ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧

ಅನು ರಾಮದಾಸ್

ಇದು ‘ಸ್ತ್ರೀವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ

ಮೊದಲಿಗೆ , ಧನ್ಯವಾದಗಳು. ನಿಮ್ಮೆಲ್ಲರನ್ನೂ ನೋಡಿ ತುಂಬಾ ಖುಷಿಯಾಗುತ್ತಿದೆ . ಈ ಅವಕಾಶಕ್ಕಾಗಿ ಧನ್ಯವಾದಗಳು. ಇಂತಹ ಸಮಯದಲ್ಲಿ ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ನನಗೆ ಕಷ್ಟವೆನಿಸುತ್ತಿದೆ. ನಾನು ಜಾತಿಯನ್ನು ಅರ್ಥಮಾಡಿಕೊಳ್ಳಲು ಬಯಸಿದಾಗಿನಿಂದ, ಪ್ರತಿ ಬಾರಿ ಪ್ರಶ್ನೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾಗ, ಅದು ಸ್ತ್ರೀವಾದದೊಂದಿಗೆ ಘರ್ಷಣೆಯಾಗುತ್ತಿದೆ ಎಂದು ಯಾರಾದರೂ ಹೇಳುವ ಮೂಲಕ ತಳ್ಳಿ ಹಾಕುತ್ತಿದ್ದರು .ಅದು ಕೇಳುವ ರೀತಿಯಲ್ಲ, ಏಕೆಂದರೆ ಇದು ಸರಿಯಾದ ಪ್ರಶ್ನೆಯಲ್ಲ. ನೀವು ಮಹಿಳೆಯನ್ನು ಕೇಂದ್ರೀಕರಿಸಿ ಕೇಳುವ ಪ್ರಶ್ನೆ ಮಾತ್ರ ಸರಿ. ಹಾಗಾಗಿ ನನಗೆ ಸ್ತ್ರೀವಾದ ಹುಟ್ಟಿ ಹಾಕಿದ ಅಡೆತಡೆಗಳನ್ನು ದಾಟದೆ ಜಾತಿಯ ಬಗ್ಗೆ ಸಂವಾದವನ್ನು ಪ್ರಾರಂಭಿಸಲು ಸಾಧ್ಯವಾಗಲೇ ಇಲ್ಲ. ಮತ್ತು ಅದು ಸ್ವತಃ ತೋರಿಸಿಕೊಂಡ ರೀತಿ, ಪ್ರತಿ ಹಂತದಲ್ಲೂ ಹೆಚ್ಚು ಸಂಕೀರ್ಣವಾಗತೊಡಗಿತು ಮೊದಲು ನಾನು ಪದಗಳನ್ನು ತಿಳಿದು, ನಂತರ ಆ ಪದಗಳು ಎಲ್ಲಿಂದ ಬಂದವು, ಮೂಲಗಳು ಯಾವುವು ಮತ್ತು ಜಾತಿಯನ್ನು ಅರ್ಥ ಮಾಡಿಕೊಳ್ಳಲು ಈ ಭಾಷೆಯ ಅಗತ್ಯತೆ ಇಷ್ಟೊಂದು ಏಕೆ ಎಂದು ನಾನು ತಿಳಿದುಕೊಳ್ಳಬೇಕಾಗಿತ್ತು ಹಾಗು ಇದಕ್ಕೂ ಮೊದಲು ನನಗೆ ಸ್ತ್ರೀವಾದ ಏಕೆ ತಿಳಿದಿರಲಿಲ್ಲ?

