ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ

ಕೂಡ್ಲಿ ಹತ್ಯಾಕಾಂಡ- ಕನ್ನಡಿಗರ ಮೇಲಿನ ಪೇಶ್ವೆ ಸಾಮ್ರಾಜ್ಯದ ದೌರ್ಜನ್ಯ

ಸಂಶೋಧನೆ ಮತ್ತು ಬರಹಗಾರ: ಅಮೀನ್ ಅಹ್ಮದ್ ತುಮಕೂರು

ಪರಿಚಯ
ಮೂರನೆಯ ಆಂಗ್ಲೋ ಮೈಸೂರು ಯುದ್ಧವು (ಕ್ರಿ.ಶ. ೧೭೯೦-೯೨) ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿ ಪಂತ್ ಫಡ್ಕೆ ನೇತ್ರತ್ವದ ಮರಾಠಾ ಸೈನ್ಯವು ಮೈಸೂರು ಸಾಮ್ರಾಜ್ಯದ ಬಹುತೇಕ ನೆಲೆಗಳು ಮತ್ತು ಕೃಷಿಭೂಮಿಗಳಾದ್ಯಂತ ಅದು ಸಂಚರಿಸಿ ಕೊಳ್ಳೆಹೊಡೆಯುವುದನ್ನು ವೀಕ್ಷಿಸಿತು. ಪೇಶ್ವೆ ಸೈನ್ಯ ಮೇ ೧೭೯೦ ರಿಂದ ೧೭೯೨ ರ ಜೂನ್ ವರೆಗೆ ಕ್ಯಾಪ್ಟನ್ ಲಿಟಲ್ ನೇತೃತ್ವದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಬಾಂಬೆ ತುಕಡಿಯ ಜೊತೆಗೆ ಕಾರ್ಯಪ್ರವೃತ್ತರಾಗಿದ್ದರು. ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿ ಪಂತ್ ಫಡ್ಕೆ ಪ್ರತಿಯೊಬ್ಬರೂ ಸುಮಾರು ೧೨,೦೦೦ ಸೈನಿಕರನ್ನು ಹೊಂದಿದ್ದರು (೧).

ಸಮಕಾಲೀನ ಬರಹಗಾರರ ಪ್ರಕಾರ ಸಾಮಾನ್ಯ ಕನ್ನಡಿಗರು ಬಹಳಷ್ಟು ಯಾತನೆಗೀಡಾಗುತ್ತಿದ್ದರೆ. ಅವರಿಂದ, ಶೂದ್ರರು ಎಂದು ಕರೆಯಲ್ಪಡುವ ಬ್ರಾಹ್ಮಣೇತರರು ಅತ್ಯಂತ ಬರ್ಬರ ಯಾತನೆಗೀಡಾಗುತ್ತಿದ್ದರೆಂದು ಈಸ್ಟ್ ಇಂಡಿಯಾ ಕಂಪನಿ ನಿಯೋಜಿಸಿದ್ದ ಒಬ್ಬ ಪ್ರವಾಸಿಗ, ಬರಹಗಾರ ಮತ್ತು ವೈದ್ಯನಾಗಿದ್ದ ಫ್ರಾನ್ಸಿಸ್ ಬುಕಾನನ್ ಹೇಳುತ್ತಾನೆ. ಇದಕ್ಕಿದ್ದ ಒಂದು ಕಾರಣವೆಂದರೆ, ‘ವರ್ಣ’ ಅಥವಾ ಜಾತಿ ವ್ಯವಸ್ಥೆಯ ಆಧಾರದ ಮೇಲೆ ವಸತಿ ವಿನ್ಯಾಸಗಳನ್ನು ಬೇರ್ಪಡಿಸಿದ್ದುದು. ಇದರಲ್ಲಿ ಬ್ರಾಹ್ಮಣರು ಯಾವುದೇ ಸಾಮಾನ್ಯ ವಸಾಹತಿನ ಅತ್ಯಂತ ಭದ್ರವಾದ ಭಾಗದಲ್ಲಿ ಅಥವಾ ಕೋಟೆಗಳೊಳಗೇ ವಾಸಿಸುತ್ತಿದ್ದರು (೨). ನಿಕಟವಾಗಿ ನೋಡಿದರೆ ಪೇಶ್ವೆ ಸೈನ್ಯದಿಂದ ಬ್ರಾಹ್ಮಣೇತರರು ಉದ್ದೇಶಪೂರ್ವಕವಾಗಿ ಗುರಿಯಾಗುತ್ತಿದ್ದದ್ದು ಬಹಿರಂಗವಾಗುತ್ತದೆ.

