ವರ್ತಮಾನದಲ್ಲಿ ಮೀಸಲಾತಿಯ ಚಾರಿತ್ರಿಕ ದೃಷ್ಟಿ

ವರ್ತಮಾನದಲ್ಲಿ ಮೀಸಲಾತಿಯ ಚಾರಿತ್ರಿಕ ದೃಷ್ಟಿ

ಲಕ್ಷ್ಮಿರಂಗಯ್ಯ.ಕೆ.ಎನ್.

ಮೀಸಲಾತಿ ಕುರಿತು ಮೊದಲಿನಿಂದಲೂ ತಪ್ಪು ಗ್ರಹಿಕೆಗಳೇ ಹೆಚ್ಚಾಗಿದ್ದು ಸಂವಿಧಾನದ ಸಮಾನತೆ ಆಶಯದ ಮಾನದಂಡವೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರಿಗಾಗಿ ನೀಡುವ ಸಹಾಯ ಎಂಬ ಅಪಬ್ರಂಶ ನಂಬಿರುವ ವರ್ಗ ಮತ್ತು ಇತಿಹಾಸದ ಉದ್ದಗಲಕ್ಕೂ ಶೋಷಣೆಯನ್ನೇ ಗುಲಾಮಗಿರಿಯನ್ನೇ ಒತ್ತುಕೊಂಡು ಮುಖ್ಯವಾಹಿನಿಗೆ ಬರಲು ಹೆಣಗಾಡುವ ವರ್ಗದ ಮಧ್ಯೆ ಕಂದಕ ಸೃಷ್ಟಿಯಾಗಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಮುದಾಯಗಳನ್ನು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಸಮಾನವೆಂದು ಭಾವಿಸಲು ಸಾಧ್ಯವಾಗದ ಜಾತಿಯತೆಯ ಅಸ್ಪೃಶ್ಯತೆಯ ಸಮಾಜದ ದೌರ್ಬಲ್ಯವನ್ನು ಸರಿಪಡಿಸುವ ಶಕ್ತಿಯಾಗಿ ಮೀಸಲಾತಿ ನೀತಿ ಜಾರಿಗೆ ತರಲಾಗಿದೆ.  ಇದು  ಸಮಾಜದ ಎಲ್ಲಾ ಭಾಗಗಳಲ್ಲಿಯೂ ಆರ್ಥಿಕ ಸ್ಥಿತಿಗತಿಯನ್ನು ಸರಿಪಡಿಸಬಹುದೆಂದು ಹೇಳಬೇಕಿದೆ ಆದರೆ ಇದು ಕೇವಲ ಬಡತನ ನಿರ್ಮೂಲನ ಕಾರ್ಯಕ್ರಮವಾಗಿ ಆರ್ಥಿಕ ಮಾಪನದ ಅಳತೆಗೋಲಾಗಿಯೂ ಇಂದಿಗೆ  ಕೇಂದ್ರ ಸರ್ಕಾರ ತೆಗೆದುಕೊಂಡ ಮೇಲು ಜಾತಿಗಳ ಬಡವರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀತಿ ಜಾರಿಗೊಳಿಸಿರುವುದು ತಪ್ಪು ಗ್ರಹಿಕೆಗೆ ಎತ್ತಿ ಹಿಡಿದ ಕೈಗನ್ನಡಿ .

ಮೀಸಲಾತಿ ಬಗೆಗಿನ ಸ್ಪಷ್ಟ ಚಿತ್ರಣ ತಿಳಿಯಬೇಕಾದರೆ ಶತಮಾನ ದ ಹಿಂದೆ  ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ಶಿಫಾರಸ್ಸುಗಳು  ಇಂದಿಗೆ ಸಾಕ್ಷಿಯಾಗಬೇಕಾಗಿದೆ. 1918 ರಲ್ಲಿ ಮೈಸೂರು ಸಂಸ್ಥಾನ  ನ್ಯಾಯಮೂರ್ತಿ ಮಿಲ್ಲರ್ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು  ನೇಮಿಸಿತ್ತು. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಕ್ಷೇತ್ರದಲ್ಲಿ ಸಮರ್ಪಕ ಪ್ರಾತಿನಿಧ್ಯಕ್ಕೆ ಶಿಫಾರಸ್ಸು ಮಾಡಿತು. ಅದರ ಭಾಗವಾಗಿ ಮೀಸಲಾತಿ ನಿಗದಿ ಮಾಡುವುದು ಈ ಸಮಿತಿಯ ಜವಬ್ದಾರಿಯಾಗಿತ್ತು. ಸಮಿತಿಯು 1919ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯು ನೀಡಿರುವ ಶಿಫಾರಸುಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಉಂಟುಮಾಡಿರುವುದನ್ನು ಗಮನಿಸಬಹುದು. ಇಲ್ಲಿಯೂ ಸಹ ಭಾರತ, ಜಾತಿ ವ್ಯವಸ್ಥೆಯ ಕ್ಲಿಷ್ಟಕರ ಸಂಕೀರ್ಣ ಕೂಪವಾಗಿರುವುದನ್ನು ಮರೆಯದೆ ಸಾಂಸ್ಕೃತಿಕ ಮತ್ತು ಅಧಿಕಾರಸ್ಥ ರಾಜಕಾರಣದ ವೈವಿಧ್ಯತೆಯಲ್ಲಿನ ಸಮಾಜಿಕ ನ್ಯಾಯದ ಪರಿಕಲ್ಪನೆಯೊಳಗಿನ ಸಮಾನತೆಯು (ಜಾತಿ, ಆಸ್ಮಿತೆಯ ಹಿತಾಸಕ್ತಿಗಳು) ಕಾರ್ಯನಿರ್ವಹಿಸಿರುವುದು ಇತಿಹಾಸ ಸಾರಿ ಹೇಳುತ್ತದೆ.

ಮೀಸಲಾತಿಯ ಪರಿಕಲ್ಪನೆಯ ಕ್ರಾಂತಿಕಾರಕ ಕುರುಹು ಮೂಡಿದ್ದು ಅಂದಿನ ವಸಾಹತು ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಗೆ ಸಾಕ್ಷಿಯಾಗಿ ಮೈಸೂರು ಪ್ರಾಂತ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಪ್ರಜ್ವಲಿಸ ತೊಡಗಿದ್ದ ಹೋರಾಟದ ಕಾವು. ಇದಕ್ಕೆ ಪ್ರೇರಣೆಯಾಗಿದ್ದು ಮದ್ರಾಸ್ ಪ್ರಾಂತ್ಯದಲ್ಲಿ ನೆಡೆಯುತ್ತಿದ್ದ ಬ್ರಾಹ್ಮಣೇತರರ ಚಳುವಳಿ. ಈ ಚಳುವಳಿಯ ಮುಂದುವರೆದ ಭಾಗವಾಗಿಯೇ ಮೈಸೂರು ಪ್ರಾಂತ್ಯದಲ್ಲಿ ಹಿಂದುಳಿದ ವರ್ಗಗಳು ಮೀಸಲಾತಿ ಹೋರಾಟ ಸಮಿತಿ ರಚಿಸಿಕೊಂಡು ಪ್ರಜಾಮಿತ್ರ ಮಂಡಳಿ ಸ್ಥಾಪಿಸಿದರು. ಮಿಲ್ಲರ್ ಸಮಿತಿಯ ಶಿಫಾರಸ್ಸುಗಳನ್ನು ಸಲ್ಲಿಸುವ ಮೊದಲು ಜಾತಿಗಳನ್ನು ಸಾಮಾಜಿಕ ವರ್ಗಗಳಾಗಿ ಗುರುತಿಸಲಾಗಿತ್ತು. ಇದಕ್ಕೆ 1881ರ ಮತ್ತು ನಂತರದ ಜನಗಣತಿಗಳು ಸಾಕ್ಷಿಯಾಗಿವೆ. ಈ ಜನಗಣತಿ ಗಳಲ್ಲಿ ಜಾತಿಗಳ ಸಂಖ್ಯೆ ಹೆಚ್ಚುವುದರೊಂದಿಗೆ ಹೊಸ ಜಾತಿಗಳ ಜನಗಣತಿ ಪಟ್ಟಿಯೊಳಗೆ ಸೇರಿ ಕೊಳ್ಳತ್ತಿದ್ದು, ಇದು 1931 ರವರೆಗೂ ಸಾಗಿ ಬಂದು ಜಾತಿ, ಧರ್ಮಗಳಾಗಿ ಪರಿವರ್ತನೆಗೊಂಡಿದ್ದು.  ಮಿಲ್ಲರ್ ಸಮಿತಿಯು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಜಾತಿಗಳ ಸಂಖ್ಯೆಗಳನ್ನು ಲೆಕ್ಕ ಹಾಕಿತ್ತು. ಮೀಸಲಾತಿ ನಿಗದಿ ಮಾಡುವಾಗ ಜಾತಿಯೇ ಮಾನದಂಡವಾಗಿರದೇ ಇಂಗ್ಲೀಷ್ ಭಾಷೆಯ ಜೊತೆಗೆ ಉಳಿದೆಲ್ಲಾ ಅಂಶಗಳನ್ನು ಮಾಪನವಾಗಿ ಪರಿಗಣಿಸಿದವು.

ಅಂದಿನ ವಸಾಹತುಶಾಹಿ ಆಡಳಿತ ದಲ್ಲಿ   ಮಿಸಲಾತಿಯನ್ನು ಅಳವಡಿಸಿದ್ದು ಮೈಸೂರು ಸಂಸ್ಥಾನವೇ ಪ್ರಮುಖವಾದದ್ದು ಎಂಬಂತೆ ಮೀಸಲಾತಿಯನ್ನು ಜಾರಿಗೊಳಿಸಿದ ವರ್ಷವೇ ಹೈದರಾಬಾದ್ ಸಂಸ್ಥಾನವು ಕೂಡ ಉದ್ಯೋಗ  ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಿ ಮೀಸಲಾತಿಯನ್ನು ಎತ್ತಿ ಹಿಡಿಯಿತು. 1891ರಲ್ಲಿ ಕೇರಳದ ತಿರವಂಕೂರ್ ಸಂಸ್ಥಾನದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕುರಿತಂತೆ ಬೇಡಿಕೆಗಳು ಬಂದಿದ್ದರೂ ಜಾರಿಯಾಗಲು 1936 ರ ತನಕ ಕಾಯಬೇಕಾಯಿತು.  . ಆದರೆ ಈ ಸಂಸ್ಥಾನಗಳಲ್ಲಿ  ಬ್ರಾಹ್ಮಣರ ಪ್ರಾಭಲ್ಯದ ವಿರುದ್ದ ಚಳುವಳಿಗಳು ನೆಡೆದಿರುವುದು ಚಾರಿತ್ರಿಕ ಸಂಗತಿಗಳಾಗಿವೆ.  1902ರಲ್ಲಿ ಕೊಲ್ಲಾಪುರದ ಸಾಹು ಮಹಾರಾಜರು ಮೀಸಲಾತಿ ನೀತಿಯಲ್ಲಿ ಶೇಕಡ 50ರಷ್ಟು ಉದ್ಯೋಗಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿದರು. ಮಿಲ್ಲರ್ ಆಯೋಗದ ವರದಿ ಜಾರಿಯ ಪರಿಣಾಮವಾಗಿ ಹಿಂದುಳಿದ ವರ್ಗಗಳ ಹಲವು ಜಾತಿಗಳು ಸ್ವಾತಂತ್ರ್ಯ  ಪೂರ್ವದಲ್ಲಿಯೇ ವ್ಯವಸ್ಥೆಯ ಭಾಗವಾದವು.

