ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷ ನನಗೆ ದಕ್ಷಿಣ ಏಷ್ಯಾದವರ ಬಗ್ಗೆ ಕಲಿಸಿದ್ದು
ಸುಮೀತ್ ಸ್ಯಾಮೋಸ್
ಕನ್ನಡ ಅನುವಾದ – ಶಶಾಂಕ್.ಎಸ್. ಆರ್.
ಅಕ್ಟೋಬರ್ 2021 ರಲ್ಲಿ ನಾನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ M.Sc ಇನ್ ಮಾಡರ್ನ್ ಸೌಥ್ ಏಷಿಯನ್ ಸ್ಟಡೀಸ್ ಕೋರ್ಸಿಗೆ ಸೇರಿಕೊಂಡೆ. ಆಕ್ಸ್‌ಫರ್ಡ್ಗೆ ಹೊರಡುವಾಗ, ಕೋರ್ಸಿನಲ್ಲಿ ಮತ್ತು ವಿಶ್ವವಿದ್ಯಾಲಯದ ಜೀವನದಿಂದ ಏನನ್ನು ನಿರೀಕ್ಷಿಸಬಹುದು ಎಂದು ತಿಳಿದಿರಲಿಲ್ಲವಾದರೂ, ನಾನು ಸೇರಿದ್ದ ವಿಭಾಗದಲ್ಲೇ ಪ್ರೊಫೆಸರ್ ರೊಸಾಲಿಂಡ್ ಓ’ಹಾನ್ಲನ್ ಮತ್ತು ಡೇವಿಡ್ ಗೆಲ್ನರ್ ಕೆಲಸ ಮಾಡುತ್ತಿದ್ದಾರೆ ಎಂಬುದನ್ನೂ, ಅವರು ಕ್ರಮವಾಗಿ ಫುಲೆ ಮತ್ತು ನೇಪಾಳದಲ್ಲಿನ ಜಾತಿವ್ಯವಸ್ಥೆಯ ಕುರಿತು ಅಧ್ಯಯನ ನಡೆಸಿದ್ದಾರೆ ಎಂಬುದನ್ನು ತಿಳಿದಿದ್ದೆ. ಸಮಾಜ ವಿಜ್ಞಾನ ವಿಷಯದಲ್ಲಿ ನನಗೆ ತರಬೇತಿ ಇಲ್ಲದಿದ್ದ ಕಾರಣಕ್ಕೆ ಮತ್ತು ಅಕ್ಯಾಡೆಮಿಕ್ (ಶೈಕ್ಷಣಿಕ) ಬರಹ ಶೈಲಿಯಲ್ಲಿ ಅನುಭವವಿಲ್ಲದ್ದರಿಂದ ನನ್ನ ಕೋರ್ಸನ್ನು ನಾನು ಹೇಗೆ ನಿರ್ವಹಿಸಬಲ್ಲೆನು ಎಂಬ ಬಗ್ಗೆ ಯೋಚನೆಯಾಗಿತ್ತು. ಪ್ರಪಂಚದ ಎಲ್ಲೆಡೆಗಳಿಂದ ಬರುವ, ಎಲೀಟರೇ ನೆರೆಯುವ ಸ್ಥಳವಲಯವೊಂದನ್ನು ನಾನು ಪ್ರವೇಶಿಸಲಿದ್ದೇನೆ, ಮತ್ತವರ ನಡುವೆ ನಾನು ಹೊರಗಿನವನಾಗಿಯೇ ಉಳಿಯುವ ಸಂಭವವಿದೆ ಎಂಬ ಸತ್ಯದ ಅರಿವಿತ್ತಾದರೂ, ಅದು ನನ್ನನ್ನು ಹೆಚ್ಚು ಬಾಧಿಸಲಿಲ್ಲ. ನಾನು ಹೆಚ್ಚಾಗಿ ಅಧ್ಯಯನದಲ್ಲಿಯೇ ತೊಡಗಿಸಿಕೊಂಡದ್ದರಿಂದ ಹಾಗೂ ಉದ್ದೇಶಪೂರ್ವಕವಾಗಿ ಸ್ವಲ್ಪ ಅಂತರವನ್ನು ಕಾಯ್ದುಕೊಂಡ ಕಾರಣಕ್ಕೆ ಪ್ರಪಂಚದೆಲ್ಲಡೆಗಳಿಂದ ಅಲ್ಲಿಗೆ ಬಂದು ಸೇರಿದ್ದ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಸಾಧ್ಯವಾಗದಿದ್ದರೂ ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ, ಅವರು ತೊಡಗಿಸಿಕೊಳ್ಳುವ ಚರ್ಚೆಗಳು ಯಾವುವು ಮತ್ತು ಇತರ ದೇಶಗಳ ವಿದ್ಯಾರ್ಥಿಗಳೊಂದಿಗೆ ಅವರು ತಮ್ಮ ದೇಶವನ್ನು ಯಾವ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ ಎಂಬುದನ್ನು ಹತ್ತಿರದಿಂದ ಕಂಡುಕೊಂಡೆ. ಕಳೆದೊಂದು ವರ್ಷದಲ್ಲಿ ಈ ರೀತಿಯಲ್ಲಿ ನಾನು ಗಮನಿಸಿದ ಕೆಲವು ವಿಚಾರಗಳ ಅವಲೋಕನವೇ ಈ ಕೆಳಗಿರುವ ಸಾಲುಗಳು.
ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳು ಎಂದು ನಾನು ಸಂಬೋಧಿಸಿದಾಗ, ಅವರಲ್ಲಿ ಹೆಚ್ಚಿನವರು ಭಾರತ ಮತ್ತು ಪಾಕಿಸ್ತಾನದ ಎಲೀಟ್ ಮೇಲ್ಜಾತಿ ವಿದ್ಯಾರ್ಥಿಗಳೇ ಅಗಿದ್ದರೂ, ಈ ವಲಯಗಳಲ್ಲಿ ಬ್ರಿಟನ್, ಅಮೇರಿಕಾ ಮತ್ತು ಕೆನಡಾದ ಭಾರತೀಯ ಮತ್ತು ಪಾಕಿಸ್ತಾನಿ ಮೂಲ ಹೊಂದಿರುವ ವಿದ್ಯಾರ್ಥಿಗಳೂ ಸೇರುತ್ತಾರೆ. ಮೇಲ್ಜಾತಿ ವಿದ್ಯಾರ್ಥಿಗಳೇ ಕಂಡುಬರುವ ವಿಚಾರವು ಕೇಂಬ್ರಿಡ್ಜ್ ಮತ್ತು ಲಂಡನ್ನಿನ SOAS ವಿಶ್ವವಿದ್ಯಾಲಯಗಳಿಗೂ ಸಹ ಅನ್ವಯಿಸುತ್ತದೆ. ಅವರ ಕುಲನಾಮಗಳು ಸ್ಪಷ್ಟವಾಗಿ ಮೇಲ್ಜಾತಿಗಳದ್ದೇ ಆಗಿರುತ್ತುದ್ದವು ಮಾತ್ರವಲ್ಲ, ಅವರ ಕುಟುಂಬ, ಮೂಲ ಸ್ಥಳ ಮತ್ತು ಅವರ ಜಾತಿಯನ್ನು ಸೂಚಿಸುವ ಸಾಂಸ್ಕೃತಿಕ ಗುರುತುಗಳ ಬಗ್ಗೆ ಅವರೇ ನೀಡುವ ಉಲ್ಲೇಖಗಳು ಇವರ ಹಿನ್ನಲೆಯನ್ನು ಸ್ಪಷ್ಟವಾಗಿ ಕಂಡುಕೊಳ್ಳಲು ಇರುವ ಮಾರ್ಗವಾಗಿದೆ,. ನನ್ನ ಮಾನವಶಾಸ್ತ್ರದ ಕೋರ್ಸಿನ ಪಾಕಿಸ್ತಾನಿ ಸಹಪಾಠಿಯೊಬ್ಬರು, ಪಾಕಿಸ್ತಾನದಲ್ಲಿ ಜಾತಿಗಳ ಬಗ್ಗೆ ಚರ್ಚಿಸುತ್ತಿರುವಾಗ ತನ್ನನ್ನು ತಾನು ಪಠಾಣ್ ಎಂದು ತಟಸ್ಥ ರೀತಿಯಲ್ಲಿಯೇ ಗುರುತಿಸಿಕೊಂಡರು, ಜಾತಿಯ ಬದಲಿಗೆ ಪ್ರಾದೇಶಿಕ ಹಿಂದುಳಿದಿರುವಿಕೆಯು ಮತ್ತು ಜನಾಂಗೀಯತೆಯು ಪಾಕಿಸ್ತಾನದಲ್ಲಿ ಮುಖ್ಯಪಾತ್ರವಹಿಸುತ್ತದೆ ಎಂಬುದನ್ನು ವಾದಿಸಲು ಅವರು ಪಾಕಿಸ್ತಾನದಲ್ಲಿ ಜಾತಿಯ ಬಗ್ಗೆ ನಡೆಸಲಾಗಿರುವ ಸ್ಥಾಪಿತ ಅಧ್ಯಯನಗಳ ಆಧಾರಗಳನ್ನು ಮುಂದಿಡದೆ, ತಮ್ಮ ವೈಯಕ್ತಿಕ ಅನುಭವಗಳನ್ನೇ ಆಧರಿಸತೊಡಗಿದರು. ಅದೇ ಸಮಯದಲ್ಲಿ, ಮದುವೆಯ ವಿಚಾರಗಳಲ್ಲಿ ಜಾತಿಯು ಎಷ್ಟು ಮುಖ್ಯ ಎಂಬುದನ್ನೂ ಅವರು ಹೇಳುತ್ತಿದ್ದರು.
