ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್ ಎಲ್ ಭೈರಪ್ಪ
ಡಾ.ಬಿ.ಪಿ. ಮಹೇಶಚಂದ್ರ ಗುರು
ಜಗತ್ತಿನಲ್ಲಿ ಧಾರ್ಮಿಕ ಬಹುತ್ವ ಅತ್ಯಂತ ಒಪ್ಪಿತ ಜೀವನ ಮೌಲ್ಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಭಾರತ ದೇಶದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಯಾವುದೇ ಒಂದು ಧರ್ಮ ಇತರ ಧರ್ಮಗಳಿಗಿಂತ ಯಾವುದೇ ಕಾರಣಕ್ಕೂ ಶ್ರೇಷ್ಟವಲ್ಲ. ಸರ್ವಧರ್ಮಗಳ ನಡುವಣ ಸಮನ್ವಯತೆ ಆಧುನಿಕ ಕಾಲಘಟ್ಟದಲ್ಲಿ ವಿಶೇಷ ಮಹತ್ವ ಹೊಂದಿದೆ. ಮನುಷ್ಯ-ಮನುಷ್ಯರ ನಡುವೆ ಭಿನ್ನ ಬೇಧಗಳನ್ನು ಪೋಷಿಸುವ ಧರ್ಮ ಒಳ್ಳೆಯ ಧರ್ಮವಾಗಲು ಸಾಧ್ಯವಿಲ್ಲ. ಅಸ್ಪೃಷ್ಯತೆ, ಲಿಂಗ ತಾರತಮ್ಯ, ಅಸಮಾನತೆ ಮತ್ತು ಶೋಷಣಾ ಪ್ರವೃತ್ತಿಗಳನ್ನು ಒಳಗೊಂಡಿರುವ ಹಿಂದೂ ಧಾರ್ಮಿಕ ವ್ಯವಸ್ಥೆಯನ್ನು ಸುಧಾರಿಸಲು ಹಲವಾರು ಮಹನೀಯರು ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಶ್ರಮಿಸಿದ್ದಾರೆ. ಸಂತ ಕಬೀರ, ಮಹಾತ್ಮ ಫುಲೆ, ಸ್ವಾಮಿ ದಯಾನಂದ ಸರಸ್ವತಿ, ಈಶ್ವರ ಚಂದ್ರ ವಿದ್ಯಾಸಾಗರ, ರಾಜಾರಾಮ್ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಪೆರಿಯಾರ್, ನಾರಾಯಣ ಗುರು, ಶಿಶುನಾಳ ಶರೀಫ್ ಮೊದಲಾದ ಮಹಾತ್ಮರು ಸರ್ವರಿಗೂ ಸಮಬಾಳನ್ನು ಕೊಡುವ ಹಿಂದೂ ಧರ್ಮವನ್ನು ಮಾನವೀಯ ನೆಲೆಗಟ್ಟಿನಲ್ಲಿ ಪುನಾರಚಿಸುವ ಪ್ರಯತ್ನ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಬಹುಸಂಖ್ಯಾತ ಹಿಂದುಳಿದ ವರ್ಗಗಳನ್ನು ಅಸ್ಪೃಶ್ಯತೆ, ಅಸಮಾನತೆ ಮತ್ತು ಶೋಷಣೆಯೆಡೆಗೆ ದಬ್ಬುವ ಹಿಂದುತ್ವವಾದಿಗಳ ಹುನ್ನಾರವನ್ನು ಉಗ್ರವಾಗಿ ಖಂಡಿಸಿ ಬಂಡಾಯದ ಸಂಕೇತವಾಗಿ ಬೌದ್ಧ ಧರ್ಮವನ್ನು ೧೯೫೬ರಲ್ಲಿ ಅನಿವಾರ್ಯವಾಗಿ ಸುಮಾರು ೭ಲಕ್ಷ ಸಮಾನ ಮನಸ್ಕ ಅನುಯಾಯಿಗಳೊಂದಿಗೆ ಸ್ವೀಕರಿಸಿದ ಇತಿಹಾಸ ನಮ್ಮ ಮುಂದಿದೆ.
