“ಮಹಾತ್ಮ ಫುಲೆ, ಸಾವಿತ್ರಿಮಾಯಿ”

“ಮಹಾತ್ಮ ಫುಲೆ, ಸಾವಿತ್ರಿಮಾಯಿ”

~ ‘ಪ್ರಜಾಕವಿ’ ಗದ್ದರ್

ಕನ್ನಡ ಅನುವಾದ: ವಿ.ಎಲ್. ನರಸಿಂಹಮೂರ್ತಿ

 

ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು

ಆ ಮಲ್ಲಿಗೆಯ ಗಿಡ ಪರಿಮಳದ ಹಳ್ಳಿಯನ್ನು ಎಬ್ಬಿಸಿತು.

 

ತಿಪ್ಪೆಯ ಮೇಲೊಂದು ಮಲ್ಲಿಗೆಯ ಬಳ್ಳಿ ಚಿಗುರಿತು

ಅದರಲ್ಲೊಂದು ಮಲ್ಲಿಗೆಯ ಹೂವು ಪರಿಮಳವನು ಚೆಲ್ಲಿತು

ಆ ಪರಿಮಳದಲ್ಲಿ ಹಳ್ಳಿ ಎದ್ದು ನಡೆಯಿತು

ಆ ಪರಿಮಳ ಚೆಲ್ಲುವ ಹೂವಿನ ಹೆಸರೇನೆಂದು ಹಳ್ಳಿ ಕೇಳಿತು

ಆ ಹೂವಿನ ಹೆಸರೇ ತೋಟಮಾಲಿ ಫುಲೆಯಂತಮ್ಮಾ

ಆ ಮಲ್ಲಿಗೆಯ ಹೆಸರೇ ಜೋತಿಬಾ ಸಾವಿತ್ರಿಯಂತಮ್ಮಾ

 

ಬ್ರಾಹ್ಮಣರ ಗರ್ಭಗುಡಿಯಲ್ಲಿ

ಘಂಟೆ ಮೊಳಗಿತು

ಬ್ರಾಹ್ಮಣ್ಯ ನಾಶವಾಗಲೆಂದು

ಭಜನೆ ಮಾಡಿತು.

ಆ ಧೈರ್ಯವಂತನಾರೆಂದು

ದೈವ ಕೇಳಿತು.

ನಿನ್ನ ಪೂಜೆಗೆ ಹೂವು ಕೊಟ್ಟ

ಮನುಷ್ಯ ಅಂದ.

ಆ ಮಹಾಮನುಷ್ಯ- ಮಹಾತ್ಮ ಫುಲೆಯಂತಮ್ಮಾ

ಆ ಮಾಲಿಯ ಹೆಸರೇ ಸಾವಿತ್ರಿಫುಲೆಯಂತಮ್ಮಾ

 

ವಿಧವೆಯ ಹಣೆಯ ಮೇಲೆ

ಕುಂಕುಮ ರಾರಾಜಿಸಿತು.

ಪಾದಗಳಿಗೆ ಅರಿಶಿನವ ಪೂಸಿ

ಮದುವೆ ಮಾಡಿಸಿತು.

ಬೋಳುತಲೆಯ ಮೇಲೆ ಬಣ್ಣದ ಜುಟ್ಟು ಬೆಳೆಯಿತು

ಆ ಜೆಡೆಯ ತುಂಬಾ ಮಲ್ಲಿಗೆಯ ದಂಡೆ ಆಧಾರವಾಗಿ ನಿಂತಿತು.

 

ಆ ಮಲ್ಲಿಗೆಯ ದಂಡೆಯ ಹೆಸರೇ ಫುಲೆಯಂತಮ್ಮಾ

ಆ ವಿಧವೆಯ ಸ್ವಂತತಾಯಿ ಸಾವಿತ್ರಿಯಂತಮ್ಮಾ

 

ಬಂಡೆಮೇಲಿನ ಬಾವಿಯಲ್ಲಿ ಬುಗ್ಗೆ ಎದ್ದಿತು

ಎಳನೀರಿನಂತಹ ನೀರು ಉಕ್ಕಿತು

ಆ ನೀರಿಗೆ ಮಡಿಮೈಲಿಗೆ ಇಲ್ಲವೆಂದು ಡಂಗೂರ ಸಾರಿದನು.

ಡಂಗೂರಸಾರಿದವನಾರೆಂದು ರಾಜ ಕೇಳಿದನು

ಊರುಬಿಟ್ಟು ಹೋಗಬೇಕೆಂದು ಹುಕುಂ ಮಾಡಿದನು.

