ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು

ಬಂಜಗೆರೆ ಜಯಪ್ರಕಾಶ

ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ `ತೊಗಲ ಮಂಟಪ’ವನ್ನು ಗೆಳೆಯರು, ಅಭಿಮಾನಿಗಳು ಈಗ ಪ್ರಕಟಿಸಲು ಮುಂದಾಗಿದ್ದಾರೆ. ಈ ನೀಳ್ಗವಿತೆಗೆ ಮುನ್ನುಡಿಯಾಗಿ ನಾಲ್ಕು ಮಾತು ಬರೆಯುವಂತೆ ನನಗೆ ಸೂಚಿಸಿದ್ದಾರೆ.

ಕೆ ಬಿ ಸಿದ್ಧಯ್ಯನವರ ಕಾವ್ಯದ ಬಗ್ಗೆ ಬರೆಯಬೇಕೆಂದರೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಅವರು ಚಿಂತಿಸಿದ ಹಾದಿಯ ಬಗ್ಗೆ ಪರಿಚಯವಿರಬೇಕಾಗುತ್ತದೆ. ಅವರ ಕಾವ್ಯ ಕಟ್ಟುವಿಕೆಯ ಪರಿಕರಗಳ ಬಗ್ಗೆ ಹಾಗೂ ಅವರು ಬಳಸುವ ನುಡಿಗಟ್ಟುಗಳ ಬಗ್ಗೆಯೂ ಸಾಕಷ್ಟು ಗ್ರಹಿಕೆ ಇರಬೇಕಾಗುತ್ತದೆ. ನಾನು ಈ ದಿಸೆಯಲ್ಲಿ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಬಲ್ಲೆನೋ ನನಗೆ ಗೊತ್ತಿಲ್ಲ.

ಕೇಬಿಯವರ ಕಾವ್ಯಾಭಿವ್ಯಕ್ತಿಗೊಂದು ವ್ಯಕ್ತಿ ವಿಶಿಷ್ಟತೆ ಇದೆ. ಪರಿಚಿತ ಅನ್ನಿಸುವ ಸಾಮಾನ್ಯ ನುಡಿಗಳು, ಪದಪುಂಜಗಳು, ವರ್ಣನೆಗಳು ಕೂಡಾ ಯಾವುದೋ ಅಪರಿಚಿತತೆಯ ಅರ್ಥವನ್ನು ಒಳಗೊಂಡಿರಬಹುದೇ ಎಂದು ತಡಕಾಡುವಂತೆ ಮಾಡುತ್ತವೆ. ಈ ಬಗೆಯ ಉಕ್ತಿ ಕ್ರಮ ಕನ್ನಡಕ್ಕೆ ತೀರಾ ಗೊತ್ತಿಲ್ಲ ಎಂದೇನಲ್ಲ. ಅಲ್ಲಮಪ್ರಭುಗಳ ಬೆಡಗಿನ ವಚನಗಳು, ಕನಕದಾಸರ ಮುಂಡಿಗೆಗಳು ಈ ವಿಧಾನದ ಉಜ್ವಲ ಉದಾಹರಣೆಗಳು. ದ ರಾ ಬೇಂದ್ರೆಯವರಲ್ಲೂ ಈ ನುಡಿಬೆಡಗಿನ ರಚನೆಗಳನ್ನು ಕಾಣಬಹುದು. ಕೇಬಿಯವರ ಕಾವ್ಯೋಕ್ತಿಯನ್ನು ನಾನು ಸೂಚಿಸಿದ ಉದಾಹರಣೆಗಳ ಜೊತೆ ಪೂರ್ಣವಾಗಿ ಹೋಲಿಸಬಹುದು ಅಂತಲೂ ಅಲ್ಲ. ಅನುಭಾವಿ ನುಡಿಗಟ್ಟಿನ ಸಾಧನವನ್ನು ಬಳಸಿಕೊಂಡು ಕೇಬಿಯವರು ಅದರಲ್ಲಿ ವರ್ತಮಾನದ ಅರ್ಥಗಳನ್ನು ಮಂಡಿಸಬಯಸುತ್ತಾರೆ. ಅವರು ಬಳಸುವ ಸಾಮಗ್ರಿ ನಮ್ಮ ಜನಪದರ ನಡುವಿನ ತತ್ವ ಪದಕಾರರ ಜಾಡಿನಲ್ಲಿದೆ ಎಂದು ಭಾವಿಸುತ್ತಿರುವಾಗಲೇ ಇವರು ನಿಂತಿರುವ ತಾತ್ವಿಕತೆಯ ಪಾತಳಿಯೇ ಬೇರೆ ಎಂಬಂತೆ ದಿಗ್ಗನೆ ಲೋಕ ವ್ಯವಹಾರಗಳ ಕುರುಹನ್ನು ಹೊಳೆಯಿಸುವುದು ಸಿದ್ದಯ್ಯನವರ ರೀತಿ.

ಅವರ ಬಕಾಲ, ದಕ್ಲಕಥಾ ದೇವಿ ಕಾವ್ಯ, ಅನಾತ್ಮ, ಗಲ್ಲೆಬಾನಿ ಹಾಗೂ ಈಗ ಹೊರಬರುತ್ತಿರುವ ತೊಗಲ ಮಂಟಪ ಈ ಎಲ್ಲಾ ಕೃತಿಗಳಲ್ಲೂ ಸಿದ್ದಯ್ಯನವರು ತಮ್ಮದೇ ಅಭಿವ್ಯಕ್ತಿ ಕ್ರಮವನ್ನು ಸಾಧಿಸಿಕೊಳ್ಳುವುದಕ್ಕೆ ಆರಿಸಿಕೊಂಡಿದ್ದು ಅವರ ಬದುಕಿನ ನಿಜಾನುಭವ ದ್ರವ್ಯವನ್ನು. ಅವರು `ಕುಲಜ್ಞಾನ’ ಎಂದು ಕರೆಯುವ ಕುಲಪ್ರಜ್ಞೆಯನ್ನು ಅವರ ಕಾವ್ಯ ಸದಾ ಧರಿಸಿಕೊಂಡಿದೆ. ಚಿನುವಾ ಅಚಿಬೆ, ವೊಲೆಸೊಯಿಂಕಾ, ಗೂಗಿ ವಾ ಥಿಯಾಂಗೋ ಮುಂತಾದ ಕಪ್ಪು   ಜನಾಂಗೀಯ ಲೇಖಕರು, ನಮ್ಮವರೇ ಆದ ದೇವನೂರು ಮಹಾದೇವ ತಮ್ಮ ಸಾಹಿತ್ಯಾಭಿವ್ಯಕ್ತಿಯಲ್ಲಿ ನಡೆದ ದಾರಿ ಇದು. ತಮ್ಮ ಲೋಕಾನುಭವದ ಸದ್ಯದ ನೆಲೆಯನ್ನು ಕಂಡರಿಸುತ್ತಲೇ ಲೋಕ ಸತ್ಯಗಳನ್ನು ಸಾಕ್ಷಾತ್ಯೀಕರಿಸುವ ವಿಧಾನವೆಂದು ಇದನ್ನು ಕರೆಯಬಹುದೋ ಏನೋ.

