ಬಹುಜನರ ಶತ್ರು

 

ಬಹುಜನರ ಶತ್ರು

ಕುಫಿರ್

ಕನ್ನಡ  ಅನುವಾದ – ಸ್ವರ್ಣ ಕುಮಾರ್ B A 

(ಫೆಬ್ರವರಿ 25, 2019 ರಂದು ಮರಾಠಿ ಪತ್ರಕಾರ್ ಸಂಘ್ , ಫೋರ್ಟ್ ಮುಂಬೈಯಲ್ಲಿ ನಡೆದ ಮೇಲ್ಜಾತಿಗಳೆಂದು ಕರೆಸಿಕೊಳ್ಳುವವರಿಗೆ ಕೊಡಲಾದ EWS ಕೋಟಾದ ಸಾಂವಿಧಾನಿಕತೆ, ಪ್ರಗತಿಶೀಲತೆ ಮತ್ತು SC/ST/OBC/Pasmanda ಪ್ರಾತಿನಿಧ್ಯದ ಪರಿಣಾಮಗಳ ಕುರಿತಾದ ಚರ್ಚೆಯಲ್ಲಿ ಕುಫಿರ್ ಅವರ ಭಾಷಣದ ಪೂರ್ಣಪಾಠ).

 

ಎಲ್ಲರಿಗೂ ಜೈಭೀಮ್,

ನಾನು ಎಲ್ಲಾ ಭಾಷಣಕಾರರ ಮಾತುಗಳನ್ನು ಕೇಳಿದೆ. ಅವರೆಲ್ಲರೂ ತುಂಬಾ ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಕೆಲವನ್ನು ನಾನು ಸಂಕ್ಷಿಪ್ತವಾಗಿ ಉಲ್ಲೇಖಿಸಲು ಬಯಸುತ್ತೇನೆ. ಹೆಚ್ಚು ಮಾತನಾಡಲು ಸಮಯವಿಲ್ಲ. ಪ್ರೊ. ಸ್ಥಬೀರ್ಖೋರಾ ಹೇಳಿದ ಹಾಗೆ, ಪ್ರಾಯಶಃ ಈ ನ್ಯಾಯಾಂಗಕ್ಕೆ ಸತ್ಯ ಮತ್ತು ತರ್ಕ ಅರ್ಥವಿಲ್ಲದ ವಸ್ತುಗಳು. 70ರ ದಶಕದಲ್ಲಿ ಫಿಲಿಪ್ರಾತ್ ಅವರ ಈ ವಿಡಂಬನಾತ್ಮಕ ಬರವಣಿಗೆ ಇತ್ತು. ಅವರು ನಿಕ್ಸನ್ ಆಡಳಿತದಲ್ಲಿ ಅಲ್ಟ್ರಾ-ಸಂಪ್ರದಾಯವಾದಿಗಳನ್ನು ಉಲ್ಲೇಖಿಸಿ, ನಿಕ್ಸನ್ ಅವರನ್ನು ‘ಟ್ರಿಕಿಡಿಕ್’ ಎಂದು ಕರೆದಿದ್ದಾರೆ. ನಿಕ್ಸನ್ ಆಡಳಿತ ಹೊಸ ಭಾಷೆಯನ್ನುರಚಿಸಿತ್ತು (ಅವರ ಅಲ್ಟ್ರಾರೈಟ್ ಆಲೋಚನೆಗಳಿಗೆ ಸರಿಹೊಂದುವಂತೆ). ಅವರು ಹುಟ್ಟಲಿರುವ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ನಾವು ಸವರ್ಣಿಯರ ಬಡತನದ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಮಾನೆಸ ಹೇಳಿದಂತೆ ಅದು ಇಲ್ಲದ್ದು, ಕಲ್ಪಿಸಿದ್ದು. ಹುಟ್ಟದವರಿಗೆ ಹಕ್ಕುಗಳಿವೆ ಆದರೆ ಬದುಕಿರುವವರಿಗೆ ಹಕ್ಕುಗಳಿಲ್ಲ. ನಿಜವಾದ ಬಡವರಿಗೆ ಹಕ್ಕುಗಳಿಲ್ಲ.

ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರದ ಸಮಸ್ಯೆ ಏನೆಂದರೆ, ಕೆಲವು ವರ್ಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ನಾವು ನಂಬುತ್ತೇವೆ ಆದರೆ ಅವರು ಕಳಂಕಿತರಾಗಿಲ್ಲ. ಆದರೆ ಜಗತ್ತಿನಲ್ಲಿ ಒಬ್ಬ ಬಡವ ಅಥವಾ ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದ ವ್ಯಕ್ತಿ ಅಥವಾ ಸಮಾಜದ ಉಳಿದವರು ಪ್ರೀತಿಸುವ ವರ್ಗ ಅಥವಾ ಗುಂಪು ಎಲ್ಲಿದೆ? ಪರಿಶಿಷ್ಟ ಜಾತಿಯವರಿಗೆ ಇರುವಂತೆ ಬಹುತೇಕ ಹಿಂದುಳಿದ ವರ್ಗಗಳಿಗೆ ಕಳಂಕ ಅಂಟಿಕೊಂಡಿದ್ದು, ಪರಿಶಿಷ್ಟ ಪಂಗಡದವರ ಬಗ್ಗೆ ವಿಶೇಷ ರೀತಿಯ ಕಳಂಕವಿದೆ. ಅವರನ್ನು ಒಟ್ಟುಗೂಡಿಸಬೇಡಿ ಆದರೆ ಭಾರತೀಯ ಸಮಾಜಶಾಸ್ತ್ರದಲ್ಲಿ ಬಹಳ ಕೊರತೆಯಿದೆ ಎಂಬ ಅಂಶವನ್ನು ಮರೆಯಬಾರದು. ಭಾರತೀಯ ರಾಜಕೀಯ-ವಿಜ್ಞಾನವನ್ನು ನಿಯಂತ್ರಿಸುವವರ ಸಮಾಜಶಾಸ್ತ್ರವನ್ನು ನಾವುಮರೆತು ಬಿಡುತ್ತೇವೆ ಮತ್ತು ಈ ವರ್ಗವು ಹಾಗೆಯೇ ಉಳಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು  ಮಾರ್ಕ್ಸ್ “ಪರಿಸ್ಥಿತಿ ಬದಲಾಗಲಿದೆ” ಎಂದಿದ್ದರು. ಬದಲಾವಣೆ ಒಂದೇ ಜಗತ್ತಿನಲ್ಲಿ ಶಾಶ್ವತ ಎಂದು ಇಬ್ಬರೂ ಹೇಳಿದ್ದರು. ಆದ್ದರಿಂದ ನಮಗೆ ಒಂದು ರೀತಿಯ ಸಾಮಾನ್ಯ ಜ್ಞಾನವಾಗಿ ಮಾರ್ಪಟ್ಟಿರುವ ಈ ರಾಜಕೀಯ ವರ್ಗವು ಒಂದು ನಿರ್ದಿಷ್ಟ ರೀತಿಯ ಜನರನ್ನು (ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಗಳು) ಪ್ರತಿನಿಧಿಸುತ್ತದೆ. ಆದರೆ ನಾವು ಅವರನ್ನು ಜನರವರ್ಗ ಅಥವಾ ಕೆಲವು ಜಾತಿ/ಜನರವರ್ಗವಾಗಿ ನೋಡುವುದಿಲ್ಲ.   ಇದನ್ನು ಬದಲಾಯಿಸಬೇಕು, ಈ ರಾಜಕೀಯ ವರ್ಗವನ್ನು ಬದಲಾಯಿಸಬೇಕು.

