ಇತಿಹಾಸದಲ್ಲಡಗಿರುವ ದೊರೆ ಮಹಿಷಾ

ಇತಿಹಾಸದಲ್ಲಡಗಿರುವ ದೊರೆ ಮಹಿಷಾ

ಡಾ. ದಿಲೀಪ್ ನರಸಯ್ಯ ಎಂ

ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯ‍ನನ್ನು ಮರೆಮಾಚಲು ಸಾಧ್ಯವಿಲ್ಲ. ಅಂತೇಯೇ  ಮಹಿಷಸೂರನ ಸತ್ಯ ಇತಿಹಾಸವವನ್ನು ಪುರಾಣವೆಂಬ ಸುಳ್ಳಿನಿಂದ ಸದಾ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಪ್ರಸ್ತುತದಲ್ಲಿ ಸಾಭೀತಾಗಿದೆ. ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ವರ್ಣ, ಧರ್ಮ, ಜಾತಿ, ಲಿಂಗ ಮತ್ತು ವರ್ಗ ಬೇಧಗಳನ್ನು ಜಾರಿಗೆ ತಂದು ಮೂಲ ಭಾರತೀಯರ ಆಢಳಿತ ವ್ಯವಸ್ಥೆಯನ್ನು ಕಬ್ಜಗೊಳಿಸಿಗೊಂಡರು. ಬಿಳಿ ಶ್ರೇಷ್ಠ ಕಪ್ಪು ಕನಿಷ್ಠ, ಆರ್ಯರು ಶ್ರೇಷ್ಠ ದ್ರಾವಿಡರು ಕನಿಷ್ಠ, ಹಸು ಶ್ರೇಷ್ಠ  ಎಮ್ಮೆ ಅನಿಷ್ಠ ಎಂಬಿತ್ಯಾದಿ ಮೌಢ್ಯಗಳನ್ನು ನಂಬಿಸಿ ಬಲವಂತಾಗಿಯೇ ಮೂಲನಿವಾಸಿಗಳ ಮೇಲೆ ಏರುತ್ತಾ ಬಂದಿದ್ದಾರೆ. ತಮಿಳು ಪ್ರಾಚೀನ ಗ್ರಂಥವಾದ ‘ಸಂಗಂ’ ಸಾಹಿತ್ಯದಲ್ಲಿ ಮಹಿಷೂರನ್ನು ‘ಎರುಮೈ ನಾಡು’ ಎಂದು ಕರೆಯಲಾಗಿದೆ. ಅಂದರೆ, ಎಮ್ಮೆಗಳ ನಾಡು. ವಲಸೆ ಬಂದ ಆರ್ಯರು ತಮ್ಮೊಂದಿಗೆ ಹಸುಗಳನ್ನು ಕರೆತಂದಿರುತ್ತಾರೆ. ಪ್ರಾಚೀನ ಕಾಲದಿಂದಲೂ ಮೂಲನಿವಾಸಿಗಳು ಎಮ್ಮೆಯ ಅಸ್ಮಿತೆಯನ್ನೆ ಲಾಂಛನವಾಗಿಟ್ಟುಕೊಂಡು, ಕೃಷಿ, ಹೈನುಗಾರಿಗೆ ಮತ್ತು ಆರ್ಥಿ‍ಕ ಚಟುವಟಿಕೆಗಳಿಗೆ ಎಮ್ಮೆಯನ್ನೆ ಅವಲಂಬಿತರಾಗಿರುತ್ತಾರೆ. ಇದನ್ನು ಸಹಿಸದ ಆರ್ಯರು ಹಸು ಶ್ರೇಷ್ಠ ಎಮ್ಮೆ ಅನಿಷ್ಠ, ಕಪ್ಪು ಜನರ ಕಷ್ಟಗಳ ನೀವಾರಿಸಲು ಎಮ್ಮೆಗಳನ್ನು ಕಾಳಿಗೆ ಬಲಿ ಕೊಡಬೇಕು  ಎಂದೇಳುತ್ತಾ ಮೋಸ ಮಾಡಲು ಪ್ರಾರಂಭಿಸುತ್ತಾರೆ. ಕೋಣ ಬಲಿ ಸಂಸ್ಕೃತಿಯನ್ನು ಪೋಷಿಸಿದ ಆರ್ಯರು ಎಮ್ಮೆಗಳ ಸಂತತಿಯನ್ನು ಕಾಲಾಕ್ರಮೇಣ ಮಹಿಷಾ ಮಂಡಲದಲ್ಲಿ ನಾಶಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೋಣ ಬಲಿಕೊಡುವಂತಹ ಅನಿಷ್ಠ ಆಚಾರಣೆಗಳು ಇನ್ನು ಕೂಡ ಭಾರತೀಯ ಸಾಮಾಜದಲ್ಲಿ ಜೀವಂತವಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹೀಗೆ ಮೈಸೂರಿನಲ್ಲಿ ದೇವರ ಹೆಸರಿನಲ್ಲಿ ‘ಕೋಣ ಬಲಿ’ ಕೊಡುವ ಅನಿಷ್ಟ ಪದ್ಧತಿಯನ್ನು ಹತ್ತಿರದಿಂದ ನೋಡಿ ಅದನ್ನು ಉಗ್ರವಾಗಿ ಖಂಡಿಸಿ ಮಹಿಷಾ ಪರಂಪರೆಯನ್ನು ಶ್ರೀಸಾಮಾನ್ಯರಿಗೆ ಸಾರಲೆಂದು ಸಾಂಸ್ಕೃತಿಕ ಚಿಂತಕ ಮತ್ತು ಕ್ರಾಂತಿಕಾರಿ ಹೋರಾಟಗಾರರಾಗಿದ್ದ ದಿವಂಗತ ಮಂಟೇಲಿಂಗಯ್ಯ ಅವರು ಮೊಟ್ಟ ಮೊದಲ ಬಾರಿಗೆ 1973ರಲ್ಲಿ ಮಹಿಷಾ ದಸರಾವನ್ನು ಮೈಸೂರಿನಲ್ಲಿ ಪ್ರಾರಂಭಿಸಿ ಭವ್ಯ ಚರಿತ್ರೆಯನ್ನು ಪುನರ್ ರಚಿಸಲು ಮೂಲನಿವಾಸಿಗಳಿಗೆ ಕರೆನೀಡುತ್ತಾರೆ. ಆ ‘ಮಹಿಷಾ ದಸರಾ’ ಕಾರ್ಯಕ್ರಮಕ್ಕೆ ವಿಶ್ವರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗರಾದ ಪ್ರಕಾಶ ಅಂಬೇಡ್ಕರ್ ರವರು ಚಾಲನೆ ನೀಡಿದ್ದು ಇಂದು ಇತಿಹಾಸ.

