ಜಾನಪದ ಲೋಕದ ಎಚ್. ಎಲ್. ನಾಗೇಗೌಡ

ಜಾನಪದ ಲೋಕದ ಎಚ್. ಎಲ್. ನಾಗೇಗೌಡ
ಡಾ. ನಾಗೇಗವ್ಡ ಕೀಲಾರ ಶಿವಲಿಂಗಯ್ಯ

ಪ್ರೆಬ್ರುವರಿ 11, ಡಾ. ಎಚ್. ಎಲ್. ನಾಗೇಗೌಡರು ಜನಿಸಿದ ದಿನ. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ. ಅವರು ಸ್ಥಾಪಿಸಿರುವ ರಾಮನಗರದ ಬಳಿ ಇರುವ ಜಾನಪದ ಲೋಕ ನೆನೆದು ಮನ ಸುಖಗೊಳ್ಳುತ್ತದೆ. ‘ಜಾನಪದ ಲೋಕ’ದಲ್ಲಿ ಅಡ್ಡಾಡಿ ಪಕ್ಕದಲ್ಲಿದ್ದ ಜನಪದದ ಸೊಗಡನ್ನು ಮೂಡಿಸಿಕೊಂಡಿರುವ ಕಾಮತ್ ಲೋಕರುಚಿಯಲ್ಲಿ ಪಟ್ಟೆ ಇಡ್ಲಿ, ಜೋಳದ ರೊಟ್ಟಿ ಊಟ ಇವನ್ನು ಮೆಲ್ಲುವುದರಲ್ಲಿ ಅದೇನೋ ಸುಖವಿದೆ. ಬಿರುಸಿನ ಯಾತ್ರೆಗೆ ಎಂದು ಬೆಂಗಳೂರು ಮೈಸೂರು ದಾರಿಯಲ್ಲಿ ಹಾದಿ ಕ್ರಮಿಸುವಾಗಲೂ ಕಾಮತ್ ಲೋಕರುಚಿಯ ರುಚಿ ಕಾಣದೆ ಹಾಗೆಯೇ ಹೋಗುವುದು ಅಪರೂಪವೇ ಸರಿ. ಹಾಗೆ ಕುಳಿತಾಗ ಕೂಡ ಪಕ್ಕದಲ್ಲಿನ ಜಾನಪದ ಲೋಕದ ತಂಗಾಳಿ ಕೊಡುವ ಸುಖ ವಿಶಿಷ್ಟವಾದದ್ದು. ಹಳ್ಳಿಮನೆಗಳ ಸೌಭಾಗ್ಯವಿಲ್ಲದ ನಮಂತಹ ಪಟ್ಟಣಿಗರಿಗೆ ಅದೊಂದು ಸೊಬಗಿನ ಸಿರಿ ತವರು ಮನೆಯಂತಿದೆ.

 

ನಾಗೇಗೌಡರು ಐ.ಎ.ಎಸ್ ಅಧಿಕಾರಿಯಂತಹ ಉತ್ತುಂಗ ಸ್ಥಾನದಲ್ಲಿದ್ದರೂ, ಲೋಕಸೇವಾ ಆಯೋಗದಂತಹ ಪ್ರಮುಖ ಹುದ್ದೆಗಳಲ್ಲಿ ಅಲಂಕೃತರಾಗಿದ್ದರೂ ಅವರ ಹೃದಯ ಹಳ್ಳಿಗಳಲ್ಲಿ ಅಡಗಿದ್ದ ಸಾಂಸ್ಕೃತಿಕ ಮನಗಳ ಹಿಂದೆ ಓಡಾಡುತ್ತಿದ್ದುದು ಅಚ್ಚರಿಯ ವಿಚಾರವೆನಿಸುತ್ತದೆ. ಅವರ ಕನ್ನಡ ಪ್ರೀತಿಯ ಬಗ್ಗೆ ಸ್ವಾನುಭವಕ್ಕೆ ಒಂದು ಘಟನೆ. ನಾವು ಒಂದು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದೆವು. ಕನ್ನಡ ಕಾರ್ಯಕ್ರಮ ಆಯೋಜಿಸುವುದರ ಕಷ್ಟ ಯಾಕೆ ಹೇಳ್ತೀರಿ. ಕಾರ್ಯಕ್ರಮ ಆಯೋಜನೆ ಮಾಡಿ ಅಯ್ಯೋ ಜನ ಇಷ್ಟು ಕಡಿಮೆ ಇದ್ದಾರಲ್ಲಪ್ಪ ಎಂದು ಒಬ್ಬೊಬ್ಬರನ್ನೂ ಮದುವೆ ಮನೆಯ ಆರತಕ್ಷತೆಯಲ್ಲಿ ಸ್ವಾಗತಿಸುವಂತೆ ಜನರನ್ನು ಬರವು ಮಾಡಿಕೊಳ್ಳುತ್ತಿದ್ದ ನಮ್ಮ ಅಂದಿನದಿನದ ಪರಿಪಾಟಲನ್ನು ನಾವು ಇತರರಿಗೆ ಆಗುತ್ತಿದ್ದ ನಗೆಪಾಟಲನ್ನು ನೆನೆದು ನಗುಬರುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೂಟುಬೂಟು ಧರಿಸಿದ್ದ ಒಬ್ಬ ವ್ಯಕ್ತಿಯನ್ನು ಬನ್ನಿ ಬನ್ನಿ ಎಂದು ಸ್ವಾಗತಿಸಿದಾಗ, ನಾನು ನಾಗೇಗೌಡ ಯಾವುದೋ ಕಾರ್ಯಕ್ರಮಕ್ಕೆ ಕರೆದರು. ಅದು ಕ್ಯಾನ್ಸೆಲ್ ಆಯ್ತು ಇಲ್ಲಿಗೆ ಬಂದೆ ಅಂದಾಗಲೇ ಗೊತ್ತಾಗಿದ್ದು ನಾನು ಮಾತನಾಡುತ್ತಿದ್ದುದು ಡಾ. ಎಚ್. ಎಲ್. ನಾಗೇಗೌಡರ ಬಳಿ ಅಂತ. ಅಂತಹ ಅನಂತ ಪ್ರೀತಿಯ ದಿಗ್ದರ್ಶನ ಕಂಡು ಮನಸ್ಸು ಮೂಖವಾಗಿತ್ತು. ಅಂದು ಅವರು ಪ್ರೀತಿಯಿಂದ ಕೊಟ್ಟ ‘ಸೊನ್ನೆಯಿಂದ ಸೊನ್ನೆಗೆ’ ಪುಸ್ತಕ ಈಗಲೂ ನೆನಪಿನಲ್ಲಿದೆ.