ಮಂಡಲ್ ಆಯೋಗದ ಶಿಫಾರಸ್ಸುಗಳಿಗೆ ಉತ್ತರಭಾರತ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರೆ ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ನ್ಯಾಯ ವಾಸ್ತವ ಸಂಗತಿಗಳಾದ್ದರಿಂದ ಹಿಂದುಳಿದ ಜಾತಿಗಳು  ಆಸ್ಮಿತೆಯನ್ನು ಎತ್ತಿ ಹಿಡಿಯುವ ರಾಜಕಾರಣದ ಗಟ್ಟಿತನವನ್ನು ಪ್ರದರ್ಶಿಸಲು ಮುಂದಾಗಿದ್ದವು. ಈ  ಕಾರಣ ಪ್ರಭುತ್ವವು ಜಾತಿ ಜನಸಂಖ್ಯಾವಾರು ಮೀಸಲಾತಿ ಮೂಲಕ ಪ್ರಾತಿನಿಧ್ಯ ನೀಡಿತು. ಹೀಗಾಗಿ ಎಲ್ಲಾ ಜಾತಿಗಳು ಆಸ್ಮಿತೆಯನ್ನು ಎತ್ತಿಹಿಡಿಯಲು ಮುಂದಾದವು. ಆದರೆ ಮಿಲ್ಲರ್ ಸಮಿತಿಯು ಬ್ರಾಹ್ಮಣರು, ಆಂಗ್ಲೋ- ಇಂಡಿಯನ್ನರು, ಐರೋಪ್ಯರನ್ನು ಮೀಸಲಾತಿಯಿಂದ ಹೊರಗಿಟ್ಟಿತು. ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಜಾತಿಗಳು ಎಂದು ಎರಡು ಗುಂಪುಗಳನ್ನ ಗುರುತಿಸಿ ಸರ್ಕಾರಿ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯದ ಕಾರಣಗಳೇನು ಮತ್ತು ಬ್ರಾಹ್ಮಣೇತರ ಹಿಂದುಳಿದ ಜಾತಿಗಳಿಗೆ ಆಗಿರುವ ಅನ್ಯಾಯದ ಬಗೆಗೆ ಚರ್ಚೆಗಳನ್ನು ಮಿಲ್ಲರ್ ಸಮಿತಿಯು ವರದಿ ತಯಾರಿಸುವ ಸಮಯದಲ್ಲಿ, ಸಭೆಗಳಲ್ಲಿ ಮಂಡಿಸಿಲ್ಲವೆಂಬುದು ಸೋಜುಗದ ಸಂಗತಿ. ನಂತರದ ದಿನಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಜಾತಿಗಣತಿ ಆವಿಷ್ಕಾರಗಳು ಕೂಡ ಬೆಳಕಿಗೆ ಬಂದವು. ಇದನ್ನು  ಪ್ರಾಸ್ತಾವಿಕವಾಗಿ ಉಲ್ಲೇಖಿಸಿರುವುದು ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮೀಸಲಾತಿ ಪರಿಕಲ್ಪನೆ ಇಂದಿಗೆ ಬಹುಪಾಲು ಹಿಂದುಳಿದ ವರ್ಗಗಳು ಗ್ರಹಿಸಿಕೊಂಡಿರುವುದು ಎಸ್.ಸಿ, ಎಸ್.ಟಿ  ಅಬಿವೃದ್ಧಿ ಯೋಜನೆಗಳು ಎನ್ನುವ ತಪ್ಪು ಕಲ್ಪನೆಯಿಂದ  ಹೊರ ಬರಲಿ ಮತ್ತು ಮೊದಲು ಈ ದೇಶದಲ್ಲಿ ಮೀಸಲಾತಿ ಪಡೆದಿರುವವರು ಹಿಂದುಳಿದ ಜಾತಿಗಳು ಎಂಬುದನ್ನು ಅರ್ಥಮಾಡಿಕೊಳ್ಳುವ  ಕಾರಣಕ್ಕಾಗಿ.

ಭಾರತ ಒಂದು ಭಿನ್ನ ಚಾರಿತ್ರಿಕ ಪರಂಪರೆಯುಳ್ಳ ರಾಷ್ಟ್ರ.  ಇಲ್ಲಿ ವೈವಿದೈತೆಯಲ್ಲಿ ಏಕತೆಯನ್ನು ಸಾಧಿಸಿ ಸಮಗ್ರತೆಯನ್ನು ಎತ್ತಿಹಿಡಿಯಬೇಕಾಗಿದೆ, ನಮ್ಮ ದೇಶದ ಸಂವಿಧಾನ ಪ್ರಮುಖವಾಗುತ್ತದೆ. ಈ ಸಂವಿಧಾನದ ಬುನಾದಿಯ ಮೇಲೆಯೇ ದೇಶದ ಸರ್ವತೋಮುಖ ಅಭಿವೃದ್ಧಿ ಆಡಳಿತ ಇನ್ನು ಮುಂತಾದ ಹಾಗುಹೋಗುಗಳೆಲ್ಲವು ಎನ್ನುವುದನ್ನು ಮರೆಯುವಾಗಿಲ್ಲ. ಜಗತ್ತಿನ ರಾಷ್ಟ್ರಗಳೆಲ್ಲವೂ ನಿಬ್ಬೆರಗಾಗಿ ಭಾರತದತ್ತ ನೋಡಲು ಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಮಾಜವಾದಿ ನ್ಯಾಯ ಸಮಾನತೆ, ಸಾರ್ವಭೌಮತೆ, ಜಾತ್ಯಾತೀತ ಗಣತಂತ್ರ ವ್ಯವಸ್ಥೆ, ಸ್ವಾತಂತ್ರ್ಯ, ಐಕ್ಯತೆ ಮತ್ತು ಭಾತೃತ್ವ. ಈ ಪ್ರಮುಖ ಅಂಶಗಳೆಲ್ಲವೂ ಪ್ರಸ್ತಾವನೆಯ ಪ್ರಮುಖ ಪದಗಳಾಗಿ ನಿರ್ಮಿತವಾಗಿರುವ ಶ್ರೇಷ್ಠ ಸಂವಿಧಾನದ ಆಶಯಗಳ ಮೇಲೆ ಇವುಗಳನ್ನು ಈಡೇರಿಸಲು ಮೂಲಭೂತ ಹಕ್ಕುಗಳು, ರಾಜ್ಯನೀತಿ ನಿರ್ದೇಶಕ ತತ್ವಗಳು, ಕರ್ತವ್ಯಗಳು ಪ್ರಭುತ್ವದ ರಚನೆ, ಮತ್ತಿತರ  ದೇಶ ಮುನ್ನೆಡೆಸುವ ವಿಷಯಗಳೆಲ್ಲವೂ ದೇಶದ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರಜಾಸತಾತ್ಮಕತೆಯ ಔದಾ ರ್ಯತೆಯನ್ನು ಪಾಲಿಸುವಂತೆ ಪ್ರತಿ ಪೌರನಿಗೂ ವಹಿಸಲಾಗಿದೆ. ಇದನ್ನು ಬರೆದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ಅವಕಾಶ ವಂಚಿತರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮೀಸಲಾತಿ ಕೊಟ್ಟು ಇದನ್ನು ಪ್ರಾತಿನಿಧ್ಯ ಎಂದು ವ್ಯಾಖ್ಯಾನಿಸಿದರು. ಶತಮಾನದಿಂದ ವಂಚಿತರಾದವರಿಗೆ ದೇಶ ಕಟ್ಟುವ ಶಾಸನ ರೂಪಿಸುವ ಕ್ರಿಯೆಯಲ್ಲಿ ಅವಕಾಶ ಕಲ್ಪಿಸಿ ಅಸಮಾನತೆಯನ್ನು ತೊಡೆದು ಸಮಾನತೆಯನ್ನು ತರುವ ಪ್ರಯತ್ನ ಮಾಡಿದರ ಫಲವಾಗಿ ಭಾರತ ಸಂವಿಧಾನದ 16ನೇ ಭಾಗದಲ್ಲಿ 330ನೇ ವಿಧಿಯಿಂದ 342ನೇ ವಿಧಿಯವರೆಗೆ ಶಾಶ್ವತ ಮತ್ತು ತಾತ್ಕಾಲಿಕ ರಕ್ಷಣಾತ್ಮಕ ಮತ್ತು ಅಭಿವೃದ್ಧಿ ಅಂಶಗಳ ಮೂಲಕ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು  ಸಂವಿಧಾನಾತ್ಮಕ ಅವಕಾಶಗಳನ್ನು ಒದಗಿಸಿದರು.

