ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ
– ಮಹಾಲಿಂಗಪ್ಪ ಆಲಬಾಳ.
ಬಂಕಿಮಚಂದ್ರ ಚಟ್ಟೋಪಾಧ್ಯಾಯ 1866ರಲ್ಲಿ ಬರೆದ “ಕಪಾಲ ಕುಂಡಲ” ಕಾದಂಬರಿಯನ್ನು ಸೊಂದಲಗೆರೆ ಲಕ್ಮೀಪತಿಯವರು 2015ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯಕಲಾ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿರುವ ಈ ಪುಸ್ತಕ ಈಗ ಓದಲು ಸಿಕ್ಕಿತು. ಒಂದೇ ದಿನಕ್ಕೆ ಓದು ಮುಗಿಸಿಕೊಂಡಿತು.
ಈ ಕಪಾಲಕುಂಡಲ ಕಾದಂಬರಿ ಹಲವಾರು ಅನಿರೀಕ್ಷಿತ ತಿರುವುಗಳಲ್ಲಿ ಸಾಗುತ್ತ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿ ಓದಿಸಿಕೊಳ್ಳುವ ರೋಚಕ ಕಾದಂಬರಿ.
ಇನ್ನೂರೈವತ್ತು ವರ್ಷಗಳ ಹಿಂದೆ ಇದ್ದಿರಬಹುದಾದ(?) ಕಾಳಿ ಆರಾಧನೆ, ವಶೀಕರಣ, ನರಬಲಿ ಕೊಡುವ ಮೂಲಕ ಮಹಾಕಾಳಿಯನ್ನು ಒಲಸಿಕೊಳ್ಳುವ ‘ಕಪಾಲ’ ಪಂಥ ಹಾಗೂ ಆಗಿನ ಸಾಮಾಜಿಕ,ರಾಜಕೀಯ ಪರಿಸ್ಥಿಯನ್ನು ಬಿಂಬಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಹೇಳಬಹುದು.
ಆದರೆ ಒಟ್ಟಾರೆಯಾಗಿ ಈ ಕಾದಂಬರಿ ರಚನೆಯ ಹಿಂದಿನ ಉದ್ದೇಶವೇನು? ಲೇಖಕರು ಈ ಕೃತಿಯ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ಗ್ರಹಿಸಿದರೆ ಇಡೀ ಲೇಖಕರ ಮನಸ್ಥಿತಿ ಅರ್ಥವಾಗುತ್ತದೆ.
ಕೃತಿಯ ಆರಂಭದಿಂದ ಅಂತ್ಯದವರೆಗೂ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಯಾವ ಮುಚ್ಚುಮರೆ ಇಲ್ಲದೇ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಮತ್ತು ಅದೇ ಉದ್ದೇಶಕ್ಕಾಗಿ ಈ ಕೃತಿ ರಚನೆಯಾಗಿರುವುದು ಎಂದು ಗೊತ್ತಾಗುತ್ತದೆ.
