ದಕ್ಲಾ ಕತಾ ದೇವಿ ಕಾವ್ಯ: ಆಧುನಿಕ ಪುರಾಣ
ವಿ. ಎಲ್. ನರಸಿಂಹಮೂರ್ತಿ
ನವೆಂಬರ್ ಒಂದರಂದು ಪ್ರದರ್ಶನಗೊಂಡ ಗೆಳೆಯ ಕೆ.ಪಿ. ಲಕ್ಷ್ಮಣ್ ನಿರ್ದೇಶನದ ಕೆ.ಬಿ. ಸಿದ್ದಯ್ಯನವರ ಕಾವ್ಯ ಮತ್ತು ಗದ್ಯ ಸಾಹಿತ್ಯದ ಆಯ್ದಭಾಗಗಳನ್ನು ಆಧರಿಸಿದ ‘ದಕ್ಲಾ ಕತಾ ದೇವಿ ಕಾವ್ಯ’ ನಾಟಕ ತಳಸಮುದಾಯದ ಕಣ್ಣೋಟದಿಂದ ಲೋಕವನ್ನು ಗ್ರಹಿಸಬೇಕಾದ ಕ್ರಮದ ಮೇಲೆ ಬೆಳಕು ಚೆಲ್ಲುವ ವಿಶಿಷ್ಟ ಪ್ರಯೋಗ.
ಭಾರತದಲ್ಲಿ ದಲಿತ ಸಾಹಿತ್ಯದ ಹುಟ್ಟು ದಲಿತ ಚಳುವಳಿಯ ಜೊತೆಜೊತೆಗೆ ಆದದ್ದರಿಂದ ದಲಿತ ಸಾಹಿತ್ಯ ಚಳುವಳಿಯ ಜೊತೆಗೆ ಬೆಳೆದುಬಂದಿತು.
ದಲಿತ ಸಾಹಿತ್ಯ ಹುಟ್ಟಿದ ಸಂದರ್ಭ ಮತ್ತು ಬೆಳೆದು ಬಂದ ಬಗೆಯನ್ನು ಅವಲೋಕಿಸುವಾಗಲೆಲ್ಲ ವಿಮರ್ಶಕರು ದಲಿತ ಸಾಹಿತ್ಯಕ್ಕೆ ಒಂದಷ್ಟು ನಿರ್ದಿಷ್ಟ ಗುಣಲಕ್ಷಣಗಳನ್ನು ಆರೋಪಿಸಿ ದಲಿತ ಸಾಹಿತ್ಯವನ್ನು particularisation ಮಾಡಲು ಪ್ರಯತ್ನಿಸುತ್ತಾರೆ.
ದಲಿತ ಸಾಹಿತ್ಯ ಹುಟ್ಟಿದ್ದು ಸಾಮಾಜಿಕ ಅಸಮಾನತೆಯನ್ನು ಖಂಡಿಸುವುದಕ್ಕಾಗಿ, ಜಾತಿ ವ್ಯವಸ್ಥೆಯ ಕಾರಣಕ್ಕೆ ದಲಿತರು ಅನುಭವಿಸಬೇಕಾದ ಅನ್ಯಾಯ, ಹಿಂಸೆ , ನೋವು, ಶೋಷಣೆಯ ಬಗ್ಗೆ ದನಿ ಎತ್ತಿ ಮಾತಾಡುವುದಕ್ಕಾಗಿ ಎನ್ನುವ ಅಂಶಗಳಿಗೆ ಹೆಚ್ಚು ಒತ್ತು ಕೊಟ್ಟು ದಲಿತ ಸಾಹಿತ್ಯ ಹೆಚ್ಚು ‘ಸಾಮಾಜಿಕ’ ಅನ್ನುವ ಅಭಿಪ್ರಾಯವನ್ನು ಬಹುತೇಕ ವಿಮರ್ಶಕರು ವ್ಯಕ್ತಪಡಿಸುತ್ತಾರೆ.