330 ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಲೋಕ ಸಭೆಯಲ್ಲಿ ಸ್ಥಾನಗಳನ್ನು ಮೀಸಲಿಡುವುದು, 330 (02)ನೇ ವಿಧಿ ಎಸ್.ಸಿ ಎಸ್.ಟಿ ಗೆ ಮೀಸಲಿಡಬೇಕಾದ ಸ್ಥಾನಗಳ ಸಂಖ್ಯೆಯು ಆ ರಾಜ್ಯದಲ್ಲಿರುವ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗಗಳ ಜನ ಸಂಖ್ಯೆಯನ್ನು ಆ ರಾಜ್ಯದ ಒಟ್ಟು ಜನಸಂಖ್ಯೆಗೆ ಯಾವ ಪ್ರಮಾಣದ ಸ್ಥಾನ ಹೊಂದಿದೆಯೋ ಅದನ್ನು ಆಧರಿಸಿ ಸ್ಥಾನ ನಿಗದಿ ಪಡಿಸಬೇಕು, 331 ನೇ ವಿಧಿ ಲೋಕ ಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ, 332ನೇ ವಿಧಿ ರಾಜ್ಯಗಳ ವಿಧಾನ ಸಭೆಗಳಲ್ಲಿ ಎಸ್.ಸಿ ಎಸ್.ಟಿ ಗಳಿಗೆ ಸ್ಥಾನಗಳನ್ನು ಮೀಸಲಿಡುವುದು, 333ನೇ ವಿಧಿ ರಾಜ್ಯಗಳ ವಿಧಾನ ಸಭೆಗಳಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದು, 335 ನೇ ವಿಧಿ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಕ್ಲೇಮುಗಳ ಬಗ್ಗೆ ತಿಳಿಸುತ್ತದೆ. ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕ ಸೇವಾ ಆಯೋಗಗಳಲ್ಲಿ ವಯಸ್ಸಿನ ಸಡಿಲಿಕೆಯನ್ನು ಉಂಟು ಮಾಡಲಾಗಿದೆ. 336ನೇ ವಿಧಿ ಕೆಲವು ಸೇವೆಗಳಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ವಿಶೇಷ ಉಪಬಂಧ, ವಿಧಿ 337  ಆಂಗ್ಲೋ ಇಂಡಿಯನ್ ಸಮುದಾಯದ ಅಭಿವೃದ್ಧಗಾಗಿ ಶೈಕ್ಷಣಿಕ ಅನುದಾನಗಳ ಬಗ್ಗೆ ವಿಶೇಷ ಉಪಬಂಧ, ಆಂಗ್ಲೋ ಇಂಡಿಯನ್ ಗೆ ಪ್ರಾತಿನಿಧ್ಯ (ಶಿಕ್ಷಣ ಸಂಸ್ಥೆ ತೆರೆಯಲು ರಿಯಾಯಿತಿಯಲ್ಲಿ ಅವಕಾಶ) 338 ನೇ ವಿಧಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಷ್ಟೀಯ ಆಯೋಗ,  341 ನೇ ವಿಧಿ ಹಾಗೂ 342ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಇದರಿಂದ ಎಸ್.ಸಿ. ಎಸ್.ಟಿ,  ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಿತವನ್ನು ಕಾಪಾಡಲು ಸಂವಿಧಾನ ಒದಗಿಸಿತು.

338ನೇ ವಿಧಿ (5,8,9 ಕ್ಲಾಸ್) ಪರಿಶಿಷ್ಟ ಜಾತಿ ಆಯೋಗವು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತದೆ.

  1. ಪರಿಶಿಷ್ಟ ಜಾತಿಯವರ ರಕ್ಷಣೆ ಸಂವಿಧಾನ ಒದಗಿಸಿದ ಎಲ್ಲಾ ವಿಷಯಗಳ ಬಗ್ಗೆ ಹಾಗೂ ಸರ್ಕಾರಕ್ಕೆ ಕಾಲ ಕಾಲಕ್ಕೆ ಪರಿಶಿಷ್ಟರ ಕ್ಷೇಮಾಭಿವೃದ್ದಿಗೆ ಕೈಗೊಂಡ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ.
  2. ಪರಿಶಿಷ್ಟರ ಹಕ್ಕು ಮತ್ತು ಸಂರಕ್ಷಣೆಗೆ ಧಕ್ಕೆ ಉಂಟು ಮಾಡಿದವರ ಬಗ್ಗೆ ವಿಚಾರಣೆ
  3. ಕೇಂದ್ರ ಮತ್ತು ರಾಜ್ಯಗಳ ಪರಿಶಿಷ್ಟ ಜಾತಿಯವರ ಅಭಿವೃದ್ಧಗಾಗಿ ಕೈಗೊಳ್ಳುವ ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳಿಗೆ ಸಲಹೆ ಮತ್ತು ಮಾರ್ಗದರ್ಶನ
  4. ಪರಿಶಿಷ್ಟ ಜಾತಿಯವರ ಸಂರಕ್ಷಣೆಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಶಿಫಾರಸ್ಸು ನೀಡುತ್ತದೆ.
  5. ರಾಷ್ಟ್ರಪತಿಯವರು ಸಂಸತ್ತು ಕಾಲಕಾಲಕ್ಕೆ ಪರಿಶಿಷ್ಟಜಾತಿಯವರ ರಕ್ಷಣೆಗಾಗಿ ಮಾಡಿರುವ ಕಾನೂನುಗಳನ್ನು ಜಾರಿಗೊಳಿಸುವ ಕಾರ್ಯವನ್ನು ಮಾಡುತ್ತದೆ.

ಪರಿಶಿಷ್ಟ ಜಾತಿ ಆಯೋಗವು ವಿಚಾರಣಾ ಅಧಿಕಾರವನ್ನು ಹೊಂದಿದ್ದು ಪರಿಶಿಷ್ಟಜಾತಿ ಹಕ್ಕು ಮತ್ತು ಸಂರಕ್ಷಣೆಗೆ ಧಕ್ಕೆ ಬಂದಾಗ ಸಮನ್ಸ್ ನೀಡಿ ಸತ್ಯಾಂಶಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತದೆ. ಯಾವುದೇ ದಾಖಲೆಯನ್ನು ಶೋಧಿಸುವ ಮತ್ತು ಹಾಜರು ಪಡಿಸುವ ಅಧಿಕಾರ ಹೊಂದಿರುತ್ತದೆ. ಅಫಿಡವಿಟ್ ಗಳ ಮೇಲೆ ಸಾಕ್ಷಿಗಳ ಸಂಗ್ರಹ, ಕೋರ್ಟನಲ್ಲಿರುವ ಪ್ರತಿ ಅಥವಾ ಸಾರ್ವಜನಿಕ ದಾಖಲೆಯ ಕೋರಿಕೆಯ ಮೇಲೆ ಪಡೆಯುವಂತಹ ಅಧಿಕಾರ.

ಸಂವಿಧಾನಾತ್ಮಕ ರಕ್ಷಣೆಗಳು

  1. ಅಭಿವೃದ್ಧಿ ಹಾಗೂ ರಕ್ಷಣಾ ಅವಕಾಶ ಸಂವಿಧಾನದ 46ನೇ ವಿಧಿ ಅನ್ವಯ ಪರಿಶಿಷ್ಟಜಾತಿಯವರಿಗೆ ಶೈಕ್ಷಣಿಕ ಆರ್ಥಿಕ ನ್ಯಾಯ ಒದಗಿಸುವ ಅವಕಾಶ ಕಲ್ಪಿಸಿದೆ.
  2. ಸಾಮಾಜಿಕ ಸಂರಕ್ಷಣೆ ವಿಧಿ 17ರ ಪ್ರಕಾರ ಅಸ್ಪೃಶ್ಯತೆ ಆಚರಣೆಯನ್ನು ನಿರ್ಮುಲನೆಗೊಳಿಸಿದೆ ಭಾರತದ ಸಂಸತ್ತು 1955ರಲ್ಲಿ ಅಸ್ಪೃಶ್ಯತಾ (ಅಪರಾಧ) ಕಾಯಿದೆ ಜಾರಿಗೆ ತಂದಿದೆ 1976 ರಲ್ಲಿ ಈ ಕಾಯ್ದೆ ಬಲಗೊಳಿಸಲು ತಿದ್ದುಪಡಿ ತಂದು ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ 1955 ಎಂದು ಮರು ನಾಮಕರಣ ಮಾಡಲಾಗಿದೆ. 1989ರಲ್ಲಿ ಮತ್ತೊಂದು ಕಾಯ್ದೆಯನ್ನು ಜಾರಿಗೆ ತಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ (Prevention of Atrocities)
  3. ಆರ್ಥಿಕ ಸಂರಕ್ಷಣೆ- ವಿಧಿ 23,24,46ರ ಅನ್ವಯ ಪರಿಶಿಷ್ಟ ಜಾತಿಯವರ ಆರ್ಥಿಕ ಸಂರಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
  4. ಶೈಕ್ಷಣಿಕ ಮತ್ತು ಸಾಂಸ್ಕೃತಿಕ- 15(4)ನೇ ವಿಧಿಯನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ವಿಶೇಷ ಸವಲತ್ತು ಒದಗಿಸುತ್ತದೆ.
  5. ರಾಜಕೀಯ ಸಂರಕ್ಷಣೆ- 164(4)ನೇ ವಿಧಿ ಅನ್ವಯ ಬಿಹಾರ, ಮಧ್ಯಪ್ರದೇಶ, ಒರಿಸ್ಸಾದಲ್ಲಿ ಬುಡಕಟ್ಟು ಕ್ಷೇಮಾಭಿವೃದ್ಧಿ ಸಚಿವರಿಗೆ ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಕ್ಷೇಮಾಭಿವೃದ್ಧಿಯ ಹೊಣೆಯನ್ನು ಒರಿಸಲಾಯಿತು.

ಪರಿಶಿಷ್ಟ ಪಂಗಡಗಳ ಆಯೋಗ 89ನೇ ತಿದ್ದು ಪಡಿ 2003ರ ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗವನ್ನು ವಿಭಜಿಸಿ 2014ರಲ್ಲಿ ಪ್ರತ್ಯೇಕವಾಗಿ ರಚಿಸಲಾಯಿತು.

ಸಂವಿಧಾನದ ವಿಧಿ 338 ಎ(5)ಅನ್ವಯ ಆಯೋಗವು ಕೆಳಕಂಡ ಕಾರ್ಯಗಳನ್ನು ಹೊಂದಿದೆ

  1. ಪರಿಶಿಷ್ಟ ಪಂಗಡದವರ ರಕ್ಷಣೆಗಾಗಿ ಸಂವಿಧಾನ ಹೊದಗಿಸಿರುವ ಎಲ್ಲಾ ವಿಷಯಗಳ ಬಗ್ಗೆ ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮೇಲ್ವಿಚಾರಣೆ ನೆಡೆಸಿ ಮೌಲ್ಯಮಾಪನ ಮಾಡುತ್ತದೆ.
  2. ಪರಿಶಿಷ್ಟ ಹಕ್ಕು ಮತ್ತು ಸಂರಕ್ಷಣೆಗೆ ಧಕ್ಕೆ ಉಂಟುಮಾಡಿದ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸುತ್ತವೆ.
  3. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್.ಟಿ ಅಭಿವೃದ್ಧಿಗೆ ಕೈಗೊಳ್ಳುವ ಸಾಮಾಜಿಕ ಆರ್ಥಿಕ ಯೋಜನೆಗಳ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತದೆ.
  4. ಎಸ್.ಟಿ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಸಂಬಂಧಿಸಿದಂತೆ ಶಿಫಾರಸ್ಸು ನೀಡುತ್ತದೆ.
  5. ರಾಷ್ಟ್ರ ಪತಿಯವರು ಕಾಲದಿಂದ ಕಾಲಕ್ಕೆ ಕಾನೂನುಗಳನ್ನು ಮಾಡಿ ಎಸ್.ಟಿ ಸಂರಕ್ಷಣೆಗಾಗಿ ಮಾಡಿರುವ ಕಾನೂನು ಗಳನ್ನು ಜಾರಿಗೊಳಿಸುತ್ತಿದೆ.