 

ಸ್ವಲ್ಪ ನನ್ನ ಹಿನ್ನೆಲೆ ಹೇಳ್ತೀನಿ : ನಾನು ಬೆಳೆದದ್ದು ಕಾಸ್ಮೋಪಾಲಿಟನ್ ಬೆಂಗಳೂರು ನಗರದಲ್ಲಿ. ಹೆಚ್ಚಾಗಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ, ಹುಡುಗಿಯರ ಶಾಲೆ ಕಾಲೇಜಿನಲ್ಲಿ ಓದಿದ್ದೇನೆ. ನಂತರ ಎಂಎಸ್ಸಿ, .. ಈ ಸಮಯದಲ್ಲಿ, ಹುಡುಗಿಯಾಗಿ, ಹದಿಹರೆಯದವಳಾಗಿ, ಯುವತಿಯಾಗಿ, ಜೀವನದಲ್ಲಿ ಸಾಗಲು ನನಗೆ ಸ್ತ್ರೀವಾದ ಎಂಬ ಪದದ ಅಗತ್ಯವಿರಲಿಲ್ಲ. ನಾನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸಿದ ನಂತರವೇ ವಿಷಯಗಳನ್ನು ಹೇಗೆ ಬಗೆಹರಿಸಲು ಮತ್ತು ಗುರುತಿಸಲು ಇದು ಬಹುತೇಕ ಮುಖ್ಯವಾಗುತ್ತದೆ; ಎಲ್ಲವೂ ಸ್ತ್ರೀವಾದದ ಮೂಲಕವೇ ಆಗಬೇಕು. ಆದ್ದರಿಂದ, ಸ್ತ್ರೀವಾದವನ್ನು ಓದಲು ನಾನು ನಿಜವಾಗಿಯೂ ಪ್ರಯತ್ನ ಮಾಡದ ಹೊರತು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಈ ವಿಷಯ ಏನೆಂದು ತಿಳಿಯಲು ಒತ್ತಾಯದಿಂದಲೇ ಪರಿಶ್ರಮಿಸಿದೆ. ನಾನು ವಿಜ್ಞಾನದ ಹಿನ್ನೆಲೆಯಿಂದ ಬಂದವಳಾಗಿದ್ದರಿಂದ, ನನಗೆ ಸಾಮಾನ್ಯ ಜ್ಞಾನ ಇಲ್ಲವೇನೋ ಅಂದುಕೊಂಡಿದ್ದೆ. ಪ್ರತಿಯೊಬ್ಬರಿಗೂ ಸ್ತ್ರೀವಾದ ಎಂದರೇನು ಎಂದು ತಿಳಿದಿದೆ ಆದರೆ ನನಗೆ ಮಾತ್ರ ತಿಳಿದಿಲ್ಲ . ಹಾಗಾಗಿ ನಾನು ಹೆಚ್ಚುವರಿ ಪ್ರಯತ್ನ ಮಾಡಿ ಓದಿ ಇತರರು ಏನು ಹೇಳುತ್ತಿದ್ದಾರೆ, ನನ್ನ ಗೆಳೆಯರು ಏನು ಹೇಳುತ್ತಿದ್ದಾರೆ ಎಂಬ ತಿಳುವಳಿಕೆ ಬಂದ ನಂತರ ಜಾತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ನನಗೆ ಸಾಧ್ಯವಾಗುತ್ತದೆ ಎಂದುಕೊಂಡಿದ್ದೆ.

