ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು

ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಅಡಿಗ, ಅನಂತಮೂರ್ತಿ ರಿಲಿಜಿಯಸ್:

 

ಒಂದು ಕಾಜಾಣದ ಕೂಗು ಇಷ್ಟೆಲ್ಲ ಕೂಗುವಂತೆ ಮಾಡಿತು. “ಸಂದರ್ಶನ ತೀರಾ Formal ಆಗುವುದು ಬೇಡ. ನೀವೆ ಮಾತಾಡುತ್ತಾ ಹೋಗಿ ಸಾರ್” ಎಂದೆವು.

ತೇಜಸ್ವಿ ವೈಚಾರಿಕತೆ, ವಿಜ್ಞಾನ ಕುರಿತು ಹೇಳಿದ್ದ ಹಿನ್ನೆಲೆಯನ್ನ ಮತ್ತಷ್ಟು ಹಿಂದಕ್ಕೆ ಒಯ್ದರು… “1974 ರಲ್ಲಿ ನಡೆದ ಬರಹಗಾರರ ಒಕ್ಕೂಟದಲ್ಲಿ ನಾವು ಒಂದು ತೀರ್ಮಾನವನ್ನು ತೆಗೆದುಕೊಂಡೆವು. ನವ್ಯದ ಪ್ರಮುಖ ಲೇಖಕರೆಂದು ಗುರುತಿಸಲಲ್ಪಟ್ಟಿದ್ದ ಅಡಿಗ ಮತ್ತು ಅನಂತಮೂರ್ತಿ ಇಬ್ಬರೂ ರಿಲಿಜಿಯಸ್ ಲೇಖಕರಾಗಿದ್ದರು. ಸಂಸ್ಕಾರ ಮೇಲುನೋಟಕ್ಕೆ ಧರ್ಮವನ್ನ ತಿರಸ್ಕರಿಸುವಂತೆ ಕಂಡರೂ ಅದರ ಬೇರುಗಳು ಧರ್ಮ ಮತ್ತು ಸಂಪ್ರದಾಯಕತೆಯಲ್ಲೇ ಹುದುಗಿದವು. ಎಲಿಯಟ್ ನಂತಹ  ಲೇಖಕ ರಿಲಿಜಿಯಸ್ ಆದರೆ ತಪ್ಪೇನಿಲ್ಲ. ಆದರೆ ನಮ್ಮ ಧರ್ಮ ಅಂತಹುದಲ್ಲ. ಇದನ್ನೆಲ್ಲಾ ಗಮನಿಸಿದ ನಾವು ಸಾಮಾಜಿಕ ಆಸ್ಥೆಯೇ ನಮ್ಮ ಸಾಹಿತ್ಯದ ಪ್ರಮುಖ ಕಾಳಜಿಯಾಗಬೇಕು ಎಂದು ತೀರ್ಮಾನಿಸಿದೆವು. ಅದಕ್ಕೆ ಒಂದು ನಿಶ್ಚಿತ ರೂಪು ಕೊಟ್ಟುಕೊಂಡೆವು ಅನಿಸುತ್ತದೆ.

 

“ನಂತರ ನನಗನ್ನಿಸಿತು. ಬರೇ ಸಾಮಾಜಿಕ ಆಸ್ಥೆ ಇದ್ದರೆ ಅಷ್ಟೇ ಸಾಲದು. ಸಾಮಾಜಿಕ ಆಸ್ಥೆ ಬಹುಮುಖ್ಯವಾದುದು ನಿಜ. ಆದರೆ ಅದರ ಆಚೆಗೂ ಮಾನವನ ವ್ಯಕ್ತಿತ್ವ ಹರಡಿರುತ್ತದೆ. ಬರೇ ಸಾಮಾಜಿಕ ಕಳಕಳಿಯಿಂದಲೇ ಒಂದು ಸಂಸ್ಕ್ರತಿಯ ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಿಲ್ಲ… ಈ ಅರಿವಿನಿಂದಲೇ ಕರ್ವಾಲೋ ರೂಪುಗೊಂಡಿದ್ದು…? ಈ ಸಾಮಾಜಿಕ ಕಾಳಜಿ, ಪ್ರತಿಭಟನೆಯ ಮಾತು ಬಂದಾಗಲೇ ನಾವು ಈಚಿನ ಬಂಡಾಯ, ದಲಿತ ಸಾಹಿತ್ಯದ ಬಗ್ಗೆ ಕೇಳಿದೆವು.

