ನಂದಿ ಬೆಟ್ಟದ ಸುತ್ತಲಿನ ಜೀವವೈವಿಧ್ಯ ಉಳಿಸಲು ಎಲ್.ಸಿ.ನಾಗರಾಜ್
ಬರೆದಿರುವ ಟಿಪ್ಪಣಿಗಳು
04-10-22
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಹಚ್ಚಹಸಿರಾಗಿದ್ದ ಬಡಗಣದ ಮಗ್ಗುಲಿನಲ್ಲಿ ಗೌರಿಬಿದನೂರು ತಾಲೂಕಿನ ಕಡೆಗೆ ಹರಿಯುವ ಪಿನಾಕಿನಿ ತೊರೆ ಮತ್ತು ಶಿಡ್ಲಘಟ್ಟದ ಮೂಲಕ ಬಾಗೇಪಲ್ಲಿ ಹತ್ತಿರದ ಪರಗೋಡು ಜಲಾಶಯದ ಕಡೆಗೆ ಚಿತ್ರಾವತಿ ತೊರೆಗಳು ಹರಿಯುತ್ತಿರುವ ಪ್ರದೇಶದಲ್ಲಿ ಉಂಟಾಗುತ್ತಿರುವ ಭೌಗೋಳಿಕ ಒತ್ತಡ (Demographic pressure)ದ ಆರಂಭಿಕ ಹಂತದ ಚಿತ್ರಣ ಹೀಗಿದೆ.
ಈ ಹಿಂದೆ ಕೊಯಮತ್ತೂರಿನ ಪಡುವಣದಲ್ಲಿ ನೊಯ್ಯಾಲ್ ತೊರೆಯ ಉಗಮಸ್ಥಾನವಾಗಿದ್ದ ವೆಲಿಯಾಂಗಿರಿಯಲ್ಲೂ ಹೀಗೇ ಸಣ್ಣ ಪ್ರಮಾಣದಲ್ಲಿ ಶುರುವಾದ ಭೌಗೋಳಿಕ ಒತ್ತಡ ಕಾಲಕಳೆದಂತೆ ವಿಸ್ತರಿಸಿಕೊಳ್ಳತೊಡಗಿ ಕಾಡಿನ ಕಲ್ಲುಪಾಚಿ, ಸೀಗೆಕಾಯಿ ಮುಂತಾದ ಮರಮುಟ್ಟೇತರ ಅರಣ್ಯ ಉತ್ಪನ್ನಗಳನ್ನೇ ನೆಚ್ಚಿ ಜೀವನಯಾಪನೆ ಮಾಡುತ್ತಿದ್ದ ಇರುಳ ಮೂಲನಿವಾಸಿ ಸಮುದಾಯದ ಕಾಲುದಾರಿಗಳೇ ಮುಚ್ಚಿಹೋದವು .
ಭಾರತದ ಜೀವದಾಯಿನಿಯಾಗಿರುವ ಪಶ್ಚಿಮ ಘಟ್ಟಗಳ ಸುಸೂಕ್ಷ್ಮ ಪರಿಸರ ವ್ಯವಸ್ಥೆ ವೆಲಿಯಾಂಗಿರಿ ಬೆಟ್ಟದ ತಪ್ಪಲಿನಲ್ಲಿ ಸದ್ಗುರು ಜಗ್ಗಿ ವಾಸುದೇವರು ಇದ್ದ ಕಾನೂನುಗಳನ್ನು ಹ್ಯಾಗೆ ಬದಿಗೆ ಸರಿಸಿಕೊಂಡು ಇಷ್ಟೆಲ್ಲವನ್ನೂ ಕಟ್ಟಿದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಸದ್ಗುರು ಜಗ್ಗಿ ವಾಸುದೇವರ ಈ ಎಲ್ಲ ಕಟ್ಟುವ ವಿನಾಶಗಳು ಈಗ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ಅನಂತಪುರ ಜಿಲ್ಲೆಗಳಿಗೆ ಮಳೆ ಸುರಿಸುವ ನಂದಿಬೆಟ್ಟದ ಮಳೆಸಾಲುಗಳಿಗೇ ವಕ್ಕರಿಸಿಕೊಂಡಿದೆ ; ಇಲ್ಲಿನ ನಿವಾಸಿ ಜನಸಮುದಾಯಗಳ ಜೀವನಯಾಪನೆಯ ದಾರಿಗಳೂ ಮುಚ್ಚಿಹೋಗಲಿರುವ ಕಾಲಕ್ಕೆ ಎದುರಾಗುತ್ತಿದ್ದೇವೆ.
ವೆಲಿಯಾಂಗಿರಿ ತಪ್ಪಲಿನಲ್ಲಿ ಕಟ್ಟಲಾಗಿದ್ದ ಇಶಾ ಫೌಂಡೇಷನ್ನಿನ ಯೋಗಶಾಲೆಯನ್ನು ದಿಗ್ಬಂಧಿಸಿರುವ ತಮಿಳುನಾಡು ಸರ್ಕಾರ ಈ ಎಲ್ಲ ಕಟ್ಟಡಗಳನ್ನು ಉರುಳಿಸಿ ಮೊದಲಿನ ಸಹಜ ಸ್ಥಿತಿಗೆ ಮರಳಿಸಬೇಕೆಂದು ಇಶಾ ಫೌಂಡೇಷನ್ನಿಗೆ ಅಪ್ಪಣೆ ಮಾಡಿದೆ.
ನಂದಿಬೆಟ್ಟದಲ್ಲಿ ನಾಳೆ ಅಥವಾ ನಾಳಿದ್ದು, ಆದಿಯೋಗಿಯ 112 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಮುಂಚೆ ನಡೆಯಲಿರುವ ನಾಗಪ್ರತಿಷ್ಠೆಯ ನಂತರ, ವೆಲಿಯಾಂಗಿರಿ ತಪ್ಪಲಿನಲ್ಲಿ ಈಗಾಗಲೇ ನಿಲಹಾಕಿರುವ ಆದಿಯೋಗಿ ಪ್ರತಿಮೆಯನ್ನೇ ಬಿಚ್ಚಿ ನಂದಿಬೆಟ್ಟಕ್ಕೆ ತರಲಾಗುತ್ತದೆ; ಅತ್ತ ವೆಲಿಯಾಂಗಿರಿ ತಪ್ಪಲಿನಿಂದ ಎತ್ತಂಗಡಿಯಾಗುವ ಪ್ರತಿಮೆಯನ್ನು ನಂದಿಬೆಟ್ಟದ ಬಡಗಣದಲ್ಲಿ ನಿಲಹಾಕಲಾಗುತ್ತದೆ.
ಈಗ ಇರುವ ಪ್ರಶ್ನೆ: ತಮ್ಮ ನೈಸರ್ಗಿಕ ದಾರಿಗಳು ಮತ್ತು ಜೀವನಯಾಪನೆಯ ಮಾರ್ಗಗಳನ್ನು ವಿವಿಧ ಹಂತಗಳಲ್ಲಿ ಮುಚ್ಚಿಹಾಕಲಿರುವ ಈ ವಿನಾಶವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಜನಸಮುದಾಯಗಳು ಒಳಗೆ ಬಿಟ್ಟುಕೊಳ್ಳುತ್ತಾರೊ ಅಥವಾ ಇದಕ್ಕೆ ಪ್ರತಿರೋಧ ಒಡ್ಡುತ್ತಾರೊ ಎಂಬುದರ ಮೇಲೆ ನಂದಿಬೆಟ್ಟದಿಂದ ಉಗಮಿಸುವ ಚಿತ್ರಾವತಿ ಮತ್ತು ಪಿನಾಕಿನಿ ತೊರೆಗಳ ಮುಂದಿನ ಹರಿವಿನ ದಿನಗಳು ನಿರ್ಣಾಯಕ ಘಟ್ಟ ತಲುಪುತ್ತಿವೆ.
