ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು

ಜೂಪಕ ಸುಬದ್ರ

ನಾನು ಇಂದು ಮಾತನಾಡಲಿರುವ ವಿಷಯ ‘ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು’. ಸ್ತ್ರೀವಾದವು ಸ್ತ್ರೀವಾದಿಗಳ ಪ್ರಕಾರ,  ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಗಾಗಿ. ಅವರು ಹೇಳುತ್ತಾರೆ, ಎಲ್ಲಾ ಮಹಿಳೆಯರು ಒಂದೇ, ನಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ, ಗೋಡೆಗಳಿಲ್ಲ. ನಾವೆಲ್ಲರೂ ಪಿತೃಪ್ರಭುತ್ವವನ್ನು ಎದುರಿಸುತ್ತೇವೆ. ಆ ಪಿತೃಪ್ರಭುತ್ವ ಎಲ್ಲರಿಗೂ ಒಂದೇ. ಬಹುಜನ ಮಹಿಳೆಯರು, ಎಂಬಿಸಿ ಮಹಿಳೆಯರು, ಆದಿವಾಸಿ ಮಹಿಳೆಯರು, ದಲಿತ ಮಹಿಳೆಯರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಅವರ ಸಮಸ್ಯೆಗಳು ಒಂದೇ ಆಗಿರುವುದಿಲ್ಲ. ಈ ಜಾತಿ ಮತ್ತು ಬುಡಕಟ್ಟುಗಳಲ್ಲಿ ಪಿತೃಪ್ರಭುತ್ವ ಒಂದೇ ಅಲ್ಲ. ಇದು ವಿವಿಧ ರೀತಿಯದ್ದಾಗಿದೆ. ಅವರ ಪಿತೃಪ್ರಭುತ್ವವು ನಮ್ಮಿಂದ ಭಿನ್ನವಾಗಿದೆ. ಅವರು ಶ್ರಮ ಜೀವನದ  ಹೊರಗೆ ಅಸ್ತಿತ್ವದಲ್ಲಿದ್ದಾರೆ, ನಾವು ಶ್ರಮ ಜೀವನದ ಒಳಗೆ ವಾಸಿಸುತ್ತೇವೆ.

joopaka subadra-300x300

ನೀವು ಪುರುಷ-ಮಹಿಳೆ ಸಮಾನತೆಯ ಬಗ್ಗೆ ಮಾತನಾಡಿದರೆ, ಜಾತಿ ವಿನಾಶವಿಲ್ಲದೆ ಅದು ಹೇಗೆ ಸಾಧ್ಯ? ಪುರುಷ-ಮಹಿಳೆ ಸಮಾನತೆ, ಇತರ ಶ್ರೇಣಿಕರಣಗಳ ಕಣ್ಮರೆ ಜಾತಿ ವಿನಾಶ  ಆದಾಗ ಮಾತ್ರ ಸಾಧ್ಯವಾಗುತ್ತದೆ. . ಆದರೆ ನೀವು ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ, ಪ್ರಶ್ನೆ ಉದ್ಭವಿಸುತ್ತದೆ: ನೀವು ಯಾವ ಪುರುಷರು ಮತ್ತು ಯಾವ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದೀರಿ? ಕಾರ್ಮಿಕ ಶಕ್ತಿಗಳಾಗಿ (ದಲಿತ, ಆದಿವಾಸಿ, ಎಂಬಿಸಿ ಮಹಿಳೆಯರು) ಶ್ರಮಿಸುವ,  ಬೆವರಿನ ಮಹಿಳೆಯರಾದ ನಾವು ಸಮಾನ ಸಂಬಂಧದಲ್ಲಿದ್ದೇವೆ.

