ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨

ಅನು ರಾಮದಾಸ್

ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ.

ನಾನು ನನ್ನ ಬ್ಲಾಗ್  ನಲ್ಲಿ, ನಂತರ ಸವರಿ ಮತ್ತು ಆರ್ ಟಿ ಐ(ರೌಂಡ್ ಟೇಬಲ್ ಇಂಡಿಯಾ) ನಲ್ಲಿ ಬರೆದದ್ದು, ಹೆಚ್ಚು ಸಾಮೂಹಿಕ ಕಲಿಕೆಯ ಪ್ರಕ್ರಿಯೆಯಾಗಿದೆ, ಸವರಿನಲ್ಲಿ ಕಾಣಿಸಿಕೊಂಡ ಪ್ರತಿಯೊಂದು ಲೇಖನವು ಹಲವಾರು ಸದಸ್ಯರ ನಡುವಿನ ಸಂಭಾಷಣೆಯ ಫಲಿತಾಂಶವಾಗಿದೆ: ಪ್ರದ್ನ್ಯಾ ಜಾಧವ್, ಪ್ರದ್ನ್ಯಾ ಮಂಗಳ, ಶ್ರುತಿ, ನೋಯೆಲ್, ಲೇಖಕರು, ಮತ್ತು ಇನ್ನೂ ಅನೇಕ ದಲಿತ ಬಹುಜನ ಮತ್ತು ಆದಿವಾಸಿ ಮಹಿಳೆಯರು. ಆ ಪ್ರತಿಯೊಂದು ಲೇಖನಗಳು ನಾವು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹೇಗೆ ಪ್ರಯತ್ನಿಸುತ್ತಿದ್ದೇವೆ ಎಂಬುದರ ಸಾಮೂಹಿಕ ಪ್ರಯತ್ನವಾಗಿದೆ. ಮತ್ತೆ, ನಮ್ಮಲ್ಲಿ ಹೆಚ್ಚಿನವರು ಸ್ತ್ರೀವಾದ ಎಂಬ ಪದ ಅಪ್ರಸ್ತುತ ಎಂದು ಕಂಡುಕೊಂಡೆವು. ಜಾತಿಯನ್ನು ಅರ್ಥಮಾಡಿಕೊಳ್ಳುವ ನನ್ನ ಅನ್ವೇಷಣೆಗೆ ಇದು ಅಡಚಣೆ ಯೆಂದು ನಾನು ಕಂಡುಕೊಂಡೆ. ನಾನು ನಿಯಮಿತವಾಗಿ ಪೋಸ್ಟ್ ಗಳನ್ನು ಹಾಕುತ್ತಿದ್ದಾಗ ಜನ ಆಗಾಗ್ಗೆ ನೀವು ಪುಸ್ತಕವನ್ನು ಏಕೆ ಬರೆಯಬಾರದು ಎಂದು ಕೇಳುತ್ತಿದ್ದರು. – ಅದು ನನ್ನ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ನಾನವರಿಗೆ ಹೇಳುತ್ತಿದ್ದೆ. ನನಗೆ ಅದನ್ನು ಮಾಡಲು ಇಷ್ಟವಿರಲಿಲ್ಲ. ನಾನು ಜಾತಿಯನ್ನು ಅರ್ಥಮಾಡಿಕೊಳ್ಳಲು ಹೊರಟಿದ್ದೆ.

ಒಂದು ದಿನ, ನಾನು ಪೋಸ್ಟ್ ಹಾಕಿ ಅದರ ಕೊನೆಯಲ್ಲಿ ಬರೆದಿದ್ದು: ಸ್ತ್ರೀವಾದವು ಬ್ರಾಹ್ಮಣವಾದ. ನಾನು ಇದಕ್ಕೆ ಸ್ತ್ರೀವಾದಿ ಸಾಹಿತ್ಯ ಓದಿರುವ ಮತ್ತು ಪರಿಚಯವಿರುವ ಸವರ್ಣ ಸ್ತ್ರೀವಾದಿಗಳಿಂದ ಉಗ್ರವಾದ ಪ್ರತಿಕ್ರಿಯೆಯನ್ನು ಪಡೆಯುತ್ತೇನೆ ಎಂದುಕೊಂಡಿದ್ದೆ. ಮತ್ತು – ಈ ಹೆಂಗಸಿಗೆ ಬುದ್ದಿ ಭ್ರಮೆಯಾಗಿದೆ. ಇವಳು ಒಂದು ವಾಕ್ಯದಲ್ಲಿ ಎರಡು ಸಂಪೂರ್ಣವಾಗಿ ವಿರೋಧಾತ್ಮಕ ಪರಿಕಲ್ಪನೆಗಳನ್ನು ಹಾಕಿದ್ದಾಳೆ. ಇದು ಹಾಸ್ಯಾಸ್ಪದ ಎಂದು ಕೂಡ ಹೇಳುವ ಮೂಲಕ. ಆದರೆ ಇಂದಿನವರೆಗೂ ನಾನು ಗಮನಿಸಿದ್ದೇನೆ , ಇದನ್ನು ಬಲವಾಗಿ ವಿರೋಧಿಸುವ ಯಾವುದೇ ಅಭಿಪ್ರಾಯಗಳಿಲ್ಲ. ಅದು ಬೇರೆ ವಿಷಯ.