ಚಿತ್ರಗಳು : 1.ನಂದಿಬೆಟ್ಟದ ಬಡಗಣ ತಪ್ಪಲು
- ತಮಿಳುನಾಡಿನ ವೆಲಿಯಾಂಗಿರಿ
29-09-22
ಚಿಕ್ಕಬಳ್ಳಾಪುರ ಜಿಲ್ಲೆಯ ಜನಸಮುದಾಯದ ಗಮನಕ್ಕೆ:
ನಂದಿಬೆಟ್ಟದ ಉತ್ತರ ದಿಕ್ಕಿಗೆ ಇರುವ ಚಿಕ್ಕಬಳ್ಲಾಪುರ ಜಿಲ್ಲೆಯಲ್ಲಿ ನಂದಿ ಬೆಟ್ಟದ ತಪ್ಪಲಿನಿಂದ ಆರಂಭವಾಗುವ ಹಳ್ಳ, ಹೊಳೆಗಳೆಲ್ಲವೂ ಕೂಡಾವಳಿಯಾಗಿ ಚಿತ್ರಾವತಿ ತೊರೆಯಾಗಿ ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಕರ್ನಾಟಕ ಸರ್ಕಾರವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಟ್ಟಿರುವ ‘ ಪರಗೋಡು’ ಜಲಾಶಯದ ಕಡೆಗೆ ಸಾಗುವ ಮಳೆ ನೀರ ಹರಿವಿನ ಉಪಗ್ರಹ ಚಿತ್ರ ಇದು.
ನಂದಿಬೆಟ್ಟದ ವಿವಿಧ ಕಿಬ್ಬೆ ಕಣಿವೆಗಳಿಂದ ಹರಿದು ಬರುವ ಈ ಜಲಕಾಲುವೆಗಳು ನೀಲಿ ಬಣ್ಣದಿಂದ ದಟ್ಟವಾಗಿರುವ ಪ್ರದೇಶದಲ್ಲೇ ಇರುವ ಹನುಮಂತಪುರ ಗ್ರಾಮದ ಹತ್ತಿರವೇ ನಮ್ಮ ಆಧ್ಯಾತ್ಮಿಕ ಸದ್ಗುರು 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆ ಅದಕ್ಕೆ ಲಗತ್ತಾಗಿ ಯೋಗಶಾಲೆ ಮತ್ತು ಈ ಯೋಗಶಾಲೆಯಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಸೇರುವಂತೆ ರಸ್ತೆ ನಿರ್ಮಾಣ ಮಾಡಲು ಸ್ಕೆಚ್ಚು ಹಾಕಿರುವುದು.
ನೀರಿನ ಹರಿವುಗಳ ದಟ್ಟಣೆ ಇರುವ ಈ ಪ್ರದೇಶದಲ್ಲಿ ಇಷ್ಟೆಲ್ಲವನ್ನೂ ಕಟ್ಟಲು ಮತ್ತು ಆದಿಯೋಗಿಯ ಪ್ರತಿಮೆ ಸ್ಥಾಪಿಸಲು ಸದ್ಗುರು ಜಗ್ಗಿ ವಾಸುದೇವರು ಕೃಷಿಕರಿಗೆ ಸೇರಿದ್ದ 10 ಎಕರೆ ಪ್ರದೇಶವನ್ನು ಕ್ರಯಕ್ಕೆ ಕೊಂಡಿರುವರೆಂದು ಹೇಳಲಾಗುತ್ತಿದೆ , ಈ ಹತ್ತು ಎಕರೆ ಭೂಮಿಗೆ ಹೊಂದಿಕೊಂಡಂತೆ ಬಹಳಷ್ಟು ಗೋಮಾಳ(Common land) ಇದೆಯೆಂದೂ ಹೇಳಲಾಗುತ್ತಿದೆ.
ಬೆಟ್ಟದ ಪರಿಸರ ವ್ಯವಸ್ಥೆ ಮತ್ತು ಕೃಷಿ ಪರಿಸರ ವ್ಯವಸ್ಥೆಗಳ ನಡುವಿನ ಮಳೆನೀರ ಹರಿವಿನ ಪ್ರದೇಶವನ್ನು ಪರಿಸರಾತ್ಮಕ ಹರಿವು (Ecosystem flow) ಎಂದು ಕರೆಯಲಾಗುತ್ತದೆ ; ಇವೆಲ್ಲವೂ ನೈಸರ್ಗಿಕವಾಗಿ ಮಳೆ ನೀರಿನ ಹರಿವಿಗೆ ಅನುವಾಗಿ ರೂಪುಗೊಂಡಿರುವ ಹಳ್ಳ , ಅನೇಕ ಹಳ್ಳಗಳ ಕೂಡಾವಳಿಗಳ ಪ್ರದೇಶ.
ಮಳೆನೀರಿನ ಇಂತಹ ನೈಸರ್ಗಿಕ ಹರಿವುಗಳ ಪಾತ್ರವನ್ನು ಬದಲಾಯಿಸುವುದು, ಮುಚ್ಚಿಹಾಕುವುದು ಅಥವಾ ಬೇರೆಡೆಗೆ ತಿರುಗಿಸುವುದು ತಿಪ್ಪಗೊಂಡನಹಳ್ಳಿ ಅದಿನಿಯಮ 2004 ರ ಪ್ರಕಾರ ಕಾನೂನಿನ ಉಲ್ಲಂಘನೆ ಮಾಡಿದಂತಾಗುತ್ತದೆ ಮತ್ತು ಸದ್ಗುರುಗಳು ಯೋಗಶಾಲೆಯನ್ನು ಕಟ್ಟಲು ಇಲ್ಲಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಯು No objection certificate(NOC) ಕೊಡುವುದು ಕೂಡ ಕಾನೂನಿನ ಉಲ್ಲಂಘನೆಯಾಗುತ್ತದೆ.