ಆದ್ದರಿಂದ, ನಾನು ವಿಶ್ವವಿದ್ಯಾಲಯದಲ್ಲಿದ್ದಾಗ ಗ್ರಂಥಾಲಯದ ಮಾನವ ಶಾಸ್ತ್ರ ವಿಭಾಗಕ್ಕೆ ಹೋಗುತ್ತಿದ್ದೆ. ನನಗೆ ಅಲ್ಲಿ ನಿಜವಾದ ಕೆಲಸವಿರಲಿಲ್ಲ. ನಾನು ವಿಜ್ಞಾನ ವಿದ್ಯಾರ್ಥಿಯಾಗಿದ್ದೆ ಹಾಗು ಸಾಕಷ್ಟು ನನ್ನದೇ ಕೆಲಸವಿತ್ತು.. ಆದರೆ ಸ್ತ್ರೀವಾದ ಎಂಬ ಈ ಪದವನ್ನು ಅರ್ಥಮಾಡಿಕೊಳ್ಳಲು ನಾನು HCU, ಪುಣೆ ವಿಶ್ವವಿದ್ಯಾಲಯ, ಮತ್ತು ನಂತರ ಹದಿಮೂರು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದ ಕಾರ್ನೆಲ್ ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಈ ವಿಷಯಕ್ಕಾಗಿ ಹುಡುಕುತ್ತಿದ್ದೆ. ಬಿಡುವಿನ ಪ್ರತಿ ನಿಮಿಷವೂ ಸ್ತ್ರೀವಾದಿ ಸಾಹಿತ್ಯ ವಿಭಾಗದಲ್ಲಿ ಕಳೆಯುತ್ತಿದ್ದೆ. ಕಾರ್ನೆಲ್ ವಿಶ್ವವಿದ್ಯಾನಿಲಯಕ್ಕೆ ಹಣದ ಕೊರತೆಯಿಲ್ಲ. ಹಲವಾರು ಗ್ರಂಥಾಲಯಗಳಿವೆ : ದೊಡ್ಡಕಪಾಟುಗಳ ತುಂಬಾ ಪುಸ್ತಕಗಳು, ಬಹಳಷ್ಟು ಸ್ತ್ರೀವಾದಿ ಸಾಹಿತ್ಯದ ಪುಸ್ತಕಗಳು ಆದರೂ ಅವು ಯಾವುದೂ ನನಗೆ ಯಾವುದೇ ಮಟ್ಟದಲ್ಲಿ ಅರಿವು ಮೂಡಿಸಲಿಲ್ಲ.

[ನಾನು ಈ ಪುಸ್ತಕಗಳನ್ನು ಓದುವಾಗ ] ಮತ್ತೆ, ಮತ್ತೆ ಇದು ಮಹಿಳೆಯರ ಹಕ್ಕುಗಳ ಬಗ್ಗೆ ಎಂದು ಹೇಳಲಾಗುತ್ತಿತ್ತು . ಜ್ಞಾನದ ಅತ್ಯಂತ ಸೂಕ್ಷ್ಮ ಅಭಿರುಚಿ ಅಳವಡಿಸಿಕೊಂಡ, ಜ್ಞಾನ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿರುವ ಸಾಲು ಸಾಲು ಪುಸ್ತಕಗಳನ್ನು ನಾನು ನೋಡುತ್ತಿದ್ದೆ. ಪುಸ್ತಕವೊಂದು ಪ್ರಕಟವಾಗಲು ವ್ಯವಸ್ಥೆಯ ಅನೇಕ ಅಂಗಗಳು ಸಹಕರಿಸಿರುತ್ತವೆ. ಇದು ಪುಸ್ತಕವಾಗಿ ಪ್ರಕಟವಾಗಿರುವುದು ಮಾತ್ರವಲ್ಲ, ಅದು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೂ ತಲುಪಿದೆ. ನೀವು ವಿಜ್ಞಾನ ವಿದ್ಯಾರ್ಥಿಯಾಗಿದ್ದರೆ ಇವೆಲ್ಲ ಹೇಗೆ ನಡೆಯುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಹೊಸ ವಿಷಯದಲ್ಲಿ ಪುಸ್ತಕ ಪ್ರಕಟವಾಗಿ ಗ್ರಂಥಾಲಯದಲ್ಲಿ ಸ್ಥಳವನ್ನು ಕಂಡುಕೊಳ್ಳುವುದು ಬಹಳ ದೀರ್ಘ ಪ್ರಕ್ರಿಯೆ. ಸ್ತ್ರೀವಾದ ..ನೀವೇ ಹೇಳಿ ಹಳೆಯ ವಿಷಯ ಅಲ್ಲವೇ? ಅದು ನಿಜವಾಗಿದ್ದರೆ, ಪ್ರಪಂಚದ ಮಹಿಳೆಯರು ಬರೆದಿರುವ ನನ್ನೊಡನೆ ಸ್ಪಂದಿಸುವ ಸ್ತ್ರೀವಾದಿ ಸಾಹಿತ್ಯದ ಆ ಭಾಗವನ್ನು ನಾನು ಬಹು ಬೇಗ ಕಂಡುಕೊಳ್ಳುತ್ತೇನೆ. ಆ ಸಾಹಿತ್ಯವನ್ನು ಕಂಡುಹಿಡಿಯದವಳು ನಾನು ಮಾತ್ರ. ನಾನು ಪುಸ್ತಕದ ಅಂಗಡಿಗಳಲ್ಲಿ, ಹೆಚ್ಚಾಗಿ ಉಪಯೋಗಿಸಿದ ಪುಸ್ತಕದ ಅಂಗಡಿಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ನಾನು ಹೋದಾಗಲೆಲ್ಲಾ ಮಹಿಳೆಯರ ವಿಭಾಗವನ್ನು ನೋಡುತ್ತೇನೆ. ನಾನು ವಿದೇಶದಲ್ಲಿರುವುದರಿಂದ ಜಾತಿ ಪ್ರಶ್ನೆಗೆ ಹತ್ತಿರ ತರುವ ಭಾರತೀಯ ಸ್ತ್ರೀವಾದಿ ಪುಸ್ತಕಗಳು ಸಿಗುತ್ತಿಲ್ಲ ಅಂದುಕೊಂಡೆ.

