ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ

ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ[i]

ರೆಡಾಂಟ್

ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ;
ಛಲ ಬೇಕು ಶರಣಂಗೆ, ಪರಸತಿಯನೊಲ್ಲೆನೆಂಬ;
ಛಲ ಬೇಕು ಶರಣಂಗೆ, ಪರದೈವವನೊಲ್ಲೆನೆಂಬ;
ಛಲ ಬೇಕು ಶರಣಂಗೆ, ಲಿಂಗ ಜಂಗಮ ಒಂದೇ ಎಂಬ;
ಛಲ ಬೇಕು ಶರಣಂಗೆ, ಪ್ರಸಾದ ದಿಟವೆಂಬ;
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ. – ಬಸವಣ್ಣ

 

2023 ಇಸವಿ ಬಿಜೆಪಿ ಪಕ್ಷಕ್ಕೆ ಹೊಸ ತೊಡಕುಗಳನ್ನು ಉಂಟುಮಾಡಿದೆ. ಲಿಂಗಾಯತ ಪಂಚಮಸಾಲಿಗಳಿಗೆ ಮೀಸಲಾತಿ ಮೊತ್ತವನ್ನು ಹೆಚ್ಚಿಸಲು ನೆಡೆಯುತ್ತಿರುವ ಹೋರಾಟದ ಮುಂಚೂಣೆಯಲ್ಲಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗಳನ್ನು ಈಗಿರುವ 3Bಯಿಂದ 2Dಗೆ ವರ್ಗಾಯಿಸುವ ಸರ್ಕಾರದ ಪ್ರಸ್ತಾಪನೆಯನ್ನು ನಿರಾಕರಿಸಿದ್ದಾರೆ. 2D ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಮಾಡಿ ಪಂಚಮಸಾಲಿಗಳನ್ನು ಸರ್ಕಾರ ದಿಕ್ಕು ತಪ್ಪಿಸುತ್ತಿದೆ ಎಂದು ಆಪಾದಿಸಿರುವ ಬುದ್ದಿಗಳು ಮುಂಬರುವ ಚುನಾವಣೆಯಲ್ಲಿ ಪಂಚಮಸಾಲಿ ಜನಾಂಗ ಬಿಜೆಪಿ ಪಕ್ಷಕ್ಕೆ ಬುದ್ದಿ ಕಲಿಸುತ್ತದೆ ಎಂಬ ಸೂಕ್ಷ್ಮವಾದ ಎಚ್ಚರಿಕೆಯನ್ನು ನೀಡಿದ್ದಾರೆ. [ii]

ದಿನದಿಂದ ದಿನಕ್ಕೆ ಹೆಚ್ಚುತಿರುವ ಪಂಚಮಸಾಲಿಗಳ ಆಕ್ರೋಶ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನಿಜ ಹೇಳಬೇಕೆಂದರೆ ಪಂಚಮಸಾಲಿಗಳಷ್ಟೇ ಅಲ್ಲದೆ ಬೇರೆ ಸಮುದಾಯಗಳ ಮೀಸಲಾತಿಗೆ ಸಂಬಂಧಪಟ್ಟ ಬೇಡಿಕೆಗಳು ಸರ್ಕಾರಕ್ಕೆ ಬಹು ದೊಡ್ಡ ಪ್ರಶ್ನೆಯಾಗಿದೆ. ಇತ್ತ ಕಡೆ ಪರಿಶಿಷ್ಟ ಜಾತಿಗಳಿಗೆ ಸಿಗುವ ಮೀಸಲಾತಿಯನ್ನು 15% ನಿಂದ 17% ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 3% ರಿಂದ  7%ಕ್ಕೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು, ಜಸ್ಟಿಸ್ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಆಂತರಿಕ ಮೀಸಲಾತಿ ಕೊಡದೆ ಇರುವ ಕಾರಣ ದಲಿತ ಸಂಘಟನೆಗಳು ಆಕ್ರೋಶಗೊಂಡಿವೆ. [iii] ಜೊತೆಯಲ್ಲಿ ಹೆಚ್ಚು ಜನಸಂಖ್ಯೆ ಇರುವ ಕುರುಬ ಸಮುದಾಯ, ಜೊತೆಯಲ್ಲಿ  ಕಾಡು ಗೊಲ್ಲರೂ ಹಾಗೂ ಕಬ್ಬಲಿಗರು ತಮ್ಮನ್ನು ST ಗುಂಪಿಗೆ ಸೇರಿಸುವ ಬೇಡಿಕೆಯನ್ನು ಮತ್ತೆ ಸರ್ಕಾರದ ಮುಂದಿಟ್ಟಿದ್ದಾರೆ. ಅತ್ತ ಪಂಚಮಸಾಲಿಗಳ ಹೋರಾಟದಿಂದ ಪ್ರೇರಿತರಾದ ಒಕ್ಕಲಿಗರು ತಮಗೆ ಸಿಗುವ ಮೀಸಲಾತಿ ಪ್ರಮಾಣವನ್ನು 4% ನಿಂದ 12%ಕ್ಕೆ ಏರಿಸಬೇಕು ಎಂದು ಮುಖ್ಯ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿದರೆ ಇತ್ತ ಈಡಿಗರು ತಮ್ಮನ್ನು ಪ್ರವರ್ಗ ೧ಕ್ಕೆ ಸೇರಿಸಿ ಎಂದು ಪಟ್ಟು ಹಿಡಿದ್ದಿದ್ದಾರೆ. ಇವೆಲ್ಲದರ ಮಧ್ಯದಲ್ಲಿ ತಾವು ಯಾರಿಗೆ ಕಮ್ಮಿ ಎನ್ನುವಂತೆ ಅಖಿಲ ಕರ್ನಾಟಕ  ಬ್ರಾಹ್ಮಣ ಮಹಾಸಭ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ಸರ್ಕಾರ ಘೋಷಿಸಿರುವ  10% ಮೀಸಲಾತಿಯನ್ನು[iv] ಬೇರೆ ಸಮುದಾಯಗಳಿಗೆ ವರ್ಗಾವಣೆ ಮಾಡಿದರೆ ರಾಜ್ಯದಾದ್ಯಂತ “ಶಾಂತಿಯುತ ಹೋರಾಟ” ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದೆ.[v] ಇಂತಹ ಸಮಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸದ್ಯಕ್ಕೆ ಬದಲಿಸಕೂಡದು ಎಂದು ಕೊಟ್ಟಿರುವ ಮಧ್ಯಂತರ ಆದೇಶ ಸರಕಾರಕ್ಕೆ ಬೀಸುವ ದೊಣ್ಣೆಯಿಂದ ಪಾರಾದಂತೆ ಭಾಸವಾಗಿರಬೇಕು.

ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿಭಿನ್ನ ಜಾತಿಗಳ ಒಲೈಕೆಗೋಸ್ಕರ ಹೆಣೆದ ಜಾಲ ಸದ್ಯಕ್ಕೆ ನೆಲ ಕಚ್ಚಿದೆ. ಆದರೂ ಈ ಲೇಖನದಲ್ಲಿ ನನ್ನ ವಾದವೇನೆಂದರೆ ಈ ಬೆಳವಣಿಗೆಗಳಿಂದ ಬಿಜೆಪಿಗೆ ತಾತ್ಕಾಲಿಕವಾಗಿ ಹಿನ್ನೆಡೆಯಾದರೂ ಕೇಸರಿ ಪಡೆಗಳು ರಚಿಸಿರುವ ಷಡ್ಯಂತ್ರ ದೀರ್ಘ ಕಾಲದ್ದು ಹಾಗೂ ಸಾಮಾಜಿಕ ನ್ಯಾಯದ ಅಡಿಪಾಯವಾಗಿರುವ ಮೀಸಲಾತಿಯ ಮೇಲಿನ ದಾಳಿಗಳನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀಕ್ಷ್ಣ ಗೊಳಿಸಲಿದೆ. ಜೊತೆಯಲ್ಲಿ ಚುನಾವಣ ಹಿನ್ನೆಡೆ ಬಿಜೆಪಿಗೆ ದೊಡ್ಡ ವಿಷಯವೇನಲ್ಲ; ಹಾಗೆ ಸೋತರೆ “ಆಪರೇಷನ್ ಕಮಲ” ದಂತಹ ಎಷ್ಟೋ ಬಾಣಗಳು ಬಿಜೆಪಿ ಬತ್ತಳಿಕೆಯಲ್ಲಿವೆ. ಇವೆಲ್ಲದರ ಒಟ್ಟು ಪರಿಣಾಮ ಬ್ರಾಹ್ಮಣ್ಯದ, ಅಂದರೆ ವರ್ಣ ಹಾಗೂ ಜಾತಿ  ವ್ಯವಸ್ತೆಯ, ಪುನರುತ್ಥಾನ.

