10% EWS: ಪಾಸಮಂಡ ಮತ್ತು ಬಹುಜನ ಮಕ್ಕಳ ಶೈಕ್ಷಣಿಕ ಹಕ್ಕುಗಳು

10% EWS: ಪಾಸಮಂಡ ಮತ್ತು ಬಹುಜನ ಮಕ್ಕಳ ಶೈಕ್ಷಣಿಕ ಹಕ್ಕುಗಳು

ಅನು ರಾಮದಾಸ್: ಬಹುಜನ ಮತ್ತು ಪಾಸಮಂಡ ಜನರಿಗೆ ಶಿಕ್ಷಣದ ಹಕ್ಕು (ಆರ್‌ಟಿಇ) ಎಂದರೇನು?

ನಾಜ್ ಖೈರ್: 1950 ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನವು ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಲು ಸರ್ಕಾರಕ್ಕೆ ಆದೇಶಿಸಿತು. ಆದಾಗ್ಯೂ, ನಿಬಂಧನೆಯನ್ನು ಆರ್ಟಿಕಲ್  45, ರಾಜ್ಯ ನೀತಿಯ ನಿರ್ದೇಶನ ತತ್ವದ ರೂಪದಲ್ಲಿ ಮಾಡಲಾಯಿತು . , ಇದು ನ್ಯಾಯಾಲಯಗಳಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುವುದಿಲ್ಲ. ಅದರ ನಂತರ, 2002 ರಲ್ಲಿ 86 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಮಕ್ಕಳಿಗೆ ಶಿಕ್ಷಣವು ಮೂಲಭೂತ ಹಕ್ಕಾಗುವ ಹೊತ್ತಿಗೆ ಐದು ದಶಕಗಳು ಕಳೆದಿತ್ತು. ಈ ಅವಧಿಯಲ್ಲಿ, ತೀವ್ರವಾದ ಶೈಕ್ಷಣಿಕ ಚಳುವಳಿಗಳು, ಜಾಗತಿಕ ಮತ್ತು ಭಾರತೀಯ ಮತ್ತು ಮಕ್ಕಳ ಹಕ್ಕುಗಳ ಅಭಿಯಾನಗಳು ನಡೆದವು. ಯುಎನ್ ಮಕ್ಕಳ ಹಕ್ಕುಗಳ ಒಪ್ಪಂದವು  ಶಿಕ್ಷಣವನ್ನು ಮಕ್ಕಳ ಹಲವಾರು ಹಕ್ಕುಗಳಲ್ಲಿ ಒಂದೆಂದು ಗುರುತಿಸಿತು, ವಿಶ್ವ ಬ್ಯಾಂಕ್ ಮತ್ತು ಯುರೋಪಿಯನ್ ಯೂನಿಯನ್  ಮತ್ತುಇತರೆ ಸಂಸ್ಥೆಗಳು  ದೇಶದೊಳಗಿನ ಶೈಕ್ಷಣಿಕ ಸುಧಾರಣೆಗಳ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿತು, ಬಾಲಕಾರ್ಮಿಕ ನಿರ್ಮೂಲನೆ ಯಾಯಿತು, ಇತ್ಯಾದಿ. 86 ನೇ ಸಾಂವಿಧಾನಿಕ ತಿದ್ದುಪಡಿಯ ಪ್ರಕಾರ ಶಿಕ್ಷಣದ ಹಕ್ಕನ್ನು (ಆರ್ಟಿಕಲ್ 21 ಎ) ಬದುಕುವ ಮೂಲಭೂತ ಹಕ್ಕಿನ ಭಾಗವಾಗಿ ಮಾಡಲಾಯಿತು  (ಆರ್ಟಿಕಲ್ 21). 2002 ರಲ್ಲಿ ಸಾಧಿಸಿದ ಶಿಕ್ಷಣದ ಮೂಲಭೂತ ಹಕ್ಕು 2009 ರಲ್ಲಿ ಶಿಕ್ಷಣದ ಹಕ್ಕು ಕಾಯಿದೆಯ ಅಂಗೀಕಾರದೊಂದಿಗೆ ವಾಸ್ತವವಾಯಿತು. ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯಿದೆ, 2009 ಸಂವಿಧಾನವು ಖಾತರಿಪಡಿಸಿದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೆ ತರಲು ನಿಬಂಧನೆಗಳನ್ನು ಹಾಕಿತು.

