ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು

ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು

-ಡಾ. ರವಿ ಎಂ. ಸಿದ್ಲಿಪುರ

ಡಾ. ಬಿ.ಆರ್. ಅಂಬೇಡ್ಕರರು ಪ್ರಾಚೀನ ಭಾರತದ ಇತಿಹಾಸ ಕುರಿತು ಅನೇಕ ಆಯಾಮಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ್ದಾರೆ. ಪ್ರಾಚೀನ ಭಾರತವು ಹೊಂದಿರುವ ವಿಪುಲವಾದ ಇತಿಹಾಸವನ್ನು; ಅದು ವಿರೂಪಗೊಂಡಿರುವುದನ್ನು ವಿಶ್ಲೇಷಿಸಿದ್ದಾರೆ. ಬೌದ್ಧಧರ್ಮ ಉದಯವಾದ ತರುವಾಯದಲ್ಲಿ, ಇತಿಹಾಸವನ್ನು ವಿರೂಪಗೊಳಿಸುವ ಕಾರ್ಯ ಹೆಚ್ಚಾಗಿ ನಡೆದಿರುವುದನ್ನು ಗುರುತಿಸಿದ್ದಾರೆ. ಅಂಬೇಡ್ಕರರು ಬೌದ್ಧಧರ್ಮದ ಉದಯವನ್ನು ಕಾಂ್ರತಿಯೆಂದು ಪರಿಗಣಿಸಿ; ಅದಕ್ಕೆ ಬ್ರಾಹ್ಮಣರು ತೋರಿದ ಎಲ್ಲಾ ಬಗೆಯ ವಿರೋಧಗಳನ್ನು ಪ್ರತಿಕ್ರಾಂತಿಯೆಂದು ಕರೆದರು. ಈ ಪ್ರತಿಕ್ರಾಂತಿಯ ಸಂದರ್ಭದಲ್ಲಿ ಬುದ್ಧಯುಗದ ಇತಿಹಾಸವನ್ನು ಬ್ರಾಹ್ಮಣ ಲೇಖಕರು ಬುದ್ಧಿಪೂರ್ವಕವಾಗಿಯೇ ವಿರೂಪಗೊಳಿಸಿದರು. ಹಾಗಾಗಿ ಇತಿಹಾಸವು ರಂಜಿಸುವಂತಹ ಪುರಾಣವಾಯಿತು ಎಂದಿದ್ದಾರೆ. ಮಹಾಭಾರತವೂ ಹೀಗೆಯೆ ಆಕ್ರಮಣಕ್ಕೆ ತುತ್ತಾಗಿ ವಿರೂಪಗೊಂಡಿತು ಎಂದು ವಿವರಿಸಿದ್ದಾರೆ. ಅಂತಹ ವಿರೂಪಗಳ ಭಗ್ನಾವಶೇಷಗಳ ಅಡಿಯಲ್ಲಿರುವ ಜನ ಇತಿಹಾಸವನ್ನು ಬೌದ್ಧಸಾಹಿತ್ಯದ ಸಹಾಯದಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಈ ಪ್ರಬಂಧದ ಶೀರ್ಷಿಕೆಯಲ್ಲಿರುವ ‘ಅಂಬೇಡ್ಕರ್’ ಎಂಬುದು, ಅವರು ಮಹಾಭಾರತವನ್ನು ಅಧ್ಯಯನಕ್ಕೆ ಒಳಪಡಿಸಿದ ಚಿಂತನೆಗಳ ಪ್ರತೀಕವಾಗಿದೆ. ಅವುಗಳ ಹಿನ್ನೆಲೆಯಲ್ಲಿ ಜೈನ, ವೈದಿಕ ಹಾಗೂ ಜನಪದ ಸಂವೇದನೆಗಳನ್ನು ಪ್ರತಿಪಾದಿಸುವ ‘ಕನ್ನಡ ಮಹಾಭಾರತಗಳ’ನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಿದೆ. ಕನ್ನಡ ಮಹಾಭಾರತಗಳಲ್ಲಿ ಅಭಿವ್ಯಕ್ತಗೊಂಡಿರುವ ವನವಾಸಿ, ಅಸುರ, ರಾಕ್ಷಸ ಹಾಗೂ ದೇವತೆಗಳ ಊಳಿಗದ ಗಂಧರ್ವರನ್ನು ಪ್ರಭುತ್ವ ಹೇಗೆ ನಡೆಸಿಕೊಂಡಿದೆ ಎಂಬುದನ್ನು ವಿಶ್ಲೇಷಿಸಿಕೊಳ್ಳುವ ಉದ್ದೇಶ ಇಲ್ಲಿದೆ.

ಮಹಾಭಾರತ ರಚನೆ ಮತ್ತು ಬೆಳವಣಿಗೆ

ಅಂಬೇಡ್ಕರ್ ಹಿಂದೂಗಳು ಮಹಾಭಾರತವನ್ನು ಶ್ರೇಣೀಕೃತ ಸಮಾಜವನ್ನು ಕಾಯ್ದುಕೊಳ್ಳುವ ಹಾಗೂ ಮುಂದುವರೆಸುವ ಉದ್ದೇಶದಿಂದ ಬಳಸಿಕೊಂಡಿದ್ದಾರೆ. ಸಾಮಾಜಿಕ ಸ್ಥಾನಮಾನವನ್ನು, ಧಾರ್ಮಿಕ ಅಧಿಕಾರವನ್ನು ಪಡೆದಿರುವುದನ್ನು ಮನಗಂಡಿದ್ದಾರೆ. ಈ ಕಾರಣದಿಂದ ಭಾರತದ ರಚನೆ ಹಾಗೂ ಬೆಳವಣಿಗೆ ಮತ್ತು ವಸ್ತುವಿನ ಹಿನ್ನೆಲೆಯಲ್ಲಿ ಸಾಕಷ್ಟು ಬರವಣಿಗೆಯನ್ನು ಮಾಡಿದ್ದಾರೆ. ಭಾರತದ ಕಾಲವನ್ನು ಚಾರಿತ್ರಿಕ ಹಾಗೂ ಧಾರ್ಮಿಕ ಆಧಾರಗಳ ಸಹಾಯದಿಂದ ನಿಷ್ಕರ್ಷಿಸಲು ಪ್ರಯತ್ನಿಸಿದ್ದಾರೆ. ಭಾರತ ರಚನೆ ಮತ್ತು ಮಹಾಭಾರತದ ಬೆಳವಣಿಗೆಯ ಕಾಲ ಕ್ರಿ.ಶ. 200 ರಿಂದ ಕ್ರಿ.ಶ. 1200ರ ನಡುವಿನದ್ದು ಎಂಬುದನ್ನು ವಿವರಿಸಿದ್ದಾರೆ.(ನಾರಾಯಣ, ಕೆ.ವಿ., 2015; ಪು.271-273)

ಕಾಲ ಬದಲಾದಂತೆ ಆಯಾ ಕಾಲದ ಕವಿಗಳು ಭಾರತಕತೆಯನ್ನು ವಿಸ್ತರಿಸುತ್ತಾ ಹೋದರು. ಹಾಗಾಗಿ ಭಾರತದ ಶೀರ್ಷಿಕೆ ಬದಲಾಗುತ್ತಾ ಮತ್ತು ವಸ್ತು ವಿಷಯಗಳು ಸೇರ್ಪಡೆಯಾಗುತ್ತಾ ಒಟ್ಟು ಮೂರು ಆವೃತ್ತಿಗಳಲ್ಲಿ ಬೆಳೆಯಿತು. ಮಹಾಭಾರತದ ಮೂಲ ಸ್ವರೂಪದ ಶೀರ್ಷಿಕೆ `ಜಯ’. ಈ ಆವೃತ್ತಿಯ ಕರ್ತೃ ವ್ಯಾಸ. ಜಯದ ಎರಡನೇ ಆವೃತ್ತಿಯ ಹೆಸರು ಭಾರತ. ಈ ಎರಡನೇ ಆವೃತ್ತಿಯ ಕೃರ್ತೃ ವೈಶಂಪಾಯನ. ಮೂರನೇ ಆವೃತ್ತಿಯ ಕರ್ತೃ ಸೌತಿ. ಈತನ ಆವೃತ್ತಿಯೇ ಮಹಾಭಾರತವೆಂದು ಕರೆಯಲ್ಪಟ್ಟಿತು. ವ್ಯಾಸನ `ಜಯ’ವು 8,800 ಶ್ಲೋಕಗಳನ್ನು ಒಳಗೊಂಡಿತ್ತು. ಅದು ವೈಶಂಪಾಯನನಿಂದ 24,000 ಶ್ಲೋಕಗಳಿಗೆ ಏರಿತು. ನಂತರ ಸೌತಿ ಅದನ್ನು 96,836 ಶ್ಲೋಕಗಳಿಗೆ ವಿಸ್ತರಿಸಿ, ಮಹಾಭಾರತವನ್ನಾಗಿಸಿದನು. ಈ ಸೃಷ್ಟಿ ಹಾಗೂ ಮರುಸೃಷ್ಟಿಗಳ ನಡುವೆ ಮಹಾಭಾರತದ ವಸ್ತು ಕೌರವ-ಪಾಂಡವರ ಚಾರಿತ್ರಿಕ ಯುದ್ಧ ಕತೆಯೊಂದಿಗೆ; ನೀತಿಬೋಧೆಯೂ ಸೇರ್ಪಡೆಯಾಗಿ ಸಾಮಾಜಿಕ, ನೈತಿಕ ಹಾಗೂ ಧಾರ್ಮಿಕ ಕರ್ತವ್ಯಗಳನ್ನು ಬೋಧಿಸುವ ಉಪದೇಶಾತ್ಮಕ ಕೃತಿಯಾಯಿತು. ಕಡೆಯದಾಗಿ ಸರ್ವಗಾಹ್ರಿ ಐತಿº್ಯÀಗಾಥೆಗಳನ್ನು, ಸಣ್ಣಪುಟ್ಟ ಸ್ವತಂತ್ರ ಕತೆಗಳು, ಕಲಿಕೆ ಹಾಗೂ ಜ್ಞಾನ ಶಾಖೆಗಳನ್ನು ಜಯ ಮತ್ತು ಭಾರತದ ಒಡಲೊಳಗೆ ಆಗಿ ಹೋದ ಘಟನೆಗಳಂತೆಯೇ ಸೇರಿದವು.

