ದೃಶ್ಯ ಕಲಾ ಬಂಧುಗಳೇ,
ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಈಗ ಪ್ರದರ್ಶನಕ್ಕೆ ಲಭ್ಯವಿದೆ.
ನಮಸ್ಕಾರ, ವೆಂಕಟಪ್ಪ ಆರ್ಟ್ ಗ್ಯಾಲರಿಯ ಹೆಸರು ಕೇಳಿ ಸುಮಾರು ದಿನಗಳೇ ಆಗಿತ್ತು. ಈ ಗ್ಯಾಲರಿಯ ಮೇಲಿದ್ದ ಖಾಸಗಿಯವರ ಹದ್ದಿನ ಕಣ್ಣಿನಿಂದ ತಪ್ಪಿಸಲು ಕರ್ನಾಟಕದ ಪ್ರತಿಯೊಬ್ಬ ಕಲಾವಿದ ಪಟ್ಟ ಶ್ರಮ ಶ್ಲಾಘನೀಯ. ಎಲ್ಲವು ಸರಿಯಾಗಿದೆ, ಕರೋನ ಕೂಡ ನಮ್ಮನ್ನಗಲಿದೆ ಎಂದು ಸಂತೋಷ ಪಡುವಷ್ಟರಲ್ಲಿ, ಆತಂಕದ ಛಾಯೆ ಮೂಡಲಾರಂಭಿಸಿತು. ಇದಕ್ಕೆ ಬಹುತೇಕ ಕಾರಣಗಳು ನನಗೆ ಒಗಟಿನಂತೆ ಕಾಣಲಾರಂಭಿಸಿದವು. ಕಾರಣ ಕರೋನಾದ ನಂತರದಲ್ಲಿ ಅದೂ ಬೆಂಗಳೂರಿನಲ್ಲಿ ಕಲಾ ಚಟವಟಿಕೆಗಳು ತಾರಕಕ್ಕೇರಿದ ಸಂತೋಷ. ಬಹುತೇಕ ಎಲ್ಲ ಗ್ಯಾಲರಿಗಳು ಕಲಾ ಪ್ರದರ್ಶನಗಳ ಸಂಭ್ರಮವನ್ನ ಕಾಣುತ್ತಿವೆ, ಹೊಸ ಹೊಸ ಗ್ಯಾಲರಿಗಳು ಜನ್ಮತಾಳಿವೆ. ವಿಪರ್ಯಾಸವೆಂದರೆ, ಕಷ್ಟಪಟ್ಟು ಹೋರಾಡಿ ಉಳಿಸಿಕೊಂಡ ನಮ್ಮ ರಾಜ್ಯದ ಹೆಮ್ಮೆಯ ವೆಂಕಟಪ್ಪ ಗ್ಯಾಲರಿ ಮಾತ್ರ ಇದಕ್ಕೆ ಹೊರತಾಗಿದೆ. ಯಾರ ಬಾಯಿಯಲ್ಲಿಯೂ ಈ ಗ್ಯಾಲರಿಯ ಚಕಾರವಿಲ್ಲ. ಯಾಕೆ? ಎಲ್ಲರೂ ಈ ಗ್ಯಾಲರಿಯಿಂದ ದೂರ ಉಳಿಯುತ್ತಿದ್ದಾರೆಯೇ? ಈ ಪ್ರಶ್ನೆಯ ಬೆನ್ನಟ್ಟಿ ಹೋದಾಗಲೇ ತಿಳಿದದ್ದು, ಎಲ್ಲೋ ಎಡವಟ್ಟಾಗಿದೆ ಅಂತ. ಕಳೆದ ತಿಂಗಳು ಈ ಗ್ಯಾಲರಿಯ ಬಳಕೆಗಾಗಿ ಅಲ್ಲಿಯ ಸಿಬ್ಬಂದಿಗೆ ಪ್ರಶ್ನಿಸಿದಾಗ ಸಿಕ್ಕ ಉತ್ತರ ಗ್ಯಾಲರಿ ದುರಸ್ತಿಯಲ್ಲಿದ್ದು ಪ್ರದರ್ಶನಕ್ಕೆ ಲಭ್ಯವಿಲ್ಲವೆಂದು. ವಿಪರ್ಯಾಸವೆಂದರೆ, ಗ್ಯಾಲರಿಯು ಪ್ರದರ್ಶನಕ್ಕೆ ಯೋಗ್ಯವಾಗಿಲ್ಲ ಎಂದಾದಲ್ಲಿ ಅವರ ಸಂಗ್ರಹದಲ್ಲಿರುವ ಕಲಾಕೃತಿಗಳ ಪ್ರದರ್ಶನ ಆ ಗ್ಯಾಲರಿಯಲ್ಲಿ ನಡಿಯುತ್ತಿತ್ತು. ಇದರರ್ಥ? ಉತ್ತರ ಗೊತ್ತಿಲ್ಲ. ಒಂದು ತಿಂಗಳ ನಂತರ ಹೋದರೆ ಅಲ್ಲಿಯ ಸಿಬ್ಬಂದಿಯವರಿಂದ ಮತ್ತದೇ ಉತ್ತರ. ಪಟ್ಟು ಬಿಡದ ಪ್ರಯತ್ನಕ್ಕೆ ಆ ಗ್ಯಾಲರಿಯ ಯಾವುದೇ ಕೊರತೆಯನ್ನು ಪ್ರಶ್ನಿಸದೇ ಬಳಸುವುದಾದರೆ ನೀಡುವುದಾಗಿ ಹೇಳಿದಾಗ ಒಪ್ಪಿ ಗ್ಯಾಲರಿಯನ್ನು ಪಡೆದು ಪ್ರದರ್ಶನ ಪ್ರಾರಂಭಿಸಿದ ನಂತರ ಗೊತ್ತಾದದ್ದು ಕರೋನ ಸಮಯದ ನಂತರ ಗ್ಯಾಲರಿಯ ದುರಸ್ತಿಯ ಕಾರಣ ಮುಂದಿಟ್ಟು ಯಾರಿಗೂ ಗ್ಯಾಲರಿಯನ್ನು ಕೊಡದೆ ಇರುವುದು. ಮತ್ತಲ್ಲಿ ಇನ್ನು ಯಾವುದೇ ತರಹದ ದುರಸ್ತಿ ಕೆಲಸವೇ ಪ್ರಾರಂಭವಾಗಿಲ್ಲ. ಗ್ಯಾಲರಿ ಈ ಹಿಂದೆ ನಡೆದ ಚಳವಳಿಯ ಸಮಯದಲ್ಲಿ ಹೇಗಿತ್ತೊ ಹಾಗೆಯೇ ಇದೆ. ಗ್ಯಾಲರಿಯಲ್ಲಿ ಸ್ಪಾಟ್ ಲೈಟುಗಳಿಲ್ಲ, ಬಹುತೇಕ ಸ್ವಿಚ್ ಬೋರ್ಡ್ಗಳು ಒಡೆದು ಹೋಗಿವೆ. ಗ್ಯಾಲರಿಯ ಹೊರಗಿನ ಗೋಡೆಗಳ ಕೆಲವೊಂದು ಭಾಗಗಳು ಮಳೆಯ ನೀರು ಸರಾಗವಾಗಿ ಹರಿದು ಹೋಗದ ಸ್ಥಿತಿಯಿಂದಾಗಿ ನೀರಿನಿಂದ ನೆನೆದಿವೆ. ಶೌಚಾಲಯಗಳ ಗಬ್ಬು ವಾಸನೆ, ಅಲ್ಲಿ ಬರುವ ವಯೋವೃದ್ಧ ಯಾತ್ರಿಗಳಿಗೆ ಲಿಫ್ಟ್ ನ ವ್ಯವಸ್ಥೆಯಿಲ್ಲದಿರುವುದು, ಸುತ್ತಲಿನ ನೀರಿನ ಹೊಂಡದಲ್ಲಿ ಧೈತ್ಯಾಕಾರದ ಹುಲ್ಲು ಬೆಳೆದು ನಿಂತಿರುವುದು, ಇದೆಲ್ಲವನ್ನು ಗಮನಿಸಿಯೇ ನಮ್ಮ ಸರ್ಕಾರ/ಅಲ್ಲಿನ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿಯೇ ಬಿಟ್ಟ ಹಾಗಿದೆ ಅಂತ ಅನಿಸುತ್ತಿದೆ. ನಾವೆಲ್ಲ (ಕಲಾವಿದರು/ಕಲಾ ಪೋಷಕರು) ಸತತವಾಗಿ ಇದೆಲ್ಲವನ್ನು ಗಮನಿಸುತ್ತಾ ಸರಕಾರದ ಗಮನಕ್ಕೆ ತಂದು ಸ್ಥಿತಿಸುಧಾರಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.
