ಕತ್ತಲೆಯಲ್ಲಿ ಕಂದೀಲಾಗಿ ರೂಪಾಂತರಗೊಂಡ ಜ್ವಾಲಾಮುಖಿ

ಕತ್ತಲೆಯಲ್ಲಿ ಕಂದೀಲಾಗಿ ರೂಪಾಂತರಗೊಂಡ ಜ್ವಾಲಾಮುಖಿ

 

ಕೆ. ವಿ. ಸುಬ್ರಹ್ಮಣ್ಯಂ

ನೀವು ಇನ್ನೊಬ್ಬರಿಗೆ ಕರೆ /call ಮಾಡಿದಾಗ “ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ ” ಎಂಬ ಉತ್ತರ ಮತ್ತೆ ಮತ್ತೆ ಬಂದಾಗ ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಪ್ರಯತ್ನಿಸುತ್ತೀರಲ್ಲವೇ! ನಾವೆಲ್ಲರೂ ಹಾಗೆಯೇ. ಪರಮೇಶ್ ಜೋಳದ್ ಎಂಬ ದೃಶ್ಯಕಲಾವಿದ ತನ್ನ ಹಲವು ಪ್ರದರ್ಶನಗಳ ಪ್ರಯತ್ನದ ನಡುವೆ ” ಬನ್ನಿ , ನಾಳೆಯಿಂದ ಮತ್ತೆ ಟ್ರೈ ಮಾಡೋಣ “, ಎಂಬ ಶೀರ್ಷಿಕೆ, ಹೇಳಿಕೆಗಳ ಇನ್ಸ್ಟಾಲೇಶನ್/ installation, ಅಭಿನೀತ / performance ಗಳ ಸಮ್ಮಿಶ್ರ ರೂಪಿ ದೃಶ್ಯಕಲಾ ಪ್ರದರ್ಶನವನ್ನು ( installation – performance, 15 -18, December 2022, 10:00 a.m. to 7:00 p.m, venkatappa art gallery, Bengaluru, India. ) ಪ್ರಸ್ತುತ ಪ್ರದರ್ಶಿಸುತ್ತಿದ್ದಾರೆ.ಇದೊಂದು ಅಪೂರ್ವ ಪ್ರದರ್ಶನ . ಏಕೆಂದರೆ ತನ್ನ ಆಶಯ, ರೂಪ, ಅಭಿವ್ಯಕ್ತಿಗಳ ವಿಶಿಷ್ಟ ಕಾರಣಗಳಿಂದ ಅಷ್ಟೇ ಅಲ್ಲದೆ, ವಿಶೇಷ ಮನವಿ/ ಪ್ರತಿಭಟನಾತ್ಮಕ ಬುದ್ಧಿ ಭಾವಗಳ ಸಂಗಮಿಸಿರುವಿಕೆಯು ಹಿಂದೆಂದೂ ನಮ್ಮ ದೃಶ್ಯಕಲಾ ಸಂದರ್ಭದಲ್ಲಿ ಸಂಭವಿಸಿದಂತಿಲ್ಲ , ಇರಲಿ.