 

“ನಾನು ಮೊದಲೇ ಹೇಳಿದಂತೆ ಸಾಹಿತ್ಯದಲ್ಲಿ ಬರೀ ಸಾಮಾಜಿಕ ಆಸ್ಥೆ ಪ್ರತಿಭಟನೆ ಇಷ್ಟೇ ಇದ್ದರೆ ಸಾಲದು. ಸಾವಿರಾರು ವರ್ಷಗಳಿಂದ ಮನುಷ್ಯ ಎಲ್ಲ ಬಗೆಯ ಅಸಮಾನತೆ ನೋವಿನ ನಡುವೆಯೂ ವರ್ಣರಂಜಿತ ಬದುಕನ್ನು ಬದುಕಿದ್ದಾನೆ. ಆಧುನಿಕ ಲೇಖಕ ಇವೆರಡರನ್ನೂ ಒಟ್ಟಾಗಿ ಗ್ರಹಿಸಿ ಹಿಡಿದಿಡುವುದಾದರೆ ಚೆನ್ನ. ಮಿಗಿಲಾಗಿ ಸಾಹಿತ್ಯ ಲಲಿತಕಲೆಗಳಲ್ಲೊಂದು. ಆದ್ದರಿಂದ ನಾವು ಹೇಳುವುದು ಸಾಹಿತ್ಯ ಸ್ವರೂಪದಲ್ಲಿ ಸಾಕಾರಗೊಳ್ಳಬೇಕು… ಬಂಡಾಯ ಬರೀ ಚೀರಾಟವಾದಾಗ ರಾಜಕಾರಣಿಗಳ ಘೋಷಣೆಯಂತೆ ಕಾಣುತ್ತದೆ”

 

“ಹೊಸ ಸಾಹಿತ್ಯ ಚಳವಳಿಗಳು ಕೊಂಚ ಮಂಕಾಗಿ, ಮುಕ್ಕಾಗಿ ಕಾಣುತ್ತಿರುವುದಕ್ಕೆ ಇದೇ ಕಾರಣವೇ?” ಎಂದು ಮಧ್ಯ ಸೇರಿಸಿದಾಗ, ‘ಬಂಡಾಯ’ ದಲಿತ ಅಥವಾ ಈಗ ಪ್ರಚಲಿತವಿರುವ ಯಾವುದೇ ಸಾಹಿತ್ಯಕ್ಕೂ ಪೂರಕವಾಗಿ ನಿಲ್ಲುವಂತಹ ಯಾವ ಚಳವಳಿಯೂ ಪಾಶ್ವಾತ್ಯ ರಾಷ್ಟ್ರಗಳಲ್ಲಿ ಇಲ್ಲ. ನವೋದಯ, ಪ್ರಗತಿಶೀಲ, ನವ್ಯರಿಗೆ ಅದೇ ಸಮಯದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದ್ದ ಕೆಲವು ಚಳವಳಿಗಳು ಪ್ರಭಾವ ಬೀರಿದವು. ಇದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಲೇಖಕನೊಬ್ಬನಿಗೆ ಲಾಭವೂ ಹೌದು, ನಷ್ಟವೂ ಹೌದು…”

 

ನಾವು ಆಫ್ರಿಕಾದಲ್ಲಿ ನಮ್ಮ ದಲಿತ ಚಳವಳಿಗೆ ಸಂವಾದಿಯಾದ ಸಾಹಿತ್ಯ ಚಳವಳಿ ಇರುವುದನ್ನು ನೆನಪಿಸಿದಾಗ, “ಆಫ್ರಿಕಾದಲ್ಲಿ ಸ್ವಲ್ಪ ಮಟ್ಟಿಗೆ ಇಂಥ ಚಳವಳಿ ಇದ್ದರೂ ನಮಗೆ ಹಿನ್ನೆಲೆಯಾಗಿರುವ ಸನಾತನ ಧರ್ಮ ಹಿನ್ನೆಲೆಯಲ್ಲಿ …ಎಂದರು.