ಭಾರತೀಯ ಸಂಸತ್ತಿನಲ್ಲಿ (ಲೋಕಸಭೆ) ಇವತ್ತಿನ ದಿನದಲ್ಲಿ, ಸುಮಾರು 230 ಸ್ಥಾನಗಳನ್ನುಎಸ್‌ಸಿ, ಎಸ್‌ಟಿ, ಒಬಿಸಿಗಳು ಪಡೆದಿದ್ದಾರೆ. 131 ಸ್ಥಾನಗಳನ್ನು SC/ST ಗಳಿಗೆ ಮೀಸಲಿಟ್ಟವಾದರೆ, OBCಗಳು ಕೆಲವು 99 ಸ್ಥಾನಗಳನ್ನುಪಡೆದಿದ್ದಾರೆ. ಈ OBC ಸ್ಥಾನಗಳು ಸುಮಾರು 20 ಜಾತಿಗಳನ್ನು ಪ್ರತಿನಿಧಿಸುತ್ತವೆ – ಒಟ್ಟು 2500 OBC ಜಾತಿಗಳಲ್ಲಿ. ಇದು ಹೆಚ್ಚೇನಲ್ಲ: 230, ಮತ್ತು ನಾವು (SC, ST, OBCs) ಹೊರಗಿನ ಬಹುಸಂಖ್ಯಾತರು! ಆದರೆ ಭಾರತೀಯ ಸಂಸತ್ತಿನಲ್ಲಿ ನಿಜವಾದ ಬಹುಮತವು ಸುಮಾರು 310-320 ಮೇಲ್ಜಾತಿ ಆಕ್ರಮಿತ ಸ್ಥಾನಗಳು, ಧರ್ಮಗಳಾದ್ಯಂತ ಸಂಪೂರ್ಣವಾಗಿ ಮೇಲ್ಜಾತಿಗಳು. ಆದರೆ ನ್ಯಾಯಾಂಗಕ್ಕಿಂತ ಹೆಚ್ಚು ಸಂವೇದನಾಶೀಲವಾಗಿ ವರ್ತಿಸಲು ನಾವು ಸಂಸತ್ತಿನ ಕಡೆಗೆ ನೋಡುತ್ತೇವೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಂಸತ್ತಿನ ಸಾಮಾಜಿಕ ಸೂಕ್ಷ್ಮತೆ: ಇವೆರಡೂ ದೊಡ್ಡ ಹಾಸ್ಯಗಳು, ಅವು ಅಸ್ತಿತ್ವದಲ್ಲಿಲ್ಲ. ನಾವು ಅದನ್ನು ನಂಬುತ್ತಲೇ ಇದ್ದೇವೆ, ಯುಗ ಯುಗಾಂತರಗಳಿಂದ. ಆದರೆ ಮಾನೆ ಸರ್ ಹೇಳುವಂತೆ    ಮೂಲಭೂತವಾಗಿ, ಕೆಲವು ಸಾಂಸ್ಕೃತಿಕ ಪದ್ಧತಿಗಳಲ್ಲಿ, ಸಂವಹನ ಶೈಲಿ ಮತ್ತು ಧಾಟಿಯಲ್ಲಿ, ರಾಜಕೀಯ ವರ್ಗ ಬದಲಾಗುವುದಿದೇ ಇಲ್ಲ. ಆದರೆ ಅದರ ಸುತ್ತಲಿನ ವಾತಾವರಣ ಬದಲಾಗುತ್ತಿರುತ್ತದೆ. ಸಂಸತ್ತಿನಲ್ಲಿ ಇಲ್ಲಿಯವರೆಗೆ ನಾವು SC/ST/OBCಗಳು 35% ಮಾತ್ರ ಪ್ರಾತಿನಿಧ್ಯ ಹೊಂದಿದ್ದೇವೆ (ಹಲವುಬಾರಿ ಅದಕ್ಕಿಂತ ಕಡಿಮೆ, ಮೊದಲ ಲೋಕಸಭೆ ಇಂದಲೂ) ಎಂದು ತೋರಿಸುವ ಸಂಪೂರ್ಣ ಡೇಟಾಪಟ್ಟಿ ನನ್ನಬಳಿ ಇದೆ.  ಇದು ನಮ್ಮ ಪ್ರಜಾಪ್ರಭುತ್ವದ ಮೊದಲ ಆಧಾರಸ್ತಂಭ. ಕಾರ್ಯಕಾರಿಣಿಯಲ್ಲಿ, ನಮ್ಮ ಪ್ರಾತಿನಿಧ್ಯ 35-40%, ಹಲವು ಬಾರಿ ಅದಕ್ಕಿಂತ ಬಹಳ ಕಡಿಮೆ. ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲ, ರಾಜ್ಯ ಸರ್ಕಾರಗಳಲ್ಲಿಯೂ ನಮ್ಮ ಪ್ರಾತಿನಿಧ್ಯ ಕಡಿಮೆ. 30 ರಲ್ಲಿ ಒಂಭತ್ತು ರಾಜ್ಯ ಸರ್ಕಾರಗಳು ಮಾತ್ರ ಒಬಿಸಿ ಮುಖ್ಯಮಂತ್ರಿಗಳಿಂದ ನಡೆಸಲ್ಪಡುತ್ತವೆ. ಎಸ್ಸಿ, ಎಸ್ಟಿ ಮುಖ್ಯಮಂತ್ರಿಗಳು ಎಲ್ಲೂ ಇಲ್ಲ. ಇಪ್ಪತ್ತು ರಾಜ್ಯಗಳು ಮೇಲ್ಜಾತಿಗಳಿಂದ ನಡೆಸಲ್ಪಡುತ್ತವೆ. ಕೇಂದ್ರದಲ್ಲಿ ಇತರ ಮೇಲ್ಜಾತಿಗಳೊಂದಿಗೆ ಹೆಚ್ಚಿನ ಮಂತ್ರಿಗಳು ಬ್ರಾಹ್ಮಣರು, ವಿಶೇಷವಾಗಿ ಪ್ರಮುಖ ಖಾತೆಗಳಲ್ಲಿ. ಇದು ಸಂಸತ್ತು, ಇದು ಕಾರ್ಯಾಂಗ.