ಇವೆಲ್ಲದರ  ಹಿನ್ನಲೆಯಲ್ಲಿ ಪಂಚಮಸಾಲಿಗಳ ಮೀಸಲಾತಿ ಚಳುವಳಿಯನ್ನು ವಿಶ್ಲೇಶಿಸುವುದು ಈ ಲೇಖನದ ಆಶಯ. ಹಾಗೆ ವಿಶ್ಲೇಶಿಸುವಾಗ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮೇಲೆ ಇದರ ಪರಿಣಾಮವನ್ನು ನಾವು ಕಡೆಗಣಿಸುವಂತಿಲ್ಲ. ಇಲ್ಲಿ ನಾನು ಇದೆ ಕೆಲಸ ಕೈಗೊಂಡಿದ್ದೇನೆ. ಲಿಂಗಾಯತ ನೇಯ್ಗೆ ಸಮುದಾಯದವನಾದ ಹಾಗೂ 2A ಪ್ರವರ್ಗದ ಅಡಿಯಲ್ಲಿ ಮೀಸಲಾತಿ ಪಡೆದು ಮುಂದೆ ಬಂದಿರುವ ನನಗೆ ಈ ವಿಷಯ ಅತ್ಯಂತ ಮುಖ್ಯವಾದುದು. ನನ್ನ ಪ್ರಕಾರ ಪಂಚಮಸಾಲಿಗಳು ತಮ್ಮನ್ನು 2A ಪ್ರವರ್ಗಕ್ಕೆ ಸೇರಿಸಬೇಕು ಎಂದು ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆ ಸಂವಿಧಾನದ ಅಶಯಗಳಿಗೆ ವಿರುದ್ದವಾಗಿದೆ; ಜೊತೆಯಲ್ಲಿ ದೇಶದಾದ್ಯಂತ ಪ್ರಬಲ ಸಮುದಾಯಗಳು ಹಿಂದುಳಿಸಲ್ಪಟ್ಟ ಜಾತಿಗಳಿಗೆ ಕೊಟ್ಟಿರುವ ಮೀಸಲಾತಿಯನ್ನು ತಮ್ಮ ಪ್ರಾಬಲ್ಯದಿಂದ ಕಸಿದುಕೊಳ್ಳುವುದಕ್ಕೆ ಇದು ಒಂದು ನಿದರ್ಶನ ಕೂಡ. ಈ ಕಾರಣಕ್ಕೆ ಎಲ್ಲ ಬಸವಾನುಯಾಯಿಗಳು ಹಾಗೂ ಪ್ರಗತಿಪರರು ಇಂತಹ ಹೋರಾಟವನ್ನು ಸಾರಾಸಗಟಾಗಿ ವಿರೋಧಿಸಬೇಕು. ಈ ನಿಟ್ಟಿನಲ್ಲಿ ನನ್ನ ಲೇಖನ ಒಂದು ಚಿಕ್ಕ ಪ್ರಯತ್ನ.

 

ಲಿಂಗಾಯತರು ಮತ್ತು ಮೀಸಲಾತಿ

 

ಲಿಂಗಾಯತರು ಎಂದರೆ ಯಾರು? ಜನ ಸಾಮಾನ್ಯರಿಗೆ ನೀವು ಈ ಪ್ರಶ್ನೆ ಕೇಳಿದರೆ ತಮಗೆ ಸಿಗುವ ಉತ್ತರ “ಲಿಂಗಾಯತರು ಎಂದರೆ ಕರ್ನಾಟಕದ ಒಂದು ಪ್ರಬಲ ಊಳಿಗ ಜಾತಿ.” ಇದು ಸತ್ಯ ಕೂಡ, ಆದರೆ ಅರೆಸತ್ಯ ಮಾತ್ರ. ಕೇವಲ ಊಳಿಗದವರನ್ನು ಅಷ್ಟೇ ಅಲ್ಲದೆ ಬೇರೆ ಕಾಯಕದ ಗುಂಪುಗಳನ್ನು ಲಿಂಗಾಯಿತ ಸಮುದಾಯ ಒಳಗೊಂಡಿದೆ. ಈ ಕಾರಣದಿಂದ ಲಿಂಗಾಯತರು ಹಾಗೂ ಮೀಸಲಾತಿಯ ಸಂಬಂದವನ್ನು ವಿಶ್ಲೇಶಿಸುವಾಗ 19ನೇ ಹಾಗೂ 20ನೇ ಶತಮಾನದಲ್ಲಿ ಲಿಂಗಾಯತರು ಹಿಂದುಗಳೋ ಇಲ್ಲವೋ ಎಂದು ನೆಡೆದ ಚರ್ಚೆ-ಚಳುವಳಿಗಳನ್ನು ನಾವು ಕೂಲಂಕುಶವಾಗಿ ಪರಿಗಣಿಸಬೇಕಾಗುತ್ತದೆ. ಜೊತೆಯಲ್ಲಿ ಈ ಹೋರಾಟಗಳ ಕೇಂದ್ರ ಬಿಂದುವಾಗಿದ್ದ ಆಗಿನ ಮೈಸೂರು ಪ್ರಾಂತ್ಯದಲ್ಲೇ ಮೀಸಲಾತಿಯ ರೂಪು ರೇಷೆ ನಿರ್ಧಾರವಾಗಿದ್ದು ಕೂಡ.

1871ನೇ ಇಸವಿಯಲ್ಲಿ ನಡೆದ ಮೊದಲನೇ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದುಗಳಿಗಿಂತ ಪ್ರತ್ಯೇಕ ಗುಂಪೆಂದು ಪರಿಗಣಿಸಲಾಗಿತ್ತು. ಆದರೆ 1881ರಲ್ಲಿ ನಡೆದ ಜನಗಣತಿಯಲ್ಲಿ ಅವರನ್ನು ಶೂದ್ರರು ಎಂದು ಸೇರಿಸಲಾಯಿತು. ಇದರಿಂದ ಆಗಿನ ಮೈಸೂರಿನಲ್ಲಿ ಹೆಚ್ಚಿನ ಸಂಖೆಯಲ್ಲಿದ್ದ ಆರಾಧ್ಯ, ಜಂಗಮ[vi] ಹಾಗೂ ಬಣಜಿಗ ಲಿಂಗಾಯತರು[vii] ಆಕ್ರೋಶಗೊಂಡರು. ಇಲ್ಲಿ ಗಮನಿಸಬೇಕಾದಂತ ವಿಷಯವೆಂದರೆ ಇವರು ಮೇಲ್ವರ್ಗದ ಲಿಂಗಾಯತರು. ಅದರಲ್ಲೂ ಆರಾಧ್ಯ ಮತ್ತು  ಜಂಗಮರು ಪೌರೋಹಿತ್ಯ ವೃತ್ತಿಯವರು. ಇವರ ಕೋಪಕ್ಕೆ ಮುಖ್ಯ ಕಾರಣ ಲಿಂಗಾಯತರನ್ನು ಹಿಂದುಗಳೆಂದು ಜನಗಣತಿಯಲ್ಲಿ ಸೇರಿಸಿದ್ದಲ್ಲ; ಬದಲಿಗೆ ಸಾರಾಸಗಟಾಗಿ ಶೂದ್ರರೆಂದು ವರ್ಗೀಕರಿಸಿದ್ದು. ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಹಾಗೂ ವೀರಶೈವ ಪರಂಪರೆಯಿಂದ ಬಂದ ಕರಿಬಸವಶಾಸ್ತ್ರೀಗಳು ವೀರಶೈವರು ಬ್ರಾಹ್ಮಣರಷ್ಟೇ ಶ್ರೇಷ್ಟರು ಎಂದು ವಾದಿಸಿದರು. ಇದಕ್ಕೆ ಪೂರಕವಾಗಿ ಲಿಂಗಾಯತ 12ನೇ ಶತಮಾನದಲ್ಲಿ ಜಾತಿ ವ್ಯವಸ್ತೆಯ ವಿರುದ್ದ ನೆಡೆದ ಶರಣ ಕ್ರಾಂತಿಯಿಂದ ಹೊರಹೊಮ್ಮಿದ ಧರ್ಮ ಎಂಬ ಸತ್ಯವನ್ನು ಮರೆಮಾಚಿ ಬದಲಿಗೆ ವೇದ ಆಗಮಗಳಲ್ಲಿ ವೀರಶೈವದ ಉಲ್ಲೇಖವಿದೆ ಎಂದು ಪ್ರತಿಪಾದಿಸಿದರು. ಇಷ್ಟು ಸಾಲದು ಎಂಬಂತೆ ಕರಿಬಸವಶಾಸ್ತ್ರಿಗಳು ವೀರಶೈವರಲ್ಲಿ ಚತುರ್ವರ್ಣವಿದೆ ಎಂದು, ಪೌರೋಹಿತ್ಯ ಮಾಡುವ ವೀರಶೈವರು “ಶುದ್ಧ ವೀರಶೈವರು”, ವೀರಶೈವ ರಾಜಮನೆತನಗಳು “ಮಾರ್ಗ ವೀರಶೈವರು”, ವ್ಯಾಪಾರಿಗಳು “ಮಿಶ್ರ ವೀರಶೈವರು” ಹಾಗೂ ಶೂದ್ರ ವರ್ಗದ ವೀರಶೈವರು “ಅಂತ್ಯ ವೀರಶೈವರು” ಎಂಬ ಹೊಸ ವಾದವನ್ನು ಸೃಷ್ಟಿಸಿದರು.[viii] ಹೀಗೆ ಜಾತಿ ವ್ಯವಸ್ತೆಯ ವಿರುದ್ಧ ಕಟ್ಟಿದ ಧರ್ಮದಲ್ಲಿ ಜಾತಿ/ವರ್ಣ ಮತ್ತೆ ಬೇರೂರಿತು. ಇವೆಲ್ಲದರ ಪರಿಣಾಮವಾಗಿ ಆಗಿನ ಮೈಸೂರು ಸಂಸ್ಥಾನ 1891ನೇ ಜನಗಣತಿಯಲ್ಲಿ ಲಿಂಗಾಯತರನ್ನು “ವೀರಶೈವ ಬ್ರಾಹ್ಮಣರು” ಎಂದು ಪಟ್ಟಿ ಮಾಡಬೇಕು ಆದರೆ ಜೊತೆಗೆ ಲಿಂಗಾಯತರ ಉಪಜಾತಿಗಳನ್ನು ಕೂಡ ದಾಖಲಿಸಬೇಕು ಎಂಬ ಆದೇಶ ಹೊರಡಿಸಿತು.[ix]