ಏಪ್ರಿಲ್ 1, 2010 ರಂದು ಜಾರಿಗೆ ಬಂದ ಆರ್‌ಟಿಇ ಕಾಯ್ದೆ, 2009 ಶಿಕ್ಷಣದಲ್ಲಿ ತಾರತಮ್ಯದ ಅಂತ್ಯವನ್ನು ಸೂಚಿಸಿದ್ದರಿಂದ ಅದನ್ನು ವ್ಯಾಪಕವಾಗಿ  ಸಂಭ್ರಮದಿಂದ  ಆಚರಿಸಲಾಯಿತು. ಜಾತಿ, ಧರ್ಮ, ಲಿಂಗ, ಜನಾಂಗೀಯತೆ, ಅಂಗವೈಕಲ್ಯ  ಇತ್ಯಾದಿಗಳನ್ನು ಲೆಕ್ಕಿಸದೆ 6 -14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಶಿಕ್ಷಣದ ಉದ್ದೇಶಕ್ಕಾಗಿ ಸಮಾನರಾದರು. ಶಿಕ್ಷಣವನ್ನು ಸಮಾಜದ ಕೆಲವು ಸಮುದಾಯ /ಗುಂಪುಗಳಿಗೆ ಮಾತ್ರ ಸೀಮಿತಗೊಳಿಸುವ ಎಲ್ಲಾ ಸಾಮಾಜಿಕ, ಸಾಂಪ್ರದಾಯಿಕ ಮತ್ತು ಐತಿಹಾಸಿಕ ಆಧಾರಗಳನ್ನು ತೆಗೆದುಹಾಕಲಾಯಿತು . ಇನ್ನೊಂದು ರೀತಿ  ಹೇಳುವುದಾದರೆ, ಶಿಕ್ಷಣಕ್ಕೆ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಯಿತು . ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಕೊರತೆಯನ್ನು ನೀಗಿಸಲು  ಹೋರಾಡುತ್ತಿರುವ ಬಹುಜನ -ಪಾಸಮಂಡ (ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಪಾಸಮಂಡ) ಗೆ ಇದು ಮಹತ್ವದ ಬೆಳವಣಿಗೆಯಾಯಿತು.

1961 ರಲ್ಲಿ, ಒಟ್ಟು ಜನಸಂಖ್ಯೆಗೆ ಸಾಕ್ಷರತಾ ಪ್ರಮಾಣವು 28.31% ಆಗಿದ್ದರೆ,  ಎಸ್‌ಸಿ ಮತ್ತು ಎಸ್‌ಟಿಗೆ 10.27% ಮತ್ತು 8.53% ಆಗಿತ್ತು. 2011 ರಲ್ಲಿ (ಆರ್‌ಟಿಇ ಕಾಯ್ದೆ, 2009 ರ ಜಾರಿಗೊಳಿಸುವ ವರ್ಷಕ್ಕೆ ಹತ್ತಿರ), ಅಂಕಿಅಂಶಗಳು ಒಟ್ಟು ಜನಸಂಖ್ಯೆಗೆ 74.04% ಸಾಕ್ಷರತೆ ಮತ್ತು ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಕ್ರಮವಾಗಿ 66.07% ಮತ್ತು 59% ಸಾಕ್ಷರತೆ ಇತ್ತು.  ಒಬಿಸಿ ಜಾತಿ ಜನಗಣತಿ ಬಾಕಿ ಉಳಿದಿರುವುದರಿಂದ  ಜನಗಣತಿ ದತ್ತಾಂಶದಿಂದ ಒಬಿಸಿಗೆ ಯಾವುದೇ ಸಾಕ್ಷರತೆ ಮಾಹಿತಿ  ಸಿಗುವುದಿಲ್ಲ . ಆದಾಗ್ಯೂ, ಶೈಕ್ಷಣಿಕ ಸಾಧನೆಯ ಸೂಚ್ಯಂಕದಲ್ಲಿ ಸುರ್ಜಿತ್ ಭಲ್ಲಾ ಲೇಖನದ  ಪ್ರಕಾರ, 1999 ರಲ್ಲಿ ಒಬಿಸಿ  7.1 ಆಗಿದ್ದು, ಇದು 2011 ರಲ್ಲಿ 10.7 ಕ್ಕೆ ಏರಿತು. ಒಬಿಸಿಯೊಳಗೆ, ಒಬಿಸಿ ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಯ ಸೂಚ್ಯಂಕ (ಪಾಸಮಂಡ) 1999 ರಲ್ಲಿ 6.3 ಮತ್ತು 2011 ರಲ್ಲಿ  8.4 ಇತ್ತು.. 2011 ರಲ್ಲಿ ಒಬಿಸಿ ಮುಸ್ಲಿಮರು ಸರಾಸರಿ ಒಬಿಸಿಗಿಂತ ಹಿಂದುಳಿದಿದ್ದಾರೆ ಮತ್ತು ಇತರ ಎಲ್ಲ ಒಬಿಸಿ ಉಪ- ವರ್ಗಗಳಿಗಿಂತ (ಕ್ರಿಶ್ಚಿಯನ್, ಹಿಂದೂ ಮತ್ತು ಸಿಖ್) ಹಿಂದೆ ಇದ್ದಾರೆ ಮತ್ತು ಎಸ್‌ಸಿ/ಎಸ್‌ಟಿ ಗಿಂತ ಸ್ವಲ್ಪಮಟ್ಟಿಗೆ (0.3 ಪಾಯಿಂಟ್‌ಗಳ ಮೂಲಕ) ಮುಂದಿದ್ದಾರೆ .

