ದಕ್ಲಕತಾ ದೇವಿಕಾವ್ಯ ಎಂಬ ನೆಲದಾಳದಿಂದ ಎದ್ದು ಬಂದ ಅದ್ಬುತ ದೃಶ್ಯಕಾವ್ಯ.
– ಬಿ.ಎಲ್.ರಾಜು.
ನಿನ್ನೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ರಂಗಭೂಮಿಗೆ ಭರವಸೆ ತುಂಬಬಲ್ಲ ಹೊಸರಕ್ತದ ನಿರ್ದೇಶಕ ಗೆಳೆಯ ಕೆಪಿ ಲಕ್ಷ್ಮಣರ ‘ದಕ್ಲಕತಾ ದೇವಿ ಕಾವ್ಯ’ ನಾಟಕ ನೋಡಿದೆ. ನನ್ನ ಗ್ರಹಿಕೆಯ ಮಿತಿಯಲ್ಲಿ ಹೇಳುವುದಾದರೆ ಇದು ಕನ್ನಡವಷ್ಟೇ ಅಲ್ಲ, ಭಾರತೀಯ ರಂಗಭೂಮಿಯ ದಿಕ್ಕು ದಿಸೆಯನ್ನು ಮರು ನಿರ್ದೇಶಿಸುವ ಹೊಸ ಹರಿವು. ಅದರ ಚೌಕಟ್ಟುಗಳನ್ನು ಮುರಿದು ಕಟ್ಟುವ ಹೊಸ ಸೃಜನಶೀಲತೆ.
ಕನ್ನಡ ಸಾಹಿತ್ಯಲೋಕವು ತೀರಾ ಮುಟ್ಟಿಸಿಕೊಳ್ಳದೇ/ಮುಟ್ಟಿಸಿಕೊಳ್ಳಲಾಗದೇ ಹೋದ ಕೃತಿಗಳಲ್ಲಿ- ಬಕಾಲಕವಿಯೆಂದೇ ಕರೆದುಕೊಂಡಿದ್ದ – ಕೇಬಿ ಸಿದ್ದಯ್ಯನವರ ‘ದಕ್ಲಕತಾ ದೇವಿಕಾವ್ಯ’ ವೇ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅಂದರೆ ಈ ಕೃತಿಯ ಓದಿಗೆ ಬೇಕಾದ ತಯಾರಿಯಾಗಲಿ, ಸಾಮರ್ಥ್ಯವಾಗಲಿ ಕನ್ನಡ ಸಾಹಿತಿಗಳಲ್ಲಿ ಇರಲಿಲ್ಲವೆಂದು ನಾನು ಹೇಳಿದರೆ ಕೆಲವರಾದರೂ ಒಪ್ಪಬಹುದೇನೊ. ಕೇಬಿ ಕನ್ನಡದ ಕಾವ್ಯದ ವ್ಯಾಕರಣ ಮತ್ತು ಕಾವ್ಯತತ್ವಗಳ ಸಿದ್ದಮಾದರಿಯನ್ನು ಸೀಳಿ ಖಂಡಕಾವ್ಯ ಬರೆದರು, ತನ್ನ ಅಕಾವ್ಯದ ಮೂಲಕ ಹೊಸ ಭಾಷೆ, ಮೀಮಾಂಸೆ,ತಾತ್ವಿಕತೆ, ದರ್ಶನಗಳನ್ನ ಕನ್ನಡದ ಮುಂದಿರಿಸಿದ್ದರು. ವಿಪರ್ಯಾಸವೆಂದರೆ ಕನ್ನಡದ ‘ಜನಪ್ರಿಯ’, ‘ಶುದ್ದ’ವಿಮರ್ಶೆಗೆ ಕೇಬಿಯನ್ನು ಎಟುಕಿಸಿಕೊಳ್ಳುವ ಶಕ್ತಿಯಿರಲಿಲ್ಲ. ಹಾಗಾಗಿ ಕೇಬಿಯವರ ಕೃತಿಗಳು ಬಹುಪಾಲ ನಿಗೂಢವಾಗಿಯೆ ಉಳಿದಿದ್ದವು.
ಈಗ ಕೇಬಿಯವರ ಕೃತಿಗಳೆಲ್ಲ ಒಟ್ಟುಗೂಡಿಸಿಕೊಂಡು ನಿರ್ದೇಶಕ ಲಕ್ಷ್ಮಣ್ ಮುಖಾಂತರ ಒಂದು ಹೊಸ ಆಕೃತಿಯಾಗಿ ರಂಗಭೂಮಿಯ ಮೇಲೆ ಅಪ್ಪಳಿಸಿದೆ. ಈಗಲಾದರೂ ಕನ್ನಡ ಲೋಕ ಈ ಹೊಸ ಕಲಾಕೃತಿಯನ್ನು ಕಾಣಬೇಕು, ಕಣ್ಣಿಲ್ಲದಿದ್ದರೆ ಕಣ್ಣು ಧರಿಸಿ ಕಾಣಬೇಕು.