ಹೀಗೆ ಮೂಲ ಕತೆಗೆ ಕುಂದು ಉಂಟಾಗದಂತೆ ಬೆಳೆದ ಮಹಾಭಾರತವನ್ನು ಬ್ರಾಹ್ಮಣರು ಹಿಂದೂ ಧರ್ಮದ ರಕ್ಷಣೆಯ ಕೋಟೆಯನ್ನಾಗಿ ಮಾಡಿಕೊಂಡರು. ಅನ್ಯಧರ್ಮಗಳಿಂದ ಪ್ರೇರಿತರಾದ ಶೂದ್ರರು ದೇವರುಗಳನ್ನು ಬಹಿಷ್ಕರಿಸುವರು. ದ್ವಿಜರ ಸೇವೆ ಮಾಡಲಾರರು. ಅಲ್ಲದೇ ದ್ವಿಜರು ಪ್ರಭುತ್ವದ ರಕ್ಷಣೆಯಿಲ್ಲದೆ ಜಗತ್ತನ್ನು ಸುತ್ತುವಂತಾಗುತ್ತದೆ. ಇದರಿಂದಾಗಿ ಹಿಂದೂ ಸಮಾಜ ಅವನತಿಯಾಗುತ್ತದೆ ಎಂದು ಭಯಗೊಂಡರು. ಇಂತಹ ಮಹಾಭಾರತ ಪುರಾಣಗಳ ಮೂಲಕ ಸಮಾಜವನ್ನು ರಕ್ಷಿಸಲು ಮುಂದಾದರು. ಅದರ ಪರಮ ಉದ್ದೇಶವೇ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿತ್ತು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹಿಡಿತವನ್ನು ಸಾಧಿಸುವ ಮೂಲಕ ರಾಜಕಾರಣವನ್ನು ನಿಯಂತ್ರಿಸುವ ಹುನ್ನಾರವೂ ಅಡಗಿತ್ತು ಎಂಬುದನ್ನು ಅಂಬೇಡ್ಕರರು ವಿಶ್ಲೇಷಿಸಿದ್ದಾರೆ. ಇಂತಹ ಪುರಾಣಗಳು ಮೂಲವಾಸಿಗಳನ್ನು ತುಳಿದಿದ್ದನ್ನು ಆಧಾರ ಸಹಿತವಾಗಿ ವಿಶದೀಕರಿಸಿದ್ದಾರೆ. ಹಾಗೆಯೇ ಪುರಾಣಗಳನ್ನು ದಿಕ್ಕರಿಸುವ ಮೂಲಕ ಹೊರಬರುವ ಸಾಧ್ಯತೆಗಳನ್ನು ತೋರಿಸಿದ್ದಾರೆ. ಒಟ್ಟಂದದಲ್ಲಿ ಒಂದು ಧರ್ಮವು ತನ್ನಲ್ಲಿರುವ ಬಹುಜನ ಪ್ರಚಲಿತ ಪ್ರಾಚೀನ ಪಠ್ಯವನ್ನು ಆಗಿಂದಾಗ್ಗೆ ಪರಿಷ್ಕರಿಸುತ್ತಿರುತ್ತದೆ. ಆ ಪರಿಷ್ಕರಣೆಯೂ ಸುಧಾರಣೆಯನ್ನು ಬಯಸುವಂಥದ್ದಾಗಿರದೆ, ತನ್ನ ರಕ್ಷಣೆಯನ್ನು ಮಾಡಿಕೊಳ್ಳುವಂತಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು.
ಮಹಾಭಾರತವನ್ನು ಕುರಿತು ಚರ್ಚಿಸಿರುವ ಅಂಬೇಡ್ಕರರ ಬರವಣೆಗೆಯಲ್ಲಿ ಬಹುಮುಖ್ಯವಾಗಿ ಕೆಲವು ಅಂಶಗಳನ್ನು ಗುರುತಿಸಬಹುದು. ಅವುಗಳು ಹೀಗಿವೆ:

1. ಮಹಾಭಾರತವು ಹಿಂದೂ ಸಮಾಜ ಸ್ಥಾಪಿಸಿರುವ ಚಾತುರ್ವರ್ಣ ವ್ಯವಸ್ಥೆಯನ್ನು ಕಾಪಾಡುವಂತೆ ರಚಿಸಲ್ಪಟ್ಟಿದೆ.
2. ಚಾತುರ್ವರ್ಣ ವ್ಯವಸ್ಥೆಯಲ್ಲಿ ಉನ್ನತ ವರ್ಣದವರ ಹಿತಾಸಕ್ತಿಯನ್ನು ಪೋಷಿಸುತ್ತದೆ.
3. ಉನ್ನತ ವರ್ಣವನ್ನು ಹಾಗೂ ಅವರು ನಿರ್ದೇಶಿಸುವ ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವ ಪ್ರಭುತ್ವದ ಕ್ರಿಯೆಯೊಂದಿಗೆ ಕಾರ್ಯಕಾರಣ ಸಂಬಂಧ ಹೊಂದಿದೆ.
4. ಮಹಾಭಾರತವು ಮನು ಪ್ರತಿಪಾದಿಸಿದ ರಾಜಕೀಯ, ಸಾಮಾಜಿಕ, ಧಾರ್ಮಿಕ ನೀತಿಗಳನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತದೆ.
5. ಒಂದೆರಡು ವರ್ಗಗಳಿಗೆ ಪೂರಕವಾಗಿ ಭಾರತವಸ್ತು ನಿರೂಪಣೆಗೊಂಡಿದೆ.
6. ಮಹಾಭಾರತ ಹೆಣ್ಣನ್ನು ಗಂಡಿನ ಭೋಗದ ಸರಕನ್ನಾಗಿ ಚಿತ್ರಿಸಿದೆ.
7. ಭಾರತ ಕಥೆಯಲ್ಲಿನ ಸಾಮಾನ್ಯರ ಸ್ಥಿತಿಗತಿ ಸಮಕಾಲೀನ ಭಾರತದ ಶೋಷಿತ ವರ್ಗವನ್ನೇ ಹೋಲುತ್ತದೆ.
8. ಸಹ ಮನುಷ್ಯರನ್ನೇ ನಾಶಗೊಳಿಸುವ ಕಾರ್ಯಕ್ಕೆ ಧರ್ಮದ ಲೇಪನವನ್ನು ಹಚ್ಚಿ ಸಮರ್ಥಿಸಿಕೊಳ್ಳುತ್ತದೆ.
9. ಭಾರತ ಪಠ್ಯಗಳ ರಚನೆಯಲ್ಲಿಯೇ ಸಾಂಸ್ಕøತಿಕ ರಾಜಕಾರಣವಿದೆ. ಹಾಗಾಗಿ ಪ್ರಧಾನ ಕತೆಯಲ್ಲಿ ಅಸುರ, ರಾಕ್ಷಸ, ನಾಗಗಳು ದಬ್ಬಾಳಿಕೆಗೆ ಒಳಗಾಗಿದ್ದಾರೆ. ಅದರ ಉದ್ದೇಶ ಮೂಲ ನಿವಾಸಿಗಳನ್ನು ಶಸ್ತ್ರ-ಶಾಸ್ತ್ರಗಳಿಂದ ದೂರವಿರಸುವುದಾಗಿದೆ.
10. ಮಹಾಭಾರತ ಕತೆಯಲ್ಲಿ ಶೋಷಣೆಗೆ ಒಳಗಾದವರನ್ನು ಚಾರಿತ್ರಿಕ ದಾಖಲೆಗಳ ಸಹಿತ ಭಾರತದ ಮೂಲ ನಿವಾಸಿಗಳೆಂದೇ ಗುರುತಿಸುತ್ತಾರೆ.

