ಖರ್ಗೆ ಗೇಲಿ: ಮಾಧ್ಯಮದ ಜಾತ್ಯಾತೀತತೆ

ಖರ್ಗೆ ಗೇಲಿ: ಮಾಧ್ಯಮದ ಜಾತ್ಯಾತೀತತೆ

ವಿ‌.ಎಲ್.ನರಸಿಂಹಮೂರ್ತಿ

ಹಿರಿಯ ರಾಜಕಾರಣಿ ಮಲ್ಲಿಕಾರ್ಜು‌ನ ಖರ್ಗೆಯವರು ಎಐಸಿಸಿ ಅದ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ‘ದ ಹಿಂದೂ’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಖರ್ಗೆಯವರನ್ನು ಗೇಲಿ ಮಾಡಿ ಬರೆದ ಕಾರ್ಟೂನುಗಳು ಮತ್ತು ಆ ಕಾರ್ಟೂನುಗಳಿಗೆ ಲಿಬರಲ್ ವರ್ಗ ಸೂಚಿಸಿದ ಮೌನ ಸಮ್ಮತಿ ಈ ಸೋ ಕಾಲ್ಡ್ ಲಿಬರಲ್ ವರ್ಗದ ಜನ ತಳಸಮುದಾಯಗಳ ಬಗ್ಗೆ ಎಷ್ಟು ಪೂರ್ವಾಗ್ರಹ ಮತ್ತು ಅಸಹನೆ ಹೊಂದಿರುತ್ತಾರೆ ಎನ್ನುವುದನ್ನು ಬಯಲುಗೊಳಿಸಿವೆ.

ತಮ್ಮ ಸುದೀರ್ಘ ಕಾಲದ ರಾಜಕೀಯ ಜೀವನದುದ್ದಕ್ಕೂ ಖರ್ಗೆ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ ಮತ್ತು ಎಷ್ಟೋ ಸಲ ತಮಗೆ ಸಿಗಬೇಕಾದ ಸ್ಥಾನಮಾನ ಸಿಗದೆ ಹೋದಾಗಲೂ ಹೈಕಮಾಂಡ್ ಹಾಕಿದ ಗೆರೆಯನ್ನು ದಾಟಲಿಲ್ಲ ಎನ್ನುವು ಅಪವಾದಕ್ಕೆ ಈಡಾಗಿದ್ದಾರೆ. ಈ ಪಕ್ಷನಿಷ್ಠೆಯ ಕಾರಣಕ್ಕೆ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಗೇಲಿ‌ಮಾಡುತ್ತಿರುವುದು ಖರ್ಗೆಯವರಿಗೆ ಸೋನಿಯಾ ಗಾಂಧಿಯವರ ಅನುಗ್ರಹದ ಹೊರತಾಗಿ ರಾಜಕೀಯ ಬದುಕಿನಲ್ಲಿ ತಮ್ಮದೇ ಆದ ಅಸ್ತಿತ್ವ ಇಲ್ಲ ಎನ್ನುವುದನ್ನು ಪ್ರತಿಪಾದಿಸುವುದಕ್ಕಾಗಿ.

ತಮ್ಮ ಸಾಮಾಜಿಕ ಹಿನ್ನಲೆಯ ಕಾರಣಕ್ಕಾಗಿ ದಲಿತರು ಸಾಕಷ್ಟು humiliation ಅನುಭವಿಸಬೇಕಾಗುತ್ತದೆ. ಇಂತಹ ಅವಮಾನಗಳ ಜೊತೆಗೆ ಬೆಳೆಯುವ ಖರ್ಗೆಯವರಂತಹ ರಾಜಕಾರಣಿಗಳ ಅಸ್ತಿತ್ವವೇ ಒಂದು ರೀತಿಯಲ್ಲಿ assertion ಆಗಿರುತ್ತದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಖರ್ಗೆಯಂತವರನ್ನು ಕೇವಲ ಸೋನಿಯಾ ಗಾಂಧಿಯವರ ಕೈಗೊಂಬೆ, ರಬ್ಬರ್ ಸ್ಟಾಂಪ್ ಅಂತ ಗೇಲಿ ಮಾಡಿ ಚಿತ್ರಿಸುವುದು ದಲಿತರ ಮೇಲೆ ಎಸಗುವ ಜಾತಿ ಹಿಂಸೆಯ ಮತ್ತೊಂದು ರೂಪ ಅಂತ ಈ ಲಿಬರಲ್‌ಗಳಿಗೆ ಅರ್ಥವಾಗುವುದಿಲ್ಲ.