 

ಒಂದು ಕಾಲಕ್ಕೆ ತೆಂಗಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದ್ದ, ಮಂಡ್ಯ ಜೆಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ನಾಗೇಗೌಡರ ಹುಟ್ಟೂರು. ಅಂದು ಅದು ಬಸ್ಸು, ಬೈಸಿಕಲ್ಲುಗಳನ್ನೇ ಕಂಡರಿಯಾದ ಊರಾಗಿತ್ತು. ಇಂತಹ ಸಣ್ಣ ಹಳ್ಳಿಯಲ್ಲಿ 1915ರ ಫೆಬ್ರವರಿ 11ರಂದು ‘ದೊಡ್ಡಮನೆ’ ಕುಟುಂಬದಲ್ಲಿ ಜನಿಸಿದ ನಾಗೇಗೌಡರ ಮನೆ ಅಕ್ಷರಶಃ ಸಂಖ್ಯಾಬಲದಿಂದಲೂ ದೊಡ್ಡದಾಗಿಯೇ ಇತ್ತು. ಸಂಸಾರದ ಹಲವು ಮಂದಿ, ಆಳುಕಾಳು, ದನಕರು ಕುರಿ ಕೋಳಿ ಹೀಗೆ ಸಂಖ್ಯಾಬಲದಿಂದಲ್ಲದೆ ಗುಣ, ಸಂಪತ್ತು ಮತ್ತು ಸಂಸ್ಕೃತಿಯ ಲೆಕ್ಕದಲ್ಲೂ ಸಹ ಅದು ದೊಡ್ಡಮನೆಯೇ ಆಗಿತ್ತು. ನಾಗೇಗೌಡರು ಹುಟ್ಟಿದ ಮೂರುವರ್ಷಕ್ಕೆ ತಾಯಿ ನಿಧನರಾಗಿ ಅಜ್ಜಿಯ ಆರೈಕೆಯಲ್ಲಿ ಬೆಳೆದರು.

ಹೈಸ್ಕೂಲು ಮುಗಿಸಿ ಮುಂದೆ ಓದಲು ಬೆಂಗಳೂರಿಗೆ ಬಂದ ನಾಗೇಗೌಡರಿಗೆ ಹಾಸ್ಟೆಲ್ ವಾಸ. ಹಾಸ್ಟೆಲ್ ಪಕ್ಕದಲ್ಲಿದ್ದ ರಾಮಕೃಷ್ಣಾಶ್ರಮ ಅವರಿಗೆ ಅಚ್ಚುಮೆಚ್ಚು. ಕಾಲೇಜಿನ ದಿನಗಳಲ್ಲಿ ಸರೋಜಿನ ನಾಯ್ಡು, ರೈಟ್ ಆನರಬಲ್ ಶ್ರೀನಿವಾಸಶಾಸ್ತ್ರಿ ಮತ್ತು ಗಾಂಧೀಜಿಯವರ ಭಾಷಣ ಕೇಳಿದ ಪುಳಕಿತ ಭಾವ ಅವರನ್ನಾವರಿಸಿತ್ತು. ಕಾಲೇಜಿನಲ್ಲಿ ಬಿ.ಎಂ. ಶ್ರೀ ಇಂಗ್ಲಿಷ್ ಕಲಿಸಿದರೆ, ವಿ.ಸೀ ಕನ್ನಡ ಕಲಿಸುತ್ತಿದ್ದರು. ಸಿ. ರಂಗಾಚಾರ್ ಎಂಬ ಸಂಸ್ಕೃತ ಮೇಷ್ಟು ಕಾಲೇಜಿನಿಂದ ಹೊರಗೆ ಕಲಿಸುತ್ತಿದ್ದ ಹಿಂದಿಯನ್ನು ಕೂಡಾ ಅಭ್ಯಾಸ ಮಾಡಿ ಪ್ರಾವೀಣ್ಯತೆ ಪಡೆದರು.

