ರಘೋತ್ತಮ ಹೊಬ (Raghottama Hoba)
ಕೆಲದಿನಗಳ ಹಿಂದೆ”ಬುದ್ಧಿಸಂನ ಸಾಕಷ್ಟು ಅಂಶಗಳು ಭಗವದ್ಗೀತೆಯಲ್ಲಿವೆ”ಎಂಬ ದೇವನೂರ ಮಹಾದೇವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿಕ್ರಿಯೆಯಲ್ಲಿ’ಬುದ್ಧನ ನಂತರ ಕೃಷ್ಣ?’ ಎಂದು ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ) ಓದುಗರೊಬ್ಬರು ಕೃಷ್ಣನ ಕಾಲಾನಂತರ ಬುದ್ಧ ಜನಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ವಾಸ್ತವ? ಈ ಹಿನ್ನೆಲೆಯಲ್ಲಿ ದೇವನೂರರ ಈ ಹೇಳಿಕೆಗೆ ಪೂರಕ ಅಂಶಗಳು ಅಂಬೇಡ್ಕರರ ಬರಹದಲ್ಲಿ ದೊರಕುತ್ತವೆ. ಅಂಬೇಡ್ಕರರು ಹೇಳುತ್ತಾರೆ “ಮಹಾಭಾರತದ ಮೂಲ ಸಂಪಾದಿತ ಕೃತಿಯು ‘ಜಯ’ ಎಂಬುದು ಮತ್ತು ಅದನ್ನು ಸಂಯೋಜಿಸಿದವರು ವ್ಯಾಸ. ಅದರ ಎರಡನೇ ಆವೃತ್ತಿಯ ಸಂಪಾದಕ ವೈಶಂಪಾಯನ ಮತ್ತು ಆಗ ಅದರ ಹೆಸರು ‘ಭಾರತ’ ಎಂದು ಬದಲಾಯಿತು. ಇನ್ನು ಅದರ ಮೂರನೇ ಆವೃತ್ತಿಯ ಸಂಪಾದಕ ಸೌತಿ ಮತ್ತು ಸೌತಿಯ ಈ ಆವೃತ್ತಿಯ ನಂತರ ಅದು ‘ಮಹಾಭಾರತ’ವಾಯಿತು’. ಇನ್ನು ಅದರ ಕಾಲದ ಬಗ್ಗೆ ಹೇಳುವುದಾದರೆ ಅಂಬೇಡ್ಕರರು ಹೇಳುತ್ತಾರೆ ‘ನಿಜ, ಕೌರವರು ಮತ್ತು ಪಾಂಡವರ ನಡುವಿನ ಯುದ್ಧ ಬಹಳ ಪ್ರಾಚೀನವಾದುದು ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಆ ಯುದ್ಧ ಹಳೆಯದು ಎಂದಾಕ್ಷಣ ವ್ಯಾಸರ ಈ ರಚನೆಯು(ಜಯ) ಕೌರವ-ಪಾಂಡವರ ಆ ಯುದ್ಧದಷ್ಟೆ ಹಳೆಯದು ಅಥವಾ ಆ ಘಟನೆಯ ಸಮಕಾಲೀನದ್ದು ಎಂದರ್ಥವಲ್ಲ. ಈ ಹಿನ್ನೆಲೆಯಲ್ಲಿ ಪ್ರೊ.ಹಾಪ್ಕಿನ್ಸ್ರವರು ಹೇಳುವುದೇನೆಂದರೆ ‘ಇಡೀ ಮಹಾಭಾರತದ ಕಾಲ ಸಾಮಾನ್ಯವಾಗಿ ಹೇಳುವುದಾದರೆ, ಕ್ರಿ.ಶ.200 ರಿಂದ ಕ್ರಿ.ಶ400ರ ನಡುವಿನದ್ದು’ ಎಂಬುದು.
