ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ
ಸುಬ್ರಮಣ್ಯಮ್ ಕೆ ವಿ
ಪ್ರಶ್ನಿಸುವವರು ಇಲ್ಲವಾಗುತ್ತಿರುವ, ಪ್ರಶ್ನಿಸುತ್ತಿದ್ದವರೂ ನುಣುಚಿಕೊಳ್ಳುತ್ತಿರುವ ಸಂದರ್ಭ ಇದು. ದೃಶ್ಯ ಕಲೆಯಿಂದ ಸಾಮಾಜಿಕ ಬದಲಾವಣೆ ಆಗಬಲ್ಲದೇ? ಆಗಲಿ ಆಗದಿರಲಿ, ಆ ‘ ಆಗುವಿಕೆ ‘ ಯ ದೃಷ್ಟಿ ಧೋರಣೆಗಳ ಅಭಿವ್ಯಕ್ತಿ ಖಂಡಿತ ಸಾಧ್ಯ. ಕಲಾವಿದ, ಕಲಾವಿದೆಯರೆಂದರೆ ಅಭಿವ್ಯಕ್ತಿ : ಕಲಾಸೃಷ್ಟಿ. ಚಿತ್ರ,ಅಕ್ಷರ ಇತ್ಯಾದಿ ಹಲವು ಅಭಿವ್ಯಕ್ತಿ ಪ್ರಕಾರಗಳಲ್ಲಿ ಆ ಸೃಷ್ಟಿ ಪ್ರಕ್ರಿಯೆ ನಡೆಯಬಹುದು. ದೃಶ್ಯಕಲೆಯ ಚಿತ್ರ, ಶಿಲ್ಪ , ಪ್ರಿಂಟ್,ಫೋಟೋಗ್ರಫಿ,ಸಿನಿಮಾ ಇತ್ಯಾದಿ ಗಳ ಜೊತೆಗೆ ಇನ್ಸ್ಟಾಲೇಶನ್ ಕಲಾಪ್ರಕಾರವೂ ಇದೆ . ಸುಮಾರು 6 ದಶಕಗಳ ಇತಿಹಾಸವಿರುವ ಈ ಇನ್ಸ್ಟಾಲೇಶನ್ ಅಭಿವ್ಯಕ್ತಿ ಕಲಾಪ್ರಕಾರವು ನಮ್ಮ ನಡುವೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಂತೆ, ಕೆಲವು ದಿನಗಳ ಹಿಂದೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ (ಸೆಪ್ಟಂಬರ್ 17 19 2022) ಪರಮೇಶ್ ಜೋಳದ ಅವರ ‘ ದನಿ ‘/ ‘ the voice ‘ ಇನ್ಸ್ಟಾಲೇಶನ್ ಕಲಾ ಪ್ರದರ್ಶನ ನಡೆಯಿತು.
ಮೂಲತಹ ಗ್ಯಾಲರಿ ಸಂಸ್ಕೃತಿಯನ್ನು ಧಿಕ್ಕರಿಸಿ ಹೊರಾಂಗಣಗಳಲ್ಲಿಯೇ, ಬಯಲು ಆಲಯ ದೃಷ್ಟಿಗೆ ಪೂರಕವಾಗಿ ಜನಸಾಮಾನ್ಯರನ್ನು ಒಳಗೊಂಡೇ ಅಭಿ ವ್ಯಕ್ತಗೊಳ್ಳುವ ಇನ್ಸ್ಟಾಲೇಶನ್ ಕಲಾಭಿವ್ಯಕ್ತಿ ಪ್ರಕಾರವೂ ಅಚ್ಚರಿ ಎಂಬಂತೆ ಒಂದು ಮಹತ್ವದ ಉದ್ದೇಶಕ್ಕಾಗಿ, ಗ್ಯಾಲರಿ ಅದೂ ವೆಂಕಟಪ್ಪ ಗ್ಯಾಲರಿಯ ಒಳ ಅವಕಾಶವನ್ನು (space ) ಆವರಿಸಿಕೊಂಡು ಅಭಿ ವ್ಯಕ್ತಗೊಂಡಿತ್ತು.