ದಕ್ಷಿಣ ಏಷ್ಯಾದ ಬಗೆಗಿನ ಚರ್ಚೆಗಳಲ್ಲಿ ಮತ್ತು ಬರಹಗಳಲ್ಲಿ ಜಾತಿ ಬಗೆಗಿನ ಪ್ರಶ್ನೆಗಳನ್ನು ಎದುರಿಸದೆ ಹೇಗೆ ನುಣುಚಿಕೊಳ್ಳುತ್ತಾರೆ ಮತ್ತು ಈ ಪ್ರಶ್ನೆಗಳನ್ನು ಹೇಗೆ ದುರ್ಬಲಗೊಳಿಸಲಾಗುತ್ತದೆ ಎಂಬುದನ್ನು ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಚರ್ಚಿಸಲು ಮತ್ತು ಬರೆಯಲು ಆಸಕ್ತಿ ಹೊಂದಿರುವ ವಿಷಯಗಳನ್ನು ಗಮನಿಸುವುದರ ಮೂಲಕ ನಾನು ಕಂಡುಕೊಂಡೆ. ಅವುಗಳಲ್ಲಿ ಹಿಂದುತ್ವ, ಸಿ.ಎ.ಎ/ಎನ್.ಆರ್.ಸಿ ಪ್ರತಿಭಟನೆಗಳು, ರೈತರ ಪ್ರತಿಭಟನೆ, ಸುಸ್ಥಿರತೆ ಮತ್ತು ಅಭಿವೃದ್ಧಿ, ನಗರ ಪ್ರದೇಶಗಳು, ಮೊಘಲ್ ಇತಿಹಾಸ ಮತ್ತು ಸಂಸ್ಕೃತಿಯ ವಿಷಯಗಳು ಮರುಕಳಿಸುತ್ತಿದ್ದವು. ಇವು ದೆಹಲಿ ಮೂಲದ ನಾಗರಿಕ ಸಮಾಜ ಮತ್ತು ‘ಪರ್ಯಾಯ ಮಾಧ್ಯಮಗಳು’ ದೇಶೀಯ ಚಳುವಳಿಗಳು, ಜಾತಿ ಬಗೆಗಿನ ವಿಶ್ಲೇಷಣೆ ಮತ್ತು ಪ್ರಾದೇಶಿಕ ಇತಿಹಾಸಗಳನ್ನು ನಿರ್ಲಕ್ಷಿಸುತ್ತಾ ಉತ್ಪಾದಿಸುವ ಕೇಂದ್ರೀಕೃತ ವ್ಯಾಖ್ಯಾನಗಳನ್ನು ನೆನಪಿಸಿದವು. ದಲಿತರು ಮತ್ತು ತ್ಯಾಜ್ಯ ನಿರ್ವಹಣೆ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿದ್ದ ಮೇಲ್ಜಾತಿ ವಿದ್ಯಾರ್ಥಿಗಳು ಕೂಡ ಭಾರತದಲ್ಲಿನ ಜಾತಿ ಪ್ರಶ್ನೆಯ ಕುರಿತು ವೇದಿಕೆಗಳಲ್ಲಿ ಚರ್ಚಿಸಲಿಲ್ಲ ಮತ್ತು ಈ ರೀತಿಯ ಚರ್ಚೆಗಳನ್ನು ಉತ್ತೇಜಿಸಲೂ ಇಲ್ಲ. ಇದಕ್ಕೆ ವ್ಯತಿರಿಕ್ತವೆಂಬಂತೆ, ಅಲ್ಲಿದ್ದ ಕೆಲವೇ ಕೆಲವು ಬಹುಜನ್ ಹಿನ್ನಲೆಯ ವಿದ್ಯಾರ್ಥಿಗಳು ಬ್ರಾಹ್ಮಣೇತರ ಚಳುವಳಿ, ಭಾರತೀಯ ಮುಸ್ಲಿಮರಲ್ಲಿ ಜಾತಿಯಂತಹ ವಿಷಯಗಳ ಬಗ್ಗೆ ಅಧ್ಯಯನವನ್ನು ಕೈಗೊಂಡಿದ್ದರು. ಮಾತ್ರವಲ್ಲದೇ, ಜಾತಿ-ವಿರೋಧಿ ಬೌದ್ಧಿಕ ಸಂಪ್ರದಾಯಗಳು, ಚಳುವಳಿಗಳು, ಇತಿಹಾಸದ ಕುರಿತು ಸಮ್ಮೇಳನಗಳನ್ನೂ, ಚರ್ಚೆಗಳನ್ನೂ, ಚಲನಚಿತ್ರ ಪ್ರದರ್ಶನಗಳನ್ನೂ ಆಯೋಜಿಸಲು ಪ್ರಯತ್ನಿಸುತ್ತಿದ್ದರು. ಅಶೋಕ ವಿಶ್ವವಿದ್ಯಾಲಯ, ಸೇಂಟ್ ಸ್ಟೀಫನ್ಸ್ ಕಾಲೇಜು, ಜಾಧವ್‌ಪುರ್ ವಿಶ್ವವಿದ್ಯಾಲಯದಂತಹ ಉನ್ನತ ಶ್ರೇಣಿಯ ಕಾಲೇಜು-ವಿಶ್ವವಿದ್ಯಾಲಯಗಳಿಂದ ಹಾಗೂ ವಿದೇಶಗಳಿಂದ ಬಂದವರೇ ಹಚ್ಚಾಗಿದ್ದ ಮೇಲ್ಜಾತಿ ಭಾರತೀಯ ವಿದ್ಯಾರ್ಥಿಗಳು ಈ ಪ್ರಯತ್ನಗಳಿಗೆ ನೀಡಿದ ಪ್ರತಿಕ್ರಿಯೆಯೂ ನೀರಸವಾಗಿತ್ತು. ಆದರೂ, ಪ್ರೊಫೆಸರ್ ಬಾರ್ಬರಾ ಹ್ಯಾರಿಸ್ ವೈಟ್, ನಯನಿಕಾ ಮಾಥುರ್, ಡೇವಿಡ್ ಗೆಲ್ನರ್ ಅವರಂತಹ ಕೆಲವು ಅಧ್ಯಾಪಕರು ಜಾತಿ ಗಣತಿ ಕುರಿತು ಸಮ್ಮೇಳನವನ್ನು ಆಯೋಜಿಸಲು ನಮಗೆ ಬೆಂಬಲವಾಗಿ ನಿಂತರು ಎಂಬುದು ಸಂತಸದ ಸಂಗತಿ.