ಆರಂಭದಲ್ಲಿ ಗಂಗಾ ಸಾಗರದಲ್ಲಿ ತೀರ್ಥಯಾತ್ರೆ ಮುಗಿಸಿ ಹರಿಗೋಲಿನಲ್ಲಿ ಮರಳುವಾಗ ಗಾಳಿ,ಅಲೆಗಳ ಹೊಡೆತಕ್ಕೆ ಸಿಕ್ಕು ಅಪಾಯ ಎದುರಿಸುವ ಸಂದರ್ಭದಿಂದಲೇ ನಭಕುಮಾರ ಎಂಬ ಬ್ರಾಹ್ಮಣ ಯುವಕನ ಮೂಲಕ ಶ್ರೇಷ್ಠತೆಯ ದರ್ಶನ ಆರಂಭವಾಗುತ್ತದೆ. ಸಹ ಪ್ರಯಾಣಿಕ ಮುದುಕನೊಬ್ಬನ್ನೊಂದಿಗೆ ಮಾತನಾಡುತ್ತ “ಧರ್ಮಗ್ರಂಥಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಪುಣ್ಯದ ಫಲವನ್ನು ಮನೆಯಲ್ಲಿಯೇ ಸಂಪಾದಿಸಬಹುದು, ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಮಾಡದೇ ಕೂಡ” ಎನ್ನುತ್ತಾನೆ. ಆ ಮುದುಕ” ಮತ್ತೇ ನಿನ್ಯಾಕೆ ಬಂದೆ” ಎಂದು ಕೇಳಿದಾಗ ‘ನಾನು ಸಾಗರ ದರ್ಶನದ ಆಸೆಯಿಂದ ಬಂದೆ. ನಾನು ನೋಡಿರುದೆಲ್ಲ ನನ್ನ ಜನ್ಮಜನ್ಮಾಂತರಗಳಲ್ಲೂ ಅಚ್ಚಳಿಯದೇ ಉಳಿಯಲಿದೆ’ ಎಂದು ಉತ್ತರಿಸುತ್ತಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ 250 ವರ್ಷಗಳ ಹಿಂದೆ ಧರ್ಮಗ್ರಂಥಗಳು ಯಾರ ವಶದಲ್ಲಿದ್ದವು, ಅವುಗಳನ್ನು ಅಧ್ಯಯನ ಮಾಡಿ ಅರ್ಥೈಸಬಲ್ಲವರು ಯಾರಾಗಿದ್ದರು ಎಂಬುದನ್ನು. ಮುಂದೆ ಹರಿಗೋಲು ಅಪಾಯಕ್ಕೆ ಸಿಲುಕಿದೆ ಎಂಬುದು ಅಲ್ಲಿ ಹಲವಾರು ಪ್ರಯಾಣಿಕರಿದ್ದರೂ ಮೊದಲು ತಿಳಿಯುವುದು ಸೂಕ್ಷ್ಮಪ್ರಜ್ಞನಾದ ನಭಕುಮಾರನಿಗೆ. ಅವನ ಮೂಲಕ ಇನ್ನುಳಿದ ಜನರಿಗೆ ತಿಳಿಯುವಂತಾಗುವುದು. ಅಪಾಯದಿಂದ ಪಾರಾಗಲು ಹರಿಗೋಲು ಅಪರಿಚಿತ ದಡ ಸೇರಿ ಎಲ್ಲರೂ ತಮ್ಮ ಬೆಳೆಗಿನ ಪ್ರಾತವಿಧಿಗಳನ್ನು ಮುಗಿಸಿ ಅಡುಗೆ ಮಾಡಿಕೊಳ್ಳಲು ಬಯಸಿದಾಗ ಯಾರಲ್ಲೂ ಕಟ್ಟಿಗೆ ಇರುವುದಿಲ್ಲ. ಎಲ್ಲರೂ ಅಡುಗೆ ಮಾಡಿಕೊಳ್ಳಬೇಕಿದ್ದರೂ ಕಾಡು ಪ್ರಾಣಿಗಳಿಗೆ ದೆದರಿ ಯಾರೊಬ್ಬರೂ ಕಟ್ಟಿಗೆ ತರಲು ಕಾಡಿಗೆ ಹೋಗಲು ಒಪ್ಪುವುದಿಲ್ಲ. ಕೊನೆಗೆ ನಭಕುಮಾರ ಮಾತ್ರ ಹೋಗುತ್ತಾನೆ. ಇಲ್ಲಿ ಲೇಖಕರು ಬೇರೆ ಪಾತ್ರಗಳ ಸಹಸ್ಪಂದನೆಯನ್ನೇ ಕೊಂದು ಬಿಟ್ಟಿದ್ದಾರೆ. ಮತ್ತು ಸಹಜವಾಗಿ ಎಲ್ಲ ಮನುಷ್ಯರಲ್ಲಿ ಇರಬಹುದಾದ ಸಹೃದಯತೆಯನ್ನೂ, ಉಪಕಾರ ಮನೋಭಾವವನ್ನೂ, ಸಹಬದುಕಿನ ಮೌಲ್ಯಗಳನ್ನು ನಭಕುಮಾರನಲ್ಲಿ ಮಾತ್ರ ಮೇಳೈಸುವಂತೆ ಮಾಡಿದ್ದಾರೆ. ಹುಲಿಗಳಂಥ ಕಾಡುಪ್ರಾಣಿಗಳಿರುವ ಕಾಡಿಗೆ ಅವನನ್ನು ಏಕಾಂಗಿಯಾಗಿ ಕಳಿಸುವ ಮೂಲಕ ಉಳಿದವರು ಕಟುಕ ಮನಸ್ಥಿತಿಯವರು