ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

ಕೇಬಿ ಕಾವ್ಯಮಾರ್ಗ: ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

ಡಾ.ಎಸ್.ಕೆ.ಮಂಜುನಾಥ

ಕೇಬಿ, ಅಲ್ಲಮ, ಬಕಾಲಮುನಿಯೆಂದೇ ನಾಡಿನಾದ್ಯಂತ ಚಿರಪರಿಚಿತರಾದ ಕೆ.ಬಿ.ಸಿದ್ಧಯ್ಯನವರು ಬರೆದದ್ದು ಕಡಿಮೆಯೆ. ಆದರೆ, ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು. ಈ ನೆಲದ ಕುಲಕಥನಗಳನ್ನು ಸಾಂಸ್ಕೃತಿಕ ಎಚ್ಚರದಿಂದ ಕಟ್ಟಿದ ಹಾಗೂ ಖಂಡಕಾವ್ಯಗಳ ಆದಿಮ ಅಭಿವ್ಯಕ್ತಿಯ ದಲಿತತ್ವದ ಜೀವ ರೂಪಾಂತರದ ಅರಿವನ್ನು ಬಿತ್ತಿದ ನಿಜವಾದ ದಲಿತ ಕವಿ ಕೆ.ಬಿ.ಸಿದ್ಧಯ್ಯ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಆ ಮೂಲಕ ಕಾವ್ಯಕ್ಕೆ ಮತ್ತು ದಲಿತ ಹೋರಾಟಕ್ಕೆ ತಾತ್ವಿಕ ಚೌಕಟ್ಟನ್ನು ನಿರೂಪಿಸಿದವರಲ್ಲಿ ಕೇಬಿ ಕವಿಯಾಗಿ ಹೋರಾಟಗಾರರಾಗಿ ಪ್ರಮುಖರು. ಇಂತಹ ಕೇಬಿ ಅವರು ಈಗ ನಮ್ಮೊಡನಿಲ್ಲ. ಆದರೆ, ಅವರು ಕಾವ್ಯದ ಮತ್ತು ಹೋರಾಟದ ಹೆಗ್ಗುರುತುಗಳ ಮೂಲಕ ಜೀವಂತವಾಗಿದ್ದಾರೆ. ‘ಬಕಾಲ’, ‘ದಕ್ಲಕಥಾ ದೇವಿಕಾವ್ಯ’, ‘ಅನಾತ್ಮ’, ‘ಗಲ್ಲೆಬಾನಿ’, ‘ತೊಗಲ ಮಂಟಪ’(ಅಪ್ರಕಟಿತ) ಖಂಡಕಾವ್ಯಗಳನ್ನು ರಚಿಸಿದ ಕೇಬಿ ಅವರು ಭಾಷೆಯನ್ನು ಇರುವಂತೆ ಬಳಸಲಿಲ್ಲ. ಈ ನೆಲದ ಭಾಷೆಯನ್ನು ಹೃದಯ ಸಂವೇದನೆಯೊAದಿಗೆ ಸೃಷ್ಟಿಸಿದರು. ಹಾಗಾಗಿ ಕೇಬಿ ಅವರ ಭಾಷೆಯು ನಾದದ ಲಯವಿನ್ಯಾಸದಲ್ಲಿ ಮೂಡಿ ಭಾವಗಳೊಂದಿಗೆ ನರ್ತಿಸಿದೆ. ಯಾವುದೇ ಚೌಕಟ್ಟುಗಳಿಗೆ ಸಿಕ್ಕದೆ ಸದಾ ಎಚ್ಚರದ ದನಿಯಾಗಿ, ವಿರಾಗಿಯಾಗಿ, ಸಂತನಾಗಿ ನಮಗೆ ಗೋಚರಿಸುವ ಕೇಬಿ ‘ಅಲ್ಲಮ’, ‘ಬಕಾಲಕವಿ’ ಎನ್ನುವ ಅನ್ವರ್ಥನಾಮಕ್ಕೆ ಅಕ್ಷರಶಃ ಒಪ್ಪುತ್ತಿದ್ದಂತಹ ವ್ಯಕ್ತಿತ್ವದವರಾಗಿದ್ದರು. ಸಾಮಾಜಿಕವಾಗಿ ಉದಾರಿಯಾಗಿದ್ದ ಕೇಬಿ ನೆಲದ ನುಡಿಕಾರನಾಗಿ ನಾಡಿನಾದ್ಯಂತ ಹೊಸ ಹೊಳಹುಗಳಿಗೆ ಮುನ್ನುಡಿಯ ಮಾತಾಡುತ್ತಿದ್ದವರು. ಕಾವ್ಯದಲ್ಲಿ ಪ್ರತಿಮೆ-ರೂಪಕಗಳ ನೆಲದ ನುಡಿಗಟ್ಟುಗಳನ್ನು ‘ತಾಜಾ’ ಎನ್ನುವಂತೆ ಶಬ್ಧದ ಆಚೆಗೂ ನುಡಿವ ಕಾವ್ಯವನ್ನು ಕಟ್ಟಿದರು. ಇವು ಕನ್ನಡ ಕಾವ್ಯ ಮತ್ತು ಕಾವ್ಯಮೀಮಾಂಸೆಯ ಸಿದ್ಧ ಮಾದರಿಗಳನ್ನು ಮೀರಿ ಬೆಳೆಯುತ್ತಿರುವ ಕಾವ್ಯ ಕ್ರಮಗಳಾಗಿ ಹೊಸ ಓದುಗರಿಗೆ ಗೋಚರಿಸಿದೆ. ಕೇಬಿಯೇ ಹೇಳುವಂತೆ ಇವರ ಕಾವ್ಯ – “ಬೆನ್ನ ಹಿಂದೆ ಅಂಬೇಡ್ಕರ್ ಕೂಗಿದ ಕೂಗು, ಒಂದು ಅಂಗೈಯಲ್ಲಿ ಗಾಂಧೀಜಿ, ಇನ್ನೊಂದು ಅಂಗೈಯಲ್ಲಿ ಬುದ್ಧ, ಎದುರಿಗೆ ಅಲ್ಲಮ ನಾಲ್ಕು ಮಹಾಜ್ಯೋತಿಗಳ ನಡುವೆ ಹಣತೆ ಧ್ಯಾನಿಸುತ್ತದೆ” [1] ಎಂಬ ಮಾತುಗಳು ಆದಿಮ ಪರಂಪರೆಗಳ ಬಹುತ್ವದ ಬೇರುಗಳಾಗಿ ನೆಲವನ್ನು ತಬ್ಬಿಕೊಂಡು ಚಿಗುರು, ಹೂಕಾಯಿ, ಹಣ್ಣು, ಎಲೆಗಳಾಗಿ ತಾನು ಬೆಳೆದ ಮರದ ಬುಡಕ್ಕೆ ತರಗೆಲೆಯಾಗಿ ಮತ್ತೆ ಚಿಗುರುವುದಕ್ಕೆ ಕಾವು ಕೊಡುತ್ತದೆ. ಇದೊಂದು ಚಲನಶೀಲವಾದ ನಿರಂತರ ಪ್ರಕ್ರಿಯೆ. ಇಂತಹ ಪ್ರಕ್ರಿಯೆಯು ಓದಿಗೂ ಬರಹಕ್ಕೂ ಕಾವು ಕೊಡಬೇಕು. ಇದರ ಪಡಿಯಚ್ಚಿನಂತೆ ಕೇಬಿ ಅವರ ಕಾವ್ಯ-ಮಾತುಗಳಿವೆ.

