ದಕ್ಲಕತಾದೇವಿ ಕಾವ್ಯ ನಾಟಕ

ದಕ್ಲಕತಾದೇವಿ ಕಾವ್ಯ ನಾಟಕ

 

Dr. ನಾಗೇಗೌಡ ಕೀಲಾರ
ದಲಿತ ಸಮುದಾಯ ತನ್ನ ಕುಲಪುರಾಣವನ್ನು ಕಾವ್ಯವಾಗಿಸಿ, ಆ ಕಾವ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿಕೊಂಡರೆ ಅದ್ಭುತ ಅನ್ನಬಹುದಾದ ನಾಟಕ ಪ್ರಕಟ ಆಗಬಹುದು ಅನ್ನುವುದಾದರೆ ಅದು ದಕ್ಲಕತಾದೇವಿ ನಾಟಕ.

 

ಎಪ್ಪತ್ತರ ದಶಕದ ದಲಿತ ಕಾವ್ಯದ ಆಕ್ರೋಶ, ಸಿಟ್ಟಿನ ಮಗ್ಗಲುನ್ನೆ ಬದಲಿಸಿ ಬರಿ ದಲಿತ ಸಮುದಾಯ ಮಾತ್ರವಲ್ಲ ಇಡೀ ಮನುಕುಲವೇ ಅರಿವು, ಕಾರುಣ್ಯ ಪಡೆಯುವಂತಹ ಕಾವ್ಯ ರಚಿಸಿದ್ದು ಸಿದ್ದಯ್ಯನವರು. ಸಿದ್ದಯ್ಯನವರ ಕಾವ್ಯವನ್ನು ಅದ್ಯಾತ್ಮ ಅನ್ನಲು ಆಗುವುದಿಲ್ಲ. ಏಕೆಂದರೆ ರೂಡಿಯ ಅರ್ತದಲ್ಲಿ ಅದ್ಯಾತ್ಮ ಅಂದರೆ ಆತ್ಮ ಅನ್ನುವ ಪರಿಕಲ್ಪನೆ ಬರುತ್ತದೆ. ಸಿದ್ದಯ್ಯನವರ ಕಾವ್ಯ ಅನಾತ್ಮ ದ ಕಾವ್ಯ. ಆದ್ದರಿಂದ ಸಿದ್ದಯ್ಯನವರ ಕಾವ್ಯ ಬುದ್ಧನ ತತ್ವಸಂಹಿತೆಗಳನ್ನು ದಲಿತ ಕುಲಪುರಾಣಗಳ ಮುಕಾಂತರ ಕಂಡುಕೊಳ್ಳುವುದು ಆಗಿದೆ ಅನ್ನುವುದು ನನ್ನ ತಿಳುವಳಿಕೆ.

 

ಇನ್ನೂ ನಾಟಕದ ವಿಚಾರಕ್ಕೆ ಬರುವುದಾದರೆ ನಾಟಕದ ಪ್ರಾರಂಬದಲ್ಲೆ ನಾಟಕದ ವ್ಯಾಕರಣವನ್ನೆ ಮುರಿದು ನಾಟಕ ತಮಟೆ ವಾದ್ಯದೊಂದಿಗೆ ಪ್ರಾರಂಬವಾಗುತ್ತದೆ. ಅನಂತರ ತಮಟೆ ವಾದ್ಯ ನುಡಿಸುತ್ತಲೆ ಮಾಡುವ ಕಸರತ್ತು ಇಡೀ ಗ್ರಾಮೀಣ ಸಂಸ್ಕೃತಿ ಯನ್ನೆ ಸ್ಟೇಜ್ ಮೇಲೆ ಅನಾವರಣ ಮಾಡುತ್ತದೆ. ಅನಂತರ ಏಳು ಅಮ್ಮಗಳನ್ನು ನೆನಸಿ ಮಾಡುವ ಪ್ರಾರ್ತನೆ ಕನ್ನಡ ನಾಟಕ ರಂಗದ ಪ್ರಾರ್ತನಾ ಮಾದರಿಗಳನ್ನು ಬಲವಾಗಿ ಚಾಲೆಂಜ್ ಮಾಡುತ್ತದೆ.

 

ನಾಟಕ ಮುಂದುವರೆದಂತೆ…. ಅಸ್ಪೃಶ್ಯರಿಗೆ ಅಸ್ಪೃಶ್ಯರಾಗಿರುವ ದಕ್ಲರ ಕುಲಪುರಾಣ ಪ್ರೇಕ್ಶಕರ ಮುಂದೆ ತೆರೆದುಕೊಳ್ಳುತ್ತದೆ. ತಮ್ಮನ್ನು ತಾವು ಶಿಸ್ಟ ಎಂದು ಕರೆಸಿಕೊಳ್ಳುವ ಪರಂಪರೆ ಸೃಸ್ಟಿಸಿರುವ ಶ್ರೇಣೀಕೃತ ಅದ್ಯಾತ್ಮ(?) ವನ್ನು ಒಡೆದು ಎಲ್ಲ ಸಕಲ ಜೀವಿಗಳನ್ನು ಒಳಗೊಳ್ಳುವ ಅನಾತ್ಮ ದ ಅರಿವನ್ನು ನಾಟಕ ರಂಗಮಂದಿರದ ತುಂಬೆಲ್ಲಾ ಹರಡುತ್ತದೆ. ನಾಟಕ ಇಲ್ಲಿಗೆ ನಿಲ್ಲುವುದಿಲ್ಲ, ಪ್ರತಿಯೊಂದು ದೃಶ್ಯದಲ್ಲೂ ಸಮಾನತೆಯನ್ನು ತನ್ನ ಕುಲಪುರಾಣದಿಂದ ಹೆಕ್ಕಿ ಹೆಕ್ಕಿ ಪ್ರೇಕ್ಶಕರಿಗೆ ಅರಿವಿನ ರೀತಿಯಲ್ಲಿ ಉಣಬಡಿಸುತ್ತದೆ.

 

ನಾಟಕದ ಪ್ರತಿಯೊಂದು ದೃಶ್ಯದಲ್ಲೂ ಬೆವರು ಸಂಸ್ಕ್ರತಿಯ, ಹಸಿವಿನ ರುದ್ರ ನರ್ತನ ತುಂಬಿ ತುಳುಕಿದೆ. ಯಾವ ಸಮುದಾಯ ಎಲ್ಲರಿಂದಲೂ ಅಸ್ಪೃಶ್ಯತೆ ಗೆ ಒಳಗಾಗಿದೆ,ಆ ಸಮುದಾಯ ತನ್ನ ಪುರಾಣದ ಮೂಲಕ ಆತ್ಮ ಅನ್ನುವ ಅದ್ಯಾತ್ಮವನ್ನು ಅನುಸರಿಸದೆ ಎಲ್ಲ ಸಕಲ ಜೀವಿಗಳಲ್ಲೂ ಇರುವುದು ಒಂದೇ ಉಸಿರು ಅಲ್ಲವೇ ಅನ್ನುವ ಕಾಣ್ಕೆಯನ್ನು ಅಸ್ಟೆಲ್ಲ ನೋವು, ಅನುಮಾನ ಅನುಬವಿಸಿದ ಸಮುದಾಯ ನಮಗೆ ಹೇಳುತ್ತದೆ ಅಂದರೆ ದಕ್ಲರ ಕಾರುಣ್ಯ ಬುದ್ಧ ಹೇಳಿದ ಕಾರುಣ್ಯ ಅಂತ ನಮಗೆ ಮನದಟ್ಟು ಆಗುತ್ತದೆ.

