ಬೇಕಿರುವುದು ಹೊಸ ಭಾಷೆಯೋ ಹೊಸ ಪ್ರಶ್ನೆಗಳೋ ?

ಬೇಕಿರುವುದು ಹೊಸ ಭಾಷೆಯೋ ಹೊಸ ಪ್ರಶ್ನೆಗಳೋ ?

 

ಕೆ. ಪಿ. ಲಕ್ಷ್ಮಣ್, ವಿ. ಎಲ್. ನರಸಿಂಹಮೂರ್ತಿ

ಗುರುಪ್ರಸಾದ್ ಕಂಟಲಗೆರೆಯವರು ದಲಿತ ಸಂಘರ್ಷ ಸಮಿತಿ ಹುಟ್ಟಿದ ೫೦ ವರ್ಷದ ನೆನಪಿಗೆ ಬರೆದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದಿರುವ ಕಿರಣ್ ಗಾಜನೂರು ಮತ್ತು ಶ್ರೀನಿವಾಸ್ ಮಣಗಳ್ಳಿ ಅವರ ಲೇಖನ ಕರ್ನಾಟಕದ ದಲಿತ ಚಳುವಳಿ ಮತ್ತು ಅದು ಈ ನೆಲದಲ್ಲಿ ಹುಟ್ಟುಹಾಕಿದ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಣಾಮದ ಕುರಿತು ಅಸಡ್ಡೆ, ಅಜ್ಞಾನ, ಪೂರ್ವಾಗ್ರಹ, ತೀರ್ಪುಗಳಿಂದ ತುಂಬಿ ಹೋಗಿದೆ. ದಲಿತ ಚಳುವಳಿಯ ಕುರಿತು ಬೌದ್ದಿಕ ವಲಯ ಮತ್ತು ಇತರ ಚಳುವಳಿಗಳು ಎತ್ತುವ, ಈಗಾಗಲೇ ಚಾಲ್ತಿಯಲ್ಲಿರುವ ವಿಮರ್ಶೆಯ ಆಚೆಗೆ ಏನನ್ನೂ ಹೇಳಿಯೂ ಇಲ್ಲ. ಲೇಖನದಲ್ಲಿ ದಲಿತ ಚಳುವಳಿಯ ಹೋರಾಟದ ಬಗ್ಗೆ ಚರ್ಚಿಸಿ ಇವತ್ತಿನ ಸಂದರ್ಭದಲ್ಲಿ ದಲಿತ ಯುವಜನತೆ ಎದುರಿಸಬೇಕಾದ ಸವಾಲುಗಳಿಗೆ ಸ್ಪಂದಿಸುವುದಕ್ಕೆ ಬೇಕಾದ ಭಾಷೆ, ನುಡಿಗಟ್ಟು ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಅಭಾವ ಎದುರಿಸುತ್ತಿದೆ ಎಂದಿದ್ದಾರೆ.

 

ದಲಿತ ಚಳುವಳಿಯಂತಹ ‘ಹೋರಾಟದ ಸಾಗರಕ್ಕೆ’ ಹರಿದ ಸಾವಿರಾರು ನದಿಗಳ, ತೊರೆಗಳ, ಹರಿವಿನ ಅಗಾಧತೆ ಮತ್ತು ಅದು ಸೃಷ್ಟಿಸಿದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ವ್ಯಕ್ತಿಗತ ಆಯಾಮಗಳ ಕುರಿತು ಈವರೆಗೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸಮರ್ಪಕವಾದ ಗ್ರಹಿಕೆಯೇ ಸಿಕ್ಕಿಲ್ಲ.