ಸಂಸ್ಕೃತ ಭಾಷೆಯಲ್ಲಿ ಮಹಿಷಾ ಎಂದರೆ ಶ್ರೇಷ್ಠ ಮತ್ತು ಬಲಿಷ್ಠ ಎಂಬ ಅರ್ಥವಿದೆ. ಆರ್ಯರೇ ಮಹಿಷಾ ಶ್ರೇಷ್ಠ ಮತ್ತು ಬಲಿಷ್ಠನೆಂದು ಒಪ್ಪಿದ್ದಾದರು ಮಹಿಷಾ ರಾಕ್ಷಸ ಎಂದು ಕಥೆಗಟ್ಟಲಾಯಿತು. ಹೀಗೆ ಭಾರತದ ಮೂಲನಿವಾಸಿ ಅಸುರ ರಾಜರುಗಳನ್ನೆಲ್ಲಾ ದುಷ್ಟರು, ನೀಚರು, ರಣರಾಕ್ಷಸರು ಎಂದು ಜರಿದು ಪೀಳಿಗೆಯಿಂದ ಪೀಳಿಗೆಗೆ ವೈದಿಕರು  ಹೇಳುತ್ತಾ ಬಂದಿರುವುದು ಇಂದಿಗೂ ಮುಂದುವರೆತ್ತಿದ್ದು ಅದನ್ನು ತಡೆಯಬೇಕಿದೆ . ವೈದಿಕರ ಪರ ಸದಾ ವಕಾಲತ್ತು ವಹಿಸಿಕೊಂಡು ಬರುವ ಮನುವಾದಿ ಮತ್ತು ಸಂವಿಧಾನ ವಿರೋಧಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯು ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲು ಬಿಡುವುದಿಲ್ಲ ಹಾಗೂ ತಾಯಿ ಚಾಮುಂಡಿಗೆ ಅವಮಾನಿಸುವುದನ್ನು ತಡೆಯುತ್ತೇನೆ ಎಂದು ವೀರಾವೇಷದಲ್ಲಿ ಮಾಧ್ಯಮಗಳ ಮೂಲಕ ಹೇಳಿಕೊಂಡು ಅನವಶ್ಯಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸುತ್ತಿರುವುದಕ್ಕೆ  ಕಾನೂನಿನ ಕಡಿವಾಣ ಬೀಳಬೇಕಿದೆ.