ಪುಸ್ತಕದ ಅಂಗಡಿಗಳಲ್ಲಿ, ಸ್ತ್ರೀವಾದಿ ಸಾಹಿತ್ಯವನ್ನು ಹೊಂದಿರುವ ಕಪಾಟಿನಲ್ಲಿ ಯಾವುದೇ ಆಫ್ರಿಕನ್-ಅಮೇರಿಕನ್ ಬರಹಗಾರರು ಇಲ್ಲ ಎಂಬುದನ್ನು ನಾನು ಗಮನಿಸಿ ಅದರ ಬಗ್ಗೆ ಅಂಗಡಿಯ ವ್ಯವಸ್ಥಾಪಕರನ್ನು ಕೇಳಿದರೆ ‘ಓಹ್ ಕ್ಷಮಿಸಿ ಮಾಮ್ ನಾವು ಆ ಪುಸ್ತಕಗಳನ್ನು ಆಫ್ರಿಕನ್-ಅಮೇರಿಕನ್ ಬರಹಗಾರರ ವಿಭಾಗದ ಅಡಿಯಲ್ಲಿ ಇಟ್ಟಿದ್ದೇವೆ’ ಎಂದು ಹೇಳುತ್ತಾರೆ. ಅವರು ಮಹಿಳಾ ಬರಹಗಾರರು ಹಾಗು ಸ್ತ್ರೀವಾದಿ ಬರಹಗಾರರು ಆದರೆ ಅವರಿಗೆ ಇಲ್ಲಿ ಸ್ಥಾನವಿಲ್ಲ.ನಾನು ಅಲ್ಲಿಗೆ ಹೋದಾಗ ಎರಡು ಅಥವಾ ಮೂರು ಪುಸ್ತಕಗಳಿರಬಹುದು ಆದರೆ ಬಿಳಿ ಮಹಿಳಾ ಲೇಖಕಿಯರ ದೊಡ್ಡ ಸಂಗ್ರಹ ಕಪಾಟುಗಳನ್ನು ತುಂಬಿರುತ್ತವೆ ಮತ್ತು ಪ್ರತಿ ಬಾರಿ ಹೊಸ ಪುಸ್ತಕಗಳು ಇರುತ್ತವೆ. ಎಲ್ಲಾ ಪುಸ್ತಕ ಮಳಿಗೆಗಳು ಯಾವಾಗಲೂ ಹೊಸ ಪುಸ್ತಕಗಳನ್ನು ಮುಂದಿಟ್ಟಿರುತ್ತಾರೆ ಮತ್ತು ಒಂದೆರಡು ಸ್ತ್ರೀಸಮಾನತಾವಾದಿ ಪುಸ್ತಕಗಳು ಅಲ್ಲಿದ್ದೇ ಇರುತ್ತವೆ. ಸ್ತ್ರೀವಾದಿ ಸಾಹಿತ್ಯದ (ಕಪ್ಪು) ಪ್ರಕಟಣೆಗಳು ಕಡಿಮೆ ಇದೆ ಎಂಬುದು ಇಲ್ಲಿ ಬಹಳ ಸ್ಪಷ್ಟವಾಗಿತ್ತು. ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿರುವ ಕಪ್ಪು ಸ್ತ್ರೀವಾದಿ ಲೇಖಕರ ಸಂಖ್ಯೆಯು ಬಿಳಿ ಸ್ತ್ರೀವಾದಿಗಳು ಪ್ರಕಟಿಸುತ್ತಿರುವ ಪರಿಮಾಣ ಮತ್ತು ವೇಗಕ್ಕೆ ಹೊಂದಿಕೆಯಾಗಲಿಲ್ಲ.