ವಾಸ್ತವವಾಗಿ ಹಿಂದೂ ಧರ್ಮ ಯಾರಿಗೂ ಕೆಡುಕನ್ನುಂಟುಮಾಡುವ ಧರ್ಮವಲ್ಲ. ಆದರೆ ಅಲ್ಪಸಂಖ್ಯಾತ ವೈದಿಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಎಲ್ಲ ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕಬಳಿಸುವ ಸಲುವಾಗಿ ತಮ್ಮನ್ನು ‘ಹಿಂದುತ್ವವಾದಿಗಳು’ ಎಂಬುದಾಗಿ ಕರೆದುಕೊಳ್ಳುತ್ತಾರೆ. ಇವರಿಗೆ ನಿಜವಾಗಿಯೂ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಒಳಿತುಗಳಿಗೆ ವಿರುದ್ಧವಾಗಿರುವ ಬ್ರಾಹ್ಮಣ್ಯದ ರಕ್ಷಣೆ ಗೌಪ್ಯ ಕಾರ್ಯಸೂಚಿಯಾಗಿದೆ. ಇವರು ನಿಜವಾದ ಅರ್ಥದಲ್ಲಿ ಹಿಂದೂ ಧರ್ಮ ಮತ್ತು ಇಂಡಿಯಾ ದೇಶದ ರಕ್ಷಕರಲ್ಲ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಪ್ರಕೃತಿ ಧರ್ಮವನ್ನು ಆಧರಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಗೆ ಅವಕಾಶ ಮಾಡಿಕೊಡುವ ಆರೋಗ್ಯಕರ ಚಿಂತನೆಗಳು ಮತ್ತು ಆಚಾರಗಳು ಯಥೇಚ್ಛವಾಗಿವೆ. ಆದರೆ ಹಿಂದೂ ಧರ್ಮದಲ್ಲಿ ಇರುವ ಅಸ್ಪೃಶ್ಯತೆ, ಜಾತಿಯತೆ, ತಾರತಮ್ಯ ಮತ್ತು ಶೋಷಣಾ ಪ್ರವೃತ್ತಿಗಳಿಂದ ಭಾರತದ ಬಹುಜನರು ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಹಿಂದೂ ಧರ್ಮದ ಸ್ವಘೋಷಿತ ರಕ್ಷಕರೆಂದು ಬೊಬ್ಬೆ ಹೊಡೆಯುವ ವೈದಿಕರೆಂಬ ಸ್ಥಾಪಿತ ಹಿತಾಸಕ್ತಿಗಳು ಪ್ರಮುಖ ಕಾರಣರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತವನ್ನು ಜಾತಿಯ ಹೆಸರಿನಲ್ಲಿ ವಿಭಜಿಸಿ ದುರ್ಬಲಗೊಳಿಸುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ಗುಂಪಿನಲ್ಲಿ ಎಸ್.ಎಲ್.ಭೈರಪ್ಪ ಎದ್ದು ಕಾಣುತ್ತಿರುವುದು ದುರ್ದೈವದ ಸಂಗತಿಯಾಗಿದೆ.
‘ಹಿಂದೂ ಧರ್ಮದ ಹೃದಯ ವೈಶಾಲ್ಯತೆ ಅನ್ಯಧರ್ಮೀಯರಲ್ಲೂ ಇದ್ದರೆ ಧಾರ್ಮಿಕ ವಿಷಯದಲ್ಲಿ ಹೊಡೆದಾಟ – ಬಡಿದಾಟ ನಡೆಯುವುದಿಲ್ಲ’ ಎಂಬ ಇವರ ಇತ್ತೀಚಿನ ಹೇಳಿಕೆ ಸತ್ಯಕ್ಕೆ ದೂರವಾಗಿದೆ, ಸ್ವಾಮಿ ವಿವೇಕಾನಂದರು ಅಸ್ಪೃಶ್ಯತೆಯನ್ನು ಆಚರಿಸುವ ಹಿಂದೂ ಧರ್ಮ ಒಳ್ಳೆಯ ಧರ್ಮವಲ್ಲ ಎಂದು ಪ್ರತಿಪಾದಿಸಿದ್ದರು. ಜಾತಿಯ ಕಾರಣಕ್ಕಾಗಿ ಬಹುಸಂಖ್ಯಾತ ಮೂಲನಿವಾಸಿಗಳನ್ನು ಅಸಮಾನತೆಯೆಡೆಗೆ ದಬ್ಬುವ ಹಿಂದೂ ಧರ್ಮ ಜೀವಪರ ಧರ್ಮವಲ್ಲವೆಂದು ಅಂಬೇಡ್ಕರ್ ವಾದಿಸಿದ್ದರು. ಹಿಂದೂ ಧರ್ಮ ಸುಧಾರಣೆಗಾಗಿ ಪ್ರಯತ್ನಿಸಿದ ಮಹನೀಯರೆಲ್ಲರೂ ಅಪ್ಪಟ ಭಾರತೀಯರೇ ಹೊರತು ಹಿಂದೂ ಧರ್ಮ ವಿರೋಧಿಗಳಲ್ಲ ಎಂಬುದನ್ನು ವೈದಿಕರು ಮನಗಾಣಬೇಕು. ಕೋವಿಡ್-೧೯ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಬೀದಿಗೆ ಬಿದ್ದ ಅಸಹಾಯಕ ಬಡವರಿಗೆ ಒಂದು ರೂಪಾಯಿಯನ್ನು ಕೊಡದ ಭೈರಪ್ಪನವರು ‘ಶ್ರೀ ರಾಮಮಂದಿರ ನಿರ್ಮಾಣ ನಿಧಿಗೆ ೧೦ ಸಾವಿರ ರೂ. ದೇಣಿಗೆ ನೀಡಿರುವುದು’ ಒಂದು ಬಗೆಯ ಧಾರ್ಮಿಕ ಸ್ಟಂಟ್ ಆಗಿದೆಯೇ ಹೊರತು ಬೇರೇನೂ ಅಲ್ಲ. ರಾಮಮಂದಿರ ನಿರ್ಮಾಣಕ್ಕೆ ಯಾರಿಂದಲೂ ವಿರೋಧವಿಲ್ಲ. ಆದರೆ ಕೋಟ್ಯಾಂತರ ಹಿಂದುಳಿದ ಸಮುದಾಯಗಳಿಗೆ ಸೇರಿದ ಭಾರತೀಯರನ್ನು ಅಸಮಾನತೆ ಮತ್ತು ಶೋಷಣೆಗಳೆಡೆಗೆ ದಬ್ಬುವ ವೈದಿಕರ ಕಪಿಮುಷ್ಟಿಗೆ ಒಳಗಾಗಿರುವ ಹಿಂದೂ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಲು ಸಾಧ್ಯವಿಲ್ಲವೆಂಬ ಸತ್ಯವನ್ನು ಭೈರಪ್ಪನವರು ಮನಗಾಣಬೇಕು.
ಭಾರತದಲ್ಲಿ ಗೋವಿನ ಜೀವಕ್ಕೆ ಇರುವಷ್ಟು ಮಹತ್ವ ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಜೀವಕ್ಕೆ ಇಲ್ಲದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಮನುಷ್ಯ, ಒಂದು ಮತ ಮತ್ತು ಒಂದು ಮೌಲ್ಯ ಇರುವುದು ಸತ್ಯಸಂಗತಿಯಾಗಿದೆ. ಆದರೆ ಭಾರತೀಯ ಸಮಾಜದಲ್ಲಿ ಒಬ್ಬ ಮನುಷ್ಯ, ಒಂದು ಮೌಲ್ಯ ಮತ್ತು ಗೌರವಯುತ ಬದುಕು ಸಿಗದಿರಲು ಭೈರಪ್ಪನವರಂತಹ ಧಾರ್ಮಿಕ ಮೂಲಭೂತವಾದಿಗಳ ಹುನ್ನಾರ ಪ್ರಮುಖ ಕಾರಣವಾಗಿದೆ. ಆರ್ಥಿಕವಾಗಿಯೂ ಮೇಲ್ಜಾತಿಯವರಿಗೆ ಸಂಪತ್ತು ಮತ್ತು ಕೆಳಜಾತಿಯವರಿಗೆ ಬಡತನ ಪ್ರಾಪ್ತವಾಗಲು ಹಿಂದೂ ಧಾರ್ಮಿಕ ವ್ಯವಸ್ಥೆ ಕಾರಣವಾಗಿದೆಯೆಂಬ ಸತ್ಯವನ್ನು ಭೈರಪ್ಪನಂಥವರು ಒಪ್ಪಿಕೊಳ್ಳುವುದಿಲ್ಲ. ಸತ್ಯವನ್ನು ಮಂಡಿಸುವ ಇತಿಹಾಸಕಾರರ ಅಬ್ಬರ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಡಿಮೆಯಾಗಿದೆಯೆಂಬ ಭೈರಪ್ಪನವರ ಹೇಳಿಕೆ ಅವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಸಂಸ್ಕೃತಿಯುಳ್ಳವರು, ಇತಿಹಾಸಪ್ರಜ್ಞೆ ಇರುವವರು, ಜನರ ಜೀವಕ್ಕೆ ಬೆಲೆ ಕೊಡುವವರು ಮತ್ತು ನಿಜವಾದ ಭಾರತೀಯರು ಅಧಿಕಾರಕ್ಕೆ ಬಂದಿದ್ದ ಪಕ್ಷದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಶೋಷಿತರು ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ಬೀದಿಯಲ್ಲಿ ಅನಾಥರಾಗಿ ಸಾಯುವಂತಹ ಹೀನಾಯ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಭೈರಪ್ಪನವರು ಏಕೆ ಅರ್ಥಮಾಡಿಕೊಳ್ಳಬಾರದು?