ನ್ಯಾಯಾಂಗದ ವಿಷಯಕ್ಕೆ ಬಂದರೆ, ಅದು ದೇವರ ಸ್ವಂತ ದೈವಿಕ ರಹಸ್ಯ: ಅದರ ಸಂಯೋಜನೆ ಏನು? ಕೆಳಮಟ್ಟದ ನ್ಯಾಯಾಂಗವು ಸುಮಾರು 30% ಅಥವಾ SC/ST/OBCಗಳ ಪ್ರಾತಿನಿಧ್ಯವನ್ನು ಹೊಂದಿದೆ. ಸುಪ್ರೀಂಕೋರ್ಟ್ ಮತ್ತು    ಹೈಕೋರ್ಟ್‌ಗಳ ಬಗ್ಗೆ ನಮಗೆ ತಿಳಿದಿಲ್ಲ, ಅವರು ನಿಮ್ಮ ಆರ್ ಟಿ ಐ     ಅಥವಾ ಇತರ ಯಾವುದೇ ಮೇಲ್ಮನವಿಗಳನ್ನು ಮನ್ನಿಸಬೇಕಾಗಿಲ್ಲ. ಅವರು ಯಾರಿಗೂ, ಯಾವುದೇ ನಾಗರಿಕರಿಗೂ ಉತ್ತರಿಸಬೇಕಾಗಿಲ್ಲ. ಅವರು ಹೊಣೆಗಾರಿಕೆಯ ವ್ಯಾಪ್ತಿಯಿಂದ ಆಚಿನವರು. ಇದು ಮೂರನೇ ಸ್ತಂಭ,  ನ್ಯಾಯಾಂಗ!

ಇನ್ನು ನಾಲ್ಕನೇ ಸ್ತಂಭ. ಎರಡು ಸಮೀಕ್ಷೆಗಳು ನಡೆದಿವೆ – 90ರ ದಶಕದಲ್ಲಿ ಬಿ.ಎನ್. ಉನಿಯಾಲ್ಮತ್ತು ನಂತರ 2000 ದ ಇಸವಿಯಲ್ಲಿ     ಯೋಗೇಂದ್ರ ಯಾದವ್ ಮತ್ತು ಇತರರು, ಹಿಂದಿ ಮತ್ತು ಇಂಗ್ಲಿಷ್‌ನ ರಾಷ್ಟ್ರೀಯ ಮಾಧ್ಯಮದಲ್ಲಿ – ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ ಸೊನ್ನೆಯ ಆಸುಪಾಸಿನಲ್ಲಿದೆ ಎಂದು ಇಬ್ಬರೂ ಸಾಬೀತುಪಡಿಸಿದ್ದಾರೆ. OBC ಪ್ರಾತಿನಿಧ್ಯ ಸುಮಾರು 3-4%. ಇದು ಹೆಚ್ಚು ಬದಲಾಗದ ಸತ್ಯ. ವಾಸ್ತವವಾಗಿ, ಮಂಡಲ್ ಆಯೋಗವನ್ನು ಘೋಷಿಸುವ ಮೊದಲು ಕೇಂದ್ರ ಸರ್ಕಾರದಲ್ಲಿ ಒಬಿಸಿ ಪ್ರಾತಿನಿಧ್ಯದ ಸ್ಥಾನ ಏನು ಎಂಬುದರ ಕುರಿತು ವಸ್ತುನಿಷ್ಠ ಸಂಶೋಧನೆ ನಡೆದಿದ್ದರೆ, ಅವರ ಪ್ರಾತಿನಿಧ್ಯ ಈಗ ಕಡಿಮೆಯಾಗಿದೆ ಎಂದು ತಿಳಿಯುತ್ತದೆ. ವಾಸ್ತವವಾಗಿ ಕಡಿಮೆಯಾಗಿದೆ ಮತ್ತು ಅವರ ಸ್ಥಾನ ಇನ್ನೂ ಹೆಚ್ಚು ಹಿಂದುಳಿದಿದೆ.  ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಮತ್ತು ಬ್ಯಾಂಕ್‌ಗಳಲ್ಲಿ, ಅವರ ಸ್ಥಾನ ವಾಸ್ತವದಲ್ಲಿ ತಮಾಷೆಯ ವಿಚಾರ. ಎಸ್‌ಸಿ/ಎಸ್‌ಟಿ ಹುದ್ದೆಗಳು ಹೆಚ್ಚಾಗಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ   ಪೋಸ್ಟ್‌ಗಳಲ್ಲಿವೆ.

