ಮೀಸಲಾತಿಯ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ: ಚೆನ್ನೈನಿಂದ ಒಂದು ನೋಟ
ಜಿ . ಕರುಣಾನಿಧಿ (Karunanidhi G)
ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya)

ಸಾಮಾಜಿಕ ನ್ಯಾಯವು ಹಿಂದೆ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಬಗ್ಗೆ ನಾನು ಹೇಳಲು ಬಯಸುತ್ತೇನೆ. ಮಾಹಿತಿಗಾಗಿ ನಾವು ಬೇರೆಲ್ಲೂ ಹುಡುಕಬೇಕಾಗಿಲ್ಲ, ಡಾ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಭಾಗಗಳಿಂದ ಪಡೆಯಬಹುದು. ರಾಜ್ಯ ನೀತಿ ನಿರ್ದೇಶಕ ತತ್ವದ ಅಡಿ ಯಲ್ಲಿ, ಪರಿಚ್ಛೇದ 46 ಹೇಳುತ್ತದೆ: “ರಾಜ್ಯವು ದುರ್ಬಲ ವರ್ಗದ ಜನರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಕಾಳಜಿಯನ್ನು ಮಾಡುತ್ತದೆ ಮತ್ತು ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸುತ್ತದೆ ”
ಇದರ ಆಧಾರದ ಮೇಲೆ, ಇಂದ್ರಾ ಸಾಹ್ನಿ ಪ್ರಕರಣದಲ್ಲಿ, ಒಂಬತ್ತು ಸದಸ್ಯರ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ಪಿ ಬಿ ಸಾವಂತ್ ಅವರು ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದರು: “ಮರೆತಿಲ್ಲದ ಸಂಗತಿಯೆಂದರೆ, ಇಲ್ಲಿಯವರೆಗೆ ಶತಮಾನಗಳಿಂದಲೂ ಆಚರಣೆಯಲ್ಲಿ ಶೇಕಡಾ ನೂರರಷ್ಟು ಮೀಸಲಾತಿ ಉನ್ನತ ಜಾತಿ ಮತ್ತು ವರ್ಗಗಳ ಪರವಾಗಿ ಇದ್ದು ಇತರರನ್ನು ಎಲ್ಲಾ ಕ್ಷೇತ್ರಗಳಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. . ಇದು ಸಂಪೂರ್ಣವಾಗಿ ವರ್ಗ ಮತ್ತು ಜಾತಿ ಆಧಾರಿತ ಮೀಸಲಾತಿಯಾಗಿತ್ತು. ಈ ತೀರ್ಪನ್ನು 14 ನವೆಂಬರ್ 1992 ರಲ್ಲಿ ನೀಡಲಾಯಿತು.
ಸಂವಿಧಾನದ ಪರಿಚ್ಛೇದ 340 ರ ಪ್ರಕಾರ ನೇಮಕಗೊಂಡ ಬಿ ಪಿ ಮಂಡಲ್ ನೇತೃತ್ವದ ಎರಡನೇ ಹಿಂದುಳಿದ ವರ್ಗದ ಆಯೋಗವಾದ ಮಂಡಲ್ ಆಯೋಗವು ಪ್ಯಾರಾ 13.9 ರ ತನ್ನ ಶಿಫಾರಸಿನಲ್ಲಿ ಹೀಗೆ ಹೇಳುತ್ತದೆ: “ವಾಸ್ತವವಾಗಿ, ಹಿಂದೂ ಸಮಾಜವು ಹಿಂದಿನಿಂದಲೂ ಜಾತಿ ವ್ಯವಸ್ಥೆಯ ಮೂಲಕ ಆಂತರಿಕಗೊಳಿಸಿ ಮೀಸಲಾತಿಯ ಅತ್ಯಂತ ಕಠಿಣ ಯೋಜನೆಯನ್ನು ನಿರ್ವಹಿಸಿದೆ. ಮೀಸಲಾತಿಯ ಜಾತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏಕಲವ್ಯ ತನ್ನ ಹೆಬ್ಬೆರಳು ಮತ್ತು ಶಂಬುಕ ತನ್ನ ಕೊರಳನ್ನು ಕಳೆದುಕೊಳ್ಳಬೇಕಾಯಿತು. ಒಬಿಸಿ ಮೀಸಲಾತಿ ವಿರುದ್ಧದ ಪ್ರಸ್ತುತ ಆಕ್ರೋಶವು ಸಿದ್ಧಾಂತವನ್ನು ಮಾತ್ರ ಗುರಿಯಾಗಿಸಿಕೊಂಡಿರದೆ ಹೊಸ ವರ್ಗದ ಫಲಾನುಭವಿಗಳ ವಿರುದ್ಧವಾಗಿದೆ. ಏಕೆಂದರೆ ಅವರು ಈಗ ಉನ್ನತ ಜಾತಿಗಳಿಂದ ಏಕಸ್ವಾಮ್ಯ ಹೊಂದಿದ್ದ ತಮ್ಮ ಅವಕಾಶಗಳ ಪಾಲಿಗಾಗಿ ಧ್ವನಿ ಎತ್ತಿದ್ದಾರೆ.
ಅವರ ಟಿಪ್ಪಣಿಗಳ ಮತ್ತು ಸಂವಿಧಾನದಲ್ಲಿ ನೀಡಿರುವ ಸಂಗತಿಗಳ ಪ್ರಕಾರ, ಐತಿಹಾಸಿಕವಾಗಿ, ರಾಜರ ಆಳ್ವಿಕೆಯ ಕಾಲದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವು ಮನುವಿನ ಕಾನೂನನ್ನು ಆಧರಿಸಿತ್ತು. ಆದ್ದರಿಂದ ಯಾವುದೇ ರಾಜರ ಆಳ್ವಿಕೆಯಲ್ಲಿ ಸಾಮಾನ್ಯ ಶಾಲಾ ವ್ಯವಸ್ಥೆಯು ಜಾರಿಯಲ್ಲಿಲ್ಲ. ಸಾಮಾನ್ಯ ಶಾಲಾ ಶಿಕ್ಷಣ ವ್ಯವಸ್ಥೆಯು ಬ್ರಿಟಿಷರ ಅವಧಿಯಲ್ಲಿ ಮಾತ್ರ ಜಾರಿಗೆ ಬಂದಿತು.