 

ಮುಂದೆ ಮೈಸೂರಿನ ಮಹಾರಾಜ ಕಾಲೇಜು ಸೇರಿ ಅಲ್ಲಿನ ಅತಿರಥ ಮಹಾರಥಿಗಳ ಗರಡಿಯಲ್ಲಿ ಪಳಗಿದರು. ಬಿ ಎಸ್ ಸಿ ಓದಿದ ನಂತರ ಲಾ ಓದಲು ಇಲ್ಲಿ ಅವಕಾಶ ಸಿಗದಿದ್ದ ಕಾರಣ ಪುಣೆಯಲ್ಲಿ ಓದಿದರು. ಕೇಂದ್ರೀಯ ನೇಮಕಾತಿ ಮಂಡಳಿಯ ಮೂಲಕ ಮುನ್ಸೀಫ್ ಕೋರ್ಟ್ ಮುನ್ಷಿ ಕೆಲಸದಿಂದ ಅವರ ಕಾರ್ಯಕ್ಷೇತ್ರ ಪ್ರಾರಂಭಗೊಂಡಿತು. ವಿವಾಹದ ನಂತರ ಮೈಸೂರು ಸಿವಿಲ್ ಸರ್ವೀಸಸ್ ಸ್ಪರ್ಧಾ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಪ್ರೊಬೆಷನರಿ ಅಧಿಕಾರಿಯಾಗಿ ಹಾಗೂ 1941ರಲ್ಲಿ ಗೆಜೆಟೆಡ್ ಅಧಿಕಾರಿಯಾದರು. 1960ರಲ್ಲಿ ನಾಗೇಗೌಡರು ಐ.ಎ.ಎಸ್. ಶ್ರೇಣಿಗೆ ಆಯ್ಕೆಯಾದರು. ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಅತ್ಯುತ್ತಮವಾದ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದರು. 1973ರಲ್ಲಿ ರಾಜ್ಯದ ಲೋಕಾ ಸೇವಾ ಆಯೋಗದ ಸದಸ್ಯರಾಗಿ ನೇಮಿಸಲ್ಪಟ್ಟ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಾವಿರಾರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉದ್ಯೋಗ ನೀಡಿದ್ದರು. ನಿವೃತ್ತಿಯ ನಂತರ ರಾಜ್ಯ ಸರ್ಕಾರವು ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿತ್ತು.

 

ನಾಗೇಗೌಡರು ಸೇರಿದ್ದು ಆಡಳಿತ ಕ್ಷೇತ್ರವನ್ನಾದರೂ ಅವರ ಆಸಕ್ತಿ ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿತ್ತು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪ್ರಭುತ್ವ ಪಡೆದಿದ್ದ ನಾಗೇಗೌಡರು ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಭಾಷಾಂತರಕಾರರಾಗಿ, ಪ್ರವಾಸಕಥನಕಾರರಾಗಿ, ಆತ್ಮಚರಿತ್ರಕಾರರಾಗಿ, ಜಾನಪದ ಕರ್ತಾರರಾಗಿ ನೀಡಿರುವ ಕೊಡುಗೆ ಅಮೂಲ್ಯವಾದುದು. ಅವರ ಜೀವನಾನುಭವದ ವ್ಯಾಪ್ತಿ ಎಷ್ಟು ವಿಶಾಲ, ಅಪರಿಮಿತ ಎಂಬುದಕ್ಕೆ ಅವರು ರಚಿಸಿರುವ ಕೃತಿಗಳೇ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಇಷ್ಟೆಲ್ಲವನ್ನೂ ಸಾಧಿಸಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿರುವ ಇವರ ಸಾಧನೆ ಇವರ ವ್ಯಕ್ತಿತ್ವದಷ್ಟೇ ಘನಿಷ್ಠವಾದುದು.

 

