ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

ಅ. ನಾ. ಯಲ್ಲಪ್ಪರೆಡ್ಡಿ

ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ದ್ವಂಸಕ್ಕೆ ಹೊರಟಿದೆ.

ರವೀಂದ್ರನಾಥ ಟಾಗೋರರು ೧೯೪೫ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಶ್ರೀಮಂತ ವರ್ಗದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ‘ನೀವು ಭೂಮಿ ತಾಯಿಯನ್ನು ಇನ್ನೆಷ್ಟು ಆಳ ಮತ್ತು ಅಗಲಕ್ಕೆ ಘಾಸಿ ಮಾಡಲು ಇಚ್ಚಿಸುತ್ತೀರಿ?’ ಎಂದು ಖಾರವಾಗಿ ಪ್ರಶ್ನಿಸಿದ್ದರು. ವಿಪರ್ಯಾಸವೆಂದರೆ, ಭಾರತವು ಭೂವಿಜ್ಞಾನದ ಅನಕ್ಷರತೆಯಿಂದಾಗಿ ಹಿಂದೆAದಿಗಿAತ ಇಂದು ದೊಡ್ಡ ರೀತಿಯಲ್ಲಿ ಪರಿಸರ ಘಾಸಿಯಾಗುವಂತಹ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ.

ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕ ಸರ್ಕಾರ ಗ್ರಾನೈಟ್ ಗಣಿಗಾರಿಕೆ, ಕಲ್ಲೊಡೆತ, ಜಲಾಶಯಗಳ ನಿರ್ಮಾಣದಿಂದ ಬಿಳಿಗಿರಿರಂಗನ ಬೆಟ್ಟದಿಂದ ಬಳ್ಳಾರಿವರೆಗಿನ ಅಮೂಲ್ಯ ಪಳೆಯುಳಿಕೆಗಳನ್ನು ಹೊಂದಿದ್ದ ಅಸಂಖ್ಯಾತ ತಾಣಗಳನ್ನು ಅಳಿಸಿಹಾಕಿದೆ. ಈಗ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಅಳಿದುಳಿದ ಹಸಿರು ತೇಪೆಗಳನ್ನು ಕಬಳಿಸುವ ದಾವಂತದಲ್ಲಿದೆ. ಈಗಾಗಲೇ ಕುದುರೆಮುಖ ಕಬ್ಬಿಣ ಅದಿರಿನ ಕಂಪನಿಯು ಭಾರತ ಮತ್ತು ಕರ್ನಾಟಕ ಸರ್ಕಾರಕ್ಕೆ ೧೭೦.೧೪ ಕೋಟಿ ರೂಪಾಯಿಗಳನ್ನು ನೀಡಿದ್ದು, ಸ್ವಾಮಿಮಲೈ ಅರಣ್ಯ ನಿರ್ವಹಣೆಗೆಂದು ಅನೇಕ ಕೋಟಿ ರೂಪಾಯಿಗಳನ್ನು ಎತ್ತಿರಿಸಿದೆ. ಕರ್ನಾಟಕ ಸರ್ಕಾರ ಸ್ವಾಮಿಮಲೈ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಅನುಮೋದನಾ ವರದಿಯನ್ನು ಸಲ್ಲಿಸಿದ್ದು ಗಣಿಗಾರಿಕೆಗೆ ೫೦ ವರ್ಷಗಳ ಗುತ್ತಿಗೆ ನೀಡಿದೆ. ಕಂಪನಿಯು ಇಲ್ಲಿನ ಶರತ್ತುಗಳ ಪೂರೈಸಲು ನೂರಾರು ಕೋಟಿ ತೆರಲು ಸಿದ್ಧವಾಗಿರುವಾಗಲೇ, ಈ ಹಣ  ಇಲ್ಲಿನ ಅಮೂಲ್ಯ ಅಕ್ಷತ ಕಾಡನ್ನು ಮರಳಿ ತಂದುಕೋಟ್ಟಿತೇ ಎನ್ನುವ ಶತಕೋಟಿ ಡಾಲರ್ ಪ್ರಶ್ನೆ ಕಾಡುತ್ತದೆ.

೧೯೬೨ರಲ್ಲಿ ಭದ್ರಾ, ಗಾಜನೂರು, ತುಂಗಭದ್ರಾ, ಹೇಮಾವತಿ, ಕಬಿನಿ, ಹಾರಂಗಿ ಮತ್ತು ಕಾಳಿ ಯೋಜನೆ ೧ ಮತ್ತು ೨ ಮತ್ತು ನೂರಾರು ಕಿರು ಜಲವಿದ್ಯುತ್ ಯೋಜನೆಗಳಲ್ಲಿ ಉಂಟಾದ ಅಗಾಧ ಪ್ರಮಾಣದ ಮುಳುಗಡೆಗೆ ನಾನು ಸಾಕ್ಷಿಯಾಗಿದ್ದೇನೆ. ಇತ್ತೀಚಿನವು ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳು. ಅಲ್ಲದೆ ಕರ್ನಾಟಕ ಸರ್ಕಾರವು ಅರ್ಕಾವತಿ, ಕುಮುದ್ವತಿ, ಪಾಲಾರ್, ಪಾಪಾಗ್ನಿ ಮುಂತಾದ ನದಿಗಳ ಜಲಾನಯನ ಪ್ರದೇಶವಾದ ನಂದಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಕೈಗಾರಿಕೆಗೆ ಸುಗ್ರೀವಾಜ್ನೆ ಮೂಲಕ ತಂದಿತು.