ರಾಜನನ್ನು ಎದುರಿಸುತ್ತೇನೆಯೇ ಹೊರತು ರಾಜಿಯಾಗಲಾರೆನೆಂದ.

ಆ ರಾಜಿಯಾಗದ ವೀರನ ಹೆಸರೇ ಜೋತಿರಾವಮ್ಮ

ಆ ಅಭಾಗ್ಯರ ಅಕ್ಕನ ಹೆಸರೇ ಸಾವಿತ್ರಿಯಂತಮ್ಮಾ

 

ಹೆಣ್ಣುಮಕ್ಕಳ ನಾಲಗೆ ಮೇಲೆ ಅ ಆ ಬರೆದ

ಆ ಮಣ್ಣುಮೆತ್ತಿಕೊಂಡ ಕೈಗಳಿಗೆ ಬಳಪವನಿತ್ತ

ಬ್ರಾಹ್ಮಣರ ಬಂಧನದಿಂದ ಅಕ್ಷರವ ಬಿಡಿಸಿ

ಅಸ್ಪೃಶ್ಯರಿಗೆ ಅಕ್ಷರ ಕೊಟ್ಟ.

 

ಆ ಅಕ್ಷರದ ಮಾಲೆಯ ಹೆಸರೆ ಫುಲೆಯಂತಮ್ಮಾ

ಆ ಅಕ್ಷರಜ್ಯೋತಿಯ ಬೆಳಕಿನರೇಖೆ ಸಾವಿತ್ರಿಯಂತಮ್ಮಾ

 

ತುಳಿತಕ್ಕೊಳಗಾದ ಹೆಣ್ಣುಜಾತಿಗೆ ಜೊತೆಗಾರನಾರಮ್ಮ

ಹೆಂಡತಿಯನ್ನು ಮಹಾಜ್ಞಾನಿಯನ್ನಾಗಿಸಿದ ಜ್ಞಾನಿ ಯಾರಮ್ಮ

ಸತಿಸಹಗಮನವನ್ನು ಸಮಾಧಿ ಮಾಡಿದ ಸಾಹಸಿ ಯಾರಮ್ಮ

ಭಾರತಮಾತೆಗೆ ಶಾಲೆಯ ಬಾಗಿಲು ತೆರೆದ ಗುರುವು ಯಾರಮ್ಮ

 

ಆ ಗುರುವಿನ ಹೆಸರೇ ಜೋತಿಬಾಫುಲೆಯಂತಮ್ಮ

ಆ ತಾಯಿ ಗುರುವಿನ ಹೆಸರೇ ಸಾವಿತ್ರಿಯಂತಮ್ಮ

 

ಆ ಕಾರ್ಖಾನೆಯ ಗೇಟಿನ ಮುಂದೆ ಬಾವುಟ ಯಾರಮ್ಮ

ಆ ನಾಟಕದಲ್ಲಿನ ರೈತನ ಪಾತ್ರದ ದುಃಖ ಯಾರಮ್ಮ

ಆ ಪತ್ರಿಕೆಯಲ್ಲಿನ ಪ್ರತಿಭಟನೆಯ ಪದವು ಯಾರಮ್ಮ

ಆ ಭೂಮಿತಾಯಿಯ ಅನ್ನದ ಕೈತುತ್ತುಗಳಾರಮ್ಮ

 

ಆ ಸತ್ಯಶೋಧಕ ಸಂಸ್ಥೆಯಲ್ಲಿ ಸತ್ಯ ಯಾರಮ್ಮ

ಆ ಆತ್ಮಗೌರವದ ಹೋರಾಟದಲ್ಲಿ ಆತ್ಮ‌ ಯಾರಮ್ಮ

ಆ ಆತ್ಮದ ಹೆಸರೇ ಮಹಾತ್ಮ ಫುಲೆಯಂತಮ್ಮ

 

ಮತದ ಹುಚ್ಚಿನ ಕುತ್ತಿಗೆಯ ಮೇಲಿನ ಕತ್ತಿ ಯಾರಮ್ಮ

ಕುಲದ ಅಸೂಯೆಯನ್ನು ಕುಡಗೋಲಿನಿಂದ ಕತ್ತರಿಸಿದವರಾರಮ್ಮ

 

ಗುಲಾಮಗಿರಿಯ ಎದೆಯ ಮೇಲೆ ಗುರಿಯಾರಮ್ಮ

ಆ ಅಭಾಗ್ಯರ ಬತ್ತಳಿಕೆಯಲ್ಲಿರುವ ಆಯುಧ ಯಾರಮ್ಮ

ಆ ಅಭಾಗ್ಯರ ಆಶಾಜ್ಯೋತಿ ಜೋತಿಬಾನಮ್ಮಾ…

Image Credit – Malvika Raj