 

ಮೈಸೂರಿನಲ್ಲಿ ದಿನಾಂಕ 21.09.2024ರಂದು ಮಹಿಷಾ ದಸರಾ ಆಚರಣಾ ಸಮಿತಿಯು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಯಾವೋಬ್ಬ ಸಂಪನ್ಮೂಲ ವ್ಯಕ್ತಿಯಾಗಲಿ ಅಥವಾ ಅತಿಥಿಗಳಾಗಲೀ ಶ್ರೀ. ಚಾಮುಂಡೇಶ್ವರಿ ತಾಯಿಯನ್ನು ಇಯ್ಯಾಳಿಸುವುದಿರಲಿ, ಆ ಮಹಾ ತಾಯಿಯ ಹೆಸರನ್ನೆ ಹೇಳದೇ ಕೇವಲ  ಮಹಿಷಾ ಮಂಡಲ ಕುರಿತು ಮಾತ್ರ ವಿಚಾರ ಮಂಡಿಸಿದ್ದು ಮಹಿಷಾ ಪ್ರತಿನಿಧಿಗಳ ವೈಚಾರಿಕ, ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಪ್ರಭುಧ್ಧತೆಯನ್ನು ತೋರಿಸುತ್ತದೆ. ಮಹಿಷಾ ದಸರಾ ಆಚರಣೆಯು ನಾಡ ದೇವತೆ ಚಾಮುಂಡಿ ವಿರುದ್ಧವಲ್ಲವೆಂದು ಆಯೋಜಕರು ಮತ್ತು ಪ್ರಗತಿಪರರರು ಕಳೆದ ಹತ್ತಾರು ವರ್ಷಗಳಿಂದ ಹೇಳುತ್ತಾ ಬಂದರು ಕೆಲ ಧರ್ಮಾಂಧಿತರು ಹಿಂದೂ ಧರ್ಮದ ವಿರೋಧಿಗಳೆಂದು ಹಣೆಪಟ್ಟಿ ಕಟ್ಟುವುದು ಯಾವ ನ್ಯಾಯ?.

 