ಕನ್ನಡ ಭಾರತಗಳ ಕಥಾ ಚಲನೆ

ಪಾಂಡವರು ಅರಗಿನಮನೆ ದಹನ ನಂತರ ‘ತೆಂಕಮೊಗದೆ’ ಪ್ರಯಣ ನಡೆಸುತ್ತಾರೆ. ಇವರೊಂದಿಗೆ ಭಾರತದ ಚಲನೆ ದಕ್ಷಿಣಾಭಿಮುಖವಾಗಿ ಸಾಗುತ್ತದೆ. ಈ ಚಲನೆಯಲ್ಲಿ ಅನೇಕ ಸಂಘರ್ಷಗಳಾಗುತ್ತವೆ. ಅವುಗಳು ಯೋಜಿತವಲ್ಲದ, ಸಂದರ್ಭೋಚಿತ ಸಂಘರ್ಷಗಳಾಗಿವೆ. ಮೇಲ್ನೋಟಕ್ಕೆ ಉಳಿಯುವುದಕ್ಕಾಗಿ ನಡೆಸುವ ಹೋರಾಟದಂತೆ ಕಾಣುತ್ತವೆ. ಆದರೆ ಪ್ರಭುತ್ವವನ್ನು ಸಂಘಟಿಸುವುದೇ ಅವುಗಳ ಉದ್ದೇಶವಾಗಿದೆ. ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳನ್ನು ಸೃಷ್ಟಿಸಿವೆ.

ಕನ್ನಡ ಮಹಾಭಾರತಗಳು ಅಸುರ ಹಾಗೂ ರಾಕ್ಷಸರನ್ನು ಮಾನವೇತರ ಪ್ರಪಂಚದ ಜೀವಿಗಳನ್ನಾಗಿ ವರ್ಣಿಸಿವೆ. ಬಕನಂತಹವನು ಬಂಡಿ ಹೊರೆಯಷ್ಟು ಆಹಾರ ತಿನ್ನುತ್ತಿದ್ದನೆಂದು ಚಿತ್ರಿಸಿವೆ. ಹಾಗೆಯೇ ಅವರ ಜೀವನ ರೂಢಿಗಳಿಂದ ಅನಾಗರಿಕರಾಗಿ, ಬಣ್ಣ, ದೇಹದ ಗಾತ್ರಗಳಿಂದ ಕೂರೂಪಿಗಳಾಗಿ, ಸಹಜವಲ್ಲದ ಜನನ ಕ್ರಿಯೆಗಳಿಂದಾಗಿ, ಮಾನವರಿಗಿಂತಲೂ ಭಿನ್ನರಾಗಿ ಕಂಡುಬರುತ್ತಾರೆ. ವನವಾಸಿಗಳಾದ ನಾಗರು ಸರ್ಪ ಅಥವಾ ಹಾವುಗಳಾಗಿದ್ದಾರೆ. ಅಂಬೇಡ್ಕರರು ಇವರನ್ನೇ ಮೂಲ ನಿವಾಸಿಗಳೆಂದು ಗುರುತಿಸುತ್ತಾರೆ.

ಅರಣ್ಯವಾಸಿಗಳು : ಹಿಡಿಂಬ-ಬಕ

ಕಾಡಿನ ಮೂಲವಾಸಿಗಳನ್ನು ರಾಕ್ಷಸರೆಂದು ಕರೆಯಲಾಗಿದೆ. ಹಿಡಿಂಬ ತಾನು ಆಳುತ್ತಿದ್ದ ಘೋರಾರಣ್ಯವನ್ನು ಪಾಂಡವರು ಪ್ರವೇಶಿಸಿದ್ದನ್ನು ಅವನು ಬಹುಬೇಗ ಪತ್ತೆಹಚ್ಚುತ್ತಾನೆ. ಯಾರೇ ತನ್ನ ಭೂಪ್ರದೇಶವನ್ನು ಅತಿಕ್ರಮಣವಾಗಿ ಪ್ರವೇಶಿಸಿದ್ದನ್ನು ಅರಿಯುವ ಜಾಣ್ಮೆ ಹಿಡಿಂಬನಲ್ಲಿದೆ. ಅರಣ್ಯವಾಸಿಗಳು ತಮ್ಮ ಪ್ರದೇಶಕ್ಕೆ ಹೊಸಬರನ್ನು ಸೇರಿಸುವುದಿಲ್ಲ ಎಂಬುದು ತಿಳಿಯುತ್ತದೆ. ಅವರಿಗೆ ಪರಿಸರ ಕಲಿಸಿದ ಜ್ಞಾನವಾಗಿದೆ. ಹಿಡಿಂಬನ ವನವು ಭೌಗೋಳಿಕ ಸಮೃದ್ಧತೆಯನ್ನು ಹೊಂದಿರುವುದನ್ನು ಕಾವ್ಯಗಳು ಚಿತ್ರಿಸಿವೆ. ನಂತರ ಭೀಮನಿಂದ ಹತನಾಗುವ ಹಿಡಿಂಬವನವು ಪಾಂಡವರ ಸಾಮ್ರಾಜ್ಯ ವಿಸ್ತರಣೆಯ ಭಾಗಕ್ಕೆ ಸೇರಿಕೊಳ್ಳುತ್ತದೆ. ಅವನ ತಂಗಿ ಹಿಡಿಂಬೆಯನ್ನು ಭೀಮ ವರಿಸುತ್ತಾನೆ. ಅವರಿಬ್ಬರ ಸಂಪರ್ಕದಿಂದ “ಪುಟ್ಟುವುದುಮೀಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯಃ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿ” (ವೆಂಕಟಾಚಲ ಶಾಸ್ತ್ರೀ ಟಿ.ವಿ., 2006, ವಿ.ವಿ.3.20ವ.) ಘಟೋತ್ಕಚನು ಜನಿಸುತ್ತಾನೆ. ಭೀಮ ಅವನ ಹುಟ್ಟಿಗೆ ಕಾರಣನಾಗಿದ್ದರೂ ಪ್ರಕೃತಿ ಸಹಜವಾದ ಜನನ, ಬೆಳವಣಿಗೆಗಳಿಲ್ಲ. ಅವನನ್ನು ತಾಯಿಯ ಹತ್ತಿರವೇ ಬಿಟ್ಟು ಹೋಗುತ್ತಾರೆ. ಅಂದರೆ ತಮ್ಮ ಪರವಾಗಿರುವ ಸಾಮಂತ ರಾಜನನ್ನು ನೇಮಿಸುತ್ತಾರೆ. ವಿವಾಹ ಮಾಡಿಕೊಳ್ಳುವ ಮೂಲಕ ಸಾಮಾಜಿಕವಾಗಿ ಮತ್ತು ಹಿಡಿಂಬನ ಸಾವು, ಘಟೋತ್ಕಚನ ನೇಮಕ ರಾಜಕೀಯವಾಗಿ ಪಲ್ಲಟಗಳನ್ನು ಉಂಟುಮಾಡಿದೆ. ಪಾಂಡವರು ವನವಾಸದ ದಿನಗಳನ್ನು ಕಷ್ಟದ ದಿನಗಳೆಂದು ಭಾವಿಸಿದ್ದಾರೆ. ಅವರ ಬಗ್ಗೆ ಪಟ್ಟಣದ ಜನರೇ ದುಃಖಿಸುತ್ತಾರೆ. ಆದರೆ ವನದಲ್ಲೇ ವಾಸಮಾಡುವ ಜನರ ಬಗ್ಗೆ ಮರುಕ ವ್ಯಕ್ತಪಡಿಸಲ್ಲ. ಒಬ್ಬರಿಗೆ ಒದಗುವ ಕಷ್ಟ ಅಥವಾ ದುಃಖ ಎಲ್ಲರನ್ನೂ ಮಿಡಿಯುವಂತೆ ಮಾಡುತ್ತದೆ. ಆದೇ ಬಹುಜನ ವನವಾಸಿಗಳ ಕಷ್ಟ ಪಟ್ಟಣಿಗರಿಗೆ ವಿಶೇಷವಾಗುವುದಿಲ್ಲ.
ಬಕನ ಕಾಡು ಇರುವುದು ಏಕಚಕ್ರನಗರದ ದಕ್ಷಿಣ ಭಾಗದಲ್ಲಿ. ರಾಕ್ಷಸರೆಂದು ಯಾರನ್ನೆಲ್ಲಾ ಕರೆಯಲಾಗಿದೆಯೋ ಅವರೆಲ್ಲ ತೆಂಕಣದಿಕ್ಕಿನಲ್ಲಿಯೇ ಇದ್ದಾರೆ. ಈ ದಿಕ್ಕಿನಲ್ಲಿ ವಾಸಿಸುವರೆಲ್ಲಾ ರಾಕ್ಷಸರೆಂದೇ ಗುರುತಿಸಿರುವ ವರ್ಗವಿದೆ. ಪಾಂಡವರು ಏಕಚಕ್ರನಗರದ ವಾಸಿಗಳಾಗಿದ್ದ ಸಂದರ್ಭದಲ್ಲಿ ಬಕ ರಾಕ್ಷಸನ ಸಂಹಾರ ನಡೆಯುತ್ತದೆ. ಈ ಸಂಹಾರವು ಅನೇಕ ಪ್ರಶ್ನೆಗಳನ್ನು ಉಳಿಸುತ್ತದೆ. ಒಂದಡೆ ಸಂಪಬ್ಧರಿತವಾದ ಏಕಚಕ್ರನಗರ; ಇನ್ನೊಂದೆಡೆ ಹಸಿದು ಕೂಳಿಗಾಗಿ ಕಾಯುವ ಬಕ. ಇಂತಹ ಸಂಗತಿಗಳು ಅಂದಿನ ಸಾಮಾಜಿಕ ಪರಿಸರವನ್ನು ವಿಭಿನ್ನವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿವೆ. ಅವನನ್ನು ಕೊಂದ ಭೀಮ “ರಕ್ಕಸನ ಕರಿಯ ಪಿರಿಯೊಡಲ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.3.31ವ.)ನ್ನು ಎಳೆದು ತರುತ್ತಾನೆ. ಅವನ ಬಣ್ಣದ ಮೂಲಕವೂ ದಕ್ಷಿಣಾವಾಸಿಗಳನ್ನು ಕನಿಷ್ಠರನ್ನಾಗಿ ಗುರುತಿಸಲಾಗಿದೆ.