ಪರಗೋಡು ಜಲಾಶಯಕ್ಕೆ ಹರಿಯುವ ಇಲ್ಲಿನ ನೀರಿನ ಹರಿವು ನಡುವೆ ಸಿಗುವ ಅನೇಕ ಕೆರೆಗಳನ್ನು ತುಂಬಿಸಿದ ನಂತರವೇ ಪರಗೋಡು ಜಲಾಶಯದ ಕಡೆಗೆ ಸಾಗುತ್ತದೆ ಮತ್ತು ಇಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಈ ಪರಿಸರಾತ್ಮಕ ಹರಿವು ಮುಖ್ಯ ಪಾತ್ರ ವಹಿಸುತ್ತಿದೆ ; ಈ ನೀರ ಹರಿವಿನ ಪಾತ್ರವು ಯಾವುದೇ ರೀತಿಯಲ್ಲಿ ಮುಕ್ಕಾಗದಂತೆ ನಿಗಾ ವಹಿಸುವುದು ಹವಾಮಾನ ವೈಪರೀತ್ಯ ಕಾಲದಲ್ಲಿ ನಾವು ಮಾಡಬಹುದಾದ ಪುಟ್ಟದೊಂದು ಕರ್ತವ್ಯವಾಗಿದೆ
ಚಿತ್ರಾವತಿ ನೀರ ಹರಿವಿನ ಪಟ : ಭಾರತ ಒಕ್ಕೂಟ ಸರ್ಕಾರದ ಕೇಂದ್ರೀಯ ಅಂತರ್ಜಲ ಸಂಸ್ಥೆ (Central Ground Water Board /CGWB)
26-09-22
ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಸಮಸ್ತ ಜನಸಮುದಾಯದ ಗಮನಕ್ಕೆ :
ಭಾರತ ಒಕ್ಕೂಟ ಸರ್ಕಾರದ ‘ ಕೇಂದ್ರೀಯ ಅಂತರ್ಜಲ ಸಂಸ್ಥೆ(Central Ground Water Board) ಸಂಗ್ರಹಿಸಿ ಪ್ರಯೋಗಶಾಲೆಯಲ್ಲಿ ಪರಿಶೀಲಿಸಿದ ವಿವಿಧ ಜಿಲ್ಲೆಗಳ ಅಂತರ್ಜಲ ಮಾದರಿಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ ಸಂಗ್ರಹಿಸಿದ 689 ಮಾದರಿಗಳಲ್ಲೂ ವಿಪರೀತ ಪ್ರಮಾಣದ ‘ ಫ್ಲೋರೈಡ್’ ಇರುವುದು ಪತ್ತೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅಂತರ್ಜಲದಲ್ಲಿ ಯಾಕೆ ಫ್ಲೋರೈಡ್ ವಿಪರೀತದ ಮಟ್ಟದಲ್ಲಿದೆ ಎಂದರೆ ಬಿದ್ದ ಮಳೆನೀರು ಅಂತರ್ಜಲ ಸರುವುಗಳಿಗೆ ಇಳಿಯುವ ಪ್ರಮಾಣ ಕಡಿಮೆಯಾಗಿದೆ .
ಮತ್ತು ಈ ಹಿಂದೆ ಕೆರೆಗಳು ಸಾಸರಿನ ಆಕಾರದಲ್ಲಿ ಇದ್ದಂತಹವು ಈಗ ಸಾಸರನ್ನು ಉಲ್ಟಾ ಮಾಡಿದರೆ ಹ್ಯಾಗಿರುತ್ತದೋ ಆ ಆಕಾರಕ್ಕೆ ತಿರುಗಿಬಿಟ್ಟಿದ್ದು ಅಂತರ್ಜಲ ಮಡುಗಳಿಗೆ ಇಳಿಯಬೇಕಾಗಿದ್ದ ಮಳೆನೀರು ಆವಿಯಾಗಿ ಹೊರಟು ಹೋಗುತ್ತಿದೆ.
ಫ್ಲೋರೈಡ್ ವಿಪರೀತವಾಗಿರುವ ನೀರನ್ನು ಬೆಳೆಗಳಿಗೆ ಹಾಯಿಸಿದಾಗ ಅದು ಮಣ್ಣಿನ ಫಲವಂತಿಕೆಗೆ ಹಾನಿ ಮಾಡುತ್ತಿದ್ದು ನೀವು ಬೆಳೆಯುತ್ತಿರುವ ಮುಸುಕಿನ ಜೋಳ, ಟೊಮ್ಯಾಟೊ , ಬದನೆ, ಕೋಸು ಮತ್ತು ಇತರೆ ಬೆಳೆಗಳಲ್ಲಿ ನಾನಾ ರೀತಿಯ ರೋಗಗಳಿಗೆ ಕಾರಣವಾಗಿದೆ ಮತ್ತು ತುಂತುರು ನೀರಾವರಿಯ ಲ್ಯಾಟರಲ್ ಕೊಳವೆಗಳ ಒಳಗೆ ಸುಣ್ಣದಂಥ ಕಿಟ್ಟ ಕಟ್ಟಿಕೊಳ್ಳುತ್ತಿರುವ ಜೊತೆಗೆ ನೀರನ್ನು ಹನಿಸುವ ಡ್ರಿಪ್ಪರ್ ಮತ್ತು ಮೈಕ್ರೋಟ್ಯೂಬುಗಳ ತುದಿ ಕಟ್ಟಿಕೊಳ್ಳುತ್ತಿದೆ.
ಫ್ಲೋರೈಡ್ ವಿಪರೀತವಾಗಿ ಇರುವ ನೀರನ್ನು ಜಾನುವಾರುಗಳಿಗೆ ಕುಡಿಸಿದಾಗ ಅವುಗಳ ಆರೋಗ್ಯದ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ, ಮನುಷ್ಯರು ಇಂಥ ನೀರನ್ನು ಕುಡಿದಾಗ ಅವರ ಮೂತ್ರಪಿಂಡಗಳ ಮೇಲೆ ಎಂತಹ ಒತ್ತಡ ಬೀಳುತ್ತದೆ ಎಂಬುದನ್ನು ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಡಾಕ್ಟರುಗಳು ಮಾತ್ರ ಖಚಿತವಾಗಿ ಹೇಳಲು ಸಾಧ್ಯ.
ಫ್ಲೋರೈಡ್ ಸೇವನೆಯ ಸುರಕ್ಷಿತ ಮಟ್ಟ(Permissible Level) ಎಂಬುದೊಂದು ಇದೆ ಎಂಬ ವಾದ ಸಂದೇಹಾಸ್ಪದವಾದುದು.