ಈ ದುಡಿಯುವ ಮಹಿಳೆಯರ ಸಮಸ್ಯೆಗಳು ಸ್ತ್ರೀವಾದಿಗಳ ಸಾಹಿತ್ಯದಲ್ಲಿ ಎಂದಿಗೂ ಕಂಡುಬರುವುದಿಲ್ಲ, ಅವರ ಕಾರ್ಯಕ್ರಮಗಳಲ್ಲಿ ಎಂದಿಗೂ ಪ್ರಚಾರಗೊಳ್ಳುವುದಿಲ್ಲ. ಆದರೆ ಎಲ್ಲ ಮಹಿಳೆಯರು ಒಂದೇ ಎಂದು ಅವರು ಹೇಳುತ್ತಾರೆ. ಆದರೆ ಯಾರ ಸಮಸ್ಯೆಗಳು, ಈ ಸ್ತ್ರೀವಾದಿಗಳ ಕಾರ್ಯಸೂಚಿಯಾಗುತ್ತವೆ? ನಮ್ಮಸಫಾಯಿ ಕರ್ಮಚಾರಿಗಳ, ಮಹಿಳಾ ಪೌರ ಕಾರ್ಮಿಕರ ಸಮಸ್ಯೆಗಳು? ನಮ್ಮ ಜೋಗಿನಿ ಮಹಿಳೆಯರ ಸಮಸ್ಯೆಗಳು? ನಮ್ಮ ಶಿಕ್ಷಣದ ಕೊರತೆ, ನಿರುದ್ಯೋಗದ ಸಮಸ್ಯೆಗಳು? ನಮಗೆ ಘನತೆಯನ್ನು ನಿರಾಕರಿಸುವ ಸಮಸ್ಯೆಗಳು? ಆದರೆ ನಮ್ಮ ಸಮಸ್ಯೆಗಳು ಅವರ ಬರಹಗಳಲ್ಲಿ ಅಥವಾ ಸಾಹಿತ್ಯದಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಎಂದಿಗೂ ಜಾಗವನ್ನು ಕಾಣುವುದಿಲ್ಲ.

ಆದರೆ ಮತ್ತೆ, ಅವರು ಎಲ್ಲಾ ಮಹಿಳೆಯರು ಒಂದೇ ಎಂದು ಹೇಳುತ್ತಾರೆ. ಇತ್ತೀಚೆಗೆ, ವಿನೋದಿನಿ ಮಡುಸು * ಬಹಳ ಒಳ್ಳೆಯ ಅವಲೋಕನ ಮಾಡಿದರು: ಜಾತಿ ಶ್ರೇಣಿಯಲ್ಲಿ, ಮಹಿಳೆಯರು ಯಾವ ಮೆಟ್ಟಿಲು  ಆಕ್ರಮಿಸಿಕೊಳ್ಳುತ್ತಾರೆ? ಬ್ರಾಹ್ಮಣ ಮಹಿಳೆಯರು ಮೇಲಿನ ಬ್ರಾಹ್ಮಣ ಮೆಟ್ಟಿಲಿನಲ್ಲಿದ್ದಾರೆ.  ಕ್ಷತ್ರಿಯರು ಮತ್ತು ವೈಶ್ಯರು ಮತ್ತು ಶೂದ್ರರು ತಮ್ಮ ತಾಣಗಳಲ್ಲಿದ್ದಾರೆ..ಮತ್ತು ದಲಿತರು ಇನ್ನೂ ಕಡಿಮೆ, ಪಾತಾಳದಲ್ಲಿ . ಹಾಗಾದರೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಮಹಿಳೆಯರೆಲ್ಲರೂ ಒಟ್ಟಾಗಿ ಯಾವ ಮೆಟ್ಟಿಲಿನಲ್ಲಿರುತ್ತಾರೆ?

ಆ ಮಹಿಳೆಯರ ಹೊಟ್ಟೆ ಎಂದಿಗೂ ಹೊಸ್ತಿಲು ದಾಟದೆ ತುಂಬಿರುತ್ತದೆ. ಆದರೆ ಈ ಮಹಿಳೆಯರು ಕಾಯಕದಲ್ಲಿ  ತೊಡಗಿಸಿಕೊಂಡಿದ್ದಾರೆ . ಅವರಿಗೆ, ಲೈಂಗಿಕ ಸ್ವಾತಂತ್ರ್ಯಗಳು, ಕುಟುಂಬ ಗೌರವ ಮುಖ್ಯ (ಅವು ಹೇಗೆ ಪ್ರಸ್ತುತವಾಗಿವೆ) .. ಅವರು ಹೇಳುತ್ತಾರೆ, ಕುಟುಂಬ. ಕುಟುಂಬದಲ್ಲಿ, ಅವರ ಪಿತೃಪ್ರಭುತ್ವವು ಅವರ ಕರ್ತವ್ಯ ಆಸ್ತಿಯನ್ನು ರಕ್ಷಿಸುವುದು, ವಂಶ ವೃದ್ಧಿಸುವುದು , ಮಕ್ಕಳಿಗೆ ಜನ್ಮ ನೀಡುವುದು ಎಂದು ಹೇಳುತ್ತದೆ.