ಸಬಾಲ್ಟ್ರನ್ ನನ್ನು  ಮುಖ್ಯ ವಾಹಿನಿಗೆ ತರಲು ನಾವು ಬಳಸುತ್ತಿರುವ ಹತಾರಗಳು ಯಾವುವು? ರಾಜಕಾರಣದ ಹತಾರಗಳು ಯಾವುವು? ಎಂದು ಯೋಚಿಸುವ ಸಂದರ್ಭದಲ್ಲಿ ಕೇಬಿ ಅವರ ಖಂಡಕಾವ್ಯಗಳು ಬಳಸಿಕೊಂಡಿರುವ ಸಾಹಿತ್ಯಕ ಹತಾರಗಳು ವಿಸ್ಮೃತಿಗೆ ಸರಿದಂಥವು. ಇದನ್ನೇ ಡಿ.ಆರ್.ನಾಗರಾಜ್ ಅವರು “ವಿಸ್ಮೃತಿಗೆ ಸಂದುಹೋಗಿರುವ ವಿಷಯಗಳನ್ನು ಹೆಕ್ಕಿ ತೆಗೆಯುವುದು ಸಮುದಾಯದ ಕಥನಗಳಿಂದ ಮಾತ್ರವೇ ಸಾಧ್ಯ”[2]  ಎಂದಿದ್ದಾರೆ. ಪ್ರತಿರೋಧ ಮಾಡಲು ಬೇಕಾದ ಎಲ್ಲಾ ಹತಾರಗಳು ಸಿಗುವುದು ಕೂಡ ಸಮುದಾಯಗಳ ಸಾಂಸ್ಕೃತಿಕ ಗುರುತುಗಳಲ್ಲಿಯೇ. ಹಾಗಾಗಿ ಯಾರಿಗೆ ದಲಿತ ಸಮುದಾಯಗಳ ತಳಮಳ, ಸಾಮಾಜಿಕ ಅಸ್ಮಿತೆ, ಸಾಂಸ್ಕೃತಿಕ ಗುರುತು, ಕುಲದ ಚಹರೆಗಳ ನೇರವಾದ ಅನುಭವವಿದೆಯೋ ಅವರಿಗೆ ಅಲಕ್ಷಿತ ಸಮುದಾಯಗಳ ನೋವು ಅರ್ಥವಾಗುತ್ತದೆ. ಇಂತಹ ಅಲಕ್ಷಿತ ಕುಲದ ಕಥನಗಳನ್ನು ಮರೆಮಾಚಿರುವುದು ಸಾಹಿತ್ಯಕ ರಾಜಕಾರಣದ ಹುನ್ನಾರವಾಗಿದೆ. ಇದೊಂದು ಮೀರುವಿಕೆಯ ಹುಡುಕಾಟವಾಗಿದೆ. ಇದನ್ನೇ ಡಿ.ಆರ್.ನಾಗರಾಜ್ ಅವರು ‘ವಿಸ್ಮೃತಿಯ ಹುಡುಕಾಟ’ ಎಂದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಸಾಹಿತ್ಯ ಜನಜೀವನದ ಗತಿಬಿಂಬ’ ಎಂದಿದ್ದಾರೆ. ಇಂತಹ ಸಾಂಸ್ಕೃತಿಕ ಗುರುತುಗಳ ಜಾಡು ಹಿಡಿದು ಕೆ.ಬಿ.ಸಿದ್ಧಯ್ಯನವರು ಕುಲಪುರಾಣಗಳ ಮೂಲಕ ಖಂಡಕಾವ್ಯಗಳನ್ನು ಶೋಧಿಸಿದರು. ಹಾಗಾಗಿ ಈ ಮೂವರು ನೆಲದ ಕಥನಗಳನ್ನು ಶೋಧಿಸಿರುವ ಅಭಿನ್ನ ನೆಲೆಯಲ್ಲಿ ನಿಲ್ಲುತ್ತಾರೆ.

“ಸಬಾಲ್ಟçನ್ ಚಿಂತನೆಗಳು ಮೈದಾಳಿರುವುದೇ ಅಲಕ್ಷಿತ ಸಮುದಾಯಗಳ ಪರವಾಗಿ ಮಾತಾಡುವುದಕ್ಕೆ ಹಾಗೂ ಅವರ ಬದುಕುಗಳನ್ನೇ ನೆಲೆಯಾಗಿಸಿಕೊಂಡು ಚರಿತ್ರೆಯನ್ನು ಕಟ್ಟುವುದಕ್ಕೆ.” [3] ಈ ನೆಲೆಯಲ್ಲಿ ಕೆ.ಬಿ.ಸಿದ್ಧಯ್ಯನವರ ಸಂಶೋಧನ ಮಾರ್ಗವು ಗುರುತುಗಳ ಮೈಪಡೆವ ನೆಲೆಗಳ ಸ್ವಂತಿಕೆಯನ್ನು ನಂಬಿಕೊAಡಿದ್ದಾಗಿದೆ. ಅಲಕ್ಷಿತರು ನಿರ್ಣಯ ಕೈಗೊಳ್ಳುವ ನೆಲೆಗಳನ್ನು ಪ್ರಭುತ್ವವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತದೆ. ಇಂತಹ ಪ್ರಭುತ್ವದ ನಡೆಗಳನ್ನು ಪ್ರತಿರೋಧಿಸಿಕೊಂಡು ಕುಲಕಥನಗಳು ಜನಪದರ ಎದೆಯಲ್ಲಿ ಹಾಡಾಗಿ ಹರಿದು ಬಂದಿವೆ. ಹೀಗೆ ಬರುವಾಗ ಹಲವು ದನಿಗಳ, ಹಲವು ಅಭಿಪ್ರಾಯಗಳ ನಡುವೆ ನಿರಂತರ ಚರ್ಚೆ, ವಿಚಾರ ವಿನಿಮಯದ ಮೂಲಕ ಎಲ್ಲರೂ ಒಪ್ಪುವ ದಾರಿಯಲ್ಲಿ ನಡೆಯುತ್ತಾ ಸಾಗಿದೆ. ಅಂದರೆ, ಯಾವುದೇ ಭಿನ್ನಾಭಿಪ್ರಾಯವನ್ನು ಚರ್ಚೆ, ಸಂವಾದಗಳ ಮೂಲಕ ಪರಿಹರಿಸಿಕೊಳ್ಳುವ ಪ್ರಜಾಸತ್ತೆಯ ಗುಣ ಈ ನೆಲದ ಒಡಲಲ್ಲಿದೆ. ಆದರೆ, ಈಗ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ನಾನೆಲ್ಲಿ ದೇಶದ್ರೋಹಿಯಾಗುತ್ತೇನೊ? ಅಥವಾ ನಾನೆಲ್ಲಿ ನಗರನಕ್ಸಲ್ ಆಗುತ್ತೇನೊ? ಎನ್ನುವ ಆತಂಕವಾದ ಮನೆಮಾಡಿಕೊಂಡಿದೆ. ಇದು ಬಹುತ್ವದಿಂದ ದೂರ ಸರಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಹುತ್ವವೇ ಭಾರತದ ಧರ್ಮವಾಗಿದೆ. ಹಾಗಾಗಿ ನಾವು ಮತ್ತೆ ನೆಲದ ಸಂಕಥನಗಳ ಒಡಲಲ್ಲಿರುವ ಕುರುಹಿನ ಅರಿವಿನ ದಾರಿಯಲ್ಲಿ ನಡೆಯಬೇಕಾಗಿದೆ. ಇಂತಹ ದಾರಿಯಲ್ಲಿ ತನ್ನತನದ ಹುಡುಕಾಟ ಮಾಡಿದ ಕೆ.ಬಿ.ಸಿದ್ಧಯ್ಯನವರು ಬಹುಮುಖಿ ನೆಲೆಯಲ್ಲಿ ಮುಖಾಮುಖಿಯಾಗಿದ್ದಾರೆ. ತನ್ನೆದುರಿನ ಪ್ರಭುತ್ವಕ್ಕೆ ಕುಲಕಥನಗಳ ಮೂಲಕ ಸಾಂಸ್ಕೃತಿಕ ಪ್ರತಿರೋಧವನ್ನು ಗಟ್ಟಿಯಾಗಿ ಅಭಿವ್ಯಕ್ತಿಸಿದ್ದಾರೆ. ಕೇಬಿ ಅವರ ಹುಡುಕಾಟದ ನೆಲೆಗಳು ಈ ಕೆಳಗಿನಂತಿವೆ. ಅವುಗಳೆಂದರೆ,

೧.           ದಲಿತತ್ವದ ಆದಿಮ ಪರಂಪರೆಗಳ ಬಹುರೂಪಿ ನೆಲೆಗಳು

೨.           ಸಮುದಾಯದ ಸಾಂಸ್ಕೃತಿಕ ಗುರುತುಗಳ ಶೋಧ

೩.           ತನ್ನತನದ ಹುಡುಕಾಟ

೪.           ಮೌಖಿಕ ಕಥನಗಳ ಮರುನಿರೂಪಣಾ ಕ್ರಮ

೫.           ಕುಲದ ಚಹರೆಗಳು ಮತ್ತು ಸಾಮಾಜಿಕ ಆಚರಣೆಗಳು

೬.           ಪ್ರತಿರೋಧದ ನೆಲೆಗಳು ಮತ್ತು ಸ್ವವಿಮರ್ಶೆಯ ನೆಲೆಗಳು

೭.           ಅಲಕ್ಷಿತ ಸಮುದಾಯಗಳ ಒಳಗೊಳ್ಳುವಿಕೆ

೮.          ದೇಹಮೀಮಾಂಸೆ : ಬಂಡವಾಳವಾಗುವ ಪರಿ

೯.           ಗಿಡಬಾಲೆಯ ಲೋಕವಿವೇಕ

೧೦.       ಕುಲಕಥನಗಳ ಮೂಲಕ ‘ದಲಿತ ಮೀಮಾಂಸೆ’ ಹೆಬ್ಬಾಗಿಲು ತೆರೆದ ಬಗೆ

೧೧.       ಸಾಮಾಜಿಕನ್ಯಾಯ ಮತ್ತು ಪ್ರಜಾಸತ್ತೆ

೧೨.        ಅಕ್ಷರದ ಆತ್ಮಕತೆಯ ನೋವಿನ ಸಂಕಥನ

೧೩.       ಜಾನಪದ ದರ್ಶನ ಹಾಗೂ ‘ಮುಟ್ಟು’ವಿಕೆಯ ತವಕ

೧೪.       ಮೀರುವಿಕೆಯ ಹುಡುಕಾಟ

೧೫.       ನೆಲದ ನೆನಪಿನ ನಂಟು

೧೬.       ಸಿದ್ಧ ಮಾದರಿಗಳ ಮುರಿಯುವ ಕ್ರಮಗಳು

ಮುಂತಾದ ನೆಲದ ಪರಿಕರಗಳನ್ನು ಖಂಡಕಾವ್ಯದ ಮೂಲಕ ಈ ಲೋಕಕ್ಕೆ ರುಜುವಾತು ಪಡಿಸಿದರು. ಚಾರ್ವಾಕ, ಲೋಕಾಯತ, ವಚನ, ತತ್ವಪದ, ಜನಪದದ ಮುಖಾಂತರ ಎದುರುಗೊಂಡರು.