 

ಸಂಡೂರು ಪ್ರದೇಶದ ಈ ಅರಣ್ಯ ಪರಿಸರಕ್ಕೆ ೧೫೦ ಮಿಲಿಯನ್ ವರ್ಷಗಳ ಪರಂಪರೆ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಬಳ್ಳಾರಿಯವರೆಗೆ ಹಬ್ಬಿದ ಈ ಪರ್ವತ ಶ್ರೇಣಿ ಅಮೂಲ್ಯ ಮತ್ತು ಅನನ್ಯವಾದ ಜೀವಿ ಸಂಕುಲವನ್ನು ಹೊಂದಿದೆ. ಕ್ರೇಟನ್ ಶೀಲ್ಡ್ ಎಂದು ಕರೆಯಲ್ಪಡುವ ಈ ಅಚಲ ಕಲ್ಲು ಹಾಸಿನ ಅಡಿಪಾಯದ ಮೇಲೆಯೇ ನಮ್ಮ ನಾಡು ನಿಂತಿದೆ ಎನ್ನಬಹುದು. ಒಂದೂವರೆ ಶತಕೋಟಿ ವರ್ಷಗಳಲ್ಲಿ ಅನೇಕ ಹವಾಮಾನ ವಿಪ್ಲವಗಳನ್ನು ಯಶಸ್ವಿಯಾಗಿ ಎದುರಿಸಿರುವುದು ಈ ಪರ್ವತಶ್ರೇಣಿಯಾದ್ಯಂತ ದಾಖಲುಗೊಂಡಿದೆ. ಮಯೋಪಿನ್ ಯುಗಕ್ಕೆ ಸೇರಿದ ಈ ಪರ್ವತ ಶ್ರೇಣಿ ವೈವಿದ್ಯಮಯ ಆವಾಸಸ್ಥಾನಗಳನ್ನು ಹೊಂದಿ ಪ್ರಪಂಚದ ಅತ್ಯಂತ ಶ್ರೀಮಂತ ಜೀವ ವೈವಿಧ್ಯತಾ ತಾಣವಾಗಿದೆ. ಇದನ್ನು ಪವಿತ್ರ ಪಾರಂಪರಿಕಾ ತಾಣವಾಗಿ ಕಾಪಾಡಲು ನಮ್ಮ ಪೂರ್ವಜರು, ‘ಇಲ್ಲಿ ದೇವರು ರುಜು ಮಾಡಿದ್ದಾನೆ, ಸ್ವತಃ ದೇವರೇ ಇಲ್ಲಿ ಮನೆ ಮಾಡಿದ್ದಾನೆ’ ಎನ್ನುತ್ತಿದ್ದರು. ಮಾನವ ನಾಗರೀಕತೆಯ ಔನ್ಯತ್ಯ ಸಾರುವ ಸ್ವಾಮಿ ಮಲೈ ಮತ್ತು ದೇವಗಿರಿ ಬೆಟ್ಟಗಳಂತೂ ಭೂ ವಿಜ್ನಾನವನ್ನು ಮೊದಲಕ್ಷರದಿಂದ ಕಲಿಸುವ ಅತೀ ಪುರಾತನ ಪರಂಪರಾ ತಾಣಗಳು. ವರ್ಷವಿಡೀ ಧುಮ್ಮಿಕ್ಕಿ ಹರಿಯುವ ಅಸಂಖ್ಯಾತ ತೊರೆಗಳು ಇಲ್ಲಿನ ಜಲಾನಯನದ ವೈಶಿಷ್ಟ÷್ಯ.

 

ಇಲ್ಲಿನ ಕಾಡು ರಕ್ತ ಚಂದನ, ಶ್ರೀಗಂಧಗಳ ನೆಲೆವೀಡು. ಸಾವಿರಾರು ಜಾತಿಯ ಗಿಡಮೂಲಿಕೆಗಳು ಮತ್ತು ಪಾದರಸದ ಮಾಲಿನ್ಯ ಹೀರುವ ಕಮರದಂಥ ಮರಗಳು ಮತ್ತು ಔಷಧೀಯ ಕೈಗಾರಿಕೆಗಳಲ್ಲಿ ಹೇರಳವಾಗಿ ಬಳಕೆಯಾಗುವ  ದೂಪದಮರ(ಬೋಸೆವೆಲ್ಲಿಯ)ದ ಪ್ರಬೇಧಗಳು ಇಲ್ಲಿವೆ.

