ವಾಣಿವಿಲಾಸ ಸಾಗರ ಜಲಾಶಯ – ಡಾ.ವಡ್ಡಗೆರೆ ನಾಗರಾಜಯ್ಯ

ವಾಣಿವಿಲಾಸ ಸಾಗರ ಜಲಾಶಯ 
ಡಾ.ವಡ್ಡಗೆರೆ ನಾಗರಾಜಯ್ಯ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಿಂದ ಪಶ್ಚಿಮ ದಿಕ್ಕಿಗೆ 18 ಕಿಲೋಮೀಟರ್ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದೆ. ಈ ಜಲಾಶಯವು 89 ವರ್ಷಗಳ ನಂತರದಲ್ಲಿ ಎರಡನೇ ಸಲ ಭರ್ತಿಯಾಗಿ ತುಂಬಿ ಕೋಡಿಬಿದ್ದು, ಕ್ರೆಸ್ಟ್ ಗೇಟನ್ನೂ ತೆರೆದು ಹರಿದ ನೀರಿನಿಂದ ಹಿರಿಯೂರು ಪಟ್ಟಣದ ಕೆಲವು ಪ್ರದೇಶಗಳು ಜಲಮಯವಾಗಿವೆ. ಹೊಲಗದ್ದೆ ತೋಟಗಳು ಬದುಗಳ ಗುರುತುಗಳನ್ನು ಕಳೆದುಕೊಂಡು ಮುಳುಗಡೆಯಾಗಿವೆ.
ಹೊಲಗದ್ದೆ ತೋಟಗಳು ಮುಳುಗಡೆಯಾಗಿರುವಂತೆಯೇ ಮಾರಿಕಣಿವೆ ಅಣೆಕಟ್ಟೆಯ ಕ್ಷೇತ್ರಪಾಲಿನಿ ದೇವತೆ ಕಣಿವೆ ಮಾರಮ್ಮನಿಗೂ ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದ ಮಾತಂಗಿ ದೇವಿಗೂ ಹಾಗೂ ಈ ಅವಳಿ ದ್ರಾವಿಡ ನೆಲದೇವತೆಗಳನ್ನು ಆರಾಧಿಸಿಕೊಂಡು ಬರುತ್ತಿರುವ ತಳವಂದಿಗ ಸಮುದಾಯಗಳಿಗೂ ನಡುವೆ ಬೆಸೆದುಕೊಂಡು, ಜನರ ನೆನಪುಗಳಿಂದ ಮರೆಯಾಗಿ ವಿಸ್ಮೃತಿಗೆ ಸರಿದಿರುವ ಸಾಂಸ್ಕೃತಿಕ ನೆನಪುಗಳ ಕಥನವನ್ನು ನಾನಿಲ್ಲಿ ದಾಖಲಿಸುತ್ತಿದ್ದೇನೆ.
ಮಾರಿಕಣಿವೆ ಅಣೆಕಟ್ಟು ಅಥವಾ ವಾಣಿವಿಲಾಸ ಸಾಗರ ಜಲಾಶಯವು, ಆಗಸ್ಟ್‌ 1898 ರಿಂದ ಆಗಸ್ಟ್‌ 1907 ರವರೆಗೆ ಒಂಭತ್ತು ವರ್ಷಗಳ ಕಾಲ ನಿರ್ಮಾಣವಾದ ಭಾರತದ ಮೊಟ್ಟಮೊದಲನೇ ಅತ್ಯಂತ ಸುರಕ್ಷಿತ, ಸುಭದ್ರ ಹಾಗೂ ಕಲಾತ್ಮಕ ವಿನ್ಯಾಸದ ಜಲಾಶಯವೆಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿಗೆ 115 ವರ್ಷಗಳ ಹಿಂದೆ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟು, ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿಯಾದ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು ಬ್ರಿಟಿಷರಿಂದ Maharani Regent of Mysore ಆಗಿ ನೇಮಕಗೊಂಡು ಕೈಗೆತ್ತಿಕೊಂಡ ಕನಸಿನ ಕೂಸು ಇದಾದ ಕಾರಣದಿಂದ, ನಾಲ್ವಡಿಯವರು ಈ ಅಣೆಕಟ್ಟೆಗೆ ತಮ್ಮ ತಾಯಿಯ ಹೆಸರನ್ನೇ ‘ವಾಣಿವಿಲಾಸ ಕೆಂಪನಂಜಮ್ಮಣ್ಣಿ ಸನ್ನಿಧಾನ’ ಎಂದು ನಾಮಕರಣ ಮಾಡಿದ್ದಾರೆ.
