾಟಕ್ಕೂ ತುಂಬಾ ವ್ಯತ್ಯಾಸಗಳಿವೆ. ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ತುರ್ತು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಮಾನವ ಕುಲದ ಆಶಯವಾಗಿರುವ ಸ್ವಸ್ತ ಸಮಾಜದ ನಿರ್ಮಾಣದಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕೆಂಬ ಅರಿವನ್ನು ಸಮಾಜ ಪಡೆಯಬೇಕಿದೆ. ಹೈಟೆಕ್ ಅಭಿವೃದ್ಧಿ ಮಂತ್ರ, ಜಾತಿ ಮತ್ತು ಕೋಮುವಾದಿ ರಾಜಕರಣದ ಗುಪ್ತ ಅಜೆಂಡಾಗಳನ್ನು ಮಹಿಳೆ ಮನಗಾಣಬೇಕಿದೆ. ಜೊತೆಗೆ ಎಂತಹುದೇ ದುರಂತದ ಸಂದರ್ಭದಲ್ಲಿಯೂ ಮಹಿಳೆಯರು ಪ್ರತಿರೋಧಿಸುವ ಶಕ್ತಿ ಕಳೆದುಕೊಳ್ಳದೆ ಒಗ್ಗಾಟಾಗಿರುವುದು ಅತಿ ಅವಶ್ಯಕವಾಗಿದೆ.

ವಿಶ್ವಸಂಸ್ಥ ವರದಿಯ ಪ್ರಕಾರ ಮಹಿಳೆಯರು ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟಿದ್ದಾರೆ. ಜಗತ್ತಿನ ಒಟ್ಟು ದುಡಿಮೆಯ ಅವಧಿಯ ಮೂರನೇ ಎರಡು ಭಾಗದಷ್ಟು ಮಹಿಳೆಯರದು. ಅವರಿಗೆ ಸಿಗುವುದು ಜಗತ್ತಿನ ಒಟ್ಟು ಆದಾಯದ ಹತ್ತನೇ ಒಂದು ಭಾಗದ ಒಡೆತನ. ಅವರು ಹೊಂದಿರುವುದು ಜಗತ್ತಿನ ಒಟ್ಟು ಆಸ್ತಿಯ ನೂರನೇ ಒಂದು ಭಾಗ ಮಾತ್ರ. ಈ ವೈರುಧ್ಯ ನಮಗೆ ನೆನಪಿರಬೇಕು. ಇನ್ನು ನಮ್ಮ ದೇಶದಲ್ಲಂತೂ ಬಹು ಪಾಲು ಹೆಣ್ಣು ಮಕ್ಕಳು ಶಿಕ್ಷಣ, ಆರೋಗ್ಯ, ಪೌಷ್ಠಿಕತೆ ಎಲ್ಲದರಲ್ಲೂ ಹಿಂದಿದ್ದರೂ ಯಾವ ಸೌಲಭ್ಯ/ಸುರಕ್ಷತೆಗಳು ಇಲ್ಲದ ಅಸಂಘಟಿತ ವಲಯದಲ್ಲಿ ಬಿಡಿಗಾಸಿಗೆ ದುಡಿದು ದೇಶದ ಆರ್ಥಿಕ ತೆಗೆ ಕೊಡುಗೆ ನೀಡುತ್ತಿದ್ದರೂ ಕೂಡ ದೌರ್ಜನ್ಯ ಮುಕ್ತಳಾಗಿ ಬದುಕಲಾಗುತ್ತಿಲ್ಲ.

ಗೃಹ ಸಚಿವಾಲಯದ ನ್ಯಾಶನಲ್ ಕ್ರೈಂ ಬ್ಯೂರೋ ದಾಖಲೆಯ ಪ್ರಕಾರ.

  1. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2008ರಲ್ಲಿ 1,95,856 ರಷ್ಟಿದ್ದುದು 2012ರಲ್ಲಿ 2,44,270ರಷ್ಟು ಹೆಚ್ಚಿದೆ. ಈ ಅಪರಾಧಗಳು ಅತ್ಯಾಚಾರವಲ್ಲದೆ, ಅಪಹರಣ, ಕಿರುಕುಳ, ಲೈಂಗಿಕ ದೌರ್ಜನ್ಯ ಗಂಡ ಮತ್ತು ಆತನ ಕುಟುಂಬದವರು ನಡೆಸುವ ಕ್ರೌರ್ಯವನ್ನು ಒಳಗೊಂಡಿವೆ.