ಸಾಹಿತ್ಯದಲ್ಲಿ ದಲಿತ ಜಗತ್ತು ಕಣ್ಮರೆಯಾಗಿದ್ದಾಗ ದಲಿತರ ಅಸ್ತಿತ್ವದ ಬಗ್ಗೆ, ದಲಿತರ ಬವಣೆಯ ಬಗ್ಗೆ ದಲಿತ ಸಾಹಿತ್ಯ ಹೆಚ್ಚು ಕೇಂದ್ರಿಕರಿಸಿದ್ದು ನಿಜ. ಅದು ಆ ಕಾಲದ ಅಗತ್ಯವೂ ಆಗಿತ್ತು. ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಬಯಸುವ ಸಾಂಪ್ರದಾಯಿಕ ಸಮಾಜದ ವಿರುದ್ಧ ಬಂಡೇಳಬೇಕಾದ ಅಗತ್ಯ ಎಪ್ಪತ್ತರ ದಶಕದಲ್ಲಿ ಅನಿವಾರ್ಯವೂ ಆಗಿತ್ತು. ದಲಿತರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಮುನ್ನಡೆಗೆ ಸವಾಲಾಗಿದ್ದ ಸಾಂಪ್ರದಾಯಿಕ ಮೌಲ್ಯಗಳನ್ನು ಮುರಿದು ಹೊಸ ಪ್ರಗತಿಪರ ಮೌಲ್ಯಗಳ ಆಧಾರದ ಮೇಲೆ ಸಮಾನತೆಯ ಸಮಾಜವನ್ನು ಕಟ್ಟುವ ಆಶಯದಿಂದ ದಲಿತ ಚಳುವಳಿ ವೈಚಾರಿಕತೆ ಮತ್ತು ಆಧುನಿಕತೆಯ ಕಡೆಗೆ ತುಡಿಯತೊಡಗಿತ್ತು. ದಲಿತ ಚಳುವಳಿ ಮತ್ತು ಆ ಚಳುವಳಿಯ ಜೊತೆಗೆ ಬೆಳೆದ ದಲಿತ ಸಾಹಿತ್ಯ ತನ್ನ ಈ ಆಧುನಿಕ ಚಹರೆಯ ಕಾರಣಕ್ಕಾಗಿ ತನ್ನ ಸಂಸ್ಕೃತಿಯ ಮೂಲಬೇರುಗಳನ್ನು ಕತ್ತರಿಸಿಕೊಂಡು ಮುನ್ನಡೆಯತೊಡಗಿತು ಎನ್ನುವ ಆರೋಪವನ್ನು ಹೊತ್ತುಕೊಳ್ಳಬೇಕಾಯಿತು.
ದಲಿತ ಸಾಹಿತ್ಯದ ಹುಟ್ಟಿನಲ್ಲೆ ಸ್ಥಾಪಿತ ಮೌಲ್ಯಗಳ ನಿರಾಕರಣೆ ಇದ್ದುದರಿಂದ ದಲಿತ ಸಾಹಿತ್ಯ ಆಧುನಿಕತೆಯ ಕಡೆಗೆ ಹೆಚ್ಚು ತುಡಿತವನ್ನು ಇಟ್ಟುಕೊಂಡಿತ್ತು. ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಅವರ ಗಾಢ ಪ್ರಭಾವದಿಂದ ಹುಟ್ಟಿದ ದಲಿತ ಸಾಹಿತ್ಯ ಅಂಬೇಡ್ಕರ್ ಪ್ರತಿಪಾದಿಸಿದ ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ’ದಂತಹ ಮೌಲ್ಯಗಳನ್ನು ಪ್ರತಿಷ್ಟಾಪಿಸಬಯಸಿತು. ಅಂಬೇಡ್ಕರ್ ಅವರ ವಿಮೋಚನಾ ಹೋರಾಟ ಮತ್ತು ಚಿಂತನೆ ಪಶ್ಚಿಮದ ಉದಾರವಾದಿ ಮೌಲ್ಯಗಳ ಪ್ರಭಾವಕ್ಕೊಳಗಾಗಿದೆ ಎನ್ನುವ ಕಾರಣಕ್ಕೆ ಅಂಬೇಡ್ಕರ್ ಪ್ರಭಾವಿತ ದಲಿತ ಸಾಹಿತ್ಯ ಹೆಚ್ಚು ಪಶ್ಚಿಮಮುಖಿಯಾಗತೊಡಗಿ ತನ್ನ ಬೇರುಗಳನ್ನು ಕತ್ತರಿಸಿಕೊಂಡು ಮುಂದುವರೆಯಿತು ಎನ್ನುವ ಆರೋಪ ದಲಿತ ಸಾಹಿತ್ಯದ ಮೇಲೆ ಬೀಳತೊಡಗಿತು.