ಈ ಪ್ರದರ್ಶನಕ್ಕಾಗಿ ಗ್ಯಾಲರಿಯ ಬಳಕೆ ಕುರಿತು ಸಲ್ಲಿಸಿದ ಅರ್ಜಿಯಲ್ಲಿ ಅಲ್ಲಿಯ ಸಿಬ್ಬಂದಿ ಅವಕಾಶ ನೀಡಲು ನಿರಾಕರಿಸಿದ್ದನ್ನು ಪ್ರಸ್ತಾಪಿಸಲಾಗಿತ್ತು. ಈ ವಿಷಯ ಕುರಿತು ಅಲ್ಲಿಯ ಸಹ ನಿರ್ದೇಶಕರು ಅಲ್ಲಿ ಉಪಸ್ಥಿತರಿದ್ದ ಒಬ್ಬ ಸಿಬ್ಬಂದಿಯನ್ನು ಗ್ಯಾಲರಿಯು ಲಭ್ಯವಿಲ್ಲವೆಂದು ಹೇಳಲು ನಿಮಗೆ ಯಾರು ಹೇಳಿದ್ದು ಅಂತ ವಿಚಾರಿಸಿದಾಗ, ಆ ಸಿಬ್ಬಂದಿಯು ನೀವೆ ಹೇಳಿದ್ದು ಅಂತ ಸ್ಪಷ್ಟವಾಗಿ ತಿಳಸಿ ಅವರನ್ನು ಪೇಚಿಗೆ ಸಿಲುಕಿಸಿದ್ದ. ನಂತರ ಅವರು ಗ್ಯಾಲರಿ ಪ್ರದರ್ಶನಕ್ಕೆ ಲಭ್ಯವಿದೆ ಅಂತ ಹೇಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ಯಾಲರಿಗೆ ಭೇಟಿ ನೀಡಿದ ಹಲವು ಕಲಾವಿದರು ಮುಂಬರುವ ದಿನಗಳಲ್ಲಿ ತಮ್ಮ ಪ್ರದರ್ಶನವನ್ನು ಇಲ್ಲಿಯೇ ಏರ್ಪಡಿಸುವುದಾಗಿ ತಿಳಿಸಿದ್ದು, ಮತ್ತು ಅಲ್ಲಿಗೆ ಭೇಟಿ ನೀಡಿದ ಜನರು ಗ್ಯಾಲರಿ ಮತ್ತು ನಮ್ಮ ಪಾರಂಪಾರಿಕ ಸ್ಮಾರಕಗಳನ್ನು ಕಾಪಾಡಿಕೊಳ್ಳುವದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದನ್ನು ಕೇಳಿ ಈ ಪ್ರದರ್ಶನ ಏರ್ಪಡಿಸಿದ್ದು ಸಾರ್ಥಕವೆನಿಸಿತ್ತು.
ಒಟ್ಟಿನಲ್ಲಿ ಕಲಾವಿದರು ಆ ಗ್ಯಾಲರಿಯನ್ನು ಬಳಸದೇ ಹೋದರೆ ಅದನ್ನು ಕಳೆದುಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ. ಆ ಕಾರಣದಿಂದಾಗಿ ಇಂತಹ ಎಲ್ಲ ಸಮಸ್ಯೆಗಳಿಗೆ ಉತ್ತರ ಹುಡುಕುವುದಕ್ಕಾಗಿ ಕಲಾವಿದರನ್ನು ಈ ಗ್ಯಾಲರಿಯತ್ತ ಗಮನ ಸೆಳೆಯುವ ಉದ್ದೇಶ ದಿಂದ ಈ ಕಲಾ ಪ್ರದರ್ಶನವನ್ನು ಏರ್ಪಡಿಸಿದ್ದೆ.
ಧನ್ಯವಾದಗಳು
ಪರಮೇಶ್ ಜೊಲಾಡ್