ಈ ಎಲ್ಲ ಬೆಳವಣಿಗೆಗಳು ಮೀಸಲಾತಿಯ ವಿಷಯದ ಮೇಲೆ ಕೂಡ ತಮ್ಮ ಪರಿಣಾಮ ಬೀರಿದವು. ಬ್ರಾಹ್ಮಣೇತರ ಸಮುದಾಯಗಳು “ಪ್ರಜಾ ಮಿತ್ರ ಮಂಡಳಿ” ಎಂಬ ಸಂಸ್ಥೆಯ ಅಡಿಯಲ್ಲಿ ಕೈಗೊಂಡ ಹೋರಾಟದ ಪರಿಣಾಮವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ 1918ರಲ್ಲಿ ಮೀಸಲಾತಿ ನೀತಿ ರೂಪಿಸುವ ನಿಟ್ಟಿನಲ್ಲಿ ಮಿಲ್ಲರ್ ಕಮಿಟಿಯನ್ನು ಸ್ತಾಪಿಸಿದರು. [x] ಶಿಕ್ಷಣ ಹಾಗೂ ಆಡಳಿತದಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದದ್ದನ್ನು ಗಮನಿಸಿದ ಮಿಲ್ಲರ್ ಕಮಿಟಿ ಬ್ರಾಹ್ಮಣೇತರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಶಿಫಾರಸ್ಸನ್ನು ಮಾಡಿತು. ಈ ಎಲ್ಲಾ ಬೆಳವಣಿಗೆಗಳು ಅಂದಿನ ಮೈಸೂರು ಪ್ರಾಂತ್ಯದಲ್ಲಿ ಪ್ರಬಲವಾದ ಬ್ರಾಹ್ಮಣೇತರರ ಚಳುವಳಿ ಉದ್ಭವಿಸಲು ಪೂರಕವಾಯಿತು. ಈ ಚಳುವಳಿಯ ಮುಂದಾಳತ್ವವನ್ನು ಲಿಂಗಾಯತರು ಹಾಗೂ ಒಕ್ಕಲಿಗರು ವಹಿಸಿಕೊಂಡರು.

ಇಲ್ಲಿ ನನ್ನ ವಾದವೇನೆಂದರೆ ಲಿಂಗಾಯತ ಸಮುದಾಯದ ನಾಯಕತ್ವ ವಹಿಸಿದ್ದವರು ಬಂದದ್ದು ಮೇಲು ಶ್ರೇಣಿಯ ಗುಂಪುಗಳಿಂದ. ಇದೊಂದು ವಿರೋಧಾಭಾಸವೆ ಸರಿ. ಕಾಯಕ ವರ್ಗದ ಶೂದ್ರ-ದಲಿತರ ಏಳಿಗೆಗಾಗಿ ಲಿಂಗಾಯತ ಧರ್ಮ ಹುಟ್ಟಿಕೊಂಡಿತು. ಆದರೆ ಬ್ರಾಹ್ಮಣರ ಪ್ರಾಬಲ್ಯವನ್ನು ಮಟುಕುಗೊಳಿಸಲು ಮುಂದಾದ ಮೇಲು ವರ್ಗದ ಲಿಂಗಾಯತರು ಬ್ರಾಹ್ಮಣ್ಯದ ಅನುಕರಣೆಯನ್ನೇ ಇದಕ್ಕೆ ತಮ್ಮ ಸಾಧನವನ್ನಾಗಿಸಿಕೊಂಡರು. ಇನ್ನೊಂದು ತರದಲ್ಲಿ ವ್ಯಾಖ್ಯಾನಿಸುವುದಾದರೆ ಇವರಿಗೆ ಬ್ರಾಹ್ಮಣರಿಗಿಂತ ತಾವೇನು ಕಮ್ಮಿಯಲ್ಲ ಎಂದು ಸಾಬೀತುಪಡಿಸುವುದು ಅತಿ ಮುಖ್ಯವಾಗಿತ್ತು. ಈ ಐತಿಹಾಸಿಕ ಕಾರಣಗಳಿಂದಾಗಿ ಲಿಂಗಾಯತರು ಎಂದರೆ ಎಲ್ಲರೂ ಒಂದೇ ಹಾಗೂ ಮೇಲು ವರ್ಗದವರು ಎಂಬ ನಂಬಿಕೆ ಎಲ್ಲೆಡೆ ಬೇರೂರಿದೆ; ಅದಕ್ಕಿಂತ ಮುಖ್ಯವಾಗಿ ಕೆಳ ಶ್ರೇಣಿಯ ಲಿಂಗಾಯತ ಗುಂಪುಗಳು “ಲಿಂಗಾಯತ” ಎಂಬ ಪರಿಕಲ್ಪನೆಯಿಂದ ಬಹಿಷ್ಕೃತಗೊಂಡಿವೆ. ಜೊತೆಯಲ್ಲಿ ಕಡೆಗಣಿಸಲ್ಪಟ್ಟ ಲಿಂಗಾಯತ ಗುಂಪುಗಳಿಂದ ಬಂದ ಬಹಳಷ್ಟು ಮಂದಿ ಇಷ್ಟಲಿಂಗ ಧಾರಿಸುವುದಿಲ್ಲ, ಸಂಪ್ರದಾಯಿಕವಾಗಿ ಕೀಳೆಂದು ಪರಿಗಣಿಸಲ್ಪಡುವ ಕಾಯಕ ವೃತ್ತಿಯವರಾಗಿರುತ್ತಾರೆ, ಹಾಗೂ ಮಾಂಸಹಾರವನ್ನು ತಮ್ಮ ಜೀವನಪದ್ದತಿಯ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡಿದ್ದಾರೆ. ಮೇಲ್ವರ್ಗದ ಲಿಂಗಾಯತರಿಂದ ಮೂದಲಿಸಲ್ಪಟ್ಟ ಇವರು ಲಿಂಗಾಯತ ಧರ್ಮದಿಂದ ವಿಮುಖರಾಗಿ ಕಾಲಕ್ರಮೇಣ ಹಿಂದು ಶೂದ್ರ ಅಥವಾ ದಲಿತ ವರ್ಗವಾಗಿ ಮರುವರ್ಗೀಕರ್ಣವಾದದ್ದು ಉಂಟು.

ಸ್ವಾತಂತ್ರ್ಯದ ನಂತರ ಅಂದಿನ ಮೈಸೂರು ರಾಜ್ಯ ಹಿಂದುಳಿದ ವರ್ಗಗಳಿಗೆ ಕೊಡುವ ಮೀಸಲಾತಿ ಮರೂಪರಿಶೀಲಿಸಲು ಆರ್. ನಾಗನಗೌಡ ಸಮಿತಿಯನ್ನು 1960ರಲ್ಲಿ ರಚಿಸಿತು. ಆ ಸಮಿತಿ (೧) ಸಾಂಪ್ರದಾಯಿಕವಾಗಿ ಒಂದು ಜಾತಿಯ ಸ್ಥಾನ-ಮಾನ, (೨) ಶೈಕ್ಷಣಿಕ ಪ್ರಗತಿ, ಹಾಗೂ (೩) ಆಡಳಿತದಲ್ಲಿ ಪ್ರಾತಿನಿಧ್ಯ — ಈ ಮೂರು ಮಾನದಂಡಗಳನ್ನು ಪರಿಗಣಿಸಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಿತು. ತದನಂತರ ದೇವರಾಜ ಅರಸ್ ಸರಕಾರದ ಅವಧಿಯಲ್ಲಿ  ಎಲ್.ಜಿ. ಹಾವನೂರ್ ಸಮಿತಿಯನ್ನು 1972ರಲ್ಲಿ ರಚಿಸಲಾಯಿತು. 1975ರಲ್ಲಿ ವರದಿಯನ್ನು ಸಲ್ಲಿಸಿದ ಈ ಸಮಿತಿ ಕೆಳ ವರ್ಗದ ಲಿಂಗಾಯತರನ್ನು ಬಿಟ್ಟು ಬೇರೆ ಎಲ್ಲಾ ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಿತು.[xi] ಇದರಿಂದ ರಾಜ್ಯದಾದ್ಯಂತ ನೆಡೆದ ಪ್ರತಿಭಟನೆಗಳ ಕಾರಣ ಮತ್ತೆ 1983ರಲ್ಲಿ ವೆಂಕಟಸ್ವಾಮಿರವರ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿ ಕೂಡ ವಿವಿಧ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದ ಲಿಂಗಾಯತ ಗುಂಪುಗಳನ್ನು ಬಿಟ್ಟು ಬೇರೆಲ್ಲ ಲಿಂಗಾಯತರು ಮುಂದುಳಿದ ವರ್ಗಗಳಿಗೆ ಸೇರಿದವರು ಎಂಬ ನಿಲುವನ್ನು ಅಂಗೀಕರಿಸಿತು. 1988ರಲ್ಲಿ ಸ್ಥಾಪಿಸಲ್ಪಟ್ಟ ಹಾಗೂ 1990ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಒ. ಚಿನ್ನಪ್ಪ ರೆಡ್ಡಿ ಆಯೋಗ ಕೂಡ ಇದೆ ನಿಲುವನ್ನು ಧೃಡಪಡಿಸಿತು. ನಂತರ ಬಂದ ರವಿವರ್ಮಾ ಕುಮಾರ್ ಆಯೋಗ ಕೂಡ ಲಿಂಗಾಯತರಿಗೆ ಸಂಬಂದಪಟ್ಟ ವರ್ಗೀಕರಣ ನೀತಿಯನ್ನು ಹಾಗೆಯೇ ಉಳಿಸಿದೆ.