ಮನು ಶಾಸ್ತ್ರದಲ್ಲಿ, ಬ್ರಹ್ಮನು ಜಗತ್ತನ್ನು ಉಳಿಸುವ ಸಲುವಾಗಿ, ಜನರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವರ್ಣಗಳಾಗಿ ವಿಂಗಡಿಸಿ ಇವರು ಹಣೆ, ಭುಜ, ತೊಡೆಗಳು ಮತ್ತು ಪಾದಗಳಿಂದ ಹುಟ್ಟಿದವರೆಂದು ಹೇಳಲಾಯಿತು. ಶೂದ್ರರು ಇತರ ವರ್ಣಗಳಿಗೆ ಅಸೂಯೆಯಿಲ್ಲದೆ ಸೇವೆ ಸಲ್ಲಿಸಬೇಕಾಗಿತ್ತು. ಇದು ರಾಜರ ಆಳ್ವಿಕೆಯವರೆಗೂ ಜಾರಿಯಲ್ಲಿದ್ದ ಕಾನೂನು. ಸಂವಿಧಾನದ 340 ನೇ ವಿಧಿ ಹೇಳುತ್ತದೆ: “ಸಾಮಾಜಿಕವಾಗಿ ಶಿಕ್ಷಣವನ್ನು ನಿರಾಕರಿಸಿದ ಬಹುಪಾಲು ಜನರಿಗೆ ಅವಕಾಶಗಳನ್ನು ನೀಡಬೇಕು.” 1924 ರಲ್ಲಿ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಸತ್ಯನಾಥ ಅಯ್ಯರ್ ಅವರು “ಮದುರೈನ ನಾಯಕರ ಇತಿಹಾಸ” ಎಂಬ ಪುಸ್ತಕವನ್ನು ಬರೆದರು. ಅವರು ಆ ಪುಸ್ತಕದಲ್ಲಿ ಹೇಳುತ್ತಾರೆ: “ರಾಬರ್ಟ್ ಡಿ ನೊಬ್ಲಿ ಎಂಬ ಇಟಾಲಿಯನ್ ಬೋಧಕನು 22 ನವೆಂಬರ್ 1610 ರಂದು ಮಧುರೈ ಬಗ್ಗೆ, ನಾಯಕರ ಶೈಕ್ಷಣಿಕ ಸಂಘಟನೆಯ ಮೇಲೆ ಸ್ವಲ್ಪ ಬೆಳಕು ಚೆಲ್ಲುತ್ತಾನೆ. 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇನ್ನೂರರಿಂದ ಮುನ್ನೂರರಂತೆ ವಿವಿಧ ತರಗತಿಗಳಲ್ಲಿ ಸೇರಿದ್ದರು. ಈ ವಿದ್ಯಾರ್ಥಿಗಳು ಎಲ್ಲಾ ಬ್ರಾಹ್ಮಣರು, ಏಕೆಂದರೆ ಅವರು ಮಾತ್ರ ಅಧ್ಯಯನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದ ತಮ್ಮ ಶೈಕ್ಷಣಿಕ ನೀತಿಯಲ್ಲಿ ನಾಯಕರು ಧಾರ್ಮಿಕ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಸಂಯೋಜಿಸುವ ಮತ್ತು ಅವುಗಳನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿತಗೊಳಿಸುವ ಪ್ರಾಚೀನ ಹಿಂದೂ ವ್ಯವಸ್ಥೆಯನ್ನು ಅನುಸರಿಸಿದರು.
ಇದು ಇತಿಹಾಸದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ನ್ಯಾಯದ ದೃಷ್ಟಿಕೋನವಾಗಿದೆ.
ಇದರ ನಂತರ 1881 ರಲ್ಲಿ ಮಹಾರಾಷ್ಟ್ರದಲ್ಲಿ , ಜೋತಿರಾವ್ ಫುಲೆ, ಹಂಟರ್ ಆಯೋಗದ ಮುಂದೆ ಸಾಕ್ಷ್ಯವನ್ನು ಮಂಡಿಸಿದರು. ಅವರು ಹೇಳಿದ್ದು : “ಎಲ್ಲಾ ಹಂತದ ಶಿಕ್ಷಣವು ಬ್ರಾಹ್ಮಣರ ವಿಶೇಷ ಹಕ್ಕಾಗಿದೆ. ಇನ್ನು ಮುಂದೆ ಶೂದ್ರರಿಗೆ ಮಾತ್ರ ಶಾಲೆ ತೆರೆಯಬೇಕು. ಆ ಶಾಲೆಗಳಲ್ಲಿ ಬ್ರಾಹ್ಮಣರನ್ನು ಶಿಕ್ಷಕರನ್ನಾಗಿ ಕೂಡ ನೇಮಿಸಬಾರದು.”
ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ, ಮದ್ರಾಸ್ ಕಂದಾಯ ಮಂಡಳಿಯು 1854 ರಲ್ಲಿ ಈ ರೀತಿಯ ಆದೇಶ ನೀಡುತ್ತದೆ: “ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಅಧೀನ ನೇಮಕಾತಿಗಳನ್ನು ಕೆಲವು ಪ್ರಭಾವಿ ಕುಟುಂಬಗಳು ಏಕಸ್ವಾಮ್ಯಗೊಳಿಸದಂತೆ ನೋಡಿಕೊಳ್ಳಬೇಕು. ಪ್ರತಿ ಜಿಲ್ಲೆಯ ನೇಮಕಾತಿಗಳನ್ನು ಪ್ರಧಾನ ಜಾತಿಗಳ ನಡುವೆ ವಿಭಜಿಸುವ ಪ್ರಯತ್ನ ಯಾವಾಗಲೂ ಇರಬೇಕು ಎಂದು ನಿರ್ಧರಿಸಲಾಗಿದೆ.”
