ಎಸ್‌ಸಿಎಸ್‌ಪಿ ಮತ್ತು ಟಿಎಸ್ಪಿ ಹಣ ದುರ್ಬಳಕೆ: ದಲಿತ ಸಂಘರ್ಷ ಸಮಿತಿ ಕಿಡಿ
ಹಾರೋಹಳ್ಳಿ ರವೀಂದ್ರ
ಮೈಸೂರು: ಪರಿಶಿಷ್ಟ ಜಾತಿ ಉಪಯೋಜನೆ/ ಪಂಗಡ ಉಪಯೋಜನೆ ಕಾಯ್ದೆಯ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ) ‘ಸೆಕ್ಷನ್ ೭ ಡಿ’ ರದ್ದುಪಡಿಸಬೇಕು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಈ ಕಾಯ್ದೆಯಡಿಯ ಮೀಸಲು ಅನುದಾನದ ಬಳಕೆ ಮಾಡಬಾರದು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮೈಸೂರಿನ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಆವರಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಪರಿಶಿಷ್ಟರಲ್ಲದವರು ಫಲಾನುಭವಿಗಳಾಗುವ ಯಾವುದೇ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಸಬಾರದು. ಈ ಅನುದಾನವನ್ನು ದುರುಪಯೋಗಪಡಿಸುವ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಅಂತೆಯೇ ತಮ್ಮ ಶಿಫಾರಸ್ಸು ಮೂಲಕ ದುರುಪಯೋಗಕ್ಕೆ ಅವಕಾಶವಾಗುವಂತೆ ಮಾಡುವ ಜನಪ್ರತಿನಿಧಿಗಳ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
೨೦೧೩ ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರವೇ ಅನಗತ್ಯವಾಗಿ ‘ಸೆಕ್ಷನ್ ೭ ಡಿ’ ಅಳವಡಿಸಿ ಅನ್ಯ ಕಾರ್ಯಗಳಿಗೆ ಮೀಸಲು ಹಣ ಬಳಸಿಕೊಳ್ಳಲು ಅವಕಾಶ ಕಲ್ಪಿಸಿತು. ಇದರಿಂದ ಕಾಯ್ದೆಯ ಉದ್ದೇಶ ಈಡೇರದೆ ಪರಿಶಿಷ್ಟರ ಪ್ರಗತಿ ಕುಂಠಿತಗೊಂಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬಂದ ಬಿಜೆಪಿ ಸರ್ಕಾರವು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಕಡಿತ ಮಾಡಿದ್ದಲ್ಲದೆ. ಸೆಕ್ಷನ್ ೭ ಡಿ ಯನ್ನು ಅತಿ ಹೆಚ್ಚು ದುರ್ಬಳಕೆ ಮಾಡಿಕೊಂಡಿತು. ಇದರ ವಿರುದ್ಧದ ಹೋರಾಟದ ಫಲವಾಗಿ ಈಗಿರುವ ಕಾಂಗ್ರೆಸ್ ಸರ್ಕಾರವು ತನ್ನ ಬಜೆಟ್ ಭಾಷಣದಲ್ಲಿ ಸೆಕ್ಷನ್ ೭ ಡಿ ಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಆದರೆ ತದನಂತರದಲ್ಲಿ ತನ್ನ ಗ್ಯಾರಂಟಿ ಯೋಜನೆಗಳಿಗೆ ಮೀಸಲು ಹಣ ಬಳಸಿಕೊಳ್ಳಲು ಸೆಕ್ಷನ್ ೭ ಡಿ ಯನ್ನು ರದ್ದುಗೊಳಿಸದೆ ದಲಿತ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೈಸೂರು ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ ಮಾತನಾಡಿ,
ಚುನಾವಣಾ ಪ್ರಣಾಳಿಕೆಯಲ್ಲಿ ಘೊಷಿಸಿದ್ದ ಸಾರ್ವತ್ರಿಕ ಯೋಜನೆಗಳಾದ ೫ ಗ್ಯಾರಂಟಿಗಳಿಗೆ ಹಣ ಪೂರೈಸುವ ಸಲುವಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ನಿಧಿಯಿಂದ ೧೧.೧೧೪ ಕೋಟಿ ರೂ. ಅನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇದನ್ನು ಪರಿಶಿಷ್ಟರಿಗೆ ಮಾತ್ರ ಬಳಸುತ್ತಿದ್ದೇವೆಂದು ಸುಳ್ಳು ಹೇಳುತ್ತಿದೆ. ಇದು ನಿಜವೇ ಆಗಿದ್ದರೆ ಅಂಕಿ ಅಂಶಗಳ ಪ್ರಕಾರ ೮.