ಇನ್ನು ಎಪ್ಪತ್ತರ ದಶಕದಲ್ಲಿ ಬರೆಯುವುದಕ್ಕೆ ಶುರುಮಾಡಿದ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಎಚ್. ಗೋವಿಂದಯ್ಯ ಸೇರಿದಂತೆ ಎಲ್ಲ ದಲಿತ ಸಾಹಿತಿಗಳಲ್ಲೂ ಆಧುನಿಕತೆಯ ಕಡೆಗೆ ಪ್ರಯಾಣ ಎದ್ದು ಕಾಣಿಸುತ್ತದೆ. ಅದರಲ್ಲೂ ಸಿದ್ದಲಿಂಗಯ್ಯನವರ ಕಾವ್ಯ, ಕೋಟಿಗಾನಹಳ್ಳಿ ರಾಮಯ್ಯನವರು ಬರೆದ ತೆಲುಗಿನಿಂದ ಅನುವಾದಿಸಿದ ಹಾಡುಗಳು ಚಳುವಳಿಗೆ ಸಾಂಸ್ಕೃತಿಕ ಆಯಾಮವನ್ನು ನೀಡಿ ಸಾಹಿತ್ಯವನ್ನು ಜನಚಳುವಳಿಯ ಭಾಗವಾಗಿಸಿದವು. ಕೆಬಿ ಬರೆದ ‘ಈ ನಾಡ ಮಣ್ಣಿನಲ್ಲಿ’ ಹಾಡು ದಲಿತ ಚಳುವಳಿಯ ಬಹಳ ಮುಖ್ಯ ಹಾಡುಗಳಲ್ಲಿ ಒಂದು. ಚಳುವಳಿಯ ಕಾರಣಕ್ಕೆ ದಲಿತ ಸಾಹಿತ್ಯ ಹೆಚ್ಚು ಸಾಮಾಜಿಕವಾಯಿತು ಅಲ್ಲಿ ‘ಸಾಮಾಜಿಕ ಕ್ರೋಧ’ ಜಾಸ್ತಿಯಾಗಿ ದಲಿತ ಸಾಹಿತ್ಯದಲ್ಲಿ ದಲಿತ ಲೋಕವೇ ಕಣ್ಮರೆಯಾಗಿದೆ’ ಎನ್ನುವ ಟೀಕೆಗಳು ಶುರವಾಗತೊಡಗಿದ ಮೇಲೆ ದಲಿತ ಸಾಹಿತ್ಯ ‘ಪ್ರತಿಭಟನೆ’ಯ ಮಾದರಿಯಿಂದ ದಲಿತ ಲೋಕದ ಒಳಗಿನ ಶೋಧನೆಗೆ ಮುಂದಾಯಿತು. ದೇವನೂರು ಮಹಾದೇವ ಅವರ ‘ಕುಸುಮಬಾಲೆ’, ಕೆ.ಬಿ.