ಇದರ ನಂತರ , ಮದ್ರಾಸ್ ಪ್ರಾಂತ್ಯದಲ್ಲಿ ನಡೆದ 1871-72 ರ ಜನಗಣತಿಯಲ್ಲಿ, ಎಲ್ಲಾ ಸ್ಥಾನಗಳನ್ನು ಮೇಲ್ಜಾತಿಯ ಬ್ರಾಹ್ಮಣರು ಮಾತ್ರ ಆಕ್ರಮಿಸಿಕೊಂಡಿದ್ದಾರೆ ಎಂದು ಅಂಕಿಅಂಶಗಳು ಸಾಬೀತುಪಡಿಸುತ್ತವೆ. 1881 ರಲ್ಲಿ, ಸರ್ಕಾರಿ ಉದ್ಯೋಗಗಳು ಮತ್ತು ಜಾತಿಗಳ ಕುರಿತಾದ ವರದಿಯು ಒಟ್ಟು ಜನಸಂಖ್ಯೆಯಲ್ಲಿ, ಶೇ. 3.6 ಬ್ರಾಹ್ಮಣರು ಹತ್ತು ರೂಪಾಯಿಗಳಿಗಿಂತ ಹೆಚ್ಚು ಗಳಿಸುವ ಶೇ. 45 ರಷ್ಟು ಉದ್ಯೋಗಗಳನ್ನು ಹೊಂದಿದ್ದರು ಎಂದು ವಿವರಗಳನ್ನು ನೀಡುತ್ತದೆ. ಮಹಾರಾಷ್ಟ್ರದಲ್ಲಿ ಸಾಹು ಮಹಾರಾಜರು ಕೊಲ್ಹಾಪುರ ರಾಜಪ್ರಭುತ್ವದಲ್ಲಿ 1902ರಲ್ಲಿ ಮೀಸಲಾತಿಯನ್ನು ತಂದ ಮೊದಲಿಗರಾಗಿದ್ದರು. 1918ರಲ್ಲಿ ಮೈಸೂರು ರಾಜಪ್ರಭುತ್ವದಲ್ಲಿ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿ ನೀಡುವ ಮಿಲ್ಲರ್ ಆಯೋಗವನ್ನು ರಚಿಸಿದರು. ಮದ್ರಾಸ್‌ನಲ್ಲಿ (ಈಗ ಚೆನ್ನೈ), ಜಸ್ಟೀಸ್ ಪಾರ್ಟಿಯ ಬ್ರಾಹ್ಮಣೇತರ ಪ್ರಣಾಳಿಕೆಯನ್ನು 1916 ರಲ್ಲಿ ಪ್ರಕಟಿಸಲಾಯಿತು. ಅದು ಹೇಳುತ್ತದೆ: “ಮದ್ರಾಸ್ ಎಕ್ಸಿಕ್ಯೂಟಿವ್ ಕೌನ್ಸೆಲ್‌ನಲ್ಲಿ, ಸರ್ ಅಲೆಕ್ಸಾಂಡರ್ ಕಾರ್ಡ್ಯೂ ಅವರು ಸರ್ಕಾರದ ಮುಂದೆ ಹೇಳಿಕೆ ನೀಡಿದರು. 1913 ರಲ್ಲಿ ಸಾರ್ವಜನಿಕ ಸೇವಾ ಆಯೋಗದ ಮುಂದೆ ಕಾರ್ಡ್ಯೂ ನೀಡಿದ ಸಾಕ್ಷ್ಯವು ಪ್ರಾಂತ್ಯದ ಸಾರ್ವಜನಿಕ ಸೇವೆಯಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ಸಾಪೇಕ್ಷ ಸ್ಥಾನವನ್ನು ವಿವರವಾಗಿ ತಿಳಿಸಿದೆ. ಬ್ರಾಹ್ಮಣೇತರ ಹಿತಾಸಕ್ತಿಗಳ ಪ್ರೋತ್ಸಾಹಕ ಎಂದು ಖಂಡಿತವಾಗಿಯೂ ಅಲ್ಲ, ಆದರೆ ಭಾರತೀಯ ನಾಗರಿಕ ಸೇವೆಗೆ ಪ್ರವೇಶಕ್ಕಾಗಿ ಭಾರತದಲ್ಲಿ ಇಂಗ್ಲಿಷ್‌ನಲ್ಲಿ ಏಕಕಾಲಿಕ ಪರೀಕ್ಷೆಗಳನ್ನು ಪರಿಚಯಿಸಿದರೆ, ಕಟ್ಟುನಿಟ್ಟಾಗಿ ಕಟ್ಟುನಿಟ್ಟಾಗಿ ಪ್ರತ್ಯೇಕವಾದ ಸಣ್ಣ ಜಾತಿ ಎಂದು ನಿರೂಪಿಸಲ್ಪಟ್ಟ ಬ್ರಾಹ್ಮಣರಿಂದ ತುಂಬಿಕೊಳ್ಳುತ್ತದೆ.”