24-09-22
1980-90 ರ ಕಾಲಘಟ್ಟದಲ್ಲಿ ಐದು ಬೆಟ್ಟಗಳ ಕೂಟವಾಗಿದ್ದ ನಂದಿಬೆಟ್ಟದ ನಾಲಕ್ಕೂ ಬದಿಗೆ ಜಾಲಾರ ಮರಗಳ ದಟ್ಟಣೆ ಇರುವಾಗ್ಗೆ ಮಳೆಯ ವರ್ತುಲದಲ್ಲಿ ಸಮತೂಕವಿದ್ದು ಬೆಟ್ಟದ ಎಲ್ಲ ದಿಕ್ಕುಗಳಿಗೂ ಸುರಿದು, ಎಲ್ಲ ಕಡೆಯೂ ವಿವಿಧ ಹಂತದ ಕಾಲುವೆ, ಹಳ್ಳ, ಹೊಳೆಗಳು ಹರಿದು ಸರಣಿಯ ಎಲ್ಲ ಕೆರೆಗಳೂ ತುಂಬಿ ತೂಕಲಾಡುತ್ತಿದ್ದವು ; ಮಳೆ ಒಂದು ಕಡೆಗೆ ಅತಿ, ಇನ್ನೊಂದು ಕಡೆಗೆ ಕಡಿಮೆ ಅಂತೇನೂ ಇರಲಿಲ್ಲ’
ಅಂತಾ ನಂದಿಬೆಟ್ಟದ ಪಡುವಣಕ್ಕಿರುವ ದೊಡ್ಡರಾಯಪ್ಪನಹಳ್ಳಿಯ ಹಿರಿಯ ರೈತ ಜಯರಾಮಪ್ಪನವರು ಹೇಳಿದ್ದರು. ಜಾಲಾರ ಮರಗಳು ಹೂ ಬಿಟ್ಟು ಅರಳುತ್ತಿದ್ದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಇಡೀ ಬೆಟ್ಟ ಜಾಲಾರದ ಹೂಗಳಿಂದ ಘಮಘಮಿಸುತ್ತ ಹಚ್ಚಹಸುರಿನ ಮರಗಳ ಛಾಮರದಿಂದ ತಂಪು ಹವೆ ನೀರಾವಿಯ ಮೋಡಗಳನ್ನು ತಂಪು ಮಾಡಿ ಯುಗಾದಿಯ ವರ್ಷ ತೊಡಗು ಕಳೆಯುತ್ತಲೇ ಮಿಂಚಿನ ಬಳ್ಳಿಯು ಶಾಖೋಪಶಾಖೆಯಾಗಿ ಹೀಚಿಕೊಂಡು ಆ ಮಿಂಚಿನ ಬಳ್ಳಿಯನ್ನು ಹಿಡಿದು ಮಳೆರಾಯನು ಬೆಟ್ಟದ ಮೇಲಿಳಿದು ನಾಕೂ ದಿಕ್ಕಿಗೆ ಮೊರೆವ ತೊರೆಗಳಾಗಿ ಹರಿಯುತ್ತಿದ್ದವು;ಬೆಟ್ಟದ ಎತ್ತರವು ಕಾರಣವಾಗಿ ರಭಸವಾಗಿ ಕೆಳಗಿಳಿಯುತ್ತಿದ್ದ ಝರಿ ಮತ್ತು ಧುಮ್ಮಿಕ್ಕುತ್ತಿದ್ದ ಜಲಪಾತಗಳ ದೆಸೆ ಎಲ್ಲೋ ತುಂಬಿದ ಕೆರೆಯು ಕೋಡಿಯಾಗಿ ಇನ್ನೆಲ್ಲೊ ಧುತ್ತನೆ ಕಳ್ಳ ಹರಿವು(Flash flood) ಬರುತ್ತಿದ್ದುದೂ ಇದೆ;ಆದರೆ ಎಂಥ ಕಳ್ಳತೊರೆ ಬಂದರೂ ಆರು ಕೆರೆಗಳ ನೀರ ಅಕ್ಕಳಿಸಿ ಮೂರು ಕೆರೆ ನೀರ ಮುಕ್ಕಳಿಸಿ ತುಂಬಿಟ್ಟುಕೊಳ್ಳುವ ಧಾರಣ ಶಕ್ತಿಯು, ಇಲ್ಲಿ ಬೆಟ್ಟದ ತುತ್ತ ತುದಿಯಲ್ಲಿ ಸಂಜೆಯ ಇಳಿಹೊತ್ತಿನಲ್ಲಿ ಪಡುವಣಕ್ಕೆ ಮುಖ ಮಾಡಿ ನಿಂತಾಗ ನಂದಿಬೆಟ್ಟದ ಕೊರಳಿಗೆ ತೊಡಿಸಿದ ಮುತ್ತಿನಹಾರದಂತೆ ಕಾಣುವ ಕೆರೆಸರಣಿಗಳಿಗಿತ್ತು.
ಒಂದಾನೊಂದು ಕಾಲದ ಜಲವೈಭವದ ಈ ಕಾಣ್ಕೆಯನ್ನು ಕೊಟ್ಟಿದ್ದ ಮಳೆಯ ನಾಕೂ ದಿಕ್ಕಿನ ಈ ಸಮತೂಕವು ಗತಿಸಿ ದಟ್ಟ ಮೋಡಗಳು ಈಗ್ಯಾಕೆ ಬೆಂಗಳೂರಿನ ಮೇಲೆ ಮಾತ್ರ ಸುರಿದು ನಗರವು ಮುಳುಗಿ ಹೋಗುತ್ತಿದೆ ಎಂಬ ಈ ಪ್ರಶ್ನೆಗೆ ಮಳೆ ಬೆಟ್ಟ ಸಾಲು (Hydrosphere) ಬೇರೆ , ಬೆಂಗಳೂರೇ ಬೇರೆ ಎಂಬ ಸಿದ್ದ ಚೌಕಟ್ಟಿನ ಒಳಗಿನ ಒಡಕಿನಲ್ಲೇ ಉತ್ತರ ಹುಡುಕಬೇಕಾಗಿದೆ.
ಮೊನ್ನೆಯ ಚಿಕ್ಕ ಬರಹದಲ್ಲಿ ಪ್ರಸ್ತಾಪಿಸಿದ್ದ ನಂದಿಬೆಟ್ಟದ ಸುತ್ತಲೂ ಉಂಟಾಗುತ್ತಿರುವ ಭೌಗೋಳಿಕ ಒತ್ತಡ(Demographic Pressure) ಎರಡು ಬಗೆಯವು:
- ಬರಿಗಣ್ಣಿಗೆ ಕಾಣಿಸುವ ಜಾಲಾರ ಮರಗಳ ಕಣ್ಮರೆ(tangible demographic pressure)
ಜಾಲಾರ ಮರಗಳ ಕಣ್ಮರೆಯ ಜೊತೆಯಲ್ಲೇ ಬೆಟ್ಟದ ಇಳಿಜಾರಿನಲ್ಲಿ ತೆಂಡೆ ಒಡೆದು ಬೆಳೆಯುತ್ತಿದ್ದ ನಾನಾ ರೀತಿಯ ಹುಲ್ಲು ತಳಿಗಳ ನಾಶದಿಂದ ಹಳ್ಳ ಕೊಳ್ಳಗಳಿಗೆ ಕೊಚ್ಚಿ ಬರುತ್ತಿರುವ ಮಣ್ಣಿನ ದೆಸೆ ಈ ಮೊದಲು ನಿಮ್ನಾಕಾರವಾಗಿದ್ದ(Convex shaped) ಕೆರೆಗಳು ಈಗ ಪೀನಾಕಾರವಾಗಿ(Concave shaped) ಕುರುಹುಗೆಟ್ಟಿರುವುದು.
- ಬರಿಗಣ್ಣಿಗೆ ಕಾಣಿಸದೆ ಜೀವನಯಾಪನೆಯ ದಾರಿಯಾಗಿದ್ದ ಬೇಸಾಯದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳು, (Intangible demographic pressure)
ಈ ಎರಡೂ ಒತ್ತಡಗಳು ಮನವರಿಕೆಯಾದರೆ ನಾವು ನಂದಿಬೆಟ್ಟದ ಆಸುಪಾಸಿನಲ್ಲಿ ಎಲ್ಲೂ 112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆ ಮತ್ತು ಅದಕ್ಕೆ ಆತುಕೊಂಡಂತೆ ಸದ್ಗುರು ಕಟ್ಟುತ್ತಿರುವ ಯೋಗಶಾಲೆ, ಇದಕ್ಕೆ ಆತುಕೊಂಡಂತೆ ಕಾರುಗಳ ನಿಲುಗಡೆ ಇಂತಾದ ಸಂಕೀರ್ಣ ವ್ಯವಸ್ಥೆಯನ್ನು ಯಾಕೆ ಒಲ್ಲೆವು ಎಂಬುದೂ ಗೊತ್ತಾಗುತ್ತದೆ.
ಯೋಗಶಾಲೆ ಕಟ್ಟುವುದಾದರೆ ಯೋಗ ಮಾಡಲು ಬರುವ ಮನುಷ್ಯರಿಗೆ ಶೌಚಾಲಯಗಳನ್ನು ಕಟ್ಟಬಾರದೇ , ಸದ್ಗುರುಗಳು ಕಟ್ಟಿಯೇ ಕಟ್ಟುತ್ತಾರೆ.