ಇಲ್ಲಿ, ನಮ್ಮ ಶ್ರಮಿಕ  ಜಾತಿಗಳಲ್ಲಿ, ಆಸ್ತಿ ಎಲ್ಲಿದೆ? ಅವರು ಮಕ್ಕಳನ್ನು ಹುಟ್ಟಿಸುವುದಷ್ಟೇ  ಅಲ್ಲ, ಅವರು ಸಾಮಾಜಿಕ ಉತ್ಪಾದನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರು ಸಾಮಾಜಿಕ ಉತ್ಪಾದನೆಯಲ್ಲಿ ಅರ್ಧದಷ್ಟು ಉದ್ಯೋಗಿಗಳಾಗಿದ್ದಾರೆ. ಅವರ ಲಿಂಗ ದೃಷ್ಟಿಕೋನ, ಅವರ ಜಾತಿ ದೃಷ್ಟಿಕೋನ ವಿಭಿನ್ನವಾಗಿದೆ.

ಸವರ್ಣ ಮಹಿಳೆಯರು ಪಿತೃಪ್ರಭುತ್ವದಿಂದ ಬಿಡುಗೊಡೆಗೊಂಡರೆ ವಿಮೋಚನೆ ಪಡೆಯುತ್ತಾರೆ. ಅವರು ತಮ್ಮ ಪುರುಷರಂತೆ ಸಮಾನ ಅವಕಾಶಗಳನ್ನು ಪಡೆದರೆ ಅವರು ಸ್ವತಂತ್ರರಾಗುತ್ತಾರೆ.

ಆದರೆ ನಮ್ಮ ಮಹಿಳೆಯರ ಸಮಸ್ಯೆಗಳನ್ನು ನೋಡಿ. ಜಾತಿ ಸಮಸ್ಯೆ, ಜಾತಿ ಆಧಾರಿತ ಲೂಟಿ, ಕಾರ್ಮಿಕರ ಸಮಸ್ಯೆ ಇದೆ .. ಅವರು ಗುಲಾಮರ ಗುಲಾಮರು. ನಮ್ಮ ಪುರುಷರು ಸ್ವತಃ ಗುಲಾಮರು, ನಾವು ಗುಲಾಮರ ಗುಲಾಮರು. ಆದರೆ ನೀವು? ನಿಮ್ಮ ಪುರುಷರಿಗಾಗಿ ನೀವು ಗುಲಾಮಗಿರಿಯನ್ನು ಮಾಡುತ್ತಿದ್ದೀರಿ. ಆದರೆ ನಾವು ನಿಮ್ಮ ಪುರುಷರಿಗೆ, ಮಹಿಳೆಯರಿಗೆ , ಇತರ ಎಲ್ಲ ಪುರುಷರಿಗೆ (ಅವರೇ  ಗುಲಾಮರಾಗಿದ್ದಾರೆ ) ಗುಲಾಮರಾಗಿದ್ದೇವೆ.

ರಾಷ್ಟ್ರೀಯತಾವಾದಿ ಚಳವಳಿಯಲ್ಲಿ, ನಿಮ್ಮ ಸಮಸ್ಯೆಗಳು  ಪರಿಹಾರವಾಯಿತು. ಈ ಸಮಾಜವು ಪುರುಷರದ್ದು . ಯಾವ ಪುರುಷರು? ಅಧಿಕಾರ, ಪ್ರಾಬಲ್ಯವನ್ನು ಹೊಂದಿರುವ ಪುರುಷರು, ಇದರರ್ಥ ವ್ಯವಸ್ಥೆಯ  ಮೇಲೆ ಅಧಿಕಾರವನ್ನು ಹೊಂದಿರುವವರು. ಅದು ಪಿತೃಪ್ರಭುತ್ವ. ಅಲ್ಲಿ ಜನಿಸಿದ ಪಿತೃಪ್ರಭುತ್ವವನ್ನು, ಎಲ್ಲಾ  ಜಾತಿಗಳ ಮೇಲೆ ಹೇರಲು ಹೊರಟರೆ … ಸೋಲುವವರು ನಾವು. ನಮ್ಮ ಜಾತಿಗಳು ಬಳಲುತ್ತವೆ. ಏಕೆಂದರೆ, ನೀವು ಸಮಾನತೆ ಮತ್ತು ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುತ್ತೀರಿ, ಆದರೆ ನಮಗೆ, ಜಾತಿ ವಿನಾಶ ಬೇಕು.