 

  1. ಪ್ರತಿ 26 ನಿಮಿಷದಲ್ಲಿ ಒಬ್ಬ ಮಹಿಳೆ ಕಿರುಕುಳವನ್ನು ಅನುಭವಿಸುತ್ತಾಳೆ.

 

  1. ಪ್ರತಿ 34 ನಿಮಿಷದಲ್ಲಿ ಒಂದು ಅತ್ಯಾಚಾರ ಸಂಭವಿಸುತ್ತದೆ.

 

  1. ಪ್ರತಿ 43 ನಿಮಿಷಕ್ಕೊಂದು ಅಪಹರಣ ಪ್ರಕರಣ ಜರುಗುತ್ತದೆ.

ಇನ್ನು ದಮನಿತರಲ್ಲೆ ದಮನಿತರಾದ ದಲಿತ ಮಹಿಳೆಯರ ಸ್ಥಿತಿಯಂತೂ ದಾರುಣವಾದುದು. ಬೈಗುಳ, ದೈಹಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಕಿರುಕುಳ, ಕೌಟುಂಬಿಕ ದೌರ್ಜನ್ಯ, ದಲಿತ ಮಹಿಳೆಯರ ಬದುಕಿನ ಮಾಮೂಲಿ ಸಂಗತಿಗಳಾಗಿಬಿಟ್ಟಿವೆ.

ಲಾಭಕೋರತನವೇ ಉಸಿರಾಗಿರುವ ಮಾರುಕಟ್ಟೆಯ ಆರ್ಥಿಕತೆಯೊಂದಿಗೆ ಅಭಿವೃದ್ಧಿ ಮಂತ್ರ ಜಪಿಸುವ ಕೋಮುವಾದಿ ರಾಜಕಾರಣವು ಸೇರಿಕೊಂಡು ಪರಿಸರ ಹಾಗೂ ಮಹಿಳೆಯರ ಮೇಲೆ ನಿರಂತರ ದಾಳಿ ನಡೆಸಿವೆ. ಹಿಂಸೆಯನ್ನು ತನ್ನ ಮೂಲದಲ್ಲಿಯೇ ಹುದುಗಿಸಿಕೊಂಡಿರುವ ಇಂದಿನ ಅಭಿವೃದ್ಧಿ ಮಾದರಿಯೊಂದಿಗೆ ಕೈ ಜೋಡಿಸಿರುವ ಆಧುನಿಕ ತಂತ್ರಜ್ಞಾನವು ಪ್ರಕೃತಿಯೊಂದಿಗಿನ ಮನುಷ್ಯರ ಸಾವಯವ ಸಂಬಂಧವನ್ನು ನಿರ್ಣಾಮಮಾಡಿ ಜೀವನ ಶೈಲಿಯನ್ನೇ ಹಿಂಸಾತ್ಮಕಗೊಳಿಸಿದೆ. ಹೈಟೆಕ್ ತಂತ್ರಜ್ಞಾನದಿಂದ ಹೆಣ್ಣಿನ ಗರ್ಭವೂ ಮಾರಾಟದ ಸರಕಾಗಿದೆ. ಹೆಣ್ಣು ಶಿಶುವಿಗೆ ತಾಯಿಯ ಗರ್ಭವೂ ಸುರಕ್ಷಿತ ನೆಲೆಯಾಗಿ ಉಳಿದಿಲ್ಲ.

ಖಾಸಗೀಕರಣ, ಉದಾರೀಕರಣದ ಹಿನ್ನೆಲೆಯಲ್ಲಿ ಪ್ರಭುತ್ವವು ತನ್ನ ಎಲ್ಲ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಆ ಮೂಲಕ ಬಿಡಿಗಾಸಿನ ಸಂಬಳಕ್ಕೆ ಬೆವರಿನ ದುಡಿಮೆಯನ್ನು ದೋಚಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುವು ಮಾಡಿಕೊಟ್ಟಿದೆ. ಸೇವೆಯ ಹೆಸರಿನಲ್ಲಿ ಜೀತಗಾರರಂತೆ ದುಡಿಯುವ ಗಾರ್ಮೆಂಟ್ಸ್ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದವರು, ಆಶಾ ಕಾರ್ಯಕರ್ತೆಯರು ಹೈಟೆಕ್ ಯುಗದ ಕೂಲಿಯಾಳುಗಳಾಗಿದ್ದಾರೆ. ದೇಶ ರಕ್ಷಣೆ, ಧರ್ಮ ರಕ್ಷಣೆ, ಸಮುದಾಯ ಮತ್ತು ಕುಟುಂಬದ ಗೌರವದ ರಕ್ಷಣೆಯ ಹೆಸರಿನಲ್ಲಿ ಅತ್ಯಾಚಾರ ಹಾಗೂ ಹತ್ಯೆಗೆ ಈಡಾಗುತ್ತಿದ್ದಾರೆ.