ಇಂದು ನಾನು ಮಾಡಲು ಬಯಸುವುದು ಅದನ್ನು ಅಸಂಬದ್ಧ ಹೇಳಿಕೆಯಾಗಿ ತ್ವರಿತವಾಗಿ ಪರಿಶೀಲಿಸುವುದು. ಸ್ತ್ರೀವಾದವು ಬ್ರಾಹ್ಮಣವಾದ ಎನ್ನುವುದು ಮೇಲ್ನೋಟಕ್ಕೆ  ಅಸಂಬದ್ಧವಾಗಿದೆ. ಈಗ ಹೌದು ಅಥವಾ ಇಲ್ಲ ಎಂಬುದನ್ನು  ನಿಮ್ಮಿಂದ ಕೇಳಲು ಬಯಸುತ್ತೇನೆ. ನನ್ನ ಪೋಸ್ಟ್ ಗೆ ಒಬ್ಬ ಯುವಕ ಮಾತ್ರ ಇದು ಹುಚ್ಚುತನ, ನೀವು ಹೇಗೆ ಹೀಗೇಳುತ್ತೀರಿ  ಎಂದು ಪ್ರತಿಕ್ರಿಯಿಸಿದ , ಈಗ, ಈ ಗುಂಪಿನಲ್ಲಿ ಎಷ್ಟು ಜನರು ಆ ರೀತಿ  ಯೋಚಿಸಿದ್ದೀರಿ? ದಯವಿಟ್ಟು ಅನ್ಮ್ಯೂಟ್ ಮಾಡಿ ಹೇಳಿ, ಅದನ್ನು ಇಷ್ಟ ಪಟ್ಟು ಕೇಳುತ್ತೇನೆ  ಯಾರಾದರೂ?  ಶ್ರುತಿ?

ಶ್ರುತಿ: ಹಾಯ್, ಅನು. ನಾನು ಅದನ್ನು ಓದಿದಾಗ ಅಷ್ಟೇನೂ ಆಶ್ಚರ್ಯವಾಗಿರಲಿಲ್ಲ. ಆದರೆ ನಾನು ಅದನ್ನು ನಾಲ್ಕು ಅಥವಾ ಐದು ವರ್ಷಗಳ ಹಿಂದೆ ಓದಿದ್ದರೆ  ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತು . ವಿಶೇಷವಾಗಿ, ನಾನು ಅದನ್ನು ವಿಶ್ವವಿದ್ಯಾನಿಲಯ ಮುಗಿಸಿದ  ನಂತರ ಓದಿದ್ದರೆ ಆ ಸಮಯದಲ್ಲಿ ಚುಚ್ಚುತ್ತಿತ್ತು. ನಾವು ಈಗ ತುಂಬಾ ವಿಭಿನ್ನವಾದ ಹಂತದಲ್ಲಿ ಮಾತನಾಡುತ್ತಿದ್ದೇವೆ ಆದರೆ  ಇದು ಬಹಳಷ್ಟು ಜನರಿಗೆ ಆಶ್ಚರ್ಯಕರವಾಗಿ  ಕಂಡಿತ್ತು ಎಂದು ನನಗೆ ಅನ್ನಿಸಿತ್ತು.   ಸ್ತ್ರೀವಾದವನ್ನು ಸಾಮಾನ್ಯವಾಗಿ ಕ್ರಾಂತಿಕಾರಿಯಾಗಿ  ನೋಡಲಾಗುತ್ತದೆ. ವಿಶೇಷವಾಗಿ ಕ್ಯಾಂಪಸ್ಗಳಲ್ಲಿ ಸ್ತ್ರೀವಾದಿಯಾಗಿರುವುದು  ಕ್ರಾಂತಿಕಾರಿಗಳ  ಬಹಳ ಬೇಕಾದ ಸ್ಥಾನವಾಗಿದೆ. ಆದ್ದರಿಂದ ಹೌದು.. ನೀವು ಮುಂದುವರಿಸಿ.

ಅನು: ಇಲ್ಲಿ ನಾನು ಏನು ಮಾಡಿದ್ದೇನೆಂದರೆ ಹಲವಾರು ಪ್ರಶ್ನೆಗಳನ್ನು ಬರೆದಿಟ್ಟುಕೊಂಡಿದ್ದೇನೆ ಮತ್ತು ತ್ವರಿತವಾಗಿ  ಅದರ ಬಗ್ಗೆ ಮಾತನಾಡುತ್ತಾ  ಹೋಗುತ್ತೇನೆ ಮತ್ತು ನಂತರ ನೀವು  ಪ್ರಶ್ನೆಗಳನ್ನು ಪೋಸ್ಟ್ ಮಾಡಬಹುದು ಅಥವಾ ಅನ್ಮ್ಯೂಟ್ ಮಾಡಿ ನನ್ನೊಂದಿಗೆ ಮಾತನಾಡಬಹುದು. ಪವರ್ ಪಾಯಿಂಟ್  ಹಂಚಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ. ನಾನು ನಂತರ ಲಿಂಕ್ ಅನ್ನು ಹಂಚಿಕೊಳ್ಳುತ್ತೇನೆ. ‘ಸ್ತ್ರೀವಾದವು ಬ್ರಾಹ್ಮಣವಾದ’ ಎಂಬ ಹೇಳಿಕೆ ಜಗತ್ತಿನಲ್ಲಿ ಅಸ್ತಿತ್ವದಲ್ಲಿಲ್ಲ, ನಾನು ಅದನ್ನು ಅಲ್ಲಿ ಹೇಳುತ್ತಿದ್ದೇನೆ . ಈ ಎರಡು ಪರಿಕಲ್ಪನೆಗಳನ್ನು ಒಂದು ವಾಕ್ಯದಲ್ಲಿ ಎಂದಿಗೂ ಸೇರಿಸಲಾಗಿಲ್ಲ. ಆದ್ದರಿಂದ, ನಾನು ಅದನ್ನು ಸ್ಪಷ್ಟಪಡಿಸುತ್ತೇನೆ.  ಹೌದು ಅದು ಅಸ್ತಿತ್ವದಲ್ಲಿರಬಾರದು ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಎಂದು ಮುಂದಿನ 30-40 ನಿಮಿಷಗಳು ನಾವು ಪ್ರಯತ್ನಿಸೋಣ.