‘ನಾನಾಗುವೆ ಗೀಜಗನ ಹಕ್ಕಿ’ ನಾಗೇಗೌಡರು ತಮ್ಮ ತಾರುಣ್ಯದಲ್ಲಿ ರಚಿಸಿದ ಕವನಗಳ ಸಂಕಲನ. ‘ಕಥೆ – ವ್ಯಥೆ’ ಸಂಕಲನ ಎಂಟು ನೀಳ್ಗವನಗಳನ್ನು ಹೊಂದಿದ್ದು ನಾಗೇಗೌಡರ ಕವನ ಸ್ವಂತಿಕೆಯನ್ನು ಮೆರೆಯುತ್ತದೆ. ಬದುಕಿನ ಬಗ್ಗೆ ಕವಿಗಿರುವ ಕಳಕಳಿ, ಸಾಮಾಜಿಕ ಅನಿಷ್ಟಗಳನ್ನು ಕುರಿತಾದ ಹೇವರಿಕೆ, ಆದರ್ಶ-ವಾಸ್ತವ, ಸತ್ಯ-ಮಿಥ್ಯಗಳ ತಾಕಲಾಟ ಇಲ್ಲಿನ ಕವನಗಳಲ್ಲಿ ಕಂಡುಬರುತ್ತದೆ. ಇವುಗಲ್ಲಿ ಮೊದಲ ನಾಲ್ಕು ಕವನಗಳು ಪ್ರಸಿದ್ಧ ಕವಯತ್ರಿ ತೋರುದತ್ತಳ ಇಂಗ್ಲಿಷ್ ಕವನಗಳ ಭಾವಾನುವಾದವಾಗಿವೆ. ‘ಕಂಡು ಕೇಳಿದ ಕಥೆಗಳು’ ನಾಗೇಗೌಡರ ಹಾಸ್ಯ ಮಿಶ್ರಿತ ಗದ್ಯಶೈಲಿಗೆ ಉನ್ನತ ಪಂಕ್ತಿಯದ್ದಾಗಿದೆ.

 

ನಾಗೇಗೌಡರು ಖೈದಿಗಳನ್ನು ಭೇಟಿ ಮಾಡಿ ಅವರ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ಅವರ ಬದುಕಿನ ಸುಖ-ದುಃಖಗಳನ್ನು ಅರಿತು ‘ಖೈದಿಗಳ ಕಥೆಗಳು’ ಎಂಬ ಜೀವಂತ ಪಾತ್ರಗಳ ಕಥೆಗಳನ್ನು ರಚಿಸಿದ್ದಾರೆ. ಸರಳಿನ ಹಿಂದೆ ಇರುವಾಗ ಖೈದಿಗಳು ತಮ್ಮ ತಪ್ಪಿಗೆ ಪಡುವ ಪರಿತಾಪ, ಪಶ್ಚಾತ್ತಾಪ, ತಪ್ಪನ್ನು ಮರೆತು ಋಜುಮಾರ್ಗದಲ್ಲಿ ನಡೆಯಬೇಕೆಂಬ ಅಭೀಪ್ಸೆಯನ್ನು ವ್ಯಕ್ತಪಡಿಸುವುದು ಇವೆಲ್ಲವೂ ಓದುಗರ ಮನ ಮಿಡಿಯುವಂತೆ ಮಾಡುತ್ತದೆ.

 

ನಾಗೇಗೌಡರ ಪ್ರಸಿದ್ಧ ಕಾದಂಬರಿ ‘ದೊಡ್ಡಮನೆ’. ನಶಿಸುತ್ತಿರುವ ನಮ್ಮ ಸಂಸ್ಕೃತಿಯ ಚಿತ್ರಣವನ್ನು ಗುಣ-ಗಾತ್ರಗಳೆರಡರಲ್ಲೂ ಬೃಹತ್ತಾಗಿ ಚಿತ್ರಿಸುವ ಪ್ರಾದೇಶಿಕ ಕಾದಂಬರಿ ‘ದೊಡ್ಡಮನೆ’. ಬಯಲು ಸೀಮೆಯ ರೈತಾಪಿ ಬದುಕಿನ ದುರಂತ ಚಿತ್ರಣ ಈ ಕಾದಂಬರಿಯಲ್ಲಿ ಹೆಪ್ಪುಗಟ್ಟಿದೆ. ನಾಗೇಗೌಡರು ತಮ್ಮ ಗ್ರಾಮೀಣ ಬದುಕಿನ ಪರಿಪಕ್ವತೆಯನ್ನು ಈ ಕೃತಿಯಲ್ಲಿ ಮೆರೆದಿದ್ದಾರೆ. ‘ದೊಡ್ಡಮನೆ’ ಕಾದಂಬರಿಗೆ ಸಾಹಿತ್ಯಕ ಮೌಲ್ಯವಷ್ಟೇ ಅಲ್ಲದೆ, ಸಾಂಸ್ಕೃತಿಕ ಮೌಲ್ಯವೂ ಇದೆ.

 

ಕಾದಂಬರಿಯುದ್ದಕ್ಕೂ ಗೋಚರಿಸುವ ಹಬ್ಬ ಹರಿದಿನಗಳು, ಅಡುಗೆ, ಊಟೋಪಚಾರಗಳು, ಮನೆಯ ಮಾದರಿಗಳು, ಜಾತ್ರೆ-ಆಚರಣೆ-ಸಂಪ್ರದಾಯಗಳು, ಗತಿಸಿದ ಸಂಸ್ಕೃತಿಯೊಂದರ ಚಿತ್ರಣವನ್ನು ಮತ್ತೆ ಕಟ್ಟಿಕೊಡುತ್ತವೆ. ಭಾಷೆಯ ದೃಷ್ಟಿಯಿಂದಲಂತೂ ಕನ್ನಡದ ಕಾದಂಬರಿ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟವಾದುದು. ಕಾದಂಬರಿಯುದ್ದಕ್ಕೂ ಬಳಕೆಯಾಗಿರುವ ಆಡುಮಾತು, ಜನಪದ ನುಡಿಗಟ್ಟುಗಳು, ಬೈಗುಳಗಳು, ಗಾದೆ, ಒಗಟುಗಳು ಅಧ್ಯಯನಕ್ಕೆ ಆಕರಗಳಾಗಿವೆ.