ಸರ್‌.ಎಂ.ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿ ಎಂದು ಹೇಗೆ ಮಿಥ್ಯಾಪುರಾಣವನ್ನು ಹೊಸೆಯಲಾಗಿದೆಯೋ ಅದೇ ರೀತಿಯಲ್ಲಿಯೇ ವಾಣಿವಿಲಾಸ ಸಾಗರ ಜಲಾಶಯದ ರೂವಾರಿ ವಿಶ್ವೇಶ್ವರಯ್ಯನವರೆಂದು ಹಾಗೂ ಮಹಾ ಬುದ್ಧಿವಂತ ಇಂಜಿನಿಯರ್ ಆಗಿದ್ದ ಅವರು ಅಣೆಕಟ್ಟೆಯಲ್ಲಿ ನಿಂತ ನೀರು ಭಾರತದ ಭೂಪಟವನ್ನು ಹೋಲುವಂತೆ ಅಣೆಕಟ್ಟೆಯ ನಕಾಶೆಯನ್ನು ತಯಾರಿಸಿದ್ದಾರೆಂದು ಮಿಥ್ಯಾಪುರಾಣವನ್ನು ಹೊಸೆಯಲಾಗಿದೆ. ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಪ್ರಾರಂಭವಾದ ಎರಡು ವರ್ಷಗಳ ನಂತರ ಹಾಗೂ ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿಯೇ ವಿಶ್ವೇಶ್ವರಯ್ಯನವರು ಮದ್ರಾಸಿನಿಂದ ಮೈಸೂರಿಗೆ ಬಂದದ್ದು.
ಈಗಿರುವಷ್ಟು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೃಹತ್ ಯಂತ್ರೋಪಕರಣಗಳಾಗಲೀ, ಮಾನವ ಸಂಪತ್ತಾಗಲೀ ಲಭ್ಯವಿರದಿದ್ದ ಆಗಿನ ಕ್ಲಿಷ್ಟ ಕಾಲದಲ್ಲಿ ನಾಲ್ವಡಿಯವರ ಉಸ್ತುವಾರಿಯಲ್ಲಿಯೇ ವಾಣಿವಿಲಾಸ ಸಾಗರ ಅಣೆಕಟ್ಟು ನಿರ್ಮಾಣವಾಯಿತು. ಸಿಮೆಂಟ್- ಮಾರ್ಬಲ್ ಬಳಸದೆಯೇ ಸ್ಥಳೀಯ ಬೆಟ್ಟಗುಡ್ಡಗಳಿಂದ ದೊರೆಯುತ್ತಿದ್ದ ಕರಿಕಲ್ಲು ಬಳಸಿಕೊಂಡು ಮತ್ತು ಸುಣ್ಣ-ಮರಳು ರುಬ್ಬಿದ ಗಚ್ಚುಗಾರೆ ಬಳಸಿಕೊಂಡು ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ.
ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿದ್ದ ಬಯಲುಸೀಮೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಯ ಅನುಕೂಲಕ್ಕಾಗಿ ನಾಲ್ವಡಿಯವರು ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ. ಇದು
ಹಿರಿಯೂರು ಭಾಗದ ಸಮಸ್ತ ಜೀವಮಂಡಲದ ಜೀವನಾಡಿಯಾಗಿದೆ. ಏಷ್ಯಾದಲ್ಲಿಯೇ ಅತ್ಯಂತ ಸುರಕ್ಷಿತ ಮತ್ತು ಸುಭದ್ರತೆಯ ಮೊದಲ ಡ್ಯಾಂ ಎಂಬ ಖ್ಯಾತಿ ಈ ಜಲಾಶಯಕ್ಕಿದೆ.
