ಸವಣೂರಿನತ್ತ ಚಿತ್ತ…

ಸವಣೂರಿನತ್ತ ಚಿತ್ತ

Kuffir

ಕನ್ನಡ  ಅನುವಾದ – ಸಾತ್ವಿಕ್ ಏನ್. ಏನ್. ಮತ್ತು ಶಶಾಂಕ್.ಎಸ್. ಆರ್. 

ಭಾರತವು 118 ಕೋಟಿ ಜನಸಂಖ್ಯೆಯ ಬದಲಿಗೆ 18 ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರವಾಗಿದ್ದ ಪಕ್ಷದಲ್ಲಿ, ಮಾಧ್ಯಮಗಳ ಈ ಭಾವೋದ್ವೇಗಕ್ಕೆ ಅರ್ಥವಿರುತ್ತಿತ್ತು. ಬಜೆಟ್‌ ವಿಚಾರವಾಗಿ ಟಿ.ವಿ ಚಾನೆಲ್ಲೊಂದು ನಡೆಸಿದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಒಕ್ಕೂಟ ಸರ್ಕಾರದ ಪ್ರಸ್ತಾಪವೊಂದನ್ನು ಹೃತ್ಪೂರ್ವಕವಾಗಿ ಅನುಮೋದಿಸುತ್ತಾ ಹೇಳುತ್ತಾರೆ ʼದೀರ್ಘಾವಧಿಯಲ್ಲಿ ಬಡವರಿಗೆ ಅನುದಾನಗಳ ಬದಲಿಗೆ ಮೂಲಸೌಕರ್ಯಗಳು ಹೆಚ್ಚು ಉಪಯುಕ್ತವಾಗುತ್ತವೆ.ʼ

ಈ ಹೇಳಿಕೆಯ ಹಿಂದಿರುವುದು ಹಲವು ಊಹಾಪೋಹಗಳು. ಒಂದು, ಬಡವರಿಗೆ ಮೂಲಸೌಕರ್ಯಗಳ ಬಗ್ಗೆ ಆಸಕ್ತಿಯಿಲ್ಲ; ಅಥವಾ ಅವುಗಳ ಅಗತ್ಯತೆಯು ಅವರಿಗೆ ಅರ್ಥವಾಗುವುದಿಲ್ಲ; ಅಥವಾ ಅದನ್ನು ಅರ್ಥಮಾಡಿಕೊಳ್ಳುವ ದೂರದೃಷ್ಟಿ ಇಲ್ಲ ಇತ್ಯಾದಿ… ಎರಡು, ಬಡವರಿಗೆ ಎಲ್ಲವೂ ಉಚಿತವಾಗಿ ಬೇಕು. ಹಾಗಾಗಿ ಅವರು ಸೋಂಬೇರಿಗಳು ಮತ್ತು ಅವರಿಗೆ ಶ್ರಮದ ಅರಿವಿಲ್ಲ ಎಂಬುದು. ಮೂರು, ಕಾಮಗಾರಿ ಪೂರ್ಣಗೊಳ್ಳುವುದಕ್ಕಿಂತಲೂ ಮೊದಲೇ ಉದುರಿ ಬೀಳುತ್ತಿದ್ದ 60,000 ಕೋಟಿ ಮೊತ್ತದ ದೆಹಲಿಯ ಗೇಮ್ಸ್ ವಿಲೇಜ್ ಆದರೂ ಸರಿಯೇ, ಮೂಲಸೌಕರ್ಯಗಳು ಎಲ್ಲರ ಉಪಯೋಗಕ್ಕೆ ಬರುತ್ತದೆ ಎಂಬುದು. ನಾಲ್ಕು, ಅನುದಾನಗಳು ಕೇವಲ ಬಡವರಿಗೆ ಮೀಸಲಾಗಿವೆ ಮತ್ತವು ಬಡವರಲ್ಲದವರಿಗೆ ತಲುಪುವುದಿಲ್ಲ ಎಂಬುದು.

ಡಾ.ಅಂಬೇಡ್ಕರ್ ಹೇಳಿದಂತೆ ಜಾತಿಯೆಂಬುದೊಂದು ಮನಸ್ಥಿತಿ. ಮೇಲೆ ಕಂಡಂತಹ ಪೂರ್ವಾಗ್ರಹ ಪೀಡಿತ ಹೇಳಿಕೆಗಳನ್ನು ಸವರ್ಣೀಯ ಮಾಧ್ಯಮದಲ್ಲಿ ಪದೇ ಪದೇ ಕೇಳಿ ನಾವೂ ಅವುಗಳನ್ನು ಸಹಜವೆಂಬಂತೆ ಒಪ್ಪಿಬಿಟ್ಟಿದ್ದೇವೆ. ಜಗತ್ತನ್ನು ‘ನಾವು’ ಮತ್ತು ತಪ್ಪಿತಸ್ಥ ‘ಅವರು’ ಎಂದು ಬಿಂಬಿಸುವುದಕ್ಕೇ ತಮ್ಮ ಪ್ರಜ್ಞೆಯನ್ನು ಬಳಸುವ ಸವರ್ಣೀಯರಿರುವಾಗ ಪರಿಸ್ಥಿತಿ ಭಿನ್ನವಾಗಿರಲಾದರೂ ಹೇಗೆ ಸಾಧ್ಯ?

ಈ ದೇಶದ ಬಡವರ, ದಲಿತ-ಬಹುಜನರ ದೃಷ್ಟಿಕೋನದಲ್ಲಿ ಕೂಡ ಮೂಲಸೌಕರ್ಯಗಳು ಬಹುಮುಖ್ಯ. 70% ಹಳ್ಳಿಗರ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ; ಶೌಚಾಲಯಗಳಿರುವ ಕೆಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಮೂಲಸೌಕರ್ಯಗಳ ಅಗತ್ಯತೆ ಅವರಿಗಿಂತ ಇನ್ನಾರಿಗೆ ತಾನೇ ಹೆಚ್ಚು ಅರ್ಥವಾಗಲು ಸಾಧ್ಯ? ಹೌದು, ರಸ್ತೆಗಳು, ಶೌಚಾಲಯಗಳು ಮತ್ತು ಮೂಲಸೌಕರ್ಯಗಳು ತಂದುಕೊಡುವ ಸ್ವಾತಂತ್ರ್ಯದ ಬಗೆಗಿನ ಅರಿವು ಬೇರಾರಿಗಿಂತಲೂ ಅವರಿಗೆ ಹೆಚ್ಚು ಅರ್ಥವಾಗುತ್ತದೆ. ಆದರೆ, ಭಾರತದಲ್ಲಿ ಮೂಲಸೌಕರ್ಯದ ಜೊತೆ ಇನ್ನೊಂದಿದೆ ಎಂಬುದನ್ನು ಅರಿಯಬೇಕು, ಅದು ಶುದ್ಧ(ಮಡಿ) ಮೂಲಸೌಕರ್ಯ.