ವೈದಿಕ ಪುರಾಣಕಾರರು ನೈಜ ಇತಿಹಾಸವನ್ನು ಮುಚ್ಚಿಡುವ ಹುನ್ನಾರದಿಂದ ಮಹಿಷಾಸುರ ಕೆಟ್ಟವನು, ಅವನೊಬ್ಬ ನರಭಕ್ಷಕನಾಗಿದ್ದ, ಜನಾಢಳಿತ ವಿರೋಧಿಯಾಗಿದ್ದ ಎಂಬಿತ್ಯಾದಿ ಕಟ್ಟುಕಥೆಗಳನ್ನು ವ್ಯವಸ್ಥಿತವಾಗಿ ಜನಮಾಸದಲ್ಲಿ ಭಿತ್ತಿರುವುದನ್ನು ಬೇರು ಸಮೇತ ಕಿತ್ತಾಕಬೇಕಿದೆ. ಈ ದೇಶದ ಮೂಲ ನಿವಾಸಿಗಳಿಗೆ ಮಹಿಷಾ ರಾಕ್ಷಸನಾಗಿರಲಿಲ್ಲ ಬದಲಾಗಿ ಮಹಾನ್ ರಕ್ಷಕನಾಗಿದ್ದನು ಎಂಬುದನ್ನು ಜಾಗೃತಿ ಮೂಡಿಸುವ ಜವಾಬ್ದಾರಿ ವೈಚಾರಿಕ ವಿದ್ಯಾವಂತರ ಮೇಲಿದೆ. ಮಹಿಷನು ವೈದಿಕರ ಅಧಾರ್ಮಿಕ ಆಚರಣೆಗಳನ್ನು ಧಿಕ್ಕರಿಸಿ ಮೂಲನಿವಾಸಿಗಳ ಕಲ್ಯಾಣಕ್ಕಾಗಿ ಮತ್ತು ಪರಿಸರ ಸಂರಕ್ಷಿಸುತ್ತಿದ್ದ ರಾಜನಾಗಿದ್ದನು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಕುತೂಹಲವೇನೆಂದರೆ, ಮಹಿಷಾಸುರನಿಗು ಚಾಮುಂಡೇಶ್ವರಿಗೂ ಯುದ್ಧ ನಡೆದ ಸ್ಥಳವನ್ನೆ ಚಾಮುಂಡಿ ಬೆಟ್ಟ ಎಂದು ಹಿಂದುತ್ವವಾದಿಗಳ ಮೊಂಡು ವಾದವಾಗಿದೆ. ಬೆಟ್ಟದಲ್ಲಿರುವ ಕೋಣನಕುಂಟೆ ಎಂಬ ಬೃಹತ್ ಬಂಡೆಯ ಮೇಲೆ ಮಹಿಷಾಸುರನನ್ನು ಚಾಮುಂಡಿ ತಾಯಿ ಕೊಂದದ್ದು ಎಂದು ವಾದಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ಆ ಸ್ಥಳವನ್ನು ಪರೀಕ್ಷಿಸಿದರೆ ಬಂಡೆಯ ಮೇಲೆ ಯಾವ ಯುದ್ಧವೂ ನಡೆದಿರುವ ಕುರುಹುಗಳಿಲ್ಲ ಎಂದು ಸಾಭೀತಾಗಿದೆ.

 

 

ದಕ್ಷಿಣ ಪ್ರಾಂತ್ಯವನ್ನಾಳಿದ ಗಂಗರು, ಚೋಳರು, ಹೊಯ್ಸಳರ ಕಾಲಘಟ್ಟಗಳಲ್ಲಾಗಲಿ ಅಥವಾ ಅವರ ಹಿಂದಿನ ಕಾಲಘಟ್ಟಗಳಲ್ಲಾಗಲಿ ಚಾಮುಂಡಿ ಮತ್ತು ಮಹಿಷನ ನಡುವೆ ಯುದ್ಧವಾಗಿರುವ ಪ್ರಸಂಗವೇ ಉಲ್ಲೇಖವಾಗಿಲ್ಲ. ಅಂದಿನ ರಾಜಮನೆತನಗಳಿಗೆ ಯುದ್ಧದ ಕಥೆ ತಿಳಿದಿದ್ದರೆ ಬಹುಶ: ಶಾಸನಗಳಲ್ಲಿ ಬರೆಸುತ್ತಿರಲಿಲ್ಲವೆ?. ಅಂತಹ ಯಾವುದೇ ಶಾಸನಗಳು ಚಾಮುಂಡಿ ಬೆಟ್ಟದಲ್ಲಿ ಇದುವರೆವಿಗೂ ಪ್ರಾಚ್ಯಾವಸ್ತು ಸಂಶೋಧಕರ ಹುಡುಕಾಟಕ್ಕೆ ಸಿಕ್ಕಿರುವುದಿಲ್ಲ ಎಂದು ಲೇಖಕ ಅಶೋಕಪುರಂ ಸಿದ್ಧಸ್ವಾಮಿ ಅವರ ಕೃತಿಗಳಲ್ಲಿ ವಿವರಿಸಿದ್ದಾರೆ. ಹಾಗಾದರೆ ನಿಮಗೆಲ್ಲಾ, ಇಲ್ಲಿ ರಾಜ ಮಹಿಷಾಸುರನಿಗು ಮತ್ತು ತಾಯಿ ಚಾಮುಂಡೇಶ್ವರಿ ನಡುವೆಯೂ ಯುದ್ಧವೇ ನಡೆದಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ಕುತೂಹಲವೆಂದರೆ ದಾಖಲಾತಿಗಳ ಪ್ರಕಾರ ಮಹಿಷಾನ ಆಡಳಿತ ಅವಧಿಯೇ ಬೇರೆ. ಚಾಮುಂಡೇಶ್ವರಿ ನಾಡದೇವತೆಯಾದ ಕಥೆಯ ಕಾಲಘಟ್ಟವೇ ಬೇರೆ ಎಂಬುದು ಇತಿಹಾಸಕಾರರ ವಿಶ್ಲೇಷಣೆಯಾಗಿದೆ.

