EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ: ಆಲ್ ಇಂಡಿಯಾ ಫೋರಮ್ ಫಾರ್ ರೈಟ್ ಟು ಎಜುಕೇಶನ್ (AIFRTE)

EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ

ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (​​AIFRTE)

 

ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ನೀಡಲಾಗಿರುವ 10% ಮೀಸಲಾತಿಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಆಲ್‌ ಇಂಡಿಯಾ ಫೋರಮ್‌ ಫಾರ್‌ ರೈಟ್‌ ಟು ಎಜುಕೇಶನ್ (AIFRTE) ಅನ್ನು  ಆಳವಾಗಿ ವಿಚಲಿತಗೊಳಿಸಿದೆ. ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBC) ಉನ್ನತ ಶಿಕ್ಷಣದಲ್ಲಿ ಹಾಗೂ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಸಾಂವಿಧಾನಿಕ ನಿಬಂಧನೆಗೆ ಅನುಗುಣವಾಗಿ ನೀಡಲಾಗಿರುವ ಮೀಸಲಾತಿಯು ಸಾವಿರಾರು ವರ್ಷಗಳಿಂದ ಈ ಸಮುದಾಯಗಳ ಮೇಲೆ ಜಾತಿ ವ್ಯವಸ್ಥೆಯು ಎಸಗುತ್ತಿರುವ ತಾರತಮ್ಯವನ್ನು ನೀಗಿಸುವ ನಿಟ್ಟಿನಲ್ಲೊಂದು ಪ್ರಮುಖ ಹೆಜ್ಜೆಯಾಗಿದೆ. ಮೀಸಲಾತಿಯು ಜಾತಿ ವ್ಯವಸ್ಥೆಯಿಂದಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಸಾಂವಿಧಾನಿಕವಾಗಿ ಖಾತ್ರಿಪಡಿಸಲಾಗಿರುವ ಸೌಕರ್ಯವನ್ನು ಒದಿಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುತ್ತದೆ. ಐತಿಹಾಸಿಕವಾಗಿ ಎಸೆಗಲಾಗಿರುವ ತಾರತಮ್ಯ ಮತ್ತದರ ಪರಿಣಾಮವಾಗಿ ನಡೆಯುತ್ತಿರುವ ದಬ್ಬಾಳಿಕೆಯೇ ಮೀಸಲಾತಿ ನೀತಿಗೆ ಆಧಾರವಾಗಿದೆ.

 

103ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪರಿಚಯಿಸಲಾದ 10% EWS ಮೀಸಲಾತಿಯು ಸಾಮಾಜಿಕ ನ್ಯಾಯದ ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ. ಅದನ್ನು ಎತ್ತಿಹಿಡಿಯುವ ಮೂಲಕ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ, ಬೇಲಾ ತ್ರಿವೇದಿ ಮತ್ತು ಜೆ.ಬಿ.ಪರ್ದಿವಾಲಾ ಅವರ ಬಹುಮತದ ತೀರ್ಪು ಸಂವಿಧಾನದ `ಮೂಲ ರಚನೆ’ ಯ ಮೇಲೆಯೇ ದಾಳಿ ನಡೆಸಿದೆ. ಇದರ ಪರಿಣಾಮವಾಗಿ, EWS ಮೀಸಲಾತಿಯ ಪರಿಕಲ್ಪನೆಯು `ಸಾಮಾಜಿಕ ನ್ಯಾಯ’ದ ಪರಿಕಲ್ಪನೆಯನ್ನೇ ದುರ್ಬಲಗೊಳಿಸಿ; ಜಾತಿ ತಾರತಮ್ಯದ ಆಧಾರದ ಮೇಲೆ ಒದಗಿಸಲಾಗಿರುವ ಮೀಸಲಾತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಆರಂಭಿಕ ಹಂತವಾಗಿದೆ.

 

ಸಾಮಾಜಿಕ ನ್ಯಾಯದ ವಿಚಾರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಯು ಭಾರತ ಸರ್ಕಾರದ (GOI) ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೀಸಲಾತಿ ನೀತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೇ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರೀಕರಿಣಕ್ಕೆ ಒಳಪಡಿಸುವ ಮೂಲಕ ಹಾಗೂ ಎಲ್ಲೆಡೆಯೂ ಒಂದೇ ತೆರನಾದ ಅರ್ಹತೆ ಮತ್ತು ಮೌಲ್ಯಮಾಪಕ ಮಾನದಂಡಗಳನ್ನು ಅನುಸರಿಸುವಂತೆ ಮಾಡುವ ಮೂಲಕ ಪ್ರತಿ ಹಂತದಲ್ಲೂ ಸವಲತ್ತುಗಳನ್ನು ಪಡೆದಿರುವ ಜನವರ್ಗದ ಕಲ್ಪಿತ ʼಮೆರಿಟ್ʼ ಅನ್ನು ರಕ್ಷಿಸಿಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಯು “ಸಾಮಾಜಿಕವಾಗಿ, ಆರ್ಥಿಕವಾಗಿ ಅನಾನುಕೂಲಕರ ಗುಂಪುಗಳುʼ ಎಂಬ ಪದವನ್ನು ಬಳಸಿ ಕೆಳಮಟ್ಟದ ಜಾತಿಗಳು ಮತ್ತು ಬುಡಕಟ್ಟುಗಳು ಐತಿಹಾಸಿಕವಾಗಿ ಅನುಭವಿಸಿತ್ತಾ ಸಾಗಿರುವ ಜಾತಿ ತಾರತಮ್ಯವನ್ನು ಮರೆಮಾಚಲು ಪ್ರಯತ್ನಿಸುತ್ತದೆ.

