ಕಲೆಕೂರಿ ಪ್ರಸಾದ್ ಎಂಬ “ಕಾವ್ಯದ ಕೂರಿಗೆ.”
ಗಂಗಪ್ಪ ತಳವಾರ್
“ಕಲೆಕೂರಿ ಪ್ರಸಾದ್” ಆಂಧ್ರ ದಲಿತ ಸಾಹಿತ್ಯ ಲೋಕದಲ್ಲಿ ಮರೆಯಲಾರದ ದೃವತಾರೆ. ವರ್ತಮಾನದ ಯುವ ಕವಿಲೋಕಕ್ಕೆ ಅದೊಂದು ಮೇರು ಕಳಶ.. ಕಾವ್ಯಕ್ಕೊಂದು ದಿಡ್ಡಿ ಬಾಗಿಲು. ನೊಂದ ದಲಿತ ಜನಾಂಗಕ್ಕೆ ಮುಂಗಾರು ಮಿಂಚು. ಅದೊಂದು ಕಾವ್ಯ ಕೂರಿಗೆ.”ಕರ್ಮಭೂಮಿಲೋ ಪೂಸಿನ ಓ ಪೂವ್ವ” ಯಾರಿಗೆ ತಾನೇ ಗೊತ್ತಿಲ್ಲ. ಎಪ್ಪತ್ತು ಎಂಬತ್ತರ ದಶಕದಲ್ಲಿ ಈ ಹಾಡನ್ನು ನಮ್ಮ ಕೋಟಿಗಾನಹಳ್ಳಿ ರಾಮಯ್ಯ ಕನ್ನಡ ನೆಲದ ಗೇಯತೆಗೆ ತಕ್ಕಂತೆ ಇದು ಕನ್ನಡ ಹಾಡು ಎಂಬಂತೆ [ ಕರ್ಮಭೂಮಿಯಲಿ ಅರಳಿದ ಓ ಹೂವೇ ] ಕನ್ನಡಕ್ಕೆ ಅನುವಾದ ಮಾಡಿದ್ದರು. ಈ ಹಾಡು ದಲಿತ ಕಲಾಮಂಡಳಿಯ ಬಹುಮುಖ್ಯ ಹಾಡಾಗಿತ್ತು. ನಾಡಿನ ಶೋಷಿತರ ನಾಲಿಗೆ ಮೇಲೆ ಜಾನಪದೀಕರಣಗೊಂಡು ನಲಿಯುತಿದ್ದ ಹಾಡಿದು. ಒಂದು ತಲೆಮಾರನ್ನು ಪ್ರಭಾವಿಸಿ ಹೆಣ್ಮಕ್ಕಳ ಆತ್ಮ ಗೌರವವನ್ನು ಒಡಿದೆಬ್ಬಿಸಿದ ಈ ಹಾಡು ಇದೀಗ ಒಂದು ನೆನಪು ಮಾತ್ರ.
ನೆರೆಯ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 1964 ಅಕ್ಟೋಬರ್ 25 ರಲ್ಲಿ ಕಂಚಿಕಚರ್ಲು ಎಂಬ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಶ್ರೀನಿವಾಸರಾವ್ ಮತ್ತು ಲಲಿತ ಸರೋಜಿನಿ ಇವರಿಗೆ ಹುಟ್ಟಿದ ಮಗುವೇ “ಕಲೆಕೂರಿ ಪ್ರಸಾದ್”.
