ಹಾರೋಹಳ್ಳಿ ರವೀಂದ್ರ (Harohalli Ravindra)
ಈ ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭಗೊಂಡ ದಿನದಿಂದ ಇಲ್ಲಿಯ ತನಕವೂ ಆ ಸಮುದಾಯದ ಮೇಲೆ ಒಂದಿಲ್ಲೊಂದು ಆರೋಪ ಕೇಳಿ ಬರುತ್ತಲೇ ಇದೆ. ಮಹಮ್ಮದ್ ಘಸ್ನಿಯ ದಂಡಯಾತ್ರೆಯ ನಂತರ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಪ್ರಾರಂಭವಾಯಿತು. ಅನಂತರ ಬಾಬಾರ್ ಲಗ್ಗೆ ಇಟ್ಟು ಮೊಘಲರ ಆಳ್ವಿಕೆ ಪ್ರಾರಂಭವಾಯಿತು. ನಿಜಾಮರು, ಬಹುಮನಿ ಸುಲ್ತಾನರು, ಕುತುಬ್ ಷಾಯಿಗಳು ಹಾಗೂ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್, ಹೀಗೆ ಸಾಕಷ್ಟು ಈ ನೆಲದಲ್ಲಿ ಆಳ್ವಿಕೆ ಮಾಡಿದ್ದಾರೆ. ಅದರಲ್ಲಿ ಕೆಲವರ ಆಳ್ವಿಕೆಯಲ್ಲಿ ಸಮಸ್ಯೆಗಳಿರಬಹುದು. ಮತಾಂತರ ಮಾಡಿರಬಹುದು. ಆ ಕಾರಣಕ್ಕೆ ಮುಸಲ್ಮಾನರೆಲ್ಲಾ ದಾಳಿಕೋರರು, ಆಕ್ರಮಣಕಾರಿಗಳು, ಮತಾಂತರಿಗಳು ಎನ್ನುವುದು ತಪ್ಪು. ಶಂಕರಾಚಾರ್ಯ ತನ್ನ ಅವಧಿಯಲ್ಲಿ ಬೌದ್ಧ ಭಿಕ್ಕುಗಳ ತಲೆ ಕಡಿಯಲು ಆದೇಶ ಮಾಡಲಿಲ್ಲವೇ? ಅಷ್ಟೆ ಏಕೆ? ಈ ದೇಶದ ಮೂಲನಿವಾಸಿಗಳನ್ನು ಮನುಧರ್ಮ ಶಾಸ್ತ್ರ ಬರೆಯುವ ಮೂಲಕ ಹಿಂದೂಧರ್ಮದ ಚಾತುರ್ವರ್ಣಕ್ಕೆ ಮತಾಂತರಿಸಿಕೊಳ್ಳಲಿಲ್ಲವೇ? ಆದರೆ ಅವೆಲ್ಲವನ್ನೂ ಹೊರತುಪಡಿಸಿ ಮುಸ್ಲಿಂ ಸಮುದಾಯವನ್ನು ಮತಾಂತರದ ಧರ್ಮ ಎಂದು ಏಕೆ ಕರೆಯುತ್ತಾರೆ? ಮುಸ್ಲಿಂ ರಾಜಾಳ್ವಿಕೆಯನ್ನು ಹಿಂದೂ ಸಂಘಪರಿವಾರ ಯಾಕೆ ಒಪ್ಪುವುದಿಲ್ಲ? ಮೈಸೂರು ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿದ್ದ ಟಿಪ್ಪು ಸುಲ್ತಾನ್ ಅಂತಹ ದೇಶಭಕ್ತ ರಾಜನನ್ನೇಕೆ ದೇಶದ್ರೋಹಿ ಹಣೆಪಟ್ಟಿ ಕಟ್ಟಲಾಗುತ್ತಿದೆ? ಎಂಬ ಅಂಶಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಆ ಮೂಲಕ ನೈಜ ಚರಿತ್ರೆಯನ್ನು ಜನರಿಗೆ ತಿಳಿಸುವ ಅಗತ್ಯವೂ ಕೂಡ ಇದೆ.