ಖರ್ಗೆಯಂತವರಿಗೆ ಸೋನಿಯಾ ಗಾಂಧಿಯವರ ಕೈಗೊಂಬೆಯಾಗಿ ಅಧಿಕಾರದಲ್ಲಿರದ ಹೊರತು ತಾವಾಗಿಯೇ ಈ ಸ್ಥಾನವನ್ನು ನಿಭಾಯಿಸುವುದಕ್ಕೆ ಆಗುವುದಿಲ್ಲ ಎಂದು ಬಿಂಬಿಸುವುದು ‘ದಲಿತರು ಸಮರ್ಥರಲ್ಲ’ ಎನ್ನುವ ಮೇಲ್ಜಾತಿಗಳ ಜಾತಿವಾದಕ್ಕೆ ಉದಾಹರಣೆ.

ಎಲ್ಲ ವ್ಯಂಗ್ಯದ ರೀತಿಯ ಹಿಂದೆ ಪೂರ್ವಾಗ್ರಹಗಳು ಕೆಲಸ ಮಾಡುತ್ತಿರುತ್ತವೆ ಎನ್ನುವ ಅರಿವು ಕಲಾವಿದನಾದವನಿಗೆ ಇರಬೇಕು. ಅದರಲ್ಲೂ ತಳಸಮುದಾಯಗಳ ಬಗ್ಗೆ ಬರೆಯುವಾಗ ತನ್ನೊಳಗೆ ಇರಬಹುದಾದ ಜಾತಿಪ್ರಜ್ಞೆಯ ಕುರಿತು ಕನಿಷ್ಟ ಎಚ್ಚರ ಇರಬೇಕು.

ಈ ಕಾರ್ಟೂನುಗಳು ಮತ್ತು ಅದಕ್ಕೆ ಸಿಕ್ಕ ಮೌನ ಸಮ್ಮತಿಯ ಹಿಂದೆ ಇರುವ ಈ ‘ಹಿಂಸೆ’ಯ ಸ್ವರೂಪವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ದಲಿತ ರಾಜಕಾರಣದ ಬಗ್ಗೆ ಈ ಸಮಾಜ ಇಟ್ಟುಕೊಟ್ಟಿರುವ ಅಸಹನೆಯ ಮಟ್ಟ ಎಷ್ಟೆಂದು ಗೊತ್ತಾಗುವುದಿಲ್ಲ.

ಅನುಭವಿ ರಾಜಕಾರಣಿಯಾಗಿರುವ ಖರ್ಗೆ ಎಐಸಿಸಿ ಅಧ್ಯಕ್ಷರಾಗಲು ಸಹಜವಾಗಿಯೇ ಶಶಿತರೂರ್‌ಗಿಂತ ಹೆಚ್ಚು ಅರ್ಹರು. ಆದರೆ ಯಾವ ರೀತಿಯಲ್ಲೂ ರಾಜಕಾರಣಿ ತರಹ ಕಾಣಿಸದ ‘ಲಿಬರಲ್ ಬ್ರಾಹ್ಮಣ’ ಶಶಿತರೂರ್ ಕಾಂಗ್ರೇಸ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದರೆ ಲಿಬರಲ್ ವರ್ಗದ ಪ್ರತಿಕ್ರಿಯೆ ಏನಾಗಿರುತ್ತಿತ್ತು. ಲಿಬರಲ್‌ಗಳ ಪ್ರಕಾರ ತರೂರು ಕಾಂಗ್ರೇಸ್ಸಿನ ‘ಬಂಡಾಯಗಾರ!