ಹೀಗಿರುವಾಗ ರಾಜಕೀಯವು ಸ್ಥಿರವಾಗಿರಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ಕಳೆದ 30-40 ವರ್ಷಗಳಿಂದ ಅದು ಬದಲಾವಣೆ ಕಾಣದೆ ನಿಂತುಹೋಗಿದ್ದರೂ ಸಹ, ನಾವು ಅದನ್ನು ಹಾಗೆಯೇ ಉಳಿಯಲು ಬಿಡಗೊಡಲಾಗದು. ನಾವು(SC/ST/OBCs) ನಿಂತ ನೆಲಕ್ಕೇ ಏಟುಬಿದ್ದ ಸಂದರ್ಭದಲ್ಲಿ, ಹಾಗೆ ಮಾಡುವಷ್ಟು ಸಿನಿಕತನ ನಾವು ತೋರಿಸಲಾರೆವು. ಇದು ಅಳಿವು-ಉಳಿವಿನ ಪ್ರಶ್ನೆ. ಇದು ಧೋಬ್ಲೆ ಸರ್ ಹೇಳಿದಂತೆ, ಬಡ ಬ್ರಾಹ್ಮಣರಿದ್ದಾರೆ ಎಂದು ನಾವು ಪ್ರಶ್ನಿಸದೆ ನಂಬಿದ್ದೇವೆ. ಬಹುಜನರು ಎಷ್ಟು ಉದಾರರು ಎಂದರೆ ಅವರು ಬಡ ಬ್ರಾಹ್ಮಣರಿಗಾಗಿ ಏನನ್ನೂ ಕೊಡುತ್ತಾರೆ ಮತ್ತು ಅವರ ತಾಯಿ, ಪೋಷಕರು ಮತ್ತು ಮಕ್ಕಳಿಗಾಗಿ ಹೆಚ್ಚಿನದನ್ನು ಮಾಡುವುದಿಲ್ಲ. ಆದ್ದರಿಂದ ಈ ಬ್ರಾಹ್ಮಣ ಕುರುಡುತನ ಮತ್ತು ಈ ಔದಾರ್ಯವು ಎಷ್ಟು ಆಂತರಿಕವಾಗಿದೆಯೆಂದರೆ, ಯಾವಾಗಲೂ ನಾವು ಮೇಲ್ಜಾತಿಗಳ ಕುರಿತು ಸ್ವಾಭಾವಿಕವಾಗಿ ಉದಾರಿಗಳಾಗಿರುತ್ತೇವೆ, ಬಹಳ ಪರಿಗಣನೆಯಿಂದ ಇರುತ್ತೇವೆ. ನಮ್ಮ ಕಡೆ (ತೆಲಂಗಾಣ), ನಾವು ಇವನ್ನೆಲ್ಲ ತುಂಬಾ ಲೆಕ್ಕಿಸಿರಲಿಲ್ಲ, ನಾವು ಬೇರೆಯದೇ ದಾರಿ ಹಿಡಿದಿದ್ದೆವು (ತೆಲಂಗಾಣ ಸಶಸ್ತ್ರ ಹೋರಾಟದ ಸಮಯದಲ್ಲಿ). ಬಾಬಾಸಾಹೇಬರು ಸಂವಿಧಾನ ಬರೆಯುವ ಸಮಯದಲ್ಲೇ ಇದನ್ನು ಸ್ಪಷ್ಟವಾಗಿ ಹೇಳಿದ್ದರು, ಇದು ಬಹಳ ಕ್ರಾಂತಿಕಾರಿ ಆಲೋಚನೆ, ಸಂವಿಧಾನವನ್ನು ಸಂಸತ್ತಿನ ಮುಂದೆ ಮಂಡಿಸುತ್ತಾ ಹೇಳಿದರು – “ಅಂತಹ ಸಂವಿಧಾನದ ಮುಖ್ಯ ಗುರಿಯು ಆಡಳಿತ ವರ್ಗವನ್ನು ಅದರ ಸ್ಥಾನದಿಂದ ಕೆಳಗಿಳಿಸುವುದು ಮತ್ತು ಆಡಳಿತವರ್ಗವಾಗಿ ಉಳಿಯುವುದನ್ನು ತಡೆಯುವುದು. ” ಇದು ನನಗೆ ತುಂಬಾ ಸ್ಪಷ್ಟವಾಗಿದೆ. ಮತ್ತು ಅವರು ಬ್ರಾಹ್ಮಣರನ್ನು ಆಡಳಿತವರ್ಗ ಎಂದು ಹಲವಾರು ಬಾರಿ ಉಲ್ಲೇಖಿಸಿದ್ದಾರೆ. ನಾವು ಸಂಸತ್ತಿನ 60-70%, ಮತ್ತು ಕೇಂದ್ರ ಸರ್ಕಾರದ ಸೇವೆಗಳನ್ನು ಮೇಲ್ಜಾತಿಗಳು ಆಕ್ರಮಿಸಿಕೊಂಡಿರುವ ಬಗ್ಗೆ ಮಾತನಾಡುತ್ತೇವೆ, ಆದರೆ ಇದು ಭಾಗಶಃ ಸರಿ, ನಿಜದಲ್ಲಿ ಆಕ್ರಮಿಸಿಕೊಂಡಿರುವವರು ಬ್ರಾಹ್ಮರು. ಒಬ್ಬ ಸ್ನೇಹಿತ, ಅವನ ಮರಾಠ ಪರಿಚಿತರು ಹೇಳಿದ್ದನು ಹೇಳಿದ – ಇದು ಬ್ರಾಹ್ಮಣ ಕೋಟಾ ಎಂದು. ಅವರು ಅದನ್ನು ಮೇಲ್ಜಾತಿ ಕೋಟಾ ಎಂದು ಹೇಳಿರಲಿಲ್ಲ. ನೀವು ನೋಡಿ, ಅವರು ಅದನ್ನು ಸರಳವಾಗಿ ಅರ್ಥಮಾಡಿಕೊಳ್ಳುತ್ತಾರೆ, ಪಟೇಲರು, ಮರಾಠರು ಮತ್ತು ಕಾಪುಗಳು ಸಹ ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಬ್ರಾಹ್ಮಣ ಕೋಟಾ ಎಂದು. ಜಾಟ್‌ಗಳು ಸಹ ಅರ್ಥಮಾಡಿಕೊಳ್ಳುತ್ತಾರೆ. ಮಾನೆ ಸರ್ ಮತ್ತು   ಧೋಬ್ಲೆ ಸರ್ ತೋರಿಸಿಕೊಟ್ಟಂತೆ  ಸಂಘಟಿತ ವಲಯದಲ್ಲಿನ ಉದ್ಯೋಗಗಳು, ಬೆಲೆ ಬಾಳುವ ಉದ್ಯೋಗಗಳು, ಮೊದಲು ನಿರ್ದಿಷ್ಟ ರೀತಿಯ ಭದ್ರತೆಯನ್ನು ಕೊಡುತ್ತಿದ್ದವು ಅದೆಲ್ಲವೂ ಈಗ ಹೋಗಿದೆ. ಆದರೆ ಅದರ ಹೊರತಾಗಿಯೂ, ನೀವು ಪ್ರತಿತಿಂಗಳು ನಿಯಮಿತ ವೇತನವನ್ನು ಪಡೆಯುತ್ತೀರಿ ಮತ್ತು ನೀವು ಸರ್ಕಾರಿ ಸೇವೆಯಲ್ಲಿದ್ದರೆ ಅದು 30-40 ವರ್ಷಗಳ ಜೀವನೋಪಾಯವನ್ನು ಖಚಿತಪಡಿಸುತ್ತದೆ. PSU ಗಳಲ್ಲಿ, ನಿಮಗೆ ಗೊತ್ತಿಲ್ಲ, ನಿಮ್ಮನ್ನು ಇದ್ದಕ್ಕಿದ್ದ ಹಾಗೆ ತೆಗೆದುಹಾಕಬಹುದು. ಅಲ್ಯಾವಭದ್ರತೆಯೂ ಇಲ್ಲ. ಇದನ್ನು ಇನ್ನು ಸಂಘಟಿತ ವಲಯ ಎಂದು ಕರೆಯಲೇಬಾರದು. ಖಾಸಗಿ ವಲಯವು ಮತ್ತೊಂದು ಕಥೆ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೆಲಸದಿಂದ  ತೆಗೆಯಬಹುದು. ಹಾಗಿದ್ದರೂ ಮೇಲ್ಜಾತಿಗಳಿಗೆ ಮುಖ್ಯ ಪ್ರಶ್ನೆ ಉದ್ಯೋಗವೇನೇ ಅಲ್ಲ,  ಅವರಿಗೆ ಉದ್ಯೋಗ ಬೇಡ.  ಹಾಗಾದರೆ ಅವರಿಗೆ ಏನುಬೇಕು?