ನನ್ನ ಜಾತಿಯ ಕಾರಣದಿಂದಾಗಿ ನಾನು ಸಫಾಯಿ ಕರ್ಮಚಾರಿ ಮಹಿಳೆಯಾಗಿದ್ದೇನೆ, ನನ್ನ ಜಾತಿಯ ಕಾರಣದಿಂದಾಗಿ ನನಗೆ ಶಿಕ್ಷಣ ನಿರಾಕರಿಸಲಾಗಿದೆ, ನನ್ನ ಜಾತಿಯ ಕಾರಣದಿಂದಾಗಿ ನಾನು ನಿರುದ್ಯೋಗಿಯಾಗಿದ್ದೇನೆ, ನನ್ನ ಜಾತಿಯ ಕಾರಣದಿಂದಾಗಿ ನನಗೆ ಘನತೆ ನಿರಾಕರಿಸಲಾಗಿದೆ. ನಮ್ಮ ಗೌರವವನ್ನು ನಮಗೆ ನೀಡಿ. ನಾನು ಮೊದಲು ಜಾತಿಯನ್ನು ತೆಗೆದುಹಾಕಬೇಕಾಗಿದೆ. ಜಾತಿ ನನ್ನ ತಲೆಯ ಮೇಲೆ ದೊಡ್ಡ ಹೊರೆಯಾಗಿದೆ. ಅದರ ನಂತರವೇ ಲಿಂಗ ಸಮಾನತೆ ಬರುತ್ತದೆ.

ಪಿತೃಪ್ರಭುತ್ವವೆಂದರೆ ಅದು ವ್ಯವಸ್ಥೆಗಳು, ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಮತ್ತು ಅವುಗಳ ಮೇಲೆ ಶಕ್ತಿ ಮತ್ತು ಅಧಿಕಾರವನ್ನು ಚಲಾಯಿಸುತ್ತದೆ. ಆದರೆ ನಮ್ಮ ಜಾತಿಯ ಪುರುಷರು ತಮ್ಮ ಮನೆಗಳ ಮೇಲೆ ಮಾತ್ರ ಅಧಿಕಾರವನ್ನು ಚಲಾಯಿಸುತ್ತಾರೆ, ಸಂಸ್ಥೆಗಳು, ವ್ಯವಸ್ಥೆಗಳ ಮೇಲೆ ಅಲ್ಲ. ಸ್ತ್ರೀವಾದಿಗಳು ಅದನ್ನೂ ಪಿತೃಪ್ರಭುತ್ವ ವೆಂದು  ಸಹ ಕರೆಯುತ್ತಾರೆ. ಮತ್ತು ವ್ಯವಸ್ಥೆಗಳ  ಮೇಲೆ ಅಧಿಕಾರವನ್ನು ಚಲಾಯಿಸುವುದು ಸಹ ಪಿತೃಪ್ರಭುತ್ವವಾಗಿದೆ. ಮನೆಗಳ ಮೇಲೆ ಅಧಿಕಾರ, ಮತ್ತು ವ್ಯವಸ್ಥೆಗಳ ಮೇಲೆ ಅಧಿಕಾರ: ಅವರು ಎರಡನ್ನೂ ಪಿತೃಪ್ರಭುತ್ವ ಎಂದು ಕರೆಯುತ್ತಿದ್ದಾರೆ.