ಆದ್ದರಿಂದ, ಸ್ವಾತಂತ್ರ್ಯದ ನಂತರ ಬೃಹತ್ ಶೈಕ್ಷಣಿಕ ವಿಸ್ತರಣೆ ಮತ್ತು ಶೈಕ್ಷಣಿಕ ಸುಧಾರಣಾ ಕ್ರಮಗಳ ನಂತರವೂ, ಶಿಕ್ಷಣದಲ್ಲಿ ಸಾಮಾಜಿಕ ವರ್ಗದ ಅಂತರಗಳು ಕಂಡುಬರುತ್ತಲೇ ಇವೆ. ಆರ್‌ಟಿಇ ಕಾಯಿದೆ, 2009 ರ ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿನ ಎಲ್ಲಾ ಸಾಮಾಜಿಕ ವರ್ಗಗಳ ಅಂತರವನ್ನು ವ್ಯವಸ್ಥಿತವಾಗಿ ನಿವಾರಿಸುವ ಭರವಸೆಯನ್ನು ನೀಡಿತ್ತು. ಆದಾಗ್ಯೂ, ಆರ್‌ಟಿಇ ನಂತರದ ಅವಧಿಯು ಮಕ್ಕಳ ಶೈಕ್ಷಣಿಕ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಿತ್ತುಹಾಕುವುದನ್ನು ಮಾತ್ರ ನೋಡಿದೆ. ಬಾಲಕಾರ್ಮಿಕತೆ (ಪ್ರಧಾನವಾಗಿ ಬಹುಜನರು ಮತ್ತು ಪಾಸಮಂಡರನ್ನು ಒಳಗೊಂಡಿರುವವರು), ರಾಷ್ಟ್ರಪತಿಗಳು ಬಾಲಕಾರ್ಮಿಕತೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2016ಕ್ಕೆ ತಮ್ಮ ಒಪ್ಪಿಗೆಯನ್ನು ನೀಡುವುದರೊಂದಿಗೆ ಹಿಂದಿರುಗಿದೆ. ಪ್ರಸ್ತಾವಿತ ಹೊಸ ಶಿಕ್ಷಣ ನೀತಿ, 2016 ಆರ್‌ಟಿಇ ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳ ಮೇಲೆ ಲಕ್ಷ್ಯ ಕೊಡದೆ  ಬೇರೆಲ್ಲೋ ತಲುಪಿದೆ.  10% ಕ್ಕಿಂತ ಕಡಿಮೆ ಶಾಲೆಗಳು ಆರ್‌ಟಿಇ ಅನುಸರಿಸುತ್ತಿವೆ (ಆರ್‌ಟಿಇ ನಿಯಮಗಳು ಮತ್ತು ಮಾನದಂಡಗಳ ಅನುಸರಣೆ), ಸರ್ಕಾರಿ ಶಾಲೆಗಳು ದೇಶಾದ್ಯಂತ ಮುಚ್ಚುತ್ತಿವೆ ಮತ್ತು ಶಾಲಾ ಶಿಕ್ಷಣದ ಖಾಸಗೀಕರಣ (ಶಿಕ್ಷಣ ಮಳಿಗೆಗಳ ಪ್ರಸರಣ) ವೇಗವಾಗಿ ನಡೆಯುತ್ತಿದೆ. ಆರ್‌ಟಿಇ ಕಾಯಿದೆಯ ಪ್ರಮುಖ  ನಿಬಂಧನೆಯಾದ  ಪ್ರಾಥಮಿಕ ಹಂತದಲ್ಲಿ  ತಡೆ ಹಿಡಿಯುವುದರ ನಿಷೇಧವನ್ನು ಇತ್ತೀಚಿನ ತಿದ್ದುಪಡಿಯ ಮೂಲಕ ರದ್ದುಗೊಳಿಸಲಾಗಿದೆ. ತಡೆ ಹಿಡಿಯುವುದರ ನಿಷೇಧ  ಒಂದು ಪ್ರಮುಖ ನಿಬಂಧನೆಯಾಗಿತ್ತು, ಇದು ಹೊರಗಿಡಲಾದ ಸಮುದಾಯಗಳ (ಎಸ್‌ಸಿ, ಎಸ್‌ಟಿ, ಒಬಿಸಿ/ ಪಾಸಮಂಡ) ಮಕ್ಕಳಿಗೆ ವರದಾನವಾಗಿ ಕಂಡಿತ್ತು,  ಏಕೆಂದರೆ ಅದು ಶಾಲೆಯಿಂದ ಹೊರಗುಳಿಯುವುದನ್ನು ನಿಲ್ಲಿಸಬಹುದಾಗಿತ್ತು.  ಶಿಕ್ಷಣದಿಂದ ಎಸ್‌ಸಿ, ಎಸ್‌ಟಿ, ಒಬಿಸಿ, ಪಾಸಮಂಡ ಮಕ್ಕಳ ಐತಿಹಾಸಿಕ ಹೊರಗಿಡುವಿಕೆಯಿಂದ ಅವರು  ಶಾಲೆ ಬಿಡುವುದನ್ನು ತಪ್ಪಿಸುವುದು ಕಷ್ಟ. ಮೇಲ್ಜಾತಿಗಳ (ಸವರ್ಣರು, ಅಶ್ರಫಿಯಾಗಳು, ಇತ್ಯಾದಿ) ಪ್ರಾಬಲ್ಯ ಹೊಂದಿರುವ  ಅಧ್ಯಾಪಕರು ಮತ್ತುಆಡಳಿತ ಮಂಡಳಿ ಬಗ್ಗೆ ಮತ್ತು ಶಾಲಾ ಪ್ರಕ್ರಿಯೆಯ ಕಠಿಣತೆ ಪರಿಚಿತರಾಗಲು ಸಜ್ಜುಗೊಂಡಿಲ್ಲದ ಇವರಿಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ತಡೆ ಹಿಡಿಯುವುದರ ನಿಷೇಧ  ಇವರ  ಹಿತಾಸಕ್ತಿಯ ಪರವಾಗಿತ್ತು. . ಮೇಲೆ ಹೇಳಿದಂತೆ,  ಮಾನವ ಹಕ್ಕು ಮತ್ತು ಮೂಲಭೂತ ಹಕ್ಕಾದ  ಶಿಕ್ಷಣದ ಹಕ್ಕು ಬಹುಜನರ ಮೇಲೆ ದುರ್ಬಲ ಮಾಡುವ ಪರಿಣಾಮದೊಂದಿಗೆ ತೀವ್ರ ಅಪಾಯದಲ್ಲಿದೆ!