ಇವರ ತಂದೆ ತಾಯಿ ಅಂದಿನ ಇಂಡಿಯಾ ಮಿಷನ್ ಚರ್ಚ್ ಗೆ ಸೇರಿದ್ದ ಸ್ಕೂಲಲ್ಲಿ ಟೀಚರ್ಸ್ ಆಗಿ ಕೆಲಸ ಮಾಡುತಿದ್ದರು. ಸಂಬಳ ಆರು ತಿಂಗಳಿಗೊಮ್ಮೆ ಸಿಗುತಿದ್ದರಿಂದ ಸಂಸಾರ ಸಾಗಿಸಲು ಗ್ರಾಮದ ಭೂಮಾಲೀಕರ ಹೊಲ, ಗದ್ದೆಗಳಲ್ಲಿ ಅರೆಕಾಲಿಕ ದುಡಿತವನ್ನು ಮಾಡಬೇಕಾದ ಕಡುಬಡತನವುಂಡು ಮಲಗಿದ್ದರು .. ಇಂತ ಹೊತ್ತಲ್ಲಿ ಮಗನನ್ನು ತಮಗೆ ಗೊತ್ತಿದ್ದ ಫಾದ್ರಿ ಒಬ್ಬರ ಶಿಫಾರಸ್ಸು ಮೇರೆಗೆ ಏಲೂರು ಚರ್ಚ್ನಲ್ಲಿ ಮೂರನೇ ಕ್ಲಾಸ್ ಗೆ ಸೇರಿಸಿದರು. ಅಲ್ಲಿ ಒಳ್ಳೆಯ ಅಂಕಗಳಿಂದ ಪಾಸದರು. ನಂತರ ಸ್ವಂತ ಗ್ರಾಮ ಕಂಚಿಕಚರ್ಲು ಗ್ರಾಮದಲ್ಲಿ ಎಂಟರವರೆಗೆ ನಂತರ ಹತ್ತನೇ ಕ್ಲಾಸ್ ಗುಂಟೂರಲ್ಲಿ ಮುಗಿಸಿದರು. ನಂತರ ಎ.ಸಿ. ಕಾಲೇಜುಗೆ ಬಂದರು. ಇಲ್ಲಿಗೆ ಬಂದ ನಂತರ ಕಳೆಕೂರಿಗೆ ವಿಭಿನ್ನ ಆಸಕ್ತಿ, ಅಭಿರುಚಿ ಉಳ್ಳ ಸಾಮಾಜಿಕ ಹೋರಾಟದ ಚಿಂತನೆ ಬೆಳಸಿಕೊಂಡ ಗೆಳಯರು ಸಿಕ್ಕರು. ಇಲ್ಲಿಂದ ಕಲೆಕೂರಿ ವಿದ್ಯಾರ್ಥಿ ಹೋರಾಟಗಳಲ್ಲಿ ಭಾಗವಹಿಸುತ್ತಾ. ಜತೆಗೆ ಆಂಗ್ಲ ಮಾಧ್ಯಮದಲ್ಲಿ ಹೆಚ್ಚಿನ ಆಸಕ್ತಿ ಚಿಗುರಿತು, ಅಸ್ಟೊತ್ತಿಗೆ ತೆಲುಗು ಭಾಷೆಯಲ್ಲೂ ಪರಣಿತಿ ಹೊಂದಿದರು. ಬಾಲ್ಯದ ದಿನಗಳಲ್ಲಿ ಸ್ವಂತ ಗ್ರಾಮದಲ್ಲಿ ನಡೆದ ಪ್ರಸಂಗ ಇವರ ಎದೆಗೂಡಿನಲ್ಲಿ ಮುರಿದ ಮುಳ್ಳಿನಂತೆ ಬಾದಿಸುತ್ತಲೇ ಇತ್ತು. ತನ್ನ ಸ್ವಂತ ಗ್ರಾಮವಾದ ಕಂಚಿಕಚರ್ಲುವಿನಲ್ಲಿ 1968 ರಲ್ಲಿ ತನ್ನ ಕೇರಿಯ ಕೋಟೆಸು ಎಂಬ ಚಿರಯುವಕನ ಬರ್ಬರ ಕೊಲೆ ಪ್ರಸಂಗ. ಕಮ್ಮ ಜಾತಿಗೆ ಸೇರಿದ ಭೂಮಾಲೀಕರು ಸರ್ಕಾರಿ ಬಸ್ನಲ್ಲಿ ತಮ್ಮ ಜಾತಿಯ ಹೆಣ್ಣುಮಗಳ ಪಕ್ಕದಲ್ಲಿ ಕೂತ ಎಂಬ ಕಾರಣಕ್ಕೆ ಕೋಟೆಸು ಎಂಬ ಪ್ರಾಯದ ಹುಡುಗನನ್ನು ಹಾಡುಹಗಲೇ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ ಬದಿಕಿದ್ದಾಗ್ಲೇ ಸೀಮೆಎಣ್ಣೆ ಸುರಿದು ಸುಡುತ್ತಿದ್ದಾಗ ಕಲೆಕೂರಿಗೆ ನಾಲ್ಕು ವರ್ಷದ ಎಳೆಸು. ಹಾಲುಕಂಗಳಲ್ಲಿ ಕೋಟೆಸುನ ನರಕಯಾತನೆಗೆ ಸಾಕ್ಷಿಯಾಗಿದ್ದ.ಅಲ್ಲಿ ಎದ್ದಿದ್ದ ಕಮುಟು ವಾಸನೆ ಕಲೆಕೂರಿ ಪ್ರಸಾದ್ ಮೂಗಿನಲ್ಲಿ ಹೊಗೆಯಾಡುತ್ತಾಲೆ ಇತ್ತು. ಆ ಹೃದಯ ವಿದ್ರಾವಕ ಚಿತ್ರ ಕಣ್ಮುಂದೆ ಹಾಗೆ ನಿಂತಿತ್ತು.