ಅಂಗಗೊರುಬನೆಂಬ ರಾಕ್ಷಸ ಬ್ರಾಹ್ಮಣರನ್ನು ತಿನ್ನುವುದಕ್ಕೆ ಬಂದಾಗ ಅವನು: “ಆಕಾಸ್ಕೂ ಭೂಮ್ಗೂ ಕೀಲು ಕೊಟ್ಟಂಗೆ/ ದೊಡ್ಡದೊಂದು ತೆಂಗೀನ ಮರದ ಉದ್ದಾಕೆ/ ರಾಕ್ಷನು ಅವರ ಮುಂದುಗಡೆ ನಿಂತೋವುನೆ/ ಮಂಡೇಯ ಕೂದಾಲು ನೆಲವ ಗುಡುಸೀತು/ ಮೈಯಿನ ತುಂಬ ಮೊಳದುದ್ದ ಕೂದಾಲು/ ಹೆಬ್ಬಂಡೆ ಗಾತ್ರುಕೆ ರಾಕ್ಷನ ತಲೆಯು/ ಹಡುಗಾತ್ರ ಆ ಕಡೆಗು ಈ ಕಡೆಗು ಕಿವಿಗಳು/ ಮೊಕುದ ಮಧ್ಯದಲ್ಲಿ ಗೆರ್ಸೀಯ ಅಗುಲ್ಕೆ/ ಒಂದೇ ಒಂದು ಕಣ್ಣು ಆ ರಾಕ್ಷನೀಗೆ/ ಕ್ವಾಟೆಯ ಬಾಕುಲಂಗೆ ಬಾಯ ಬುಟುಕೊಂಡು/ ಕಾಡುಕ್ವಾಣದ ಗಾತ್ರ ತುಟಿಗಳ ಕಚ್ಚುತ್ತ/ ಒಂದೊಂದು ಮಾರು ಒಂದೊಂದು ಕ್ವಾರಲ್ಲು/ ತ್ಯಾಗದ ಮರದುದ್ದದ ತೋಳುಗಳ ಬೀಸುತ/ ಗುಡ್ಡದ ಗಾತ್ರ ದೊಡ್ಡದಾದ ಹೊಟ್ಟೆ/ ಆಲದ ಮರುದ್ಗಾತ್ರ ಅವನ ತೊಡೆಗಳು/ ಒಂದೊಂದು ಬಂಡೆ ಗಾತ್ರ ಒಂದೊಂದು ಕುಂಡಿ/ ಅರಮನೆ ಹೆಗ್ಗಂಬದಂತಿರೊ ಕಾಲುಗಳು/ ನಡುದ್ರೆ ನೆಲ ನಡುಗೊ ಅಪಾಪಾಟಿ ಪಾದಗಳು/ ಟಾರೆಣ್ಣೆಯಂಥ ಕರ್ರನೆ ಮೈಯಿ/ ಅವ್ನು ಮಾತಾಡುದ್ರೆ ಗುಡುಗಿನ ಸಪ್ತ” (ರಾಜಶೇಖರ ಪಿ.ಕೆ., 2011, ಜ.ಮಭಾ.57.86-105) ಹೀಗೆ ಇದ್ದಾನೆಂದು ಜನಪದ ಮಹಾಭಾರತವು ವರ್ಣಿಸುತ್ತದೆ.
ಕನ್ನಡ ಮಹಾಭಾರತಗಳು ಚಿತ್ರಿಸಿರುವ ಜರಾಸಂಧ, ಶಿಶುಪಾಲ, ಸಹಸ್ರ ಕವಚ ಡಂಬಕಾಸುರರೂ “…ಕೂಡ ಜನ-ವಿಶೇಷ ಎನಿಸುವ ಮನುಷ್ಯ ಜೀವಿಗಳು. ಅಸುರರು ಸೃಷ್ಟಿಕರ್ತನಾದ ಪ್ರಜಾಪತಿಯ ವಂಶಜರೆಂದು ‘ಶತಪಥ ಬ್ರಾಹ್ಮಣ’ವು ಹೇಳುತ್ತದೆ. ಅಂಥವರು ಹೇಗೆ ದುಷ್ಟಶಕ್ತಿಗಳಾದರೋ ತಿಳಿಯದು. ಆದರೆ ಅವರು ದೇವರುಗಳ ವಿರುದ್ಧ ಭೂಮಿಯ ಒಡೆತನಕ್ಕಾಗಿ ಹೋರಾಡಿದರು. ದೇವರುಗಳಿಂದ ಪರಾಜಿತರಾದರು ಹಾಗೂ ಕೊನೆಗೆ ಅವರಿಗೆ ಬಲಿ ಬಿದ್ದರೆಂಬ ಸಂಗತಿಯೂ ನಮೂದಿತವಾಗಿದೆ. ಇದರಿಂದ ಸ್ಪಷ್ಟವಾಗುವ ವಿಷಯವೇನೆಂದರೆ ಅಸುರರು ಮಾನವಕುಲದ ಸದಸ್ಯರೇ ಹೊರತು, ರಾಕ್ಷಸರಲ್ಲ” (ನಾರಾಯಣ, ಕೆ.ವಿ., 2015, ಪು.166)ಎಂದಿದ್ದಾರೆ, ಅಂಬೇಡ್ಕರರು.

ಗಂಧರ್ವರು- ಅಂಗದರ್ಪಣ

ಪಾಂಡವರು ದ್ರೌಪದಿಯ ಸ್ವಯಂವರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದಕ್ಷಿಣದಿಂದ ಪುನಃ ಉತ್ತರದತ್ತ ಸಾಗುವ ಸಂದರ್ಭಗಳಲ್ಲಿಯೂ ಅರಣ್ಯನಾಯಕರೊಂದಿಗೆ ಸಂಘರ್ಷ ನಡೆಸಿದ್ದಾರೆ. ಅಂಗದರ್ಪಣ ಎಂಬುವವನು ಯಮುನಾ ನದಿ ತೀರದ ವನವವನ್ನು ಆಳುತ್ತಿದ್ದನು. ಅಂಬೇಡ್ಕರ್ ಅಂಗದರ್ಪಣನಂತಹ ಗಂಧರ್ವರು ದೇವತೆಗಳ ಊಳಿಗದವರೆಂದು ಗುರುತಿಸಿದ್ದಾರೆ. ಪಾಂಡವರು ಅವನ ವನವನ್ನು ಪ್ರವೇಶಿಸುವ ಹೊತ್ತಿಗೆ ಕತ್ತಲೆಯಾಗಿದ್ದರಿಂದ ಕೊಳ್ಳಿಯನ್ನು ಹಿಡಿದು ಪ್ರವೇಶಿಸುತ್ತಾರೆ. ಅದನ್ನು ಕಂಡ ಅಂಗದರ್ಪಣ ಪ್ರಶ್ನಿಸಿ, ಪ್ರತಿಭಟಿಸುತ್ತಾನೆ. ಆಗ ಅರ್ಜುನ ಅವನನ್ನು ಸದೆಬಡಿಯುತ್ತಾನೆ. ಅದನ್ನು ‘ವಿಕ್ರಮಾರ್ಜುನ ವಿಜಯ’ವು ಹೀಗೆ ವರ್ಣಿಸಿದೆ:

ಬನಂ ಎನ್ನಾಳ್ವ ಬನಂ, ನಿಶಾಬಲಂ ಇಂತು ಅಸ್ಮದ್ಬಲಂ, ಧೂರ್ತನಯ್,
ನಿನಗೆ ಈ ಪೊಟ್ಟಿನ್ನೋಲ್, ಇತ್ತ ಬರ್ಪ ಅದಟಂ ಇಂತು ಆರಿತ್ತರ್ ಎಂದು ಆಂತೊಡೆ,
ಆತನನ್ ಆ ಕೊಳ್ಳಿಯೊಳಿಟ್ಟೊಡೆ ಅಂತದು ಲಯಾಂತೋಗ್ರಾಗ್ನಿಯಂತೆ ಅ¿õÉ್ವ, ಬಂದು
ಎನಸುಂ ಮಾಣದೆ, ಬಾಗಿದಂ ಪದಯುಗಕ್ಕೆ ಆರೂಢಸರ್ವಜ್ಞನಾ ವಿ.ವಿ.3.34

ಅಂಗದರ್ಪಣ ಆ ಕಾಡಿನ ನಾಯಕನಾಗಿದ್ದಾನೆ. ಅವನಲ್ಲಿ ಸೇನೆಯೂ ಇದೆ. ಆ ಸೇನೆ ಕಾಡಿನ ರಕ್ಷಣೆಗೆ ಇರುವುದು ತಿಳಿಯುತ್ತದೆ. ಕತ್ತಲೆಯಲ್ಲಿ ಕೊಳ್ಳಿ ಹಿಡಿದು ಕಾಡಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರ ಉದ್ದೇಶ ಬೆಂಕಿಯಿಂದ ಕಾಡನ್ನು ರಕ್ಷಿಸಿಕೊಳ್ಳುವುದಾಗಿದೆ. ಸ್ಥಳೀಯರ ಈ ‘ಕಾನೂನ’ನ್ನು ತಿಳಿಯದ ಕೊಳ್ಳಿ ಹಿಡಿದು ಅತಿಕ್ರಮಣ ಮಾಡಿದ್ದಾನೆ. ಪ್ರಭುತ್ವದಿಂದ ಅರಣ್ಯವಾಸಿಗಳು ದೂರವೇ ಉಳಿದಂತೆ ಕಾಣುತ್ತದೆ. ಏಕೆಂದರೆ ಸ್ಥಳೀಯ ರೂಢಿಗಳಿಗೂ ಹಾಗೂ ಅದರ ಕಾನೂನುಗಳಿಗೂ ಹೊಂದಾಣಿಕೆ ಆಗದಿರುವ ಸಂಭವವೇ ಹೆಚ್ಚು. ಪ್ರಭುತ್ವದ ಕೆಲವೇ ಜನರು ಇತರೆ ಜನತೆಯ ‘ರೀತಿ-ನೀತಿ’ಗಳನ್ನು ಸುಲಭವಾಗಿ ಉಲ್ಲಂಘಿಸಿದ್ದಾರೆ. ಅವರದೇ ಆದ ಕಾನೂನುಗಳು ಆಕ್ರಮಣವಾದ ಪ್ರದೇಶವನ್ನು ನಿಯಂತ್ರಿಸುತ್ತವೆ. ಇವುಗಳಿಗೆ ಜನರು ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಪ್ರಭುತ್ವ ಒಂದು ಪ್ರದೇಶದ ಮೇಲೆ ಅತಿಕ್ರಮಣ ಮಾಡುವುದು, ಅಲ್ಲಿನ ನಾಯಕರನ್ನು ಸೋಲಿಸುವುದು ಮಹತ್ತರವಾದ ಕಾರ್ಯವೆಂಬಂತೆ ಭಾವಿಸಿಕೊಂಡಿದೆ. ಅಂಗದರ್ಪಣನು ‘ಎನಸುಂ ಮಾಣದೆ ಬಾಗಿದಂ’ ಎಂಬಲ್ಲಿ, ಪ್ರತಿಭಟಿಸಿದರೆ ಇಡೀ ವನವೇ ನಾಶವಾಗುವ ಭಯವಿದೆ. ಜೊತೆಗೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಹಿಡಿಂಬ, ಬಕ, ಅಂಗದಪರ್ಣರನ್ನು ಗಣನಾಯಕರನ್ನಾಗಿ ಗುರುತಿಸಿಕೊಳ್ಳಬಹುದು. ಇಂತಹ ನಾಯಕರನ್ನು ಸೋಲಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಉಡುಗೊರೆಯ ರೂಪದಲ್ಲಿ ಅವರು ಕೊಟ್ಟ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ. ವೈವಿಧ್ಯ ಭೂಪ್ರದೇಶವನ್ನು ಏಕಗೊಳಿಸುವ ಚಲನೆಯೂ ಇಲ್ಲಿದೆ. ಪ್ರಭುತ್ವ ವನವಾಸಿಗಳನ್ನು ಮೊದಲಿನಿಂದಲೂ ಹತ್ತಿಕ್ಕುತ್ತ ಬಂದಿದೆ ಎಂಬುದು ಗಮರ್ನಾಹ.

ಖಾಂಡವವನದ ನಾಗಗಳು

ಅಂಬೇಡ್ಕರ್ ಅಸುರ ಹಾಗೂ ರಾಕ್ಷಸರ “…ರೀತಿಯಾಗಿ ಇನ್ನೊಂದು ಗೂಢ ಪ್ರಶ್ನೆಯಾದ ನಾಗಾಗಳ ಬಗೆಗೂ ಬೌದ್ಧಧರ್ಮಶಾಸ್ತ್ರ ಸಾಹಿತ್ಯ ಹೆಚ್ಚಿನ ಬೆಳಕನ್ನು ಬೀರಬಲ್ಲದು. ಅದು (ಮನುಷ್ಯ) ಗರ್ಭದಿಂದ ಹುಟ್ಟಿದ ನಾಗಾಗಳು ಮತ್ತು ಮೊಟ್ಟೆಯಿಂದ ಹುಟ್ಟಿದ ನಾಗಾಗಳು – ಇವೆರಡರ ನಡುವಿನ ವ್ಯತ್ಯಾಸವನ್ನು ಹೇಳಿ ನಾಗಾ ಎಂಬ ಪದಕ್ಕೆ ಇರುವ ಎರಡು ಅರ್ಥಗಳು ಸ್ಪಷ್ಟಡಿಸುತ್ತದೆ. ಮೂಲ ಅರ್ಥದಲ್ಲಿ ನಾಗಾ ಎಂಬುದು ಮನುಷ್ಯ ಸಮುದಾಯವೊಂದರ ಹೆಸರನ್ನು ಸೂಚಿಸುತ್ತದೆ” (ನಾರಾಯಣ, ಕೆ.ವಿ., 2015, ಪು.166) ಎಂದಿದ್ದಾರೆ. ಇವರನ್ನು ಕೊನೆಗಾಣಿಸಲು ಜನಮೇಜಯ ರಾಜನು ಯಜ್ಞಮಾಡುತ್ತಾನೆ. ಆ ಯಜ್ಞದ ವಿಧಿಯ ಅಂಗವಾಗಿ ಹೇಳಲ್ಪಟ್ಟ ಕತೆಯೇ ಮಹಾಭಾರತವಾಗಿದೆ. ಡಿ.ಡಿ. ಕೊಸಾಂಬಿಯವರು “‘ನಾಗರು’ ಅಥವಾ ‘ನಾಗಜಾತಿ’ ಎಂಬ ಹೆಸರನ್ನು ಆರ್ಯರು ಈ ಎಲ್ಲ ಅರಣ್ಯವಾಸಿಗಳನ್ನೂ ಒಟ್ಟಾಗಿ ಸಂಬೋಧಿಸಿ ಬಳಸಿದ ಮಾತಿರಬೇಕು. ಈ ಎಲ್ಲ ಸಮುದಾಯಗಳು ಅಥವಾ ಬಹುಪಾಲಿನವು ಹಾವನ್ನು ತಮ್ಮ ಸಮುದಾಯ ಚಿಹ್ನೆಯಾಗಿ ಹೊಂದಿದ್ದಿರಬೇಕು ಅಥವಾ ಅವರು ಹಾವನ್ನು ಪೂಜಿಸುತ್ತಿದ್ದರಬೇಕು ಎಂಬುದೇ ಆರ್ಯರು ಅವರೆಲ್ಲರನ್ನೂ ಒಟ್ಟಿಗೆ ನಾಗಜಾತಿ ಎಂದು ಕರೆಯಲು ಕಾರಣವಾಗಿರಬಹುದು”(ಶ್ರೀಮತಿ ಎಚ್.ಎಸ್., 2012, ಪು.93) ಎಂದಿದ್ದಾರೆ. ಇವರನ್ನು ಕೊನೆಗಾಣಿಸಲು ಜನಮೇಜಯ ರಾಜನು ಯಜ್ಞಮಾಡುತ್ತಾನೆ. ಆ ಯಜ್ಞದ ವಿಧಿಯ ಅಂಗವಾಗಿ ಹೇಳಲ್ಪಟ್ಟ ಕತೆಯೇ ಮಹಾಭಾರತವಾಗಿದೆ.

