ಕ್ಯಾಸ್ಟ್ ಕೆಮಿಸ್ಟ್ರಿ
ಡಾ. ಬಂಜಗೆರೆ ಜಯಪ್ರಕಾಶ್ ಮುನ್ನುಡಿ
ಡಾ. ಸಿ.ಜಿ. ಲಕ್ಷ್ಮೀಪತಿಯವರ `ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಕರ್ನಾಕಟದ ಸಮಾಜಶಾಸ್ತ್ರ ಸಂಬಂಧಿ ಅಧ್ಯಯನ ನಿರತ ವಲಯದೊಳಗೆ ಬರುತ್ತಿರುವ ಹೊಸ ತಲೆಮಾರಿನ ಮುನ್ನಡೆಗೊಂದು ನಿದರ್ಶನದಂತಿದೆ. ಈ ಬೆಳವಣಿಗೆ ಆಕಸ್ಮಿಕವಾದುದಲ್ಲ ಅಥವಾ ಸಮಾಜಶಾಸ್ತ್ರದ ಕ್ಷೇತ್ರಕ್ಕೆ ಮಾತ್ರ ಪರಿಮಿತಗೊಂಡಿದ್ದೂ ಅಲ್ಲ. ಬದಲಾಗುತ್ತಿರುವ ಕಾಲಮಾನ ತನ್ನ ಸತ್ವವನ್ನು ಹಲವು ರೂಪದಲ್ಲಿ ವ್ಯಕ್ತಗೊಳಿಸುತ್ತದೆ. ಸಾಹಿತ್ಯ, ವಿಚಾರ, ಬದುಕಿನ ಕ್ರಮ ಹಾಗೂ ಚಿಂತನಾ ವಿಧಾನಗಳು ಈ ಹೊಸತನದ ಆಗಮನವನ್ನು ಹೆಚ್ಚು ನಿರ್ದಿಷ್ಟವಾಗಿ ಸೂಚಿಸಬಲ್ಲ ಕನ್ನಡಿಗಳಾಗಿರುತ್ತವಷ್ಟೆ.
ಸಮಾಜಶಾಸ್ತ್ರದ ಅಭ್ಯಾಸಿಗಳಾಗಿರುವ ಬಹುಪಾಲು ಜನರಿಗೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಅಧ್ಯಯನ ಮತ್ತು ವಿಶ್ಲೇಷಣೆಗಳು ಜಡವಾದ, ಸಾಂಪ್ರದಾಯಿಕ ನೆಲೆಗಳಲ್ಲಿ ನಿಂತುಕೊಂಡಂತೆ ಅನಿಸುವುದಕ್ಕೆ ಮುಖ್ಯ ಕಾರಣವೇನಿರಬಹುದು ಎಂಬುದನ್ನು ನಾವು ಈ ಸಂದರ್ಭದಲ್ಲಿ ಪರಿಶೀಲಿಸಬಹುದು. ಹೆಚ್ಚಿನ ಸಲ ಸಮಾಜ ಶಾಸ್ತ್ರದ ಅಭ್ಯಾಸಿಯೊಬ್ಬ ಅದರ ಅಧ್ಯಯನ ಮತ್ತು ಅನ್ವಯಿಕತೆ ಯನ್ನು ಶೈಕ್ಷಣಿಕ ಚಟುವಟಿಕೆಯನ್ನಾಗಿ ಮಾತ್ರ ಪರಿಗಣಿಸುತ್ತಾನೆ. ಶಾಸ್ತ್ರಗ್ರಂಥಗಳನ್ನು ಓದುವವರು ಶೈಕ್ಷಣಿಕ ವಲಯಕ್ಕೆ ಸಂಬಂಧ ಪಟ್ಟವರೇ ಹೆಚ್ಚಾದುದರಿಂದ, ಪರೀಕ್ಷೆಗೆ ಉತ್ತರಿಸುವ ಅಥವಾ ಸಂದರ್ಶನ ಎದುರಿಸುವ ಸಿದ್ಧತೆಯ ಅಂಗವಾಗಿ ಇವುಗಳನ್ನು ಓದಲಾಗುತ್ತದೆ ಎಂಬ ಪೂರ್ವಗ್ರಹಿಕೆಯ ನೆಲೆಯಿಂದ ಹೊರ ಬೀಳುವ ಕೃತಿಗಳೇ ಹೆಚ್ಚು.