ಶುದ್ಧ (ಮಡಿ) ಮೂಲಸೌಕರ್ಯದ ಬೆಲೆ

ಸವರ್ಣ ಭಾರತದ ಸಾಮೂಹಿಕ ಪ್ರಜ್ಞೆಗೆ ಈ ಗೇಮ್ಸ್ ಎಂಬ ತೋರ್ಪಡಿಕೆಯು ಅತ್ಯವಶ್ಯಕವಾಗಿತ್ತು. ಏಕೆಂದರೆ, ಅದು ಜಗತ್ತು ಭಾರತವನ್ನು ಹೇಗೆ ಕಾಣುತ್ತದೆ ಎಂಬುದನ್ನು ಬದಲಿಸಲಿತ್ತು. ಅಂತೆಯೇ ಭಾರತೀಯರಿಗೆ ತಮ್ಮ ಬಗ್ಗೆ ತಾವೇ ಖುಷಿ ಪಟ್ಟುಕೊಳ್ಳುವಂತೆ ಮಾಡಿತು. ಇದೇ ಶುದ್ಧ (ಮಡಿ) ಮೂಲಸೌಕರ್ಯ. ಇದರಿಂದ ದೇಶಕ್ಕೆ ಆರ್ಥಿಕ ಸಹಾಯವನ್ನೂ ಒದಗಿಸುವಂತಿತ್ತು. ಪರೋಕ್ಷವಾಗಿ ಪ್ರವಾಸೋದ್ಯಮದ ಆದಾಯ ಹೆಚ್ಚುತ್ತದೆ – ಇದು ದೇಶಕ್ಕಾಗಲಿದ್ದ ಲಾಭದ ಒಂದು ಉದಾಹರಣೆ.

ಆದರೆ ನೈರ್ಮಲ್ಯ ವ್ಯವಸ್ಥೆಯಲ್ಲಿನ ಕೊರತೆಯು ಈ ಎಲ್ಲಾ ಲಾಭಗಳನ್ನು ಅಳಿಸಿ ಹಾಕಬಹುದು. ವರ್ಲ್ಡ್ ಬ್ಯಾಂಕಿನ ಪ್ರಕಾರ ಬಡ ನೈರ್ಮಲ್ಯ ವ್ಯವಸ್ಥೆಯಲ್ಲಿನ ಕೊರತೆಯು ಈ ಎಲ್ಲಾ ಲಾಭಗಳನ್ನು ಅಳಿಸಿ ಹಾಕುತ್ತದೆ. ಭಾರತವು ಈ ರೀತಿಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರತಿ ವರ್ಷ 260 ಮಿಲಿಯನ್ ಡಾಲರಿಗೂ ಮೀರಿ ಪ್ರವಾಸೋದ್ಯಮ ಆದಾಯವನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ:

ವರ್ಲ್ಡ್ ಬ್ಯಾಂಕ್ ನೇತೃತ್ವದಲ್ಲಿ Water and Sanitation Program (WSP) ಬಿಡುಗಡೆಗೊಳಿಸಲಾದ, ‘The Economic Impacts of Inadequate Sanitation in India’ ಎಂಬ ವರದಿಯ ಪ್ರಕಾರ ನೈರ್ಮಲ್ಯದ ಕೊರತೆಯಿಂದಾಗಿ 2006ರಲ್ಲಿ ಭಾರತಕ್ಕೆ ತನ್ನ GDP 6.4%, ಅಂದರೆ 53.8 ಮಿಲಿಯನ್ ಡಾಲರ್ ಗಳಷ್ಟು ನಷ್ಟ ಉಂಟಾಗಿದೆ.

54 ಮಿಲಿಯನ್ ಡಾಲರ್‌ ಎಷ್ಟು ದೊಡ್ಡ ಮೊತ್ತವೆಂದರೆ, ಅದು 2012-13 ಸಾಲಿನ ಭಾರತದ ಹಣಕಾಸಿನ ಕೊರತೆ (fiscal deficit) ಅಲ್ಲಿನ ಸುಮಾರು ಅರ್ಧ ಮೊತ್ತವಾಗಿತ್ತು. ಇದು 2012ರ ಸಾಲಿನಲ್ಲಿ ನೀಡಲಾಗಿದ್ದ ಎಲ್ಲಾ ಅನುದಾನಗಳ ಒಟ್ಟು ಮೊತ್ತದ ಅಂದಾಜು ಒಂದೂವರೆ ಪಟ್ಟಿನ ಮೊತ್ತವಾಗಿತ್ತು. ಆದರೆ ಈ ಅನುದಾನಗಳಿಗೆ ಹಣ ಕೊಡುವವರು ಯಾರು?

ಇನ್ನೊಂದು ವರದಿಯ ಪ್ರಕಾರ, ಒಂದೇ ಒಂದು ಕುಟುಂಬ ಬಯಲಿನಲ್ಲಿ ಶೌಚಕ್ಕೆ ತೆರಳಿದರೂ ಸಹ, ಅದು ಇಡೀ ಹಳ್ಳಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಮ್ಮಲ್ಲಿ 60%ಕ್ಕಿಂತ ಹೆಚ್ಚು ಜನ ಬಯಲಿಗೆ ಅಥವಾ ಒಣ ಶೌಚಾಲಯಗಳನ್ನು ಅವಲಂಬಿಸಬೇಕಾದ ಸ್ಥತಿಗೆ ತಳ್ಳಲ್ಪಟ್ಟಿದ್ದಾರೆ. ಸ್ಥತಿಗತಿಯು ಹೇಗಿರುವಾಗ ಇನ್ನು ಅವುಗಳ ಪರಿಣಾಮದ ಅಂದಾಜು ಮಾಡುವುದಾದರೂ ಹೇಗೆ? ದರೆ, ನಮ್ಮ ದೇಶದ ಬಡವರೇ ಆ 54 ಬಿಲಿಯನ್ ಡಾಲರ್‌ ಗಳ ವೆಚ್ಚದ ಬಹುಪಾಲು ಹೊರೆಯನ್ನು ಹೊತ್ತಿದ್ದಾರೆಂದಾಯಿತು.