ಅಷ್ಟೋ ಇಷ್ಟು ಸಿಕ್ಕಿದ್ದರೆ ಅದು ಸಾಸಿವೆ ಕಾಳಿನಷ್ಟು ಮಾತ್ರ. ದಲಿತ ಚಳುವಳಿ ದಮನಿತ ಸಮುದಾಯಗಳ ಆತ್ಮಗೌರವಕ್ಕಾಗಿ ಭೂಮಿ, ಶಿಕ್ಷಣ, ಅವಮಾನ, ಲೈಂಗಕ ದೌರ್ಜನ್ಯಗಳ ವಿರುದ್ಧ ನಡೆಸಿದ ಹೋರಾಟಗಳು ತಂದಿರುವ ಬದಲಾವಣೆಗಳ ಬಗ್ಗೆ ಇದುವರೆಗೂ ಗಮನಾರ್ಯವಾದ ಸಂಶೋಧನೆಗಳಾಗಿಯೇ ಇಲ್ಲ. ಇದು ಬೌದ್ದಿಕ ಲೋಕ ದಲಿತ ಚಳುವಳಿಗೆ ತೋರಿಸುತ್ತಾ ಬಂದಿರುವ ಅಸಡ್ಡೆ.

 

ದಲಿತ ಚಳುವಳಿಯ ಕುರಿತ ಅವಲೋಕನ, ಟೀಕೆ ವಿಮರ್ಶೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದಲೂ ಕನ್ನಡದ ಬೌದ್ಧಿಕ ವಲಯ ಮಾಡುತ್ತಿದೆ. ದಲಿತ ಚಳುವಳಿಯೂ ತನ್ನ ಬಗೆಗಿನ ಟೀಕೆ ವಿಮರ್ಶೆಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗುತ್ತಲೇ ಇದೆ. ಈಗ ದಲಿತ ಚಳುವಳಿ ಹುಟ್ಟಿ ಐವತ್ತು ವರ್ಷಗಳಾಗಿರುವಾಗ ಕೇವಲ ದಲಿತ ಚಳುವಳಿಯ ಪರಾಮರ್ಶೆಗೆ ಮುಂದಾಗುವ ಬದಲು ದಲಿತ ಚಳುವಳಿ ಎತ್ತಿದ ಪ್ರಶ್ನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಸ್ವೀಕರಿಸಿದೆಯೇ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕು ಅನಿಸುತ್ತದೆ.

 

ದಲಿತರ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಶುರು ಎಂದು ಭಾವಿಸಿರುವ ‘ಬೂಸಾ ಚಳುವಳಿ’ಯ ಹುಟ್ಟಿನೊಂದಿಗೆ ದಲಿತ ಚಳುವಳಿ ಕಟ್ಟಿಕೊಡಲು ಹೊರಟ ಲೋಕದೃಷ್ಟಿ, ಕಲಾಮೀಮಾಂಸೆಯನ್ನು ಕನ್ನಡ ಸಾಂಸ್ಕೃತಿಕ ಜಗತ್ತು ತನ್ನ ಅಸ್ಮಿತೆಯ ಮುಖ್ಯ ಭಾಗವೆಂದು ಎಂದೂ ಭಾವಿಸಿಕೊಳ್ಳಲೇ ಇಲ್ಲ. ಯಾಕೆಂದರೆ ಕನ್ನಡದ ಸಾಹಿತ್ಯ, ಕಲೆಯ ಹೆಸರಿನಲ್ಲಿ ಆ ತನಕ ಕಟ್ಟಿಕೊಂಡು ಬಂದಿದ್ದ ದಲಿತೇತರ ಜಾತಿಗಳ ಯಜಮಾನ್ಯ ಕಲಾಮೀಮಾಂಸೆಯನ್ನು ಪ್ರಶ್ನಿಸಿ ಹೊಸ ಹುಟ್ಟು ಮತ್ತು ಗುರುತನ್ನು ರೂಪಿಸಿಕೊಳ್ಳಲು ದಲಿತ ಚಳುವಳಿ ಒಳ ಒತ್ತಡವನ್ನು ಸೃಷ್ಟಿಸಿತ್ತು. ಇದರ ಜೊತೆಗೆ ಎಲ್ಲ ರೀತಿಯಲ್ಲೂ ಸಮಾಜದ ರಚನೆಯನ್ನು ಒಡೆದು ಮರುಕಟ್ಟುವ ಪ್ರಯತ್ನ ಶುರುಮಾಡಿತು.