.”ಕಾರ್ಡ್ಯೂ ಇದನ್ನು ಹೇಳುವಾಗ ಬಹಳಷ್ಟು ಅಂಕಿಅಂಶಗಳನ್ನು ನೀಡಿದರು, ಅವುಗಳಲ್ಲಿ ಕೆಲವನ್ನು ನಾನು ಸೂಚಿಸಲು ಬಯಸುತ್ತೇನೆ. ಅದರಲ್ಲಿ ಒಂದು 1914 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ಅಧ್ಯಯನದಲ್ಲಿ 775 ವಿದ್ಯಾರ್ಥಿಗಳು ಬ್ರಾಹ್ಮಣರಾಗಿದ್ದರು. ಬಿಎ 210, ಬಿಎಸ್ಸಿ. 159, MA 67 ಕೇವಲ ಬ್ರಾಹ್ಮಣರಾಗಿದ್ದರು. ಕಾರ್ಡ್ಯೂ ಅವರ ಹೇಳಿಕೆ ಮೂಲಕ ಪರಿಸ್ಥಿತಿಯನ್ನು ತಿಳಿದುಕೊಂಡ ಜಸ್ಟಿಸ್ ಪಾರ್ಟಿ, ಕಾರ್ಡ್ಯೂ ಅವರ ಸಾಕ್ಷ್ಯದ ಮೇಲೆ ಬ್ರಾಹ್ಮಣೇತರ ಪ್ರಣಾಳಿಕೆಯನ್ನು ಆಧರಿಸಿ ಬ್ರಾಹ್ಮಣೇತರ ಚಳವಳಿಯನ್ನು ಪ್ರಾರಂಭಿಸಿತು. ಸಾಕ್ಷ್ಯವು ಜಸ್ಟಿಸ್ ಪಾರ್ಟಿಯನ್ನು ಅಧಿಕಾರಕ್ಕೆ ತಂದಿತು. 1979 ರಲ್ಲಿ ಎಕನಾಮಿಕ್ ಅಂಡ್ ಪೊಲಿಟಿಕಲ್ ವಾರಪತ್ರಿಕೆಯಲ್ಲಿ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್ ರಾಮ್ ‘ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ದ್ರಾವಿಡ ಚಳವಳಿ’ ಎಂಬ ಲೇಖನದಲ್ಲಿ ಹೀಗೆ ಬರೆದರು : 1912 ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ, ಒಟ್ಟು ಭಾರತೀಯರಲ್ಲಿ ಆಡಳಿತದಲ್ಲಿ ಉನ್ನತ ಉದ್ಯೋಗವಿದ್ದವರು ಬ್ರಾಹ್ಮಣರು ಶೇ. 55 ರಷ್ಟು ಸಬ್-ಕಲೆಕ್ಟರ್‌ಗಳಾಗಿ, ಶೇ. 83.3 ಅಧೀನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಶೇ. 72.6 ಜಿಲ್ಲಾ ಮುನ್ಸಿಫ್‌ನಲ್ಲಿ,ಶೇ. 72.6 ಉನ್ನತ ಶಿಕ್ಷಣದಲ್ಲಿ, 1870-1918 ರ ನಡುವೆ ಪದವಿಪೂರ್ವ ಅಧ್ಯಯನದಲ್ಲಿ ಬ್ರಾಹ್ಮಣರು ಶೇ. 67-71 ಇದ್ದರು.
ಅಲೆಕ್ಸಾಂಡರ್ ಕಾರ್ಡ್ಯೂ ಮಂಡಿಸಿದ ಅಂಕಿಅಂಶಗಳು ಜಸ್ಟೀಸ್ ಪಾರ್ಟಿ ಅಧಿಕಾರಕ್ಕೆ ಬರಲು ಕಾರಣವಾದ ನಂತರ, 1921 ರಲ್ಲಿ (ಮೊದಲ) ಕಮ್ಯೂನಲ್ GO (ಮದ್ರಾಸ್ ಪ್ರಾಂತ್ಯದಲ್ಲಿ ಮೀಸಲಾತಿ ಒದಗಿಸಲು) ಅಂಗೀಕರಿಸಲಾಯಿತು. ಆದರೆ ಅಧಿಕಾರದಲ್ಲಿರುವ ಜಸ್ಟಿಸ್ ಪಕ್ಷವು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. 1928 ರಲ್ಲಿ ಅವರು ಬ್ರಾಹ್ಮಣರನ್ನು ಒಳಗೊಂಡಂತೆ ಶೇ. 100 ಮೀಸಲಾತಿಯನ್ನು ಜಾರಿಗೊಳಿಸಿದರು. ಇದು ಭಾರತದಾದ್ಯಂತ ವಿಶಿಷ್ಟವಾಗಿದೆ – ಬ್ರಾಹ್ಮಣರಿಗೂ ಮೀಸಲಾತಿಯನ್ನು ನೀಡುತ್ತದೆ. ಮೊದಲ ಕಮ್ಯೂನಲ್ GO ನಲ್ಲಿ ಹಿಂದುಳಿದ ವರ್ಗಗಳ ಉಲ್ಲೇಖವಿಲ್ಲ. ಆದರೆ ಬ್ರಾಹ್ಮಣೇತರ (ಹಿಂದೂ) ಇದೆ. ಆ ಮೀಸಲಾತಿ ಪ್ರಕಾರ, 12 ಸ್ಥಾನಗಳಲ್ಲಿ ಬ್ರಾಹ್ಮಣೇತರ (ಹಿಂದೂಗಳು) 5, ಬ್ರಾಹ್ಮಣರು 2, ಮುಸ್ಲಿಮರು 2, ಆಂಗ್ಲೋ-ಇಂಡಿಯನ್ ಮತ್ತು ಕ್ರಿಶ್ಚಿಯನ್ನರು 2 ಮತ್ತು ಪರಿಶಿಷ್ಟ ಜಾತಿಗೆ ಒಂದು ಸ್ಥಾನ ಸಿಕ್ಕಿತು. ಇದನ್ನು 21 ನವೆಂಬರ್ 1947 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, BC ಗಳು 14 ರಲ್ಲಿ 2 ಸ್ಥಾನಗಳನ್ನು ಪಡೆದರು ಮತ್ತು ಬ್ರಾಹ್ಮಣರು ಕೂಡ 14 ರಲ್ಲಿ 2 ಸ್ಥಾನಗಳನ್ನು ಪಡೆದರು. ಇದನ್ನೇ ಬ್ರಾಹ್ಮಣರು ವಿರೋಧಿಸಿದರು ಮತ್ತು ನ್ಯಾಯಾಲಯಕ್ಕೆ ಹೋದರು (ಸಂವಿಧಾನವು ಜಾರಿಗೆ ಬಂದ ನಂತರ) (ಚಂಪಕಂ ದೊರೈಸಾಮಿ ಪ್ರಕರಣ) ಮತ್ತು ಪೆರಿಯಾರ್ 1950ರ ನಂತರ ಬೃಹತ್ ಹೋರಾಟವನ್ನು ಪ್ರಾರಂಭಿಸಿದರು, ಇದರ ಪರಿಣಾಮವಾಗಿ ಸಂವಿಧಾನದ ಪರಿಚ್ಛೇದ 15(4). ಮೊದಲ ತಿದ್ದುಪಡಿಯಾಯಿತು.