ಆ ಕಾಲಕ್ಕೆ ಅಲ್ಲಿನ ಬಲಿಷ್ಠ ರೆಡ್ಡಿ, ನಾಯ್ಡು ಜಾತಿಗಳ ಅಟ್ಟಹಾಸ ಹೇಗಿತ್ತಂದ್ರೆ ಹೊಲೆಯ, ಮಾದಿಗರು ಸಣ್ಣಪುಟ್ಟ ತಪ್ಪೇಸಿಗಿದರೆ ಅವರನ್ನು ಮನೆಗೆ ಕರೆಸಿಕೊಂಡು ಹೊಡೆಯುತಿದ್ದರು. ಇಂದಿಗೂ ಆಂಧ್ರದ ಕೆಲ ಹಳ್ಳಿಗಳಲ್ಲಿ ಜಾರಿಯಲ್ಲಿದೆ . ಕಲೆಕೂರಿ ಪ್ರತಿಭವಂತ ವಿದ್ದ್ಯಾರ್ಥಿ ಆಗಿದ್ದ. ಪ್ರಾಯಕ್ಕೆ ಬರುತ್ತಿದ್ದಂತೆ ಓದಿನ ವಿಷಯಗಳಲ್ಲಿ ಎಲ್ಲರಿಗಿಂತ ಮುಂದಿರುತಿದ್ದ. ಅದಾಗಲೇ ತೆಲಂಗಾಣ ಹೋರಾಟ, ದಲಿತ ಹೋರಾಟ,ಕಮ್ಮ್ಯೂನಿಸ್ಟ್, ನಕ್ಸಲ್ ಬಾರಿ, ವಿರಸಂ ಚಳುವಳಿ, ಪೀಪಲ್ಸ್ ವಾರ್, ಜನನಾಟ್ಯ ಕಲಾಮಂಡಳಿ ಉತ್ತುಂಗದಲ್ಲಿತ್ತು. ಸಹಜವಾಗಿಯೇ ಕಲೆಕೂರಿ ಜನಪರ ಹೋರಾಟಗಳಿಗೆ ಆಕರ್ಷಿತನಾದ. ಬಾಲ್ಯದ ಕೋಟೆಶುನ ಉರಿದ ಜ್ವಾಲೆಯ ಕಿಡಿಗಳು ತನ್ನನ್ನು ಮೌನವಾಗಿ ದಹಿಸುತಿತ್ತು. ಆಗ ಬರೆದ ಪದ್ಯವೇ “ಪಿಡಿಕಿಡಿ ಆತ್ಮ ಗೌರವಂ ಕೋಸಂ” [ ಹಿಡಿಯಷ್ಟು ಆತ್ಮ ಗೌರವಕ್ಕಾಗಿ]
ನೇನು ಏಪ್ಪಡು ಪುಟ್ಯಾನೋ ಗಾನಿ
ವೇಲಎಳ್ಳಕ್ರಿತಮ್ ಈ ಗಡ್ಡಮೀದೆ ಚಂಪಾಬಡ್ಡಾನು
ಪುನರಪಿ ಮರಣಂ-ಪುನರಪಿ ಜನನಂ
ನಾಕು ಕರ್ಮ ಸಿದ್ಧಾಂತಂತೆಲಯದುಗಾನಿ
ಮಳ್ಳಿ ಮಳ್ಳಿ ಮರ್ನಿಂಚಿನ ಚೋಟುನೇ ಪುಡುತುನ್ನಾನು.
[ನಾನು ಎಂದು ಹುಟ್ಟಿದೀನೋ ಕಾಣೆ
ಸಾವಿರ ವರ್ಷಗಳ ಹಿಂದೆ ಈ ನೆಲದ ಮೇಲೆ ಕೊಲೆಯಾದೆ.
ನನಗೆ ಕರ್ಮ ಸಿದ್ಧಾಂತ ತಿಳಿಯದೆ ಹೋದರು
ಕೊಂದ ಈ ನೆಲದ ಮೇಲೆ ಮತ್ತೆ ಮತ್ತೆ ಹುಟ್ಟುತ್ತಲೇ ಇದ್ದೇನೆ..