ಇಂತಹ ಸಂದರ್ಭದಲ್ಲಿ ಅಧ್ಯಯನಕಾರನಿಗೆ, ಕೃತಿಕಾರನಿಗೆ ಬೇಕಾದ ಚಲನಶೀಲ ದೃಷ್ಟಿಕೋನ ಮತ್ತು ಸೃಜನಶೀಲತೆಯ ಸಹಜ ಲವಲವಿಕೆಗಳು ಇಲ್ಲದಂತಾಗಿಬಿಡುತ್ತವೆ. ಬರವಣಿಗೆ ಯಾಂತ್ರಿಕ ವಾಗುತ್ತದೆ. ಹೆಚ್ಚೂ ಕಡಿಮೆ ಮಂತ್ರಪಠಣ ಮಾಡುವವರ ಸ್ಪಂದನಾರಾಹಿತ್ಯತೆಯಿಂದ ಹಳೆಯ ಸಿದ್ಧಾಂತಗಳನ್ನು, ಸೂತ್ರಗಳನ್ನು ಪುನರುದ್ಧರಿಸುತ್ತಾ ಹೋಗಲಾಗುತ್ತದೆ. ಇದರಿಂದಾಗಿಯೇ ಹೆಚ್ಚಿನ ಮಾನವಿ ಶಾಸ್ತ್ರಗಳ ವಿದ್ವಾಂಸರು `ಸ್ಮøತಿ ಭಾಷ್ಯಕಾರರ’ ಹಂತದಲ್ಲಿ ಮಾತ್ರ ಕ್ರಿಯಾಶೀಲರಾಗಿರುವಂತೆ ಕಂಡುಬರುತ್ತದೆ.
ಸಮಾಜವನ್ನು ಅದರ ಚಲನಶೀಲತೆಯೊಂದಿಗೆ ಅರ್ಥಮಾಡಿ ಕೊಳ್ಳಲು ಸಮಾಜಶಾಸ್ತ್ರದ ಗ್ರಂಥಗಳಿಗಿಂತ ಸಾಹಿತ್ಯ ಕೃತಿಗಳೇ ಹೆಚ್ಚು ಉಪಯುಕ್ತ ಎಂಬ ಧೋರಣೆ ಹಲವಾರು ಚಿಂತಕರಲ್ಲಿ ಮೂಡಿದ್ದಕ್ಕೆ ಮುಖ್ಯ ಕಾರಣ, ಮಾನವಿಕ ವಿಜ್ಞಾನದ ಬರಹಗಾರರ ಚಿಂತನಾ ಕ್ರಮದಲ್ಲಿನ ಸ್ಥಾಗಿತ್ಯತೆ, ಸಾಹಿತ್ಯ ಕೃತಿಯೊಂದು ಉತ್ತಮ ಸಮಾಜಶಾಸ್ತ್ರೀಯ ಅಧ್ಯಯನವಾಗಬಹುದಾದರೆ, ಸಮಾಜಶಾಸ್ತ್ರದ ಕೃತಿಯೊಂದು ಸಾಹಿತ್ಯ ಕೃತಿಯಂತೆಯೇ ಹೊಸ ಒಳನೋಟಗಳನ್ನು ಕೊಡುವ ಬರವಣಿಗೆ ಯಾಕಾಗಬಾರದು? ಹಾಗಾಗುವಂತೆ ಮಾಡಲಿಕ್ಕೆ ಸಾಧ್ಯವಿದೆ. ಆದರೆ ಅದಕ್ಕೆ ಬೇಕಾದ ಉತ್ಸಾಹವನ್ನು ಪಡೆಯಲು ಕೃತಿಕಾರನಿಗೆ ಕೇವಲ ಗ್ರಂಥಗಳ ಸಹವಾಸವಿದ್ದರೆ ಸಾಕಾಗುವುದಿಲ್ಲ. ಸಮಾಜದೊಳಗಿನಿಂದ ಮಹತ್ತರ ಪ್ರೇರಣೆಯನ್ನು ಪಡೆಯುವ ಲೇಖಕ ಮಾತ್ರ ತನ್ನ ಅಧ್ಯಯನದಲ್ಲಿ ಜೀವಂತಿಕೆಯನ್ನು ತರಬಲ್ಲ. ನಿರ್ದಿಷ್ಟ ವರ್ಗದ ಓದುಗರನ್ನು ಮಾತ್ರ ತನ್ನ ಗಮನ ದಲ್ಲಿರಿಸಿಕೊಳ್ಳದೆ ಇಡೀ ಸಮಾಜವನ್ನು ತನ್ನ ಓದುಗಬಳಗ ವನ್ನಾಗಿ ಭಾವಿಸಿಕೊಂಡು ಬರೆಯುವ ಅಧ್ಯಯನಕಾರ ಇತಿಹಾಸವನ್ನಾಗಲೀ, ಅರ್ಥಶಾಸ್ತ್ರವನ್ನಾಗಲೀ ಕಡೆಗೆ ವಿಶ್ವಕೋಶವನ್ನಾಗಲಿ ಅದರ ಜಡತೆಯಿಂದ ಮುಕ್ತವಾಗಿರುವ ರೀತಿಯಲ್ಲಿ ರೂಪಿಸಬಲ್ಲ.