ಆದರೆ ಭೂಗರ್ಭಶಾಸ್ತ್ರದ ದಿಕ್ಸೂಚಿಗಳಿಗೆ(Geological standards) ಅನುಸಾರವಾಗಿ ಅಂತರ್ಜಲದ ಸರುವುಗಳು ಜೀವಂತವಾಗಿರುವ ಬೆಟ್ಟದ ತಪ್ಪಲಿನಲ್ಲಿ ವಿಪರೀತ ಶೌಚಾಲಯಗಳನ್ನು ಕಟ್ಟುವುದು ಶುದ್ಧತಪ್ಪು
20-09-22
ಸನ್ಮಾನ್ಯ ಸದ್ಗುರು ಜಗ್ಗಿ ವಾಸುದೇವ್ ಅವರೆ,
“ನಿಮ್ಮ ಪ್ರವಚನಗಳು ತುಂಬಾ ಹಿತವಾಗಿರುತ್ತವೆ” ಎಂದು ಹೇಳಿದ ಬೆಂಗಳೂರಿನ ಟೆಕ್ಕೀ ಒಬ್ಬರು 2015 ರಲ್ಲಿ ನಿಮ್ಮ ಪ್ರವಚನಗಳನ್ನು ಅವರ ಆಂಡ್ರಾಯಿಡ್ ಫೋನಿನಲ್ಲಿ ನನಗೆ ತೋರಿಸಿದ್ದರು, ಅಂದಿನಿಂದ ನಿಮ್ಮನ್ನು ಸದ್ಗುರು ಎಂದೇ ತಿಳಿದಿದ್ದೇನೆ. ಕೆಲವು ದಿನಗಳ ಹಿಂದೆ ನೀವು ಹುರುಳಿಕಾಳು ಉತ್ತಮ ಆಹಾರ ಎಂದು ನಿಮ್ಮೆದುರಿಗೆ ಇದ್ದ ಮಹಿಳೆಗೆ ಹೇಳುತ್ತಿದ್ದನ್ನು ಕೇಳಿ ನೀವು ನನ್ನ ಪಾಲಿಗೆ ಸದ್ಗುರುವೇ ಆದಿರಿ. ನಮ್ಮ ಕುಗ್ರಾಮದಲ್ಲಿ ಈ ಹುರುಳಿಕಾಳಿನಿಂದ ತಯಾರಿಸಿದ ಕಟ್ಟು ಸಾರಿನ ಬಗ್ಗೆ ಮಹಿಳೆಯರ ನಡುವೆ ‘ ನನ್ನ ಗಂಡನಿಗೆ ಹುರುಳಿ ಕಟ್ಟು ಎಂದರೆ ಅದೇ ಗುರು’ ಎಂಬ ಮಾತಿದೆ.
ಸದ್ಗುರುಗಳೇ ಈಗ ವಿಷಯಕ್ಕೆ ಬರುತ್ತೇನೆ:
ತಾವು ಮಣ್ಣು ಉಳಿಸಿ ಅಭಿಯಾನಕ್ಕಾಗಿ ಯೂರೋಪಿನಾದ್ಯಂತ 3000 ಕಿಮೀನಷ್ಟು ದೀರ್ಘ ಮೋಟಾರು ಸೈಕಲ್ ಓಡಿಸುತ್ತಿರುವಾಗಲೇ ರಷ್ಯಾ ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ಪೊಟಾಶಿಯಂ ಬಾಂಬುಗಳನ್ನು ಒಂದಾದ ನಂತರ ಒಂದರಂತೆ, ನೀವು ಬೋಧಿಸಿರುವ ದೀಪಾವಳಿ ಪಟಾಕಿಯಂತೆ ಉಡಾಯಿಸಿದಾಗ ಯುಕ್ರೇನಿನ ‘ ‘ಚೆರ್ನೊಜೈಟ್’ ಎಂಬ ಫಲವತ್ತಾದ ಮಣ್ಣಿನ ಕೆನೆಪದರದಿಂದ ಸಾರಜನಕವು ಆವಿಯಾಗಿ ಹೊರಟು ಹೋದ ಬಗ್ಗೆ ಅಲ್ಲೇ ಯೂರೋಪಿನಲ್ಲೇ ಇದ್ದ ನೀವು ಒಂದಾದರು ಯುದ್ದ ವಿರೋಧಿ ಪ್ರವಚನ ಕೊಡುತ್ತೀರಿ ಎಂದು ಒಣಮರದಲ್ಲಿ ಗಿಳಿಯಂತೆ ಕಾದಿದ್ದವರ ನಿರೀಕ್ಷೆಯನ್ನೇ ಹುಸಿ ಮಾಡಿಬಿಟ್ಟಿರಿ.
ತೀವ್ರ ಬರಗಾಲದಿಂದ ಉಣಲು ಧಾನ್ಯವಿಲ್ಲದೇ ಹಸಿವು ನೀಗಿಸಿಕೊಳ್ಳಲು ಅನಿವಾರ್ಯವಾಗಿ ಕೀಟಗಳನ್ನು ಆಯ್ಕೆ ಮಾಡಿಕೊಂಡ ಆಫ್ರಿಕ ಭೂಖಂಡದ ದೇಶಗಳಿಗೂ” ನಿಮ್ಮ ಮಣ್ಣು ಉಳಿಸಿ ಮೋಟಾರು ಸೈಕಲ್ ಸವಾರಿ ವಿಸ್ತರಿಸಿಕೊಳ್ಳುವುದೆಂದು ಇದ್ದ ನಿರೀಕ್ಷೆಯನ್ನೂ ಹುಸಿ ಮಾಡಿಬಿಟ್ಟಿರಿ.
ಈ ನಿಮ್ಮ ” ಯೂರೋಪಿಯನ್ ಲಿಮಿಟೆಡ್ ” ಮಣ್ಣು ಉಳಿಸಿ ಅಭಿಯಾನ ವಾಸ್ತವಿಕವಾಗಿ ಆಗಬೇಕಿದ್ದು ತೀವ್ರ ಮಣ್ಣು ಸವಕಳಿಯಾಗಿರುವ ಆಫ್ರಿಕದ ಬಡದೇಶಗಳು ಮತ್ತು ಬದು, ಬಂಕ, ಬಚ್ಚಲುಗಳೇ ಇಲ್ಲದೆ ವಾರ್ಷಿಕ ಒಂದೂವರೆ ಅಂಗುಲದಷ್ಟು ಮಣ್ಣಿನ ಕೆನೆಪದರವು ಕೊಚ್ಚಿಹೋಗಿ ಬರಡಾಗುತ್ತಿರುವ ಬಡವರ ಸಣ್ಣ ಭೂ ಹಿಡುವಳಿಗಳಿರುವ ಭಾರತ ದೇಶದಲ್ಲಿ. ಪ್ರಸಿದ್ದ ಮಾನವಶಾಸ್ತ್ರಜ್ಞ ಕ್ಲಾಡ್ ಲೆವಿ ಸ್ಟ್ರಾಸ್ ಈ ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿಗಳಿರುವ ಭಾರತ ದೇಶವನ್ನು ” ಹರಿದ ಹಳೆಯ ಸೀರೆಗಳ ನವೆಯದ ಭಾಗಗಳ ಕತ್ತರಿಸಿ ಹೊಲಿಗೆ ಹಾಕಿದ ಕೌದಿಯಂತೆ ಕಾಣುತ್ತಿದೆ”ಎಂಬ ರೂಪಕವಾಗಿ ವರ್ಣಿಸಿರುವುದು ಬಹುಷ ಸದ್ಗುರುವಾಗಿರುವ ತಮಗೆ ತಿಳಿದಿರಬಹುದು ಮತ್ತು ಈ ರೂಪಕವು ನೆಲಮಟ್ಟದಲ್ಲಿ ಮತ್ತಷ್ಟು ವಾಸ್ತವಿಕತೆಗಳನ್ನು ಬಗೆದು ತೋರುತ್ತಿದೆ.