 

ಬ್ರಾಹ್ಮಣೀಕರಣ:

 

“ಈ ಕೈಗಾರೀಕರಣ, ಕೇಂದ್ರೀಕರಣ, ರಾಷ್ಟ್ರೀಕರಣ, ಇದೆಲ್ಲ ಒಂದು ರೀತಿಯಲ್ಲಿ ಭಾರತವನ್ನು ಬ್ರಾಹ್ಮಣೀಕರಿಸುವ ವಿಧಾನ ಅಷ್ಟೆ. ಒಂದು ಟಾಟಾ ಶೂ ಕಂಪನಿ ಸಾವಿರರು ಮೋಚಿಗಳ ಉದ್ಯೋಗವನ್ನು ಕಸಿದುಕೊಳ್ಳುತ್ತದೆ… ಪಂಜಾಬಿನ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿ. ದೇಶದ ಶೇಕಡಾ ತೊಂಭತ್ತರಷ್ಟು ಜನಕ್ಕೆ ಗೋಧಿ ಮುಂತಾದ ಆಹಾರ ಧಾನ್ಯ ಕೊಡುವ, ನಮ್ಮನ್ನು ಕಾಪಡುವ ಸೈನ್ಯದ ಬಹುಭಾಗ ಆವರಿಸಿರುವ ಜನಾಂಗವೊಂದನ್ನು ಸುಖಾಸುಮ್ಮನೆ ಕೆರಳಿಸಿದ್ದು ಸರಿಯೇ? ಈಗ ಆರುವರುಷದ ಹಿಂದೆ ಬ್ರಾಹ್ಮಣರು ಮತ್ತು ಸಿಖ್ಕರ ನಡುವೆ ಉಂಟಾದ ದ್ವೇಷ ಇಡೀ ರಾಷ್ಟ್ರವನ್ನು ಹಿಂದೂಗಳು ಮತ್ತು ಹಿಂದೂಗಳಲ್ಲದವರು ಎಂದು ಬೇರ್ಪಡಿಸುವಷ್ಟರ ಮಟ್ಟಿಗೆ ಮುಂದುವರಿದಿದೆ…”

 

ಹೀಗೆ ಮಾತು ಮುಂದುವರಿದಾಗ ನಾನು ಕರ್ನಾಟಕದ ಸಂದರ್ಭದಲ್ಲಿ “ಬರೀ ಬ್ರಾಹ್ಮಣರನ್ನೆ ನಿಂದಿಸುವುದು ತಪ್ಪಾಗುತ್ತದೆ ಸರ್. ಈ ವಕ್ಕಲಿಗರು, ಲಿಂಗಾಯಿತರೇನು ಕಡಿಮೆ ದಬ್ಬಾಳಿಕೆ ನಡೆಸಿದ್ದಾರಾ…” ಎನ್ನುತ್ತಿದ್ದಾಗಲೇ ತಡೆದ ತೇಜಸ್ವಿ “No No ನಾನು ಯಾವ ಜಾತಿಯನ್ನು ಬೈಯುತ್ತಿಲ್ಲ. ಯಾವುದೇ ಜಾತಿಯನ್ನು ಬೈಯ್ಯುವುದು ಅರ್ಥಹೀನ. ನಾನು ಈಗಿರುವ ಜಾತಿ ಪದ್ಧತಿಯನ್ನು ಅರ್ಥೈಸುತ್ತಿದ್ದೇನೆ ಅಷ್ಟೆ. ಇಲ್ಲೂ ಒಂದು ವ್ಯತ್ಯಾಸ ಇದೆ ಗಮನಿಸಿ. ಈ ವಕ್ಕಲಿಗರು, ಲಿಂಗಾಯಿತರು ತಮ್ಮ ಉಳಿವಿಗಾಗಿ ಅನಿವಾರ್ಯವಾಗಿ ತಮ್ಮ ಕೆಳಜಾತಿಯವರ ಮೇಲೆ ದರ್ಪ ತೋರಿರಬಹುದು. ಆದರೆ ಈ ಬ್ರಾಹ್ಮಣರು ಅದನ್ನ ಆ ಜನ್ಮಸಿದ್ಧ ಹಕ್ಕು ಅಂದರೆ Divine right ಎಂದು ತಿಳಿದರು. ಇದು ಬಹಳ ಸೂಕ್ಷ್ಮವಾದ ವಿಷಯ.”