ಆಯೋಗದಿಂದ ಜಾರಿಗೊಳ್ಳುವ ಕಾನೂನುಗಳು

  1. Prevention of Atrocities ಕಾಯ್ದೆ 1989
  2. ಜೀತ ಪದ್ಧತಿ ನಿರ್ಮೂಲನ ಕಾಯ್ದೆ 1976
  3. ಬಾಲಕಾರ್ಮಿಕ ಕಾಯ್ದೆ 1986
  4. ಅರಣ್ಯ ಸಂರಕ್ಷಣಾ ಕಾಯ್ದೆ 1989
  5. ಕನಿಷ್ಟ ಕೂಲಿ ಕಾಯ್ದೆ 1948
  6. ಪರಿಶಿಷ್ಟ ಪಂಗಡದವರಿಗೆ ಸಂವಿಧಾನಾತ್ಮಕ ಸಂರಕ್ಷಣೆಗಳು

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂರಕ್ಷಣೆ ಒದಗಿಸುವ ವಿಧಿಗಳು 15(4),29ನೇ ವಿಧಿ, 46ನೇ ವಿಧಿ 356ನೇ ವಿಧಿ

ಸಾಮಾಜಿ ಸಂರಕ್ಷಣೆ- 23ನೇವಿಧಿ, 24ನೇವಿಧಿ

ಆರ್ಥಿಕ ಸಂರಕ್ಷಣೆ-244ನೇ ವಿಧಿ,275ನೇ ವಿಧಿ

ರಾಜಕೀಯ ಸಂರಕ್ಷಣೆ 164(1)ನೇ ವಿಧಿ 243ನೇ ವಿಧಿ ,271ನೇ ವಿಧಿ

341(1)ನೇ ವಿಧಿಯ ಪ್ರಕಾರ ದೇಶದ ಯಾವುದೇ ಭೂಭಾಗದ ಜಾತಿಗಳು ಮೂಲವಂಶಗಳು ಅವುಗಳ ಒಳಗಿನ ಗುಂಪುಗಳನ್ನು ರಾಷ್ಟ್ರಪತಿಗಳು ರಾಜ್ಯ ಪಾಲರೊಂದಿಗೆ ಸಮಾಲೋಚನೆ ನೆಡೆಸಿ ಅನುಸೂಚಿತ ಜಾತಿಗಳ ಗುಂಪಿಗೆ ಸೇರಿಸಬಹುದಾಗಿದೆ

341(2)ನೇ ವಿಧಿಯ ಪ್ರಕಾರ ಸಂಸತ್ತು ಕಾನೂನಿನ ಮೂಲಕ ಯಾವುದೇ ಜಾತಿ ಮೂಲವಂಶ ಅಥವಾ ಬುಡಕಟ್ಟನ್ನು ಅದರ ಒಳಗಿನ ಗುಂಪನ್ನು ಅಧಿಸೂಚನೆ ಮೂಲಕ ಅನುಸೂಚಿತ ಜಾತಿಗಳ ಪಟ್ಟಿಗೆ ಸೇರಿಸಬಹುದು ಅಥವಾ ತೆಗೆದುಹಾಕಬಹುದು ಇವು 342 ಅನುಸುಚಿತ ಬುಡಕಟ್ಟುಗಳಿಗೆ ಅನ್ವಯವಾಗಿ 342 (1)ನೇವಿಧಿ 342(2)ನೇವಿಧಿ ಯಥಾವತ್ತಾಗುತ್ತದೆ.

ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕ ಅವಕಾಶಗಳು

ಭಾರತ ಸಂವಿಧಾನದಲ್ಲಿ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿ ಕಾಪಾಡಲು ರಾಷ್ಟ್ರ ಪತಿಗಳು ಆಯೋಗವನ್ನು ನೇಮಕ ಮಾಡುತ್ತರೆ.

ರಾಷ್ಟ್ರೀಯ   ಹಿಂದುಳಿದ ವರ್ಗಗಳ ಆಯೋಗ

  1. ವಿಧಿ 340 ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಅನ್ವೇ಼ಷಣೆ ಮಾಡುವುದಕ್ಕಾಗಿ ಆಯೋಗದ ನೇಮಕಾತಿ
  2. 340(1)ನೇ ವಿಧಿಯ ಪ್ರಕಾರ ಭಾರತದ ಭೂಪ್ರದೇಶದಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸಮಸ್ಯೆಗಳನ್ನು ಪರಿಹರಿಸಿ ಕ್ಷೇಮಾಭಿವೃದ್ಧಿಗಾಗಿ ಶಿಫಾರಸ್ಸುಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ.
  3. 340(2)ನೇ ವಿಧಿ ಹಿಂದುಳಿದ ವರ್ಗದವರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸಮಸ್ಯೆಗಳನ್ನು ಪರಿಹರಿಸಿ ಕ್ಷೇಮಾಭಿವೃದ್ಧಿಗಾಗಿ ರಾಷ್ಟ್ರ ಪತಿಗಳಿಗೆ ಶಿಫಾರಸ್ಸುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ.
  4. 240(3)ನೇ ವಿಧಿ ಹಿಂದುಳಿದ ಆಯೋಗವು ಸಲ್ಲಿಸಿದ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರ ಪತಿಯವರು ಸಂಸತ್ತಿನ ಎರಡು ಸದನಗಳ ಮುಂದೆ ಮಂಡಿಸುವ ಅವಕಾಶ ಕಲ್ಪಿಸುತ್ತದೆ.

ಹಿಂದುಳಿದ ವರ್ಗಗಳ  ಮೀಸಲಾತಿಗೆ  ಸಂಬಂಧಿಸಿದಂತೆ  ನೇಮಕವಾದ ಆಯೋಗಗಳು

ಒ.ಬಿ.ಸಿ.ಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ ಅವರ ಮೀಸಲಾತಿಗೆ  ಸಂಬಂಧಿಸಿದಂತೆ   ಶಿಫಾರಸ್ಸು ನೀಡಲು ಭಾರತ ಸ್ವತಂತ್ರ ಪಡೆದ ನಂತರ ಅನೇಕ ಆಯೋಗಗಳನ್ನು ನೇಮಕ ಮಾಡಲಾಗಿದೆ.ಅವು ಸೀಮಿತ ಅವಧಿಗೆ ಮಾತ್ರ ಒ.ಬಿ.ಸಿ.ಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಶಿಫಾರಸ್ಸು ನೀಡಲಾಗಿದೆ.

ಖೇಲ್ಕರ್ ಸಮಿತಿ 1955 ಇದು ಮೊದಲ ಹಿಂದುಳಿದ ವರ್ಗಗಳ ಆಯೋಗವಾಗಿದ್ದು 1953 ಜನವರಿ 29ರಂದು  ರಾಷ್ಟ್ರಪತಿಯ ಆದೇಶದ ಮೇರೆಗೆ ಕಾಕಾ ಖೇಲ್ಕರ್ ರವರ ಅಧ್ಯಕ್ಷತೆಯಲ್ಲಿ ರಚನೆಗೊಂಡು ಮಾರ್ಚ 30 1951ರಂದು ವರದಿ ನೀಡಿತು ಈ ಆಯೋಗವು ದೇಶದಾದ್ಯಂತ 2399 ಹಿಂದುಳಿದ ವರ್ಗಗಳಿದ್ದು ಅವುಗಳಲ್ಲಿ 853 ಅತೀ ಹಿಂದುಳಿದ ವರ್ಗಗಳೆಂದು ಪಟ್ಟಿ ಮಾಡಿದ್ದವು ಇದರ ಪ್ರಮುಖ ಶಿಫಾರಸ್ಸುಗಳೆಂದರೆ

  1. ಎಲ್ಲಾ ವರ್ಗದ ಮಹಿಳೆಯರನ್ನು ಹಿಂದುಳಿದವರೆಂದು ಪರಿಗಣಿಸುವಂತೆ ಶಿಫಾರಸ್ಸು ಮಾಡಿತ್ತು.
  2. ಹಿಂದುಳಿದ ವರ್ಗದವರಿಗೆ ಸರ್ಕಾರಿ ಸೇವೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ನೀಡಿತು
  3. ಇದು ನೀಡಿದ ಅಂತಿಮ ವರದಿಯಲ್ಲಿ ಹಿಂದಿಳಿದವರನ್ನು ನಿರ್ಧರಿಸಲು ಜಾತಿ ಆಧಾರವಾಗಿ ಶಿಫಾರಸ್ಸು ಮಾಡಿತ್ತು

          ಮಂಡಲ್ ಆಯೋಗ

ಹಿಂದುಳಿದ ವರ್ಗಗಳ ಅಧ್ಯಯನಕ್ಕಾಗಿ ನೇಮಕಗೊಂಡ 2ನೇ ಮಂಡಲ್ ಆಯೋಗ 1979 ಜನವರಿ 01 ರಂದು ಬಿ.ಪಿ ಮಂಡಲ್ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರ ಪತಿ ಆಯೋಗವನ್ನು ನೇಮಕ ಮಾಡಿತು.

ಈ ಆಯೋಗ 1980ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ಮಂಡಲ್ ಆಯೋಗದ ಪ್ರಮುಖ ಶಿಫಾರಸ್ಸುಗಳು

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟು ಮಂದಿ ಇತರೆ ಧರ್ಮದವರು ಹಿಂದುಳಿದವರಿದ್ದಾರೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೋಟಾವನ್ನು 27ರಿಂದ 49.5ಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿತು.

ಈ ಆಯೋಗವು ಹಿಂದುಳಿದ ವರ್ಗಗಳನ್ನು ಶೈಕ್ಷಣಿಕ ಸಾಮಾಜಿಕ ಆರ್ಥಿಕ ಎಂಬ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕಂಡುಹಿಡಿಯಬೇಕೆಂದು ಶಿಫಾರಸ್ಸು ಮಾಡಿತು.

ಈ ಆಯೋಗವು ಒಂದು ಜನಾಂಗದಲ್ಲಿರುವ ಅಥವಾ ಒಂದು ಜಾತಿಯಲ್ಲಿರುವ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆದಿರುವ ಅದೇ ಜಾತಿಯ ಅತ್ಯಂತ ಹಿಂದುಳಿದವರೊಂದಿಗೆ  ಪ್ರತ್ಯೇಕಿಸಲು ಕೆನೆಪದರ (Creamy Layer) ಆಧಾರವಾಗಿರಿಸಿಕೊಂಡು ಪ್ರತ್ಯೇಕಿಸಬೇಕೆಂದು ಶಿಫಾರಸ್ಸು ಮಾಡಿತು.  ಅಂತೆಯೇ ವಿ.ಪಿ ಸಿಂಗ್ ರವರು 1990ರಲ್ಲಿ ಹಿಂದುಳಿದ ವರ್ಗದವರಿಗೆ ಶೇ.27 ರಷ್ಟು ಸರ್ಕಾರಿ ಉದ್ಯೋಗಗಳನ್ನು ಮೀಸಲಿಟ್ಟರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಸ್ಥಾಪನೆ

ಹಿಂದುಳಿದ ವರ್ಗಗಳಿಗೆ ಶಾಶ್ವತ ಆಯೋಗವಾಗಿ 1993 ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯ್ದೆಯ ಅನ್ವಯ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು 05 ಜನ ಸದಸ್ಯರನ್ನೊಳಗೊಂ ಡಂತೆ ಸುಪ್ರೀಂ ಕೋರ್ಟನ ಅಥವಾ ಹೈ ಕೋರ್ಟನ ಅಧ್ಯಕ್ಷರಾಗುವಂತೆ ಸ್ಥಾಪಿಸಲಾಯಿತು. ಇದು ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಬೇಕಾಗುವ ಸಲಹೆ ಮತ್ತು ಮಾರ್ಗದರ್ಶನ ನೀಡಿ ಅಭಿವೃದ್ಧಿಗೆ ಸಂಬಂದಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.