 

 

ಮೈಸೂರಿಗೆ ಮಹಿಷಾಸುರನಿಂದಾಗಿ ಮಹಿಷೂರು ಎಂಬ ಹೆಸರು ಬಂದಿದೆ. ಮಹಿಷಮಂಡಲ, ಮಹಿಷೂರು, ಮಹಿಷ ನಾಡು, ಮಹಿಷಪುರಿ, ಮಹಿಷ ರಾಷ್ಟ್ರ ಮೊದಲಾದ ಹೆಸರುಗಳು ಬರಲು ಮಹಿಷನ ಅಸ್ತಿತ್ವ, ಕೊಡುಗೆ ಮತ್ತು ಅಸ್ಮಿತೆಗಳೆ ಪ್ರಮುಖ ಕಾರಣಗಳಾಗಿವೆ. ಬೌದ್ಧ ಗ್ರಂಥ ದೀಪವಂಶದಲ್ಲಿ ಮೌರ್ಯ ಚಕ್ರವರ್ತಿ ಅಶೋಕನು ಮಹಾದೇವ ಥೇರ ಎಂಬ ಭಿಕ್ಕುವನ್ನು ದಕ್ಷಿಣ ಭಾರತಕ್ಕೆ ಮತ್ತು ತನ್ನ ಮಗಳು ಸಂಘಮಿತ್ರೆಯನ್ನು ಶ್ರೀಲಂಕಾ ದೇಶಕ್ಕೆ ನಿಯೋಜಿಸಿದ ಬಗ್ಗೆ ವಿಫುಲವಾದ ಮಾಹಿತಿ ಲಭ್ಯವಿದೆ. ಮೈಸೂರು ಗೆಜೆಟಿಯರ್‌ನಲ್ಲಿ ಮಹಿಷ ಮಂಡಲವನ್ನು ಪ್ರಮುಖವಾಗಿ ನಮೂದಿಸಲಾಗಿದೆ. ಮೈಸೂರು ಸೀಮೆಗೆ ಮಹಿಷ ರಾಷ್ಟ್ರ ಎಂಬ ಹೆಸರು ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ವಿಸ್ತೃತ ಮಾಹಿತಿ ಲಭಿಸುತ್ತವೆ. ಅಂದು ಮಹಿಷಮಂಡಲ ಕನ್ಯಾಕುಮಾರಿಯಿಂದ ವಿಂಧ್ಯ ಪರ್ವತದ ತನಕ ವ್ಯಾಪಿಸಿತ್ತು ಎಂದು ಭೂಗೋಳ ಶಾಸ್ತ್ರಜ್ಞರು ಅಧಿಕೃತವಾಗಿ ಉಲ್ಲೇಖಿಸಿದ್ದಾರೆ.

8ನೇ ಶತಮಾನದ ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇವಾಲಯವನ್ನು ಇಂದಿನ ಚಾಮುಂಡಿ ಬೆಟ್ಟದಲ್ಲಿ ಪುನರ್ ನಿರ್ಮಾಣಗೊಳಿಸಲಾಯಿತು.