ಸ್ತ್ರೀವಾದವು  ಬ್ರಾಹ್ಮಣವಾದ ಎನ್ನುವುದು  ಕಿತ್ತಳೆ ಮತ್ತು ಸೇಬಿನ ಹೋಲಿಕೆಯಂತೆ. ಹೋಲಿಸಲು ನೀವು ಎರಡು ವಿಭಿನ್ನ ವಸ್ತುಗಳನ್ನು ಇಡುವುದಿಲ್ಲ. ಸ್ವಲ್ಪವಾದರೂ ಸಾಮ್ಯತೆ ಇರಬೇಕು. ಒಂದು ವಾಕ್ಯದಲ್ಲಿ ಎರಡು ಪದಗಳನ್ನು ಹೇಗೆ ಸಮೀಕರಿಸಬಹುದು? ಅದಕ್ಕಾಗಿ, ನೀವು ಪ್ರತಿ ಪರಿಕಲ್ಪನೆಯ ಕೆಲವು ಮೂಲಭೂತ ಆಸ್ತಿಯನ್ನು ಗುರುತಿಸಬೇಕು. ಈ ಎರಡು ವಿಷಯಗಳಲ್ಲಿ ಸ್ತ್ರೀವಾದವು  ಬ್ರಾಹ್ಮಣವಾದ ಅಥವಾ ಸ್ತ್ರೀವಾದ ಮತ್ತು ಬ್ರಾಹ್ಮಣವಾದ, ಅವುಗಳಲ್ಲಿರುವ ಮೂಲಭೂತ ಗುಣಗಳು ಯಾವುವು? ಅವು  ಮನುಷ್ಯರ ಬಗ್ಗೆಯೇ?

ಸ್ತ್ರೀವಾದ ಎಂಬ ಪದವು ಪಾರದರ್ಶಿಕವಾಗಿಲ್ಲ.   ಇದು ಮನುಷ್ಯರ ಬಗ್ಗೆ ಎಂಬುದು ಸ್ವತಃ ಸ್ಪಷ್ಟವಾಗಿಲ್ಲ. ಸ್ತ್ರೀ ಎನ್ನುವುದು ಸ್ತ್ರೀಯರ ವಿಷಯ ಎಂದು ನೀವು ತಿಳಿದುಕೊಳ್ಳಬೇಕು. ಬ್ರಾಹ್ಮಣವಾದವು ಸ್ಪಷ್ಟವಾಗಿದೆ-  ಬ್ರಾಹ್ಮಣನ ಬಗ್ಗೆ ಮತ್ತು ಬ್ರಾಹ್ಮಣ ಮನುಷ್ಯನಿಗೆ ಸಂಬಂಧಿಸಿದ ವಿಷಯ. ಇಂದಿನ ಚರ್ಚೆಗೆ, ಈ ಎರಡೂ ಪರಿಕಲ್ಪನೆಗಳು ಮಾನವರ ಬಗ್ಗೆ ಎಂದು ಅಂದುಕೊಳ್ಳೋಣ.

ಸ್ತ್ರೀವಾದವು ಮಹಿಳೆಯರ ಬಗ್ಗೆ ಮತ್ತು “ಮಹಿಳೆಯರು ಮಾನವರು”. ಮತ್ತು ಇತರ ಪರಿಕಲ್ಪನೆಗೆ, ಬ್ರಾಹ್ಮಣವಾದವು ಬ್ರಾಹ್ಮಣರ ಬಗ್ಗೆ, ಮತ್ತು “ಬ್ರಾಹ್ಮಣರು ಮಾನವರು”. ಅದು ನಮ್ಮನ್ನು ಹಿಂದೆ ಯೋಚಿಸಿದ್ದ ಸ್ಥಾನಕ್ಕೆ ತಲುಪಿಸುತ್ತದೆ.

ಯಾರೂ ಸ್ತ್ರೀವಾದಿ ಅಥವಾ ಬ್ರಾಹ್ಮಣ ಅಥವಾ ಇನ್ನೊಂದಾಗಿ  ಜನಿಸುವುದಿಲ್ಲ. ಇವು ಕಲಿತ ಸಾಮಾಜಿಕ ನಡವಳಿಕೆಗಳ  ಸ್ವರೂಪಗಳು . ಹಾಗಿದ್ದರೆ  ಎಲ್ಲಾ ಮನುಷ್ಯರಿಗೆ ಸಮಾನವಾದ  ಅಂಶ ಏನಿರಬಹುದು? ಸಮಾನವೆಂದು ನಾವು ಹೇಳಬಹುದಾದ ಒಂದು ವಿಷಯ ಯಾವುದು? ಇವುಗಳನ್ನು ನಾವು ಪಟ್ಟಿ ಮಾಡಲು ಹಲವು ದಾರಿಗಳಿವೆ , ಆದರೆ ನಾನು ಇಂದು ಹೇಳುವುದು , ಎಲ್ಲಾ ಮಾನವರು ಗರ್ಭಧಾರಣೆಯ 7-9 ತಿಂಗಳ ನಂತರ ಜನಿಸುತ್ತಾರೆ. ಅದು ನಾನು ತೆಗೆದುಕೊಳ್ಳಲಿರುವ ತಳಹದಿ . ಇದರಿಂದ, ನಾನು ಈ ಎರಡು ಸಂಗತಿಗಳನ್ನು ಹೋಲಿಕೆ ಮಾಡುತ್ತೇನೆ.