ತಮಿಳುನಾಡು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಸವಾಲನ್ನು ಎದುರಿಸುತ್ತಿದೆ. 15(4) ತಿದ್ದುಪಡಿಯಿಂದಾಗಿ ಕೇವಲ ತಮಿಳುನಾಡಿಗೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಶಿಕ್ಷಣಕ್ಕೆ ಮೀಸಲಾತಿ ದೊರೆಯಿತು. ಸ್ವತಂತ್ರ ಭಾರತದಲ್ಲಿ, 1953 ರಲ್ಲಿ ಪರಿಚ್ಛೇದ 340 ರ ಪ್ರಕಾರ, ನೇಮಿಸಲ್ಪಟ್ಟ ಬ್ರಾಹ್ಮಣ ಕಾಲೇಲ್ಕರ್ ನೇತೃತ್ವದ ಕಾಕಾ ಕಾಲೇಲ್ಕರ್ ಆಯೋಗವು 1955 ರಲ್ಲಿ ತನ್ನ ವರದಿಯನ್ನು ನೀಡಿತು ಆದರೆ ಕಾಲೇಲ್ಕರ್, ಆಯೋಗದ ಸಂಶೋಧನೆಗಳನ್ನು ಒಪ್ಪದ ಕಾರಣ ಅದನ್ನು ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಆದ್ದರಿಂದ, ನೆಹರೂ ಅದನ್ನು ಸಂಸತ್ತಿನ ಮುಂದೆ ಇಡಲು ನಿರಾಕರಿಸಿದರು ಮತ್ತು ಅದು ಚರ್ಚೆಯಿಲ್ಲದೆ ಕಸದ ಬುಟ್ಟಿಗೆ ಹೋಯಿತು. 1978ರ ನಂತರ, ಹಿಂದುಳಿದ ವರ್ಗಗಳಿಗಾಗಿ ಎರಡನೇ ಆಯೋಗವನ್ನು ಮಂಡಲ್ ನೇತೃತ್ವದಲ್ಲಿ ನೇಮಕ ಮಾಡಲಾಯಿತು ಮತ್ತು 1980 ರಲ್ಲಿ ಅದರ ವರದಿಯನ್ನು ನೀಡಿತು. ಅದನ್ನು ಸಂಸತ್ತಿನ ಮುಂದೆ ಚರ್ಚೆಗೆ ಇಡಲಿಲ್ಲ.
ಇದನ್ನು ಸಂಸತ್ತಿನ ಮುಂದೆ ಇಡಲು ತಮಿಳುನಾಡಿನ ಜನರು ಮತ್ತೊಂದು ಹೋರಾಟ ನಡೆಸಿದರು. ದ್ರಾವಿಡರ್ ಕಳಗಂ 42 ಸಮಾವೇಶಗಳನ್ನು, 16 ಪ್ರತಿಭಟನೆಗಳನ್ನು ನಡೆಸಿತು, ದ್ರಾವಿಡರ್ ಕಳಗಂ ಕಾರ್ಯಕರ್ತರು ದೆಹಲಿಯವರೆಗೂ ಪ್ರಯಾಣಿಸಿದರು ಮತ್ತು ಇದಕ್ಕಾಗಿ ತಿಹಾರ್ ಜೈಲಿನಲ್ಲಿ ಕೂಡಿಟ್ಟರು . ಆ ಬಳಿಕ ಸಂಸತ್ತಿನಲ್ಲಿ ಚರ್ಚೆಗೆ ಬಂತು . ರಾಮ್ ವಿಲಾಸ್ ಪಾಸ್ವಾನ್, ರಾಮ್ ಭಗತ್ ದೇಸಿಂಗ್, ಚಂದ್ರಜಿತ್ ಯಾದವ್ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚಿಸಿದರು. ನಂತರ 1990 ರಲ್ಲಿ ವಿ ಪಿ ಸಿಂಗ್ ನೇತೃತ್ವವಿದ್ದಾಗ ಶೇ. 27 ಮೀಸಲಾತಿ ನೀಡಲಾಯಿತು ಆದರೆ ಅದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ತಕ್ಷಣವೇ ಪ್ರಕರಣವೊಂದು (ಇಂದಿರಾ ಸಾಹ್ನಿ ಪ್ರಕರಣ) ಸುಪ್ರೀಂ ಕೋರ್ಟ್‌ಗೆ ತಲುಪಿತು ಮತ್ತು ಅದರ ಅನುಷ್ಠಾನಕ್ಕೆ ತಡೆ ನೀಡಲಾಯಿತು. ಉತ್ತರ ಭಾರತ ಅಲ್ಲೋಲಕಲ್ಲೋಲವಾಗಿತ್ತು. 10 %EWS ಮೀಸಲಾತಿಯನ್ನು ಒಪ್ಪಿಕೊಂಡ ಅದೇ ಜನರು ದೊಂಬಿ ಹಿಂಸಾಚಾರಕ್ಕೆ ಇಳಿದರು ಮತ್ತು ವಿ ಪಿ ಸಿಂಗ್ ಅವರು ತಮ್ಮ ಪ್ರಧಾನಿ ಸ್ಥಾನವನ್ನು ಕಳೆದುಕೊಂಡರು. ಎರಡು ವರ್ಷಗಳ ಕಾಲ ಪ್ರಕರಣವು ನ್ಯಾಯಾಲಯದಲ್ಲಿತ್ತು ಮತ್ತು ನವೆಂಬರ್ 16, 1992 ರಂದು ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಬಂದಿತು, ಅದು 27 ಪ್ರತಿಶತ ಮೀಸಲಾತಿಗೆ ಅನುಮೋದನೆ ನೀಡಿದ್ದರೂ, ಅದರ ಅನುಷ್ಠಾನದಲ್ಲಿ ಹಿಂದುಳಿದ ಜಾತಿಗಳಿಗೆ ಸಾಕಷ್ಟು ಅಡಚಣೆಗಳು ಬಂದವು.