ಮುಂದುವರಿದು ಅಂಬೇಡ್ಕರರು ಹೇಳುತ್ತಾರೆ “ಮಹಾಭಾರತವು ಹೂಣರ ಉಲ್ಲೇಖವನ್ನು ಒಳಗೊಂಡಿದೆ. ಅಂದಹಾಗೆ ಹೂಣರ ವಿರುದ್ಧ ಹೋರಾಡಿ ಅವರನ್ನು ಕ್ರಿ.ಶ.455ರಲ್ಲಿ ಸೋಲಿಸಿದವನು ಗುಪ್ತರ ದೊರೆ ಸ್ಕಂಧಗುಪ್ತ. ಇದರರ್ಥ ಮಹಾಭಾರತ ಸ್ಕಂಧಗುಪ್ತ ಅಥವಾ ಅವನ ನಂತರದ ಕಾಲದಲ್ಲಿ ರಚನೆಯಾಗಿದೆ” ಎಂಬುದು. ಇನ್ನು ಮಹಾಭಾರತದ ವಾನಪರ್ವದ 190ನೇ ಅಧ್ಯಾಯದಲ್ಲಿ ಮ್ಲೇಚ್ಛರು ಅಥವಾ ಮುಸಲ್ಮಾನರು ಎಂಬ ಪದ ಉಲ್ಲೇಖವಾಗಿರುವುದನ್ನು ಹೇಳುವ ಅಂಬೇಡ್ಕರರು ಅಲ್ಲಿ ಕಂಡುಬರುವ ‘ಇಡೀ ಪ್ರಪಂಚವೇ ಇಸ್ಲಾಮೀಕರಣವಾಗಲಿದೆ. ಎಲ್ಲ ಯಜ್ಞ, ಯಾಗ, ಆಚರಣೆಗಳು, ಧಾರ್ಮಿಕ ಕ್ರಿಯೆಗಳು ಕೊನೆಗೊಳ್ಳಲಿವೆ’ ಎಂಬ ವಾಕ್ಯವನ್ನು ದಾಖಲಿಸುತ್ತಾ (ಅಂಬೇಡ್ಕರರ ಬರಹಗಳು, ಇಂಗ್ಲೀಷ್.ಸಂ.3, ಪು.242) ‘ಇದರ ವಿಶ್ಲೇಷಣೆಯೇನೆಂದರೆ ಒಟ್ಟಾರೆ ಮಹಾಭಾರತ ಭಾರತದ ಮೇಲೆ ಮುಸ್ಲೀಮರ ಧಾಳಿಯ ನಂತರ ರಚನೆಗೊಂಡಿದೆ’ ಎನ್ನುತ್ತಾರೆ. ಇನ್ನು ವಾನಪರ್ವದ ಅದೇ ಅಧ್ಯಾಯದ 65, 66, 67 ನೇ ಶ್ಲೋಕಗಳಲ್ಲಿ ಕಂಡುಬರುವ “ಸಮಾಜ ಅಲ್ಲೋಲಕಲ್ಲೋಲಗೊಳ್ಳುತ್ತದೆ. ಜನರು ‘ಯೆಡುಕ’ಗಳನ್ನು ಪೂಜಿಸಲಾರಂಭಿಸುತ್ತಾರೆ ಮತ್ತು ಅವರು ದೇವರುಗಳನ್ನು ಬಹಿಷ್ಕರಿಸುತ್ತಾರೆ. ಶೂದ್ರರು ದ್ವಿಜರ ಸೇವೆ ಮಾಡುವುದಿಲ್ಲ. ಇಡೀ ಪ್ರಪಂಚವೇ ‘ಯೆಡುಕ’ಗಳಿಂದ ಆವರಿಸಲ್ಪಡುತ್ತದೆ. ಯುಗವೇ ಅಂತ್ಯವಾಗಲಿದೆ” ಎಂಬ ಶ್ಲೋಕವನ್ನು ಉಲ್ಲೇಖಿಸುವ ಅಂಬೇಡ್ಕರರು, ಈ ಶ್ಲೋಕದಲ್ಲಿ ಕಂಡುಬರುವ ‘ಯೆಡುಕಾ’ ಪದದ ಅರ್ಥವನ್ನು ಅಮರಕೋಶದಲ್ಲಿ ಮಹೇಶ್ವರಭಟ್ಟರು ‘ಮರದಕಟ್ಟಿಗೆಗಳನ್ನು