ಕೆ.ಬಿ.ಸಿದ್ಧಯ್ಯ ಅವರು ಕಾವ್ಯವನ್ನು ಬರೆಯುವ ಹೊತ್ತಿಗೆ ‘ಹೊಲೆಮಾದಿಗರ ಹಾಡು’ ಅನುಕರಣೀಯ ಮಾದರಿಯಾಗಿ ಅನೇಕರನ್ನು ಪ್ರಭಾವಿಸಿತ್ತ್ತು. ಕನ್ನಡ ಸಾಹಿತ್ಯಕ್ಕೆ ಇದುವರೆಗೂ ಇದ್ದಂತಹ ಅನುಭವಲೋಕಕ್ಕಿಂತ ಭಿನ್ನವಾದ ಜಗತ್ತನ್ನು ದಲಿತ ಕಾವ್ಯ ತೋರಿಸಿತು. ಇದನ್ನು ಸಂಪ್ರದಾಯವಾದಿಗಳು ನಿರಾಕರಿಸಿದರು. ಈ ಆವೇಶಭರಿತವಾದ ಧಾಟಿಯೊಂದನ್ನು ನಂತರದವರು ಅನುಕರಿಸಲು ಹೋಗಿ ತೆರೆಮರೆಗೆ ಸರಿದರು. ಆ ಸಂದರ್ಭದಲ್ಲಿ ಕೆ.ಬಿ.ಸಿದ್ಧಯ್ಯ ಈ ಆವೇಶಭರಿತವಾದ ಪ್ರಭಾವಳಿಯನ್ನು ಮೀರಿಕೊಂಡು ತನ್ನದೇ ನೆಲದ ಆದಿಮ ಪರಂಪರೆಯ ಕುಲಪುರಾಣಗಳಿಂದ ಜನಪದ ನೆನಪುಗಳಿಗೆ ಮುಖ ಮಾಡಿದರು. ಅವರು ಯಾಕೆ ಕುಲಮೂಲ ನೆಲೆಗೆ ಮುಖ ಮಾಡಿದರು? ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ದಕ್ಲರ ಮೇಲಿನ ದೌರ್ಜನ್ಯ ಕುರಿತ ಕೇಬಿ ಅವರ ಮಾತುಗಳು ಉತ್ತರವಾಗಿವೆ. ಅಸಮಾನತೆಗೆ ಸಾಮಾಜಿಕ ನ್ಯಾಯವನ್ನು ಎಲ್ಲಿಂದ ಹುಡುಕಿ ತರಬೇಕು? ಎಂಬ ಚಿಂತನೆಯಲ್ಲಿ ಇರುವಾಗ ಕುಲಪುರಾಣದ ವಸ್ತುಗಳು ಕೇಬಿ ಅವರನ್ನು ಕೈಬೀಸಿ ಕರೆದವು. ಅಥವಾ ಕೇಬಿಯವರೆ ಕುಲಪುರಾಣಗಳನ್ನು ‘ಮಗು ತಾಯಿಯನ್ನು ಅಪ್ಪುವಂತೆ’ ತಬ್ಬಿಕೊಂಡರು. ತನ್ನ ಕಾಲಡಿಯಲ್ಲಿಯೇ ಹುದುಗಿರುವ ಪ್ರಜಾಸತ್ತೆಯ ಸಾಮಾಜಿಕ ನ್ಯಾಯವನ್ನು ಅಗೆದು ತೆಗೆದು ಈ ಕಾಲದೆದುರಿಗೆ ಇಡಬೇಕೆಂದು ಚಿಂತಿಸಿದರು. ಇದರ ಜೊತೆಗೆ ವರ್ತಮಾನಕ್ಕೆ ಮುಖಾಮುಖಿಯಾದರು. ಆಧುನಿಕ ಕಾಲದ ಎಲ್ಲ ಸಂಕಟಗಳನ್ನು ಹೇಗೆ ನಿವಾರಿಸಬೇಕು ಎಂಬ ಪರಿಹಾರೋಪಾದಿಯಲ್ಲಿ ಕುಲಪುರಾಣಕ್ಕೆ ಮುಖ ಮಾಡಿದರು. ಹಿಂದೆ ಇದ್ದಂತಹ ಖಂಡಕಾವ್ಯಗಳ ಸ್ವರೂಪಕ್ಕಿಂತ ಭಿನ್ನವಾದ ಹೊಸದೊಂದು ಆಲೋಚನಾ ಕ್ರಮವಾಗಿ ‘ಬಕಾಲ’ನಿಂದ ‘ತೊಗಲಮಂಟಪ’ದವರೆಗೆ ಹಾಗೂ ಆಲ-ಅಂಕಾಲದವರೆಗೆ ಧ್ಯಾನಿಸಿರುವುದು ಕಂಡುಬAದಿದೆ.

‘ಕವಿತೆ’ ಹೀಗೆ ಇರಬೇಕು ಎಂದು ಯಾವ ಫಾರ್ಮಾನು ಇಲ್ಲ. ಅದೇ ರೀತಿ ಸಿದ್ಧಮಾದರಿಗಳು ಇರುವುದಿಲ್ಲ. ನಾವು ಮಾದರಿಗಳನ್ನು ಇಟ್ಟುಕೊಂಡರೆ ಯಾವ ಹೊಸತನಕ್ಕೂ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಮಾದರಿಗಳಾಚೆಗೂ ಬರೆಯದ ಆಕೃತಿಗಳು ಇರುತ್ತವೆ. ಅದನ್ನು ಧ್ಯಾನಸ್ಥವಾಗಿ ಹುಡುಕಬೇಕು. ಆದಿಮ ಪರಂಪರೆಯ ನೆಲದ ಬೇರುಗಳಾದ ಬಕಾಲ, ಬುದ್ಧ, ಬಸವ, ಅಲ್ಲಮ, ಮಾದಾರ ಚೆನ್ನಯ್ಯ, ಮಂಟೇದಲ್ಲಮ, ಮಾದೇಶ್ವರರು ಜೀವವಿಕಾಸದ ವಾರಸುದಾರರು. ಅಂತಹ ಅನ್ವೇಷಣಾ ದಾರಿಯಲ್ಲಿ ಆದಿಮ ಪರಂಪರೆಗಳ ಬಹುತ್ವದ ನೆಲೆಗಳನ್ನು ಕೇಬಿ ಅವರು ಧ್ಯಾನಿಸಿದರು. ಸಾಹಿತ್ಯದಲ್ಲಿ ಅವರು ಅಗ್ಗದ ಮತ್ತು ಜನಪ್ರಿಯವಾದ ಮಾರ್ಗಗಳನ್ನು ಹಿಡಿಯಲಿಲ್ಲ. ದಲಿತ-ಬಂಡಾಯದ ಉಚ್ಛಾçಯ ಸ್ಥಿತಿಯಲ್ಲಿ ಕೇಬಿ ಅವರು ಏನನ್ನೂ ಬರೆಯದೆ, ಬರವಣಿಗೆಯ ಹುಡುಕಾಟದಲ್ಲಿದ್ದರು. ತನ್ನದೇ ಆದಂತಹ ಕಾವ್ಯಮಾರ್ಗಗಳನ್ನು ಅನ್ವೇಷಿಸುತ್ತಿದ್ದರು. ಅನುಕರಣೆಯ ಕಾವು ತಣ್ಣಗಾದ ಮೇಲೆ ‘ಬಕಾಲ’ದ ಮೂಲಕ ತಮ್ಮ ಕಾವ್ಯಮಾರ್ಗವನ್ನು ಅನಾವರಣ ಮಾಡಿದರು. “ಸಾವಿರಾರು ವರ್ಷಗಳ ದೀರ್ಘ ಪಯಣದುದ್ದಕೂ ಅಕ್ಷರವಂಚಿತರ ಸ್ಪರ್ಶಕ್ಕೆ ಸಿಕ್ಕದೆ ದೂವಾಗಿಯೇ ಉಳಿದುಕೊಂಡು ಬಂದಿದ್ದ ಆದಿಜಂಬೂ ಕುಲದ ಸಾಂಸ್ಕೃತಿಕ ನಾಯಕನಾದ ‘ಬಕಾಲಮುನಿ’ಯ ದಾರ್ಶನಿಕತೆಯ ಪುರಾಣಿಕ ಕಥಾನವನ್ನು ‘ಬಕಾಲ’ ಖಂಡಕಾವ್ಯದ ಮೂಲಕ ಲೋಕಕ್ಕೆ ಮನಗಾಣಿಸಿದರು. ಮಾತ್ರವಲ್ಲದೆ ಆಧುನಿಕ ಕನ್ನಡ ಕಾವ್ಯವನ್ನು ಹೊಸದಿಕ್ಕಿನ ಕಡೆಗೆ ಮುನ್ನಡೆಸಲು ಸಶಕ್ತವಾದ ‘ದಕ್ಲಕಥಾದೇವಿ ಕಾವ್ಯ’, ‘ಅನಾತ್ಮ’, ‘ಗಲ್ಲೆಬಾನಿ’ ಎಂಬ ವಿಶೇಷ ಖಂಡಕಾವ್ಯಗಳನ್ನು ನೀಡಿ ಅಲ್ಲಮ, ಬುದ್ಧಗುರು, ಬಸವಣ್ಣ, ಅಂಬೇಡ್ಕರ್, ತತ್ವಪದಕಾರರು, ಜನಪದರು, ಸಾಮಾಜಿಕನ್ಯಾಯದ ಚಳವಳಿಗಳ ಚಿಂತನಗಳನ್ನು ದೇಶಿಭಾಷೆ ಮತ್ತು ತತ್ವಜ್ಞಾನಗಳೊಂದಿಗೆ ಕಸಿಗೊಳಿಸಿದರು” [4] ಎಂದು ವಡ್ಡಗೆರೆ ನಾಗರಾಜಯ್ಯ ಕೇಬಿ ಅವರ ಕಾವ್ಯಮಾರ್ಗವನ್ನು ಗುರ್ತಿಸಿರುವುದು ಒಪ್ಪಬಹುದಾದ ಸಾಂಸ್ಕೃತಿಕಮಾರ್ಗವಾಗಿದೆ.