ಅಲ್ಲಿನ ಕತ್ತಲೆಯ ಸಂದರ್ಭವನ್ನೇ ತಮ್ಮ ಅಭಿವ್ಯಕ್ತಿಯ ಆಶಯಕ್ಕೆ ಪೂರಕವಾಗಿ ಪರಮೇಶ್ ಜೋಳದ ದುಡಿಸಿಕೊಂಡು ಅಭಿವ್ಯಕ್ತಿಸಿದ್ದಾರೆ. ಕಲಾವಿದರು ಗ್ಯಾಲರಿಯನ್ನು ಬಳಸಿಕೊಳ್ಳದೆ ಅಥವಾ ಗ್ಯಾಲರಿಯನ್ನು ಕಲಾವಿದರಿಗೆ ಕೊಡದೆ ಸುಮ್ಮನೆ ಬೀಗ ಹಾಕಿರುವ,ಬಳಸಬೇಕಾದ ಆಕಡೆಮಿ,ಇತರ ಕಲಾಸಂಸ್ಥೆಗಳು, ಕಲಾವಿದರು ಗ್ಯಾಲರಿಯತ್ತ ಸುಳಿಯದಿರುವ ಆಘಾತಕಾರಿ ರಾಜಕಾರಣದ ಸಂದರ್ಭ. ಈ ನಡುವೆ ಯಾವುದೇ ಕಟ್ಟಡವನ್ನು ಬಳಸದೆ ಬಿಟ್ಟರೆ ಏನಾಗುತ್ತದೆ? ಗ್ಯಾಲರಿ ಶಿಥಿಲಗೊಂಡು ತಾನೇ ಉರುಳ ಬಹುದಲ್ಲವೆ? ಎಂತಹ ನಿರೀಕ್ಷೆ !? ಈ ನಿಗೂಢ ಉದ್ದೇಶವನ್ನು ಪ್ರಶ್ನಿಸುವಂತೆ ಕನ್ನಡ ದೃಶ್ಯ ಕಲಾರಂಗವನ್ನು ಎಚ್ಚರಿಸುವಂತೆ ಅತಿ ವಿನಯ ಪೂರಿತವಾಗಿ ” ಅಕಾಡೆಮಿ ಕಲಾವಿದ ಕಲಾವಿದೆಯರೆಲ್ಲರೂ ವೆಂಕಟಪ್ಪ ಗ್ಯಾಲರಿಯನ್ನು ಬಳಸಿ ಆ ಮೂಲಕ ಉಳಿಸಿ” ಎಂಬ ಪರಮೇಶ್ ಜೋಳದ ಅವರ ಮನವಿಯೇ ಪ್ರದರ್ಶನದ ಮುಖ್ಯ ಆಶಯ.
ಕಾರ್ಪೋರೇಟ್ ಸಂಸ್ಕೃತಿಗೆ ಅಡಿಯಾಳಾಗುತ್ತಿರುವ ಅಧಿಕಾರಶಾಹಿಯು ಈಗ ಇರುವುದನ್ನೇ ಸರಳ, ಸುಂದರವಾಗಿ ಇಟ್ಟುಕೊಳ್ಳುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಲೇ , ಎಲ್ಲವನ್ನು ಖಾಸಗೀಕರಣಗೊಳಿಸುವ ಹುನ್ನಾರದ ದಿನಗಳು ಇವು. ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯ ಇಂದಿನ ನಿರ್ವಹಣೆ ಈ ಮಾತುಗಳಿಗೆ ಪೂರಕವಾಗಿಯೇ ಇದೆ.