‘ಸೊನ್ನೆಯಿಂದ ಸೊನ್ನೆಗೆ’ ಜನಪದ ಕತೆಯೊಂದರ ಎಳೆ ಹಿಡಿದುಕೊಂಡು ಹುಟ್ಟಿದ್ದು. ಮೈಲಾರದ ಮೂಲಪುರುಷರ ಚರಿತ್ರೆಯ ಮೂಲಕ ಆರಂಭವಾಗುವ ಕಾದಂಬರಿಯು ಊರ ದೇವರ ಒಕ್ಕಲಾಗದೆ, ಊರವನಾಗದೆ ಉಳಿದ ಚನ್ನಯ್ಯನ ದುರಾಸೆಯ ಅನರ್ಥವನ್ನು ಬಣ್ಣಿಸುವ ಕಥಾನಕವಾಗಿದೆ. ತಾವು ಕಂಡುಂಡ ಗ್ರಾಮೀಣ ಬದುಕನ್ನು ರಸವತ್ತಾಗಿ ವರ್ಣಿಸುವಲ್ಲಿ ನಾಗೇಗೌಡರದು ಎತ್ತಿದ ಕೈ.

 

ಭೈರವಿ ಕೆಂಪೇಗೌಡರ ಬದುಕನ್ನು ಚಿತ್ರಿಸುವ ‘ಭೂಮಿಗೆ ಬಂದ ಗಂಧರ್ವ’ ಕೃತಿ, ಮಾಸ್ತಿಯವರ ‘ಸುಬ್ಬಣ್ಣ’, ಅ.ನ.ಕೃ ಅವರ ‘ಸಂಧ್ಯಾರಾಗ’, ತ.ರಾ.ಸು ಅವರ ‘ಹಂಸಗೀತೆ’ ಪರಂಪರೆಯಲ್ಲಿ ಮೂಡಿ ಬಂದ ಮತ್ತೊಂದು ಶ್ರೇಷ್ಠಕೃತಿ. ‘ನನ್ನೂರು’ ನಾಗೇಗೌಡರ ಹುಟ್ಟೂರಾದ ಹೆರಗನಹಳ್ಳಿಯ ಕಳೆದುಹೋದ ಜನಸಮುದಾಯದ ಬದುಕಿನ ಚಿತ್ರಣ. ಗ್ರಾಮ ಜೀವನದ ಅಪೂರ್ವ ಪರಿಚಯದ ಈ ಕೃತಿ ಕನ್ನಡಕ್ಕೆ ಒಂದು ಮಹತ್ವದ ಕೊಡುಗೆ ಎಂದು ಕುವೆಂಪು ಶ್ಲಾಘಿಸಿದ್ದಾರೆ. ‘ಬೆಟ್ಟದಿಂದ ಬಯಲಿಗೆ’ ಕೃತಿಯು ಕಾಫಿಯ ಉಗಮ, ವಿಳಾಸ, ವ್ಯಾಪ್ತಿ, ಅಂಕಿ ಅಂಶಗಳನ್ನು ಸಾಹಿತ್ಯಕ ವೈಶಿಷ್ಟ್ಯಗಳೊಂದಿಗೆ ವರ್ಣಿಸುವ ಸುಂದರ ಕೃತಿ.

 

‘ಸರೋಜಿನಿ ದೇವಿ’ ಸರೋಜಿನಿ ನಾಯ್ಡು ಅವರ ಜೀವನ ಚರಿತ್ರೆ. ಸರೋಜಿನಿಯವರ ಸೌಂದರ್ಯಪ್ರಜ್ಞೆ, ಸ್ವಚ್ಚ ಬದುಕು ನಾಗೇಗೌಡರನ್ನು ಈ ಚರಿತ್ರೆ ಬರೆಯಲು ಪ್ರೇರೇಪಿಸಿತು. ನಾಗೇಗೌಡರ ‘ನಾ ಕಂಡ ಪ್ರಪಂಚ’ ಜಗತ್ತಿನ ಪೂರ್ವ ಮತ್ತು ಪಶ್ಚಿಮದೇಶಗಳನ್ನು ಸಂದರ್ಶಿಸಿ ಬಂದ ನಾಗೇಗೌಡರ ಅನುಭವಗಳ ಸುಂದರ ಕಥಾನಕವಾಗಿದೆ.