ಈ ನಾಗಗಳು ಮಹಾಭಾರತದ ಖಾಂಡವವನದಲ್ಲಿ ಹೆಚ್ಚಾಗಿ ವಾಸವಾಗಿದ್ದಂತೆ ತೋರುತ್ತದೆ. ಆ ವನವು “ಯಮುನಾನದಿಯ ತೆಂಕಣ ದೆಸೆಯೊಳ್ ನೂ¾ು ಯೋಜನದಗಲದೊಳಮನಿತೆ ನೀಳದೊಳಂ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.79ವ.)ಆವರಿಸಿತ್ತು. ಇಲ್ಲಿ-
ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಬುವಾಟಂದು ಬಂ
ದಲೆಯಲ್ಕಣ್ಮದು ಗಾಳಿ ಸೂರ್ಯಕಿರಣಾನೀಕಕ್ಕಮೆಂದಪೆÇ್ಪಡಂ
ಸಲವಿಲ್ಲುದ್ಧತ ಸಿದ್ಧ ಖೇಚರರೆ ತಾಮಾಳ್ವೇಲಿಯಾಗಿಂತು ನಿ
ಚ್ಚಲುಮೋರಂತಿರೆ ಕಾವರೀ ದೊರೆತು ಕಾಪೀ ನಂದನಕ್ಕಿಂದ್ರನಾ ವಿ.ವಿ.5.81
ಖಾಂಡವ ವನವನ್ನು ಪರಿಚಯಿಸುವ ಕ್ರಮವೇ ಅದರ ದಟ್ಟತೆಯನ್ನು ಸೂಚಿಸುತ್ತಿದೆ. ಈ ವನದ ರಕ್ಷಣೆ ಇಂದ್ರನು ವಹಿಸಿಕೊಂಡಿದ್ದನು. ಅವನ “ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.87ವ.), ಖೇಚರರು ‘ಆಳ್ವೇಲಿ’ಯಾಗಿ ಕಾವಲಿದ್ದರು. ಇವರೆಲ್ಲಾ ‘ನಿಚ್ಚಲುಮೋರಂತಿರೆ ಕಾವರ್.’ ಆದ್ದರಿಂದಾಗಿ ದುಂಬಿ, ಗಾಳಿಗಳಿಗೆ ನಿಯಮಗಳನ್ನು ವಿಧಿಸಲಾಗಿದೆ. ಸೂರ್ಯನ ಕಿರಣಗಳನ್ನು ನಿರ್ಬಂಧಿಸಲಾಗಿದೆ. ಇದು ಕೃಷ್ಣನಿಗೂ ಭಯವುಂಟುಮಾಡಿದೆ. ಬಹುಶಃ ಈಗಿನ ಸಂರಕ್ಷಿತ ಅರಣ್ಯ ಪ್ರದೇಶದಂತಿರಬಹುದು. ಸ್ವತಃ ಇಂದ್ರ ತನ್ನ ಮಡದಿ ಶಚಿಗೇ ಅಲ್ಲಿನ ‘ಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು’ ಮುಡಿದುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟವನಲ್ಲ. ಅಷ್ಟು ಜತನದಿಂದ ಖಾಂಡವವನ್ನು ಕಾಯ್ದುಕೊಂಡು ಬಂದದ್ದು. ಹೀಗಿರುವಾಗ ಅರ್ಜುನ ಅನಲನಿಗೆ ‘ಊಡಲೆಂದು’ ಪ್ರತಿಜ್ಞೆ ಮಾಡಿದ್ದಾನೆ. ಬ್ರಾಹ್ಮಣ ವೇಷಧಾರಿಯಾಗಿದ್ದ ಅಗ್ನಿ ಈ ವನವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೂ ಇದೆ. “ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ಘೃತಸಮುದ್ರಮಂ ಕುಡಿದೊಡಾದ ರೋಗ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.104ವ.)ವನ್ನು ಪರಿಹರಿಸಿಕೊಳ್ಳಬೇಕಾಗಿತ್ತು. ‘ಘೃತ’ವನ್ನು ಯಜ್ಞದಲ್ಲಿ ಬಳಸುತ್ತಿದ್ದರಿಂದ ಅವನ ರೋಗವೂ ಅದರಿಂದಲೇ ನಾಶವಾಗಬೇಕಾಗಿತ್ತು. ಆದ್ದರಿಂದಾಗಿ ಖಾಂಡವ ವನದಲ್ಲಿ ಯಜ್ಞಕ್ಕೆ ಬಳಸಲಾಗುತ್ತಿದ್ದ “ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಹಕ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.80), “ಫಳ ಕರ್ಪೂರ ಲವಂಗ ಲವಳೀ ಹಿಂತಾಳ ತಾಳೀ ತಮಾಳ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.86) ಮೊದಲಾದ ಮರಗಳ ಸಮೂಹವೇ ಇತ್ತು. ಹಾಗೆಯೇ ಇಂದ್ರನ ಆಡಳಿತಕ್ಕೆ ಒಳಪಟ್ಟ ವನವಾಗಿರುವುದರಿಂದ, ಕಾವ್ಯ ನಾಯಕ ಅರ್ಜುನನು ಇದನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ಅಗ್ನಿಯ ‘ಹಸಿವು’ ಸಹಕರಿಸಿದೆ. ಕೃಷ್ಣನೂ ನೆರವಾಗಿದ್ದಾನೆ. ಅಂದರೆ ಪಶುಪಾಲಕರಾದ ಯಾದವರು, ಕೃಷಿಕ ವ್ಯವಸ್ಥೆಯನ್ನು (ಅಗ್ನಿಯನ್ನು) ಪ್ರತಿನಿಧಿಸುವ ಅರ್ಜುನನೂ ಸೇರಿಕೊಂಡು ಅರಣ್ಯವಾಸಿಗಳನ್ನು ನಿರ್ನಾಮ ಮಾಡಲಾಗಿದೆ.

ಇಲ್ಲಿ ಹಸಿವು ಪ್ರಭುತ್ವಗಳ ಭೀಕರ ರಕ್ತದ ಹಸಿವಿನ ರೂಪಕವಾಗಿಯೇ ಕಾಣುತ್ತದೆ. ಬ್ರಾಹ್ಮಣರು ಅಥವಾ ಅವರ ವೇಷದಲ್ಲಿದ್ದವರು ರಾಜನು ಯಾವುದೇ ಸಂದರ್ಭಗಳಲ್ಲಿದ್ದರೂ ಅವರಿಂದ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಂಡಿದ್ದಾರೆ. ಅವರಿಗಾಗಿ ಪ್ರಭುತ್ವಗಳು ‘ಉಗ್ರ ಕಿನ್ನರಸುರ ದನುಜೋರಗರ’ ವಿರುದ್ಧ ಯುದ್ಧಮಾಡಿವೆ. ಬೆಂಕಿಯು ವನವನ್ನು ಆವರಿಸುತ್ತಿದ್ದಾಗ ವನವನ್ನು ಕಾಯಲು ನೇಮಿಸಿದ ಕಿನ್ನರರು ಬೇಗ ಸೋತಿದ್ದಾರೆ. ವನವಾಸಿಗಳೇ ಆದ ‘ಪನ್ನಗರ್ ಪನ್ನತಿಕೆಯಿಂ’ ಪ್ರತಿಭಟಿಸುತ್ತಾರೆ. ಅಂತಿಮವಾಗಿ ಅವರನ್ನೂ ಕೊಲ್ಲಲಾಗುತ್ತದೆ. ಅಲ್ಲಿದ್ದ ‘ಮಯನೆಂಬ ದಾನವವಿಶ್ವಕರ್ಮಂ’ ಅರ್ಜುನನಿಗೆ ಶರಣಾಗಿ ಜೀವವನ್ನು ಉಳಿಸಿಕೊಳ್ಳುತ್ತಾನೆ. ಕಾಡಿನ ಮಧ್ಯದಲ್ಲಿದ್ದ “ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚಲ್ವೇ¿್ದು ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾ¾ುವಾಗಳದನೆರ¿್ಖಂಡಮಪ್ಪಿನಮಾಖಂಡಳ ತನಯನಿಸುವುದುಂ ತನ್ನ ಬಾಲಂಬೆರಸುರಿಯೊಳ್ ಬಿ¿್ದು ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯಂ ಮ¾õÉಯವೆಂಬುದಂ ನನ್ನಿ” (ವೆಂಕಟಾಚಲ ಶಾಸ್ತ್ರೀ, ಟಿ.ವಿ., 2006, ವಿ.ವಿ.5.99)ಮಾಡಲು ಅರ್ಧಾವಲೀಕ ಅಸ್ತ್ರವಾಗಿ ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು. ಶ್ರೀಕೃಷ್ಣನು ಖಾಂಡವ ವನವನ್ನು ಬೇಡಿದ ಅಗ್ನಿಯ ಕುರಿತು “ನಿಖಿಳನಿರ್ಜರ ಬಲಸಹಿತ ಶತಮಖನೊಡನೆ ವಿಗ್ರಹವಲಾ”(ಪ್ರಸನ್ನ ಎ.ವಿ., 2001, ಕ.ಭಾ.ಆ.20.17) ಎಂದು ಮೊದಲು ಆಕ್ಷೇಪಿಸುತ್ತಾನೆ. ಆದರೂ ವನವನ್ನು ದಹಿಸಲು ಅರ್ಜುನನಿಗೆ ನೆರವಾಗುತ್ತಾನೆ. ವನವನ್ನು ರಕ್ಷಿಸಲು ಬಂದ ಇಂದ್ರನಿಂದಲೇ “ಹರಿಗೆ ವಂದಿಸಿ ಮಗನನೊಲಿದಾದರಿಸಿ ಮರಳು”(ಪ್ರಸನ್ನ ಎ.ವಿ., 2001, ಕ.ಭಾ.ಆ. 20.68)ವಂತೆ ಮಾಡಿ, ಬ್ರಹ್ಮ, ಈಶ್ವರರು ಅರ್ಜುನನಿಗೆ ಜಯವನ್ನು ಕೊಡಿಸಿದ್ದಾರೆ. ಅವನಿಂದಲೇ ‘ಕೀರಿಟಿ’ಯ ಸಾಹಸವನ್ನು ಹಾಡಿಸಿದ್ದಾರೆ. ಸಂಪೂರ್ಣವಾಗಿ ವನವನ್ನು ದಹಿಸಿದ ಅನಲನು ಸಂತೋಷದಿಂದ ಆರ್ಶೀವದಿಸಿದ್ದಾನೆ.

ವನವೊಂದು ಬೆಂಕಿಗೆ ಆಹುತಿಯಾದರೆ ಮರಗಿಡಗಳು ಮಾತ್ರ ನಾಶವಾಗುವುದಿಲ್ಲ. ಅಲ್ಲಿನ ಪ್ರಾಣಿ-ಪಕ್ಷಿಗಳು, ಸ್ಥಳೀಯ ಜನರು ತಮ್ಮ ಬದುಕನ್ನು ಕಳೆದುಕೊಳ್ಳುತ್ತಾರೆ. ಒಂದು ಸಂಸ್ಕøತಿಯೇ ಅಳಿಯುತ್ತದೆ. ಅಗ್ನಿ ದಟ್ಟವಾದ ಮತ್ತು ರಕ್ಷಿಸಲ್ಪಟ್ಟ ವನವನ್ನು ಕೇಳುವಲ್ಲಿ, ವನದಂತೆ ಸಮೃದ್ಧವಾಗಿದ್ದ ಅಲ್ಲಿನ ಸ್ಥಳೀಯ ವಾಸಿಗಳನ್ನು ಮಟ್ಟಹಾಕುವುದು ಮುಖ್ಯವಾದ ಉದ್ದೇಶವಾಗಿರುವಂತಿದೆ. ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಭಾವಿಸಿದ ಅರಣ್ಯವಾಸಿಗಳು, ಬೆಂಕಿ ಬಿದ್ದಕ್ಷಣ ಹೋಡಿಹೋಗುವುದಿಲ್ಲ. ಬೆಂಕಿಯನ್ನು ನಂದಿಸಲು ಪ್ರಾಣವನ್ನೇ ಮುಡಿಪಾಗಿಡುತ್ತಾರೆ. ಇದಕ್ಕೆ ಪನ್ನಗರೇ ಉತ್ತಮ ಉದಾಹರಣೆ. ಯಾರದೋ ಕಾರಣಕ್ಕಾಗಿ ನಿರ್ದಯವಾಗಿ ‘ನಾಗ’ಗಳನ್ನು ಕೊಲ್ಲಲಾಗಿದೆ. ಅಶ್ವಸೇನನ ಸೇಡು ಪ್ರಭುತ್ವವನ್ನು ಸಾಮಾನ್ಯ ಜನರಲ್ಲಿ ‘ಕೆಲವರು’ ಯಾಕೆ ‘ಪರಂಪರೆ’ಯಿಂದ ವಿರೋಧಿಸುತ್ತಾರೆ ಎಂಬುದಕ್ಕೆ ಉತ್ತರವಾಗಿದೆ. ‘ಬಂದು ತನ್ನ ಮ¾õÉವೊಕ್ಕೊಡೆ’ ಕಾಯುವ ಪ್ರಭುತ್ವವು, ಮಯನನ್ನು, ಮದನಪಾಲನೆಂಬ ಋಷಿಯನ್ನು ಹಾಗೂ ‘ಅಗ್ನಿಸೂಕ್ತಂಗಳ’ನ್ನು ಜಪಿಸಿದ ಲಾವುಕಪಕ್ಷಿಗಳನ್ನು ರಕ್ಷಿಸಲಾಗಿದೆ. ಇಲ್ಲಿ ತಮ್ಮ ಅಧೀನದಲ್ಲಿ ಇರಬಯಸುವವರನ್ನು ಹಾಗೂ ತಮ್ಮ ಆಚಾರಗಳನ್ನು ಅನುಸರಿಸುವವರನ್ನು ರಕ್ಷಿಸಲಾಗಿದೆ. ಅವರನ್ನು ವಂಶಪಾರಂಪರ್ಯವಾಗಿ ಕಾಯುವಂತೆ ವಚನವನ್ನು ನೀಡಿವೆ. ಇವುಗಳನ್ನು ಮಾಡದೇ ಸ್ವತಂತ್ರವಾಗಿ ಜೀವಿಸಲು ಬಯಸಿದ ಜೀವಿಗಳನ್ನು ಕೊಲ್ಲಲಾಗಿದೆ. ಬ್ರಾಹ್ಮಣವೇಷದ ಅಗ್ನಿಯ ಹಸಿವನ್ನು ನೀಗಿಸಲು ವನನ್ನೇ ಯಜ್ಞವನ್ನಾಗಿ ದಹಿಸಲಾಗಿದೆ.

