ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ

ಪಂಚಮ ಪದ: ಹಾಡು ಅಕ್ಷರಗಳ ಬೆನ್ನೆತ್ತಿ 

 

ಲಿಂಗರಾಜು ಮಳವಳ್ಳಿ

*ಕಪ್ಪು ಮನುಜರು ನಾವು ಕಪ್ಪು ಮನುಜರು*

 

*ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು…*

 

ಹಾಡಿಲ್ಲದ ದಲಿತ ಚಳುವಳಿಯನ್ನು ಊಹಿಸಲು ಸಾಧ್ಯವೇ? ಇಲ್ಲ…!

 

ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳುವಳಿ ಬೆಸೆದು ಬೆಳೆದು ಬಂದಿದೆ. ದಲಿತ ಸಂಘಟನೆಗಳ ಯಾವುದೇ ಹೋರಾಟ, ಕಾರ್ಯಕ್ರಮಗಳಲ್ಲಿ ಈಗಲೂ ಹೋರಾಟದ ಹಾಡಿನೊಂದಿಗೆ ಶುರುವಾಗುವ ಪ್ರತೀತಿ ಮುಂದುವರಿದಿದೆ.

 

ಇಂಥದ್ದೊಂದು ಪರಂಪರೆಯನ್ನು ಆಧರಿಸಿ ಹಾಡುಗಳೊಂದಿಗೆ ದಲಿತ ಚಳುವಳಿ ಬೆಳೆದುಬಂದ ಕಥನವನ್ನು ರಂಗಭೂಮಿ ಮೂಲಕ ನಿರೂಪಿಸುವ ಪ್ರಯತ್ನ ನಡೆದಿರುವುದು ವರ್ತಮಾನದ ದೃಷ್ಟಿಯಿಂದ ಮಹತ್ವದ್ದು.

 

ಶಂಕರ್ ನಾಗ್ ಪ್ರಶಸ್ತಿ ಪುರಸ್ಕೃತ ಉದಯೋನ್ಮುಖ ರಂಗಕರ್ಮಿ ಕೆ.ಪಿ.ಲಕ್ಷ್ಮಣ್  ವಿನ್ಯಾಸಗೊಳಿಸಿರುವ *’ಪಂಚಮ ಪದ’* ಎಂಬ ನಾಟಕ, ಚಂದ್ರಶೇಖರ್ ನಿರ್ದೇಶನದಲ್ಲಿ  ರವೀಂದ್ರ ಕಲಾಕ್ಷೇತ್ರದಲ್ಲಿ  ಪ್ರದರ್ಶನ ಕಂಡಿದೆ. ದಲಿತ ಚಳುವಳಿಯ ಚರಿತ್ರೆಗೆ ಮಹತ್ವದ ದಾಖಲೆಯಾಗಿರುವ ಪಂಚಮ ಪತ್ರಿಕೆ ಮತ್ತು ಹಾಡು ಎರಡನ್ನೂ ಒಟ್ಟು ತಂದು ‘ಪಂಚಮ ಪದ’ ಆಗಿದೆ.

 

ರಾಜ್ಯದ ಜನಚಳುವಳಿಗಳ ಇತಿಹಾಸದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕದ ಅವಧಿ ಗುರುತರವಾದುದು. ಎಡ ಚಳುವಳಿ, ರೈತ ಚಳುವಳಿಯ ಜತೆಗೆ ದಲಿತ ಚಳುವಳಿಯೂ ಸಂಘಟಿತ ರೂಪದಲ್ಲಿ ಎದ್ದು ಬಂದ ಮಹತ್ವದ ಘಟ್ಟವೂ ಹೌದು. ದಲಿತ ಚಳುವಳಿಯ ಒಂದು ವೈಶಿಷ್ಟ್ಯ ಎಂದರೆ ಅದು ಹಾಡುಗಳೊಂದಿಗೆ ಬೆಳೆದದ್ದು. ಇದಕ್ಕೆ ಕಾರಣಗಳು ಹಲವಿದ್ದರೂ, ಹೆಸರಾಂತ ಕವಿ ಲೇಖಕರಾದ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಕೆ.ಬಿ.ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರರಂತಹ ಹಲವು ಬರಹಗಾರರು ದಲಿತ ಚಳುವಳಿಯ ಮುಖ್ಯ ಭೂಮಿಕೆಯಲ್ಲಿದ್ದುದು ಮತ್ತೊಂದು ಮಹತ್ವದ ಕಾರಣ ಎನಿಸುತ್ತದೆ.