 

ಇವತ್ತಿಗೂ ‘ಬೂಸಾ ಚಳುವಳಿ’ಯನ್ನು ಎಚ್ಚೆತ್ತ ದಲಿತ ಪ್ರಜ್ಞೆ ಸೃಷ್ಟಿಸಿದ ಸಂಚಲನ ಎಂದು ‘ಒಂದು ಘಟನೆ’ ಎನ್ನುವಂತೆ ಸೀಮಿತಗೊಳಿಸಿ ನೋಡುವ ಬೌದ್ದಿಕವಲಯ ಬಸವಲಿಂಗಪ್ಪನವರು ತಮ್ಮ ಹೇಳಿಕೆಯ ಮೂಲಕ ಎತ್ತಿದ ಎರಡು ಸಾವಿರ ವರ್ಷಗಳು ಕಟ್ಟಿದ ಸಂಸ್ಕೃತಿಯ ನೈಜತೆಯ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

 

ಕನ್ನಡ ಸಂಸ್ಕೃತಿ ‘ಬೂಸಾ ಚಳುವಳಿ’ಯ ಕಾಲಘಟ್ಟದಲ್ಲಿ ತನ್ನನ್ನೆ ಛಿಧ್ರಗೊಳಿಸಿಕೊಂಡು ಹೊಸ ಹುಟ್ಟು ಪಡೆಯುವ ಎಲ್ಲ ಅವಕಾಶಗಳಿದ್ದಾಗಲೂ ಬಸವಲಿಂಗಪ್ಪನವರ ರಾಜೀನಾಮೆ ಪಡೆದು ಅವರ ದನಿಯನ್ನು ಅಡಗಿಸುವ ಕೆಲಸ ಮಾಡಿತೇ ಹೊರತು ದಲಿತ ಚಳುವಳಿ ಜಾತಿ ಶ್ರೇಷ್ಠತೆ, ನೀರು, ನೆಲ, ಶಿಕ್ಷಣ, ಕಲೆ, ಭಾಷೆ , ಕುರಿತಾಗಿ ಎತ್ತಿದ ಪ್ರಶ್ನೆಗಳನ್ನು ಎದುರುಗೊಳ್ಳಲು ಹೋಗಲೇ ಇಲ್ಲ. ಸಣ್ಣ ಆತ್ಮ ವಿಮರ್ಶೆ ಮಾಡಿಕೊಳ್ಳುವ ಗುಣವನ್ನೂ ಬೆಳೆಸಿಕೊಳ್ಳಲಿಲ್ಲ. ಇದಾದ ನಂತರದ ಐವತ್ತು ವರ್ಷಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣ,  ಬೌದ್ಧಿಕ ಸಂವಾದಗಳನ್ನು ಗಮನಿಸಿದರೆ ಅಲ್ಲಲ್ಲಿ ಸಣ್ಣ ಪುಟ್ಟ ಪಲ್ಲಟಗಳಾಗಿರುವುದು ಬಿಟ್ಟರೆ ಅಂದು ಬಸವಲಿಂಗಪ್ಪನವರು ಎತ್ತಿದ ಪ್ರಶ್ನೆ ಮತ್ತು ಅನಂತರ ದಲಿತ ಚಳುವಳಿ ಎತ್ತಿದ ಪ್ರಶ್ನೆಗಳು ಇಂದಿಗೂ ಉತ್ತರಸಿಗದೇ ಹಾಗೇ ಉಳಿದಿವೆ.