ನವಂಬರ್ 10 ಟಿಪ್ಪು ಸುಲ್ತಾನ್ ಜನ್ಮದಿನ. ಆತ ಒಬ್ಬ ರಾಜನಾಗಿಯೂ, ಸಮಾಜ ಸುಧಾರಕನಾಗಿಯೂ, ಸರ್ವಧರ್ಮವನ್ನು ಗೌರವಯುತವಾಗಿ ನಡೆಸಿಕೊಂಡ ವ್ಯಕ್ತಿಯಾಗಿರುವುದರಿಂದ ಸಿದ್ಧರಾಮಯ್ಯ ನೇತೃತ್ವ ಕಾಂಗ್ರೇಸ್ ಸರ್ಕಾರ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು 2015 ರಲ್ಲಿ ಸ್ವತಃ ಸರ್ಕಾರವೇ ಆಚರಿಸಿತು. ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸುದನ್ನು ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರ ವಿರೊಧಿಸಿತು. ಇವರ ವಿರೊಧದ ನಡುವೆಯೂ ಕಳೆದ ವರ್ಷ ಟಿಪ್ಪು ಜಯಂತಿ ನಡೆಯಿತು. ಇಂದು ನವಂಬರ್ 10, 2016 ರಲ್ಲಿಯೂ ಕೂಡ ಇದೇ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದೆ. ಇದನ್ನು ಆಚರಿಸಲು ಬಿಡಬಾರದು ಎಂದು ಭಾರತೀಯ ಜನತಾ ಪಕ್ಷ ಕಾಲು ಕೆರೆದು ನಿಂತಿದೆ. ಯಾಕೆ ಟಿಪ್ಪು ಜಯಂತಿ ಆಚರಿಸಬಾರದು? ನೀವು ಇದನ್ನು ವಿರೋಧಿಸಲು ಕಾರಣವೇನು? ಎಂದು ಕೇಳಿದರೆ. ಟಿಪ್ಪು ಒಬ್ಬ ಮತಾಂಧ, ಆತ ಹಿಂದೂ ದೇವರುಗಳ ವಿಗ್ರಹ ಭಂಜಕ, ಬ್ರಾಹ್ಮಣರನ್ನು ಕೊಂದಿದ್ದಾನೆ ಎಂಬ ಹಲವು ಉದಾಹರಣೆಗಳನ್ನು ನೀಡುತ್ತಾರೆ. ಆದರೆ ಅವರ ಯಾವ ವಾದಗಳಿಗೂ ಸ್ಪಷ್ಟವಾದ ದಾಖಲೆಗಳಿಲ್ಲ. ಆದರೆ ಇವರು ಹೇಳುವ ಹಾಗೆ ಟಿಪ್ಪು ಯಾವ ಮತಾಂಧನೂ ಅಲ್ಲ. ಭಂಜಕನೂ ಅಲ್ಲ ಎಂಬುದನ್ನು ಐತಿಹಾಸಿಕ ನೋಟದ ಮೂಲಕ ಕಂಡುಕೊಳ್ಳಬೇಕಿದೆ.