 

ನೆನ್ನೆ ದಿನ ನನ್ನ ಜನ, ಬರುತಿಹೆವು ನಾವು ಬರುತಿಹೆವು, ಕೋಟಿ ಕೋಟಿ ತಾರೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮ ನನ್ನ ತಂಗಿ ಅನುಸೂಯ, ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆಯ, ಕಪ್ಪು ಮನುಜರು ಎಂಬ ಹಾಡುಗಳು ಭಾರಿ ಜನಪ್ರಿಯತೆಯನ್ನು ಗಳಿಸಿದ್ದವು.  ಅಂದು ಹರಿದು ಬಂದ ಅದೇ ಹಾಡುಗಳು  ಇಂದಿಗೂ ಯುವ ತಲೆಮಾರಿನ ಕಂಠದಲ್ಲೂ ಹೊಮ್ಮುತ್ತಿವೆ. ಹೊಸ ಹಾಡುಗಳು ಹುಟ್ಟುತ್ತಿಲ್ಲ ಎಂಬ ಕೊರಗು ಆಗಾಗ ಎಲ್ಲಿಂದಲೋ ತೂರಿ ಬರುತ್ತದೆ. ನನ್ನ ಕೇಳಿದರೆ ‘ಆಗ ಚಳುವಳಿ ಜತೆಗೆ ಹಾಡು ಹುಟ್ಟಿತ್ತು, ಈಗ ಚಳುವಳಿ ಇಲ್ಲ, ಹಾಡು ಹುಟ್ಟುವುದಾದರೂ ಹೇಗೆ? ಎಂದಷ್ಟೇ ಹೇಳುವೆ.

 

ಜಂಗಮ ತಂಡ ಪ್ರಸ್ತುತಪಡಿಸಿದ ‘ಪಂಚಮ ಪದ’ ನಿರೀಕ್ಷೆಯಂತೆ ಹಾಡಿನೊಂದಿಗೆ ಆರಂಭಗೊಂಡು ದಲಿತ ಚಳುವಳಿಯ  ಪ್ರಮುಖ ಘಟ್ಟಗಳನ್ನು ನೆರೇಟ್ ಮಾಡುತ್ತಾ, ದಲಿತ ಚಳುವಳಿಯ ಚರಿತ್ರೆಯನ್ನು 90 ನಿಮಿಷದಲ್ಲಿ ಪಕ್ಷಿನೋಟದಂತೆ ಕಟ್ಟಿಕೊಡುತ್ತದೆ. ಒಟ್ಟು ನಾಟಕದಲ್ಲಿ ಪಾತ್ರಗಳೇ ಇಲ್ಲ! ಬದಲಾಗಿ ನರೇಟ್ ಮತ್ತು ಹಾಡುಗಳೇ ಇಲ್ಲಿ ಪಾತ್ರಗಳು. ಅಭಿನಯಕ್ಕೆ ಇಲ್ಲಿ ಹೆಚ್ಚು ಜಾಗವಿಲ್ಲ. ಚರಿತ್ರೆಯನ್ನು ಪರಿಣಾಮಕಾರಿಯಾಗಿ ನರೇಟ್ ಮಾಡುವುದೇ ಇಲ್ಲಿ ಮುಖ್ಯ. ಹೀಗಾಗಿ ಇದು ಬೀದಿನಾಟಕಕ್ಕೆ ಹೇಳಿಮಾಡಿಸಿದ ವಿನ್ಯಾಸದಂತಿದೆ.

ನಾಟಕದಲ್ಲಿ ತುಮಕೂರಿನ ದಲಿತ ಚಿಕ್ಕತಿಮ್ಮಯ್ಯನ ಕೊಲೆ ಆಧರಿಸಿ ಕೆ.ಬಿ.ಸಿದ್ದಯ್ಯನವರು ಬರೆದ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆ’ ಹಾಡು ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ. ಅನುಸೂಯ ಪ್ರಕರಣ ಸೇರಿದಂತೆ ದಲಿತ ಚಳುವಳಿಯ ಆಯ್ದ ಪ್ರಮುಖ ಪ್ರಕರಣಗಳನ್ನು ನರೇಟ್ ಮಾಡುತ್ತಲೇ ಎಲ್ಲಿಯೂ ಬೋರು ಹೊಡೆಸದೇ, ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಲೇ ಕ್ಲೈಮ್ಯಾಕ್ಸ್ ತಲುಪುತ್ತದೆ.