ದೃಶ್ಯ ಕಲಾವಿದ ಪರಮೇಶಿ ಜೋಳದ್ ತಮ್ಮ ಪ್ರದರ್ಶನದ ಹೇಳಿಕೆಯಲ್ಲಿ ದಾಖಲಿಸಿರುವಂತೆ,ಈ ಪ್ರದರ್ಶನದ ಮುಖ್ಯ ಉದ್ದೇಶವು ವೆಂಕಟಪ್ಪ ಕಲಾಗ್ಯಾಲರಿಯ ನಿರ್ವಹಣೆಯಲ್ಲಿ ಆಗುತ್ತಿರುವ ನಿರ್ಲಕ್ಷತೆ ಮತ್ತು ನಿರಾಸಕ್ತಿ ಕುರಿತಾದ ನೋವಿನ ಸಂಗತಿಯನ್ನು ಅಭಿವ್ಯಕ್ತಿಸುವುದಾಗಿದೆ. ಹಾಗೆಯೇ ಗ್ಯಾಲರಿಗೆ ಇರಬೇಕಾದ ಮೂಲಭೂತ ಅಗತ್ಯವಾದ ಸ್ಪಾಟ್ ಲೈಟ್ ನ ಸೌಕರ್ಯ ಕೂಡ ಇಲ್ಲದ ಕಾರಣ ಈ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಕಂದೀಲುಗಳ ( lantern ಲಾಂದ್ರ,ಲಾಟೀನು ) ಸಹಾಯ ಪಡೆದದ್ದು ಈ ಪ್ರದರ್ಶನದ ಪ್ರಮುಖವಾದ ಅಂಶವಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೌದು, white cube ಎಂದೂ ಕರೆಯಲಾಗುವ ಗ್ಯಾಲರಿ ಎಂದರೇನೇ ಝಗಝಗಿಸುವ ಪ್ರಖರ ಬೆಳಕಿನ ಪ್ರವಾಹ. ( Installation ಕಲಾವಿದರು ಗ್ಯಾಲರಿಯನ್ನು ಕತ್ತಲೆಯಾಗಿಸುವ ಪರಿಪಾಠ ಇದೆ) ಆದರೆ ಬೆಳಕಿನ ವ್ಯವಸ್ಥೆಯೇ ಸ್ತಬ್ಧಗೊಂಡಿರುವ ವೆಂಕಟಪ್ಪ ಗ್ಯಾಲರಿಯಲ್ಲಿ , ಪರಮೇಶ್ ಜೋಳದ್ ಅವರ ಮೂರು ಇನ್ಸ್ಟಾಲೇಶನ್ ಅಲ್ಲದೆ ( performance) ಅಭಿನೀತಗಳನ್ನು ನಾವೆಲ್ಲರೂ ಕಂದೀಲು ಹಿಡಿದು ನಡೆದಾಡಿ ನೋಡುವುದು ಕಲಾತ್ಮಕ ಲೋಕ ದೃಷ್ಟಿಯಿಂದ ಅಪೂರ್ವ ಅನುಭವವೇ ಸರಿ.ಕಲೆ, ಅಭಿವ್ಯಕ್ತಿ ಎಂದರೆ ಸುಂದರವಾದ ರೂಪಗಳು ಮಾತ್ರವೇ ಅಲ್ಲ. ಆ ಉರಿಯುವ ಕಂದಿಲು ಒಂದು ಮಹಾ ಅಗ್ನಿಪರ್ವತದಂತಹ ನೋವಿನ ಗರ್ಭಿಕರಿಸಿದ, ರೂಪಾಂತರಿತ ಪುಟ್ಟ ರೂಪವೆಂದು ಭಾವಿಸಿ ನೋಡಿ : ಅನುಭವಿಸಿ!