 

ಶಿವರಾಮ ಕಾರಂತರು ಮತ್ತು ಸಮುದ್ರ:

 

“ನಿಮಗೆ ಗೊತ್ತಿಲ್ಲ, ಬ್ರಾಹ್ಮಣಿಕೆ ಎಷ್ಟು ಸೂಕ್ಷ್ಮವಾಗಿರುತ್ತದೆಂದರೆ ಒಬ್ಬ ಲೇಖಕನಿಗೆ ಅರಿವಿಲ್ಲದಂತೆಯೇ ಅಪ್ರಜ್ಞಾಪೂರ್ವಕವಾಗಿ ಅದು ಆತನ ಹಿನ್ನೆಲೆಯಿರುತ್ತದೆ. ಅಡಿಗರು ನೋಡಿ ಹೇಗೆ ಜನಸಂಘದ ಪರವಾಗಿ ಚುನಾವಣೆಗೆ ಸ್ಪರ್ಧಿಸಿದರು. ಇಲ್ಲೇ ಮತ್ತೊಂದು ಮಾತು ಹೇಳಬೇಕು. ಕಾರಂತರು ನಮ್ಮ ಬಹು ದೊಡ್ಡ ಲೇಖಕರಲ್ಲಿ ಒಬ್ಬರು, ಎಂದೂ ಸಾಂಪ್ರಾದಾಯಕತೆಯೊಂದಿಗೆ ರಾಜಿ ಮಾಡಿಕೊಳ್ಳುವವರು ಎಂಬುದು ನಿಜ.

ಆದರೆ ಸೂಕ್ಷ್ಮ ಗಮನಿಸಿ ಕುವೆಂಪುರವರ ಕಾದಂಬರಿಗಳಲ್ಲಿ ಕಾಡು ತನಗೆ ತಾನೇ ಒಂದು ಪಾತ್ರದಂತೆ, ಸಮುದ್ರದ ಮಗ್ಗುಲಲ್ಲೇ ಇರುವ ಕಾರಂತರ ಕೃತಿಗಳಲ್ಲಿ ಸಮುದ್ರ ಎಲ್ಲೂ ಒಂದು ಪಾತ್ರವಾಗಿ ಬೆಳೆದಿಲ್ಲ. ಹೇಮಿಂಗ್ ವೇಯಲ್ಲಾದಂತೆ, ಕುವೆಂಪು ನಾಡಿನ ನಾಡಿಮಿಡಿತ ಅರಿತಂತೆ ಕಾರಂತರು ಸಮುದ್ರದ ಉಸಿರಾಟವನ್ನ , ಸ್ಪಂದನವನ್ನ ಅರಿಯಲಾಗಲಿಲ್ಲ.

ಅರ್ಥವಾಯಿತೆ!” ಎಂದು ನಕ್ಕರು.

 

ಯು.ಆರ್.ಅನಂತಮೂರ್ತಿ ಮತ್ತು ಮತಾಂತರ:

 

ಮತಾಂತರ ಬಗ್ಗೆ ಯು.ಆರ್.ಅನಂತಮೂರ್ತಿ ಭಾಷಣದ ವರದಿ ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅನಂತಮೂರ್ತಿ ಮತಾಂತರ ಪ್ರತಿಯೊಬ್ಬ ಭಾರತೀಯನ ಆಜನ್ಮಸಿದ್ಧ ಹಕ್ಕೆಂದೂ, ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಇರುವ ತೊಡಕುಗಳನ್ನು ವಿವರಿಸುತ್ತ ಇವುಗಳನ್ನು ನಿವಾರಿಸಲು ಇನ್ನಾದರೂ ನಮ್ಮ ಮಠಾಧಿಪತಿಗಳು ಪ್ರಯತ್ನಿಸಬೇಕೆಂದೂ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕರೆ ಕೊಟ್ಟಿದ್ದಾರೆ, ಈ ಕುರಿತು ನನ್ನ ಕೆಲವು ಜಿಜ್ಞಾಸೆಯನ್ನು ಇಲ್ಲಿ ಮಂಡಿಸುತ್ತಿದ್ದೇನೆ.