ಸಂಡೂರು ಪ್ರದೇಶದ ಶೇಕಡ ೪೦ರಷ್ಟು ಬೆಟ್ಟಗುಡ್ಡಗಳು ಈಗಾಗಲೇ ನಾಶವಾಗಿದ್ದು ಸಾವಿರಾರು ಎಕರೆ ಪ್ರದೇಶವು ಗುರುತು ಸಿಗದಷ್ಟು ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳಲ್ಲಿ ಕಾಣುತ್ತೇವೆ. ಇದರ ಪುನರುಜ್ಜೀವನಕ್ಕೆ ಕ್ಯಾಂಪಾ ಫಂಡ್ ಸಂಗ್ರಹಣೆಯಾಗಿದ್ದರೂ ಇದುವರೆಗೆ ಒಂದು ಎಕರೆ ಕೂಡ ಸ್ವಾಭಾವಿಕ ಅರಣ್ಯವಾಗಿ ಅಭಿವೃದ್ಧಿಯಾಗಿಲ್ಲ.  ಹಾನಿಗೊಳಗಾದ ಪ್ರದೇಶದ ಹೊರಗಡೆಯೆಲ್ಲೋ ನೆಪಮಾತ್ರಕ್ಕೆ ಮರಗಿಡಗಳನ್ನು ನೆಟ್ಟು ಕೈಬಿಟ್ಟಿದ್ದಾರೆ. ಛಿದ್ರಗೊಂಡ ಬೆಟ್ಟಗಳ ರಕ್ತ ಮಾಂಸಗಳು ಕೊಚ್ಚಿ ಆಸುಪಾಸಿನ ಕೆರೆಗಳಲ್ಲಿ ತುಂಬಿಕೊAಡಿವೆ. ಇಲ್ಲಿ ಎದ್ದ ದೂಳು ಸುತ್ತಮುತ್ತಲ ಸಸ್ಯರಾಶಿ ಮತ್ತು ರೈತರ ಹೊಲಗಳನ್ನು ಆವರಿಸಿಕೊಂಡು ಉಸಿರುಕಟ್ಟಿಸಿದೆ. ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವಾಗಿದೆ. ಹೀಗಿರುವಾಗ ಪ್ರಸ್ತುತ ಯೋಜನೆಯಿಂದ ಪರಿಸರ ಮತ್ತು ಜನಜೀವನದ ಮೇಲಾಗುವ ಪರಿಣಾಮವನ್ನು ಕಂಪನಿಯಾಗಲೀ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆಗಳಾಗಲೀ ಗಣನೆಗೆ ತೆಗೆದುಕೊಂಡಿಲ್ಲ. ಪರಿಸರ ಮತ್ತು ಜಲ ವಿಜ್ನಾನ, ಭೂ ರಚನೆಗಳು, ಜೀವ ವೈವಿಧ್ಯತೆಗಳ ದೃಷ್ಟಿಯಿಂದ ದೊಡ್ಡ ಹುಚ್ಚಾಟದಂತೆ ಕಾಣುವ ಈ ಯೋಜನೆಯನ್ನು ಕೈಬಿಟ್ಟು ಸರ್ಕಾರ ಈ ಕೆಳಗಿನ ಅಂಶಗಳತ್ತ ತುರ್ತಾಗಿ ಗಮನ ಹರಿಸಲಿ.

 