ಖರ್ಗೆಯವರ ಪಕ್ಷನಿಷ್ಠೆಯೇ ಅವರ ಸಾಮರ್ಥ್ಯವನ್ನು ಅನುಮಾನಿಸಲು ಎಡೆಮಾಡಿಕೊಡುತ್ತದೆ. ಖರ್ಗೆ assertive ದಲಿತ ರಾಜಕಾರಣಿ ಅಲ್ಲ ಎನ್ನುವವರು ಬಿ. ಬಸವಲಿಂಗಪ್ಪನವರಿಗೆ ಆದದ್ದನ್ನು ಹೇಗೆ ವಿಶ್ಲೇಷಿಸುತ್ತಾರೆ?

ತಾವು ಸ್ವತಂತ್ರವಾಗಿ ಅಧಿಕಾರ ನಡೆಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಮಾಡುವ ಯಾವ ಅಧಿಕಾರದ ಹುದ್ದೆಯನ್ನು ರಾಜಕೀಯ ಪಕ್ಷಗಳು ದಲಿತರಿಗೆ ನೀಡಿವೆ?

ಮೀಸಲು ಕ್ಷೇತ್ರಗಳಲ್ಲಿ ದಲಿತೇತರ ಮತಗಳ ಮೇಲೆ ಅವಲಂಬಿತರಾಗಿರುವ ದಲಿತ ರಾಜಕಾರಣಿಗಳ ಸದ್ಯದ ಸ್ಥಿತಿಯಲ್ಲಿ ಖರ್ಗೆಯಂತವರು ಗುಲಬರ್ಗದಂತಹ ಉತ್ತರ ಕರ್ನಾಟಕದ ಫ್ಯೂಡಲ್ ಜಾತಿಗಳ ಹಿಡಿತವಿರುವ ಪ್ರದೇಶದಲ್ಲಿ ನಲವತ್ತೈದು ವರ್ಷ ರಾಜಕಾರಣ ಮಾಡುವುದು ಅಷ್ಟು ಸಾಮಾನ್ಯ ವಿಷಯವಲ್ಲ ಎನ್ನುವುದನ್ನು ಮರೆತವರಂತೆ ನಟಿಸುತ್ತಾರೆ.

ಬಿಜೆಪಿಯ ಮೋದಿ-ಅಮಿತ್ ಶಾ ಮತ್ತು ಸಂಘಪರಿವಾರದ ವಿರುದ್ಧ ಹೋರಾಡುವುದನ್ನೇ ದೊಡ್ಡ ‘ಜಾತ್ಯಾತೀತವಾದ’ ಎಂದುಕೊಂಡಿರುವ ಈ ದೇಶದ ಲಿಬರಲ್ ಚಿಂತಕರು, ಕಲಾವಿದರು ಜಾತಿಯ ಕುರಿತ ಪ್ರಶ್ನೆಗಳು ಎದ್ದಾಗ ಸಂವೇದನಾಶೂನ್ಯರಂತೆ ವರ್ತಿಸುತ್ತಾರೆ.

ನಮ್ಮ ಲಿಬರಲ್‌ಗಳಿಗೆ ಖರ್ಗೆಯಂತಹ ಪಕ್ಷದ ಸಿದ್ಧಾಂತಕ್ಕೆ ನಿಷ್ಠರಾಗಿರುವ ರಾಜಕಾರಣಿ ತಮ್ಮ nonassertive ಗುಣದ ಕಾರಣಕ್ಕೆ ಇಷ್ಟವಾಗುವುದಿಲ್ಲ, ಪಕ್ಷ ಕಡೆಗಾಣಿಸಿದ್ದನ್ನು ಪ್ರಶ್ನಿಸಿ ಹೊರನಡೆಯುವ ಶ್ರೀನಿವಾಸಪ್ರಸಾದ್ ತರದವರು ತಮ್ಮ assertive ಗುಣದ ಕಾರಣಕ್ಕೆ ಇಷ್ಟವಾಗುವುದಿಲ್ಲ.