ಭಾರತದಲ್ಲಿ ಧಾರ್ಮಿಕವಾಗಿ ಬಹುದೊಡ್ಡ ವೈರುಧ್ಯವಿರುವುದು ವಿಗ್ರಹ ಭಂಜನೆಯ ಮೇಲೆ. ಮುಸ್ಲಿಂ ರಾಜರು ವಿಗ್ರಹ ಭಂಜಕರು, ಇವರು ಕಾಲಿಟ್ಟ ಮೇಲೆ ಹಿಂದೂ ದೇವಾಲಯಗಳು ನಾಶವಾದವು. ಹಿಂದೂ ದೇವರ ವಿಗ್ರಹಗಳನ್ನು ಭಂಜಿಸಿದರು ಎಂಬೆಲ್ಲಾ ವಾದಗಳು ಇವೆ. ಹಿಂದೂ ಧರ್ಮವೊಂದೆ ಸ್ವದೇಶಿ ಮತ, ಇತರೇ ಯಹೂದ್ಯ, ಪಾರಸಿ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳು ಹೊರಗಿನಿಂದ ಬಂದವು ಎಂಬಂತೆ ಅವರನ್ನು ಎರಡನೇ ದರ್ಜೆಯ ಪ್ರಜೆಯಾಗಿಸುವ ಹುನ್ನಾರವು ಕೂಡ ಇದರೊಳಗೆ ಅಡಗಿದೆ. ಆ ಕಾರಣಕ್ಕಾಗಿ ಮುಸ್ಲಿಂ ಸಮುದಾಯವನ್ನು ವಿಗ್ರಹ ಭಂಜನೆಯ ನೆಲೆಯಲ್ಲಿ ನಿಲ್ಲಿಸಿ ಅವರನ್ನು ದುಷ್ಟರು ಎಂಬಂತೆ ಬಿಂಬಿಸಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾದರೆ “ಅರಿಜೋನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಿಚರ್ಡ್ ಎಂ. ಈಟನ್ ಅವರು ಅಕ್ಟೋಬರ್ 13,1999 ರಂದು ಆಕ್ಸ್ಫರ್ಡ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡಿಸ್ನಲ್ಲಿ ನೀಡಿದ ಉಪನ್ಯಾಸವೊಂದರ ಪುರ್ಣಪಾಠವನ್ನು ಕನ್ನಡಕ್ಕೆ ಸುರೇಶ್ ಭಟ್ ಬಾಕ್ರಾಬೈಲ್ ಅವರು ಮಂದಿರ ಅಪವಿತ್ರೀಕರಣ ಮತ್ತು ಇಂಡೋ-ಮುಸ್ಲಿಂ ಸಾಮ್ರಾಜ್ಯಗಳು ಎಂಬ ತಲೆಬರಹದಲ್ಲಿ ಅನುವಾದಿಸಿದ್ದಾರೆ”. ಆ ಕೃತಿಯಲ್ಲಿ ವಿಗ್ರಹ ಭಂಜನೆಯ ಕುರಿತಾಗಿ ಸಾಕಷ್ಟು ಮಾಹಿತಿಗಳು ನಮಗೆ ಸಿಗುತ್ತವೆ. ಹಿಂದೂ ರಾಜರುಗಳೆ ಮೊಟ್ಟ ಮೊದಲು ವಿಗ್ರಹ ಭಂಜನೆ ಮಾಡುತ್ತಿದ್ದರು ಎಂಬ ಹಲವಾರು ಅಂಶಗಳು ಅಲ್ಲಿ ವ್ಯಕ್ತವಾಗುತ್ತವೆ.
(Lord Cornwallis and Tipu Sultan’s sons)