ತಾನು ಹುಟ್ಟಿ ಬೆಳೆದಿರುವ ಸಮುದಾಯದ ಸಾಂಸ್ಕöÈತಿಕ ದ್ರವ್ಯವನ್ನು ಉಪಕರಣವನ್ನಾಗಿ, ಕಚ್ಚಾವಸ್ತುವನ್ನಾಗಿ ಬಳಸಿಕೊಳ್ಳುತ್ತಾ, ಅದಕ್ಕೊಂದು ಅಸ್ಮಿತೆಯನ್ನು, ಮೌಲ್ಯವನ್ನು ಒದಗಿಸುವ ಕಸಬುದಾರಿಕೆ ಇದು. ಇದಕ್ಕೆ ಬೇಕಾಗುವುದು ತನ್ನ ಹಾಗೂ ತನ್ನ ಸಮುದಾಯದ ಅಸ್ತಿತ್ವದ ಬಗೆಗಿನ ಗಾಢ ಘನತೆಯ ಭಾವನೆ. ತನ್ನ ಅಸ್ತಿತ್ವದ ಬಗೆಗಿನ ಈ ಘನತೆಯ ಭಾವನೆ ಮಾತ್ರ ಅದಕ್ಕೊಂದು ಸಾರ್ಥಕ ಅಸ್ಮಿತೆಯನ್ನು ಕಲ್ಪಿಸುವ ಸೃಜನಶೀಲ ಸ್ಥೆöÊರ್ಯ ತೋರಿಸಬಲ್ಲದು. ತಾನು ನಿಂತ ನೆಲಕ್ಕೆ ಕಾಲೂರಿಯೇ ನಭಕ್ಕೆ ಚಿಮ್ಮುವ ಆತ್ಮವಿಶ್ವಾಸ ಅದು.

ಸಿದ್ಧಯ್ಯನವರ ಕಾವ್ಯ ನಿರ್ಮಿತಿಯನ್ನು ಒಟ್ಟಿಗಿಟ್ಟು ನೋಡಿದಾಗ ಅಥವಾ ಬಿಡಿಬಿಡಿಯಾಗಿ ನೋಡಿದಾಗಲೂ ಕಂಡುಬರುವ ಚಿತ್ರ ಇದು.

ತೊಗಲ ಮಂಟಪ ಕೂಡ ಅಂತಹದೊAದು ನೀಳ್ಗವಿತೆ. ಬಕಾಲದಿಂದ ಶುರುವಾದ ಸಿದ್ಧಯ್ಯನವರ ಕುಲಜ್ಞಾನ ಶೋಧ ಗಲ್ಲೆಬಾನೆಯವರೆಗೂ ಮುಂದುವರಿದದ್ದು, ಈಗ ತೊಗಲ ಮಂಟಪದಲ್ಲೂ ತಲೆದೋರಿದೆ. ತನ್ನ ಕುಲ ಸಮುದಾಯವಾದ ಮಾದಿಗ ಜಾತಿ ಪರಂಪರೆ, ಅದು ಹೊಂದಿದ್ದ ಕಸಬು ನೈಪುಣ್ಯ, ಕೃಷಿ ಸಂಬAಧಿ ತಿಳಿವಳಿಕೆ, ಕುಲಕಥನಗಳಲ್ಲಿ ಅಡಗಿರುವ ಜಂಬೂದ್ವೀಪವಾಸಿ ಜನರ ಪೂರ್ವೇತಿಹಾಸ, ಆಧುನಿಕ ಕಾಲಘಟ್ಟದಲ್ಲಿ ಅದು ಅನುಭವಿಸಿದ ಪರಿತಾಪ, ಪಡೆದುಕೊಂಡ ಎಚ್ಚರ, ಎದುರಾದ ಸವಾಲುಗಳು, ವೈಫಲ್ಯಗಳು ಮುಂತಾದವೆಲ್ಲಾ ಬೆಡಗಿನ ನುಡಿಗಳಾಗಿ `ತೊಗಲ ಮಂಟಪ’ದಲ್ಲಿ ಮಡುಗಟ್ಟಿವೆ. ಇದು ಇನ್ನೂ ತಿದ್ದಿ ಬರೆಯಬೇಕಿದ್ದ ಪಠ್ಯವೋ, ಪೂರ್ಣಗೊಂಡಿರದ ಪಠ್ಯವೋ, ಪ್ರಕಟಣೆಗೆ ಸಿದ್ಧಗೊಂಡಿದ್ದ ಪಠ್ಯವೋ ನನಗೆ ಗೊತ್ತಿಲ್ಲ. ಆದರೆ ಸಿದ್ದಯ್ಯನವರ ಕಾವ್ಯ ತನ್ನ ಕಸಬುದಾರಿಕೆಯಲ್ಲಿ ಮಾತ್ರ ತೊದಲಿಲ್ಲ. ಪುನರಾವರ್ತನೆಯಂತೆ ಕಂಡುಬರುವ ಭಾಗಗಳಲ್ಲೂ ಅನುಭವವನ್ನು ತೀವ್ರಗೊಳಿಸಿ ಹೇಳಲು ಇರಿಸಿರುವ ಭಿನ್ನ ನಡೆಯ ಒಂದು ಸಾಲು ಕೂಡಿಕೊಂಡಿದೆ.