 

ನಂತರದ ವಿಷ್ಣುವರ್ಧನ ಕಾಲದ 1128ರ ಶಿಲಾ ಶಾಸನಗಳಲ್ಲಿ ಚಾಮುಂಡಿ ಬೆಟ್ಟವನ್ನು “ಸ್ವಸ್ತ ಶ್ರೀ ಮಹಾಬಲ ತೀರ್ಥ” ಎಂದು ಕೆತ್ತಲಾಗಿದೆ. 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಲಘಟ್ಟದಲ್ಲಿಯೂ ಈ ಬೆಟ್ಟವನ್ನು ಮಹಾಬಲಗಿರಿ ಎಂದೇ ಪ್ರಖ್ಯಾತವಾಗಿತ್ತು. ಅಷ್ಟೇ ಯಾಕೆ? ಕ್ರಿ.ಶ. 1399ರಲ್ಲಿ ಪ್ರಾರಂಭವಾದ ಯಧುವಂಶದ ಯದುಕೃಷ್ಣ ಓಡೆಯರ್ ಕಾಲದಲ್ಲಿಯೂ ಮಹಾಬಲಗಿರಿ ಬೆಟ್ಟ ಎಂದೇ ಸಂಭೋಧಿಸುತ್ತಿದ್ದರು. ಇಂದಿಗೂ, ಮೈಸೂರು ರಾಜವಂಶಸ್ಥರು ಅಧಿಕೃತ ಲೆಟರ್ ಹೆಡ್ ನಲ್ಲಿ ಮಹಿಷೂರು ಎಂದೇ ಬಳಸುವುದನ್ನು ಯದುವಂಶ ಮುಂದುವರೆಸಿದೆ. ಪ್ರಸ್ತುತದಲ್ಲಿ ಮಹಿಷಾ ಮಂಡಲದಲ್ಲಿ ನೆಲೆಸಿದ್ದ ಪ್ರಜೆಗಳೆಲ್ಲಾ ನಾಗವಂಶಕ್ಕೆ ಸೇರಿದವರು. ಇವರು ಮೂಲತಹ ಬೌದ್ಧರು ಎಂಬ ಚರ್ಚೆಗೆ ಗ್ರಾಸವಾಗಿದೆ. 1970 ರಲ್ಲಿ ಕರ್ನಾಟಕ ಸರ್ಕಾರಿ ಪ್ರಕಾಶನ ಮಂದಿರ (ನಿಯಮಿತ) ವತಿಯಿಂದ ಪ್ರಕಟವಾದ ಡಾ.ಎಂ.ವಿ.ಕೃಷ್ಣರಾವ್ ಮತ್ತು ಎಂ.ಎಂ.ಕೇಶವ ಭಟ್ಟರ ಕರ್ನಾಟಕದ ಇತಿಹಾಸ ದರ್ಶನ ಕೃತಿಯಲ್ಲಿ “ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯಾದ ಅಶೋಕನು ರಕ್ಕತ ಎಂಬ ಬೌದ್ಧ ಭಿಕ್ಕುವನ್ನು ಬನವಾಸಿಗೂ ಹಾಗೂ ಮಹಾದೇವ ಎಂಬ ಭಿಕ್ಕುವನ್ನು ಮಹಿಷಾ ಮಂಡಲಕ್ಕೂ ಬೌದ್ಧ ಮತ ಪ್ರಚಾರಕ್ಕಾಗಿ ಕಳುಹಿಸಿಕೊಟ್ಟಿದ್ದಾನೆಂದು ಬೌದ್ಧ ಗ್ರಂಥಗಳು ತಿಳಿಸುತ್ತದೆ”. ಎಂದು ದಾಖಲಿಸುತ್ತಾರೆ.