ಯುನೆಸ್ಕೋ ೧೯೯೧ರಲ್ಲಿ ಭೂವಿಜ್ಞಾನ ಪರಂಪರೆಯ ಮೇಲೆ ಒಂದು ಉಪನ್ಯಾಸ ಮಾಲೆಯನ್ನು ಏರ್ಪಡಿಸಿತು. ಅದರಲ್ಲಿ ಭೂಮಿ ತಾಯಿಯು ವಿಶ್ವದಾದ್ಯಂತ ಒಂದೇ ತೆರನಾದ ಪರಂಪರೆಯನ್ನು ಹೊಂದಿದ್ದಾಳೆ ಎಂಬ ವಿಚಾರವನ್ನು ಒತ್ತಿ ಹೇಳಲಾಯಿತು. ಹಾಗೆಯೇ ಪುರಾತನ ಪರಂಪರೆಯ ಮೌಲ್ಯಗಳನ್ನು ಪರಿಗಣಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇದರಲ್ಲಿ ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಯನ್ನು ಕುರಿತು ಹೇಳುವ ೪೮ಎ ಮತ್ತು ೫೧ಎ ಕಟ್ಟುಪಾಡುಗಳನ್ನು  ಸೇರಿಸಲಾಯಿತು. ಸಾರ್ವಜನಿಕ ವಿಶ್ವಾಸಕ್ಕೆ ಸಂಬAಧಿಸಿದ ಈ ಕಟ್ಟುಪಾಡುಗಳು, ಎಲ್ಲಾ  ಸ್ವಾಭಾವಿಕ ಸಂಪನ್ಮೂಲಗಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ ಎಂದು ಹೇಳುತ್ತವೆ. ಮತ್ತು ಅದನ್ನು ಸರ್ಕಾರದ ಸರ್ಕಾರದ  ಪ್ರಥಮ ಆದ್ಯತೆಯಾಗಿಸುತ್ತವೆ. ಮ್ಯಾಗ್ನಾ ಕಾರ್ಟದ ೫೧ಎ(ಜಿ)ಯಲ್ಲಿ ಸಕಲ ಜೀವರಾಶಿಯ ಮೇಲೆ ದಯೆ ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ. ತಮ್ಮ ಲಾಭಕ್ಕೋಸ್ಕರ ಬೆಟ್ಟಗುಡ್ಡಗಳ ಒಡೆಯುವ, ಅರಣ್ಯ ನಾಶ ಮಾಡುವ ಕಂಪನಿಗಳಿಗೆ ಇದನ್ನು ಖಡ್ಡಾಯವಾಗಿ ಪಾಲಿಸಲು ಹೇಳಲಾಗಿದೆ. ಕೇವಲ ಹಣದ ಆಸೆಗಾಗಿ ಈ ಅಮಾನುಷ ಕೃತ್ಯ ಎಸಗುವುದನ್ನು ಜವಾಬ್ದಾರಿಯುತ ಪ್ರಜೆಗಳು ನೋಡಿಯೂ ನೋಡದಂತೆ ಇರಕೂಡದು. ಭಾರತದ ಸಂವಿಧಾನದ ೪ಎ ಭಾಗದಲ್ಲಿ ಬರುವ ೫೧ಎ(ಜಿ) ಮೂಲಭೂತ ಕರ್ತವ್ಯಕ್ಕೆ ಸಂಬAಧಿಸಿದೆ. ೫೧ಎ(ಜಿ) ಕಲಂ ಅಡಿಯಲ್ಲಿ ಕರ್ನಾಟಕ ರಾಜ್ಯದ ವಿಶ್ವ ಪಾರಂಪರಿಕಾ ಮೌಲ್ಯ ಹೊಂದಿದ ತಾಣಗಳನ್ನು ಸಂರಕ್ಷಿಸುವುದು, ಯೋಜನೆಗಳನ್ನು ತರುವ ಮತ್ತು ಅದರ ಲಾಭ ಪಡೆಯುವವರ ಕರ್ತವ್ಯವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಹೋಗಲು ೧೯೮೦ರಲ್ಲಿ ಪರಿಸರ ಮಂತ್ರಾಲಯ ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಹೊರತಂದಿತು.

 

‘ಪ್ರಪಂಚದಾದ್ಯAತ ೫೮,೪೯೭ ಪ್ರಬೇಧಗಳ ಮರಗಳಲ್ಲಿ ಶೇಕಡ ೩೦ರಿಂದ ೫೦ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ’ ೨೦೧೪ರ  ಜಾಗತಿಕ ಸಮೀಕ್ಷೆ ಎಂದು ಹೇಳುತ್ತದೆ. ಹೀಗಿರುವಾಗ ಸಂಡೂರು ಪ್ರದೇಶದ ಅನನ್ಯ ಜೀವರಾಶಿಯ ಸೃಷ್ಟಿಗೆ ಕಾರಣವಾದ ದೇವಗಿರಿ ಮತ್ತು ಸ್ವಾಮಿಮಲೈ ಗುಡ್ಡಗಳ ಸ್ವಾಭಾವಿಕ ಕಾಡುಗಳ ನಾಶದಿಂದ ಈಗ ಅದೆಷ್ಟು ಪ್ರಬೇಧದ ಮರಗಳು, ಲೆಕ್ಕವಿಲ್ಲದಷ್ಟು ಅಮೂಲ್ಯ ಗಿಡಮೂಲಿಕೆಗಳು ಮತ್ತು ಸೂಕ್ಷ÷್ಮ ಜೀವಿಗಳು ನಾಶವಾಗುತ್ತವೆ ಎಂಬುದರ ಪೂರ್ವಭಾವಿ ಸಮೀಕ್ಷೆ ಮಾಡಬೇಕು. ಇಲ್ಲಿ ಉತ್ಪತ್ತಿಯಾಗುವ ಆಮ್ಲಜನಕ, ವೃಕ್ಷರಾಶಿಗಳು ಹೀರಿಕೊಳ್ಳುವ ಇಂಗಾಲದ ಡೈ-ಆಕ್ಸೆöÊಡ್‌ಗಳ ಅಗಾಧತೆ; ಕಾರ್ಬನ್ ಸಿಂಕ್ ಮೂಲಕ ಇವು ಸಲ್ಲಿಸುವ ಪರಿಸರ ಸೇವೆಗೆ ಬೆಲೆ ಕಟ್ಟುವ ಕೆಲಸ ಆಗಬೇಕು. ಇಲ್ಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಪುರಾತನ ಕಾಡನ್ನು ಕಡಿದದ್ದದ ಪರಿಣಾಮವಾಗಿ ಉಂಟಾದ ಹವಾಮಾನ ಬದಲಾವಣೆಯ ಸಮೀಕ್ಷೆಯೂ  ಅಗತ್ಯವಾಗಿ ಆಗಬೇಕು.