ಈ ಮೇಲ್ಕಂಡ ಕೃತಿಗಳಲ್ಲದೆ, ಸರ್ ವಾಲ್ಟರ್ ಸ್ಕಾಟ್ ಅವರ ‘ಕೆನಿಲ್ ವರ್ತ್’, ಚೀನಾ ಸಾಮ್ರಾಜ್ಯದ ಬಗೆಗಿನ ‘ಮಾರ್ಕೊಪೋಲೋ ಪ್ರವಾಸ ಕಥನ’, ವೆರಿಯರ್ ಎಲ್ವಿನರ ‘ಗಿರಿಜನ ಪ್ರಪಂಚ’, ಹಲವಾರು ಮಹನೀಯರು ಭಾರತಕ್ಕೆ ಬಂದು ಇಲ್ಲಿ ಕಂಡ ಭಾರತದ ಬಗ್ಗೆ ಏಳು ಸಂಪುಟಗಳಲ್ಲಿ ಮೂಡಿದ ‘ಪ್ರವಾಸಿ ಕಂಡ ಇಂಡಿಯಾ’ ಇವು ನಾಗೇಗೌಡರ ಅನನ್ಯ ಅನುವಾದಿತ ಕೃತಿಗಳಾಗಿ ಪ್ರಸಿದ್ಧಿ ಪಡೆದಿವೆ.

ನಾಗೇಗೌಡರು ಕನ್ನಡ ಜಾನಪದಕ್ಕೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು. ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ನಾಗೇಗೌಡರ ಉಸಿರಾಗಿತ್ತು. ಜಾನಪದ ಪ್ರೀತಿ ಅವರಲ್ಲಿ ರಕ್ತಗತವಾಗಿತ್ತು. ಸರ್ಕಾರಿ ಅಧಿಕಾರಿಯಾಗಿದ್ದಾಗ ಗ್ರಾಮೀಣರ ಒಡನಾಟದಿಂದಾಗಿ ಅವರ ಮನಸ್ಸು ಜಾನಪದದತ್ತ, ಜನಪದ ಸಂಸ್ಕೃತಿಯನ್ನು ಬೆಳೆಸುವತ್ತ, ಸಂಸ್ಕೃತಿಯ ಪ್ರತಿಬಿಂಬಗಳಾದ ಗ್ರಾಮೀಣ ವಸ್ತುಗಳನ್ನು ಉಳಿಸುವತ್ತ ತುಡಿಯಲಾರಂಭಿಸಿತು. “ಜಾನಪದ ಸಂಗ್ರಹಣೆ, ಸಂಪಾದನೆ, ಧ್ವನಿಮುದ್ರಣ ಕಾರ್ಯ ಮೊದಲು ಆಗಬೇಕಾದ ಕೆಲಸ. ನಾಗರೀಕತೆಯ ಸೋಂಕಿನಿಂದಾಗಿ ಜಾನಪದ ಮೂಲೆಗುಂಪಾಗುತ್ತಿದೆ. ಆ ದಿಸೆಯತ್ತ ಸಾಹಿತಿಗಳು, ವಿದ್ವಾಂಸರು, ಬುದ್ದಿಜೀವಿಗಳು ಗಮನ ಹರಿಸಬೇಕು. ಒಬ್ಬೊಬ್ಬ ಜಾನಪದ ಕಲಾವಿದ ಸತ್ತಾಗಲೂ ಒಂದೊಂದು ಗ್ರಂಥಭಂಡಾರವೇ ಮುಳುಗಿದ ಹಾಗೆ” ಎಂದು ಪರಿತಪಿಸಿದ ಅವರು ಜಾನಪದ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. 1971ರ ಅಕ್ಟೋಬರ್ 27, 28, ಮತ್ತು 29 ಈ ಮೂರು ದಿನಗಳ ಕಾಲ ನಾಗಮಂಗಲದಲ್ಲಿ ‘ಅಖಿಲ ಕರ್ನಾಟಕ ಜಾನಪದ ಸಮ್ಮೇಳನ’ ನಡೆಯಲು ಮೂಲ ಕಾರಣರಾದರು. ರಾಷ್ಟ್ರಕವಿ ಕುವೆಂಪು ಅವರನ್ನು ಬರಮಾಡಿಕೊಂಡು ಜಾನಪದ ತೇರು ಮುನ್ನಡೆಯಲು ಕಾರಣಕರ್ತರಾದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದಾಗ ಅವರು ಮಂಗಳೂರಿನಲ್ಲಿ ನಡೆಸಿದ ಜನಪದ ಕಲಾ ಮಹೋತ್ಸವಗಳು ಮತ್ತು ಅಖಿಲ ಕರ್ನಾಟಕ ದ್ವಿತೀಯ ಜಾನಪದ ಸಮ್ಮೇಳನವು ಜಾನಪದ ಕ್ಷೇತ್ರದ ಅಚ್ಚಳಿಯದ ದಾಖಲೆಗಳು.