ಒಳಗೊಂಡ ಬೃಹತ್ ಗೋಡೆ’ ಎಂದಿರುವುದನ್ನು ದಾಖಲಿಸುತ್ತಾ, ಕೌಸಾಂಬಿ ಎಂಬುವವರು ಈ ‘ಯೆಡುಕಾ’ ಎಂದರೆ ಮುಸ್ಲೀಮರು ಪೂಜಿಸುವ ‘ಈದ್ಗಾ’ ಎಂದಿರುವುದನ್ನು ಉಲ್ಲೇಖಿಸುವ ಅಂಬೇಡ್ಕರರು ‘ ಈ ಪ್ರಕಾರ ಮುಸಲ್ಮಾನರ ಧಾಳಿಯ ನಂತರ, ಅದರಲ್ಲೂ ಮಹಮ್ಮದ್ ಘಜ್ನಿ ಮತ್ತು ಮಹಮ್ಮದ್ ಘೋರಿಯ ಧಾಳಿಗಳ ನಂತರದ ಕಾಲಕ್ಕೆ ಮಹಾಭಾರತ ರಚನೆಯಾಯಿತು ಅಥವಾ ಕ್ರಿ.ಶ.1200 ರವರೆಗೂ ಮಹಾಭಾರತದ ರಚನೆ ಮುಂದುವರಿದಿತ್ತು” ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗುವುದೆಂದರೆ ಗುಪ್ತರ ಕಾಲ ಅಥವಾ ಮುಸ್ಲೀಮರ ಕಾಲ ಬುದ್ಧನ ನಂತರದ್ದು ಮತ್ತು ಶ್ರೀಕೃಷ್ಣ ಕೂಡ ಬುದ್ಧನ ನಂತರದವನು ಎಂಬುದು.
ಇನ್ನು ಸಾಕ್ಷಾತ್ ಶ್ರೀಕೃಷ್ಣನೇ ಹೇಳಿದ್ದಾನೆನ್ನಲಾದ ಭಗವದ್ಗೀತೆಯ ರಚನೆಯ ಬಗ್ಗೆಯೂ ಅಂಬೇಡ್ಕರರು ವಾಸ್ತವಾಂಶ ದಾಖಲಿಸಿದ್ದಾರೆ. ಪ್ರೊ. ಗಾರ್ಬೆ ಎಂಬುವವರ ಹೇಳಿಕೆ ಉಲ್ಲೇಖಿಸುವ ಅಂಬೇಡ್ಕರರು “ಭಗವದ್ಗೀತೆ ಕ್ರಿ.ಶ.200 ಮತ್ತು ಕ್ರಿ.ಶ.400ರ ನಡುವೆ ರಚನೆಯಾಗಿದೆ” ಎಂದಿರುವುದನ್ನು ಉಲ್ಲೇಖಿಸುತ್ತಾರೆ. ಮುಂದುವರಿದು ಪ್ರೊ.ಕೌಸಾಂಬಿಯವರು ಹೇಳಿರುವ “ಗುಪ್ತರ ರಾಜ ಬಲಾದಿತ್ಯನ ಕಾಲದಲ್ಲಿ ಗೀತೆ ರಚನೆಯಾಯಿತು ಮತ್ತು ಬಲಾದಿತ್ಯ ಸಿಂಹಾಸನಾವರೋಹಣಗೊಂಡದ್ದು ಕ್ರಿ.ಶ.467” ಎಂಬ ಈ ಹೇಳಿಕೆಯನ್ನೂ ಅಂಬೇಡ್ಕರರು ಬೆಳಕಿಗೆ ತರುತ್ತಾರೆ. ಅಂದಹಾಗೆ ತಮ್ಮ ಈ ಹೇಳಿಕೆಗೆ ಕೌಸಾಂಬಿಯವರು ಎರಡು ಆಧಾರಗಳನ್ನು ನೀಡುತ್ತಾರೆ. ಅದರಲ್ಲಿ ಮುಖ್ಯವಾದದ್ದು ವಸುಬಂಧು ಎಂಬುವವನದ್ದು.