2015ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿಗೆ ಆದೇಶ ಹೊರಡಿಸಿತು. ಅಂದಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜರವರು ಈ ಜವಾಬ್ದಾರಿ ವಹಿಸಿಕೊಂಡರು. ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಮೂರೂ ಸರ್ಕಾರಗಳು ಅದನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಲ್ಲ ಮೂಲಗಳ ಪ್ರಕಾರ ಈ ವರದಿ ಪ್ರಬಲ ಜಾತಿಗಳು ಶೈಕ್ಷಣಿಕವಾಗಿ ಮುಂದುವರಿದಿದ್ದು ಆಡಳಿತದಲ್ಲಿ ಕೂಡ ಅವುಗಳ ಪ್ರಾತಿನಿಧ್ಯ ಹೆಚ್ಚು ಎಂಬುದನ್ನು ತೋರಿಸುವುದಲ್ಲದೆ ಈ ಜಾತಿಗಳ ಜನಸಂಖ್ಯೆ ಊಹಿಸಿದ್ದಕ್ಕಿಂತ ಕಡಿಮೆ ಎಂಬುದನ್ನು ಕೂಡ ಸಾಬೀತು ಪಡಿಸುತ್ತದೆ. ಲಿಂಗಾಯತರನ್ನೇ ತೆಗೆದುಕೊಳ್ಳಿ. ಹಲವರ ಪ್ರಕಾರ ಕರ್ನಾಟಕದ ಜನಸಂಖೆಯ ಒಟ್ಟು 17% ಲಿಂಗಾಯತರು. ಆದರೆ ಈ ವರದಿಯ ಪ್ರಕಾರ ಅದು 17% ಅಲ್ಲ, 14% ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಮಾಹಿತಿ ಲಿಂಗಾಯತರ ಮೀಸಲಾತಿ ಬೇಡಿಕೆಯ ಮೇಲೆ ಪರಿಣಾಮ ಬೀರದೆ ಇರಲಾರದು.[xii]

 

ಪಂಚಮಸಾಲಿಗಳು ಹಾಗೂ 2A ಬೇಡಿಕೆ

 

1990ನೇ ದಶಕದಲ್ಲಿ ಭಾರತ ಕೈಗೊಂಡ ಆರ್ಥಿಕ ವ್ಯವಸ್ಥೆಯ ಉದಾರೀಕರಣದಿಂದ ಉಂಟಾದ ನಿರುದ್ಯೋಗ ಹಾಗೂ ಅಸಮಾನತೆಗಳು ಈ ಶತಮಾನದಲ್ಲಿ ಮತ್ತಷ್ಟೂ  ಉಲ್ಬಣಗೊಂಡಿವೆ. ಇದರ ಪರಿಣಾಮವಾಗಿ ಮೀಸಲಾತಿ ವ್ಯವಸ್ತೆಯ ಮೇಲೆ ಒತ್ತಡ ಕೂಡ ಹೆಚ್ಚಿದೆ. ಇದರ ಜೊತೆಯಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮೀಸಲಾತಿ ವ್ಯವಸ್ಥೆಯ ಮೇಲೆ ಸಮರ ಸಾರಿದೆ ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ದಲಿತರು ಹಾಗೂ ಶೂದ್ರರೂ ತಮ್ಮ ಜೀವನದಲ್ಲಿ ಏನಾದರೂ ಕೊಂಚ ಸುಧಾರಣೆ ಕಂಡಿದ್ದರೆ ಅದಕ್ಕೆ ಬಾಬಾಸಾಹೇಬರು ರೂಪಿಸಿದ ಮೀಸಲಾತಿ ನೀತಿ ಹಾಗೂ ಅದು ಕೊಟ್ಟ ಅವಕಾಶಗಳೆ ಕಾರಣ. ಆದರೆ ಇದೆ ವಿಷಯಕ್ಕಾಗಿ ಮೀಸಲಾತಿ ಸವರ್ಣೀಯರ ಆಕ್ರೋಶಕ್ಕೆ ಗುರಿಯಾಗಿದೆ. ಆದುದರಿಂದ ಈ ವ್ಯವಸ್ತೆಯನ್ನು ಶಿಥಿಲಗೊಳಿಸಲು ಬ್ರಾಹ್ಮಣ್ಯದ ಕಾಲಾಳುಗಳಾದ ಕೇಸರಿ ಪಡೆಗಳು ಹೂಡಿರುವ ಷಡ್ಯಂತ್ರಗಳು ಒಂದೇ ಎರಡೇ! ಈ ಎಲ್ಲದರ ಹಿನ್ನೆಲೆಯಲ್ಲಿ ನಾವು ಪಂಚಮಸಾಲಿಗಳು ೨A ಪ್ರವರ್ಗಕ್ಕೆ ಸೇರಲು ನೆಡೆಸುತ್ತಿರುವ ಚಳುವಳಿಯನ್ನು ವಿಶ್ಲೇಷಿಸಬೇಕು.

 

ಕರ್ನಾಟಕ ಮೀಸಲಾತಿ ಪಟ್ಟಿ

ವರ್ಗಗಳು ಮೀಸಲಾತಿ ಪ್ರಮಾಣ
ಪರಿಶಿಷ್ಟ ಜಾತಿಗಳು 15%
ಪರಿಶಿಷ್ಟ ಪಂಗಡಗಳು 3%
ಪ್ರವರ್ಗ 1 (95 ಸಮುದಾಯಗಳು) 4%
ಪ್ರವರ್ಗ 2A (102 ಸಮುದಾಯಗಳು) 15%
ಪ್ರವರ್ಗ 2B (ಮುಸಲ್ಮಾನರು) 4%
ಪ್ರವರ್ಗ 3A (ಒಕ್ಕಲಿಗರು ಹಾಗೂ 11 ಇತರೆ ಸಮುದಾಯಗಳು) 4%
ಪ್ರವರ್ಗ 3B (ಲಿಂಗಾಯತರು [ಹಿಂದುಳಿದ ಲಿಂಗಾಯತ ಗುಂಪುಗಳನ್ನು ಹೊರತು ಪಡಿಸಿ], ಜೈನರು ಹಾಗೂ ಕ್ರಿಶ್ಚಿಯನ ಸಮುದಾಯಗಳು) 5%
ಒಟ್ಟು ಮೀಸಲಾತಿ ಪ್ರಮಾಣ 50%

 

ಮೂಲತಃ ರೈತಾಪಿ ಕಾಯಕದವರಾದ ಪಂಚಮಸಾಲಿಗಳು ಲಿಂಗಾಯತರಲ್ಲಿ ಒಂದು ಪ್ರಬಲ ಪಂಗಡ. ಪಂಚಮಸಾಲಿಗಳ ಜನಸಂಖೆ 80 ಲಕ್ಷದಿಂದ 1 ಕೋಟಿ ಇರಬಹುದು ಎಂದು ಊಹಿಸಲಾಗಿದೆ[xiii] ಹಾಗೂ ಇವರ ಪ್ರಕಾರ ಲಿಂಗಾಯತರಲ್ಲಿ 70-8೦% ಈ ಸಮುದಾಯದವರೆ. [xiv] ಪ್ರಸ್ತುತ ಬೊಮ್ಮಾಯಿ ಸರ್ಕಾರ 2D ಹಾಗೂ 2C ಪ್ರವರ್ಗಗಳನ್ನು ಹುಟ್ಟುಹಾಕುವ ಮುಂಚೆ ಪಂಚಮಸಾಲಿಗಳನ್ನು ಸೇರಿ ಎಲ್ಲಾ ಲಿಂಗಾಯತರನ್ನು (ಕೆಳ ವರ್ಗದ ಲಿಂಗಾಯತ ಗುಂಪುಗಳನ್ನು ಹೊರತುಪಡಿಸಿ) 3B ಪ್ರವರ್ಗದಲ್ಲಿ ಸೇರಿಸಲಾಗಿತ್ತು. ಜೊತೆಯಲ್ಲಿ ಮೀಸಲಾತಿಗೆ ಸಂಬಂಧ ಪಟ್ಟಂತೆ ಲಿಂಗಯತರ ಮುಖ್ಯ ಬೇಡಿಕೆ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಎಲ್ಲ ಲಿಂಗಾಯತ ಗುಂಪುಗಳನ್ನು ಸೇರಿಸಬೇಕು ಎಂಬುದಾಗಿತ್ತು. [xv] ಈ ನಿಟ್ಟಿನಲ್ಲಿ ತಾವು ಮುಖ್ಯಮಂತ್ರಿಗಳಾಗಿದ್ದಾಗ ಬಿ.ಎಸ್. ಎಡೆಯುರಪ್ಪ ಪ್ರಯತ್ನ ಪಟ್ಟರೂ ಸೇರಿಸಲಾಗಲಿಲ್ಲ.[xvi]