ಪಲ್ಲವ ಅರಸ ಮೊದಲನೇ ನರಸಿಂಹವರ್ಮನ್ ಕ್ರಿ.ಶ.642 ರಲ್ಲಿ ಚಾಲುಕ್ಯರ ರಾಜಧಾನಿ ವಾತಾಪಿಯಿಂದ ಗಣೇಶನ ವಿಗ್ರಹವನ್ನು ಕೊಳ್ಳೆ ಹೊಡೆದಿದ್ದ. ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟರ ಅರಸ ಮೂರನೇ ಗೋವಿಂದ ಕಾಂಚೀಪುರಂ ಮೇಲೆ ದಂಡೆತಿ ಹೋಗಿ ಅದನ್ನು ಆಕ್ರಮಿಸಿಕೊಂಡಿದ್ದ. ಹತ್ತನೇ ಶತಮಾನದಲ್ಲಿ ಪ್ರತಿಹಾರ ರಾಜ್ಯ ಹೆರಂಬಪಾಲನು ಕಾಂಗ್ರಾದ ಸಾಹೀ ಅರಸನನ್ನು ಸೋಲಿಸಿ ಅಲ್ಲಿದ್ದ ವಿಷ್ಣು ವೈಕುಂಠನ ಸ್ವರ್ಣ ಬಿಂಬವೊಂದನ್ನು ಅಪಹರಿಸಿದ್ದ. ಹಾಗೇಯೆ 1514 ನೇ ಇಸವಿಯಲ್ಲಿ ವಿಜಯನಗರದ ಶ್ರೀಕೃಷ್ಣ ದೇವರಾಯ ಉದಯಗಿರಿಯನ್ನು ಸೋಲಿಸಿ ಅಲ್ಲಿದ್ದ ಬಾಲಕೃಷ್ಣ ಮೂರ್ತಿಯನ್ನು ಕೊಳ್ಳೆ ಹೊಡೆದಿದ್ದ ಎಂದು ಇತಿಹಾಸ ತಜ್ಞ ರಿಚರ್ಡ್ ಎಂ. ಈಟನ್ ಅವರು ಅಭಿಪ್ರಾಯ ಪಡುತ್ತಾರೆ. ಇವರು ಹೇಳುವ ಪ್ರಕಾರ ಭಾರತದಲ್ಲಿ ದೇವಾಲಯವನ್ನು, ದೇವರ ಮೂರ್ತಿಗಳನ್ನು ಕೊಳ್ಳೆ ಹೊಡೆಯುವುದು, ವಿಗ್ರಹ ಭಂಜನೆ ಮಾಡುವುದು ಪ್ರಾರಂಭಗೊಂಡಿರುವುದೇ ಹಿಂದೂ ರಾಜಮಹಾರಾಜರುಗಳಿಂದ. ಆದರೆ ಕಾಲಾನಂತರದಲ್ಲಿ ಅವುಗಳನ್ನೆಲ್ಲಾ ಮುಸ್ಲಿಂ ರಾಜರ ತಲೆಗೆ ಕಟ್ಟಲಾಗಿದೆ. ಇಂದಿಗೂ ಕೂಡ ಮುಸ್ಲಿಂ ಎಂದರೆ ಭಂಜಕರ ನೆಲೆಯಲ್ಲಿಯೇ ನೋಡುವಂತೆ ಇಡೀ ಸಮಾಜದ ದೃಷ್ಟಿಕೋನವನ್ನು ಹಿಂದುತ್ವ ಬದಲಾಯಿಸುತ್ತಲೇ ಬಂದಿದೆ.
ಪ್ರಸ್ತಕ ಕಾಲದಲ್ಲಿ ನಡೆಯುತ್ತಿರುವ ಟಿಪ್ಪು ಸುಲ್ತಾನ್ ಚರ್ಚೆಯಲ್ಲೂ ಕೂಡ, ಆತ ಒಬ್ಬ ಹಿಂದೂ ವಿರೋಧಿ, ವಿಗ್ರಹ ಭಂಜಕ ಎಂದೇ ಕರೆಯಲಾಗುತ್ತದೆ. ಆ ಮೂಲಕ ಇಡೀ ಸಮಾಜದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಖಳನಾಯಕನನ್ನಾಗಿ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ಟಿಪ್ಪು ಯಾವ ದೇವಾಲಯವನ್ನು ಮತಾಂತರದ ನೆಲೆಯಲ್ಲಿ ಹೊಡೆದಿಲ್ಲ. ಟಿಪ್ಪು ಆಳ್ವಿಕೆಯಲ್ಲಿ ನಿಜಕ್ಕೂ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದವರು ಮರಾಠ ಪೇಶ್ವೆಗಳು, ಆದರೆ ಇತಿಹಾಸದ ಪುಟಗಳಲ್ಲಿ ಅದನ್ನೆಲ್ಲಾ ಮರೆಮಾಚಲಾಗಿದೆ. ಪರಶುರಾಮ ಬಾಹು, ರಘುನಾಥ್ ರಾವ್ ಅವರ ಕುದುರೆ ಪಡೆ ಸಾಕಷ್ಟು ಬ್ರಾಹ್ಮಣ ಪುಜಾರಿಗಳನ್ನು ಉಗ್ರವಾಗಿ ಥಳಿಸಿ, ಅಲ್ಲಿ ಪ್ರತಿಷ್ಠಾಪಿತ ಶಾರದಾಂಬೆಯ ವಿಗ್ರವನ್ನು ಕಿತ್ತು ಹಾಕಿದ್ದರು. ನಂತರ 60 ಲಕ್ಷ ಬೆಲೆ ರೂಪಾಯಿ ಬೆಲೆ ಬಾಳುವ ಚಂದ್ರಮೌಳೇಶ್ವರ ಲಿಂಗ, ರತ್ನ ಗರ್ಭ ಗಣಪತಿ, ಬಂಗಾರ ಮತ್ತು ತಾಮ್ರದ ಪ್ರತಿಮೆಗಳಗಳು ಮುಂತಾದವುಗಳನ್ನು ಈ ಹಿಂದೂ ರಾಜರುಗಳೆ ಅಪಹರಿಸಿದ್ದರು. ಅವರ ಉಪಟಳವನ್ನು ತಡೆದು ಶಾರದಾಂಬೆಗೆ ರಕ್ಷಣೆ ನೀಡಿದ್ದೇ ಟಿಪ್ಪು ಸುಲ್ತಾನ್. ಆದರೆ ಇಂದು ಅದೇ ಟಿಪ್ಪು ಸುಲ್ತಾನ್ ಅವರನ್ನು ಹಿಂದೂ ವಿರೊಧಿ ಎಂದು ಬಿಂಬಿಸಲಾಗುತ್ತಿದೆ. ಟಿಪ್ಪು ಸುಲ್ತಾನ್ ಅವರು ಶ್ರೀರಂಗಪಟ್ಟಣದಲ್ಲಿರುವ ಗಂಗಾಧರೇಶ್ವರ ದೇವಾಲಯದ ಗೋಪುರವನ್ನು ಹೊಡೆಸಿರುವುದು ನಿಜ. ಆದರೆ ಅದಕ್ಕೊಂದು ಬಲವಾದ ಕಾರಣವಿತ್ತು. ಟಿಪ್ಪು ಸುಲ್ತಾನ್ ಅರಮನೆ ಹಿಂಭಾಗದಲ್ಲಿ ಗಂಗಾಧರೇಶ್ವರ ದೇವಾಲಯವಿತ್ತು. ಆ ದೇವಾಲಯದಲ್ಲಿ ನಿತ್ಯವೂ ತ್ರಿಕಾಲ ಪುಜೆ ನಡೆಯುತ್ತಿತ್ತು. ಅಲ್ಲಿನ ಪುಜಾರಿಗಳು ಗೋಪುರದ ಮೇಲತ್ತಿ ಅರಮನೆಯ ಆವರಣದಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಕದ್ದು ನೋಡುತ್ತಿದ್ದರು. ಇದನ್ನು ತಿಳಿದ ಟಿಪ್ಪು ಸುಲ್ತಾನ್ ಪುಜಾರಿಗಳನ್ನು ಕರೆಯಿಸಿ ಎಚ್ಚರಿಕೆ ನೀಡಿದ್ದರು. ಆದರೆ ಪುಜಾರಿಗಳು ಮತ್ತೆ ಅದೇ ಕೆಲಸವನ್ನು ಕದ್ದು ಮುಚ್ಚಿ ಮಾಡುತ್ತಿದ್ದರು. ಇದನ್ನು ತಡೆಯಲು ಗಂಗಾಧರೇಶ್ವರ ದೇವಾಲಯದ ಗೋಪುರವನ್ನು ಕೆಡವಲಾಯಿತೇ ವಿನಹ. ಹಿಂದೂ ವಿರೋಧಿ ನೆಲೆಯಲ್ಲಲ್ಲ. ಆದರೆ ಇಂತಹ ಕಾರಣಗಳನ್ನಿಟ್ಟು ಕೊಂಡು ಹಿಂದೂ ವಿರೊಧಿ ಪಟ್ಟ ಕಟ್ಟುವ ಮೂಲಕ ಕೋಮು ಭಾವನೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಹಾಗೆಯೇ ಟಿಪ್ಪು ಸುಲ್ತಾನ್ ಕಾಲದಲ್ಲಿ ಹನ್ನೆರಡು ಸಾವಿರ ಬ್ರಾಹ್ಮಣರನ್ನು ಕೊಲ್ಲಲಾಗಿದೆ ಎಂಬ ಆರೋಪಗಳು ಇವೆ. 1800 ಮೇ 20 ರಂದು ಬ್ರಿಟೀಷರ “ಡಾ.