ತೀರ್ಪು ಹಿಂದುಳಿದ ಜಾತಿಗಳ ಪ್ರಗತಿಯನ್ನು ನಿಲ್ಲಿಸುವ “ಕೆನೆ ಪದರ” ಎಂಬ ಹೊಸ ಪದದೊಂದಿಗೆ ಬಂದಿತು. ಅಲ್ಲದೆ, ಇದು ಸಂವಿಧಾನದಲ್ಲಿ ಎಲ್ಲಿಯೂ ಇಲ್ಲದ ಶೇ. 50 ಗರಿಷ್ಟ ಮಿತಿಯೊಂದಿಗೆ ಬಂದಿತು. ಇದು ಹಿಂದುಳಿದ ಜಾತಿಗಳ ಅವಕಾಶಗಳ ಮೇಲೆ ಸಂಪೂರ್ಣ ಪರಿಣಾಮ ಬೀರಿತು. ಅದರ ನಂತರ 2007 ರಲ್ಲಿ, ಮಂಡಲ್ ಆಯೋಗದ ಶಿಫಾರಸಿನ ಪ್ರಕಾರ ಶಿಕ್ಷಣದಲ್ಲಿ ಮೀಸಲಾತಿ ಬಂದಾಗ ಮತ್ತು ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲ್ಪಟ್ಟಾಗ ಅದು ಮತ್ತೆ ಸುಪ್ರೀಂ ಕೋರ್ಟ್ ನಿಂದ ಸ್ಥಗಿತಗೊಂಡಿತು. ಪ್ರಕರಣವು ಒಂದೂವರೆ ವರ್ಷಗಳ ಕಾಲ ನಡೆಯಿತು ಮತ್ತು ಇದು ಏಪ್ರಿಲ್ 2008 ರಲ್ಲಿ ಮಾತ್ರ ಜಾರಿಗೆ ಬಂದರೂ ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಸಂಸ್ಥೆಗಳಿಂದ ಮತ್ತೆ ಸಂಪೂರ್ಣವಾಗಿ ಜಾರಿಗೆ ಬರಲಿಲ್ಲ . ಐಐಟಿ, ಐಐಎಂ ತಕ್ಷಣವೇ ಶೇ.27ರಷ್ಟು ಮೀಸಲಾತಿ ನೀಡಲು ಸಾಧ್ಯವಿಲ್ಲ ಆದರೆ ಶೇ.9ರಷ್ಟು ಮಾತ್ರ ನೀಡಲಾಗುವುದು ಎಂದು ಘೋಷಿಸಿದರು. ವರ್ಷಾನುಗಟ್ಟಲೆ ತಡೆಹಿಡಿದ ನಂತರ ಶೇ.27ರ ಮೀಸಲಾತಿ ಜಾರಿಗೆ ಬರಲು ಸುಮಾರು ಐದಾರು ವರ್ಷಗಳೇ ಬೇಕಾಯಿತು.
ಆದಾಗ್ಯೂ, 10 % ಮೀಸಲಾತಿಯು ಅಂತಹ ಯಾವುದೇ ನಿರ್ಬಂಧವನ್ನು ಎದುರಿಸದೆ ತಕ್ಷಣವೇ ಜಾರಿಗೆ ಬಂದಿತು. ಈ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ತಕ್ಷಣವೇ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಹೇರಳವಾಗಿ ಹಣವನ್ನು ಬಿಡುಗಡೆ ಮಾಡಿತು. ಇದನ್ನು ಇತರರ ಮೀಸಲಾತಿ ಅನುಷ್ಠಾನಕ್ಕೆ ಹೋಲಿಸಬೇಕು. ವೈದ್ಯಕೀಯ ಸಂಸ್ಥೆಗಳಲ್ಲಿ (NEET ಅಡಿಯಲ್ಲಿ) ಅಖಿಲ ಭಾರತ ಸ್ಥಾನಗಳು ಸಹ ಆರಂಭದಲ್ಲಿ ಹಿಂದುಳಿದ ಜಾತಿಗಳಿಗೆ ಯಾವುದೇ ಮೀಸಲಾತಿಯನ್ನು (27%) ಹೊಂದಿರಲಿಲ್ಲ. ತಮಿಳುನಾಡು ಸಾಮಾಜಿಕ ನ್ಯಾಯಕ್ಕಾಗಿ ಮತ್ತೊಂದು ಹೋರಾಟವನ್ನು ಪ್ರಾರಂಭಿಸಬೇಕಾಯ್ತು ಮತ್ತು ನ್ಯಾಯಾಲಯಗಳ ಮೂಲಕ ನಾವು ಆ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನ್ಯಾಯವನ್ನು ಪಡೆಯಬೇಕಾಗಿತ್ತು. ಪ್ರಾಯೋಗಿಕವಾಗಿ ನಾವು ನೋಡುತ್ತಿರುವುದು ಹಿಂದುಳಿದ ಜಾತಿಗಳಿಗೆ 27 ಪ್ರತಿಶತ ಮೀಸಲಾತಿ ಪೂರ್ಣವಾಗಿ ಜಾರಿಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಸಾಮಾನ್ಯ ವರ್ಗದವರನ್ನೂ ಶೇ.27 ಮೀಸಲಾತಿಗೆ ತರಲಾಗಿದೆ.
ಈ ಪ್ರಕರಣವು ಪ್ರಸ್ತುತ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮುಂದಿದೆ ಮತ್ತು ಇಂದಿನ ಪರಿಸ್ಥಿತಿಯು ನಿನ್ನೆ ಮತ್ತು ಇಂದಿನ ನಡುವಿನ ಸಾಮಾಜಿಕ ನ್ಯಾಯದ ಮಟ್ಟಿಗೆ ಸಾಮಾಜಿಕ ನ್ಯಾಯವನ್ನು ಸಾಧಿಸಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಶೇ.10 ಮೀಸಲಾತಿಗೆ ಸಂಬಂಧಿಸಿದಂತೆ, ಇದು ಭಾರತದ ಇತಿಹಾಸದಲ್ಲಿ ಅತ್ಯಂತ ವೇಗವಾಗಿ-ಅನುಷ್ಠಾನಗೊಂಡ ಮೀಸಲಾತಿಯಾಗಿದೆ. ಯಾವುದೇ ಪುರಾವೆಗಳ ಅಗತ್ಯವಿಲ್ಲ, ಯಾವುದೇ ಆಯೋಗ ಮತ್ತು ಯಾವುದೇ ಬೇಡಿಕೆಗಳನ್ನು ಮಾಡಲಾಗಿಲ್ಲ. ಆದರೆ ಎಲ್ಲವೂ ತಕ್ಷಣವೇ ಜಾರಿಗೆ ಬಂದು ಎರಡು ದಿನಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ರಾಷ್ಟ್ರಪತಿಗಳು ಎರಡು ದಿನಗಳಲ್ಲಿ ಅಂಕಿತ ಹಾಕುತ್ತಾರೆ ಮತ್ತು ಒಂದು ವಾರದೊಳಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳಿಗೆ 10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಆದೇಶವನ್ನು ಹೊರಡಿಸಿದ್ದಾರೆ . ಇದರ ಅನುಷ್ಠಾನಕ್ಕೆ ತಕ್ಷಣವೇ ಹಣ ನೀಡಲಾಗಿದೆ.