ತನ್ನ ಕಾವ್ಯವನ್ನು ಕುರಿತು ಓದುವ, ಓದಿಸುವ ಯಾವ ವ್ಯಾಕುಲತೆಯು ಕೇಬಿ ಅವರಿಗೆ ಇರಲಿಲ್ಲ. ಯಾರಾದರೂ ಓದಿ ಚೆನ್ನಾಗಿದೆ ಅಂದರೆ ‘ಹೌದಾ?’ ಎಂದು ನಕ್ಕು ಸುಮ್ಮನಾಗಿಬಿಡುತ್ತಿದ್ದರು. ‘ನನ್ನ ಕಾವ್ಯ ಹೇಗಿದೆ? ಓದಿದೆನಯ್ಯ’ ಎಂದು ಯಾರನ್ನು ಕೇಳಿಲ್ಲದಂತಹ ಕಾವ್ಯವಿರಹಿಯಾಗಿದ್ದರು ಕೇಬಿ. ಅಷ್ಟೊಂದು ಅಚಲವಾದ ಆತ್ಮವಿಶ್ವಾಸ ಅವರ ಕಾವ್ಯದ ಮೇಲೆ ಅವರಿಗಿತ್ತು. ಹಾಗಾಗಿಯೇ ಅವರ ಕಾವ್ಯವು ಅವರು ಬದುಕಿದ್ದಕ್ಕಿಂತ ತೀರಿದ ನಂತರ ಹೆಚ್ಚು ಹೆಚ್ಚು ಚರ್ಚೆಗೆ ಒಳಗಾಗಿದ್ದನ್ನು ನಾವು ಗಮನಿಸಿದ್ದೇವೆ. ಯಾರಾದರೂ ಕೇಬಿಯನ್ನು ಕಾವ್ಯದಲ್ಲಾಗಲೀ, ಗದ್ಯದಲ್ಲಾಗಲೀ ಅನುಕರಣೆ ಮಾಡಲು ಹೋದರೆ ಅದು ಆತ್ಮಹತ್ಯೆಯ ದಾರಿಯೇ ಸರಿ. ಹಾಗಾಗಿ ಕೇಬಿ ಅವರು ಕನ್ನಡ ಕಾವ್ಯಮಾರ್ಗದಲ್ಲಿ ವಿಶಿಷ್ಟತೆಯ ಮಾರ್ಗವೊಂದನ್ನು ರೂಪಿಸಿದರು.

ಕೇಬಿ ಅವರು ಖಂಡಕಾವ್ಯಗಳನ್ನು ಬರೆಯುವ ಮೊದಲೇ ಅನೇಕ ಖಂಡಕಾವ್ಯಗಳು ಕನ್ನಡದಲ್ಲಿವೆ. (ಆದರೂ ಕೇಬಿ ಅವರನ್ನು ಖಂಡಕಾವ್ಯಗಳ ಆದಿಕವಿ ಎಂದು ಕರೆಯಲು ಕಾರಣವನ್ನು ಕುಲಕಥನಮಾರ್ಗದ ಭಾಗದಲ್ಲಿ ತಿಳಿಸಲಾಗಿದೆ. ಗಮನಿಸಿ) ಗೋವಿಂದ ಪೈ ಅವರ ‘ಗೋಲ್ಗಥಾ’, ‘ವೈಶಾಖೀ’, ಕುವೆಂಪು ಅವರ ‘ಚಿತ್ರಾಂಗದಾ’, ಎಚ್.ಎಸ್.ಶಿವಪ್ರಕಾಶ್ ಅವರ ‘ಸಮಗಾರ ಭೀಮವ್ವ’, ಚಂದ್ರಶೇಖರ ಕಂಬಾರರ ‘ಚಕೋರಿ’, ಶಿವತೀರ್ಥನ್ ಅವರ ‘ಗೆಂಡಗಯ್ಯ’, ರಾಜಪ್ಪ ದಳವಾಯಿ ಅವರ ‘ಅಂತರಘಟ್ಟಮ್ಮ’ ಮುಂತಾದ ಖಂಡಕಾವ್ಯಗಳು ಇವೆ. ಆದರೆ ಕೇಬಿ “ಖಂಡಕಾವ್ಯವನ್ನೇ ವಿಶಿಷ್ಟ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕೇಬಿ ಅವರದ್ದು. ಭಾಷಣಕ್ಕೆ ನಿಂತರೆ ಅಲ್ಲೇನಾದರೂ ಹೊಸ ವಿಷಯ ಪ್ರಸ್ತಾಪವಾಗುತ್ತಿತ್ತು. ಅದು ಗಂಭೀರ ವಾಗ್ವಾದಕ್ಕೂ ಕಾರಣವಾಗುತ್ತಿತ್ತು. ದಲಿತ ಚಳವಳಿಯೊಂದಿಗೆ ಮುನ್ನಡೆದು ಬಂದಿದ್ದ ಕೇಬಿ ರಾಜ್ಯದುದ್ದಕ್ಕೂ ಸಾಹಿತ್ಯ ವಲಯದಲ್ಲಿ ಪ್ರಭಾವ ಬೀರಿದ್ದರು. ‘ಕಿರಿದದೊಳ್ ಪಿರಿಪರ್ಥ’ ಎಂಬಂತೆ ಬರೆದದ್ದು ಕೆಲವು ಪುಟಗಳೇ”[5]  ಎಂದು ಜಿ.ವಿ.ಆನಂದಮೂರ್ತಿ ಅವರು ತುಮಕೂರಿನಲ್ಲಿ ಕೇಬಿ ನೆನಪಿನ ಕರ‍್ಯಕ್ರಮದಲ್ಲಿ ಹೇಳಿದರು. ಕೇಬಿ ಅವರ ಕಾವ್ಯವು ಶಬ್ಧದ ಆಚೆಗೂ ನುಡಿವ ಬೆರಗನ್ನು ಓದುಗನಲ್ಲಿ ಮೂಡಿಸಿ ಶೂನ್ಯತ್ವಕ್ಕೇರಿಸುತ್ತಿತ್ತು. ಮತ್ತೂ ಮುಂದುವರಿದು ಹೇಳುವುದಾದರೆ “ದಲಿತ ಲೋಕದ ಮನೋಲೋಕಕ್ಕೆ ಇಳಿದು, ತನ್ನ ಸಮುದಾಯದ ಪುರಾಣಗಳನ್ನು ಮೌಖಿಕ ಚರಿತ್ರೆಯನ್ನು ಮೇಲೆ ತಂದು ವಿಶಿಷ್ಟ ನುಡಿಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಕೇಬಿ ಅವರ ಕಾವ್ಯಮಾರ್ಗದಲ್ಲಿ ಕಂಡುಬರುವ ವಿಶಿಷ್ಟತೆ. ಕೇಬಿ ಅವರದು ಶಿಷ್ಟಮಾರ್ಗವಲ್ಲ. ಈ ನೆಲದ ಅವಧೂತ ಮತ್ತು ಮೌಖಿಕ ಪರಂಪರೆಗೆ ಹತ್ತಿರವಾದದ್ದು” [6] ಎಂಬ ಜಿ.ವಿ.ಆನಂದಮೂರ್ತಿ ಅವರ ಮಾತು ಇತರ ಖಂಡಕಾವ್ಯಗಳಿ ಗಿಂತ  ಕೇಬಿ ಅವರ ಖಂಡಕಾವ್ಯಗಳು ಹೇಗೆ ಭಿನ್ನವಾಗಿದೆ ಎಂಬುದನ್ನು ಖಚಿತಪಡಿಸುತ್ತವೆ. ಹೀಗೆ ಕೇಬಿ ಅವರು ಭಿನ್ನವಾಗಿ ತನ್ನ ಕಾವ್ಯಮಾರ್ಗವನ್ನು ಕಂಡುಕೊAಡರು. ಆ ಮೂಲಕ ತನ್ನದೇ ಹೊಸ ನುಡಿಗಟ್ಟಿನ ಭಾಷೆಯನ್ನು ಆಧ್ಯಾತ್ಮದ ದಾರಿಯಾಗಿ ರೂಪಿಸಿಕೊಂಡರು ಮತ್ತು ದುಡಿಸಿಕೊಂಡರು.