 

ಇದೆಲ್ಲಕ್ಕಿಂತಲೂ ಅಪಾಯಕಾರಿ ಮತ್ತು ಆಕ್ಷೇಪಾರ್ಹ ಸಂಗತಿಯೆಂದರೆ, ಈ ದೇಶದ EWS ವರ್ಗದಲ್ಲಿ ಅತಿ ಹೆಚ್ಚಾಗಿ ಕಂಡುಬರುವ SC/ST ಮತ್ತು OBC ಸಮುದಾಯಗಳನ್ನೇ ಈ EWS ಮೀಸಲಾತಿಯಿಂದ ಹೊರಗಿಟ್ಟಿರುವುದು. ವಾಸ್ತವವಾಗಿ, ಇದನ್ನು ತೀರ್ಪನೊಂದಿಗೆ ಭಿನ್ನಮತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಯು.ಯು. ಲಲಿತ್ ಅವರು ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ಈ ವಿಚಾರವನ್ನು ‘STಗಳಲ್ಲಿ ಜನಸಂಖ್ಯೆಯಲ್ಲಿ ಶೇ. 48% ಬಡವರಾಗಿದ್ದು; ಪರಿಶಿಷ್ಟ ಜಾತಿಗಳಲ್ಲಿ ಶೇ. 38% ಬಡವರಾಗಿದ್ದರೆ, OBC ಗಳಲ್ಲಿ ಬಡವರ ಪ್ರಮಾಣವು ಶೇ. 33% ಕ್ಕಿಂತ ಕಡಿಮೆಯಿಲ್ಲ. ʼ ಎಂದು ಉಲ್ಲೇಖಿಸುತ್ತಾರೆ.

EWS ಮೀಸಲಾತಿಯನ್ನು ಕೇವಲ ಮೇಲ್ಜಾತಿಗಳಿಗೆ ಮೀಸಲಿರಿಸಲಾಗಿದೆ.

ಬಿಜೆಪಿ-ಆರ್‌ಎಸ್‌ಎಸ್ ನೇತೃತ್ವದ ಸರ್ಕಾರವು ಯಾವುದೇ ಅಡೆತಡೆಗಳಿಲ್ಲದೆ ಪ್ರಜಾಸತತ್ತಾತ್ಮಕೆಯನ್ನು ಗಾಳಿಗೆ ತೂರಿ ಜಾರಿಗೊಳಿಸುತ್ತಿರುವ ನವ ಉದಾರೀಕರಣ ನೀತಿಗಳು ಇಡೀ ಶಿಕ್ಷಣ ಕ್ಷೇತ್ರವನ್ನೇ ಕಾರ್ಪೊರೇಟೀಕರಣಕ್ಕೆ ಮತ್ತು ಸಾರ್ವಜನಿಕ ವಲಯದ ಖಾಸಗೀಕರಣಕ್ಕೆ ದೂಡುತ್ತಿದ್ದು, ಈ ನೀತಿಗಳಿಂದಾಗಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಶಿಕ್ಷಣವನ್ನಾಗಲಿ, ಎಲ್ಲರಿಗೂ ಉದ್ಯೋಗವನ್ನು ಒದಗಿಸುವುದಕ್ಕಾಗಲಿ ಸಾಧ್ಯವಿಲ್ಲ. ಆದ್ದರಿಂದಲೇ, ಮನುವಾದಿ ಸರ್ಕಾರವು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಜನರ ಐಕ್ಯ ಹೋರಾಟಗಳನ್ನು ಹತ್ತಿಕ್ಕಲು ಜಾತಿ, ವರ್ಗ, ಜನಾಂಗೀಯತೆ, ಲಿಂಗ, ಧಾರ್ಮಿಕ ಮತ್ತು ಭಾಷಿಕ ವಿಭಜನೆಗಳನ್ನು ಬಳಸಿಕೊಳ್ಳುತ್ತಿದೆ.

 

ಬಿಜೆಪಿ-ಆರ್‌ಎಸ್‌ಎಸ್ ನೇತೃತ್ವದ ಭಾರತ ಸರ್ಕಾರದ ಈ ಹುನ್ನಾರವನ್ನು ಗುರುತಿಸಿ-ಗಮನಿಸಿ, ನಮ್ಮ ಸಂವಿಧಾನದವು ಪ್ರತಿಪಾದಿಸುವ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ವೈಜ್ಞಾನಿಕ ಮನೋಭಾವದ ತತ್ವಗಳನ್ನು ರಕ್ಷಿಸುತ್ತಾ “ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ” ವನ್ನು ಖಾತ್ರಿಪಡಿಸಲು ಒತ್ತಾಯಿಸಲು ಪ್ರಬಲ ಆಂದೋಲನವೊಂದನ್ನು ಕಟ್ಟುವತ್ತ ನಾವೆಲ್ಲರೂ ಕೈಜೋಡಿಸಬೇಕಿದೆ.

 

*ನವೆಂಬರ್‌ 11, 2022 – ನವೆಂಬರ್‌ 13, 2022, ಹೈದರಬಾದ್*

 

ಕನ್ನಡಾನುವಾದ: ಶಶಾಂಕ್‌ ಎಸ್‌ ಆರ್‌

Be the first to comment on "EWS ಮೀಸಲಾತಿಯನ್ನು ವಿರೋಧಿಸಿ ನಿರ್ಣಯ: ಆಲ್ ಇಂಡಿಯಾ ಫೋರಮ್ ಫಾರ್ ರೈಟ್ ಟು ಎಜುಕೇಶನ್ (AIFRTE)"

Leave a comment

Your email address will not be published.


*