ಅಷ್ಟೇ ಅಲ್ಲ, ಈ ಸಮಸ್ಯೆ ನ್ಯಾಯಾಲಯದ ಮುಂದೆ ಬಂದಾಗ, ಸುಪ್ರೀಂ ಕೋರ್ಟ್ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆರ್ಥಿಕ ಆಧಾರವಾಗಿ ಬದಲಾಯಿಸಿತು. ಮೂರು ನ್ಯಾಯಾಧೀಶರು ಇದನ್ನು ಆರ್ಥಿಕ ಆಧಾರದ ಮೇಲೆ ಇರಬೇಕು ಎಂದು ನಿಶ್ಚಿತ ನಿರ್ಧಾರ ಮಾಡಿದ್ದಾರೆ ಮತ್ತು ಇಬ್ಬರು ಅದನ್ನು ಒಪ್ಪಿಕೊಂಡರು ಆದರೆ ಅದನ್ನು ವಿರೋಧಿಸಲು ಕಾನೂನು ವ್ಯತ್ಯಾಸಗಳನ್ನು ಸೂಚಿಸಿದರು ಮತ್ತು ಆದ್ದರಿಂದ ನ್ಯಾಯಾಲಯದಲ್ಲಿ 3:2 ಬಹುಮತದಿಂದ ಕಾನೂನು ಜಾರಿಗೆ ಬಂದಿದೆ. ಈಗಾಗಲೇ ಜಾರಿಗೆ ತರಲಾಗಿದ್ದು, ಯಾವುದೇ ತಡೆಯಾಜ್ಞೆ ಇಲ್ಲದಿರುವುದು ಇದೀಗ ನ್ಯಾಯಾಲಯದ ಒಪ್ಪಿಗೆ ಪಡೆದಿದೆ.
ಒಬಿಸಿ ಗಳು, ಎಸ್ ಸಿ ಮತ್ತು ಎಸ್ ಟಿಗಳ ಪರಿಸ್ಥಿತಿ ಹೀಗಿದೆ: ಸ್ವಾತಂತ್ರ್ಯದ 75 ವರ್ಷಗಳ ನಂತರ, 27 ಇಲಾಖೆಗಳಲ್ಲಿ ಗ್ರೂಪ್ A ಹುದ್ದೆಯಾದ ಕಾರ್ಯದರ್ಶಿಯಾಗಿರುವ ಒಬಿಸಿ ಕೇಂದ್ರ ಸರ್ಕಾರದಲ್ಲಿ 0. ಗ್ರೂಪ್ B ನಲ್ಲಿ ಇದು 23 ರಲ್ಲಿ ಶೂನ್ಯ, 41 ಕೇಂದ್ರ ಸಚಿವಾಲಯದಲ್ಲಿ ಶೇಕಡಾ 15 ಸಹ ಒಬಿಸಿ ಅಲ್ಲ , 784 ಐಐಎಂ ಪ್ರೊಫೆಸರ್‌ಗಳಲ್ಲಿ – ಎಸ್ ಸಿ – 8, ಎಸ್ ಟಿ — 2, ಒಬಿಸಿ – 27, ಮೇಲ್ಜಾತಿ – 590. ಐಐಟಿ ಯಲ್ಲಿ, 8856 ಸ್ಥಾನಗಳಲ್ಲಿ, ಒಬಿಸಿ – 329, ಎಸ್ ಸಿ – 149, ಎಸ್ ಟಿ -21, ಮೇಲ್ಜಾತಿ 4876, 41 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ – 1125 ಪ್ರಾಧ್ಯಾಪಕರಲ್ಲಿ – ಒಬಿಸಿ – 0, ಎಸ್ ಸಿ – 39, ಎಸ್ ಟಿ – – 8. ಪ್ರಧಾನಿ ಕಚೇರಿ ಕಾರ್ಯದರ್ಶಿಯಲ್ಲಿ 89 – ಒಬಿಸಿ – 0, ಎಸ್ ಸಿ – 1, ಎಸ್ ಟಿ -– 3.