ನಾನು ಹೇಳುತ್ತಲೇ ಇರುವಂತೆ ಮಹಾರಾಷ್ಟ್ರದ ಕೃಷಿ ಭೂಮಿಯಲ್ಲಿ ಶೇ.80ರಷ್ಟು ಕೃಷಿ ಭೂಮಿಯನ್ನು ಮರಾಠರು ಹೊಂದಿದ್ದಾರೆ. ಗುಜರಾತ್‌ನಲ್ಲಿ ಪಟೇಲರು 60-70% ಹೊಂದಿದ್ದಾರೆ,  ಜಾಟ್‌ಗಳು 70%  ಪಂಜಾಬ್,  ಹರಿಯಾಣದಲ್ಲಿ ಹೊಂದಿದ್ದಾರೆ. ಟಿಎನ್‌ನಲ್ಲಿ 69% ಮೀಸಲಾತಿಗೆ ಕಾರಣರಾದ ಗೌಂಡರ್‌ಗಳು (ಮತ್ತು ಇತರ ಪ್ರಬಲ ಜಾತಿಗಳು) ಅಲ್ಲಿ ಗಣನೀಯ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಹಿಂದೆ ಹಿಂದುಳಿದ ವರ್ಗಗಳ ಆಯೋಗಗಳು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿದ್ದವು. ಮರಾಠರ ಮನವಿಯನ್ನು ಹಿಂದುಳಿದ ವರ್ಗಗಳ ಆಯೋಗಗಳು ತಿರಸ್ಕರಿಸಿದವು. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದಲ್ಲೂ ಇದೇ ಪರಿಸ್ಥಿತಿ. ಹಿಂದುಳಿದ ವರ್ಗಗಳ ಆಯೋಗಗಳ ಮಾತು ಕೇಳುವವರೇ ಇಲ್ಲ. ತೆಲಂಗಾಣದಲ್ಲಿ ರೆಡ್ಡಿಗಳು ಮತ್ತು ವೆಲಮರು ಶೇ.70ರಷ್ಟು ಭೂಮಿ ಹೊಂದಿದ್ದಾರೆ. ಕಾಪುಗಳು, ಕಮ್ಮಗಳು, ರೆಡ್ಡಿಗಳು ಮತ್ತು ರಾಜುಗಳು ಆಂಧ್ರಪ್ರದೇಶದಲ್ಲಿ 70-80% ಭೂಮಿಯನ್ನು ಹೊಂದಿದ್ದಾರೆ. ಪ್ರತಿ ರಾಜ್ಯದಲ್ಲಿಯೂ 2-3 ಜಾತಿಗಳು ಅತಿಹೆಚ್ಚು ಭೂಮಿಯನ್ನು ಹೊಂದಿವೆ. ಮತ್ತು ಅವರು ಆ ಭೂಮಿಯಲ್ಲಿ ಹೆಚ್ಛೇನೂ ಮಾಡುತ್ತಿಲ್ಲ. ಇದು ಭಾರತೀಯ ಸಮಾಜದ ಮೇಲಿನ ಮೇಲ್ಜಾತಿಗಳ ಭೌತಿಕ ಹಿಡಿತದ ಮೂಲ.

ನಾನು ಆಂಧ್ರದಲ್ಲಿ ಒಂದು ಸುದ್ದಿ ಕಾರ್ಯಕ್ರಮ ಕೇಳುತ್ತಿದ್ದೆ,  ಒಂದು ಹಳ್ಳಿಯಲ್ಲಿ 2500 ಎಕರೆ ಇದ್ದರೆ, 700 ಎಕರೆ ಮಾತ್ರ ನಿಜವಾದ ಉಳುಮೆದಾರರಿಗೆ ಸೇರಿದೆ. ಉಳಿದ 1800 ಎಕರೆಯಲ್ಲಿ ಗೇಣಿದಾರರು ಉಳುಮೆ ಮಾಡುತ್ತಿದ್ದಾರೆ. ಅವರು ಈಗ ಹೆಚ್ಚಾಗಿ ಒಬಿಸಿಗಳು ಮತ್ತು ದಲಿತರು. ಇದು ಭಾರತದ ಕೃಷಿಯ ಚಿತ್ರ. 90% ಜನರು ಹಿಡುವಳಿದಾರರು,  ಅವರ ಬಳಿ ಒಂದು ಎಕರೆ ಇರುತ್ತದೆ, ಅವರುಇನ್ನೊಂದು 5 ಎಕರೆ ಗುತ್ತಿಗೆಗೆ ತೆಗೆದುಕೊಂಡಿರುತ್ತಾರೆ, ಅವರು ನಷ್ಟ ಅನುಭವಿಸುತ್ತಾರೆ ಮತ್ತು ಅವರು ಸಾಯುತ್ತಾರೆ. ಅವರ ಸಾವು ಮತ್ತು ಅವರ ಸಂಕಟ ಕಟ್ಟಿಟ್ಟ ಬುತ್ತಿ. ಅದೊಂದೇ ಶಾಶ್ವತ.