ಡ್ಯಾಂ ನಿರ್ಮಾಣವಾದ 89 ವರ್ಷಗಳ ನಂತರದಲ್ಲಿ ಎರಡು ಸಲ ಮಾತ್ರ ಡ್ಯಾಂ ತುಂಬಿ ಕೋಡಿಬಿದ್ದಿದೆ. ಮಾರಿ ಕಣಿವೆಯ ಹಿನ್ನೀರಿನಲ್ಲಿ ಹೊಸದುರ್ಗ ತಾಲೂಕಿನ ನೂರಾರು ಹೆಕ್ಟೇರುಗಳಷ್ಟು ಭೂಮಿ ಜಲಾವೃತವಾಗಿ ಹೊಲಗದ್ದೆ ತೋಟತುಡಿಕೆಗಳು ಮುಳುಗಡೆಯಾಗಿರುವಂತೆಯೇ ಡ್ಯಾಂ ನೀರಿನ ಹೊರ ಹರಿವಿನಿಂದ ಹಿರಿಯೂರು ತಾಲ್ಲೂಕಿನ ನೂರಾರು ಹೆಕ್ಟೇರುಗಳಷ್ಟು ಜಮೀನು ಮುಳುಗಡೆಯಾಗಿ, ಆಸ್ತಿಪಾಸ್ತಿಗಳು ಕೊಚ್ಚಿಕೊಂಡು ಹೋಗಿವೆ.
ಡ್ಯಾಂ ಏರಿಯ ಹಿಂದೆ ಕ್ಷೇತ್ರದೇವತೆ ಕಣಿವೆಮಾರಮ್ಮನು ಗುಡಿಯಲ್ಲಿ ನೆಲೆಸಿರುತ್ತಾಳೆ. ಜಲಾಶಯ ನಿರ್ಮಾಣವಾಗುವ ನೂರಾರು ವರ್ಷಗಳ ಹಿಂದೆಯೇ ಇಲ್ಲಿನ ಕಾಡು ಕಣಿವೆಯಲ್ಲಿ ಮಾರಮ್ಮ ದೇವತೆಯು ನೆಲೆಸಿ ಕಣಿವೆಮಾರಮ್ಮ ಎಂದು ಹೆಸರಾಗಿದ್ದಳು. ವಾಣಿವಿಲಾಸ ಸಾಗರ ಜಲಾಶಯವನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸುತ್ತಿದ್ದ ಕಾಲದಲ್ಲಿ ಕಣಿವೆಮಾರಮ್ಮನು ಕಣಿವೆ ಪ್ರದೇಶದಿಂದ ಡ್ಯಾಂ ಹಿಂದಿನ ಏರಿಬುಡಕ್ಕೆ ಶಿಫ್ಟ್ ಆದಳು. ಎರಡು ಗುಡ್ಡಗಳ ನಡುವೆ ವಾಣಿವಿಲಾಸ ಸಾಗರ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ಕಣಿವೆಮಾರಮ್ಮ ಅಣೆಕಟ್ಟೆಯ ಏರಿಗೆ ಮುಖಮಾಡಿ ಕಾಲುಗಳಿಂದ ಏರಿಯನ್ನು ಒದ್ದುಕೊಂಡು ನೀರನ್ನು ತಡೆಹಿಡಿದಿದ್ದಾಳೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹಾಗಾಗಿ ಕಣಿವೆಮಾರಮ್ಮ ಬಲು ಶಕ್ತಿವಂತೆ ದೇವತೆಯಾಗಿದ್ದು ಇಡೀ ಜೀವರಾಶಿಯ ತಲೆಕಾಯ್ದು ಕಾಪಾಡುತ್ತಾಳೆಂಬ ನಂಬಿಕೆಯೂ ಇಲ್ಲಿದೆ. ಅಣೆಕಟ್ಟೆಗೆ ಹರಿದು ಬರುತ್ತಿದ್ದ ನೀರಿನ ರಭಸವನ್ನು ತಡೆಯಲು ಯಾರಿಂದಲೂ ಸಾಧ್ಯವಾಗದೆ ಏರಿಯನ್ನು ಕಟ್ಟಲು ಅಡಚಣೆಯಾಗುತ್ತಿದ್ದಾಗ ಚಿಂತಾಕ್ರಾಂತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪರಿಹಾರ ಕಂಡುಕೊಳ್ಳಲು ಜ್ಯೋತಿಷಿಗಳ ಮೊರೆಹೋದರು. ಜ್ಯೋತಿಷಿಗಳ ಸಲಹೆಯ ಮೇರೆಗೆ ಏರಿಯನ್ನು ಆಂತುಕೊಂಡು ಕುಳಿತ ಭಂಗಿಯಲ್ಲಿ ಕಣಿವೆಮಾರಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಿಯ ಗುಡಿಯನ್ನು
ಕಟ್ಟಿಸಿದರು ಎಂಬ ಪ್ರತೀತಿ ಇಲ್ಲಿದೆ.