ತೊಗಲ ಮಂಟಪ ಸಿದ್ದಯ್ಯನವರ ಸ್ವ-ಚರಿತ್ರೆಯ ವಿವರಗಳು, ದಲಿತ ಸಮುದಾಯದ ಬದುಕಿನ ವಿವರಗಳು, ಕುಲ ಕಥನದ ಸುಳಿಹುಗಳು, ಹೋರಾಟದ ಏಳು-ಬೀಳುಗಳು, ಅದರ ಮುನ್ನಡೆಯ ಆಶಯಗಳು ಎಲ್ಲಾ ಸೇರಿಕೊಂಡು ಹೊಸೆದಿರುವ `ಮಿಣಿ’ಯಂತಿದೆ.

ಅಲ್ಲಮನ ಹಾದಿಯಲ್ಲಿ ಹೊರಟು, ತತ್ವ ಪದಗಳ ಓಣಿಯಲ್ಲಿ ಹೊಕ್ಕು, ಮಾದಿಗ ಕೇರಿಯ `ಸೂರ್ಯ ಚಂದ್ರರಿಗೆ ಕಣ್ಣಾದ’ ಹಟ್ಟಿಯ ಒಳಗೆ ನಿಂತು ಮುಗಿಲ ನೋಡುವ ಮನಸ್ಸುಳ್ಳದ್ದು `ತೊಗಲ ಮಂಟಪ’. ಸಿದ್ಧಯ್ಯನವರ ಕಾವ್ಯದಲ್ಲಿ ಮಾತಾಡುವ ಪ್ರತೀಕಗಳು ಅನುಭಾವಿ ಚಹರೆಯವಾದರೂ ತಳಸಮುದಾಯದ ಬದುಕಿನ ವರ್ತಮಾನ ಸ್ಥಿತಿಯ ರಾಜಕೀಯ ಎಚ್ಚರದಿಂದ ಕೂಡಿರುತ್ತವೆ. ಸಿದ್ದಯ್ಯ ಕಾವ್ಯ ಸೃಷ್ಟಿಯಲ್ಲಿ ಎಷ್ಟು ಮಗ್ನತೆ ಹೊಂದಿದ್ದಾರೋ ಹೋರಾಟ ಪ್ರಕ್ರಿಯೆಯಲ್ಲಿ ಅಷ್ಟೇ ಜಾಗೃತ ಪ್ರಜ್ಞೆ ಹೊಂದಿರುವುದನ್ನು `ತೊಗಲ ಮಂಟಪ’ ನಿದರ್ಶಿಸುತ್ತಿದೆ. ತಳ ಸಮುದಾಯದ ದನಿಗಳು ಸಾಹಿತ್ಯದಲ್ಲಿ ಮೂಡುವುದೇ ಸಾಂಸ್ಕöÈತಿಕ ರಾಜಕೀಯಕ್ಕಾಗಿ ತಾನೇ! ಈ ಬಗೆಯ ಹೋರಾಟದ ದನಿ `ತೊಗಲ ಮಂಟಪ’ದಲ್ಲಿ ಮೂಡಿರುವ ಬಗೆಯನ್ನು ನಾನು ಗ್ರಹಿಸಿರುವ ರೀತಿಯಲ್ಲಿ ಒಂದಷ್ಟು ಸೂಚಿಸಲು ಯತ್ನಿಸುತ್ತೇನೆ. ಇದೇ ಸಿದ್ದಯ್ಯನವರ ಕಾವ್ಯ ಉದ್ದೇಶಿಸಿರುವ ಅರ್ಥ ಎಂದು ಹೇಳಲು ನಾನು ಪ್ರಯತ್ನಿಸುತ್ತಿಲ್ಲ. ಅದನ್ನು ಓದಿಕೊಂಡಾಗ ನನಗೆ ತೋಚಿದ ಅರ್ಥ ಎಂದು ಮಾತ್ರ ತಿಳಿದಿದ್ದೇನೆ.

*    *    *

`ಜ್ಞಾನದ ಒಡಲೊಳಗೆ ಅಜ್ಞಾನದ ಕೇಡು

ಅಜ್ಞಾನದ ಒಡಲೊಳಗೆ ಜ್ಞಾನದ ಕೇಡು

ವಿಜ್ಞಾನದ ಒಡಲೊಳಗೆ ಪ್ರಭುತ್ವದ ಕೇಡು

ಜೇನುಗೂಡು ಕಟ್ಟಿದಂತೆ ಇಂತೀ ತ್ರಿವಿಧ ಕೇಡುಗಳು

ಮುಟ್ಟಬಾರದವನ ಒಡಲ ಮುಟ್ಟಿದವು’

ಈ ಸಾಲುಗಳಲ್ಲಿ ದಲಿತ ಸಮುದಾಯವನ್ನು ಮುಟ್ಟಿದ ಜ್ಞಾನವನ್ನು ಸೂಚಿಸುತ್ತಾ, ಅದು ಒಂದು ಕಡೆ ಅಜ್ಞಾನವನ್ನು ಹೋಗಲಾಡಿಸುವ ಜ್ಞಾನವಾಗಿ ಬಂದರೂ ಮತ್ತೊಂದು ಕಡೆ ಜ್ಞಾನವನ್ನು ಕೆಡಿಸುವ ಅಜ್ಞಾನವೂ ಆದುದನ್ನು ಹೇಳುತ್ತಿರುವಂತಿದೆ. ಶಿಕ್ಷಣವು ಅಜ್ಞಾನವನ್ನು ಹೋಗಿಸಿತಾದರೂ, ಒಂದು ಬಗೆಯಲ್ಲಿ ಆ ಜ್ಞಾನವೇ ತಳಸಮುದಾಯಗಳಲ್ಲಿದ್ದ ದೇಸಿ ಜ್ಞಾನವನ್ನು ಕೆಡಿಸಿದ ಅಜ್ಞಾನದಂತೆ ವರ್ತಿಸಿದ ದ್ವಿಮುಖ ಕ್ರಿಯೆಯನ್ನು ಸಂಕೇತಿಸುತ್ತಿರುವAತಿದೆ.