ಸಾಮಾಜಿಕ ನ್ಯಾಯದ ಹೋರಾಟದಲ್ಲಿ ತಮಿಳುನಾಡು ಯಾವಾಗಲೂ ಮುಂಚೂಣಿಯಲ್ಲಿದೆ. ಸಂವಿಧಾನದ ಮೊದಲ ತಿದ್ದುಪಡಿಗೆ ದ್ರಾವಿಡರ್ ಕಳಗಂ (ಡಿಕೆ) ಮತ್ತು ತಂಥೈ ಪೆರಿಯಾರ್ (ಡಿಕೆ ಸ್ಥಾಪಕ) ಕಾರಣ. 1979 ರಲ್ಲಿ ಕೆನೆ ಪದರದ ವ್ಯಾಖ್ಯಾನವನ್ನು ತಮಿಳುನಾಡಿನಲ್ಲಿ (ರಾಜ್ಯ ಮೀಸಲಾತಿಗಾಗಿ) ರೂ 9,000 ವೇತನದ ಮಿತಿಯೊಂದಿಗೆ ಅಳವಡಿಸಲು ಪ್ರಯತ್ನಿಸಿದಾಗ, ಡಿಕೆ ಅದರ ವಿರುದ್ಧ ಬೃಹತ್ ಆಂದೋಲನವನ್ನು ಪ್ರಾರಂಭಿಸಿತು . ತರುವಾಯ, ಅದನ್ನು ನಿಲ್ಲಿಸಲಾಯಿತು. 1993 ರಲ್ಲಿ ತಮಿಳುನಾಡಿನಲ್ಲಿ 69 ಪ್ರತಿಶತ (ರಾಜ್ಯ) ಮೀಸಲಾತಿಯು ಎಸ್‌ಸಿ ತೀರ್ಪಿನ ನಂತರ ಅಪಾಯದಲ್ಲಿದ್ದಾಗ, (ಅಧ್ಯಕ್ಷ) ಕೆ ವೀರಮಣಿ ನೇತೃತ್ವದ ಡಿಕೆ ಚಳವಳಿಯು ಜೆ ಜಯಲಲಿತಾ (ಅಂದಿನ ಸಿಎಂ) ಅವರಿಗೆ ಮಸೂದೆಯನ್ನು ಅಂಗೀಕರಿಸುವ ಕಲ್ಪನೆಯನ್ನು ನೀಡಿತು. ರಾಜ್ಯ ಅಸೆಂಬ್ಲಿಯಲ್ಲಿ ಮತ್ತು ನಂತರ ಅದನ್ನು 9 ನೇ ಶೆಡ್ಯೂಲ್ ಅಡಿಯಲ್ಲಿ ಇರಿಸುವ ಮೂಲಕ ಸುರಕ್ಷಿತಗೊಳಿಸಲಾಯಿತು. ಕೇವಲ ಸರ್ಕಾರಿ ಆದೇಶವಿರುವ ಇತರ ರಾಜ್ಯಗಳಿಗಿಂತ ಭಿನ್ನವಾಗಿ ತಮಿಳುನಾಡಿನಲ್ಲಿ ಮಾತ್ರ ಸಂವಿಧಾನದ ಮೂಲಕ ಮೀಸಲಾತಿಯನ್ನು ಪಡೆದುಕೊಂಡಿದೆ.
ಇದಲ್ಲದೆ, ಮದ್ರಾಸ್ ಹೈಕೋರ್ಟ್ ಹೊರತುಪಡಿಸಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳಲ್ಲಿ, ಒಬಿಸಿ ಮತ್ತು ಎಸ್‌ಸಿ ನ್ಯಾಯಾಧೀಶರು ಬೆರಳೆಣಿಕೆಯೆಲ್ಲಿದ್ದಾರೆ. 32 ನ್ಯಾಯಾಧೀಶರಲ್ಲಿ ಎಸ್‌ಸಿಯಲ್ಲಿ ಇಬ್ಬರು ಮಾತ್ರ, ಸ್ವಾತಂತ್ರ್ಯದ 75 ವರ್ಷಗಳ ನಂತರ 2022 ರಲ್ಲಿ ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ಒಲವು ತೋರುತ್ತಿರುವಾಗ ಇದು ನಿಜ ಪರಿಸ್ಥಿತಿಯಾಗಿದೆ. ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ನಾಶಪಡಿಸುವ 182 ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ. ಇದು ನಾಳಿನ ಸವಾಲು. ಟಿಎನ್‌ಎ ಮತ್ತೆ ಮುಂಚೂಣಿಗೆ ಬರಬೇಕು ಮತ್ತು ಆಸಿರಿಯಾರ್ ಕೆ ವೀರಮಣಿ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಬೇಕು ಮತ್ತು ಈ ಸವಾಲನ್ನು ಎದುರಿಸಲು ನಾವು ಒಟ್ಟಾಗಿ ಹೋರಾಡಬೇಕಾಗಿದೆ.
(ಜಿ ಕರುಣಾನಿಧಿ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಒಬಿಸಿ ಫೆಡರೇಶನ್ ಮತ್ತು ಸದಸ್ಯ, ಸಾಮಾಜಿಕ ನ್ಯಾಯಕ್ಕಾಗಿ ಸಮಿತಿ, ತಮಿಳುನಾಡು ಸರ್ಕಾರ, ‘ಸಾಮಾಜಿಕ ನ್ಯಾಯ – ಹಿಂದೆ, ಇಂದು ಮತ್ತು ನಾಳೆ’ ಎಂಬ ವಿಷಯದ ಕುರಿತು ತಮಿಳಿನಲ್ಲಿ ಮಾಡಿದ ಭಾಷಣದ ಅನುವಾದ, ಇದು 29.11.2022 ರಂದು ಮದ್ರಾಸ್ ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದಲ್ಲಿ ದ್ರಾವಿಡರ್ ಕಳಗಂ ಅಧ್ಯಕ್ಷ ಕೆ ವೀರಮಣಿ ಅವರ ಅಧ್ಯಕ್ಷತೆಯಲ್ಲಿ ಸರ್ ವಿಲಿಯಂ ಮೇಯರ್ ಟ್ರಸ್ಟ್ ಚರ್ಚೆ ಯ ಅಂಗವಾಗಿ ನೀಡಿದ ಭಾಷಣ.
ಭಾಷಣದ ವೀಡಿಯೋಗಾಗಿ ಕುಲುಕೈ ಚಾನೆಲ್‌ಗೆ ಮತ್ತು ತಮಿಳಿನಿಂದ ಇಂಗ್ಲಿಷ್ ಅನುವಾದಕ್ಕಾಗಿ ರಾಧಿಕಾ ಸುಧಾಕರ್ ಗೆ ಧನ್ಯವಾದಗಳು.)
ಶ್ರೀಧರ ಅಘಲಯ, ಪ್ರಕಾಶಕ, ಅನುವಾದಕ ಮತ್ತು ಕನ್ನಡ ರೌಂಡ್ ಟೇಬಲ್ ಇಂಡಿಯಾ, ಅಂಬೇಡ್ಕರ್ ಏಜ್ ಕಲೆಕ್ಟಿವ್ ಮತ್ತು ಶೇರ್ಡ್ ಮಿರರ್ ಸಹ ಸಂಸ್ಥಾಪಕರಾಗಿದ್ದಾರೆ
EWS: ಸಾಮಾಜಿಕ ನ್ಯಾಯದ ಅಂತ್ಯ, ಡಿಸೆಂಬರ್ ೨೦೨೪ ರಲ್ಲಿ ಪ್ರಕಟವಾದ ಶೇರ್ಡ್ ಮಿರರ್ ಪ್ರಕಾಶನದ ಪುಸ್ತಕದಿಂದ.