ಯಾವುದೇ ದೇಗುಲದಲ್ಲಿ ಸಾಮಾನ್ಯವಾಗಿ ದೇವರ ಮುಖಭಾಗಕ್ಕೆ ಪೂಜೆ ಮಾಡುವುದು ಸಹಜ. ಆದರೆ ಕಣಿವೆಮಾರಮ್ಮ ದೇವಿಯ ಬೆನ್ನುಭಾಗಕ್ಕೆ ಪೂಜೆ ಮಾಡುವ ಪೂಜಾ ಪದ್ದತಿ ಇಲ್ಲಿದೆ. ದೇವಿಯು ಜಲಾಶಯಕ್ಕೆ ಕಾಲೊದ್ದುಕೊಂಡು ಕುಳಿತಿರುವ ಹಾಗೆ ಶಿಲ್ಪವನ್ನು ಕೆತ್ತಿ ಪ್ರತಿಷ್ಠಾಪಿಸಲಾಗಿರುವುದರಿಂದ ಇಂತಹ ಪೂಜಾ ಪದ್ಧತಿ ರೂಢಿಗೆ ಬಂದಿರಲೂಬಹುದು. ಭಕ್ತಭಾವಿಕರು ಕೈಮುಗಿಯುವುದು ಕೂಡಾ ಕಣಿವೆ ಮಾರಮ್ಮನ ಬೆನ್ನಿಗೆ.
ವಾಣಿವಿಲಾಸ ಸಾಗರ ಜಲಾಶಯದ ಹಿಂದೆ ನೆಲೆಸಿರುವ ಕಣಿವೆ ಮಾರಮ್ಮನ ತವರೂರು, ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಗ್ರಾಮ.
ಮಧುಗಿರಿ ಸೀಮೆಯ ಜನಪದರು ಹೇಳುವ ಪ್ರಕಾರ ದೊಡ್ಡೇರಿ ಗ್ರಾಮದ ಗ್ರಾಮದೇವತೆ ಮಾತಂಗಿದೇವಿ ಮತ್ತು ಮಾರಿಕಣಿವೆಯ ಕಣಿವೆಮಾರಮ್ಮ ಇಬ್ಬರೂ ಪರಸ್ಪರ ಅಕ್ಕತಂಗಿಯರು.
ದೊಡ್ಡೇರಿ ಗ್ರಾಮದ ಮಾತಂಗಿಯು ಮಾರಿಕಣಿವೆಯ ಕಣಿವೆಮಾರಮ್ಮನಿಗೆ ತಂಗಿಯಾಗಬೇಕು. ಈ ಅವಳಿ ದೇವತೆಗಳಿಗೆ ಎಲ್ಲಾ ತಳವಂದಿಗ ತಳಸಮುದಾಯಗಳ ಜನ ಒಕ್ಕಲಾಗಿ ನಡೆದುಕೊಳ್ಳುತ್ತಾ ಬಂದಿದ್ದಾರೆ. ದೊಡ್ಡೇರಿ ಮಾತಂಗಮ್ಮನ ಗುಡಿಯ ಪೂಜಾರಿಯಾಗಿರುವ ಮಾದಿಗ ಜನಾಂಗದ ಕಣಿಮಯ್ಯನ ಮನೆಯಿಂದ ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ಕಣಿವೆಮಾರಮ್ಮನಿಗೆ ತವರು ಮನೆಯ ಮಡಿಲಕ್ಕಿಯನ್ನು ತಲುಪಿಸಲಾಗುತ್ತದೆ. ಕಣಿವೆಮಾರಮ್ಮನ ಜಾತ್ರೆ ವಿದ್ಯುಕ್ತವಾಗಿ ಪ್ರಾರಂಭವಾಗುವುದೇ ದೊಡ್ಡೇರಿ ಗ್ರಾಮದ ಮಾದಿಗ ಜನಾಂಗದವರ ಮನೆಯಿಂದ ತವರುಮನೆ ಮಡಿಲಕ್ಕಿ ತಲುಪಿದ ಮೇಲೆ. ಕಣಿವೆಮಾರಮ್ಮನ ಜಾತ್ರೆಗೆ ಹೋದ ದೊಡ್ಡೇರಿ ಗ್ರಾಮದ ಎಲ್ಲಾ ತಳಸಮುದಾಯಗಳ ಭಕ್ತರು ತವರೂರಿನ ಕಾಣಿಕೆ ಎಂದು ಸೀರೆ, ಕುಪ್ಪಸದ ಖಣ, ಅಕ್ಕಿ ಬೆಲ್ಲ ಬೇಳೆ, ಹೂವು