[ಮುಂದುವರೆಯುವುದು]
ಈ ಪದ್ಯ ಇಡೀ ಆಂಧ್ರದ ಹೋರಾಟಗಳ ಆಲೋಚನಾ ವಿಧಾನವನ್ನೇ ಬದಲಿಸಿತು. “ಕಲೆಕೂರಿ” ಈ ಪದ್ಯದಿಂದ ಹೋರಾಟಗಳ ಸಂಗಾತಿಯಾದ. ಇಲ್ಲಿಂದ ಕಲೆಕೂರಿ ಎಂಬ ದುಕ್ಕದ ಸಮುದ್ರ ಉಕ್ಕಿ ಹರಿಯಿತು . ಆರಂಭದಲ್ಲೇ ಪೀಪಲ್ಸ್ ವಾರ್ ಗೆ ಆಕರ್ಷಣೆಯ ಬಲೆಗೆ ಬಿದ್ದ.. ಆ ಸಂಘಟನೆಯ ಜೊತೆ ತಾತ್ತ್ವಿಕ ಬಿನ್ನಾಭಿಪ್ರಾಯಗಳಿಂದ ಸಿಡಿದು ಬಹುಬೇಗನೆ
ಕೆ. ಸತ್ಯಮೂರ್ತಿ ಮೂಲಕ ಚಳ್ಳಸಾನಿ ಪ್ರಸಾದ್ ಅವರ ಕೋರಿಕೆಯ ಮೇರೆಗೆ ವಿ.ರ.ಸಂ. ಸೇರಿಕೊಂಡ . ಇಲ್ಲಿಂದ ಅನೇಕ ಪದ್ಯ, ಹಾಡುಗಳನ್ನು ಬರೆದು ಹಾಡುತಿದ್ದ. ಇಲ್ಲೇ “ನವತಾ” ಎಂಬ ಹುಡುಗಿಯ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಆಕೆ ಜೊತೆ ತಾಳಿ ಕಟ್ಟದೆ ಸಹಜೀವನ ಸಾಗಿಸಿದರು. ಇಲ್ಲಿಯೂ ರಹಸ್ಯವಾಗಿ ಜಾತಿಯ ವಿಷ ಸರ್ಪಗಳು ಗುಪ್ತಗಾಮಿನಿಯಂತೆ ಒಳ ಸುಳಿದು ಕಲೆಕೂರಿ ಮಹಾಪ್ರೀತಿಯನ್ನು ಕೊಂದಿತು. ಇಲ್ಲಿ ತಾನು ನಂಬಿದ ಮೇಲ್ವರ್ಗಗಳ ಎಲ್ಲರಿಗೂ ಗೊತ್ತಿದ್ದರೂ ಜಾತಿ ಕಾರಣಕ್ಕಾಗಿ ಮೌನಕ್ಕೆ ಜಾರಿದಾಗ ಕಲೆಕೂರಿ ಇಲ್ಲಿಂದ ನೊಂದು ಹೊರ ಬಂದ.
ಆಂಗ್ಲ ಭಾಷೆಯಲ್ಲಿ ತುಂಬಾ ಪ್ರೌಢಿಮೆ ಸಾದಿಸಿದ್ದ ಕಲೆಕೂರಿ ಆಂಗ್ಲದಿಂದ ಹಲವಾರು ಕೃತಿಗಳನ್ನು ಅನುವಾದ ಮಾಡಿ ಅದನ್ನು ವರ್ತಮಾನಕ್ಕೆ ವಿಶ್ಲೇಷಸಿದ. ಇಲ್ಲಿಂದ ಮಹತ್ವದ ಪ್ರಖರ ವಿಮರ್ಶಕ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಡರ್ಬಾನಲ್ಲಿಯೂ ಆಂಧ್ರ ಭಾಗದಿಂದ ಆಯ್ಕೆಯಾಗಿ ಪಾಲ್ಗೊಂಡ ಇಂಗ್ಲಿಷ್ ಮತ್ತು ತೆಲುಗು ನಲ್ಲಿ ಮಾತಾಡಿ ದಲಿತರ ಸಂಕಷ್ಟಗಳನ್ನು ಎಳೆಎಳೆಯಾಗಿ ಹೇಳಿ ಬೆತ್ತಲುಗೊಳಿಸಿದ. ಬದುಕಲು ಯಾವುದೇ ಆರ್ಥಿಕ ನೆಲಯನ್ನು ಕಟ್ಟಿಕೊಳ್ಳದೆ ಕಷ್ಟಕಾರ್ಪಣ್ಯಗಳಿಗೆ ಒಳಗಾದ. ಗೆಳಯರ ಒತ್ತಾಯಕ್ಕೆ ಮಣಿದು ಬದುಕಿನ ಭರವಸೆಗಾಗಿ ಆಂಧ್ರದ ಕೆಲ ಪತ್ರಿಕೆಗಳಿಗೆ ಅಂಕಣ ಬರಹ ಬರೆದ. Human writtes ಹೆಸರಲ್ಲಿ ಕೊಲೆ, ಅಟ್ರಾಸಿಟಿ, ಹತ್ಯೆಗಳನ್ನು ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಕುದ್ದು ಹಳ್ಳಿ ಗ್ರಾಮಗಳಿಗೆ ಸಂಚರಿಸಿ ನೀರು ಊಟ ಬಿಟ್ಟು ವಸ್ತುನಿಷ್ಟ ಬರವಣಿಗೆಗೆ ಹೆಸರಾದ. ಕೊಲೆ, ಹತ್ಯಾಚಾರ ನಡೆದ ಜಾಗದಲ್ಲಿ ಹಾಡು ಬರೆದು ಅದನ್ನ ರೆಕಾರ್ಡ್ ಮಾಡದೇ ಜನರ ನಾಲಿಗೆಗೆ ದಾಟಿಸಿ ಅಲ್ಲೇಬಿಟ್ಟು ಹೊರಡುತಿದ್ದ.ಪ್ರಚಾರದ ಬಗ್ಗೆ ಯಾವುದೇ ಒಲವಿರಲಿಲ್ಲ. ಬಸ್, ರೈಲು, ಪ್ರಯಾಣವೇ ತನ್ನ ಮನೆಯಾಗಿತ್ತು. ಕಲೆಕೂರಿ ಜೊತೆ ಯಾರೇ ಆಗಲಿ ಹತ್ತು ನಿಮಿಷ ಒಡನಾಡಿದರೆ ಮತ್ತೆಂದಿಗೂ ಕಲೆಕೂರಿಯನ್ನು ಅಷ್ಟು ಬೇಗ ಮರೆಯೋಕೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಮನುಷ್ಯ ಪ್ರೀತಿ ಅವರದು.