ಫ್ರಾನ್ಸಿಸ್ ಬುಕಾನ್ನ ಮಾಡಿದ ಸರ್ವೆಯ ಪ್ರಕಾರ ಆ ವೇಳೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಇದ್ದ ಮೆನಗಳು 4163. ಇದರಲ್ಲಿ 5499 ಕುಟುಂಬಗಳು ವಾಸವಾಗಿದ್ದವು. ಇವರ ಒಟ್ಟಾರೆ ಜನಸಂಖ್ಯೆಯೇ 31895. ವಾಸ್ತವ ಸ್ಥಿತಿಯೇ ಹೀಗಿರುವಾಗ 12000 ಬ್ರಾಹ್ಮಣರು ಶ್ರೀರಂಗಪಟ್ಟಣಕ್ಕೆ ಎಲ್ಲಿಂದ ಬಂದರು? ಎಂದು ಟಿಪ್ಪು ಸುಲ್ತಾನ್ ಕಾಲಗ ಪ್ರಸಂಗಗಳು ಎಂಬ ಕೃತಿಯಲ್ಲಿ ತಲಕಾಡು ಚಿಕ್ಕರಂಗೇಗೌಡರು ಅಭಿಪ್ರಾಯ ಪಡುತ್ತಾರೆ”. ಹೀಗೆ ಹಲವಾರು ಅವಾಸ್ತವಿಕ ಅಂಶಗಳನ್ನು ಏರಲಾಗಿದೆ. ಅವುಗಳನ್ನು ಟಿಪ್ಪು ತಲೆಗೆ ಕಟ್ಟುವ ಮೂಲಕ ಹಿಂದೂ ವಿರೋಧಿ ಪಟ್ಟ ಕಟ್ಟಲಾಗಿದೆ.
ಟಿಪ್ಪು ಸುಲ್ತಾನ್ ಧಾರ್ಮಿಕ ಸಹಿಷ್ಣು ವ್ಯಕ್ತಿಯೂ ಹೌದು. ಸಾಮಾಜಿಕ ಸುಧಾರಕರ ಹೌದು. ರಾಜ್ಯದ ಜನತೆಯನ್ನು ಸುಭಿಕ್ಷವಾಗಿ ನಡೆಸಿಕೊಂಡಿದ್ದು ಟಿಪ್ಪು ಸುಲ್ತಾನ್ ಮಾತ್ರ. ಕೇರಳಾದ ಮಲಬಾರ್ ಪ್ರದೇಶವನ್ನು ಟಿಪ್ಪು ಸುಲ್ತಾನ್ ಗೆದ್ದುಕೊಂಡ ಮೇಲೆ ಅಲ್ಲಿನ ದಲಿತ ಹೆಣ್ಣು ಮಕ್ಕಳ ಮಾನ ಉಳಿಸಿದವರು. ಮಲಬಾರಿನಲ್ಲಿ ನಂಬೋದರಿ ಬ್ರಾಹ್ಮಣರು ದಲಿತ ಹೆಣ್ಣು ಮಕ್ಕಳು ಎದೆಯ ಭಾಗಕ್ಕೆ ಬಟ್ಟೆ ಹಾಕದೇ ಓಡಾಡಬೇಕೆಂದು ಸಂಪ್ರದಾಯ ವಿಧಿಸಿದ್ದರು. ಒಂದು ವೇಳೆ ಹಾಕಬೇಕಾದರೆ ಅದಕ್ಕೆ ಮೊಲೆ ತೆರಿಗೆ ವಿಧಿಸುತ್ತಿದ್ದರು. ತೆರಿಗೆ ಕೊಡಲಾಗದ ಕಾರಣ ಎಲ್ಲಾ ದಲಿತ ಹೆಣ್ಣು ಮಕ್ಕಳು ಎದೆಯ ಭಾಗಕ್ಕೆ ಬಟ್ಟೆ ಹಾಕದೇ ಓಡಾಡುತ್ತಿದ್ದರು. ಇದನ್ನು ಅರಿತ ಟಿಪ್ಪು ಸುಲ್ತಾನ್ ಅವರಿಗೆ ಬಟ್ಟೆ ಹಾಕಲು ಆದೇಶ ಮಾಡಿ, ಸ್ವತಹ ಆಸ್ಥಾನದಿಂದಲೇ ಅವರಿಗೆ ಬಟ್ಟೆ ಪುರೈಸುವ ಮೂಲಕ ದಲಿತ ಹೆಣ್ಣು ಮಕ್ಕಳಿಗೆ ಗೌರವಯುತ ಬದುಕು ನೀಡಿದವರು. ಇಂತಹ ಸಮಾಜ ಸುಧಾರಕನನ್ನು ಇಂದಿಗೂ ಕೂಡ ದೇಶ ವಿರೋಧಿ, ದೇಶದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿದೆ.