ಹಣ್ಣು ದವನ, ಬಳೆ ಬಿಚ್ಚೋಲೆ ಮುಂತಾದ ಕಾಣಿಕೆಗಳನ್ನು ಅರ್ಪಿಸುತ್ತಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣೆವೆ ನಡುವೆ ಸುಮಾರು ನೂರು ಕಿಲೋಮೀಟರ್ ಅಂತರವಿದೆ. ಪೂರ್ವಿಕರು ವಾಹನ ಸೌಕರ್ಯವಿರದಿದ್ದ ಆಗಿನ ಕಾಲದಲ್ಲಿ ಎತ್ತಿನ ಬಂಡಿಗಳಲ್ಲಿ ಕುಳಿತು ಅಥವಾ ಕಾಲ್ನಡಿಗೆಯಲ್ಲಿ ಮಾರಿಕಣಿವೆಯ ಜಾತ್ರೆಗೆ ಅಥವಾ ಹರಕೆ ಹೊತ್ತಾಗ ದೇವಿಯ ದರ್ಶನಕ್ಕೆ ಹೋಗುತ್ತಿದ್ದರಂತೆ. ಮಾರಿಕಣಿವೆಯ ಕಣಿವೆಮಾರಮ್ಮನ ಬೆನ್ನುಭಾಗಕ್ಕೆ ಪೂಜೆ ಸಲ್ಲಿಸಿದ ರೀತಿಯಲ್ಲಿಯೇ ದೊಡ್ಡೇರಿ ಗ್ರಾಮದ ಮಾತಂಗಿದೇವಿಗೂ ಸಹ ಬೆನ್ನುಭಾಗಕ್ಕೆ ಪೂಜೆ ಸಲ್ಲಿಸುವ ಪೂಜಾ ಪದ್ದತಿಯು ತಲೆತಲಾಂತರಗಳಿಂದ ರೂಢಿಯಲ್ಲಿದೆ.
ಮಾರಿಕಣಿವೆ ಜಲಾಶಯ ನಿರ್ಮಾಣಕ್ಕೂ ಮೊದಲು ಇಲ್ಲಿನ ಕಣಿವೆಯಲ್ಲಿ ನೆಲದೇವತೆ “ಕಣಿವೆ ಮಾರಮ್ಮ”ನ ಗುಡಿ ಇತ್ತು. ಈ ಗುಡಿಯನ್ನು ಕಟ್ಟಿದವರು ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದ ಎಡಗೈ ಮಾದಿಗರೆಂದು ಹಾಗೂ ಡ್ಯಾಂ ಕಟ್ಟಿದವರು ತಮಿಳುನಾಡಿನ ಮಾದಿಗರೆಂದು (ಅರುಂಧತಿಯಾರ್) ದೊಡ್ಡೇರಿ ಗ್ರಾಮದ ‌ಮಾದಿಗರು ಹೇಳಿಕೊಳ್ಳುತ್ತಾರೆ. ಮಾತಂಗಿ ಮತ್ತು ಕಣಿವೆಮಾರಮ್ಮ ಇಬ್ಬರೂ ಮಾದಿಗರ ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೆಂದು ಮತ್ತು ಇದೇ ಕಾರಣದಿಂದ ಈಗಲೂ ಕಣಿವೆಮಾರಮ್ಮ ದೇವತೆಗೆ ಜಾತ್ರೆ ನಡೆಯುವ ಸಮಯದಲ್ಲಿ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದ ಮಾದಿಗರು ತವರು ಮನೆ ಮಡಿಲಕ್ಕಿ ಕಾಣಿಕೆ ಅರ್ಪಿಸುತ್ತಾರೆಂಬುದು ಭಕ್ತಜನರ ನಂಬಿಕೆ. ತವರು ಮನೆಯವರು ಮಡಿಲು ತುಂಬಿದ ನಂತರ ವಿದ್ಯುಕ್ತವಾಗಿ ಜಾತ್ರೆ, ಪೂಜೆ ಮತ್ತು ಸೇವಾ ಕೈಂಕರ್ಯಗಳು ನಡೆಯುತ್ತವೆ.