ಸದಾ ದಲಿತರ ಬಿಡುಗಡೆಗಾಗಿ ಪರಿತಪಿಸುತಿದ್ದ.ಆಂಧ್ರ ದಲಿತ ಮಹಾ ಸಭಾ ಗೆ ಸೇರಿ ಸೌಮ್ಯವಾದಿ ಆಗಿ ಅಂಬೇಡ್ಕರ್ ರೈಟಿಂಗ್ ಆಳವಾಗಿ ಓದಿದ. ದಲಿತರ ವಿಮೋಚನೆಗೆ ಬಾಬಾ ಸಾಹೇಬ್ ಅಂಬೇಡ್ಕರರ ವಿಚಾರಧಾರೆ ಒಂದೇ ಬಿಡುಗಡೆ ದಾರಿ ಎಂದು ಕಮ್ಯುನಿಸ್ಟ್ ಬ್ರದರ್ಸ್ಗಳ ಕೆಂಗಣ್ಣಿಗೆ ಗುರಿಯಾದ. ಎಂತಾ ವಿರೋಧ ಎದುರಾದರೂ ಜಗ್ಗದ ಕಲ್ಲುಬಂಡೆ ಈ ಕಲೆಕೂರಿ.ಕಾರಮಚೇಡು ದಲಿತರ ದಹನದ ಕುರಿತಾಗಿ ಪ್ರಬಲ ಹೋರಾಟವನ್ನು ಕಟ್ಟಿದ. ಇದರ ಕುರಿತಾಗಿ ಕೆಲ ಹಾಡುಗಳನ್ನು ಬರೆದು ಹಾಡಿದ, ಹಾಡಿ ಜನರಿಗೆ ದಾಟಿಸಿದ. “ಮಂಡು ತುನ್ನಾ ಚಂಡೂರು” [ಉರಿಯುತ್ತಿರುವ ಮಂಡೂರು] ಎಂಬ ಕಾವ್ಯ ಸಂಕಲನ ಹೊರ ತಂದ.ದಲಿತ ಸಭಾ ಒಪ್ಪಿಗೆ ಮೇರೆಗೆ ಕೆಲ ಹಾಡುಗಳನ್ನು ಸಿನಿಮಗಳಿಗೂ ಬರೆದ. ಕರ್ಮಭೂಮಿಲೋ ಪೂಸಿನ ಓ ಪೊವ್ವ, ಭೂಮಿಕಿ ಪಚ್ಚಾನಿ ರಂಗೇಸಿ, ಚಿನ್ನಿ ಚಿನ್ನಚಿಂದುಲೆಯಾಗ ಈ ಮೂರು ಹಾಡುಗಳನ್ನು ಶ್ರೀರಾಮುಲಯ್ಯ ಸಿನಿಮಾಗೆ ಬರೆದರು. ಇದರಲ್ಲಿ ಬರೆದ ಕರ್ಮಭೂಮಿಲೋ ಹಾಡು ಹುಟ್ಟಿದ್ದು ತಂಗಟೂರು ಗ್ರಾಮದಲ್ಲಿ ದಲಿತ ಸಮುದಾಕ್ಕೆ ಸೇರಿದ ಆಗತಾನೆ ಮದುವೆ ಆದ ನವವಧು ತಾನು ನಂಬಿ ಬಂದ ಗಂಡನನ್ನು ಕೂಡಬೇಕದ ಆ ಮೊದಲ ರಾತ್ರಿಯಲ್ಲಿ ಅದೇ ಊರಿನ ಪ್ರಬಲ ಕಾಮಂದ ರೆಡ್ಡಿ ಕುಲದ ಭೂಮಾಲೀಕನೊಬ್ಬನ ಕಣ್ಣಿಗೆ ಬಿದ್ದು ಹತ್ಯಚಾರ ಮಾಡಿ ಕೊಂದಾಗ ಬರೆದ ಹಾಡು ಅದಾಗಿತ್ತು. ಸಿನಿಮಾಗಳಿಗೆ ಹಾಡು ಬರೆದರೆ ಎಲ್ಲಿ ತನ್ನ ಆಲೋಚನಾ ವಿಧಾನಗಳಿಗೆ ಕೊಡಲಿಪೆಟ್ಟು ಬೀಳುತ್ತೆ ಅಂತೇಳಿ ಮತ್ತೆ ಹಾಡು ಬರೆಯಲಿಲ್ಲ ್ಲ. ಶ್ರೀರಾಮುಲಯ್ಯ ಸಿನಿಮಾಗೆ ಬರೆದ ಹಾಡಿಗೆ ಪ್ರಶಸ್ತಿ ಬಂದಾಗ ಭೂಮಾಲೀಕರು ಕೊಡೋ ಆ ಪ್ರಶಸ್ತಿ ಕಸಕ್ಕೆ ಸಮಾನ ಎಂದು ವಿನಾಯವಾಗಿ ನಿರಾಕರಿಸಿದ. ಪೂರಿಜಗನ್ನಾಥ್ ಎಂಬ ನಿರ್ದೇಶಕ ತನ್ನ ಸಿನಿಮಾವೊಂದಕ್ಕೆ ಹಾಡು ಬರಿಸಲು ಹತ್ತಾರು ಬಾರಿ ಪ್ರಯತ್ನ ಪಟ್ಟರೂ ಕಲೆಕೂರಿ ಒಪ್ಪಲೇ ಇಲ್ಲ.