ರಂಗದ ಮೇಲೆ ಎಪ್ಪತ್ತುನಿಮಿಷಗಳ ಕಾಲ ಇಡೀ ನಾಟಕ ಒಂದೇ ವೇಗದಲ್ಲಿ ಹರಿಯುತ್ತದೆ. ಇದು ನಾಟಕವೆಂದರೆ ನಾಟಕ. ಆದರೆ ರಂಗ ಮೀಮಾಂಸೆ ಮತ್ತು ರಂಗ ವ್ಯಾಕರಣಗಳ ಅಚ್ಚಿಗೆ ಜೋಡಿಸಿ ನೋಡಿದರೆ ನಾಟಕ ಅಲ್ಲವೆಂದರೆ ಅಲ್ಲ… ಅಷ್ಟರ ಮಟ್ಟಿಗೆ ದಕ್ಲಕತಾ ದೇವಿಕಾವ್ಯ ತುಂಬಾ ವೈಬ್ರಂಟ್ ಅಂಡ್ ಸೆನ್ಸಿಬಲ್. ಇಲ್ಲಿ ಕತೆಯಾಗಲಿ, ನಾಯಕನಾಗಲಿ, ಪ್ರತಿನಾಯಕನಾಗಲಿ ಇಲ್ಲ, ಅವರೆಲ್ಲರ ಕೇಂದ್ರಿತವಾದ ಸಮಸ್ಯೆ, ಸಂಗರ್ಷ, ತುಮುಲ ಮತ್ತು ಪರಿಹಾರಗಳಂತ ನಾಟಕ ಮೀಮಾಂಸೆಯ ಯಾವ ಹಂಗೂ ಇಲ್ಲ. ಆದರೂ ದಕ್ಲಕತಾ ದೇವಿಕಾವ್ಯವು ಕತೆಯನ್ನು ಹೇಳುತ್ತದೆ. ಅಬ್ಬರಿಸುವ ನಾಯಕ, ಪ್ರತಿನಾಯಕರಿಲ್ಲದಿದ್ದರೂ ನಾಟಕ ನೋಡಲು ಕುಳಿತವರನ್ನು ಪಟ್ಟು ಹಿಡಿದು ಕೂರಿಸುತ್ತದೆ… ಅಧೋಲೋಕದಲ್ಲಿ ಹರಿದು ಚಿಂದಿಯಾದ ಬದುಕನ್ನ ಕಣ್ಣಿಗೆ ಕಟ್ಟುತ್ತದೆ. ಅಂತ ಬದುಕೇ ಇಲ್ಲಿಯ ಕಥನ, ಆ ಹರಿದುಹೋದ ಬದುಕಿನ ಅಡ್ಡೆಗೆ ಜೋತುಬಿದ್ದ ಸಮುದಾಯವೇ ಪ್ರಧಾನ ಪಾತ್ರ. ಸಮುದಾಯವೇ ಒಂದು ಪ್ರಧಾನಪಾತ್ರವಾಗುವುದು, ಅದರ ಬದುಕೇ ಕತೆಯಾಗುವುದು ರಂಗದ ಮೇಲೆ ಘಟಿಸುವ ಚಮತ್ಕಾರ. ಇಲ್ಲಿಯೇ ಈ ನಾಟಕ ಮೀಮಾಂಸೆಯ ಗಡಿಯನ್ನು ಹರಿದುಕೊಳ್ಳುವುದು.. ಲಕ್ಷ್ಮಣ್ ಭಿನ್ನವಾಗಿ ಕಾಣುವುದು.
ಹೊಲೆಮಾದಿಗರೆಂಬ ಬೃಹತ್ ಜನಸಮುದಾಯಗಳು ಮಾತ್ರ ಇಲ್ಲಿ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಯ ನೇಣಿಗೆ ಕೊರಳೊಡ್ಡಿ ನಿಂತಿಲ್ಲ, ಅವರು ಕಂಡುಕೊಂಡ ಅದ್ಭುತ ಸಂಗೀತ ಪರಿಕರಗಳಾದ ತಮಟೆ ಮತ್ತು ಅರೆಗಳೂ ಇಲ್ಲಿ ಅಸ್ಪೃಶ್ಯತೆಯ ಕಳಂಕ ಹೊತ್ತಿವೆ, ಅವುಗಳ ನಾದಗಾರುಡಿಗೆ ಕೂಡಾ ‘ಪಾವಿತ್ರ್ಯದ ಮಡಿ’ಯುಟ್ಟ ಸಂಗೀತಲೋಕದಲ್ಲಿ ಅಘೋಷಿತ ನಿಷೇಧ.