 

1.ಕಾಶ್ಮೀರ, ಈಶಾನ್ಯ, ಉತ್ತರ ಪ್ರದೇಶ ಮಹಿಳೆಯರದಂತು ಅತ್ಯಂತ ಶೋಚನೀಯ ಸ್ಥಿತಿ. ಮನೆಯಿಂದ ಹೊರಗೆ ಹೋದ ಹೆಣ್ಣು ಮಕ್ಕಳು ಕ್ಷೇಮವಾಗಿ ಹಿಂತಿರುಗುವ ಖಾತ್ರಿಯೇ ಇಲ್ಲದ, ಯಾವಾಗ ಯಾವ ದೌರ್ಜನ್ಯಕ್ಕೆ ಈಡಾಗುವೆವೋ ಎಂಬ ಆತಂಕದ ಪರಿಸ್ಥಿತಿಯಲ್ಲಿ ಅವರು ಬದುಕುತ್ತಿದ್ದಾರೆ.

2.ಪೊಲೀಸರು ಅನೈತಿಕ ಸಾಗಣೆ ಕಾಯ್ದೆ, ಸೆಕ್ಷನ್ 377 (ಅಸಹಜ ಲೈಂಗಿಕತೆ) ಅನ್ನು ಗುರಾಣಿಯಂತೆ ಬಳಸಿಕೊಂಡು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಭೀಕರವಾಗಿ ಅತ್ಯಾಚಾರ ಮಾಡುತ್ತಾರೆ.

3.ಅಣೆಕಟ್ಟು, ಹೈವೆ ಎಂಬ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಆದಿವಾಸಿ ಮಹಿಳೆಯರು ನೆಲೆ, ನೆಲ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಪರ್ಯಾಯ ಬದುಕು ಕಟ್ಟಿಕೊಳ್ಳಲು ಸೂಕ್ತ ಪರಿಹಾರ ಕಲ್ಪಿಸುವ ಬದಲು ಅವರಿಗೆ ಉಗ್ರಗಾಮಿಗಳೆಂಬ ಪಟ್ಟಿಕಟ್ಟಿ ಪೊಲೀಸರು ಹಿಂಸೆ ನೀಡಲು ಸರ್ಕಾರವು ಅನುವು ಮಾಡಿಕೊಟ್ಟಿವೆ.

4.ಪ್ರಜಾತಂತ್ರದ ನಾಲ್ಕನೇ ಸ್ತಂಭವೆನಿಸಿಕೊಂಡಿರುವ ಮಾಧ್ಯಮ ಪ್ರತಿನಿಧಿಗಳು, ನ್ಯಾಯ ನೀಡುವ ನ್ಯಾಯಾಲಯದ ಪ್ರತಿನಿಧಿಗಳಾದ ನ್ಯಾಯಾಧೀಶರುಗಳೇ ಲೈಂಗಿಕ ದೌರ್ಜನ್ಯ ನಡೆಸಿದರೆ ಪೊಲೀಸು, ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗುವ ಖಾತ್ರಿಯೇ ಇಲ್ಲವೆಂದಾದರೆ ನ್ಯಾಯಕ್ಕಾಗಿ ಮೊರೆ ಇಡುವುದಾದರೂ ಯಾರಲ್ಲಿ?