ಮನೆಬಾಗಿಲಲ್ಲಿ ಅಂಗಲಾಚಿದ್ದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಇಂಥ ಸ್ವಾಭಿಮಾನಿ ಕಲೆಕೂರಿ ತನ್ನ ಅನುಗಾಲದ ಗೆಳತಿ ನವತಾ ನೆನಪಲ್ಲಿ ಬಳಲಿ ಮದ್ಯಕ್ಕೆ ದಾಸನಾದ, ಸಿಗರೇಟ್ ಕಲೆಕೂರಿ ದೇಹವನ್ನು ನಿಧಾನವಾಗಿ ದಹಿಸಿತು. ಎಲ್ಲೆಂದ್ರಲ್ಲಿ ಕುಡಿದು ಮಲಗುತಿದ್ದ. ತನ್ನ ಕೊನೆಯ ದಿನಗಳನ್ನು “ಒಂಗೋಲು” ವಿನಲ್ಲಿನ ಅಂಬೇಡ್ಕರ ವಸತಿ ನಿಲಯದ ಕೊಠಡಿಯನ್ನ ತನ್ನ ವಾಸಸ್ಥಳ ಮಾಡಿಕೊಂಡು ಕೊನೆದಿನಗಳನ್ನು ಸವಿಸುತ್ತಿದ್ದ. ಅಲ್ಲಿನ ಹಾಸ್ಟೆಲ್ ಹುಡುಗರು ಊಟಕೊಟ್ಟರೂ ತಿನ್ನದೆ ಮಧ್ಯಪಾನ ಚಟಕ್ಕೆ ಗುರಿಯಾಗಿ 2013 ಮೇ 17 ರಲ್ಲಿ ಈ ಮಣ್ಣಿಗೆ ಮರೆಯಾದ . ಕೊನೆ ಉಸಿರು ಇರುವ ತನಕ ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಅರಳದೇ ಬಾಡಿಹೋದ ಮೊಗ್ಗು ಈ ಕಲೆಕೂರಿ. ಇಲ್ಲಿನ ಕೆಲವು ಮಾಹಿತಿಗಳನ್ನು ಕಲೆಕೂರಿ ಬಯೋಗ್ರಾಫಿ, ಮತ್ತು ಕಲೆಕೂರಿ ವಿಕಿಪೀಡಿಯದಿಂದ ಪಡೆದಿರುತ್ತೇನೆ. ಆದಿಮದಲ್ಲಿ ಕೋಟಿಗಾನಹಳ್ಳಿ ರಾಮಣ್ಣ ಕಲೆಕೂರಿ ಬಗ್ಗೆ ತುಂಬಾ ವಿಷಾದದಿಂದ ಹೇಳುತಿದ್ರು. ಕಲೆಕೂರಿಯನ್ನು ಕೆಲವೊಮ್ಮೆ ಮಾತಿನ ಮದ್ಯೆ ಕಲೆಕೂರಿ ಅವರ ಹಾಡು, ಕಾವ್ಯ ಓದುವಂತೆ ಹೇಳಿದ್ದರು. ಅವರ ಕೃತಿಗಳು ಸಿಗಲಿಲ್ಲ. ಯೂಟ್ಯೂಬ್ ಮೂಲಕ ತಿಳಿದಿದ್ದೆ. .ಯಾಕೋ ಕಲೆಕೂರಿ ಬಗ್ಗೆ ಕನಿಷ್ಠ ಪುಟ್ಟ ಪರಿಚಯಾತ್ಮಕ ಪುಟ್ಟ ಬರಹ ಬರಿಯಬೇಕೆಂಬ ಅಸೆ ಈಗ ಈಡೇರಿತು.