ತಣ್ಣನೆಯ ಪ್ರತಿಭಟನೆಯ ಶಕ್ತಿಯುತ ಆಶಯದ ಅಭಿವ್ಯಕ್ತಿಯ ಮಾಧ್ಯಮ ಪ್ರಕಾರಗಳ, ಶಿಥಿಲ ಕಟಿಂಗ್ ಪ್ಲಯರ್ ( cutting plier) ಸಿಮೆಂಟ್ ಕಲೆಸುವ, ಲೇಪಿಸುವ ಕರಣೆಗಳು ( ಮಾರ್ಕ್ಸ್ ಕಲಾ ರೂಪಗಳಾಗಿ ನೋಡುವ ಅಗತ್ಯ ಇಲ್ಲಿಲ್ಲ ) ವೆಂಕಟಪ್ಪ ಗ್ಯಾಲರಿಯ ದುರಸ್ತಿ ಕಾರ್ಯಗಳ ಅಗತ್ಯಗಳನ್ನು ಸಾಂಕೇತಿಕವಾಗಿ ಬಿಂಬಿಸಿದರೆ, ಹ್ಯಾಂಗರ್ ಸಹ ಗ್ಯಾಲರಿಯ ಬೆತ್ತಲುತನವನ್ನು ಬಿಂಬಿಸುತ್ತದೆ. ( ನಮ್ಮ ಪೂರ್ವ ಸೂರಿ ಚಿತ್ರ ಶಿಲ್ಪಿ ವೆಂಕಟಪ್ಪನವರ ಅಮೂಲ್ಯ ಕಲಾಕೃತಿಗಳ ಸಂರಕ್ಷಣೆ,ಸಂಗ್ರಹ, ಪ್ರದರ್ಶನಗಳ ಮುಖ್ಯ ಉದ್ದೇಶಗಳನ್ನು ದೊಡ್ಡದಾಗಿ ಸಾಧಿಸಲು ವೆಂಕಟಪ್ಪ ಗ್ಯಾಲರಿಯನ್ನು ನಿರ್ಮಿಸಲಾಯಿತಷ್ಟೇ.ಅವರ ಕಲಾಕೃತಿಗಳು, ಪುಸ್ತಕ , ರೇಖಾಚಿತ್ರಗಳ ಸಂಗ್ರಹಗಳನ್ನು ಹೇಗೆ ಸಂರಕ್ಷಿಸಲಾಗುತ್ತಿದೆ ಎಂಬುವ ಪ್ರಶ್ನೆಯೂ ಇದೆ: ಇರಲಿ.)

ಕನ್ನಡ ಕಲಾವಿದ, ಕಲಾವಿದೆಯರ ಸಮೂಹಿಕ,ಸಾಂಕೇತಿಕ ರೂಪದಂತೆ ಕಾಣಿಸಿಕೊಳ್ಳುತ್ತಿರುವ ಪರಮೇಶ್ ಜೋಳದ್ ವೆಂಕಟಪ್ಪನವರ ಮೇಲಿನ ಅಪಾರ ಪ್ರೀತಿಯ ಕಾರಣವಾಗಿ,ವೆಂಕಟಪ್ಪನವರು ಸದಾ ಧರಿಸುತ್ತಿದ್ದ ಕಪ್ಪು ಕೋಟಿನ ಹೊಲಿಯು ವಿಕೆಯನ್ನು ತಮ್ಮ ಪ್ರದರ್ಶನಾವಧಿಯಲ್ಲಿ ಮಾಡುತ್ತಿದ್ದಾರೆ. ಬಹುಶಹ 18ರಂದು ಆ ಕೋಟು ಪೂರ್ಣಗೊಂಡು ಪ್ರದರ್ಶಿಸಲ್ಪಡಬಹುದು. ಈ ಅಭಿನೀತವು/ performance ಕತ್ತಲೆಯಲ್ಲಿ ಕಂದೀಲಿನ ಬೆಳಕಿನಲ್ಲಿ ನಡೆದಿದೆ, ಅಂದರೆ ಕಂದೀಲಿನ ಬೆಳಕಿನಲ್ಲಿ ತೀಕ್ಷ್ಣತೆಯಿಂದ ಹೊಲಿಯುತ್ತಿರುವಂತಿದೆ . ವೆಂಕಟಪ್ಪನವರ ಕಪ್ಪುಕೋಟಿನ ಮರು ಸೃಷ್ಟಿಯು ಗಮನಾರ್ಹ .