ಅನು : ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿ ನೀತಿಯನ್ನು  ಆರ್‌ಟಿಇ ನಲ್ಲಿ ಹೇಗೆ ನೋಡಲಾಗಿದೆ ?

ನಾಜ್: ಆರ್‌ಟಿಇ ಕಾಯಿದೆ, 2009, ಅನುದಾನರಹಿತ ಖಾಸಗಿ ಶಾಲೆಗಳು ಮತ್ತು ನಿಗದಿತ ವರ್ಗದ ಶಾಲೆಗಳಲ್ಲಿ  (ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಸೈನಿಕ ಶಾಲೆಗಳು ಮತ್ತು ಇತರೆ ನಿರ್ದಿಷ್ಟ ವರ್ಗದ ಶಾಲೆಗಳೆಂದು ಸೂಚನೆ ಪಡೆಯಬಹುದಾದ ಶಾಲೆಗಳು ) ಮೀಸಲಾತಿಯನ್ನು ಒದಗಿಸುತ್ತದೆ. ಕಾಯಿದೆಯ ಆರ್ಟಿಕಲ್ 12 (1) ಸಿ ದುರ್ಬಲ ವಿಭಾಗಗಳು (ಇಡಬ್ಲ್ಯೂಎಸ್) ಮತ್ತು ಹಿಂದುಳಿದ ಗುಂಪುಗಳಿಗೆ (ಡಿಜಿ)  ವರ್ಗ-I ಅಥವಾ ಪೂರ್ವ ಪ್ರಾಥಮಿಕದಲ್ಲಿ 25% ಮೀಸಲಾತಿಗಳನ್ನು ಒದಗಿಸುತ್ತದೆ  ಅಂದರೆ ಮೊದಲನೆಯ ತರಗತಿಯು, ತರಗತಿ-I ಅಥವಾ ಪೂರ್ವ-ಪ್ರಾಥಮಿಕ ವಿದ್ಯಾರ್ಥಿಗಳು,  25%  ಇಡಬ್ಲ್ಯೂಎಸ್ ಮತ್ತು ಮಕ್ಕಳನ್ನು ಒಳಗೊಂಡಿರಬೇಕು. ಆದಾಗ್ಯೂ, ಕಾಯಿದೆಯು ಇಡಬ್ಲ್ಯೂಎಸ್ ಮತ್ತು ಡಿಜಿ ವರ್ಗಗಳನ್ನು ವ್ಯಾಖ್ಯಾನಿಸುವುದಿಲ್ಲ.