ದೃಶ್ಯಕಲೆಯ ದೃಷ್ಟಿಯಿಂದ ಗಣನೀಯರಾದ ಕಲಾವಿದ ಕೆ. ವೆಂಕಟಪ್ಪನವರ ಕಲಾಕೃತಿಗಳ ಸಂರಕ್ಷಣೆ ಮತ್ತು ಪ್ರದರ್ಶನಕ್ಕಾಗಿಯೇ ಈ ವಿಶಿಷ್ಟ ಗ್ಯಾಲರಿಯನ್ನು , ಅವರದೆ ಹೆಸರಿನಲ್ಲಿ ನಿರ್ಮಿಸಲಾಯಿತು. ಆ ಮೊದಲು ಬೆಂಗಳೂರಿನಲ್ಲಿ ಒಂದೆರಡು, ಸೀಮಿತ ಅವಕಾಶದ ಗ್ಯಾಲರಿಗಳು ಇದ್ದವಷ್ಟೇ. ಆ.ನಾ. ಸುಬ್ಬರಾಯರು ಕಬ್ಬನ್ ಪಾರ್ಕಿನಲ್ಲಿಯೇ ಅಲ್ಲದೆ ವಿಧಾನಸೌಧದಲ್ಲಿ ಯೂ ಅಖಿಲಭಾರತ ಪ್ರದರ್ಶನಗಳನ್ನು ವ್ಯವಸ್ಥೆ ಮಾಡಿದ್ದರು. ಎಲ್ಲ , ಎಲ್ಲರ ಪ್ರದರ್ಶನಗಳು ಹಾಗೆ ನಡೆಯಬಲ್ಲವೇ. ಎಂ.ಜಿ.ರಸ್ತೆಯ ಇಂದಿನ ಬೈಬಲ್ ಸೊಸೈಟಿಯ ಫುಟ್ಪಾತಿನಲ್ಲಿ ಜಿ.ಎಸ್.ಶೆನೈ ಮತ್ತು ಅವರ ಸ್ನೇಹಿತರ ಕೃತಿಗಳು ಪ್ರದರ್ಶಿಸಲ್ಪಟ್ಟವು. ಕರ್ನಾಟಕ ಚಿತ್ರಕಲಾ ಪರಿಷತ್ತು ಈಗಿನಂತೆ ಬೃಹತ್ ಗ್ಯಾಲರಿಗಳನ್ನು ಹೊಂದಿರಲಿಲ್ಲ . ವೆಂಕಟಪ್ಪ ಕಲಾಗ್ಯಾಲರಿ ಆದ ನಂತರ ಪ್ರದರ್ಶನ ಕಲೆಯ ದೃಶ್ಯ ಬದಲಾಯಿತು. ನಾವೆಲ್ಲಾ ಪ್ರದರ್ಶನಗಳನ್ನು ಮಾಡುತ್ತಿದ್ದುದು ಅಲ್ಲಿಯೇ. ಆಗಲೂ ಕಾಲಕಾಲಕ್ಕೆ ಮಾಡಬೇಕಾಗಿದ್ದ ದುರಸ್ತಿಗಳು ಆಗದೆ ನಾವು ಕೆಲವರು ಎಂಟಿವಿ ಆಚಾರ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಂತರ ಸರ್ಕಾರ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ದುರಸ್ತಿಗೆ ಒಪ್ಪಿತು. ದುರಸ್ಥಿಯ ಅದೇ ಕಥಾನಕವೂ ಹಲವು ರೀತಿಗಳಲ್ಲಿ ಇಂದಿಗೂ ಮುಂದುವರೆದಿರುವುದು ಒಂದು ದುರಂತವೇ ಸರಿ. ಆದರೆ ಆ ನಡುವೆಯೇ ಹೆಬ್ಬಾರರ ಕಾಲದಲ್ಲಿ ಅಕಾಡೆಮಿಯ ಹಲವು ಚಟುವಟಿಕೆಗಳು ಕಲಾ ಶಿಬಿರಗಳು ಸಹ ನಡೆದು ವೆಂಕಟಪ್ಪ ಗ್ಯಾಲರಿಯೇ ಅಲ್ಲದೆ ಜೊತೆಗೆ, ಪಕ್ಕದ ಶ್ರೀರಾಜ್ ಹೋಟೆಲನ್ನು ಬಳಸಿಕೊಳ್ಳಲಾಯಿತು. ಅಚ್ಚರಿಯೆಂದರೆ ಇಂದು ವೈರುಧ್ಯಮಯವಾಗಿ ಆ ಕಡೆಯವರು ವೆಂಕಟಪ್ಪ ಗ್ಯಾಲರಿ ನಮಗೆ ಬಿಟ್ಟುಕೊಡಿ ಎನ್ನುತ್ತಿದ್ದಾರೆ ! ಇರಲಿ. ಬಹುಮುಖ್ಯವಾಗಿ ದಕ್ಷಿಣಕನ್ನಡದ ಪೀಟರ್ ಲೂಯಿಸ್ ಮತ್ತು ಅವರ ಗೆಳೆಯರು ವರ್ಷಕ್ಕೊಮ್ಮೆ ಅವರ ಕಲಾಪ್ರದರ್ಶನವನ್ನು ಉದ್ದೇಶಪೂರ್ವಕವಾಗಿ ವೆಂಕಟಪ್ಪ ಗ್ಯಾಲರಿಯಲ್ಲಿಯೇ ನಡೆಸುತ್ತಿದ್ದರು.