ಅಂದರೆ ಒಂದು ವರ್ಗದ ಹಿತಕ್ಕಾಗಿ ಯಜ್ಞಗಳನ್ನು ನಡೆಸುತ್ತಿರುವಂತೆ ತೋರುತ್ತದೆ. ಅದಕ್ಕೆ ಉತ್ತಮ ವಾತಾವರಣ ಕಲ್ಪಿಸಿದ ಸಮಕಾಲೀನ ಪ್ರಭುತ್ವದ ನೆರವನ್ನು ಪಡೆಯಲಾಗುತ್ತದೆ. ಯಜ್ಞ ಅಥವಾ ದಹನ ನಾಶದ ಮೂಲಕ ತಮಗೆ ಪೂರಕವಾಗಿ ಹೊಸದನ್ನು ಸೃಷ್ಠಿಸಿಕೊಳ್ಳುವ ಸಂಕೇತವಾಗಿದೆ. ಅನೇಕ ‘ಪ್ರಭುತ್ವ’ಗಳು ಸೇರಿಕೊಂಡು ವಿವಿಧ ಕಾರಣಗಳನ್ನು ಒದಗಿಸಿ ದಹನವನ್ನು ಸಮರ್ಥಿಸಿವೆ. ಆದರೆ ದಹನದಿಂದ ಆಗುವ ಪರಿಣಾಮಗಳ ಬಗೆಗೆ ಯಾವ ಮಾತುಗಳನ್ನು ಆಡುವುದಿಲ್ಲ. ನಾಶ ಹಾಗೂ ಕೊಲ್ಲುವುದೇ ಪ್ರಭುತ್ವಗಳ ಮೂಲಭೂತ ಸಿದ್ಧಾಂತವಾಗಿದೆ. ಒಟ್ಟಾರೆಯಾಗಿ “ಖಾಂಡವವನ ದಹನ ಪ್ರಸಂಗವಂತೂ ಆಳುವ ಪ್ರಭುತ್ವವು ಗಣಿಗಾರಿಕೆ ಮತ್ತು ಅಭಿವೃದ್ದಿಯ ಹೆಸರಲ್ಲಿ ಪೋಸ್ಕೊ, ವೇದಾಂತಗಳಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುವು ಮಾಡಿಕೊಡುತ್ತಿರುವ ಅರಣ್ಯಸಂಪತ್ತಿನ ಲೂಟಿಯನ್ನೇ ಹೇಳುತ್ತಿರುವ ಹಾಗಿದೆ. ಯಾರದೋ ಬದುಕಿನ ನೆಲೆಯನ್ನು ಒಂದಿಷ್ಟೂ ವಿವೇಚನೆಯಿಲ್ಲದೆ ಯಾರಿಗೋ ದಾನವಾಗಿ ಹಂಚುತ್ತಿರುವ ಪ್ರಭುತ್ವದ ಅವಿವೇಕಿ ಔದಾರ್ಯವೇ ಇಲ್ಲಿ ಬಿಂಬಿತವಾಗುತ್ತಿರುವಂತಿದೆ. ಇದು ಪರಿಸರÀನಾಶದ ಬಗೆಗೆ ಮಾತ್ರ ಹೇಳುತ್ತಿರುವುದಲ್ಲ. ಪ್ರಭುತ್ವದ ಜೀವಕಾರುಣ್ಯದ ಕೊರತೆ, ಅಹಂಭಾವಗಳನ್ನು ಎದುರಿಗಿಟ್ಟು, ಅಶ್ವÀಸೇನನಂತಹ ನÀಕ್ಸಲ್‍ಬಾರಿ ಹೋರಾಟಗಳ ಹುಟ್ಟಿಗೆ ಆಳುವ ಪ್ರಭುತ್ವವೇ ಹೇಗೆ ಕಾರಣವಾಗುತ್ತದೆ ಎನ್ನುವುದನ್ನೇ ಹೇಳುವಂತಿದೆ. ದಾನ ಎನ್ನುವ ಮೌಲ್ಯದ ಅಪವ್ಯಯವನ್ನೂ, ದಾನವನ್ನು ದಕ್ಕಿಸಿಕೊಳ್ಳುತ್ತಿರುವವರ ‘ಹಸಿವಿನ ಅನಾಹುತಕಾರಿ ಅಗಾಧತೆ’ಯನ್ನು ಸೂಚಿಸುವಂತಿದೆ.” (ಜಯಪ್ರಕಾಶ್ ಶೆಟ್ಟಿ ಹೆಚ್., 2013, ಪು.176) ಕಾವ್ಯವು ಪ್ರತಿಮೆಗಳ ಮೂಲಕ ಪ್ರಾಣಿಗಳು ದಹನವನ್ನು ವಿರೋಧಿಸುವಂತೆ ಚಿತ್ರಿಸಿದೆ. ದಹನದಿಂದ ‘ಸಂಗತ ಧೂಮಾವಳಿಯನಿಭಂಗಳೇ ಗೆತ್ತು’ ಸಿಂಹಗಳು ಗರ್ಜಿಸಿ, ಅವುಗಳನ್ನು ಎದುರಿಸಲು ಅವುಗಳತ್ತ ಹಾರಿವೆ. ಹೀಗೆ ಸಹಜ ವೈರಿಗಳಾದ ಪ್ರಾಣಿಗಳ ಪ್ರತಿರೂಪಗಳನ್ನು ಚಿತ್ರಿಸಿರುವುದು ಪ್ರತಿಭಟನಾತ್ಮಕವಾಗಿಯೇ ಕಂಡುಬಂದಿವೆ. ಯುದ್ಧ ರಣರಂಗದಲ್ಲೇ ನಡೆಯುವಂತದ್ದಲ್ಲ ಎನ್ನುವುದಕ್ಕೆ ಈ ಪ್ರಸಂಗ ಮುಖ್ಯವಾಗುತ್ತದೆ.

ಅಂತಿಮವಾಗಿ ಹಿಂದೂಗಳು ಈ ನೆಲದ ಮೂಲ ನಿವಾಸಿಗಳನ್ನು ಹತ್ತಿಕ್ಕಿ, ತಮ್ಮ ಅನುಯಾಯಿಗಳನ್ನಾಗಿ ಮಾಡಿಕೊಂಡಿದ್ದಾರೆ. ಆದರೂ ಪ್ರಸ್ತುತದಲ್ಲಿ ವೈದಿಕೇತರರನ್ನು ಕೊಂದು, ಅವರ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಿದವರು ನಮಗೆ ಆದರ್ಶರನ್ನಾಗಿ ರೂಪಿಸಲಾಗಿದೆ. ಅವರ ಸಾಮ್ರಾಜ್ಯದ ಸಿರಿತನಗಳ ಬಗ್ಗೆ ಬೀಗುವಂತೆ ಮಾಡಿರುವ ಆಲೋಚನೆಗಳು; ಅವರ ನಡುವೆಯೇ ಇದ್ದ ಜನ ಸಾಮಾನ್ಯರ ಸಾವು, ನೋವು, ಹಸಿವುಗಳ ಬಗ್ಗೆ ಯೋಚಿಸುವಂತೆಯೂ ಪ್ರೇರೇಪಿಸುವುದಿಲ್ಲ. ಆದರೆ ಅಂಬೇಡ್ಕರರ ಚಿಂತನೆಗಳು ಜನ ಸಾಮಾನ್ಯರ ಬಗೆಗೆ ಧ್ವನಿಯಾಗಿ ನಿಲ್ಲುತ್ತವೆ. ಅವರ ಉದ್ಧಾರಕ್ಕಾಗಿ ಚಿಂತಿಸುತ್ತವೆ. ಅವರನ್ನು ಸಾಮಾಜಿಕ, ಧಾರ್ಮಿಕ ಸ್ವತಂತ್ರರನ್ನಾಗಿ ಮಾಡಲು ಮುಂದಾಗುತ್ತವೆ.

ಓದಿನ ಸೂಚಿ

1. ಜಯಪ್ರಕಾಶ್ ಶೆಟ್ಟಿ ಹೆಚ್., 2013, ಪಂಪನಕಾವ್ಯಗಳ ವಿಭಿನ್ನ ಓದುಗಳು: ತಾತ್ವಿಕ ವಿಶ್ಲೇಷಣೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಅಪ್ರಕಟಿತ ಪಿಹೆಚ್.ಡಿ. ಸಂಶೋಧನಾ ಮಹಾಪ್ರಬಂಧ.
2. ನಾರಾಯಣ, ಕೆ.ವಿ., 2015 (ಮೂ.ಮು) ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು- ಸಂಪುಟ-3, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು
3. ಪ್ರಸನ್ನ ಎ.ವಿ. (ಸಂ), 2001, ಕನ್ನಡ ಭಾರತ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ರಾಜಶೇಖರ ಪಿ.ಕೆ. (ಸಂ), 2011, ಜನಪದ ಮಹಾಭಾರತ, ಎಂ. ನಾಗರಾಜಮೂರ್ತಿ, ಮನೆ ನಂ. 132, ಮೂರನೇ ಮಾದರಿ ಅಧಿಕಾರಿಗಳ ನಿವಾಸ, ಮೆಡಿಕಲ್ ಸೆಂಟರ್ ಹತ್ತಿರ ಬಿಇಎಂಎಲ್ ನಗರ, ಕೆಜಿಎಫ್.
5. ವೆಂಕಟಾಚಲ ಶಾಸ್ತ್ರೀ, ಟಿ.ವಿ. (ಸಂ), 2006, ಪಂಪ ಸಂಪುಟ, ಆದಿಪುರಾಣಂ, ವಿಕ್ರಮಾರ್ಜುನ ವಿಜಯಂ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
6. ಶ್ರೀಮತಿ ಎಚ್.ಎಸ್., (ಮೂ: ಕೆ. ಬಾಲಗೋಪಾಲ್), 2012, ಪ್ರಾಚೀನ ಭಾರತದ ಚರಿತ್ರೆ, ಡಿ.ಡಿ. ಕೊಸಾಂಬಿ ಅವರ ಚಿಂತನೆಗಳು, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.

ಡಾ. ರವಿ ಎಂ. ಸಿದ್ಲಿಪುರ ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’ ಎಂಬ ವಿಮರ್ಶಾ ಲೇಖನಗಳ ಸಂಕಲನ, ’ಪಿ. ಲಂಕೇಶ’ಎಂಬ ಕಿರು ಹೊತ್ತಿಗೆ, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ.

 

Be the first to comment on "ಅಂಬೇಡ್ಕರ್ : ಕನ್ನಡ ಮಹಾಭಾರತಗಳ ವನವಾಸಿಗಳು"

Leave a comment

Your email address will not be published.


*