 

ಲೇಖಕರು ಹೇಳುವ ಹಾಗೆ ಹೊಸ ಕಾಲದ ದಲಿತ ರಾಜಕಾರಣ 70- 80ರ ದಲಿತ ಸಂಘರ್ಷ ಸಮಿತಿ ಕಟ್ಟಿಕೊಟ್ಟ ಸಂಕಥನ, ಭಾಷೆಗೆ ಸ್ಥಗಿತಗೊಂಡಿದೆ ಎಂದರೆ ಅಂದರೆ ಅದು ಇಡೀ ಕನ್ನಡ ಸಾಂಸ್ಕೃತಿಕ ಲೋಕದ ಸ್ಥಗಿತತೆಯೇ ಹೊರತು ದಲಿತ ರಾಜಕಾರಣದ್ದಲ್ಲ. ಐವತ್ತು ವರ್ಷಗಳ ಹಿಂದೆ ಎತ್ತಿದ ಪ್ರಶ್ನೆಗಳೇ ಬಗೆಹರಿಯದ ಉಳಿದಿರುವಾಗ ದಲಿತ ಹೊಸ ತಲೆಮಾರು ಎಲ್ಲಿಗೆ ತಾನೇ ಚಲಿಸಬೇಕು?

ದಲಿತ ಚಳುವಳಿ ಅಂದು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ದಲಿತ ಸಮುದಾಯಗಳಲ್ಲ ಬದಲಿಗೆ ದೌರ್ಜನ್ಯ ಮಾಡಿರುವ, ಮಾಡುತ್ತಿರುವ ಸ್ವತಃ ದೌರ್ಜನ್ಯ ಎಸಗುವ ಸಮುದಾಯಗಳಿಂದ ಬಂದು ಆ ದೌರ್ಜನ್ಯಗಳನ್ನು ತಡೆಯುವದಕ್ಕೆ ಕೆಲಸ ಮಾಡದೆ‌ ದೌರ್ಜನ್ಯಗಳನ್ನು ಎದುರಿಸುವವರನ್ನೆ ಎಲ್ಲದಕ್ಕೂ ಹೊಣೆಗಾರರನ್ನಾಗಿಸುವುದು ಜವಾಬ್ದಾರಿಯುತ ಸಮಾಜದ ಲಕ್ಷಣವಲ್ಲ.

 

ಲೇಖನದ ಉದ್ದಕ್ಕೂ ಎಲ್ಲಿಯೂ ದಲಿತರ ಮೇಲೆ ದಿನೆದಿನೆ‌ ಹೆಚ್ಚುತ್ತಿರುವ ಅಪರಾಧ, ಅನ್ಯಾಯಗಳ ಬಗ್ಗೆ ಸಮಾಜ ಮೌನವಾಗಿದ್ದುಕೊಂಡೆ ತೋರಿಸುತ್ತಿರುವ ಪರೋಕ್ಷ ಸಮ್ಮತಿಯ ಬಗ್ಗೆ ಸಣ್ಣ ಆತ್ಮವಿಮರ್ಶೆಯನ್ನು ಮಾಡಿಕೊಳ್ಳದ ಲೇಖಕರು ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತವಾದಿ ಧೋರಣೆಗಳಿಗೆ ಕಾರಣ ಮತ್ತು ಬಲಿಪಶುಗಳು ದಲಿತರೆ ಎಂದು ಮರುಗುತ್ತಾರೆಯೇ ಹೊರತು. ಈ ಹೆಚ್ಚುತ್ತಿರುವ ಮೂಲಭೂತವಾದ, ಆರ್ಥಿಕ‌ ಅಸಮಾನತೆ, ಸಾಮಾಜಿಕ‌ ಕ್ಷೋಭೆಗೆ ಯಾರು ನಿಜವಾಗಿಯೂ ಕಾರಣ ಎನ್ನುವ ಪ್ರಶ್ನೆ ಮಾಡಿಕೊಳ್ಳುವುದಿಲ್ಲ‌. ಈ ರೀತಿ ಆತ್ಮವಿಮರ್ಶೆಯಿಲ್ಲದ ಪಲಾಯನವಾದಿ ಧೋರಣೆಗಳೇ ಈ ಕಾಲದ ಸಾಂಸ್ಕೃತಿಕ ದಿವಾಳಿತನಕ್ಕೆ ಕಾರಣವೇ ಹೊರತು ದಲಿತ ಹೊಸ ತಲೆಮಾರಲ್ಲ.