ಹುಟ್ಟಿನ ನಂತರದ ಸಾಮಾಜಿಕ ರಚನೆಗಳು ನಾವು ಏನಾಗುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ನಾವೆಲ್ಲರೂ  ಸಮಾನವಾಗಿ ಮನುಷ್ಯರಾಗಿ  ಹುಟ್ಟಿರುತ್ತೇವೆ ಆದರೆ ಹುಟ್ಟಿನ ನಂತರದ ಸಾಮಾಜಿಕ ರಚನೆಗಳು ನಾವು ನಮ್ಮನ್ನು ಗುರುತಿಸಿಕೊಳ್ಳುವುದು ಅಥವಾ ನಾವು ಹೇಗೆ ಗುರುತಿಸಲ್ಪಡುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ.

ಆದ್ದರಿಂದ ಬ್ರಾಹ್ಮಣನು ಹುಟ್ಟಿನ ನಂತರ ಬ್ರಾಹ್ಮಣನಾಗುವುದು ಯಾವಾಗ ಎಂಬ ಪ್ರಶ್ನೆ ಹುಟ್ಟಿ ಕೊಳ್ಳುತ್ತದೆ . ಉತ್ತರ ಹುಟ್ಟಿನಿಂದಲೇ ಅಥವಾ ಅದಕ್ಕೂ ಮೊದಲೇ.

ಸ್ತ್ರೀವಾದಿ ಹುಟ್ಟಿದ ನಂತರ ಯಾವಾಗ ಸ್ತ್ರೀವಾದಿ ಆಗುತ್ತಾರೆ ? ಅವಳು ಚಿಕ್ಕವಳಿದ್ದಾಗ ಅಥವಾ ಹದಿಹರೆಯದವಳಾಗಿದ್ದಾಗ? ಯಾವ ಹಂತದಲ್ಲಿ ಸ್ತ್ರೀವಾದಿ ನಿಜವಾಗಿ ಸ್ತ್ರೀವಾದಿಯಾಗುತ್ತಾರೆ? ನನ್ನ ಗಮನಕ್ಕೆ ಬಂದಂತೆ ಸಾಮಾನ್ಯವಾಗಿ ವಿಶ್ವವಿದ್ಯಾಲಯದಲ್ಲಿ ಓದಿದ  ಮಹಿಳೆಯರು ಸ್ತ್ರೀವಾದಿಗಳಾಗಬಹುದು.

ಬ್ರಾಹ್ಮಣರು ಮಾನವ ಗುಂಪಿಗೆ ಸೇರಿದವರು ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ ಏಕೆಂದರೆ ಅವರು ಲೆಕ್ಕ ಇಡಬಹುದಾದ ಜನಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಅವರು ಜಾತಿ ಸಮಾಜದೊಳಗೆ ಭೌಗೋಳಿಕ ಜಾಗವನ್ನು ಸಹ ಹೊಂದಿದ್ದಾರೆ.

ಈಗ ಸ್ತ್ರೀವಾದಿಗಳಿಗೆ ಸಂಬಂಧಿಸಿದಂತೆ, ಇವರು  ಯಾವ ರೀತಿಯ ಜನ ಸಮುದಾಯಕ್ಕೆ ಸೇರಿರಬಹುದೆಂಬ ಬಗ್ಗೆ ನಮಗೆ ತಿಳುವಳಿಕೆ ಇದೆಯೇ? ಅವರು ಒಂದು ಪ್ರದೇಶಕ್ಕೆ, ಜನಾಂಗೀಯ ಗುಂಪಿಗೆ ಅಥವಾ ಒಂದು ವರ್ಗಕ್ಕೆ ಸೇರಿದವರೇ? ಸದ್ಯಕ್ಕೆ ನಾವು ವರ್ಗದ  ಮಿತಿಯನ್ನು ಮಾತ್ರ ಬಳಸಬಹುದು. ಆದರೆ ಅವರಿಗೆ ಸ್ಥಳವಿದೆಯೇ? ಮತ್ತು  ಮುಂದಿನ ಸ್ಲೈಡ್ಗಳಲ್ಲಿ ಈ ಪ್ರಶ್ನೆಗಳನ್ನು  ಉತ್ತರಿಸಲು ಪ್ರಯತ್ನಿಸುತ್ತೇನೆ.

ಹಾಗಾದರೆ, ಸ್ತ್ರೀವಾದ ಎಂದರೇನು?  ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸ್ತ್ರೀವಾದಿ ತತ್ತ್ವಶಾಸ್ತ್ರದ  ಒಂದು  ಪ್ರಬಂಧದ ವ್ಯಾಖ್ಯಾನದ ಪ್ರಕಾರ  “ಪುರುಷರು ಮತ್ತು ಮಹಿಳೆಯರು ಸಮಾನ ಹಕ್ಕುಗಳು ಮತ್ತು ಗೌರವಗಳಿಗೆ ಅರ್ಹರಾಗಿದ್ದಾರೆ. ಅದು ಪ್ರಮಾಣಮಟ್ಟವಾಗಿದೆ. ವಿವರಣಾತ್ಮಕ ಭಾಗವೆಂದರೆ  ಪ್ರಸ್ತುತ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹಕ್ಕುಗಳು ಮತ್ತು ಗೌರವಕ್ಕೆ ಸಂಬಂಧಿಸಿದಂತೆ ಹಿನ್ನೆಡೆಯಾಗಿದೆ  ಮತ್ತು ಆಗಿರುವ ನಷ್ಟಕ್ಕಾಗಿ  ಅವರು ಹೋರಾಡುತ್ತಿದ್ದಾರೆ . ಪುರುಷರು ಹೊಂದಿರುವ ಹಕ್ಕುಗಳು ಮತ್ತು ಗೌರವವನ್ನು ಮತ್ತೆ ಪಡೆದುಕೊಳ್ಳುವ   ಹೋರಾಟವಾಗಿದೆ. ”