ಪಂಚಮಸಾಲಿಗಳ ಹೋರಾಟದ ನಾಯಕತ್ವ ವಹಿಸಿರುವ ಶ್ರೀ ಬಸವಜಯ ಮೃತ್ಯುಂಜಯ ಬುದ್ದಿಗಳು[xvii] ತಮ್ಮ ಜನಾಂಗಕ್ಕೆ 3B ಪ್ರವರ್ಗದಿಂದ ಅಷ್ಟೊಂದು ಉಪಯೋಗವಾಗಿಲ್ಲ ಎಂದು ತಮ್ಮ ಅಸಮಾಧಾನ ತೊಡಿಕೊಂಡಿದ್ದಾರೆ. ಏಕೆಂದರೆ ತಮಗಿಂತಲೂ ಕಮ್ಮಿ ಜನಸಂಖ್ಯೆ ಇರುವ ಲಿಂಗಾಯತ ಗುಂಪುಗಳು 3B ಮೀಸಲಾತಿಯ ಬಹುತೇಕ ಸವಲತ್ತನ್ನು ತಮ್ಮದಾಗಿಸಿಕೊಂಡಿವೆ ಎಂಬುದು ಇವರ ಆರೋಪ. ಈ ಕಾರಣಕ್ಕೆ ಪಂಚಮಸಾಲಿಗಳನ್ನು 3B ಪ್ರವರ್ಗದಿಂದ 2A ಪ್ರವರ್ಗಕ್ಕೆ ವರ್ಗಾಯಿಸಬೇಕು ಎಂಬುದು ಬುದ್ದಿಗಳ ಹಾಗೂ ಸಮುದಾಯದ ಮುಖ್ಯ ಬೇಡಿಕೆ. ಸದ್ಯಕ್ಕೆ 2A ಪ್ರವರ್ಗದಲ್ಲಿ ತಳವರ್ಗದ ಕೆಲವು ಲಿಂಗಾಯತ ಗುಂಪುಗಳು ಸೇರಿ 102 ಹಿಂದುಳಿದ ಸಮುದಾಯಗಳನ್ನು ಸೇರಿಸಲಾಗಿದೆ ಹಾಗೂ ಈ ಪ್ರವರ್ಗಕ್ಕೆ ಅತ್ಯಂತ ಹೆಚ್ಚಿನ, ಅಂದರೆ 15%, ಮೀಸಲಾತಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಜೊತೆಯಲ್ಲಿ ಬುದ್ದಿಗಳು ಪಂಚಮಸಾಲಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮಾತ್ರ ಮೀಸಲಾತಿ ಕೇಳುತಿದ್ದೇವೆ ಹೊರತು ರಾಜಕೀಯ ಪ್ರತಿನಿಧ್ಯದಲ್ಲಿ ಮೀಸಲಾತಿ ಬೇಡ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಪಂಚಮಸಾಲಿ ಜನಾಂಗದವರೆ ಆದ ಹಾಗೂ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನೀರಾಣಿ ಮೀಸಲಾತಿಯ ಹೋರಾಟದ ಮುಂಚೂಣಿಯಲ್ಲಿದ್ದರೂ ಬೇರೆ ಮುಖ್ಯವಾಹಿನಿ ಪಕ್ಷಗಳು ತಮ್ಮ ಬೆಂಬಲವನ್ನು ಪಂಚಮಸಾಲಿಗಳ ಹೋರಾಟಕ್ಕೆ ಸೂಚಿಸಿವೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಪಂಚಮಸಾಲಿಗಳ ಮೀಸಲಾತಿ ಹೋರಾಟ ತನ್ನ ಪ್ರಸ್ತುತ ಹಂತ ತಲುಪುವ ಮುಂಚೆ ಮೃತ್ಯುಂಜಯ ಬುದ್ದಿಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ತಮ್ಮನ್ನು  ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ನಿಜ ಹೇಳಬೇಕು ಎಂದರೆ ಲಿಂಗಾಯತರು ಎಂಟು ಶತಮಾನಗಳಿಂದ ಹಿಂದು ಧರ್ಮದಿಂದ ಹೊರಬರಲು “ಹರ” ಸಾಹಸ ಮಾಡುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ವ್ಯವಸ್ಥಿತ ಹೋರಾಟ ಈ ಶತಮಾನದ ಎರಡನೇ ದಶಕದಲ್ಲಿ ಚುರುಕುಗೊಂಡಿತು. ಅಖಿಲ ಭಾರತ ವೀರಶೈವ ಮಹಾಸಭ 2013ರಲ್ಲಿ “ವೀರಶೈವ-ಲಿಂಗಾಯತ” ರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಿತು. [xviii] ಈ ಬೆಳವಣಿಗೆಯಿಂದ ಜಾಗೃತರಾದ ವಿರಕ್ತಮಠಗಳು ಹಾಗೂ ಪ್ರಗತಿಪರ ಲಿಂಗಾಯತರು ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದೇ ಆದರೆ ಆ ಧರ್ಮವನ್ನು ಕೇವಲ “ಲಿಂಗಾಯತ” ಎಂದು ಪರಿಗಣಿಸಬೇಕು, “ವೀರಶೈವ ಲಿಂಗಾಯತ” ಎಂದಲ್ಲ, ಎಂಬ ಬೇಡಿಕೆ ಮುಂದಿಟ್ಟರು. ಇದಕ್ಕೆ ಮುಖ್ಯ ಕಾರಣ “ವೀರಶೈವ” ಲಿಂಗಾಯತ ಸಮುದಾಯದ ಒಂದು ಗುಂಪು ಮಾತ್ರ. ಬಹಳಷ್ಟು ವಾದ ವಿವಾದಗಳ ನಂತರ ಅಂದಿನ ಸಿದ್ದರಾಮಯ್ಯ ಸರಕಾರ ನಾಗಮೋಹನ ದಾಸ ಸಮಿತಿಯ ಶಿಫಾರಸನ್ನು ಅಂಗೀಕರಿಸಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿತು. ಜೊತೆಯಲ್ಲಿ ಈ ಧರ್ಮವನ್ನು “ಲಿಂಗಾಯತ” ಎಂದು ದಾಖಲಿಸಬೇಕು ಎಂದು ಉಲ್ಲೇಖಿಸಿತು.[xix]

(ಚಿತ್ರ ಕೃಪೆ: Deccan Herald ದಿನ ಪತ್ರಿಕೆ)

 

ಲಿಂಗಾಯತ ಪ್ರತ್ಯೇಕ ಧರ್ಮದ ಚಳುವಳಿ ಚುರುಕುಗೊಂಡ ಹಿನ್ನಲೆಯಲ್ಲಿ ಬಸವಪರ ಲಿಂಗಾಯತರು 2018ರ ಜನವರಿ ತಿಂಗಳಲ್ಲಿ “ಜಾಗತಿಕ ಲಿಂಗಾಯತ ಮಹಾಸಭ” (JLM) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲ ಉದ್ದೇಶ ಬಸವ ತತ್ವವನ್ನು ಪ್ರತಿಪಾದಿಸುವುದು ಹಾಗೂ ಬಸವಪರ ಲಿಂಗಾಯತರನ್ನು ಸಂಘಟಿಸುವುದು. ಸಂಸ್ಥೆಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿಯವರನ್ನು ಹಾಗೂ ಕಾರ್ಯದರ್ಶಿಯಾಗಿ ನಿವೃತ್ತ IAS ಅಧಿಕಾರಿ Dr. S.M. ಜಾಮದಾರ್ ರವರನ್ನು ಆಯ್ಕೆಮಾಡಲಾಯಿತು. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಚಿತ್ರವನ್ನು ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆ ಪ್ರಕಟಿಸಿತು. ಈ ಚಿತ್ರದಲ್ಲಿ ಹೊರಹಟ್ಟಿ, M.B. ಪಾಟೀಲ್, ಹಾಗೂ ಇತರ ಗಣ್ಯರ ಜೊತೆ ಮೃತ್ಯುಂಜಯ ಬುದ್ದಿಗಳು ಮುಂಚೂಣಿಯಲ್ಲಿರುವುದನ್ನು ನೀವು ಗಮನಿಸಬಹುದು.[xx]