 

ಎಪ್ಪತ್ತರ ದಶಕದಲ್ಲಿ ಶುರುವಾದ ದಲಿತ ಸಾಹಿತ್ಯ ತಳಸಮುದಾಯದ ಸಂವೇದನೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷೆ, ನುಡಿಕಟ್ಟನ್ನು ಸೃಷ್ಟಿಮಾಡಿಕೊಟ್ಟರೆ, ದಲಿತ ಚಳುವಳಿ ತನ್ನ ವಿಮೋಚನೆಯ ಜೊತೆಜೊತೆಗೆ ಒಟ್ಟು ಸಮಾಜದ ವಿಮೋಚನೆಗೂ ದುಡಿದು ಸಮಾನತೆಯ ಸಮಾಜದ ಕನಸು ಬಿತ್ತುವ ಮೂಲಕ ಸಾಮಾಜಿಕ ಚಳುವಳಿಗಳಿಗೆ ಹೋರಾಟದ ಹೊಸ ಮಾದರಿಯನ್ನು ರೂಪಿಸಿಕೊಟ್ಟಿತು. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕ ದಲಿತ ಸಂಸ್ಕೃತಿ ಸೃಷ್ಟಿ ಮಾಡಿರುವ ಈ ಮಾದರಿಗಳ ಆಚೆಗೆ ಹೊಸದನ್ನು ಏನಾದರೂ ಸೃಷ್ಟಿ ಮಾಡಿಕೊಂಡಿದೆಯೇ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

 

ಇವತ್ತು ಸಾಹಿತ್ಯ, ಕಲೆ, ಸಿನಿಮಾ, ರಂಗಭೂಮಿಗೆ ದಲಿತ ಪ್ರಜ್ಞೆ ಕೊಡುತ್ತಿರುವ ಹೊಸ ಆಯಾಮ, ಸೌಂದರ್ಯ ಮೀಮಾಂಸೆಯ ಅರಿವಿಲ್ಲದವರು ಮಾತ್ರ ದಲಿತರು ಸಾಂಸ್ಕೃತಿಕ ಅನಾಥಭಾವ ಅನುಭವಿಸುತ್ತಿದ್ದಾರೆ ಎನ್ನುವ ಷರಾ ಬರೆಯಬಲ್ಲರು.

 

ನಮ್ಮ ಸಮಾಜದಲ್ಲಿ ‘ಸಾಂಸ್ಕೃತಿಕ ಅನಾಥ ಪ್ರಜ್ಞೆ’ ಎನ್ನುವುದು ಏನಾದರೂ ಇದ್ದರೆ ಅದಕ್ಕೆ ನೇರ ಹೊಣೆಗಾರರು ದಲಿತೇತರ ಸಮುದಾಯಗಳೇ ಹೊರತು ದಲಿತರಲ್ಲ. ಹಾಗೆ ನೋಡಿ ಕಾಲ ಕಾಲಕ್ಕೂ ಇಲ್ಲಿ ತನ್ನ ಒಳಗಿಂದಲೇ ಬಿಡುಗಡೆಯ ಹಾಡುಗಳನ್ನು  ಹಾಡುಗಳನ್ನು ಕಟ್ಟುತ್ತಾ ಬಂದಿರುವುದು ತಳ ಸಮುದಾಯದ ಜೀವಗಳೆ! ಎಲ್ಲವೂ ಕಳಚಿ ಬಿದ್ದಿದೆ ಎಂದು ಎಲ್ಲರೂ ಕೈಚೆಲ್ಲಿ ಕೂತ ಕಾಲದಲ್ಲಿ ಯಾಕೆ ದಲಿತ ಸಂಘರ್ಷ ಸಮಿತಿ ಅರಂಭಿಕರಲ್ಲಿ ಒಬ್ಬರಾದ ದೇವನೂರು ‘ಆರೆಸ್ಸೆಸ್ ಆಳ-ಅಗಲ’ ಪುಸ್ತಕ ಬರೆಯಬೇಕಾಗುತ್ತದೆ? ಕೋಟಿಗಾನಹಳ್ಳಿ ರಾಮಯ್ಯ ಸಾಂಸ್ಕೃತಿಕ ರಾಜಕಾರಣದ ಅಗತ್ಯದ ಕುರಿತು ಮಾತಾನಾಡಬೇಕಾಗುತ್ತದೆ ಅನ್ನುವುದು ಗಮನಿಸಬೇಕಾಗುತ್ತದೆ.