“ಎತ್ತಲನೋ ಕತ್ತಲನು

ಕುರುಡುಗತ್ತಲನೇರಿ ಬಂದು

ಇಳಿದನು

ಆ ಕತ್ತಲನು, ಕತ್ತಲನೆ ಬಿತ್ತಿ ಕತ್ತಲನೆ ಬೆಳೆದು

ಜಗದಗಲ ಮುಗಿಲಗಲ

ಕತ್ತಲು ಕವುಚಿ ಅವನತ್ತಲೆ

ಅತ್ತಲೆ ಹೋದನು.

`ಶಿಷ್ಟರು, ಪರಿಶಿಷ್ಟರು, ವಸಿಷ್ಟರು

ಬೆತ್ತಲೆ ಬರಿಬೆತ್ತಲೆ

ಅತ್ತಲೆ ಅವರತ್ತಲೆ ಹೋದರು”

 

ಇಲ್ಲೊಂದು ಕತ್ತಲು ಆವರಿಸಿದ ಕಥನವಿದೆ. ಎತ್ತಲಿಂದಲೋ ಬಂದು ಬೆಳೆದ ಕತ್ತಲು, ಜಂಬೂದ್ವೀಪಕ್ಕೆ ಬಂದಿಳಿದ ಚಾತುರ್ವರ್ಣ ವ್ಯವಸ್ಥೆಯೇ, ಸಂಸ್ಕöÈತವೇ, ಕುಲಸಮುದಾಯಗಳ ನಡುವೆ ಬಿತ್ತಿದ ಜಾತಿಶ್ರೇಣೀಕರಣವೇ, ಆದಿಮ ಸಮುದಾಯಗಳ ಜ್ಞಾನಮೂಲಗಳ ಕಸಬುಗಳ ಮೇಲೆ ಆವರಿಸಿಕೊಂಡ ಅಸ್ಪöÈಶ್ಯತೆಯೇ, ಜೀವನಾಧಾರಗಳು ಕೈ ತಪ್ಪಿ ಜೀತಕ್ಕೀಡಾದ ಅವಸ್ಥೆಯೇ?

ಈ ಸಾಲುಗಳಲ್ಲಿ ವಸಿಷ್ಠ ಎಂಬ ಉಲ್ಲೇಖ ಗಮನಾರ್ಹವಾಗಿದೆ.

ವಶಿಷ್ಠ ಎಂದೂ ಕರೆಯಲಾಗುವ ವಸಿಷ್ಠ ವಿಶಿಷ್ಟವಾಗಿ ಹುಟ್ಟಿದವನಾದ್ದರಿಂದ ಅವನಿಗೆ ಆ ಹೆಸರು ಬಂತು ಎನ್ನುತ್ತವೆ ಪುರಾಣಗಳು. ಅದನ್ನು ಬಿಡೋಣ. ಮಾದಿಗ ಕುಲ ಕಥನಕ್ಕೆ ಸಂಬAಧಿಸಿದAತೆ ವಸಿಷ್ಠ ವಿಶಿಷ್ಟನಾದವನು. ಅವನು ಮಾದಿಗ ಕುಲದ ಮಗಳಾದ ಅರುಂಧತಿಯನ್ನು ಅಡ್ಡಮಾತುಗಳಿಂದ ನಂಬಿಸಿ ಮದುವೆಯಾದವನು ಎಂಬ ಐತಿಹ್ಯವಿದೆ. ಮನೆಯಲ್ಲಿ ಯಾರೂ ಇಲ್ಲದಾಗ ಬಂದ ವಸಿಷ್ಠ ಕುಡಿಯಲು ನೀರು ಕೇಳುತ್ತಾನೆ. ಕುಲದವರಲ್ಲದವರಿಗೆ ನೀರು-ಬೆಂಕಿ ಕೊಡುವ ರೂಢಿ ಇಲ್ಲ ಎನ್ನುತ್ತಾಳೆ ಅರುಂಧತಿ. ಅತಿಥಿ ದೇವೋಭವ ಎನ್ನುತ್ತವೆ ವೇದಶಾಸ್ತçಗಳು, ಆದ್ದರಿಂದ ನೀರು ಕೊಡಬಹುದು ಎನ್ನುತ್ತಾನೆ. ನಂಬಿದ ಅರುಂಧತಿ ನೀರು ಕೊಡುತ್ತಾಳೆ. ಹಸಿವಾಗಿದೆ ಊಟ ಕೊಡು ಎನ್ನುತ್ತಾನೆ ವಸಿಷ್ಠ. ಆಹಾರ ಕೊಡಲು ಗುಡಿಸಿಲ ಒಳಗೆ ಕರೆದೊಯ್ಯುತ್ತಾಳೆ ಅರುಂಧತಿ. ಊಟ ಮಾಡಿದ ವಸಿಷ್ಠ ಅರುಂಧತಿಯ ಕೈ ಹಿಡಿಯುತ್ತಾನೆ. ಕುಲಕ್ಕೆ ಸೇರಿಲ್ಲದವರು ಕನ್ಯೆಯಾದವಳ ಕೈ ಹಿಡಿಯಬಾರದು ಎನ್ನುತ್ತಾಳೆ ಅರುಂಧತಿ. ನೀನು ನನಗೆ ನೀರು ಕೊಟ್ಟ ಜಾಗದಿಂದ ಗುಡಿಸಿಲವರೆಗೆ ಜೊತೆಗೂಡಿ ಏಳು ಹೆಜ್ಜೆ ನಡೆದಿರುವುದರಿಂದ `ಸಪ್ತಪದಿ’ ಪದ್ಧತಿಯ ನಮ್ಮ ಶಾಸ್ತಾçಚಾರದ ಪ್ರಕಾರ ವಿವಾಹವಾಯಿತು. ಆದ್ದರಿಂದ ನಾನು ನಿನ್ನ ಕೈ ಹಿಡಿದೆ. ಪಾಣಿಗ್ರಹಣವೂ ನೆರವೇರಿತು ಎನ್ನುತ್ತಾನೆ. ಮುಗ್ಧೆಯಾದ ಅರುಂಧತಿ ಇರಬಹುದೆಂದು ಭಾವಿಸಿ ಅವನನ್ನು ತಂದೆ ಮತ್ತು ಅಣ್ಣಂದಿರಿAದ ರಕ್ಷಿಸಲಿಕ್ಕಾಗಿ ಅಟ್ಟದ ಮೇಲೆ ಬಚ್ಚಿಡುತ್ತಾಳೆ. ಅರುಂಧತಿಯ ತಂದೆ ಕೃಷಿ ಕೆಲಸಕ್ಕೆ ಬಹಳ ಮುಖ್ಯ ಆಧಾರವಾದ ಪಂಚಾAಗ ಪಂಡಿತ. ಅವನು ಇತರರು ಬಂದಾಗ ಪಂಚಾAಗ ಓದಿ ಹೇಳುವುದನ್ನು ಅಟ್ಟದ ಮೇಲೆ ಕುಳಿತು ಕೇಳಿಸಿಕೊಂಡ ವಸಿಷ್ಠ ತಾನೂ ಪಂಚಾAಗ ಪಂಡಿತನೆAದು ಹೇಳಿಕೊಳ್ಳತೊಡಗುತ್ತಾನೆ. ಕುಲಜ್ಞಾನವಾದ ಪಂಚಾAಗ ಕುಲದವನಲ್ಲದವನ ಕಿವಿಗೆ ಬಿದ್ದು ಅಪವಿತ್ರಗೊಂಡಿತಾದ್ದರಿAದ ತಾನಿನ್ನು ಪಂಚಾAಗ ಹೇಳುವುದಿಲ್ಲ ಎಂದು ಅರುಂಧತಿಯ ತಂದೆ ನಿರ್ಧರಿಸಿ ವಸಿಷ್ಠ-ಅರುಂಧತಿಯನ್ನು ಮನೆಯಿಂದ ಹೊರಹಾಕಿದ. ಇದು ಕಥೆ. ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ನನಗೆ ಗೊತ್ತಿಲ್ಲ. ಕೃಷಿ ಜ್ಞಾನ ಭಾರತದ ಆದಿಮ ಸಮುದಾಯಗಳ ಸ್ವತ್ತಾಗಿತ್ತು, ಅದನ್ನು ನಂತರ ಬಂದ ವೈದಿಕರು ಕಲಿತರು ಎಂಬಷ್ಟು ಯಥಾರ್ಥ ಚಾರಿತ್ರಿಕ ಸತ್ಯ ಮಾತ್ರ ಇದರೊಳಗಿದೆ. ಅಂತೂ ವಸಿಷ್ಠ-ಅರುಂಧತಿ ಜೋಡಿ ಸರ್ವಮಾನ್ಯವಾಗಿ ಎಲ್ಲ ಮದುವೆಗಳಲ್ಲೂ ನವದಂಪತಿಗಳಿಗೆ ತೋರಿಸುವ ಪದ್ಧತಿ ಅಂತೂ ಬೆಳೆದು ಬಂತು – `ಅತ್ತಲೆ, ಅವರತ್ತಲೇ ಹೋದರು’.