ಬಹಳಷ್ಟು JLM ಸಭೆ-ಸಮಾರಂಭ, ಪತ್ರಿಕಾ ಗೋಷ್ಟಿ, ಪ್ರತಿಭಟನೆ ಹಾಗೂ ಇತ್ಯಾದಿ ಕಾರ್ಯಕ್ರಮಗಳಲ್ಲಿ ಬುದ್ದಿಗಳು ಪ್ರಮುಖವಾಗಿ ಕಾಣಿಸಿಕೊಳ್ಳತೊಡಗಿದರು. ಜೊತೆಯಲ್ಲಿ ಸುದ್ದಿ ವಾಹಿನಿಗಳಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನೆಡೆದ ಚರ್ಚೆಗಳಲ್ಲಿ ಭಾಗವಹಸಿದರು. ಇವರ ಉಪಸ್ಥಿತಿಯಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಹೊಸ ಶಕ್ತಿಯ ಸಿಂಚನವಾಯಿತು. ಅಷ್ಟೇ ಅಲ್ಲದೆ ಪಂಚಮಸಾಲಿಯಂತಹ ದೊಡ್ಡ ಹಾಗೂ ಪ್ರಭಾವಶಾಲಿ ಸಮುದಾಯದ ಬೆಂಬಲವನ್ನು ಕೂಡ ಈ ಹೋರಾಟಕ್ಕೆ ದೊರಕಿಸಿಕೊಟ್ಟಿತು.

 

ಕೇಸರಿ ಷಡ್ಯಂತ್ರ

 

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕೇಸರಿ ಪಡೆಗಳಿಗೆ ನುಂಗಲಾರದ ತುತ್ತಾಗಿದೆ ಎಂದರೆ ಅತಿಶಯೋಕ್ತಿ ಏನೂ ಇಲ್ಲ. ಲಿಂಗಾಯತರು ಶತಶತಮಾನಗಳಿಂದ ಬ್ರಾಹ್ಮಣ್ಯದ ವಿರುದ್ಧ ಎಷ್ಟೋ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಕೊಡುಗೆ ಸಣ್ಣದೇನಲ್ಲ. ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಲಿಂಗಾಯತರಂತಹ ದೊಡ್ಡ ಹಾಗೂ ಪ್ರಬಲ ಜನಾಂಗ ಹಿಂದು ಧರ್ಮವನ್ನು ತ್ಯಜಿಸಿ ಬಸವತತ್ವವನ್ನು ಆಮೂಲಾಗ್ರವಾಗಿ ಮೈಗೂಡಿಸಿಕೊಂಡರೆ ಕರ್ನಾಟಕದಲ್ಲಿ ಕೇಸರಿ ಪಡೆಗಳ ಆಟ ಮುಗಿದಂತೆಯೇ! ಈ ಕಾರಣಗಳಿಗೆ ಪ್ರತ್ಯೇಕ ಧರ್ಮದ ಹೋರಾಟವನ್ನು ಹತ್ತಿಕ್ಕುವುದು ಕೇಸರಿ ಪಡೆಗಳಿಗೆ ಅತಿಮುಖ್ಯವಾಯಿತು.

ಈ ನಿಟ್ಟಿನಲ್ಲಿ ನನ್ನ ವಾದವೇನೆಂದರೆ ಪ್ರತ್ಯೇಕ ಧರ್ಮದ ಹೋರಾಟವನ್ನು ಹತಿಕ್ಕಲು ಕೇಸರಿ ಪಡೆಗಳಿಗೆ ಸಿಕ್ಕ ದೊಡ್ಡ ಅಸ್ತ್ರವೇ ಈ ಪಂಚಮಸಾಲಿ ಮೀಸಲಾತಿ ಹೋರಾಟ. ಇಲ್ಲಿ ನಾನು ಪಂಚಮಸಾಲಿಗಳ ಮೀಸಲಾತಿ ಬೇಡಿಕೆ ಕೇಸರಿ ಪಡೆಗಳ ಸೃಷ್ಟಿ ಎಂದು ಹೇಳುತ್ತಿಲ್ಲ. ನಾನು ಮುಂಚೆಯೇ ಸೂಚಿಸಿದಂತೆ ಹೆಚ್ಚುತ್ತಿರುವ ಆರ್ಥಿಕ ಅಸ್ಥಿರತೆ ಹಾಗೂ ನಿರುದ್ಯೋಗ ಎಲ್ಲ ಗುಂಪುಗಳ ಮೇಲೆ ಪ್ರಭಾವ ಬೀರಿವೆ. ಇದಕ್ಕೆ ಪಂಚಮಸಾಲಿಗಳು ಹೊರತಲ್ಲ. ಆದರೆ ಗಮನಿಸಬೇಕಾದ ವಿಷಯವೆಂದರೆ ಕೇಸರಿ ಪಡೆಗಳು ಜನರಲ್ಲಿ ಬೆಳೆಯುತ್ತಿರುವ ಆತಂಕವನ್ನು ಹೇಗೆ ತಮ್ಮ ರಾಜಕೀಯ ಲಾಭಕ್ಕಾಗಿ  ಉಪಯೋಗಿಸಿಕೊಳ್ಳುತ್ತವೆ ಎಂಬುದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಪಂಚಮಸಾಲಿಗಳ ಹೋರಾಟವನ್ನು ಕೇಸರಿ ಪಡೆಗಳು ಮೀಸಲಾತಿ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಅಷ್ಟೇ ಅಲ್ಲದೆ ಪ್ರತ್ಯೇಕ ಧರ್ಮದ ಆಶಯಗಳನ್ನು ಹತ್ತಿಕ್ಕಲು ಬಳಸಿಕೊಂಡಿವೆ.

ಜಾಮದಾರರವರು 2020ರಲ್ಲೇ ಪ್ರತ್ಯೇಕ ಧರ್ಮದ ಹೋರಾಟವನ್ನು ಹತಿಕ್ಕಲು ಸರ್ಕಾರ ಲಿಂಗಾಯತರನ್ನು ಓಲೈಸುವ ಷಡ್ಯಂತ್ರ ರಚಿಸುತ್ತಿದೆ ಎಂಬ ಎಚ್ಚರಿಕೆ ನೀಡಿದ್ದರು. “ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ಪ್ರಾಧಿಕಾರ” ಸ್ಥಾಪಿಸಿ  ರೂ.500 ಕೋಟಿ ಅನುಧಾನ ಮಂಜೂರು ಮಾಡಿದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು[xxi] ಪಂಚಮಸಾಲಿಗಳಿಗೆ 2A ಪ್ರವರ್ಗದಲ್ಲಿ ಸೇರಿಸುವ ಭರವಸೆಯನ್ನು ಕೂಡ ವ್ಯಕ್ತಪಡಿಸಿದರು. [xxii]  ಈ ನಿಟ್ಟಿನಲ್ಲಿ ಅಧ್ಯಯನ ನೆಡೆಸಿ ಸರಕಾರಕ್ಕೆ ಶಿಫಾರಸ್ಸನ್ನು ಸಲ್ಲಿಸಲು ಉಪಲೋಕಾಯುಕ್ತ ಶುಭಾಷ ಆದಿ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನು ಕೂಡ ರಚಿಸಿದರು.[xxiii] ಈ ಎಲ್ಲ ಬೆಳವಣಿಗೆಗಳು ಪಂಚಮಸಾಲಿಗಳಲ್ಲಿ ಹೊಸ ಭರವಸೆಗಳನ್ನು ಮೂಡಿಸಿದವು.

ಇದೆಲ್ಲದರಿಂದ ಪ್ರೇರಿತರಾದ ಮೃತ್ಯುಂಜಯ ಬುದ್ದಿಗಳು ಜನವರಿ 14, 2021, ರಂದು ಸಂಕ್ರಾಂತಿಯ ದಿನ ಕೂಡಲಸಂಗಮದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಹು ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಬೇರೆ ಯಾರು ಅಲ್ಲ, ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಅವರದೇ ಪಕ್ಷದ ಶಾಸಕ, ಬಸನಗೌಡ ಯತ್ನಾಳ್. [xxiv] ತದನಂತರ ಬುದ್ದಿಗಳು ಸರ್ಕಾರದ ಮೇಲೆ ತಮ್ಮ ಬೇಡಿಕೆ ಈಡೆರಿಸುವಂತೆ ಒತ್ತಡ ಹೇರಲು ಬೆಂಗಳೂರಿನತ್ತ ಪಾದಯಾತ್ರೆ ಹೊರಟೆ ಬಿಟ್ಟರು! [xxv] ಆಗ ಕೋವಿಡ್ ಹರಡುತ್ತಿದ್ದ ಕಾರಣ ಉದ್ಘಾಟನಾ ಸಮಾರಂಭವಾಗಲಿ, ಪಾದಯಾತ್ರೆಯಾಗಲಿ ಸರ್ಕಾರದ ಅನುಮತಿ ಇಲ್ಲದೆ ನೆಡೆಯಲು ಸಾಧ್ಯವಿರಲಿಲ್ಲ. ಈ ಎಲ್ಲ ಕಾರಣಕ್ಕೆ ಅಂದಿನ ಬಿಜೆಪಿ ಸರ್ಕಾರವೇ ಪಂಚಮಸಾಲಿ ಹೋರಾಟವನ್ನು ಪರೋಕ್ಷವಾಗಿ ಬೆಳೆಸಿತು ಎಂದು ನಾವು ಹೇಳಿದರೆ ತಪ್ಪೇನೂ ಇಲ್ಲ.