ಮಾದಿಗರನ್ನೇ ಅವಲಂಬಿಸಿ ಬದುಕುವ ದಕ್ಲರ ಅಘೋಷಿತ ನಿಷಿದ್ದ ವಲಯದಲ್ಲಿದ್ದೇ ವಿಜೃಂಭಿಸಿ, ಜೀವ-ಜೀವಂತಿಕೆಗಳ ಜಗ್ ಜಗ್ಗು ಜಗ್ಗು ಹೆಜ್ಜೆ ಹಾಕಿಸುವ ತಮಟೆ- ಅರೆಗಳ ಸಂಗೀತದ ಮಟ್ಟುಗಳು ಈ ನಾಟಕದುದ್ದಕ್ಕೂ ಪ್ರಧಾನ ಪಾತ್ರಗಳೇ ಆಗಿ ವಿಜೃಂಭಿಸುತ್ತವೆ. ರಂಗದ ಮೇಲೆ ಇದುವರೆಗೆ ಔಪಚಾರಿಕವಾಗಿ ಬಂದು, ಬಂದಷ್ಟೇ ವೇಗವಾಗಿ ಕತ್ತಲಿಗೆ ಸರಿಯುತ್ತಿದ್ದ ತಮಟೆ,ಅರೆಗಳು ಈ ನಾಟಕದ ಜೀವತಂತು. ದಕ್ಲನ ಕುಟುಂಬದ ಜೀವನಾಡಿ.
ಅಗ್ರಹಾರಗಳ ರಂಗಭೂಮಿಯ ಮೇಲೆ ವ್ಯಾಕರಣ, ಕತೆ, ಭಾಷೆಗಳ ಶುದ್ದತೆಯಲ್ಲಿ ದೃಶ್ಯಗಳು, ಪರದೆ ಸರಿಯುವುದರ ಜತೆಗೆ ಕತೆ ಚಲಿಸುತ್ತದೆ. ಆದರೆ ದಕ್ಲಕತಾ ದೇವಿಕಾವ್ಯದಲ್ಲಿ ಪರದೆಗಳು ಸರಿಯುವುದಿಲ್ಲ, ಪಾತ್ರಗಳ ಹಿಂಬಂದಿಯಲ್ಲಿರುವ ಏಕೈಕ ಬಿಳಿಪರದೆಯ ಮೇಲೆ ಆಡುವ ,ಓಡುವ, ನಡೆಯುವ ನೆರಳು ಬೆಳಕಿನ ಆಟ ನಿಜಕ್ಕೂ ತುಂಬಾ ಚೋದ್ಯವೆನಿಸುತ್ತದೆ. ಈ ನೆರಳುಗಳೂ ರಂಗದ ಮೇಲೆ ಚಿತ್ರ ಬಿಡಿಸುತ್ತವೆ, ಕತೆ ಹೇಳುತ್ತವೆ. ಅವುಗಳೂ ಜೀವ ತುಂಬುತ್ತವೆ. ನಿರ್ದೇಶಕ ಲಕ್ಷ್ಮಣ್ ಗೆದ್ದಿರುವುದು ಇಲ್ಲಿ. ಬರೆಯುವುದರ ಮುಖಾಂತರ ಮುಖಾಂತರ ಹೇಳಿಕೊಳ್ಳಲು ಇನ್ನೂ ಬಹಳಷ್ಟಿದೆ. ಇರಲಿ.
ಐದುಜನ ಪಾತ್ರಧಾರಿಗಳ ಅಭಿನಯವೂ ಮನಮುಟ್ಟತ್ತದೆ. ಅವರು ಮನಸು ಮಾಡಿದರೆ ಇನ್ನೂ ಒಂದಷ್ಟು ಜೀವ ತುಂಬಬಲ್ಲರು.
ಜಂಗಮ ಕಲೆಕ್ಟಿವ್ ಗೆ all the best.
– ಬಿ.ಎಲ್.ರಾಜು.
ಇಂಗ್ಲಿಷ್ ಪ್ರಾಧ್ಯಾಪಕ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಜನಪರ ಚಳವಳಿಗಳು, ರಾಜಕಾರಣ, ಸಮಕಾಲಿನ ವಿದ್ಯಾಮಾನಗಳಲ್ಲಿ ಆಸಕ್ತಿ.