ಕಳೆದ 3-4 ದಶಕಗಳಿಂದ ಮಹಿಳಾ ಚಳುವಳಿ ನಿರಂತರವಾಗಿ ನಡೆಸುಕೊಂಡು ಬಂದಿರುವ ಹೋರಾಟದ ಫಲವಾಗಿ ಮೇಲಿನ ಹಿಂಸೆಯೂ ಇವತ್ತಿನ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಎಲ್ಲಾ ಅಡೆತಡೆಗಳ ನಡುವೆಯೂ ಮಹಿಳೆಯರು ತಲೆ ಎತ್ತಿ ನಿಂತಿರುವುದಷ್ಟೇ ಅಲ್ಲ. ಇರುವ ಕಾನೂನಿನ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ವಿವೇಕ, ಸ್ಥೈರ್ಯವನ್ನೇ ನೆಚ್ಚಿಕೊಂಡು ಪ್ರತಿರೋಧದ ನೆಲೆಗಳನ್ನು, ಭಿನ್ನ ನ್ಯಾಯ ಮತ್ತು ಶಿಕ್ಷೆಯ ಕಲ್ಪನೆಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಹೀಗೆ ಜಾಗೃತಗೊಂಡ ಮಹಿಳೆಯರು ಪ್ರಭುತ್ವದ ಮೇಲೆ ಒತ್ತಡ ಹಾಕುವ ನೈತಿಕ ಶಕ್ತಿಯಾಗಬೇಕು. ವಿಫಲಗೊಂಡ ನ್ಯಾಯ ವ್ಯವಸ್ಥೆಯನ್ನು ಬಡಿದೆಬ್ಬಿಸಬೇಕಲ್ಲದೆ, ನಿಷ್ಪಕ್ಷಪಾತವಾದ ನ್ಯಾಯ ಹಾಗೂ ಶಿಕ್ಷಾ ವ್ಯವಸ್ಥೆಗೂ ನಾಂದಿ ಹಾಡಬೇಕು. ಮರಣದಂಡನೆ, ಷಂಡರನ್ನಾಗಿಸುವುದು, ದೌರ್ಜನ್ಯ, ಹಿಂಸೆಗೆ ಹಿಂಸೆಯೇ ಪರಿಹಾರವಲ್ಲ. ಹೆಣ್ಣನ್ನು ಕುರಿತು ಆರೋಗ್ಯಕರ ಮನೋಭಾವನೆ ಬೆಳೆಸುವುದು, ಮಾನವ ಜೀವಿಯಾಗಿ ಆಕೆಯನ್ನು ಹಾಗೂ ಆಕೆಯ ದುಡಿಮೆಯನ್ನು ಗೌರವಿಸುವುದು ನಿತ್ಯ ಕಲಿಯಬೇಕಾದ ಪರಿಪಾಠವಾಗಬೇಕು. ಮಹಿಳೆಯರನ್ನು ಶೋಷಿಸುವ ಕೀಳಾಗಿ ಕಾಣುವ ಎಲ್ಲಾ ಮೂಢಾಚರಣೆಗಳನ್ನು ನಿಷೇಧಿಸಬೇಕು. ಆದರೆ ಚಾಲ್ತಿಗೆ ಬರುತ್ತಿಲ್ಲ. ಕಾರಣ ನಮ್ಮಲ್ಲಿರುವ ಸಂಘಟನೆಯ ಕೊರತೆ. ನಮ್ಮ ಭಾರತದ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮುಖ್ಮಂತ್ರಿಯಾಗಿದ್ದಾಗ ಎರಡು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮರಕ್ಕೆ ನೇಣು ಹಾಕಿದ್ದರು. ಇಂದು ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿಯೂ ಇದೇ ಮುಂದುವರಿದಿದೆ. ಹತ್ರಾಸ್ ನಲ್ಲಿ ಹೊಲಕ್ಕೆ ಹೋಗಿದ್ದ ಹೆಣ್ಣು ಮಗಳನ್ನು ನಾಲ್ಕು ಜನರು ಅತ್ಯಾಚಾರವೆಸಗಿ ನಾಲಿಗೆ ಕತ್ತರಿಸಿ ಕೊಂದಿದ್ದಾರೆ. ಸಾಕ್ಷ್ಯ ನಾಶ ಮಾಡಲು ಸ್ವತಹ ಪೊಲೀಸರೆ ಆ ಹೆಣ್ಣು ಮಗಳನ್ನು ಆಕೆಯ ಮೆನಯವರ ವಶಕ್ಕೆ ಕೊಡದೆ ಮಧ್ಯರಾತ್ರಿ ತಾವೇ ಸುಟ್ಟು ಹಾಕಿದ್ದಾರೆ. ಅದರ ಬೆನ್ನಲ್ಲೆ ಬಲರಾಮ್ ಪುರಲ್ಲಿ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿದ್ದಾರೆ. 2016ರ ರಾಷ್ಟ್ರೀಯ ಆಪರಾಧ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 49.262 ಪ್ರಕರಣಗಳು ದಾಖಲಗಿವೆ. ದೇಶದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದ್ದ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶವು ಮೂರನೇ ಸ್ಥಾನದಲ್ಲಿದೆ. ಈ ದೌರ್ಜನ್ಯಗಳ ವಿರುದ್ಧ ನ್ಯಾಯಕ್ಕಾಗಿ ಸರ್ಕಾರಗಳನ್ನು ಹಕ್ಕೊತ್ತಾಯ ಮಾಡುತಿದ್ದೇವೆ. ಈಗಿನ ಎಲ್ಲಾ ಸರ್ಕಾರಗಳು ಸಂಘ ಪರಿವಾದ ಹಿಡಿತದಲ್ಲಿವೆ. ರಾಷ್ಟ್ರೀಯತೆಯ ಬಗೆ ಮಾತನಾಡುವ ಸಂಘ ಪರಿವಾರವೆ ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ಮಾಡುವಲ್ಲಿ ನಿರತವಾಗಿದೆ. ಈಶಾನ್ಯ ಭಾಗದ ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಅವರನ್ನು ಸಂಘದ ಕಾರ್ಯಕರ್ತರಿಗೆ ಲೈಂಗಿಕ ಭೋಗಕ್ಕೆ ಬಳಸಲಾಗುತ್ತಿದೆ. ಇದನ್ನು ಔಟ್ ಲುಕ್ ನಲ್ಲಿ ವರದಿ ಮಾಡಿದ ಕಾರಣಕ್ಕೆ ಅಂದಿನ ಸಂಪಾದಕರಾದ ಕೃಷ್ಣಪ್ರಸಾದ್ ಅವರನ್ನು ಅಲ್ಲಿಂದ ತೆಗೆಯಲಾಯಿತು. ಇಂತಹ ಉದಾಹರಣೆಗಳು ಸಾಕಷ್ಟಿವೆ. ಇಂತವರು ಸಾಮನ್ಯ ಜನರಿಗೆ ನ್ಯಾಯ ಕೊಡಬಲ್ಲರೆ?