 

ಅನಂತಮೂರ್ತಿಯವರ ಮತಾಂತರ ಎಲ್ಲರ ಆಜನ್ಮಸಿದ್ದ ಹಕ್ಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇದಕ್ಕಾಗಿ ಹಿಂದೂ ಧರ್ಮವನ್ನು ಅನುಗೊಳಿಸುವ ಜವಾಬ್ದಾರಿಯನ್ನು ಮಠಾಧಿಪತಿಗಳಿಗೆ ಯಾವ ಆಧಾರದ ಮೇಲೆ ಅನಂತಮೂರ್ತಿಯವರು ವಹಿಸುತ್ತಿದ್ದಾರೆಯೋ ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಎಲ್ಲ ಮಠಗಳೂ ಜಾತೀಯತೆಯ ಬಂಡವಾಳದ ಮೇಲೆ ಹುಟ್ಟಿಕೊಂಡಿರುವಂಥ ಸಂಸ್ಥೆಗಳು ಎನ್ನುವುದು ಎಲ್ಲರೂ ಬಲ್ಲರು. ಜಾತಿಗಳನ್ನು ಸಂಘಟಿಸುವುದೇ ಇವುಗಳ ಮೂಲೋದ್ದೇಶವಾಗಿದೆ. ನಮ್ಮ ದೇಶದ ರಾಜಕಾರಣದಲ್ಲಿ ಸಂಘಟಿತ ಗುಂಪುಗಳಾಗಿದ್ದರೆ ತಮಗೆ ಅಸ್ಥಿತ್ವವೇ ಇಲ್ಲವೆಂಬುದನ್ನು ಅರಿತ ಎಲ್ಲ ಸಣ್ಣಪುಟ್ಟ ಜಾತಿಗಳೂ ಮಠಗಳನ್ನೂ ಮಠಾಧಿಪತಿಗಳನ್ನೂ ಕಟ್ಟಿಕೊಂಡು ರಾಜಕೀಯ ಶಕ್ತಿಯಾಗಲು ಕೈಲಾದ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದು ತಪ್ಪೋ ಸರಿಯೋ ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ. ಇಂಥ ಸಂಘಟನೆಗಳಿಂದ ಹಿಂದೂ ಧರ್ಮಕ್ಕೆ ಜಾತ್ಯಾತೀತ ನೆಲೆ ರೂಪಿಸುವುದಕ್ಕಾಗಲೀ, ಯಾರೂ ಬೇಕಾದರೂ ಸೇರಬಹುದಾದ ಉದಾರವಾದೀ ಸ್ವರೂಪವನ್ನು ನೀಡುವುದಕ್ಕಾಗಲೀ ಸಾಧ್ಯವೆ ಎನ್ನುವುದಷ್ಟೇ ಇಲ್ಲಿ ಪ್ರಸ್ತುತ. ಪ್ರತಿಯೊಬ್ಬನೂ ತಮ್ಮ ಪೂರ್ವ ಕರ್ಮಾನುಸಾರವಾಗಿ ಆಯಾ ಜಾತಿಯಲ್ಲಿ ಹುಟ್ಟುತ್ತಾನೆ ಎನ್ನುವ ಸೈದ್ಧಾಂತಿಕ ತಳಹದಿ ಈ ಎಲ್ಲ ಮಠಗಳ ಬುನಾದಿ, ಕೆಲವು ಮಠಗಳು ಕರ್ಮಾನುಸಾರ ಆಯಾ ಜಾತಿಯಲ್ಲಿ ಹುಟ್ಟಿದರೂ ಸತ್ಕರ್ಮಗಳ ಮುಖಾಂತರ ಜನ್ಮಾಂತರಗಳಲ್ಲಿ ಮನುಷ್ಯನ ಆತ್ಮ ವಿಕಾಸವಾಗುತ್ತಾ ಜಾತಿಯಲ್ಲೂ ಮೇಲೇರುತ್ತಾನೆ ಎನ್ನುತ್ತವೆ. ಕೆಲವು ಮಠಗಳು ಇದನ್ನು ತಿರಸ್ಕರಿಸಿ ಆತ್ಮಗಳು ಶಾಶ್ವತವಾಗಿ ಹುಟ್ಟು ಸಾವಿನ ನಿತ್ಯ ಪರಿಭ್ರಮಣೆಯಲ್ಲಿ ಹೇಗಿದ್ದುವೋ ಹಾಗೆ ಇರುತ್ತವೆ ಎಂದು ಹೇಳುತ್ತವೆ. ಈ ತಾತ್ವಿಕ ತಳಹದಿಯನ್ನು ತಿರಸ್ಕರಿಸಿದ ಮೇಲೆ ಮಠಗಳು ತಮ್ಮ ಅಸ್ಥಿತ್ವವನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ? ವಸ್ತುಸ್ಥಿತಿ ಹೀಗಿರುವಾಗ ಹಿಂದೂ ಧರ್ಮದ ಉದಾರೀಕರಣ ಇಂಥ ಸಂಘಟನೆಗಳಿಂದ ಸಾಧ್ಯವೇ?