ಇವೆಲ್ಲದರೆ ಜೊತೆ ನಾವು ಬೇರೆ ಹಲವು ಬೆಳವಣಿಗೆಗಳ ಕಡೆಯು ಗಮನ ಹರಿಸಬೇಕಿದೆ. ಕೇಶವ ಕೃಪಾದ ಆಶೀರ್ವಾದವಿಲ್ಲದೆ ಬಿಜೆಪಿಯಲ್ಲಿ ಒಂದು ಹುಲ್ಲು ಗರಿಕೆಯೂ ಅಲ್ಲಾಡುವುದಿಲ್ಲ. ಈ ಕಾರಣದಿಂದ ಕೆಲವು ಪ್ರಜ್ಞಾವಂತ  ಲಿಂಗಾಯತ ವಿಶ್ಲೇಷಕರು ಬಣಜಿಗ ಸಮುದಾಯದವರಾದ ಯಡಿಯೂರಪ್ಪನವರ ವಿರುದ್ಧ ಬೇಸರಗೊಂಡಿದ್ದ RSS ಅವರನ್ನು ಮುಜುಗರಗೊಳಿಸಲು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಬಳಸಿಕೊಂಡಿತು ಎಂದು ಉಲ್ಲೇಖಿಸಿದ್ದಾರೆ.[xxvi] ಜೊತೆಯಲ್ಲಿ ಪಂಚಮಸಾಲಿಗಳ ಇನ್ನೊಂದು ಮಠ ಹರಿಹರದಲ್ಲಿ ಅಷ್ಟರಲ್ಲಾಗಲೇ ಸ್ಥಾಪನೆಯಾಗಿತ್ತು. ಆ ಮಠದ ಶ್ರೀ ವಚನಾನಂದ ಸ್ವಾಮೀಜಿ ಪಂಚಮಸಾಲಿ ಸಮಾಜದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಿ ಬೆಳೆಯತೊಡಗಿದ್ದರು. ಇದು ಮೃತ್ಯುಂಜಯ ಬುದ್ದಿಗಳನ್ನು ಬಲು ಗೋಜಿಗೆ ಸಿಲುಕಿಸಿರಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ತಮ್ಮನ್ನು ಅತಿಯಾಗಿ ತೊಡಗಿಸಿಕೊಂಡರೆ ಪಂಚಮಸಾಲಿ ಸಮಾಜವನ್ನು ವಚನಾನಂದರಿಗೆ ಬಿಟ್ಟು ಕೊಟ್ಟಂತೆ ಎಂದೆನಿಸಿರಬೇಕು. ಈ ಕಾರಣಕ್ಕೆ ಬುದ್ದಿಗಳು ಪ್ರತ್ಯೇಕ ಧರ್ಮದ ಹೋರಾಟವನ್ನು ಬದಿಗಿರಿಸಿ ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಕಾರಣಗಳು ಏನೇ ಇರಲಿ, ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣೆಯಲ್ಲಿದ್ದ ಮೃತ್ಯುಂಜಯ ಬುದ್ದಿಗಳು ಈಗ ಮೀಸಲಾತಿ ಹೋರಾಟದಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಇವರಷ್ಟೇ ಅಲ್ಲ, ಇವರು ಪ್ರತಿನಿಧಿಸುವ ಪಂಚಮಸಾಲಿ ಸಮಾಜ ಕೂಡ 2A ಸೇರುವ ಪಟ್ಟು ಹಿಡಿದು ನಿಂತಿದೆ. ಪ್ರತ್ಯೇಕ ಧರ್ಮದ ಹೋರಾಟದ ಮೇಲೆ ಇವೆಲ್ಲದರ ಪರಿಣಾಮ ಊಹಿಸುವುಸುದು ಕಷ್ಟದ ಕೆಲಸವಲ್ಲ. ಕೆಲವು ದಿನಗಳ ಹಿಂದೆ ಟಿವಿ ಕಾರ್ಯಕ್ರಮ ಒಂದರಲ್ಲಿ ಮೃತ್ಯುಂಜಯ ಬುದ್ದಿಗಳು  ಕಾಣಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ತಮಗೇನು ವಿಷಾದವಿಲ್ಲವೇ ಎಂಬ ಪ್ರಶ್ನೆಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ಮಾತ್ರಕ್ಕೆ ಲಿಂಗಾಯತರು ಹಿಂದುಗಳಲ್ಲ ಎಂದೇನಿಲ್ಲ ಎಂದು ಬುದ್ದಿಗಳು ಸೂಚಿಸಿದರು. “ಹಿಂದು ಎಂದರೆ ಧರ್ಮವಲ್ಲ, ಅದೊಂದು ಜೀವನ ಪದ್ದತಿ” [xxvii] ಎಂದು ಬುದ್ದಿಗಳು ಆಡಿದ ಮಾತು ನನ್ನನ್ನು ಚಕಿತಗೊಳಿಸಿತು. ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣೆಯಲ್ಲಿದ್ದ ಇವರಲ್ಲಿ ಇಂತಹ ಬದಲಾವಣೆ ಮೂಡಲು ಕಾರಣವೇನು ಎಂಬುದನ್ನು ನಾನು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ ಎಂದುಕೊಂಡಿದ್ದೇನೆ.

 

ಕೊನೆಯದಾಗಿ…

 

ಒಟ್ಟಾಗಿ ಹೇಳಬೇಕೆಂದರೆ ಕೇಸರಿ ಪಡೆಗಳು ರಚಿಸಿರುವ ಷಡ್ಯಂತ್ರ ಮೀಸಲಾತಿಯ ಮೇಲಿನ ದಾಳಿಗಳನ್ನು ಬರುವ ದಿನಗಳಲ್ಲಿ ಇನ್ನಷ್ಟು ತೀಕ್ಷ್ಣ ಗೊಳಿಸಲಿವೆ. ಇದೆ ಈ ಲೇಖನದಲ್ಲಿ ನನ್ನ ವಾದ ಹಾಗೂ ನಾನು ವಿಶ್ಲೇಶಿಸಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಇದಕ್ಕೆ ಒಂದು ನಿದರ್ಶನ. ಜೊತೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮೇಲೆ ಇದರ ಪರಿಣಾಮವನ್ನು ನಾವು ಕಡೆಗಣಿಸುವಂತಿಲ್ಲ. ಪಂಚಮಸಾಲಿಗಳು ತಮಗೆ ಅಸ್ಮಿತೆಯನ್ನು ಮತ್ತು ಆತ್ಮ ಗೌರವವನ್ನು ತುಂಬುವ ಪ್ರತ್ಯೇಕ ಧರ್ಮದ ಹೋರಾಟವನ್ನು ಬಿಟ್ಟು ಮೀಸಲಾತಿ ಬೆನ್ನತ್ತಿರುವುದು ವಿಪರ್ಯಾಸವೆ ಸರಿ. ನಾಳೆ ಸರ್ಕಾರ ಇವರ ಬೇಡಿಕೆಗೆ ಮಣಿದು ಪಂಚಮಸಾಲಿಗಳನ್ನು 2Aಗೆ ಸೇರಿಸಿದರೆ ಅಲ್ಲಿರುವ ನಮ್ಮಂತಹ ಬೇರೆ ಸಮುದಾಯಗಳು ಸುಮ್ಮನಿರುವುದಿಲ್ಲ. ಹಾಗೆ ಸುಮ್ಮನಿದ್ದರೂ ಎಲ್ಲೆಡೆ ಹೆಚ್ಚುತ್ತಿರುವ ಖಾಸಗೀಕರಣ  ಮೀಸಲಾತಿ ವ್ಯವಸ್ಥೆಯನ್ನೇ ಅರ್ಥಹೀನವನ್ನಾಗಿಸುತ್ತಿದೆ. ಎಲ್ಲವುದಕ್ಕಿಂತ ಮುಖ್ಯವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಮುಖಾಂತರ ಜಾತಿರಹಿತ ಸಮಾಜ ಕಟ್ಟುವ ಬಸವ ಕನಸು ಸದ್ಯಕ್ಕೆ ಕನಸಾಗೆ ಉಳಿಯಲಿದೆ.