ಹಾಗಂತ, ಈ ಮೇಲ್ಜಾತಿಯ ಎಲೀಟ್ ವಿದ್ಯಾರ್ಥಿಗಳಿಗೆ ಚರ್ಚೆಗಳು, ಗೋಷ್ಠಿಗಳು ಮತ್ತು ಸಮ್ಮೇಳನಗಳಲ್ಲಿ ಆಸಕ್ತಿ ಇರಲಿಲ್ಲವೆಂದಲ್ಲ; ಬದಲಿಗೆ, ಬಾಲಿವುಡ್ ಡ್ಯಾನ್ಸ್ ಪಾರ್ಟಿಗಳು, ಹೋಳಿ, ದೀಪಾವಳಿ, ಸೀರೆಗಳು-ಕುರ್ತಾಗಳನ್ನು ತೊಟ್ಟು ನಡೆಸುವ ಫೋಟೋ ಸೆಷನ್ನುಗಳು, ಶಶಿ ತರೂರ್, ಬರ್ಖಾ ದತ್, ಅಮರ್ತ್ಯ ಸೇನ್ ಇತ್ಯಾದಿ ವಿಚಾರಗಳೊಂದಿಗೆ ಭಾರತವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬಿಂಬಿಸುವಂತಹ ಕಾರ್ಯಗಳು ಅವರನ್ನು ಬಹಳಷ್ಟು ಆಕರ್ಷಿಸಿತ್ತು. ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ವಿಷಯಗಳು; LGBTQ ಸಮುದಾಯ ಮತ್ತು ಬ್ಲಾಕ್ ಏಷ್ಯನ್ ಮೈನಾರಿಟಿ ಮತ್ತು ಎಥ್ನಿಕ್ (BAME) ಸಮುದಾಯಗಳ ಬಗೆಗಿನ ಚಿಂತನೆ-ಚರ್ಚೆಗಳು; ರೋಡ್ಸ್ ಮಸ್ಟ್ ಫಾಲ್ ಚಳುವಳಿ ಸೇರಿದಂತೆ ಇತ್ಯಾದಿ ವಿಚಾರಗಳ ಸುತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಅವರಿಗೆ ಹೆಚ್ಚು ಆಸಕ್ತಿ. ಸಂಗೀತ, ಕವಿತೆ ಮತ್ತು ಹಬ್ಬಗಳ ವಿಚಾರಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ಅಭಿರುಚಿಯನ್ನು ಹೊಂದಿದ್ದ ಭಾರತೀಯ ಎಲೀಟ್ ಮತ್ತು ಪಾಕಿಸ್ತಾನಿ ಎಲೀಟ್ ವಿದ್ಯಾರ್ಥಿಗಳು ಇವನ್ನು ದೇಸಿ ಸಂಸ್ಕೃತಿ ಎಂದು ಕರೆಯುತ್ತಲೇ ತಮ್ಮ ಸ್ನೇಹವನ್ನು ಭದ್ರಗೊಳಿಸಿಕೊಳ್ಳುತ್ತಿದ್ದರು. ಆಕ್ಸ್‌ಫರ್ಡ್‌ನಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸುವಂತೆ ಒತ್ತಾಯಿಸುತ್ತಾ ವಿದ್ಯಾರ್ಥಿಗಳ ಗುಂಪೊಂದು ಸಹಿ ಅಭಿಯಾನವನ್ನು ನಡೆಸಿದರೆ, ಆಕ್ಸ್‌ಫರ್ಡ್ ಚರ್ಚಾ ಒಕ್ಕೂಟದಲ್ಲಿದ್ದ ಕೆಲವರು ಭಾರತವನ್ನು ವೈಭವೀಕರಿಸುತ್ತಾ ಮತ್ತು ನಿರ್ವಸಾಹತೀಕರಣದ ಚಾಯೆಯನ್ನು ಹೊಂದಿದ್ದ ‘ಬ್ರಿಟಿಷ್ ರಾಜ್ ಇಂದಿಗೂ ಮುಂದುವರೆಯುತ್ತಿದಯೇ’ ಎಂಬ ಶೀರ್ಷಿಕೆಯಡಿಯಲ್ಲಿ ಚರ್ಚೆಯೊಂದನ್ನು ಆಯೋಜಿಸಿದರು. ಭಾರತದ ಪ್ರಸಿದ್ಧ ಬಲಪಂಥೀಯ ನಿರೂಪಕರ ಮಗಳು ನಿರ್ವಸಾಹತೀಕರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದಳು ಮತ್ತು ಕಳೆದ ವರ್ಷ, ಭಾರತದ ಬಲಪಂಥೀಯ ಮೇಲ್ಜಾತಿ ವಿದ್ಯಾರ್ಥಿಯು ಇದೇ ರೀತಿಯ ರೂಪಕಗಳನ್ನು ಬಳಸಿ ಆಕ್ಸ್‌ಫರ್ಡ್ ಒಕ್ಕೂಟದ ಅಧ್ಯಕ್ಷರಾದರು. ತದನಂತರದಲ್ಲಿ, ಅವರು ಜನಾಂಗೀಯ ನಿಂದನೆ ಮಾಡಿದಕ್ಕಾಗಿ ರಾಜೀನಾಮೆ ನೀಡಬೇಕಾಯಿತು ಎಂಬುದು ವಾಸ್ತವ.
ಚರ್ಚೆ-ಸಂವಾದಗಳಲ್ಲಿ ನಾನು ಗಮನಿಸಿದ ಮತ್ತೊಂದು ಅಂಶವೆಂದರೆ ಮಾತಿನ ಕಣ್ಕಟ್ಟು. ಇದನ್ನು ದಕ್ಷಿಣ ಏಷ್ಯಾ ಅಧ್ಯಯನ ವಲಯಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಾಲಿ ಭದ್ರಲೋಕಿಗಳಲ್ಲಿ ಹೆಚ್ಚಾಗಿ ಕಂಡೆ. ಅಂತಹ ಅನೇಕ ಉದಾಹರಣೆಗಳನ್ನು ನಾನು ಕಂಡಿದ್ದೇನಾದರೂ, ಎರಡು ಉದಾಹರಣೆಗಳನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. ಒಂದು, ಗಿಳಿಗಳ ಕಥೆಯೊಂದನ್ನು ಆಧುನಿಕ ಭಾರತದ ಇತಿಹಾಸಕ್ಕೆ ರೂಪಕವಾಗಿ ಉಪಯೋಗಿಸಲಾಗುವುದು ಮತ್ತು ಬಂಗಾಳದ ಭೂತದ ಕಥೆಯೊಂದನ್ನು ದಕ್ಷಿಣ ಏಷ್ಯಾದಲ್ಲಿ ವಲಸೆ ಮತ್ತು ಮಾನವೀಯ ಬಿಕ್ಕಟ್ಟುಗಳಿಗೆ ರೂಪಕದಂತೆ ಉಪಯೋಗಿಸಲಾಗುತ್ತಿತ್ತು. ನಾನಿದನ್ನು ಪ್ರಶ್ನಿಸಿದಾಗ, ಅನೇಕ ಬಂಗಾಳಿ ಭದ್ರಲೋಕದ ವಿದ್ವಾಂಸರು ಸಾಂಪ್ರದಾಯಿಕ ಚೌಕಟ್ಟಿನಾಚಿಗಿನ ಬರವಣಿಗೆ ಶೈಲಿ ಮತ್ತು ಮಾನವೇತರ ಸಂಶೋಧನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ವಾದಿಸಿದರು. ನಾನು ಆರಂಭದಲ್ಲಿ ಇದನ್ನು ಅರ್ಥಮಾಡಿಕೊಳ್ಳುವಷ್ಟು ಶೈಕ್ಷಣಿಕವಾಗಿ ಚುರುಕಾಗಿಲ್ಲವೇನೊ ಎಂದು ಭಾವಿಸಿದೆ. ಆದರೆ, ಈ ಘಟನೆಗಳನ್ನು ತದನಂತರದಲ್ಲಿ ವಿಶ್ಲೇಷಿಸಿ, ವಿವಿಧ ಸಂಶೋಧಕರೊಂದಿಗೆ ಚರ್ಚಿಸಿದಾಗ, ವಿದೇಶದಲ್ಲಿರುವ ಕೆಲವು ಭದ್ರಲೋಕಿ ಬೆಂಗಾಲಿಗಳಲ್ಲಿ, ಯಾರಾದರು ಅವರ ನಿಲುವುಗಳನ್ನು ಪ್ರಶ್ನಿಸಿದಾಗ ಆ ಪ್ರಶ್ನೆಯ ಗಾಂಭೀರ್ಯತೆಯನ್ನೇ ಗೌಣಗೊಳಿಸುವ ಅಥವಾ ಮಂಕಾಗಿಸುವ ಪ್ರವೃತ್ತಿಯು