 

ಹಾಗಿದ್ದರೆ ಇದು ರಾಜಕಾರಣಿಗಳಿಂದ, ಸರಕಾರಗಳಿಂದ ಸಾಧ್ಯವೆ? ಪರಿಶಿಲಿಸೋಣ. ಅನಂತಮೂರ್ತಿಯವರು ಮತಾಂತರ ಆಜನ್ಮಸಿದ್ಧ ಹಕ್ಕು ಎಂದು ಹೇಳುವಾಗ ಬಹುಮುಖ್ಯವಾಗಿ ಮರೆತಿರುವ ವಿಷಯ ಎಂದರೆ ನಮ್ಮ ಸಂವಿಧಾನ ನಮಗೆ ಯಾವ ಮತಕ್ಕೂ ಸೇರದಿರುವ ಹಕ್ಕನ್ನು ಕೊಟ್ಟಿಲ್ಲ ಎನ್ನುವುದು.  ಜಾತ್ಯಾತೀತ ಸಮಾಜವನ್ನು ನಿರ್ವಹಿಸ ಹೊರಟ ಸಂವಿಧಾನದಲ್ಲಿ ಈ ಹಕ್ಕು ಇಲ್ಲದಿದ್ದರೆ ನಾನು ಯಾವುದಾದರೂ ಒಂದು ಮತಕ್ಕೆ ಸೇರಿಯೇ ಅಸ್ಥಿತ್ವ ಪಡೆದುಕೊಳ್ಳಬೇಕಾಗುತ್ತದೆಯಲ್ಲವೆ? ನಮಗೆ ಯಾವ ದೇವರನ್ನೂ ನಂಬದೆ, ಯಾವ ಮತದೊಡನೆಯೂ ಗುರುತಿಸಿಕೊಳ್ಳದೆ ವ್ಯಕ್ತಿಗತವಾಗಿ ಬದುಕುವ ಸಾಧ್ಯತೆಯನ್ನು ಭಾರತೀಯ ಸಮಾಜ ಗುರುತಿಸಿಕೊಟ್ಟಿದೆ ಎನ್ನುವುದು ನಿಜ. ಆದರೆ ಇದು ಸಂವಿಧಾನದತ್ತ ಹಕ್ಕಾಗಿಲ್ಲ. ಇದರಿಂದ ಆಗಿರುವ ದೊಡ್ಡ ಅನಾಹುತವೆಂದರೆ ಪ್ರತಿಯೊಂದು ಅಂತರ್ಜಾತೀಯ ವಿವಾಹ ಆದವರ ಮಕ್ಕಳು ಅವರ ತಂದೆಯೆ ಜಾತಿಯೊಂದಿಗೇ ಗುರುತಿಸಿಕೊಳ್ಳಬೇಕಾದ ಕಾನೂನು ಅನಿವಾರ್ಯತೆಯ ದೆಸೆಯಿಂದ ಅಂತರ್ಜಾತೀಯ ವಿವಾಹ ಪರೋಕ್ಷವಾದ ಮತಾಂತರವಲ್ಲದೆ ಬೇರೆ ಅಲ್ಲ. ಮಹಾತ್ಮ ಗಾಂಧಿ ಜಾತಿಪದ್ಧತಿಯನ್ನು ತೊಡೆದುಹಾಕಲು ಅಂತರ್ಜಾತೀಯ ವಿವಾಹ ಒಂದೇ ಮದ್ದು ಎಂದದ್ದು ಈಗ ಅದಕ್ಕೆ ತದ್ವಿರುದ್ಧ ಪರಿಣಾಮ ಬೀರುತ್ತಿದೆ. ಯಾವ ಮತಕ್ಕಾದರೂ ಸೇರುವುದು ನಮ್ಮ ಆಜನ್ಮಸಿದ್ಧ ಹಕ್ಕು ಹೇಗೋ ಹಾಗೆ ಸೇರದಿರುವುದೂ ಸಹ. ಯಾವ ಮತಗಳ ಸಾಮಾಜಿಕ ಗುಂಪುಗಳಿಗೂ ಸೇರದೆ ಎಲ್ಲ ತತ್ವ ಸಿದ್ಧಾಂತಗಳನ್ನು ಪರ್ಯಾಲೋಚಿಸಿ ತಮಗಿಷ್ಟ ಸಿಕ್ಕುವವರೆಗೂ ಮತಾಂತರ ಗೋಜಲು, ಹೊಡೆದಾಟ, ದ್ವೇಷ ತಪ್ಪಿಸುವುದು ಕಷ್ಟ. ರಾಜಕೀಯ ಮಾಡಲು ತಮ್ಮ ತಮ್ಮ ಜಾತಿಯೊಂದನ್ನು ಬಿಟ್ಟರೆ ಬೇರೆ ಯಾವ ಬಂಡವಾಳವೂ ಇಲ್ಲದ ನಮ್ಮ ರಾಜಕಾರಣಿಗಳಿಂದ ಇದು ಸಾಧ್ಯವಾಗುವುದೆ? ಮರೆಯದಂತೆ ನವೀಕರಿಸುವ ಸಾಧನವಾಗಿಲ್ಲವೆ?