ಅಲ್ಪ ಸಂಖ್ಯಾತರ ಸಂವಿಧಾನಾತ್ಮಕ ಸೌಲಭ್ಯಗಳು

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಎಂದು ಪರಿಗಣಿಸಿ 2001ರ ಜನಸಂಖ್ಯೆಯ ಅಧಾರದ ಮೇಲೆ ಮುಸ್ಲಿಂ ಶೇ.12.4ರಷ್ಟು ಕೃಷಿಯನ್ನು ಶೇ. 2.3ರಷ್ಟು ಸಿಖ್‌ರು ಶೇ.1.9ರಷ್ಟು , ಭೌದ್ಧರು ಶೇ.0.8 ರಷ್ಟು, ಜೈನರು ಶೇ 0.4ರಷ್ಟು ಇತರೆ ಶೇ 0.7ರಷ್ಟು , ಹಿಂದೂಗಳು 81.4ರಷ್ಟು ಜನಸಂಖ್ಯೆ ಹೊಂದಿರುವುದರಿಂದ  ಜನಸಂಖ್ಯೆಯಲ್ಲಿ ಕಡಿಮೆ ಇರುವ ಧರ್ಮದ ಜನರನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಿ 1992 ಡಿಸೆಂಬರ್ 18ರ ವಿಶ್ವ ಸಂಸ್ಥೆಯ ಘೋಷಣೆಯಾದ ರಾಜ್ಯವು ಅಲ್ಪಸಂಖ್ಯಾತರ ಸಾಂಸ್ಕೃತಿಕ ಧಾರ್ಮಿಕ ಹಾಗೂ ಭಾಷೆಯ ಉಳಿಸಲು ಮತ್ತು ಬೆಳೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಘೋಷಣೆ ಅಂಗೀಕರಿಸಿ  ಭಾರತ ಸರ್ಕಾರ 1992ರಲ್ಲಿ ರಾಷ್ಟ್ರೀಯ ಅಲ್ಪ ಸಂಖ್ಯಾತರ ಕಾಯ್ದೆ ಜಾರಿಗೆ ತಂದು ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗವನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ 05 ಜನ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದರು. ಈ ಆಯೋಗ ಅಲ್ಪಸಂಖ್ಯಾತರ ರಕ್ಷಣೆಯನ್ನು ಮತ್ತು ಸಂವಿಧಾನಾತ್ಮಕ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುವುದು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಶೋಧನೆ ಅಧ್ಯಯನಗಳು ಮತ್ತು ವಿಶ್ಲೇಷಣೆಗಳನ್ನು ಕೈಗೊಳ್ಳುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶಿಫಾರಸ್ಸು ಮಾಡುವುದು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಶೋಷಣೆಗಳ ಕುರಿತು ತನಿಖೆ ಮಾಡಿ  ವಿಚಾರಣೆ ನೆಡೆಸುವುದು ಕಾಲಕಾಲಕ್ಕೆ ರಾಜ್ಯ ಸರ್ಕಾರಗಳಿಗೆ ಅಲ್ಪ ಸಂಖ್ಯಾತರ ಸಮಸ್ಯೆಗಳನ್ನು ಕುರಿತು ವರದಿ ಸಲ್ಲಿಸುವುದು. ಇವರಿಗೆ 29ನೇ ವಿಧಿ ಅನ್ವಯ ಪ್ರತಿಯೊಬ್ಬರು ತಮ್ಮ ಭಾಷೆ ಸಂಸ್ಕೃತಿ ಪರಂಪರೆ ಉಳಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೂ ಯಾವುದೇ ಒಬ್ಬ ನಾಗರಿಕನಿಗೆ ಅವನ ಧರ್ಮ ಜಾತಿ ಲಿಂಗದ ಆಧಾರದ ಮೇಲೆ ಸರ್ಕಾರಿ ಅಥವಾ ಅನುಧಾನಿತ ಶಾಲೆಗಳಲ್ಲಿ ಪ್ರವೇಶವನ್ನು ನಿರಾಕರಿಸುವಂತಿಲ್ಲ 30ನೇ ವಿಧಿಯನ್ವಯ ಅಲ್ಪಸಂಖ್ಯಾತರಿಗೆ ಶಾಲೆಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ ಹಾಗೂ ಶಾಲೆಗಳಿಗೆ ಅನುದಾನ ನೀಡುವಾಗ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗೆ ತಾರತಮ್ಯ  ಮಾಡುವಂತಿಲ್ಲ ಆಂಧ್ರ ಸರ್ಕಾರವು ಮುಸ್ಲಿಂ ಸಮುದಾಯದ ಬಡವರಿಗೆ ಶೇ 04 ರಷ್ಟು ಮೀಸಲಾತಿಯನ್ನು ನೀಡಿತ್ತು, ಇದನ್ನು ಹೈಕೋರ್ಟ ತಿರಸ್ಕರಿಸಿತು. ಆದರೆ ಆಂಧ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ ಎತ್ತಿಹಿಡಿದು ಆಂಧ್ರ ಸರ್ಕಾರ ಗುರುತಿಸಿರುವ ಮುಸ್ಲಿಂ ಸಮುದಾಯದ 14 ಒಳಪಂಗಡಗಳಿಗೆ ನೌಕರಿ ಮತ್ತು ಸರ್ಕಾರಿ ಶಿಕ್ಷಣ   ಪ್ರವೇಶಾತಿಯಲ್ಲಿ  ಮೀಸಲಾತಿ ಪಡೆಯುವಂತೆ ಮಾಡಿದೆ.

ಸಾಚರ್   ಸಮಿತಿ ನ್ಯಾ.ರಾಜೇಂದ್ರ ಸಾಚರ್ ರವರ ಅಧ್ಯಕ್ಷತೆಯಲ್ಲಿ  ಭಾರತೀಯ ಮುಸ್ಲಿಂರ ಸ್ಥಿತಿಗತಿ ಅಧ್ಯಯನ ಮಾಡಿ 403 ಪುಟದ  ವರದಿಯನ್ನು ನವಂಬರ್ 30.2006ರಲ್ಲಿ ಸಲ್ಲಿಸಿತ್ತು.

ರಂಗನಾಥ್ ಮಿಶ್ರ ಆಯೋಗದ ಅಧ್ಯಕ್ಷರಾದ ರಂಗನಾಥ ಮಿಶ್ರರವರು ಮುಸ್ಲಿಂರ ಸ್ಥಿಗತಿಯನ್ನ ಅಧ್ಯಯನ ಮಾಡಿ ಮೇ21 2007ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ಇದು ಸಂವಿಧಾನ ಬದ್ದವಾಗಿ ಈ ದೇಶದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ  ಹಿಂದುಳಿದ ವರ್ಗದವರು  ಧಾರ್ಮಿಕ ಅಲ್ಪಸಂಖ್ಯಾತರು  ಪಡೆಯುತ್ತಿರುವ ಸವಲತ್ತುಗಳಾದರು ನೈಜತೆಯ ಅರಿವಿಲ್ಲದೆಯೇ ಅಂಬೇಡ್ಕರ್ ರವರು ಕೇವಲ ದಲಿತ ವರ್ಗದವರಿಗೆ ನೀಡಿರುವ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಎಂಬಂತೆ ಬಿಂಬಿಸಿ, ನಂಬಿಸಿ ಒತ್ತಾಯ ಪೂರಕವಾಗಿಯೂ, ಉದ್ದೇಶ ಪೂರಕವಾಗಿಯೂ ಸುಳ್ಳು ವದಂತಿಗಳನ್ನೇ ಅಬ್ಬಿಸಿ ಯುವ ಜನತೆಯಲ್ಲಿ ಅಪ್ರಬುದ್ಧ ಸಾಮಾಜಿಕ ವಲಯದಲ್ಲಿ ತಮ್ಮ ಹಿಡನ್ ಅಜೆಂಡಾಗಳನ್ನು (ಪಟ್ಟಾ ಭದ್ರ ಹಿತಾಸಕ್ತಿಗಳನ್ನು) ಈಡೇರಿಸಿಕೊಳ್ಳುವ ಸಲುವಾಗಿ ಸಾರ್ವತ್ರಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಹುನ್ನಾರಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಆದರೆ ಮೀಸಲಾತಿ ಎಂದಾಕ್ಷಣ ಶೇ.50 ರಷ್ಟು ಸಾಮಾನ್ಯ ಎಂತಲೂ ಪರಿಗಣಿಸಿ, ಈ ಶೇ50ರಲ್ಲಿ ಪ್ರತಿಭೆ, ಕೌಶಲ್ಯ (ಜನರಲ್ ಮೆರಿಟ್) ಎಂತಲೂ ಧರ್ಮ ಜಾತಿ ಭಾಷೆ ಲಿಂಗ ಯಾವುದೇ ಅಡೆ ತಡೆ ಇಲ್ಲದೇ ಯಾರು ಬೇಕಾದರೂ ಶೇ.50ರಷ್ಟು ಮೀಸಲಾತಿಯ ಯೋಗ್ಯತೆ/ಅರ್ಹತೆ ಅನುಸಾರ ಫಲಾನುಭವಿಗಳಾಗಬಹುದು. ಇನ್ನುಳಿದ ಶೇ.50ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ  ಪರಿಶಿಷ್ಟ ಜಾತಿಗಳಿಗೆ (101 ಜಾತಿಗಳು) 15% ಪರಿಶಿಷ್ಟ ಪಂಗಡ (40ಕ್ಕೂ ಹೆಚ್ಚು ಜಾತಿಗಳು) 7.5% , ಒಬಿಸಿಗಳಿಗೆ (2ಎ,2ಬಿ,3ಎ.3ಬಿ)27% ಮೀಸಲಾತಿ ನೀಡಿದೆ. ಕರ್ನಾಟಕದ ಒಟ್ಟು ಮೀಸಲಾತಿ ಎಸ್.ಸಿ 15% ಎಸ್.ಟಿ 03% ಕ್ಯಾಟಗರಿ1 4% 2ಎ 15%, 2ಬಿ.4%, 3ಎ 4%, 3ಬಿ.5% ಒಬಿಸಿ ಒಟ್ಟು ಮೀಸಲಾತಿ 32%  ಎಂದು ಸಂವಿಧಾನ ಬದ್ದವಾಗಿ ಹೇಳುತ್ತಿದ್ದರು ನಿಜವಾಗಿಯೂ  ಪ್ರಸ್ತುತ ದಿನ ಮಾನಗಳಲ್ಲಿ ಅನುಷ್ಟಾನಗೊಂಡಿರುವ ಪ್ರಮಾಣ ನೋಡಿದರೆ ನಿಜಕ್ಕೂ ದಿಗ್ಬ್ರಮೆ  ಉಂಟಾಗುತ್ತದೆ.  ಒಬಿಸಿಗಳಿಗೆ 27% ಮೀಸಲಾತಿ ಇದ್ದರೂ ಅನುಷ್ಠಾನ ಗೊಂಡಿರುವುದು ಶೇ5% ರಷ್ಟು ಮಾತ್ರ ಪರಿಶಿಷ್ಟ ಜಾತಿಗಳಿಗೆ 15% ಮೀಸಲಾತಿ ಇದ್ದರೂ ಜಾರಿಯಾಗಿರುವುದು ಶೇ8% ಮಾತ್ರ ಪರಿಶಿಷ್ಟ ಪಂಗಡದವರಿಗೆ ಶೇ7.5 ರಷ್ಟು ಮೀಸಲಾತಿ ಇದ್ದರೂ ಜಾರಿಯಾಗಿರುವುದು3.5ರಷ್ಟು ಮಾತ್ರ ಎಂದು ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿಯವರು ಸಂಸತ್ತಿನಲ್ಲಿ ನೀಡಿರುವ ವಿವರಣೆಗಳನ್ನು ಈ ಮೂಲಕ ತಿಳಿಯಲಾಗಿದೆ.