ಇದು ಕೇವಲ ಭಾರತದಲ್ಲಷ್ಟೇ ಅಲ್ಲದೆ ಇತರೆ ದೇಶಗಳಲ್ಲಿಯೂ ಇಂತಹ ಸಮಸ್ಯೆಗಳಿಂದ ಮಹಿಳೆಯರು ಸಾಕಷ್ಟು ಕಂಗಾಲಾಗಿದ್ದಾರೆ. ನೈಜೀರಿಯಾದಲ್ಲಿ 265 ಮಹಿಳೆಯರನ್ನು ವಸತಿ ಶಾಲೆಯಿಂದ ಅಲ್ಲಿಯ ಭಯೋತ್ಪಾದಕರು ಅಪಹರಿಸಿಕೊಂಡು ಹೋಗಿದ್ದರು. ಅದು ಸದ್ದು ಗದ್ದಲವಿಲ್ಲದೆ ನಿಂತು ಹೋಯಿತು. ಇತ್ತ ಸಿರಿಯಾದಲ್ಲಿ ಫೇಸ್ ಬುಕ್ ಖಾತೆ ತೆರೆದ ಹೆಣ್ಣು ಮಗಳನ್ನು ಕಲ್ಲಿನಿಂದ ಹೊಡೆದು ಹಾಕಿದರು. ಅಂತರಾಷ್ಟ್ರಿಯ ಮಟ್ಟದಲ್ಲಿಯಾ ಕೂಡ ಇಂತಹ ಪರಿಸ್ಥಿತಿ ಇದೆ. ಹಾಗೆ ನೋಡಿದರೆ ಕೋಮುವಾದಿಗಳು ಇರುವ ಯಾವ ದೇಶವು ಹೆಣ್ಣಿಗೆ ಸುರಕ್ಷಿತವಲ್ಲ.

…………………………………

ಹಾರೋಹಳ್ಳಿ ರವೀಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರು ಹಾರೋಹಳ್ಳಿಯಲ್ಲಿ ಮುಗಿಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ (ಎಂ.ಎ ಪತ್ರಿಕೋದ್ಯಮ) ಮಾಡಿದರು. ಇವರು ಮೂಲತಹ ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, 2012ರಲ್ಲಿ ಮನದ ಚೆಲುವು ಮುದುಡಿದಾಗ(ಕವನ ಸಂಕಲನ). 2014ರಲ್ಲಿ ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). 2015ರಲ್ಲಿ ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ). 2016 ರಲ್ಲಿ ಎಬಿವಿಪಿ ಭಯೋತ್ಪಾದನೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ.

Be the first to comment on "ಕೋಮುವಾದಿಗಳ ಯಾವ ನೆಲವೂ ಮಹಿಳೆಗೆ ಸುರಕ್ಷಿತವಲ್ಲ"

Leave a comment

Your email address will not be published.


*