ಆದಿಮ ಪರಂಪರೆಯ ನೆಲದ ಬೇರಿನ ಖಂಡಕಾವ್ಯಗಳ ಆದಿಕವಿ ಕೆ.ಬಿ.ಸಿದ್ಧಯ್ಯ ಹಾಕಿಕೊಟ್ಟ ಹಾದಿಯು ಅನೇಕ ಖಂಡಕಾವ್ಯಗಳ ಹುಟ್ಟಿಗೆ ಕಾರಣವಾಗಿದೆ. ಆನಂತರದಲ್ಲಿ ಅನೇಕರು ದಲಿತತನವನ್ನು ಖಂಡಕಾವ್ಯವಾಗಿಸುವಲ್ಲಿ ಸಫಲವಾಗಿರುವುದನ್ನು ವಡ್ಡಗೆರೆ ನಾಗರಾಜಯ್ಯನವರ ‘ಅಸಾದಿ’, ರವಿಕುಮಾರ್ ನೀಹ ಅವರ ‘ಜಲಬಂಜೂಕನ್ಯೆ’, ಲಕ್ಷ್ಮಿನಾರಾಯಣ ಸ್ವಾಮಿ ಅವರ ‘ತೊಗಲ ಚೀಲದ ಕರ್ಣ’ ಮುಂತಾದ ಕಾವ್ಯಗಳನ್ನು ಗಮನಿಸಬಹುದು. “ಸಿದ್ಧಯ್ಯನವರ ಕಾವ್ಯದ ಮತ್ತೊಂದು ಮಹತ್ತ÷್ವದ ಜೀವಗಾಣ್ಕೆ ‘ಮುಟ್ಟು’ವಿಕೆಯ ಕುರಿತದ್ದು. ‘ಮುಟ್ಟುವುದು’ ಇಲ್ಲಿ ಮುಖ್ಯ. ಏಕೆಂದರೆ, ಮುಟ್ಟದೆ ದೂರ ಇಡುವ ಮೂಲಕ ಹೇಗೆ ಮನುಷ್ಯನ್ನೊಬ್ಬನನ್ನು ಹೀನನಾಗಿಸಲಾಗಿದೆ ಎಂಬ ಪ್ರಶ್ನೆ ಇದು. ಈ ಕಾವ್ಯ ಸಾಮಾಜಿಕ ಹೀನ ನಡೆಯನ್ನು ಆಧ್ಯಂತ ಆವರಿಸಿ ಪ್ರತಿಭಟಿಸುತ್ತದೆ. ಈ ಪ್ರತಿಭಟನೆಯೇ ಕಾವ್ಯದ ಕೇಂದ್ರ ಧ್ವನಿಯಾಗಿದೆ”[7]  ಎಂಬ ಡಾ.ಕೆ.ಪಿ.ನಟರಾಜ್ ಅವರು ಹೆಣ್ಣಿನ ನೈಸರ್ಗಿಕ ಪ್ರಕ್ರಿಯೆಯನ್ನು ಮಡಿವಂತಿಕೆಯ ಹಿನ್ನೆಲೆಯಲ್ಲಿಯೂ ಅಸ್ಪೃಶ್ಯರ ಸಾಮಾಜಿಕ ಜಾತೀಯತೆಯ ನೆಲೆಯಲ್ಲಿಯೂ ‘ಮುಟ್ಟು’ವಿಕೆಯ ಪ್ರತಿರೋಧದ ನೆಲೆಯನ್ನು ಗ್ರಹಿಸಿದ್ದಾರೆ. ಹುಟ್ಟಿನ ಮೂಲವೇ ‘ಮುಟ್ಟು’ ಎಂಬ ಸ್ತ್ರೀತ್ವದ ಸೃಜನಶೀಲತೆಯನ್ನು ಸ್ವೀಕರಿಸಬೇಕು. ಇದೊಂದು ಆಗುವ ಪ್ರಕ್ರಿಯೆ ಅಥವಾ ಜೀವಧಾರಣೆಯ ಸಹಜವಾದ ಕ್ರಿಯೆ. ಮನುಷ್ಯನಾದವನು ಈ ಕ್ರಮವನ್ನು ಗ್ರಹಿಸಬೇಕಾದ, ಅರಿಯಬೇಕಾದ ವಿವೇಕವನ್ನು ಹೊಂದಿದವನಾಗಿರಬೇಕು. ‘ಮುಟ್ಟು’ ಎಂಬುದು ಹುಟ್ಟಿಗೂ ಮತ್ತು ಸಾವಿಗೂ ಬದುಕಿನ ಸತ್ಯವನ್ನು ಪರಿಚಯಿಸುತ್ತದೆ. “ಇಲ್ಲಿ ಹಲವು ದಿಕ್ಕುಗಳಿಂದ ಬಯಲ ಪಯಣಗಳು ಹೊರಡುತ್ತವೆ. ಜನಪದೀಯ ಪೂರ್ವದಿಂದ; ಚಾರಿತ್ರಿಕ ವಚನ ಭೂಮಿಯ ನೆಲೆಯಿಂದ; ಅಕ್ಷರವಂಚಿತ ಹಸಿವಿನ ಮತ್ತು ಅಸ್ಪೃಶ್ಯ ಲೋಕದ ನಡುವಿನಿಂದ ಹೀಗೆ ಬಹುನೆಲೆಗಳಿಂದ ಈ ಪ್ರಯಾಣ ಆರಂಭಗೊಳ್ಳುತ್ತದೆ”[8]  ಈ ಬಹುದಿಕ್ಕಿನ ಬಹುರೂಪಿ ಬದುಕಿನ ವಿನ್ಯಾಸಗಳೇ ಬಹುತ್ವವಾಗಿ ಆದಿಮ ಪರಂಪರೆಗಳ ಬೇರುಗಳಾಗಿ ನೆಲವನ್ನು ತಬ್ಬಿಕೊಂಡಿವೆ. ಈಗ ನೆಲದ ನೆನಪಿನಿಂದಲೇ ಬೇರುಗಳನ್ನು ಬೇರ್ಪಡಿಸುವ ಸಂಚುಗಳು ನಡೆಯುತ್ತಿವೆ.

“ಕೇಬಿ ಕಾವ್ಯದ ಹಿಂದೆ ಈ ನೆಲದ ಬೇರೆ ಬೇರೆ ದರ್ಶನಗಳು, ಮೀಮಾಂಸೆಗಳು, ದೇಶಿ ಅಭಿವ್ಯಕ್ತಿ ಇದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಅವರದ್ದು ಕುಪ್ಪಳಿಕೆಯ ನಡೆ. ಕನ್ನಡದಲ್ಲಿ ಕಾವ್ಯಮಾದರಿಗಳು ಅನೇಕ ಇವೆ. ಇವುಗಳಲ್ಲಿ ಬಹುಪಾಲು ಅಂತಿಮವಾಗಿ ದೈವದ ಕಡೆಗೆ, ಇಲ್ಲ ಮತ್ತೊಂದು ಕಡೆಗೆ ಕೈತೋರಿಸುತ್ತವೆ. ಆದರೆ, ಸಿದ್ಧಯ್ಯ ಅವರ ಕಾವ್ಯ ಜನಸಮೂಹದ ನಡುವೆ ನಿಲ್ಲುತ್ತದೆ. ಅವರದ್ದು ಜಾತಿ, ವರ್ಗ ಸೇರಿದಂತೆ ಯಾವುದೇ ಬೇಲಿಗಳು ಇಲ್ಲದ ಬಯಲಿನ ಕಾವ್ಯ. ನಟ್ಟನಡುವೆ ಎಲ್ಲರನ್ನು ಕೂರಿಸಿಕೊಂಡು ಕಾವ್ಯವೂ ಕುಳಿತುಕೊಳ್ಳುತ್ತದೆ. ಅವರ ಕಾವ್ಯಗಳು ಸಾಮಾಜಿಕ ಹೋರಾಟಕ್ಕೆ ತಾತ್ವಿಕ ಆಕರಗಳನ್ನು ಒದಗಿಸಿವೆ. ಅಂಬೇಡ್ಕರ್ ಹೇಗೆ ದಲಿತರಿಗೆ ಮಾತ್ರವಲ್ಲವೋ ಅದೇರೀತಿ ಕೇಬಿ ಮತ್ತು ಅವರ ಕಾವ್ಯ ದಲಿತರಿಗೆ ಮಾತ್ರವಲ್ಲದೆ, ಎಲ್ಲ ತಬ್ಬಲಿ ಸಮೂಹಗಳಿಗೂ ವಿಸ್ತರಿಸಿಕೊಳ್ಳುತ್ತದೆ” [9] ಎಂದು ಹೇಳಿರುವ ನಟರಾಜ ಬೂದಾಳರ ಮಾತನ್ನು ಒಪ್ಪಬಹುದು. ಬಯಲಿನ ಕಾವ್ಯವಾಗಿ ರೂಪುಗೊಳ್ಳಲು ಕಾರಣವೇನೆಂದರೆ, ಕುಲಪುರಾಣದ ವಸ್ತು-ಆಶಯಗಳು ಜೀವಪರವಾದ ನೆಲೆಯವು. ಇದರಾಚೆಗೂ ನಿಂತು ಸಮುದಾಯದ ಅಂತರAಗದ ಮೌನ, ಮಾತು, ನೋವು, ಹಸಿವು, ಸಂಕಟಗಳನ್ನು ಸಾಂಸ್ಕೃತಿಕ ಪರಿಭಾಷೆಯ ಮೂಲಕ ಶೋಧಿಸಲು ಹೊರಟ ನೆಲದ ನೆನಪುಗಳನ್ನು ಜನಪದರ ಎದೆಯಲ್ಲಿ ಹುಡುಕಿದ ಆದಿಮ ಕವಿಯೇ ಕೇಬಿ.