 

ನಾಟಕದ ಮುಂದುವರೆದಂತೆ….. ದಕ್ಲ ಮಂಟೇಸ್ವಾಮಿ ಅತವಾ ಅಲ್ಲಮನ ರೂಪದಲ್ಲಿ ಇಡೀ ಕೆರೆ ನೀರನ್ನು ಹೆಂಡ ಮಾಡಿಸಿಕೊಂಡು, ಕೆರೆ ಏರಿಯನ್ನು ಮಾಂಸ ಮಾಡಿಸಿಕೊಂಡು, ಕುಡಿಯುತ್ತ, ತಿನ್ನುತ್ತ ಹಸಿವು ಅನ್ನುವುದು ಎಸ್ಟು ಕ್ರೂರ ಅನ್ನುವ ಕಟು ಸತ್ಯವನ್ನು ಪ್ರೇಕ್ಶಕರಿಗೆ ದಾಟಿಸುವ ಪರಿ ಅದ್ಬುತ. ಕುಡಿದು ತಿಂದ ಮೇಲೆ ಎಡಗೈಯವನೇ ಬಲಗೈಯವನೇ ಹೊಟ್ಟೆ ತುಂಬಾ ತಿಂದ, ಕುಡಿದ ಮಲಗು ಅನ್ನುವ ದಕ್ಲ ದಲಿತ ಸಮುದಾಯದ ಎಡಗೈ ಬಲಗೈ ಜಗಳಕ್ಕೆ ಅರ್ತವೇ ಇಲ್ಲ ಏಕೆಂದರೆ ನಾವಿಬ್ಬರೂ ಶತಮಾನಗಳಿಂದ ಹಸಿವಿನಿಂದಲೇ ನರಳುತ್ತಿರುವವರು ಅನ್ನುವ ಅರಿವನ್ನು ಮೂಡಿಸುತ್ತದೆ. ನಾಟಕದ ಎರಡನೇ ಬಾಗ ಅನ್ನುವುದು ಏನಿದೆ ಅದು ಹಸಿವಿನ ಕ್ರೌರ್ಯವನ್ನು ಪ್ರೇಕ್ಶಕರ ಮುಕಕ್ಕೆ ಬಾರಿಸಿ ತೋರಿಸುತ್ತದೆ. ಅದರಲ್ಲೂ ನಾಟಕದಲ್ಲಿ ಎರಡು ಬಾರಿ ಪ್ರೇಕ್ಶಕರ ಗ್ಯಾಲರಿ ಲೈಟ್ ಆನ್ ಮಾಡಿ ನಮ್ಮೊಳಗಿನ ಅಸಹ್ಯ, ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ.

 

ನಾಟಕ ಮುಂದುವರೆದಂತೆ…. ದಕ್ಲ ಈ ದೇಹದಿಂದ ದೂರವಾದ ಏಕೆ ಆತ್ಮವೇ…. ಹಾಡನ್ನು ಹೇಳುತ್ತ…. ತಮಾಶೆಯಾಗಿಯೇ ಗಾಂದಿ ಮತ್ತು ಬಸವಣ್ಣನವರನ್ನು ವಿಶ್ಲೇಸಣೆಗೆ ಒಳಪಡಿಸಿ ಅವರನ್ನು ದ್ವೇಸಿಸದೆ ಅಂಬೇಡ್ಕರ್ ಜೊತೆಗೂಡಿಸಿ ಶಾಕ್ಯಮುನಿ(ಬುದ್ದ) ಯೊಳಗೆ ಕರಗಿಸುವ ಪರಿ ನಾಟಕದಲ್ಲಿ ಅದ್ಬುತವಾಗಿ ಮೂಡಿಬಂದಿದೆ. ಈ ದೇಹದಿಂದ ದೂರವಾದೆ ಏಕೆ ಆತ್ಮವೇ ಅನ್ನುವುದನ್ನು ವ್ಯಂಗ್ಯ ಮಾಡುತ್ತಲೇ ಬುದ್ಧನ ಅನಾತ್ಮ ದ ಕಡೆಗೆ ಪ್ರೇಕ್ಶಕರಿಗೆ ಹಾದಿ ತೋರುತ್ತದೆ.