ಯುರೋಪ್, ಅಮೆರಿಕದ ಬಿಳಿ ಮಹಿಳೆಯರ ಈ ಸಿದ್ಧಾಂತವನ್ನು ಎಡ ಬ್ರಾಹ್ಮಣ ಮಹಿಳೆಯರು ಭಾರತಕ್ಕೆ ತಂದಿದ್ದಾರೆ. ಅವರ ಮನೆಗಳಲ್ಲಿನ ಕೆಟ್ಟದ್ದನ್ನು ಮಾತ್ರ ನೋಡುತ್ತಾ, ಅಲ್ಲಿನ ಪಿತೃಪ್ರಭುತ್ವ, ಅದನ್ನು ಕೌಟುಂಬಿಕ ಹಿಂಸೆ ಎಂದು ಕರೆಯುತ್ತಾರೆ. ಆದರೆ ನಮ್ಮ ಮಹಿಳೆಯರ ಮೇಲೆ ಸಾಮಾಜಿಕ ಹಿಂಸೆ ಇದೆ, ನಮ್ಮ ಮಹಿಳೆಯರ ಮೇಲೆ ಜಾತಿ ಹಿಂಸೆ ಇದೆ. ಬಹುಜನ ಮಹಿಳೆಯರ ಮೇಲೆ, ದಲಿತ ಮಹಿಳೆಯರ ಮೇಲೆ.

ನಮ್ಮ ವಿಷಯಗಳು, ಸಮಸ್ಯೆಗಳನ್ನು ಪರಿಹರಿಸಲು ಅವರು ಯಾವುದೇ ಕಾರ್ಯಸೂಚಿಯನ್ನು ರೂಪಿಸಿಲ್ಲ. ಸವರ್ಣ  ಸ್ತ್ರೀವಾದಿಗಳು 1960… 70 ರಿಂದ ಮಾತನಾಡುತ್ತಿದ್ದಾರೆ .. ಅವರು ಕೌಟುಂಬಿಕ ಹಿಂಸಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೌಟುಂಬಿಕ ಹಿಂಸೆ, ಲೈಂಗಿಕ ಸ್ವಾತಂತ್ರ್ಯಗಳು .. 70 ರ ದಶಕದಿಂದ ಅವರು ಮಾತನಾಡುತ್ತಿದ್ದಾರೆ. ಅವರು ಕೌಟುಂಬಿಕ ಹಿಂಸಾಚಾರವನ್ನು ಮೀರಿ ಮುಂದುವರೆಯುವುದಿಲ್ಲ. ನಾವಿನ್ನೂ  ಆಹಾರದ ಹಂತದಲ್ಲಿದ್ದೇವೆ .. ಇಂದು, ಈ ಸಂಜೆ, ನಾಳೆ ಹೇಗೆ ಬದುಕಬೇಕು  ಎಂದು ನಾವು ಇನ್ನೂ ಯೋಚಿಸಬೇಕಾಗಿದೆ..ನಾಳೆ ಕೆಲಸ ಸಿಗುತ್ತದೆಯೇ   ಅಥವಾ ಇಲ್ಲವೇ .. ನಾವು ಇನ್ನೂ ಆ ಹಂತದಲ್ಲಿದ್ದೇವೆ, ನಾವು, ಇಲ್ಲ ಅವರ ಹಂತವನ್ನು ತಲುಪಿಲ್ಲ.

ನಿಮ್ಮ ಅನುಭವಗಳು, ನಿಮ್ಮ ವ್ಯಾಖ್ಯಾನಗಳು, ನಿಮ್ಮ ನಿರ್ದೇಶನಗಳಿಂದ ಪಡೆದ ಬುದ್ಧಿವಂತಿಕೆಯಿಂದ ನೀವು ಹಾಕಿದ, ಕಟ್ಟಿದ ಸಾಲನ್ನುನಾವು ಅನುಸರಿಸಬೇಕಿದೆ. ನಮ್ಮ ಹೋರಾಟಗಳು, ನಮ್ಮ ನಿರೂಪಣೆಗಳು, ನಮ್ಮ ಅನುಭವಗಳು, ನಮ್ಮ ಇತಿಹಾಸಗಳು ಆ ಚೌಕಟ್ಟಿಗೆ,  ನಿಮ್ಮ ಚೌಕಟ್ಟಿಗೆ ಹೊಂದಿಕೆಯಾಗುವುದಿಲ್ಲ. ನೀವು ಅದನ್ನು ಅರ್ಥಮಾಡಿಕೊಳ್ಳಬೇಕು. ಆದರೆ ನೀವು ಅದನ್ನು ಅರ್ಥಮಾಡಿಕೊಂಡಾಗಲೂ, ನಿಮ್ಮ ಸ್ವಾರ್ಥ  ಹಿತಾಸಕ್ತಿಗಳಿಗಾಗಿ, ನೀವು ಇನ್ನೂ ಎಲ್ಲ ಮಹಿಳೆಯರು ಒಂದೇ ಎಂದು ಹೇಳುತ್ತಿದ್ದೀರಿ.