ಕಾವ್ಯದ ಪ್ರಾಣವೇ ಸಂವೇದನೆಯಾದರೆ, ಈ ಸಂವೇದನೆಗೆ ಹಸಿವು, ಅಸ್ಪೃಶ್ಯತೆ, ಗಾಯಗೊಂಡ ನೆನಪುಗಳು ಕಾರಣಗಳಾಗಿವೆ. “ಗದ್ಯದಲ್ಲಿ ದೇವನೂರು ಮಹಾದೇವ ಬಹುಮುಖ್ಯ ಲೇಖಕ. ಕಾವ್ಯದಲ್ಲಿ ಕೆ.ಬಿ.ಸಿದ್ದಯ್ಯ ಅವರ ಶಕ್ತಪ್ರತಿನಿಧಿ”[10]  ಈ ಮಾತು ಕಥನವನ್ನು ಕಾವ್ಯವಾಗಿಸಲು ಅಥವಾ ಕಾವ್ಯವನ್ನು ಕಥಿಸುವಲ್ಲಿ ಈ ಧಾರೆಗಳು ನೆಲದ ಪದಗಳಾಗಿ ಜಾನಪದೀಯವಾಗಿದೆ. ಹಸಿವು, ಬಡತನ, ಅವಮಾನ, ದುಃಖಗಳ ಜೊತೆ ಕಾವ್ಯ ಮಾತಾಡಬೇಕು ಎಂಬುದು ದಲಿತ ಕಾವ್ಯದ ತಾತ್ವಿಕ ಆಶಯವಾಗಿದೆ. ಈ ಆಶಯವೇ ‘ಸಾಮಾಜಿಕನ್ಯಾಯ’ದ ಪ್ರಶ್ನೆಯಾಗಿ ಸಮುದಾಯಗಳ ವಿನ್ಯಾಸಗಳನ್ನು ಮರುಶೋಧನೆಗೆ ಒಳಪಡಿಸಿದೆ. ‘ಗಲ್ಲೆಬಾನಿ’ ದಲಿತ ಸಾಹಿತ್ಯದ ಜೀವದ್ರವ್ಯವಾಗಿ, ಜೀವಪರವಾಗಿ ಸಾಂಸ್ಕೃತಿಕ ಅನನ್ಯತೆಯನ್ನು ಪ್ರತಿನಿಧಿಸುತ್ತದೆ. ಇದೊಂದು ಪ್ರಜಾಸತ್ತೆಯ ‘ಸಾಮಾಜಿಕನ್ಯಾಯ’ದ ಆಶಯದ ತಳಹದಿಯಲ್ಲಿ ಮೈಪಡೆದಿದೆ. ಸಮುದಾಯದ ತಲಾ-ತಲಾಂತರದ ಸಮಾಜೋ-ಆಧ್ಯಾತ್ಮಿಕ-ಸಾಕ್ಷಿಪ್ರಜ್ಞೆಯನ್ನು ನುಡಿಯಲು ಹೊರಟ ನುಡಿಕಾರನಂತೆ ಕೇಬಿ ಕಾವ್ಯವು ಗಟ್ಟಿಯಾಗಿ ಹೇಳುತ್ತದೆ. ಕುಲದ ಕುಲುಮೆಯಲ್ಲಿ ಕುದಿಯುತ್ತಿರುವ ಅರಿವಿನ ಕುರುಹಿನ ಕಿಡಿಗಳನ್ನು ಪರಂಜ್ಯೋತಿಯಾಗಿಸಿಕೊಡು ಕತ್ತಲ ಜಗತ್ತನ್ನು ಅನಾವರಣಗೊಳಿಸುವ ಪೂರ್ವಿಕ ಮಂಟೇಸ್ವಾಮಿಯ ನೈತಿಕ ಪ್ರಜ್ಞೆಯೇ ಕೇಬಿ ಕಾವ್ಯದ ತಾತ್ವಿಕತೆಯಾಗಿ ಬಹುತ್ವದ ನೆಲೆಗಳನ್ನು ಅನ್ವೇಷಿಸಿದೆ. ಮಹದೇಶ್ವರ ಮಂಟೇಸ್ವಾಮಿ ಪದೇ ಪದೇ ಕೇಬಿ ಕಾವ್ಯದಲ್ಲಿ ಎದುರಾಗುತ್ತಾರೆ. ಮೂರು ದಾರಿ ಕೂಡುವಲ್ಲಿ ಉರಿವ ದೀಪದಂತೆ ಬದುಕು ಬಹುದಾರಿಗಳಿಂದ ಬಂದು ನೆಲೆಸಿದ ಕಾಲುದಾರಿಗಳ ಪಯಣವನ್ನು ತನ್ನ ಕಾವ್ಯದ ಒಡಲಲ್ಲಿ ಇಟ್ಟಿಕೊಂಡಿದೆ. ಕೇಬಿ ಕಾವ್ಯವನ್ನು ಬರೆಯುವ ಹೊತ್ತಿನಲ್ಲಿ ಇತರ ಕವಿಗಳು ಹೆದ್ದಾರಿಯನ್ನು ಹಿಡಿದಿದ್ದರು, ನಗರದ ಬೀದಿಯಲ್ಲಿ ನೆಲೆ ಕಂಡುಕೊAಡಿದ್ದರು. ಈ ಕಾಲುದಾರಿಯ ಕಥನಗಳನ್ನು ವಿಸ್ತೃತಿಯಿಂದ ತಪ್ಪಿಸುವ ಸಲುವಾಗಿಯೇ ಕುಲಪುರಾಣಗಳ ಜಾನಪದ ನೆನಪುಗಳನ್ನು ದಾಖಲಿಸಿದ್ದು ದಲಿತ ಸಾಹಿತ್ಯದ ಮೈಲುಗಲ್ಲಾಗಿ ಕೇಬಿ ಅವರ ಖಂಡಕಾವ್ಯಗಳು ಇವೆ. ಆದಿಮ ಪರಂಪರೆಯ ನೆಲದ ಬೇರುಗಳಲ್ಲಿನ ಚರಿತ್ರೆ, ಕುಲಪುರಾಣ, ವರ್ತಮಾನ ಹಾಗೂ ತಳಸಮುದಾಯಗಳ ಅರಿವು, ಆಧ್ಯಾತ್ಮ, ಕಾಲಜ್ಞಾನಗಳ ಒಟ್ಟು ಮೊತ್ತವೇ ಕೇಬಿ ಕಾವ್ಯಮಾರ್ಗವಾಗಿದೆ. ಇದು ಆದಿಮ ಪರಂಪರೆಗಳ ನೆಲದ ಬೇರುಗಳಿಂದ ಚಿಗುರಿದ ಬಹುರೂಪಿ ನೆಲೆಗಳಾಗಿವೆ. ಸ್ವಾಭಿಮಾನ, ಪ್ರತಿರೋಧ, ಸಹನೆ, ಸಹಾನುಭೂತಿ ಹಾಗೂ ಸಮಗ್ರ ಜೀವನದೃಷ್ಟಿಯೇ ದಲಿತ ಸಂವೇದನೆಯಾಗಿದೆ. ಈ ಸಂವೇದನೆಯೇ ಜೀವದ್ರವ್ಯವಾಗಿ ಕಾವ್ಯವಾಗಿದೆ.