ಈ ನಿಮ್ಮ ಯೂರೋಪ್ ಲಿಮಿಟೆಡ್ ಮೋಟಾರು ಸೈಕಲ್ ಅಭಿಯಾನಕ್ಕೂ ಮೊದಲು, ಮೊದಲೇ ಹರಿಯುತ್ತಿದ್ದ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಮರವಳಿ ಕೃಷಿ(Agro forestry) ಮಾಡುವಂತೆ ಅಲ್ಲಿನ ಅನೇಕ ಬೇಸಾಯಗಾರರಿಗೆ ಉಪದೇಶಿಸುತ್ತಿದ್ದೀರೆಂದೂ , ಈಗಾಗಲೇ ಸಹಸ್ರಾರು ಎಕರೆ ಜಲಾನಯನ ಭೂ ಹಿಡುವಳಿಗಳಲ್ಲಿ ಗಿಡಮರಗಳು ಎದ್ದು ನಿಂತಿವೆಯೆಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಪುಕಾರುಗಳು ಏಳುತ್ತಿದ್ದನ್ನು ಗಮನಿಸುತ್ತಿದ್ದೆ, ಆದರೆ ಮರವಳಿ ಎದ್ದು ನಿಂತ ಒಂದೇ ಒಂದು ಪಟವೂ ಇಲ್ಲಿ ಸಿಗದೇ ಹೋಯಿತು. ಒಂದು ಪಕ್ಷ ನಿಮ್ಮ ಉಪದೇಶದ ಪ್ರಕಾರ ಮರವಳಿ ಬೇಸಾಯ ಮಾಡಿದ ಒಂದೇ ಒಂದು ಯಶೋಗಾತೆಯನ್ನಾದರೂ ತಾವು ಈ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಿದ್ದರೆ ಅಥವಾ ಆ ಮರವಳಿ ಕೃಷಿ ಯಶಸ್ಸಿನ ಏನು ಎತ್ತಣಗಳ ಚಿತ್ರ ಕಟ್ಟಿಕೊಡುವ ಭೂ ಹಿಡುವಳಿಗಳ GPS co ordinates ಗಳನ್ನಾದರೂ ಒದಗಿಸಿದ್ದಿದ್ದರೆ, ವಾರ್ಷಿಕವಾಗಿ ಕೇವಲ 400 ರಿಂದ 500 ಮಿ.ಲೀ ಮಳೆಯಷ್ಟೇ ಸುರಿಯುವ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಬಡ ಬೇಸಾಯಿಗಳಿಗೆ ಮರವಳಿ ಬೇಸಾಯದ ಅನುಕರಣೀಯ ಮಾದರಿಯಾದರೂ ದೊರೆತಂತಾಗುತ್ತಿತ್ತು.
ಸರ್
ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನಲ್ಲಿ ಆಗಾಗ್ಗೆ ಜೀವತಳೆದು ಹರಿಯುವ ಚಿತ್ರಾವತಿ ತೊರೆಯ ಬಗ್ಗೆ ತಮಗೆ ತಿಳಿದಿರುವುದೆಂದು ಭಾವಿಸುತ್ತೇನೆ; ಈ ಚಿತ್ರಾವತಿ ತೊರೆಯು ಜೀವ ತಳೆಯುವುದೇ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸಾಲಿನ ಐದು ಬೆಟ್ಟಗಳ ಮೇಲೆ ಸುರಿಯುವ ಮಳೆಯಿಂದ. ಇತ್ತ ಅರಬೀ ಸಮುದ್ರ ಕರಾವಳಿಯಿಂದ 300 ಕಿಮೀ , ಅತ್ತ ಬಂಗಾಳಕೊಲ್ಲಿ ಕರಾವಳಿಯಿಂದ 300 ಕಿಮೀ ದೂರದ ನಡುಕಟ್ಟಿನ ಅನಂತಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು ಬೇಸಾಯಗಾರರು ನೆಚ್ಚಿಕೊಂಡಿರುವ ಕೊಳವೆ ಬಾವಿಗಳು ಮರುಪೂರಣವಾಗಬೇಕು ಎಂದರೆ ಈ ಚಿತ್ರಾವತಿ ತೊರೆಯ ಪಥದಲ್ಲಿ ಇರುವ ಅನೇಕ ಕೆರೆಗಳ ಸರಣಿ(Cascade of Lakes) ತುಂಬಿ ಹರಿಯಲೇಬೇಕು; ಈ ತೊರೆ ಹರಿಯದಿದ್ದರೆ ಬೇಸಾಯಗಾರರು ಜೀವನಯಾಪನೆಗಾಗಿ ಬೆಳೆಯುವ ಸೂರ್ಯಕಾಂತಿ, ಜಾನುವಾರುಗಳ ಮೇವು ಮತ್ತು ಕೋಳಿಗಾಗಿ ಬೆಳೆಯುವ ಮೆಕ್ಕೆ ಜೋಳದ ಮಾತು ಅತ್ತಲಾಗಿರಲಿ ಕುಡಿಯುವ ನೀರು ಸುತಾ ಸಿಗುವುದಿಲ್ಲ ;ಬರಿಗೊಡಗಳಿಗೆ ಬರಿಯ ಸಮಾಧಾನ ಅಷ್ಟೇ!
ಚಿತ್ರಾವತಿ ತೊರೆಯನ್ನು ಕೆಲವು ತಿಂಗಳ ಮಟ್ಟಿಗಾದರೂ ಹರಿಸುವ ಐದು ಬೆಟ್ಟಗಳ ಕೂಟವಾಗಿರುವ ನಂದಿ ಬೆಟ್ವವು ಇತ್ತ ಕೋಲಾರದ ಕಡೆಗೆ ಒಂದು ತೊರೆ ಮತ್ತು ಅತ್ತ ಗೌರಿಬಿದನೂರಿನ ಕಡೆಗೆ ಹರಿಸುವ ಇನ್ನೊಂದು ತೊರೆ ಸೇರಿ ಪಿನಾಕಿನಿ ಮತ್ತು ಹೆಸರಘಟ್ಟ ಜಲಾಶಯಕ್ಕೆ ಅನೇಕ ಕೆರೆ ಸರಣಿಗಳ ಮೂಲಕ ಹರಿದು ಬರುವ ಅರ್ಕಾವತಿ ಈ ಎಲ್ಲ ತೊರೆಗಳಿಗೂ ಈ ನಂದಿಬೆಟ್ಟವೇ ಉಗಮಸ್ಥಾನವಾಗಿದೆ.