ಪ್ರತಿ ವರ್ಷ ಬಸವ ಜಯಂತಿಯ ಅಮಾವಾಸ್ಯೆ ನಂತರ ಬರುವ‌ ಮೊದಲ ಮಂಗಳವಾರ, ಕಣಿವೆಮಾರಮ್ಮನ ಜಾತ್ರೆ ಪ್ರಾರಂಭವಾಗುತ್ತದೆ. ಮಂಗಳವಾರ ಮದನಗಿತ್ತಿ, ಬುಧವಾರ ಜಲ್ದಿ, ಗುರುವಾರ ಹುಸಿ (‌ಪೂಜೆ ನಡೆಯುವುದಿಲ್ಲ) ಶುಕ್ರವಾರ ಮಂಡೆ ಶಾಸ್ತ್ರ, ಶನಿವಾರ ಸಿಡಿ, ಭಾನುವಾರ ಬೆತ್ತಲಾರತಿ, ಬೇವಿನುಡಿಗೆ, ಎದ್ದಗಾವು ಬಿದ್ದಗಾವು ಹೀಗೆ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ.
ಮಾರಿಕಣಿವೆಯ ಕಣಿವೆಮಾರಮ್ಮ ಮತ್ತು ದೊಡ್ಡೇರಿಯ ಮಾತಂಗಮ್ಮನಿಗೆ ದೊಡ್ಡೇರಿ ಗ್ರಾಮವೇ ತವರೂರು. ದೊಡ್ಡೇರಿ ಗ್ರಾಮದ ಹೊರಗೆ ಪೂರ್ವ ದಿಕ್ಕಿನಲ್ಲಿ ಹೊಲಗದ್ದೆಗಳ ಮಧ್ಯೆ ಮಾತಂಗಮ್ಮನ ಗುಡಿಯಿದೆ. ದೊಡ್ಡೇರಿ ಗ್ರಾಮದಲ್ಲಿರುವ‌ ಪೂಜಾರಿಯ ಪೂರ್ವಿಕರಿಗೆ ದೇವಿ ಮಾತಂಗಿಯು, ತಂಗಡಿಗಿಡ ಮತ್ತು ಬೇವಿನ ಗಿಡದ ರೂಪದಲ್ಲಿ ಒಲಿಯುತ್ತಾಳೆ. ಕೊರಟಗೆರೆ ತಾಲೂಕಿನಲ್ಲಿರುವ ಸಿದ್ದರಬೆಟ್ಟದ ಶಿಲೆಯಿಂದ ಮಾತಂಗಿದೇವಿಯ ಗುಡಿಕಟ್ಟಬೇಕೆಂದು ಪೂಜಾರಿಗೆ ಕಣಿವೆಮಾರಮ್ಮನಿಂದ ಸ್ವಪ್ನಸಂಧಾನವಾಗುತ್ತದೆ. ಅದರಂತೆ ಸಿದ್ದರಬೆಟ್ಟದಿಂದ ಶಿಲೆಯನ್ನು ತಂದು ಮಾತಂಗಿಯ ಪ್ರತಿಮೆಯನ್ನು ತಿದ್ದಿಸಿ, ಗುಡಿ ಕಟ್ಟಿಸಿ ಪೂಜಿಸತೊಡಗಿದರು, ಮಾರಿಕಣಿವೆಯ ಕಣಿವೆಮಾರಮ್ಮನು ಪೂಜಾರಿಗೆ ಮೈದುಂಬಿ, ‘ದೊಡ್ಡೇರಿಯಲ್ಲಿ ನನ್ನ ತಂಗಿ ಮಾತಂಗಮ್ಮನಿಗೆ, ಗುಡಿಕಟ್ಟಿ ಪೂಜಿಸಿರಿ’ ಎಂದು ಆಜ್ಞೆ ಮಾಡಿದ ಪ್ರಕಾರವೇ ದೊಡ್ಡೇರಿಯಲ್ಲಿ ಗುಡಿ ಕಟ್ಟಲಾಯಿತೆಂದು ದೊಡ್ಡೇರಿ ಮಾದಿಗರು ಹೇಳಿಕೊಳ್ಳುತ್ತಾ ಬಂದಿದ್ದಾರೆ.