 

ನಾಟಕ ಮುಂದುವರೆದಂತೆ… ಹೆಣ್ಣಿನ ಮೇಲಿನ ಗಂಡು ಆಳ್ವಿಕೆಯ ದೌರ್ಜನ್ಯ ಮತ್ತು ದರ್ಪ ಎರಡನ್ನೂ ಗಂಡು ಹೆಣ್ಣಿನ ಸಹಾಯ ಪಡೆದು ತಾನು ಹೆಣ್ಣುತನವನ್ನು ಪಡೆಯುವ ಮೂಲಕ ಇಬ್ಬರು ಬಿಡುಗಡೆ ಹೊಂದುವ ಪರಿ ಏನಿದೆ ಅದು ದಲಿತ ತತ್ವ ಸಮಾನತೆಯನ್ನು ಹೇಗೆ ತನ್ನ ಕುಲಪುರಾಣದಿಂದಲೇ ಹೇಗೆ ಹೆಕ್ಕಿ ಪಡೆಯಬಲ್ಲದು ಅನ್ನುವುದನ್ನು ನಮಗೆ ಅರ್ತ ಮಾಡಿಸುತ್ತದೆ.

 

ಇಡೀ ನಾಟಕದ ಸಂಗೀತ ತಮಟೆ ವಾದ್ಯದಿಂದ ಕೂಡಿದೆ. ಇದೊಂದು ವಿನೂತನ ಪ್ರಯೋಗ. ಸಂಗೀತಕ್ಕಾಗಿ ಬಿ ವಿ ಕಾರಂತರನ್ನು ಸ್ಮರಿಸುವ ನಾಟಕ ವಿಮರ್ಶಕರು ಈ ನಾಟಕದ ಸಂಗೀತ ವನ್ನು ಅದ್ಯಯನ ಮಾಡುತ್ತಾರೆ ಎಂದು ಆಶಿಸುತ್ತೇನೆ.

 

ನಾಟಕದ ಎಲ್ಲ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಂಡು ಅದ್ಬುತವಾಗಿ ನಟಿಸಿದ್ದಾರೆ. ಮಂಜು_ನಾರಾಯಣ್ ಬೆಳಕಿನ ವಿನ್ಯಾಸ ಎಸ್ಟು ಅದ್ಬುತ ಅಂದರೆ ನಾಟಕದ ಒಂದಸ್ಟು ದೃಶ್ಯಗಳು grand scale ನಲ್ಲಿ ನಮಗೆ ಕಾಣುತ್ತವೆ.

 

ಕೊನೆಯದಾಗಿ ಕನ್ನಡ ನಾಟಕ ರಂಗಕ್ಕೆ ಸಿಕ್ಕಿರುವ ದೊಡ್ಡ ಪ್ರತಿಬೆ Lakshman Kp . ಲಕ್ಶ್ಮಣ್ಣ ನಮಗೆ ತಮ್ಮ ನಾಟಕಗಳ ಮುಕಾಂತರ ಕೇವಲ ಮನರಂಜನೆ ಯನ್ನು ಮಾತ್ರ ನೀಡುತ್ತಿಲ್ಲ, ಅಂಬೇಡ್ಕರ್ ರ ನವ ಯಾನ ಬುದ್ಧನ ಯಾನದ ಚಾಲಕನಾಗಿ ಬುದ್ದ ತೋರಿದ ಹಾದಿಯ ಕಡೆಗೆ ನಮ್ಮ ಅರಿವಿನ ಚಲನೆಯನ್ನು ನಿರ್ದೇಶಿಸುತ್ತಿದ್ದಾರೆ.

 

ಲಕ್ಶ್ಮಣ್ಣ ಜೊತೆಗೂಡಿ ಸಹ ನಿರ್ದೇಶನ ಮಾಡಿದ ಸ್ಕಂದ ಮತ್ತು Sriharsha Grama ಜೋಡಿ ಮುಂದಿನ ದಿನಗಳಲ್ಲೂ ಇಂತಹ ಬರವಸೆಯ ನಾಟಕಗಳನ್ನು ನಿರ್ದೇಶಿಸಿ ನಮಗೆಲ್ಲರಿಗೂ ಅರಿವಿನ ಕ್ರಾಂತಿ ಉಂಟು ಮಾಡಲಿ ಎಂದು ಆಶಿಸುತ್ತೇನೆ .