ಕಲಾಮೇಳಗಳು ಹಲವಾರು ಬಹುಮುಖ್ಯ ಕಲಾ ಪ್ರದರ್ಶನಗಳು ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರದರ್ಶನಗಳು ರಾಷ್ಟ್ರೀಯ ಕಲಾ ಪ್ರದರ್ಶನಗಳು ನಡೆದವು. ಅಕೆಡೆಮಿಯ ಕಳೆದ ಮೂರು ನಾಲ್ಕು ಅವಧಿಗಳಿಗಿಂತ ಮೊದಲಿನ ಅಕಾಡೆಮಿಗಳ ಬಹುತೇಕ ಪ್ರಮುಖ ಕಾರ್ಯಕ್ರಮಗಳು, ಕನ್ನಡ ಮತ್ತು ಸಂಸ್ಕೃತಿಯ ವೆಂಕಟಪ್ಪ ಪ್ರಶಸ್ತಿ ಪ್ರದಾನ ಸಮಾರಂಭ (ಕೆ ಕೆ ಹೆಬ್ಬಾರರಿಗೆ )ಇತ್ಯಾದಿಗಳು ಅಲ್ಲಿಯೇ ನಡೆದವು. ಆಕಾಡೆಮಿಯೇ ಅಲ್ಲದೆ, ಇತರರ ಎಷ್ಟೋ ಸೆಮಿನಾರುಗಳು ಅಲ್ಲಿ ನಡೆದಿವೆ. ಅಂತಹ ವೆಂಕಟಪ್ಪ ಕಲಾ ಗ್ಯಾಲರಿ ಇಂದಿನ ಸ್ಥಿತಿಗೆ ಬರಲು ಸಂಸ್ಕೃತಿ ಇಲಾಖೆ ಮತ್ತು ಅಲ್ಲಿ ,ಹಣ ಅಧಿಕಾರ ಇದ್ದರೆ ಮಾತ್ರ ಅತ್ತ ಸುಳಿಯುವ ಹಲವು ಕಲಾವಿದರು ಪಟ್ಟಭದ್ರ ಹಿತಗಳೊಂದಿಗೆ ಶಾಮೀಲಾಗಿ ಶ್ರಮಿಸಿದ್ದು ಬಹುಮುಖ್ಯ ಕಾರಣವಾಗಬಲ್ಲದು. ಕಾರ್ಪೊರೇಟ್ ಮೂಲದ ಆಕರ್ಷಣೆಗೆ ಒಳಗಾಗಿರುವ ಅಧಿಕಾರಿವರ್ಗ ವೆಂಕಟಪ್ಪ ಗ್ಯಾಲರಿಯನ್ನು ‘ಇಲ್ಲ’ ವಾಗಿಸುವ ಪಣತೊಟ್ಟಂತೆ ಅಲ್ಲಿನ ಒಳ-ಹೊರ ನೋಟಗಳಿವೆ . ಸುಣ್ಣವು ಇಲ್ಲ, ಬಣ್ಣವೂ ಇಲ್ಲ ; ಲಿಫ್ಟ್ ಇಲ್ಲವೇ ಇಲ್ಲ. ಸಣ್ಣಪುಟ್ಟ ರಿಪೇರಿಗಳು ಇಲ್ಲ. ಏಸಿ ಸೌಲಭ್ಯಕ್ಕೆ ರೂಪಿಸಿದ ಪ್ರದರ್ಶನಾಂಗಣದಲ್ಲಿ ಫಂಗಸ್ ವಾಸನೆ. ವೆಂಕಟಪ್ಪನವರ ಇತಿಹಾಸ, ಅವರ ಕಲಾಕೃತಿಗಳು ಮತ್ತು ಗ್ಯಾಲರಿಯ ಬಗ್ಗೆ ಪ್ರೀತಿಯೇ ಇಲ್ಲದವರು ಅಲ್ಲಿರುವಂತೆ ಕಾಣುತ್ತದೆ.