ಎಂಬುದನ್ನು ಬಿಂಬಿಸಿದ್ದಾರೆ. ಕಾಡಿನೊಳಗೆ ಹೋದ ನಭಕುಮಾರ ಅಲೆದಾಡಿ ಕಟ್ಟಿಗೆ ಹೊತ್ತು ಬರುವುದರೊಳಗೆ ಅವನನ್ನು ಅಲ್ಲಿಯೇ ಬಿಟ್ಟು ಹರಿಗೋಲು ತೆಗೆದುಕೊಂಡು ಹೋಗಿ ಬಿಟ್ಟಿರುತ್ತಾರೆ. ಹೋಗುವಾಗ ಒಬ್ಬ ನಭಕುಮಾರನಿಗಾಗಿ ಹಿಂದಿರುಗಿ ಹೋಗೋಣವೇ ಎಂದಾಗ, ಮತ್ತೊಬ್ಬ ಅವನು ಬದುಕಿದ್ದಾನೆಂದು ನಂಬುತ್ತಿಯಾ? ಈಗಾಗಲೇ ಹುಲಿ ಅವನನ್ನು ತಿಂದು ಮುಗಿಸಿರುತ್ತೆ ಅನ್ನುತ್ತಾನೆ. ಅನಿವಾರ್ಯವಾಗಿ ನಭ ಕಾಡಿನ ಪಾಲಾಗಿ ಅಲ್ಲಿ ತಂತ್ರಪೂಜೆಯಲ್ಲಿ ತಲ್ಲೀನನಾಗಿದ್ದ ಕಪಾಲಕನನ್ನು ಸಂಧಿಸುತ್ತಾನೆ. ಆಗ ಕಪಾಲಕ ‘ಯಾರು ನೀನು?’ ಎಂದು ಕೇಳಿದರೆ, ಈತ ‘ನಾನು ಬ್ರಾಹ್ಮಣ’ ಎಂದು ಉತ್ತರಿಸುತ್ತಾನೆ. ನಂತರ ಅವನು ಹಸಿವು,ನಿರಡಿಕೆ, ಆಯಾಸದಿಂದ ಬಳಲಿದ್ದ ನಭನನ್ನು ತನ್ನ ಗುಡಿಲಿಗೆ ಕರೆದುಕೊಂಡು ಹೋಗಿ ಹಣ್ಣು ನೀರು ಕೊಟ್ಟು ವಿಶ್ರಾಂತಿಗೆ ಆಶ್ರಯ ನೀಡುತ್ತಾನೆ.
ವಿಚಿತ್ರವೆಂದರೆ ಆಶ್ರಯ ನೀಡಿದ ಕಪಾಲಕ ತನ್ನ ಸಾಧನೆಗಾಗಿ ನಭನನ್ನು ನರಬಲಿ ಕೊಡಲು ತಯಾರಿ ನಡೆಸಿರುತ್ತಾನೆ. ಆಗ ಅವನನ್ನು ಬದುಕಿಸಲು ಬರುವವಳು, ನದಿ ದಡದಲ್ಲಿ ಸಿಕ್ಕು ಕಪಾಲನ ಆಶ್ರಯದಲ್ಲೇ ಬೆಳೆದ ಅಂತ್ಯಂತ ಸುಂದರಿಯಾದ ಬ್ರಾಹ್ಮಣ ಕನ್ಯೆ ಕಪಾಲಕುಂಡಲ. ಅವಳು ಮೊದಲ ಸಾರಿ ಎಚ್ಚರಿಸಿದರೂ ಅವನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಸಹಾಯಕನಾದ ನಭನನ್ನು ಕೈಕಾಲು ಕಟ್ಟಿ ಬಲಿಪೀಠಕ್ಕೆ ತಂದು ಶಾಸ್ತ್ರಗಳನ್ನೆಲ್ಲ ಮುಗಿಸಿ ಕತ್ತರಿಸುವ ಕತ್ತಿಗಾಗಿ ಇಟ್ಟ ಸ್ಥಳದಲ್ಲಿ ಹುಡುಕಿದರೆ ಅದು ಸಿಗುವುದಿಲ್ಲ. ಅದನ್ನು ಎಗರಿಸಿ ಬಚ್ಚಿಟ್ಟುಕೊಂಡು ಕಪಾಲ ಅದನ್ನು ಹುಡುಕಿ ಗುಡಿಸಲಿಗೆ ಹೋದಾಗ ಕಟ್ಟು ಬಿಚ್ಚಿ ಅವನನ್ನು ಕಾಳಿ ಪೂಜಾರಿಯ ಮನೆಗೆ ಕರೆದೊಯ್ದು ಜೀವ ಉಳಿಸುತ್ತಾಳೆ ಕಪಾಲಕುಂಡಲ. ಅಲ್ಲಿ ನಭ ಬ್ರಾಹ್ಮಣನೆಂದು ಅರಿತ ಪೂಜಾರಿ ಬ್ರಾಹ್ಮಣ ಕನ್ಯೆ ಕಪಾಲಕುಂಡಲಳೊಂದಿಗೆ ಮದುವೆ ಮಾಡಿ ಆಕೆಯನ್ನು ಅವನ ಮನೆಗೆ ಕಳುಹಿಸುತ್ತಾನೆ.