೧೫೦ ಕೋಟಿ ರೂ. ಸಾಕಾಗುತಿತ್ತು. ಆದರೆ ೩ ಸಾವಿರ ಕೋಟೊ ರೂ. ಹೆಚ್ಚುವರಿಯಾಗಿ ಪಡೆದಿರುವ ಉದ್ದೇಶವೇನು? ಗ್ಯಾರಂಟಿಗಳು ಕೇವಲ ಪರಿಶಿಷ್ಟರಿಗೆ ಸೀಮಿತವಾಗಿಲ್ಲ. ಅಲ್ಲದೆ, ಇವು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳು ಅಲ್ಲ. ಹಾಗಾಗಿ ಈ ಗ್ಯಾರಂಟಿಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣ ಬಳಸಲು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮವಹಿಸಬೇಕು, ಪರಿಶಿಷ್ಟ ಜಾತಿ, ಪಂಗಡದ ಪಟ್ಟಿಗೆ ಬೇರೆ ಬೇರೆ ಸಮುದಾಯಗಳನ್ನು ಸೇರ್ಪಡೆ ಮಾಡುವ ಮೂಲಕ ನೋವು ಅನುಭವಿಸಿದ ಸಮುದಾಯಗಳನ್ನು ವಂಚಿಸುವ ಅನ್ಯಾಯ ತಡೆಗಟ್ಟಬೇಕು. ಪರಿಶಿಷ್ಟ ಜಾತಿ- ಪಂಗಡಕ್ಕೆ ಪ್ರಸ್ತುತವಿರುವ ಆದಾಯ ಮಿತಿಯನ್ನು ೧೦ ಲಕ್ಷ ರೂ.ಗೆ ಹೆಚ್ಚಿಸುವ ಜೊತೆಗೆ, ಶಿಕ್ಷಣ, ಉದ್ಯೋಗ, ವಸತಿ, ಭೂಮಿ, ಮೂಲಸೌಕರ್ಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಖಾಸಗೀಕರಣ ಮತ್ತು ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಪರಿಶಿಷ್ಟರಿಗೆ ಉದ್ಯೋಗ ಒದಗಿಸಿ ಅವರ ಘನತೆಯ ಬದುಕಿಗೆ ಅವಕಾಶ ಕಲ್ಪಿಸಬೇಕು ಎಂದು ಶಿವಣ್ಣ ಆಗ್ರಹಿಸಿದರು.
ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಯಾದ ಪ್ರದೀಪ್ ಮುಮ್ಮುಡಿ ಮಾತನಾಡಿ,
ಗ್ಯಾರಂಟಿಗಳು ಎಲ್ಲಾ ಸಮುದಾಯಗಳಿಗೂ ಕೊಡುವ ಸಾರ್ವತ್ರಿಕ ಯೋಜನೆಗಳಾಗಿವೆ. ಮೀಸಲು ಹಣ ಇಲ್ಲದಿದ್ದರೂ ಗ್ಯಾರಂಟಿಗಳನ್ನು ದಲಿತರಿಗೆ ಕೊಡುತ್ತಿದ್ದಿರಿ. ಹಾಗಾದರೆ ಮೀಸಲು ಹಣದಲ್ಲಿ ಗ್ಯಾರಂಟಿ ಪೂರೈಸಿದರೆ ಮೀಸಲು ಹಣದ ಪ್ರಾಮುಖ್ಯತೆ ಏನು? ಮೀಸಲಾತಿಯ ಪರಿಕಲ್ಪನೆಯನ್ನೆ ತಿರುಚಿ ಮುಂದಿನ ದಿನಗಳಲ್ಲಿಯೂ ಈ ಅರಿವು ಪ್ರಸಾರವಾಗಿ ಮೀಸಲು ನಿಧಿ ನಿರಂತರವಾಗಿ ದುರ್ಬಳಕೆಯಾಗುವ ಸಾಧ್ಯತೆ ಇದೆ. ಕೆಲವು ದಲಿತ ಸಂಘಟನೆಗಳು ವ್ಯಕ್ತಿಗತ ಲಾಭಕ್ಕಾಗಿ ಈ ಅನ್ಯಾಯವನ್ನು ಮರೆಮಾಚುತ್ತಿವೆ. ಇದರಿಂದ ದಲಿತ ಸಮುದಾಯ ಹೆಚ್ಚು ನಷ್ಟಕ್ಕೆ ಒಳಗಾಗುತ್ತದೆ ಎಂದು ಕಿಡಿಕಾರಿದರು.
ಬಳಿಕ ದಸಂಸ ಕಾರ್ಯಕರ್ತರು ಚಾಮರಾಜ ಒಡೆಯರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ಮಲೆ ಮಹದೇಶ್ವರ ರಸ್ತೆ ಮಾರ್ಗವಾಗಿ ಸಾಗಿದ ಪ್ರತಿಭಟನಾ ಮೆರವಣಿಗೆಯು ಸಿದ್ಧಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಪ್ರಗತಿಪರ ಚಿಂತಕರಾದ ನಾ. ದಿವಾಕರ್, ಪ್ರೊ.ಕಾಳ ಚನ್ನೇಗೌಡ, ಹೊರೆಯಾಲ ದೊರೆಸ್ವಾಮಿ, ದೇವನೂರು ಪುಟ್ಟನಂಜಯ್ಯ, ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಅರಸನಕೆರೆ ಶಿವರಾಜ್, ಸೋಮನಾಯಕ, ಕೆಂಪಯ್ಯನಹುಂಡಿ ರಾಜು, ಹಾರೋಹಳ್ಳಿ ನಟರಾಜು, ಶಿವಮೂರ್ತಿ, ಆಲಗೂಡು ಚಂದ್ರಶೇಖರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.