ಮೇಲ್ಜಾತಿಗಳು ಈಗಲೂ ಹಳ್ಳಿಗಳಲ್ಲಿ ಆಭೂಮಿಯನ್ನು ಉಳಿಸಿಕೊಂಡಿವೆ, ವಿಶೇಷವಾಗಿ ಉನ್ನತ ಶಿಕ್ಷಣ ಹೊಂದಿರುವ ದಕ್ಷಿಣದ ರಾಜ್ಯಗಳಲ್ಲಿ, ಸಾಕ್ಷರತೆಯ ಮಟ್ಟ ತುಂಬಾ ಹೆಚ್ಚಿರುವ (ಅದರಲ್ಲೂಆಂಧ್ರದಲ್ಲಿ), ಮತ್ತು ಕೇರಳ, ತಮಿಳುನಾಡು, ಕರ್ನಾಟಕವನ್ನು ಸೂಕ್ಷ್ಮವಾಗಿ ಗಮನಿಸಬೇಕು: ಏಕೆ ಈ ಮೇಲ್ಜಾತಿಯವರು ಭೂಮಿಯನ್ನು ಉಳಿಸಿಕೊಂಡಿದ್ದಾರೆ? ನಾಯರ್ ಗಳು ಕೇರಳದಲ್ಲಿ ಭೂಮಿಯನ್ನು ಏಕೆ ಉಳಿಸಿಕೊಂಡಿದ್ದಾರೆ?  ತೆಲಂಗಾಣದಲ್ಲಿ ರೆಡ್ಡಿಗಳು, ವೆಲಮರು ಇನ್ನೂ ಏಕೆ ಭೂಮಿ ಉಳಿಸಿಕೊಂಡಿದ್ದಾರೆ? ಏಕೆಂದರೆ ಜಾತಿಯ ಸಾರವೇ ಅದು, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಾನಮಾನವು,  ಅದು 20 ಎಕರೆ ಭೂಮಿ ಪಾಳು ಬಿದ್ದಿ ನೆಲವಾದರೂ ಸರಿ, ಅದು ಅವನಿಗೆ ಇದೆ ನಿಮಗೆ ಇಲ್ಲ.  ಅದೇ ಅವನ ಹೆಮ್ಮೆ. ಅದು ಅವನ ಸ್ಥಾನಮಾನವನ್ನು ಖಚಿತಪಡಿಸುತ್ತದೆ. ಆದ್ದರಿಂದಲೇ ಅವರು ನಮ್ಮನ್ನು ಈ ರೀತಿಯ ಶಾಶ್ವತ, ಸುರಕ್ಷಿತ ಉದ್ಯೋಗಗಳಲ್ಲಿರುವುದನ್ನು ಸಹಿಸುವುದಿಲ್ಲ. ಆ ಕೆಲಸಗಳಲ್ಲಿದ್ದರೆ, ಅವರಿಗೆ ನಾವು ಹಠಾತ್ತನೆ ಆಧುನಿಕರಾಗಿದ್ದೀವೇನೋ ಎಂದೆನಿಸುತ್ತದೆ, ಗದ್ದೆಯಲ್ಲಿ ಉಳುಮೆ ಮಾಡುವುದನ್ನು ಬಿಟ್ಟು, ಕೈ ಕೆಲಸ ಮಾಡುವುದನ್ನು ಬಿಟ್ಟು, ಎಲ್ಲಾ ರೀತಿಯ ಅಶುದ್ಧ ಕೆಲಸಗಳನ್ನು ಮಾಡುವುದನ್ನು ಬಿಟ್ಟು. ನಾವು ಒಳ್ಳೆಯ ಕುಶಲಕರ್ಮಿಗಳಾಗಿದ್ದರೂ, ನಾವು ವಿಜ್ಞಾನಿಗಳೇ ಆಗಿದ್ದರೂ (ಕಾಂಚ ಇಳಯ್ಯ ಹೇಳುವಂತೆ) ಅದು ಪ್ರಯೋಜನಕ್ಕಿಲ್ಲ (ನಮ್ಮ ಸ್ಥಾನ ಹೆಚ್ಚಿಸುವಲ್ಲಿ). ಸೂಟು, ಟೈ ಹಾಕಿಕೊಂಡು ಫ್ಯಾಕ್ಟರಿಗೆ ಹೋದರೆ, (ಭಾರತದ ಮೊದಲ ಗಣಿತ ತಜ್ಞೆ ಬಹುಜನ ಮಹಿಳೆ ಎಂದು ನಾನು ಹೇಳುತ್ತಲೇ ಇದ್ದೇನೆ. ಸಾಲಾಗಿ ಭತ್ತದ ಸಸಿಗಳನ್ನು ನೆಡುತ್ತಿದ್ದಾಗ ಸೊನ್ನೆಯನ್ನು ಕಂಡುಹಿಡಿದಳು.) ಈ ಶ್ರೇಣೀಕರಣವನ್ನು ನಾವು ನಮ್ಮ ಮನಸ್ಸಿನಲ್ಲಿ ಅಂತರ್ಗತ ಮಾಡಿಕೊಂಡಿದ್ದೇವೆ. ಆದರೆ ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಗಳು ಈ 10% ಕೋಟಾದ ಮೂಲಕ ಯಾವುದೇ ಹೊಸ ಉದ್ಯೋಗಗಳನ್ನು ಪಡೆದರೂ ಪರವಾಗಿಲ್ಲ ಎಂಬುದು ಅವರಿಗೆ ತಿಳಿದಿದೆ. ಅವರಿಗೆ ಬೇಕಾದದ್ದು ನೀವು ಈ  ‘ಆಧುನಿಕ‘  ಜಾಗಗಳಿಗೆ ಪ್ರವೇಶಿಸದಂತೆ ತಡೆಯುವುದು!