 

“ನಾಡಿನ ಜನಸಂಖ್ಯೆಯಲ್ಲಿ ಶೇಕಡ 20ರಷ್ಟಿರುವ ನಗರವಾಸಿಗಳನ್ನು ತೃಪ್ತಿಪಡಿಸುವ ಸಂಗೀತ, ನಾಟಕ, ನೃತ್ಯ ಮೊದಲಾದ ಕಲೆಗಳಿಗೆ ಒಂದೊಂದಕ್ಕೂ ಪ್ರತ್ಯೇಕ ಅಕಾಡೆಮಿಗಳಿರುವುದಾದರೆ ಹಳ್ಳಿಗಳಲ್ಲಿ ವಾಸಿಸುವ ಶೇಕಡಾ 80ರಷ್ಟು ಗ್ರಾಮೀಣ ಜನತೆಯ ಬಾಳಿಗೆ ರಸವುಣಿಸಿ ಅವರ ಮನಸ್ಸನ್ನು ತಣಿಸುವ ಜನಪದ ಕಲೆ, ಸಾಹಿತ್ಯಗಳಿಗೆ ಒಂದು ಅಕಾಡೆಮಿ ಬೇಡವೇ? “ ಎಂದು ಸರ್ಕಾರವನ್ನು ಒತ್ತಾಯಿಸಿ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಸ್ಥಾಪನೆಗೆ ಕಾರಣರಾದರು.

ಸೋಬಾನೆಯವರು, ಕೋಲಾಟದವರು, ಗೊಂಬೆಯಾಟದವರು, ದೊಂಬಿದಾಸರು, ಹೆಳವರು ಹೀಗೆ ಅನೇಕ ಬಗೆಯ ಕಲಾವಿದರನ್ನು ಬರಮಾಡಿಕೊಂಡು ಅವರ ನಡುವೆ ಕಾಲ ಕಳೆಯುವುದು ನಾಗೇಗೌಡರಿಗೆ ಇದ್ದ ಆನಂದದಾಯಕ ಪ್ರವೃತ್ತಿ. ಜನಪದ ಕಲೆ, ಸಂಸ್ಕೃತಿ, ಆಚರಣೆಗಳನ್ನು ಕುರಿತಾದಂತೆ ನಾಗೇಗೌಡರ ಮಾರ್ಗದರ್ಶನದಲ್ಲಿ ಮೂಡಿಬಂಧ ‘ಸಿರಿಗಂಧ’ ಎಂಬ ಶೀರ್ಷಿಕೆಯ ಜಾನಪದ ದಾಖಲಾತಿ ಸಾಕ್ಷಚಿತ್ರವು ನೂರಾ ಎಂಟು ಕಂತುಗಳಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿ ಅಪಾರ ಜನಮೆಚ್ಚುಗೆ ಗಳಿಸಿತು.

 

ಸಂಘ ಸಂಸ್ಥೆಗಳ ಮೂಲಕ ಜಾನಪದ ಚಟುವಟಿಕೆಗಳಿಗೆ ಪ್ರೇರಕರಾಗಿ ನಿಂತ ನಾಗೇಗೌಡರು ಅತ್ಯುತ್ತಮ ಜಾನಪದ ಸಂಗ್ರಾಹಕ – ಸಂಶೋಧಕರಾಗಿ ಹೆಸರಾಗಿದ್ದು ಅವರು ಸಂಗ್ರಹಿಸಿದ ‘ಸೋಬಾನೆ ಚಿಕ್ಕಮ್ಮನ ಪದಗಳು’, ‘ಪದವವೆ ನಮ್ಮ ಎದೆಯಲ್ಲಿ’, ‘ಕರ್ನಾಟಕ ಜನಪದ ಕಥೆಗಳು’, ‘ಹೆಳವರು ಮತ್ತು ಅವರ ಕಾವ್ಯಗಳು’, ‘Essentials of Karnataka Folklore’, ‘ಕನ್ನಡ ಜಾನಪದ ಕೋಶ’, ‘ಜಾನಪದ ಜಗತ್ತು’ ಮುಂತಾದವು ಒಬ್ಬ ವ್ಯಕ್ತಿಯ ಜೀವನದಲ್ಲಿ ಅದೂ ಅಧಿಕಾರ ಹಿಡಿದಂತಹ ಒಬ್ಬರಿಂದ ಸಾಧ್ಯವೇ ಎಂಬಂತಹ ಅಚ್ಚರಿ ಮೂಡಿಸುವ ಮಹತ್ಸಾಧನೆಗಳು.

 