ಭಾರತದಾದ್ಯಂತ ಇರುವ ರಾಜ್ಯಗಳು ಇಡಬ್ಲ್ಯೂಎಸ್ ಮತ್ತು ಡಿಜಿ ಅನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿವೆ. ಮೀಸಲಾತಿಗಳು ಕೇವಲ ಜಾತಿ ವರ್ಗಗಳಿಗೆ ಎಸ್ ಸಿ/ಎಸ್ ಟಿ /ಒಬಿಸಿ ಮತ್ತು ಇಡಬ್ಲ್ಯೂಎಸ್ ಗೆ ಸೀಮಿತವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಇಡಬ್ಲ್ಯೂಎಸ್ ಮತ್ತು DG ಅಡಿಯಲ್ಲಿ ಅನಾಥರು, HIV ಪಾಸಿಟಿವ್ ಮಕ್ಕಳು, ಮನೆಯಿಲ್ಲದ ಮಕ್ಕಳು, ವಿಕಲಚೇತನ  ಮಕ್ಕಳು, ಸೇನೆಯ ಪುರುಷರ ವಿಧವೆಯರ ಮಕ್ಕಳು ಮತ್ತು ಅಂಗವಿಕಲ ಪೋಷಕರ ಮಕ್ಕಳು, ಇತ್ಯಾದಿ ಒಳಗೊಂಡಿದ್ದಾರೆ.  ಕರ್ನಾಟಕ, ಉದಾಹರಣೆಗೆ, 25% RTE (ಇಡಬ್ಲ್ಯೂಎಸ್ ಮತ್ತು ಡಿಜಿ) ಮೀಸಲಾತಿಗೆ ಅರ್ಹವಾದ 11 ವರ್ಗಗಳನ್ನು ವ್ಯಾಖ್ಯಾನಿಸುತ್ತದೆ. ಕಲಂ 12 (1) ಸಿ ವ್ಯಾಪ್ತಿಯಲ್ಲಿ ಹೆಚ್ಚಿನ ರಾಜ್ಯಗಳು ಇಡಬ್ಲ್ಯೂಎಸ್, SC ಮತ್ತು ST ಅನ್ನು ನೇರವಾಗಿ  ಉಲ್ಲೇಖಿಸುತ್ತವೆ ಆದರೆ  ಒಬಿಸಿ ಯ ಉಲ್ಲೇಖವು  ರಾಜ್ಯಗಳಾದ್ಯಂತ ಏಕರೂಪವಾಗಿ ಕಂಡುಬರುವುದಿಲ್ಲ. ಒಡಿಶಾವು ಆರ್ಟಿಕಲ್ 12 (1) ಸಿ ಅಡಿಯಲ್ಲಿ  ನಿರೀಕ್ಷಿಸಿದಂತೆ ಒಬಿಸಿ ಬದಲಿಗೆ ‘ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ’ ಅಡಿಯಲ್ಲಿ, ಮನೆಯಿಲ್ಲದ ಮಕ್ಕಳು, ಬೀದಿ ಮಕ್ಕಳು ಮತ್ತು ಭಿಕ್ಷುಕ ಮತ್ತು ಜಾಡಮಾಲಿಗಳು   ಮಕ್ಕಳನ್ನು ಒಳಗೊಂಡಿದೆ.

ಆರ್ಟಿಕಲ್ 12 (1) ಸಿ ಅಡಿಯ ವ್ಯಾಪ್ತಿಯಲ್ಲಿ  ಇತರ ಉದಾಹರಣೆಗಳು: ಹಲವಾರು ರಾಜ್ಯಗಳು ಇಡಬ್ಲ್ಯೂಎಸ್ ಅಡಿಯಲ್ಲಿ ಜಾತಿಗಳನ್ನು ಉಲ್ಲೇಖಿಸುತ್ತವೆ ಉದಾ. ಕರ್ನಾಟಕ ಮತ್ತು ಪಂಜಾಬ್. ಆದಾಗ್ಯೂ, ಪಂಜಾಬ್ ಎಸ್ ಸಿ ಪ್ರವೇಶಕ್ಕೆ ಆದಾಯ ಮಿತಿಯನ್ನು ಇರಿಸುವುದಿಲ್ಲ. ಮಹಾರಾಷ್ಟ್ರ ಇಡಬ್ಲ್ಯೂಎಸ್ ಅಡಿಯಲ್ಲಿ ಒಬಿಸಿ ಮತ್ತು ಎಸ್ ಬಿಸಿ ಯನ್ನು ಒಳಗೊಳ್ಳುತ್ತದೆ. ರಾಜಸ್ಥಾನವು ಆದಾಯ ಮಿತಿಯೊಂದಿಗೆ ಇಡಬ್ಲ್ಯೂಎಸ್ ಅಡಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮತ್ತು ಎಸ್ ಬಿಸಿ ಯನ್ನು ಒಳಗೊಳ್ಳುತ್ತದೆ. ತ್ರಿಪುರಾ ಡಿಜಿ ಅಡಿಯಲ್ಲಿ ಬಿ ಪಿ ಎಲ್ ಎಸ್ ಸಿ ಎಸ್ ಟಿ ಮತ್ತು ಒಬಿಸಿ ಗಳನ್ನು ಮಾತ್ರ ಒಳಗೊಂಡಿದೆ. ಇಡಬ್ಲ್ಯೂಎಸ್ ಅಡಿಯಲ್ಲಿ ಮೇಘಾಲಯವು ಎಸ್ ಸಿ, ಎಸ್ ಟಿಯ ನ್ನು ಒಳಗೊಳ್ಳುತ್ತದೆ. ಜಾರ್ಖಂಡ್ ಎಸ್ ಸಿ ಎಸ್ ಟಿ ಮತ್ತು ಅಲ್ಪಸಂಖ್ಯಾತರನ್ನು ಆದಾಯ ಮಿತಿಯೊಂದಿಗೆ ಒಳಗೊಳ್ಳುತ್ತದೆ ಮತ್ತು ಇತ್ಯಾದಿ.