ರೈತರ ಭೂಮಿ, ಕಾರ್ಮಿಕರ ಉದ್ಯೋಗ, ಯುವಜನರ ಬದುಕು, ಮಹಿಳೆಯರ ಮಾನ ಮತ್ತು ಶೋಷಿತರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಆಳುವವರನ್ನು ಸಂಸ್ಕೃತಿಯುಳ್ಳವರು ಎಂದು ಕರೆಯಲು ಸಾಧ್ಯವೇ? ಭೈರಪ್ಪನಂತವರು ಇಷ್ಟೆಲ್ಲಾ ಅನಾಹುತಗಳು ಜರುಗುತ್ತಿದ್ದರೂ ಸಹ ‘ದೇಶದ ಜನರಲ್ಲಿ ಹೊಸ ಪ್ರಜ್ಞೆ ಹುಟ್ಟಿದೆ’ ಎಂಬ ಹಸಿ ಸುಳ್ಳನ್ನು ಸಾರ್ವಜನಿಕವಾಗಿ ಹೇಳಿ ತಮ್ಮ ಆತ್ಮಹತ್ಯೆಗೆ ಮುಂದಾಗಿರುವುದು ಖಂಡನೀಯ. ದಿಲ್ಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆಯಲ್ಲಿ ಪಂಜಾಬ್ನವರು ಮಾತ್ರ ಭಾಗಿಯಾಗಿದ್ದಾರೆ ಎಂಬ ಭೈರಪ್ಪನವರ ಧೋರಣೆ ಅಮಾನವೀಯವಾಗಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಕರ್ನಾಟಕ ಮೊದಲಾದೆಡೆಯಿಂದ ಸಹಸ್ರಾರು ರೈತರು ಅಹಿಂಸಾತ್ಮಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ರೈತ ವಿರೋಧಿ ದೆಹಲಿ ಗದ್ದುಗೆಗೆ ಮುತ್ತಿಗೆ ಹಾಕಿರುವುದು ದೇಶಬಾಂಧವರಲ್ಲಿ ಮೂಡಿರುವ ಹೊಸ ಹೋರಾಟ ಪ್ರಜ್ಞೆಗೆ ಸಾಕ್ಷಿಯಾಗಿದೆಯೆಂಬ ಕನಿಷ್ಟ ಅರಿವು ಭೈರಪ್ಪನವರಿಗೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ರೈತ ವಿರೋಧಿ ಸರ್ಕಾರದ ಧೋರಣೆ ವಿರುದ್ಧ ನಿರಂತರ ಪ್ರತಿಭಟನೆಗಳು ಜರುಗುತ್ತಿರುವುದನ್ನು ನೋಡದಷ್ಟು ಅಂಧರಾಗಿದ್ದಾರೆಯೇ ಭೈರಪ್ಪ? ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಹಾಗೂ ರೈತನಾಯಕ ದೇವನೂರ ಮಹಾದೇವ ಹೇಳಿರುವ ಹಾಗೆ ಭೈರಪ್ಪನವರು ಜೀವಪರ ಸಂವೇದನೆ ಕಳೆದುಕೊಂಡಿದ್ದಾರೆ. ದೇಗುಲಗಳ ನಿರ್ಮಾಣಕ್ಕಿಂತ ಪ್ರಬುದ್ಧ ದೇಶದ ನಿರ್ಮಾಣ ಬಹುಮುಖ್ಯವೆಂಬ ಸತ್ಯವನ್ನು ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಭೈರಪ್ಪ ಅರಿಯಲೇಬೇಕು!.