ಕಥಾವಸ್ತು ಮುಂದೆ ಮತ್ತೊಂದು ತಿರುವ ಪಡೆದುಕೊಳ್ಳುತ್ತದೆ. ಇದಕ್ಕೂ ಮೊದಲು ನಭಕುಮಾರನಿಗೆ 12 ವರ್ಷದ ಪದ್ಮಾವತಿ ಎಂಬ ತನ್ನದೇ ಬ್ರಾಹ್ಮಣ ಕುಲದ ಪದ್ಮಾವತಿ ಎಂಬ ಕನ್ಯೆಯೊಂದಿಗೆ ಮದುವೆಯಾಗಿರುತ್ತದೆ. ಆದರೆ ಅವರ ತಂದೆ ಮುಸಲ್ಮಾನ ರಾಜನ ಆಸ್ತಾನದಲ್ಲಿ ಸ್ಥಾನ ಪಡೆಯಲು ಮತಾಂತರ ಆಗುತ್ತಾನೆ. ಇದೇ ಕಾರಣಕ್ಕೆ ನಭನ ಮನೆಯವರು ಪದ್ಮಾವತಿಯನ್ನು ಮನೆಗೆ ತಂದುಕೊಳ್ಳುವುದಿಲ್ಲ. ಇಲ್ಲಿ ಲೇಖಕರ ಒಂದು ಸಂದೇಶವಿದೆ. ಮುಸಲ್ಮಾನ ರಾಜರಲ್ಲಿ ಕೆಲಸ ಮಾಡಬೇಕೆಂದರೆ ಮತಾಂತರವಾಗಲೇಬೇಕಾಗಿತ್ತು ಎಂಬುದು. ಇದು ಇತಿಹಾಸದ ಅರಿವುಗೇಡಿತನವಲ್ಲದೇ ಮತ್ತೇನೂ ಅಲ್ಲ. ಮುಂದೇ ಪದ್ಮಾವತಿ ಉತ್ ಪುನ್ನಿಸ ಆಗಿ ಆಗ್ರಾದಲ್ಲಿ ಅರೇಬಿಕ್, ಸಂಸ್ಕೃತ, ನೃತ್ಯ, ಸಂಗೀತ ಕಲಿತು ಆಗ್ರಾದ ಪ್ರತಿಷ್ಠಿತ ಹಾಗೂ ಪ್ರತಿಭಾವಂತ ಸ್ತ್ರೀವರ್ಗಕ್ಕೆ ಸೇರುತ್ತಾಳೆ. ಆದರೂ ಅವಳು ಗುಣಸ್ವಭಾವದಲ್ಲಿ ಹೇಗೆ ಕೀಳು ಮತ್ತು ಓರ್ವ ನರಹತ್ಯೆ ಮಾಡುವವನಲ್ಲಿ ಬೆಳೆದರೂ ತನ್ನ ಬ್ರಾಹಣ್ಯವನ್ನು ಉಳಿಸಿಕೊಂಡ ಕಪಾಲಕುಂಡಲ ಹೇಗೆ ಶ್ರೇಷ್ಠ ಎಂದು ಈ ಕೃತಿ ಸಾರಿಸಾರಿ ಹೇಳುತ್ತದೆ. ಇಸ್ಲಾಂ ಧರ್ಮ ಸೇರಿದ ತಕ್ಷಣ ಪದ್ಮಾವತಿಗೆ ತನ್ನ ಸದ್ಗುಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಆ ಧರ್ಮದಲ್ಲಿ ಸದ್ಗುಣ ಸಂಪನ್ನರು ಇರಲು ಸಾಧ್ಯವಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದಂತಿದೆ. ಅವಳು ರಾಜಕುಮಾರನೊಂದಿಗೆ ಸಂಬಂಧ ಇಟ್ಟುಕೊಂಡು ಅಪಾರ ಸಂಪತ್ತು ಗಳಿಸುತ್ತಾಳೆ. ಹಲವಾರು ಕುತಂತ್ರಗಳನ್ನು ಮಾಡಿ ಪಟ್ಟದ ರಾಣಿಯಾಗಲು ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸಲು ಯತ್ನಿಸುತ್ತಾಳೆ. ನಂತರದ ಒಂದು ದಿನ ನಭಕುಮಾರ ಮತ್ತು ಕಪಾಲಕುಂಡಲ ಪ್ರಯಾಣಿಸುವ ದಾರಿಯಲ್ಲಿ ತಾನೂ ಪ್ರಯಾಣಿಸುವಾಗ ಕಳ್ಳರ ದಾಳಿಗೆ ಬಲಿಯಾಗಿ ಮರಳಿನ ದಿಬ್ಬದಲ್ಲಿ ಸಿಕ್ಕು ನರಳುವಾಗ ಮತ್ತೇ ಅವಳನ್ನು ಕಾಪಾಡಲು ನಭಕುಮಾರನೇ ಬರಬೇಕಾಗುತ್ತದೆ.