ಆರ್‌ಟಿಇ ನಿಬಂಧನೆ ಕಲಂ 12 (1) C ಸರಿಯಾದ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯಗಳಿವೆ :  ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳು, ಆದಾಯ ಮತ್ತು ವಿಶೇಷವಾಗಿ ಜಾತಿ ಪ್ರಮಾಣಪತ್ರಗಳನ್ನು ಮಾಡುವಲ್ಲಿ ತೊಂದರೆಗಳು, ಆರ್‌ಟಿಇ ಕೋಟಾದಡಿಯಲ್ಲಿ ಪ್ರವೇಶ ಪಡೆದ ಮಕ್ಕಳ ಹೆಚ್ಚಿನ ಶಾಲೆ ಬಿಡುವಿಕೆ  ಪ್ರಮಾಣ, ಆರ್‌ಟಿಇ ಕೋಟಾದ ಅಡಿಯಲ್ಲಿ ಮತ್ತು ‘ನಿರ್ದಿಷ್ಟ ವರ್ಗ’ ಶಾಲೆಗಳ ಮೂಲಕ ಪ್ರವೇಶಗಳಿಗೆ ಸಂಬಂಧಿಸಿದ -ವರ್ಗವಾರು ಮತ್ತು ಉಪ-ವರ್ಗವಾರು ವಿಘಟಿತ ಮಾಹಿತಿ ಲಭ್ಯತೆಯಿಲ್ಲದಿರುವುದು (ಆರ್‌ಟಿಇ ಪ್ರವೇಶಗಳ ವಿವರಗಳು  ಪ್ರತಿ ನಿರ್ದಿಷ್ಟ ವರ್ಗದ ಶಾಲೆಗಳ ಅಡಿಯಲ್ಲಿ: ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಸೈನಿಕ ಶಾಲೆಗಳು, ಇತ್ಯಾದಿ. ಅನುದಾನರಹಿತ ಖಾಸಗಿ ಒಳಗೆ ಶಾಲೆಗಳ ಅಲ್ಪಸಂಖ್ಯಾತರ ಅನುದಾನರಹಿತ ಶಾಲೆಗಳು ಆರ್‌ಟಿಇ ಕಾಯಿದೆಯ ಆರ್ಟಿಕಲ್ 12 (1) ಸಿ ಅಡಿಯಲ್ಲಿ ವಿನಾಯಿತಿ ಪಡೆದಿವೆ.)

ಅನು: ನೀವು ಆರ್‌ಟಿಇ ಅನ್ನು 10% ಇಡಬ್ಲ್ಯೂಎಸ್ ನ ಪೂರ್ವಗಾಮಿ ಚಿಂತನೆಯಂತೆ  ನೋಡುತ್ತೀರಾ?

ನಾಜ್: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಜಾತಿ ವಿರೋಧಿ ಹೋರಾಟದ ಕಷ್ಟದಿಂದ ಗಳಿಸಿದ ಲಾಭವಾಗಿದೆ. ಜಾತಿವಾದಿ ಶಕ್ತಿಗಳು ಮೊದಲಿನಿಂದಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದನ್ನು ವಿರೋಧಿಸುತ್ತಿವೆ ಮತ್ತು ಅಡ್ಡಿಪಡಿಸುತ್ತಿವೆ. ಈ ಶಕ್ತಿಗಳು ಐತಿಹಾಸಿಕವಾಗಿ ಜಾತಿಯಿಂದ ತಮ್ಮ ಪ್ರಜೆಗಳಾಗಿದ್ದ/ಮಾಡಲಾಗಿದ್ದ  ಜನರಿಗೆ ಏನನ್ನೂ ಬಿಟ್ಟುಕೊಡಲು ಸಾಧ್ಯವಿಲ್ಲ ಮತ್ತು ಎಂದಿಗೂ ಮಾಡಿಲ್ಲ. ಪ್ರತಿ ಹಂತದಲ್ಲಿ, ದಿನದಿಂದ ದಿನಕ್ಕೆ, ನೀತಿ ರಚನೆ ಮತ್ತು ಅನುಷ್ಠಾನದ ಪುರಾವೆಗಳು ಸಾಂವಿಧಾನಿಕ ಸುರಕ್ಷತೆಗಳಿದ್ದರೂ ಜಾತಿ ತಾರತಮ್ಯ ಮತ್ತು ದಬ್ಬಾಳಿಕೆಯನ್ನು ಸೂಚಿಸುತ್ತವೆ.