ಮೂಲ: ‘ಎ ಹಿಸ್ಟರಿ ಒಫ್  ದಿ ಮರಾಠಸ್’, ಸಂಪುಟ ೩, ೧೮೨೬

 

ಪೇಶ್ವೆ ಸೇನೆಯ ಕ್ರೂರತೆಯಿಂದ ಬಳಲುತ್ತಿದ್ದ ಕರ್ನಾಟಕದ ಮತ್ತೊಂದು ಗ್ರಾಮ


ಕೂಡ್ಲಿ  ಕರ್ನಾಟಕದ ಶಿವಮೊಗ್ಗ ಪಟ್ಟಣದಿಂದ ಸುಮಾರು ೧೬ ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಹಿಂದೂ ದೇವಾಲಯಗಳಿಗೆ ಹೆಸರುವಾಸಿಯಾದ ಇದು ಮಲೆನಾಡಿನ ಉಷ್ಣವಲಯದ ಕಾಡುಗಳಲ್ಲಿ ಹುಟ್ಟಿಕೊಳ್ಳುವ ತುಂಗಾ ಮತ್ತು ಭದ್ರಾ ನದಿಗಳ ಸಂಗಮದಲ್ಲಿದೆ. ಅನೇಕ ಇತರ ಹಿಂದೂ ಯಾತ್ರಾ ಕೇಂದ್ರಗಳಂತೆ ಈ ಸ್ಥಳವು ತನ್ನದೇ ಆದ, ಶತಮಾನಗಳಿಂದ ಪ್ರಸಿದ್ಧ ಹಿಂದೂ ಧರ್ಮಬೋಧಕರಿಂದ ಪೋಷಿಸಲ್ಪಟ್ಟ, ದೇವಾಲಯಗಳನ್ನು ಹೊಂದಿದೆ.

೧೮೦೦ ರ ಏಪ್ರಿಲ್ ೨೩ ರಿಂದ ೧೮೦೧ ರ ಜುಲೈ ೬ ರವರೆಗೆ ಮಲಬಾರ್ (ಪ್ರಸ್ತುತ ಕೇರಳ ರಾಜ್ಯ), ಹಳೆ ಮೈಸೂರು, ಕರಾವಳಿ ಕರ್ನಾಟಕ ಮತ್ತು ಬಾರಾಮಹಲ್ (ಪ್ರಸ್ತುತ ತಮಿಳು ನಾಡು) ಪ್ರದೇಶಗಳಲ್ಲಿ ಚೆನ್ನೈನಿಂದ ಪ್ರಯಾಣಿಸಿದ್ದಾಗಿ ಬುಕಾನನ್ ಹೇಳಿಕೊಂಡಿದ್ದಾನೆ. ಆತ ದಾರಿಯುದ್ದಕ್ಕೂ ತಾನು ನೋಡಿದ್ದೇನೆ ಮತ್ತು ಕೇಳಿದ್ದೇನೆ ಎಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನದ ಬಗ್ಗೆ ಬರೆದಿದ್ದಾನೆ. ಈ ಕೆಲಸಕ್ಕಾಗಿ ಬುಕಾನನ್ನನ್ನು ಭಾರತದ ಗವರ್ನರ್ ಜನರಲ್ ಮಾರ್ಕ್ವಿಸ್ ವೆಲ್ಲೆಸ್ಲಿ ನೇಮಕ ಮಾಡಿದ್ದ ಮತ್ತು ಅವನ ಜರ್ನಲ್ ಅನ್ನು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರ ಆದೇಶದ ಮೇರೆಗೆ ೧೮೦೭ ರಲ್ಲಿ ಪ್ರಕಟಿಸಲಾಯಿತು ಎಂಬುದನ್ನು ಇಲ್ಲಿ ಸ್ಮರಿಸ ಬೇಕು. ಪ್ರಾಸಂಗಿಕವಾಗಿ ಅಂದಿನಿಂದ ಅವನ ಕಥೆಗಳು ಕರ್ನಾಟಕದ ಆಧುನಿಕ ರಾಜಕೀಯ ಸಂಭಾಷಣೆಯನ್ನು ರೂಪಿಸಿವೆ.