ನಂದಿ ಮಳೆ ಬೆಟ್ಟಗಳ(Hydrosphere) ಈ ಸಾಲು ಅತ್ತ ಪಡುವಣಕ್ಕೆ ಕೊರಟಗೆರೆ ತಾಲೂಕಿನ ಸಿದ್ದರ ಬೆಟ್ಟದಿಂದ ಆರಂಭವಾಗಿ ದೇವರಾಯನದುರ್ಗದವರೆಗೂ ಹಬ್ಬಿಕೊಂಡಿದ್ದು ತುಂಬಾ ಹಿಂದೆಯೇನೂ ಅಲ್ಲ 1990 ರ ತನಕ ಈ ಬೆಟ್ಟಸಾಲಿನ ಕಿಬ್ಬೆ ಕಣಿವೆಗಳಲ್ಲಿ ಇದ್ದ ಸಿಹಿನೀರಿನ ಬುಗ್ಗೆ (ತಲಪರಿಗೆ)ಗಳು ಸಾವಿರಾರು ಎಕರೆ ಹಿಡುವಳಿಗಳಿಗೆ ನೀರುಣಿಸಿ ಮಳೆಯನ್ನೇ ನೆಚ್ಚಿ ರಾಗಿ, ಹುರುಳಿ ಬೆಳೆದುಕೊಂಡಿದ್ದ ಬೇಸಾಯಗಾರರ ಮಕ್ಕಳು ನಾಕಕ್ಷರ ಕಲಿಯಲು ನೆರವಾಗಿದ್ದವು.
ಸಿದ್ದರಬೆಟ್ಟದಲ್ಲಿ ಅನೇಕಾನೇಕ ಗಿಡಮೂಲಿಕೆಗಳಿದ್ದು ಇಲ್ಲಿ ಅನೇಕ ಸಾದು ಸಂತರು ಕಿನ್ನುಡಿ ಏಕತಾರಿ ಹಿಡಿದು ಹಳ್ಳಿಗಳ ಮೂಲಕ ಇಬ್ಬನಿ ಹೊತ್ತಲ್ಲೇ ನಡೆಯುತ್ತ ತತ್ವಗಾರಿಕೆ ಮಾಡಿಕೊಂಡು ನಂದಿ ಬೆಟ್ಟ ಸಾಲಿನ ಕೈವಾರ ನಾರಾಯಣಪ್ಪ ಗುರು ಗದ್ದಿಗೆಯ ತನಕವೂ ಬರುತ್ತಿದ್ದರು ;ಆದರೆ ತತ್ವಗಾರಿಕೆಯ ಈ ಯಾವ ಸಾದು ಸಂತರೂ ಈ ಬೆಟ್ಟ ಸಾಲಿನಲ್ಲಿ ಒಂದೇ ಒಂದು ಗುಡಿಸಲನ್ನೂ ಸುತಾ ಕಟ್ಟಿಕೊಳ್ಳದೇ ಸಹಜವಾಗಿಯೇ ರೂಪುಗೊಂಡಿದ್ದ ಗುಹೆಗಳಲ್ಲಿ ಇಲ್ಲವೇ ಮರದ ನೆರಳು ಮತ್ತು ಬಯಲಿನಲ್ಲೇ ಬದುಕುತ್ತ ಹೆಚ್ಚೆಂದರೆ ಹೊಲದ ರಾಗಿ ಪಯಿರಿನಿಂದ ಕಾಚಕ್ಕಿ ಹೀಚಿಕೊಂಡು ಹಿಂಡಿದ ಹಾಲಿನಿಂದ ಟೀ ಕಾಯಿಸಿಕೊಂಡು ಏಕತಾರಿ ಹಿಡಿದು ಮುಂದೆಲ್ಲಿಗೋ ಹೊರಟುಬಿಡುತ್ತಿದ್ದರು.
ಸರ್
ಇಂಥ ಜೀವಂತ ಪರಂಪರೆಯನ್ನು ಕಂಡಿದ್ದ ನಂದಿಬೆಟ್ಟ ಸಾಲಿನಲ್ಲಿ ನೀವು ಇದೀಗ ಕಟ್ಟಲು ಹಾಕುತ್ತಿರುವ ಸ್ಕೆಚ್ಚಿನ ವಿಷಯ ಪ್ರಸ್ತಾಪಿಸುವುದಕ್ಕೆ ಮುಂಚೆ ಈ ಹಿಂದೆ ಹೇಳಿರುವ ತೊರೆಗಳ ಹರಿವಿಗೆ ಕಾರಣವಾಗಿರುವ ನಂದಿಬೆಟ್ಟ ಸಾಲಿನಲ್ಲಿ ಹಿಂದಿನ ಸಾಮಂತರು, ಪಾಳೆಗಾರರು ಮತ್ತು ಮಹಿಳೆಯರು ಕಟ್ಟಿಸಿದ್ದ ಕೆರೆಸರಣಿ (Cascade of Lakes) ಬಗ್ಗೆ ಕೊಂಚ ಹೇಳುವುದಿದೆ.
ನಂದಿಬೆಟ್ಟ ಸಾಲಿನ ತೆಂಕಣದ ಕಣಿವೇಪುರದಿಂದ ಆರಂಭವಾಗುವ ತೊರೆಯ ಸರಣಿ ನಾಗದೇನಹಳ್ಳಿ, ಬನ್ನಿಮಂಗಲ, ಅರದೇಶಹಳ್ಳಿ ಮಾರಸಂದ್ರ ಕೆರೆಗಳ ಮೂಲಕ ಹಾಯುತ್ತ ಬಂದು ಕಾಕೋಳು , ಬ್ಯಾತ ಅವಳಿ ಕೆರೆಗಳು ತುಂಬಿ ಇವುಗಳಿಗೆ ಆತುಕೊಂಡಂತೆ ಇರುವ ಹೆಸರಘಟ್ಟ ಜಲಾಶಯಕ್ಕೆ ಹರಿಯುತ್ತದೆ.
ನಂದಿಸಾಲಿನ ಪಡುವಣದ ಹೆಗ್ಗಡೆಹಳ್ಳಿ ಕೆರೆಯಿಂದ ಆರಂಭವಾಗಿ, ನಂದಿಗುಂದ್ಯ , ಸೊಣ್ಣೇನಹಳ್ಳಿ , ದಂಡುದಾಸ ಕೊಡಿಗೇಹಳ್ಳಿ ಮೂಲಕ ಹಾದು ಶಿವಪುರದ ಅಮಾನಿಕೆರೆ ತುಂಬಿಸಿ ದೊಡ್ಡಬಳ್ಳಾಪುರದ ನಾಗರಕೆರೆ ತನಕ ಹರಿಯುತ್ತದೆ.
ನಂದಿಸಾಲಿನ ಪಡುವಣದ ಚಿಕ್ಕರಾಯಪ್ಪನಹಳ್ಳಿಯಿಂದ ಶುರುವಾಗುವ ತೊರೆ ಸೀಗೆಹಳ್ಳಿ, ಕೋನಘಟ್ಟ ಕೋಡಿಹಳ್ಳಿ ರಾಜಘಟ್ಟ ಕೆರೆಗಳನ್ನು ಹಾದು ಶಿವಪುರದ ಅಮಾನಿಕೆರೆ ಕೋಡಿಯಾಗಿ ದೊಡ್ಡಬಳ್ಳಾಪುರದ ನಾಗರಕೆರೆಗೆ ಹರಿಯುತ್ತದೆ.
ದೊಡ್ಡಬಳ್ಳಾಪುರದ ನಾಗರಕೆರೆ ಕೋಡಿಯಾದರೆ ಆ ನೀರು ಚಿಕ್ಕತುಮಕೂರು ಕೆರೆ ಮೂಲಕ ಚಿಕ್ಕಕುಕ್ಕರಹಳ್ಳಿ ಕೆರೆಯನ್ನು ಹಾದು ಹೆಸರಘಟ್ಟ ಜಲಾಶಯ ಮುಟ್ಟುತ್ತದೆ.