ಇಂತಹ ವಿಷಮ ಸ್ಥಿತಿಯಲ್ಲಿ ಮೀಸಲಾತಿಯ ಆಶಯಗಳೇನು ಎಂಬುದನ್ನು ತಿಳಿಯಲು ಮತ್ತು ಸಂವಿಧಾನದಲ್ಲಿ  ವಿಶೇಷ ಸೌಲಭ್ಯಗಳನ್ನು ನೀಡಲು ಅಂಬೇಡ್ಕರ್ ರವರ ಚಿಂತನೆಗಳ ಸ್ಪಷ್ಟತೆಗಳೇನು ಎಂಬುದನ್ನು ಭಾರತೀಯ ವೈವಿಧ್ಯತೆಯ ಸಾಮಾಜಿಕ ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಆಯಾಮಗಳ ಮೂಲಕ ಪ್ರಸ್ತುತ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳದೇ ಆರ್ಥಿಕ ದೃಷ್ಟಕೋನದಿಂದ ಬಡವ ಶ್ರೀಮಂತ ಎಂಬ ಪರಿಕಲ್ಪನೆಯ ಮೇಲೆ ಮೀಸಲಾತಿಯನ್ನು ಬಡತನ ನಿರ್ಮೂಲನಾ ಕಾರ್ಯಕ್ರಮ ಇದು ಕೇವಲ ಎಸ್.ಸಿ ಎಸ್.ಟಿ ಗಳಿಗೆ ಮಾತ್ರ ಸೀಮಿತ ಎಂಬ ಅಂಶವನ್ನು ಸಾರ್ವಜನಿಕ ವಿಷಯವಾಗಿ ಬಿತ್ತರಿಸಿ  ಹಿಂದುಳಿದ ಜಾತಿಗಳ 27% ಮೀಸಲಾತಿಯನ್ನು ಕೇವಲ 5% ಮಾತ್ರ ಜಾರಿಗೊಳಿಸಿ ಶಿಕ್ಷಣ ಉದ್ಯೋಗ ಅವಕಾಶ ವಂಚಿತರನ್ನಾಗಿ ಮಾಡಿ  ಸಾಮಾಜಿಕ ಮತ್ತು ಸಾಂಸ್ಕೃತಿಕ ಪೂರ್ವಗ್ರಹ ಪೀಡಿತ ಜಾತಿಹೀನ ಸ್ಥಾಪಿತ ಮನಸ್ಸುಗಳಲ್ಲಿ ಮತ್ತಷ್ಟು ಅಸ್ಪೃಷ್ಯತೆಯ ತಾರತಮ್ಯಕ್ಕೆ ವರ್ಗ ಅಂತರದ ಲೇಪನಮಾಡಿ ಒ.ಬಿ.ಸಿ ಮತ್ತು ಎಸ್.ಸಿ.ಎಸ್.ಟಿ.ಗಳ ನಡುವೆ ಕಂದಕವನ್ನುಂಟು ಮಾಡಲಾಗಿದೆ.

ಮೀಸಲಾತಿಯ ಒಂದು ಅಂಶದಿಂದ ಈ ದೇಶದ ಶೋಷಿತರನ್ನು ಮೀಸಲಾತಿ ಹೆಚ್ಚಿನ ಪಾಲನ್ನು ಪಡೆಯುತ್ತಿರುವ ಹಿಂದುಳಿದ ವರ್ಗಗಳು ಸ್ವಾತಂತ್ರ್ಯೋತ್ತರ  ಭಾರತದಲ್ಲಿ  ಮೀಸಲಾತಿಯನ್ನು ಯಾವ ಉದ್ದೇಶಕ್ಕಾಗಿ ಜಾರಿಗೆ ತರಲಾಯಿತು, ಚಾರಿತ್ರಿಕವಾಗಿ ಸ್ವಾತಂತ್ರ ಪೂರ್ವದಲ್ಲಿ ಈ ದೇಶದ ಹಿಂದುಳಿದ ವರ್ಗಗಳ ಸ್ಥಿತಿಗತಿಗಳು ಹೇಗಿದ್ದವು ಮತ್ತು ಇವರು ಆಸ್ತಿ ಅಧಿಕಾರ ಅಂತಸ್ಥುಗ ಳಿಂದ ವಂಚಿತರಾದ್ದುದಾರ ಏಕೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪ್ರಜ್ಞಾವಂತರಾಗಿ ಯೋಚಿಸಿದರೆ ಸಾಕು ಚಾರಿತ್ರಿಕ ಕಾಲ ಗರ್ಭದಲ್ಲಿನ ಉತ್ತರಗಳು ಇತಿಹಾಸದ ಉದ್ದಕ್ಕೂ ಹಿಂದಿನ ಸಾಮಾಜಿಕ ವ್ಯವಸ್ಥೆಯೊಳಗೆ ಬೇರು ಬಿಟ್ಟು ಜಾತಿ,ವರ್ಗ, ಅಸ್ಪೃಶ್ಯತೆ ಆರ್ಥಿಕ ಅಸಮಾನತೆ ಬಡತನ ಮೌಢ್ಯಗಳು ಲಿಂಗ ತಾರತಮ್ಯ,  ಅಂಧ ಶ್ರದ್ಧೆಗಳು ಗೋಚರಿಸುತ್ತವೆ. ಇಂತಹದೆ ಸನ್ನಿವೇಶಕ್ಕೆ ಉತ್ತರ ಕಂಡು ಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ರವರು ತಮ್ಮ ಚಿಂತನೆಗಳ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒಳಗೊಳ್ಳುವ ಹಾಗೇ ಶೋಷಿತ ಜಾತಿಗಳ ಮತ್ತು ಹಿಂದುಳಿದ ಜಾತಿಗಳ  ವಾಸ್ತವಿಕ ಚಿತ್ರಣವನ್ನು ಅಂತಃಕರಣದೊಂದಿಗೆ ಮೌಲ್ವೀಕರಿಸಿ  ಸಂವಿಧಾನವನ್ನು ರಚಿಸಿ ಸವಲತ್ತುಗಳನ್ನು ಒದಗಿಸುತ್ತ, ಸಾಮಾಜಿಕ ಸಮಾನತೆಗೆ ಆರ್ಥಿಕ ಸಮಾನತೆಗೆ  ಸಾಮಾಜಿಕ ನ್ಯಾಯದ ಮಾಪನವಾಗಿ ಮೀಸಲಾತಿ ತಂತ್ರವನ್ನ ಸಂವಿಧಾನ ಬದ್ದಗೊಳಿಸಿದರು. ಇದರ ನೈಜ ಆಶಯವನ್ನು ಎಂದು ಅರ್ಹತೆ, ಆರ್ಥಿಕತೆಯ ಮಾನದಂಡದ ಮೇಲೆ ಅಳೆದು ಮೇಲ್ ಜಾತಿ ಬಡವರಿಗೆ ಶೇ 10% ಮೀಸಲಾತಿ ನೀಡಿ ಸಾಮಾಜಿಕ ನ್ಯಾಯದ ಮಾಪನದ ತಂತ್ರಗಾರಿಕೆಗೆ ಪೆಟ್ಟುಕೊಟ್ಟಿದೆ ಎಂದರೆ ತಪ್ಪಾಗಲಾರದು.  ಯಾಕೆಂದರೆ ಕೇಂದ್ರ ಸರ್ಕಾರ ಮೇಲ್ ಜಾತಿಯ ಬಡವರಿಗೆ ಶೇ.10% ರಷ್ಟು ಮೀಸಲಾತಿ ನೀಡಿ ಮೇಲ್ಜಾತಿಗಳಲ್ಲಿ ಓಲೈಸಿ ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ಇದೆ ಎಂದು ಬಿಂಬಿಸಿ ಕೊಳ್ಳುವ ಆತುರದಲ್ಲಿ ಸುಪ್ರೀಂ ಕೋರ್ಟ ವಿಧಿಸಿರುವ ಶೇ 50% ರಷ್ಟು ಗಡಿಯನ್ನು ದಾಟಿದ ಹಿನ್ನಲೆಯಲ್ಲಿ ದಲಿತ/ಶೋಷಿತ ಹಿಂದುಳಿದ ವರ್ಗದವರು ನ್ಯಾಯಾಲಯದ ಮೊರೆಹೊದ ಸಂದರ್ಭದಲ್ಲಿ ನ್ಯಾಯಾಲಯ ಮೇಲ್ ಜಾತಿ ಬಡವರಿಗೆ ನೀಡಿರುವ ಶೇ.10% ಮೀಸಲಾತಿ ತಡೆಯಾಜ್ಞೆ ಹೊರಡಿಸಿದಾಗ ಅದನ್ನು ಮುಂದಿಟ್ಟುಕೊಂಡು ಮೀಸಲಾತಿಯ ಅಂಶವನ್ನೇ ಪ್ರಧಾನವನ್ನಾಗಿ ಮಾಡಿ ಭಾರತೀಯ ಸಾಮಾಜಿಕ ಜಾತಿ ವ್ಯವಸ್ಥೆಯಲ್ಲಿ ಸಾಮರಸ್ಯ ಕದಡುವ ಹುನ್ನಾರ ಇದ್ದರೂ ಇರಬಹುದೆಂದು ಹಲವಾರು ಚಿಂತಕರು ಆತಂಕ ವ್ಯಕ್ತಪಡಿಸಿರುವುದು ದಿನ ಪತ್ರಿಕೆಗಳಲ್ಲಿ ನೋಡಬಹುದಾಗಿದೆ. ಇನ್ನು 10% ಮೀಸಲಾತಿ ಪಡೆಯುವ ಮೇಲ್ವರ್ಗದ ಜಾತಿಗಳಿಗೆ ನಿಗದಿಪಡಿಸಿರುವ  ಬಡತನದ ಅಳತೆ ಮಾಪನ ಅಥವಾ ಆರ್ಥಿಕತೆ ಮಾನದಂಡ ಹಿಂದುಳಿದ ಮತ್ತು ಶೋಷಿತ (ದಲಿತ) ಜಾತಿಗಳಿಗೆ ಹೋಲಿಸಿದರೆ ನಿಜಕ್ಕೂ ಹಾಸ್ಯಾಸ್ಪದ ಮತ್ತು ಇವರ ಮೀಸಲಾತಿ ಆಶಯವನ್ನು ನಾಶ ಮಾಡುವ ಹುನ್ನಾರ ಎದ್ದು ಕಾಣುತ್ತದೆ.