ಸಾಮಾನ್ಯವಾಗಿದೆ ಎಂಬುದನ್ನು ಕಂಡುಕೊಂಡೆ. ಇಲ್ಲಿ ಗಿಳಿಗಳ ಕಥೆಯು ಸುಸ್ಥಿರತೆ ಮತ್ತು ಅಭಿವೃದ್ಧಿ ಬಗೆಗಿನ ಸಂಶೋಧನಾ ಯೋಜನೆಯ ಭಾಗವಾಗುತ್ತದೆ. ಇದು, ಭಾರತದ ಇತಿಹಾಸವನ್ನು ಬ್ರಾಹ್ಮಣರು ತಮಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಳ್ಳಲು, ತಮ್ಮ ‘ಬೌದ್ಧಿಕ ಶ್ರಮ’ವನ್ನು ಬಳಸಿಕೊಂಡ ರೀತಿಗೆ ಗಮನಾರ್ಹವಾದ ಹೋಲಿಕೆಯನ್ನು ಹೊಂದಿದೆ. ನನ್ನ ಹಳ್ಳಿಯ ಹಿರಿಯರೊಬ್ಬರು ಮಾತನಾಡುತ್ತಾ ಒಮ್ಮೆ ಹೇಳಿದರು ‘ಬ್ರಾಹ್ಮಣರೆಂದರೆ ಸುಮ್ಮನೆ ಎಂದು ಬಗೆದೆಯಾ, ಅವರು ಬ್ರಹ್ಮಾಂಡ (ವಿಶ್ವ). ಅವರು ಏನು ಬೇಕಾದರೂ ಆಗಬಹುದು, ಏನು ಬೇಕಾದರೂ ಹೇಳಬಹುದು ಮತ್ತು ಏನು ಬೇಕಾದರೂ ಮಾಡಬಹುದು.ʼ ರಾಜಕಾರಣಿಗಳಾಗಿ, ಧಾರ್ಮಿಕ ಗುರುಗಳಾಗಿ, ಸಂಶೋಧಕರಾಗಿ ಮತ್ತು ಶಿಕ್ಷಣತಜ್ಞರಾಗಿ ತಮ್ಮ ಮಾತು ಮತ್ತು ಲೇಖನಿಯಲ್ಲಿ ಅಪಾರ ಶಕ್ತಿಯನ್ನು ಹಿಡಿದಿಟ್ಟುಕೊಂಡು ಅವರು ಕಾರ್ಯನಿರ್ವಹಿಸುವ ರೀತಿ ಸಾಮಾನ್ಯವಾಗಿ ಹೀಗೆಯೇ ಇರುತ್ತದೆ.
ಕೊನೆಯದಾಗಿ, ನಾನು ಭಾರತದ ಎಲೀಟ್ ಮೇಲ್ಜಾತಿ ವಿದ್ಯಾರ್ಥಿಗಳ ಸಂಪರ್ಕ ಜಾಲವನ್ನು ಹತ್ತಿರದಿಂದ ಗಮನಿಸಿ, ಅವರ ಸಾಮಾಜಿಕ ಬಂಡವಾಳ(social capital) ಮತ್ತು ಅವರುಗಳು ಭಾರತದಲ್ಲಿನ ವಿವಿಧ ಅಲ್ಪಾವಧಿಯ ಯೋಜನೆಗಳನ್ನು ಉಲ್ಲೇಖಿಸುತ್ತಾ ಸ್ವಯಂಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಲೇ ಹೇಗೆ ವಿವಿಧ ವಿದ್ಯಾರ್ಥಿವೇತನಗಳನ್ನೂ ಮತ್ತು ಅವಕಾಶಗಳನ್ನು ಬಾಚಿಕೊಳ್ಳತ್ತಾರೆ ಎಂಬುದನ್ನು ಸಾಕ್ಷಿಯಾಗಿದ್ದೆ. ಇವು ಶ್ರೇಷ್ಠತೆ ಮತ್ತು ಬದಲಾವಣೆಯನ್ನು ತರುವ ಸೋಗಿನಲ್ಲಿ ವಂಚಿನೆ ತೊಡಗುವ ವಿಧಾನವಾಗಿದೆ. ಅವರು ಗ್ರಾಮೀಣ ಮಹಿಳೆಯರ ನಡುವೆ ಕೆಲವು ದಿನಗಳ ಕಾಲ ನಡೆಸುವ ಕ್ಷೇತ್ರಕಾರ್ಯವನ್ನು ‘ಗ್ರಾಮೀಣ ಮಹಿಳೆಯರ ಜೀವನ ಪರಿವರ್ತಕ’ ಎಂಬುದಾಗಿ ಬಿಂಬಿಸಲಾಗುತ್ತದೆ ಮತ್ತು ಅಂಚಿನಲ್ಲಿರುವ ವಿದ್ಯಾರ್ಥಿಗಳಗೆ ಕೆಲವು ವಾರಗಳ ಕಾಲ ಬೋಧಿಸಿದರೆ, ಅವರನ್ನೇ ಯುವ ಭಾರತೀಯ ನಾಯಕರಾಗಿ ಬಿಂಬಿಸಲಾಗುತ್ತದೆ. ಈ ತಂತ್ರಗಳು ರೋಡ್ಸ್, ವೈಡೆನ್‌ಫೀಲ್ಡ್ ಮತ್ತು ಹಾಫ್‌ಮನ್‌ನಂತಹ ವಿದ್ಯಾರ್ಥಿವೇತನಗಳನ್ನು ಪಡೆಯಲು ಮಾತ್ರವಲ್ಲದೇ ಅತಿಹೆಚ್ಚು ಸಂಬಳವನ್ನು ನೀಡುವ ಅಭಿವೃದ್ಧಿ ಕ್ಷೇತ್ರ ಮತ್ತು ಪ್ರತಿಷ್ಠಿತ ಸಂಶೋಧನಾ ಕ್ಷೇತ್ರದ ಉದ್ಯೋಗಗಳಿಗೆ ಪ್ರವೇಶವನ್ನು ಗಿಟ್ಟಿಸಿಕೊಳ್ಳಲು ಉಪಯೋಗಿಸಲಾಗುತ್ತದೆ. ಇದಕ್ಕೆ ತಕ್ಕುದಾದ ಉದಾಹರಣೆಯೆಂದರೆ, ಮೇಲ್ಜಾತಿಯ ವಿದ್ಯಾರ್ಥಿನಿಯೊಬ್ಬಳು ದಲಿತ ಮಹಿಳೆಯರ ಬಗ್ಗೆ ಕೆಲ ವಾರಗಳ ಕಾಲ ಸಂಶೋಧನೆ ಕೈಗೊಂಡದ್ದಕ್ಕೆ ತನ್ನನ್ನು ತಾನು ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ನಲ್ಲಿ ತಜ್ಞೆ ಎಂದು ಬರೆದುಕೊಂಡಿದ್ದಳು.
ಇದಲ್ಲದೆ, ಅನೇಕ ಭಾರತದ ಸಾಮಾಜಿಕ ಕಾರ್ಯಕರ್ತರು ಮತ್ತು ಎಡ-ನಾಯಕರು ದಲಿತ-ಬಹುಜನ ಯುವ ವಿದ್ಯಾರ್ಥಿಗಳಿಗೆ ಬೀದಿಗಿಳಿದು ಹೋರಾಟ ನಡೆಸಲು ಮತ್ತು ಬೂರ್ಜ್ವಾ ಉದಾರವಾದಿ ಸಂಸ್ಥೆಗಳಿಂದ ದೂರವಿರಲು ಬೋಧಿಸುತ್ತಿದ್ದರೆ, ಅವರ ಪುತ್ರ-ಪುತ್ರಿಯರು ಈ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಯಾರಿಗೂ ತಿಳಿಯದಂತೆ ಅಧ್ಯಯನ ನಿರತರಾಗಿರುತ್ತಾರೆ ಮತ್ತು ಇಲ್ಲಿಯೇ ಕೆಲಸ ಕೂಡ ಗಿಟ್ಟಿಸುತ್ತಾರೆ ಎಂದು ನಾನು ಕಂಡುಕೊಂಡೆ. ಅವರ ಯೌವನದ ದಿನಗಳಲ್ಲಿ. ಶ್ರಮವಹಿಸಿ-ಬೆವರು ಸುರಿಸಿ ಗಳಿಸಿದ ಮೂರನೆ ಅಥವಾ ನಾಲ್ಕನೇ ದರ್ಜೆಯ ಉದ್ಯೋಗಗಳನ್ನು ಪಡೆದು, ಸಾಮಾಜಿಕ ಶ್ರೇಣಿಯಲ್ಲಿ ಮೇಲಕ್ಕೆ ಚಲಿಸಿ ಮಧ್ಯಮ ವರ್ಗಕ್ಕೆ ಸೇರುವ ದಲಿತರನ್ನು ತೀಕ್ಷ್ಣವಾಗಿ ಟೀಕಿಸುವುದನ್ನು ಇವರು ನಿಲ್ಲಿಸುವುದಿಲ್ಲವಾದರೂ, ಈ ವಿದೇಶಿ ವಿಶ್ವವಿದ್ಯಾಲಯಗಳ ಮೂಲಕ ತಮ್ಮ ಜಾತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳಗಳನ್ನು ಪುನರುತ್ಪಾದಿಸಿಕೊಳ್ಳತ್ತಲೇ ಸಾಗುತ್ತಾರೆ. ಪರಿಚಿತ ವಲಯಗಳಲ್ಲಿನ ಅವರ ಸಂಪರ್ಕಗಳ-ಶಿಫಾರಸ್ಸುಗಳ ಮೂಲಕ ಇದು ಸಂಭವಿಸುತ್ತದೆ. ಪ್ಯೀರೆ ಬೋರ್ಡ್ಯುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ ಸಿದ್ಧಾಂತವನ್ನು ನಾನು ಈ ವಲಯದಲ್ಲೇ ಕಲಿತದ್ದು ಒಂದು ವಿಪರ್ಯಾಸವೇ ಸರಿ. ಶೈಕ್ಷಣಿಕ ವಲಯದಯಲ್ಲಿ ಜಾತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ದಶಕಗಳಿಂದಲೂ ಭಾರತದಲ್ಲಿಯೇ ನೆಲೆಸಿರುವ ಮತ್ತು ಜಾತಿ ವಿರೋಧಿ ಚಳವಳಿಗಳ ಬಗ್ಗೆ ತಿಳಿದಿರುವ ಬಿಳಿಯ ವಿದ್ವಾಂಸರುಗಳು ಮತ್ತು ಸಂಶೋಧಕರುಗಳಾದರೂ ಬರೆಯಲಿ ಎಂದು ನಾನು ಬಯಸುವೆ. ಅವರು ಇವೆಲ್ಲವನ್ನು ಹತ್ತಿರದಿಂದ ಕಂಡಿರುತ್ತಾರೆ ಮಾತ್ರವಲ್ಲ, ಅವರ ಮಾತುಗಳಿಗೆ ಇಲ್ಲಿ ಹೆಚ್ಚಿನ ತೂಕವಿದೆ. ಕ್ರಿಸ್ಟೋಫರ್ ಜಾಫ್ರೆಲೋಟ್ ಅವರು ಭಾರತೀಯ ಚುನಾವಣೆಗಳಲ್ಲಿ ಜಾತಿಯು ಹೇಗೆ ಪಾತ್ರವಹಿಸುತ್ತದೆ ಎಂದು ಬಹಳವಾಗಿ ವಿಶ್ಲೇಷಣೆ ಮಾಡುತ್ತಾರೆ. ಅವರಂತೆಯೆ ಗೈಲ್ಸ್ ವರ್ನೈರ್ಸ್ ಕೂಡ. ಅವರುಗಳು ಶೈಕ್ಷಣಿಕ ವಲಯಗಳನ್ನು ಕೂಡ ಅದೇ ರೀತಿ ಅಧ್ಯಯನಕ್ಕೊಳಪಡಿಸಿ ವಿಶ್ಲೇಷಿಸಲಿ ಎಂದು ನಾನು ಆಶಿಸುತ್ತೇನೆ. ನನಗೆ ಬೆಂಬಲಿಸುವಂತಹ ಪ್ರಾಧ್ಯಾಪಕರು ಮತ್ತು ಬಹಳಷ್ಟು ವಿಚಾರಗಳ ಬಗ್ಗೆ ನಾನು ಓದಬೇಕಿರುವ ಪಠ್ಯಗಳನ್ನು ಸೂಚಿಸುವಂತಹ ಸೂಕ್ತ ಮಾರ್ಗದರ್ಶನ ಸಿಕ್ಕ ಕಾರಣ ನನ್ನ ಬರವಣಿಗೆಯು ಉತ್ತಮಗೊಂಡಿದೆ ಎನ್ನುವ ಸಂತಸವಿದೆ. ಆದರೆ, ಆಧುನಿಕ ದಿನಮಾನದಲ್ಲಿ ಈ ಸಂಸ್ಥೆಗಳು ಮೇಲ್ಜಾತಿ ಕೇಂದ್ರಗಳಾಗಿದ್ದು, ತಮ್ಮ ಜಾತಿ ಬಂಡವಾಳಗಳನ್ನು ಸಮರ್ಥಿಸಿಕೊಂಡು-ನ್ಯಾಯಸಮ್ಮತಗೊಳಿಸಿಕೊಳ್ಳುವ ಕೇಂದ್ರಗಳಾಗಿವೆ ಎಂಬ ವಾಸ್ತವವನ್ನು ಇದು ತೆಗೆದುಹಾಕುವುದಿಲ್ಲ.
~~~
ಒಡಿಶಾದವರಾದ ಸುಮೀತ್ ಸ್ಯಾಮೋಸ್ ಅವರು ಇತ್ತೀಚಿಗಷ್ಟೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ M.Sc ಇನ್ ಮಾಡರ್ನ್ ಸೌತ್ ಏಷ್ಯನ್ ಸ್ಟಡೀಸ್ ಪದವಿ ಪಡೆದಿದ್ದಾರೆ
ಶಶಾಂಕ್.ಎಸ್. ಆರ್. NIAS ನಲ್ಲಿ ಪಿಎಚ್ಡಿ ಮಾಡ್ತಾ ಇದ್ದಾರೆ.