ಯಾವುದೇ ಗುಂಪು ಕಳೆದುಹೋದ, ಇತರರಿಗೆ ಲಭ್ಯವಿರುವ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ,  ಅವರ ಹೋರಾಟವು ಪ್ರಗತಿಪರವಾಗಿರುತ್ತದೆ. ಶ್ರುತಿ ಹೇಳಿದಂತೆ ಇದು ಕ್ರಾಂತಿಕಾರವಾಗಿದೆ.. ನೀವು ಅದರಲ್ಲಿ ತಪ್ಪನ್ನು ಹುಡುಕಲಾಗುವುದಿಲ್ಲ.

ಬ್ರಾಹ್ಮಣವಾದದಲ್ಲಿ ಪ್ರಗತಿಪರತೆ ಏನೂ ಇಲ್ಲ. ಇದು ಸಂಪೂರ್ಣ ಪ್ರಗತಿಹೀನ ಸಿದ್ಧಾಂತ ಅಥವಾ ನಂಬಿಕೆಯ ವ್ಯವಸ್ಥೆ. ಇದರಲ್ಲಿ ಉಳಿಸಿಕೊಳ್ಳುವುದು ಏನೂ ಇಲ್ಲ. ಇದನ್ನು ಎಲ್ಲರೂ ಒಪ್ಪುತ್ತಾರೆ ಬ್ರಾಹ್ಮಣರನ್ನೂ ಒಳಗೊಂಡು ಇನ್ನೊಬ್ಬ ಬ್ರಾಹ್ಮಣನ ಜೊತೆ ಮಾತನಾಡದಿದ್ದರೆ.

ಆದರೆ ಸ್ತ್ರೀವಾದವನ್ನು ಪ್ರಗತಿಪರ ಎಂದು ಗ್ರಹಿಸಲಾಗಿದೆ ಏಕೆಂದರೆ ಅದು ಸಮುದಾಯದ ಹಕ್ಕುಗಳ ಬಗ್ಗೆ ವ್ಯವಹರಿಸುತ್ತದೆ. ಆದ್ದರಿಂದ, ಇಂದು ನಮ್ಮ ಉದ್ದೇಶಕ್ಕಾಗಿ ಸ್ತ್ರೀವಾದವು ಪ್ರಗತಿಪರ ಸಿದ್ಧಾಂತವೆಂದು ನಾವೆಲ್ಲರೂ ಒಪ್ಪುತ್ತಿದ್ದೇವೆ ಎಂದು ಕೊಳ್ಳೋಣ . ಮತ್ತು ಇದು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಮಹಿಳೆಯರು ಗಳಿಸಿಕೊಳ್ಳುವ ಒಂದು ಸಿದ್ಧಾಂತವಾಗಿದೆ ಮತ್ತು ಮಹಿಳೆಯರ ಶಿಕ್ಷಣದ ಹಕ್ಕು ಅವರ ಪ್ರಾಥಮಿಕ ಸಾಧನೆಗಳಲ್ಲಿ ಒಂದಾಗಿದೆ . ಇದು ಕಷ್ಟಪಟ್ಟು ಗೆದ್ದ ಹೋರಾಟ -ಸಮಾನತೆಯ ಹಕ್ಕು-ಸ್ತ್ರೀವಾದಿಗಳು ನಮಗೆ ಕೊಟ್ಟಿದ್ದಾರೆ. ಈ ಯೋಜನೆಯಲ್ಲಿ ನನ್ನ ಅಜ್ಜಿ ಯಾರು ಎಂಬ ಪ್ರಶ್ನೆಗೆ ಇದು ನಮ್ಮನ್ನು ಮರಳಿ ತರುತ್ತದೆ. ನನ್ನ ವೈಯಕ್ತಿಕ ಜೀವನದಲ್ಲಿ, ಈ ಅಜ್ಜಿಯು ವಿಶ್ವವಿದ್ಯಾನಿಲಯವನ್ನು ಬಿಡಿ, ವಿಶ್ವವಿದ್ಯಾನಿಲಯವು ತನ್ನ ಜೀವನ ಪ್ರಪಂಚದಿಂದ ತುಂಬಾ ದೂರದಲ್ಲಿದೆ, ಎಂದಿಗೂ ಶಾಲೆಗೆ ಹೋಗಲಿಲ್ಲ. ನಮ್ಮ ಕುಟುಂಬಕ್ಕೆ ಶಿಕ್ಷಣಕ್ಕಾಗಿ ದಾರಿಯನ್ನು ಮಾಡಿದವಳು ಅವಳು. ಹಾಗಾದರೆ, ನಾನು ಅವಳನ್ನು ಸ್ತ್ರೀವಾದಿ ಎಂದು ಕರೆಯುತ್ತೇನೆಯೇ? ಹಾಗಿದ್ದರೆ , ಸ್ತ್ರೀವಾದದಲ್ಲಿ ಅವಳ ಸ್ಥಾನ ಎಲ್ಲಿದೆ? ಶೀಘ್ರದಲ್ಲೇ ಕೆಲವು ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಿಕೊಂಡು ಅದನ್ನು ಪರಿಶೀಲಿಸೋಣ.