ಸರಿ ಈ ವರ್ಲ್ಡ್ ಬ್ಯಾಂಕನ್ನು, ತಜ್ಞರನ್ನು ಮತ್ತವರ ಭೌತಿಕ ಕಾಳಜಿಗಳನ್ನು ಬಿಟ್ಟುಬಿಡೋಣ. ಬಡ ನೈರ್ಮಲ್ಯ ವ್ಯವಸ್ಥೆಯ ರಾಜಕೀಯ ಅವರಿಗೆ ಹೇಗೆ ತಾನೇ ಅರ್ಥವಾದೀತು? ಆರ್ಥಿಕ ಪರಿಣಾಮಗಳನ್ನು ಪಕ್ಕಕ್ಕಿಟ್ಟು, ಉತ್ತಮ ಮೂಲಸೌಕರ್ಯಗಳಿಂದಾಗುವ ಸಾಮಾಜಿಕ-ಸಾಂಸ್ಕೃತಿಕ ಪ್ರಭಾವಗಳೇನು ಎಂದು ಯೋಚಿಸೋಣ. ಇದನ್ನು ಸಾಧಿಸಲು ಸಾಧ್ಯವಾದರೆ 60 ಕೋಟಿ ಜನರು ಸಬಲಗೊಳ್ಳುತ್ತಿದ್ದರು. ದೇಶದ 100 ಕೋಟಿ ಜನರನ್ನು ಪ್ರತಿದಿನವೂ ಯಾವುದಾದರೊಂದು ರೀತಿಯ ಅವಮಾನಕ್ಕೆ ದೂಡಿ, ಅವರ ಅಪ್ರತಿಮ ಶ್ರಮಕ್ಕೆ, ಬೆವರಿಗೆ ಪ್ರತಿಫಲವಾಗಿ ಸಿಕ್ಕುವ ಜುಜುಬಿ ನಾಕಾಣೆಗೇ ತೃಪ್ತಿ ಪಟ್ಟುಕೊಳ್ಳುವಂತೆ ಹೇಗಾದರೂ ಸರಿಯೇ ಕಲಿಸಬೇಕೆಂದು ಬಯಸುವ 18 ಕೋಟಿ ಸವರ್ಣೀಯರ ಮತ್ತವರ ಆರ್ಥಿಕ ವ್ಯವಸ್ಥೆಗೆ ಈ ಸಬಲೀಕರಣ, ಉತ್ತಮ ಮೂಲಸೌಕರ್ಯ ಇತ್ಯಾದಿ, ಉಪಯುಕ್ತವೇ? ಭಾರತವು ‘ಪ್ರಕಾಶಿಸಲು’, ಪ್ರತಿದಿನವೂ ಬಡವರಲ್ಲಿ ಅವಮಾನ ಮತ್ತು ಜಾತೀಯತೆಯನ್ನು ಬಿತ್ತುತ್ತಲೇ ಇರಬೇಕು.

ಈ ಬರಹವು ಕೇವಲ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ವಾದಿಸುವುದಿಲ್ಲ. ಬದಲಿಗೆ, ಅದರ ಜೊತೆಯಲ್ಲಿ, ರಾಜ್ಯಾಧಿಕಾರವನ್ನು ಉಪಯೋಗಿಸಿಕೊಂಡು ದೇಶದ ಭೌತಿಕ ವಾಸ್ತವತೆಯನ್ನು ರೂಪಿಸುವ ಬ್ರಾಹ್ಮಣ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂದು ಶೋಧಿಸಲು ಪ್ರಯತ್ನಿಸುತ್ತದೆ.

 

ಒಣ ಶೌಚಾಲಯದಿಂದ ಪುಟಿದೆದ್ದ ಸಮಾಜ

ಕೈಗಿರಣಿಗಳು ಊಳಿಗಮಾನ್ಯ ಸಮಾಜವನ್ನು ಸೃಷ್ಟಿಸುವುದಾದರೆ, ಒಣ ಶೌಚಾಲಯಗಳು ಇನ್ನಾವ ರೀತಿಯ ಸಮಾಜವನ್ನು ಸೃಷ್ಟಿಸುತ್ತಿವೆ?

ಸವಣೂರುಗಳನ್ನು ಹಡೆಯುವ ಸಮಾಜ, ಸಹಜವಾಗಿಯೇ, ರೋಗಿಷ್ಟ ಸಮಾಜವನ್ನೇ ಸೃಷ್ಟಿಸುತ್ತದೆ. ಭಾರತದ ಪ್ರತಿ ಮನೆಯಲ್ಲೂ ಸುಸಜ್ಜಿತ ಶೌಚಾಲಯವಿದ್ದರೆ, ಅದರರ್ಥ ಪ್ರತಿ ಮನೆಗೂ ಕೊಳವೆ ನೀರು ಸರಬರಾಜುಗುತ್ತಿದೆಯೆಂದು. ಆದರೆ ಪ್ರತಿ ಮನೆಗೂ ನೀರು ಸರಬರಾಜಾಗಬೇಕಾದರೆ, ಪ್ರತಿ ವ್ಯಕ್ತಿಗೂ, ನದಿಗಳ, ಕೆರೆ ಕಟ್ಟೆ ಬಾವಿಗಳ ನೀರನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನಿರ್ಧರಿಸುವ ಬಗ್ಗೆ ಅಧಿಕಾರವಿರಬೇಕಾಗುತ್ತದೆ. ಸಂಪನ್ಮೂಲಗಳ ಹಂಚಿಕೆಯನ್ನು ನಿರ್ಧರಿಸುವಲ್ಲಿ ಅಧಿಕಾರವಿರಬೇಕಾಗುತ್ತದೆ. ಅಂದರೆ, ಯಾವುದೇ ವ್ಯಕ್ತಿಯನ್ನು ತನ್ನ ಮೈಗೆ ಮಲ ಬಳೆದುಕೊಳ್ಳುವ ಪರಿಸ್ಥಿತಿಗೆ ದೂಡದೆ, ಆತನ ಹಕ್ಕುಗಳನ್ನು ಗೌರವಿಸಬೇಕಾಗುತ್ತದೆ.