 

ದಲಿತ ಸಂಘರ್ಷ ಸಮಿತಿ ಮತ್ತು ಅದರ ಕಾಣ್ಕೆ ಇತಿಹಾಸದಲ್ಲಿ ಮುಗಿದು ಹೋದ ವಿದ್ಯಮಾನವಲ್ಲ.. ಬದಲಿಗೆ ಎಲ್ಲ ಕಾಲದ ಎಚ್ಚರ. ಅದರ ಪಾಲಾನುಭಿವಿಗಳಾದ ದಲಿತೇತರ ಸಮುದಾಯಗಳು ನಮ್ಮ ಪಾಲಿನ ಜವಾಬ್ದಾರಿಗಳನ್ನು ನಿಭಾಯಿಸದೆ ತಪ್ಪಿಸಿಕೊಂಡು ‘ಕೆಲಸ ಕದಿಯುವ’ ಸ್ವಭಾವವೇ ಇಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ವಲಯದಲ್ಲಿ ಮೂಲಭೂತವಾದಿಗಳು ರಾರಾಜಿಸುಟ್ಟಿರುವುದಕ್ಕೇ ಮುಖ್ಯ ಕಾರಣ.

 

ಲೇಖನದಲ್ಲಿರುವ ದಲಿತರಿಗೆ ಪಾಠ ಮಾಡುವ ದಾಟಿ ಮತ್ತು ಇಡೀ ಸಾಂಸ್ಕೃತಿಕ ರಾಜಕಾರಣದ‌ ವಿಷವನ್ನು ತಿಳಿಗೊಳಿಸವ ಭಾರವನ್ನು ದಲಿತ ಹೊರೆಸುವ ಹುನ್ನಾರ ದಲಿತರು ಯಾವಾಗಲೂ ಕ್ರಾಂತಿಗೆ ಬಲಿಪಶುಗಳಾಗಿ ದುಡಿಯಲೆಂದು ಬಯಸುವ ಸಮಾಜದ ಸುಪ್ತ ಆಸೆಯನ್ನು ಬಯಲು ಮಾಡುತ್ತದೆ.

 

~ ಕೆ. ಪಿ. ಲಕ್ಷ್ಮಣ್, ವಿ. ಎಲ್. ನರಸಿಂಹಮೂರ್ತಿ

 

ದಸಂಸ ಹುಟ್ಟಿ ಐವತ್ತು ವರ್ಷಗಳಾದ ಸಂದರ್ಭದಲ್ಲಿ ಗೆಳೆಯ ಗುರುಪ್ರಸಾದ್ ಕಂಟಲಗೆರೆ ಪ್ರಜಾವಾಣಿಯಲ್ಲಿ ಲೇಖನ ಬರೆದಿದ್ದರು‌. ಕಿರಣ್ ಗಾಜನೂರು ಮತ್ತು ಶ್ರೀನಿವಾಸ ಮಣಗಳ್ಳಿ ‘ಹೊರಾಟಕ್ಕೆ ಬೇಕು ಭಾಷೆಯ ಅಸ್ತ್ರ’ ಎನ್ನುವ ಪ್ರತಿಕ್ರಿಯೆಯನ್ನು ಸಂಗತಕ್ಕೆ ಬರೆದರು.