ಅದೆಷ್ಟೋ ಜನ ಒ.ಬಿ.ಸಿ ಯುವಕರು ಬಡವರಾದ ನಮಗೆ ಈಗ 10% ಮೀಸಲಾತಿ ದಕ್ಕಿದೆ ಎಂಬ ಭ್ರಮೆಯಲ್ಲಿ ಹುಬ್ಬಿ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷವ್ಯಕ್ತ ಪಡಿಸಿರುವುದು ಬೇಸರದ ಸಂಗತಿ, ಹಾಗೆಯೇ ದಲಿತರು  ತಮ್ಮದೇನೋ ಕಳೆದುಕೊಂಡಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿರುವುದು ಸಾಮಾಜಿಕ ಕಳಕಳಿಯ ಜ್ಯೋತಕವಾಗಿ ಕಾಣುತ್ತದೆ. ಇಲ್ಲಿ ಕುಟುಂಬ ವಾರ್ಷಿಕ ಆದಾಯ 8.00 ಲಕ್ಷ ರೂಪಾಯಿಯ ಒಳಗಿರುವವ, 05 ಎಕರೆ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಾವಿರ ಚದುರ ಅಡಿ  ಕಡಿಮೆ ವಿಸ್ತಿರ್ಣದ ಮನೆ ಹೊಂದಿರುವ ನಗರ/ಪುರ ಸಭೆ ವ್ಯಾಪ್ತಿಯಲ್ಲಿ 327 ಚದುರ ಅಡಿಗಿಂತ ಕಡಿಮೆ ಹಾಗೂ ಇತರೆ ಕಡೆಗಳಲ್ಲಿ 627 ಚದುರ ಅಡಿಗಿಂತ ಕಡಿಮೆ ವಿಸ್ತಿರಣದ ವಸತಿ ಪ್ಲಾಟ್ಗಳನ್ನು ಹೊಂದಿರುವವರನ್ನು ಆರ್ಥಿಕವಾಗಿ ದುರ್ಬಲರು ಎಂದು ಗುರುತಿಸಿ ವಿಶೇಷವಾಗಿ ಮೇಲ್ ಜಾತಿಗಳಲ್ಲಿ ಶೇ.10% ರಷ್ಟು ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಯನ್ನು  ನೀಡಿ  ಮೀಸಲಾತಿ ಪ್ರಮಾಣವನ್ನು ಶೇ59.5ಕ್ಕೆ ಹೆಚ್ಚಿಸಿ  ಮೇಲ್ವರ್ಗಗಳ ಓಲೈಸುವ ಮತ್ತು ಶೋಷಿತರನ್ನ ಹಿಂದಕ್ಕೆ ತಳ್ಳುವ ಹಿಂದುಳಿದ ವರ್ಗದವರನ್ನು ಯಾಮಾರಿಸುವ ತಂತ್ರವನ್ನು ಬಡತನದ ಹೆಸರಲ್ಲಿ ಚಾರಿತ್ರಿಕ ವಂಚನೆ ಮಾಡಿದೆ. ಯಾಕೆಂದರೆ ಗ್ರಾಮೀಣ ಪ್ರದೇಶದ ದಲಿತರನ್ನು ನೋಡಿಕೊಂಡು ಅವರಿಗಿಂತ ನಾವು ಮೇಲ್ಜಾತಿಗಳೆಂದು ಒ.ಬಿ.ಸಿ ಜಾತಿಗಳು ಹಿಗ್ಗುವ ಸಾಮಾಜಿಕ ನೆಲೆಯೊಳಗೆ ಶೇ.10% ಮೀಸಲಾತಿ ಪಡೆಯಲು ಮೇಲ್ಕಾಣಿಸಿದ ಷರತ್ತುಗಳು ತಮಗೆ ಅನ್ವಯವಾಗುತ್ತವೆ ಎಂದು ಕೊಂಡರು ವಾಸ್ತವಿಕವಾಗಿ ಒ.ಬಿ.ಸಿ. ಗಳಿಗಿಂತ ಮೇಲ್ ಜಾತಿಯ ಆರ್ಥಿಕ ದುರ್ಬಲರಿಗೆ ಈ 10% ಮೀಸಲಾತಿ ಸೀಮಿತ ಎಂಬುದು ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂದಿನ ಬಹುತೇಕ (ಒ.ಬಿ.ಸಿ)ಹಿಂದುಳಿದ ವರ್ಗಗಳ ಗ್ರಾಮೀಣ ಪ್ರದೇಶದ  ಸಮುದಾಯಗಳು 5 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಕೃಷಿಗಾಗಿ 10 ಲಕ್ಷಗಳಿಗೂ ಮಿಗಿಲಾಗಿ ಸಾಲ ಮಾಡಿಕೊಂಡು ನಗರದ ಗೋಜಿಗೆ ಹೋಗದೆ ವಸತಿ ಪ್ಲಾಟ್ಗಳ ಕಲ್ಪನೆಯೂ ಇಲ್ಲದೆ ಹಿನಾಯ ಸ್ಥಿತಿಯಲ್ಲಿ ಇರುವುದು ಕಟು ವಾಸ್ತವದ ಸಂಗತಿ ಒ.ಬಿ.ಸಿ.ಗಳ ಸ್ಥಿತಿಯೇ ಹೀಗಿರುವಾಗ ಇನ್ನು ದಲಿತರ ಸ್ಥಿತಿಗತಿಗಳು ಪ್ರಗತಿಯಲ್ಲಿ ತೀರ ಗೌಣವಿದ್ದಾವೆ.