ಎಲ್ಲಾ ಮಹಿಳೆಯರು ಸಮಾನರಾಗಲು ಎಲ್ಲಾ ಪುರುಷರು ಸಮಾನರಾಗಿದ್ದಾರೆಯೇ? ಈಗಲೂ ಅವರು ಎಲ್ಲ ಮಹಿಳೆಯರು ಸಮಾನರು ಎಂಬ ಘೋಷಣೆಯೊಂದಿಗೆ ಮುಂದುವರಿಯುತ್ತಾರೆ. ಈ ಜಾತಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆಗಳಿವೆ. ಆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿಲ್ಲ; ಆ ಸಮಸ್ಯೆಗಳನ್ನು ಎದುರಿಸಲು ಕಾರ್ಯಸೂಚಿಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿಲ್ಲ. ಸ್ತ್ರೀವಾದಿಗಳು ಅದರ  ಬಗ್ಗೆ ಮಾತು ಕೂಡ ಆಡುತ್ತಿಲ್ಲ.

ಅವರು ಜೋಗಿನಿ ವಿಷಯದ ಬಗ್ಗೆ ಮಾತನಾಡುವುದಿಲ್ಲ, ಈ ಜಾತಿಗಳು ನಿರಂತರವಾಗಿ ಎದುರಿಸುತ್ತಿರುವ ಹಸಿವಿನ ಸಮಸ್ಯೆಯ ಬಗ್ಗೆ ಅವರು ಮಾತನಾಡುವುದಿಲ್ಲ.

ಅವರು ಮನೆಯ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮನೆಗಳಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಸರಿ, ನಾವು ಎಲ್ಲಾ ರೀತಿಯ ಕೆಲಸಗಳಿಗೆ ಮೌಲ್ಯವನ್ನು ಕೊಡಬೇಕು. ಆದರೆ, ಅವರು ಮನೆಗಳ ಹೊರಗೆ ರಸ್ತೆಗಳನ್ನು ಸ್ವಚ್ಚಗೊಳಿಸುವವರ ಬಗ್ಗೆ, ಮಲ ಸ್ವಚ್ಚ ಮಾಡುವ ವೃತ್ತಿಯಲ್ಲಿ ತೊಡಗಿರುವವರ ಬಗ್ಗೆ ಬಗ್ಗೆ ಏಕೆ ಮಾತನಾಡುತ್ತಿಲ್ಲ?

……………………………………………………….

ಜೂಪಕ ಸುಬದ್ರ (Joopaka Subadra),  ಕವಿ, ಬರಹಗಾರ್ತಿ , ವಿಮರ್ಶಕಿ  ಮತ್ತು ತೆಲುಗು ಸಾಹಿತ್ಯ ಮತ್ತು ಜಾತಿ ವಿರೋಧಿ ಹೋರಾಟಗಳಲ್ಲಿ ಗಮನಾರ್ಹ ವ್ಯಕ್ತಿ.

ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya)

ಇದನ್ನು ತೆಲುಗಿನಿಂದ ಇಂಗ್ಲಿಷ್ ಗೆ ನರೇನ್ ಬೆಡಿದ್  (ಕುಫೀರ್) Naren Bedide (Kuffir) Patriarchy, Feminism and the Bahujan Women ಅನುವಾದಿಸಿದ್ದಾರೆ

ನೀವು ಇವರ  ಸಂದರ್ಶನವನ್ನು  Prauddha: Journal of Social Equality ನಲ್ಲಿ ಓದಬಹುದು

Be the first to comment on "ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು"

Leave a comment

Your email address will not be published.


*