೧೮೦೧ ರ ಏಪ್ರಿಲ್ ೪ ರಂದು ಶಿವಮೊಗ್ಗ ಪಟ್ಟಣದಿಂದ ಕೂಡ್ಲಿ ಗ್ರಾಮಕ್ಕೆ ಸಾಗಿದ್ದ ತನ್ನ ಪ್ರಯಾಣದ ಸಮಯದಲ್ಲಿ, ಬುಕಾನನ್ ಬಾಂಬೆ ಸೈನ್ಯದ ಸೈನಿಕನೊಬ್ಬ ತೀವ್ರ ನೋವಿನಿಂದ ಬಳಲುತ್ತಿದ್ದನೆಂದು ಕಂಡರೂ, ಒಬ್ಬ ಗ್ರಾಮಸ್ಥನೂ ಸಹ ಅವನಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ ಅನ್ನುತ್ತಾನೆ. ಅವನು ಬರೆಯುತ್ತಾನೆ:
ಮಾರ್ಗ ಮಧ್ಯದಲ್ಲಿ ನಾನು ಒಂದು ಹಳ್ಳಿಗೆ ಬಂದೆ, ಅಲ್ಲಿ ಸ್ಥಳೀಯರ ಅನಾದರತೆಯ ಸ್ವಭಾವವು ಸಂಪೂರ್ಣವಾಗಿ ಪ್ರಕಟವಾಯಿತು. ಹಳ್ಳಿಯ ಹತ್ತಿರ, ನಾನು ಗಾಯದಿಂದಾಗಿ ತೀವ್ರ ಸಂಕಟದಲ್ಲಿ ಮಲಗಿದ್ದ ಸಿಪಾಯಿಯೊಬ್ಬನನ್ನು ಹಿಂದಿಕ್ಕಿ ನಡೆದೆ. ಸ್ವಲ್ಪ ಕಷ್ಟದಿಂದ ಅದನ್ನು ಕಡಿಮೆಗೊಳಿಸಿದ ನಂತರ, ಅವನ ತೊಡೆಸಂದು ನೋವಿನ ತರುವಾತ ಅವನಲ್ಲಿ ಹಿಂಸಾತ್ಮಕ ಹೊಟ್ಟೆನೋವು ಕಾಣಿಸಿಕೊಂಡಿತು, ಅದು ಅವನ ಕೈಕಾಲುಗಳನ್ನು ಮಡಿಚಿಕೊಳ್ಳುವಂತೆ ಮಾಡಿತು; ಅದು ಅವನನ್ನು ಸಂಪೂರ್ಣವಾಗಿ ನಡೆಯಲು ಸಾಧ್ಯವಾಗದಂತೆ ಮಾಡಿತು. ಆದ್ದರಿಂದ ಒಂದು ಸುಲಭವಾಗಿ ಮಲಗುವ ವ್ಯವಸ್ಥೆಯನ್ನು ಕಲ್ಪಿಸಲು ಒಂದು ಮಂಚ ಅಥವಾ ಹಾಸಿಗೆಯನ್ನು ತರುವ ಸಲುವಾಗಿ ನಾನು ಹಳ್ಳಿಗೆ ಹೋದೆ. ನಾನು ಒಬ್ಬ ಭಾಷಾಂತರಕಾರನನ್ನು ಹೊರತುಪಡಿಸಿ ನನ್ನ ಎಲ್ಲ ಪರಿಚಾರಕರನ್ನು ಅನಾರೋಗ್ಯದಿಂದಿದ್ದ ವ್ಯಕ್ತಿಯೊಂದಿಗೆ ಬಿಟ್ಟು ಹೋಗಿದ್ದರಿಂದ, ಗ್ರಾಮಸ್ಥರು ನನ್ನನ್ನು ತಿರಸ್ಕಾರದಿಂದ ನೋಡಿದರು. ಗೌಡ, ಅವನ ಸಹೋದರ ಮತ್ತು ಹಳ್ಳಿಯ ಕೆಲವು ಮುಖ್ಯಸ್ಥರು, ಎಲ್ಲಾ ಶಿವಭಕ್ತರು, ತಮ್ಮ ತಮ್ಮ ಕಂಬಳಿ ಸುತ್ತಿಕೊಂಡು ನಿಂತು ಮಾತಿನಲ್ಲಿ ತೊಡಗಿರುವುದನ್ನು ನಾನು ಕಂಡೆ. ನನ್ನ ವೃತ್ತಾಂತವನ್ನು ಅವರಿಗೆ ತಿಳಿಸಿದ ನಂತರ ಗೌಡ, ತಮ್ಮ ಬಳಿ ಯಾವ ಮಂಚವೂ ಇಲ್ಲ ಎಂದು ಉತ್ತರಿಸಿದ, ಮತ್ತು ಅವನ ಸಹೋದರ ತುಂಬಾ ಜೋರಾಗಿ ಮತ್ತು ತುಚ್ಛೀಕರಿಸುವ ಮಾತನಾಡಿದ. ಇದನ್ನು ಒಬ್ಬ ಉನ್ನತ ಕಂದಾಯ ಅಧಿಕಾರಿಯೊಬ್ಬರು ಕಂಡರು, ಅವರು ಪ್ರತಿ ಮನೆಯಲ್ಲೂ ಮಂಚಗಳಿವೆ ಎಂದು ನನಗೆ ಮಾಹಿತಿ ನೀಡಿದರು; ಆದರೆ ಹಣದ ಪ್ರಸ್ತಾಪಗಳಾಗಲಿ ಅಥವಾ ದೂರಿನ ಬೆದರಿಕೆಗಳಾಗಲಿ ಮಾನವೀಯತೆಯ ಮನವಿಗಿಂತ ಹೆಚ್ಚೇನು ಪ್ರಯೋಜನ ನೀಡಲಿಲ್ಲ. ಆದಾಗ್ಯೂ, ಜನರ ಪರವಾಗಿ ಹೇಳುವುದೆಂದರೆ, ಸಿಪಾಯಿ ಬಾಂಬೆ ಸೈನ್ಯಕ್ಕೆ ಸೇರಿದವನು, ಅದರ ಒಂದು ತುಕಡಿ ಪರಶುರಾಮ್ ಭಾವು ಪಟವರ್ಧನ್  ಎಲ್ಲಾ ಕ್ರೌರ್ಯಗಳನ್ನು ಮಾಡಲು ಅನುವು ಮಾಡಿಕೊಟ್ಟಿತ್ತು ಎಂದು ಹೇಳಬಹುದು. ಅತಿರೇಕಗಳಲ್ಲಿ ಬಾಂಬೆ ಸೈನ್ಯಕ್ಕೆ ಯಾವುದೇ ಪಾಲು ಇರಲಿಲ್ಲವೆಂದಲ್ಲ; ಆದರೆ ಅದರ ಸಹಾಯವಿಲ್ಲದೆ ಅವನು ದೇಶಕ್ಕೆ ಕಾಲಿಡುತ್ತಿರಲೇ ಇಲ್ಲ, ಅಥವಾ ಶಿವಮೊಗ್ಗದಲ್ಲಿ ಖಂಡಿತವಾಗಿಯೂ ಸೋಲನುಭವಿಸುತ್ತಿದ್ದ.’