ಕೇಬಿ ಕಾವ್ಯದ ಒಡಲಲ್ಲಿರುವ ಅಭಿವ್ಯಕ್ತಿಯ ನೆಲೆಗಳೆಂದರೆ;

  • ಆದಿಮ ಪರಂಪರೆಯ ನೆಲದ ಬೇರಿನ ಖಂಡಕಾವ್ಯಗಳ ಆದಿಕವಿ ಕೆ.ಬಿ.ಸಿದ್ದಯ್ಯ ಅವರು ನೆಲದ ನೆನಪುಗಳನ್ನು ಜನಪದರ ಎದೆಯಲ್ಲಿ ಹುಡುಕಿದರು. ಕನ್ನಡ ಸಾಹಿತ್ಯದಲ್ಲಿ ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯ ಹೆಬ್ಬಾಗಿಲು ತೆರೆದರು.
  • ಕುಲಪುರಾಣಗಳನ್ನು ‘ಮಗು ತಾಯಿಯನ್ನು ಅಪ್ಪುವಂತೆ’ ತಬ್ಬಿಕೊಂಡರು. ಖಂಡಕಾವ್ಯವನ್ನೇ ವಿಶಿಷ್ಟ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡು ದೇಶಿಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದರು.
  • ಎಲ್ಲಾ ಪ್ರಭಾವಳಿಯನ್ನು ಮೀರಿಕೊಂಡು ತನ್ನದೇ ನೆಲದ ಕುಲಪುರಾಣಗಳಿಗೆ ಹೊಸ ನುಡಿಗಟ್ಟನ್ನು ಕಟ್ಟಿದರು. ಆ ಮೂಲಕ ಈ ನೆಲದ ಭಾಷೆಯನ್ನು ಹೃದಯ ಸಂವೇದಿಯೊAದಿಗೆ ಸೃಷ್ಟಿಸಿದರು.
  • ಸಾಹಿತ್ಯದಲ್ಲಿ ಅಗ್ಗದ ಮತ್ತು ಜನಪ್ರಿಯ ಮಾರ್ಗಗಳನ್ನು ಹಿಡಿಯಲಿಲ್ಲ ಮತ್ತು ತನ್ನ ಕಾವ್ಯವನ್ನು ಕುರಿತು ಓದಿಸುವ ಯಾವ ವ್ಯಾಕುಲತೆ ಕೇಬಿ ಅವರಿಗೆ ಇರಲಿಲ್ಲ.
  • ಕೇಬಿ ಅವರದು ಶಿಷ್ಟಮಾರ್ಗವಲ್ಲ. ಈ ನೆಲದ ಅವಧೂತ ಮತ್ತು ಮೌಖಿಕ ಪರಂಪರೆಗೆ ಹತ್ತಿರವಾದದ್ದು. ಕನ್ನಡ ಕಾವ್ಯಮಾರ್ಗದಲ್ಲಿ ವಿಶಿಷ್ಟತೆಯ ಕಾವ್ಯಮಾರ್ಗವೊಂದನ್ನು ರೂಪಿಸಿದರು.
  • ಆದಿಮ ಪರಂಪರೆಯ ನೆಲದ ಬೇರುಗಳಾದ ಬಕಾಲ, ಬುದ್ಧ, ಬಸವ, ಅಲ್ಲಮ, ಮಾದಾರ ಚೆನ್ನಯ್ಯ, ಮಂಟೇಸ್ವಾಮಿ, ಮಹದೇಶ್ವರ ಮುಂತಾದವರಿAದ ಹಲವು ದಿಕ್ಕುಗಳಿಂದ ಬಯಲ ಪಯಣಗಳು ಹೊರಡುತ್ತವೆ. ಈ ಬಹುದಿಕ್ಕಿನ ಬಹುರೂಪಿ ಬದುಕಿನ ವಿನ್ಯಾಸಗಳೇ ಬಹುತ್ವವಾಗಿ ಆದಿಮ ಪರಂಪರೆಗಳ ಬೇರುಗಳಾಗಿ ನೆಲವನ್ನು ತಬ್ಬಿಕೊಳ್ಳುತ್ತವೆ. ಇದರ ಭಾಗವಾಗಿ ಕೇಬಿ ಅವರದು ಬಯಲಲ್ಲಿ ಬಯಲಾಗಿ ಬಯಲೇ ಆಗಿಬಿಡುವ ‘ಬಯಲಿನ ಕಾವ್ಯ’ ಆಗಿದೆ.
  • ಮೈಲಿಗೆಯನ್ನು ‘ಮುಟ್ಟು’ವ ತವಕವೇ ಕೇಬಿ ಅವರ ಕಾವ್ಯದ ಕೇಂದ್ರಬಿಂದುವಾಗಿದೆ. ಇದೊಂದು ಆಗುವಿಕೆಯ ಪ್ರಕ್ರಿಯೆ ಮತ್ತು ಜೀವಧಾರಣೆಯ ಸೃಜನಶೀಲವಾದ ಸೃಷ್ಟಿಕ್ರಿಯೆಯಾಗಿದೆ. ಈ ‘ಮುಟ್ಟು’ ಎಂಬುದು ಹುಟ್ಟಿಗೂ ಹಾಗೂ ಸಾವಿಗೂ ಕಾರಣವಾದ ಬದುಕಿನ ಸತ್ಯವಾಗಿದೆ. ಅದಕ್ಕಾಗಿಯೇ ಕೇಬಿ – ‘ಸತ್ತವನನ್ನು ಮತ್ತೆ ಮತ್ತೆ ಸಾಯಿಸುವುದು ಯಾವ ನ್ಯಾಯ?’ ಎಂದು ಕೇಳುತ್ತಾರೆ.
  • ಹಸಿವು, ಅವಮಾನ, ದುಃಖ, ಸಂಕಟದ ಜೊತೆ ಕಾವ್ಯವು ಮಾತಾಡಬೇಕು ಎಂಬುದು ದಲಿತ ಕಾವ್ಯದ ತಾತ್ವಿಕ ಆಶಯವಾಗಿದೆ. ಆಶಯವು ಆಕೃತಿಯಾಗುವಾಗ ನೈತಿಕತೆಯ ನೆಲೆಯಲ್ಲಿ ಪ್ರಶ್ನಿಸುವಂತಿರಬೇಕು. ಆ ಮೂಲಕ ಸ್ವವಿಮರ್ಶೆ ಮಾಡಿಕೊಳ್ಳುತ್ತದೆ.
  • ಸಾಮಾಜಿಕ ಬದುಕು ಮತ್ತು ಆಧ್ಯಾತ್ಮ ಎರಡನ್ನು ಬೆಸೆಯುವ ಬಹುದೊಡ್ಡ ಆಲೋಚನೆ ಕೇಬಿ ಅವರ ಕಾವ್ಯದ ಒಡಲಲ್ಲಿದೆ. ದುಃಖಾನುಸಂಧಾನ ಮಾಡಿದ ಬುದ್ಧನ ನಿಲುವುಗಳು ಕೇಬಿ ಅವರ ಖಂಡಕಾವ್ಯದಲ್ಲಿ ಹಸಿವಿನ ಜೊತೆ, ಅವಮಾನದ ಜೊತೆ, ನೋವಿನ ಜೊತೆಗೆ ನೈತಿಕ ಅನುಸಂಧಾನ ಮಾಡಿವೆ. ಹಾಗಾಗಿ ತಾತ್ವಿಕ ಸಿಟ್ಟು ಮತ್ತು ನೈತಿಕ ಎಚ್ಚರವು ಸಂತನAತಿರುವ ಕೇಬಿಯವರ ನಗುಮುಖದಲ್ಲಿತ್ತು.
  • ಜನಪದ ಸಾಂಸ್ಕೃತಿಕ ನಾಯಕರ ಆದಿಮ ಪರಂಪರೆಯ ಅನ್ವೇಷಣೆಯ ಬಹುತ್ವದ ನೆಲೆಗಳನ್ನು ಖಂಡಕಾವ್ಯದ ಮೂಲಕ ಕೇಬಿ ಅವರು ಶೋಧನೆಗೆ ಒಳಪಡಿಸಿದ್ದಾರೆ.
  • ಆಧ್ಯಾತ್ಮ ಎನ್ನುವುದು ಧ್ಯಾನ, ಹುಡುಕಾಟ, ನಡೆಯುವ ದಾರಿ ಅದು ಎಂದು ಕೇಬಿ ಸರಳೀಕರಿಸಿದರು. ಆ ಮೂಲಕ ರೂಢಿಗತ ಆಧ್ಯಾತ್ಮವನ್ನು ನಿರಾಕರಿಸಿ, ಬದುಕಿನ ಅರ್ಥವಿನ್ಯಾಸಗಳನ್ನು ಶೋಧನೆಗೆ ಒಳಪಡಿಸಿದರು. ಬದುಕಿನ ಅನುಭವಗಳಿಂದಲೇ ಅನುಭಾವಕ್ಕೇರುವ ಸ್ವೀಕರಣ ಸ್ಥಿತಿಯೇ ನಿಜವಾದ ಆಧ್ಯಾತ್ಮವೆಂದು ಸರಳೀಕರಿಸಿದರು.
  • ಕುಲದ ಕುಲುಮೆಯಲ್ಲಿ ಕುದಿಯುತ್ತಿರುವ ಅರಿವಿನ ಕುರುಹಿನ ಕಿಡಿಗಳನ್ನು ಪರಂಜ್ಯೋತಿಯಾಗಿಸಿ ಜಗವ ಬೆಳಗುವ ಮಂಟೇಸ್ವಾಮಿಯ ನೈತಿಕಪ್ರಜ್ಞೆಯೇ ಕೇಬಿ ಕಾವ್ಯದ ಬಹುತ್ವದ ನೆಲೆಗಳಾಗಿವೆ.
  • ಪರಂಪರೆಯ ನೆಲದ ಬೇರಿನ ಚರಿತ್ರೆ, ಕುಲಪುರಾಣ, ವರ್ತಮಾನವು ತಳಸಮುದಾಯಗಳ ಸ್ವಾಭಿಮಾನ, ಪ್ರತಿರೋಧ, ಸಹನೆ, ಅರಿವು, ಆಧ್ಯಾತ್ಮ, ಕಾಲಜ್ಞಾನಗಳ ಒಟ್ಟು ಮೊತ್ತವೇ ಕೇಬಿ ಅವರ ಕಾವ್ಯಮಾರ್ಗವಾಗಿದೆ.