ಆಶ್ಚರ್ಯವೆಂದರೆ ಆಗಲೇ ಅವಳು ಅವನನ್ನು ಗುರುತು ಹಿಡಿಯುತ್ತಾಳೆ ಆದರೇ ಅವನಿಗೆ ಅವಳು ಯಾರೆಂದು ಗೊತ್ತಾಗುವುದೇ ಇಲ್ಲ. ಅಷ್ಟೆಲ್ಲ ವೈಭೋಗದಲ್ಲಿ ಬದುಕುತ್ತಿರುವಾಗಲೂ ಅವಳು ಆ ಕ್ಷಣದಲ್ಲೇ ಆ ತನ್ನ ಬಡ ಬ್ರಾಹ್ಮಣನಾಗಿರುವ ಹಳೇ ಗಂಡನಲ್ಲಿ ಮೋಹಿತಳಾಗುತ್ತಾಳೆ. ಅಂದರೆ ಇಸ್ಲಾಂ ಮತ ಸೇರಿ ಅವಳು ಅಷ್ಟು ಚಂಚಲೆಯಾಗಿರುತ್ತಾಳೆಂಬುದು ಕೃತಿಯ ಅಭಿಪ್ರಾಯ.
ಪ್ರಯಾಣ ಮುಗಿಸಿ ಎಲ್ಲರೂ ಒಂದು ಛತ್ರ ಸೇರಿದ ನಂತರ ಉತ್ ಫುನ್ನಿಸ್ ತನ್ನಲ್ಲಿರುವ ವಜ್ರ ವೈಢೂರ್ಯದ ಆಭರಣಗಳನ್ನೆಲ್ಲವನ್ನೂ ಕಪಾಲಕುಂಡಲಳಿಗೆ ತೊಡಿಸಿ ಅವಳ ಸೌಂದರ್ಯವನ್ನು ಹೊಗಳುತ್ತಾಳೆ. ಮತ್ತು ಅದೇ ರಾತ್ರಿ ನಭಕುಮಾರನನ್ನು ತನ್ನೊಂದಿಗೆ ಸರಸಕ್ಕೆ ಕರೆಯುತ್ತಾಳೆ ಆದರೂ ಅವಳು ಯಾರೆಂದು ಅವನಿಗೆ ತಿಳಿಯುವುದೇ ಇಲ್ಲ. ಇಲ್ಲಿ ನಭನ ಸಮಚಿತ್ತತೆಯನ್ನು ಶ್ರೇಷ್ಠೀಕರಿಸಿರುವುದು ಹೇಗೆಂದರೆ ಅವನು ತಾನು ಬ್ರಾಹ್ಮಣನಾಗಿರುವುದರಿಂದ ಅದು ಸಾಧ್ಯವಿಲ್ಲ ಎನ್ನುತ್ತಾನೆ . ಇದು ಸ್ಪಷ್ಟೀಕರಿಸುವುದೇನೆಂದರೆ ಅದು ಬ್ರಾಹ್ಮಣೇತರು ಮಾಡುವಂಥದ್ದು ಎಂಬುದನ್ನು. ಇಲ್ಲಿ ನೈತಿಕತೆ ಎಂಬುವುದು ಬ್ರಾಹ್ಮಣರ ಮೀಸಲು ಎಂದು ಒತ್ತಿ ಹೇಳಲಾಗಿದೆ.
ರಾಜಕುಮಾರನೊಂದಿಗೆ ಸಂಧವಿದ್ದ ಉತ್ ಪುನ್ನಿಸ್ ರಾಜನ ಸಾವಿನಂತರ ಯುವರಾಜನ ಪಟ್ಟಾಭಿಷೇಕದ ನಂತರ ತಾನೇ ಪಟ್ಟದ ರಾಣಿಯಾಗಲು ಎಲ ಪ್ರಯತ್ನಗಳನ್ನು ನಡೆಸಿ ಕಾರಣಾಂತರಗಳಿಂದ ವಿಫಲಳಾಗುತ್ತಾಳೆ. ಅಲ್ಲಿನ ಸೋಲಿನ ನಂತರ ಅವಳು ಸೀದಾ ಬರುವುದು ನಭಕುಮಾರ ವಾಸಿಸುವ ಹಳ್ಳಿಗೆ, ಅವನನ್ನು ಪಡೆಯುವುದಕ್ಕಾಗಿ.
ತರ್ಕ ಕೇಳಬೇಡಿ.. ಮತ್ತೇ ಅವಳು ಚಂಚಲೆ, ಮೋಹಿನಿ, ದೈಹಿಕ ವಾಂಛೆಯವಳು ಅಷ್ಟನ್ನೇ ಇದಕ್ಕೆ ಕೃತಿ ಸಕಾರಣವಾಗಿ ಒದಗಿಸುತ್ತದೆ.