ಉಪ-ವರ್ಗೀಕರಣದ ಬದಲಿಗೆ ಆರ್ಥಿಕ ಮಾನದಂಡಗಳ ಬಳಕೆಯು ಬಹುಸಂಖ್ಯಾತ ಸಮುದಾಯವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಯನ್ನು ದುರ್ಬಲಗೊಳಿಸಲು ಸವರ್ಣ/ಅಶ್ರಫಿಯಾಗಳು (ಮತ್ತು ಇತರ ಧರ್ಮಗಳ ಮೇಲ್ಜಾತಿಗಳು) ರೂಪಿಸಿದ ವಿಭಜಕ ಮತ್ತು ಜಾತಿವಾದಿ ತಂತ್ರವಲ್ಲದೆ ಬೇರೇನೂ ಅಲ್ಲ. ಕೆನೆಪದರದ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಒಬಿಸಿ ಮೀಸಲಾತಿ ಅಡಿಯಲ್ಲಿ ಆರ್ಥಿಕ ಮಾನದಂಡಗಳನ್ನು ಮೊದಲು ಜಾರಿಗೊಳಿಸಲಾಯಿತು ಮತ್ತು  25% ಆರ್‌ಟಿಇ ಮೀಸಲಾತಿ ಅಡಿಯಲ್ಲಿ ಒಬಿಸಿ ಜೊತೆಗೆ ಎಸ್ ಸಿ ಮತ್ತು ಎಸ್ ಟಿ ಗೂ ಆರ್ಥಿಕ ಮಾನದಂಡಗಳನ್ನು ಅನ್ವಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, 10% ಇಡಬ್ಲ್ಯೂಎಸ್ ಕೋಟಾಕ್ಕಿಂತ ಮೊದಲು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಗಳನ್ನು ದುರ್ಬಲಗೊಳಿಸಲಾಗಿದೆ. 10% ಇಡಬ್ಲ್ಯೂಎಸ್ ಕೋಟಾವು ಯಾವುದೇ ‘ದಮನಿತ ಜಾತಿ’ ಅರ್ಥವನ್ನು ಹೊಂದಿಲ್ಲ, ಬದಲಿಗೆ ಇದು ಜನರನ್ನು ಆಳುವ  ವರ್ಗಕ್ಕೆ ಮೀಸಲಾತಿಯನ್ನು ಒದಗಿಸುತ್ತದೆ.

ಅನು: ಶಿಕ್ಷಣ ಮತ್ತು ಉದ್ಯೋಗಕ್ಕೆ ಪಾಸಮಂಡ ಅವರಿಗೆ ಅವಕಾಶ ಹೇಗಿದೆ ಮತ್ತು  10% ಇಡಬ್ಲ್ಯೂಎಸ್ ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನಾಜ್: ಪಾಸಮಂಡ (ಅಂದರೆ ಹಿಂದುಳಿದವರು ) ಎಂಬ ಪದವನ್ನು ಒಬಿಸಿ ಮತ್ತು ಎಸ್‌ಸಿ, ಎಸ್‌ಟಿ ಮುಸ್ಲಿಮರಿಗೆ ಬಳಸಲಾಗುತ್ತದೆ. ಸಂವಿಧಾನದ 341 ನೇ ವಿಧಿಯ ಅಡಿಯಲ್ಲಿ ತಾರತಮ್ಯದ ನಿಬಂಧನೆಯಿಂದಾಗಿ ದಲಿತ ಮುಸ್ಲಿಮರು ಇನ್ನೂ ಸಂವಿಧಾನದ ಅಡಿಯಲ್ಲಿ SC ಸ್ಥಾನಮಾನವನ್ನು ಅನುಭವಿಸುವುತ್ತಿಲ್ಲ , ಅದು ಅವರನ್ನು ಧರ್ಮದ ಆಧಾರದ ಮೇಲೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡುತ್ತದೆ. 2004-05ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಸಿದ್ಧಪಡಿಸಿದ ವರದಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ಅರ್ಧದಷ್ಟು ದಲಿತ ಮುಸ್ಲಿಂ ಜನಸಂಖ್ಯೆಯು ಸಾಕ್ಷರರಾಗಿರಲಿಲ್ಲ (48.8%), ಇದು ಗ್ರಾಮೀಣ ಪ್ರದೇಶದ ದಲಿತ ಹಿಂದೂಗಳಿಗೆ (48.53% ಅನಕ್ಷರಸ್ಥರು) ಸಮಾನವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಒಬಿಸಿ ಮುಸ್ಲಿಮರಲ್ಲಿ ಸಾಕ್ಷರರಲ್ಲದವರು 47.36% ರಷ್ಟು ಇದ್ದು ಸ್ವಲ್ಪ ಉತ್ತಮವಾಗಿದೆ. ಉದ್ಯೋಗಕ್ಕೆ ಪಾಸಮಂಡ ಅವಕಾಶದ  ವಿಷಯದಲ್ಲಿ,  ಪಾಸಮಂಡ ವ್ಯಾಖ್ಯಾನಕಾರ ಮತ್ತು ಪ್ರಾಧ್ಯಾಪಕ ಖಾಲಿದ್ ಅನಿಸ್ ಅನ್ಸಾರಿ ಅವರು ತಮ್ಮ ಸಂಶೋಧನಾ ಕೃತಿಗಳಲ್ಲಿ ಸಾರ್ವಜನಿಕ ಉದ್ಯೋಗದಲ್ಲಿ ಪಾಸಮಂಡ ಕಡಿಮೆ ಪ್ರಾತಿನಿಧ್ಯ ಹೊಂದಿದೆ ಮುಸ್ಲಿಂ ಜನಸಂಖ್ಯೆಯ ಅಶ್ರಫ್ ಸಮುದಾಯವು  ಸಾರ್ವಜನಿಕ ಉದ್ಯೋಗದಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದೆ,  ಸಾಚಾರ್ ಸಮಿತಿಯ ವರದಿಯಲ್ಲಿ ಗುರುತಿಸಲಾದ ಸಾರ್ವಜನಿಕ ಉದ್ಯೋಗದ ಆರು ವಲಯಗಳಲ್ಲಿ ಕನಿಷ್ಠ ನಾಲ್ಕರಲ್ಲಿ ಎಂದು ವಾದಿಸಿದ್ದಾರೆ,  (ಕೇಂದ್ರ ಭದ್ರತಾ ಏಜೆನ್ಸಿಗಳು, ರೈಲ್ವೆ, ಕೇಂದ್ರ PSU, ಆಯ್ಕೆಗಾಗಿ SPSC ಶಿಫಾರಸು, ವಿಶ್ವವಿದ್ಯಾಲಯದ ಬೋಧಕರು  ಮತ್ತು ವಿಶ್ವವಿದ್ಯಾಲಯ-ಬೋಧಕೇತರ).