ಆದರೆ ಅದು ಮೇಲ್ಜಾತಿ ಅಥವಾ ಮೇಲ್ವರ್ಗ-ಶೂದ್ರ ಪ್ರಭುಗಳ ‘ಅಭಿವೃದ್ಧಿ’ಯ ಹಾದಿಗೆ ಮುಳುವಾಗಿ ಪರಿಣಮಿಸುತ್ತದೆ. ಅದು ಮೇಲ್ಜಾತಿ ಅಥವಾ ಮೇಲ್ವರ್ಗ-ಶೂದ್ರರ ದೊಡ್ಡ ದೊಡ್ಡ ಡ್ಯಾಮುಗಳನ್ನು ನಿರ್ಮಿಸುವ, ನೀರನ್ನು ಕೂಡಿಟ್ಟು ಅದನ್ನು ವಾಣಿಜ್ಯ ಬೆಳೆಗಳಿಗೆ ಬಳಸುವ, ಗಾಲ್ಫ್ ಕೋರ್ಸುಗಳನ್ನು ನಿರ್ಮಿಸುವ, ಮತ್ತಿತ್ತರೆ ಸವಲತ್ತುಗಳನ್ನು ಪಡೆದುಕೊಳ್ಳುವ ಅವರ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ. ಅವರ ಶುದ್ಧ (ಮಡಿ) ಮೂಲಸೌಕರ್ಯಗಳ ಹಕ್ಕಿಗೆ, ನಿಸರ್ಗವನ್ನು ಸುಲಿಗೆ ಮಾಡುವ ಹಕ್ಕಿಗೆ, ತನ್ನದಲ್ಲದನ್ನು ಕೂಡಿಟ್ಟು ಎಲ್ಲವನ್ನೂ ಹಾಳುಗೆಡವುವ ಅವರ ಹಕ್ಕಿಗೆ ವಿರುದ್ಧವಾಗುತ್ತದೆ. ಅವರ ತಾತ-ಮುತ್ತಾತಂದಿರ ಆಶಯಗಳಂತೆ ಸಮಾಜವನ್ನು ಸೃಷ್ಠಿಸಿ-ಆಳುವ ಅವರ ಹಕ್ಕಿಗೆ ವಿರುದ್ಧವಾಗಿರುತ್ತದೆ.

ಒಣ ಶೌಚಾಲಯಗಳು ಅವರ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಉಪಯುಕ್ತ ಕಾರ್ಯವನ್ನು ನಿರ್ವಹಿಸುತ್ತವೆ: ಸುಸಜ್ಜಿತ, ಖಾಸಗಿ ಶೌಚಾಲಯಗಳನ್ನು ಉಪಯೋಗಿಸಲು ಸಾಧ್ಯವಿರುವವರು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನವನ್ನು ನೀಡುವ ಈ ರೀತಿಯ  ಕೆಲಸವನ್ನೇಕೆ ಮಾಡಿಯಾರು? ಸೌಲಭ್ಯಗಳನ್ನು ನೀವು ಒಮ್ಮೆಯಾದರೂ ಅನುಭವಿಸಿದ ಮೇಲೆ ಅದನ್ನು ನೀವು ನಿಮ್ಮ ಹಕ್ಕೆಂದು ಪರಿಗಣಿಸಲು ಪ್ರಾರಂಭಿಸುತ್ತೀರಿ. ಮೂಲಸೌಕರ್ಯಗಳ, ನೈರ್ಮಲ್ಯದ ಕೊರತೆಯೆಂದರೆ ಕಡಿಮೆ ವೇತನವೆಂದು ಮತ್ತು ಇದು ಎಂದೆಂದಿಗೂ ನಿಜವೆಂದು ಭಾರತದ ಆಳುವ ವರ್ಗಕ್ಕೆ ಚನ್ನಾಗಿಯೇ ತಿಳಿದಿದೆ,

ಕಳೆದೊಂದು ದಶಕದಿಂದ ಒಂದಾದ ಮೇಲೊಂದರಂತೆ ಪ್ರತಿಯೊಂದು ಚಿಕ್ಕ-ಪುಟ್ಟ ನದಿಗಳಿಗೂ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ತನ್ನ ಗದ್ದೆಗಳಿಗೆ ಹರಿಸುತ್ತಿವೆ ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಗಳು. ಸವಣೂರಿರುವುದು ಇದೇ ಕರ್ನಾಟಕದಲ್ಲಿ. ಹಾಗಾದರೆ ಸವಣೂರಿನಲ್ಲಿ ಶೌಚಾಲಯಗಳೇಕೆ ಇನ್ನೂ ಒಣ ಶೌಚಾಲಯಗಳಾಗೇ ಉಳಿದಿವೆ? ನೀರಾವರಿ ʼಸಾಮರ್ಥ್ಯವನ್ನುʼ ಹೆಚ್ಚಿಸಲು ಸರ್ಕಾರ ಕಳೆದ ಕೆಲವು ವರ್ಷಗಳಿಂದ ಕೋಟಿಗಟ್ಟಲೆ ಹಣವನ್ನು ಮಹಾರಾಷ್ಟ್ರ ಸರ್ಕಾರು ವೆಚ್ಚ ಮಾಡುತ್ತಿರುವಾಗ, ಪಂಡರಾಪುರ ಮತ್ತು ಇನ್ನಿತರ ಊರುಗಳ ಪೌರಕಾರ್ಮಿಕರು ಮಾಡುತ್ತಿರುವುದಾದರು ಏನು? ಕಳೆದ 6-7 ವರ್ಷಗಳಿಂದ ಆಂಧ್ರ ಪ್ರದೇಶದ ಸರಕಾರ ಐವತ್ತಕ್ಕೂ ಹೆಚ್ಚು ದೊಡ್ಡ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿವೆ. ಆದರೆ ಅಲ್ಲಿನ ಒಣ ಶೌಚಾಲಯಗಳನ್ನು ಮತ್ತು ನಗರಗಳ ಚರಂಡಿಗಳನ್ನು ಸ್ವಚ್ಛ ಮಾಡುತ್ತಿರುವವರು ಯಾರು? ಭಾರತದ ಮಹಿಳೆಯರು ಶೌಚಾಲಯಗಳಿಗಿಂತ ಮೊಬೈಲ್ ಫೋನುಗಳನ್ನು ಮುಖ್ಯವೆಂದು ಪರಿಗಣಿಸುತ್ತಿರುವಂತಿದೆ ಎಂದು ರಾಜ್ಯಸಭಾ ಸದಸ್ಯ ಮತ್ತು ಕೇಂದ್ರ ಸಚಿವರಾದ ಜೈರಾಮ್ ರಮೇಶ್ ಮುತಾಲಿಕ-ರಂತೆ ಹೇಳಿಕೆಗಳನ್ನು ನೀಡುತ್ತಾರೆ. ವಿವಿಧ ರಾಜ್ಯಗಳಲ್ಲಿ ಸರ್ಕಾರಗಳು ನಿರ್ಮಿಸುತ್ತಿರುವ ಶೌಚಾಲಯಗಳಿಗೆ ನೀರಿನ ವ್ಯವಸ್ಥೆಯಾಗಲಿ, ಚರಂಡಿ ವ್ಯವಸ್ಥೆಯಾಗಲಿ ಇಲ್ಲ. ಹೀಗೆ, ಸಿಮ್ ಕಾರ್ಡ್-ಇಲ್ಲದ ಮೊಬೈಲ್ ಫೋನ್ ಗಳಂತಿರುವ ಶೌಚಾಲಯಗಳನ್ನು ಯಾರಾದರೂ ಬಯಸುತ್ತಾರೆಯೇ?