ಸಿದ್ದಯ್ಯನವರ ‘ಬಕಾಲ’ ದಿಂದ ಶುರುವಾದ ಈ ‘ಆಧ್ಯಾತ್ಮಿಕ ಹುಡುಕಾಟ’ದ ಮಾದರಿ ದಲಿತ ಜಗತ್ತಿನ ಮೂಲಬೇರುಗಳ ಹುಟುಕಾಟದ ಕಡೆ ಮುಖಮಾಡಿತು. ‘ಈ ನಾಡ ಮಣ್ಣಿನಲ್ಲಿ’ ತರಹದ ಹೋರಾಟದ ಹಾಡನ್ನು ಬರೆದ ಕೆಬಿ ‘ಗಲ್ಲೆಬಾನಿ’, ‘ಅನಾತ್ಮ’, ‘ದಕ್ಲಕತಾದೇವಿ’ ಖಂಡಕಾವ್ಯಗಳ ಮೂಲಕ ಮೌಖಿಕ ಕಥನಗಳು, ನೆಲಗುರುತುಗಳ ಜಾಡು ಹಿಡಿದು ಕಾವ್ಯ ರಚನೆ ಮಾಡಿದರು. ಈ ನೆಲಗುರುತುಗಳ ಹುಡುಕಾಟವನ್ನು ಕೋಟಿಗಾನಹಳ್ಳಿ ರಾಮಯ್ಯ ‘ಆದಿಮ’ದ ಮೂಲಕ ಮತ್ತೊಂದು ರೀತಿಯಲ್ಲಿ ಮುಂದುವರೆಸಿದರು.
ಡಿ.ಆರ್. ನಾಗರಾಜ್ ಅವರ ಪ್ರಕಾರ ದಲಿತ ಸಾಹಿತ್ಯ ಒಂದು ಹಂತವನ್ನು ದಾಟಿದ ನಂತರ ತನ್ನ ‘ಸಾಮಾಜಿಕ ಕ್ರೋಧ’ದ ಮಾದರಿಯಿಂದ ‘ಆಧ್ಯಾತ್ಮಿಕ ಹುಡುಕಾಟ’ದ ಮಾದರಿಗೆ ಹೊರಳಿಕೊಂಡಿತು. ಡಿಆರ್ ತರದ ಚಿಂತಕರಿಗೆ ಸಾಮಾಜಿಕ ಕ್ರೋಧದ ಮಾದರಿಯ ಸಿದ್ದಲಿಂಗಯ್ಯನವರ ಕಾವ್ಯ ಹೆಚ್ಚು ‘ಆಧುನಿಕ’. ಕುಸುಮಬಾಲೆ, ಬಕಾಲ ಹೆಚ್ಚು ‘ಆಧ್ಯಾತ್ಮಿಕ’ ಹಾಗಾಗಿ ದಲಿತ ಲೋಕದ ನಿಜವಾದ ಶೋಧನೆ ಸಾಧ್ಯವಾಗುವುದು ಆಧ್ಯಾತ್ಮಿಕ ಹುಡುಕಾಟದ ಮಾದರಿಯಲ್ಲಿ. ಆದರೆ ಕನ್ನಡದ ವಿಮರ್ಶಾ ಲೋಕ ಕೆ.ಬಿ.ಸಿದ್ದಯ್ಯನವರ ಕಾವ್ಯವನ್ನು ಅದರ ‘ಆಧ್ಯಾತ್ಮಿಕ ಹುಡುಕಾಟ’ದ ಮಾದರಿಯ ಕಾರಣಕ್ಕಾಗಿಯೇ ನಿರ್ಲಕ್ಷಿಸಿತು ಎನ್ನುವ ಅನುಮಾನ ಹುಟ್ಟುತ್ತದೆ.