………………..

1. ಗಲ್ಲೆಬಾನಿ-ಕೆ.ಬಿ.ಸಿದ್ಧಯ್ಯ, ನಮ್ಮ ಪ್ರಕಾಶನ-ತಿಪಟೂರು, ೨೦೦೯, ಪರಿಚಯದಲ್ಲಿ
2. ಈ ಹೇಳಿಕೆಯನ್ನು ಕೇವಲ ಓದಿನ ನೆನಪಿನಿಂದ ಉಲ್ಲೇಖಿಸಲಾಗಿದೆ.
3.ಈ ಹೇಳಿಕೆಯನ್ನು ಕೇವಲ ಓದಿನ ನೆನಪಿನಿಂದ ಉಲ್ಲೇಖಿಸಲಾಗಿದೆ.
4.ವಡ್ಡಗೆರೆ ನಾಗರಾಜಯ್ಯ- ಕರ್ನಾಟಕದ ಆದಿಜಾಂಬವ ಮಾತಂಗ ಪರಂಪರೆಯ ಸಾಂಸ್ಕೃತಿಕ ಅಧ್ಯಯನ, ಪುಟ-೩೧೧
5. ಕೆ.ಬಿ.ಸಿದ್ಧಯ್ಯ ಅವರ ನೆನಪಿನ ಕಾರ್ಯಕ್ರಮ, ತುಮಕೂರು ದಿನಾಂಕ-೦೩-೦೧-೨೦೨೦
6. ಕೆ.ಬಿ.ಸಿದ್ಧಯ್ಯ ಅವರ ನೆನಪಿನ ಕಾರ್ಯಕ್ರಮ, ತುಮಕೂರು ದಿನಾಂಕ-೦೩-೦೧-೨೦೨೦
7.ಕೆ.ಪಿ.ನಟರಾಜ- ‘ದಲಿತ ಲೋಕದ ಮೀಮಾಂಸೆ: ಕೇಬಿ ಸಿದ್ಧಯ್ಯನವರ ಕಾವ್ಯದ ಒಳಾಯ
8. ಕೆ.ಪಿ.ನಟರಾಜ- ‘ದಲಿತ ಲೋಕದ ಮೀಮಾಂಸೆ: ಕೇಬಿ ಸಿದ್ಧಯ್ಯನವರ ಕಾವ್ಯದ ಒಳಾಯ
9. ಪ್ರಜಾವಾಣಿಯ ಭಾನುವಾರದ ಪುರವಣಿ, ೨೦ ಅಕ್ಟೋಬರ್ ೨೦೧೯, ಪು-೨
10. ಉರಿಚಮ್ಮಾಳಿಗೆ – ಡಿ.ಆರ್.ನಾಗರಾಜ್, ಕಸಾಪ-ಬೆಂಗಳೂರು, ೨೦೧೫, ಪು-೮೬

ಪರಾಮರ್ಶನ ಗ್ರಂಥಗಳು:

೧.           ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಕುವೆಂಪು ಭಾಷಾಭಾರತಿ-ಬೆಂಗಳೂರು, ೨೦೧೫, ಸಂಪುಟ-೦೧

೨.           ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಕುವೆಂಪು ಭಾಷಾಭಾರತಿ-ಬೆಂಗಳೂರು, ೨೦೧೫, ಸಂಪುಟ-೨೦

೩.           ಉರಿಚಮ್ಮಾಳಿಗೆ-ಡಿ.ಆರ್.ನಾಗರಾಜ್, ಕಸಾಪ-ಬೆಂಗಳೂರು, ೨೦೧೫

೪.           ಕಸಬಾರಿಗೆ ಪಾದ-ಬಸವರಾಜ್ ಹೃತ್ಸಾಕ್ಷಿ, ಪಲ್ಲವ ಪ್ರಕಾಶನ-ಚನ್ನಪಟ್ಟಣ, ೨೦೧೬

೫.           ಜಂಬಣ್ಣ ಅಮರಚಿಂತ-ಹರಿವ ನದಿಗೆ ಮೈಯೆಲ್ಲಾ ಕಾಲು

೬.           ಗಲ್ಲೆಬಾನಿ-ಕೆ.ಬಿ.ಸಿದ್ಧಯ್ಯ, ನಮ್ಮ ಪ್ರಕಾಶನ-ತಿಪಟೂರು, ೨೦೦೯

೭.           ಗಾಳಿಬೆಳಕು-ನಟರಾಜ್ ಹುಳಿಯಾರ್, ಪಲ್ಲವ ಪ್ರಕಾಶನ-ಚನ್ನಪಟ್ಟಣ, ೨೦೧೯

೮.          ಕೆ.ಪಿ.ನಟರಾಜ- ‘ದಲಿತ ಲೋಕದ ಮೀಮಾಂಸೆ: ಕೇಬಿ ಸಿದ್ಧಯ್ಯನವರ ಕಾವ್ಯದ ಒಳಾಯ

೯.           ಕೆ.ಬಿ.ಸಿದ್ಧಯ್ಯ ಅವರ ಖಂಡಕಾವ್ಯಗಳು-ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೬

೧೦.       ಮಾಂಸದಗಡಿಯ ನವಿಲು-ಎನ್.ಕೆ.ಹನುಮಂತಯ್ಯ, ಲಡಾಯಿ ಪ್ರಕಾಶನ-ಗದಗ, ೨೦೧೬

೧೧.       ವಡ್ಡಗೆರೆ ನಾಗರಾಜಯ್ಯ-ಕರ್ನಾಟಕದ ಆದಿಜಾಂಬವ ಮಾತಂಗ ಪರಂಪರೆಯ ಸಾಂಸ್ಕೃತಿಕ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ-ಹಂಪಿ, ೨೦೧೭

೧೨.        ಹಾಡು ಕಲಿಸಿದ ಹರ-ಸುರೇಶ ನಾಗಲಮಡಿಕೆ, ದೀಪಂಕುರ ಪ್ರಕಾಶ-ತುಮಕೂರು, ೨೦೨೦,

೧೩.       ದಲಿತ ಸಾಹಿತ್ಯ ಮೀಮಾಂಸೆ-ಡಾ.ರವಿಕುಮಾರ್ ನೀಹ, ಕಸಾಅ-ಬೆಂಗಳೂರು, ೨೦೧೯,

 

– ಡಾ.ಎಸ್.ಕೆ.ಮಂಜುನಾಥ

ಡಾ.ಎಸ್.ಕೆ.ಮಂಜುನಾಥ್ ಅವರು “ಎದೆಗಿಲಕಿ” ಕವನ ಸಂಕಲನದ ಮೂಲಕ ಪರಿಚಿತರು. ತಿಪಟೂರು ತಾಲ್ಲೂಕಿನ ಶಿವರ ಗ್ರಾಮದ ಇವರ ಆಸಕ್ತಿಯ ಕ್ಷೇತ್ರಗಳು ವಿಮರ್ಶೆ, ಸಂಶೋಧನೆ ಹಾಗೂ ಸಾಂಸ್ಕೃತಿಕ ಅಧ್ಯಯನ. ಪೋಟೋಗ್ರಫಿ, ಪ್ರವಾಸ ನೆಚ್ಚಿನ ಹವ್ಯಾಸಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ “ಹೊಸತಲೆಮಾರಿನ ಕನ್ನಡ ಕಾವ್ಯದ ಅಭಿವ್ಯಕ್ತಿ ವಿನ್ಯಾಸಗಳು” ಎಂಬ ವಿಷಯಕ್ಕೆ ಪಿಎಚ್.ಡಿ., ಪದವಿ. ದಶಕದ ಹೊತ್ತಲ್ಲಿ ಎರಡನೇ ಕವನ ಸಂಕಲನ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕೃತಿಯು ಅಚ್ಚಿನಲ್ಲಿದೆ. ಪ್ರೊ.ಕೆ.ಬಿ.ಸಿದ್ಧಯ್ಯ ಅವರ ಬದುಕು ಬರಹ ಕುರಿತ “ಕಡಿದಷ್ಟು ಕುಡಿಯೊಡೆವ” ಸಂಪಾದನ ಕೃತಿ, ಹೊಸತಲೆಮಾರಿನ ಕಾವ್ಯ ಕುರಿತ “ವಿಳಾಸವಿಲ್ಲದ ಪತ್ರ” ವಿಮರ್ಶಾ ಕೃತಿ, ದಲಿತ ಚಳವಳಿಯ ನಂತರದ ಸಮಕಾಲೀನತೆಯನ್ನು ಕುರಿತ “ಕೂಡುದಾರಿ” ಕೃತಿಗಳು ಅಚ್ಚಿನಲ್ಲಿವೆ.