ಆ ಹಳ್ಳಯಲ್ಲಿ ಒಂದು ದೊಡ್ಡ ಮನೆ ಪಡೆದು ವಾಸ ಆರಂಭಿಸಿದ ಕೆಲವೇ ದಿನಗಳಲ್ಲಿ ನಭನನ್ನು ವಶಪಡಿಸಿಕೊಳ್ಳುವ ತಂತ್ರವನ್ನು ರೂಪಿಸುತ್ತಾಳೆ. ಕಪಾಲ,ಕಪಾಲಕುಂಡಲ ಮತ್ತು ನಭಕುಮಾರ ಇವರ ಹಿನ್ನೆಲೆ ಸಂಬಂಧಗಳನ್ನೆಲ್ಲ ತಿಳಿದು ಕಪಾಲನೊಂದಿಗೆ ಶಾಮೀಲಾಗುತ್ತಾಳೆ ಮತ್ತು ನಭನಿಂದ ಕಪಾಲಕುಂಡಲಳನ್ನು ಬೇರ್ಪಡಿಸುವ ಸಂಚು ರೂಪಿಸುತ್ತಾಳೆ. ಅದರ ಪ್ರಕಾರ ಉತ್ ಪುನ್ನಸ್ ರಾಜ ಕುವರನ ವೇಶ ಧರಿಸಿ ಯಾವ ಭಯವೂ ಇಲ್ಲದೇ ರಾತ್ರಿ ಹೊತ್ತು ವನಸ್ಪತಿ ಔಷದಕ್ಕಾಗಿ ರಾತ್ರಿ ಹೊತ್ತು ಕಾಡಿನಲ್ಲಿ ಅಲೆಯುವ ಕಪಾಲಕುಂಡಳನ್ನು ಎದರುಗೊಂಡು ಮಾತುಕತೆ ನಡೆಸುವುದು. ಕಪಾಲಕ ನಭನನ್ನು ಕರೆದು ತಂದು ಅವಳ ಶೀಲದ ಮೇಲೆ ಶಂಕೆ ಮೂಡುವಂತೆ ಮಾಡುವುದು. ನಭನ ಮೂಲಕವೇ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವುದು. ಆ ಸಂಚು ಯಶಸ್ವಿಯಾಗುತ್ತದೆ. ನಭನಿಗೆ ಹೆಂಡತಿಯ ಮೇಲೆ ಸಂಶಯ ಬಂದು ಕಪಾಲನ ಬೆಂಬಲಕ್ಕೆ ನಿಲ್ಲುತ್ತಾನೆ. ಕಪಾಲನ ವೃತ ಪೂರ್ಣಗೊಳ್ಳಲು ಸ್ತ್ರೀ ಬಲಿಯ ಅವಶ್ಯವಿರುತ್ತದೆ. ಅದಕ್ಕೆ ಕಪಾಲಕುಂಡಲಳನ್ನು ಬಲಿ ಕೊಡುವ ತಯಾರಿಯಲ್ಲಿರುತ್ತಾನೆ. ಈ ಮೂಲಕ ಸಾಧಿಸಲಾಗುತ್ತಿರುವುದೇನೆಂದರೆ ಅವೈದಿಕ ಸಾಧಕರು ತಮ್ಮ ಸ್ವಾರ್ಥ ಸಾಧನೆಗಾಗಿ ಸಾಕಿ ಸಲುಹಿದವರನ್ನೇ ಬಲಿ ಕೊಡುವಷ್ಟು ಹೃದಯಹೀನರು ಎಂಬುದನ್ನು.