ರಾಷ್ಟೀಯ ಸಮೀಕ್ಷೆ 1987-88 ಮತ್ತು 1993-94 ರ ಅವಧಿಯಲ್ಲಿ ಬಡತನದಿಂದ ಮೇಲೆತ್ತಲ್ಪಟ್ಟ ದಲಿತೇತರ  ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಸಂಖ್ಯೆ ಕ್ರಮವಾಗಿ ಶೇ.16.45% ರಷ್ಟು  ಹಾಗೂ 17.97% ರಷ್ಟು ಇದ್ದರೆ  ಅದೇ ಗ್ರಾಮಾಂತರ ಮತ್ತು ನಗರ ಪ್ರದೇಶದ ದಲಿತರ ಸಂಖ್ಯೆ ಕ್ರಮವಾಗಿ  ಶೇ.11.19% ಮತ್ತು 10.02ರಷ್ಟು ಮಾತ್ರ ಇತ್ತು. ಬಡತನದ ವಿಭಾಗದಲ್ಲಿದ್ದ ದಲಿತೇತರರು ಶೇಕಡವಾರು ಸಂಖ್ಯೆ 6.45% ರಷ್ಟು ಕಡಿಮೆಯಾದರೆ, ದಲಿತರ ಸಂಖ್ಯೆ ಶೇ.14.24% ರಷ್ಟು   ಹೆಚ್ಚಾಗಿದ್ದು ಕಂಡು ಬರುತ್ತದೆ ಬಡತನದ ಈ ವಾಸ್ತವ ಸ್ಥಿತಿಯು ಅಂಕಿ ಅಂಶಗಳನ್ನು ಸರ್ಕಾರ ತಪ್ಪಾಗಿ ಭಾವಿಸಿದ್ದು ಈಗ ಜಗಜ್ಜಾಹಿರಾಗಿದೆ. ಸರ್ಕಾರದ ಗೊಂದಲ ಪೂರ್ಣ ದೃಷ್ಟಿಯಲ್ಲಿ 1999-2000ದ ಅವಧಿಯಲ್ಲಿ ಅದರ  ಅಂಕಿ ಸಂಖ್ಯೆಯ ಪ್ರಕಾರ ಬಡತನದಲ್ಲಿ ಬೃಹತ್ತಾದ ಇಳಿಕೆಯಾಗಿದೆ ಈ ಅಂಕಿ ಅಂಶಗಳ ಪ್ರಕಾರವೇ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಬಡತನದಿಂದ ಮೆಲೇರಿದ ದಲಿತೇತರ ಜನರ ಸಂಖ್ಯೆ ಕ್ರಮವಾಗಿ ಶೇ.47,49 ಇದ್ದರೆ , ಅದೇ ಅವಧಿಯಲ್ಲಿ  ಬಡತನದಿಂದ ತಪ್ಪಿಸಿಕೊಂಡ ಗ್ರಾಮಾಂತರ ಮತ್ತು ನಗರ ಪ್ರದೇಶಗಳ ದಲಿತರ ಶೇ. ಸಂಖ್ಯೆ ಕ್ರಮವಾಗಿ 28.52 ಮತ್ತು 22.19 ಈ ಸಮೀಕ್ಷೆಗೆ ಆಧಾರ ಅವರವರು ಬಳಸುತ್ತಿದ್ದ  ಜೀವನಾವಶ್ಯಕ ಪದಾರ್ಥಗಳ ಒಟ್ಟು ಮೊತ್ತ ಇನ್ನು ನೌಕರಿ ಮತ್ತು ವಿವಿಧ ಸೇವಾ ಕ್ಷೇತ್ರಗಳಲ್ಲಿ ತೊಡಗಿರುವವರ ಸ್ಥಿತಿಯು ಹೆಚ್ಚು ಕಡಿಮೆ ಇದೇ ಪೌವೃತ್ತಿಯನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕ್ರಮವಾಗಿ ಶೇ.26.28 ಹಾಗೂ 33.26 ದಲಿತೇತರರು ಬಡತನದ ಬೇಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದರೆ, ಅದೇ ದಲಿತರಲ್ಲಿ ಶೇ.9.92 ಹಾಗೂ 14.44 ಜನರು ಮಾತ್ರ ಬಡತನದ ಕುಲುಮೆಯಿಂದ ಒರಗೆ ಹಾರಲು ಸಾಧ್ಯವಾಗಿತ್ತು (ಎಂಬ ಅಂಶವನ್ನು  ಡಾ. ಆನಂದ್ ತೇಲ್ತುಂಬ್ಡೆ ದಲಿತರು ಭೂತ ಭವಿಷ್ಯ ಲೇಖನಗಳು, ಡಾ.ಎಚ್.ಎಸ್ ಅನುಪಮ ಮತ್ತು ಬಸು ಸಂಪಾದಿತ ಕೃತಿಯ ಪುಟ ಸಂಖ್ಯೆ 23,24ರಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಇಲ್ಲಿ ನಮೂದಿಸಲಾಗಿದೆ.) ಬಡತನದ  ವಾಸ್ತವಿಕತೆ ಹೀಗಿರುವಾಗ ಸಾಮಾಜಿಕ ವ್ಯವಸ್ಥೆಯೊಳಗಡೆ ಬಡತನವೆಂದರೆ  ಕಟ್ಟಕಡೆಯ ದಲಿತರ ಅನ್ನ, ಆಸರೆ , ಉಡುಗೆ ತೊಡಿಗೆಗೂ ಗತಿಯಿಲ್ಲದೆ ಅಧಿಕಾರ ಹೀನನಾಗಿ ಶಿಕ್ಷಣ ಹೀನನಾಗಿ ಅಸ್ಪೃಶ್ಯತೆಗೆ ಒಳಗಾಗಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ಮಲ ಹೊರುವುದನ್ನು ಬೀದಿ ಗುಡಿಸುವುದನ್ನು  ದೌರ್ಜನ್ಯ ಜಾತಿಯ ಪ್ರೌವೃತ್ತಿ ಒಳಗಾಗುವುದನ್ನು ಬಡತನದ  ಮಾಪನದ ಮಾನದಂಡದೊಂದಿಗೆ   ನೋಡುವ ಒಳಗಣ್ಣು ಕುರುಡಾಗಿ ಮೀಸಲಾತಿ ನೋಡುವ ದೃಷ್ಟಿಯ ಪ್ರಕರತೆ ತೀಕ್ಷಣವಾಗಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬುದ್ಧನಿಂದ ಮೊದಲುಗೊಂಡು ಬಸವಣ್ಣನಾದಿಯಾಗಿ ಅಂಬೇಡ್ಕರ್ ರವರೆಗೆ ನಡೆದುಕೊಂಡು ಬಂದ ಶ್ರೇಣಿಯುತ ಜಾತಿ ವ್ಯವಸ್ಥೆಯ ವಿರುದ್ಧದ ಸಾಮಾಜಿಕ ಕ್ರಾಂತಿಯನ್ನು ಪ್ರತಿ ಹಂತದಲ್ಲೂ ತೀವ್ರವಾಗಿ ವಿರೋಧಿಸಿದ ಪುರೋಹಿತ ಶಾಹಿಗಳು ಇನ್ನು ಬಂಡವಾಳಶಾಹಿಗಳಾಗಿ ಅಸಮಾನತೆಯ ಜಾತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದಾರೆ ತಳಸಮುದಾಯಗಳ ಸಾಮಾಜಿಕ ಶೈಕ್ಷಣಿಕ ಸಬಲೀಕರಣಕ್ಕಾಗಿ ಮೀಸಲಾತಿ ಎನ್ನುವ ನ್ಯಾಯದ ಪರಿಕಲ್ಪನೆಯನ್ನು ಹರಿಜನ ಕಲ್ಯಾಣ ಎನ್ನುವ ಮರೆಮೋಚಿದ ಸಿದ್ದಾಂತದ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ ಧರ್ಮಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ  ಸಾಂಸ್ಕೃತಿಕವಾಗಿ ಮತ್ತು ಆಡಳಿತದಲ್ಲಿ ಪ್ರಾತಿನಿಧ್ಯ ಹೊಂದಿರಬೇಕು ಎನ್ನುವ ಸಾಮಾಜಿಕ ನ್ಯಾಯದ ಮೂಲ ಸಿದ್ದಾಂತ ಈ ಮೀಸಲಾತಿಯಡಿಯಲ್ಲಿ ವೈಕ್ತಿ/ವೃತ್ತಿಯನ್ನು ಆದ್ಯತೆಯಾಗಿ ಪರಿಗಣಿಸದೇ ಸಮುದಾಯವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆಡಳಿತದಲ್ಲಿ ಮತ್ತು ಪ್ರಭುತ್ವದಲ್ಲಿ ಸಮಾನತೆ ಕಾಣಲು  ಪ್ರಾತಿನಿಧಿತ್ವ ಸಮಾನತೆಯ ಮುಖ್ಯ ಆಶಯ ಆಗಿ ಸಾಮಾಜಿಕ ನ್ಯಾಯಕ್ಕೆ ಈ ಪ್ರಾತಿನಿಧಿತ್ವವೇ ಮೆರಗು ತಂದುಕೊಡುತ್ತದೆ ಈ ಪ್ರಾತಿನಿಧಿತ್ವವನ್ನೇ ಮೀಸಲಾತಿ ಪದದ ಪರ್ಯಾಯ ಶಬ್ಧವಾಗಿ ಸಂಕುಚಿತಗೊಳಿಸಿಕೊಂಡು  ಅಪಾರ್ಥಮಾಡಿಕೊಂಡು ಆರ್ಥಿಕ ಮಾಪನವನ್ನು ಬಡತನವನ್ನು (ಟ್ಯಾಲೆಂಟ್) ಪ್ರತಿಭೆ ಅರ್ಹತೆ ಎಂಬ ಅಳತೆ ಗೌರವಗಳಾಗಿ ಮಾಡಿ ಸಂವಿಧಾನ ವಿರೋಧಿ  ಮಸೂದೆಗಳನ್ನು ಜಾರಿ ಮಾಡಿ ಮೀಸಲಾತಿ ಕಲ್ಪನೆಯನ್ನೇ ಬುಡಮೇಲು ಮಾಡಹೊರಟ್ಟಿರುವುದು ಸಾಮಾಜಿಕ ನ್ಯಾಯಕ್ಕೆ ಮಾಡುವ ಮಹಾ ವಂಚನೆಯಾಗಿದೆ.

ಈ ದೇಶದಲ್ಲಿ ಶೇ.75ರಷ್ಟು ಹುದ್ದೆಗಳನ್ನು ಮೇಲ್ಜಾತಿಗಳೆ ಕಬಳಿಸಿವೆ. ಎ ದರ್ಜೆಯ ಹುದ್ದೆಗಳಲ್ಲಿ76.8%ರಷ್ಟು, ಬಿ ದರ್ಜೆಯ ಹುದ್ದೆಗಳಲ್ಲಿ 71.8ರಷ್ಟು, ಸಿ ದರ್ಜೆಯ ಹುದ್ದೆಗಳಲ್ಲಿ 60%ರಷ್ಟು, ಡಿ ದರ್ಜೆ ಯಲ್ಲಿ ಶೇ.53.2 ರಷ್ಟು ಹುದ್ದೆಗಳನ್ನು ಮೇಲು ಜಾತಿಗಳು ಪಡೆದುಕೊಂಡ  ವಾಸ್ತವ ಇದ್ದರೂ  ಸಾಮಾಜಿಕ ನ್ಯಾಯ ಎಂಬುದು ಆರ್ಥಿಕ ಮಾಪನವಾಗಿ ಬಡತನ ನಿರ್ಮೂಲನಾ ಕಾರ್ಯಕ್ರಮವಾಗಿ ಬಿಂಬಿತಗೊಳ್ಳುತ್ತಿರುವುದು ದುರಾದೃಷ್ಟಕರ ವಿಷಯ. ಅಂಬೇಡ್ಕರ್ ರವರ ದೂರ ದೃಷ್ಟಿಯನ್ನು ಅಪಾರ್ಥಮಾಡಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ದಲಿತರು ಸ್ವಾತಂತ್ರ ಪೂರ್ವದ ಚಾರಿತ್ರಿಕ 1932ರ ಪೂನಾ ಒಪ್ಪಂದದ ಸತ್ಯಾ ಅಸತ್ಯತೆಗಳನ್ನ ಮೇಲು  ಜಾತಿಗಳು ಆಡಿದ ನಾಟಕಗಳನ್ನು ಅಂಬೇಡ್ಕರ್ ರವರ ಹೋರಾಟದ ಯಶೋಗಾಥೆಯನ್ನು  ಪುನರ್ ಮನನ ಮಾಡಿಕೊಂಡು ಚಳುವಳಿಯನ್ನು ಬಿರುಸುಗೊಳಿಸಿ ಅಂಬೇಡ್ಕರ್ ರವರು ಆಶಿಸಿದ ಪ್ರಭುತ್ವ ಮತ್ತು ಅಲ್ಪಸಂಖ್ಯಾತರು ಕೃತಿಯಲ್ಲಿ ಪ್ರತಿ ಪಾದಿಸಿರುವ ಈ ದೇಶದ ಆಸ್ತಿಯನ್ನ  ರಾಷ್ಟ್ರೀಕರಣ ಗೊಳಿಸುವ ಭೂಮಿಯನ್ನು ಸಮಾನಾಗಿ ಹಂಚುವ, ಜಾತಿ ನಿರ್ಮೂಲನೆ ಮಾಡುವ ಅಸ್ಪೃಶ್ಯತೆಯನ್ನು ಒಡೆದೋಡಿಸುವ  ರಾಜ್ಯಾಡಳಿತದಲ್ಲಿ ಪರಿಶಿಷ್ಟ ಜಾತಿಯ ಪ್ರಾತಿನಿಧ್ಯದ ಹಕ್ಕಿನ ರಕ್ಷಣೆಗೆ  ಪೂರಕವಾಗಿ ಒಂದುಗೂಡಿ ಸಮಾನತೆಯನ್ನು ಸಾರುವ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಟೊಂಕ ಕಟ್ಟಿ ನಿಂತು ಸಂವಿಧಾನವನ್ನು ಕೋಮುವಾದಿಗಳಿಂದ ಬಂಡವಾಳಶಾಹಿಗಳಿಂದ  ಜಾತ್ಯಾತೀತ ಮುಖವಾಡ ಧರಿಸಿ ಜಾತಿ ಭಿತ್ತುವ ಜಾತಿವಾದಿಗಳಿಂದ ರಕ್ಷಿಸಬೇಕಾಗಿರುವ ಅನಿವಾರ್ಯತೆ ಪ್ರತಿಯೊಬ್ಬ ನಾಗರಿಕನ ಮೇಲಿದೆ.

~~~~~~~~~~~~~~~~~~~~

ಲಕ್ಷ್ಮಿರಂಗಯ್ಯ.ಕೆ.ಎನ್.

ಸಂಶೋಧನಾರ್ಥಿ

ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ

ತುಮಕೂರು ವಿಶ್ವವಿದ್ಯಾನಿಲಯ