ಜೊತೆಗೆ ಬಿಡಿ ಕವಿತೆಗಳ ಅನುವಾದ ಕೆಳಗಿದೆ
ಎದೆ ತಮಟೆಗಳು ಮೊಳಗಲಿ
ನನ್ನ ಪಾದಗಳಡಿ ಹರಿವ ನೆತ್ತರ ಕಾಲುವೆಯಲ್ಲಿ ಉರಿವ ಕೆಂಡದುಂಡೆಯ ಉರಿಗೆ ಬಿದ್ದ ಗೋವಿನಂಥ ವೀರನನ್ನ ಕಂಡೆ
ಉಳಿಯದ ಆಸೆಗಳ ಹೊತ್ತ ಪೂರ್ವಿಕನ ಉಸಿರೊಳು
ಬೆಂದ ರಾಗವ ಕಂಡೆ
ಸೋತವ ಯುದ್ಧವೀರನಾಗಿ ತಲೆ ತಗ್ಗಿಸಿ ನಡದರೆ
ಗೆಲುವಿನ ಅರಾಜಕ ನಗೆಯ
ವಿಕಾರದ ದನಿಗಳನ್ನ ಕಂಡೆ
ಇದು ಇದ್ದದ್ದೇ ಬೆನ್ನಿಗೆ ಚೂರಿ ಹಾಕುವ ದ್ರೋಹಿಗಳ ಭಯಭೀತ ನಗೆಯ
ಚಲನ ವಿನ್ಯಾಸಗಳ ಪ್ರಖರ ಸುಡು ಕಿಡಿಗಳ ಮರ್ಮ ಜಾಲ
ಭ್ರಮೆಗಳು ಬೇಕಾಗಿಲ್ಲ ಈಗ ಯಾವ ರೆಡಿಮೇಡ್ ಪ್ರವಾಹಗಳಿಲ್ಲ
ಹೆಜ್ಜೆ ಹೆಜ್ಜೆಗೂ ಕಿರುಹೆಜ್ಜೆಗಳೇ ಮಾತಾಡಬೇಕಿದೆ ಪ್ರತಿರೋಧಿಸಬೇಕಿದೆ.
ಕಡೆಗೆ ಈ ಕಣ್ಣಾಲಿಗೆಗಳಾದರೂ ಒಮ್ಮೆಗೆ ದಿಕ್ಕಾರ ಕೂಗಬೇಕು
ಗಾಯಗೊಂಡ ಚಿರತೆಹುಲಿಗಳ ಆರ್ತನಾದ,
ಯುದ್ಧಭೂಮಿಯ ಸಮರ ಶಂಖನಾದ ಮೊಳಗೋ ಸಂಭ್ರಮಧಿ ನಮ್ಮದೇ ಎದೆಹಾಡ ಹಾಡಬೇಕಿದೆ
ಎದೆ ಗುಂಡಿಗೆಗಳನ್ನೇ ನಾದ ನಗಾರಿ ಹಾಡಾಗಿಸಿ ಹಾಡಬೇಕು
ಯುದ್ಧಭೂಮಿಯಲ್ಲಿ ಎಡವಿ ಬಿದ್ದವನೆ !!!
ನಿನ್ನೆದೆ ಗುಂಡಿಗೆಯಲ್ಲಿ ನನ್ನವರಿಗಾಗಿ
ನಿನ್ನೆದೆ ತಮಟೆಯ ಕೊನೆ ಹಾಡು ಮೊಳಗಬೆಳಕು. ನನ್ನವರು ಉಳಿಯಬೇಕು.
ತೆಲುಗು ಮೂಲ -ಕಲೆಕೂರಿ ಪ್ರಸಾದ್
ಕನ್ನಡಕ್ಕೆ -ಗಂಗಪ್ಪ ತಳವಾರ
ಯೇಸು ಪ್ರಭುವಿನ ನುಡಿಗಳು ಮಾತ್ರ ನೆನಪಾಗುತ್ತಿದ್ದವು.