ಸಮಾಜಶಾಸ್ತ್ರ ಬರವಣಿಗೆಯ ಬಹುಪಾಲು ಪುಸ್ತಕಗಳು ತರಗತಿ ಯಲ್ಲಿ ಬೋಧಿಸುವ ಸೀಮಿತ ಲಕ್ಷ್ಯದಿಂದ ರಚಿತವಾಗುತ್ತವೆ. ಆದ್ದರಿಂದ ಅವುಗಳಿಗಿರುವ ಕಟ್ಟುಪಾಡುಗಳು ಹೆಚ್ಚು. ಇದಲ್ಲದೆ ಕೃತಿಕಾರರಲ್ಲಿ ನೆಲೆಸಿರುವ ಸಾಂಪ್ರದಾಯಿಕ ದೃಷ್ಟಿಕೋನ ಅವರ ಚಿಂತನಾಚಲನೆಯನ್ನು ನಿಯಂತ್ರಿಸುವ ಮತ್ತೊಂದು ಸಂಕೋಲೆ. ಹುಟುಕಾಟಗಳಿರದಲ್ಲಿ ಹೊಸತೇನೂ ಕಾಣಿಸುವುದಿಲ್ಲ. ಅದೊಂದು ಬಗೆಯ ಸ್ವಯಂ ವಿರಚನವಾದಿ ನಿಲುವು. ತಾನು ಅರಿತಿದ್ದು ತಾನು ಕಲಿತಿದ್ದು ಸಂಪೂರ್ಣವಲ್ಲ ಎಂಬ ಶೋಧಕ ಗುಣದಿಂದ ಹೊರಡುವ ವಿದ್ವಾಂಸ ಹಲವು ತಪ್ಪುಗಳನ್ನು ಮಾಡುವ ಸಾಧ್ಯತೆ ಇದೆಯಾದರೂ ಜನತೆಯಿಂದ ವ್ಯರ್ಥವಾಗಿ ಕಳೆದುಹೋಗುವುದಿಲ್ಲ.
ಸಮಾಜ ಶಾಸ್ತ್ರೀಯ ಅಧ್ಯಯನಗಳಿಗೆ ದೇಸೀ ಅಂತಃಸತ್ವವಿಲ್ಲದಿದ್ದರೆ ಅವು ಹೊಸದಾಗಿ ಏನನ್ನೂ ಹೇಳಲಿಕ್ಕೆ ಸಾಧ್ಯವಾಗುವುದಿಲ್ಲ. ವಿವಾಹ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ, ಮಾರ್ಗನ್ ಮತ್ತು ಫ್ರೆಡರಿಕ್ ಏಂಗೆಲ್ಸ್ ಬರೆದ ಕೃತಿಗಳು ಮಾರ್ಗ ಪ್ರವರ್ತಕ ಕೃತಿಗಳೇನೋ ಹೌದು. ಆದರೆ ಹಾದಿಗಳೇ ಗುರಿಯೂ ಲಕ್ಷ್ಯವೂ ಅಲ್ಲ. ವಿ.ಕಾ. ರಾಜವಾಡೆಯವರು ಭಾರತೀಯ ವಿವಾಹ ಸಂಸ್ಥೆಯ ಹುಟ್ಟು ಬೆಳವಣಿಗೆಗಳ ಬಗ್ಗೆ ಮಹಾರಾಷ್ಟ್ರ ಸಂದರ್ಭವನ್ನು ಕೇಂದ್ರ ಗಮನವಾಗಿಸಿಕೊಂಡು ಬರೆದ ಕೃತಿ, ಆಂಧ್ರಪ್ರದೇಶದ ತಾಪಿ ಧರ್ಮಾರಾವ್ ದೇವಾಲಯಗಳ ಮೇಲಿನ ಲೈಂಗಿಕ ಶಿಲ್ಪಗಳ ಬಗ್ಗೆ ಬರೆದ ಕೃತಿ ಅಥವಾ ರಾ.ಚಿಂ. ಡೇರೆ, ಶಂ.