ವಿಮರ್ಶಕರ ಪ್ರಕಾರ ಸಿದ್ದಲಿಂಗಯ್ಯ, ಗೋವಿಂದಯ್ಯ, ಎನ್ಕೆ. ಹನುಮಂತಯ್ಯ, ಸುಬ್ಬುಹೊಲೆಯಾರ್ ತರಹದ ಕವಿಗಳ ಕಾವ್ಯ ಪ್ರತಿಪಾದಿಸುವ ಆಧುನಿಕ ಮೌಲ್ಯಗಳನ್ನು ಕೆಬಿ ಕಾವ್ಯ ಪ್ರತಿಪಾದಿಸುವುದಿಲ್ಲ. ದಲಿತರ ಒಳಜಗತ್ತನ್ನು ಶೋಧಿಸುವ ದಲಿತ ಪುರಾಣಗಳು ಆಧುನಿಕವಲ್ಲ ಎನ್ನುವ ನಂಬಿಕೆ. ಕೇವಲ ಆಕ್ರೋಶ, ಪ್ರತಿಭಟನೆಯನ್ನೆ ಆಧುನಿಕ, ವೈಚಾರಿಕ ಎಂದು ನಂಬಿಕೊಂಡಿರುವ ವಿಮರ್ಶೆ ಅಂಬೇಡ್ಕರ್ ತಮ್ಮ ರಾಜಕೀಯ ತಾತ್ವಿಕತೆಯನ್ನು ಕಟ್ಟಿಕೊಂಡಿದ್ದು ಬುದ್ದನ ಚಿಂತನೆಗಳಿಂದ ಎಂದು ಹೇಳಿರುವುದನ್ನು ಮರೆತಂತೆ ಕಾಣುತ್ತದೆ. ಕೆಬಿ ಸಿದ್ದಯ್ಯನವರ ‘ಆಧ್ಯಾತ್ಮಿಕ ಹುಡುಕಾಟ’ದ ಮಾದರಿಯ ಒಳಗಿರುವುದು ಕೂಡ ಬೌದ್ಧ ತತ್ವದ ಒಳಗಿರುವ ವೈಚಾರಿಕತೆಯೇ. ಬುದ್ದನ ವೈಚಾರಿಕತೆ ಯಾವತ್ತೂ ಆಧುನಿಕವೇ. ಆದರೆ ಈ ಅಂಶವನ್ನು ಮರೆತ ವಿಮರ್ಶೆ ಕೆಬಿಯವರ ಆಧ್ಯಾತ್ಮಿಕ ಹುಡುಕಾಟವನ್ನು ವೈದಿಕರ ‘ಆಧ್ಯಾತ್ಮಿಕ ಹುಡುಕಾಟ’ದ ಜೊತೆ ಕಲ್ಪಸಿಕೊಂಡು ನಿರಾಕರಿಸಿರಬಹುದು ಎನ್ನುವ ಅನುಮಾನ ಮೂಡುತ್ತದೆ.
ಇನ್ನು ‘ದಕ್ಲ ಕತಾ ದೇವಿ ಕಾವ್ಯ’ ದಕ್ಲ ಪುರಾಣವನ್ನು ಆಧರಿಸಿದ್ದು ಎನ್ನುವ ಕಾರಣಕ್ಕೆ ಆಧುನಿಕವಲ್ಲ ಎನ್ನುವ ವಿಮರ್ಶಕರ ಮಾತನ್ನೆ ನಂಬಿಕೊಂಡು ಬಂದಿದ್ದ ನನಗೆ ಈ ನಾಟಕ ತನ್ನ ಪುರಾಣದ ಚೌಕಟ್ಟಿನ ಒಳಗಿನಿಂದಲೇ ಕಟ್ಟಿಕೊಟ್ಟಿರುವ ವೈಚಾರಿಕ ದೃಷ್ಟಿಕೋನದ ಮಾದರಿಯಿಂದಾಗಿ ಹೆಚ್ಚು ಆಧುನಿಕ ಅನ್ನಿಸಿತು.
ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ದಲಿತ ಮತ್ತು ಮಹಿಳೆಯ ಕಣ್ಣೋಟದಿಂದ ನೋಡಬೇಕು ಆಗ ಮಾತ್ರ ಅದರ ಆಳ-ಅಗಲ ನಮಗೆ ದಕ್ಕುತ್ತದೆ. ಸಾಮಾಜಿಕ ರಚನೆಯಲ್ಲಿ ಅತಿ ಕೆಳಸ್ತರದಲ್ಲಿರುವ ದಲಿತರು ಇಡೀ ಸಮಾಜದ ಭಾರವನ್ನು ಹೊತ್ತುಕೊಂಡಿರುತ್ತಾರೆ. ಆದರೆ ಇಂತಹ ತಳಾತಿತಳದಲ್ಲಿರುವವನೂ ತನ್ನ ಕಾಲನ್ನು ಇನ್ನೊಬ್ಬನ ತಲೆಯ ಮೇಲೆ ಇಟ್ಟಿರುವುದನ್ನು ಕಾಣಿಸುದ ‘ದಕ್ಲಾ ಕತಾ ದೇವಿ ಕಾವ್ಯ’ ಜಾತಿ ವ್ಯವಸ್ಥೆಯ ಆಳ-ಅಗಲಗಳನ್ನು ತೋರಿಸಿ ಬೆಚ್ಚಿಬೀಳಿಸುತ್ತದೆ. ಹೊಲೆಮಾದಿಗರಿಗಿಂತಲೂ ಇನ್ನೂ ತಳದಲ್ಲಿರುವ ದಕ್ಲನ ಒಳಗಿರುವ ಗಂಡಾಳ್ವಿಕೆಯ ಮನಸ್ಥಿತಿ ಬ್ರಾಹ್ಮಣ್ಯದ ವಿಕಾರ ತಳಸಮುದಾಯಗಳಲ್ಲೂ ಇರುವುದನ್ನು ಬಯಲು ಮಾಡುತ್ತದೆ.
ಅಸ್ಪೃಶ್ಯತೆಯ ಕಾರಣಕ್ಕೆ ಇಡೀ ಸಮಾಜದಿಂದ ಹೊರಗಿರುವ ದಲಿತರೂ ದಕ್ಕಲರನ್ನು ಅಸ್ಲೃಶ್ಯರಂತೆ ಕಾಣುವುದು ಮತ್ತು ಈ ಕಟ್ಟಕಡೆಯ ದಕ್ಕಲನ ಒಳಗಿರುವ ಗಂಡಾಳ್ವಿಕೆಯ ಮನಸ್ಥಿತಿಯನ್ನು ಒಡೆದು ಹಾಕುವ ದಕ್ಲದೇವಿ ಜಾತಿ ಮತ್ತು ಗಂಡಾಳ್ವಿಕೆಯನ್ನು ಪ್ರಶ್ನೆ ಮಾಡುವ ಮೂಲಕ ಹೆಚ್ಚು ಆಧುನಿಕವಾಗುತ್ತಾಳೆ.
ದಕ್ಲ ಪುರಾಣದ ಮೂಲಕವೇ ಜಾತಿ ವ್ಯವಸ್ಥೆ, ಪುರುಷಾಧಿಪತ್ಯವನ್ನು ಪ್ರಶ್ನಿಸುವ ದಕ್ಲ ದೇವಿಯ ಪಾತ್ರ ಸಾಮಾಜಿಕ ಸ್ವಾತಂತ್ರ್ಯವನ್ನು, ಹಸಿವಿನ ಅಂತರಾಳವನ್ನು ಬಗೆದು ದಕ್ಲ ಮತ್ತು ಆತನ ಮಕ್ಕಳು ಆರ್ಥಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾರೆ. ಹೀಗೆ ಈ ನಾಟಕ ನಿಜ ಅರ್ಥದಲ್ಲಿ ಆಧುನಿಕ ‘ರಾಜಕೀಯ’ ನಾಟಕವಾಗುತ್ತದೆ.