ಕೂಡ್ಲಿಯಲ್ಲಿ ಪೇಶ್ವೆ ಸೈನಿಕರು ಮಾಡಿದ್ದೇನು?


ಆ ಯುದ್ಧದ ಸಮಯದಲ್ಲಿ ಪಟ್ಟಣಗಳು ಮತ್ತು ಹಿಂದೂ ದೇವಾಲಯಗಳನ್ನು ಸುಡುವುದು, ಕೊಳ್ಳೆಹೊಡೆಯುವುದು ಮತ್ತು ಲೂಟಿ ಮಾಡುವುದು, ಯೋಧರಲ್ಲದವರ ಹತ್ಯಾಕಾಂಡ ಮತ್ತು ಯುವ ಕನ್ನಡಿಗ ಬಾಲಕಿಯರ ಮೇಲೆ, ಎಸಗಿದ ಅತ್ಯಾಚಾರ ಮತ್ತು ಅಪಹರಣಕ್ಕೆ ಸಂಬಂಧಿಸಿರುವ ಪ್ರತ್ಯಕ್ಷ ಸಾಕ್ಷಿಗಳ ವರದಿಗಳಲ್ಲಿ ಪೇಶ್ವೆ ಸೇನಾಧಿಪತಿ ಪರಶುರಾಮ್ ಭಾವು ಪಟವರ್ಧನ್ ಹೆಸರು ಹಲವಾರು ಬಾರಿ ಕಾಣಿಸಿಕೊಳ್ಳುತ್ತದೆ. ಅಂತಹ ಒಂದು ಹತ್ಯಾಕಾಂಡವು ಕೂಡ್ಲಿ ಗ್ರಾಮದಲ್ಲಿ ನಡೆಯಿತು. ಸಮುದ್ರ ಸೇರಿದಂತೆ ಸಾಮ್ರಾಜ್ಯದ ಎಲ್ಲಾ ಕಡೆಯಿಂದಲೂ ದಾಳಿ ಮಾಡಿದ ಪಡೆಗಳಿಂದ ಮೈಸೂರಿನವರು ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲರಾದರು. ಕ್ಯಾಪ್ಟನ್ ಲಿಟಲ್ ಮತ್ತು ಪೇಶ್ವೆ ಸೈನ್ಯವು ಉತ್ತರದಿಂದ ಕಾಲಾಳುಪಡೆ ದಾಳಿ ಮಾಡಿದರೆ, ಚಾರ್ಲ್ಸ್ ಕಾರ್ನ್ವಾಲಿಸ್ ಮದ್ರಾಸ್ನ ಸೇಂಟ್ ಜಾರ್ಜ್ ನಿಂದ ಎರಗಿಬಂದ. ರಕ್ಷಣೆ ತೆಳುವಾಗಿ ಚಾಚಲ್ಪಟ್ಟು ಮತ್ತು ಸ್ಪಷ್ಟವಾಗಿ ತಮ್ಮ ಪ್ರದೇಶದ ಪ್ರತಿಯೊಂದು ಅಂಗುಲವನ್ನು ರಕ್ಷಿಸಲು ಸಾಧ್ಯವಾಗದ ಮೈಸೂರು ಸಾಮ್ರಾಜ್ಯದ ಪಡೆಗಳು ಅತ್ಯಂತ ತೀವ್ರತರವಾದ ಪ್ರತಿರೋಧವನ್ನು ಒಡ್ಡಿದ ಬೆಂಗಳೂರು, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು ಇತ್ಯಾದಿಗಳಂತಹ ದೊಡ್ಡ ಪಟ್ಟಣಗಳು ​​ಮತ್ತು ಕೋಟೆಗಳನ್ನು ರಕ್ಷಿಸುವತ್ತ ಗಮನ ಕೇಂದ್ರೀಕರಿಸಿದವು.  ಮರಾಠಾ ಸಾಮ್ರಾಜ್ಯದ ಪೂರ್ಣಕಾಲಿಕ ಮತ್ತು ಬಾಡಿಗೆ ಸೈನಿಕರು ಶಿವಮೊಗ್ಗವನ್ನು ವಶಪಡಿಸಿಕೊಂಡ ನಂತರ, ಅವರ ಮುಂದಿನ ಗುರಿಯಾಗಿದ್ದು ಕೂಡ್ಲಿ.