ಕವಿತೆಯ ಮುಂದಿನ ಸಾಲುಗಳು ಇಂತಹ ವಿಪರ್ಯಾಸಕರ ಯಾವುಯಾವುದೋ ಬೆಳವಣಿಗೆಗಳಿಂದ ಉಂಟಾದ ವಿಪತ್ತನ್ನು ಸೂಚಿಸುವುದಕ್ಕೇನೋ ಎಂಬAತೆ –

`ಹಟ್ಟಿ ಬಯಲ ನಟ್ಟ ನಡುವೇಲಿ

ನಡುರಂಗ ಜ್ಯೋತಿ ನಂದಿ ಹೋಗಿತ್ತು

ಕಣ್ಣಿಗೆ ಮಣ್ಣು

ಬಾಯಿಗೆ ಬತ್ತಿ

ಕೈಯಿಗೆ ತುತ್ತು

ತಾಯಿಗೆ ಸರಪಳಿ ಸುತ್ತು’

ಎನ್ನುತ್ತದೆ.

ಈ ಕವಿತೆಯಲ್ಲಿ ತೀವ್ರ ಹಂಬಲದೊAದಿಗೆ ಪುನಃ ಪುನಃ ಪುನರಾವರ್ತಿತವಾಗಿರುವ ಈ ರೂಪಕ ನಮ್ಮ ಗಮನವನ್ನು ಸೆಳೆಯುತ್ತದೆ. ನಡುರಂಗ ಜ್ಯೋತಿ – ಬೆಳಗುವ ಬೆಳಕು ಇಲ್ಲವಾದ ಮೇಲೆ ಕವಿದ ಕತ್ತಲೆ ಎನ್ನುವುದು ಮನಕ್ಕೆ ಕವಿದ ಕಾವಳವನ್ನೂ, ಜೀವನಾಧಾರಕ್ಕೆ ಒದಗಿದ ಕುತ್ತನ್ನೂ, ಮತ್ತೇನನ್ನೋ ಕುರಿತು ಸೂಚಿಸುತ್ತಾ ಅಸ್ತಿತ್ವದ ದ್ವಂದ್ವವನ್ನು ಧ್ವನಿಸುತ್ತದೆ.

`ಕೈಯಿಗೆ ತುತ್ತು – ತಾಯಿಗೆ ಸರಪಳಿ ಸುತ್ತು’ ಎನ್ನುವ ಸಾಲು ಬಂಧನದಲ್ಲಿ ಬದುಕುವ ನಿರ್ಬಂಧವನ್ನು ನಿದರ್ಶಿಸುತ್ತಿದೆ.

ಮುಂದಿನ ಪಂಕ್ತಿಗಳಲ್ಲೂ ಈ ಆಶಯ ಮತ್ತೆ ಮಂಡಿತವಾಗಿ `ನಡುರಂಗ ಜ್ಯೋತಿ ಕೆಟ್ಟಿತ್ತು/ ಸೂರ್ಯನ ಕಣ್ಣಿಗೆ ಕುರುಡು ಬಂದೆರಗಿತ್ತು’ ಎನ್ನುವುದನ್ನು ಖಚಿತಪಡಿಸುತ್ತಿದೆ.