ಬ್ರಾಹ್ಮಣವಾದ ಎಂದರೇನು? ಎಂದು ನೋಡೋಣ. ಇದು ಹುಟ್ಟಿನಿಂದಲೇ ಮತ್ತು ಮುಂದಿನ ಎಲ್ಲ ಸಮಯದಲ್ಲೂ ಮೇಲರಿಮೆಯ ಪ್ರಾಬಲ್ಯ ಸಾಧಿಸುವ ಮನುಷ್ಯರಿಂದ ಕೂಡಿದೆ. ಇದಕ್ಕೆ ವಿರೋಧವಾಗಿ ನಾವು ಈಗಾಗಲೇ ಒಪ್ಪಿಕೊಂಡಿರುವಂತೆ ಸ್ತ್ರೀವಾದವು ಕಳೆದುಹೋದ ಹಕ್ಕುಗಳಿಗಾಗಿ ಹೋರಾಡುವ ಮನುಷ್ಯರ ಗುಂಪಿನಿಂದ ಕೂಡಿದೆ. ಆದರೆ ಬ್ರಾಹ್ಮಣವಾದವು ಮನುಷ್ಯರಾದ ಪುರುಷರು ಮತ್ತು ಮಹಿಳೆಯರು ಇಬ್ಬರಿಂದಲೂ ಕೂಡಿದೆ.

ಹಿಂದಿನ ಹೇಳಿಕೆಗಳಂತೆ , ಅರ್ಧದಷ್ಟು ಬ್ರಾಹ್ಮಣರು ಸ್ತ್ರೀವಾದಿಗಳಾಗಬಹುದು. ಯಾಕೆಂದರೆ ಅವರು ಮಹಿಳೆಯರು, ಅವರು ಹಕ್ಕುಗಳನ್ನು ಕಳೆದುಕೊಂಡಿದ್ದಾರೆ, ಅವರು ಸ್ತ್ರೀವಾದಿಗಳಾಗಬಹುದು. ಅದು ನಮ್ಮನ್ನು ಈ ಪ್ರಶ್ನೆಗಳ ಹತ್ತಿರ ತರುತ್ತದೆ : ಅರ್ಧದಷ್ಟು ಬ್ರಾಹ್ಮಣರು ಸ್ತ್ರೀವಾದಿಗಳಾಗಿದ್ದರೆ, (ಅವರು) ಇತರ ಎಲ್ಲ ಮಹಿಳೆಯರಂತೆ ಹಕ್ಕುಗಳನ್ನು ಕಳೆದುಕೊಂಡಿದ್ದು , ಅದರ ಅರ್ಧದಷ್ಟು ಸದಸ್ಯರು ಸ್ತ್ರೀವಾದದಲ್ಲಿದ್ದಾಗ ಬ್ರಾಹ್ಮಣವಾದಕ್ಕೆ  ಏನಾಗುತ್ತದೆ? ಅದು ಕ್ಷೀಣಿಸುತ್ತದೆಯೇ ? ಈ ಮಹಿಳೆಯರು ಬ್ರಾಹ್ಮಣವಾದದಿಂದ  ನಿರ್ಗಮಿಸಿದ್ದಾರೆಯೇ? ಇದು ಸ್ಪಷ್ಟವಾಗಿಲ್ಲ.

 

 

 

ಬ್ರಾಹ್ಮಣ, ಬ್ರಾಹ್ಮಣವಾದದ ಒಂದು ಭಾಗವಾಗಿದ್ದಾನೆ ಮತ್ತು ಇದು ಸಂಪೂರ್ಣವಾಗಿ ನಿರ್ಬಂಧಿತ ವ್ಯವಸ್ಥೆಯಾಗಿದೆ. ಬೇರೆ ಯಾರೂ ಅದನ್ನು ಪ್ರವೇಶಿಸಲು ಸಾಧ್ಯವಿಲ್ಲ. ಸ್ತ್ರೀವಾದದ ಭಾಗವಾಗಿರುವ ಸ್ತ್ರೀಸಮಾನತಾವಾದಿಯನ್ನು ಎಲ್ಲಾ ಮಹಿಳೆಯರನ್ನು ಒಳಗೊಂಡಿರುವ ವ್ಯವಸ್ಥೆಯ ಭಾಗವಾಗಿ ಚಿತ್ರಿಸಲಾಗಿದೆ. ಈಗ, ಬ್ರಾಹ್ಮಣ ಸ್ತ್ರೀವಾದಿ ಭಾಗ  ಯಾವುದು? ಬ್ರಾಹ್ಮಣ ಸ್ತ್ರೀವಾದಿಗಳು ಮತ್ತು ಎಲ್ಲ ಮಹಿಳೆಯರ ನಡುವಿನ  ಸಂಬಂಧವೇನು? ಅವರು ಇತರ ಮಹಿಳೆಯರ ಮಟ್ಟಕ್ಕೆ ಇಳಿಯುತ್ತಾರೆಯೇ ಅಥವಾ ಇತರ ಮಹಿಳೆಯರು ಬ್ರಾಹ್ಮಣರ ಮಟ್ಟಕ್ಕೆ ಏರುತ್ತಾರೆಯೇ? (ಚಿತ್ರ ನೋಡಿ) ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ ಬ್ರಾಹ್ಮಣ ಸ್ತ್ರೀವಾದಿಗಳಿಗೆ ಸಂಬಂಧಿಸಿದಂತೆ, ನಾವು ಏನು ನೋಡಬಹುದು? ಅವರು ಬ್ರಾಹ್ಮಣರಾಗಿ ಉಳಿಯುತ್ತಾರೆ  ಮತ್ತು  ಸ್ತ್ರೀವಾದಿಗಳೂ ಆಗಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ಸ್ಪಷ್ಟವಾಗಿ ಸಂಘರ್ಷ ವಿರುವ ಬ್ರಾಹ್ಮಣವಾದ ಮತ್ತು ಸ್ತ್ರೀವಾದ –  ಈ ಎರಡು ಸಿದ್ಧಾಂತಗಳೊಂದಿಗೆ ಸಹಬಾಳ್ವೆ ನಡೆಸುತ್ತಾರೆ. ಒಂದು ಪ್ರಗತಿಪರ, ಇನ್ನೊಂದು ಪ್ರಗತಿಹೀನ. ಒಬ್ಬರು ಮೇಲರಿಮೆ ಪ್ರಾಬಲ್ಯವಾದಿ, ಇನ್ನೊಬ್ಬರು ಸಮಾನತೆಗಾಗಿ ಹೋರಾಡುತ್ತಿದ್ದಾರೆ. ಆದರೆ ಬ್ರಾಹ್ಮಣ ಸ್ತ್ರೀವಾದಿಗಳು ಈ ಎರಡೂ ಕ್ಷೇತ್ರಗಳಲ್ಲಿ  ಯಾವುದೇ ಸಂಘರ್ಷವಿಲ್ಲದೆ ಓಡಾಡುತ್ತಾರೆ . ಅದಕ್ಕಾಗಿಯೇ ನಾನು ಈ ಪ್ರಶ್ನೆಯನ್ನು ಎತ್ತಿದ್ದೆ – ಅದು ಅವರಿಗೆ ವಿಭಿನ್ನವಾಗಿದೆಯೇ?