ಇದಿಷ್ಟೇ ಅಲ್ಲದೇ ನಂದಿ ಸಾಲಿನ ಜಂಗಮಕೋಟೆಯ ಹತ್ತಿರ ಹರಿವ ಮತ್ತೊಂದು ತೊರೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಕ್ಕಲಮಡು ಕೆರೆ ತುಂಬಿಸುತ್ತಿದ್ದು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳೆರಡೂ ಪಟ್ಟಣಗಳು ಕುಡಿಯುವ, ಅಡುಗೆ ಮಾಡುವ ನೀರಿಗಾಗಿ ಈ ಜಕ್ಕಲಮಡು ಕೆರೆಯನ್ನೇ ಆಶ್ರಯಿಸಿವೆ.
ಹೆಸರಘಟ್ಟ ಜಲಾಶಯ ಭರ್ತಿಯಾದ ನಂತರ ಹೊರ ಹರಿಸಲಾಗುವ ನೀರು ಬೆಂಗಳೂರು ತುಮಕೂರು ಹೆದ್ದಾರಿಯ ಮಾಕಳಿ ಸೇತುವೆಯ ಕೆಳಗೆ ಹರಿದು ಮುಂದೆ ರಾವುತನಹಳ್ಳಿ , ಕಿತ್ತನಹಳ್ಳಿ ಕೆರೆಗಳ ಮೂಲಕ ಹರಿದು ಅಂತಿಮವಾಗಿ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ.
ಸರ್ ,
ಈ ತೊರೆ ಹರಿವಿನ ಪಾತ್ರದ ಆಸುಪಾಸಿನ ಎಲ್ಲ ಭೂ ಹಿಡುವಳಿಗಳು ಮತ್ತು ಹಳ್ಳಿಗಳು ಜೀವನಯಾಪನೆಯ ಬೇಸಾಯ ಮತ್ತು ಕುಡಿಯುವ ನೀರಿಗಾಗಿ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದು, 2010 ರಿಂದ 2015 ರ ತನಕ ಮಳೆಯ ಇಳಿಕೆಯ ದೆಸೆ ಹರಿಯದ ತೊರೆಯಿಂದ ಬತ್ತಿಹೋಗಿದ್ದ ಕೊಳವೆ ಬಾವಿಗಳ ನೀರಿನ ಮಟ್ಟ ಸುಧಾರಿಸುತ್ತಿರುವಾಗಲೇ ನೀವು ನಂದಿಬೆಟ್ಟದ ಹತ್ತಿರ ಯೋಗಶಾಲೆಯನ್ನು ಕಟ್ಟಲು ಹಾಕುತ್ತಿರುವ ಸ್ಕೆಚ್ಚು ಈಗಾಗಲೇ ಈ ಬೆಟ್ಟಸಾಲು ಪ್ರದೇಶದಲ್ಲಿ ಆತಂಕವನ್ನು ಉಂಟು ಮಾಡಿದೆ ಯಾಕೆಂದರೆ :
ಈ ನಿಮ್ಮ “ಇಷಾ ಯೋಗಶಾಲೆ” ಪ್ರಾರಂಭವಾಯಿತೆಂದರೆ ಅಲ್ಲಿಗೆ ಬರುವ ಕಾರುಗಳು , ಕಟ್ಟಲಿರುವ ಕ್ಯಾಂಟೀನುಗಳು ಮತ್ತು ನಿಮ್ಮ ಪ್ರವಚನ ಕೇಳಲು ಬರುವ ಸಾವಿರಾರು ವಾಹನಗಳಿಂದ ಈ ಮಳೆ ಬೆಟ್ಟ ಸಾಲಿನಲ್ಲಿ ಭೌಗೋಳಿಕ ಒತ್ತಡ(Demographic pressure) ತೀವ್ರ ಹೆಚ್ಚಳವಾಗಿ ಈಗಾಗಲೇ ಕಲ್ಲು ಗಣಿಗಾರಿಕೆ ಮತ್ತು ಪ್ರವಾಸೋದ್ಯಮದಿಂದ ನೊಂದಿರುವ ಬೆಟ್ಟಸಾಲಿನ ಪರಿಸರ ವ್ಯವಸ್ಥೆ ಮತ್ತಷ್ಟು ಹದಗೆಡಲಿದೆ.
ಸದ್ಗುರುಗಳೇ,
ಈ ಎಲ್ಲವನ್ನೂ ಮನಗಂಡೇ ಕರ್ನಾಟಕ ಸರ್ಕಾರವು 2004 ರಲ್ಲಿ ಈ ಮಳೆ ಬೆಟ್ಟ ಸಾಲಿನ ಅರ್ಕಾವತಿ, ಪಿನಾಕಿನಿ, ಚಿತ್ರಾವತಿ ತೊರೆ ಪಾತ್ರದಲ್ಲಿ ಕೃಷಿ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳು ನಡೆಯದಂತೆ ನಿಷೇಧಿಸಿ ‘ ತಿಪ್ಪಗೊಂಡನಹಳ್ಳಿ ಅದಿನಿಯಮ – 2004 ಎಂಬ ಕಾನೂನನ್ನು ಜಾರಿಗೆ ತಂದಿದೆ.
ಸದ್ಗುರುಗಳೇ ,
ನೀವೀಗ ನಂದಿಬೆಟ್ಟ ಸಾಲಿನಲ್ಲಿ ಸ್ಥಾಪಿಸಲಿರುವ ಯೋಗಶಾಲೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಕಟ್ಟಲಾಗುವ ವಾಹನ ನಿಲುಗಡೆ ಇತ್ಯಾದಿ ಸಂಕೀರ್ಣ ವ್ಯವಸ್ಥೆಯು ನೀವು ಹಿಂದೆ ಬೋಧನೆ ಮಾಡಿರುವ” ಮಣ್ಣು ಉಳಿಸಿ , ಮಿಸ್ಕಾಲ್ ಮೂಲಕ ನದಿ ಹರಿಸಿ” ತತ್ವಗಳಿಗೆ ವಿರುದ್ದವಾದ ನಡೆಯಾಗಿದ್ದು ಇದು ನಿಮ್ಮ ಆಧ್ಯಾತ್ಮಿಕ ಅಂತರಂಗದಲ್ಲಿ ನೈತಿಕ ಬಿಕ್ಕಟ್ಟನ್ನು ಉಂಟು ಮಾಡುವುದಿಲ್ಲವೇ
ಮತ್ತು ಇದು ಕಾನೂನಿನ ಉಲ್ಲಂಘನೆಯಷ್ಟೇ ಅಲ್ಲ ಮಳೆಗಾಗಿ ನಂದಿಬೆಟ್ಟ ಸಾಲನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಬದುಕುಗಳಿಗೆ ತೋರಿದ , ಕೊಂಚವೂ ಅಳುಕಿಲ್ಲದ ಅಗೌರವವಾಗಿದೆ
ಈ ನೈತಿಕ ಬಿಕ್ಕಟ್ಟನ್ನು ಹ್ಯಾಗೆ ದಾಟುವಿರಿ
ಇಂತಿ ನಮಸ್ಕಾರಗಳು
ಎಲ್.ಸಿ.ನಾಗರಾಜ್