ಟಿಪ್ಪು ಸುಲ್ತಾನ್ ನಿಜಕ್ಕೂ ದೇಶದ ಹೆಮ್ಮೆಯ ಪ್ರತೀಕ, ದೇಶಕ್ಕಾಗಿ, ದೇಶದ ಜನತೆಗಾಗಿ ಸಾಕಷ್ಟು ಕೆಲಸ ಮಾಡಿದವರು. “ಬ್ರಿಟೀಷರ ಒಪ್ಪಂದದಂತೆ ಹಣ ಕೊಡಿ ಇಲ್ಲವೇ ರಾಜ್ಯ ಬಿಡಿ ಎಂದಾಗ. ನಿಮ್ಮ ಹಣವನ್ನು ನಿಮ್ಮ ಮುಖದ ಮೇಲೆ ಬಿಸಾಡುತ್ತೇನೆ. ಅಲ್ಲಿಯವರೆವಿಗೂ ನನ್ನೆರಡು ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನನ್ನ ರಾಜ್ಯದ ಒಳಗಡೆ ನೀವು ಕಾಲಿಡಕೂಡದು ಎಂದು ಘರ್ಜಿಸಿದರು. ಇಂತಹ ದೇಶಪ್ರೇಮವನ್ನು ಹಿಂದೂ ರಾಜರಲ್ಲಿ ನಾವು ಯಾರಲ್ಲಿಯೂ ನೋಡಿಲ್ಲ”. ಹಿಂದೂ ರಾಜರು ತಮ್ಮ ತಮ್ಮ ಸ್ವಾರ್ಥಕ್ಕೆ ರಾಜ್ಯಗಳನ್ನು ಆಳುಮಾಡಿದವರು. ಆದರೆ ಟಿಪ್ಪು ಸುಲ್ತಾನ್ ಒಬ್ಬರೇ ಬ್ರಿಟೀಷರನ್ನು ಮೆಟ್ಟಿ ನಿಂತಿದ್ದು. ಆದರೆ ಅಂತಹ ಮಹೋನ್ನತ ದೇಶಪ್ರೇಮಿಯನ್ನು ದೇಶದ್ರೋಹಿ ಎಂದು ಬಿಂಬಿಸುವ ಈ ಹಿಂದೂ ಮೂಲಭೂತವಾದಿಗಳಿಗೆ ನಿಜಕ್ಕೂ ಮತಿ ಭ್ರಮಣೆಯೋ? ಅಥವಾ ಮತ ಭ್ರಮಣೆಯೂ ತಿಳಿಯುತ್ತಿಲ್ಲ.