ನಾಗೇಗೌಡರು 1979ರಲ್ಲಿ ಜಾನಪದ ಟ್ರಸ್ಟ್ ಪ್ರಾರಂಭಿಸಿದರು. ನಾಡಿನಾದ್ಯಂತ ಲೆಕ್ಕವಿಲ್ಲದಷ್ಟು ಬಾರಿ ಸಂಚರಿಸಿ ಸಾವಿರಾರು ಕಲಾವಿದರನ್ನು ಭೇಟಿಯಾಗಿ ಜನಪದ ಗೀತೆ, ಕಥೆ ಗಾದೆ, ಒಗಟು ಮೊದಲಾದ ಜನಪದ ಸಾಹಿತ್ಯ ಪ್ರಸಾರಗಳನ್ನು ಧ್ವನಿಮುದ್ರಿಸಿಕೊಂಡರು. ಅವರ ಬಳಿ ಇದ್ದ ಧ್ವನಿಮುದ್ರಣ ಭಂಡಾರದಲ್ಲಿ 1500ಗಂಟೆಗಳಿಗೂ ಹೆಚ್ಚು ಕಾಲ ಕೇಳಬಹುದಾದ ಜಾನಪದ ಧ್ವನಿಮುದ್ರಿಕೆಗಳಿದ್ದವು. ಜನಪದ ಕಲೆ, ಹಬ್ಬ, ಜಾತ್ರೆ, ಆಚರಣೆ ಮೊದಲಾದವುಗಳ ಒಂದು ಸಾವಿರಕ್ಕೂ ಹೆಚು ವರ್ಣ ಪಾರದರ್ಶಿಕೆಗಳಿದ್ದವು. 800ಗಂಟೆಗಳಿಗೂ ಹೆಚ್ಚು ಕಾಲ ನೋಡಬಹುದಾದ ಜಾನಪದ ವಿಡಿಯೋ ಭಂಡಾರವನ್ನು ಕೂಡಾ ಅವರು ನಿರ್ಮಿಸಿದ್ದರು.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅವರು ನಿರ್ಮಿಸಿರುವ ‘ಜಾನಪದ ಲೋಕವು’ ಈಗಾಗಲೇ ಹೇಳಿದ ಹಾಗೆ ಒಂದು ಅವಿಸ್ಮರಣೀಯ ಅನುಭವ. ಅದರಲ್ಲಿರುವ ಬೃಹತ್ ಜನಪದ, ಚಾರಿತ್ರಿಕ ಸಂಪತ್ತೇ ಒಂದು ಬೃಹತ್ ಗ್ರಂಥ ಮಾಲಿಕೆಗೆ ಒದಗುವ ಸಂಪತ್ತಾಗುವಂತದ್ದು. ಅಲ್ಲಿ ಕಲಿಯಲ್ಲಿಕ್ಕೆ, ಕಲಾಪ್ರದರ್ಶನಕ್ಕೆ ಇರುವ ಉನ್ನತ ದರ್ಜೆಯ ಸೌಲಭ್ಯಗಳು ಪ್ರಶಂಸನೀಯವಾದದ್ದು. ಇದರ ದೆಸೆಯಿಂದ ಜಾನಪದ ಅಧ್ಯಯನಕ್ಕೆ ಅವಕಾಶ, ಜಾನಪದ ಕಲೆಗೆ ಮೆರುಗು, ಜಾನಪದ ಕಲಾವಿದರಿಗೆ ಗೌರವ, ಜಾನಪದದ ಬಗ್ಗೆ ಸಾರ್ವಜನಿಕ ಜೀವನದಲ್ಲಿ ಅಭಿರುಚಿ, ಗೌರವ ಮೂಡಿಸಿದ ಅವರ ಕಾರ್ಯ ಅನನ್ಯವಾದುದು.

 

ನಾಗೇಗೌಡರಿಗೆ ಅವರ ಸಾಹಿತ್ಯಕ ಸೇವೆ, ಜಾನಪದ ಕ್ಷೇತ್ರದ ಸೇವೆ ಹಾಗೂ ಮನುಕುಲದ ಸೇವೆಗಾಗಿ ಹಲವಾರು ಗೌರವಗಳು ಸಂದಿವೆ. ಅವರ ಆತ್ಮಕಥೆ ‘ನಾಗಸಿರಿ’ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. 2005ರ ವರ್ಷದ ಸೆಪ್ಟೆಂಬರ್ ಮಾಸದಲ್ಲಿ ನಿಧನರಾದ ನಾಗೇಗೌಡರು ತಾವು ಮಾಡಿದ ಕೆಲಸದಿಂದ ಸದಾ ಸ್ಮರಣೀಯರಾಗಿದ್ದಾರೆ. ಅವರು ಮಾಡಿದ ಸಂಪಾದನೆಗಳನ್ನು, ಅವರು ಉಳಿಸಿದ ಪರಂಪರೆಯನ್ನು ಮುಂದೆಯೂ ಉಳಿಸಿ, ಬೆಳೆಸುವಂತೆ ನಮ್ಮ ಜನಾಂಗ ಮಾಡಬಲ್ಲದೆ ಎಂಬುದನ್ನು ಕಾಲವಷ್ಟೇ ನಿರ್ಣಯಿಸಬೇಕು. ಈ ಮಹಾನ್ ಸಾಧಕರ ನೆನಪು ನಮ್ಮಲ್ಲಿ ಸಹಸ್ರಾಭಿವಂದನೆಗಳ ಗೌರವವನ್ನು ಮೂಡಿಸುತ್ತಿದೆ.

 

(ಆಧಾರ: ಈ ಬರಹದಲ್ಲಿರುವ ಡಾ. ಎಚ್. ಎಲ್. ನಾಗೇಗೌಡರ ಬದುಕು ಮತ್ತು ಸಾಧನೆಗಳ ಕುರಿತಾದ ಮಾಹಿತಿಗಳಿಗೆ ಡಾ. ಚಕ್ಕೆರೆ ಶಿವಶಂಕರ್ ಅವರ ಬರಹವನ್ನು ಆಧರಿಸಿದ್ದೇನೆ).

‘ಕನ್ನಡ ಸಂಪದ’

……
ಡಾ. ನಾಗೇಗವ್ಡ ಕೀಲಾರ ಶಿವಲಿಂಗಯ್ಯ