ನೀರು ಮತ್ತು ಅದರಿಂದ ಹರಿದು ಬರುವ ಅಧಿಕಾರದ ಬಗೆಗಿನ ಮಿತವೇ ಇಲ್ಲದ ದುರಾಸೆಯೇ ಈ ಕಥೆಯ ಮೂಲದಲ್ಲಿರುವ ಸಮಸ್ಯೆ. ಮೇಲೆ ಹೆಸರಿಸಲಾಗಿರುವ ಮೂರೂ ರಾಜ್ಯಗಳು ಸೇರಿ ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ-ಎರಡು ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ದೊಡ್ಡ ಪ್ರಮಾಣದ ನೀರಾವರಿ ವ್ಯವಸ್ಥೆಗಳ ಮೇಲೆ ವ್ಯಯಿಸಿವೆ. ನೀರು-ನದಿಗಳ ವಿಚಾರವಾಗಿ ಯುದ್ದವೊಂದನ್ನು ಹೊರತು ಪಡಿಸಿ ಇನ್ನೆಲ್ಲಾ ರೀತಿಯಲ್ಲಿ ಕಾದಾಡಿವೆ. ಆದರೆ, ಈ ಎಲ್ಲಾ ಯೋಜನೆಗಳಿಂದ ಒಂದೇ ಒಂದು ಹನಿ ನೀರು ಕೂಡ ದಲಿತ-ಬಹುಜನರ ಮನೆಗಳಿಗೆ ಹರಿದು ಬರುವುದಿಲ್ಲ. ನೈಸರ್ಗಿಕವಾಗಿ ನೋಡಿದರೆ, ನಿರ್ಲಕ್ಷ್ಯದಿಂದ ಪೋಲಾಗುತ್ತಿರುವ ಈ ನೀರಿನ ಒಂದಂಶವನ್ನಾದರೂ ಜಾಗರೂಕವಾಗಿ ಬಳಸಿಕೊಂಡರೂ ಸಹ ದೇಶದ ನೈರ್ಮಲ್ಯ ವ್ಯವಸ್ಥೆಯನ್ನು ದೊಡ್ಡ ಮಟ್ಟ ಸುಧಾರಿಸಬಹುದು. ಆದರೆ ಒಣ-ಶೌಚಾಲಗಳಿಂದ ಸುಸಜ್ಜಿತ ನೀರು ಪೂರೈಕೆ ಹೊಂದಿರುವ ಶೌಚಾಲಗಳ ಕಡೆಗೆ ಸಮಾಜವೊಂದು ದಾಪುಗಾಲಿಡುವುದು 8-ಲೇನ್ ಹೈವೇಗಳನ್ನು ನಿರ್ಮಿಸಿದಷ್ಟು ಸುಲಭವಲ್ಲ. ಅದು ಟೈಮ್-ಟ್ರಾವೆಲ್ ಮಾಡಿದಂತೆಯೇ ಸರಿ.

ಟಿ. ವಿ ಚಾನೆಲ್ಲುಗಳಲ್ಲಿ ಕುಳಿತು ಚರ್ಚೆ ನಡೆಸುವವರು ಸವಣೂರಿನ ಪ್ರತಿಭಟನಾಕಾರರು ಜೀವಿಸುವ ಸಂದರ್ಭ ಮತ್ತು ಪರಿಸ್ಥಿತಿಗೆ ಟೈಮ್-ಟ್ರಾವೆಲ್‌ ಮಾಡಿ, ಆರ್ಥಶಾಸ್ತ್ರಜ್ಞರು, ತಜ್ಞರುಗಳು ಮತ್ತು ಇವರನ್ನು ಪೋಷಿಸಿ-ಬೆಳೆಸುವ ಸಂಸ್ಥೆಗಳು ಮತ್ತು ವ್ಯವಸ್ಥೆಗಳು ಸವಣೂರಿನವರಂತೆಯೇ ತಮ್ಮ ಮೇಲೆ ಮಲ ಸುರಿದುಕೊಂಡಾಗಲಾದರೂ ಒಣ ಶೌಚಾಲಯಗಳಿಂದ ಮುಕ್ತವಾದಾಗ ಸಿಗುವ   ಸ್ವಾತಂತ್ರ್ಯದ, ಒಣ ಶೌಚಾಲಯ ಮುಕ್ತ ಸ್ವತಂತ್ರ ಸಮಾಜವನ್ನು ಕಲ್ಪಿಸಿಕೊಳ್ಳುವುದರ ಅಗತ್ಯತೆಯ ಅರಿವಾಗಬಹುದೇನೋ.

 

ನಿಮ್ಮ ಅನುದಾನಗಳಿಂದ ಒಂದಷ್ಟು ಸವಣೂರುಗಳನ್ನಾದರು ಸುಧಾರಿಸಿ:

 ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯ ಬದಲು ದೊಡ್ಡ ಅಣೆಕಟ್ಟುಗಳನ್ನು, ಗೇಮ್ಸ್‌ ವಿಲೇಜುಗಳನ್ನು ನಿರ್ಮಿಸುವುದು; ಎಲ್ಲರೂ ಬಳಸಬಹುದಾದಂತಹ ನೈಜ ಮೂಲಸೌಕರ್ಯಗಳ ಬದಲು ಶುದ್ಧ (ಮಡಿ) ಮೂಲಸೌಕರ್ಯಗಳನ್ನು ನಿರ್ಮಿಸುವುದು – ಇವು ಸವರ್ಣೀಯರ ಮೋಸದ ಒಂದು ಚಹರೆ ಮಾತ್ರ. ಯೋಜನೆಗಳನ್ನು ಮತ್ತು ಅನುದಾನಗಳನ್ನು ಉಡುಗೊರೆಯಂತೆ ಮತ್ತು ಔದಾರ್ಯವೆತ್ತ ಕಾರ್ಯದಂತೆ ತೋರಿಸುವುದು ಈ ವಂಚನೆಯ ಇನ್ನೊಂದು ಮುಖ. ಆದರೆ ಈ ಒಂದು ನಿಯಮವನ್ನು ಮರೆಯದಿರೋಣ: ತಾವು ಕೊಡುವುದಕ್ಕಿಂತಲೂ ಹೆಚ್ಚಿನದನ್ನು ಸವರ್ಣೀಯರು ಕಸಿಯುತ್ತಾರೆ.  ತಾವು ನಿರ್ಮಿಸುವುದಕ್ಕಿಂತಲೂ ಹೆಚ್ಚಿನದನ್ನು ಸವರ್ಣೀಯರು ಹಾಳುಗೆಡವುತ್ತಾರೆ.

ದಲಿತ ಬಹುಜನರ ಕಳವಳ ಹಾಗು ದೃಷ್ಟಿಕೋನಗಳು ಕೇವಲ ಅನಿಶ್ಚಿತವೂ ಆಕಸ್ಮಿಕವೂ ಆಗಿರುವಂತಹವು. ಬಜೆಟ್ ಹೇಗಿರಬೇಕೆಂಬ ಬಗ್ಗೆ ಸಲಹೆ ನೀಡುವ, ಬಜೆಟ್ಟುಗಳನ್ನು ನಿಯಂತ್ರಿಸುವ ಮತ್ತು ಮಂಡಿಸುವ ಮನಸ್ಸುಗಳನ್ನು ಇವು ಪ್ರಭಾವಿಸುವುದು ಅತಿವಿರಳ. ಅದೃಷ್ಟವಶಾತ್, Special Plans for Dalits and Adivasis ಪ್ರಸ್ತಾವನೆಯು ಆಳುವ ವರ್ಗದ ಗಮನ ಸೆಳೆಯಿತು, ಅದಕ್ಕೂ ಕೂಡ ಈ ದೇಶ ಸ್ವಾತಂತ್ರ್ಯಾನಂತದಲ್ಲಿ ಮೂವತ್ತು ವರ್ಷಗಳು ಕಾಯಬೇಕಾಯಿತು. ಇದಾಗಿ ಮೂವತ್ತು ವರ್ಷಗಳೇ ಕಳೆದರು, ಅವರುಗಳು ಈ ವಿಚಾರದ ಬಗ್ಗೆ ಮತ್ತೊಮ್ಮೆ ಪ್ರಾಮಾಣಿಕವಾಗಿ ಗಮನ ಹರಿಸುವ ಗೋಜಿಗೇ ಹೋಗಿಲ್ಲ.

Special Planಗಳು ಜಾರಿಗೆ ಬಂದ ನಂತರದ 34 ವರ್ಷಗಳಲ್ಲಿ, ದಲಿತ ಮತ್ತು ಆದಿವಾಸಿ ಸಮುದಾಯಗಳಿಗಾಗಿ ಮುಡಿಪಾಗಿ ಇರಸಿದ್ದ ಹಣವನ್ನು ಸರ್ಕಾರಗಳು ಲೂಟಿ ಮಾಡುತ್ತಲೇ ಬಂದಿವೆ. ಇಂದಿನ ಬೆಲೆಯಲ್ಲಿ ಅಂದಾಜಿಸಿದರೆ, ಅದರ ಒಟ್ಟು ಮೊತ್ತ ಹಲವು ಲಕ್ಷ ಕೋಟಿಗಳನ್ನು ದಾಟುತ್ತದೆ. National Campaign on Dalit Human Rights (NCDHR) ನ ಪ್ರಕಾರ, ಕಳೆದ ವರ್ಷದಲ್ಲಿ ಮಾತ್ರವೇ, ಕೇಂದ್ರ ಸರ್ಕಾರದ Scheduled Castes Sub -Plan (SCSP) ಯಿಂದ 24,570 ಕೋಟಿ ರೂಪಾಯಿ ಹಾಗು Scheduled Tribes Sub Plan (TSP) ಯಿಂದ 10,530 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಇದನ್ನೇ ನಯವಾಗಿ ಹೇಳುವುದಾದರೆ, ಇಷ್ಟು ದೊಡ್ಡ ಮೊತ್ತವನ್ನು ಬೇರೆಡೆಗೆ ಹರಿಸಲಾಗಿದೆ. NCDHR ನ ಪ್ರಕಾರ, 2011-2012 ಸಾಲಿನ ಯೂನಿಯನ್ ಬಜೆಟ್ಟಿನ ಕೇವಲ 4.03% ಮೊತ್ತವನ್ನು Sub-Plan ಗಳಿಗೆ ಮುಡಿಪಿಡಲಾಗಿತ್ತು (ದಲಿತ ಮತ್ತು ಆದಿವಾಸಿ ಸಮುದಾಯಗಳು ಕೂಡಿದರೆ ಭಾರತದ ಜನಸಂಖ್ಯೆಯ 24.4% ಅಷ್ಟಾಗುತ್ತದೆ). ಶಾಸನಬದ್ಧವಾಗಿ ಈ ಸಮುದಾಯಗಳಿಗೆ ಏಳಿಗೆಗೆ ವಿನಿಯೋಗಿಸಬೇಕಾದ ಹಣವನ್ನು ಕೇವಲ ಸಾಂಕೇತಿಕವಾಗಿ ನೀಡಿ, ಆ ಅತಿಸಣ್ಣ ಮೊತ್ತದಿಂದಲೂ ಅರ್ಧಕ್ಕಿಂತ ಹೆಚ್ಚು ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ರಾಜ್ಯಗಳಲ್ಲೂ ಅಷ್ಟೇ ಭೀಕರವಾದ ಪರಿಸ್ಥಿತಿಯಿದೆ. 1992-93ರಿಂದ 2010-11ರ ನಡುವಿನ 19 ವರ್ಷಗಳಲ್ಲಿ ಆಂಧ್ರ ಪ್ರದೇಶದಲ್ಲಿ 40,000 ಕೋಟಿಗೂ ಮೀರಿ ಹಣವನ್ನು ಬೇರೆಡೆಗೆ ಹರಿಸಲಾಗಿದೆ ಎಂದು ದಲಿತ ಹೋರಾಟಗಾರರು ಅಂದಾಜಿಸಿದ್ದಾರೆ (ಈ ಮೊತ್ತದ ಅರ್ಧದಷ್ಟು ಮೊತ್ತದ ಇಂದಿನ ಮೌಲ್ಯವನ್ನು ಗಣನೆಗೆ ತೆಗೆದುಕೊಂಡಿಲ್ಲವಾದ್ದರಿಂದ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯುಂಟು).