 

ಇನ್ನು ಮುಂದುವರೆದು 1979 ರಲ್ಲಿ ಮೈಸೂರು ವಿವಿಯಲ್ಲಿ ಪ್ರಕಟವಾದ ಕನ್ನಡ ವಿಶ್ವಕೋಶ ಪುಟ ಸಂಖ್ಯೆ 34 ರಲ್ಲೂ ಸಹ ಮುಗ್ಗಲಿ ಪುತ್ರ ತಿಸ್ನ ಎಂಬ ಬೌದ್ಧ ಮಹಾಸಭೆ ಅಧ್ಯಕ್ಷನೂ ತೇರಾ ಮಹಾದೇವನೆಂಬ ಬೌದ್ಧ ಭಿಕ್ಕನ್ನು ಮಹಿಷಾ ಮಂಡಲಕ್ಕೆ ಬಂದಿದ್ದನೆಂದು ಉಲ್ಲೇಖವಿದೆ.

ಇಷ್ಟೆಲ್ಲಾ ಐತಿಹಾಸಿಕ ದಾಖಲೆಗಳಿರುವ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ವೈದಿಕರು ನರಭಕ್ಷಕನಂತೆ ಬಿಂಬಿಸಿದ್ದು ಮಾತ್ರ ಘೋರ ಅಪರಾಧ. ಆದರೇ, ಇಂದು ಎಲ್ಲವೂ ಬದಲಾಗಿದೆ. ಮಹಿಷಾಸುರ ರಾಕ್ಷಕನಾಗಿರಲಿಲ್ಲ. ಆತನೊಬ್ಬ ಸತ್ಯ, ಪ್ರೀತಿ, ಅಹಿಂಸೆ, ಸಮಾನತೆ ಮತ್ತು ಭಾತೃತ್ವದಲ್ಲಿ ನಂಬಿಕೆಯನ್ನಿಟ್ಟು ತನ್ನ ನಾಡು ಮತ್ತು ಪ್ರಜೆಗಳನ್ನು ಮಮತೆಯಿಂದ ಕಾಣುತಿದ್ದ ಮಾತೃ ಹೃದಯಿಯಾಗಿದ್ದನು ಎಂದು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಸಂಶೋಧಕರು ಬಹಿರಂಗ ಪಡಿಸಿದ್ದಾರೆ. ಮಹಿಷಾಸುರನು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಅಪಾರವಾದ ಗೌರವವನ್ನಿಟ್ಟು ಪಿತೃಪಕ್ಷ (ಪೂರ್ವಿಕರ ನೆನೆಯುವ ದಿನ) ಎಂಬ ಆಚರಣೆಗೆ ಬುನಾದಿ ಹಾಕಿಕೊಟ್ಟವನು. ಅದನ್ನು ಪಾಲಿಸುತ್ತಿರುವ ಮೂಲನಿವಾಸಿಗಳು ಮೈಸೂರು ದಸರಾ ಪ್ರಾರಂಭವಾಗುವ ಮುನ್ನ, ಪಸ್ಚಿಮ ಬಂಗಾಳ, ಜಾರ್ಕಂಡ್, ಮಧ್ಯಪ್ರದೇಶ, ಒಡಿಶಾ, ಅಸ್ಸಾಂ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಹಿಷಾಸುರನಿಗೆ ತಮ್ಮದೇ ರೀತಿಯ ಗೌರವ ಸಲ್ಲಿಸುವ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ.

 