ಮಾತಂಗಿ ದೇವಿಗಿಂತಲೂ ಕಣಿವೆಮಾರಮ್ಮನಿಗೆ ಹೆಚ್ಚಿನ ಶ್ರಧ್ದೆ ತೋರಿಸುವ ದೊಡ್ಡೇರಿ ಗ್ರಾಮದ ಭಕ್ತಜನರ ಮನೆಗಳಲ್ಲಿ ತಮ್ಮ ಮಕ್ಕಳಿಗೆ ಪರಂಪರಾನುಗತವಾಗಿ ಕಣಿವೆಮಾರಮ್ಮನ ಹೆಸರು ಕಟ್ಟಿ ಕರೆಯುತ್ತಾ ಬಂದಿದ್ದಾರೆ. ಕಣಿಮಪ್ಪ, ಕಣಿಮವ್ವ, ಕಣುಮಕ್ಕ, ಕಣಿಮಯ್ಯ, ಕಣಿಮೆ ರಂಗನಾಥ, ಕೋಡಿಕಣಿಮವ್ವ, ಕೋಡಿರಂಗಮ್ಮ, ಕೋಡಿರಂಗಪ್ಪ, ಕೋಡೆಮ್ಮ, ಕಣಿಮೆ ರಂಗಧಾಮ, ಮಾರಪ್ಪ, ಮಾರಮ್ಮ, ಚಿಕ್ಕಕಣಿಮವ್ವ, ದೊಡ್ಡ ಕಣಿವಮ್ಮ ಇನ್ನೂ ಮುಂತಾಗಿ ಹೆಸರುಗಳನ್ನು ಕರೆದುಕೊಳ್ಳುವ ರೂಢಿ ಮಧುಗಿರಿ ಸೀಮೆಯಲ್ಲಿ ಕಣಿವೆಮಾರಮ್ಮನಿಗೆ ಒಕ್ಕಲುಗಳಾಗಿ ನಡೆದುಕೊಳ್ಳುವ ಭಕ್ತಜನರಲ್ಲಿದೆ.
ನನ್ನ ಬಾಲ್ಯ ಕಾಲದಲ್ಲಿ ನನ್ನೂರು ವಡ್ಡಗೆರೆ ಗ್ರಾಮದ ಮಾದಿಗ ಸಮುದಾಯದಲ್ಲಿ ಕಣಿಮಕ್ಕಜ್ಜಿ ಎಂಬ ಹೆಸರಿನ ಸುಮಾರು ನೂರು ವರ್ಷಗಳ ವಯೋಮಾನದ ಅಂಚಿನಲ್ಲಿದ್ದ ಅಜ್ಜಿ ಇದ್ದಳು. ವಡ್ಡಗೆರೆ ಗ್ರಾಮಕ್ಕೆ ಸೊಸೆಯಾಗಿ ಕಲ್ಕೆರೆ ಎಂಬ ಗ್ರಾಮದಿಂದ ಬಂದಿದ್ದ ಕಣಿಮಕ್ಕಜ್ಜಿ, ಮಾರಿಕಣಿವೆಯ ಕಣಿವೆಮಾರಮ್ಮನ ಒಕ್ಕಲಾಗಿದ್ದಳು. ಈ ಅಜ್ಜಿಯು ಕಾಲವಾಗಿ ಸುಮಾರು ನಲವತ್ತು ವರ್ಷಗಳು ಕಳೆದಿವೆ. ಅಂದ್ಹಾಗ ಮಾರಿಕಣಿವೆಯ ಕಣಿವೆಮಾರಮ್ಮ ಅತ್ಯಂತ ಪ್ರಾಚೀನ ದೇವತೆಯೇ ಆಗಿರುತ್ತಾಳೆ.