ಪ್ರಿಯೆ
ಹಸಿಗಾಯಗಳನ್ನು ಸವರುತಿದ್ದೇನೆ
ನಮ್ಮೆದೆಗಳ ಮೇಲೆ ನಿಮ್ಮದೇ ಪಾದಮುದ್ರಿಕೆಗಳನ್ನು ಹೊತ್ತಿದ್ದೇನೆ
ಸಾವು ಸನಿಹ ಬರುವ ಮುನ್ನ
ನಿನ್ನ ಜತೆ ಬದುಕಲು ಬೇಡುತ್ತಿರುವೆ
ಕನಿಷ್ಠ ಪ್ರೀತಿಗಾಗಿ ಬದುಕಲು ಅಲ್ಲ
ಹಿಡಿಯಷ್ಟು ಪ್ರೀತಿಗಾಗಿ ಬದುಕ ಬೇಕೆಂದಿದ್ದೆ
ಪ್ರಿಯೆ
ಹೊತ್ತರೆಯ ತಂಗಳನ್ನಕ್ಕೆ ಮೊಸರುಣಿಸಿ ನೀನು ಕೊಟ್ಟ ಅನ್ನದ ಸಾಕ್ಷಿಯಾಗಿ ಕೇಳುವೆ
ನನ್ನ ಸಾವಿಗೆ ಕಾರಣ ಹೇಳಬಲ್ಲೆಯಾ?
ಪ್ರಿಯೆ
ಬದುಕಿದಷ್ಟು ಕಾಲ ಬಯಸಿದ ಬಯಕೆ ತೀರಲಿಲ್ಲ
ನ್ಯಾಯದ ಕಟ್ಟೆಗೆಳದು ಲೈಟುಕಂಬಕ್ಕೆ ಕಟ್ಟಾಕಿ
ದನಕ್ಕೆ ಬಡಿದಂತೆ ಬಡಿಯುತ್ತಿದ್ದಾಗ
ನಿನ್ನ ನೆನೆದು ಮುಸಿ ಮುಸಿ ನಗುತಿದ್ದೆ
ಧೀನತೆಯಿಂದ ತಲೆಬಾಗಿ ನಿಂತಿದ್ದೆ
ಪ್ರಿಯೆ
ನನ್ನ ಜಾತಿ ಜನಾಂಗವನ್ನು ಕಂಡು ಕನಿಕರಪಟ್ಟೆ. ನಾನಾಗ
ನನ್ನವರ ಕಣ್ಣೀರಲ್ಲಿ ಕರಗುತಿದ್ದೆ
ಏನ್ ವಿಷ್ಯಾ? ಅಂತ ನಿನ್ನವರು ಯಾರೋ ಕೇಳಿದರೆ
ನಿನ್ನ ಪ್ರೀತಿಸಿದೆ ಅಂತ ಕೂಗಿ ಹೇಳಬೇಕೆಂದಿದ್ದೆ
ಆದರೆ ನನ್ನ ಪ್ರೀತಿಕದ್ದ ಕಳ್ಳನೆಂದು
ರಚ್ಚೆಕಟ್ಟೆಗೆಳೆದ ಆರೋಪಿ ನೀನೆ ಆಲ್ವಾ!!?
ಪ್ರಿಯೆ
ಪ್ರಿಯೆ ಸತ್ತಶವಗಳನ್ನು ಸುಡುವುದು ಗೊತ್ತು ನನಗೆ
ಆದರೆ ಬದಕಿದ್ದಾಗಲೇ ನಿನ್ನವರು ಸೀಮೆಎಣ್ಣೆ ಸುರಿದು ನನಗೆ ಬೆಂಕಿ ಇಟ್ಟರು.
ನಾನು ಬೆಂದು ಕಾರಕಲಾಗುವಾಗ
ಓ ದೇವರೇ ಇವರನ್ನು ಕ್ಷಮಿಸು
ಓ ತಂದೆ ಇವನೇನು ಅಪರಾಧ ಮಾಡಿಹನು ಕ್ಷಮಿಸು
ಎಂದು ನುಡಿದ ಯೇಸುಪ್ರಭುವಿನ ನುಡಿಗಳು ಮಾತ್ರ
ನೆನಪಿಗುತ್ತಿದ್ದವು.
ತೆಲುಗು ಮೂಲ-ಕಲೆಕೂರಿ ಪ್ರಸಾದ್
ಕನ್ನಡಕ್ಕೆ -ಗಂಗಪ್ಪ ತಳವಾರ್
ಕೋಲಾರ ಜಿಲ್ಲೆಯ ಲಕ್ಕೂರಿನವರಾದ ಗಂಗಪ್ಪ ತಳವಾರ್ ಕವಿತೆ ಮತ್ತು ಧಾವತಿ ಕಾದಂಬರಿಯ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