ಬಾ. ಜೋಶಿ ಯವರ ಹಲವಾರು ಬರವಣಿಗೆಗಳು ಸಮಾಜದ ಹೊಸ ಬಗೆಯ ವಸ್ತುನಿಷ್ಠ ಅಧ್ಯಯನಗಳಾಗಿರುವುದನ್ನು ನೋಡಿದರೆ, ಕೇವಲ ಸಿದ್ಧಾಂತಗಳನ್ನು ಪರಿಚಯಿಸುವ, ವಿವರಿಸುವ ಶಾಸ್ತ್ರಜ್ಞರಿಗಿಂತ, ಮಾರ್ಗವೊಂದನ್ನು ಅಳವಡಿಸಿಕೊಂಡು ಆ ಮೂಲಕವೇ ಹೊಸ ಮಾರ್ಗಗಳನ್ನು ಹುಡುಕುತ್ತಾ, ಹೊಸ ಹೊಸ ನೆಲೆಗಳನ್ನೂ ದರ್ಶಿಸುವ ಬರವಣಿಗೆಯ ಸಾರ್ಥಕತೆ ಮತ್ತು ರೋಮಾಂಚನ ಅರ್ಥವಾಗುತ್ತದೆ. ಅವರ ಬರವಣಿಗೆಗಳು ಇತಿಹಾಸಕಾರರಿಗೂ ಬೇಕು, ಸಮಾಜಶಾಸ್ತ್ರಜ್ಞರಿಗೂ ಬೇಕು, ಸಾಹಿತ್ಯಾಭ್ಯಾಸಿಗಳಿಗೂ ಬೇಕು, ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳ ಬದಲಾವಣೆ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸುವ ರಾಜಕೀಯ ಆಂದೋಲನಗಳಿಗೂ ಬೇಕು.
ತನ್ನೊಳಗಿನ ಪ್ರೇರಣೆ ಮತ್ತು ಹಂಬಲ ಸಮಾಜದೊಳಗಿನ ಹುಡುಕಾಟವಾಗಿ, ಅದು ಕಡೆಗೆ ತನ್ನ ಜ್ಞಾನ ಕ್ಷೇತ್ರದ ಅಧ್ಯಯನವು ಆಗಿ ಮಾರ್ಪಡುವ ಮಾದರಿಯ ಬರವಣಿಗೆಯನ್ನು ನಾನು ಸಿ.ಜಿ. ಲಕ್ಷ್ಮೀಪತಿಯವರ ಈ ಕೃತಿಯಲ್ಲಿ ಗುರುತಿಸಿದ್ದೇನೆ. ಇವರಿಗೆ ಜಾತಿಯನ್ನು ವಿವರಿಸುವಾಗ ಅದರ ಸಾಂಸ್ಥಿಕ ಗುಣ ಲಕ್ಷಣಗಳನ್ನು ಮಾತ್ರ ಮುಂದಿಡುವ ಕ್ರಮ ರೂಢಿಗತವಾದದ್ದು. ಆದರೆ, ಅದರ ಮಾನವಿಕ ಅಭಿವ್ಯಕ್ತಿ ಲಕ್ಷಣಗಳೇನು? ಬದಲಾದ ಕಾಲಘಟ್ಟದಲ್ಲಿ ಜಾತಿ ಕುರುಹುಗಳು ಊರುಗಳಿನ ಕೇರಿಗಳ ಅಸ್ತಿತ್ವವಾಗಿ, ಉಡುಪು, ಆಹಾರಗಳ ಭಿನ್ನತೆಯಾಗಿ, ಗೃಹ ನಿರ್ಮಾಣ ರೂಪಗಳ ವ್ಯತ್ಯಾಸವಾಗಿ ಪ್ರಕಟಗೊಳ್ಳುವುದು ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ಈ ಕುರುಹುಗಳು ಮತ್ತಷ್ಟು ಮಸುಕಾಗಿರುತ್ತವೆ. ಜಾತಿ ಎನ್ನುವುದು ಕಟ್ಟುನಿಟ್ಟಾಗಿ ವೈವಾಹಿಕ ಒಳಬಾಂಧವ್ಯಗಳ ಗುಂಪಾಗಿಯೂ ಇಂದು ಉಳಿದುಕೊಂಡಿಲ್ಲ. ಹಲವು ಉಪಜಾತಿ ಗಳು ತಮ್ಮ ವಿವಾಹ ಸಂಬಂಧಗಳ ನಿಷೇಧಗಳನ್ನು ಮುರಿಯ ತೊಡಗಿವೆ. ಸಾಂಸ್ಕøತಿಕ ಆಚರಣೆಗಳ ದೃಷ್ಟಿಯಿಂದ ನೋಡು ವಾಗಲೂ, ಪ್ರತಿ ಜಾತಿ ಗುಂಪಿಗಿದ್ದ ವಿಭಿನ್ನತೆಗಳು ಹಲವು ಸಂಕರಗಳಿಗೆ ಒಳಗಾಗಿವೆ. ಹೀಗಿರುವಾಗ ಭಾರತದ ಅತ್ಯಂತ ಪುರಾತನವಾದ ಜಾತಿ ಸಂಸ್ಥೆ, ವರ್ತಮಾನದ ಅತ್ಯಂತ ಪ್ರಭಾವಿ ಸಾಮಾಜಿಕ ಧ್ರುವೀಕರಣದ ಸಾಧನವಾಗಿರುವ ಜಾತಿ ಯಾವ ರೂಪಗಳಲ್ಲಿ ತನ್ನ ಚಹರೆಗಳನ್ನು ವ್ಯಕ್ತಪಡಿಸುತ್ತದೆ? ಈ ಬಗ್ಗೆ ಲಕ್ಷ್ಮೀಪತಿಯವರು ನೀಡುತ್ತಾ ಹೋಗುವ ಗುಣಲಕ್ಷಣಗಳ ಪಟ್ಟಿ ನಾವೀನ್ಯತೆಯಿಂದ ಕೂಡಿದೆ. ಅವರು ಸೂಚಿಸುವ `ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿಯೇ ಜಾತಿಯಾಗಿದೆ’ ಎಂಬ ವಿಶ್ಲೇಷಣೆ ಲೇಖಕರಿಗಿರುವ ಹೊಸ ದೃಷ್ಟಿಕೋನವನ್ನು, ಅಧ್ಯಯನ ಮಾಡುವಾಗ ಅಳವಡಿಸಿಕೊಳ್ಳುವ ಹೊಸ ಪರಿಕರಗಳನ್ನು ನಿದರ್ಶಿಸುತ್ತಿದೆ. ಭಾಷೆ, ಆಂಗಿಕ ಭಾಷೆ, ಸಂಪರ್ಕ ಮತ್ತು ಸಂವಹನ ಕ್ರಮಗಳು ನೆನಪುಗಳ ಜೋಡಣೆ ಮುಂತಾದ ಅಂಶಗಳಲ್ಲಿ ಈ ಜಾತಿ ಲಕ್ಷಣಗಳು ಕೇಂದ್ರೀಕೃತವಾಗಿವೆ ಎಂಬುದನ್ನು ಸೂಚಿಸುವ ರೀತಿ ಅವರು ವರ್ತಮಾನದ ಸಮಾಜದ ಬಗ್ಗೆ ಹೊಂದಿರುವ ಅಧ್ಯಯನಶೀಲತೆಯನ್ನು ಸೂಚಿಸುತ್ತಿದೆ.