ಬುಕಾನನ್ ಮುಂದಕ್ಕೆ ಬರೆಯುತ್ತಾನೆ:

ಕೂಡ್ಲಿ, ಅಥವಾ ಸಂಗಮ ಒಂದು ಅಗ್ರಹಾರ, ಅಥವಾ ಬ್ರಾಹ್ಮಣರಿಗೆ ಇನಾಂ ನೀಡಲ್ಪಟ್ಟ ಹಳ್ಳಿಯಾಗಿದ್ದು ತುಂಗಾ ಮತ್ತು ಭದ್ರಾ ನದಿಗಳ ಸಂಗಮದಲ್ಲಿದೆ, ಸ್ಥಳವು ಅದರಿಂದಲೇ ತನ್ನ ಹೆಸರನ್ನು ಪಡೆದುಕೊಂಡಿದೆ. ನಾನು ಈಗಾಗಲೇ ಹೇಳಿದಂತೆ, ಪೇಶ್ವೆ  ಸೈನ್ಯದ ಒಂದು ಬಣವು ಅದನ್ನು ಕೊಳ್ಳೆ ಹೊಡೆದು ಸುಟ್ಟುಹಾಕಿತು, ಅವರು ಎಲ್ಲಾ ಶೂದ್ರ  ನಿವಾಸಿಗಳನ್ನು ಶೂಲಕ್ಕೆ ಹಾಕಿದರು, ಸ್ಥಳಕ್ಕೆ ಸಾಕಷ್ಟು ರಕ್ಷಣೆಯೂ ಇರಲಿಲ್ಲ, ಜನರು ಯಾವುದೇ ಪ್ರತಿರೋಧವನ್ನು ಒಡ್ಡಲು ಪ್ರಯತ್ನಿಸಲೂ ಇಲ್ಲ. ಇದರ ನಂತರ, ಬ್ರಾಹ್ಮಣರು ಪರಶುರಾಮ್ ಭಾವು ಪಟವರ್ಧನ್ ಗೆ ದೂರು ನೀಡಲು ಹೋದರು, ಧರ್ಮಬದ್ಧನಾಗಿ ಆತ ಪ್ರತಿಯೊಬ್ಬರಿಗೂ ಒಂದು ರೂಪಾಯಿಯನ್ನು ನೀಡಿದ.’  

ಕ್ರೂರಿಗಳು ಸ್ಮಾರ್ತ  ಪಂಥದ ಎಲ್ಲ ಮರಾಠ ಬ್ರಾಹ್ಮಣರ ಗುರುವಾದ ಮತ್ತು ಅವರಿಂದ ದೇವರ ವಾಸ್ತವ ಅವತಾರವೆಂದು ಪರಿಗಣಿಸಲ್ಪಟ್ಟ ಕೂಡ್ಲಿ  ಸ್ವಾಮಿಯನ್ನು ಸಹ ಬಿಡಲಿಲ್ಲ. ಅವರ  ಮಠ ಲೂಟಿಯಾಗಿ ಸುಟ್ಟುಹೋಯಿತು; ಆದರೆ ಇದು ಪೇಶ್ವಾನಿಗೆ ದುಬಾರಿಯಾಗಿ ಪರಿಣಮಿಸಿತು. ಕೋಪಗೊಂಡ ಸ್ವಾಮಿ ತ್ವರಿತ ಬಹಿಷ್ಕಾರದ ಬೆದರಿಕೆಗಳನ್ನು ಹೊರಡಿಸಿದ, ಮತ್ತು ೪೦೦,೦೦೦ ರೂಪಾಯಿಗಳ ಕಾಣಿಕೆಯಿಂದ ಮಾತ್ರ ಸಮಾಧಾನಗೊಂಡ.’

ಕೂಡ್ಲಿ ಸಮೀಪದಲ್ಲಿರುವ ಶೃಂಗೇರಿ, ಹಿಂದೂಗಳ ಅತ್ಯಂತ ಪವಿತ್ರ ತಾಣಗಳಲ್ಲಿ ಒಂದು. ೩ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ೧೭೯೧ರಲ್ಲಿ ಅದೇ ಪೇಶ್ವೆ ಸೈನಿಕರು ಆ ಪವಿತ್ರ ಮಠವನ್ನು ಲೂಟಿ ಮಾಡಿ, ಅಮಾಯಕ ಬ್ರಾಹ್ಮಣರ ಹತ್ಯಾಕಾಂಡ ನೆಡೆಸಿದ್ದು ಕೇಳಿರುವ ಸಂಗತಿ. ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ಪತ್ರ ಬರೆದು, ಪವಿತ್ರ ಸ್ಥಳವನ್ನು ನಾಶ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೇ ಅಲ್ಲದೆ, ನಾಶವಾದದ್ದನ್ನು ದುರಸ್ತಿ ಮಾಡಿಸಿದರು (ಉಲ್ಲೇಖ ೩).