ಪದ್ಮಾವತಿ ಅಲಿಯಾಸ್ ಉತ್ ಪುನ್ನಸ್ ತನ್ನ ಹಿನ್ನೆಲೆಯ ಕತೆಯನ್ನೆಲ್ಲ ಹೇಳಿ ನಿನಗೆ ಎಷ್ಟು ಬೇಕಾದರೂ ಸಂಪತ್ತು ಕೊಡುತ್ತೇನೆ ನಭನನ್ನು ತನಗೆ ಬಿಟ್ಟು ಎಲ್ಲಾದರೂ ದೂರ ಹೋಗು ಎಂದು ಹೇಳುತ್ತಾಳೆ. ಇದಕ್ಕೆ ಯಾವ ವಿರೋಧವನ್ನು ಒಡ್ಡದೇ, ಯಾವ ಸಂಪತ್ತನ್ನು ಬಯಸದೇ ಕಪಾಲಕುಂಡಲ ಕಾಳಿ ಮಾತೆ ಪೂಜೆ ಪೂರ್ಣಗೊಳಿಸಲು ತಾನು ಬಲಿಪೀಠಕ್ಕೆ ಹೋಗಲು ಸಿದ್ದಳಾಗುತ್ತಾಳೆ. ಇದು ನಭನಿಗಾಗಲಿ ಕಪಾಲನಿಗಾಗಲಿ ಗೊತ್ತಿರುವುದಿಲ್ಲ. ಅವನು ಕಪಾಲ ಕುಡಿಸಿದ ಹೆಂಡದ ನಶೆಯಲ್ಲಿ ಶೀಲದ ಮೇಲಿನ ಸಂಶಯದಿಂದ ಬಲವಂತವಾಗಿ ಅವಳನ್ನು ಎಳೆದುಕೊಂಡು ಬಲಿಪೀಠಕ್ಕೆ ಕರೆದೊಯ್ಯುತ್ತಾನೆ. ಎಲ್ಲವೂ ಗೊತ್ತಿದ್ದ ಕಾಪಲಕುಂಡಲ ಉತ್ ಪುನ್ನಿಸ್ ಗಾಗಿ ಬಲಿಯಾಗಲು ತಯಾರಾಗಿ ಹೋಗುತ್ತಾಳೆ. ಇಲ್ಲಿ ಮುಸ್ಲೀಂ ಉತ್ ಪುನ್ನಿಸ್ ತನ್ನ ಸ್ವಾರ್ಥ ಮತ್ತು ಮೋಹಕ್ಕಾಗಿ ಕಾರ್ಯಸಾಧಿದರೆ ಬ್ರಾಹ್ಮಣಳಾದವಳು ಇನ್ನೊಬ್ಬರ ಬದುಕಿಗಾಗಿ ತನ್ನ ಪ್ರಾಣವನ್ನೇ ಬಲಿಕೊಡಲು ಬಂದ ತ್ಯಾಗಮಯಿಯಾಗಿ ಚಿತ್ರಿತವಾಗುತ್ತಾಳೆ.
ನಂತರ ನಶೆ ಇಳಿದು ಕಪಾಲಕುಂಡಲಳಿಗಾಗಿ ನಭನ ಮನಸ್ಸು ವ್ಯಾಕುಲಗೊಳ್ಳುತ್ತದೆ. ಆಗ ಅವನು “ನೀನು ಕಳಂಕಿತಳಲ್ಲ ಎಂದು ಒಂದೇ ಒಂದು ಸಾರಿ ಹೇಳಿಬಿಡು. ನಾನು ನಿನ್ನನ್ನು ಮರಳಿ ಮನೆಗೆ ಕರೆದೊಯ್ಯುತ್ತೇನೆ” ಅನ್ನುತ್ತಾನೆ. ಕೆಲವು ಸಾರಿ ಕೇಳಿದ ನಂತರ ಅವಳು ‘ನಾನು ಕಳಂಕಿತಳಲ್ಲ, ಉತ್ ಪುನ್ನಿಸ್ ಬೇರೆ ಯಾರು ಅಲ್ಲ ನಿನ್ನ ಮೊದಲ ಹೆಂಡತಿ, ಅವಳಿಗಾಗಿ ತಾನು ಈ ನಿರ್ಧಾರಕ್ಕೆ ಬಂದಿದ್ದಾಗಿ ಎಲ್ಲ ಕತೆಯನ್ನು ಹೇಳುತ್ತಾಳೆ. ಆಗ ನಭನಿಗೆ ದಿಗಿಲಾಗುತ್ತದೆ. ಮತ್ತು ಚಿಂತಿತನಾಗುತ್ತಾನೆ. ಮತ್ತು ಕಪಾಲಕುಂಡಲಳ ನಿಷ್ಕಳಂಕತನವ ಅರಿತು ಕನ್ನೀರು ಹಾಕುತ್ತಾನೆ.
ಮುಂದೆ? ವಿಚಿತ್ರವೆಂದರೆ ಅಷ್ಟರಲ್ಲಿ ಇವರು ನಿಂತ ಮರಳಿನ ದಿಬ್ಬಕ್ಕೆ ಗಂಗಾಸಾಗರದ ಭಾರೀ ಅಲೆಗಳು ಬಂದು ಅಪ್ಪಳಿಸಲಾರಂಭಿಸುತ್ತವೆ. ದಿಬ್ಬ ಕುಸಿದು ಇಬ್ಬರೂ ಸಾಗರದ ಪಾಲಾಗುತ್ತಾರೆ.
ಇಲ್ಲಿ ಬ್ರಾಹ್ಮಣ ಕನ್ಯೆಯಾಗಿ ಉಳಿದಿರುವ ಕಪಾಲಕುಂಡಲಳ ಗುಣಶ್ರೇಷ್ಠತೆ ಮತ್ತು ಬ್ರಾಹ್ಮಣೆಯಾಗಿದ್ದರೂ ಇಸ್ಲಾಂಗೆ ಮತಾಂತರವಾದುದರಿಂದ ಕಳೆದುಕೊಂಡ ನೈತಿಕ ಸ್ವಭಾವದ ಕುರಿತು ಹೇಳಲಾಗಿದೆ.