ವಿಶ್ವವಿದ್ಯಾನಿಲಯಗಳಲ್ಲಿ, ವಿಶೇಷವಾಗಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ–ಇದು 2 ವರ್ಷಗಳ ಹಿಂದಿನ ಅಖಿಲ ಭಾರತ ಸಮೀಕ್ಷೆಯ ಉನ್ನತ ಶಿಕ್ಷಣ ವರದಿಯಿಂದ (AISHE) ಬಂದಿದೆ–ಕೇವಲ 23% ವಿದ್ಯಾರ್ಥಿಗಳು SC/ST/OBC ಪಂಗಡದವರು. ಮತ್ತೆ ಈ ಅಂಕಿ ಅಂಶಗಳು ಮತ್ತು ಭಾರತ ಸರ್ಕಾರದ ಎಲ್ಲಾ ಅಂಕಿ ಅಂಶಗಳು ಬಹಳಷ್ಟು ವಿಷಯಗಳನ್ನು ಮರೆ ಮಾಚುತ್ತವೆ. ಬೆನಿಫಿಟ್ ಆಫ್ಡೌಟ್ನೀಡುತ್ತಾ, ನಾವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸುಮಾರು 20 ಪರ್ಸೆಂಟ್ ಎಂದು ಹೇಳೋಣ. ಇದು ನಮ್ಮ ವಿದ್ಯಾರ್ಥಿಗಳು, ಅಧ್ಯಾಪಕರಲ್ಲ. ಅಧ್ಯಾಪಕರು 95% ಬ್ರಾಹ್ಮಣ-ಸವರ್ಣ. ಒಟ್ಟಿನಲ್ಲಿ SC/ST/OBCಯ 20% ವಿದ್ಯಾರ್ಥಿಗಳು ಈ IITಗಳು, IIM ಗಳು, ಇತ್ಯಾದಿಗಳನ್ನು ಪ್ರವೇಶಿಸುತ್ತಾರೆ. ಈ ಮೇಲ್ಜಾತಿಗಳು ತಮ್ಮ ಸ್ವಂತ ಕೋಟಾ ‘ಸಾಮಾನ್ಯವರ್ಗ’ಕ್ಕೆ ಮತ್ತೊಂದು 10% ಸೇರಿಸಲು ಹವಣಿಸುತ್ತಾರೆ. ಜೇಮ್ಸ್ಮೈ ಕೆಲ್ಹೇಳಿದಂತೆ, ಇದು ಸವರ್ಣಿಯ ಕೋಟಾ, ಅದನ್ನು ವಿತರಿಸಲಾಗುವುದಿಲ್ಲ. ಇದು ಅಲಿಖಿತ ಕಾನೂನು, ಆದರೆ ಕಲ್ಲಿನ ಮೇಲೆ ಬರೆದಂತೆ ಭದ್ರವಾಗಿದೆ, 50% ಸಾಮಾನ್ಯ ವರ್ಗವು ಮೇಲ್ಜಾತಿಗಳಿಗೆ ಸೇರಿದೆ. ದಕ್ಷಿಣ ಭಾರತದಾದ್ಯಂತ ಮತ್ತು ಇತರ ಸ್ಥಳಗಳಲ್ಲಿ, ಈಗ SC ಗಳು ಮತ್ತು OBC ಗಳ ಕಟ್ ಆಫ್ಮಾನ ದಂಡಗಳು ಸಾಮಾನ್ಯವಾಗಿ ಸಾಮಾನ್ಯ ವರ್ಗಕ್ಕಿಂತ ಹೆಚ್ಚಾಗಿರುತ್ತದೆ. ಹಾಗಾಗಿ ಈ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ನಾವು ಹೋಗುವುದನ್ನು ಇಷ್ಟಪಡುವುದಿಲ್ಲ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ 20% SC/ST/OBC ಒಳ ಹರಿವನ್ನು ನಿಲ್ಲಿಸಲು, ಅವರು ಈ 10% EWS ಅನ್ನು ತರಬೇಕು. ಮತ್ತು ನಮ್ಮ ವಿದ್ಯಾರ್ಥಿಗಳು–ನಾವೆಲ್ಲರೂ ಬಡವರೇ, ನಾವು ಯಾವುದೇ ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಮೇಲ್ಜಾತಿಯ ವಿದ್ವಾಂಸರಿಗೆ ಉದ್ಯೋಗ ನೀಡಲು ಖಾಸಗಿ ವಿಶ್ವವಿದ್ಯಾಲಯಗಳನ್ನು ತಯಾರಿಸಲಾಗುತ್ತಿದೆ. ಮತ್ತು ದೇಶದ ಹೊರಗೆ ಪಿಎಚ್, ಡಿ ಗಳಿಸಿದ ಮೇಲ್ಜಾತಿ ವಿದ್ವಾಂಸರಿಗೆ ನೇರ ಉದ್ಯೋಗ ನೀಡಲಾಗುತ್ತಿದೆ. ಇದು ಒಂದು ರೀತಿಯ ಪ್ರಾಚೀನ ದ್ವೇಷ. ಇದು ಸಾಮಾಜಿಕ ಸ್ಥಾನಮಾನದ ಬಗ್ಗೆಯೇ ಹೊರತು ನವ-ಉದಾರವಾದ ಅಥವಾ ಇನ್ಯಾವುದರ ಬಗ್ಗೆಯೋ ಅಲ್ಲ. ಭಾರತವು ಈ ಜಾತಿ ಆಧಾರಿತ ಉತ್ಪಾದನಾ ವಿಧಾನವನ್ನು ಅನುಸರಿಸುತ್ತದೆ, ಇದರಲ್ಲಿ ಮೇಲ್ಜಾತಿಗಳು ಎಲ್ಲಾ ರೀತಿಯ ಉತ್ಪಾದನಾ ಸಾಧನಗಳನ್ನು ನಿಯಂತ್ರಿಸಬೇಕು, ಅದು ಎತ್ತಿನ-ಗಾಡಿಯೇ ಆಗಿರಲಿ ಅಥವಾ ಪರಮಾಣು ರಿಯಾಕ್ಟ್ ಆಗಿರಲಿ ಮತ್ತು ಅವರು ಎಲ್ಲಾ ರೀತಿಯ ಉಪಭೋಗವನ್ನೂ ನಿಯಂತ್ರಿಸಬೇಕು. ನಾವು ಪ್ರಪಂಚದಲ್ಲಿ ಅತ್ಯುತ್ತಮವಾದ ಬಾಸ್ಮತಿ ಅಕ್ಕಿಯನ್ನು ಉತ್ಪಾದಿಸಬಹುದು ಆದರೆ ಅದರಲ್ಲಿ 99%ಅನ್ನು ಮೇಲ್ಜಾತಿಯವರು ತಿನ್ನುತ್ತಾರೆ. ನಾವು ಜಗತ್ತಿನಲ್ಲಿ ಅತ್ಯುತ್ತಮವಾದ ಮಸಾಲೆಗಳನ್ನು ಉತ್ಪಾದಿಸಬಹುದು, ಆದರೆ ಅದನ್ನು ಉಪಯೋಗಿಸುವುದು ಮೇಲ್ಜಾತಿಗಳು.

ಇದು (10% EWS) ಒಂದು ರೀತಿಯ ಕಾವಲು ದಾರಿ ಆಯ್ದುಕೊಳ್ಳುವ ಸಂದರ್ಭ, ಮಂಡಲ್ ಅನ್ನೂ ಮೀರಿಸಿದ್ದು. ಈಗ ಇಡೀ ಭಾರತೀಯ ಸಂವಿಧಾನವನ್ನೇ ಒಂದು ರೀತಿಯ ದುಡ್ಡಿನವಾದವನ್ನಾಗಿ ಮಾಡಿದ್ದಾರೆ. ನಿಮ್ಮ ರಾಜಕೀಯವನ್ನು ಕೇವಲ ಕಾನೂನು ಮತ್ತು ತಾಂತ್ರಿಕತೆಯ ಮೇಲೆ ಆಧರಿಸಲು ಸಾಧ್ಯವಿಲ್ಲ. ಬಾಬಾಸಾಹೇಬರು ಭಾರತೀಯ ಸಂವಿಧಾನದಲ್ಲಿ ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ’ ಎಂಬ ಈ ಪದಗಳನ್ನು ಸೇರಿಸಿದಾಗ ಉಲ್ಲೇಖಿಸಿದ ಮೂಲಭೂತ ವಿಚಾರಕ್ಕೆ ಹಿಂತಿರುಗಿ ನೋಡೋಣ. ಭಾರತೀಯ ಸಂವಿಧಾನದ ಮುನ್ನುಡಿಯು ಹೇಳುತ್ತದೆಭಾರತದ ಜನರು, ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪಿಸಲು ಮತ್ತು ಅದರ ಎಲ್ಲಾ ನಾಗರಿಕರರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಲು ನಿಶ್ಚಯಿಸಿದ್ದೇವೆ. ಈಗ ಇದು ಅಸಾಧ್ಯ.

ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ: ನ್ಯಾಯಾಂಗದ 90% ಮೇಲ್ಜಾತಿಯಾಗಿರುವಾಗ, ಇದು ಹೇಗೆ ಸಾಧ್ಯ? ಇದು ಮಾತ್ರ ಅಲ್ಲ. ಸಂಸತ್ತು, ಕಾರ್ಯಾಂಗ ಮತ್ತು ಮಾಧ್ಯಮಗಳು ಇರುವ ರೀತಿ ಹೇಗಿದೆ ಎಂದರೆ, ನ್ಯಾಯಾಂಗವು ಮೇಲ್ಜಾತಿಯಾಗಿಯೇ ಉಳಿಯುವಂತೆ ಅವು ನೋಡಿಕೊಳ್ಳುತ್ತವೆ.

ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಆರಾಧನೆಯ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶದ ಸಮಾನತೆ; ಮತ್ತು ಅವರೆಲ್ಲರಲ್ಲಿ ಭ್ರಾತೃತ್ವವನ್ನು ಉತ್ತೇಜಿಸಲು…’ ನನ್ನ ಬ್ರಾಹ್ಮಣ ಸ್ನೇಹಿತನತಂದೆ ಹೈಕೋರ್ಟ್ ನ್ಯಾಯಾಧೀಶರು ಮತ್ತು ತಾಯಿ ಅತ್ಯುತ್ತಮ ಸರ್ಕಾರಿ ವೈದ್ಯಕೀಯ ಶಾಲೆಯಲ್ಲಿ ಮುಖ್ಯವೈದ್ಯರಾಗಿದ್ದಾಗ ಮತ್ತು ಅವರ ಸಹೋದರ ಕ್ಯಾಲಿಫೋರ್ನಿಯಾದ ಸಿಲಿಕಾನ್ವ್ಯಾಲಿಯಲ್ಲಿರುವಾಗ ನನ್ನ ಅವನ ಮಧ್ಯೆ ಯಾವ ರೀತಿಯ ಭ್ರಾತೃತ್ವ ಇರುತ್ತದೆ, ನನ್ನ ತಂದೆ ಮತ್ತು ತಾಯಿ ಎರಡನೇ ತರಗತಿಯನ್ನೂ ಓದದವರಾದಾಗ? ಈ ರೀತಿಯ ವಿಷಯಗಳನ್ನು ನೀವು ಶ್ರೇಷ್ಠತೆಯ ಗುರುತುಗಳಾಗಿ ಪರಿಗಣಿಸಬಹುದಾದರೆ, ನಿಮಗಿಂತ ತುಂಬಾ ಉನ್ನತವಾಗಿರುವ ಜನರಿಂದ ಭ್ರಾತೃತ್ವವನ್ನು ನಿರೀಕ್ಷಿಸುವುದು ಸಹಜವೇ? ಅವರ ಬಳಿ ಕೋಟಿಗಟ್ಟಲೆ ಇದ್ದು, ನಿಮ್ಮ ಬಳಿ ಕೇವಲ ಸಾವಿರಗಳಿದ್ದರೆ, ದಿನವೂ ನಿಮ್ಮ ಕೂಲಿಗಾಗಿ ನೀವು ಕಾಯುತ್ತಿರಬೇಕಾದರೆ, ಇಂಥವರ ನಡುವೆ ಎಂತಹ ಸಾಮ್ಯತೆ, ಭ್ರಾತೃತ್ವ ಇರಲುಸಾಧ್ಯ?  ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ?

ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಅರ್ಥವೇನು ಎಂದು ಮತ್ತೆ ಬಾಬಾಸಾಹೇಬ್‌ರ ನಿಟ್ಟಿನಲ್ಲಿ ಮರುಚಿಂತನೆ ಮಾಡಬೇಕಾಗಿದೆ. ಅವು ನಮಗೆಬೇಕಾಗಿದೆ. ಹಾಗಾಗಿ ಎಸ್‌ಸಿ/ಎಸ್‌ಟಿ/ ಒಬಿಸಿಗಳು ಒಗ್ಗೂಡಿ ಹೋರಾಡುವ ಅಗತ್ಯವಿದೆ. ಸಾಮಾನ್ಯ ಶತ್ರು ಇದ್ದಾನೆ. ಅವರು ದೇಶದ 70-80% ಅತ್ಯುತ್ತಮ ಸ್ಥಾನಗಳು, ಅವಕಾಶಗಳು ಮತ್ತು ವಸ್ತು ಸಂಪನ್ಮೂಲಗಳನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಹೆಚ್ಚು ಸಂಪತ್ತನ್ನು ಉತ್ಪಾದಿಸುವ ಆಧುನಿಕ ಸಂಸ್ಥೆಗಳಲ್ಲಿ ಅತ್ಯುತ್ತಮವಾದದನ್ನು ನಿಯಂತ್ರಿಸುತ್ತಾರೆ. ಮತ್ತು ಹೆಚ್ಚಿನ ಸಂಪತ್ತನ್ನು ಸಹ ಸೇವಿಸುತ್ತಾರೆ. ಸ್ಪಷ್ಟ ಶತ್ರುವಿದೆ, ಅದು ಬ್ರಾಹ್ಮಣ ನೇತೃತ್ವದ ಮೇಲ್ಜಾತಿಗಳು. ನಿಮಗೆ ಬೇಕಾದುದನ್ನು ನೀವು ಮಾಡುತ್ತೀರಿ, ಆದರೆ ಇದನ್ನು ಸಾಮಾನ್ಯ ರೀತಿಯ ರಾಜಕೀಯ ಮತ್ತು ಸಾಮಾನ್ಯ ರೀತಿಯ ನ್ಯಾಯ ಸಮಸ್ಯೆ ಅಥವಾ ಸಾಮಾನ್ಯ ರೀತಿಯ ಕಾನೂನುಸ ಮಸ್ಯೆಗಳೆಂದು ತಳ್ಳಿ ಹಾಕಬೇಡಿ.

ಧನ್ಯವಾದಗಳು. ಜೈಭೀಮ್!!

ಕುಫಿರ್ (Kuffir) ಲೇಖಕರು, ಚಿಂತಕರು, ರೌಂಡ್ ಟೇಬಲ್ ಇಂಡಿಯಾ ಮತ್ತು ಶೇರ್ ಡ್ ಮಿರರ್ ಸಹ ಸಂಸ್ಥಾಪಕರು

ಕನ್ನಡ  ಅನುವಾದ – ಸ್ವರ್ಣ ಕುಮಾರ್ B A