ಬ್ರಿಟೀಷರು ಶ್ರೀರಂಗಪಟ್ಟಣ ಮುತ್ತಿಗೆ ಹಾಕಲು 1799ರ ಫೆಬ್ರವರಿ 14 ರಂದು ನಿಗಧಿ ಮಾಡಿಕೊಂಡಿದ್ದರು. ಆದರೆ ಈ ವಿಷಯ ಟಿಪ್ಪು ಸುಲ್ತಾನ್ ಆಪ್ತರಾದ ಮೀರ್ ಸಾಧಿಕ್ ಮತ್ತು ದಿವಾನ್ ಪುರ್ಣಯ್ಯನಿಗೆ ಮುಂಚಿತವಾಗಿಯೆ ವಿಷಯ ತಿಳಿದಿತ್ತು. ಆದರೂ ಕೂಡ ಇವರು ಟಿಪ್ಪು ಸುಲ್ತಾನ್ಗೆ ತಿಳಿಸದೇ ವಂಚಿಸಿದರು. ಫಿರಂಗಿಯ ಒಳಗೆ ಗುಂಡುಗಳ ಬದಲು ಸಗಣಿ ಉಂಡೆಗಳನ್ನು ತುಂಬಿಸುವ ಮೂಲಕ ಟಿಪ್ಪು ಸುಲ್ತಾನ್ ರಾಜ್ಯಕ್ಕೆ ಮೊಸ ಮಾಡಿ ಬ್ರಿಟೀಷರ ಬಳಿ ಹಣ ಪಡೆದು ಮೀರ್ ಸಾಧಿಕ್ ಮತ್ತು ದಿವಾನ್ ಪುರ್ಣಯ್ಯ ನೆರವಾದರು. ಯುದ್ದವೆಲ್ಲಾ ಮುಗಿದ ಮೇಲೆ ಬ್ರಿಟೀಷರ ಜತೆ ಸೇರಿಕೊಂಡು ದಿವಾನ್ ಪುರ್ಣಯ್ಯ ಮತ್ತು ಮೀರ್ ಸಾಧಿಕ್ ಇಬ್ಬರು ಸಂಪತ್ತನ್ನು ಹಂಚಿಕೊಂಡರು. ಆ ಮೂಲಕ ಬ್ರಿಟೀಷ್ ಆಳ್ವಿಕೆಕೆ ಪರೋಕ್ಷ ಸಹಕಾರಿಯಾದರು. ನಿಜಕ್ಕೂ ಇಲ್ಲಿ ದಿವಾನ್ ಪುರ್ಣಯ್ಯ ದೇಶದ್ರೋಹಿಯೇ ಹೊರತು. ಟಿಪ್ಪು ಸುಲ್ತಾನ್ ಅಲ್ಲ. ಟಿಪ್ಪು ಸುಲ್ತಾನ್ ಅನ್ನು ದೇಶದ್ರೋಹಿ, ಮತಾಂಧ, ಭಂಜಕ ಎಂದು ಸಮಾಜದಲ್ಲಿ ಸುಳ್ಳು ಸಂದೇಶ ಸಾರು ಮೂಲಕ ಭಾರತೀಯ ಜನತಾ ಪಕ್ಷ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಆ ಮೂಲಕ ಅಲ್ಪಸಂಖ್ಯಾತ ಸಮುದಾಯದ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಮಾಡುತ್ತಿದೆ.
~~~
ಹಾರೋಹಳ್ಳಿ ರವೀಂದ್ರ: ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ (ಎಂ.ಎ ಪತ್ರಿಕೋದ್ಯಮ). ಇವರು ಮೂಲತಹ ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, 2012ರಲ್ಲಿ ಮನದ ಚೆಲುವು ಮುದುಡಿದಾಗ(ಕವನ ಸಂಕಲನ). 2014ರಲ್ಲಿ ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). 2015ರಲ್ಲಿ ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ). 2016 ರಲ್ಲಿ ಎಬಿವಿಪಿ ಭಯೋತ್ಪಾದನೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ. ಇವರ ಲೇಖನದ ಅನುವಾದಗಳು ರೌಂಡ್ ಟೇಬಲ್ ಇಂಡಿಯಾ ಮತ್ತು ಮುಸ್ಲಿಂ ಮಿರರ್ ನಲ್ಲಿ ಪ್ರಕಟವಾಗಿದೆ.
Be the first to comment on "ಟಿಪ್ಪು ಮೇಲಿನ ಆರೋಪ ಮತ್ತು ರಾಜಕೀಯ ಅಜೆಂಡಾ"