 

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪೂರ್ಣ ಪರಿಚಯ

 

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ತಂದೆ ರಾಷ್ಟ್ರಕವಿ ಕುವೆಂಪು, ತಾಯಿ ಹೇಮಾವತಿ. ಇವರು ಸೆಪ್ಟೆಂಬರ್ 8, 1938 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದರು.

 

ಸ್ನಾತಕೋತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಗ್ರಹಣ ಹಾಗೂ ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳವಳಿಯಲ್ಲು ತಮ್ಮನ್ನು ತೊಡಗಿಸಿಕೊಂಡಿದ್ದರು.

ತೇಜಸ್ವಿಯವರ ಪತ್ನಿ ರಾಜೇಶ್ವರಿ. ಇವರಿಗೆ ಸುಸ್ಮಿತಾ, ಈಶಾನ್ಯ ಎಂಬ ಇಬ್ಬರು ಪುತ್ರಿಯರಿದ್ದಾರೆ.

 

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಾತ್ಮಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಅನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ‘ಕರ್ವಾಲೋ’ ಕೃತಿಯಲ್ಲಿ ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿಬಂದಿವೆ. ಅವರು ಒಟ್ಟು 55 ಕೃತಿಗಳನ್ನು ಹೊರತಂದಿದ್ದಾರೆ.

 

ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು ಇವರ ಪ್ರಮುಖ ಕವನ ಸಂಕಲನ. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ಕಾಡು ಮತ್ತು ಕ್ರೌರ್ಯ ಇವರ ಪ್ರಮುಖ ಕಾದಂಬರಿಗಳು. ಸ್ವರೂಪ, ನಿಗೂಢ ಮನುಷ್ಯರು ಇವರ ಪ್ರಮುಖ ನೀಳ್ಗತೆಗಳು. ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫಿಸು, ಕಿರಗೂರಿನ ಗಯ್ಯಾಳಿಗಳು, ಪಾಕಕ್ರಾಂತಿ ಮತ್ತು ಇತರೆ ಕಥೆಗಳು ಇವರ ಪ್ರಮುಖ ಕಥಾ ಸಂಕಲನ. ಯಮಳ ಪ್ರಶ್ನೆ ಇವರ ಪ್ರಮುಖ ನಾಟಕ. ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್ ಇವರ ಪ್ರಮುಖ ಪ್ರವಾಸ ಕಥನ. ವ್ಯಕ್ತಿ ವಿಶಿಷ್ಟ ಸಿದ್ಧಾಂತ, ವಿಮರ್ಶೆಯ ವಿಮರ್ಶೆ, ಹೊಸ ವಿಚಾರಗಳು ಇವರ ಪ್ರಮುಖ ವಿಮರ್ಶಾ ಕೃತಿಗಳು. ಪರಿಸರದ ಕಥೆ, ಮಿಸ್ಸಿಂಗ್ ಲಿಂಕ್, ಸಹಜ ಕೃಷಿ, ಏರೋಪ್ಲೆನ್ ಚಿಟ್ಟೆ ಮತ್ತು ಇತರೆ ಕತೆಗಳು, ಹಕ್ಕಿಪುಕ್ಕ, ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು ಭಾಗ 1, ಹೆಜ್ಜೆ ಮೂಡದ ಹಾದಿ – ಕನ್ನಡ ನಾಡಿನ ಹಕ್ಕಿಗಳು – ಭಾಗ 2, ವಿಸ್ಮಯ -123, ಫ್ಲೈಯಿಂಗ್ ಸಾಸರ್ – ಭಾಗ 1 ಮತ್ತು 2, ನಡೆಯುವ ಕಡ್ಡಿ ಹಾರುವ ಎಲೆ ಇವರ ಪ್ರಮುಖ ವಿಜ್ಞಾನ ಹಾಗೂ ಪರಿಸರ ಕೃತಿಗಳು. ಮಹಾಯುದ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ ಇವರ ಪ್ರಮುಖ ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ. ಮಿಲೇನಿಯಮ್ -1 ಹುಡುಕಾಟ, ಮಿಲೇನಿಯಮ್ -2 ಜೀವನ ಸಂಗ್ರಾಮ, ಮಿಲೇನಿಯಮ್ -3 ಪೆಸಿಫಿಕ್ ದ್ವೀಪಗಳು, ಮಿಲೇನಿಯಮ್ – 4 ಚಂದ್ರನ ಚೂರು, ಮಿಲೇನಿಯಮ್ – 5 ನೆರೆಹೊರೆಯ ಗೆಳೆಯರು, ಮಿಲೇನಿಯಮ್ –6 ಮಹಾಯುದ್ಧ 1, ಮಿಲೇನಿಯಮ್ -7 ಮಹಾಯುದ್ಧ2, ಮಿಲೇನಿಯಮ್ -8 ಮಹಾಯುದ್ಧ 3, ಮಿಲೇನಿಯಮ್ -9 ದೇಶವಿದೇಶ 1, ಮಿಲೇನಿಯಮ್ -10 ದೇಶವಿದೇಶ 2, ಮಿಲೇನಿಯಮ್ – 11 ದೇಶವಿದೇಶ 3, ಮಿಲೇನಿಯಮ್ -12 ದೇಶವಿದೇಶ 4, ಮಿಲೇನಿಯಮ್ -13 ವಿಸ್ಮಯ ವಿಶ್ವ 1, ಮಿಲೇನಿಯಮ್ -14 ಮಹಾಪಲಾಯನ. ಮಿಲೇನಿಯಮ್ – 15 ವಿಸ್ಮಯ ವಿಶ್ವ 2 , ಮಿಲೇನಿಯಮ್ -16 ಅಡ್ವೆಂಚರ್ ಇವರ ಪ್ರಮುಖ ಮಿಲೇನಿಯಮ್ ಸರಣಿ ಕೃತಿಗಳು. ಬೆಳ್ಳಂದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ, ಜಾಲಹಳ್ಳಿಯ ಕುರ್ಕ, ಮುನಿಶಾಮಿ ಮತ್ತು ಮಾಗಡಿ ಚಿರತೆ, ರುದ್ರಯಾಗದ ಭಯಾನಕ ನರಭಕ್ಷಕ, ಪ್ಯಾಪಿಲಾನ್ – 1,2 ಇವರ ಪ್ರಮುಖ ಅನುವಾದ ಕೃತಿಗಳು. ಮಾಯೆಯ ಮುಖಗಳು ಇವರ ಪ್ರಮುಖ ಚಿತ್ರ ಸಂಕಲನ. ಅಣ್ಣನ ನೆನಪು ಇವರ ಪ್ರಮುಖ ಆತ್ಮಕಥನ.

 

ತೇಜಸ್ವಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987), ಪಂಪ ಪ್ರಶಸ್ತಿ  (2001), ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಅಬಚೂರಿನ ಪೋಸ್ಟಾಫಿಸು’ ಮತ್ತು ‘ತಬರನ ಕಥೆ’ ಕೃತಿಗಳು ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ, ಕುಬಿ ಮತ್ತು ಇಯಾಲ (ಕಥೆ) ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿದೆ.

 

ನನ್ನ ತೇಜಸ್ವಿ, ತೇಜಸ್ವಿ ನಾನು ಕಂಡಷ್ಟು, ಮತ್ತೆ ಮತ್ತೆ ತೇಜಸ್ವಿ, ಗಿರಗೂರಿನ ಗಯ್ಯಾಳಿಗಳು ಚಲನಚಿತ್ರ  ಮಾಧ್ಯಮವಾಗಿವೆ.

 

ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಮನೆ ‘ನಿರುತ್ತರ’ ದಲ್ಲಿ ಏಪ್ರಿಲ್ 5, 2007 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು 69.