ಈ ಲೇಖನ ಮಾಲೆಯಲ್ಲಿ ನಾನು ಮೆಚ್ಚಿಕೊಳ್ಳುವ ಹಲವಾರು ಅಂಶಗಳು ಬೀಜರೂಪಿಯಾಗಿ ಅಡಗಿವೆ. ಬ್ರಾಹ್ಮಣ ಫೋಬಿಯಾದ ಲಕ್ಷಣಗಳು ವಿವಿಧ ಜನವರ್ಗಗಳಲ್ಲಿ ಪ್ರಕಟಗೊಳ್ಳುವ ರೀತಿಯನ್ನು ವಿವರಣೆಗೊಳಪಡಿಸಿರುವ ರೀತಿಯೂ ಸಹ ಅಧ್ಯಯನದ ಸ್ಪಷ್ಟತೆಯನ್ನೂ, ಲಕ್ಷ್ಮೀಪತಿಯವರಿಗೆ ಇರುವ ಅಧ್ಯಯನದ ಸಾಮಥ್ರ್ಯವನ್ನೂ ಸೂಚಿಸುತ್ತಿದೆ. ನಿರಂತರ ಅಧ್ಯಯನಶೀಲತೆಯ ಜೊತೆಗೆ ಹಲವು ಬಗೆಯ ಸಾಮಾಜಿಕ ಒಡನಾಟಗಳ ಮೂಲಕ ಹಲವಾರು ಸಿದ್ಧಾಂತಗಳು ಸಮಾಜದಲ್ಲಿ ಅಳವಡಿಕೆಯಾಗುತ್ತಿರುವ ರೀತಿಯನ್ನು ಗ್ರಹಿಸಬಲ್ಲವರಾಗಿರುವ ಸಿ.ಜಿ. ಲಕ್ಷ್ಮೀಪತಿಯವರು ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಈಗ ಬಲಗೊಳ್ಳುತ್ತಿರುವ ಬಹುಶಿಸ್ತೀಯ ಅಧ್ಯಯನ ಕ್ರಮದ ತಲೆಮಾರಿನವರಲ್ಲಿ ಒಬ್ಬರಾಗಿದ್ದು ನಾನು ಭರವಸೆಯಿಟ್ಟಿರುವ ಸಾಮಾಜಿಕ ಚಿಂತಕರಲ್ಲೊಬ್ಬರಾಗಿ ಮೂಡಿಬರುತ್ತಾರೆ.
`ಕ್ಯಾಸ್ಟ್ ಕೆಮಿಸ್ಟ್ರಿ’ ಕೃತಿ ಲಕ್ಷ್ಮೀಪತಿಯವರ ಸಾಮಥ್ರ್ಯದ ಸಾಧ್ಯತೆಗಳ ಜೊತೆ ಅವರು ಮುಂದೆ ನಡೆಸಬಹುದಾಗಿರುವ ಅಧ್ಯಯನಗಳ ಹಾದಿಯನ್ನೂ ಬಿಂಬಿಸುತ್ತಿದೆ. ಬ್ರಾಹ್ಮಣರು ಹಿಂದೂಗಳಲ್ಲ-ಅವರದು ಪ್ರತ್ಯೇಕ ಬ್ರಾಹ್ಮಣ ಧರ್ಮ ಎಂಬ ಅಂಶವನ್ನು ಮಂಡಿಸುವಾಗ, ಬ್ರಾಹ್ಮಣ ಧರ್ಮದ ಮತಾಂತರದ ರೀತಿ ಹೇಗೆ ತಾತ್ವಿಕ ಮಟ್ಟದಲ್ಲಿ ನಡೆಯುತ್ತದೆ ಹಾಗೂ ಅದರಿಂದ ಇತರರನ್ನು ಮತಾಂತರಗೊಳಿಸಿಯೂ, ಮತಾಂತರಗೊಳಿಸಿದ ಆಪಾದನೆಗೊಳ ಗಾಗದೆ ಹೇಗೆ ಅದು ಸಂಭಾಳಿಸಿಕೊಂಡು ಬಂದಿದೆ ಎಂಬ ಅಂಶವನ್ನು ಮಂಡಿಸುವಾಗ ಅವರು ವ್ಯಕ್ತಗೊಳಿಸುವ ವಿಷಯ ಸ್ಪಷ್ಟತೆ ಗಮನಾರ್ಹವಾಗಿದೆ. ಅಹಿಂದ ಚಳವಳಿಯಂತಹ ಇತ್ತೀಚಿನ ವಿದ್ಯಮಾನವನ್ನು ಗ್ರಹಿಸುವ ನೆಲೆಗಳಲ್ಲೂ ಅವರ ವಿಶ್ಲೇಷಣೆಯ ಕಸುವು ಕಂಡುಬರುತ್ತದೆ.