ವಿನಾಶಕಾರಿ ಯುದ್ಧವನ್ನು ಜಯಿಸುವುದು ಯುದ್ಧದಿಂದ ಬ್ರಾಹ್ಮಣರು ಮತ್ತು ಇತರರು ಹೇಗೆ ಹೊರ ಬಂದರು


ರಾಜ್ಯದ ಬಹುಪಾಲು ಸಂಪನ್ಮೂಲಗಳಿಗೆ ಪ್ರವೇಶವನ್ನು ಹೊಂದಿದ್ದ ಜನರಾಗಿ, ಸಾಮ್ರಾಜ್ಯದ ಬೇರೆಡೆಗಳಂತೆ, ಕೂಡ್ಲಿಯ ಬ್ರಾಹ್ಮಣರೂ ಯುದ್ಧದ ಪರಿಣಾಮಗಳನ್ನು ತಾಳಿ ಎದ್ದೇಳುವುದನ್ನು ಇತರರಿಗಿಂತ ಉತ್ತಮವಾಗಿ ನಿರ್ವಹಿಸಿದಂತೆ ತೋರುತ್ತದೆ. ಬುಕಾನನ್ ಮುಂದುವರೆಯುತ್ತಾನೆ:
ಒಬ್ಬ ಮಹಾನ್ ಬ್ರಾಹ್ಮಣ ಉದಾರತೆ
ಸ್ವಾಮಿಯು ಬರಗಾಲದಲ್ಲಿ ಬಹಳಷ್ಟು ಉಪಯೋಗವನ್ನು ಹೊಂದಿದ್ದನೆಂದು ಮತ್ತು ಹಸಿವಿನಿಂದ ಬಳಲುತ್ತಿರುವ ದರಿದ್ರರನ್ನು ಬೆಂಬಲಿಸಲು ಹಣವನ್ನು ಸಂಗ್ರಹಿಸುವಲ್ಲಿ ತನ್ನ ಪ್ರಭಾವವನ್ನು ಬಳಸಿದನೆಂದು ಹೇಳಲಾಗುತ್ತದೆ. ಆತ ಪ್ರತಿದಿನ ೩೦೦೦ ಬ್ರಾಹ್ಮಣರಿಗೆ ಮತ್ತು ಇತರ ಧಾರ್ಮಿಕ ಸಾಧಕರಿಗೆ ಆಹಾರವನ್ನು ನೀಡಿದ; ಏಕೆಂದರೆ, ಹಿಂದೂ ಸಿದ್ಧಾಂತದ ಪ್ರಕಾರ, ಧಾರ್ಮಿಕ ಪುರುಷರಿಗೆ ನೀಡಲಾಗುವ ದಾನವೇ ಮುಖ್ಯವಾಗಿ ದೇವರುಗಳ ದೃಷ್ಟಿಯಲ್ಲಿ ಅನುಗ್ರಹ ಪಡೆಯುತ್ತದೆ. ಅವರ ವಿತರಣೆಗಳಲ್ಲಿ ಸ್ವಾಮಿ ಆರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರೆಂದು ಹೇಳಲಾಗುತ್ತದೆ, ಅದರಲ್ಲಿ ಹೆಚ್ಚಿನದು ಮರಾಟ್ಟಾ ರಾಜ್ಯಗಳಲ್ಲಿ ಸಂಗ್ರಹಿಸಲ್ಪಟ್ಟದ್ದು.’

ಇದಕ್ಕೆ ವ್ಯತಿರಿಕ್ತವಾಗಿ, ಬ್ರಾಹ್ಮಣೇತರರ ದುಃಖದ ಕಥೆಗಳು ಹಲವಾರು ಮತ್ತು ಯುದ್ಧದ ಪರಿಣಾಮಗಳನ್ನು ಸಹಿಸಿ ಎದ್ದೇಳಲು ಅವರು ಅಧಿಕ ಸಮಯ ತೆಗೆದುಕೊಂಡಿರಬಹುದು. ಬುಕಾನನ್ ಆಗಸ್ಟ್ ೨೧, ೧೮೦೦ ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿದ್ದಾಗಿ ಬರೆಯುತ್ತಾನೆ. ಪರಶುರಾಮ್ ಭಾವು ಆಕ್ರಮಣಕ್ಕೆ ಮುಂಚೆ ಪಟ್ಟಣದಲ್ಲಿ ೧,೫೦೦ ಮನೆಗಳು ಇದ್ದವು ಆದರೆ ೨೦೦ ಮಾತ್ರ ಅವನ ವಿನಾಶದಿಂದ ಬದುಕುಳಿದವು. ಭಾವುನ ಸೈನ್ಯವು ೧೫೦,೦೦೦ (೧.೫ ಲಕ್ಷ) ತಾಳೆ ಮರಗಳನ್ನು ಧ್ವಂಸಗೊಳಿಸಿ ಕತ್ತರಿಸಿತು ಎಂದು ಆತ ಹೇಳುತ್ತಾನೆ. ಅರ್ಧದಷ್ಟು ರೈತರು, ಮುಖ್ಯವಾಗಿ ತಿಗಳ ಸಮುದಾಯದವರು, ನಿರಾಶ್ರಿತರಾಗಿ ಈ ಪ್ರದೇಶವನ್ನು ಬಿಟ್ಟು ಓಡಿಹೋದರು.