ಮಾರಿಕಣಿವೆಯಿಂದ ಕಣಿವೆಮಾರಮ್ಮನು ತನ್ನ ತಂಗಿಯಾದ ಮಾತಂಗಿಯನ್ನು ಭೇಟಿಯಾಗಲು ಪ್ರತಿವರ್ಷ ಮೆರೆವಿಗ್ರಹದ ರೂಪದಲ್ಲಿ ದೊಡ್ಡೇರಿ ಗ್ರಾಮಕ್ಕೆ ಬಂದುಹೋಗುತ್ತಿದ್ದಳಂತೆ. ಆಗ ಇಬ್ಬರೂ ದೇವತೆಯರಿಗೆ ವಿಜೃಂಭಣೆಯಿಂದ ಪೂಜಾಕಾರ್ಯಗಳನ್ನು ದೊಡ್ಡೇರಿ ಗ್ರಾಮದಲ್ಲಿ ನೆರವೇರಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಕಣಿವೆಮಾರಮ್ಮನು ತನ್ನ ತಂಗಿಯನ್ನು ನೋಡಲು ನೂರು ಕಿಲೋಮೀಟರ್ ದೂರದ ಚಿತ್ರದುರ್ಗದ ಮಾರಿಕಣಿವೆಯಿಂದ ದೊಡ್ಡೇರಿ ಗ್ರಾಮಕ್ಕೆ ಬಂದು ಹೋಗುವುದು ಕಷ್ಟವಾಗುತ್ತದೆಂದು, ದೊಡ್ಡೇರಿ ಹತ್ತಿರವೇ ಕೈಮರ ಎಂಬ ಸ್ಥಳದಲ್ಲಿ ತೋರುದೇವತೆಯಾಗಿ ಕಣಿವೆಮಾರಮ್ಮ ಬಂದು ನೆಲೆಸಿದಳಂತೆ. ಮಧುಗಿರಿ ತಾಲೂಕಿನಲ್ಲಿ ದೊಡ್ಡೇರಿ ಗ್ರಾಮದ ಸಮೀಪದ ಕೈಮರ ಎಂಬಲ್ಲಿ ಕಣಿವೆಮಾರಮ್ಮನ ತೋರುಗದ್ದಿಗೆ ಗುಡಿಯನ್ನು ನಿರ್ಮಿಸಲಾಗಿದೆ. ಕೈಮರ ಎಂಬಲ್ಲಿ ಗುಡಿಯಲ್ಲಿ ನೆಲೆಸಿರುವ ಕಣಿವೆಮಾರಮ್ಮನಿಗೆ ಸಲ್ಲಿಸುವ ಪೂಜೆ ನೈವೇದ್ಯಗಳು ಮಾರಿಕಣಿವೆಯ ಕಣಿವೆಮಾರಮ್ಮನಿಗೆ ಇಲ್ಲಿಂದಲೇ ಅರ್ಪಿತವಾಗುತ್ತವೆಂದು ಭಕ್ತರು ನಂಬಿದ್ದಾರೆ. ಮಾರಿಕಣಿವೆಯ ಕಣಿವೆಮಾರಮ್ಮ, ದೊಡ್ಡೇರಿ ಗ್ರಾಮದ ಮಾತಂಗಿದೇವಿ ಹಾಗೂ ಕೈಮರದ ಕಣಿವೆಮಾರಮ್ಮ ಈ ಮೂರು ಗುಡಿಗಳಲ್ಲಿ ದೇವತೆಯ ಬೆನ್ನುಭಾಗಕ್ಕೆ ಪೂಜೆ ಸಲ್ಲಿಸುವ ಪೂಜಾ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಎಲ್ಲಾ ತಳಸ್ತರೀಯ ಸಮುದಾಯಗಳು ಒಕ್ಕಲಾಗಿ ಆರಾಧಿಸುವ ಈ ಜಲದೇವತೆಗಳು ಮಾದಿಗರ ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳೆಂಬುದು ಜನಪದರ ನಂಬಿಕೆಯಾಗಿದೆ.