ಬ್ರಾಹ್ಮಣವಾದವು ಸ್ತ್ರೀವಾದಕ್ಕೆ ಸಂಪೂರ್ಣವಾಗಿ ವಿರೋಧವಾಗಿದೆಯೇ? ಬ್ರಾಹ್ಮಣ ವಾದವನ್ನು ಮೊದಲು ತಿರಸ್ಕರಿಸಿಬೇಕಾಗಿದ್ದು ಆ ಗುಂಪಿನಿಂದ ಸ್ತ್ರೀವಾದಿಗಳಾದವರು. ಅವರ ಹೋರಾಟ ಸಮಾನತೆಗಾಗಿ ಇದ್ದರೆ ಅವರು ಬ್ರಾಹ್ಮಣವಾದವನ್ನು ತಿರಸ್ಕರಿಸುವುದು ಮೊದಲನೆಯದಾಗಿರಬೇಕಿತ್ತು . ಅಂತಹ ಸಂಗತಿಯು ಎಲ್ಲಿಯೂ ಕಾಣಿಸುವುದಿಲ್ಲ ಹಾಗು ವ್ಯಕ್ತವಾಗಿಲ್ಲದ್ದರಿಂದ  ನಾನು ಮಾಡುವ ತೀರ್ಮಾನ ಬ್ರಾಹ್ಮಣ ಮತ್ತು ಸ್ತ್ರೀವಾದವು ಸಂಪೂರ್ಣವಾಗಿ ಪರಸ್ಪರ ಜೊತೆಯಾಗಿರುತ್ತದೆ . ಅವು  ಶಾಂತಿಯಿಂದ  ಸಹಬಾಳ್ವೆ ನಡೆಸುತ್ತವೆ.

ಬ್ರಾಹ್ಮಣ ಧರ್ಮದ ವಿರುದ್ಧ ಸಮಾನತೆ ಹೇಗೆ ಹೋರಾಡುತ್ತದೆ ಎಂಬುದನ್ನು ತೆಗೆದುಕೊಂಡರೆ..ಬಾಬಾಸಾಹೇಬರಿಂದ ಅತ್ಯಂತ ಸುಂದರವಾಗಿ ನಿರೂಪಿಸಿದ ಸಿದ್ಧಾಂತವಿದೆ  ಅದುವೇ  ಜಾತಿ ವಿನಾಶ . ಅತ್ಯಂತ ಸ್ಪಷ್ಟವಾಗಿ, ನೇರವಾಗಿ, ಯಾವುದೇ ಅಸ್ಪಷ್ಟತೆಯಿಲ್ಲದೆ, ಅದು ಬ್ರಾಹ್ಮಣವಾದ ಮತ್ತು ಅದರ ಜೊತೆಯ  ಸಂಪೂರ್ಣ ನಂಬಿಕೆಯ ವ್ಯವಸ್ಥೆ  ಸರ್ವನಾಶ ಮಾಡಲಿದೆ ಎಂದು ಅದು ಹೇಳುತ್ತದೆ. ಅದನ್ನು ಸಂಪೂರ್ಣ ನೆಲಸಮ  ಮಾಡಲಿದೆ . ಸ್ತ್ರೀವಾದವು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಮೊದಲನೆಯದಾಗಿ, ಅದು ಯಾರು, ಯಾವ ಸಮುದಾಯ , ಅವರು ಎಲ್ಲಿದ್ದಾರೆ ಎಂದು ನಮಗೆ ತಿಳಿದಿಲ್ಲ.