ವಸುಬಂಧು ವಿಜ್ಞಾನವಾದದ ಪ್ರವರ್ತಕ. ಬ್ರಹ್ಮಸೂತ್ರಭಾಷ್ಯದಲ್ಲಿ ಈ ವಿಜ್ಞಾನವಾದದ ಬಗ್ಗೆ ಟೀಕೆ ಇದೆ ಮತ್ತು ಗೀತೆಯು ವಿಜ್ಞಾನವಾದವನ್ನು ಟೀಕಿಸಲು ಈ ಬ್ರಹ್ಮಸೂತ್ರಭಾಷ್ಯವನ್ನು ಉಲ್ಲೇಖಿಸುತ್ತದೆ! ಇದರರ್ಥ ಗೀತೆ ವಸುಬಂಧುವಿನ ನಂತರ ಬಂದದ್ದು ಮತ್ತು ಬ್ರಹ್ಮಸೂತ್ರಭಾಷ್ಯದ ನಂತರ ಬರೆಯಲ್ಪಟ್ಟಿದ್ದು ಎಂಬುದು. ಅಂದಹಾಗೆ ಇದಕ್ಕೆ ಸಾಕ್ಷ್ಯಾತ್ಮಕವಾಗಿ ಸಿಗುವುದೇನೆಂದರೆ ಇದೇ ವಸುಬಂಧು ಗುಪ್ತರ ರಾಜ ಬಲಾದಿತ್ಯನ ಗುರು(ಬೋಧಕ) ಎಂಬುದು. ಒಟ್ಟಾರೆ ಇದರ ಸಾರವಿಷ್ಟೆ, ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಗುಪ್ತರ ಕಾಲದಲ್ಲಿ ರಚನೆಯಾದದ್ದು ಎಂಬುದು. (ಕ್ರಿ.ಶ.467). ಗುಪ್ತರ ಕಾಲ ಎಲ್ಲರಿಗೂ ತಿಳಿದಂತೆ ಬುದ್ಧನ ನಂತರದ್ದು. ಈ ಹಿನ್ನೆಲೆಯಲ್ಲಿ ಗುಪ್ತರ ಈ ಕಾಲದಲ್ಲಿ ರಚಿಸಲ್ಪಟ್ಟಿರುವ ಮಹಾಭಾರತ ಮತ್ತು ಭಗವದ್ಗೀತೆ ಗಳಲ್ಲಿ ಕಾಣಸಿಗುವ ಶ್ರೀಕೃಷ್ಣ ಬುದ್ಧನ ನಂತರದವನು, ಅದರಲ್ಲೂ ಸಹಸ್ರ ವ್ಯತ್ಯಾಸದ ನಂತರದವನು ಎಂಬುದಿಲ್ಲಿ ಸ್ಪಷ್ಟ.
~~~
ರಘೋತ್ತಮ ಹೊಬ ಪರಿಚಯ
ಪ್ರಕಟಿತ ಕೃತಿಗಳು:1. ಗಾಂಧಿ ಹೊರಾಟ ಯಾರ ವಿರುದ್ಧ? (2010) 2. ಅಂಬೇಡ್ಕರ್ ಎಂಬ ಕರಗದ ಬಂಡೆ (2012) 3. ಎದೆಗೆ ಬಿದ್ದ ಗಾಂಧಿ (2014).
ಬರವಣಿಗೆಯ ಇತಿಹಾಸ: ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಆಂದೋಲನ ದಿನಪತ್ರಿಕೆಗಳು, ಸಂವಾದ, ಭೀಮವಾದ, ಪ್ರಬುದ್ಧಭಾರತ ಮಾಸ ಪತ್ರಿಕೆಗಳು, ಗೌರಿಲಂಕೇಶ್, ಅಗ್ನಿ ವಾರ ಪತ್ರಿಕೆಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ನಿರಂತರ ಲೇಖನಗಳ ಪ್ರಕಟ.
ಪ್ರಶಸ್ತಿಗಳು: ‘ಅಂಬೇಡ್ಕರ್ ಎಂಬ ಕರಗದ ಬಂಡೆ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ’ (2013).
Be the first to comment on "ಬುದ್ಧನ ನಂತರದವನೇ ಶ್ರೀಕೃಷ್ಣ"