 

(ಈ ಲೇಖನವನ್ನು ಪರಿಶೀಲಿಸಿದ ಗೆಳಯ ಹಾಗೂ ಪ್ರಗತಿಪರ ಚಿಂತಕ ಪ್ರಸಾದರವರಿಗೆ ನನ್ನ ಆತ್ಮೀಯ ನನ್ನಿಗಳು)

​ರೆಡಾಂಟ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಪ್ರಸ್ತುತ ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ. ಇವರ ಅಧ್ಯಯನದ ವಿಷಯ ಕನ್ನಡಪರ ಹೋರಾಟ, ಜಾತೀಯತೆ, ಲಿಂಗಾಯತ ಹಾಗೂ ದಲಿತ ಸಮುದಾಯಗಳ ಮಧ್ಯೆ ಇರುವ ಐತಿಹಾಸಿಕ ಸಂಬಂಧಗಳನ್ನು ಒಳಗೊಂಡಿದೆ . ಬಸವಣ್ಣ ಹಾಗೂ ಬಾಬಾಸಾಹೇಬರನ್ನು ತಡವಾಗಿ ಕಂಡುಕೊಂಡರೂ ಅವರ ಚಿಂತನೆಗಳು ಇವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದೆ.

………………………………………

[i] ಫೆಬ್ರುವರಿ 2 ನನ್ನ ಲಿಂಗೈಕ್ಯ ತಾಯಿಯ ಹುಟ್ಟು ಹಬ್ಬ. ಕನ್ನಡ ಶಾಲಾ ಶಿಕ್ಷಕಿಯಾಗಿದ್ದ ಅವರ ನೆನಪಿನಲ್ಲಿ ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.

[ii] https://thesouthfirst.com/karnataka/reservation-shuffle-panchamasali-sect-opposes-new-2d-category-announced-for-it/

[iii] https://www.thenewsminute.com/article/dalit-convention-bengaluru-pushes-internal-reservation-scsts-170681

[iv] ಭಾರತ ಸಂವಿಧಾನದ 103ನೇ ತಿದ್ದುಪಡಿಯ ಪ್ರಕಾರ ಆರ್ಥಿಕವಾಗಿ ಹಿಂದುಳಿದ ಮೇಲಜಾತಿಗಳಿಗೆ (EWS) ಕೊಡುವ 10% ಮೀಸಲಾತಿಯನ್ನು ಈಗಾಗಲೇ ಬೇರೆ ಪ್ರವರ್ಗಗಳಲ್ಲಿ ಸೇರ್ಪಡೆ ಗೊಂಡಿರುವ ಜಾತಿಗಳಿಗೆ ವರ್ಗಾಯಿಸುವಂತಿಲ್ಲ. ಅದುದ್ದರಿಂದ ಬಿಜೆಪಿ 2D ಹಾಗೂ 2C ಪ್ರವರ್ಗಗಳನ್ನು ಸ್ತಾಪಿಸಿ EWS ಮೀಸಲಾತಿಯ ಸ್ವಲ್ಪ ಮೊತ್ತವನ್ನು ಈ ಪ್ರವರ್ಗಗಳಿಗೆ ವರ್ಗಾಯಿಸುವುದಾಗಿ ನೀಡಿರುವ ಆಶ್ವಾಸನೆ ದಿಕ್ಕು ತಪ್ಪಿಸುವಂತದ್ದು.

[v] https://www.deccanherald.com/state/top-karnataka-stories/ews-quota-to-vokkaligas-lingayats-brahmin-body-opposes-govt-plan-1178276.html

[vi] S.M. Jaamdar (2021). Mysore Veerashaiva agitation of 1890s and its long term repercussions on the Lingayat community. Jagathika Lingayat Mahasabha.

[vii] William McCormack (1963). Lingayats as a sect. The Journal of the Royal Anthropological Institute of Great Britain and Ireland93(1), 59-71.

[viii] S.M. Jaamdar (2021).

[ix] Vijay Boratti (2022). Lingayat assertions of identity in colonial Karnataka: Caste, census and politics of representation. South Asia Research42(3), 398-413.

[x] ಈ ವರದಿಯ ಪ್ರತಿಯನ್ನು ಇಲ್ಲಿ ನೋಡಬಹುದು: https://www.roundtableindia.co.in/miller-committee-report-1919/

[xi] P. Radhakrishnan. Karnataka backward classes. Economic and Political Weekly, 1749-1754.

[xii] https://www.thenewsminute.com/article/why-karnataka-s-caste-census-report-still-secret-inside-story-154388

[xiii] https://theprint.in/politics/who-are-panchamasali-lingayats-why-theyre-so-important-in-karnataka-politics/1278958/

[xiv] https://www.youtube.com/watch?v=42yPrUojQ7c

[xv] ಸದ್ಯಕ್ಕೆ ಕೇಂದ್ರದ OBC ಪಟ್ಟಿಯಲ್ಲಿ ನನ್ನ ಸಮುದಾಯವನ್ನು ಒಟ್ಟುಗೂಡಿ 30 ಹಿಂದುಳಿದ ಲಿಂಗಾಯತ ಗುಂಪುಗಳನ್ನು ಸೇರಿಸಲಾಗಿದೆ. ಪಂಚಮಸಾಲಿಗಳಾಗಲಿ ಬೇರೆ ಮುಂದುವರಿದ ಲಿಂಗಾಯತ ಗುಂಪುಗಳಾಗಲಿ ಈ ಪಟ್ಟಿಯಲ್ಲಿಲ್ಲ.

[xvi] https://www.deccanherald.com/state/top-karnataka-stories/karnataka-cm-b-s-yediyurappas-master-plan-central-obc-status-for-veerashaiva-lingayats-920302.html

[xvii] ಲಿಂಗಾಯತರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ಮಠಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕೇವಲ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸದೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಹಾಗೂ ಇತರೆ ವಿಷಯಗಳಲ್ಲು ಮಠಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಪ್ರಖ್ಯಾತ ಇತಿಹಾಸಕಾರರಾದ ಜಾನಕಿ ನಾಯರ್ ಪ್ರಕಾರ ಕನ್ನಡ ಆಡುಭಾಷೆಯಲ್ಲಿ ಸಾಮಾನ್ಯವಾಗಿ ಬಳಸುವ “ಮನೆ-ಮಠ” ಎಂಬ ನಾಣ್ಣುಡಿ ಮಠಗಳು ವಹಿಸಿದ್ದ ಮುಖ್ಯವಾದ ಪಾತ್ರವನ್ನು ತೋರಿಸುತ್ತದೆ. https://thefederal.com/opinion/lingayat-mathas-agents-of-change-or-alternative-power-centres/

[xviii] https://timesofindia.indiatimes.com/city/bengaluru/now-memo-exposes-bsys-doublespeak-on-lingayats/articleshow/59816812.cms

[xix] ಇಂದಿಗೂ ಕೂಡ ರಾಜಕೀಯ ವಿಶ್ಲೇಷಕರು 2018ರಲ್ಲಿ ನೆಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸೋಲಲು ಇದೆ ಕಾರಣ ಎಂದು ಪ್ರತಿಪಾದಿಸುತ್ತಾರೆ. ಆದರೆ ನನ್ನ ಪ್ರಕಾರ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ರಾಜಕೀಯವಾಗಿ ಅಲ್ಲದಿದ್ದರೂ ನೈತಿಕವಾಗಿ ಒಪ್ಪುವಂತದ್ದು ಹಾಗೂ ನ್ಯಾಯಸಮ್ಮತವಾದದ್ದು. ಕಾರಣವೇನೆಂದರೆ ವೀರಶೈವರು ತಮ್ಮನ್ನು ಒಂದು ಹಿಂದು ಶೈವ ಪಂಥವೆಂದು ಪರಿಗಣಿಸುವುದಲ್ಲದೆ ವೇದ ಆಗಮಗಳನ್ನು ಅನುಸರಿಸುತ್ತಾರೆ. ಜೊತೆಯಲ್ಲಿ ಅವರ ಪ್ರಕಾರ ಬಸವಣ್ಣ ಲಿಂಗಾಯತ ಧರ್ಮದ ಅಥವಾ ಯಾವುದೇ ಧರ್ಮದ ಸಂಸ್ಥಾಪಕನಲ್ಲ, ಕೇವಲ ಒಬ್ಬ ಧರ್ಮ ಸುಧಾರಕ ಮಾತ್ರ. ಇಂತಹ ನಂಬಿಕೆಗಳನ್ನು ಹೊಂದಿರುವರು ಪ್ರತ್ಯೇಕ ಧರ್ಮದ ಸ್ಥಾನಮಾನ ಕೇಳಲು ಹೇಗೆ ಸಾಧ್ಯ?

[xx] https://www.deccanherald.com/content/655571/jagathika-lingayat-mahasabha-launched-horatti.html

[xxi] https://www.indiatoday.in/india/story/karnataka-allots-rs-500-crore-to-veerashaiva-lingayat-board-1743658-2020-11-24

[xxii] https://www.basavamarga.com/s-m-jamdar-paper-state-ment/

[xxiii] https://www.deccanherald.com/state/justice-adi-panel-starts-work-on-examining-reservation-demands-1025226.html

[xxiv] https://www.basavamarga.com/satyampet-91/

[xxv] https://www.youtube.com/watch?v=ip7ISrlbkIE

[xxvi] https://www.basavamarga.com/satyampet-91/

[xxvii] https://www.youtube.com/watch?v=P6skTMNnhQ4