‘ಹಟ್ಟಿ ಬಯಲು

ಹಟ್ಟಿ ಹೆತ್ತವ್ವ

ಊರು ಸಾಕವ್ವ

ಹಟ್ಟಿಗಿಟ್ಟಿ ಊರುಗೀರು

ಸಾಕು, ಸಾಕವ್ವ ಸಾಕು

ನೀನಲ್ಲದೆ ಊರು ಚಾಕರಿಗೆ

ಯಾರವ್ವ ಸಾಕವ್ವ ಸಾಕು!’

 

ಎನ್ನುವ ಸಾಲುಗಳನ್ನೋದುವಾಗ, ಹಳ್ಳಿಗಳನ್ನು ತೊರೆಯದೆ ದಲಿತರಿಗೆ ಬಿಡುಗಡೆಯಿಲ್ಲ ಎಂಬ ಅರ್ಥದಲ್ಲಿ ಮಾತಾಡಿದ ಡಾ. ಅಂಬೇಡ್ಕರ್ ಮಾತುಗಳೇ ಮೊಳಗಿದಂತೆ ಭಾಸವಾಗುತ್ತದೆ. ಹೀಗಿರುವಾಗಲೂ ಬಿಡುಗಡೆಯ ಜಾಡು ಪೂರ್ಣವಾಗಿ ಸ್ಪಷ್ಟವಾಗುತ್ತಿಲ್ಲ. ನಗರಗಳೂ ಜಾತಿಕೂಪಗಳಾಗಿ ಮಾರ್ಪಟ್ಟಿರುವ ದುರಂತವನ್ನು ನೋಡುತ್ತಿದ್ದರೆ-

‘ಹಿಡಿದರೆ ಹಿಡಿಗೇಡು

ನುಡಿದರೆ ನುಡಿಗೇಡು

ಎಲ್ಲಿದೆ ತೋರವ್ವ ಸಾಕವ್ವ?

ನಾನು ನಡೆಯುವ ಜಾಡು ಯಾವುದವ್ವಾ?’

 

ಎಂದು ತೊಳಲಾಡುತ್ತದೆ ಮನಸ್ಸು.

 

`ನಡೆದರೆ ನಡೆಯಲೆ ಮನವೆ

ನಡೆ-ನುಡಿ ಒಂದಾದ ಜಾಡು

ಎರಡೊಂದಾಗದಿದ್ದರೆ

ನೋಡು, ನೋಡು ನೋಡಲೆ ಮನವೆ’

 

ಮೇಲಿನ ಪಂಕ್ತಿಯ ಒಂದು ಸಾಲು ನನಗೆ ವಿಶೇಷಾರ್ಥ ಸೂಚಕವಾಗಿ ಕಾಣುತ್ತಿದೆ. ದಲಿತ ಹೋರಾಟದ ದಾರಿಯ ಬಗ್ಗೆ ವ್ಯಾಕುಲಗೊಂಡಿರುವ ಕವಿ `ಎರಡೊಂದಾಗದಿದ್ದೊಡೆ / ನೋಡು ನೋಡಲೆ ಮನವೇ’ ಎನ್ನುತ್ತಿರುವುದು ಒಂದು ಕಡೆ ವ್ಯಕ್ತಿತ್ವದ ಸಮಗ್ರತೆಯನ್ನು ಸೂಚಿಸುತ್ತಿರುವಾಗಲೇ, ಹೋರಾಟದ ಚಾರಿತ್ರ್ಯಶುದ್ಧಿಯನ್ನು ಕೂಡ ಸೂಚಿಸುತ್ತಿರಬಹುದೇ ಎನಿಸಿತು. ಅದಕ್ಕಿಂತ ಮುಖ್ಯವಾಗಿ `ಎರಡೊಂದಾಗದಿದ್ದರೆ’ ಎಂಬುದು ಎಡಗೈ-ಬಲಗೈ ಕುಲಗಳೆರಡೂ ಒಂದಾಗಿ ಹೋರಾಡದಿದ್ದರೆ ಎಂಬುದನ್ನು ಧ್ವನಿಸುತ್ತಿಲ್ಲವೇ, ಇದು ದಲಿತ ಹೋರಾಟದ ಮುನ್ನಡೆಗೆ ಆಶಯಾತ್ಮಕವಾಗಿ ಕವಿತೆ ತೋರುತ್ತಿರುವ ದಾರಿಯಾಗಿಲ್ಲವೇ ಎಂದು ತೋಚಿತು.

ಇದೇ ಕವಿತೆ ಮುನ್ನಡೆದು ಹೇಳುವ ಸಾಲುಗಳು ಕೂಡ ನನಗೆ ಹೀಗೆ ತೋಚಿದ್ದು ಸರಿಯಿರಬಹುದೆಂಬ ಭಾವಕ್ಕೆ ಬೆಂಬಲ ನೀಡುತ್ತಿವೆ.

`ಬಹುಗುಣ – ಬಹುಗುಣ ಭಾವ

ಭಂಗಿಯಲಿ

ಗುಣಾವಗುಣವನೊಲ್ಲದ

ನಿರ್ಗುಣವAತ

ಕುರುಡುಗಣ್ಣಿನ ಕಾಣುಗ

ಕಿವುಡುಗಿವಿಯ ಕೇಳುಗ

ಮೂಗಿಲ್ಲದ ಮಾನಿನಿಯ

ಕೈಹಿಡಿದು ಬಂದನೋ

ನಡೆಗೆಟ್ಟ ನಡೆ ನಡೆದು ಬಂದನೋ

….

ಕುಲಜ್ಞಾನದ ಬೆತ್ತ ಹಿಡಿದು

ಕಾಲಜ್ಞಾನವ ತಿದ್ದಿ ಬರೆದಳಲ್ಲ

ನನ್ನ ನಾಲಿಗೆ ಮೇಲೆ

ಕುರುಡುಗಣ್ಣಿನ ಕಾಣುಗ

ಕಾಣದುದ ಕಂಡAತಾಯ್ತು

ಕಿವುಡುಗಿವಿಯ ಕೇಳುಗ

ಕೇಳದುದ ಕೇಳಿದಂತಾಯ್ತು

….