೧೭೯೦ ಮತ್ತು ೧೭೯೨ ರ ನಡುವೆ ಮರಾಠ ಸೈನ್ಯವು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಸಿದ ವಿನಾಶದ ಬಗ್ಗೆ ಮೈಸೂರು ಮತ್ತು ಕೂರ್ಗ್‌ನ ಮುಖ್ಯ ಆಯುಕ್ತನಾಗಿದ್ದ ಬೌರಿಂಗ್ ಈ ಕೆಳಗಿನಂತೆ ಬರೆದ (೩).
‘ಹಿಂದಿನ ದಿನಗಳಲ್ಲಿ, ಚಿತ್ರದುರ್ಗ ಜಿಲ್ಲೆಯು ಮರಾಠರ ಸುಲಿಗೆಳಿಗಳಿಗೆ ಬಹಳಷ್ಟು ಒಡ್ಡಿಕೊಂಡಿತ್ತು, ಅವರ ಪ್ರಧಾನ ನಾಯಕ ಪರಶುರಾಮ್ ಭಾವು ಮೈಸೂರು ಪ್ರಾಂತ್ಯದ ಉತ್ತರ ಭಾಗವನ್ನು ನಿರ್ದಯವಾಗಿ ಲೂಟಿ ಮಾಡಿದ. ಇಡೀ ಜನತೆ ತಮ್ಮ ಮನೆಗಳನ್ನು ಬರಿದುಮಾಡಿ ತೊರೆದು, ಅವರ ಎಲ್ಲಾ ಚರಾಸ್ತಿಯನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಅಸಾಮಾನ್ಯ ಸಂಗತಿಯಾಗಿರಲಿಲ್ಲ. ‘ವಲಸೆ’ ಎಂದು, ಆಕ್ರಮಣಕಾರರು ಹಿಂದಿರುಗುವವರೆಗೂ, ಮತ್ತು ಪರಿಸ್ಥಿತಿಗಳು ತಮ್ಮ ಸ್ವಂತ ಹಳ್ಳಿಗಳಿಗೆ ಮರಳಲು ಅವರಿಗೆ ಅನುವು ಮಾಡಿಕೊಡುವ ವರೆಗೂ ಅವರು ದೇಶಾದ್ಯಂತ ಅಲೆದಾಡುತಿದ್ದರು.

ಪೇಶ್ವೆ ಸಾಮ್ರಾಜ್ಯದ ಆಕ್ರಮಣದಿಂದ ಸಾವು ಮತ್ತು ವಿನಾಶವನ್ನು ಅನುಭವಿಸಿದ ಕರ್ನಾಟಕದ ಕೂಡ್ಲಿ ಮತ್ತು ಇತರ  ಐವತ್ತು ಪಟ್ಟಣಗಳು ​​ಮತ್ತು ದೇವಾಲಯಗಳು.


ಉಪಸಂಹಾರ
ಪೇಶ್ವೆ ಸಾಮ್ರಾಜದವರು ಸ್ವತಃ ಹಿಂದೂಗಳು‘ ಎಂಬ ನಂಬಿಕೆಯ ಹೊರತಾಗಿಯೂ, ಕರ್ನಾಟಕದ ಹೆಚ್ಚಿನ ಹಿಂದೂ ದೇವಾಲಯ ಪಟ್ಟಣಗಳು ​​ಅವರ ಕೋಪ-ಕ್ರೌರ್ಯಗಳಿಂದ ಪಾರಾಗಲಿಲ್ಲ. ಸಮಕಾಲೀನ ಮತ್ತು ಹಾಗೆಯೇ ೧೮ ಮತ್ತು ೧೯ ನೇ ಶತಮಾನದ ಮೂಲಗಳ ಪ್ರಕಾರ, ಕರ್ನಾಟಕದ ಪಟ್ಟಣಗಳ ಲೂಟಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿಯಡಿಯಲ್ಲಿ ಪ್ರಾರಂಭವಾಯಿತು ಮತ್ತು ಮರಾಠಾ ಸಾಮ್ರಾಜ್ಯದ ಉತ್ತರಾಧಿಕಾರಿಗಳು ಪುನರಾವರ್ತಿತ ಆಕ್ರಮಣಗಳೊಂದಿಗೆ ಮುಂದುವರೆದರು, ಇದರ ಪರಿಣಾಮವಾಗಿ ನೂರಾರು ದೇವಾಲಯಗಳು ಮತ್ತು, ಪ್ರಮುಖವಾಗಿ ಹಿಂದೂಗಳು ವಾಸವಾಗಿದ್ದ, ಪಟ್ಟಣಗಳು ​​ನಾಶವಾದವು. ೧೭೯೧ ರಲ್ಲಿ ಕೂಡ್ಲಿಯಲ್ಲಿ ನಡೆದದ್ದು ನಿರಾಯುಧ ಕನ್ನಡಿಗರ ಮೇಲೆ ಪೇಶ್ವೆ ಸೈನ್ಯದ ಹಿಂದಿನ ದೌರ್ಜನ್ಯದ ಮುಂದುವರಿಕೆಯಷ್ಟೇ. ಮತ್ತು ಇಂತಹ ಅನೇಕ ಹತ್ಯಾಕಾಂಡಗಳು, ವಿಶೇಷವಾಗಿ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ, ಕಂಡುಬಂದವು.

ಟಿಪ್ಪಣಿ: ಪರಶುರಾಮ್ ಭಾವು ಮತ್ತು ಹರಿ ಪಂತ್ ಸಮಕಾಲೀನ ಇಂಗ್ಲಿಷ್ ಬರಹಗಾರರಿಂದ ಕ್ರಮವಾಗಿ Puraseram Bhow ಮತ್ತು Hurry Punt ಎಂದು ಬರೆಯಲ್ಪಟ್ಟಿವೆ. ಮತ್ತು ಚಿತ್ರದುರ್ಗವನ್ನು ‘ಚಿಟ್ಟಲ್ ಡ್ರೂಗ್’ ಯಂದು ಕರೆಯುತಿದ್ದರು.