ದಲಿತರು ಕಾಂಗ್ರೆಸ್ ಪಕ್ಷದಲ್ಲಿರಲಿ, ಬಿಜೆಪಿಯಲ್ಲಿರಲಿ, ಜೆಡಿಎಸ್‌ನಲ್ಲಿರಲಿ ಅವರು ಹೇಗಿದ್ದರೂ ಒಟ್ಟಿನಲ್ಲಿ ಇವರಿಗೆ ಇಷ್ಟವಾಗುವುದಿಲ್ಲ.

ಸರಿ ಈ ಪಕ್ಷಗಳ ಸಹವಾಸವೇ ಬೇಡ ಅಂತ ಸ್ವತಂತ್ರವಾಗಿ ರಾಜಕಾರಣ ಮಾಡಲಿಚ್ಛಿಸುವ ಬಿಎಸ್‌ಪಿ ದಲಿತ ರಾಜಕೀಯ ಪಕ್ಷಗಳಂತೂ ಅಸ್ತಿತ್ವದಲ್ಲೇ ಇರಬಾರದು.

ಹಾಗಾದರೆ ಇವರು ಮೆಚ್ಚುವ ದಲಿತ ರಾಜಕಾರಣದ ಮಾದರಿ ಯಾವುದು?

ಇವರು ಒಪ್ಪುವ ಮಾದರಿ ದಲಿತ ರಾಜಕಾರಣಿಗಳು ಅಧಿಕಾರ ಚಲಾಯಿಸುವ ಆಳುವ ವರ್ಗವಾಗಬಾರದು ಕೇವಲ ಆಳುಗಳಾಗಿ, ಕಾಲಾಳುಗಳಾಗಿ ತಮ್ಮನ್ನು ಹಿಂಬಾಲಿಸುವ ವರ್ಗವಾಗಿ ಮಾತ್ರ ಇರಬೇಕು. ಇದು ಈ ಜಾತಿ ವ್ಯವಸ್ಥೆಯ ಅಂತರಾಳದಲ್ಲಿರುವ ಸತ್ಯ.

ದಲಿತ ರಾಜಕಾರಣಿಗಳು assertive ಆಗುತ್ತಾರೋ, nonassertive ಆಗುತ್ತಾರೋ ಅದು ದಲಿತರಿಗೆ ಬಿಟ್ಟ ವಿಷಯ ಆದರೆ ಮೊದಲು ದಲಿತರನ್ನು ರಾಜಕಾರಣದಲ್ಲಿ ಉಳಿಯುವುದಕ್ಕೆ ಬಿಡಬೇಕು ಎನ್ನುವ ಸಣ್ಣ ಪ್ರಜ್ಞೆ ಇವರಿಗೆ ಬರುವುದು ಯಾವಾಗ.

ಈ ಕಾರ್ಟೂನುಗಳನ್ನು ಬರೆದ ಕಲಾವಿದರು ಜಾತಿಯ ವ್ಯಸನಕ್ಕೆ ಒಳಗಾಗಿ ಬರೆದಿರಬಹುದು ಆದರೆ ಇವುಗಳನ್ನು ಪ್ರಕಟಿಸಿದ ಪತ್ರಿಕೆಯ ಸಂಪಾದಕ ಮಂಡಳಿಯ ಸಂವೇದನಾಶೀಲತೆಯ ಕತೆ ಏನು?

ಇನ್ನು ನಮ್ಮ‌ ಲಿಬರಲ್‌ಗಳೋ ಈ ಕಾರ್ಟೂನುಗಳಲ್ಲಿರುವ ಜಾತಿಹಿಂಸೆಯ ಬಗ್ಗೆ ಮಾತಾಡುವುದನ್ನು ಬಿಟ್ಟು ಇವನ್ನು ಬರೆದರವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಯ್ತು ಅಂತ ಮಾತ್ರ ಮಾತನಾಡಬಲ್ಲರು.

ವಿ.ಎಲ್.ನರಸಿಂಹಮೂರ್ತಿ

ಇಂಗ್ಲಿಷ್ ಅಧ್ಯಾಪಕರು ಮತ್ತು ಸಾಂಸ್ಕೃತಿಕ ಚಿಂತಕರು