ಸಂವಿಧಾನ ಶಿಲ್ಪಿ ಹಾಗೂ ಮಾನವತಾವಾದಿ ಅಂಬೇಡ್ಕರ್ ‘ಒಂದು ದೇವಾಲಯವನ್ನು ನಿರ್ಮಿಸುವುದರಿಂದ ಒಂದು ಸಾವಿರ ಭಿಕ್ಷುಕರು ಹುಟ್ಟುತ್ತಾರೆ. ಆದರೆ ಒಂದು ಗ್ರಂಥಾಲಯವನ್ನು ಕಟ್ಟುವುದರಿಂದ ಒಂದು ಲಕ್ಷ ಜನ ಪ್ರಜ್ಞಾವಂತರು ರೂಪುಗೊಳ್ಳುತ್ತಾರೆ’ ಎಂದು ನುಡಿದ ಸತ್ಯ ಭೈರಪ್ಪನಂತಹ ಜಾಣಪೆದ್ದರಿಗೆ ಅರ್ಥವಾಗುವುದುಂಟೆ? ದೇವಾಲಯ ನಿರ್ಮಾಣದಿಂದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಿಲ್ಲವೆಂಬುದನ್ನು ಭೈರಪ್ಪನಂತಹ ಹಿಂದುತ್ವವಾದಿಗಳು ಮೊದಲು ಅರಿಯಬೇಕು. ಮಂದಿರ ನಿರ್ಮಾಣಕ್ಕಿಂತ ಮಿಗಿಲಾಗಿ ಎಲ್ಲ ಭಾರತೀಯರಿಗೂ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸುರಕ್ಷತೆಗಳನ್ನು ಒದಗಿಸಿ ದೇಶವನ್ನು ಪ್ರಬುದ್ಧ ರಾಷ್ಟçವನ್ನಾಗಿ ರೂಪಿಸುವ ಕೆಲಸ ಅತಿಮುಖ್ಯವೆಂದು ಇಂದು ನಮ್ಮನ್ನಾಳುತ್ತಿರುವವರಿಗೆ ಮನದಟ್ಟು ಮಾಡಿಕೊಡುವುದು ಪ್ರಜ್ಞಾವಂತರ ಹೊಣೆಗಾರಿಕೆಯಾಗಿದೆ. ಇಂತಹ ಹೊಣೆಗಾರಿಕೆಯಿಂದ ವಿಮುಖರಾಗಿರುವ ಭೈರಪ್ಪನಂತಹ ವ್ಯವಸ್ಥೆಯ ಪೂಜಾರಿಯ ಅವಶ್ಯಕತೆ ಭಾರತೀಯರಿಗೆ ಖಂಡಿತ ಇಲ್ಲ.
ಅಂಬೇಡ್ಕರ್ ಬಹಳ ಹಿಂದೆಯೇ “ಬದುಕಿ ಉಳಿಯುವುದೇ ದೊಡ್ಡ ಸಾಧನೆಯಲ್ಲ. ಬದುಕಿ ಉಳಿಯುವ ಅನೇಕ ರೀತಿಗಳಿವೆ. ಆದರೆ ಎಲ್ಲ ತರದ ಬದುಕು ನಮ್ಮ ಗೌರವ ಹಾಗೂ ಹೆಮ್ಮೆಗೆ ಅರ್ಹವಲ್ಲ. ಒಬ್ಬ ವ್ಯಕ್ತಿಯಾಗಲಿ ಅಥವಾ ಒಂದು ಸಮಾಜವಾಗಲಿ ಸುಮ್ಮನೆ ಜೀವಂತವಾಗಿ ಉಳಿಯುವುದಕ್ಕೂ ಘನತೆ ಗೌರವದಿಂದ ಬಾಳಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ” ಎಂದು ನುಡಿದ ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡು ಭೈರಪ್ಪನವರು ಮಾನವಂತರಾಗಿ – ಹೃದಯವಂತರಾಗಿ ಬದುಕಬೇಕು. ಈ ಸತ್ಯವನ್ನು ‘ಕೇಂದ್ರದಲ್ಲಿ ಸಂಸ್ಕೃತಿಯುಳ್ಳವರು ಅಧಿಕಾರಕ್ಕೆ ಬಂದಿದ್ದಾರೆ’ ಎಂದು ತಪ್ಪಾಗಿ ಭಾವಿಸಿರುವ ಜನಾಬ್ ಮೋದಿಜಿ ಬಳಗಕ್ಕೆ ಮನದಟ್ಟು ಮಾಡಿಕೊಡುವ ಘನ ಕಾರ್ಯದಲ್ಲಿ ಭೈರಪ್ಪನವರು ನಿರತರಾಗಲಿ. ಇವರು ಅಸಲಿ ಭಾರತೀಯ ಹಾಗೂ ಮಾನವತಾವಾದಿಯಾಗಿ ಘನತೆಯಿಂದ ಇನ್ನು ಮುಂದಾದರೂ ಬದುಕಲೆಂದು ಆಶಿಸುತ್ತೇನೆ.
ಪ್ರೊಫೆಸರ್ ಬಿ. ಪಿ ಮಹೇಶ್ ಚಂದ್ರ ಗುರು ಮೈಸೂರು ವಿಶ್ವವಿದ್ಯಾಲಯದ
ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ.
Be the first to comment on "ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್ ಎಲ್ ಭೈರಪ್ಪ"