ಈ ನಡುವೆ ವೆಂಕಟಪ್ಪ ಗ್ಯಾಲರಿಯ ಅಳಲನ್ನು ಅರಗಿಸಿಕೊಂಡಿರುವಂತೆ ಕಾಣುವ ದೃಶ್ಯ ಕಲಾವಿದ ಪರಮೇಶ್ ಜೋಳದ ಅವರ ಈ ಹಿನ್ನೆಲೆಯ ಒಡಲಾಳದ ಅಭಿವ್ಯಕ್ತಿಯಾಗಿ ‘ ದನಿ ‘ ( the voice ) ಇನ್ಸ್ಟಾಲೇಷನ್ ಕಲಾ ಪ್ರದರ್ಶನ ಕಂಡಿತು . ಐತಿಹಾಸಿಕ ಪ್ರಜ್ಞೆ ಮತ್ತು ಸಮಕಾಲೀನ ಎಚ್ಚರದ ಅಭಿವ್ಯಕ್ತಿಯಲ್ಲಿ ಉದ್ದೇಶಪೂರ್ವಕವಾಗಿ ಖಾಲಿ ಬಿಟ್ಟಿದ್ದ ಪ್ರದರ್ಶನ ಅಂಗಣದಲ್ಲಿ ಜನಭರಿತ ಸಿನಿಮಾ ಮಂದಿರಗಳ ಮುಂದೆ ಪ್ರದರ್ಶಿಸುವಂತೆ ‘ಹೌಸ್ ಫುಲ್ ‘ ಬೋರ್ಡನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಇಡಲಾಗಿತ್ತು. ಆದರೆ ಇದು ಥಿಯೇಟರ್ ಅಲ್ಲ ಎಂಬುದಕ್ಕೆ ಜನಜಂಗುಳಿಯ ಗಲಾಟೆಯ ಧ್ವನಿಗಳನ್ನು ಸಾಂಕೇತಿಕವಾಗಿ ( audio ) ಕೇಳಿಸಲಾಗುತ್ತಿತ್ತು.
ಇಡೀ ಗ್ಯಾಲರಿಯಲ್ಲಿ ಕತ್ತಲು ತುಂಬಿದಂತೆ,ಕತ್ತಲೆ ಮಂದಿರದಲ್ಲಿ ಸಿನಿಮಾ ನೋಡುವಂತೆ ದೂರದ ಗೋಡೆಯಮೇಲೆ ವೆಂಕಟಪ್ಪ ಗ್ಯಾಲರಿಗಾಗಿ 2016 – 2017 ರ ಅವಧಿಯಲ್ಲಿ ನಡೆದ ಚಳುವಳಿ ರೂಪದ ಪ್ರತಿಭಟನೆಯ ( ವೆಂಕಟಪ್ಪ ಗ್ಯಾಲರಿ ಇತಿಹಾಸದಲ್ಲಿ ಇದು ಮೂರನೆಯದು ) ಪತ್ರಿಕೆಗಳ ತುಣುಕುಗಳ ಕೊಲಾಜ್ ಕೃತಿಯೊಂದರ ಪ್ರದರ್ಶನ. ಕೆಳಗೆ ಕನ್ನಡ, ಇಂಗ್ಲೀಷಿನಲ್ಲಿ ಪರಮೇಶ್ ಜೋಳದ ಅವರ ಇನ್ಸ್ಟಾಲೇಷನ್ ಅಭಿವ್ಯಕ್ತಿಯ ಹೇಳಿಕೆಗಳು ಇದ್ದವು. ಒಬ್ಬ ನಿಜವಾದ ಕಲಾವಿದನಿಗೆ ಇರಬೇಕಾದ ವಿನಯವನ್ನು ಅರಗಿಸಿಕೊಂಡಿರುವುದರಿಂದಲೇ ಕನ್ನಡ ದೃಶ್ಯಕಲಾ ರಂಗದ ಯಾರೂ ಮಾಡದ ಸಾಹಸವನ್ನು ಪರಮೇಶ್ ಜೋಳದ ಮಾಡಿದ್ದಾರೆ.ಕಲಾವಿದ, ಕಲಾವಿದೆಯರೆಂದರೆ ದರೆ ಅವರ ಹಲವು ಚಟುವಟಿಕೆಗಳನಡುವೆ, ಅಡ್ಡಿ ಆತಂಕಗಳ ನಡುವೆಯೂ ಅಭಿವ್ಯಕ್ತಿ ಸುವ,ಬಹಳ ಮುಖ್ಯವಾಗಿ ಅವರ ಕಾಲ ಸಂದರ್ಭದ ಮನಸ್ಥಿತಿಯ ಕನ್ನಡಿಗಳು.