ಜಲಾಶಯಗಳು ಮತ್ತು ರಸ್ತೆ ಹೆದ್ದಾರಿಗಳಿಗೆ ಕಾಡು ಕಡಿಯುವುದು ತುಂಬಾ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿಯೇ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಪೂರೈಕೆ ಮಾಡಲು ನಾವು ನಮ್ಮ ಅತ್ಯಮೂಲ್ಯ ಪ್ರಬೇಧದ ಸಸ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಈಗ ಯೋಜಿಸಿರುವ ಗಣಿಗಾರಿಕೆಯಲ್ಲಿ ನೂರಾರು ಸ್ಥಳೀಯ ಅಮೂಲ್ಯ ಪ್ರಬೇಧಗಳು ನಿರ್ನಾಮವಾಗುತ್ತವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೋವಿಡ್ ಸಮಯದಲ್ಲಿ ನಿಮಿಷಕ್ಕೆ ಒಂದು ಲಕ್ಷ ಲೀಟರ್ ಆಮ್ಲಜನಕ ಉತ್ಪತ್ತಿ ಮಾಡಲು ೧೯೦ ಆಮ್ಲಜನಕ ಪೂರೈಕೆ ಕೇಂದ್ರಗಳನ್ನು ನಮ್ಮ ಸರ್ಕಾರ ಸ್ಥಾಪಿಸಿತು. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಆಮ್ಲಜನಕವನ್ನು ಈ ಲೆಕ್ಕದಲ್ಲಿ ಹೇಳಬಹುದೇ?

 

ಬ್ಯಾಕ್ಟೀರಿಯಾ, ಶಿಲೀಂದ್ರ ಮತ್ತು ವೈರಸ್‌ಗಳು ಸೂಕ್ಷ÷್ಮಜೀವಿ ಬಯೋಮ್‌ನಲ್ಲಿ ಪ್ರಮುಖವಾಗಿವೆ. ದೈತ್ಯ ಯಂತ್ರಗಳಿAದ ಅದಿರನ್ನು ಬಾಚಿಕೊಳ್ಳುವ ದಾವಂತದಲ್ಲಿ, ಜಾಗತಿಕ ತಾಪ ತಡೆಯುವಲ್ಲಿ ದೊಡ್ಡ ಪಾತ್ರ ಹೊಂದಿರುವ ಸೂಕ್ಷ÷್ಮಜೀವಿಗಳ ಬೃಹತ್ ಸಮುದಾಯವನ್ನು ಹೊಸಗಿಹಾಕಿಬಿಟ್ಟಮೇಲೆ ಇನ್ನೆಂದಿಗೂ ಮರಳಿ ಜೀವಕೊಡಲಾಗದು. ಕಳೆದ ನಾಲ್ಕು ದಶಕಗಳ ಎಗ್ಗಿಲ್ಲದ ವಿದ್ವಂಸಕ ಕೃತ್ಯಕ್ಕೆ ಒಳಗಾಗಿರುವ ಸಂಡೂರು ಭೂಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು ಸೂಕ್ಷ÷್ಮಜೀವಿಗಳಿಂದ ಮಾತ್ರ ಸಾಧ್ಯ.

ಇಂತಹ ಸೂಕ್ಷ÷್ಮಜೀವಿಗಳನ್ನು ದೇವಗಿರಿ ಮತ್ತು ಸ್ವಾಮಿಮಲೈ ಕಾಡುಗಳು ಪೋಷಿಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

 

ಮರಗಳು ಫೆರೆಮೋನ್ ರಾಸಾಯನಿಕವನ್ನು ಸ್ರವಿಸುವ ಮೂಲಕ ತಮ್ಮ ತಮ್ಮ ನಡುವೆ ಪರಿಣಾಮಕಾರಿಯಾಗಿ ಸಂವಹಿಸುತ್ತವೆ. ಇವು ಪರಾಗಸ್ಪರ್ಶಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಮರಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲಾರವು ಆದರೆ ಕಣ್ಣಿಗೆ ಕಾಣದ ಈ ಸಂವಹನ ಸಂಬAಧಗಳು ಭೂಮಿ ತಾಯಿ ಗರ್ಭದಲ್ಲಿಯೇ ವಿಕಸನಗೊಂಡಿವೆ. ಭಯಂಕರ ಕೀಟ ಬಾಧೆ ಮತ್ತು ವೈರಸ್ ಮಾರಿಯಂತಹ ಮಾರಕ  ರೋಗಗಳ ದಾಳಿಯನ್ನು ಮನುಷ್ಯ ತನ್ನೆಲ್ಲಾ ಉಪಕರಣಗಳನ್ನು ಬಳಸಿ ಅರ್ಥ ಮಾಡಿಕೊಳ್ಳುವ ಎಷ್ಟೋ ಮೊದಲೇ ಮರಗಳು ಗ್ರಹಿಸುತ್ತವೆ. ಅವುಗಳನ್ನು ಹಿಮ್ಮೆಟ್ಟಿಸುವ ರಾಸಾಯನಿಕಗಳನ್ನು ತಕ್ಷಣ ಉತ್ಪತ್ತಿ ಮಾಡಿ ಪರಿಸರ ಮತ್ತು ಜೀವಕೋಟಿಯನ್ನು ರಕ್ಷಿಸುತ್ತವೆ. ಇಂತಹ ಅಗೋಚರ ಮಾಹಿತಿ ವ್ಯವಸ್ಥೆಯನ್ನು ಶಾಶ್ವತವಾಗಿ ಅಳಿಸಿಹಾಕುವ ಈ ಯೋಜನೆಯ ಭಯಾನಕತೆಯ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು.

 

ವಿಶ್ವದ ಪುರಾತನ ಭೂ-ಜೀವ ಪರಂಪರಾ ತಾಣಗಳನ್ನು ರಕ್ಷಿಸಲು ೨೦೧೯ರಲ್ಲಿ ಹೆಸರಾಂತ ಭೂ ವಿಜ್ಞಾನಿಗಳು ಭಾರತದ ಪ್ರಧಾನಮಂತ್ರಿಗಳಿಗೆ ರಾಷ್ಟೀಯ ಭೂ-ಜಲ-ಜೀವ ಸಂರಕ್ಷಣಾ ನೀತಿಯನ್ನು ತರಬೇಕೆಂದು ಮನವಿ ಮಾಡಿಕೊಂಡಿದ್ದರು ಮತ್ತು ಇದನ್ನು ರಾಷ್ಟೀಯ ಸ್ವಾಯತ್ತ ಸಂಸ್ಥೆಯ ಅಡಿಯಲ್ಲಿ ತರಬೇಕು ಎಂದು ಕೇಳಿಕೊಂಡಿದ್ದರು.

ಜೀವ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳನ್ನು ಮತ್ತು ಅವುಗಳನ್ನು ಕುರಿತ ಅಂತರಾಷ್ಟಿçÃಯ ನೀತಿಗಳ ಬಗ್ಗೆ ಅನೇಕ ವಿಜ್ಞಾನ ಪತ್ರಿಕೆಗಳು ಒತ್ತು ಕೊಟ್ಟು ಬರೆಯುತ್ತಲೇ ಇರುತ್ತವೆ.  ಸ್ವಾಭಾವಿಕ ಪರಿಸರ ವ್ಯವಸ್ಥೆಗಳ ಅಗಾಧ ಸೇವೆಯ ಪಾತ್ರವನ್ನು ಎತ್ತಿ ಹೇಳುತ್ತಲಿವೆ. ಹೀಗಾಗಿ ಆಹಾರ, ಕಾಡು, ಆಮ್ಲಜನಕದ ಗುಣಮಟ್ಟ, ಗಿಡಮೂಲಿಕೆüಯುಕ್ತ ಕುಡಿಯುವ ನೀರಿನ ಉತ್ಪಾದನೆ ಇವುಗಳಲ್ಲಿ ಸ್ವಾಭಾವಿಕ ಅರಣ್ಯದ ಪಾತ್ರವನ್ನು ರ‍್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಾನವ ಸೃಷ್ಠಿಯ ರಾಸಾಯನಿಕಗಳು ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾÀರಣೀಭೂತವಾದ ಅಪರಾಧಿಗಳು. ಇವೇ ಇಂದು ಬಹುತೇಕ ರೋಗರುಜಿನಗಳಿಗೆ ಕಾರಣವಾಗಿದ್ದು ದೇಶದ ಮೇಲೆ ದೊಡ್ಡ ಹೊರೆಯಾಗಿದೆ. ಆದ್ದರಿಂದಲೇ ನಾವು ಡೀಪ್ ಇಕೊಲಜಿ ಮತ್ತು ಜೀವ ಮತ್ತು ಜೀವ ಕೋಟಿಯ ಪಾತ್ರವನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತಿನ ಅಗತ್ಯವಿದೆ. ಉದಾಹರಣೆಗೆ, ಪರಿಸರ-ಶರೀರ ಶಾಸ್ತçವು ಸ್ವಾಭಾವಿಕ ಪರಿಸರ ವ್ಯವಸ್ಥೆಯ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಾಭಾವಿಕ ಅರಣ್ಯ ಸಮುದಾಯವು, ಅರಣ್ಯ ಪರಿಸರ ವ್ಯವಸ್ಥೆಯ ಮೂಲಕ ಎಲ್ಲಾ ರೀತಿಯ ರೋಗಗಳು, ಕೀಟಗಳು ಮತ್ತು ರಾಸಾಯನಿಕಗಳ ಅಪಾಯಗಳನ್ನು ಗ್ರಹಿಸಿ ತಕ್ಷಣ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದಲೇ ಸಂಡೂರಿನ ಅಕ್ಷತ ಕಾಡನ್ನು ಉಳಿಸಿಕೊಳ್ಳುವುದು ಪರಮ ಕರ್ತವ್ಯವಾಗುತ್ತದೆ.