ಪೇಶ್ವೆಗಳ ಬಗ್ಗೆ

ಪೇಶ್ವೆ ಎಂಬ ಪದವು ಪರ್ಷಿಯನ್ پیشوا pēshwā ನಿಂದ ಬಂದಿದೆ, ಇದರ ಅರ್ಥ “ಮುಂಚೂಣಿಯಲ್ಲಿರುವ, ನಾಯಕ”.

ಛತ್ರಪತಿ ಶಿವಾಜಿ ಮಹಾರಾಜ್ (1659-80 ರ ಆಳ್ವಿಕೆ) ಪ್ರಧಾನ ಮಂತ್ರಿ ಸ್ಥಾನಮಾನಕ್ಕೆ ಪೇಶ್ವೆ ಎಂದು ಕರೆದು,  ಮೊರೋಪಂತ್ ಪಿಂಗಳೆ ಅವರನ್ನು ಮೊದಲ ಪೇಶ್ವೆಯಾಗಿ ನೇಮಿಸಿದರು. ಶಿವಾಜಿ, ಸಂಭಾಜಿ ಮತ್ತು ರಾಜಾರಾಮ್ ಆಳ್ವಿಕೆಯಲ್ಲಿ ಎಲ್ಲಾ ಪೇಶ್ವೆಗಳು ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು .

ಶಿವಾಜಿಯ ಮೊಮ್ಮಗ ಶಾಹು 1713 ರಲ್ಲಿ , ಚಿತ್ಪಾವನ ಬ್ರಾಹ್ಮಣ ಭಟ್ ಕುಟುಂಬದ ಬಾಲಾಜಿ ವಿಶ್ವನಾಥ್ (ಭಟ್) ಅವರನ್ನು ಪೇಶ್ವೆಯಾಗಿ ನೇಮಿಸಿದರು.

1719 ರಲ್ಲಿ ಬಾಲಾಜಿಯ ಮಗ ಬಾಜಿ ರಾವ್ I ನನ್ನು ಶಾಹು ಪೇಶ್ವೆಯಾಗಿ ನೇಮಿಸಿದ ನಂತರ ಭಟ್ ಕುಟುಂಬಕ್ಕೆ ಆ ಸ್ಥಾನ ಆನುವಂಶಿಕವಾಯಿತು. ತದ ನಂತರ ಪೇಶ್ವೆ ಅವರ ಮನೆತನದ ಹೆಸರಾಯಿತು.
ಶಾಹು, 1749 ರಲ್ಲಿ ತೀರಿಕೊಂಡ ನಂತರ ಪೇಶ್ವೆ ಬಾಲಾಜಿ ಬಾಜಿ ರಾವ್ ಮಹಾರಾಷ್ಟ್ರದ ರಾಜ್ಯಭಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಕೊನೆಯ ಪೇಶ್ವೆ, ಬಾಜಿ ರಾವ್ II, 1818 ರಲ್ಲಿ ಭೀಮಾ ಕೋರೆಗಾಂವ್ ನಲ್ಲಿ ನಡೆದ ಮೂರನೇ ಆಂಗ್ಲೋ-ಮರಾಠಾ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸೋತ ನಂತರ ಪೇಶ್ವೆ ಸಾಮ್ರಾಜ್ಯ ಅಂತ್ಯ ಕಂಡಿತು.

 

ಉಲ್ಲೇಖಗಳು:

೧. ಮೂರ್, ಎಡ್ವರ್ಡ್., ‘ ನೆರೇಟಿವ್ ಆಫ್ ದಿ ಆಪರೇಷನ್ಸ್ ಆಫ್ ಕ್ಯಾಪ್ಟನ್ ಲಿಟ್ಲ್ಸ್ ಡಿಟ್ಯಾಚ್ಮೆಂಟ್ ಅಂಡ್ ಆಫ್ ದಿ ಮರಾಠಾ ಆರ್ಮಿ, ಕಮಾಂಡೆಡ್ ಬೈ ಪರಶುರಾಮ್ ಭಾವು: ಡೂರಿಂಗ್ ದಿ ಲೇಟ್ ಕಂಫೆಡರಸಿ ಇನ್ ಇಂಡಿಯಾ, ಅಗೇನ್ಸ್ಟ್ ನವಾಬ್ ಟಿಪ್ಪು ಸುಲ್ತಾನ್ ಬಹಾದುರ್‘, ಜೆ, ಜಾನ್ಸನ್, ಲಂಡನ್, ೧೭೯೪.

 

೨. ಬುಚಾನನ್, ಫ್ರಾನ್ಸಿಸ್., ‘ ಜರ್ನೀ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್ ‘, ಮೂರು ಸಂಪುಟಗಳು, ೧೮೦೭.

 

೩. ಶಾಸ್ತ್ರೀ , ಎ .ಕೆ , ‘ದಿ ರೆಕಾರ್ಡ್ಸ್ ಒಫ್ ದಿ ಶೃಂಗೇರಿ ಧರ್ಮಸ್ಥಾನ್‘, ಶೃಂಗೇರಿ ಮಠ, ಶೃಂಗೇರಿ, ೨೦೦೯.

 

೪. ಬೌರಿಂಗ್, ಲೆವಿನ್ ಬಿ., ‘ಈಸ್ಟರ್ನ್ ಎಕ್ಸ್ಪೀರಿಯನ್ಸಸ್‘, ೧೮೭೧.