ಅನುದಾನಗಳಿಂದ ದಲಿತ-ಆದಿವಾಸಿಗಳಿಗೇನು ಉಪಯೋಗ?

ಕೆಳಕಂಡ ಕೋಷ್ಟಕ ಸೂಚಿಸುವಂತೆ, ಏನೂ ಇಲ್ಲ.

Table I. Assumed Dalit-Adivasi Share in Subsidies/Loot of SCSP/TSP Fund

*Figures in Column [B] are based on the assumption that Dalits/Adivasis consume a share in subsidies equivalent to their share in population (24.4%).

+ Figures in Column [C] are more realistic estimates of subsidies consumed by Dalit/Adivasis assuming that half of all subsidies never reach beneficiaries due to leakages.

 

ಭಾರತದ ಯೂನಿಯನ್ ಬಜೆಟ್ಟಿನ, ಅದರಉದಾರತೆಯಉದರದಲ್ಲಿ ಅಡಗಿರುವ ನೀಚ ಸತ್ಯವೇನೆಂದರೆ, ಅನುದಾನ ರೂಪದಲ್ಲಿ ದಲಿತರಿಗೆ, ಆದಿವಾಸಿಗಳಿಗೆ ಪ್ರತಿವರ್ಷ ನೀಡಿರುವುದಕ್ಕಿಂತಲೂ ಹೆಚ್ಚು ಹಣವನ್ನು ಅದು ಅವರಿಂದ ದೋಚಲಾಗಿದೆ!

2010-11 ರಲ್ಲಿ 1,23,936 ಕೋಟಿ ರೂಪಾಯಿಗಳನ್ನು ಮತ್ತು 2011-12 ರಲ್ಲಿ 1,44,000 ಕೋಟಿ ರೂಪಾಯಿಗಳನ್ನು ಅನುದಾನಗಳಿಗೆ ನೀಡಲಾಗುವ ಪರಿಷ್ಕೃತ ಮೊತ್ತವು ಮೇಲು ನೋಟಕ್ಕೆ ಜನಸಂಖ್ಯೆಯಲ್ಲಿ ದಲಿತ-ಆದಿವಾಸಿಗಳ ಪ್ರಮಾಣಕ್ಕಿಂತಲೂ ಹಚ್ಚಿನ ಮೊತ್ತವನ್ನು ಅವರ ಏಳಿಗೆಗೆ ಮೀಸಲಾಗಿರಿಸಲಾಗಿದೆ ಎಂದೆನಿಸುವಂತಿದ್ದರೂ ಇದು ಕಳೆದ 34 ವರ್ಷಗಳ ಇತಿಹಾಸಕ್ಕೆ ತದ್ವಿರುದ್ಧವಾಗಿದೆ. ಈ ದೊಡ್ಡ ಪ್ರಮಾಣದ ಪರಿಷ್ಕೃತ ಮೊತ್ತದ ಹಿಂದಿನ ಅಸಲಿ ಕಾರಾಣವೇನೆಂದರೆ ಆ ಎರಡೂ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಹಿಂದೆಂದೂ ಕಾಣದಷ್ಟು (ಶೇ 100-200%) ಹೆಚ್ಚಾಗಿದ್ದು. ವಾಸ್ತವ ಹೀಗಿರುವಾಗ, ಕಾಲಂ [B] ಅಲ್ಲಿ ನಮೂದಿಸಿರುವಂತೆ  ದಲಿತರು/ಆದಿವಾಸಿಗಳ ಅನುದಾನ ಗಳ ಒಟ್ಟು ಮೊತ್ತದಲ್ಲಿನ 24.4% ರಷ್ಟನ್ನು ಬಳಸಿಕೊಂಡರೆಂದು ನಂಬುವುದು ಅತಿಯಾದ ಆಶಾವಾದವೆನಿಸುತ್ತದೆ.

ಹಾಗಾಗಿ ಕಾಲಂ [C]ನ ಅಂಕಿಗಳು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿವೆ. ಅದು ವ್ಯವಸ್ಥೆಯಲ್ಲಾಗುವ ಸೋರಿಕೆಯನ್ನು (leakage) ಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಸೋರಿಕೆಗಳಿಂದಾಗಿ ಅನುದಾನಗಳಲ್ಲಿನ ಅರ್ಧಕ್ಕಿಂತ ಹೆಚ್ಚು ಹಣ ಪೋಲಾಗುತ್ತದೆ. ನಾವು ಕಾಲಂ [C]ನ ಅಂಕಿಗಳನ್ನು (ವಾಸ್ತವದಲ್ಲಿ ದಲಿತ-ಆದಿವಾಸಿಗಳಿಗೆ ಅನುದಾನಗಳ ರೂಪದಲ್ಲಿ ದಕ್ಕುವ ಮೊತ್ತ) ಕಾಲಂ [E]ಯ ಅಂಕಿಗಳಿಗೆ (SCSP ಮತ್ತು TSP ಗಳ ಮೂಲಕ ನ್ಯಾಯಯುತವಾಗಿ ದಲಿತ-ಆದಿವಾಸಿಗಳಿಗೆ ದಕ್ಕಬೇಕಾದ, ಆದರೆ ಬಜೆಟ್ಟಿನಲ್ಲಿ ನಿಗದಿ ಪಡಿಸದ ಹಾಗು ಬೇರೆ ಪ್ರಾಜೆಕ್ಟ್/ಪ್ಲಾನ್-ಗಳಿಗೆ ಹರಿಸಿದ, ಅಥವಾ ಇನ್ನೂ ಸುಲಭವಾಗಿ ಹೇಳಬೇಕೆಂದರೆ, ಲೂಟಿ ಮಾಡಿದ) ಹೋಲಿಸಿ ನೋಡಿದರೆ, ಸರಕಾರ ದಲಿತ-ಆದಿವಾಸಿಗಳಿಗೆ ನೀಡುವುದಕ್ಕಿಂತ ಬಹಳ ಹೆಚ್ಚು ಹಣವನ್ನು ಅವರಿಂದ ದೋಚುತ್ತದೆ ಎಂಬುದು ಸ್ಪಷ್ಟವಾಗುತ್ತದೆ. (SCSP ಮತ್ತು TSP ಗಳನ್ನು ಲೂಟಿ ಮಾಡುವ ಮುಖಾಂತರ)!