ಅನೇಕ ರಾಜ್ಯಗಳಲ್ಲಿ ಆರ್‌ಟಿಇ ಕೋಟಾದ ಅಡಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಪ್ರವೇಶಗಳಿಗೆ ಆರ್ಥಿಕ ಮಾನದಂಡಗಳ ಅನ್ವಯ, ಜಾತಿ ಪ್ರಮಾಣಪತ್ರಗಳನ್ನು ಪಡೆಯುವಲ್ಲಿನ ತೊಂದರೆಗಳು ಮತ್ತು ಸಾಮಾನ್ಯವಾಗಿ ಜಾತಿ ಪೂರ್ವಾಗ್ರಹಗಳಿಂದ ಹೆಚ್ಚು ಹೆಚ್ಚು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ. 10% ಇಡಬ್ಲ್ಯೂಎಸ್ ಕೋಟಾವು ಮೇಲ್ಜಾತಿಗಳಿಗೆ ಮೀಸಲಾದ ಸ್ಥಾನಗಳನ್ನು ಹೊಂದಿದೆ ಆದರೆ ಎಸ್ ಸಿ ಎಸ್ ಟಿ ಮತ್ತು ಒಬಿಸಿ ಗಾಗಿ ಅಲ್ಲ. ಆರ್ ಟಿ ಐ ಸಂಶೋಧನೆಗಳ ಆಧಾರದ ಮೇಲೆ ಮಾಧ್ಯಮ ವರದಿಗಳು ಮೇಲ್ಜಾತಿಗಳು ಸಾಮಾನ್ಯ ವರ್ಗದ ಪ್ರವೇಶ ಮತ್ತು ಉದ್ಯೋಗದ ಮೇಲೆ ಏಕಸ್ವಾಮ್ಯವನ್ನು ಹೊಂದಿವೆ ಎಂದು ತೋರಿಸುತ್ತವೆ. ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆರ್‌ಟಿಇ ಮೀಸಲಾತಿಯಿಂದ ವಿನಾಯಿತಿ ನೀಡಲಾಗಿದೆ. ಇದಲ್ಲದೆ, ಮುಸ್ಲಿಂ ಅಲ್ಪಸಂಖ್ಯಾತರ ಉನ್ನತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮುಸ್ಲಿಂ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಪಾಸಮಂಡ ಗಳಿಗೆ ಮೀಸಲಾತಿ ನೀಡಬೇಕೆಂದು ಪಾಸಮಂಡ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಇದಕ್ಕೆ ನಿದರ್ಶನ.

~~~~~~~~~~~

ಇದು ಪಾಸಮಂಡ ಕಾರ್ಯಕರ್ತೆ ನಾಜ್ ಖೈರ್ ಅವರೊಂದಿಗಿನ ಸಂದರ್ಶನದ ಪ್ರತಿ. ರೌಂಡ್ ಟೇಬಲ್ ಇಂಡಿಯಾದ ಸಂಪಾದಕರಾದ ಅನು ರಾಮದಾಸ್ ಅವರು ಸಂದರ್ಶನವನ್ನು ನಡೆಸಿದರು.

ಕನ್ನಡ ಅನುವಾದ : ಶ್ರೀಧರ ಅಘಲಯ