ಸಾವಿರಾರು ವರ್ಷಗಳಿಂದ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ಮರೆತಿದ್ದ ಇಲ್ಲಿನ ಮೂಲನಿವಾಸಿಗಳು ಮತ್ತೆ ಆತನನ್ನು ಸ್ಮರಿಸುತ್ತಿರುವುದು ಪ್ರಶಂಸನೀಯ. ಇವರ ಈ ಆಚರಣೆ ನಾಡದೇವತೆ ಚಾಮುಂಡೇಶ್ವರಿ ನಂಬಿರುವವರ ವಿರುದ್ಧವಾಗಲಿ ಅಥವಾ ಪರ್ಯಾಯ ದಸರಾವೆಂದು ಯಾರು ಭಾವಿಸಬೇಕಿಲ್ಲ ಮತ್ತು ಹಾಗೆ ಅಪಪ್ರಚಾರ ಮಾಡುವವರ ಪರ ನಿಲ್ಲಲೂ ಬೇಕಿಲ್ಲ. ರಾಜ ಮಹಿಷಾನ ಇತಿಹಾಸ ಪ್ರಜ್ಞೆಯಿದ್ದ ದೊಡ್ಡ ದೇವರಾಜ ಓಡೆಯರ್ 1659 ರಲ್ಲಿ ಚಾಮುಂಡಿ ಬೆಟ್ಟದಲ್ಲಿ ರಾಜ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಸ್ಥಾಪಿಸುತ್ತಾರೆ.  ಪ್ರತಿಮೆಯನ್ನು ಸ್ಥಾಪಿಸಿ ಸುಮಾರು ಐದು ಶತಮಾನಗಳಾದರು ಮಹಿಷಾಸುರನ ಪ್ರತಿಮೆಗೆ ಒಂದು ಗೋಪುರವನ್ನು ನಿರ್ಮಿಸದೇ ಇರುವುದು ದ್ರಾವಿಡ ದೊರೆಗೆ ಮಾಡಿರುವ ಅಪಮಾನವೇ ಆಗಿದೆ. ರಾಜಕೀಯ ಭಾಷಣಗಳಲ್ಲಿ ನಾನು ದ್ರಾವಿಡ ಎಂದೇಳುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸನ್ಮಾನ್ಯ ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸರ್ಕಾರ ಮೈಸೂರಿನ ಮಹಿಷಾಸುರರನ ಪ್ರತಿಮೆಗೆ ಅಮೃತಶಿಲೆಯ ಗೋಪುರವನ್ನು ನಿರ್ಮಿಸಿ ಹಾಗೂ ಮಹಿಷಾ ಮಂಡಲ ಪ್ರಾಧಿಕಾರವನ್ನು ರಚಿಸುವ ಮೂಲಕ ಮೂಲನಿವಾಸಿಗಳ ಚರಿತ್ರೆ ಮತ್ತು ಅಭಿವೃದ್ದಿಯನ್ನು ಮಾಡಬೇಕಿದೆ.

 

ಬಹಳ ಮುಖ್ಯವಾಗಿ, ಮೈಸೂರು ವಿಶ್ವವಿದ್ಯಾನಿಯದಲ್ಲಿ ಮಹಿಷಾ ಪೀಠವನ್ನು ರಚಿಸಿದರೆ ಮಾತ್ರ ಕನ್ಯಾಕುಮಾರಿಯಿಂದ ವಿಂಧ್ಯ ಪರ್ವತದವರಿಗೆ ಮೂಲನಿವಾಸಿ ರಾಜರು ಮತ್ತು ಆಡಳಿತದ ಬಗ್ಗೆ ಸಂಶೋ‍ಧನೆ ನಡೆಸಲು ಮತ್ತು ಇಂದಿನ ಮೂಲನಿವಾಸಿಗಳನ್ನು ಸಾಂಸ್ಕೃತಿಕವಾಗಿ ಒಂದು ಮಾಡಲು ಸಾಧ್ಯವಾಗುತ್ತದೆ.

ಕೊನೆಯದಾಗಿ, ಮಹಿಷಾ ಮಂಡಲೋತ್ಸವ ಮಾಡುವ ಮೂಲಕ ತಮ್ಮ ಮೂಲ ಸಂಸ್ಕೃತಿಯನ್ನು ಪುನರ್ ಆಚರಿಸುತ್ತಿರುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ರವರು ನೀಡಿರುವ ಹೇಳಿಕೆ ಯದುವಂಶದ ಸಂಸ್ಕಾರ ಮತ್ತು ಪ್ರಜಾಪ್ರಭುತ್ವದ ಮೇಲೆ ಇಟ್ಟಿರುವ ಗೌರವಕ್ಕೆ ನಾವು ಮೂಲ ನಿವಾಸಿಗಳು ಅಭಿನಂಧನೆ ಸಲ್ಲಿಸಬೇಕಿದೆ.

ದಿಲೀಪ್ ನರಸಯ್ಯ ಎಮ್, ಅವರು ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದು ಪ್ರಾಧ್ಯಾಪಕರಾಗಿದ್ದಾರೆ.