ಯಾವುದೇ ಲೇಖಕನ ಸಾಮಥ್ರ್ಯವನ್ನು ಒಂದು ಕೃತಿ ಪೂರ್ತಿ ಯಾಗಿ ಬಿಂಬಿಸುವುದಿಲ್ಲ ಹಾಗೆ ಆಗಲು ಸಾಧ್ಯವೆಂದು ನಾವು ಭಾವಿಸುವುದೂ ತಪ್ಪು. ಯಾಕೆಂದರೆ, ಅಧ್ಯಯನದ ಸಾಮಥ್ರ್ಯ ಮತ್ತು ಜ್ಞಾನದ ಪರಿಧಿಗಳು ವಿಸ್ತಾರಗೊಳ್ಳುತ್ತಾ ಹೋಗುವ ಸ್ವಭಾವವಿರುವಂತಹವು. ಹೀಗಿರುವಾಗ ಈ ಕೃತಿ ಪ್ರಕಟಣೆಯ ಸಂದರ್ಭದಲ್ಲಿ ನಾನು ಆಡಬಹುದಾಗಿರುವ ಮೆಚ್ಚುಗೆ ಅಥವಾ ನನಗೆ ಗೊತ್ತಿರುವ ಕೃತಿಕಾರನ ವ್ಯಕ್ತಿತ್ವ, ಸ್ವಭಾವ ಮತ್ತು ಬೌದ್ಧಿಕ ಸಂಸಿದ್ಧತೆಯ ಆವರಣವನ್ನೂ ಒಳಗೊಳ್ಳಬೇಕೆ? ನನ್ನನ್ನು ಕೇಳಿದರೆ ಒಂದು ಕೃತಿ ಲೇಖಕನ ಅಭಿವ್ಯಕ್ತಿಯ ಒಂದು ತುಣುಕು ಮಾತ್ರ. ಕೃತಿಕಾರನ ಬಗ್ಗೆ, ಆತನ ಸಾಮಾಜಿಕ ನೆಲೆ ಮತ್ತು ನಿಲುವುಗಳ ಬಗ್ಗೆ ಹಾಗೂ ಅವುಗಳನ್ನು ಆತ ರೂಢಿಸಿಕೊಳ್ಳುತ್ತಾ, ವಿಸ್ತರಿಸಿ ಕೊಳ್ಳುತ್ತಾ ಬಂದಿರುವ ವಿಧಾನಗಳ ಬಗ್ಗೆ ಇರುವ ಸಮಗ್ರ ತಿಳಿವಳಿಕೆಯ ಹಿನ್ನೆಲೆಯಲ್ಲಿ ಮಾತ್ರವೇ ನಮ್ಮ ಅಂದಾಜಿನ ಅಭಿಪ್ರಾಯಗಳನ್ನು ಬರೆಯಬಹುದು.
ಅಂಕಣಕಾರರಾಗಿ, ಲೇಖಕರಾಗಿ, ಸಾಮಾಜಿಕ ಕಾಳಜಿಗಳ ಒಡನಾಡಿಯಾಗಿ ಹಲವು ವರ್ಷಗಳಿಂದ ನನಗೆ ಪರಿಚಯವಿರುವ ಗೆಳೆಯ ಲಕ್ಷ್ಮೀಪತಿಯವರು ಈಗ ತಮ್ಮ ಬರಹಗಳನ್ನು ಕೃತಿ ರೂಪದಲ್ಲಿ ತರುತ್ತಿದ್ದಾರೆ. ಅಧ್ಯಯನಶೀಲತೆಯ ಬಹು ಆಯಾಮ ಗಳನ್ನು ಅರಿಯುವ ಮತ್ತು ಅದನ್ನು ಅತ್ಯಾಸಕ್ತಿಯಿಂದ ದುಡಿಸಿ ಕೊಳ್ಳುವ, ವಿಭಿನ್ನ ಜ್ಞಾನಶಾಖೆಗಳ ಸಮಗ್ರೀಕರಣ ವಿಧಾನದಲ್ಲಿ ವಿದ್ಯಮಾನಗಳನ್ನು ಪರಿಶೀಲಿಸುವ ಅಧ್ಯಯನಕಾರರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳಗೊಳ್ಳುತ್ತಿರುವುದು ಈ ಸನ್ನಿವೇಶದ ಸಂತಸಕರ ಸಂಗತಿಯಾಗಿದೆ. ಅಂತಹವರಲ್ಲಿ ಡಾ. ಸಿ.ಜಿ. ಲಕ್ಷ್ಮೀಪತಿಯವರು ಒಬ್ಬರಾಗಿದ್ದು ಅವರಿಗೆ ನನ್ನ ಶುಭ ಹಾರೈಕೆಗಳನ್ನು ಹೇಳಲು ಸಂತಸಪಡುತ್ತಿದ್ದೇನೆ.