SCSP ಮತ್ತು TSP ಅನುದಾನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದರೆ, ಈ ದೇಶದ ಬಹುತೇಕ ದಲಿತ-ಆದಿವಾಸಿಗಳ ಜೀವನದಲ್ಲಿ ಗಮನಾರ್ಹ ಸುಧಾರಣೆಯಾಗಿರುತ್ತಿತ್ತು. ಅವರಿಗೆಂದು ಭಾರತವು ಮೀಸಲಿರಿಸಿದ ಮೊತ್ತವು ಒಂದು ಸವಣೂರನ್ನೂ ಕೂಡ ಸುಧಾರಿಸಲಾಗಲಿಲ್ಲ ಎಂದೆನಿಸುತ್ತದೆ.

2012-13 ರಲ್ಲಿ, SCSP-TSP ಗಳಿಗೆ ನಿಗದಿಪಡಿಸಿದ ಒಟ್ಟು ಮೊತ್ತ ಸುಮಾರು 95,410 ಕೋಟಿಗಳಷ್ಟು (ಆ ವರ್ಷದ Central Plan Expenditure ಗಾಗಿ ಕಾದಿರಿಸಿದ ಒಟ್ಟು ಮೊತ್ತ 3,91,027 ಕೋಟಿ ರೂಪಾಯಿಗಳು). ಅದರಲ್ಲಿ ಎರಡನೇ ಮೂರರಷ್ಟು ಭಾಗವನ್ನು Revenue Plan Expenditure ಗಾಗಿ ವ್ಯಯಿಸಲಾಗಿದೆ ಎಂದು ತಿಳಿದರೂ, ಉಳಿದಿರುವ ಮೊತ್ತದಲ್ಲಿ:

– 5 ಕೋಟಿ ಬಡ ದಲಿತ-ಆದಿವಾಸಿ ಕುಟುಂಬಗಳ ಒಂದನೇ ಮೂರರಷ್ಟು ಕುಟುಂಬಗಳಿಗೆ ಶೌಚಾಲಯವಿರುವ ಪಕ್ಕಾ ಮನೆಗಳನ್ನು ನಿರ್ಮಿಸಬಹುದು.

  • 5 ಕೋಟಿ ಬಡ ದಲಿತ-ಆದಿವಾಸಿ ಕುಟುಂಬಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡಬಹುದು. ಇದು ಅವರುಗಳು ಅನುದಾನಗಳ ರೂಪದಲ್ಲಿ ಪಡೆಯುವ ಒಟ್ಟು ಮೊತ್ತಕ್ಕಿಂತಲೂ ಹೆಚ್ಚಿರುತ್ತದೆ, ಇದು SCSP ಮತ್ತು TSP ರೂಪದಲ್ಲಿ ಭಾರತ ಸರ್ಕಾರವು ನೀಡುವುದೆಂದು ಹೇಳಿ ದೋಚುವುದಕ್ಕಿಂತಲೂ ಹೆಚ್ಚು ಉಪಯುಕ್ತವಾಗಿರುತ್ತದೆ,

 

– ಇನ್ನಾವ ರೀತಿಯಲ್ಲಾದರೂ ಬಳಸಬಹುದು, ಈ ರೀತಿ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ಲೂಟಿಯಾಗುವ ಹಣವನ್ನು ಬಳಸುವ ಪೂರ್ಣ ಸ್ವಾತಂತ್ರ ಏಕೆಂದರೆ, ದಲಿತ-ಆದಿವಾಸಿಗಳಿಗಿದ್ದರೆ, ಯಾವುದೇ ನಾಚಿಕೆಯಿಲ್ಲದೆ ಈ ಹಣವನ್ನು ಪೋಲು ಮಾಡುತ್ತಿರುವ ಸವರ್ಣೀಯರಿಗಿಂತ ಹೆಚ್ಚು ಪರಿಣಾಮಕಾರಿಯಾಗಿಯೇ ಬಳಸುತ್ತಾರೆ.

ಟಿಪ್ಪಣಿ: ಮೇಲೆ ನೀಡಲಾಗಿರುವ ಕೋಷ್ಟಕದಲ್ಲಿರುವ ಅಂಕಿಗಳು ಅಂದಾಜು ಮೊತ್ತಗಳಾಗಿದ್ದು, ಅದರಲ್ಲಿ ಸಣ್ಣ ಪ್ರಮಾಣದ ವ್ಯತ್ಯಯಗಳು ಇರಬಹುದಾದರೂ ಅದು ಸೂಚಿಸುತ್ತಿರುವ ವಿಚಾರದಲ್ಲಿ ಯಾವುದೇ ಬದಲಾಗುವುದಿಲ್ಲ ಎಂದು ನಾನು ನಂಬಿರುವೆ. ಇಲ್ಲಿ ನೀಡಲಾಗಿರುವ ಅಂಕಿ-ಅಂಶಗಳನ್ನು ನಾನು India Budget site ನಿ ಪುಟಗಳಿಂದ ಪಡೆದುಕೊಂಡಿದ್ದೇನೆ. SCSP and TSP ಸಂಬಂಧಿತ ಅಂಕಿಅಂಶಗಳನ್ನು NCDHR ಪತ್ರಿಕಾ ಹೇಳಿಕೆಯಿಂದ ಮತ್ತು ದಿವ್ಯಾ ತ್ರಿವೇದಿಯವರು ʼದಿ ಹಿಂದೂʼ ಪತ್ರಿಕೆಗಾಗಿ ಬರೆದಿರುವ ಲೇಖನದಿಂದ ಪಡೆದಿದ್ದೇನೆ. ಕಾರ್ತಿಕ್ ನವಯಾನ್ ಅವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

Kuffir ಲೇಖಕರು, ಚಿಂತಕರು, ರೌಂಡ್ ಟೇಬಲ್ ಇಂಡಿಯಾ ಮತ್ತು ಶೇರ್ ಡ್ ಮಿರರ್ ಸಹ ಸಂಸ್ಥಾಪಕರು

ಕನ್ನಡ  ಅನುವಾದ – ಸಾತ್ವಿಕ್ ಏನ್. ಏನ್. ಮತ್ತು ಶಶಾಂಕ್.ಎಸ್. ಆರ್.