ಹೆಜ್ಜೇನು ನೊಣಗಳೆದ್ದೋ

ಮಲಗಿದ್ದ ಹೆಣಗಳೆದ್ದೋ

ಜನ ಜಾತ್ರೆಯು ಎದ್ದು ಓಡಿತಲ್ಲೋ

ಉಯ್ಯಾಲೆಪ್ಪೋ ಉಯ್ಯಾಲೆ

ಶವಯಾತ್ರೆ ನಡೆದಿತ್ತಲ್ಲೋ

ಚಟ್ಟನೆದ್ದು ಹೆಣವನೊದ್ದು

ಉಯ್ಯಾಲೆಪ್ಪೋ ಉಯ್ಯಾಲೆ

ಜೀಕು ಜೀಯ್ಯಾಲೆ’

ಈ ಸಾಲುಗಳಲ್ಲಿ ಅನುಭಾವಿಕವಾದ ಸ್ವಯಂ ದರ್ಶನದ ಮಾತುಗಳ ಮೂಲಕ ಕವಿತೆ ಹೇಳುತ್ತಿರುವುದು ಜನಸಮೂಹಗಳ ಎಚ್ಚೆತ್ತ ನಡಗೆಯನ್ನೇ ಎಂದುಕೊAಡರೆ ತಪ್ಪೇನು? ಚಟ್ಟವೆಂಬುದು ದೇಹ, ಅದರ ಮೇಲೆ ಮಲಗಿರುವ ಹೆಣನೆಂಬುದು ಮನಸ್ಸು ಅಥವಾ ಪ್ರಜ್ಞೆ ಎಂದು ಅರ್ಥೈಸಲು ಸಾಧ್ಯ. ಚಟ್ಟವೆಂಬುದು ದಮನಿತ ಸಮಾಜ ಅದರ ಮೇಲೆ ಮಲಗಿರುವ ಹೆಣ ದಲಿತ ಕುಲದ ಪ್ರಜ್ಞೆ ಅಥವಾ ಅರಿವು ಎಂಬ ವಿವರಣೆಯೂ ಸಾಧ್ಯ. ಏನಿದ್ದರೂ ಎಚ್ಚೆತ್ತ ನಡಗೆ ನಡೆಯಬೇಕೆಂಬ ಆಶಯ ಇಲ್ಲಿದೆ. ಆ ಸಂದೇಶ ವ್ಯಕ್ತಿಗಳಿಗೂ, ಹೋರಾಟಕ್ಕೂ, ಸಮಾಜಕ್ಕೂ ಏಕಕಾಲಕ್ಕೆ ಉದ್ದೇಶಿಸಿದೆ.

‘ಆ ಹೊತ್ತು –

ಸತ್ತು ಕೆಟ್ಟವರಿಗೆ ಹಟ್ಟಿ ಹೆಗಲಾಗಿತ್ತು

ದಣಿದು ಬಂದವರಿಗೆ ನೆರಳಾಗಿತ್ತು

ಹಸಿದ ಹೊಟ್ಟೆಗೆ ಗಂಜಿ ಉಣಿಸಿತ್ತು

ಸೂರ್ಯಚಂದ್ರರಿಗೆ ಕಣ್ಣಾಗಿತ್ತು

ದಟ್ಟ ಬಯಲು

….

ಹಟ್ಟಿಗಿಟ್ಟು ಊರುಗೀರು

ಸಾಕು, ಸಾಕವ್ವ, ಸಾಕು

ತಾಯಿ, ನೀನೆ ಸಾಕಬೇಕವ್ವ

ಈ ಹೊತ್ತು …’

 

ಇದನ್ನು ಸಾಧಿಸಲು ಬೇಕಾದ ಮನೋಸಿದ್ಧತೆಯ ಬಗ್ಗೆ ಕವಿತೆ ಬಹಳ ನಂಬಿಕೊAಡಿದ್ದರೂ, ನಡೆದು ಮುಗಿಸುವ ಬಗೆಯ ಬಗ್ಗೆ ಪೂರ್ತಿ ನಿರ್ದ್ವಂದ್ವವಾಗಿಲ್ಲ.

“ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ, ಮಾಯಾ ಸೂತ್ರವಿದೇನೋ, ಕಂಗಗೊಳಗಣ ಕತ್ತಲೆ ತಿಳಿಯದಲ್ಲಾ …” ಎಂಬ ಅಲ್ಲಮನ ವಚನದಂತಹ ತೊಳಲಾಟದಲ್ಲೇ ಬಳಸಾಡಿದರೂ ಅಲ್ಲಿಗೇ ನಿಲ್ಲದೆ ಒಂದು ಸುಳುಹನ್ನು ಸೂಚಿಸುವಲ್ಲಿ ಸಮಾಧಾನಗೊಂಡಂತಿದೆ –

“ಹಿಡಿದರೆ ಹಿಡಿಗೇಡು

ನುಡಿದರೆ ನುಡಿಗೇಡು

ಎಲ್ಲಿದೆ ನಾನು ನಡೆಯುವ ಜಾಡು?

ಹಿಡಿದರೆ ಹಿಡಿಯುವೆ ಮನವೆ

ಅಲ್ಲಮನ ಜೋಡು,

ನಡೆದರೆ ನಡೆಯುವೆ ಮನವೆ

ಆಗದಿದ್ದರೆ

ತೋರು ತೋಡು ತೋಡಲೆ ಮನವೆ

ಆರು, ಮೂರಡಿ ಗೂಡು”

 

ಅರಿವಿನ ಹಾದಿಯಲ್ಲಿ ಜೊತೆಗೂಡಿ ನಡೆಯದಿದ್ದರೆ ಮಣ್ಣುಗೂಡುವುದು ಮಾತ್ರ ಮಿಕ್ಕಿರುತ್ತದೆ ಎಂಬ ನಿರ್ಣಯವನೊಳಗೊಂಡAತಿದೆ.