ನಮಗೆ ತಿಳಿದಿರುವ ಏಕೈಕ ವಿಷಯವೆಂದರೆ ಅವರು ವಿಶ್ವವಿದ್ಯಾಲಯಗಳಲ್ಲಿ ಎಲ್ಲೋ ಇದ್ದಾರೆ. ಸ್ತ್ರೀವಾದವು ಪಿತೃಪ್ರಭುತ್ವವನ್ನು ನಾಶಮಾಡಲಿದೆ ಎಂದು ಅವರು ಎಂದಿಗೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇಲ್ಲಿನ  ಮಾತುಕತೆಗಾಗಿ, ನಾವು  ಸ್ತ್ರೀವಾದವು ಪಿತೃಪ್ರಭುತ್ವವನ್ನು ನಾಶಪಡಿಸುತ್ತದೆ   , ಅದುವೇ  ಗುರಿ ಮತ್ತು  ವಿಧಾನವಾಗಿದೆ. ಅದು ಹಾಗಿದೆ ಎಂದುಕೊಳ್ಳೋಣ, ಹಾಗಾದರೆ ಬ್ರಾಹ್ಮಣ ವಾದಕ್ಕೆ ಏನಾಗುತ್ತದೆ? ಮೇಲರಿಮೆ  ಅಥವಾ ಶಾಸ್ತ್ರೀಯತೆ ಅಥವಾ ವರ್ಣಭೇದ ನೀತಿಗೆ ಏನಾಗುತ್ತದೆ? ಸ್ತ್ರೀವಾದವು ಪಿತೃಪ್ರಭುತ್ವವನ್ನು ನಾಶಮಾಡಿದರೆ ಎಲ್ಲರೂ ಸಮಾನರು ಎಂದು ಅರ್ಥವೇ?

ಅಥವಾ, ಜಾತಿ ವಿನಾಶ  ಸಂಭವಿಸಿದಾಗ ಎಲ್ಲರೂ ಸಮಾನರಾಗುತ್ತಾರೆಯೇ? ಅದನ್ನು ರಚಿಸುವ  ಇನ್ನೊಂದು ವಿಧಾನವೆಂದರೆ – ಪುರುಷರೇ  ಸ್ವತಃ ಅಸಮಾನವಾಗಿದ್ದಾಗ ಮಹಿಳೆಯರು ಪುರುಷರಿಗೆ ಸಮಾನರಾಗಬಹುದೇ? ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಬ್ರಾಹ್ಮಣ ಮಹಿಳೆ, ಬ್ರಾಹ್ಮಣ ಪುರುಷ ಅಥವಾ ಖತ್ರಿ ಪುರುಷ ಅಥವಾ ದಲಿತ ಪುರುಷನಿಗೆ ಸಮಾನಳಾಗುತ್ತಾಳ? ಸ್ತ್ರೀವಾದದಲ್ಲಿ ಮಹಿಳೆಯರ ಗುರಿ ಪುರುಷರಿಗೆ ಸಮಾನವಾಗಬೇಕಾದರೆ, ಅವಳು ಯಾರಿಗೆ ಸಮಾನನಾಗಲು ಹೊರಟಿದ್ದಾಳೆ? ಬಿಳಿ ಮಹಿಳೆ ಕಪ್ಪು ಮನುಷ್ಯನಿಗೆ ಸಮಾನಳಾಗುತ್ತಾಳೆಯೇ ಮತ್ತು ಪ್ರತಿಯಾಗಿ? ದಲಿತ ಮಹಿಳೆ ದಲಿತ ಪುರುಷನಿಗೆ ಅಥವಾ ಖತ್ರಿ ಪುರುಷನಿಗೆ ಅಥವಾ ಬ್ರಾಹ್ಮಣ ಪುರುಷನಿಗೆ ಸಮಾನನಾಗುತ್ತಾಳೆಯೇ? ಇದಕ್ಕೆ  ಹತ್ತಿರವಾಗಿ , ಅಮೇರಿಕಾದಲ್ಲಿ ವಲಸೆ ಕಾರ್ಮಿಕಳಾಗಿ, ನಾನು ಈ ಪ್ರಶ್ನೆಯನ್ನು ಹೀಗೆ ಕೇಳಬಹುದು. ನಾನು ಸ್ತ್ರೀಸಮಾನತಾವಾದಿಯಾಗಿದ್ದರೆ ಮತ್ತು  ಸ್ತ್ರೀವಾದವನ್ನು ನಂಬಿದ್ದರೆ   ಮತ್ತು ನನ್ನ ಹೋರಾಟ, ಸಂಘರ್ಷ  ಮತ್ತು ಗುರಿ ಕೇವಲ ಗಂಡಸಿಗೆ  ಸಮನಾಗುವುದಾದರೆ , ನಾನು ಬಿಳಿ, ಕಂದು ಬಣ್ಣದ ಮತ್ತು ಏಷ್ಯನ್ ಪುರುಷರು ಇರುವ ಸಮಾಜದಲ್ಲಿದ್ದೇನೆ. ಹಾಗಾಗಿ ವಲಸೆ ಕಾರ್ಮಿಕನಾಗಿ ನಾನು ಈ ಪುರುಷರ ಯಾವ ಗುಂಪಿಗೆ ಸಮಾನನಾಗಲಿದ್ದೇನೆ ಮತ್ತು ಹೇಗೆ ಆಗುತ್ತೇನೆ?

ಮುಂದುವರಿಯಲಿದೆ……..

—————————————

ಅನು ರಾಮದಾಸ್ ( Anu Ramdas ) ರೌಂಡ್ ಟೇಬಲ್ ಇಂಡಿಯಾದ ಸಹ ಸಂಸ್ಥಾಪಕ ಸಂಪಾದಕರಾಗಿದ್ದಾರೆ

ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya )

ಕನ್ನಡ ಅನುವಾದ ಭಾಗ ೧

ಕನ್ನಡ ಅನುವಾದ ಭಾಗ ೩ ಕೊನೆಯ ಭಾಗ

ಸವರಿ ಮತ್ತು ರೌಂಡ್ ಟೇಬಲ್ ಇಂಡಿಯಾದಲ್ಲಿ ಮೊದಲು ಪ್ರಕಟಿತ ಇಂಗ್ಲಿಷ್ ಲೇಖನ ‘Feminism is Brahminism’

Be the first to comment on "ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೨"

Leave a comment

Your email address will not be published.


*