 

ಕ್ಲೈಮ್ಯಾಕ್ಸ್ ನಲ್ಲಿ ದಲಿತರ ವಿಮೋಚನೆ ಅಂಬೇಡ್ಕರ್ ವಾದದಲ್ಲೇ ಇದೆ ಎಂಬಲ್ಲಿಗೆ ತಂದು ನಿಲ್ಲಿಸುತ್ತಾರೆ. ‘ಮಲಗಿದವರ ಕೂರಿಸಿದೆ, ನಿಲ್ಲಿಸುವವರು ಯಾರು?’ ಎಂಬ ಸಿದ್ದಲಿಂಗಯ್ಯನವರ ಪ್ರಶ್ನೆಗೆ ಅಂಬೇಡ್ಕರ್ ಅವರೇ ‘ಎದ್ದು ನಿಲ್ಲುವುದು ಹೇಗೆಂದು ಹೇಳಿ ಹೋಗಿದ್ದಾರೆ, ಛಲದ ಜೊತೆಗೆ ಬಲದ ಪಾಠವನ್ನೂ ಹೇಳಿಕೊಟ್ಟು ಹೋಗಿದ್ದಾರೆ’, ಹೀಗಾಗಿ ದಲಿತರ ವಿಮೋಚನೆ ಅಂಬೇಡ್ಕರ್ ವಾದದಲ್ಲೇ ಇದೆ’ ಎಂಬುದನ್ನು ಗಟ್ಟಿದನಿಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ.

 

ರಾಜ್ಯದ ದಲಿತ ಚಳುವಳಿ ಒಡೆದೊಡೆದು ಛಿದ್ರವಾಗಿ ಬಲಹೀನಗೊಂಡಿರುವ ಈ ಸಮಯದಲ್ಲಿ ಅಂಬೇಡ್ಕರ್ ವಾದವೇ ಅಂತಿಮ ಅಂದುಕೊಂಡಾದರೂ ದಲಿತ ಚಳುವಳಿ ಪುಟಿದೆದ್ದು ನಿಲ್ಲಬೇಕೆಂದು ಎಲ್ಲ ಪ್ರಗತಿಪರ ಚಳುವಳಿಗಳ ಬಯಸುತ್ತಿವೆ. ಹೀಗಾಗಿ ಈ ನಾಟಕವನ್ನು ಆರಂಭದಿಂದಲೂ ದಲಿತ ಚಳುವಳಿಗೆ ನಾಯಕತ್ವ ನೀಡಿದ/ನೀಡುತ್ತಿರುವ ನಾಯಕರುಗಳು ಹಾಗೂ ಬುದ್ಧಿಜೀವಿ ವಲಯ  ಹೊಸ ತಲೆಮಾರಿನವರೊಂದಿಗೆ ಕುಳಿತು ಈ ನಾಟಕ ನೋಡಬೇಕಿತ್ತು ಅನಿಸಿತು. ಮುಂದಾದರೂ ಆಗುವ ಆಸೆಯಂತೂ ಇದೆ!

 

ಕೊನೆಯದಾಗಿ, ಅಂಬೇಡ್ಕರ್ ವಾದ ಆಧರಿಸಿದ ದಲಿತರ ವಿಮೋಚನೆಯ ಸಮರದಲ್ಲಿ ನಮ್ಮ ಜತೆ ನಿಲ್ಲುವ  ಮಿತ್ರರು ಯಾರು? ಜತೆಗಿದ್ದಂತೆ ನಟಿಸಿ ನಮ್ಮ ವಿರುದ್ಧವೇ ಕತ್ತಿ ತಲವಾರು ಝಳಪಿಸುವ ಶತ್ರುಗಳು ಯಾರು? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಜಾಣ್ಮೆಯ ನಡೆಯ ಕುರಿತು ಹೊಸತಲೆಮಾರಿನ ದಲಿತ ಮಿತ್ರರು ಚಿಂತಿಸುವುದು ಒಳಿತು. ಈ ಅಂಶವನ್ನೂ ಒಳಗೊಂಡು ನಾಟಕ ಮೂಡಿಬರುವುದಾದಲ್ಲಿ ಇದು ಇನ್ನಷ್ಟು ಸತ್ವಯುತವಾಗಲಿದೆ.

 

ಒಟ್ಟಾರೆ ‘ಪಂಚಮ ಪದ’ ಶ್ಲಾಘನೀಯ ಪ್ರಯೋಗ. ಇದು ಥಿಯೇಟರ್ ಗೆ ಸೀಮಿತವಾಗದೇ ಬೀದಿ ನಾಟಕವಾಗಿ ಕೇರಿಗಳಲ್ಲಿ ಪ್ರದರ್ಶನ ಆದಲ್ಲಿ ದಲಿತ ಪ್ರಜ್ಞೆಯ ಕಿಚ್ಚಿನ ಕಿಡಿಯೊಂದು ಹೊತ್ತಬಹುದೇನೋ….?!

 

ಸುರಿ ಮಳೆಯು ಸುರಿಯುವಾಗ ನಾವೆದ್ದು ಕುಣಿಯಬೇಕು

ಮಾನವರಾಗಬೇಕು!

–      **