 

ಹಾಗೆಯೇ ತ್ಯಾಜ್ಯವನ್ನು ತುಂಬಿದ ಪ್ರದೇಶವನ್ನು ಕೂಡ ಪುನರುಜ್ಜೀವನ ಗೊಳಿಸಿ ಸ್ವಾಭಾವಿಕ ಚರಂಡಿ ವ್ಯವಸ್ಥೆಯನ್ನು ಮರುಸ್ಥಾಪನೆಗೊಳಿಸಿ ನಾಜೂಕಾದ ಪರಿಸರ ವ್ಯವಸ್ಥೆಯನ್ನು ಕಾಪಾಡಬೇಕು. ಸೂಕ್ಷ÷್ಮ ಜೀವಿಗಳ ಅಗೋಚರ ಪ್ರಪಂಚ ಮತ್ತು ಶಿಲೀಂದ್ರ ಮತ್ತು ಇತರ ಸೂಕ್ಷ÷್ಮ ಜೀವಿಗಳನ್ನು ಅಭಿವೃದ್ಧಿಗೊಳಿಸುವುದು ಸಾಧ್ಯ. ಇದಕ್ಕೆ ಉತ್ತಮ ಉದಾಹರಣೆ, ಬೆಂಗಳೂರಿನ ಬನ್ನೇರಘಟ್ಟ ರಸ್ತೆಯ ಕಲ್ಕೆರೆ ಅರಣ್ಯ. ಇಲ್ಲಿ ನೀಲಗಿರಿ ಏಕಬೆಳೆ ಪ್ಲಾಂಟೇಷನ್ ತೆಗೆದು ಇಲಾಖೆಯ ಮೂಲಕ ಸ್ವಾಭಾವಿಕ ಉಷ್ಣವಲಯ ಕಾಡನ್ನು ನಿರ್ಮಾಣ ಮಾಡಿದ್ದೇವೆ. ಹಿಂದೆಯೇ ಹೇಳಿದಂತೆ ೧೯೮೧ರಿಂದ ೨೦೧೯ರವರೆಗೆ ಎಗ್ಗಿಲ್ಲದೆ ನಾಶ ಮಾಡಲಾಗಿರುವ ಸಂಡೂರು ಭೂಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು ಸಹಾಯವಾಗುವಂಥ ಸೂಕ್ಷ÷್ಮ ಜೀವಿಗಳ ಲೋಕವನ್ನು ದೇವಗಿರಿ ಗುಡ್ಡ ಮತ್ತು ಸ್ವಾಮಿಮಲೈ ಸ್ವಾಭಾವಿಕ ಕಾಡುಗಳು ಪೋಷಿಸಬಲ್ಲುವುದು. ಇಂದು ತಯಾರಾಗುತ್ತಿರುವ ೧೬೦ ಹೊಸಾ ಬ್ಯಾಕ್ಟೀರಿಯಾ ಪ್ರತಿರೋಧಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ವಾಭಾವಿಕ ಪರಿಸರ ವ್ಯವಸ್ಥೆಯ ಶಿಲೀಂದ್ರದ ಸಹಾಯದಿಂದ ಆಗುತ್ತಿದೆ. ಆದ್ದರಿಂದ ಪುರಾತನ ಅರಣ್ಯ ಪರಿಸರ ವ್ಯವಸ್ಥೆಗಳು ಅನೇಕ ಬ್ಯಾಕ್ಟೀರಿಯಾ ಪ್ರತಿರೋಧಕಗಳು ಮತ್ತು ಇತರ ಉತ್ಪನ್ನಗಳನ್ನು ಸೃಷ್ಟಿ ಮಾಡಲು ಸ್ವಾಭಾವಿಕ ಪ್ರಯೋಗಶಾಲೆಗಳಾಗಿ ಕೆಲಸ ಮಾಡುತ್ತವೆ. ಈ ಉತ್ಪನ್ನಗಳು ಭೂತಾಯಿಯ ಗರ್ಭದಲ್ಲಿ ಎಡಬಿಡದೆ ಉತ್ಪತ್ತಿಯಾಗುವ ಮೊಲಿಕ್ಯುಲ್‌ಗಳಿಂದ ಹುಟ್ಟಿ ಬರುತ್ತವೆ. ಅಗೋಚರ ಪರಿಸರ ಪ್ರಪಂಚದಲ್ಲಿ ಅಡಗಿರುವ ಶಿಲೀಂದ್ರ ಮತ್ತು ಇತರ ಸೂಕ್ಷ÷್ಮ ಜೀವಿಗಳ ಸಂಶ್ಲೇಷÀಣೆಯಿAದ ಮಾಡಲಾದ ಸಹಜ ಉತ್ಪನ್ನಗಳು ಅನೇಕ ದೀರ್ಘ ಕಾಲಿಕ ರೋಗಗಳ ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಕೆಯಾಗಿವೆ. ಶೇಕಡ ೫೦ಕ್ಕೂ ಹೆಚ್ಚು ಉಷ್ಣವಲಯದ ಕಾಡುಗಳ ಮರಗಳು ತಮ್ಮಲ್ಲೇ ಸಹ- ವಿಕಸನಗೊಂಡ ನಿರ್ದಿಷ್ಠ ಶಿಲೀಂದ್ರಗಳನ್ನು ಹೊಂದಿವೆ. ಇವು ಬಿಲಿಯಗಟ್ಟಲೆ ವರ್ಷಗಳಿಂದ ವೈರಸ್, ಕೀಟಬಾಧೆಗಳಿಂದ ಭೂಮಿ ತಾಯಿಗೆ ಆಗುವ ಗಾಯವನ್ನು ವಾಸಿಮಾಡುವಂತಹ ಮೊಲಿಕ್ಯುಲ್‌ಗಳನ್ನು ತಯಾರು ಮಾಡುತ್ತಾ ಬಂದಿವೆ. ಭೂಮಿ ತಾಯಿಯ ಮೇಲಿನ ಜೀವ ಮತ್ತು ಜೀವಕೋಟಿಯನ್ನು ಕಾಪಾಡುತ್ತಾ ಬಂದಿವೆ.