*          *       *

`ತೊಗಲ ಮಂಟಪ’ ಕಾವ್ಯವನ್ನು ಒಂದು ಮಗ್ಗುಲಿನಿಂದ ಅರ್ಥ ಮಾಡಿಕೊಳ್ಳಲು ನಾನು ಮಾಡಿರುವ ಪ್ರಯತ್ನ ಇದು. ಸಿದ್ದಯ್ಯನವರ ಕಾವ್ಯ ಶಿಲ್ಪ ಸಂಯುಕ್ತಾರ್ಥ ಮಾರ್ಗದ್ದು ಎಂಬುದು ನನ್ನ ಅರಿವಿನಲ್ಲಿದೆ. ಅವರ ರೂಪಕಗಳು ಒಂದನ್ನು ಮಾತ್ರ ಹೇಳಿ ಸುಮ್ಮನಾಗುವುದಿಲ್ಲ.

ಅವರ ವರ್ಣನೆಗಳು ಒಂದರೊಳಗೊAದು ಗಾಢವಾಗಿ ಹೆಣೆದುಕೊಂಡಂತಿರುತ್ತವೆ. ಆದರೆ ಅದು ಕೇವಲ ಶಬ್ದ ಜೋಡಣೆಯ ಚಮತ್ಕಾರವಲ್ಲ. ಅರ್ಥ ಸ್ಪಷ್ಟತೆಗಿಂತ ಹೆಚ್ಚಾಗಿ ಅರ್ಥ ಸಾಧ್ಯತೆಗಳನ್ನು ಸೂಚಿಸುವ ಸ್ವಭಾವವುಳ್ಳದ್ದು ಅದು. ಅವರ ಬಾಲ್ಯ, ಅವರ ಶಾಲಾ ವಿದ್ಯಾಭ್ಯಾಸ, ಹಟ್ಟಿ, ಕುಲ ಬದುಕಿದ ಪರಿ, ನಂತರ ಹೊಲಬುಗೆಟ್ಟ ರೀತಿ, ಕುಲ ಕಥನಗಳ ಸ್ಮೃತಿ, ಬುದ್ಧ ದರ್ಶನದ ತಿಳಿವು, ಅಂಬೇಡ್ಕರ್ ತಾತ್ವಿಕತೆಯ ಅರಿವು, ದಲಿತ ಹೋರಾಟದ ಅನುಭವ ಮುಂತಾದವುಗಳೆಲ್ಲವನ್ನೂ ಹೆಣಿಗೆ ಮಾಡಿಕೊಂಡು ಪುರಾತನ ದೇಹಾಕಾರವನ್ನು ಹೊಂದಿ ತೀರಾ ಈಚಿನ ವಿದ್ಯಮಾನಗಳನ್ನು ಸೋಸಿ ಪರಿಶೀಲಿಸುವ ವಿಧಾನವನ್ನು ಅವರ ಕಾವ್ಯ ಒಳಗೊಂಡಿರುತ್ತದೆ.

ಕವಿಯ ಮನಸ್ಸಿನ ಎಲ್ಲಾ ಒಳಾರ್ಥಗಳನ್ನು ಹೊಕ್ಕು ನೋಡಲು ಓದುಗನಾಗಿ ಹೇಗೂ ನನಗೆ ಸಾಧ್ಯವಿಲ್ಲ. ಪ್ರಾಚೀನ ಗುಡಿಯೊಂದನ್ನು ಹೊಕ್ಕು ವೀಕ್ಷಿಸುವಾಗ ಅಲ್ಲಿರುವ ಮಿಥುನ ಶಿಲ್ಪಗಳೇ ಮೊದಲು ನನ್ನ ಕಣ್ಣಿಗೆ ಬೀಳುತ್ತವೆ. ಅದೊಂದು ಆಡ್ಡ ಚಾಳಿ ನನಗೆ. ಅದೇ ರೀತಿ ಕೃತಿಯೊಂದನ್ನು ಓದುವಾಗ ನನಗೆ ಮೊದಲು ಗೋಚರವಾಗುವುದು ರಾಜಕೀಯ ಶಿಲ್ಪಗಳು. ಇದರಲ್ಲಿ ಎಲ್ಲರೊಂದಿಗೆ ನನ್ನ ಬಿಡುಗಡೆಯ ದಾರಿಯ ಹುಡುಕಾಟವೂ ಸೇರಿರುವುದರಿಂದ ರಾಜಕೀಯವೇ ಮುಖ್ಯವಾಗಿ ಕಾಣಿಸಿಕೊಂಡುಬಿಡುತ್ತದೆ. ಇದು `ತೊಗಲ ಮಂಟಪ’ ಕಾವ್ಯದ ಮಿತಿಯಲ್ಲ. ನನ್ನ ಓದಿನ ರೀತಿಯ ಮಿತಿ. ಇದರಲ್ಲಿರುವ ಸೃಜನಶೀಲ ಸೌಂದರ್ಯವನ್ನು ಬೆರಗಿನಿಂದ ನೋಡಿದ್ದೇನೆ. ಕಾವ್ಯಾತ್ಮಕ ಶಕ್ತಿಯನ್ನು ಕಂಡು ಮಣಿದಿದ್ದೇನೆ. ಆ ಎಲ್ಲಾ ಆಯಾಮಗಳನ್ನೂ ಮತ್ತೊಮ್ಮೆ ಪೂರ್ಣ ಮನಗಂಡು ಬರೆಯುವ ಆಸೆಯನ್ನೂ ಹೊಂದಿದ್ದೇನೆ. ಆಗ, ಇಲ್ಲಿ ಇದ್ದಾಗ ಮುನಿಯದೇ ನನ್ನ ಮಾತು ಕೇಳಿಸಿಕೊಳ್ಳುತ್ತಿದ್ದ, ಎಷ್ಟೇ ಭಾವಜೀವಿಯಾದರೂ ಮೂಲತಃ ರಾಜಕೀಯ ಜೀವಿಯಾಗಿ ನನಗೆ ಕಾಣುತ್ತಿದ್ದ ಕೇಬಿಯವರು ಈಗ ಇಲ್ಲಿ ಇಲ್ಲದಿರುವಾಗ ಬರೆದ ಈ ಮಾತುಗಳನ್ನು ಅವರ ಚೇತನಕ್ಕೆ ಸಮರ್ಪಿಸುತ್ತಿದ್ದೇನೆ. ಅವರಿಗೆ ನಮನಗಳು.

– ಬಂಜಗೆರೆ ಜಯಪ್ರಕಾಶ