ಬ್ರಾಹ್ಮಣ್ಯದ ಕಾರಣಕ್ಕಾಗಿ ಒಬ್ಬಳು ಬಲಿಪೀಠದಿಂದ ಬದುಕಿಸಿದ ಗಂಡನಿಗಾಗಿ ತಾನು ಬಲಿಯಾಗಲು ಹೋಗುವ ಇನ್ನೊಬ್ಬಳು ಅದರಿಂದ ದೂರವಾದ ಕಾರಣ ಕಾಮಾತುರಳಾಗಿಯೂ, ನೈತಿಕವಲ್ಲದ ಮಾರ್ಗದಲ್ಲಿ ಸಕಲ ಸಂಪತ್ತುಗಳಿಸಿ, ಬೇರೆ ಬೇರೆ ಸಂಬಂಧಗಳನ್ನು ಅನುಭವಿಸಿಯೂ ಮತ್ತೇ ಮೊದಲ ಪುರುಷನಲ್ಲಿ ಅನುರಕ್ತಳಾಗಿ ಅವನನ್ನು ಪಡೆಯಲು ಬೇರೆಯವಳನ್ನು ಬಲಿಕೊಡಲು ಸಿದ್ದಳಾಗುತ್ತಾಳೆ ಎಂದು ಬಿಂಬಿತವಾಗಿದೆ.
ಕಪಾಲನ ಕೆಟ್ಟ ಆಲೋಚನೆಗಳಿಗೂ ಉತ್ ಪುನ್ನಿಸ್ ಳ ಸಂಚಿಗೂ ಬಲಿಯಾದ ನಭಕುಮಾರ ಹೆಂಡದ ಮತ್ತಿನಲ್ಲೂ ಹೆಂಡತಿಯ ಮೇಲಿನ ಸಂಶಯದಿಂದಲೂ ಅವಳನ್ನು ಬಲಿಪೀಠಕ್ಕೆ ಕರೆದುಕೊಂಡು ಹೋಗುವ ಕೆಟ್ಟ ನಿರ್ಧಾರಕ್ಕೆ ಬಂದು ನಶೆ ಇಳಿದ ಮೇಲೆ ವಿವೇಚನೆ ಜಾಗ್ರತವಾಗಿ ಮತ್ತೇ ಅವಳ ಮೇಲೆ ಕರುಣೆ ತೋರುತ್ತಿರುವ ಕರುಣಾಮಯಿಯಂತೆ ಗೋಚರಿಸುತ್ತಾನೆ. ಅದೇ ಕಾರಣಕ್ಕೆ ಅವಳು ನಿಷ್ಕಳಂಕ ಎಂದು ಗೊತ್ತಾಗುತ್ತಲೇ ಅವರಿಬ್ಬರೂ ಯಾವುದೇ ಕಳಂಕವನ್ನು ಹೊರದೇ ಪವಿತ್ರ ಗಂಗೆಯ ಪಾಲಾದರು ಎಂದು ಕಾದಂಬರಿ ಹೇಳುತ್ತದೆ. ಇಲ್ಲಿ ಮತಾಂತರಗೊಂಡ ಪದ್ಮಾವತಿ ಮತ್ತು ಕಾಳಿ ಆರಾಧಕ ಕಪಾಲನ ಮೇಲೆ ಎಲ್ಲ ಕಳಂಕವನ್ನು ಹೊರಿಸಿ ಬ್ರಾಹ್ಮಣ್ಯ ಕಳಂಕರಹಿತವಾದುದು ಶ್ರೇಷ್ಠ, ಸದ್ಗುಣಗಳ ಆಗರವಾಗಿರುವುದು ಎಂಬ ಲೇಖಕರ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ.
.
ಮಹಾಲಿಂಗಪ್ಪ ಆಲಬಾಳ ಮಾನವ ಬಂಧುತ್ವ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಈಗ ಬೆಳಗಾವಿ ವಿಭಾಗದ ಸಂಚಾಲಕರಾಗಿದ್ದಾರೆ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು AISF ರಾಜ್ಯ ಸಂಚಾಲಕರಾಗಿದ್ದರು. ಅಗ್ನಿ, ಹಾಗೂ ಗೌರಿ ಲಂಕೇಶ ಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ಸಾಮಾಜಿಕ ರಾಜಕೀಯ ಚಳುವಳಿಗಳೊಂದಿಗೆ ನಿರಂತರ ಒಡನಾಟ ವಿಟ್ಟುಕೊಂಡಿದ್ದಾರೆ.
Be the first to comment on "ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಪಾಲಕುಂಡಲ – ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿಹಿಡಿಯಲೆಂದೇ ರಚಿತವಾದ ಕೃತಿ"