ಇಂದಿನ ಅಭಿವೃದ್ಧಿಯ – ಸಾಂಸ್ಕೃತಿಕ – ರಾಜಕಾರಣದಲ್ಲಿ ಎಲ್ಲ ಭಾರ, ಹೊಣೆಗಳನ್ನು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುವ ಪರಿಪಾಠ ನೋಡುತ್ತಿದ್ದೇವೆ. ಕಲಾವಿದ ಕಲಾವಿದೆಯರು ತಾವೇ ಏನು ಮಾಡಬಲ್ಲರು! ಅವರ ಅಭಿವ್ಯಕ್ತಿಯ ಮೂಲಕ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಬಲ್ಲರು ಅಷ್ಟೇ.ಹೋರಾಟ ಅವರ ದಾರಿ ಅಲ್ಲ. ಯಾವುದೇ ಸಂರಕ್ಷಣೆಗೆ ಪೂರಕವಾಗಿ ಸಂದರ್ಭಗಳನ್ನು ಸೃಷ್ಟಿ ಮಾಡಬಲ್ಲರು. ಆದರೆ ವೆಂಕಟಪ್ಪ ಗ್ಯಾಲರಿಯ ಸಂರಕ್ಷಣೆಯನ್ನು ಸರ್ಕಾರದ ಸಹಯೋಗ ಮಾತ್ರ ಮಾಡಬಲ್ಲದು. ಹೀಗಾಗಿಯೇ ಪರಮೇಶ್ ಜೋಳದ್ ತಮ್ಮ ಪ್ರದರ್ಶನದ ಹೇಳಿಕೆ ( statement ) ಯಲ್ಲಿ “… this art exhibition is an attempt to express that art and culture cannot be saved by artist alone and the responsibility of the government is essential ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪ್ರದರ್ಶನಕ್ಕೆ ಬೇರೆ ಮುಖಗಳೂ ಇವೆಯೇ? ನೀವು ಅನ್ವೇಷಿಸಿ.

 

ಇಡಿಯಾಗಿ ಪ್ರದರ್ಶನವು ವೆಂಕಟಪ್ಪ ಗ್ಯಾಲರಿಯನ್ನು ದುರಸ್ತಿ ಮಾಡಿ ಸಂರಕ್ಷಿಸುವ ಮನವಿಯ ಆಶಯವನ್ನು ಹೊಂದಿದ್ದರೂ, ಕನ್ನಡ ದೃಶ್ಯ ಕಲೆಯ ಇತಿಹಾಸದಲ್ಲಿ ಪ್ರತಿಭಟನೆಯ ವಿಶಿಷ್ಟ ಅಭಿವ್ಯಕ್ತಿಯಾಗಿ ದಾಖಲು ಗೊಳ್ಳಬಲ್ಲದು. 1980 ರ ದಶಕದಿಂದಲೂ ಈ ಗ್ಯಾಲರಿಯ,ಇಂತಹ ಉದ್ದೇಶಗಳ ಹಲವು ಪ್ರತಿಭಟನೆಗಳು ನಡೆದಿವೆ, ಗ್ಯಾಲರಿಯೂ ಉಳಿದು ಬಂದಿದೆ. WAG ನಾ ಸಾಮೂಹಿಕ ಪ್ರತಿಭಟನೆಯಂತೆಯೇ ಪರಮೇಶ್ ಜೋಳದ್ ಅವರ ಎರಡು ಪ್ರದರ್ಶನಗಳು ಬಹುಕಾಲ ಕಲಾರಂಗವನ್ನು ಕಾಡಬಲ್ಲವು. installation ಮತ್ತು performance ದೃಶ್ಯಕಲಾ ಅಭಿವ್ಯಕ್ತಿ ಪ್ರಕಾರಗಳನ್ನು ‘ಪ್ರತಿಭಟನಾತ್ಮಕ ‘, ‘ ಮನವಿ ಪೂರ್ವಕ ‘ ಉದ್ದೇಶಗಳಿಗೆ ದುಡಿಸಿಕೊಂಡ, ಬಹುಶಹ ಮೊದಲ ಕಲಾವಿದನಾಗಿ ಈ ಪ್ರದರ್ಶನಗಳ ಪರಮೇಶ್ ಜೋಳದ್ ಬಹುಕಾಲ ನೆನಪಿನಲ್ಲಿ ಉಳಿಯಬಲ್ಲರು.