 

ಬಂಡೆಗಳನ್ನು ತಿಂದು ಅದನ್ನು ಮಣ್ಣಾಗಿಸಿ ಕೊಡುತ್ತಾ ಬಂದಿರುವ ಮರಗಳಿಗೆ ಮಲಿನಕಾರಕಗಳನ್ನು ಮತ್ತು ಇತರ ಹಾನಿಕಾರಕ  ರಾಸಾಯನಿಕಗಳನ್ನು ಜೀರ್ಣಿಸಿಕೊಳ್ಳುವ ಅಪಾರ ಶಕ್ತಿ ಇದೆ. ಸೂಕ್ಷ÷್ಮ ಜೀವಿ ಪ್ರಪಂಚಕ್ಕೆ ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ಶ್ರೀಮಂತ ಹ್ಯೂಮಸ್ ಆಗಿ ಪರಿವರ್ತಿಸುವ, ವಾತಾವರಣದ ಇಂಗಾಲದ ಡೈ-ಆಕ್ಸೆöÊಡ್ ಅನ್ನು ಸೆರೆಹಿಡಿಯುವ ಮತ್ತು ಅದನ್ನು ಮಣ್ಣಿನಲ್ಲಿ ಸ್ಥಿರೀಕರಿಸಿ ಮಣ್ಣಿನ ಫಲವತ್ತು ಹೆಚ್ಚಿಸುವ ಅಸಾಧಾರಣ ಶಕ್ತಿ ಇದೆ. ಭೂಮಿಯ ವಾತಾವರಣದ ಅತ್ಯಂತ ದೊಡ್ಡ ಕೊಡುಗೆಯೆಂದರೆ, ಅದು ಎಲ್ಲಾ ಜೀವಿಗಳ ಮತ್ತು ಮಾನವರ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅಕ್ಷತ ಕಾಡನ್ನು ನಾಶಮಾಡಿ ಭೂಮಿಯನ್ನು ಬತ್ತಲೆಗೊಳಿಸುವುದರಿಂದ; ಬ್ಯಾಕ್ಟೀರಿಯಾ, ಶಿಲೀಂದ್ರ, ಪಾಚಿ ಮತ್ತು ಸಣ್ಣ ಸಣ್ಣ ಜೀವ ಪುಂಜಗಳು ಎಲ್ಲವನ್ನೂ ನಾಶಗೊಳಿಸುವುದರಿಂದ ಜೀವ ಸಂಕುಲವೇ ವಿನಾಶದ ಅಂಚಿಕೆ ಸರಿದು ಅಳಿದುಹೋಗುತ್ತದೆ. ಹೀಗಾಗಿ  ನಾವು ಈ ಭೂಗ್ರಹದ ಮೇಲೆ ಜೀವವನ್ನು ಉಳಿಸಿ ಕಾಪಾಡಬೇಕಾದರೆ ಬಿಲಿಯಗಟ್ಟಲೆ ವರ್ಷಗಳ ಹಿಂದೆ ಆದಂತಹ ಅಳಿದುಳಿದಿರುವ  ದೇವಗಿರಿ ಮತ್ತು ಸ್ವಾಮಿಮಲೈ ಅರಣ್ಯ ಪ್ರದೇಶದ ಹಸಿರು ತೇಪೆಗಳನ್ನಾದರೂ ರಕ್ಷಿಸುವ ಕೆಲಸ ಮಾಡಬೇಕಾಗಿದೆ.

ಅ. ನಾ. ಯಲ್ಲಪ್ಪರೆಡ್ಡಿ