ನಂತರ ನಾನು ನಿಜಕ್ಕೊ ಕುಳಿತು ಓದಿದೆ. ಕಪ್ಪು ಸ್ತ್ರೀವಾದಿ ಸಾಹಿತ್ಯ ನಾನು ಹುಡುಕುತ್ತಿರುವುದಕ್ಕೆ ಸ್ವಲ್ಪ ಹತ್ತಿರದಲ್ಲಿದೆ ಎನಿಸಿತ್ತು. ಆದರೆ ವರ್ಷಗಳು ಕಳೆದಂತೆ ಅದು ನಿಜವಲ್ಲ ಎಂಬುದು ಅರಿವಾಯಿತು. . ನಾನು ಅವುಗಳನ್ನು ಓದಲು ಸಾಕಷ್ಟು ಸಮಯವನ್ನು ಕಳೆದೆ. ಮತ್ತು ಖಂಡಿತವಾಗಿ , ಕಪ್ಪು ಸ್ತ್ರೀವಾದಿ ಸಾಹಿತ್ಯದಲ್ಲಿ ಅಥವಾ ಬಿಳಿ ಸ್ತ್ರೀವಾದಿ ಸಾಹಿತ್ಯದಲ್ಲಿ ನನ್ನ ಅಥವಾ ನನಗೆ ಗೊತ್ತಿದ್ದ ಮಹಿಳೆಯರ ಯಾವುದೇ ಪ್ರತಿಬಿಂಬವಿರಲಿಲ್ಲ. ಆದರೆ ಈ ಎಲ್ಲ ಪ್ರಯಾಣಗಳ ಮೂಲಕ ಇದೆಲ್ಲವೂ ಮಹಿಳೆಯರ ಹಕ್ಕುಗಳ ಬಗ್ಗೆ ಎಂದು ನಾನು ಅರ್ಥಮಾಡಿಕೊಳ್ಳುತ್ತೇನೆ ಎಂದು ಆಶಿಸುತ್ತಿದ್ದೆ. ಈ ಎಲ್ಲ ಮಹಿಳೆಯರು ಈ ಅಪಾರ ಪ್ರಮಾಣದ ಜ್ಞಾನವನ್ನು ಉತ್ಪಾದಿಸಿದ್ದಾರೆ ಮತ್ತು ಅದರಲ್ಲಿ ಕೆಲವಷ್ಟಾದರೂ ನನಗೆ ಸಿಕ್ಕ ಹಕ್ಕುಗಳನ್ನು ಸಾಧ್ಯವಾಗಿಸುವ ಹೊಣೆ ಹೊತ್ತಿರಬೇಕು. ಅವರೆಲ್ಲರೂ ಅದಕ್ಕಾಗಿ ಕೆಲಸ ಮಾಡಿದ್ದಾರೆ. ಮತ್ತು ನಾನು ಅದನ್ನು ಕಂಡುಹಿಡಿಯಬೇಕು ಮತ್ತು ನಾನು ಅದನ್ನು ಹುಡುಕಲಿದ್ದೇನೆ. ಆದರೆ ನಿಜ ಜೀವನದಲ್ಲಿ ಹಾಗಾಗಲಿಲ್ಲ ನನ್ನ ಕುಟುಂಬಕ್ಕೆ ಶಿಕ್ಷಣವನ್ನು ಸಾಧ್ಯವಾಗಿಸಲು ಕೆಲಸ ಮಾಡಿದ ವ್ಯಕ್ತಿ ನನ್ನ ಅಜ್ಜಿ (ತಂದೆಯ ಚಿಕ್ಕಮ್ಮ). ನನ್ನ ಅಜ್ಜಿ, ತನ್ನ ಕುಟುಂಬದ ಮಕ್ಕಳು ಕಾಲೇಜಿಗೆ ಹೋಗಬೇಕಾದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡರು ಮತ್ತು ಅವರ ಪ್ರಯತ್ನ ಮತ್ತು ಚಿಂತನೆಯ ಸ್ಪಷ್ಟತೆಯ ಮೂಲಕ ಕುಟುಂಬವು ಶಿಕ್ಷಣವನ್ನು ನಾವು ಪಡೆಯಬೇಕಾದ ಮಾನದಂಡವಾಗಿ ಅಳವಡಿಸಿಕೊಳ್ಳುತ್ತದೆ. ನನ್ನ ಜೀವನದಲ್ಲಿ, ಶಿಕ್ಷಣದೊಂದಿಗೆ ನಾನು ಸಂಬಂಧಿಸುವ ವ್ಯಕ್ತಿ ಅವಳು. ಆದರೆ ಸ್ತ್ರೀವಾದವು ಅವಳಲ್ಲ ಎಂದು ನನಗೆ ಹೇಳುತ್ತಿದೆ, ಇದು ಈ ಎಲ್ಲ ಮಹಿಳೆಯರು. ಆದ್ದರಿಂದ, ನನ್ನ ಅಜ್ಜಿ ಒಬ್ಬ ಸ್ತ್ರೀವಾದಿ ಮತ್ತು ಆಕೆಯ ಪಾತ್ರವನ್ನು ಆ ಸ್ತ್ರೀವಾದಿ ಸಾಹಿತ್ಯದಲ್ಲಿ ದಾಖಲಿಸಲಾಗಿದೆ ಅಥವಾ ಅವರು ಸಂಪರ್ಕ ಕಳೆದುಕೊಂಡಿದ್ದಾರೆ. . ಈ ವಾಸ್ತವಕ್ಕೂ ಈಗಿರುವ ಸ್ತ್ರೀವಾದಿ ಜ್ಞಾನಕ್ಕೂ ನನ್ನ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲ. ಇದು ನನ್ನ ಪ್ರಯಾಣದ ಮೊದಲ ಭಾಗ.

——————————-

ಅನು ರಾಮದಾಸ್ ( Anu Ramdas ) ರೌಂಡ್ ಟೇಬಲ್ ಇಂಡಿಯಾದ ಸಹ ಸಂಸ್ಥಾಪಕ ಸಂಪಾದಕರಾಗಿದ್ದಾರೆ
ಸವಾರಿ ಮತ್ತು ರೌಂಡ್ ಟೇಬಲ್ ಇಂಡಿಯಾದಲ್ಲಿ ಮೊದಲು ಪ್ರಕಟಿತ ಇಂಗ್ಲಿಷ್ ಲೇಖನ ‘Feminism is Brahminism’
ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya )

ಕನ್ನಡ ಅನುವಾದ ಭಾಗ ೨

Be the first to comment on "ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೧"

Leave a comment

Your email address will not be published.


*