ದಲಿತ ಪುರಾಣವನ್ನು ಆಧರಿಸಿದ ‘ದಕ್ಲಾ ಕತಾ ದೇವಿ’ ಖಂಡಕಾವ್ಯದಂತಹ ಆಧ್ಯಾತ್ಮಿಕ ಹುಡುಕಾಟದ ಮಾದರಿಯ ಮೂಲಕವೂ ಆಧುನಿಕತೆಯನ್ನು ಮುಖಾಮುಖಿಯಾಗಬಹುದು ಎನ್ನುವ ಸಾಧ್ಯತೆಯನ್ನು ತೋರಿಸಿದ ಕೆ.ಬಿ.ಸಿದ್ದಯ್ಯನವರಿಗೂ ಮತ್ತು ಇದನ್ನು ರಂಗರೂಪಕ್ಕೆ ಇಳಿಸಿದ ನಿರ್ದೇಶಕ ಲಕ್ಷ್ಮಣ್ ಇಬ್ಬರಿಗೂ ಜೈಭೀಮ್.
ದಲಿತ ಸಾಹಿತ್ಯವನ್ನು ‘ಓದುವ ಕ್ರಮ’ದ ಬಗ್ಗೆ ಕನ್ನಡ ವಿಮರ್ಶಾ ಲೋಕ ಮಾಡಿಕೊಂಡು ಬಂದಿರುವ ರಾಜಕಾರಣ ಕೆಲವರ ಸಾಹಿತ್ಯದ ಬಗ್ಗೆ ವಿಚಿತ್ರ ‘ಅಸಡ್ಡೆ’ಯನ್ನು ಬೆಳೆಸಿಬಿಡುತ್ತದೆ. ಸಾಹಿತ್ಯಿಕ ಮತ್ತು ಸಾಹಿತ್ಯೇತರ ಕಾರಣಗಳಿಗಾಗಿ ಕೆಬಿ ಕಾವ್ಯದ ಬಗ್ಗೆ ಬೆಳೆದಿರುವ ಅಸಡ್ಡೆ ಇನ್ನಾದರೂ ತೊಲಗಿ ಕೆಬಿ ಕಾವ್ಯದ ಚರ್ಚೆ ಶುರುವಾಗಲಿ.
ದಲಿತ ಸಾಹಿತ್ಯದ ಆಧುನಿಕತೆಯ ಬಗ್ಗೆ ಹೆಚ್ಚು ಗೊಂದಲದಲ್ಲಿದ್ದ ನನಗೆ ಈ ಗೊಂದಲಗಳಿಂದ ಹೊರಬರಲು ಈ ನಾಟಕ ಸ್ಪಷ್ಟ ದಾರಿ ಒದಗಿಸಿತು. ಹಾಗಾಗಿ ನಾಟಕದ technicalityಯ ಬಗ್ಗೆ ಹೆಚ್ಚು ಬರೆಯಲಾಗಲಿಲ್ಲ.
ತಳಸಮುದಾಯದ ವಾದ್ಯಗಳಾದ ಅರೆ-ತಮಟೆಗಳನ್ನು ನುಡಿಸುತ್ತ ತಮ್ಮ ಅಧ್ಭುತ ನಟನೆಯ ಮೂಲಕ ಈ ನಾಟಕಕ್ಕೆ vibrancy ತಂದು ಕೊಟ್ಟಿರುವ ಈ ನಾಟಕದ ನಟ-ನಟಿಯರು ವಿಶೇಷವಾದ ಅಭಿನಂದನೆಗೆ ಅರ್ಹರು.
~ ವಿ.ಎಲ್.ನರಸಿಂಹಮೂರ್ತಿ
ಇಂಗ್ಲಿಷ್ ಅಧ್ಯಾಪಕರು ಮತ್ತು ಸಾಂಸ್ಕೃತಿಕ ಚಿಂತಕರು
ಚಿತ್ರ : Ivan D Silva